Archive | ಫೆಬ್ರವರಿ, 2009

ಇದೂ ಮುಗಿಯುತ್ತೆ

26 ಫೆಬ್ರ


ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು. ಜೀವನದಲ್ಲಿ ಉತ್ಸಾಹವೇ ಇಲ್ಲವಾಗಿ ದುಃಖದ ಸಾಗರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಇನ್ನಷ್ಟು ದಿನ ಇದೇ ಮನಸ್ಥಿತಿಯಲ್ಲಿದ್ದರೆ ಒಂದೋ ಹುಚ್ಚು  ಹಿಡಿಯಬಹುದು ಇಲ್ಲವೇ ತನ್ನ ಕಣ್ಣೀರಿನ ಸುನಾಮಿಗೆ ಇಡೀ ಜಗತ್ತೇ ಬಲಿಯಾಗಬಹುದು ಅನ್ನಿಸಿದ್ದರಿಂದ ಕುಚೇಲ ತನ್ನ ಜಗತ್ತೇ ಆಗಿದ್ದ ನಾಲ್ಕು  ಗೋಡೆಗಳ ಪುಟ್ಟ ಕೋಣೆಯಿಂದ ಹೊರಬಂದ. ದೇಶದಲ್ಲೇ ಖ್ಯಾತಿಯನ್ನು ಗಳಿಸಿದ್ದ ಯಶಸ್ಸಿನ ರಹಸ್ಯ ಬೋಧಿಸುವ ಗುರು, ವ್ಯಕ್ತಿತ್ವ ವಿಕಸನದ ಪಿತಾಮಹ, ಕತ್ತೆಯನ್ನು ಕುದುರೆ ಮಾಡುವ ಮಾಂತ್ರಿಕ ಮಂಡಿಯೂರಿ ರವೀಂದ್ರನಾಥರ ಬಳಿಗೆ ಹೋದ. ತಿಂಗಳ ಸಂಬಳದ ಅರ್ಧ ಭಾಗವನ್ನು ಮರೆತು ಅಪಾಯಿಂಟ್ ಮೆಂಟು ಪಡೆದು ಅವರ ಕೋಣೆಯೊಳಗೆ ಹೋದ.

ಮಂಡಿಯೂರಿ ರವೀಂದ್ರನಾಥರು ಆಪ್ತ ಸಮಾಲೋಚನೆಯಲ್ಲಿ ಭಾರಿ ಪರಿಣಿತಿಯನ್ನು ಸಾಧಿಸಿದ್ದರು. ಮನುಷ್ಯನ ಮನಸ್ಸನ್ನು ಅವರು ಉಡುಪಿ ಹೋಟೆಲಿನ ಮೆನು ಓದಿದಷ್ಟೇ ಸರಾಗವಾಗಿ ಓದುತ್ತಾರೆ ಎಂಬ ಮಾತು ಜನಜನಿತವಾಗಿತ್ತು. ಅವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬ ಗಂಡಸೂ ಪುರುಷ ಸಿಂಹವಾಗುತ್ತಿದ್ದ, ಪ್ರತಿ ಹೆಣ್ಣು ಮಗಳೂ ಒನಕೆ ಓಬವ್ವಳಾಗುತ್ತಿದ್ದಳು ಎನ್ನುತ್ತಾರೆ ಜನರು. ಅವರ ಪ್ರತಿಯೊಂದು ಭಾಷಣಗಳು ಮನುಷ್ಯನ ಆಳದಲ್ಲಿರುವ ಶಕ್ತಿಯನ್ನು ಹೊರಗೆ ತೆಗೆಯುವ ಬೋರ್ ವೆಲ್ ಗಳು ಎನ್ನುತ್ತಾರೆ ಅವರ ಅಭಿಮಾನಿಗಳು. ನಿಜಕ್ಕೂ ಅವು ಬೋರ್ ವೆಲ್ ಗಳೇ ಎಂದು ಕುಹುಕವಾಡುವ ವಿಮರ್ಶಕರ ಮಾತಿಗೆ ಬೆಲೆ ಕೊಡುವುದು ಬೇಡ. ಇಂಥವರೆದುರು ನಮ್ಮ ಕುಚೇಲ ತಲೆ ಕೆಳಗೆ ಹಾಕಿ ಕುಳಿತಿದ್ದ.

ಕುರಿಯನ್ನು ಕಂಡ ಕಟುಕನ ಹಾಗೆ ಕಣ್ಣಲ್ಲಿ ಉನ್ಮಾದದ ಅಲೆಯನ್ನು ಸೃಷ್ಟಿಸಿಕೊಂಡ ಮಂಡಿಯೂರಿಯವರು ಕುಚೇಲನ ಹೆಗಲ ಮೇಲೆ ಕೈ ಹಾಕಿ “ಏನೋ ಸಮಸ್ಯೆ ನಿನ್ನನ್ನು ಕಾಡುತ್ತಿದೆ. ನಿನಗೆ ಜೀವನದಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಯಾವುದರಲ್ಲೂ ತೊಡಗುವುದಕ್ಕೆ ಮನಸ್ಸಾಗುತ್ತಿಲ್ಲ. ಅಲ್ಲವೇ?” ಎಂದರು. ಮಾರುದ್ದದ ಬಾಲ, ಊದಿದ ಮೂತಿ, ಮರದಿಂದ ಮರಕ್ಕೆ ಜಿಗಿಯುವ ಪ್ರಾಣಿಯನ್ನು `ಕೋತಿ’ ಎಂದು ಕಂಡುಹಿಡಿದಷ್ಟೇ ಸುಲಭವಾಗಿ ಮಂಡಿಯೂರಿಯವರು ಕುಚೇಲನ ಸಮಸ್ಯೆಯನ್ನು  ಕಂಡುಹಿಡಿದರು. ಸಾಯಿಬಾಬಾ ಸೃಷ್ಟಿಸಿದ ಚೈನನ್ನು ನೋಡುವಂತೆ ಕುಚೇಲ ಮಂಡಿಯೂರಿಯವರ ಮುಖವನ್ನೇ ಬೆಕ್ಕಸ ಬೆರಗಾಗಿ ನೋಡುತ್ತಿದ್ದ.

ತನಗೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿವೆ. ಬದುಕಿನಲ್ಲಿ ನೆಮ್ಮದಿ ಸಂತೋಷದ ಕ್ಷಣಗಳೇ ಇಲ್ಲವಾದಂತಾಗಿದೆ. ಓದಿನಲ್ಲಿ ಸರಿಯಾಗಿ ತೊಡಗಿಕೊಳ್ಳಲಿಲ್ಲ, ಪ್ರೀತಿಸಿದ ಹುಡುಗಿ ಅವಮಾನ ಮಾಡಿ ಹೋದಳು. ನಾಯಿಯ ಹಾಗೆ ಬೀದಿ ಸುತ್ತಿದರೂ ಕೆಲಸ ಸಿಕ್ಕಲಿಲ್ಲ. ಸಿಕ್ಕ ಕೆಲಸದಲ್ಲಿ ಚಿತ್ರ ಹಿಂಸೆ, ಪ್ರತಿ ಕೆಲಸದಲ್ಲೂ ಸೋಲು. ಇದುವರೆಗಿನ ನಾಲ್ಕು ಸಾವಿರ ಚಿಲ್ಲರೆ  ದಿನಗಳಲ್ಲಿ ಒಂದು ಸಲವೂ ಬಿಟಿಎಸ್ ಬಸ್ಸಿನಲ್ಲಿ ಸೀಟು ಸಿಕ್ಕಿಲ್ಲ ಎಂದರೆ ತನ್ನ ಹಣೆಬರಹ ಅದೆಷ್ಟು ಖರಾಬ್ ಇರಬೇಕು ಎಂದು ವಿಲಪಿಸಿದ ಕುಚೇಲ.

ದಿನಾ ಇಂಥವರನ್ನು ನೂರರ ಲೆಕ್ಕದಲ್ಲಿ ನೋಡುತ್ತಿದ್ದರೂ ಪ್ರತಿಯೊಬ್ಬರ ಕೊರೆತವನ್ನು ಕೇಳುತ್ತಿದ್ದರೂ ಮುಖದಲ್ಲಿ ಅಪ್ರಸನ್ನತೆಯ ಒಂದೇ ಒಂದು ಗೆರೆಯೂ ಸುಳಿಯಲು ಬಿಡದೆ ಮಂಡಿಯೂರಿಯವರು ಸಾವಧಾನವಾಗಿ ಮಾತನ್ನಾರಂಭಿಸಿದರು. “ನಿನ್ನ ಬದುಕಿನಲ್ಲಿ ನಿನಗೆ ಕೇವಲ ಸೋಲುಗಳೇ ಕಾಣಿಸುತ್ತಿವೆ, ನಿರಾಸೆಯೇ ನಿನಗೆ ಎಲ್ಲೆಲ್ಲೂ ಸಿಕ್ಕುತ್ತಿದೆ. ಬರುಬರುತ್ತ ನಿನಗೆ ಅದು ಅಭ್ಯಾಸವಾಗಿ ಹೋಗಿದೆ. ಗೆಲ್ಲುವ ಛಲದ ಜಾಗದಲ್ಲಿ ಗೆಲುವಿನ ಕನಸು ಕಾಣುತ್ತ ದಿನ ದೂಡುವೆ. ಇನ್ನು ಮುಂದೆ ಈ ದಿವ್ಯ ಮಂತ್ರವನ್ನು ಪಠಿಸಲು ಶುರು ಮಾಡು” ಎಂದು ಹೇಳಿ ಆತನ ಕೈಗೆ ಅಂಗೈ ಅಗಲದ ಕಾಗದದ ತುಂಡೊಂದನ್ನು ಕೊಟ್ಟರು.

“ಇದೂ ಮುಗಿದು ಹೋಗುತ್ತೆ”

“ನಿನ್ನೆದುರು ಸಾಲು ಸಾಲಾಗಿ ಕಷ್ಟಗಳ ಸರಮಾಲೆ ಬಂದು ನಿಲ್ಲಲಿ ನೀನು ಮನಸ್ಸಿನಲ್ಲಿ ಸದಾ ಈ ಮಂತ್ರವನ್ನೇ ಜಪಿಸುತ್ತಿರು. ಈ ಕಷ್ಟಗಳು ಶಾಶ್ವತವಲ್ಲ. ಇವು ಮುಗಿದು ಹೋಗುತ್ತವೆ. ಎಷ್ಟೇ ಸೋಲುಗಳು ನಿನಗಪ್ಪಳಿಸಿ ನಿನ್ನ ಬದುಕನ್ನು ಹೈರಾಣಾಗಿಸಲಿ, ಇದೆಲ್ಲಾ ಮುಗಿದುಹೋಗುವಂಥದ್ದು ಎಂದು ನೆನೆಸಿಕೊ. ಹಾಗೆಯೇ ಆಗಸದಲ್ಲಿ ನೆಗೆದಾಡುವಷ್ಟು ಖುಶಿಯಾಯ್ತು, ನಿನ್ನ ಬದುಕಿನಲ್ಲಿ ಸಂತಸದ ಹೊಳೆಯೇ ಹರಿಯಿತು ಎನ್ನುವಾಗಲೂ ಇದೂ ಶಾಶ್ವತವಲ್ಲ, ಇದೂ ಮುಗಿದೇ ಮುಗಿಯುತ್ತೆ ಎಂದು ನೆನೆಸಿಕೋ. ನಿನ್ನ ಬದುಕಿನಲ್ಲಿ ನಿನಗೆಂದೂ ನಿರಾಸೆಯಾಗುವುದಿಲ್ಲ. ಸುಖ ದುಃಖಗಳ್ಯಾವೂ ಶಾಶ್ವತವಲ್ಲ. ಅವೆರಡನ್ನೂ ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.” ಭಾಷಣ ಕೊಟ್ಟರೆ ಮಂಡಿಯೂರಿ.

ಕತ್ತಲೆ ತುಂಬಿಕೊಂಡಿದ್ದ ಕುಚೇಲನ ಬಾಳಿನೊಳಗೆ ಝಿರೊ ಕ್ಯಾಂಡಲ್ ಬಲ್ಬು ಪ್ರಕಾಶಮಾನವಾಗಿ ಉರಿಯಲು ಶುರುವಾಯ್ತು. 

(ಸಶೇಷ)


Technorati Tags: , , ,

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

24 ಫೆಬ್ರ

(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ ಮಾಡಿದ್ದಾರೆ: ‘ನುಂಗ್ಲಿ’. ವಿಪರೀತ ಮಿತಭಾಷಿ ಹಾಗೂ ಮೌನಿಯಾದ ಚೂರಿಯವರ ವಿಶೇಷ ಸಂದರ್ಶನ ನಗೆ ನಗಾರಿಗಾಗಿ ಮಾಡಿರುವುದು ನಗೆ ಸಾಮ್ರಾಟರ ಆಲ್ಟರ್ ಈಗೋ)

ನಗೆ ಸಾಮ್ರಾಟ್: ಹೆಲೋ ಚೂರಿಯವರೇ ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು.

ಚೂರಿ: ನಾನ್ಯಾರು… ನಾನ್ಯಾರು… ನಾನ್ಯಾರು…

ನಗೆ ಸಾಮ್ರಾಟ್: ಹೌದು, ಹೌದು. ನೀವು ಮೊದಲ ಸಿನೆಮಾ ‘ಮುದಿಯಾ’ ಮಾಡಿದಾಗ ಜನರು ಹೀಗೇ ಕೇಳಿದ್ದರು. ‘ಇವನ್ಯಾರು … ಇವನ್ಯಾರು…’ ಎಂದು. ಅದ್ನ ನೆನಪಿಸಿಕೊಳ್ತಿದೀರಾ?

ಚೂರಿ: ಇಲ್ಲ. ನನ್ನೇ ನಾನು ಆಗಾಗ ಹಿಂಗೆ ಪ್ರಶ್ನೆ ಮಾಡ್ಕೋತಿರ್ತೀನಿ. ಉತ್ತರ ಸಿಗದೆ ಇನ್ನೇನು ನನ್ನ ತಲೆ ಕೆಟ್ಟು ಹೋಗುತ್ತೆ ಅಂದಾಗ ಸಿನೆಮಾ ಮಾಡಿಬಿಡ್ತೀನಿ ಅದೇ ಹುಳ ಬಿಟ್ಟು. ಜನರಿಗೆ ನನ್ನ ತಲೆ ನೋವು ರವಾನಿಸಿಬಿಡ್ತೀನಿ.

ನ.ಸಾ: ನಿಮ್ಮ ಮೊದಲ ಸಿನೆಮಾ ‘ಮುದಿಯಾ’ದಲ್ಲಿ ಸಾವು, ಗೋರಿ ಎಂದೆಲ್ಲಾ ದೊಡ್ಡ ದೊಡ್ಡ ಪದಗಳನ್ನ ಬಳಸಿದ್ರಿ. ಜೊತೆಗೆ ಕ್ರೌರ್ಯವನ್ನು ಫೇರ್ ಅಂಡ್ ಲವ್ಲಿ, ಮೇಕಪ್ಪು ಇಲ್ಲದೆ ಹಸಿಹಸಿಯಾಗಿ ತೋರಿಸಿದ್ರಿ.

ಚೂರಿ: ಹೌದು, ಕ್ರೌರ್ಯ ಅನ್ನೋದು ಪ್ರತಿಯೊಬ್ಬನಲ್ಲೂ ಇದೆ. ಅದಕ್ಕೆ ವೈಭವೀಕರಣ ನೀಡಬಾರದು. ಹಸಿ ಹಸಿಯಾಗಿ ಹಾಗೇ ತೋರಿಸ್ಬೇಕು. ಹಸಿ ತರಕಾರಿ ಹೇಗೆ ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು.

ನ.ಸಾ: ನಿಮ್ಮ ಎರಡನೆಯ ಚಿತ್ರ ‘ಲವ್ ಲೆಟರ್’ ನಲ್ಲಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿದ್ರಿ. ನಿಮ್ಮ ಹಸಿ ಹಸಿತನ ಹಾಗೂ ಹುಸಿತನಗಳೆಲ್ಲದರೆ ಜೊತೆಗೆ ಕುಡಿತವೆಂಬ ದುಶ್ಚಟವನ್ನು ಎದುರಿಸುವ ಧೈರ್ಯ ಮಾಡಿದ್ರಿ. ಆದರೆ ನಿಮ್ಮ ಆ ಸಿನೆಮಾ ಹೀನಾಯವಾಗಿ ಸೋತಿತು. ನೀವು ಕುಡಿತದ ಬಗ್ಗೆ ಸಿನೆಮಾ ಮಾಡಲು ಹೊರಟಿದ್ದೇ ಅದರ ಸೋಲಿಗೆ ಕಾರಣ ಎನ್ನಬಹುದೇ? 

ಚೂರಿ: ಇಲ್ಲ. ಸಿನೆಮಾ ನಿಜವಾಗ್ಲೂ ಚೆನ್ನಾಗೇ ಇತ್ತು ಆದ್ರೆ ಪ್ರೇಕ್ಷಕರು ಸಿನೆಮಾ ನೋಡಲಿಲ್ಲ ಅಷ್ಟೇ. ಪ್ರೇಕ್ಷಕರು ನೋಡಲಿಲ್ಲ ಎಂದ ಮಾತ್ರಕ್ಕೆ ಸಿನೆಮಾ ಸೋಲಲ್ಲ. ಕುಡಿತದ ಬಗ್ಗೆ ಸಿನೆಮಾ ಮಾಡಿದ್ದು ಸೋಲಿಗೆ ಕಾರಣ ಅಂತ ಹ್ಯಾಗೆ ಹೇಳ್ತೀರಿ?

ನ.ಸಾ: ನೋಡ್ರಿ ಸಿನೆಮಾ ನೋಡಲು ಥಿಯೇಟರಿಗೆ ಬರುವ ಮಂದಿಯಲ್ಲಿ ಬಹುಪಾಲು ಗಂಡಸರದು. ಅವರು ಸಿನೆಮಾ ನೋಡಲು ಬರುತ್ತಾರೆ ಇಲ್ಲವೇ ತಮ್ಮ ಅಥವಾ ಇನ್ನೊಬ್ಬರ ಹೆಂಡತಿಯರಿಗೆ, ಮಕ್ಕಳಿಗೆ ಸಿನೆಮಾ ತೋರಿಸಲು ಬರುತ್ತಾರೆ. ಕಾಲೇಜು ಬಂಕ್ ಮಾಡಿ, ಗೆಳೆಯರ ಗುಂಪು ಸಂಪಾದಿಸಿ, ಪಾಕೆಟ್ ಮನಿಯ ನೆರವಿನಿಂದ ಸಿನೆಮಾ ಥಿಯೇಟರಿಗೆ ಲಗ್ಗೆ ಇಡುವ ಪಡ್ಡೆಗಳನ್ನು ಬಿಟ್ಟರೆ ಇವರದೇ ಮೆಜಾರಿಟಿ. ಅಲ್ಲದೇ ಇವರು ಸಂಜೆಯಾಗುತ್ತಿದ್ದ ಹಾಗೆ ‘ತೀರ್ಥ ರೂಪ’ ರಾಗುವಂಥವರು. ಅವರ ‘ಮದುಬನದ’ ಸವಿಯನ್ನು ಕೀಳು ಎಂದು ತೋರಿಸಿದ ಸಿನೆಮಾಗೆ ಅವರು ಯಾಕೆ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ? ರಾಜಕಾರಣಗಳು ತಮ್ಮ ಹೆಂಡತಿ ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯನವರ ನಾಟಕಕ್ಕೆ ಕಳುಹಿಸಿದ ಹಾಗೆ ಇದು!

ಚೂರಿ: ಹಾಗೋ, ಅದಕ್ಕೆ ನಾನು ಈ ಸಿನೆಮಾದಲ್ಲಿ ಹಳೆಯ ಪದ್ಧತಿಯನ್ನೆಲ್ಲಾ ಬಿಟ್ಟು ಹೊಸ ಸಾಹಸಕ್ಕೆ ಕೈ ಹಾಕಿರುವೆ.

ನ.ಸಾ: ಏನದು ಸಾರ್?

ಚೂರಿ: ಕುಡಿತದ ಕಾನ್ಸೆಪ್ಟು ಇಟ್ಟುಕೊಂಡಿದ್ದಕ್ಕೆ ಗಂಡಸರು ಥಿಯೇಟರಿಗೆ ಬರುವ ಮನಸ್ಸು ಮಾಡಲಿಲ್ಲ, ಪಡ್ಡೆಗಳು, ಹೆಣ್ಣುಮಕ್ಕಳಿಗೆ ಧೈರ್ಯ ಸಾಲಲಿಲ್ಲ ಅಂದ್ರಲ್ಲ, ಅದಕ್ಕೆ ಈ ಬಾರಿ ವಿಭಿನ್ನವಾಗಿ ಸಿನೆಮಾ ಮಾಡಿರುವೆ. ಮದರ್ ಸೆಂಟಿಮೆಂಟು ಇಟ್ರೆ ಕಾಲೇಜು ಹುಡುಗೀರು ನಿದ್ದೆ ಮಾಡ್ತಾರೆ, ಅಕ್ಕ ತಂಗಿ ಕಥೆ ಮಾಡಿದ್ರೆ ಹುಡುಗರು ಥಿಯೇಟರ್‌ ಕಡೆಗೆ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಪಡ್ಡೆಗಳಿಗೆ ಮಾಸ್ ಸಿನೆಮಾ ಮಾಡಿದ್ರೆ ಎಲೈಟ್ ಪತ್ರಕರ್ತರು, ಟಿವಿಯವರು ಮೂಸಿಯೂ ನೋಡಲ್ಲ. ಸಾಮಾಜಿಕ ಕಳಕಳಿಯ ಕಥೆ ಇಟ್ಟುಕೊಂಡು ಸಿನೆಮಾ ಮಾಡಿದ್ರೆ ಸಮಾಜವೇ ನೋಡಲ್ಲ. ಅದ್ಕೆ ಈ ಬಾರಿ ಎಲ್ಲಾ ವರ್ಗಕ್ಕೆ ತಲುಪುವ ಸಿನೆಮಾ ಮಾಡಿದ್ದೇನೆ.

ನ.ಸಾ: ಹೌದು, ನಿಮ್ಮ ‘ನುಂಗ್ಲಿ’ ವಿಶಿಷ್ಟವಾಗೇ ಇದೆ. ಆದ್ರೆ ಇದರ ವಿಶಿಷ್ಟತೆ ಏನು?

ಚೂರಿ: ಕಳೆದ ಸಿನೆಮಾದಲ್ಲಿ ಮಾಡಿದ ತಪ್ಪನ್ನು ಇಲ್ಲಿ ತಿದ್ದಿಕೊಂಡಿರುವೆ. ಅಲ್ಲಿ ಸಿನೆಮಾದ ಕಥೆಯೇ ಹಲವರಿಗೆ ಅಪಥ್ಯವಾಯಿತು. ಹೀಗಾಗಿ ಈ ಸಿನೆಮಾದಲ್ಲಿ ಅದರ ಗೋಜಿಗೇ ಹೋಗಿಲ್ಲ. ಅವರಿವರ ಭಾವನೆಗೆ ನೋವುಂಟು ಮಾಡುವ ಹಕ್ಕು ನಮಗೆಲ್ಲಿದೆಯಲ್ವಾ ಸಾರ್? ಹಾಗಾಗಿ ಈ ಸಿನೆಮಾದಲ್ಲಿ ಕಥೆಯನ್ನೇ ಬಳಸಿಲ್ಲ ನಾವು. ಇದು ಇತ್ತೀಚೆಗೆ ಪ್ರಸಿದ್ಧವಾಗುತ್ತಿರುವ ತಂತ್ರ. ನಾವೂ ಇದನ್ನು ಬಳಸಿದ್ದೀವಿ.

ನ.ಸಾ: ಹೌದು, ಹೌದು, ಸೋಪೇ ಇಲ್ಲದ ಸೋಪಿನ ಡಬ್ಬಿ, ಹಾಲೇ ಇಲ್ಲದ ಹಾಲಿನ ಪಾಕೆಟು, ಅಕ್ಕಿಯೇ ಇಲ್ಲದ ಅಕ್ಕಿಯ ಮೂಟೆ, ಮೆದುಳೇ ಇಲ್ಲದ ತಲೆ ಬುರುಡೆಗಳು ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಕಥೆಯಿಲ್ಲದ ಸಿನೆಮಾ ತಂತ್ರ ಯಶಸ್ವಿಯಾಗಬಹುದು. ಅಂದ ಹಾಗೆ ನಿಮ್ಮ ಈ ತಂತ್ರದ ಮುಂದುವರಿದ ಭಾಗ ಏನು? ಪ್ರೇಕ್ಷಕರೇ ಇಲ್ಲದ ನೂರು ದಿನವಾ?

ಚೂರಿ: ಹೌದು, ಆ ತಂತ್ರವನ್ನು ಬಳಸಬೇಕು. ಈಗಾಗಲೇ ಕೆಲವರು ಆಕಾಶದ ವೀರಗನ್ನಡಿಗರು ಆ ತಂತ್ರ ಬಳಸಿ ಯಶಸ್ವಿಯಾಗಿದಾರೆ. ಜನರೇ ಇಲ್ಲದೆಯೂ ಸಿನೆಮಾವನ್ನು ನೂರು ದಿನ ಓಡಿಸುವುದು ಆ ತಂತ್ರ. ಅದನ್ನೂ ಮುಂದಿನ ಸಿನೆಮಾಗಳಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನ.ಸಾ: ‘ಲವ್ ಲೆಟರ್’ ಹಾಗೂ ‘ಮುದಿಯಾ’ದ ಮೂಲಕ ಉತ್ತಮ ಕಳಕಳಿಯನ್ನು ಹೊಂದಿರುವ ನಿರ್ದೇಶಕ ಎಂದು ಹೆಸರು ಮಾಡಿದವರು ನೀವು ಈಗ ಇಂಥ ಸಿನೆಮಾ ಮಾಡಿದ್ದರಿಂದ ನಿಮಗೆ ಏನೂ ಅನ್ನಿಸಲ್ವಾ?

ಚೂರಿ: ನೋಡಿ ನಾನು ನನ್ನ ಪ್ರತಿಭೆಯನ್ನೆಲ್ಲ ಧಾರೆಯೆರೆದು ಲವ್ ಲೆಟರ್ ಸಿನೆಮಾ ಮಾಡಿದೆ. ಜನರು ನೋಡಲಿಲ್ಲ. ತಪ್ಪು ಮಾಡಿದರು. ಅಂಥ ಒಳ್ಳೆಯ ಸಿನೆಮಾವನ್ನು ಅವರು ನೋಡಲಿಲ್ಲ. ಅದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರಿಗೆ ಪನಿಶ್‌ಮೆಂಟ್ ಇರಲೇ ಬೇಕು. ಅದಕ್ಕೆ ಅವ್ರು ಈ ನನ್ನ ‘ನುಂಗ್ಲಿ’ ಸಿನೆಮಾ ನೋಡಬೇಕು. ಜನರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ‘ನುಂಗ್ಲಿ’ ಮಾಡಿರುವೆ.

ನ.ಸಾ: ಅದೇನೋ ಸರಿ ಸಾರ್ ಆದರೆ ನಿಮ್ ಈ ಸಿನೆಮಾದಲ್ಲಿ ಸೊಂಟದ ಕೆಳಗಿನ ಡೈಲಾಗುಗಳೇ ಜಾಸ್ತಿಯಂತೆ.

ಚೂರಿ: ಯಾರ್ರಿ ಹೇಳಿದ್ದು? ಸೊಂಟದ ಕೆಳಗಿನ ಡೈಲಾಗು ಒಂದೂ ಇಲ್ಲ ನಮ್ಮ ಸಿನೆಮಾದಲ್ಲಿ. ಒಂದನ್ನಾದರೂ ತೋರಿಸಿ ಬಿಡಿ ನೋಡೋಣ. ಎಲ್ಲವೂ ಸೊಂಟದ ಮೇಲಿನದ್ದೇ. ಎಲ್ಲರೂ ಬಾಯಲ್ಲಿಯೇ ಡೈಲಾಗು ಹೇಳಿರುವುದು, ಯಾರೂ ಸೊಂಟದ ಕೆಳಗಿಂದ ಡೈಲಾಗು ಹೇಳಿಲ್ಲ. ಸುಮ್ಮನೆ ಆರೋಪ ವಹಿಸಬೇಡಿ, ನೋವಾಗುತ್ತೆ.

ನ.ಸಾ: ಹೋಗ್ಲಿ ಬಿಡಿ ಸರ್. ನಿಮ್ಮ ಮುಂದಿನ ಯೋಜನೆಗಳೇನು ಸರ್? ‘ನುಂಗ್ಲಿ’ಯನ್ನು ಯಾವ ರೀತಿ ಜನರು ರಿಸೀವ್ ಮಾಡಿದ್ದಾರೆ?

ಚೂರಿ: ‘ನುಂಗ್ಲಿ’ಯನ್ನು ಕನರು ಒಪ್ಪಲೇಬೇಕು. ಅವರು ನನ್ನ ‘ಲವ್ ಲೆಟರ್’ ಮಾನ್ಯ ಮಾಡಲಿಲ್ಲವಾದ್ದರಿಂದ ನಾನು ‘ನುಂಗ್ಲಿ’ ಮಾಡಿರುವೆ. ‘ನುಂಗ್ಲಿ’ಯನ್ನು ಜನರು ಒಪ್ಪದಿದ್ದರೆ ಇದಕ್ಕಿಂತಲೂ ಹೆಚ್ಚಿನ ‘ಪ್ರತಿಭೆ’ ವಿನಿಯೋಗಿಸಿ ಜನರಿಗೆ ಶಿಕ್ಷೆ ಕೊಡುವೆ. ಜನರೇ ಆಲೋಚನೆ ಮಾಡಲಿ ಏನು ಮಾಡಬೇಕು ಅಂತ…

ನ.ಸಾ: ಒಟ್ಟಿನಲ್ಲಿ ನಿಮಗೆ ಪ್ರೇಕ್ಷಕರೇ ಪ್ರಭುಗಳು ಅಂದ ಹಾಗಾಯ್ತು. ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು. ಮುಂದಿನ ಸಿನೆಮಾಗೆ ಸೆಕೆಂಡ್ ಹಿರೋ ಪಾರ್ಟ್ ಇದ್ದರೆ ನನಗೆ ಕೊಡಿಸಿ… 

ಚರ್ಚೆ: ಜೋಕು ಹುಟ್ಟುವ ಸಮಯ!

20 ಫೆಬ್ರ

 

ಕವಿತೆ ಹುಟ್ಟುವುದು ಹೇಗೆ, ಕವಿತೆಯ ಅಪ್ಪ ಅಮ್ಮ ಯಾರು, ಕಥೆ ಜನ್ಮ ತಾಳುವ ಪರಿಸರ ಎಂಥದ್ದು, ಕಾದಂಬರಿ ಮೊಟ್ಟೆ ಒಡೆದು ಮರಿಯಾಗುವದಕ್ಕೆ ಬೇಕಾದ ಕಾವು ಎಷ್ಟು ಎಂದೆಲ್ಲಾ ಅಳತೆ ಮಾಪಕಗಳನ್ನು ಹಿಡಿದು jokes ಬೆವರು ಹರಿಸುವ ಸಂಶೋಧಕ, ಪಂಡಿತರಿಂದ ತಪ್ಪಿಸಿಕೊಂಡಿರುವ ಪ್ರಶ್ನೆ- ಜೋಕುಗಳು ಹುಟ್ಟುವುದು ಹೇಗೆ? ಈ ಜಗತ್ತಿನಲ್ಲಿರುವ ಅಸಂಖ್ಯಾತ ದಾಖಲಿತ ಜೋಕುಗಳಿಗೆ ಅಪ್ಪ ಅಮ್ಮಂದಿರು ಯಾರೂ ಇಲ್ಲವೇ? ಒಂದು ಜೋಕು ಹುಟ್ಟು ಪಡೆದು ಬೇರೆ ಬೇರೆ ಸಂಸ್ಕೃತಿಯ ಜನರ ನಡುವೆ ನಲುಗಿ ಹೊಸ ರೂಪ ಪಡೆದು ದೂರ ದೂರದವರೆಗೆ ಪಸರಿಸುವ ರೀತಿಯೇ ಅದ್ಭುತ. ಎಲ್ಲಿಯೋ ಸಿಕ್ಕ ಉತ್ಕೃಷ್ಟವಾದ ಹೇಳಿಕೆಯನ್ನು ದಾಖಲಿಸುವಾಗಲೂ, ಭಾಷಣದಲ್ಲಿ, ಬರವಣಿಗೆಯಲ್ಲಿ, ಪತ್ರಿಕೆಗಳ ಸಂಪಾದಕೀಯ ಪುಟದ ಮೂಲೆಯಲ್ಲಿ ಬಳಸುವಾಗಲೂ ಅದನ್ನುದುರಿಸಿದ ವ್ಯಕ್ತಿಯ ಹೆಸರನ್ನು ಹಾಕಲಾಗುತ್ತದೆ. ಹೆಸರು ತಿಳಿಯದ ಹೇಳಿಕೆಗಳಿಗೆ ‘ಅನಾಮಿಕ’ನ ಹೆಸರನ್ನಾದರೂ ಅಂಟಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆದರೆ ಮನುಷ್ಯ ತನ್ನೆಲ್ಲಾ ಸಂಕಟವನ್ನು ಕ್ಷಣಕಾಲ ಮರೆತು ನಕ್ಕು ಹಗುರಾಗಲು ನೆರವಾಗುವ ಅಕ್ಷರಗಳ ಈ ಆಭರಣಗಳನ್ನು ಕಡೆದಿರಿಸಿದ ಅಗೋಚರ ಶಿಲ್ಪಿಗಳ ನೆನಪೂ ನಮಗೆ ಆಗುವುದಿಲ್ಲ!

ಜೋಕು ಹುಟ್ಟುವುದು ಹೇಗೆ ಎನ್ನುವುದು  ಸಿಲ್ಲಿ ಪ್ರಶ್ನೆ ಎಂದು ಭಾವಿಸುವವರು ಒಂದು ಪ್ರಯತ್ನ ಮಾಡಬಹುದು. ಇದುವರೆಗೂ ತಾವು ಎಲ್ಲೂ ಕೇಳಿರದ, ಎಲ್ಲೂ ಓದಿರದ ತಮ್ಮದೇ ಒಂದೈದು ಜೋಕುಗಳನ್ನು ಸೃಷ್ಟಿಸುವುದು. ಜೋಕ್ ಎಂದ ಮೇಲೆ ಅದರ ಸಾರ್ಥಕ್ಯವಿರುವುದು ಅದು ಕೇಳುಗನ ತಲೆಗೆ ಅಪ್ಪಳಿಸಿ ಆತನಲ್ಲಿ ನಗುವಿನ ಅಲೆ ಎಬ್ಬಿಸಿದಾಗಲೇ. ನಾವೆಷ್ಟೇ ಹಾಸ್ಯ ಪ್ರವೃತ್ತಿಯವರು, ಸರಸ ಮಾತುಗಾರರು ಎಂದು ಭ್ರಮೆ ಇರಿಸಿಕೊಂಡಿದ್ದರೂ ನಮ್ಮ ಕೈಲಿ ನಾಲ್ಕು ಪಂಚಿಂಗ್ ಜೋಕುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಆ ಕುಸುರಿ ಕೆಲಸ ಬಲು ನಾಜೂಕಿನದು.

ಬಹುಶಃ ಈ ಜೋಕುಗಳೆಂಬುವು ಉರುಟುರುಟಾದ ನಾಣ್ಯದ ಹಾಗೆ ಅನ್ನಿಸುತ್ತದೆ. ಅವು ಹೆಚ್ಚು ಹೆಚ್ಚು ಕೈಗಳನ್ನು ಬದಲಾಯಿಸುತ್ತಾ ಹೋದಂತೆ, ಹೆಚ್ಚು ಚಲಾವಣೆಯಾಗುತ್ತಾ ಹೋದಂತೆ ನುಣುಪಾಗುತ್ತ ಹೋಗುತ್ತವೆ. ಹೆಚ್ಚು ಶಾರ್ಪ್ ಆಗುತ್ತಾ ಹೋಗುತ್ತವೆ. ಹೆಚ್ಚು ಪಂಚಿಂಗ್ ಎನ್ನಿಸುತ್ತವೆ. ಎಲ್ಲೂ ಪಂಡಿತೋತ್ತಮರ ಕತ್ತರಿ, ಬ್ಲೇಡುಗಳಿಗೆ ಈಡಾಗದೆ, ಹಾರ ತುರಾಯಿಯ ವೈಭೋಗವನ್ನು ಅನುಭವಿಸದೆ ಜನ ಮಾನಸದಲ್ಲಿ ಹಸಿರಾಗಿರುವ ಜೋಕುಗಳು ನಿಜಕ್ಕೂ ವಿಸ್ಮಯದ ಸಾಹಿತ್ಯವೇ ಸರಿ.

ನಿಮಗೇನನ್ನಿಸುತ್ತೆ?

ನಗಾರಿ ರೆಕಮಂಡೇಶನ್ 18 – have a chuckle

20 ಫೆಬ್ರ

ಹೌದು, ಇವು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

…………………………………….

 

‘ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಿನ್ನ ಮನಸ್ಸನ್ನು ತೆರೆದು ಸ್ವೀಕರಿಸು’ ಎಂದಿದ್ದಾರೆ ನಮ್ಮ ಹಿರಿಯರು. ಹಾಗೆಯೇ ಖುಶಿಯಾಗಿರುವುದಕ್ಕೆ, ನಗುನಗುತ್ತಿರುವುದಕ್ಕೆ ಅವಕಾಶ ಎಲ್ಲಿಂದ ಸಿಕ್ಕರೂ ನಾವದನ್ನು ಮುಕ್ತವಾಗಿ ಸ್ವಾಗತಿಸಬೇಕು. ದಿನ ಪತ್ರಿಕೆಗಳಲ್ಲಿ, ಮ್ಯಾಗಝೀನುಗಳಲ್ಲಿ, ಎಸೆಮ್ಮೆಸ್ಸುಗಳಲ್ಲಿ ತಿರುಗಿ ತಿರುಗಿ ದಣಿಸು ಬಸವಳಿದ ಜೋಕುಗಳಿಗೆ ಸ್ವಲ್ಪ ಕಾಲ ರೆಸ್ಟ್ ಕೊಟ್ಟು ಒಂದಷ್ಟು ಹೊಸ ಬಗೆಯ, ಎಲ್ಲೂ ಕೇಳಿರದ(ಹಾಗೆ ಭಾವಿಸಬಹುದಾದ) ಜೋಕುಗಳನ್ನು ಓದುವುದಕ್ಕೆ ಇಲ್ಲೊಂದು ಬ್ಲಾಗಿದೆ.

ದಿನಕ್ಕೊಂದು ಜೋಕು ಎನ್ನುವ ಈ ಬ್ಲಾಗ್ ಸ್ಪಾಟಿಗೆ ಭೇಟಿಯಿತ್ತರೆ ಪ್ರತಿದಿನವನ್ನು ನಗುವಿನೊಂದಿಗೆ ಶುರು ಮಾಡಬಹುದು ಎನ್ನುತ್ತಾರೆ ಇದರ ಮಾಲೀಕರು. ಇದರಲ್ಲಿನ ಜೋಕುಗಳ ಸ್ಯಾಂಪಲ್ ಒಂದನ್ನು ಇಲ್ಲಿ ಕೊಟ್ಟಿದ್ದೇವೆ.

A husband and wife were at a party chatting with some friends when the subject of marriage counseling came up.

"Oh, we’ll never need that. My wife and I have a great relationship," the husband explained. "She was a communications major in college and I majored in theatre arts."

He continued, "She communicates well and I act like I’m listening."

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ವಾರದ ವಿವೇಕ 24

16 ಫೆಬ್ರ

……………………………………………………………………

ಕೆಲವರು ಜ್ಞಾನದ ಕಾರಂಜಿಯಲ್ಲಿ
ಮೊಗೆಮೊಗೆದು ನೀರು ಕುಡಿಯುತ್ತಾರೆ
ಮತ್ತೆ ಕೆಲವರು
ಬಾಯಿ ಮುಕ್ಕಳಿಸಿ ಎದ್ದು ಹೋಗುತ್ತಾರೆ.

-ಅನಾಮಿಕ

……………………………………………………………………

ಚರ್ಚೆ: ನಗುವಿನ ಬಗೆ

12 ಫೆಬ್ರ

ನಗುವಿನಲ್ಲಿರುವ ಬಗೆಗಳೆಷ್ಟು!

ಮುದ್ದು ಕಂದ ತುಟಿ ಅರಳಿಸಿ ನಕ್ಕ ನಗು, ಪುಂಡ ಪೋರನೊಬ್ಬ ತಪ್ಪು ಮಾಡಿ ಕ್ಷಮೆ ಕೋರುವಂತೆ ನಿಂತು ನಕ್ಕ ನಗು, ಬೊಚ್ಚ ಬಾಯಿಯ ಮುದುಕ ಅಪಾನವಾಯುವಿಗೆ ಮುಕ್ತಿ ನೀಡಿ ಮುಖದಲ್ಲಿ ಅರಳಿಸಿದ ನಗು, ಧ್ಯಾನದಲ್ಲಿ ಕುಳಿತವನ ಮುಖದಲ್ಲಿನ ಮಂದಸ್ಮಿತದ ನಗು, ಜೋಕು ಕೇಳಿ ತಡೆಯಲಾಗದು ಪಕ್ಕೆಲುಬು ಹಿಡಿದುಕೊಂಡು ಉರುಳಾಡಿ ನಕ್ಕ ನಗು, ಸಮಸ್ಯೆಗಳೆಲ್ಲಾ ಪರಿಹಾರವಾದಾಗ ನಿಟ್ಟುಸಿರಿನ ಸಂಗಡ ಹೊರಬಂದ ನಗು, ಸವಾಲನ್ನು ಕಂಡು ಸಿನಿಕತೆಯಿಂದ ಹುಟ್ಟಿದ ನಗು, ದೊಡ್ಡ ವರ ಮೂರ್ಖತನವನ್ನು ಕಂಡು ಹುಟ್ಟಿದ ನಗು, ಚಿಕ್ಕವರ ದೊಡ್ಡತನ ಕಂಡು ಹುಟ್ಟಿದ ನಗು, ಇತರರನ್ನು ಲೇವಡಿ ಮಾಡಿ ನಕ್ಕ ನಗು, ಕುಂಟ, ಕುರುಡನ ಅಸಹಾಯಕತೆ ಕಂಡು ನಕ್ಕ ನಗು, ಬಾಳೆ ಹಣ್ಣಿನ ಸಿಪ್ಪೆ ಹುಟ್ಟಿಸಿದ ನಗು, ಅಟ್ಟ ಹಾಸದ ನಗು, ಅಹಂಕಾರದ ಕೇಕೆಯ ನಗು, ವಿಕಾರವಾದ ನಗು!laugh

ಮನುಷ್ಯನಿಗೆ ನಗುವುದಕ್ಕೆ ಅದೆಷ್ಟು ಕಾರಣ ಸಿಕ್ಕುತ್ತವೆ! ಯಾರನ್ನೋ ಲೇವಡಿ ಮಾಡಿ, ಯಾರದೋ ಅಸಹಾಯಕತೆಯನ್ನು ಆಡಿಕೊಂಡು ನಮ್ಮನ್ನು ನಾವು ಸಂಕುಚಿತಗೊಳಿಸಿಕೊಂಡು ನಗುವ ಅಪಹಾಸ್ಯದ ನಗುವಿಗೂ, ನಮ್ಮೊಳಗನ್ನು ವ್ಯಾಪಿಸಿಕೊಂಡು ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸಿ, ಭಾವನೆಗಳನ್ನು ತಣಿಸುವ ವಿಶಾಲವಾದ ನಗುವಿಗೂ ಅದೆಷ್ಟು ವ್ಯತ್ಯಾಸವಿದೆಯಲ್ಲವೇ?

ನಮ್ಮ ಪ್ರೇಮ, ನಮ್ಮ ಗೆಳೆತನ, ನಮ್ಮ ಮಾತೃ ಭಕ್ತಿ, ನಮ್ಮ ಶಿಸ್ತು, ನಮ್ಮ ಸ್ವಚ್ಛತೆ, ನಮ್ಮ ದೇಶ ಪ್ರೇಮಗಳ ಹಾಗೆಯೇ ಹಾಸ್ಯ ಕೂಡ ವಿಶಿಷ್ಟವಾದದ್ದು. ನಾವು ನಮ್ಮ ಪ್ರೇಮಕ್ಕೆ ಮೌಲ್ಯ ಸೇರಿಸುತ್ತಾ ಹೋದ ಹಾಗೆ, ನಮ್ಮ ಪ್ರೇಮ ನಮ್ಮನ್ನು ಬೆಳೆಸುತ್ತಾ ಹೋದ ಹಾಗೆ ನಮ್ಮ ಹಾಸ್ಯವೂ, ಹಾಸ್ಯ ಪ್ರವೃತ್ತಿಯೂ ಸಹ. ನಾವದನ್ನು ಬೆಳೆಸುತ್ತೇವೆ, ಅದು ನಮ್ಮನ್ನು ಬೆಳೆಸುತ್ತದೆ.

ಏನಂತೀರಿ?

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

10 ಫೆಬ್ರ

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ್ಕೃತಿಯ ರಕ್ಷಕರು ಎಂದು ವಯ್ಯಕ್ತಿಕ ಬಿರುದು ಪಡೆದು, ಕರ್ನಾಟಕದvalentines_day ತಾಲೀಬಾನಿಕರಣ ಎಂದು ತಮ್ಮ ಕೆಲಸಕ್ಕೆ ದೊಡ್ಡ ಹೆಸರಿನ ಮೊಹರನ್ನು ದೊಡ್ಡವರ ಒಡೆತನದ ದೊಡ್ಡ ಇಂಗ್ಲೀಷ್ ಟಿವಿ ಚಾನಲುಗಳಿಂದ ಪಡೆದು ಜಗತ್ಪ್ರಸಿದ್ಧರಾಗಿರುವ ಶ್ರೀರಾಮ ಸೇನಯ ಸೈನಿಕರು ಫೆಬ್ರವರಿ ಹದಿನಾಲ್ಕರಂದು ಆಚರಿಸುವ ವ್ಯಾಲಂಟೈನ್‌ನ ದಿನದಂದು ಹೊಸ ಪ್ರತಿಭಟನೆಯ ವರಸೆಯನ್ನು ಪ್ರಯೋಗಿಸಲು ಸನ್ನದ್ಧರಾಗಿದ್ದಾರೆ.

ವ್ಯಾಲಂಟೈನ್‌ನ ದಿನದಂದು ಅರಿಶಿಣದ ಕೊಂಬನ್ನು ಹೊತ್ತು ತಿರುಗಾಡುವ ಈ ಸೇನೆಯವರು, ಪ್ರೀತಿಯಲ್ಲಿ ಕಂಠ ಮಟ್ಟ ಮುಳುಗಿ ಉಸಿರಾಗಿ ಪರದಾಡುತ್ತಾ ಒದ್ದಾಡುತ್ತಿರುವವರನ್ನು ಮೇಲಕ್ಕೆತ್ತಿ ಮದುವೆ ಮಾಡಿಸಿ ಸಂಸಾರ ಸಾಗರದಲ್ಲಿ ಪೂರ್ಣವಾಗಿ ಮುಳುಗಿಸಲಿದ್ದಾರೆ. ಪ್ರೀತಿ ಅಂತ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹುಡುಗ ಹುಡುಗಿಯ ಜೊತೆ ಅಲೆಯುವುದು ನಮ್ಮ ಸಂಸ್ಕೃತಿಯಲ್ಲ ಎಂದಿರುವ ಶ್ರೀರಾಮ ಸೇನೆಯವರ ಈ ಯೋಜನೆಯನ್ನು ನಾವು ಬೇಷರತ್ತಾಗಿ ಬೆಂಬಲಿಸುತ್ತೇವೆ. ಪ್ರಮೋದ್ ಮುತಾಲಿಕ್ ಮಾಡುತ್ತಿರುವುದು, ಆಲೋಚಿಸುತ್ತಿರುವುದು ಸರಿ ಎಂದು ಎದೆ ತಟ್ಟಿ ಹೇಳುತ್ತೇವೆ.

ಊಟವಾದ ಮೇಲೆ ಕೈತೊಳೆಯಲೇ ಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಹಾಗೆಯೇ ಪ್ರೀತಿಯನ್ನು ಮಾಡುವ ಧೈರ್ಯವನ್ನು ತೋರಿದವರು ಮದುವೆಯೆಂಬ ಸಿಂಹಸ್ವಪ್ನವನ್ನು ಎದುರಿಸಲೇ ಬೇಕು. ಓದು ಮುಗಿಸಿ ಅಲೆಯುವವರಿಗೆ ಕೆಲಸ ಕೊಡಿಸುವುದು, ಹಸಿದು ಬಾಲ ಕಡಿಯುತ್ತಿರುವ ನಾಯಿಗೆ ಕೊಳೆತ ಮಾಂಸದ ತುಂಡು ಎಸೆಯುವುದು ಹೇಗೆ ಭಗವಂತನಿಗೆ ಪ್ರಿಯವೋ ಹಾಗೆಯೇ ಪ್ರೀತಿಸಿದವರನ್ನು ಮದುವೆ ಮಾಡುವುದು ಭಗವಂತನಿಗೆ ಪ್ರಿಯವಾಗುವ ಕೆಲಸ. ಈ ಅತ್ಯುತ್ತಮ ಆದರ್ಶದ ಕೆಲಸವನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

ಬಸುರಿ ಹೆಂಗಸಿನ ಹೆಸರಲ್ಲಿ ಮನೆಗೆ ವಕ್ಕರಿಸಿ ಪ್ರತಿಷ್ಠಾಪಿತನಾಗುವ ಅಳಿಯನ ಹಾಗೆ ಆಧುನಿಕತೆಯ ಹೆಸರಲ್ಲಿ ವಕ್ಕರಿಸಿರುವ ವಿದೇಶಿ ಕಂಪೆನಿಗಳು, ಲಾಭ ಬಡುಕ ಟಿವಿ ಚಾನಲ್ಲುಗಳು, ಜಾಹೀರಾತನ್ನು ನಂಬಿ ಕೂತ ಪತ್ರಿಕೆಗಳು ಮಾಡುತ್ತಿರುವ ಅನ್ಯಾಯನವನ್ನು ಕಾಣುವವರು ಯಾರೂ ಇಲ್ಲ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು, ಪ್ರೀತ್ಸೋದು ತಪ್ಪಾ, ಪ್ರೀತ್ಸು ತಪ್ಪೇನಿಲ್ಲ ಎಂದೆಲ್ಲಾ ಪುಗಸಟ್ಟೆ ಉಪದೇಶಗಳನ್ನು ದಯಪಾಲಿಸುವ ಸಿನೆಮಾ ಮಂದಿ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ತಯಾರಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೆಂಟು, ಬಿಡುಗಡೆಯಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೊಂಭತ್ತು ವರೆ ಸಿನೆಮಾಗಳು ಪ್ರೀತಿಯನ್ನೇ ಅವಲಂಬಿಸಿವೆ. ಹಾಗೆ ನೋಡಿದರೆ ಈ ಸಿನೆಮಾ ಉದ್ಯಮಕ್ಕೆ ಪ್ರೀತಿ ಎಂಬುದು ಪುಕ್ಕಟೆ ಕಚ್ಚಾ ಪದಾರ್ಥ. ಆದರೆ ಈ ಪ್ರೀತಿ ಎಂಬ ಹಾಲಿಗೆ ಮದುವೆ ಎಂಬ ರುಚಿಕಟ್ಟಾದ, ಹಲ್ಲು ಚುಳ್ಳೆನಿಸುವ ಎರಡು ಹನಿ ನಿಂಬೆ ರಸವನ್ನು ಹಿಂಡಿದರೆ ಏನಾಗುತ್ತೆ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದು. ಪ್ರೀತಿ ಮದುವೆಯಲ್ಲಿ ಅಂತ್ಯವಾದರೆ ಸಿನೆಮಾ ದಿ ಎಂಡ್ ಆಗುತ್ತೆ. ಹೀಗಾಗಿ ಈ ಸಿನೆಮಾ ಮಂದಿಗೆ ಜನರು ಪ್ರೀತಿ ಮಾಡುವುದು ಬೇಕು, ಮದುವೆಯಾಗಬಾರದು. ಇದೊಳ್ಳೆ, ಇಂಜಿನಿಯರಿಂಗು ಓದಬೇಕು- ಕೆಲಸಕ್ಕೆ ಸೇರಬಾರದು ಎಂದು ಆಶಿಸಿದಂತೆ. ಇಂಥ ಹುಲುಮಾನವರು ಶ್ರೀರಾಮ ಸೇನೆಯ ವಿರುದ್ಧ ಮಾತನಾಡುವರು. ಪ್ರೀತಿಯನ್ನು ಬಂಡವಾಳವಾಗಿಸಿಕೊಂಡ ಅವರಿಗೆ ಪ್ರೀತಿಸುವವರ ಬಗ್ಗೆ ಮಾತಾಡುವ ಹಕ್ಕಿಲ್ಲ.

ಇನ್ನು ಮೂರನೇ ಪುಟದಲ್ಲಿನ ಮದ್ಯದ ಅಮಲಲ್ಲಿ ಬಿದ್ದು ಒದ್ದಾಡಿ ದಣಿಯುವ ಪತ್ರಕರ್ತರಿಗೆ ‘ಮನುಷ್ಯ ನಾಯಿಯನ್ನು ಕಚ್ಚುವುದೇ ಸುದ್ದಿ’. ಅವರು ಕಲಹ ಪ್ರಿಯರು. ನೆಮ್ಮದಿಯಾಗಿರುವ ಯಾವ ಮನೆಯೂ ಅವರ ಪತ್ರಿಕೆಗೆ ಸರಕಾಗುವುದಿಲ್ಲ. ತೃಪ್ತನಾದ ಯಾವ ವ್ಯಕ್ತಿಯೂ ಅವರ ಗಮನಕ್ಕೆ ಅರ್ಹನಲ್ಲ. ಅವರನ್ನು ಪೊರೆಯುವ ಜಾಹೀರಾತು ದೊರೆಗಳ ಸುಖಕ್ಕೆ ಅಡ್ಡಿಯಾಗದ ಯಾವುದೂ ಅವರಿಗೆ ರಾಷ್ಟ್ರೀಯ ದುರಂತವಲ್ಲ. ಪ್ರಖ್ಯಾತ ನಟ ಮದುವೆಯಾದರೆ ಇವರಿಗೆ ಬೇಸರವಾಗುತ್ತೆ. ಯಾರಿಗೂ ತಿಳಿಸದೆ ಗುಟ್ಟಾಗಿ ಮದುವೆಯಾದರೆ ಇವರಿಗೆ ಕೊಂಚ ಥ್ರಿಲ್ಲಾಗುತ್ತದೆ. ಮದುವೆಗೆ ಮುಂಚೆ ಹುಡುಗಿಯೊಂದಿಗೆ ಹಾಡು, ಕುಣಿತ, ಫ್ಲಾಷ್ ಬ್ಯಾಕುಗಳಲ್ಲಿ ತೊಡಗಿದರೆ ಹಾಲು ಕುಡಿದಷ್ಟು ಸಂತೋಷವಾಗುತ್ತೆ. ಮದುವೆಯಾದ ಮೇಲೂ ‘ಇರುವುದೆಲ್ಲವ ಬಿಟ್ಟು’ ಹೊರಟರೆ ಸ್ವರ್ಗಕ್ಕೆ ಮೂರೇ ಗೇಣು. ಹೀಗಾಗಿ ಇವರಿಗೆ ಪ್ರೀತಿ ಎಂಬ ಕಬಾಬಿನಲ್ಲಿ ಮೂಳೆಯನ್ನು ಹುಡುಕುವುದೇ ಕೆಲಸ. ಇವರಿಗೆ ಪ್ರೀತಿಯ ಬಗ್ಗೆ ಮಾತಾಡಲು ಯಾರು ಕೊಟ್ಟರು ಹಕ್ಕು?

ಇನ್ನು ಬುದ್ಧಿ ಜೀವಿಗಳ ಬಗ್ಗೆ ಮರುಕ ತೋರಿಸಿ ನಮ್ಮ ಪುಣ್ಯವನ್ನು ಹೆಚ್ಚು ಮಾಡಿಕೊಳ್ಳುವುದು ಲೇಸು.

ಬುಡಕಟ್ಟು ಜನರ ಆಚರಣೆಗಳನ್ನು ಹೈಜ್ಯಾಕ್ ಮಾಡಿ ಹೊಚ್ಚ ಹೊಸ ಹೆಸರಿಟ್ಟು ಚೀನಾದ ಹಾಗೆ ಮಾರ್ಕೆಟಿಂಗ್ ಮಾಡಿ ವಿತರಿಸುವುದರಲ್ಲಿ ದಕ್ಷವಾದ ಕ್ರೈಸ್ತ ಧರ್ಮ ಮದುವೆಯ ಮುಂಚಿನ ಪ್ರೇಮ-ವಿಲಾಸದ ಬಗ್ಗೆ ಯಾವ ಧೋರಣೆ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಸದಾ ಪರದ ಬಗ್ಗೆ, ಅಲೌಕಿಕದ ಕಡೆ ಮುಖಮಾಡಿರುವ ಚರ್ಚುಗಳು, ಬಿಷಪ್ಪು, ಪೋಪುಗಳು ಹೆಚ್ಚು ಮಾತಾಡುವುದು ಬರೀ ಸಂತಾನ ನಿಯಂತ್ರಣ, ಸಲಿಂಗ ಕಾಮದ ಬಗ್ಗೆಯೇ ಆಗಿರುವುದು ಅನೇಕರಲ್ಲಿ ಅಲೌಕಿಕದ ಮೇಲೆ ಆಸಕ್ತಿ ಹುಟ್ಟಿಸಿದೆ. ವ್ಯಾಲಂಟೈನ್ ಆಚರಣೆ ಹುಟ್ಟಿದ್ದು ಹೇಗೆ ಎನ್ನುವುದೇ ಸರಿಯಾಗಿ ಜಗತ್ತಿಗೆ ತಿಳಿದಿಲ್ಲ, ವಿಕಿಪಿಡಿಯಾ ಪುಟ ಸಹ ನಿಮಗೆ ನಿಖರ ಉತ್ತರ ಕೊಡುವುದಿಲ್ಲ.

ಅನೇಕರು ತಿಳಿದಿರುವಂತೆ ರಾಜ್ಯದ ರಾಜನನ್ನು ಎದುರು ಹಾಕಿಕೊಂಡು ಸಂತ ವ್ಯಾಲಂಟೈನ್ ಯುವ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ. ಕಡೆಗೆ ಒಮ್ಮೆ ಆತನನ್ನು ಗೆಲ್ಲಿಗೇರಿಸಲಾಯ್ತು. ಆದಿನವನ್ನೇ ಪ್ರೇಮಿಗಳ ದಿನ ಎನ್ನಲಾಗುತ್ತೆ. ಪ್ರೀತಿಸುವವರನ್ನು ಒಂದು ಮಾಡಲು ರಾಜನನ್ನೇ ಎದುರು ಹಾಕಿಕೊಂಡು ಪ್ರಾಣವನ್ನು ಕೊಟ್ಟು ಹೋರಾಡಿದ ಸಂತನ ನೆನೆಯುವ ದಿನ. ಆದರೆ ಈ ದಿನವನ್ನು ಯಾರು ನಿಜವಾದ ಅರ್ಥದಲ್ಲಿ ಆಚರಿಸುತ್ತಿದ್ದಾರೆ? ಗ್ರೀಟಿಂಗ್ ಕಾರ್ಡು ಮಾಫಿಯಾವಾಗಲಿ, ಗುಲಾಬಿ ಹೂವು ಗ್ಯಾಂಗಾಗಲಿ, ಗಿಫ್ಟ್ ಸೆಂಟರು ಓನರುಗಳಾಗಲಿ, ರೆಸಾರ್ಟು, ರೆಸ್ಟ್ರೋರೆಂಟು, ಪಬ್ಬು ದೊರೆಗಳಾಗಲಿ, ಪತ್ರಕರ್ತ, ಬುದ್ಧಿಜೀವಿಗಳಾಗಲಿ- ಯಾರೆಂದರೆ ಯಾರೂ ಈ ದಿನವನ್ನು ಅದರ ನೈಜ ಅರ್ಥದಲ್ಲಿ ಆಚರಿಸುತ್ತಿಲ್ಲ. ಆದರೆ ಹಾಗೆ ಆಚರಿಸಲು ಯೋಜಿಸುತ್ತಿರುವವರು ಒಬ್ಬರೇ. ಯುವ ಪ್ರೇಮಿಗಳಿಗಾಗಿ ಸರಕಾರವನ್ನೇ, ಸಂವಿಧಾನವನ್ನೇ, ಪೊಲೀಸ್ ವ್ಯವಸ್ಥೆಯನ್ನೇ, ಅಷ್ಟೇಕೆ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಲು ಪಣ ತೊಟ್ಟಿರುವವರು ಒಬ್ಬರೇ… ಅವರೇ ಶ್ರೀರಾಮ ಸೇನೆಯ ವೀರ ಯೋಧರು! ಪ್ರೇಮಿಗಳನ್ನು ಫೆ ೧೪ರಂದು ಮದುವೆ ಮಾಡಿಸಿ ಸಂತ ವ್ಯಾಲಂಟೈನ್ ಹಾಕಿಕೊಟ್ಟ ಆದರ್ಶವನ್ನು ಪಾಲಿಸುತ್ತಿದ್ದಾರೆ. ಅನ್ಯ ಧರ್ಮದ, ಅನ್ಯ ಸಂಸ್ಕೃತಿಯ ಆಚರಣೆಯನ್ನು ಇಷ್ಟು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಶ್ರೀರಾಮ ಸೇನೆಯ ಪರ ಧರ್ಮ ಸಹಿಷ್ಣುತೆ, ವಿಶಾಲ ಹೃದಯವನ್ನು ಗುರುತಿಸದ ಮೂರ್ಖರಿಗೆ ಧಿಕ್ಕಾರವಿರಲಿ!

ಸಂತ ವ್ಯಾಲಂಟೈನ್ ಹಾಗೂ ಆತನ ಆದರ್ಶದ ತೀವ್ರ ಅಭಿಮಾನಿಯಾದ ನಾವು ಮುತಾಲಿಕ್ ಸಾಹೇಬರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಇವರು ತಮ್ಮ ಉಗ್ರ ಹಿಂದುತ್ವದಿಂದ ಕ್ರೈಸ್ತ ಆಚರಣೆಯನ್ನು ಜೀವಂತವಾಗಿಸುವ ಪ್ರಯತ್ನ ಮಾಡುತ್ತಿರುವುದನ್ನು ಆದರ್ಶವಾಗಿ ಸ್ವೀಕರಿಸಿ ಮತಾಂಧ ಮುಸ್ಲೀಂ ಸಂಘಟನೆಗಳು ಮನು ಹೇಳಿದ ಆದರ್ಶಗಳನ್ನು ಸ್ಥಾಪಿಸಲು ಹಿಂದೂ ಆಚರಣೆಯನ್ನು ಜೀವಂತವಾಗಿರಿಸಲು ಹೋರಾಟ ರೂಪಿಸಬೇಕು. ಹೆಣ್ಣು ಗಂಡಿನ ಅನುಪಾತ ಸಮಾನವಾಗಿರುವಾಗಲೂ ಗಂಡು ನಾಲ್ಕು ಹೆಣ್ಣನ್ನು ಮದುವೆಯಾಗಬಹುದು, ತಲಾಖ್ ನೀಡುವ ಹಕ್ಕಿರುವುದು ಗಂಡಿಗಷ್ಟೇ, ಹೆಣ್ಣಿಗೆ ಬುರ್ಕಾ ಕಲರ್ ಸೆಲೆಕ್ಟ್ ಮಾಡುವ ಹಕ್ಕನ್ನು ನಿಷೇಧಿಸಿರುವುದನ್ನು ಬೆಂಬಲಿಸಿ ಅದನ್ನು ಶೇ ೧೦೦ರಷ್ಟು ಜಾರಿಗೆ ತರಲು ಕ್ರೈಸ್ತ ಉಗ್ರವಾದಿಗಳು ಕಂಕಣ ತೊಡಬೇಕು. ಆಗಲೇ ನಮ್ಮ ದೇಶದಲ್ಲಿ ಜಾತ್ಯಾತೀತ ಮೌಲ್ಯ ಬೆಳಗುವುದು! ದೇಶ ಸರ್ವ ಧರ್ಮ ಸಮನ್ವಯ ಭಾರತವಾಗುವುದು!

– ನಗೆ ಸಾಮ್ರಾಟ್

ತೊಣಚಪ್ಪನ ಡೈರಿ

9 ಫೆಬ್ರ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ

ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ ಕೆಂಗಣ್ಣಿಗೆ ಆತ ಗುರಿಯಾಗೋದನ್ನ ತಪ್ಸಿ.

ರಂಗಸ್ಥಳದಲ್ಲೇ ಪ್ರಾಣ ಬಿಡುವುದು ಕಲಾವಿದ ಶಂಭು ಹೆಗಡೆಯವರ ಇಚ್ಛೆಯಾಗಿತ್ತು: ವರದಿ

ಇದೇ ಆಸೆ ನಮ್ ರಾಜಕೀಯ ನಾಯಕ್ರುಗಳಿಗೆ ಬಂದ್ರೆ ಎಷ್ಟ್ ಚಂದವೋ! ಭಾಷಣ ಬಿಗಿಯುವಾಗ್ಲೇ ಪ್ರಾಣ ಬಿಡೋ ಹಂಗೇನಾದ್ರೂ ಆದ್ರೆ ಈ ದೇಶ್ದ ನಾಸ್ತಿಕ್ರೆಲ್ಲ ಹೋಲ್ಸೇಲಾಗಿ ದೇವ್ರಿಗೆ ಅಡ್ಡ ಬೀಳ್ತಾರೆ!

ಮಾಧ್ಯಮಗಳಿಗೆ ಅಂಕುಶ ಹಾಕಲು ಆಚಾರ್ಯ ಚಿಂತನೆ- ವರದಿ

ನಮ್ ನ್ಯೂಸ್ ಚಾನಲ್ಲು, ಪೇಪರುಗಳ್ನ ಹ್ಯಾಂಡ್ಲ್ ಮಾಡೋಕೆ ಕ್ಲಾಸಲ್ಲಿ ಮಾನಿಟರ್ ಇದ್ಧಂಗೆ ಒಬ್ಬ ಒಂಬುಡ್ಸ್ ಮನ್ (ಮಾಧ್ಯಮ ಧರ್ಮಾಧಿಕಾರಿ)ಯನ್ನು ನೇಮಿಸುವ ಆಲೋಚ್ನೆ ಮಾಡ್ತಿದಾರಂತೆ ನಮ್ ಗೃಹ ಮಂತ್ರಿಗಳು. ಈ ಸಂದರ್ಭದಲ್ಲಿ ಮೊದ್ಲು ರಾಜ್ಯದಾಗೆ ಗಲಾಟೆ ಗದ್ಲ ತಪ್ಸೋ ಒಳ್ಳೆ ಅಧಿಕಾರಿ ನೇಮಕ ಆಗ್ಬೇಕು ಅಂತ ವಿರೋಧ ಪಕ್ಷದೋರಂಗೆ ವಾದ ಮಾಡೋದು ಬಿಟ್ಟು ನಮ್ ನಗೆ ಸಾಮ್ರಾಟ್ರನ್ನ ಒಂಬುಡ್ಸ್ ಮನ್ ಹುದ್ದೆಗೆ ಶಿಫಾರಸ್ಸು ಮಾಡ್ರಿ. ಹಂಗಾದ್ರೂ ಅವ್ರನ್ನ ನಗೆ ನಗಾರಿಯಿಂದ ಒದ್ದೋಡ್ಸೋಕೆ ಸಾಧ್ಯವಾಗುತ್ತೆ!

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

6 ಫೆಬ್ರ

ಸಂಪದಿಗಣೇಶರ ಬರಹವನ್ನು ಅಲ್ಲಿಂದ ನೇರವಾಗಿ ಹೈಜ್ಯಾಕ್ ಮಾಡಿ ಇಲ್ಲಿ ಹಾಕಿದ್ದೇವೆ.

– ನಗೆ ಸಾಮ್ರಾಟ್

 

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ.
ನಾಯಕಿ, ಕೋಟ್ಯಾಧೀಶ…(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?..
ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ  ?
-ನಮ್ಮದು ಡಿಫರೆಂಟೂ..
ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ..
‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ..,
ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ)..
ಎಮ್.ಜಿ.ರೋಡಲ್ಲಿ ಬರುತ್ತಾಳೆ..
ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ..
ನಾಯಕ ಡಾಕ್ಟ್ರು?..ಊಹೂಂ
ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ
ಲಾಯರ್? ಪೋಲೀಸ್? ಕಳ್ಳ? .. ಊಹೂಂ..
ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..
ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..

ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ ೩-೪ ಕಾಯಿನ್ ಮೇಲೆ
ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ..
ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್‌ಲ್ ಹಾಕ್ರೀ..)

ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ)
ಹರಿದ ಅಂಗಿ..(ಒಳಗೆ ಮೃದು ಹೃದಯ)
ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..)
ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ..
ಹಾಡಿಗೆ ಆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ)

ಈ ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು,
ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು.
ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್
ಆಗಿ ಬಂದಿದೆ.

ಲವ್ ಸುರು..
ಈಗ ವಿಲನ್ ಎಂಟ್ರಿ ಆಗಬೇಕಲ್ಲ..ಯಾರು ವಿಲನ್?

ಹುಡುಗಿಯ ಅಪ್ಪ..? ಊಹೂಂ.. ಡಿಫರೆಂಟೂ..
ಅಪ್ಪ ಖುಷಿಯಿಂದ ಒಪ್ಪುವನು. ಮದುವೆ ಗ್ರಾಂಡ್ ಆಗಿ ಸ್ವಿಜರ್‌ಲ್ಯಾಂಡ್‌ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.

ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)
‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ.
ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ? ಅಮೆರಿಕಾ ಅಧ್ಯಕ್ಷನ ಬೀಗ ಎಂದು
ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’
ಇಂಟರ್‌ವಲ್

***

ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ.
ಕೇವಲ ನಾಯಕನ ಒಂದೊಂದು ಡ್ರೆಸ್‌ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್‌ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.

ಈಗ ಇಂಟರ್‌ವಲ್ ನಂತರದ ಕತೆ-
ಅಮೆರಿಕಾದ ಫೈಟರ್ ಜೆಟ್‌ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ..
ಡಿಫರೆಂಟೂ..
ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ
ಹೋಗುವನು. ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್‌ಗಳು ವಿಮಾನ ಹೈಜಾಕ್ ಮಾಡುವರು!!
ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’-
ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು..
ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್‌ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ.

ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ.
ಯಾಕೆಂದರೆ ಎಪ್ರಿಲ್ ೧ಕ್ಕೆ ನಮ್ಮ ಸಿನೆಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು. ಅಕ್ಷರಶಃ ಚಿಂದಿ ಉಢಾಯಿಸುವುದು!!

ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!

6 ಫೆಬ್ರ

ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.

ಗಣೇಶ್.ಕೆ

mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.

ಪ್ರಸಾದ್

ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ ಸಾಮ್ರಾಟರ ಕಿರುನಗೆ
ಅಭಿಮಾನಿಗಳ ಎದೆಯಲ್ಲಿ ಸಂಭ್ರಮವು ಬಗೆಬಗೆ.
“ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು”

ಹೇಮಾ ಪವಾರ್

ಸಾಮ್ರಾಟರೇ ವರ್ಷವಿಡೀ ನಗೆ ನಗಾರಿಯ ರಥ ಸುಗಮವಾಗಿ ನಡೆಸಿಕೊಂಡು ಬಂದಿದ್ದೀರಿ. ಅದರ ರಹಸ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನೂ ಮುಗಿಸಿದ್ದೀರಿ. ನಿಮ್ಮ ಚೇಲ ಕುಚೇಲನ ಭಯಂಕರ ವಿರೋಧವಿದ್ದರೂ, ನಮ್ಮೆಲ್ಲರ ಪರವಾಗಿ ನಿಮಗೊಂದು ಸನ್ಮಾನ ಸಮಾರಂಭ ಏರ್ಪಡಿಸಬೇಕೆಂದಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು??

ವಿ. ಸುಮಂತ ಶ್ಯಾನುಭಾಗ್

ಸಾಮ್ರಾಟರೆ .. ಸನ್ಮಾನವೆಂದರೆ ಯಾರ ಬಳಿ ಏನು ಇಲ್ಲವೋ ಅದನ್ನು ಕೊಡುವುದು ಎಂದರ್ಥ .. ಹೇಮಾ ಅವರಿಗೆ ಎಷ್ಟು ಸೊಕ್ಕು ನೋಡು ನಿಮಗೆ ಮಾನ ಮರ್ಯಾದೆ ಕೊಡುತ್ತೇನೆ ಅಂಥಾ ಇದ್ದಾರೆ

ಏನೇ ಇರಲಿ ಸಮಸ್ತ ಕನ್ನಡಿಗರಿಗೆ ದಿನವೂ ಹಾಸ್ಯರಸದ ಭೂರಿಭೋಜನ ಬಡಿಸುತ್ತಿರುವ , ಸ್ವಯಂಘೋಷಿತ ನಗೆಸಾಮ್ರಾಟ್ , ಕಲಿಯುಗದ ಆಸ್ಥಾನ ವಿದೂಷಕ , ಒಂದು ವರುಷದ ಮಗು “ನಗೆನಗಾರಿ ” ಮತ್ತದರ ಚಮಚಾಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ .
ಶ್ರೀ ದೇವರು ತಮಗೆ ದೀರ್ಘಾಯುಷ್ಯ ,ಆರೋಗ್ಯ ,ಸುಖ ಶಾಂತಿ ನೆಮ್ಮದಿಗಳನ್ನು ಕರುಣಿಸಲೆಂದು ಆತನ ಚರಣಕಮಲಗಳಲ್ಲಿ ಪ್ರಾರ್ಥಿಸುತ್ತೇನೆ . ನಿಮ್ಮ ನಗಾರಿಯ ಶಬ್ದ ಕನ್ನಡನಾಡಿನಾದ್ಯಂತ ಮಾರ್ದನಿಸಲಿ ,ನಿಮ್ಮ ನಗೆಗಡಲಲ್ಲಿ ಇನ್ನೊ ದೊಡ್ಡ ದೊಡ್ಡ ನಗುವಿನ ಅಲೆಗಳು ಏಳಲಿ ಹಾಗೋ ನಮ್ಮಂಥ ನಿಮ್ಮ ಅಭಿಮಾನಿಗಳು ಆ ನಗೆಗಡಲಲ್ಲಿ ತೇಲುವಂತಾಗಲಿ ಎಂದು ಹಾರೈಸುತ್ತೇನೆ .

ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳೊಂದಿಗೆ

ರಂಜಿತ್ ಅಡಿಗ

“ಸೋಮಾರಿ ಮಿತ್ರ”ನೆಂದು ಉಲ್ಲೇಖಿಸಿ, ನಿಮ್ಮ ಅಸಂಖ್ಯ ಓದುಗರೆದುರು ನನ್ನನ್ನು ನೆನೆದುದ್ದಕ್ಕೆ ಕಣ್ತುಂಬಿ ಬಂತು.

ಅಂದ ಹಾಗೆ ಫೆಬ್ರವರಿ ೧೪ ಹತ್ತಿರ ಬಂತು, ಸಾಮ್ರಾಟರ ಪ್ರೇಮ ಕತೆಗಳನ್ನು ಓದುವ ಸೌಭಾಗ್ಯ ದೊರಕೀತೆ??