Tag Archives: ಸಿನೆಮಾ ಸಾಹಿತ್ಯ

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

17 ಜುಲೈ

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದbad times of media ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

-ರಂಜಿತ್ ಅಡಿಗ, ಕುಂದಾಪುರ