‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ ಗಂಡಂದಿರ ಪ್ರತಿಜ್ಞೆಯ ಹಾಗೆ, ‘ಇವತ್ತೇ ಲಾಸ್ಟ್ ಇನ್ನು ಸೋಮಾರಿತನ ಮಾಡುವುದಿಲ್ಲ. ನಾಳೆಯಿಂದ ನಿಯತ್ತಾಗಿ ಬೆಳೆಗ್ಗೆ ಐದಕ್ಕೆದ್ದು ಓದಲು ಕೂರುವೆ’ ಎಂದು ಭೀಷ್ಮನನ್ನೇ ನಡುಗಿಸುವ ವಿದ್ಯಾರ್ಥಿಯ ಪ್ರತಿಜ್ಞೆಯ ಸಾಲಿಗೆ ನಮ್ಮನ್ನೂ ಸೇರಿಸಿಬಿಡಲು ನಮ್ಮ ವಿರೋಧಿಗಳು ಹೊಂಚು ಹಾಕಿ ಸಂಚು ರೂಪಿಸುತ್ತಿರುವುದು ನಮ್ಮ ತೀಕ್ಷ್ಣ ಮತಿಗೆ ತಡವಾಗಿ ಅರಿವಿಗೆ ಬಂದಿದೆ.
‘ಒಂದು ದಿನವೂ ತಪ್ಪಿಸದಂತೆ ನಗಾರಿ ಸದ್ದು ಮಾಡುತ್ತಿರುತ್ತದೆ’ ಎಂದು ನಗೆ ಸಾಮ್ರಾಟರಾದ ನಮ್ಮಾಣೆ, ನಮ್ಮ ಚೇಲ ಕುಚೇಲ, ನಮ್ಮ ಗತಕಾಲದ ಅತ್ಯಾಪ್ತ ಗೆಳೆಯ ತೊಣಚಪ್ಪನವರ ಮೇಲೆ ಆಣೆ ಮಾಡಿ ಹೇಳಿದ್ದ ನಾವು ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಪರಂಧಾಮ ತಲುಪಿ ಅಲ್ಲಿಂದ ರೋಚಕವಾಗಿ ಹಿಂದಿರುಗಿದ್ದು ನಮ್ಮ ನಿಯಮಿತ ಓದುಗರ ನೆನಪಿನಲ್ಲಿರುತ್ತದೆ ಎಂದುಕೊಂಡಿದ್ದೇವೆ. ಅದನ್ನು ಹೊರತು ಪಡಿಸಿದರೆ ನಾವು ಇಷ್ಟು ಕಾಲ ಅನುಪಸ್ಥಿತರಾಗಿದ್ದು ಅನೇಕರಲ್ಲಿ ಸಂಶಯವನ್ನು ಮೂಡಿಸಿರುವುದು ಸಹಜ. ಕೆಲವರು ಹಿಂದೆ ವಿಫಲವಾದ ಆತ್ಮಹತ್ಯಾ ಪ್ರಯತ್ನವನ್ನು ನೆನೆದು, ಇನ್ಯಾರೋ ಯಶಸ್ವಿಯಾಗಿ ನಮ್ಮ ಕೊಲೆ ಮಾಡಿರಬೇಕು ಎಂದು ಅಂದಾಜಿಸಿ ಅಧಿಕಾರಕ್ಕೆ ಬರುವ ಸರಕಾರ ಯಾವುದು ಎಂದು ಊಹಿಸಿದ ರಾಜಕೀಯ ಪಂಡಿತರ ಹಾಗೆ ಫೋಸ್ ಕೊಡುತ್ತಿದ್ದರು. ಇನ್ನು ಕೆಲವರು ಚುನಾವಣೆಯ ಸಂದರ್ಭದಲ್ಲಿ ಗದ್ದಲವಾಗಬಾರದು ಎಂಬ ಕಾರಣಕ್ಕೆ ನಗಾರಿ ಗಂಟು ಮೂಟೆ ಕಟ್ಟಿ ಬಿಸಾಡಿಸುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳ ಮೂಲಕ ದಾಳಿ ನಡೆಸಿದ್ದರು. ಆದರೆ ನಾವು ಮಾತ್ರ ಸೂಕ್ತ ಸಮಯಕ್ಕೆ ಕಾಯುತ್ತ ಕೂತಿದ್ದೆವು.
ನಾವು ನಾಪತ್ತೆಯಾಗುವುದಕ್ಕೆ ಈ ಬಾರಿ ಸಣ್ಣ ಪುಟ್ಟ ನೆಪ ಕಾರಣವಾಗಿರಲಿಲ್ಲ. ನಮ್ಮ ನಾಪತ್ತೆಯ ಹಿಂದೆ ಬಹುದೊಡ್ಡ ಸಂಚೇ ನಡೆದಿತ್ತು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ದಿನಾಂಕವನ್ನು ಘೋಷಿಸಿದ ತಕ್ಷಣ ನಾಡಿನಾದ್ಯಂತ ಅನಧಿಕೃತವಾಗಿ ಒಂದು ವದಂತಿ ಹರಿದಾಡಲು ಶುರುವಾಯಿತು. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಸವಾಲಾಗಿರುವ ಈ ಚುನಾವಣೆಯಲ್ಲಿ ಬಹುದೊಡ್ಡ ಸ್ಥಿತ್ಯಂತರವಾಗುವ ಗುಲ್ಲು ಎಲ್ಲೆಡೆ ಕೇಳಿಬಂತು. ಮೊದ ಮೊದಲು ಸಾಮಾನ್ಯ ಜನರು, ರಾಜಕೀಯ ಪಂಡಿತರು, ಮಾಧ್ಯಮದ ಪ್ರಭೃತಿಗಳು ಈ ಗುಲ್ಲನ್ನು ನಿರ್ಲಕ್ಷಿಸಿದ ನಾಟಕವಾಡಿದರು. ಆದರೆ ಯಾವಾಗ ಊರಿಗೊಬ್ಬಳೇ ಪದ್ಮಾವತಿ ಮತ್ತವಳ ತಂಗಿ ರೂಪಲಕ್ಷ್ಮಿ ಎಂಬಂತೆ ದೇಶಕ್ಕೆಲ್ಲ ಎರಡೇ ರಾಜಕೀಯ ಪಕ್ಷಗಳು ಎಂಬ ಪರಿಸ್ಥಿತಿ ಇದ್ದದ್ದು ಬದಲಾಗುವ ಸಾಧ್ಯತೆಗಳು ಕಂಡುಬರಲು ಶುರುವಾಯಿತೋ ಗುಲ್ಲನ್ನು ತಳ್ಳಿ ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಮೂರನೆಯ ರಂಗ, ನಾಲ್ಕನೆಯ ರಂಗ, ಐದನೆಯ ರಂಗ ಎಂದು ಭೈರಪ್ಪನವರ ಆವರಣದ ಮುದ್ರಣದ ಹಾಗೆ ರಾಜಕೀಯ ರಂಗಗಳ ಸಂಖ್ಯೆ ಏರುತ್ತಾ ಹೋದಾಗ ಯಾರು ಬೇಕಾದರೂ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗತೊಡಗಿತು. ರಾಜಕಾರಣಿಗಳಿಗೆ, ಪಂಡಿತರುಗಳಿಗೆ ದಿಗಿಲು ಶುರುವಾದದ್ದೇ ಆಗ! ನಗೆ ಸಾಮ್ರಾಟರಾದ ನಾವು ನಿಶ್ಚಿತವಾಗಿ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳನ್ನು ಕಂಡು ದೇಶಕ್ಕೆ ದೇಶವೇ ನಿಬ್ಬೆರಗಾಯಿತು.
‘ನಗೆ ಸಾಮ್ರಾಟ್ ಪ್ರಧಾನಿಯಾಗುವುದು ಕನಸಿನಲ್ಲೂ ಸಾಧ್ಯವಿಲ್ಲ’ ಎನ್ನುವ ಪ್ರಮುಖ ಪಕ್ಷಗಳ ಉಪೇಕ್ಷೆಯ ಹೇಳಿಕೆಗಳಿಗೆ ಉತ್ತರವಾಗಿ ದಿನೇ ದಿನೇ ಬಲಗೊಳ್ಳಲು ತೊಡಗಿದ ನಮ್ಮ ‘ಇನ್ನೊಂದು ರಂಗ’ ದೇಶದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಹಂತವನ್ನು ತಲುಪಿತ್ತು. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರಿ ಅಂತರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಜಯಿಸಿ ಅಭೂತಪೂರ್ವ ದಾಖಲೆ ಬರೆಯ ಹೊರಟ ನಮ್ಮ ಧೈರ್ಯ, ಸಾಹಸ ಮನೋವೃತ್ತಿಗೆ ಭುವಿಯೇ ಥರ ಥರನೇ ನಡುಗಿತು.
ಆಗ ಶುರುವಾಯಿತು ಸಂಚಿನ ಮೊದಲ ಹಂತ. ಇನ್ನು ನಾವೆಲ್ಲ ಪರಸ್ಪರ ಕಿತ್ತಾಡುತ್ತ ಕೂತರೆ ದೇಶಕ್ಕೆ ದೇಶವೇ ನಗೆ ಸಾಮ್ರಾಟನ ಸಾಮ್ರಾಜ್ಯವಾಗಿ ಬಿಡುತ್ತದೆ. ನಮ್ಮ ಗಲ್ಲಿ ಪಾಂಚಾಜನ್ಯಗಳನ್ನು ವಿಕಾರವಾಗಿ ಅರಚಿಸುತ್ತಾ ನಾವು ಹೊಡಿ, ಬಡಿ, ಕಡಿ ಎಂದು ಕೂಗಾಡುತ್ತಿದ್ದರೆ ಅಖಂಡ ಭಾರತದಲ್ಲಿ ನಗೆ ನಗಾರಿಯ ಸದ್ದು ಮಾರ್ದನಿಸತೊಡಗುತ್ತದೆ ಎಂಬುದನ್ನು ಅರಿತ ಸರ್ವ ಪಕ್ಷಗಳು ಈ ಭುವಿಯ ಇತಿಹಾಸದಲ್ಲಿ ಹಿಂದೆಂದೂ ನಡೆದಿರದ ಭಾರಿ ಸಂಚನ್ನು ಹೆಣೆದವು. ಈ ದುಷ್ಟ ಕೂಟದ ದಾಳಿ ಹೇಗಿತ್ತೆಂದರೆ ಚೂರು ಪಾರು ಮಹಾಭಾರತದ ಅರಿವಿರುವವರಿಗೆಲ್ಲಾ ಅಭಿಮನ್ಯುವನ್ನು ಆಹುತಿ ತೆಗೆದುಕೊಂಡ ಚಕ್ರವ್ಯೂಹವನ್ನು ನೆನಪಿಸುವಷ್ಟು!
ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದ ಹಾಗೆ ನಮ್ಮನ್ನು ಎಂಟು ಮತ್ತೆರಡು ದಿಕ್ಕುಗಳಿಂದ ಹಣಿದು ಹಾಕಲಾಯಿತು. ನಮ್ಮನ್ನು ಉಸಿರಾಡುವ ಶವದಂತೆ ನಿಷ್ಕ್ರಿಯ ಮಾಡಲಾಯಿತು. ಒಂದಿಂಚೂ ಕದಲದ ಹಾಗೆ ದಿಗ್ಭಂದನ ಮಾಡಲಾಯಿತು. ಮರಾ ಮೋಸದಿಂದ ನಮ್ಮ ಶಕ್ತಿಯನ್ನೆಲ್ಲ ಕುಗ್ಗಿಸಲಾಯಿತು. ನಮ್ಮ ರೆಕ್ಕೆ ಪುಕ್ಕಗಳನ್ನೆಲ್ಲಾ ಹದವಾದ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು. ಇಷ್ಟು ಸಾಹಸವನ್ನು ಮೆರೆದ ದುಷ್ಟಕೂಟ ನಾವು ಈ ಮಹಾನ್ ದೇಶದ ಮಹಾನ್ ಪ್ರಧಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು. ಮುಂದಿನ ಐದು ವರ್ಷ ನೆಮ್ಮದಿಯಾಗಿರಬಹುದು ಎಂದು ಭಾವಿಸಿತು.
ಪ್ರಧಾನಿ ಪಟ್ಟ ತಪ್ಪಿದ ನಿರಾಸೆ, ಮಹಾನ್ ಸಾಧನೆ ಮಾಡುವುದಕ್ಕೆ ಉಂಟಾದ ವಿಘ್ನದ ಬಗೆಗಿನ ಅಸಹನೆ, ರೆಕ್ಕೆ ಪುಕ್ಕ ಕತ್ತರಿಸಲ್ಪಟ್ಟ ಹತಾಶೆ, ಮೈ ಮನಸುಗಳಲ್ಲಿ ಅಪಾರವಾದ ದಣಿವು – ಇವೆಲ್ಲವನ್ನೂ ಇಷ್ಟು ದಿನ ಸಹಿಸಿಕೊಂಡು ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಬಾನಂಗಳಕ್ಕೆ ಚಿಮ್ಮಿದ್ದೇವೆ. ಪ್ರಧಾನಿ ಪಟ್ಟ ಕೈ ತಪ್ಪಿದರೂ ನಮ್ಮ ನಗೆ ಸಾಮ್ರಾಜ್ಯದ ಪಟ್ಟವನ್ನಲಂಕರಿಸಿ ನಗೆ ಸಾಮ್ರಾಟರಾಗಿದ್ದೇವೆ. ನಗೆ ನಗಾರಿಯ ಸದ್ದು ನೂರು ದಿಕ್ಕುಗಳಲ್ಲಿ ಮಾರ್ದನಿಗೊಳ್ಳುವುದನ್ನು ಸಂತೋಷದಿಂದ ಆಲಿಸುತ್ತಿದ್ದೇವೆ.
– ನಗೆ ಸಾಮ್ರಾಟ್
ಟ್ಯಾಗ್ ಗಳು:ನಗೆ ಸಾಮ್ರಾಟ್, ಪಂಡಿತರು, ಪ್ರಧಾನಿ ಹುದ್ದೆ, ರಾಜಕೀಯ, ಸಂಪಾದಕೀಯ
ಇತ್ತೀಚಿನ ಪ್ರಜಾ ಉವಾಚ