Archive | ಅಕ್ಟೋಬರ್, 2008

ಬ್ಲಾಗ್ ಬೀಟ್ 16

25 ಆಕ್ಟೋ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಸಾಮ್ರಾಟರ ಅಕಾಲಿಕ ಮರಣದಿಂದ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಬಿಡುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೀಟಿಗೆ ಸಾಮ್ರಾಟರು ಬರುತ್ತಿಲ್ಲ ಎಂಬುದನ್ನು ತಿಳಿದು ಬ್ಲಾಗಿಗ ಮಹಾಶಯರು ಇಲ್ಲ ಸಲ್ಲದ ತಂಟೆ ತಕರಾರು ತೆರೆದುಕೊಳ್ಳುತ್ತಾರೆ ಎಂದೆಲ್ಲಾ ಭಾವಿಸಿದ್ದ ಸಾಮ್ರಾಟರ ಅತೃಪ್ತ ಆತ್ಮಕ್ಕೆ ತಕ್ಕ ಪಾಠ ಸಿಕ್ಕಿದೆ. ಅಜ್ಜಿಯ ಕೋಳಿ ಕೂಗದಿದ್ದರೆ ಬೆಳಕೇ ಹರಿಯುವುದಿಲ್ಲ ಎಂಬುದನ್ನು ಅಕ್ಷರಶಃ ನಂಬಿಕೊಂಡಿದ್ದ ಸಾಮ್ರಾಟರು ಈಗ ಸದ್ದಿಲ್ಲದೆ ಅಜ್ಜಿಯ ಕೈಲಿದ್ದ ಕೋಳಿಯ ಕತ್ತು ಸೀಳಿ ಆ ಅಜ್ಜಿಯ ಕೈಲೇ ಮಸಾಲೆ ಅರೆಸುತ್ತಿದ್ದಾರೆ!

…………………………

ಪ್ರಕಾಶ್ ಶೆಟ್ಟಿಯವರದು ಬರೇ ವಾರೆ ಕೋರೆ

ತಮ್ಮ ವಾರೇ ಕೋರೆ ಗೆರೆಗಳಿಂದ ನಾಡಿನ ಉದ್ದಗಲಕ್ಕೆ ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರು ಬಹುದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಈ ಸಾಧನೆ ಗಿನ್ನಿಸ್ ದಾಖಲೆಯ ಪುಸ್ತಕದಲ್ಲೇ ಶ್ರೇಷ್ಠ ಮಟ್ಟದ ಸ್ಥಾನಮಾನವನ್ನು ಪಡೆಯಲಿದೆ ಎಂದು ಗುಸುಗುಸು ಶುರುವಾಗಿದೆ. ಅಸಲಿಗೆ ಇವರು ಮಾಡಲು ಹೊರಟಿರುವುದಾದರೂ ಏನನ್ನು? ‘ದೇವೇಗೌಡರನ್ನು ನಗಿಸಲು ಹೊರಟಿದ್ದಾರೆ!’

ಇಲ್ಲಿ ನೋಡಿ…

ಹೌದು, ಪ್ರಕಾಶ್ ಶೆಟ್ಟಿಯವರು ಕನ್ನಡದಲ್ಲಿ ಒಂದು ಹಾಸ್ಯ ಮಾಸ ಪತ್ರಿಕೆಯನ್ನು ತೆರೆಯುತ್ತಿದ್ದಾರಂತೆ. ಗೌಡರನ್ನು, ಖರ್ಗೆಯವರನ್ನು ನಗಿಸುವ ಹುಮ್ಮಸ್ಸಿರುವ ಶೆಟ್ಟಿಯವರ ಪಂಚ್‌ನ್ನು ಕನ್ನಡಿಗರು ಸಕತ್ತಾಗಿ ಸ್ವೀಕರಿಸಲಿ ಎಂಬುದು ಸಾಮ್ರಾಟರ ಹಾರೈಕೆ.

…………………………

ಆಚಾರ್ಯರಿಗೆ ಸ್ವಲ್ಪ ಬೇಜಾರಾಗುತ್ತದೆಯಂತೆ!

ತಮ್ಮನ್ನು ಹೋಂ ಮಿನಿಸ್ಟರ್ ಎಂದು ಕನಿಕರದಿಂದ, ಲೇವಡಿಯಿಂದ, ಮಮತೆಯಿಂದ ಕರೆಯುವುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಆಚಾರ್ಯರು ಇಷ್ಟೆಲ್ಲಾ ಆದರೂ ಇದರಿಂದ ಸ್ವಲ್ಪ ಬೇಜಾರಾಗುತ್ತದೆ ಎಂದು ಹೇಳಿದ್ದು ನಾಡಿನ ಹೆಸರಾಂತ ಪತ್ರಿಕೆ ಮಜಾವಾಣಿಯಲ್ಲಿ ವರದಿಯಾಗಿದೆ.

ಹಾಗೆಯೇ ನಮ್ಮ ಮಾನ್ಯ ಮುಖ್ಯ ಮಂತ್ರಿಯವರು ಅಮೇರಿಕಾದ ಅಕ್ಕನ ಸಮಾರಂಭಕ್ಕೆ ಹೋಗಿ ಆಂಗ್ಲ ರಾಜಕಾರಣಿಗೆ ಉಚಿತವಾಗಿ ಲೋಟಸ್ ಫ್ಲವರ್ ಆಪರೇಷನ್ ಮಾಡಿದ ಸಂಗತಿ ಸಚಿತ್ರ ವರದಿ ಮಜಾವಾಣಿಯಲ್ಲಿ ಪ್ರಕಟವಾಗಿದೆ.

…………………………

ಬೊಗಳೆ ದಿವಾಳಿ ವಿಶೇಷಾಂಕ

ರಾಜ್ಯದ ಪ್ರತಿಯೊಂದು ಪತ್ರಿಕೆಯೂ ತಾನು ಬದುಕಿದ್ದೇನೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ದೀಪಾವಳಿಯಂದು ವಿಶೇಷಾಂಕದ ಹೆಸರಿನಲ್ಲಿ ಒಂದೇ ಆಕಾರದ, ಒಂದೇ ತೂಕದ, ಒಂದೇ ಬೆಲೆಯ ಒಂದಷ್ಟು ಸರಕನ್ನು ದಾಟಿಸಿ ಕೈತೊಳೆದುಕೊಂಡುಬಿಡುತ್ತವೆ.

ಈ ರೇಸಿನಲ್ಲಿ ತಾನೇನೂ ಕಡಿಮೆ ಇಲ್ಲ ಎಂದು ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಟೊಂಕ ಕಟ್ಟಿ ನಿಂತು ದಿವಾಳಿ ವಿಶೇಷಾಂಕವನ್ನು ಹೊರತಂದಿದ್ದಾರೆ. ಅವರು ಈ ಸಂಚಿಕೆಯನ್ನು ಹೊರತಂದಿದ್ದಕ್ಕಾಗಿ ಹಾಗೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಕೃಪೆ ಮಾಡಿದ್ದಕ್ಕಾಗಿ ಸಾಮ್ರಾಟರಿಂದ ಅಭಿನಂದೆಗಳ ಠುಸ್ ಪಟಾಕಿಯನ್ನು ಪಡೆದಿದ್ದಾರೆ.

(ಇವರ ಉಚಾವಣೆಯಿಂದ ಸಾಮ್ರಾಟರೂ ಸಹ ನಗೆ ನಗಾರಿ ದೀಪಾವಳಿ ವಿಶೇಷಾಂಕ ತರುವ ಸನ್ನಾಹದಲ್ಲಿದ್ದಾರೆ ಎಂಬುದು ಕೇವಲ ಊಹಾಪೋಹದ ಆಧಾರದಲ್ಲಿ ರೂಪುಗೊಂಡಿರುವ ವಾಸ್ತವ ಸಂಗತಿ ಎಂದು ತಿಳಿಸುತ್ತಿದ್ದೇವೆ.)

…………………………

ಪಂಚುಗಳು

ತುಂಬಾ ದಿನಗಳಿಂದ ಬ್ಲಾಗ್ ಲೋಕದಿಂದ ಗಣೇಶರು ನಾಪತ್ತೆಯಾಗಿ ಅನಂತರ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾರ್ತೆಯೂ ವರದಿಯಾಗಿ ಜನರು ಅನವಶ್ಯಕವಾದ ಸಂಶೋಧನೆಗಳನ್ನು ಮಾಡಲು ಶುರು ಮಾಡತೊಡಗಿದಾಗಲೇ ಗಣೇಶರು ಪ್ರತ್ಯಕ್ಷರಾಗಿ ಒಂದೆರಡು ಪಂಚು ಕೊಟ್ಟು ಮಾಯವಾಗಿದ್ದಾರೆ.

ಅವರು ಕೊಟ್ಟ ಪಂಚಿನ ಅರ್ಥ ಸಾಮ್ರಾಟರಿಗೆ ಸಿಕ್ಕದೆ ಅದನ್ನು ಹುಡುಕಿ ಅಲೆಯುತ್ತಿದ್ದಾರೆ. ಯಾರಿಗಾದರೂ ಸಿಕ್ಕಿದರೆ ಶೇ ಐವತ್ತನ್ನು ತಮ್ಮತ್ತ ತಳ್ಳಲು ಮನವಿ ಮಾಡಿಕೊಂಡಿದ್ದಾರೆ!

ವಾರದ ವಿವೇಕ 18

23 ಆಕ್ಟೋ

………………………………………………………………….

ಸತ್ಯ ಹೇಳಬಹುದಾದ
ಸಂದರ್ಭದಲ್ಲಿ ಸುಳ್ಳನ್ನು
ವ್ಯರ್ಥವಾಗಿ ಬಳಸಬೇಡಿ.

-ಜಾಕ್ ಕ್ಲಾನ್ಸಿ

………………………………………………………………….

ಸಾಮ್ರಾಟರ ಪುನರ್ಜನ್ಮ!

23 ಆಕ್ಟೋ

ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ್ಮಹತ್ಯೆ ಮಾಡಿಕೊಂಡ ಸಾಮ್ರಾಟರಿಗೆ ಮುಂದೇನಾಯಿತು ಎಂಬುದು ಬಹುದೊಡ್ಡ ಥ್ರಿಲ್ಲರ್ ಸಿನೆಮಾದ ಪ್ಲಾಟ್ ಇದ್ದ ಹಾಗಿದೆ. ಆದರೆ ಈ ಹೊತ್ತಿನ ತುರ್ತಿನ ಮಾಹಿತಿಯೆಂದರೆ ಸಾಮ್ರಾಟರು ವಾಪಸ್ಸು ಬದುಕಿ ಬಂದಿದ್ದಾರೆ!

ಹೌದು, ಸಾಮ್ರಾಟರು ಅಕ್ಷರಶಃ ಪುನರ್ಜನ್ಮವನ್ನು ಪಡೆದಿದ್ದಾರೆ. ಸಾವಿನ ದವಡೆಯಷ್ಟೇ ಅಲ್ಲ, ಅದರ ಜಠರ, ಸಣ್ಣ ಕರುಳು, ದೊಡ್ಡ ಕರುಳುಗಳನ್ನೆಲ್ಲಾ ಹೊಕ್ಕು ತಪ್ಪಿಸಿಕೊಂಡು ಹೊರಬಂದಿದ್ದಾರೆ. ನಗೆ ನಗಾರಿಯ ಕಛೇರಿಯನ್ನು ಬಂದು ತಲುಪಿದ್ದಾರೆ. ಸಾಮ್ರಾಟರ ಆಗಮನದಿಂದ ಕಿವುಚಿಕೊಳ್ಳುವ ಹಲವು ಮುಖಗಳ ನಡುವೆ ಕೆಲವು ಮುಖಗಳಾದರೂ ಅರಳುತ್ತವೆ ಎಂಬುದು ನಮ್ಮ ನಂಬಿಕೆ. ಸಾಮ್ರಾಟರ ಪುನರಾಗಮನದಿಂದ ನಗೆ ನಗಾರಿಯ ಏಕಸದಸ್ಯ ಸಿಬ್ಬಂದಿಗೆ ವಿಪರೀತ ಖುಶಿಯಾಗಿದೆ. ದೀಪಾವಳಿ ಹಬ್ಬ ಮೂರು ದಿನ ಮುಂಚಿತವಾಗಿ ಬಂದಿದೆ!

ಇಂದಿನಿಂದ ಎಂದಿನಂತೆ ನಗಾರಿಯ ಸದ್ದು ಪುನರಾರಂಭವಾಗಲಿದೆ. ಸಾಮ್ರಾಟರ ಅಪ್ಪಣೆಯ ಮೇರೆಗೆ ಅವರ ಪುನರ್ಜನ್ಮದ ರಹಸ್ಯ ಕಥಾನಕವನ್ನು ಬರೆಯಲು ಅವರ ಚೇಲ ಕುಚೇಲ ತಯಾರಾಗಿ ಕೂತಿದ್ದಾನೆ. ಸೂಕ್ತ ಸಮಯದಲ್ಲಿ ಅದು ನಗೆ ನಗಾರಿಯಲ್ಲಿ ಬೆಳಕು ಕಾಣುವುದಾಗಿ ತಿಳಿಸಲು ಹರ್ಷಿಸುತ್ತೇವೆ…