Archive | ಜನವರಿ, 2010

ಆಣೆ ಸವಾಲು ಅಲ್ಪಸಂಖ್ಯಾತರ ಓಲೈಕೆಯ ತಂತ್ರ: ಅಬೋಧ ಕುತಾಲಿಕ್

20 ಜನ

*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦

ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು praj_muhmad cartoon ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”

ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.

ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ  ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”

ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.

ಬ್ಲ್ಯಾಕ್ ಮೇಲು!

15 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

f1

 

ಈಕೆ ಕೂದಲು ಉಳೀಬೇಕಂದ್ರೆ ನಮ್ಮ ಬೇಡಿಕೆ ಈಡೇರಿಸಿ!

ವಾರದ ವಿವೇಕ 36

15 ಜನ

…………………………………………………

ನನ್ನ ಬುದ್ಧಿಶಕ್ತಿಯನ್ನು ಹೊರತು ಪಡಿಸಿ
ಘೋಷಿಸುವುದಕ್ಕೆ ಬೇರೇನೂ
ನನ್ನ ಬಳಿ ಇಲ್ಲ.
ಆಸ್ಕರ್ ವೈಲ್ಡ್ (ಅಮೇರಿಕಾಗೆ ಬಂದಿಳಿದ ನಂತರ ಕಸ್ಟಮ್ಸ್ ಅಧಿಕಾರಿಗಳಿಗೆ ಹೇಳಿದ್ದು)

…………………………………………………

ನಿರೀಕ್ಷಿಸಿ ಸಾಮ್ರಾಟರ ಸಂದರ್ಶನ!

8 ಜನ

ನಗೆನಗಾರಿಯನ್ನು ಪ್ರಾರಂಭಿಸಿದ ಸಾಮ್ರಾಟರು ಕುಂಟುತ್ತ ತೆವಳುತ್ತ ಅದು ಎರಡನೆಯ ವರ್ಷದವರೆಗೆ ಜೀವಂತವಿರುವಂತೆ vishesha sandarshanaನೋಡಿಕೊಂಡಿದ್ದಾರೆ. ಆದರೆ ಇದು ದೊಡ್ಡ ಸಾಧನೆಯಲ್ಲ. ನಗೆ ನಗಾರಿಗೆ ಎರಡು ವರ್ಷ ತುಂಬುವಷ್ಟರಲ್ಲಿ ಒಂದು ಬಾರಿ ಆತ್ಮಹತ್ಯೆಯನ್ನು ಮಾಡಿಕೊಂಡು. ಒಂದು ಬಾರಿ ವಿದೇಶ ಪ್ರಯಾಣವನ್ನು ಮಾಡಿಕೊಂಡು, ಒಂದು ಬಾರಿ ಅಪಹರಣಕ್ಕೆ ಒಳಗಾಗಿ, ಇನ್ನೊಮ್ಮೆ ಎಮರ್ಜನ್ಸಿಯಲ್ಲಿ ಸಿಲುಕಿಕೊಂಡು ಎರಡು ವರ್ಷಗಳ ಕಾಲ ಜೀವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಆಲ್ಟರ್ ಈಗೋವನ್ನೂ, ಅವರನ್ನೂ ಒಂದೇ ಕುರ್ಚಿಯಲ್ಲಿ ಕೂರಿಸಿ ಅವರದೇ ಸಂದರ್ಶನ ಮಾಡಿಬಿಡುವುದೆಂದು ನಗೆ ನಗಾರಿಯ ಸಮಸ್ತ ಸಿಬ್ಬಂದಿ ಹೊಂಚು ಹಾಕಿದೆ. 

ಸಾಮ್ರಾಟರಂತಹ ಘಟಾನುಘಟಿಯನ್ನು ಸಂದರ್ಶಿಸಲು ಸಾಮಾನ್ಯರಿಂದ ಸಾಧ್ಯವಾಗುವುದಿಲ್ಲವೆಂದೇ ಅದ್ವಿತೀಯ ಸಾಧನೆ ಮಾಡಿದ ಟಿವಿ ಸುದ್ದಿ ವಾಹಿನಿಯ ಅತಿ ಜನಪ್ರಿಯ ಸಂದರ್ಶಕ ಮರಣ್ ಚಾಪರ್‌ರನ್ನೇ ಈ ಕೆಲಸಕ್ಕೆ ಒಪ್ಪಿಸಿದ್ದೇವೆ. ತಮ್ಮ ಹರಿತವಾದ ಹಾಗೂ ನಿಖರವಾದ ಪ್ರಶ್ನೆಗಳಿಂದ ಅತಿಥಿಗಳನ್ನು ಗಲಿಬಿಲಿಗೊಳಿಸುವಲ್ಲಿ ಖ್ಯಾತರಾದ ಚಾಪರ್ ಹಿಂದೆ ಹಲವು ಸಂದರ್ಶನಗಳಲ್ಲಿ ಅತಿಥಿಗಳ ನೀರಿಳಿಸಿದ್ದಾರೆ. ಈ ಮಾಹಿತಿಯನ್ನು ಪಡೆದ ಸಾಮ್ರಾಟರು ಕಳೆದಿರುಳಿನಿಂದ ತಮ್ಮ ಖಾಲಿ ಶಿರದಲ್ಲಿ ಸಾಧ್ಯವಾದಷ್ಟು ಹೆಚ್ಚು ನೀರು ತುಂಬಿಸಿಕೊಳ್ಳತೊಡಗಿದ್ದಾರೆ.

ಈ ಅಪರೂಪದ ವಿಶೇಷ ಸಂದರ್ಶನದ ಮೊದಲ ಭಾಗ ನಾಳಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ. ಹೆದರಬೇಡಿ, ನಾಳೆ ಬಂದೇ ಬರುತ್ತದೆ… ಯಾವಾಗ…. ನಾಳೆ!

ವಾರದ ವಿವೇಕ 35

8 ಜನ

……………………………………….

ಎಲ್ಲಾ ಸಾಮಾನ್ಯೀಕರಿಸಿದ
ಹೇಳಿಕೆಗಳೂ ಸುಳ್ಳು,
ಇದನ್ನೂ ಸೇರಿಸಿ!

………………………………………

ಹಾಸ್ಯ ಲೇಖನ: ಸರಸ ವಿರಸ

7 ಜನ

* ಶ್ರೀನಾಥ್ ಬಲ್ಲೆ

(ಬರಹ ಮೊದಲು ಪ್ರಕಟವಾದದ್ದು ‘ಸಂಪದ’ದಲ್ಲಿ)

ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು,  ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ  ’you are my ಸಂಕಟ’ ಅಂದರೆ ಏನು ಮಾಡುವುದು.  ಹೋಗಲಿ,  ಟೀ.ವಿ ಕನ್ನಡದಲ್ಲಿ  "ಹೇನಾಯ್ತು ? " ಅಂತ ಕೇಳಲೇ?  "ಹೇನಿಲ್ಲ" ಅಂದುಬಿಟ್ಟರೆ ? ಸರಿ, ಸರಸವಾಗಿ ಡಾ|ರಾಜ್ ಶೈಲಿಯಲ್ಲಿ "ಕೋಪವೇತಕೇ ನನ್ನಲೀ ಹೇಳುಬಾ ಪ್ರೇಯಸೀ " ಎಂದು ಹಾಡೋಣ ಅಂತ ಹತ್ತಿರ ಹೋದರೆ, ಅವಳ ಮುಖ  "ಬಾರಾ… ಜಗಳಕೆ ಬಾರಾ" ಎಂದು ಹಾಡುವಂತೆ ತೋರಿತು. 

ಇದ್ಯಾವುದೂ ಬೇಡ. ಸರಸದ ಮಾತೇ ಸರಿ ಎಂದು ತೀರ್ಮಾನ ಮಾಡಿ "ನೀ ಸಿಟ್ಟು ಮಾಡಿಕೊಂಡಾಗ ಕೆಂಪು ಕೆಂಪಾಗಿ ಕಾಣೋದು ನೋಡಿ ಮನೆಯಲ್ಲಿ ಟೊಮ್ಯಾಟೋ ಮುಗಿದಿರೋದು ನೆನಪಾಯ್ತು ನೋಡು " ಅಂದೇ ಬಿಟ್ಟೆ. ಸದ್ಯ, ’ನಿಮ್ಮ ಹೊಟ್ಟೆ ನೋಡಿದಾಗಲೆಲ್ಲ ಕುಂಬಳಕಾಯಿ ಹುಳಿ ತಿನ್ನಬೇಕು ಅನ್ನಿಸುತ್ತೆ’ ಅಂತ ಅವಳು ಹೇಳಲಿಲ್ಲ. ನನ್ನ ಆ ಮಾತಿಗೆ ಅವಳು ಇನ್ನೂ ಕೆಂಪಾದಳು. ನಾಚಿಕೆಯಿಂದಲೋ ಅಥವಾ ಹೆಚ್ಚಿನ ಸಿಟ್ಟಿನಿಂದಲೋ ತಿಳಿಯದಾಯಿತು. ಮುಂದುವರೆಸಿದೆ "ಇದನ್ನೇ ಹೇಳೋದು… ಕೆಂಪೇ ಕೆಂಪೋತ್ಪತ್ತಿ:  ಅಂತ ".  ಆಗ ನಿಜಕ್ಕೂ ನಾಚಿಕೆಯ ಕೆಂಪೇರಿ ನಗು ಅಳು ಎರಡೂ ಒಟ್ಟಿಗೆ ಬಂದೇ ಬಿಟ್ಟಿತು. 

"ಈಗಲಾದರೂ ವಿಷಯ ಹೇಳು ಕೆಂಪಮ್ಮಾ " ಅಂದೆ. ನಾರಿ ನುಡಿದಳು "ಇವತ್ತು ಬೆಳಿಗ್ಗೆ ಇಂದ ನಾನೂ ಕಾಯ್ತಾ ಇದ್ದೀನಿ. ನನಗೆ ಶುಭಾಶಯ ಹೇಳಲೇ ಇಲ್ಲ ನೀವು". ಹೌದು, ಈಗಲೂ ಹೇಳಿಲ್ಲ ! ನಾನೇನು ಮಾಡಲಿ ಯಾವುದೋ ತಿಂಗಳು ಯಾವುದೋ ದಿನ ಹುಟ್ಟಿದರೆ ಹೇಗೆ ನೆನಪು ಇರುತ್ತೆ. ಅದೇ, ನಮ್ಮ ಪಕ್ಕದ ಮನೆ ರೋಜ ನೋಡಿ. ಜನವರಿ ಒಂದನೇ ತಾರೀಖು ಹುಟ್ಟಿದಳಂತೆ. ಹಾಗಂತ ಇವಳೇ ಹೇಳಿದ್ದು. ವಿಷಯ ತಿಳಿದಾಗಿನಿಂದ ಪ್ರತೀ ವರ್ಷ ತಪ್ಪದೆ, ಅವಳ ಗಂಡ ಅವಳಿಗೆ ವಿಶ್ ಮಾಡದಿದ್ದರೂ, ನಾನಂತೂ ಮಾಡಿದ್ದೇನೆ. ಹೋಗ್ಲಿ ಬಿಡಿ, ವಿಷಯಕ್ಕೆ ಬರೋಣ. 

ಸಮಾಧಾನ ಮಾಡುವಂತೆ ಹೇಳಿದೆ "ಅಲ್ವೇ, ನನಗೆ ನೆನಪಿಲ್ಲಾ ಅಂತ ಅಂದುಕೊಂಡಿದ್ದೀಯಾ. ಆ ಹಾಳಾದ ಹೂವಿನ ಅಂಗಡಿಯವನಿಗೆ ಬೆಳಿಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಹೂವಿನ ಬುಕೆ ತೆಗೆದುಕೊಂಡು ಬಾ ಅಂತ ನೆನ್ನೆ ಸಂಜೆ ದುಡ್ಡು ಕೊಟ್ಟಿದ್ದೆ. ನೋಡು, ಇನ್ನೂ ಬಂದಿಲ್ಲ. ಅಲ್ಲಾ, ಹೂವಂತಹ ನಿನ್ನ ಮನಸ್ಸನ್ನು ಹೂವಿನಿಂದ ವಿಶ್ ಮಾಡುವುದು ಬಿಟ್ಟು ಬರೀ ಕೈಯಲ್ಲಿ ವಿಶ್ ಮಾಡಲಿಕ್ಕೆ ನಾನೇನು ಬಿಕನಾಸೀನೇ? " ಅಂತ ನನ್ನ ನಾನೇ ಬೈದುಕೊಂಡೆ. ಸೂರ್ಯಕಾಂತಿ ಹೂವಿನಂತೆ ಅರಳಿದ ಅವಳ ಮುಖದಲ್ಲಿನ ಬಾಯಿಂದ ನುಡಿ ಮುತ್ತುಗಳು ಉರುಳಿತು "ಬರೀ ಹೂವಿನ ಬುಕೆ ನಾ". 

ಸಾವರಿಸಿಕೊಂಡು  "ಹೂವಿನ ಬುಕೆ ಇಂದ ಒಂದು ಕೆಂಪು ರೋಜನ್ನು ತೆಗೆದುಕೊಂಡು ಮುಡಿದ ಮೇಲೆ ಹೊರಗಡೆ ಊಟಕ್ಕೆ ಹೋಗೋಣ ಅಂತ ನನ್ನ ಪ್ಲಾನು" ಅಂತ ಇಲ್ಲದ ಪ್ಲಾನು ಹೊರಬಿಟ್ಟೆ. ಅವಳು ಬಿಟ್ಟಾಳೆಯೇ "ಮತ್ತೊಂದು ರೋಸ್ ತೆಗೆದುಕೊಂಡು ನಿಮ್ಮ ಕಿವಿ ಮೇಲೆ ಇಟ್ಕೊಂಡು ಹೋದರೆ ಹೇಗೆ? ಅಲ್ರೀ, ಬೆಳಿಗ್ಗೆ ಸೊಪ್ಪಿನ ಹುಳಿ ಮಾಡು ಅಂತ ಹೇಳಿದ್ದು, ನಾಳೆಗಾ? ". ಥತ್! ಯಾಕೋ ಇವತ್ತು ಎದ್ದ ಘಳಿಗೆ ಚೆನ್ನಾಗಿಲ್ಲ. ಒಂದು ಹೇಳಿದರೆ ಇನ್ನೊಂದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇನೆ.

"ಅಲ್ಲ, ವಿಶಾಲೂ. ನಿನಗೆ ಸೊಪ್ಪಿನ ಹುಳಿ ಇಷ್ಟ ಅಲ್ವಾ. ಅದಕ್ಕೇ ಹೇಳಿದ್ದು" ಅಂದೆ. ವಿಶಾಲೂ "ನನಗೆ ಸೊಪ್ಪು ಇಷ್ಟ ಅಂತ ನಾನೇ ಮಾಡಿಕೊಂಡು ತಿನ್ನಬೇಕಾ. ನೀವು ಮಾಡೋದು ತಾನೇ ? " ಅನ್ನೋದೇ. ಯಾಕೋ ವ್ಯಾಪಾರ ಗಿಟ್ತಾ ಇಲ್ಲ ಅಂತ ಅಂದುಕೊಂಡು "ಸರಿ, ಅದು ಬಿಡು. ಈಗ ಹೇಳು, ಯಾವ ಹೋಟಲ್ಲಿಗೆ ಹೋಗೋಣ ?". ವಿಶಾಲೂ ಹೇಳಿದಳು "ಎಂಟನೇ ಕ್ರಾಸ್’ನಲ್ಲಿರೋ ಜನತಾ ಹೋಟೆಲ್ಲಿಗೆ ಹೋಗೋಣ ? ". ನಾನು ಬಿಗುಮಾನದಿಂದ ನುಡಿದೆ "ಥತ್! ಇಂತಹ ದಿನಾನೂ ನಿನ್ನನ್ನ ಆ ದರಿದ್ರ ಹೋಟೆಲ್ಲಿಗೆ ಕರೆದುಕೊಂಡು ಹೋಗ್ತೀನಾ?  ಬೇರೇ ಕಡೆ ಹೋಗೋಣ". ವಿಶಾಲೂ ಪ್ರತಿ ನುಡಿದಳು "ಅಲ್ರೀ, ಹಾಗಲ್ಲ, ಊಟ ಆದ ಮೇಲೆ ಅಲ್ಲಿಂದ ರಾಜರತ್ನಂ ಜುವೆಲರ್ಸ್’ಗೆ ನೆಡೆದೇ ಹೋಗಬಹುದು. ಸುಮ್ಮನೆ ಆಟೋ ಖರ್ಚು ಇರೋಲ್ಲ. ". ಪಕ್ಕದಲ್ಲೇ ಬಾಂಬ್ ಸಿಡಿದ ಹಾಗೆ ಆಯಿತು.

ಮತ್ತೆ ಸಾವರಿಸಿಕೊಂಡು ನುಡಿದೆ "ಅಲ್ಲಾ, ಇವತ್ತು ಭಾನುವಾರ ಅಲ್ವಾ? ಅಂಗಡಿ ರಜಾ".  ವಿಶಾಲೂ ನುಡಿದಳು "ಹೌದು, ಕಸ್ಟಮರ್ಸ್’ಗೆ ರಜ. ಆದರೆ ಡೆಲಿವರಿ ಕೊಡ್ತಾರೆ". ಇದೇನಪ್ಪ ಹೊಸ ವಿಷಯ ಅಂತ ಮಿಕಿ ಮಿಕಿ ನೋಡಿದೆ. ಅವಳು ಹೇಳಿದಳು "ಹೋದ ವಾರ ಆ ಕಡೆ ಹೋದಾಗ ಒಂದು ಸರ ನೋಡಿದ್ದೇ, ನೀವು ಹೇಳಿದ್ರೀ, ಒಂದು ಒಳ್ಳೇ ದಿನ ಕೊಡಿಸ್ತೀನಿ ಅಂತ. ಜ್ಞ್ನಾಪಕ ಇಲ್ವಾ? ಇದಕ್ಕಿಂತಾ ಒಳ್ಳೇ ದಿನ ಬೇಕಾ ? ನೆನ್ನೆ ಅಂಗಡಿಯವರಿಗೆ ಹೇಳಿ ಬಂದಿದ್ದೆ. ನಾಳೆ ಬರ್ತೀವಿ ತೆಗೆದಿಟ್ಟಿರಿ ಅಂತ. ಹೇಗಿದ್ರೂ ನೀವೂ ರೆಡಿ ಇದ್ದೀರಾ. ಮೊದಲು ಅಂಗಡಿಗೆ ಹೋಗಿ, ಸರ ತೆಗೆದುಕೊಂಡು ಆಮೇಲೆ ಊಟಕ್ಕೆ ಹೋಗೋಣ. ಸದ್ಯ, ಊಟದಲ್ಲಿ ನಿಧಾನ ಆಗಿ ಅಂಗಡಿ ಮುಚ್ಚಿಬಿಟ್ಟಾರು ".
ಮನದಲ್ಲೇ ಹಾಡಿಕೊಂಡೆ "ದಾರಿ ಕಾಣದಾಗಿದೇ ರಾಘವೇಂದ್ರನೇ…". ಇಬ್ಬರೂ ಹೊರಗೆ ಹೊರಟೆವು. ವಿಶೇಷವಾಗಿ ನಾವು ಹೊರಗೆ ಹೊರಟಾಗ ಹೇಗೋ ಕೊನೆ ಮನೆ ಅನಸೂಯಾಬಾಯಿಗೆ ತಿಳಿದು ಹೋಗುತ್ತದೆ. ಅವರೂ ಅದೇ ಸಮಯಕ್ಕೆ ಏನೋ ಕೆಲಸ ಇರುವ ಹಾಗೆ, ಹೊರಗೆ ಬಂದು ನಮ್ಮಿಂದ ವಿಷಯ ತಿಳಿದುಕೊಂಡ ಮೇಲೇನೇ ನಮಗೆ ಮುಂದೆ ಹೋಗಲು ಅನುಮತಿ ಸಿಗುವುದು. ಅಲ್ಲಿಯವರೆಗೆ ಜಪ್ಪಯ್ಯ ಅಂದರೂ ಬಿಡಲ್ಲ. ನನಗೋ ಅವರು ಬಂದರೇ ಆಗೋಲ್ಲ. ನಾನು ಸಿಡಿ ಸಿಡಿ ಅನ್ನುವುದು ಅವರು ಅದನ್ನು ಲೆಕ್ಕಿಸದೆ ಇರುವುದು ಎಲ್ಲ ಮಾಮೂಲು. ಇಂದೂ ಹಾಗೇ ಆಯಿತು. ನಾವು ಹೊರಗೆ ಕಾಲಿಡುತ್ತಿದ್ದಂತೆಯೇ ಅವರೂ ಹಾಗೇ ಸುಮ್ಮನೆ ಹಾದು ಹೋಗುವವರಂತೆ ನಮ್ಮನ್ನು ನೋಡಿ ನಿಂತು ಹಲ್ಲುಗಿಂಜಿದರು. ಇಂದು ಸಿಡಿಗುಟ್ಟುವ ಸರದಿ ವಿಶಾಲೂದು. ನಾನೇ ಹೋಗಿ ಅವರನ್ನು ಮಾತನಾಡಿಸಿದೆ. ಇದನ್ನು ನಿರೀಕ್ಷಿಸದ ಅವರು ಸೀದ ವಿಶಾಲೂ ಬಳಿ ಬಂದು "ರಾಮಣ್ಣಿಗೆ ಬಂದ ಜ್ವರ ವಾಸಿ ಆಯಿತಾ" ಅನ್ನೋದೇ ? 

ವಿಶಾಲೂ ಹೇಳಿದಳು "ಸ್ವಲ್ಪ ಮೈ ಬೆಚ್ಚಗಿದೆ ಅಂತ ಇದ್ದರು. ಅದಕ್ಕೆ ಸ್ವಲ್ಪ ಗಾಳಿಗೆ ತಿರುಗಾಡಿಕೊಂಡು ಬಂದರೆ ಸರಿ ಹೋಗಬಹುದು ಅಂತ ನಾನೇ ಹೊರಡಿಸಿಕೊಂಡು ಹೋಗುತ್ತಿದ್ದೇನೆ".  ಮೈ ಬೆಚ್ಚಗಾದರೆ ಹೊರಗೆ ತಿರುಗಾಡುವುದೇ? ಸುಳ್ಳು ಹೇಳಲಿಕ್ಕೂ ಬರುವುದಿಲ್ಲ ಇವಳಿಗೆ. ಆದರೆ ನನಗೆ ಜ್ವರ ಯಾವಾಗ ಬಂದಿತ್ತು ?  ನಾನು ಏನು ವಿಷಯ ಎಂದು ಸನ್ನೆ ಮಾಡಿ ಕೇಳಿದಾಗ ಅವಳು ನನ್ನನ್ನು ನೂಕಿಕೊಂಡು "ಸುಮ್ಮನೆ ಬನ್ನಿ"  ಅಂತ ಹೊರಡಿಸಿಕೊಂಡು ಹೋದಳು. ಇವತ್ತೇನೋ ಆಗಿದೆ. ಎಂದೂ ಬಿಡದ ಅನಸೂಯಾಬಾಯಿ ಹೆಚ್ಚು ವಿಷಯ ಕೇಳದೆ ನಮ್ಮನ್ನು ಹಾಗೇ ಬಿಟ್ಟುಬಿಟ್ಟರು. ಆಮೇಲೆ ವಿಷಯ ಹೇಳಿದಳು, ಅವರ ಸೊಸೆ ಸೀಮಂತಕ್ಕೆ ನನಗೂ ಊಟಕ್ಕೆ ಹೇಳಿದ್ದರಂತೆ. ಅಲ್ಲಿ ನನಗೇನು ಕೆಲಸ ಅಂತ ಇವಳು ನನಗೆ ಜ್ವರ ಅಂತ ಹೇಳಿದ್ದಳು. ಒಟ್ಟಾರೆ ನನಗೆ ಹಬ್ಬದೂಟ ಮಿಸ್ ಆಯಿತು.

ಅಂತೂ ನಮ್ಮ ಸವಾರಿ ಅಂಗಡಿಯ ಕಡೆ ನೆಡೆದಿತ್ತು. ಮನದಲ್ಲೇ ನೂರು ಬಾರಿ "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಕೇಳಿಕೊಂಡೆ. ಕಣ್ಣಲ್ಲಿ ಕಸವೇನೋ ಬಿತ್ತು ಎಂದು ಉಜ್ಜಿಕೊಂಡಾಗ ಕಣ್ಣಿನ ರೆಪ್ಪೆಯ ಕೂದಲು ಬೆರಳಿಗೆ ಅಂಟಿಕೊಂಡಿತು. "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಮನದಲ್ಲೇ ಮತ್ತೆ ಅಂದುಕೊಂಡು ಅದನ್ನು ಉಫ಼್ ಮಾಡಿದೆ. ಅಂಗಡಿಯ ಬಾಗಿಲಿಗೆ ಹೋದರೆ ….. ಬಾಗಿಲು ಬೀಗ !!! "ಯುರೇಕಾ" ಎಂದು ಕೂಗಲಿಲ್ಲ ಅಷ್ಟೇ!
ವಿಶಾಲೂ ಅಂಗಡಿಯವನಿಗೆ ಮನದಲ್ಲೇ ನೂರು ಬಾರಿ ಶಾಪ ಹಾಕಿದಳು. ನಾನು ನೂರು ಬಾರಿ ಆಶೀರ್ವಾದ ಮಾಡಿದ್ದೆ. ಅಲ್ಲಿಂದ ಸೀದ ಮನೆ ಕಡೆ ಹೊರಟೆವು. ಹೋಟಲ್ಲೂ ಇಲ್ಲ ಏನೂ ಇಲ್ಲ. ಹೇಗಿದ್ರೂ ಸೊಪ್ಪಿನ ಹುಳಿ ರೆಡಿ ಇತ್ತಲ್ಲ. ಕಣ್ಣುಗಳೆರಡೂ ಕನ್ನಂಬಾಡಿ ಕಟ್ಟೆಯಾಗಿತ್ತು. ಯಾವ ಕ್ಷಣದಲ್ಲಾದರೂ ಕಟ್ಟೆ ಒಡೆದು ನೀರು ಧೋ ಎಂದು ಸುರಿಯುವ ಸ್ಥಿತಿಯಲ್ಲಿತ್ತು. ಮನೆ ತಲುಪಿದ ಕೂಡಲೆ, ಅವಳ ಹುಟ್ಟುಹಬ್ಬಕ್ಕೆಂದು,  ಮೊದಲೇ ಖರೀದಿ ಮಾಡಿಟ್ಟಿದ್ದ ಚಿನ್ನದ ಸರ ತೆಗೆದು, ಅವಳ ಕೊರಳಿಗೆ ಹಾಕಿದೆ. ಈಗ ನಿಜಕ್ಕೂ ಜೋರಾಗಿ ಅಳು ಬಂದಿತ್ತು. ಒಳ್ಳೇದಕ್ಕೂ ಅಳು ಕೆಟ್ಟದಕ್ಕೂ ಅಳು. ನನಗೆ ಅರ್ಥವೇ ಆಗೋಲ್ಲ.

ಈಗ ನಿಜಕ್ಕೂ ಕೇಳಿದೆ "what is your ಸಂಕಟ ? ಸರ ಚೆನ್ನಾಗಿಲ್ವಾ? " ಅಂತ. ಏನೋ ಹೇಳಲಿಕ್ಕೆ ಬಾಯಿ ತೆರೆದಳು ಆದರೆ ಅದೇ ಸಮಯಕ್ಕೆ ಯಾರೋ ಬಾಗಿಲು ಬಡಿದರು. ತೆರೆದ ಬಾಯಿ ಮುಚ್ಚಿ, ಮುಚ್ಚಿದ್ದ ಬಾಗಿಲು ತೆರೆಯಲು, ಅಲ್ಲಿ ಅಂಗಡಿಯವನು ನಿಂತಿದ್ದ. "ಸಾರಿ ಮೇಡಮ್, ಬೇರೇ ಕೆಲಸ ಇತ್ತು ಅಂತ ಅಂಗಡಿ ಬೇಗ ಮುಚ್ಚಿದೆ. ಆದರೆ ಖಾಯಂ ಗಿರಾಕಿ ನೀವು ಅಂತ ನಿಮ್ಮ ಆರ್ಡರ್ ಮನೆಗೇ ತಲುಪಿಸೋಣ ಅಂತ ಬಂದೆ. ಇವತ್ತು ಸ್ಪೆಶಲ್ಲು ದಿನ ಅಲ್ವಾ………." ನಮ್ಮ ಮನೆ ವಿಷಯ ನಮಗಿಂತಲೂ ಹೊರಗಿನವರಿಗೆ ಚೆನ್ನಾಗಿ ಗೊತ್ತಿರುತ್ತೆ.

ಅವನು ತಂದುಕೊಟ್ಟ ಪ್ಯಾಕೆಟ್ ತೆರೆದು ಅದರಿಂದ ಒಂದು ಡಬ್ಬಿ ಹೊರತೆಗೆದಳು. ನನ್ನೆದೆ ಇನ್ನೂ ಜೋರಾಗಿ ಹೊಡೆದುಕೊಳ್ಳಲು ಶುರು ಮಾಡಿತ್ತು. ನಾನು ಸರ್ಪ್ರೈಸ್ ಮಾಡಲು ತಂದಿದ್ದರೆ ಇವಳು ಇನ್ನೊಂದು ತೆಗೆದಿಟ್ಟು ಕೊಂಡಿದ್ದಾಳೆ. ಡಬ್ಬಿಯಿಂದ ಒಂದು ಉಂಗುರ ಹೊರತೆಗೆದು, ನನ್ನ ಬೆರಳಿಗೆ ತೊಡಿಸಿ "happy anniversary" ಅಂದಳು !!!!! 

ಅಂದರೇ,  ಇಂದು ಅವಳ ಹುಟ್ಟಿದಹಬ್ಬ ಅಲ್ಲಾ ! ನಾನು ಹುಟ್ಟಿದಹಬ್ಬ ಅಂತ ಸರ ತಂದಿದ್ದೆ. ಮುಂಚೇನೇ ಗೊತ್ತಿದ್ದರೆ ಏನು ದೊಡ್ಡ ಸರ ತರ್ತಾ ಇದ್ನೇ ?  ಇಂದು ನಮ್ಮ ಮದುವೆಯಾದ ದಿನ. ಇಬ್ಬರೂ ಒಬ್ಬರಿಗೊಬ್ಬರು ಸರ್ಪ್ರೈಸ್ ಮಾಡಿಕೊಂಡಿದ್ದೆವು ! ಕಡೆಗೂ ನನ್ನೆದೆಗೆ ಒರಗಿ "ಅಲ್ರೀ, ಇವತ್ತು ನಮ್ಮ ಮದುವೆಯಾದ ದಿನ ಅಂತ ಗೊತ್ತಿದ್ದೂ ನಾಟಕ ಆಡಿದಿರಾ" ಅಂದಳು. ನಾನು ನುಡಿದೆ "ಖಂಡಿತಾ ನೆನಪಿರಲಿಲ್ಲ. ಸಾಮಾನ್ಯವಾಗಿ ನಾನು ದುರ್ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ" !!!

ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ

6 ಜನ

ಒಮ್ಮತಕ್ಕೆ ಬಾರದ ಉಭಯ ಒಕ್ಕೂಟಗಳ ನಾಯಕರು

* ನಾರದ
ನಗಾರಿ ಸುದ್ದಿ, ಕೋಪವೇ-ಗನ್, ಜ.೫

ಜಾಗತಿಕ ಭೂತಾಪಮಾನ ಏರಿಕೆಯಿಂದ ತಮ್ಮ ವಿಸ್ಕಿ ಗಾಜಿನಲ್ಲಿನ ಐಸ್ ಕ್ಯೂಬುಗಳು ಬಲುಬೇಗನೆ ಕರಗುತ್ತಿರುವ ವಿದ್ಯಮಾನವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ಸದಾ‘ಗುಂಡು’ರವರು ಆಗ್ರಹಿಸಿದ್ದಾರೆ. ಡೆನ್ಮಾರ್ಕಿನ ಕೋಪವೇ-ಗನ್‌ನಲ್ಲಿ ಅಂತ್ಯಗೊಂಡ ಜಾಗತಿಕ ಸಮಾವೇಶದಲ್ಲಿ ಮಾತನಾಡುತ್ತ ಅವರು ಈ ಆಗ್ರಹವನ್ನು ಮಾಡಿದರು.

“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸಂಯಮ , ಸಹಿಷ್ಣುತೆ ಹಾಗೂ ಸಹಾನುಭೂತಿಯನ್ನು  ರೂಢಿಸಿಕೊಳ್ಳಬೇಕು. ಇರುವವರನ್ನುice cube ಕಂಡು ಕರುಬುವ ಕೆಲಸ ಮಾಡಬಾರದು. ತಮ್ಮ ದೇಶಗಳಲ್ಲಿ ಜನರಿಗೆ ಕುಡಿಯುವ ನೀರು ಇಲ್ಲ, ಸವಿಯಲು ವಿಸ್ಕಿಯಿಲ್ಲ, ವಿಸ್ಕಿಯಲ್ಲಿ ಮುಳುಗಿಸಲು ಐಸ್ ಕ್ಯೂಬುಗಳಿಲ್ಲ, ಐಸ್ ಮಾಡಲು ಫ್ರಿಜ್ಜಿಲ್ಲ, ಫ್ರಿಜ್ ನಡೆಸಲು ವಿದ್ಯುತ್ ಇಲ್ಲ, ವಿದ್ಯುತ್ ಉತ್ಪಾದನೆಗೆ ಮಳೆಯಿಲ್ಲ, ಸರಿಯಾದ ಸಮಯಕ್ಕೆ ಮಳೆ ಬರಲಿಕ್ಕೆ ಕಾಡುಗಳು ಉಳಿದಿಲ್ಲ, ತಮ್ಮ ಕಾಡುಗಳು ಉಳಿದುಕೊಳ್ಳುವುದಕ್ಕೆ ನಾವು ಬಿಟ್ಟಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸುವುದು ಯಾರಿಗೂ ಹಿತಕರವಲ್ಲ. ತಮ್ಮ ದೇಶದ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ, ತಮ್ಮ ದೇಶಗಳ ಜನರ ಜೀವನ ಸ್ಥಿತಿಯನ್ನು ಸುಧಾರಿಸುವ ಭರದಲ್ಲಿ ಈ ದೇಶಗಳು ತಾಪಮಾನ ಏರಿಕೆ ತಡೆಗಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿಯಲ್ಲಿನ ಐಸ್ ಕ್ಯೂಬು ಕರಗಿಹೋಗುವಂತಹ ಅಮಾನವೀಯ ಪರಿಣಾಮವಾಗುತ್ತಿದೆ. ಇಲ್ಲಿನ ಜನರು ಚಿಲ್ಡ್ ಬಿಯರ್ ಎಂದರೇನೆಂಬುದನ್ನೇ ಮರೆತುಹೋಗುವ ಅಪಾಯವಿದೆ.” ಸದಾ‘ಗುಂಡು’ ಮಾತನಾಡುತ್ತ ವಿಪರೀತ ಭಾವುಕರಾಗಿದ್ದರು ಎಂದು ವರದಿಯಾಗಿದೆ.

ಸದಾ‘ಗುಂಡು’ರವರ ಆರೋಪಗಳನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಅಭಿವೃದ್ಧಿ ಶೀಲ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ದರಿದ್ರಯ್ಯರ್, “ಭಾರತವೂ ಸೇರಿದಂತೆ ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳು ಜಾಗತಿಕ ಭೂತಾಪಮಾನ ಏರಿಕೆಗೆ ಕಾರಣರಲ್ಲ. ಇದಕ್ಕೆ ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಚಳಿಯಿಂದಾಗಿ ಸಾವಿರಾರು ಜನರು ಸಾಯುವುದೇ ಸಾಕ್ಷಿ. ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿ ಗ್ಲಾಸಿನಲ್ಲಿ ಐಸ್ ಕ್ಯೂಬ್ ಕರಗಿದರೆ ನಾವು ಹೇಗೆ ಅದಕ್ಕೆ ಹೊಣೆಯಾಗುವೆವು? ಅತಿಯಾಸೆಗೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿದೆ.”

ಕೋಪವೇ-ಗನ್‌ನಲ್ಲಿ ನಡೆದ ಸಮಾವೇಶದ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಉಟ್ಟು ಓರಾಟಗಾರ ಉಗ್ರಣ್ಣನವರು, “ನಮ್ಮ ಸರಕಾರಗಳು ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಶ್ರೀಮಂತ ರಾಷ್ಟ್ರಗಳಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಿವೆ. ತಮ್ಮ ಸುಖಕ್ಕಾಗಿ ಯಾರ ನೆಮ್ಮದಿಯನ್ನೂ ಕೆಡಿಸಲು ಯೋಚಿದ ಅಮೇರಿಕಾ ಒಪ್ಪಂದದಲ್ಲಿ ದೇಶಕ್ಕೆ ಮಾರಕವಾದ ಅಂಶಗಳನ್ನು ಸೇರಿಸಿದೆ. ತಮ್ಮ ದೇಶದ ಜನರಿಗಾಗಿ ಬೇಕಾಗುವ ಐಸ್ ಕ್ಯೂಬ್‌ಗಳ ಉತ್ಪಾದನೆಯನ್ನು ಔಟ್ ಸೋರ್ಸ್ ಮಾಡಿಬಿಡುವ ಭೀಕರ ಹುನ್ನಾರ ನಡೆದಿದೆ. ನಮ್ಮ ದೇಶವನ್ನು ಅದರ ತಣ್ಣನೆಯ ಮಂಜುಗಡ್ಡೆಗಳಿಂದ ವಂಚಿತವಾಗಿಸುವ ಸಂಚು ನಡೆದಿದೆ. ನಾವು ಈಗಲೇ ಎಚ್ಚರವಾಗದಿದ್ದರೆ, ಉಗ್ರ ಹೋರಾಟಕ್ಕೆ ಮುಂದಾಗದಿದ್ದರೆ ಇಡೀ ದೇಶಕ್ಕೆ ದೇಶವೇ ಅಮೇರಿಕಾಗೆ ಮಂಜುಗಡ್ಡೆ  ಸಪ್ಲೈ ಮಾಡುವ ಫ್ರಿಜ್ ಆಗಿಹೋಗುತ್ತದೆ.” ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರದ ಕೈಗಾರಿಕಾ ಮಂತ್ರಿಗಳು ನಿರಾಕರಿಸಿದ್ದಾರೆ. 

ನಗೆ ಸಾಮ್ರಾಜ್ಯದ ಉತ್ತರಾಧಿಪತಿ!

6 ಜನ

ಯಾವ ತಾಂತ್ರಿಕ ಪರಿಣಿತಿಯೂ ಇಲ್ಲದೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನಗೆ ನಗಾರಿಯ ಸಾಮ್ರಾಜ್ಯವನ್ನು ಎರಡು ವರ್ಷಗಳ ಕಾಲ ನಾವು ಆಳಿದ್ದೇವೆ. ಈ ನಡುವೆ ನಮ್ಮ ಕೌಶಲ್ಯರಹಿತ, ಸಂಸ್ಕಾರವಿಲ್ಲದ ಹಸಿ ಹಸಿ ಪ್ರತಿಭೆಯನ್ನು ಬಳಸಿ ರಾಜ್ಯಭಾರ ಮಾಡಿದ್ದೇವೆ. ಪ್ರಜೆಗಳೂ ಸಹ ನಮ್ಮ ದೋಷಗಳನ್ನು ಕಂಡೂ ಕಾಣದವರ ಹಾಗೆ ಜಾಣ ಕುರುಡನ್ನು ನಟಿಸಿ ಸಾಮ್ರಾಟರ ಮರ್ಯಾದೆ ಕಾಪಾಡುತ್ತ ಬಂದಿದ್ದಾರೆ.

ಆದರೆ ಕಾಲ ಬದಲಾಗಿದೆ. ಮಗುವಿನ ನ್ಯಾಪ್‌ಕಿನ್ ಬದಲಾಯಿಸುವುದಕ್ಕೂ ಕಾಲೇಜು ಡಿಗ್ರಿಗಳಿವೆ. ಹೋಟೇಲಿಗೆ ಬಂದ ಗಿರಾಕಿಯೊಂದಿಗೆ ವ್ಯವಹರಿಸುವುದನ್ನು ಕಲಿಸಿಕೊಡುವುದಕ್ಕೆ ಪದವಿಗಳಿವೆ. ಪ್ರೀತಿಸುವುದನ್ನೂ ಹೇಳಿಕೊಡುವ ಕೋರ್ಸುಗಳಿವೆ. ಕಾಲ ಬದಲಾದ ಹಾಗೆ ನಾವೂ ಬದಲಾಗುವ ನಾಟಕವಾಡದಿದ್ದರೆ ಜನ ನಮ್ಮನ್ನು ಮ್ಯೂಸಿಯಂನಲ್ಲಿ ಪುರಾತನ ಅಸ್ಥಿ ಪಂಜರಗಳ ರೂಂ ಮೇಟ್ ಮಾಡಿಬಿಡಬಹುದೆಂಬ ಆತಂಕದಿಂದ ನಾವು ಹಗಲು ನಿದ್ದೆಯನ್ನೂ ರಾತ್ರಿ ಎಚ್ಚರವನ್ನೂ ಕಳೆದುಕೊಂಡಿದ್ದೆವು.

ಇಷ್ಟು ಕಾಲ ನಮ್ಮ ಅತ್ಯಾಪ್ತ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪ ಇವರಿಬ್ಬರನ್ನೇ ನೆಚ್ಚಿಕೊಂಡು ಸಾಮ್ರಾಜ್ಯವಾಳಿದ್ದೇವೆ. ಎರಡೂ ಬದಿಯಲ್ಲಿ ಉರಿಯುವ ಸಿಗರೇಟಿನಂತೆ ಯೌವನವನ್ನು ಸವೆಸಿದ್ದೇವೆ. ಈಗ ನಾವು ಆರಾಮ ಕುರ್ಚಿಯಲ್ಲಿ ನಮಗಿಂತ ಸಾಮರ್ಥ್ಯ ಶಾಲಿಗಳಾದ ಯುವಕರ ದುಡಿಮೆಯ ಯಶಸ್ಸಿನ ಫಲವನ್ನುಣ್ಣುತ್ತ, ಅವರ ದೋಷ, ವೈಫಲ್ಯಗಳನ್ನು ಹೆಕ್ಕುತ್ತ, “ನಮ್ಮ ಕಾಲದಲ್ಲಿ…” ಎಂದು ಬೋರ್ ವೆಲ್ ಕೊರೆಯುತ್ತ ಕೂರುವ ಸಮಯ.

ನಗೆ ನಗಾರಿಯು ಮೂಲತಃ ಸುದ್ದಿ ಮಾಧ್ಯಮ. ಸತ್ಯ ಹಾಗೂ ಸತ್ಯಾಕಾಂಕ್ಷಿಗಳ ನಡುವಿನ ತೂಗು ಸೇತುವೆ. ಸತ್ಯದಿಂದ ಸತ್ಯಾಕಾಂಕ್ಷಿಗಳನ್ನು ಸದಾ ದಿಕ್ಕೆಡಿಸುವ ಮುಖ್ಯವಾಹಿನಿಯ ಮಾಧ್ಯಮಗಳೊಂದಿಗೆ ಸೆಣೆಸುತ್ತ ಸತ್ಯವನ್ನು ಉಳಿಸುವುದು ನಮ್ಮ ಧ್ಯೇಯ. ಸತ್ಯವಲ್ಲದೆ ಬೇರೇನೂ ನಮ್ಮ ವರದಿಗಳಲ್ಲಿ ಸುಳಿಯಬಾರದು ಎಂಬುದು ನಮ್ಮ ಆದರ್ಶ. ಆದರೆ ಸೂಕ್ತ ತಾಂತ್ರಿಕ ಶಿಕ್ಷಣದ ಕೊರತೆಯಿಂದ ನಾವು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗಲಿಲ್ಲ ಎಂಬುದು ಈಗ ನಮ್ಮ ಮುಂದೆ ಕೂತಿರುವ ಯುವಕನ ಮಾತು ಕೇಳಿದಾಗ ಅನ್ನಿಸುತ್ತಿದೆ. ಒಬ್ಬನೇ ವ್ಯಕ್ತಿ ಪ್ರಧಾನ ಸಂಪಾದಕನೂ, ಉಪ ಸಂಪಾದಕನೂ, ಸುದ್ದಿ ಸಂಪಾದಕನೂ, ವರದಿಗಾರನೂ, ಪ್ರೂಫ್ ತಿದ್ದುವವನೂ ಆದರೆ ಆತನೊಬ್ಬನೇ  ಪತ್ರಿಕೆಯ ಓದುಗನೂ ಆಗಬೇಕಾಗುತ್ತದೆ ಎಂಬ ಆಘಾತಕಾರಿ ಸತ್ಯ ನಮ್ಮ ತಿಳಿವಿಗೆ ಬಂದಿತು. ಒಂದೇ ಕ್ಯೂಬಿಕಲ್‌ನಲ್ಲಿ ಕುಳಿತು ದಿನವೊಂದಕ್ಕೆ ಹದಿನೆಂಟು ಇಪ್ಪತ್ತು ತಾಸುಗಳ ಕಾಲ ಅರವತ್ತು ಎಪ್ಪತ್ತು ಪುಟಗಳನ್ನು ಗೀಚುವುದು ಮಹಾನ್ ಸಾಧನೆಯೇ ಸರಿ. ಆದರೆ ಹಾಗೆ ಗೀಚುವುದಕ್ಕೆ ಸರಕು ಎಲ್ಲಿಂದ ಲಭ್ಯವಾಗಬೇಕು? ಸರಕಿನ ಕೊರತೆ ಕಂಡಾಗಲೆಲ್ಲಾ ನಾನಿವತ್ತು ಬೆಳಿಗ್ಗೆ ಎರಡು ಬಾರಿ ಗಡ್ಡ ಮಾಡಿಕೊಂಡೆ, ಒಂದು ವಾರದಿಂದ ನಾನು ಗ್ಯಾಸ್ ಬಿಟ್ಟೇ ಇಲ್ಲ, ನನ್ನ ನಾಯಿಮರಿ ಕಾಲಿಗೆ ಆಗಿದ್ದ ಗಾಯ ಅದೆಷ್ಟು ಬೇಗ ಮಾಯವಾಯಿತು ಗೊತ್ತ ಎಂದು ಕೊರೆಯಬೇಕಾಗುವುದು.

ಸತ್ಯಸ್ಯ ಸತ್ಯ ವರದಿಗಾರಿಕೆಯನ್ನು ಮಾಡುವುದು ನಗೆನಗಾರಿಯ ಕಾರ್ಯಸೂಚಿಯಲ್ಲಿನ ಮೊದಲ ಆದ್ಯತೆಯಾಗಬೇಕು. ಅದಕ್ಕಾಗಿ ನಾವು ಯಂಗ್ ಮ್ಯಾನ್ ನಾರದನ ಕೈಲಿ ಸಾಮ್ರಾಜ್ಯದ ಕೆಲಸವನ್ನು ಒಪ್ಪಿಸುತ್ತಿದ್ದೇವೆ. ನಾವು ಆತನ ಕೆಲಸವನ್ನು ಗಮನಿಸಿಕೊಳ್ಳುತ್ತ, ಬಿಟ್ಟಿ ಉಪದೇಶಗಳನ್ನು ನೀಡುತ್ತ ಆತ ಕೇಳಿದಾಗ ನಮ್ಮ  ಆರ್ಥ್ರೈಟಿಸ್ ಬಗ್ಗೆಯೂ, ಐವತ್ತು ವರ್ಷಗಳಿಂದ ನಾವು ತ್ಯಜಿಸುತ್ತ ಬಂದಿರುವ ಚಟಗಳ ಬಗ್ಗೆಯೋ ಕೊರೆಯುತ್ತೇವೆ.

ಇಷ್ಟೇ ಅಲ್ಲದೆ ಸಾಮ್ರಾಜ್ಯದ ವಹಿವಾಟು ಗಮನಿಸುವುದಕ್ಕೆ ದೊಡ್ಡದೊಂದು ತಂಡವೇ ಸಿದ್ಧವಾಗುತ್ತಿದೆ. ನಮ್ಮ ಕುಚೇಲ ಹಾಗೂ ತೊಣಚಪ್ಪನವರ ಸಂಗಡ ಸ್ವಾಮಿ ಅಧ್ಯಾತ್ಮಾನಂದ ಸೇರಿಕೊಳ್ಳಲಿದ್ದಾರೆ. ಇವರಲ್ಲದೆ ಮಿಸ್ಟರ್ ನಕ್ಕಣ್ಣ ಹಾಗೂ ನಗಾರಿಯ ಏಕೈಕ ಮಹಿಳಾ ಒದರಿಗಾರ್ತಿ ಹಾಗೂ ಲೇಖಕಿ ಶ್ರೀಮತಿ ಕುಮಾರಿ ಪ್ರಜೆಗಳಿಗಾಗಿ ದುಡಿಯಲಿದ್ದಾರೆ, ನಗಾರಿ ಬಡಿಯಲಿದ್ದಾರೆ!

ಅವರಿವರ ಭಯಾಗ್ರಫಿ

5 ಜನ

ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಪುಟ್ಟ ಟಿಪ್ಪಣಿ

rudyard-kipling-1

ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು:

“ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ ಪೇಪರ್‌ನಲ್ಲಿ ಓದಿದೆ. ನಿಮ್ಮ ಪತ್ರಿಕೆಯ ಚಂದಾದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕುವುದನ್ನು ಮರೆಯಬೇಡಿ.”

ತ್ರಿ-ವಾರಿಯೂ ಆಚಾರ್ಯ ರೇಣುಕರೂ…

4 ಜನ

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.

ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.

ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.

ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.

ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!