ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ ಮ್ಯಾಕೆ, ಗೌಡ್ರೆ ನೀವಾ ಅಂದಾ ಡ್ರೇವರ್. ನೋಡಲಾ ಗೌಡನ ದರಿದ್ರ ಬುದ್ದಿಯಾ. ಮಗಾ ಕಾಸು ಉಳಿಸಕ್ಕೆ ತಾನೇ ಹಸ ಮೇಯಿಸ್ತಾವ್ನೆ ಅಂದಾ ಕ್ಲೀನರ್. ಸರಿ ನಿಂಗನ ಅಂಗಡೀಲಿ ನಾನು, ಸುಬ್ಬ, ಸೀತು ಎಲ್ಲಾ ಚಾ ಕುಡಿತಾ ಪ್ರಪಂಚದ ಆಗು ಹೋಗುಗಳ ಬಗ್ಗೆ ಮಾತಾಡ್ತಾ ಇದ್ವಿ. ಪರದಾನಿ ಮನಮೋಹನ್ ಸಿಂಗಿಂದ ಒಬಾಮಾ ತಂಕ ಹತ್ತು ನಿಮಿಟ್ನಾಗೆ ನಮ್ಮ ಬಾಯ್ನಾಗೆ ಬಂದು ಹೋಗಿದ್ರು. ಮಗಂದು ಮನೇಲೆ ನೋಡಿದ್ರೆ ತಿನ್ನಕ್ಕೆ ಅಕ್ಕಿ ಇಲ್ಲಾ. ಪ್ರಪಂಚದ್ದೆಲ್ಲಾ ಮಾತಾಡ್ತಾವೆ ಅಂತಿದ್ದಾ ಚಾ ಅಂಗಡಿ ನಿಂಗ. ಏ ಥೂ,. ಎದ್ದು ಹೋಗ್ರಲಾ. ಅಟ್ಟೊತ್ತಿಗೆ ಗೌಡಪ್ಪನ ನೋಡಿದ ಸುಬ್ಬ. ಯಾಕ್ರೀ ಗೌಡ್ರೆ ಇವತ್ತು ಹಸ ನೀವು ಹೊಡಕಂಡು ಹೊಂಟೀರಿ ಅಂದಾ. ನೋಡಲಾ ನಮ್ಮ ಮನೆ ದನಕಾಯೋನು ಮೊನ್ನೆ ಕುಡಿಯಕ್ಕೆ ಕಾಸಿಲ್ಲಾ ಅಂತಾ ಎರಡು ಎಮ್ಮೆನಾ ಬರೀ 100ರೂಪಾಯಿಗೆ ಕಸಾಯಿ ಖಾನೆಗೆ ಕಳಸವ್ನೆ ಅಂದ. ಸರಿ ಕೋಣದ ತರಾ ಇರೋ ನಿಮ್ಮನ್ನ ಕಳಿಸಿಲ್ವಲ್ಲಾ ಅದಕ್ಕೆ ಖುಸಿ ಪಡಿ ಅಂದಾ ಸುಬ್ಬ, ಲೇ ಇವನನ್ನ ಕಡಿದರೆ ಕಸಾಯಿ ಖಾನೆನೇ ಗಬ್ಬಾಯ್ತದೆ ಅಂದಾ ದೊನ್ನೆ ಸೀನ.
ಅಟ್ಟೊತ್ತಿಗೆ ನಿಂಗಾ ಬರ್ರೀ ಗೌಡರೆ ಒಂದು ಅರ್ಧ ಚಾ ಕುಡಿದು ಹೋಗಿರಿ ಅಂದ. ನಿನ್ನ ದರಿದ್ರ ಚಲ್ಟದ ಚಾ ಕುಡಿದರೆ ಒಂದು ಹತ್ತು ಕಿತಾ ಕೆರೆತಾವ ಹೋಗಬೇಕು ಅಂದ ಗೌಡಪ್ಪ. ಮಗಂದು ಕಾಲೆಲ್ಲಾ ಸಗಣಿ ಆಗಿತ್ತು. ಇವನು ಹಸ ಹೊಡಕಂಡು ಮುಂದೆ ಹೋಯ್ತಾ ಇದ್ರೆ. ನಮ್ಮೂರು ಹೆಣ್ಣು ಐಕ್ಳು ಹಿಂದಿಂದ ಸಗಣಿ ಎತ್ಕಂಡು ಮರದಾಗೆ ಹಾಕ್ಕೊಂಡು ಹೋಗೋವು. ಬೆರಣಿ ತಟ್ಟಕ್ಕೆ ಆಯ್ತದೆ ಅಂತಾ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರ. ನಮ್ಮ ಸಗಣಿ ಅಂತಾ ಗೌಡ ಜಗಳ ಆಡೋನು. ಏ ಥೂ. ಅದರಾಗೆ ಒಂದು ದನಕ್ಕೆ ಅಜೀರ್ಣ ಅಂತೆ ಗೌಡಪ್ಪ ಹತ್ತಿರ ಬಂದರೆ ಕೊಟ್ಟಿಗೆ ವಾಸನೇ ಬರೋದು.ಹಳಸಿದ ಫಲಾವು ಮತ್ತು ಕೊಟ್ಟಿಗೆ ವಾಸನೆ ಎಲ್ಡು ಮಿಕ್ಸ್ ಆಗಿ ಒಂದು ತರಾ OX (ಎತ್ತು) ಬಾಡಿ ಡಿಯೋಡ್ರೆಂಟ್ ಸ್ಮೆಲ್ ಬರೋದು.
ಕೆರೆತಾವ ಹೋದ್ರೆ ಗೌಡಪ್ಪ ಕಾಯಿ ಜುಂಗು ಹಿಡಕಂಡು ಹೋ ಹೋ ಹೋಪ್ಪಾ ಹೋಪ್ಪಾ ಅಂತಾ ಲೈಫ್ ಬಾಯ್ ಸೋಪ್ನಾಗೆ ಹಸ ಮೈ ತೊಳೀತಾ ಇದ್ದ. ಹೆಂಡರು ಸ್ನಾನಕ್ಕೆ ಇಟ್ಕಂಡಿದ್ದ ಸೋಪ್ನಾಗೆ ಎತ್ತಿನ ಮೈ ತೊಳೆಯೋನು. ಅಲ್ಲಿ ನೋಡಿದ್ರೆ ಹೆಂಡರು ಗೌಡಂಗೆ ಒಂದಿಷ್ಟು ಬೆಂಕಿ ಹಾಕ ಅಂತಿದ್ವು. ಎಲ್ಲಿಗವಾ. ಎಲ್ಲಿಗಾದ್ರೂ. ಅಲ್ಲಿ ಬಟ್ಟೆ ಒಗೆಯೋ ಹೆಂಗಸರು ಲೇ ಆ ಕಡೆ ಹೋಗಲೇ ಅಂತಿದ್ವು. ಮಗಾ ರಾಜಮ್ಮಂಗೆ ರೇಗಸ್ತಾ ಇದ್ದ. ಯಾಕೆ ನನ್ನ ಗಂಡಂಗೆ ಹೇಳ್ ಬೇಕಾ ಅಂತಿದ್ದಾಗೆನೇ ಆ ದಡದಾಗೆ ನಿಂತಿದ್ದ. ಗೌಡಪ್ಪ ಸಣ್ಣ ಐಕ್ಳು ತರಾ ಎತ್ತಿನ ಮೈ ಮ್ಯಾಕೆ ಕೂತು ಕೆರೇಲ್ಲಿ ಓಡಾಡೋನು. ಮಗಂಗೆ ಈಜು ಬರಲ್ಲಾ ಕರೀರಲಾ. ಹೊಗೆ ಹಾಕಸ್ಕಂಡ್ ಬಿಟ್ಟಾನು ಅಂದಾ ಸುಬ್ಬ. ಒಂದು ಎತ್ತು ತೊಡೆಗೆ ತಿವಿದು ಸಾನೇ ಗಾಯ ಮಾಡಿತ್ತು. ತೊಡೆಗೆ ಒಂದು ಕಾಲ್ ಕೆಜಿ ಅರಿಸಿನ ಹಚ್ಚಿದ್ವಿ. ಮಗಾ ಹುಳಕಡ್ಡಿ ಆದೋರು ತರಾ ಚಡ್ಡಿ ಎತ್ಕಂಡು ಬರೋನು. ಎರಡು ಹಸ ಕಳೆದೈತೆ ಅಂತಾ ಎಲ್ಲಾರ ಕೊಟ್ಟಿಗೇನೂ ಸಂಜೆ ಹುಡಕ್ತಾ ಇದ್ದ. ಏ ಥೂ.
ಸರಿ ಸಂಜೆ ಗೌಡಪ್ಪ ಎಲ್ಲಾ ಹಸನ್ನ ಕೊಟ್ಟಿಗೆ ಕಟ್ಟಿ ಎಂದಿನಂತೆ ಸಿದ್ದೇಸನ ಗುಡಿತಾವ ಬಂದ. ನೋಡ್ರಲಾ ಗೋ ಹತ್ಯೆ ನಿಷೇಧ ಅಂತಾ ಸರ್ಕಾರದವರು ಮಾಡವ್ರೆ. ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಅಂದ. ಸರಿ ಗೌಡರೆ ನೀವೆ ನಮ್ಮ ನಾಯಕರು. ಒಂದು ತರಾ ನೀವು ನಮಗೆ ಭಗತ್ ಸಿಂಗ್ ಇದ್ದಂಗೆ ಅಂದಾ ಸುಬ್ಬ. ಯಾಕೆ ಮಗನೇ ನೇಣು ಹಾಕಿಸಕ್ಕಾ ಅಂದ ಗೌಡಪ್ಪ. ಸರಿ ಬೆಳಗ್ಗೆನೇ ಹಳ್ಳಿಯ ಗಡಿಭಾಗದಲ್ಲಿ ನಿಂತ್ವಿ. ಒಂದು ಆಟೋದಾಗೆ ಒಂದು ಎರಡ ಹಸ ಬರ್ತಾ ಇತ್ತು, ಆಟೋ ನಿಲ್ಲಿಸಿ ಮುಖ ಮೂತಿ ನೋಡದೆ ಸರಿಯಾಗಿ ಚಚ್ಚಿದ್ವಿ. ನೋಡಿದ್ರೆ ಅವನು ಸಂತ್ಯಾಗೆ ಹಸ ಖರೀದಿ ಮಾಡ್ಕಂಡು ಅವನ ಹಳ್ಳೀಗೆ ಹೊಂಟಿದ್ದ. ಕಡೆಗೆ ಅರಿಸಿನ ಹಚ್ಚಿ ಕಳಿಸಿಸ್ವಿ. ಮಗಾ ಯಲ್ಲಮ್ಮನ ಜಾತ್ರೇಲಿ ಎಮ್ಮೆ ಕಡಿಯೋರು ತರಾ ಆಗಿದ್ದ. ಮುಂದೆ ಪೋಲೀಸ್ನೋರು ನೀನು ಎಮ್ಮೆ ಕಡಿಯೋನು ಅಂತಾ ಕೇಸು ಹಾಕಿದ್ರಂತೆ,. ಈಗ ನಮ್ಮನ್ನ ನೋಡಿದ್ರೆ ಓಡದೇ ಮಾಡ್ತಾನೆ, ಮತ್ತೆ ಇನ್ನೊಂದು ಆಟೋದಾಗೆ ಇನ್ನೊಂದು ಹಸಾ ಇಟ್ಕಂಡು ಬತ್ತಾ ಇದ್ದ, ಅವನಿಗೂ ನಿಲ್ಲಿಸಿ ದಬು ದುಬು ದಬು ದುಬು ಅಂತಾ ಸಾನೇ ಚಚ್ಚಿದ್ವಿ. ನೋಡಿದ್ರೆ ಅದು ಗಬ್ಬ ಇತ್ತಂತೆ ಅದಕ್ಕೆ ಡೆಲಿವರಿ ಮಾಡ್ಸಕ್ಕೆ ಅಂತಾ ಆಸ್ಪತ್ರಗೆ ಹೋಗಿದ್ದೆ ಅಂದಾ. ಲೇ ನೀವು ಏನ್ರಲಾ ಬಂದೋರುಗೆಲ್ಲಾ ಹಿಂಗೆ ಹೊಡಿತಾ ಇದಿರಾ ಕೇಸು ಆಯ್ತದೆ ಕಲಾ ಅಂದ ಗೌಡಪ್ಪ. ನೀವು ಇರೋಬೇಕಾದ್ರೆ ಯಾಕೆ ಅಂದು ಮತ್ತೆ ನಿಂತ್ವಿ.
ಒಂದೇ ಲಾರಿಯಲ್ಲಿ ಒಂದು ಹತ್ತು ಹಸ ಇಟ್ಕಂಡು ಪಕ್ಕದ ಹಳ್ಳಿ ರಾಜ, ಜೊತೆಗೆ ಇಸ್ಮಾಯಿಲ್ ಇದ್ದ. ಅದನ್ನು ನಿಲ್ಲಿಸಿ ಸಾನೇ ಹೊಡೆದ್ವಿ. ಮೂಗು ಬಾಯ್ನಾಗೆ ರಕ್ತ. ಲೇ ಹಸಕ್ಕೆ ಹುಸಾರಿಲ್ಲಾ ಅಂತಾ ಪಕ್ಕದ ಹಳ್ಳಿಗೆ ನಾಟಿ ಔಷಧಿ ಕೊಡಿಸಕ್ಕೆ ಅಂತಾ ಹೋದರೆ ಹಿಂಗೆ ಹೊಡಿತಿರಾ ತಡೀರಿ ನಮ್ಮ ಕಡೆಯವರನ್ನು ಕರೆಸಿ ನಿಮಗೆ ಹೊಡೆಸ್ತೀನಿ ಅಂದಾ. ಮಗಾ ಕಿಸ್ನ ಅವರಿಗೆ ಅರಿಸಿನ ಹಚ್ಚಿದ್ದ. ಲೇ ನಡೀರಲಾ ಮನೆಗೆ. ನಿಮ್ಮನ್ನ ಕರೆದುಕೊಂಡು ಬಂದರೆ ನನಗೆ ನಿಜವಾಗಲೂ ಭಗತ್ ಸಿಂಗ್ ಮಾತ್ತೀರಾ ಅಂದ.
ಸರಿ ಮಾರನೆ ದಿನದಿಂದ ನಮ್ಮ ಕೆಲಸ ಗೋ ಹತ್ಯೆ ತಡೆಯೋದೆಯಾ ಅಂದಾ ಗೌಡಪ್ಪ. ಎಲ್ಲಿ ಹೊರಗೆ ಹಸ ಕಾಣಂಗಿಲ್ಲ. ಅಂಗೇ ತಂದು ಪಂಚಾಯ್ತಿ ದೊಡ್ಡಿಗೆ ಬಿಡ್ತಾ ಇದ್ವಿ. ದೊಡ್ಡಿ ತುಂಬಿ. ಪಂಚಾಯ್ತಿ ಆಫೀಸ್ನಾಗೂ ಎರಡು ಎಮ್ಮೆ ಕಟ್ಟಿದ್ವಿ. ಮಗಾ ಬಿಲ್ ಕಲೆಕ್ಟರ್ ಮೂಗು ಮುಚ್ಕಂಡು ಲೆಕ್ಕ ಬರೀತಾ ಇದ್ದ. ದೊಡ್ಯಾಗೆ ಗೌಡಂದು ಎರಡು ಹಸಾ ಇತ್ತು. ಏನ್ರಲಾ ನನ್ನ ಹಸನ್ನ ಇಲ್ಲೇ ತಂದು ಹಾಕಿದಿರಲಾ ಅಂದ. ಬೀದ್ಯಾಗೆ ಇತ್ತು ಅದಕ್ಕೆ ಅಂದಾ ನಿಂಗ. ಗೌಡಪ್ಪನ ಹೆಂಡರು ಬೆಳಗ್ಗೆ ಒಂದು ಬಕ್ಕಿಟ್ಟು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂತು. ನೋಡಿದ್ರೆ ಒಂದು ಲೋಟದಷ್ಟು ಬಂದಿರಲಿಲ್ಲ. ಏನ್ಲಾ ಹಸನ್ನ ಮೇಯಿಸಿಲ್ಲೇನ್ಲಾ ಅಂತು ಗೌಡಪ್ಪನ ಹೆಂಡರು. ಲೇ ಗಂಡಂಗೆ ಮರ್ವಾದೆ ಕೊಟ್ಟು ಮಾತಾಡೇ. ಯಾರಾದರೂ ಕೇಳಿಸ್ಕಂಡ್ರೆ ದನಕಾಯೋ ಶಂಭು ಅಂದ್ಕತಾರೆ ಅಂದಾ ಗೌಡಪ್ಪ. ಸರಿ.ಸರಿ. ನಾನು ಮೇಯಿಸಿದ್ದೆ ಕಣಮ್ಮಿ, ಅದು ಹಾಲು ಕೊಡೋ ಬದಲು ಒಂದು ಬಕ್ಕಿಟ್ಟು ಸಗಣಿ ಕೊಟ್ಟೈತೆ ಅಂದಾ ಗೌಡಪ್ಪ. ಅದ್ರಾಗೆ ಇವತ್ತು ನಿಂಗೆ ಮುದ್ದೆ ಅಂದು ಹೋತು. ಗಂಜಲ ನೆಂಚಳಕ್ಕೆ ಆಯ್ತದೆ ಅಂದ ಸುಬ್ಬ.
ಪೊಲೀಸ್ ಸ್ಟೇಷನ್ನಾಗೆ ನಾವು ಹೋಗಿ ಹೋಗಿ ಕಂಪ್ಲೇಟ್ ಕೊಡ್ತಾ ಇದ್ವಿ. ಹಸಕ್ಕೆ ಅಂತಾನೇ ಒಂದು ಬ್ರಾಂಚ್ ತೆಗೆದಿದ್ರು. ಕೌ ಸ್ಕ್ವಾಡ್ ಅಂತಾ. ಅದಕ್ಕೆ ಒಬ್ಬ ಇನ್ಸ್ ಪೆಕ್ಟರ್. ಬರೇ ಒಂದು ಗೌಡಪ್ಪ ಮಿಸ್ ಕಾಲ್ ಕಟ್ಟರೆ ಸಾಕು. ಜೀಪ್ನಾಗೆ ಬಂದು ಏನೂ ಸಿಗಲಿಲ್ಲ ಅಂದ್ರೆ ಬುಟ್ಯಾಗೆ ಸಗಣಿ ತುಂಬ್ಕಂಡು ಹೋಗೋನು. ಹೆಂಡರು ಬೆರಣಿ ತಟ್ಟಲಿ. ನೀರು ಕಾಯಿಸಕ್ಕೆ ಆಯ್ತದೆ ಅಂತಾ. ಇವನ ಕಾಟಾ ತಡಿಲಾರದೆ ಪ್ರಾಣಿ ದಯಾ ಸಂಘದೋರು ಒಂದು ಹತ್ತು ಕಂಪ್ಲೇಟ್ ಕೊಟ್ರು. ಇವಾಗ ಕೇಸಿಗೆ ಅಂತಾ ದಿನಾ ಮಂಡ್ಯಕ್ಕೆ ಓಡಾಡ್ತಾನೆ. ಬೆಳಗ್ಗೆ ಹೋದ್ರೆ ಸಂಜೆತಾವ ಹಳ್ಳಿಗೆ ಬತ್ತಾನೆ. ಆದ್ರೆ ಇನ್ಸೆಪೆಕ್ಟರ್ ಮಾತ್ರ ಸಗಣಿ ಎತ್ತೋ ಬುಟ್ಟಿ ಮಾತ್ರ ಅಂಗೇ ಜೀಪ್ನಾಗೆ ಮಡಗವನೆ. ನಿಜ ನೋಡಿದ್ರೆ ನಮ್ಮ ಹಳ್ಯಾಗೆ ಕಸಾಯಿ ಖಾನಗೆ ಹಸನ್ನ ಕಳಿಸ್ತಿದ್ದಿದ್ದು ಗೌಡಪ್ಪ ಅಂತಾ ಗೊತ್ತಾದ ಮ್ಯಾಕೆ ಬಂದಾ ನೋಡ್ರಲಾ ಹಸ ಬ್ರೋಕರ್ ಅಂತವ್ರೆ. ಗೌಡಪ್ಪ ಮುಖ ಮುಚ್ಕಂಡು ಓಯ್ತಾನೆ.
ಇತ್ತೀಚಿನ ಪ್ರಜಾ ಉವಾಚ