ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.
ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?
ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!
ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!
ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"
ಅದರಲ್ಲಿ ಸಾಮ್ಯತೆ ಅಂದರೆ ಎರಡೂ ಚಿತ್ರದ ನಾಯಕನಟ ಶಿವರಾಜ್ ಕುಮಾರ್. ಅದು ಬಿಟ್ಟರೆ ಓಮ್ ಕರುಳು ಕೊಚ್ಚುವ ರೌಡಿಸ್ಮ್ ಕತೆ ಆಗಿದ್ದರೆ, ತವರಿಗೆ ಬಾ ತಂಗಿ ಅಣ್ಣ-ತಂಗಿಯರ ಕರುಳು ಹಿಂಡುವ ಕತೆ ಹೊಂದಿದೆ.
ಆದರೆ ನಗೆಸಾಮ್ರಾಟರು ಮತ್ತೆ ಕೊಂಚವೂ ವಿಚಲಿತರಾಗದೇ, "ಎರಡೂ ಅಣ್ಣ-ತಂಗಿಗೆ ಸಂಬಂಧಪಟ್ಟ ಸಿನೆಮಾ!" ಎಂದಾಗ ಇದರಲ್ಲಿ ಖಂಡಿತಾ ಉತ್ತರ ಸುಳ್ಳಾಗುತ್ತದೆ ಅಂದುಕೊಂಡರೆ ಅದೂ ನಿಜವಾಗಿತ್ತು.
ಆಗ ಎಲ್ಲರಿಗೂ ಅನುಮಾನ ಮೂಡಿದ್ದು ನಗೆಸಾಮ್ರಾಟರ ಮೇಲಲ್ಲ; ಪಾಲಿಗ್ರಾಫ್ ಮೆಶೀನ್ ಮೇಲೆ!
ಎಲ್ಲರೂ ಆ ಮೆಶೀನೇ ಸುಳ್ಳು ಹೇಳುತಿದೆ ಅಂದುಕೊಂಡರು.
ಆದರೆ ನಗೆಸಾಮ್ರಾಟರು ಮಾತ್ರ "ತಾನು ಹೇಳಿದ್ದೆಲ್ಲಾ ಸತ್ಯ, ಸತ್ಯವಲ್ಲದೇ ಬೇರೇನೂ ಹೇಳಿಲ್ಲ" ಅಂತ ಬೇಕಾದರೆ ಗೀತೆಯ ಮೇಲೇಕೆ, ತನ್ನ ಬ್ಯಾಂಕಿನ ಖಾತೆಯ ಮೇಲೆಯೂ ಪ್ರಮಾಣ ಮಾಡುವುದಾಗಿ ತಿಳಿಸಿದರು. ಯಾವುದಾದರೂ ಸಿನೆಮಾವನ್ನು ಲಾಜಿಕ್ಕನ್ನು ಪಕ್ಕಕ್ಕಿಟ್ಟು ನೋಡದೇ ಹೋದರೆ ತಲೆ ಎಕ್ಕುಟ್ಟಿ ಹೋಗೋಲ್ಲವಾ ಅಂತಲೇ ಕೇಳಿದರು! ಮಚ್ಚನ್ನು ಮದುವೆಯಾಗೋ ಹೀರೋ, ತನಗೆ ಎಂಗೇಜ್ ಮೆಂಟ್ ಆಗಿದ್ದರೂ ಮತ್ತೊಬ್ಬ ಹುಡುಗನಿಗೆ ಫೋನ್ ಮಾಡಿ ಸುಮ್ಮ ಸುಮ್ಮನೆ ’ನನ್ನನ್ನು ಹಾರಿಸ್ಕೊಂಡು ಹೋಗದೇ ಇದ್ದರೆ ನೀನು ಗಂಡಸೇ ಅಲ್ಲ" ಅನ್ನುವ ಹೀರೋಯಿನ್ನು, ಹೀರೋ ಎಂಟ್ರಿ ಸಾಂಗ್- ಒಂದು ಕನ್ನಡ ಭಾಷೆಯ ಮೇಲಿನ ಸಾಂಗ್- ಮರ ಸುತ್ತೋ ಡ್ಯೂಯೆಟ್ಟು ಹೀಗೆ ಚಿತ್ರವನ್ನು ಅರ್ಧ ಅಥವ ಒಂಡು ಘಂಟೆ ಹಾಡಿನಿಂದಲೇ ಮುಗಿಸುವ ಡೈರೆಕ್ಟರ್ರು, ಪರಭಾಷೆ ಚಿತ್ರದಲ್ಲಿ ಬಂದ ಕಾಮಿಡಿ ದೃಶ್ಯಗಳನ್ನು ಒಂದು pause ಕೂಡ ಬಿಡದೇ ಎತ್ತಿಕೊಳ್ಳುವ ಹಾಸ್ಯಗಳು, ಇವನ್ನೆಲ್ಲಾ ಲಾಜಿಕ್ಕಿಟ್ಟು ನೋಡೋಕಾಗ್ತದಾ?
ಸರಿ, ಆದರೆ ಓಂ- ತವರಿಗೆ ಬಾ ತಂಗಿ ಚಿತದಲ್ಲಿ ಅಣ್ಣ-ತಂಗಿ ಸಾಮ್ಯತೆ ಹೇಗೆ?
ನಗೆಸಾಮ್ರಾಟರು ಒಂದೆರಡು ಬಾರಿ ತಲೆಕೆರೆದುಕೊಳ್ಳುವುದರೊಳಗಾಗಿ ನೆನಪಾಗಿತ್ತು, ಅದು ಅವರು ಥಿಯೇಟರ್ ನೊಳಗೆ ಲಾಜಿಕ್ಕನ್ನು ಜೇಬಿನಲ್ಲಿಟ್ಟು ಕೂತಿರದ ಕಾಲ.
ಪೋಸ್ಟರ್ ನೋಡದೇ ಬರಿಯ ಟೈಟಲ್ ನೋಡಿ ದೇವರ ಚಿತ್ರ ಅಂದುಕೊಂಡು ಓಂ ಚಿತ್ರ ನೋಡಲು ಬಂದಿದ್ದರು. ಶಿವರಾಜ್ ಕುಮಾರ್ ಗೆ ಅದರಲ್ಲಿ ಸತ್ಯ ಅನ್ನುವ ರೌಡಿಯ ಪಾತ್ರ. ರೌಡಿಸ್ಮ್ ಚಿತ್ರ ಅಂದರೆ ಒಬ್ಬ ರೌಡಿ ಅವನ ಬಾಲದಂತೆ ಚೇಲಾಗಳು. ಈ ಚೇಲಾಗಳು ಆ ರೌಡಿ(ಚಿತ್ರದಲ್ಲಿ ನಾಯಕ)ಯನ್ನು ಅಣ್ಣಾ ಅಂತಲೇ ಮಾತಾಡಿಸುತ್ತವೆ, ಅಂದರೆ ನಾಯಕಿ ಅತ್ತಿಗೆಯಾಗಬೇಕು ಅಲ್ಲವೇ?
ಹಾಗಾಗದು, ನಾಯಕಿಯನ್ನೂ ಚೇಲಾಗಳು ಅಕ್ಕಾ ಅಂತಲೇ ಕರೆಯುತ್ತವೆ. ನಾಯಕ-ನಾಯಕಿಯನ್ನು ಅಣ್ಣ-ತಂಗಿ ಸಂಬಂಧವಾಗಿಸುತ್ತದೆ!
ಮೊದಲು ದೇವರ ಚಿತ್ರ ಅಂದುಕೊಂಡಿದ್ದ ಸಾಮ್ರಾಟರಿಗೆ ಓಂ ಅಂತಹ ಚಿತ್ರವಾಗದೇ ಒಂದು ಶಾಕ್ ಆಗಲೇ ನೀಡಿದ್ದರು ಚಿತ್ರದ ನಿರ್ದೇಶಕರು. ಚೇಲಾಗಳು ಶಿವರಾಜ್ ಕುಮಾರ್ ರನ್ನು ಅಣ್ಣ ಅಂತಲೂ ನಾಯಕಿ ಪ್ರೇಮಾಳನ್ನು ಅಕ್ಕಾ ಅಂತಲೂ ಕರೆಯುತಿರುವಾಗ ಈ ಚಿತ್ರವನ್ನು ಸಾಯಿಪ್ರಕಾಶ್ ಲೆವೆಲ್ ನ ಅಣ್ಣ-ತಂಗಿ ಚಿತ್ರ ಅಂದುಕೊಂಡು ನೋಡಿ ಸಾಮ್ರಾಟರು ಸುಸ್ತಾದರು ಅಂತ ಬೇರೆ ತಿಳಿಸಿಹೇಳಬೇಕೆ?
ಒಟ್ಟಿನಲ್ಲಿ ಹಾಳು ಲಾಜಿಕ್ಕುಗಳು. ಈ ಲಾಜಿಕ್ಕಿಟ್ಟುಕೊಂಡು ನೋಡಿದರೆ ಸಿನೆಮಾ ಎಲ್ಲಿ ಅರ್ಥವಾಗಬೇಕು ಅಂತ ಸಾಮ್ರಾಟರು ಗೊಣಗಿದರು!
ಇತ್ತೀಚಿನ ಪ್ರಜಾ ಉವಾಚ