(ನಗಾರಿ ತನಿಖಾ ಬ್ಯೂರೋ)
ರೋಟಿ, ಕಪಡಾ ಔರ್ ಮಕಾನ್ ಜೊತೆಗೆ ಇನ್ನೊಂದು ಮೂಲಭೂತ ಆವಶ್ಯಕತೆಯಾಗಿರುವ ಪೆಟ್ರೋಲಿನ ಬೆಲೆ ಜ್ವರದ ಹಾಗೆ ಏರುತ್ತಿರುವುದನ್ನು ನಾಡಿನ ಸಮಸ್ತ ಯುವತಿಯರು ಒಕ್ಕೊರಲಿನಿಂದ ಟೀಕಿಸಿದ್ದು, ನಿಧಾನಿ ಪ್ರಧಾನಿ ಹಾಗೂ ಪಂಚೆದಂಬರಂ ಬೆಲೆ ಇಳಿಸುವಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವ್ಯಾಪಕ ಪ್ರತಿಭಟನೆಯನ್ನು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಮಿಸ್ ಮೊನಿಶಾ,“ನಮ್ಮ ಪ್ರೊಟೆಸ್ಟು ಆ ಲೆಫ್ಟಿಸ್ಟ್‌ಗಳ ಹಾಗೆ ಇರೋದಿಲ್ಲ. ಅವರದೇ ಗೌರ್ನಮೆಂಟು ಇಟ್ಕೊಂಡು ಪಾರ್ಲಿಮೆಂಟಿನ ಒಳಗೆ ರೇಟು ರೈಸ್ ಮಾಡೋಕೆ ಓಕೆ ಮಾಡಿ ಆಮೇಲೆ ಔಟ್ ಸೈಡ್ ಬಂದು ಪ್ರೊಟೆಸ್ಟ್ ಮಾಡುವುದು ವೆರಿ ಡರ್ಟಿ. ನಾವು ಹಾಗೆ ಪ್ರೊಟೆಸ್ಟ್ ಮಾಡೋದಿಲ್ಲ.” ಎಂದು ಹೇಳಿದ್ದು ಕೆಂಪು ಪಕ್ಷದವರ ಕಣ್ಣು ಕೆಂಪು ಮಾಡಿದ್ದು ವರದಿಯಾಗಿದೆ.
ಈ ನಡುವೆ ನಿರುದ್ಯೋಗಿ ಟ್ಯಾಬಲಾಯ್ಡ್ ಒಂದು ಸ್ಫೋಟಕ ಸತ್ಯವನ್ನು ಬಯಲಿಗೆಳೆದು ಬತ್ತಲುಗೊಳಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಭಟನೆ ಮಾಡಲು ತುದಿಗಾಲ ಮೇಲೆ ನಿಂತಿರುವ ಯುವತಿಯರು ಹಾಗೂ ಟೀನೇಜ್ ಹುಡುಗಿಯರ್ಯಾರಿಗೂ ಪೆಟ್ರೋಲಿನಿಂದ ಓಡಿಸಬಹುದಾದ ವಾಹನ ಓಡಿಸಲು ಬರುವುದಿಲ್ಲ ಹಾಗೂ ಅವರ ಬಳಿ ಅಂಥ ವಾಹನಗಳ್ಯಾವೂ ಇಲ್ಲ. ಹಾಗಾದರೆ ಇವರು ಪ್ರತಿಭಟನೆ ಮಾಡುತ್ತಿರುವುದು ಯಾವುದಕ್ಕೆ? ಎಂದು ಪ್ರಶ್ನಿಸಿ ಪ್ರಶ್ನಾರ್ಥಕ ಚಿಹ್ನೆಯ ಪಕ್ಕ ನಾಲ್ಕು ಆಶ್ಚರ್ಯ ಸೂಚಕ ಚಿಹ್ನೆಯನ್ನು ಇಟ್ಟಿತ್ತು. ನಾಲ್ಕು ಆಶ್ಚರ್ಯ ಸೂಚಕ ಚಿಹ್ನೆಗಳ ಮುಲಾಜಿಗಾದರೂ ಆಶ್ಚರ್ಯ ಪಡುವುದು ತಮ್ಮ ಧರ್ಮ ಎಂದು ಭಾವಿಸಿದ ಓದುಗರು ಮೂಗಿನ ಮೇಲೆ ಬೆರಳಿಟ್ಟರು.
ಈ ವರದಿಯ ಬೆನ್ನುಹತ್ತಲು ನಿರ್ಧರಿಸಿ ನಗೆ ಸಾಮ್ರಾಟರು ಹಾಗೂ ಅವರ ಚೇಲ ಕುಚೇಲ ಸುದ್ದಿ ‘ಶಿಕಾರಿ’ಗೆ ಹೊರಟರು. ಮೊದಮೊದಲು ನಗೆ ಸಾಮ್ರಾಟರು ಆ ಯುವತಿಯರು ಪರೋಪಕಾರದ ಬುದ್ಧಿಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮ ಸಹಚರರಾದ ಯುವಕರಿಗೆ ತೊಂದರೆಯಾಗಬಾರದು, ವಾಹನಗಳಲ್ಲಿ ಓಡಾಡುವ ಅಸಂಖ್ಯಾತ ಮಧ್ಯವರ್ಗದವರಿಗೆ ಹೊರೆಯಾಗಬಾರದು ಎಂಬ ಕಳಕಳಿಯನ್ನು ಹೊಂದಿದ್ದಾರೆ ಎಂಬ ನಂಬಿಕೆಯಿತ್ತು. ಅದಕ್ಕಾಗಿ ಆ ಹುಡುಗಿಯರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನೂ ಯಾರೂ ಇಲ್ಲದ ಜಾಗಗಳಲ್ಲಿ ಹೇಳಿದ್ದರು.
ಆದರೆ ತನಿಖೆ ಮುಗಿಸಿಕೊಂಡು ಬಂದ ಸಾಮ್ರಾಟರು ಬೆವೆತು ಹೋಗಿದ್ದ ಪರಿಯನ್ನು ಕಂಡು ನಗೆ ನಗಾರಿಯ ಇಡೀ ಕಛೇರಿಯೇ ದಿಗಿಲಾಯಿತು. ಸದ್ಯ ತಾವು ಆ ಹುಡುಗಿಯರನ್ನು ಯಾರೂ ಇಲ್ಲದ ಜಾಗದಲ್ಲಿ ಹೊಗಳಿದ್ದರಿಂದ ಬಚಾವಾದೆ ಎಂದುಕೊಂಡು ತಮ್ಮ ಅದೃಷ್ಟವನ್ನು ನೆನೆದರು. ಪೆಟ್ರೋಲು ರೇಟು ಐದು ಹತ್ತು ರೂಪಾಯಿಗಳಷ್ಟು ಜಾಸ್ತಿಯಾಗುತ್ತಿರುವುದರಿಂದಾಗಿ ಹುಡುಗರಿಗೆ ಲೇಡಿಸ್ ಕಾಲೇಜು, ಹಾಸ್ಟೆಲ್ಲುಗಳ ಬಳಿ ಬೀಟ್ ಹಾಕಲು ಭಾರೀ ತೊಂದರೆಯಾಗುತ್ತಿದೆ. ಅಲ್ಲದೆ ಗರ್ಲ್ ಫ್ರೆಂಡುಗಳನ್ನು ತಮ್ಮ ಸ್ವಂತ ಇಲ್ಲವೆ ಗೆಳೆಯರಿಂದ ಕಸಿದು ತಂದ ಬೈಕುಗಳ ಮೇಲೆ ಕೂರಿಸಿಕೊಂಡು ಲೋಕಸಂಚಾರ ಮಾಡಿಸುತ್ತಿದ್ದ ಹುಡುಗರೆಲ್ಲಾ ಈಗ ರಸ್ತೆಯ ಕೊನೆಯಲ್ಲಿ ಗರ್ಲ್ ಫ್ರೆಂಡ್ ಕಂಡರೆ ಸಾಕು ಹೆಲ್ಮೆಟ್ಟಿಲ್ಲದ ಆಸಾಮಿ ಟ್ರಾಫಿಕ್ ಪೋಲಿಸ್ ಮಾಮನನ್ನು ಕಂಡಾಗ ಬೈಕು ಪಕ್ಕಕ್ಕೆ ಹಾಕಿ ವಾಕಿಂಗ್ ಮಾಡುತ್ತಾ ಬರುವಂತೆ ಬೈಕು, ಸ್ಕೂಟರುಗಳನ್ನು ರಸ್ತೆಯ ಪಕ್ಕಕ್ಕೆ ದಬ್ಬಿ ನಡೆದು ಬಂದುಬಿಡುತ್ತಿದ್ದಾರೆ.
ಹತ್ತು ಮೀಟರು ದೂರ ಹೋಗಬೇಕಾದರೂ ಬೈಕು ತರುತ್ತಿದ್ದ ಹುಡುಗರೆಲ್ಲಾ ನಾಲ್ಕು ಮೈಲಿ ಬೇಕಾದರೆ ಕಾಲಲ್ಲೇ ಸುತ್ತಿಯೇನು ಎಂದು ಆಲೋಚಿಸುತ್ತಿರುವುದರ ಹಿಂದೆ ಪೆಟ್ರೋಲು ಬೆಲೆ ಹೆಚ್ಚಳ ನೇರವಾಗಿ ಕಾರಣವಾಗಿದೆ. ಹೀಗೆ ಹುಡುಗರು ನಮ್ಮನ್ನು ತಮ್ಮ ಬೈಕುಗಳಲ್ಲಿ ಕೂರಿಸಿಕೊಂಡು ತಿರುಗಾಡಿಸದೆ ನಮ್ಮ ಕಾಲನ್ನೇ ಬಳಸಿ ನಾವು ನಡೆಯುವಂತೆ ಮಾಡುತ್ತಿರುವುದರಿಂದ ನಮ್ಮ ದೇಹದಿಂದ ಹೆಚ್ಚು ಹೆಚ್ಚು ಕ್ಯಾಲರೀಸ್ ಖರ್ಚಾಗುತ್ತಿದೆ. ಹೀಗೆ ಖರ್ಚಾಗಿಹೋದ ಕ್ಯಾಲರಿಗಳನ್ನು ತುಂಬಿಕೊಳ್ಳುವುದಕ್ಕಾಗಿ ನಾವು ಹೆಚ್ಚು ಹೆಚ್ಚು ತಿನ್ನಲು ಶುರುಮಾಡಿ ನಮ್ಮ ಡಯಟ್ ನೇಮ ನಿಷ್ಠೆ ತಪ್ಪಿಹೋಗಿದೆ. ಹೀಗೇ ಆದರೆ ನಾವು ಭವಿಷ್ಯದ ‘ವಿಶ್ವ ಸುಂದರಿ’ಯರಾಗೋದು ಹೇಗೆ? ನಾವು ವಿಶ್ವ ಸುಂದರಿಯರಾಗದಿದ್ದರೆ ದೇಶದ ಹೆಸರು ಹೇಗೆ ಬೆಳಗೀತು? ದೇಶ ಹೇಗೆ ಉದ್ಧಾರವಾದೀತು? ನಮ್ಮ ದೇಶದ ಲಕ್ಷಾಂತರ ಮಂದಿ ಬಡವರು, ದುಃಖಿಗಳ ಏಳಿಗಾದರೂ ನಾವು ವಿಶ್ವ ಸುಂದರಿಯರಾಗಬೇಕು…
ನಗೆ ಸಾಮ್ರಾಟರು ಆಗಲೇ ಅಲ್ಲಿಂದ ಕಾಲ್ಕಿತ್ತಿದ್ದರು!
ಟ್ಯಾಗ್ ಗಳು:ನಗೆ ಸಾಮ್ರಾಟ್, ಪ್ರತಿಭಟನೆ, ಬೆಲೆ ಏರಿಕೆ, ಮಾನಿನಿಯರು, ಯುವತಿಯರು, petrol price hike
ಬ್ಲಾಗ್ ಬೀಟ್ 9
17 ಜೂನ್ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
………………………………………………………………
ಬೊಗಳೆ ರಗಳೆ
ಇಂಧನ ಬೆಲೆಯೇರಿಕೆಯ ವಿರುದ್ಧ ವಾಹನ ಚಾಲಕರು ಬೈದಾಡಿ ಬಾಯಿ ಸೇವೆ ಮುಗಿಸಿಕೊಂಡು ತಮ್ಮ ಗಾಡಿಗಳಿಗೆ ಇಂಧನ ತುಂಬಿಸಿಕೊಂಡು ರೊಯ್ಯನೆ ಹೊರಡುತ್ತಿರುವಾಗ ಬೊಗಳೆ ರಗಳೆರ ಸೊಂಪಾದಕರಿಗೆ ಸಂಕಟದ ಸ್ಥಿತಿ ಬಂದಿದೆ. ಬೊಗಳೆ ಬಿಡುವುದರಲ್ಲಿ ಬೊಗಳೂರಿನಲ್ಲೇ ಫೇಮಸ್ಸಾದ ಸೊಂಪಾದಕರನ್ನೇ ಮೀರಿಸುವ ಹಾಗೆ ಎಡ, ಬಲ ಪಕ್ಷಗಳು, ಕೈ ಕಾಲು ಪಕ್ಷಗಳು, ನಿಧಾನ ಮಂತ್ರಿ, ಪಿತ್ಥ ಸಚಿವರು ಬೊಗಳೆ ಬಿಡುತ್ತಿರುವುದನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ.
ವಿಜ್ಞಾನಿಗಳು ಗಾಳ ಹಾಕಿ ಮೀನುಗಳನ್ನು ಹಿಡಿಯುವ ಕೋತಿಯನ್ನು ಪತ್ತೇ ಹಚ್ಚಿರುವುದನ್ನು ಎಸ್.ಎಂ.ಎಸ್ ಮೂಲಕ ತಿಳಿದು ಗಾಬರಿಯಿಂದ ನಾಪತ್ತೆಯಾಗಿದ್ದ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದಿರಾ? ಇಲ್ಲಿ ಓದಿ…
ಪ್ರಕಾಶ್ ಶೆಟ್ಟಿ ಗೆರೆಗಳ ಪಂಚ್
ಬೆಲೆಯೇರಿಕೆ, ಪೆಟ್ರೋಲು ಬೆಲೆ ತುಟ್ಟಿ… ಕಾಂಗ್ರೆಸ್ ಸರಕಾರದ ನಿಷ್ಠೆಯ ನವೀಕರಣ… ಎಲ್ಲಕ್ಕೂ ಪ್ರಕಾಶ್ ಶೆಟ್ಟಿ ಗೆರೆಗಳನ್ನು ಕೊಟ್ಟಿದ್ದಾರೆ, ಗೆರೆಗಳ ಮೂಲಕ ಬರೆ ಎಳೆದಿದ್ದಾರೆ. ಇಲ್ಲಿ ನೋಡಿ ೧ ೨ ೩.
ಪಂಚ್ ಲೈನ್
ಪಂಚಿಗಾಗಿ ಲೈನುಗಳನ್ನು ಬರೆಯುವ ಗಣೇಶ್ ಬಹುದೊಡ್ಡ ಮ್ಯಾನೇಜ್ ಮೆಂಟ್ ಗುರುವಾಗುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಅವರ ಇತ್ತೀಚಿನ ಪಂಚ್ ಸಾಲುಗಳನ್ನೇ ನೋಡಿ…
ಕೊಲೆ ಮಾಡಿಯೂ ಶಿಕ್ಷೆ ಅನುಭವಿಸಬಾರದೆಂದರೆ ಏನು ಮಾಡಬೇಕು?
ನಿಷ್ಪಕ್ಷಪಾತ, ಸತ್ಯನಿಷ್ಠತೆ, ನ್ಯಾಯಯುತ ಸುದ್ದಿಗೆ ಅತ್ಯುತ್ತಮ ಉದಾಹರಣೆ ಯಾವುದು?
ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ನಾವೇನು ಮಾಡಬಹುದು?
ಕಾಲ ಚಕ್ರ
ಸಮೃದ್ಧ ಸರಕಾರಕ್ಕೆ ಮೂರೇ ಗೇಣು ಎಂದು ಹಲುಬುತ್ತಿರುವ ಬಿಜೆಪಿ ಸರಕಾರ ಭಿನ್ನಮತೀಯತೆಯನ್ನು ಶಮನ ಮಾಡಿ ಶವಸಂಸ್ಕಾರ ಮಾಡುವುದಕ್ಕೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ನಮ್ ನಂಜ ಹಿಂಗಂತ ಉತ್ತರಿಸವ್ನೆ ಇಲ್ಲಿ… ‘ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ…’
………………………………………………………………
ಕಳೆದ ಸಂಚಿಕೆಯ ಬ್ಲಾಗ್ ಬೀಟ್
ಟ್ಯಾಗ್ ಗಳು:ಗಣೇಶ್, ಪಂಚ್ ಲೈನ್, ಪ್ರಕಾಶ್ ಶೆಟ್ಟಿ, ಬೊಗಳೆ ರಗಳೆ, ಬ್ಲಾಗ್ಸ್, blogs, comments