Archive | ಜೂನ್, 2009

ಸಾಮ್ರಾಟರ ವಿದೇಶ ಯಾತ್ರೆ

17 ಜೂನ್

 

ನಗೆ ನಗಾರಿಯ ವಿಶಾಲ ಸಾಮ್ರಾಜ್ಯದ ವಿಶಾಲ ಹೃದಯಿ ಪ್ರಜೆಗಳೆ, ಇಷ್ಟು ದಿನ ಸಾಮ್ರಾಟರು ಅವಿರತವಾಗಿ ತಮ್ಮ ಸಾಮ್ರಾಜ್ಯದ ಒಳಿತಿಗಾಗಿ ದುಡಿದಿದ್ದಾರೆ, ದಣಿದಿದ್ದಾರೆ. ನಮ್ಮ ದೇಶದ ಬೆನ್ನುಬು ರೈತನಾದರೆ, paper_airplane ಮೆದುಳು ವಿಜ್ಞಾನಿಯಾದರೆ, ಪೃಷ್ಠ  ರಾಜಕಾರಣಿಗಳೇ ಆಗಿರುತ್ತಾರೆ ಎಂಬುದು ಸಾಮಾನ್ಯ ಜ್ಞಾನ.

ಇಂತಹ ರಾಜಕಾರಣಿ ಮಿತ್ರನೊಬ್ಬನ ಆಹ್ವಾನದ ಮೇರೆಗೆ ನಾವು ವಿದೇಶ ಪ್ರಯಾಣವನ್ನು ಕೈಗೊಳ್ಳುತ್ತಿದ್ದೇವೆ. ವಿದೇಶಗಳನ್ನು ಸುತ್ತಾಡಿಕೊಂಡು ನಮ್ಮ ಗೆಳೆಯನ ಆರೋಗ್ಯ ತಪಾಸಣೆ ಆತನ ಪತ್ನಿಯ ಶಾಂಪಿಂಗ್ ಭರಾಟೆಯನ್ನು ತೀರಿಸಿಕೊಂಡು ನಾವು ಒಂದು ತಿಂಗಳು ಕಳೆದು ನಮ್ಮ ಸಾಮ್ರಾಜ್ಯಕ್ಕೆ ಹಿಂದಿರುಗುತ್ತೇವೆ.

ನಮ್ಮ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕ, ಆಸ್ಥಾನಿಕ ಸಂಪಾದಕ ಎಂದೆಲ್ಲ ಬೇಧ ಭಾವವಿಲ್ಲದಿರುವುದರಿಂದ ನಾವಿಲ್ಲದ ವೇಳೆಯಲ್ಲಿ ಪತ್ರಿಕೆಯ ಜವಾಬ್ದಾರಿ ಹೊರಲು ಒಂದು ನೊಣವೂ ಇರುವುದಿಲ್ಲ.

ನಮ್ಮ ಈ ಅನುಪಸ್ಥಿತಿಯಿಂದಾಗಿ ಅನೇಕ ಸುಂದರ ಮುಗ್ಧ ಎಳಯ ಹೃದಯಗಳು ವಿರಹ ವೇದನೆಯಿಂದ ನರಳುತ್ತವೆಂಬುದು ನಮಗೆ ತಿಳಿದಿದೆ. ವಿಧಿ ಬರಹವನ್ನು ನಾಡಿನ ಜನಪ್ರಿಯ ಬರಹಗಾರದ ನಾವೂ ಸಹ ತಿದ್ದಲಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಎಲ್ಲರಿಗೂ ಆ ಭಗವಂತ ಶಕ್ತಿಯನ್ನು ಕರುಣಿಸಲಿ. 

 

ಪ್ರೀತಿಯಿಂದ

ನಗೆ ಸಾಮ್ರಾಟ್

ಇನ್ನಾದ್ರೂ ಸ್ವಲ್ಪ ಸೀರಿಯಸ್ ಆಗ್ರೀ…

17 ಜೂನ್

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

 

ಬೆತ್ತಲೆ ಗಂಡಸು

ಮಧ್ಯರಾತ್ರಿಯ ನೀರವತೆಯಲ್ಲಿ ಪೊಲೀಸ್ ಸ್ಟೇಷನ್ನಿನ ಫೋನು ಕಿರುಚಿಕೊಂಡಿತು.

“ಹೆಲೋ, ಆಫೀಸರ್, ಇಲ್ಲೊಬ್ಬ ಗಂಡಸು ಬೆತ್ತಲೆ ತಿರುಗುತ್ತಿದ್ದಾನೆ.”

“ಹೌದಾ ಮೇಡಂ, ನಿಮ್ಮ ಅಡ್ರೆಸ್ ಕೊಡಿ ನಾವೀಗಲೇ ಬರ್ತಿದೀವಿ. ಬಾಗಿಲು ಚಿಲಕ ಹಾಕಿಕೊಳ್ಳಿ ಗಾಬರಿಯಾಗಬೇಡಿ.”

ಐದು ನಿಮಿಷದಲ್ಲಿ ಪೊಲೀಸ್ ಆಫೀಸರ್ ಆಕೆಯ ಮನೆಯಲ್ಲಿದ್ದ.

“ಎಲ್ಲಿ ಮೇಡಂ?”

“ಇತ್ತ ಬನ್ನಿ ಆಫೀಸರ್. ನೋಡಿ ಅವನಿನ್ನೂ ನಾಚಿಕೆ ಇಲ್ಲದೆ ನಿಂತಿದ್ದಾನೆ.”

ಸುತ್ತ ಮುತ್ತ ಕಣ್ಣಾಡಿಸಿದ ಆಫೀಸರ್‌ಗೆ ಯಾರೂ ಕಾಣಲಿಲ್ಲ.

“ಎಲ್ಲಿ ಮೇಡಂ, ನನಗ್ಯಾರೂ ಬೆತ್ತಲೆ ಗಂಡಸು ಕಾಣಿಸುತ್ತಿಲ್ಲ.”

“ಅಯ್ಯೋ ಅಲ್ಲಲ್ಲ. ಬನ್ನಿ, ಇಲ್ಲಿ ಈ ಟೆಲಿಸ್ಕೋಪಿನಿಂದ ನೋಡಿ.”

ನಗಲಿಕ್ಕೊಂದು ಚಿತ್ರ

16 ಜೂನ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

 

ಈ ಸಂಚಿಕೆಯ ಒಂದು ಸ್ಯಾಂಪಲ್:

 

c5

ಎಲ್ಲರೊಳಗೊಂದಾಗು ಎಂದ ಮಂಕುತಿಮ್ಮ ಎಲ್ಲಿ?

ವಾರದ ವಿವೇಕ 28

16 ಜೂನ್

……………………………………………………

ಮುಚ್ಚಿದ ಬಾಯಿ ಹೆಚ್ಚು

ಕಾಲುಗಳನ್ನು ಸಂಪಾದಿಸುವುದಿಲ್ಲ.
(ತಿಳಿಯಿತೇ?)

……………………………………………………

 

ಅವರಿವರ ಭಯಾಗ್ರಫಿ

16 ಜೂನ್

ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಹುಡುಗೀರು ಏನು ಮಾಡ್ತಿದ್ರು?

32832.player

ಖ್ಯಾತ ಕ್ರಿಕೆಟ್ ಪಟು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಡಗ್ಲಾಸ್ ಜಾರ್ಡಿನ್ ವಿಜಯ್ ಮಾಧವ್ ಜೀ ಮರ್ಚೆಂಟ್‌ರನ್ನು ಭಾರತ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೊಗಳಿರಬಹುದು, ಆದರೆ ಅವರ ಆಟವನ್ನು ನೋಡುವುದು ಬೋರು ಹೊಡೆಸುತ್ತಿತ್ತು.

೧೯೬೦ರ ಬಾಂಬೆ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಅಬ್ಬಾಸ್ ಅಲಿ ಬೇಗ್ ಎಂಬ ಆಟಗಾರನಿಗೆ ಪ್ರೇಕ್ಷಕರ ಸಾಲಿನಲ್ಲಿ ಹುಡುಗಿಯೊಬ್ಬಳು ಚುಂಬಿಸಿದಳು.

“ನಾನು ಬ್ಯಾಟ್ ಮಾಡುವಾಗ ಈ ಹುಡುಗಿಯರೆಲ್ಲಾ ಏನು ಮಾಡುತ್ತಿದ್ದರು?” ಕೇಳಿದರು ಮರ್ಚೆಂಟ್. ಅದಕ್ಕೆ ಎ.ಎಫ್.ಎಸ್.ತಲ್ಯಾರ್‌ಖಾನ್ ಉತ್ತರಿಸಿದರು, “ನಿದ್ದೆ ಮಾಡುತ್ತಿದ್ದರು!”

ಈಸ್ವರಪ್ಪನವರ ಮನದಾಳದ ನೋವು

5 ಜೂನ್

(ನಗೆ ನಗಾರಿ ರಾಜಕೀಯ ಅನುಕಂಪ ಬ್ಯೂರೋ)

ಅಧಿಕಾರ ಮನುಷ್ಯನನ್ನು ಭ್ರಷ್ಟನಾಗಿಸುತ್ತದೆ, ಸರ್ವಾಧಿಕಾರ ಸಂಪೂರ್ಣ ಭ್ರಷ್ಠನಾಗಿಸುತ್ತದೆ ಎಂದ ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್. ಆದರೆ ಅಧಿಕಾರ ಮನುಷ್ಯನನ್ನು ಬುದ್ಧಿ ಭ್ರಷ್ಟನನ್ನಾಗಿಸುತ್ತದೆ, ವಚನ ಭ್ರಷ್ಟನನ್ನಾಗಿಸುತ್ತದೆ ಎನ್ನುವ ಹೊಸ ವಿಚಾರವನ್ನು ಫ್ರಾಯ್ಡ್ ಹಿಂಬಾಲಕರು, ನೀಶೆ ಮುಂಬಾಲಕರು, ಶಾಲಾ ಕಾಲೇಜು ಬಾಲಕರು ಕರ್ನಾಟಕವನ್ನು ನೋಡಿ ತಿಳಿದುಕೊಳ್ಳಬೇಕಿದೆ.

ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಕ್ಲೀಶೆಯಾಗಿ ಹೋಗಿರುವ ಮಾತು. ಇಂದು ಶತ್ರುವಾದವ ಅನಾಯವಾಸವಾಗಿ ಒಂದು ಆಪರೇಶನ್ ಮಾಡಿಸಿಕೊಂಡು ಬಿಟ್ಟರೆ (ಅದೂ ಜೇಬು ಹಿಡಿಸದಷ್ಟು ಸಂಭಾವನೆಯನ್ನು ಪಡೆದುಕೊಂಡು) ಜೀವದ ಮಿತ್ರನಾಗಿಬಿಡುತ್ತಾನೆ. ಎರಡು ಕುರ್ಚಿಗಳ ನಡುವೆ ಕಡ್ಡಿ ಆಡಿದರೂ ಸಾಕು ಗಳಸ್ಯ ಕಂಠಸ್ಯರಾದ ಮಿತ್ರರೂ ದಾಯಾದಿಗಳಾಗಿ ಬಿಡುತ್ತಾರೆ. ಮಿತೃತ್ವ, ಶತೃತ್ವಗಳನ್ನು ಮರೆಸುವ, ಬೆನ್ನಿಗೆ ಚೂರಿ ಹಾಕಲು ಹೊಂಚಿದವನೊಂದಿಗೆ ಹಾಸಿಗೆ ಹಂಚಿಕೊಳ್ಳುವ, ತಟ್ಟೆಯಲ್ಲಿ ಅನ್ನ ಹಂಚಿಕೊಂಡವನ ಬೆನ್ನಿಗೆ ಚೂರಿ ಹಾಕುವಂತೆ ಮಾಡುವ ಮಹಾ ಮಾಯಾವಿ ರಾಜಕೀಯ.

ಇವೆಲ್ಲಾ ಬೊಗಳೆ ಬದಿಗಿರಲಿ, ಈಗ ಪ್ರಸ್ತುತ ಕರ್ನಾಟಕದ ರಾಜಕೀಯ ಚದುರಂಗದಾಟದಲ್ಲಿ ಕೋಲಾಹಲವನ್ನು ಮೂಡಿಸಿರುವ, ಮೂರನೆಯ ಕಣ್ಣು ತೆರೆದು ಯಡ್ಡಿಯ ನೆಮ್ಮದಿಗೆ ಅಡ್ಡಿಯಾಗಿರುವ ಈಸ್ವರಪ್ಪನವರ ಬಗ್ಗೆ 1 ಪತ್ರಿಕೆಗಳು ದಿನಕ್ಕೊಂದು ವರದಿಯನ್ನು ಮಾಡುತ್ತಿವೆ. ಟಿವಿಗಳು ಗಂಟೆಗೊಂದು ಸುದ್ದಿ ಬಿತ್ತರಿಸುತ್ತಿವೆ. ತನ್ನನ್ನು ಸಮರ್ಥಿಸಿಕೊಳ್ಳಲು ಅಸಹಾಕನಾದ ವ್ಯಕ್ತಿ ಕಟ್ಟ ಕಡಗೆ ಬಳಸುವ ಅಸ್ತ್ರ : ನಮ್ಮಪ್ಪನಾಣೆ, ನನ್ನಾಣೆ, ನನ್ನ ಮಕ್ಕಳಾಣೆ ಎಂಬ ಆಣೆ ಪ್ರಮಾಣವೆಂಬ ಕೆಲಸಕ್ಕೆ ಬಾರದ ತಂತ್ರದಂತೆ ‘ನನ್ನ ಹೇಳಿಕೆಯನ್ನು ಪತ್ರಿಕೆಗಳು ತಿರುಚಿವೆ’ ಎಂಬ ಹಳೇ ಸವಕಲು ತಂತ್ರವನ್ನು ಈಸ್ವರಪ್ಪ ಬಳಸಿ ಸುಸ್ತಾಗಿದ್ದಾರೆ.

ee ಸಲಿಗೆ ಈಸ್ವರಪ್ಪ ಅಂದದ್ದೇನು, ಅವರ ಮನದಾಳಾದ ಅಳಲೇನು ಎಂದು ಅರಿಯುವ ಒಂದು ಪ್ರಾಮಾಣಿಕ, ವಿಪಕ್ಷ ದಳ ಪ್ರಾಯೋಜಿತ ಪ್ರಯತ್ನ ಇಲ್ಲಿದೆ. ಈ ಈಸ್ವರಪ್ಪ ಅಂದದ್ದು:

ಶಿವಮೊಗ್ಗದಲ್ಲಿ ಕಡಿಮೆ ಮತ ಬಂದಿತ್ತು ಎಂಬ ತಮ್ಮ ಮೇಲಿನ ಆರೋಪ ನಿರಾಧಾರವಾದದ್ದು. ರಾಘಣ್ಣಂಗೆ ಬಿದ್ದ ಮತಗಳಲ್ಲಿ ಶಿವಮೊಗ್ಗದ ಪಾಲೇ ಹೆಚ್ಚು. ಚುನಾವಣೆಯಲ್ಲಿ ಹಣ, ಹೆಂಡ ವ್ಯಾಪಕವಾಗಿ ಹಂಚಿಕೆಯಾಯಿತು. ಇದರ ತನಿಖೆ ಶಿವಮೊಗ್ಗದಿಂದಲೇ ಆಗಬೇಕು ಎಂಬುದು ಅವರ ವಾದ.

ಅವರ ವಾದದಲ್ಲಿನ ತಿರುಳನ್ನು ಗಮನಿಸಿ, ಹಣ ಹೆಂಡದ ವ್ಯಾಪಕ ಹಂಚಿಕೆಯಿಂದ ಶಿವಮೊಗ್ಗದಲ್ಲಿ ಹೆಚ್ಚು ಮತ ಬಂದಿದೆ. ರಾಘಣ್ಣ ಗೆದ್ದಾಗಿದೆ. ಇದಕ್ಕೆ ತಮ್ಮನ್ನು ಅಭಿನಂದಿಸಿ, ರಾಜಕೀಯ ಚದುರಂಗದಾಟದ ಮೇಧಾವಿ ಎಂದು ಸನ್ಮಾನಿಸಬೇಕು. ಅದು ಬಿಟ್ಟು ಹಣ, ಹೆಂಡ ಖರ್ಚು ಮಾಡಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಮೇಲೂ ಕ್ರೆಡಿಟ್ ಕೊಡದೆ ಭಾರತಕ್ಕೆ ಆಸ್ಕರ್ ಬಂದದ್ದಕ್ಕೇ ತಾವೇ ಕಾರಣ ಎಂದು ಬೀಗುವ ಕಾಂಗ್ರೆಸ್ಸಿನವರ ಹಾಗೆ ಜಯದ ಶ್ರೇಯಸ್ಸನ್ನು ತಮ್ಮ ಮೇಲೆ ಹೇರಿಕೊಂಡಿದ್ದು ನ್ಯಾಯವೇ?

ಯಾವುದೋ ಉನ್ಮತ್ತ ದುರ್ಬಲ ಘಳಿಗೆಯಲ್ಲಿ ಈಸ್ವರಪ್ಪನವರು ಹೊರ ಹಾಕಿದ ಈ ಸತ್ಯ ಸಂಗತಿಗಳನ್ನು ಎಲ್ಲರೂ ಇಷ್ಟು ಗಂಭೀರವಾಗಿ ಪರಿಗಣಿಸಿರುವುದು ಸೋಜಿಗವಾಗಿ ಕಾಣುತ್ತದೆ. ಸತ್ಯವೆಂದರೇನೆಂದು ತಿಳಿಯದ ಅಧಿಕಾರರೂಢರು, ‘ಸತ್ಯ ಸತ್ತ ಮೇಲೆ ಜಯತೇ’ ಎಂದು ನಂಬಿಕೊಂಡ ವಿಪಕ್ಷಗಳು, ಮಿಥ್ಯವೇ ನಮ್ಮ ತಾಯಿ, ತಂದೆ, ಮಿಥ್ಯವೇ ನಮ್ಮ ಬಂಧು ಬಳಗವೆನ್ನುವ ಮಾಧ್ಯಮಗಳು ಅಪ್ಪಿ ತಪ್ಪಿ ಹೊರಬಿದ್ದ ಸತ್ಯಕ್ಕಾಗಿ ಇಷ್ಟು ತಲೆ ಕೆಡಿಸಿಕೊಂಡಿರುವುದು ಸರ್ವಥಾ ಬುದ್ಧಿವಂತಿಕೆಯ ಲಕ್ಷಣವಲ್ಲ.

ಜೋಕ್‌ನ ಕಟ್ ಯಾಕೆ ಮಾಡ್ತಾರೆ?

4 ಜೂನ್

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

ದೇವರ ಸಂಕಟ

ಅರವತ್ತು ವರ್ಷ ವಯಸ್ಸಾದ ಅಜ್ಜಿಯೊಬ್ಬಳು ರಸ್ತೆ ದಾಟುತ್ತಿರುವಾಗ ಆಕಾಶದಿಂದ ಧ್ವನಿಯೊಂದು ಮೊಳಗಿದಂತೆ ಕೇಳಿತು: “ನೀನು ನೂರು ವರ್ಷ ಬದುಕುತ್ತೀಯ.” ಅಜ್ಜಿ ತಲೆಯೆತ್ತಿ ನೋಡಿದಳು ಯಾರೂ ಕಾಣಲಿಲ್ಲ. ಎಲ್ಲ ತನ್ನ ಭ್ರಮೆ ಅಂದುಕೊಂಡು ಆಕೆ ರಸ್ತೆ ದಾಟಿದಳು.

ಮತ್ತೊಮ್ಮೆ ಸುಸ್ಪಷ್ಟವಾಗಿ ಧ್ವನಿಯು ಕೇಳಿತು: ‘‘ನಿನ್ನ ಆಯಸ್ಸು ನೂರು ವರ್ಷ”. ಈ ಬಾರಿ ಅಜ್ಜಿಗೆ ಅದು ದೇವರ ಅಭಯ ಎನ್ನುವುದು ಮನದಟ್ಟಾಯಿತು. ತನಗಿನ್ನೂ ಬದುಕುವುದಕ್ಕೆ ನಲವತ್ತು ವರ್ಷಗಳ ಕಾಲಾವಕಾಶವಿದೆ ಎಂದು ಖುಶಿಯಾದಳು.

ಕೂಡಲೆ ಆಕೆ ಪ್ಲಾಸ್ಟಿಕ್ ಸರ್ಜನ್ ಬಳಿ ತೆರಳಿ ತನ್ನ ಮುಖದ ಮೇಲಿನ ನೆರಿಗೆಗಳಿಗೆಲ್ಲಾ ಗತಿ ಕಾಣಿಸಿದಳು. ಅರವತ್ತು ವರ್ಷದ ಮುಪ್ಪನ್ನು ವೈದ್ಯ ವಿಜ್ಞಾನದ ನಾನಾ ಸಲಕರಣೆಗಳ ನೆರವಿನಿಂದ ಮರೆಯಾಗಿಸಿಕೊಂಡಳು. ಕೆನ್ನೆ ಹೇಮಾ ಮಾಲಿನಿಯದಾಯಿತು. ಇನ್ನು ನಲವತ್ತು ವರ್ಷ ಮಹಾರಾಣಿಯ ಬದುಕು ತನ್ನದು ಎಂದುಕೊಂಡು ಕ್ಲಿನಿಕ್ಕಿನಿಂದ ಹೊರ ಬಂದಳು.

ರಸ್ತೆ ದಾಟುವಾಗ ಬಸ್ಸೊಂದು ಢಿಕ್ಕಿ ಹೊಡೆದು ಆಕೆ ಪ್ರಾಣ ಬಿಟ್ಟಳು. “ನನಗಿನ್ನೂ ನಲವತ್ತು ವರ್ಷ ಆಯಸ್ಸಿದೆ ಎಂದಿದ್ದೆಯಲ್ಲ, ಈಗಲೇ ಕರೆದುಕೊಂಡದ್ದು ಯಾವ ನ್ಯಾಯ?” ದೇವರನ್ನು ದಬಾಯಿಸಿದಳು ಮುದುಕಿ.

ದೇವರು ಹೇಳಿದ, “ಹೋ ಅದು ನೀನೇನಾ, ನನಗೆ ಗುರುತೇ ಸಿಕ್ಕಲಿಲ್ಲ.”

ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

3 ಜೂನ್

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ. ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು ಕೇಳಿಕೊಂಡು ಬಂದು ಕೂತಿದ್ದಾರೆ.

ನಗಾರಿ ರೆಕಮಂಡೇಶನ್ 20

2 ಜೂನ್

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್!

ಹ್ಹ! ನಿಲ್ಲಿ ನಾವು ಆತನ ಹೆಸರು, ಆತನ ಪೋಷಾಕು, ಆತನ ವಿಗ್ರಹ ಬಳಸಿ ಯಾವುದೇ ವಿವಾದ ಪಡೆಯುವ ಹುನ್ನಾರ ನಡೆಸುತ್ತಿಲ್ಲ. ಆ ರೀತಿಯ ವಿವಾದ ಸೃಷ್ಟಿಸಿ ಈಗಾಗಲೇ ನಿರ್ವಹಿಸಲಾಗದಷ್ಟು ಬೆಳೆದು ನಿಂತಿರುವ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನೂ ಹೊಂದಿಲ್ಲ.

ಕರ್ನಾಟಕದಲ್ಲಿ ಹುಟ್ಟಿ ರಾಜ್ ಕುಮಾರ್ ಹೆಸರು ಕೇಳಿಲ್ಲ, ಭಾರತದಲ್ಲಿ ಹುಟ್ಟಿ ಗಾಂಧಿ ತಾತ ಗೊತ್ತಿಲ್ಲ ಎನ್ನುವವರನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಜಾಗತಿಕ ‘ನಗೆ ಸಾಮ್ರಾಟ’ಚಾಪ್ಲಿನ್‌ನ ಬಗ್ಗೆ ಕೇಳದವರು ನಮಗೆ ಸಿಕ್ಕುವುದಿಲ್ಲ.

ಚಾಪ್ಲಿನ್ ಮನುಷ್ಯ ಈ ಭೂಮಿಯ ಮೇಲೆ ಮಾಡಬಹುದಾದ ಅತಿ ದೊಡ್ಡ ಸಾಧನೆಯೆಂದರೆ ನಗು ನಗುತ್ತಾ ಬಾಳುವುದು ಎಂಬುದನ್ನು ತೋರಿಸಿಕೊಟ್ಟವನು. ಎಲ್ಲಾ ಸಮಸ್ಯೆಗಳಿಗೂ ನಗುವಿನ ಪರಿಹಾರವನ್ನು ಕಾಣಿಸಿದವನು. ನಗು ಅರಳುವುದು ಕ್ರೌರ್ಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಎಂಬುದು ಆತನ ಭಿಕಾರಿ ಪಾತ್ರದ ಪ್ರತಿ ಚಲನವಲನಗಳಲ್ಲೂ ಎದ್ದು ತೋರುತ್ತದೆ.

ಈ ಸಂಚಿಕೆಯಲ್ಲಿ ನಗೆಗಾರರ ಸಾಮ್ರಾಟನಾದ ಚಾರ್ಲಿ ಚಾಪ್ಲಿನ್ನನ ಸಿನೆಮಾದ ಒಂದು ತುಣುಕು.

ಹೊಟೇಲಿನಲ್ಲಿ ಹಾಡಿ ಕುಣಿಯಬೇಕಾಗಿರುತ್ತದೆ. ನಾಯಕಿ ಬರೆದುಕೊಟ್ಟ ಹಾಡಿನ ಚೀಟಿ ಕಳೆದು ಹೋಗುತ್ತೆ. ಪದಗಳು, ಅರ್ಥಗಳು, ವಾಕ್ಯಗಳು, ಸಾಹಿತ್ಯದ ಹಂಗಿಲ್ಲದೆ ನಾನು ನಗಿಸಬಲ್ಲೆ, ಕಲೆಗೆ ಅವೆಲ್ಲ ಪೂರಕವೇ ಹೊರತು ಅವೇ ಕಲೆಯಲ್ಲ ಎಂದು ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ವಿಷದ ಪಡಿಸುವ ಚಾಪ್ಲಿನ್ ನಮ್ಮನ್ನು ರಂಜಿಸುವುದರಲ್ಲಿ ಸೋಲುವುದಿಲ್ಲ.

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಬ್ಲಾಗ್ ಬೀಟ್ 21

2 ಜೂನ್

 

ಬಹು ದಿನಗಳ ನಂತರ ಬೀಟಿಗೆ ಹೊರಟ ಸಾಮ್ರಾಟರಿಗೆ ಭಾರಿ ನಿರಾಶೆ ಕಾದಿತ್ತು. ಅತ್ಯುತ್ತಮವಾದ ಫಸಲನ್ನು ನಿರೀಕ್ಷಿಸಿ ಕುಯಿಲಿಗೆ ಹೊರಟಿದ್ದವರಿಗೆ ಬರಡು ಭೂಮಿಯಂತಹ ಬ್ಲಾಗಿನಂಗಳ ಕಂಡು ದುಃಖವಾಯಿತು. ವಿದರ್ಭದ ಆಸುಪಾಸಿನಲ್ಲಿ ಓಡಾಡುತ್ತಿದ್ದರೆ ನೇಣು ಬಿಗಿದುಕೊಳ್ಳುವ ಅಪಾಯವಿತ್ತು. ಆದರೆ ಎಂದೂ ಕರ್ನಾಟಕದ ಅಂಗಳದಿಂದ ಕಾಲ್ಕಿತ್ತದ ಸಾಮ್ರಾಟರು ಬಚಾವಾದರು. ಕನ್ನಡದ ನೆಲದಲ್ಲಿ ಆಶಾವಾದಕ್ಕೆ ಕೊರತೆಯಿಲ್ಲ ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡು ಸಿಕ್ಕ ಒಂದೆರಡು ಕಾಳುಗಳನ್ನು ಹೆಕ್ಕಿ ತಂದು ಸುರಿದಿದ್ದಾರೆ.

ಬೊಗಳೆ

ಎಲ್ಲೇ ಯಾವುದಕ್ಕೆ ಬರಗಾಲವಿದ್ದರೂ ಬ್ಲಾಗಿನ ಅಂಗಳದಲ್ಲಿ ಬೊಗಳೆಗೆ ಬರಗಾಲವಿಲ್ಲವೆನ್ನುವುದನ್ನು ಅನ್ವೇಷಿಯವರು ಸತತವಾಗಿ ಸಾಬೀತು ಪಡಿಸಿಕೊಂಡು ಬರುತ್ತಿದ್ದಾರೆ. ತಮ್ಮ ಇತ್ತೀಚಿನ ವರದಿಯಲ್ಲಿ ತಮಿಳು ನಾಡಿನಲ್ಲಿನ ಚುನಾವಣೋತ್ತರ ಸನ್ನಿವೇಶವನ್ನು ತೆರೆದಿಟ್ಟಿದ್ದಾರೆ.

ತಮಿಳುಕಾಡಿನ ಪ್ರಥಮ ಕುಟುಂಬವು ತನ್ನೆಲ್ಲಾ ಶಕ್ತಿ-ಸಾಮರ್ಥ್ಯ-ಜನಬಲ-ಕುಟುಂಬ ಬಲಗಳನ್ನೆಲ್ಲವನ್ನೂ ದೆಹಲಿಗೆ ವರ್ಗಾಯಿಸಿರುವ ಕಾರಣದಿಂದಾಗಿ ತಮಿಳುಕಾಡು ಬಿಕೋ ಎನ್ನುತ್ತಿದ್ದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿದ್ದು, ಅದನ್ನು ಬೊಗಳೂರು ವರದ್ದಿಗಾರರು ಪತ್ತೆ ಹಚ್ಚಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ವರದ್ದಿಯಾಗಿದೆ.

ಮೋಟು ಗೋಡೆ

ಗೋಡೆಯ ಆಚೆ ಈ ಬಾರಿ ಸಾಮ್ರಾಟರಿಗೆ ಎದುರಾಗಿದ್ದು ಸಲಿಂಗಿ ಜೋಡಿಗಳ ವಿಷಯ. ಈ ಸಂಗತಿಯ ಬಗ್ಗೆ ಜಗತ್ತೇ ತಲೆ ಕೆಡಿಸಿಕೊಂಡು ಒದ್ದಾಡುತ್ತಿರುವಾಗ ಸಾಮ್ರಾಟರು ಸರಳವಾದ ಸೂತ್ರವನ್ನು ಹಾಕಿ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಅ=ಸಾಹಿತ್ಯಕ್ಕೆ ಹೆಣ್ಣು ಗಂಡೆಂಬ ಬೇಧವಿಲ್ಲ
ಬ= ಪ್ರೀತಿ ಮಾಡ ಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬುದು ಉತ್ತಮ ಸಾಹಿತ್ಯ
ಕ= ಪ್ರೀತಿಗೆ ಗಂಡು ಹೆಣ್ಣೆಂಬ ಬೇಧವಿಲ್ಲ

ಪ್ರೀತಿಸುವಾಗ ತೊಂದರೆಯಿಲ್ಲ ಆದರೆ ಮದುವೆಯಾದ ನಂತರ ಒಂದೊಂದೇ ತೊಂದರೆ ಶುರುವಾಗುತ್ತೆ. ಮದುವೆಯಾಗುವವರು ಗಂಡು ಹೆಣ್ಣು ಮಾತ್ರ ಎಂಬ ತಪ್ಪು ಅಭಿಪ್ರಾಯದಿಂದಾಗಿ ಗಂಡ, ಹೆಂಡತಿ, ಅಪ್ಪ, ಅಮ್ಮ ಎಂಬಂತಹ ಸಂಬಂಧಗಳು ಗಟ್ಟಿಯಾದವು. ಈಗ ಇಬ್ಬರು ಒಂದೇ ಲಿಂಗಿಗಳು ಮದುವೆಯಾದರೆ…

ಆದರೆ ಅವರು ಹೆದರಬೇಕಿಲ್ಲ. ಜಗತ್ತಿನಲ್ಲಿ ಯಾವುದ್ಯಾವುದಕ್ಕೋ ಕ್ರಾಂತಿಯಾಗಿದೆ. ಹೀಗಿರುವಾಗ ಗಂಡ ಹೆಂಡತಿ ಎಂಬ ಪದಗಳ ವಿಚಾರದಲ್ಲಿ ಕ್ರಾಂತಿ ಮಾಡುವುದಕ್ಕೆ ಯಾಕೆ ಹಿಂಜರಿಕೆ.