Archive | ಏಪ್ರಿಲ್, 2008

ಸ್ಕೂಪ್: ಉತ್ತಮ ಸಮಾಜಕ್ಕಾಗಿ ಟಿವಿ ೯ ?

26 ಏಪ್ರಿಲ್

(ನಗಾರಿ ತನಿಖಾ ಬ್ಯೂರೋ)

‘ಉತ್ತಮ ಸಮಾಜಕ್ಕಾಗಿ’ ಎಂಬ ಪಂಚಿಂಗ್ ಹಾಗೂ ಪರಿಣಾಮಕಾರಿ ಸ್ಲೋಗನ್ನನ್ನು ಹೊತ್ತುಕೊಂಡು ಕನ್ನಡದಲ್ಲಿ ಕಣ್ತೆರದದ್ದು ಟಿವಿ ೯ ಸುದ್ದಿ ಚಾನಲ್ಲು. ಇದು ಶುರುವಾಗಿ ಈಗಾಗಲೇ ತುಂಬಾ ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಈ ಚಾನಲ್ಲಿನಿಂದ ಸಮಾಜ ಎಷ್ಟು ‘ಉತ್ತಮ’ವಾಗಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಗೆ ಸಾಮ್ರಾಟರು ತಮ್ಮ ಪತ್ತೇದಾರಿಕೆಯ ಚೇಲ ಕುಚೇಲನನ್ನು ಕಟ್ಟಿಕೊಂಡು ಅಜ್ಞಾತ ಪ್ರದೇಶಕ್ಕೆ ಪಲಾಯನಗೈದಿದ್ದಾರೆ.

‘ರಾಜಕಾರಣಿಗಳೇ ಎಚ್ಚರ..! ಮಾತಾಡುವ ಮುನ್ನ ಯೋಚಿಸಿ’ ಎಂದು ಚುನಾವಣೆಯ ಕಾವು ಜ್ವರದಂತೆ ಏರುತ್ತಿರುವ ಸಂದರ್ಭದಲ್ಲಿ ರೋಫ್ ಹಾಕುತ್ತಿರುವ ಈ ಸುದ್ಧಿ ಮಾಧ್ಯಮ ಆಶ್ವಾಸನೆಗಳನ್ನು ನೀಡುವಂತಹ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ತೋಳು ಮೇಲೇರಿಸುತ್ತಿದೆ. ಅವರ ಈ ಉತ್ಸಾಹ, ಆರ್ಭಟಕ್ಕೆ ಕಾರಣವನ್ನು, ಪ್ರೇರಣೆಯನ್ನೂ ಪತ್ತೆ ಹಚ್ಚಬೇಕೆಂದು ಮೂಲವನ್ನು ಹುಡುಕಿಹೊರಟ ಸಾಮ್ರಾಟ್ ಹಾಗೂ ಕುಚೇಲರಿಗೆ ಅಪಾರ ಶ್ರಮದ ನಂತರ ಉತ್ತರ ಸಿಕ್ಕೇ ಬಿಟ್ಟಿತು. ರಾಜಕಾರಣಿಗಳ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಬರೀ ಆಶ್ವಾಸನೆಗಳನ್ನು ಕೊಟ್ಟಿರೋ ಹುಶಾರ್! ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಮ್ಮ ತಲೆಗಳನ್ನು ಹಾರಿಸಿಯೇವು ಎಂದು ಬೀಗುತ್ತಿರುವುದರ ಹಿಂದಿನ ನೈತಿಕ ಶಕ್ತಿ ದೊರೆತಿರುವುದು ಇವರು ತಮ್ಮ ಆಶ್ವಾಸನೆಯಾದ ‘ಉತ್ತಮ ಸಮಾಜಕ್ಕಾಗಿ ಟಿವಿ ೯’ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿರುವುದೇ ಆಗಿದೆ.

ಸುದ್ದಿ ಎಂದರೆ ಅವರಿವರಿಂದ ಕೇಳಿದ್ದು, ರಾತ್ರಿ ಕಾದು ಮನೋರಂಜನೆಯ ಕಾಂಟ್ರಾಕ್ಟ್ ತೆಗೆದುಕೊಂಡ ಚಾನಲ್ಲುಗಳಲ್ಲಿ ಪ್ರಸಾರವಾಗುವ ಸುದ್ಧಿಯನ್ನು ನೋಡಿ ತಿಳಿಯುವುದು, ರಾತ್ರಿ ನಿರಾಳವಾಗಿ ನಿದ್ದೆ ಮಾಡಿ ಎದ್ದು ಬೆಳಿಗ್ಗೆ ಪೇಪರ್ ಓದುವುದು ಎಂದು ತಿಳಿದಿದ್ದ ಸಾಮಾನ್ಯ ಜನೆತೆಗೆ ಸುದ್ಧಿಯ ಬಗ್ಗೆ ಅರಿವನ್ನು ಮೂಡಿಸಿದ ಆ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಈ ಚಾನಲ್ಲು ತೆಗೆದುಕೊಂಡ ಶ್ರಮವನ್ನು ಇಲ್ಲಿ ನೆನೆಯಲೇ ಬೇಕು. ‘ಗಂಡನಿಗೆ ಹೆಂಡತಿಯ ಮೇಲೆ ಸಂಶಯ… ಕೊಲೆ’, ‘ಕರ್ನಾಟಕದವರು ಕಚಡಾಗಳು: ಮಾನ್ಯ ಮಂತ್ರಿ’, ‘ತಾಕತ್ತಿದ್ದರೆ ಹೀಗೆ ಮಾಡಿ: ಅನಾಮಿಕ’ ಎಂಬಂಥ ಫ್ಲಾಶ್, ಬ್ರೇಕಿಂಗ್ ಸುದ್ದಿಗಳನ್ನು ಅಪಾರ ಆಸಕ್ತಿಯಿಂದ ಜನರು ನೋಡಲು ಶುರುಮಾಡಿರುವುದು ಉತ್ತಮ ಸಮಾಜ ಕಟ್ಟುವ ಕೆಲಸದ ಮೊದಲ ಹಂತ. ಅದನ್ನು ಟಿವಿ ೯ ಯಶಸ್ವಿಯಾಗಿ ನಿರ್ವಹಿಸಿದೆ.

ಹಾಲಿವುಡ್ಡು, ಬಾಲಿವುಡ್ಡು, ಸ್ಯಾಂಡಲ್‌ವುಡ್ಡು, ಕಾಲಿವುಡ್ಡು ಎಂದು ಏನೇನೋ ಹೊಸ ಪದಗಳನ್ನು ಮೇಲಿಂದ ಮೇಲೆ ಹೇಳುತ್ತಾ, ಬಿಡುಗಡೆಯಾಗುವ(ಎಲ್ಲಿಂದ?) ಸಿನೆಮಾದ ನಾಯಕರನ್ನು, ಹಣ ಕೊಟ್ಟ ನಿರ್ಮಾಪಕರನ್ನು ಕರೆಸಿಕೊಂಡು ಹರಟೆ ಹೊಡೆದು ನಾಲ್ಕೈದು ಹಾಡುಗಳನ್ನು ಹಾಕಿ, ಅಡ್ವರ್ಟೈಸ್‌ಮೆಂಟಿನ ನಡುವೆ ಸಮಯ ಮಾಡಿಕೊಂಡು ಚಿತ್ರದ ದೃಶ್ಯಗಳನ್ನು ತೋರಿಸಿ ಜನರನ್ನು ರಂಜಿಸುತ್ತಾ ಜನರು ವಾಸ್ತವದ ಕಷ್ಟನಷ್ಟಗಳು, ಬೆಳೆದ ಬೆಲೆಗೆ ಬೆಲೆಯಿಲ್ಲದ ಕಂಗಾಲಾದ ರೈತ ತನ್ನ ಬವಣೆಯನ್ನು, ಹೋರಾಟದ ಯೋಜನೆಯನ್ನೆಲ್ಲಾ ಮರೆತು ಬಣ್ಣದ ಲೋಕದಲ್ಲಿ ವಿಹರಿಸುತ್ತಾ ಪಲಾಯನವಾದಿಯ ಶ್ರೇಷ್ಠ ಸ್ಥಾನವನ್ನೇರಲು ಟಿವಿ ೯ ಕೈಲಾದಷ್ಟು ನೆರವು ನೀಡುತ್ತಿರುವುದು ಅದರ ಎರಡನೆಯ ಹಂತದ ಸಾಧನೆಯ ಫಲ.

ವರ್ಷಾನುಗಟ್ಟಲೆ ಮುಂದಾಳುಗಳ ಗರಡಿಯಲ್ಲಿ ಪಳಗಿ, ಸಿದ್ಧಾಂತ-ಪ್ರತಿ ಸಿದ್ಧಾಂತಗಳನ್ನು ಅರೆದುಕುಡಿದು, ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಹತ್ತಿರ ನೇರವಾಗಿ ಹೋಗಿ ಬೆರೆತು ಅವರ ಸಮಸ್ಯೆಯ ಮೂಲಗಳನ್ನು ಅರಿತು, ಆಳವಾದ ಅಧ್ಯಯನವನ್ನು ಮಾಡಿ, ಬೇರಿನ ಮಟ್ಟದಿಂದ ಸಂಘಟನೆಯನ್ನು ಮಾಡುತ್ತಾ ಬೆಳೆದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ, ಚಳುವಳಿಗಳನ್ನು ಆಯೋಜಿಸುವ ನಾಯಕರು, ಮುತ್ಸದ್ಧಿಗಳಿಂದಾಗಿ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ತುಂಬಾ ದೀರ್ಘಕಾಲವನ್ನು ಅಪೇಕ್ಷಿಸುತ್ತದೆ ಎಂಬುದನ್ನು ತಮ್ಮ ‘ಆಳ’ವಾದ ಅಧ್ಯಯನದಿಂದ ಕಂಡುಕೊಂಡ ಟಿವಿ ೯ರ ನೇತಾರರು ದಿಢೀರ್ ಚಳುವಳಿಗಾರರನ್ನು ಪ್ರೋತ್ಸಾಹಿಸುವ ಕ್ರಾಂತಿಕಾರಕ ಯೋಜನೆಯನ್ನು ಹಮ್ಮಿಕೊಂಡರು. ಫಾಸ್ಟ್ ಫುಡ್, ಫಾಸ್ಟ್ ಲೈಫ್ ಸ್ಟೈಲ್ ಅಲ್ಲದೆ ಕ್ರಿಕೆಟ್ಟಿನಲ್ಲೂ ಫಾಸ್ಟಾದ ಟಿ೨೦ ಬಂದಿರುವಾಗ ಈ ಚಳುವಳಿ, ಪ್ರತಿಭಟನೆಗಳ್ಯಾಕೆ ಗಂಭೀರವಾಗಿರಬೇಕು ಎಂದು ಯೋಚಿಸಿ ಇವರು ನಾಡಿನಾದ್ಯಂತ ಹುಟ್ಟಿಕೊಂಡ ಅಸಂಖ್ಯ ವೇದಿಕೆ, ಸೇನೆ, ಪಡೆ, ದಳಗಳಿಗೆ ವಿಶೇಷ ಆದ್ಯತೆಯನ್ನು ನೀಡಿತು. ಅದರಲ್ಲೂ ಪ್ರತಿಭಟನೆಯೆಂಬುದು ಕೇವಲ ಬಾಯಿ ಮಾತಾಗಬಾರದು ‘ಕಾಯಾ’ ವಾಚಾ ಮನಸಾ ನಡೆಯಬೇಕು. ಹಾಗಾಗಿ ಸುಮ್ಮನೆ ಒಂದೆಡೆ ಕುಳಿತು ಪ್ರತಿಭಟನೆಯನ್ನು ದಾಖಲಿಸುವುದು, ಯಾರದೋ ಸಮಸ್ಯೆಗಾಗಿ ತಾವು ಉಪವಾಸ ಕುಳಿತುಕೊಳ್ಳುವುದು, ಸತ್ಯಕ್ಕಾಗಿ ಆಗ್ರಹಿಸುವುದು ಎಲ್ಲವೂ ‘ಅವೈಜ್ಞಾನಿಕ’ ಹಾಗೂ ‘ಅಪ್ರಾಯೋಗಿಕ’ ಎಂಬುದನ್ನು ಕಂಡುಕೊಂಡ ಇವರು ಮೇಜು, ಕುರ್ಚಿ, ಕಂಪ್ಯೂಟರುಗಳನ್ನು ಪುಡಿಪುಡಿ ಮಾಡುವುದನ್ನೂ, ಕಲ್ಲೆಸೆದು ಅನ್ಯಾಯ ಮಾಡುವವರ ಕೈ, ಕಾಲು, ಕಣ್ಣುಗಳಿಗಾಗಿ ‘ಆಗ್ರಹ’ ಮಾಡುವುದನ್ನು ಬೆಂಬಲಿಸಿ ಆ ‘ಹೋರಾಟ’ಗಳಿಗೆ ಪೂರ್ಣ ಪ್ರಮಾಣದ ಕವರೇಜ್ ಕೊಟ್ಟು ಉತ್ತಮ ಸಮಾಜಕ್ಕಾಗಿ ಈ ವಾಹಿನಿ ನಡೆಸುತ್ತಿರುವ ಪ್ರಯತ್ನ ಗಮನ ಸೆಳೆದಿದೆ.

ನ್ಯಾಯ, ನೀತಿಗಾಗಿ, ಅಪರಾಧ-ಶಿಕ್ಷೆ ತೀರ್ಮಾನಕ್ಕಾಗಿ ಪೋಲೀಸು, ಕೋರ್ಟುಗಳನ್ನು ನಂಬಿಕೊಂಡು ವರ್ಷಗಳ ಕಾಲ ಅಲೆದಾಡುವುದರಿಂದ ಸಮಾಜ ಕಷ್ಟ ಅನುಭವಿಸುತ್ತಿದೆ ಎಂಬುದನ್ನು ಗಮನಿಸಿದ ಟಿವಿ ಒಂಭತ್ತು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದೆ. ಮನೆಯಲ್ಲಿ ಸಿಕ್ಕ ಕಳ್ಳನನ್ನು, ವರದಕ್ಷಿಣೆಗಾಗಿ ಪೀಡಿಸಿದ ಗಂಡನ ಮನೆಯವರನ್ನು, ವಂಚನೆ ಮಾಡಿದ ಲೇವಾದೇವಿಗಾರನನ್ನು, ಕಾಮುಕ ಶಿಕ್ಷಕನನ್ನು ಜನರೇ ಬೀದಿಗೆಳೆದು ಹಿಗ್ಗಾಮುಗ್ಗಾ ಬಾರಿಸುವ, ತಾವಾಗಿ ಶಿಕ್ಷೆಯನ್ನು ತೀರ್ಮಾನಿಸುವ ಹೊಸ ಪದ್ಧತಿಯನ್ನು ಅದು ಬೆಂಬಲಿಸುತ್ತಿದೆ. ಇದರಿಂದಾಗಿ ಜನರಿಗೆ ‘ತ್ವರಿತ’ಗತಿಯಲ್ಲಿ ನ್ಯಾಯ ಸಿಕ್ಕುವುದಲ್ಲದೆ ಆರೋಪಿಗೂ ತಕ್ಕ ಶಿಕ್ಷೆ ಸಿಕ್ಕುತ್ತದೆ ಎಂಬುದು ಇವರ ವಿಚಾರ. ಹೀಗಾಗಿ ಎಲ್ಲೋ ಒಂದು ಕಡೆ ಒಬ್ಬನು ವಂಚನೆ ಮಾಡುತ್ತಿದ್ದಾನೆ ಎಂದರೆ ಜನರನ್ನು ಈ ಬಗೆಯ ಹೋರಾಟಕ್ಕೆ ಸಿದ್ಧ ಮಾಡುವಂತೆ, ‘ಇವರಿಗೇನು ಮಾಡಬೇಕು? ಜನರೇ ತೀರ್ಮಾನಿಸಬೇಕು’ ಎಂದು ಪ್ರಚೋದಿಸಿ ಅವರು ವಂಚಕನಿಗೆ ತದಕುವುದನ್ನು ಲೈವ್ ಕವರೇಜ್ ಮಾಡಿ ‘ಜನರ ತೀರ್ಮಾನ’ವನ್ನು ತೋರಿಸಿ ಕೃತಾರ್ತರಾಗುತ್ತಿದ್ದಾರೆ. ಇದೂ ಸಹ ಉತ್ತಮ ಸಮಾಜಕ್ಕಾಗಿ ಟಿವಿ ೯ರ ಕೊಡುಗೆ.

ಆತ್ಮಕಥೆಯೊಂದು ಪ್ರಕಟವಾಗಿ ಅದನ್ನು ಓದುವ ಸಮಯವಿದ್ದವರು ಓದಿ ಅದರಲ್ಲಿನ ಆಕ್ಷೇಪಾರ್ಹ ಸಂಗತಿಗಳನ್ನು ಚರ್ಚಿಸಿ ಅವುಗಳ ವಿರುದ್ಧ ಮಾತನಾಡುವ, ಉದ್ದೇಶ ಪೂರಿತವಾಗಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹಾಕುವ ಕೆಲಸಗಳು ತುಂಬಾ ಸಮಯ ತಿನ್ನುತ್ತವೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ ಎಂಬ ಸಂಗತಿಯನ್ನು ಸೂಕ್ಷವಾಗಿ ಅವಲೋಕಿಸಿದ ಈ ವಾಹಿನಿ ಆತ್ಮಕಥೆಯೊಂದು ಬಿಡುಗಡೆಯಾಗುವ ಮೊದಲೇ ಅದರಲ್ಲೇನಿದೆ ಎಂಬುದನ್ನು ದಿನವಿಡೀ ಪ್ರಸಾರ ಮಾಡಿ, ಆ ಪುಸ್ತಕವನ್ನು ನೋಡಿಯೇ ಇರದ, ಒಂದೇ ಒಂದು ಪುಟವನ್ನೂ ಓದದವರೆಲ್ಲಾ ಕೈಲಿ ಪ್ರತಿಭಟನೆಯ ‘ಅಸ್ತ್ರ’ಗಳನ್ನು ಹಿಡಿದುಕೊಂಡು ಬಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗುವಲ್ಲಿ ಸಹಕರಿಸಿದ ವಾಹಿನಿ ನಿಜಕ್ಕೂ ಉತ್ತಮ ಸಮಾಜ ಕಟ್ಟುವಲ್ಲಿ ಅಪಾರ ಶ್ರಮವಹಿಸುತ್ತಿದೆ.

ಇಷ್ಟು ಸತ್ಯಗಳನ್ನು ಪತ್ತೆ ಮಾಡುವಷ್ಟರಲ್ಲಿ ಸಾಮ್ರಾಟರೂ, ಅವರ ಪತ್ತೇದಾರಿಕೆಯ ಚೇಲ ಕುಚೇಲನೂ ಸುಸ್ತು ಹೊಡೆದು ಹೋದರು. ಆದರೂ ಸುದ್ದಿಯ ಹೆಸರಿನಲ್ಲಿ ಗಲ್ಲಿ ಗಾಸಿಪ್, ‘ಹೀಗೂ, ಈಗೂ ಉಂಟೆ’, ರಸ್ತೆ ಬದಿಯ ಕ್ರಿಕೆಟ್ ಅಭಿಮಾನಿಗಳ ಆಟದ ವಿಶ್ಲೇಷಣೆಗಳು ಮುಂತಾದ ಸಾಧನೆಗಳ ಬಗ್ಗೆ ಹಾಗೂ ಅವು ಉತ್ತಮ ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆಗಳ ಕುರಿತು ಇನ್ನೊಮ್ಮೆ ಪತ್ತೆದಾರಿಕೆ ಮಾಡಬೇಕೆಂದು ತೀರ್ಮಾನಿಸಿದರು.

ಹುಡುಗರ ಸಾಧನೆಗೆ ಹುಡುಗಿಯರು ಕಾರಣ!

26 ಏಪ್ರಿಲ್

(ನಗಾರಿ ಸಂ-ಚೋದನಾ ಬ್ಯೂರೋ)

ಹುಡುಗರು ಹುಡುಗಿಯರು ಒಟ್ಟಾಗಿ ಕಲಿಯುವಂತಹ ಶಾಲೆಗಳಲ್ಲಿ ಹುಡುಗರ ವರ್ತನೆ ಹೆಚ್ಚು ಸಭ್ಯವಾಗಿರುತ್ತದೆ ಹಾಗೂ ಹುಡುಗರು ಚೆನ್ನಾಗಿ ಓದುತ್ತಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು.

ಹುಡುಗಿಯರೆದುರು ಹುಡುಗರು ಸಭ್ಯವಾಗಿ ವರ್ತಿಸುತ್ತಾರೆ. ಹುಡುಗಿಯರ ಮೆಚ್ಚುಗಾಗಿ ಅವರು ಚೆನ್ನಾಗಿ ಓದುತ್ತಾರೆ. ಹುಡುಗಿಯರು ಹುಡುಗರನ್ನು ‘ತಣ್ಣಗೆ’ ಮಾಡುತ್ತಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹುಡುಗ ಹುಡುಗಿಯರು ಒಟ್ಟಾಗಿ ಕಲಿಯುವುದರಿಂದ ಅವರ ನಡುವೆ ಹೆಚ್ಚಿನ ಹೊಂದಾಣಿಕೆ ಸಾಧ್ಯವಾಗುತ್ತದೆ ಹೆಚ್ಚು ಪ್ರಬುದ್ಧತೆ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ತರಗತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದಷ್ಟೂ ಹುಡುಗರು ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಂಕಗಳಿಸುತ್ತಾರೆ ಎಂದು ಹೇಳಿದ್ದಾರೆ.

ಈ ಸಂಶೋಧನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದ ನಾಡಿನ ಸಮಸ್ತ ಹುಡುಗರು ಈ ಸಂಶೋಧನೆಯನ್ನು ಸಾದ್ಯಂತವಾಗಿ ಪರಿಶೀಲಿಸಿ ಶೀಘ್ರವೇ ಅದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಈ ಸಂಶೋಧನೆ ನಡೆದಿರುವುದು ಲಂಡನ್ನಿನಲ್ಲಾದರೂ ಅದನ್ನು ನಮ್ಮ ನಾಡಿನ ಹುಡುಗರು ಒಕ್ಕೊರಲಿನಿಂದ ಸ್ವಾಗತಿಸುವುದರ ಹಿಂದಿನ ಮರ್ಮ ಹಾಗೂ ಇದರಿಂದ ಹೇಗೆ ಹುಡುಗರ ಅಂಕ ಹೆಚ್ಚಬಹುದು ಎಂಬುದನ್ನು ಸಂ-ಚೋದಿಸಲು ನಗೆ ಸಾಮ್ರಾಟರು ಹೊರಟರು.

ಕಾಲೇಜುಗಳಲ್ಲಿ ಹುಡುಗರಲ್ಲಿ ಹೆಚ್ಚು ಮಂದಿ ಪರೀಕ್ಷೆಯ ಮುಖವನ್ನೇ ನೋಡಲು ಸಾಧ್ಯವಾಗದಿರುವುದಕ್ಕೆ ಅವರ ಅಟೆಂಡೆನ್ಸ್ ಕೊರತೆಯೇ ಬಹು ಮುಖ್ಯ ಕಾರಣವಾಗಿರುತ್ತದೆ. ಹುಡುಗರು ತರಗತಿಯ ಕ್ಲಾಸು ರೂಮು ಹೇಗಿರುತ್ತದೆ ಎಂಬುದನ್ನೇ ನೋಡಿರದಿದ್ದರೆ ಪರೀಕ್ಷೆಯಲ್ಲಿ ಉತ್ತರ ಹೇಗೆ ಬರೆಯಲು ಸಾಧ್ಯ ಎನ್ನುತ್ತಾರೆ ಉಪನ್ಯಾಸಕರು. ಕನಿಷ್ಠ ಪಕ್ಷ ಹುಡುಗರು ತರಗತಿಗಳಿಗೆ ಬಂದು ಕುಳಿತರೆ ತಾವು ಒದರುವ ಅಸಂಖ್ಯ ಪದಗಳಲ್ಲಿ ಒಂದೆರಡಾದರೂ ಸ್ವಪ್ರಯತ್ನದಿಂದ ಹುಡುಗರ ಕಿವಿಗಳನ್ನು ಹೊಕ್ಕು ಅವರ ಮೆದುಳಿನಲ್ಲಿ ದಾಖಲಾಗಬಹುದು ಎಂಬ ದೂರದ ಆಸೆ ಉಪನ್ಯಾಸಕರದು.

ಆದರೆ ಹುಡುಗರೇಕೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂಬುದನ್ನು ಪತ್ತೆ ಹಚ್ಚಲು ಹೊರಟ ಸಾಮ್ರಾಟರಿಗೆ ಅನೇಕ ಕಾರಣಗಳು ಸಿಕ್ಕವು. ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಸಿನೆಮಾ ಥಿಯೇಟರುಗಳು, ಕಾಫಿ ಡೇಗಳು, ಕಾಲೇಜು ಕ್ಯಾಂಟೀನುಗಳು, ಬೇರೆಯ ತರಗತಿಯ ಕ್ಲಾಸ್ ರೂಮುಗಳ ಬಳಿ ಬೀಟ್ ಹಾಕುವುದಕ್ಕೆ ಬಲವಾದ ಕಾರಣವಿದೆ. ತಮ್ಮ ತರಗತಿಯಲ್ಲಿ ಇಲ್ಲದ ಹುಡುಗಿಯರಿಗಾಗಿ ಇವರು ಕ್ಲಾಸ್ ರೂಮ್‌ನಿಂದ ತಪ್ಪಿಸಿಕೊಂಡು ಹೊರಗೆ ಅಲೆಯುವ ಕಷ್ಟವನ್ನು ಪಡಬೇಕಾಗುತ್ತದೆ.

ಆದ್ದರಿಂದ ತರಗತಿಯಲ್ಲಿ ಹುಡುಗಿಯರ ಸಂಖ್ಯೆಯನ್ನು ಹೆಚ್ಚು ಮಾಡುವುದರಿಂದ ಹುಡುಗರು ಅವರಿಗಾಗಿ ಹೊರಗೆ ಅಲೆಯುವ ತಾಪತ್ರಯ ತಪ್ಪುತ್ತದೆ. ಅಲ್ಲದೆ ಹುಡುಗರ ಸಂಖ್ಯೆಗಿಂತ ಹೆಚ್ಚು ಹುಡುಗರು ತರಗತಿಯಲ್ಲಿದ್ದರೆ ಎಲ್ಲರಿಗೂ ಆಯ್ಕೆಯ ಸ್ವಾತಂತ್ರವೂ ಸಿಕ್ಕುತ್ತದೆ. ಇದರಿಂದ ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಹೊರಗೆ ಬೀಟ್ ಹಾಕುವುದು ತಪ್ಪುತ್ತದೆ. ಆಗ ಅವರು ದಿನ ನಿತ್ಯ ತಪ್ಪದೆ, ಸಮಯಕ್ಕೆ ಸರಿಯಾಗಿ ತರಗತಿಗೆ ಬರುತ್ತಾರೆ. ಇದರಿಂದ ಅವರ ಹಾಜರಾತಿಯೂ ಉತ್ತಮವಾಗುತ್ತದೆ. ಅಪರೂಪಕ್ಕೆ ಅವರ ಕಿವಿಯ ರಕ್ಷಣಾ ಕೋಟೆಯನ್ನು ಬೇಧಿಸಿ ಕೆಲವು ಪಾಠಗಳು ಮೆದುಳನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂಬ ಸಂ-ಚೋಧನೆಯನ್ನು ಮಾಡಿ ವರದಿ ತಯಾರಿಸಿದ್ದಾ ಸಾಮ್ರಾಟರು.

ಈ ನಡುನೆ ಲೇಡಿ ಲೆಕ್ಚರರ್ ತೆಗೆದುಕೊಳ್ಳುವ ಸಬ್ಜೆಕ್ಟಿನಲ್ಲಿ ಹುಡುಗರ ಹಾಜರಾತಿ ಅತ್ಯಧಿಕವಾಗಿರುವ ಸತ್ಯಸಂಗತಿಯನ್ನು ಪತ್ತೆ ಹಚ್ಚಿರುವ ಸಾಮ್ರಾಟರ ಚೇಲ ಕುಚೇಲನು ಈ ಸಂಗತಿಯನ್ನೂ ವರದಿಯಲ್ಲಿ ಸೇರಿಸಲು ಸಾಮ್ರಾಟರ ಬೆನ್ನು ಬಿದ್ದಿದ್ದಾನೆ.

ಸೀರಿಯಲ್ ರಕ್ಕಸನ ಸಾವು?!

26 ಏಪ್ರಿಲ್

(ನಗಾರಿ ಮನೋರಂಜನಾ ಬ್ಯೂರೋ)

ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.

ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, “ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು” ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ.

ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ ಪ್ರಚಂಡ ಹುಟ್ಟಿಬಿಟ್ಟಿದ್ದಾನೆ. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!

ನಗಾರಿ ರೆಕಮಂಡೆಶನ್ 6

26 ಏಪ್ರಿಲ್

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

ನಗಾರಿ ಇಷ್ಟು ದಿನ ಅಂತರ್ಜಾಲದ ತಾಣಗಳನ್ನು ರೆಕಮಂಡ್ ಮಾಡುತ್ತಿತ್ತು. ಈ ಬಾರಿ ಕನ್ನಡದ ಒಂದು ಸಿನೆಮಾವನ್ನು ರೆಕಮಂಡ್ ಮಾಡುತ್ತಿದೆ.

ನಗೆ ಸಾಮ್ರಾಟರು ಸಿನೆಮಾ ಬಿಡುಗಡೆಯಾದ ದಿನವೇ ನೋಡಿದ ಮೊದಲ ಸಿನೆಮಾವಿದು. ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾ. ‘ಅರಮನೆ’. ಹೌದು, ಈ ಸಿನೆಮಾದಲ್ಲಿ ನಿಮಗಿಷ್ಟವಾಗುವ ಅನೇಕ ಅಂಶಗಳು ಸಿಕ್ಕಬಹುದು. ಆದರೆ ಸಾಮ್ರಾಟರಿಗೆ ಇಷ್ಟವಾದದ್ದು ಹಾಸ್ಯಕ್ಕೆ ಚಿತ್ರದಲ್ಲಿ ಕೊಟ್ಟಿರುವ ಗೌರವ. ನಾಯಕ ನಟ ನಿಮಗೆ ಹತ್ತಿರವಾಗುವುದು ಆತ ಎಲ್ಲರನ್ನೂ ನಗಿಸುವುದರಿಂದ. ಆತ ಇದ್ದಲ್ಲಿ ಜನರು ಲವಲವಿಕೆಯಿಂದ, ನಗುನಗುತ್ತಾ ಇರುತ್ತಾರೆ ಎಂಬುದೇ ಆತನ ದೊಡ್ಡತನವಾಗುತ್ತದೆ. ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವವರನ್ನು ಜನರು ನಂಬುತ್ತಾರೆ, ಯಾರಲ್ಲೂ ತೆರೆದುಕೊಳ್ಳದವರು ಅಂಥವರಲ್ಲಿ ತಮ್ಮ ಸಮಸ್ತ ವೈಯಕ್ತಿಕ ಬದುಕನ್ನೂ ತೆರೆದುಕೊಳ್ಳುತ್ತಾರೆ.

‘ಅರಮನೆ’ಯ ಒಂದು ಸನ್ನಿವೇಶವನ್ನು ಹೇಳಬೇಕು. ನಾಯಕಿ ಪೊಲೀಸ್ ಕಮಿಶನರ್ ಮಗಳು, ಮೆಡಿಕಲ್ ವಿದ್ಯಾರ್ಥಿ ಬೇರೆ. ನಾಯಕ ಆಕೆಯ ಹುಟ್ಟು ಹಬ್ಬದ ದಿನ ಆಕೆಗೆ ಹೂವಿನ ದೊಡ್ಡ ಸ್ಟ್ಯಾಂಡನ್ನೇ ಕೊಟ್ಟು “ಶ್ರೀಮಂತರು ಹುಟ್ಟುಹಬ್ಬದ ದಿನ ಅನಾಥ ಮಕ್ಕಳಿಗೆ ಊಟ ಹಾಕಿಸ್ತಾರಂತೆ ಹೌದಾ?” ಎನ್ನುತ್ತಾನೆ. ಆಕೆ “ಹೌದು” ಎನ್ನುತ್ತಾಳೆ. ಅದಕ್ಕೀತ, “ಹೇಗಿದ್ರೂ ನಾನೂ ಅನಾಥ, ನಂಗೇ ಊಟ ಕೊಡಿಸಿಬಿಡಿ ಎನ್ನುತ್ತಾನೆ.” ಇಂಥ ಅಪರೂಪದ ಹಾಸ್ಯ ನಿಮಗೆ ಸಿಗುವುದು ಅರಮನೆಯಲ್ಲಿ ಮಾತ್ರ.

(ಕಳೆದ ಸಂಚಿಕೆಯ ನಗಾರಿ ರೆಕಮಂಡೇಶನ್)

ಬ್ಲಾಗ್ ಬೀಟ್ 7

26 ಏಪ್ರಿಲ್

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಸಾಮ್ರಾಟರ ಬೀಟಿನ ಏಟಿಗೆ ಬಲಿಯಾದ ಮಿಕಗಳ್ಯಾವುವು ನೋಡೋಣ ಬನ್ನಿ…

‘ಕೆಂಡ ಸಂಪಿಗೆ’ಯ ಸುದ್ದಿಕ್ಯಾತ

ಕೃತಕ ಪ್ಲಾಸ್ಟಿಕ್ ಹೂವು ಕೇಳಿದ್ದೀರಿ, ಕೃತಕ ಹಣ್ಣು ಕೇಳಿದ್ದೀರಿ, ಕೃತಕ ಮಗು ಕೇಳಿದ್ದೀರಿ, ಕೃತಕ ಹೃದಯವನ್ನೂ ಕೇಳಿದ್ದೀರಿ ಆದರೆ ಕೃತಕ ಲೇಖಕ ಕಾದಂಬರಿ ಬರೆದದ್ದನ್ನು ಕೇಳಿದ್ದೀರಾ? ಇಂಥದ್ದೊಂದು ಸುದ್ದಿಯನ್ನು ಬೀಟಿನಲ್ಲಿ ಹಿಡಿದು ತಂದಿದ್ದಾನೆ ಸುದ್ದಿ ಕ್ಯಾತ. ಕಾಲ್ಪನಿಕ ಲೇಖಕ ಬರೆದ ಕಾಲ್ಪನಿಕ ಕೃತಿಗಳು ಪಡೆದ ಮನ್ನಣೆ, ಕೊನೆಗೆ ಅಸಲು ಲೇಖಕ ಬೆಳಕಿಗೆ ಬಂದು ತೆರಬೇಕಾದ ದಂಡದ ಬಗ್ಗೆ ಇಲ್ಲಿ ಮಾಹಿತಿಯಿದೆ.

ಆದರೆ ಬಾಟಮ್ ಕೆಳಗಿನ ಲೈನರ್‌ನಲ್ಲಿ ಕ್ಯಾತ “ಭೈರಪ್ಪನವರ ಆವರಣ ಕಾದಂಬರಿಯ ನಾಯಕಿ ಲಕ್ಷ್ಮಿ/ರಜಿಯಾ ಬರೆದ ಕಾದಂಬರಿ ಪ್ರಕಾಶನಗೊಂಡರೆ ಅದು ಆವರಣಕ್ಕಿಂತ ಹೆಚ್ಚು ಮಾರಾಟವಾಗುವುದೇ?” ಎನ್ನುವ ಮೂಲಕ ಕ್ಯಾತೆ ತೆಗೆಯುವುದನ್ನು ಮಾತ್ರ ಮರೆಯಲಿಲ್ಲ!

ಪಂಚ್ ಲೈನ್

ಕೋಮುವಾದದ ಸದ್ದಡಗಿಸುವ ಮಾತನ್ನು ಮಾಡುತ್ತಿದ್ದಾರೆ ಎಲ್ಲರೂ. ಆದರೆ ಕೋಮುವಾದವನ್ನು ಅಳಿಸಿ ಮಾನವೀಯತೆಯನ್ನು ಉಳಿಸುವುದು ಎಷ್ಟು ಸುಲಭ ಎಂದು ಪಂಚಿಸಿದ್ದಾರೆ ಗಣೇಶ್.

ಬೊಗಳೆ

ಬೊಗಳೂರು ಚುನಾವಣಾ ಬ್ಯೂರೋ ‘ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ’ಮಾಡಿದೆ. ತನ್ನ ವಿರೋಧಿ ಪತ್ರಿಕೆಯಲ್ಲಿ ಪ್ರಕಟವಾಗಬೇಕಾದ ಜಾಹೀರಾತನ್ನು ಕದ್ದು, ಕೆರೆದು ಪ್ರಕಟಿಸಿದ್ದಾರೆ. ಅವರ ‘ಪ್ರಣಾಳಶಿಶು’ವಿನ ಸ್ಯಾಂಪಲ್ ನೋಡಿ ಇಲ್ಲಿ:

ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.

ಇಂಥ ಪ್ರಣಾಳಶಿಶುವನ್ನು ಕೊಟ್ಟರೆ ಮತದಾರರು ಅನಾಥರನ್ನಾಗಿ ಮಾಡುವುದಿಲ್ಲ ಎಂಬ ನಂಬಿಕೆ ಬರತೊಡಗಿದೆ. ಮರದ ಮೇಲಿನಿಂದ ಆಪಲ್ ಬಿದ್ದು ನ್ಯೂಟನ್ನನಿಗೆ ಗುರುತ್ವಾಕರ್ಷಣೆಯ ಬಗ್ಗೆ ಹೊಳೆದಂತೆ ಮುಂದೊಂದು ದಿನ ನಗೆ ಸಾಮ್ರಾಟರ ತಲೆಯ ಮೇಲೆ ತೆಂಗಿನ ಮರದಿಂದ ತೆಂಗಿನ ಕಾಯಿ ಬಿದ್ದು ಜ್ಞಾನೋದಯವಾಗಿ ಅವರು ಚುನಾವಣೆಯಲ್ಲಿ ನಿಲ್ಲುವ ತೀರ್ಮಾನ ಕೈಗೊಂಡರೆ ಇಂಥ ಭರ್ಜರಿ ‘ಪ್ರಣಾಳಶಿಶು’ಗಳಿಗೆ ಜನ್ಮ ನೀಡಲು ಬೊಗಳೆಯ ಕಿರಿಕಿರಿ ಸಂಪಾದಕನನ್ನು ಎತ್ತಿಹಾಕಿಕೊಂಡು ಬರಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.

ಅಪಾರ

“ಅಳತೆ ಮೀರಿದರೆ ಆಪತ್ತು ಅಂತ ತಿಳಿದು ‘ಮದ್ಯಸಾರ’ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!”

ಎಂದು ಹೇಳಿ ನಮ್ಮಂತಹ ಅಸಂಖ್ಯ ಮದ್ಯಾಭಿಮಾನಿಗಳನ್ನು ಸಾರದಿಂದ ಮಂಚಿಸುವ ತೀರ್ಮಾನ ಮಾಡಿರುವ ಅಪಾರ ‘ಮದ್ಯಸಾರ’ ಪುಸ್ತಕವಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ‘ಕಿಕ್’ ಕೊಟ್ಟಿದ್ದಾರೆ.

ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು ಕಮೆಂಟ್ ಮಾಡಿದ್ದಾಳೆ. ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು:

ಇದೇ ವೇಳೆ ಜನರನ್ನು ತಮ್ಮ ಹಾಸ್ಯ’ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!

(ಕಳೆದ ವಾರದ ಬ್ಲಾಗ್ ಬೀಟ್)

ಚರ್ಚೆ: ನಗುವುದಕ್ಕೂ ನಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಬೇಕಾ?

26 ಏಪ್ರಿಲ್

ನಮ್ಮ ಬದುಕುಗಳು ನಗರ ಕೇಂದ್ರಿತವಾಗುತ್ತಾ ಹೋದಂತೆಲ್ಲಾ ನಾವು ಯಾಂತ್ರಿಕರಾಗುತ್ತಿದ್ದೇವಾ? ಈ ವ್ಯಾಪಾರಿ ಜಗತ್ತಿನ ಅವ್ಯಕ್ತ ಕಾನೂನುಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಿದ್ದೇವೆಯೇ? ನಮ್ಮನ್ನು ನಗಿಸುವುದಕ್ಕೂ ಒಬ್ಬ ಜೋಕರ್‌ನನ್ನು ಅಪಾಯಿಂಟ್ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದೇವಾ? ನಮಗೆ ನಗುವುದಕ್ಕೆ ಸಿನೆಮಾ, ಹಾಸ್ಯ ಲೇಖನ, ಕಾಲೆಳೆಯುವಿಕೆ, ಯಾರದೋ ಮೇಲಿನ ಜೋಕು, ಬೆಳ್ಳಂಬೆಳಗಿನಲ್ಲಿ ಪಾರ್ಕಿನಲ್ಲಿ ಫೀಸು ಪಡೆದು ನಗಿಸುವ ಲಾಫಿಂಗ್ ಕ್ಲಬ್ಬುಗಳು ಕೇವಲ ನೆಪಗಳಾ ಅಥವಾ ಅನಿವಾರ್ಯತೆಗಳಾ?

ನಮ್ಮ ಬದುಕಿನಿಂದ ನಗು ಕಾಣೆಯಾಗುತ್ತಿರುವುದು ಎಲ್ಲಿಂದ? ಮನುಷ್ಯರ ಮುಖವನ್ನೇ ನೋಡಬಯಸದ ನಮಗೆ ನಗುವಿಗೆ ಎಲ್ಲಿ ವ್ಯವಧಾನವಿರುತ್ತದೆ? ಪಕ್ಕದ ಮನೆಯ ಹುಡುಗನೊಂದಿಗೆ, ಎದುರು ಮನೆಯ ಗೃಹಿಣಿಯೊಂದಿಗೆ, ನಮ್ಮದೇ ಮನೆಯ ಮಕ್ಕಳೊಂದಿಗೆ, ಸಂಬಂಧಿಕರೊಂದಿಗೆ ಮುಖ ಕೊಟ್ಟು ಮಾತನಾಡುತ್ತಾ ಹತ್ತಾರು ಬಾರಿ ಮನ ತುಂಬಿ ನಗುವುದಕ್ಕಿಂತ ನಮಗೆ ನಮ್ಮ ಕೋಣೇಯ ಬಾಗಿಲು ಗಿಡಿದುಕೊಂಡು ಕಂಪ್ಯೂಟರಿನಲ್ಲಿ ಮಿಸ್ಟರ್ ಬೀನ್ ಹಾಕಿಕೊಂಡು ಬಿದ್ದು ಬಿದ್ದು ನಗುವುದು ಆಪ್ಯಾಯಮಾನವಾಗುತ್ತಿದೆಯಲ್ಲವಾ? ಯಾಕೆ ಹೀಗೆ?

ಚಾರಿಟಿ, ಭಕ್ತಿ, ಸಮಾಜ ಸೇವೆಗಳೂ ಕಮಾಡಿಟಿಗಳಾಗಿರುವಾಗ, ಅವುಗಳಿಗೆಲ್ಲಾ ಲಾಭ ನಷ್ಟ, ಪಾರಮಾರ್ಥಿಕದ ಅರ್ಥಮೆಟಿಕ್ಕುಗಳು ಸೇರಿಕೊಂಡಿರುವಂತೆ ನಾವು ನಗುವನ್ನೂ ಒಂದು ಕಮಾಡಿಟಿಯಾಗಿ, ನಮ್ಮ ಆರೋಗ್ಯವನ್ನು ಕಾಪಾಡುವ ಮೆಡಿಸಿನ್ ಆಗಿ ಕಾಣಬಯಸುತ್ತೇವಾ? ನಗುವುದಕ್ಕೂ ನಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಬೇಕಾ? ಏನಂತೀರಿ?

(ಕಳೆದ ವಾರದ ಚರ್ಚೆ)

ವಾರದ ವಿವೇಕ 8

19 ಏಪ್ರಿಲ್

………………………………………………………………….

ಹೊಟ್ಟೆಯ ಹಸಿವು ಬಾಳಿನ

ಯಾವ ದುಃಖಕ್ಕೂ

ಸೊಪ್ಪು ಹಾಕುವುದಿಲ್ಲ.

– ಬೀಚಿ

………………………………………………………………….

(ಕಳೆದ ವಾರದ ವಾರದ ವಿವೇಕ)

ಏಪ್ರಿಲ್ ಒಂದರ ವ್ಯಕ್ತಿ: ನಾಡಿನ ಮತದಾರ!

1 ಏಪ್ರಿಲ್


ಈ ಹಿಂದೆ ಯಾರೂ ಮಾಡಿರದಿದ್ದ ಪ್ರಯತ್ನಕ್ಕೆ ‘ನಗೆ ನಗಾರಿ ಡಾಟ್ ಕಾಮ್’ ಕೇವಲ ಕೈಯನ್ನು ಮಾತ್ರ ಹಾಕಿರುವ ವಿಚಾರವನ್ನು ಹಿಂದೆ ತಿಳಿಸಿದ್ದೆವು. ಪ್ರತಿಷ್ಠಿತ ಸಂಸ್ಥೆಗಳು ಪೀಟಿಕಾ ವರ್ಷದ ವ್ಯಕ್ತಿ, ಸನ್ ಫಾಸ್ಟ್ ಉತ್ತಮ ನಟ, ಸಾಯಿ ನೀರಾ ಅತ್ಯುತ್ತಮ ನಿರ್ದೇಶಕ ಹೀಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಕೊಡುತ್ತಾ ಪ್ರಶಸ್ತಿಗಳ ಹೆಸರಿನ ಹಿಂದೆ ತಮ್ಮ ಹೆಸರನ್ನು ಹೆಸರನ್ನು ಸೇರಿಸಿಕೊಂಡು ತಮಗೂ ಪ್ರಶಸ್ತಿಯನ್ನು ಕೊಟ್ಟುಕೊಂಡು ಬೆನ್ನು ಚಪ್ಪರಿಸಿಕೊಳ್ಳುತ್ತಾ ಇರಬೇಕಾದರೆ ನಗೆ ನಗಾರಿ ಡಾಟ್ ಕಾಮ್ ತೀರಾ ಅಸಾಧ್ಯ ಎಂಬುದಕ್ಕೆ ಮೂರು ಕಿ.ಮೀ ಹತ್ತಿರವಿರುವಂತಹ ಕೆಲಸಕ್ಕೆ ಕೈ ಹಾಕಿತ್ತು.

ಏಪ್ರಿಲ್ ಒಂದರ ವ್ಯಕ್ತಿಯನ್ನು ಆಯ್ಕೆ ಮಾಡುವ ಗುರಿಯನ್ನು ನಗೆ ಸಾಮ್ರಾಟರು ತಮ್ಮ ಮುಂದೆ ಹೊಂದಿದ್ದರು. ಅದಕ್ಕಾಗಿ ಹಗಲು ರಾತ್ರಿಯೆನ್ನದೆ, ಮನೆ, ಬೀದಿಯೆನ್ನದೆ, ಪಬ್ಬು-ಬಾರು ಎನ್ನದೆ, ಭೂಮಿ-ಅಂತರಿಕ್ಷವೆನ್ನದೆ ಎಲ್ಲೆಡೆ ತಿರುಗಾಡಿ, ತಿರುಗಾಡಿಸಿ ಕಡೆಗೂ ಏಪ್ರಿಲ್ ಒಂದರ ವ್ಯಕ್ತಿಯ ಬಹುಮಾನಕ್ಕೆ ಆಯ್ಕೆಯನ್ನು ಮಾಡಿದ್ದಾರೆ. ನಗೆ ನಗಾರಿ ಕೊಡ ಮಾಡುವ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನವಾಗಿರುವುದು ‘ಈ ನಾಡಿನ ಪ್ರಜ್ಞಾಹೀನ ಮತದಾರ’!

ನಗಾರಿಯು ಇಂಥದ್ದೊಂದು ಪ್ರಶಸ್ತಿಯನ್ನು ಕೊಡ ಮಾಡುತ್ತಿದೆ ಎಂಬ ವಾರ್ತೆಯ ವಾಸನೆಯನ್ನು ಹಿಡಿದು ಅನೇಕ ಬುದ್ಧಿವಂತರು ಸಂದಿ ಮೂಲೆಗಳನ್ನು ಹುಡುಕಿಕೊಂಡು ಹೋಗಿ ತಲೆ ಮರೆಸಿಕೊಂಡಿದ್ದರು. ನಗೆ ನಗಾರಿಯ ಕಣ್ಣಿಗೆ, ನಗೆ ಸಾಮ್ರಾಟರ ಪೆನ್ನಿಗೆ ಬೀಳಬಾರದು ಎಂದು ಪಾತಾಳವನ್ನೂ ಸಹ ಪ್ರವೇಶಿಸಿ ಅಡಗಿ ಕೂರಲು ತಯಾರಿ ನಡೆಸಿದ್ದರು. ಮರ್ಯಾದಸ್ಥರು, ಸಭ್ಯರು, ಪ್ರಜ್ಞಾವಂತರು ಎಂಬ ಬೋರ್ಡುಗಳನ್ನು ಕುತ್ತಿಗೆಗೆ ನೇತು ಹಾಕಿಕೊಂಡ ಬಹುಸಂಖ್ಯಾತರು ತಮ್ಮನ್ನು ನಗಾರಿಯ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಲು ಸರಕಾರದ ನೆರವನ್ನೂ ಬೇಡಿದ್ದು ವರದಿಯಾಗಿದೆ. ಇಂಥ ಬುದ್ಧಿವಂತರು, ಸಭ್ಯಸ್ಥರು ಒಂದೆಡೆಯಾದರೆ ನೀವು ಕೊಡಮಾಡುವ ಯಾವುದೇ ಬಹುಮಾನವನ್ನಾಗಲೀ ನನಗೇ ಕೊಡಿ ಎಂದು ಮೈಮೇಲೆ ಏರಿಬರುವಂತಹ ಮೂರ್ಖರು ಮತ್ತೊಂದೆಡೆ. ಕೆಲವರು ನಗೆ ಸಾಮ್ರಾಟರಿಗೆ ಬ್ಲಾಕ್ ಮೇಲ್, ವೈಟ್ ಮೇಲ್, ಆಂಥ್ರಾಕ್ಸ್ ಮೇಲ್ ಕಳುಹಿಸುವುದರ ಮೂಲಕ ತಮ್ಮನ್ನು ಆಯ್ಕೆ ಮಾಡಲೇ ಬೇಕೆಂದು ಒತ್ತಾಯ ಹೇರಿದ್ದರು. ಆದರೆ ಪತ್ರಿಕೋದ್ಯಮದ ಮೊದಲ ಆದರ್ಶವಾದ, ಹಾಗೂ ಇತ್ತೀಚಿಗೆ ಎಲ್ಲಾ ಪತ್ರಕರ್ತರ ಕಟ್ಟ ಕಡೆಯ ಆದ್ಯತೆಯಾಗಿರುವ ‘ವಸ್ತುನಿಷ್ಠತೆ, ನಿಷ್ಠುರತೆ’ಯನ್ನು ತುಂಬಾ ಸ್ಟಿಕ್ಕಾಗಿ ಪಾಲಿಸುವವರಾದ್ದರಿಂದ ನಗೆ ಸಾಮ್ರಾಟರು ಇಂತಹ ಬೆದರಿಕೆಗಳಿಗೆ ಒಣ ಸೊಪ್ಪನ್ನೂ ಹಾಕಲಿಲ್ಲ.

ಆಯ್ಕೆಯ ಪ್ರಕ್ರಿಯೆಯನ್ನು ಶುರುಮಾಡಿದಾಗ ಹಲವು ಹೆಸರುಗಳು ನಗಾರಿಯ ಕಛೇರಿಯನ್ನು ತಲುಪಿಕೊಂಡಿದ್ದವು. ಅವುಗಳಲ್ಲಿ ಬಹು ಹೆಚ್ಚಿನ ಜನಮನ್ನಣೆಯನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದದ್ದು ಶ್ರೀಮಾನ್ ಸರ್ದಾರ್ಜಿಯವರ ಹೆಸರು. ಆದರೆ ಜಗತ್ತಿನಾದ್ಯಂತ ಜನಾಂಗೀಯ ನಿಂದನೆಯೆಂಬುದು ತೀವ್ರವಾದ ವಿವಾದ, ಕೋಲಾಹಲ, ಹಾಲಾಹಲವನ್ನು ಎಬ್ಬಿಸುತ್ತಿರುವುದರಿಂದ, ಹಾಗೂ ಹಾಗೆ ಏಳುವ ವಿವಾದದ ಅಲೆಯಲ್ಲಿ ತಮ್ಮ ನಾವೆಯನ್ನು ತೇಲಿಸಿಬಿಡುವ ಅವಕಾಶವಾದಿಗಳು ಎಲ್ಲೆಡೆಯೂ ಕಾಣುತ್ತಿರುವರಾದ್ದರಿಂದ ಸಾಮ್ರಾಟರು ಹೀಗೆ ವಿವಾದವೆಬ್ಬಿಸಿ ಅದರ ಕಾವಿನಲ್ಲಿ ಬೇಳೆ ಬೇಯಿಸಿಕೊಳ್ಳುವುದು ಮಹಾ ಪಾತಕ ಎಂಬುದನ್ನು ಯೋಚಿಸಿ ಮೊದಲ ಸುತ್ತಿನಲ್ಲೇ ಸರ್ದಾರ್ಜಿಯವರನ್ನು ಗೌರವ ಪೂರ್ವಕವಾಗಿ ನಿರ್ಗಮಿಸಿಕೊಳ್ಳಲು ಕೋರಲಾಯ್ತು.

ನಂತರ ಸ್ಥಾನದಲ್ಲಿ ವಿರಾಜಮಾನರಾಗಿದ್ದು ಕನ್ನಡ ನಾಡಿನ ಹೆಮ್ಮೆಯ ‘ಮಾಜಿ’ ಮುಖ್ಯಮಂತ್ರಿ ಶ್ರೀಮಾನ್ ಚೆಡ್ಯೂರಪ್ಪನವರು. ಕುರ್ಚಿ ಯಾವುದೇ ಇರಲಿ ಮೊದಲು ಕರ್ಚೀಫು ಒಗೆದುಬಿಡುವ ಖಯಾಲಿಗೆ ಬಿದ್ದಿರುವ ಚೆಡ್ಡ್ಯೂರಪ್ಪನವರಿಗೆ ನಗಾರಿ ಏಪ್ರಿಲ್ ಒಂದರ ವ್ಯಕ್ತಿ ಎಂದು ಒಂದು ಕುರ್ಚಿಯನ್ನು ಇಟ್ಟಿದೆ ಎಂಬುದು ತಿಳಿಯುತ್ತಿದ್ದಂತೆಯೇ ಶಿಕಾರಿಪುರದಿಂದ ಓಡೋಡಿ ಬಂದು ಕರ್ಚೀಫು ಒಗೆದರು. ಅನಂತರ ಅವರ ಆಪ್ತರು, ಸಲಹೆಗಾರರೂ ಆದ ಕೋಭಾ ಶರಂದ್ಲಾಜೆಯವರು ಈ ಕುರ್ಚಿಯಿಂದ ತಮ್ಮ ಅಸಲು ಬಣ್ಣ ಬಯಲಾಗುತ್ತದೆಯೆಂದೂ, ಇದರಿಂದ ವಿರೋಧಿ ಪಕ್ಷಗಳಿಗೆ ವಿಪರೀತವಾದ ಮೈಲೇಜ್ ಸಿಕ್ಕುತ್ತದೆಯೆಂದೂ ತಿಳಿಯಪಡಿಸಿದ್ದರಿಂದ ಅವರು ತಮ್ಮ ಸಫಾರಿ ಸಮೇತ ಓಡಿ ಹೋದರು. ಆದರೆ, ಅವರ ಪ್ರತಿಭೆಯ, ಸಾಧನೆಯ, ಅರ್ಹತೆಯ ಅರಿವಿದ್ದ ಸಾಮ್ರಾಟರು ತಮ್ಮ ಆಫೀಸಿನ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿಸಿ ಅವರನ್ನು ಓಡಿಹೋಗದಂತೆ ಮಾಡಿದರು. ಈ ಹಿಂದೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಚ್ಚಿನ ಬಾರಿ ಮೂರ್ಖನಾದವನು ಎಂಬ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿ ಸರ್ದಾರ್ಜಿಯನ್ನು ಹಿಂದಿಕ್ಕಿದ್ದ ಸಾಧನೆ ಚೆಡ್ಯೂರಪ್ಪನವರ ಸಫಾರಿ ಜೇಬಿನಲ್ಲಿರುವುದನ್ನು ನೆನೆಸಿಕೊಳ್ಳಬಹುದು.

ಅನಿರೀಕ್ಷಿತವೆಂಬಂತೆ ನಾವು ನಿರೀಕ್ಷಿಸಿರದಿದ್ದ (ಅದಕ್ಕೆ ಅಲ್ಲವೇ ಅನಿರೀಕ್ಷಿತ ಎನ್ನುವುದು!) ಹೆಸರೊಂದು ತೂರಿಕೊಂಡು ಬಂದಿದೆ. ಜಗತ್ತಿನ ಅತ್ಯಂತ ಶ್ರೇಷ್ಠ ಮೂರ್ಖ ಎಂದು ಶಿಫಾರಸ್ಸುಗೊಂಡಿರುವವ ‘ಆ ದೇವರು’! ಇಡೀ ಜಗತ್ತನ್ನು ಸೃಷ್ಟಿ ಮಾಡಿದ ದೇವರೇ ನಗೆ ನಗಾರಿಯ ಕಛೇರಿಯ ಎದುರು ಅರ್ಜಿ ಹಾಕಿಕೊಂಡು ನಿಂತಿರುವುದನ್ನು ಕಂಡು ನಿಜಕ್ಕೂ ಸಾಮ್ರಾಟರಿಗೆ ಪಿಚ್ಚೆನಿಸಿತು. ಆತನನ್ನು ಕರೆದು ಒಂದು ಚೇರಿನಲ್ಲಿ ಕೂರಿಸಿ ಕುಡಿಯಲು ನೀರು ಕೊಟ್ಟು, ‘ಭಗವಂತಾ, ನೀನೇಕಪ್ಪಾ ಇಲ್ಲಿಗೆ ಬಂದೆ?’ ಎಂದು ಕೇಳಿದರು. ಅದಕ್ಕೆ ಭಗವಂತನು, ‘ಏನು ಮಾಡಲಯ್ಯಾ? ಈ ನಿಮ್ಮ ಮನುಷ್ಯ ಸಂತತಿಯ ಹಾವಳಿಯನ್ನು ಕಂಡು ಇಡೀ ಜಗತ್ತಿನಲ್ಲಿ ನನಗಿಂಥಾ ಹೆಚ್ಚಿನ ಮೂರ್ಖ ಇಲ್ಲ ಅನ್ನಿಸಿತು. ಇಡೀ ಸೃಷ್ಟಿಯಲ್ಲಿರುವ ಸೌಂದರ್ಯವೇ ನಾನು ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದ್ದರೂ ಈ ಮನುಷ್ಯರು ನನ್ನ ಹೆಸರನ್ನು ಹಿಡಿದು ಜಗ್ಗಾಡಿ, ನನಗೆ ಇಲ್ಲದ ಗುಣ ಆರೋಪಿಸಿ, ದಕ್ಷಿಣೆ, ಪ್ರಸಾದ, ಹರಕೆಗಳ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಎಷ್ಟು ಸಲ ಇವರು , ‘ದೇವರೇ ನನ್ನನ್ನ ಇಲ್ಲಿಂದ ಪಾರು ಮಾಡು ಆಮೇಲೆ ನಾನು ಯಾವ ಕೆಟ್ಟ ಕೆಲಸವನ್ನೂ ಮಾಡುವುದಿಲ್ಲ.’ ಎನ್ನುತ್ತಾರೆ. ಹಣ ಕದ್ದು ಸಿಕ್ಕಿಬಿದ್ದ ಹುಡುಗ ಒಂದು ಸಲ ತನ್ನನ್ನಿಲ್ಲಿಂದ ಪಾರು ಮಾಡು ಇನ್ನೆಂದೂ ಹಣ ಕದಿಯುವುದಿಲ್ಲ ಎಂದು ನನಗೆ ಅಪ್ಲಿಕೇಶನ್ ಹಾಕುತ್ತಾನೆ. ನಾನು ಆತನನ್ನು ನಂಬಿ ಅವನನ್ನು ಪಾರು ಮಾಡಿದರೆ ಆತ ಪಕ್ಕದ ಬೀದಿಗೆ ಹೋಗುತ್ತಲೇ ಮತ್ತೆ ಕಳ್ಳತನಕ್ಕಿಳಿಯುತ್ತಾನೆ. ಇಂಥ ಅದೆಷ್ಟು ಪ್ರಸಂಗಗಳು ಬೇಕು ಕೇಳಿ… ಇನ್ನು ನನ್ನನ್ನು ಗಾಳಿ ಬೆಳಕಿಲ್ಲದ ಕೋಣೆಯಲ್ಲಿ ಕೂಡಿಹಾಕಿ ಹೂವು, ಹಾರ ತುರಾಯಿಗಳ ತುಂಬು ನನ್ನನ್ನು ಚುಚ್ಚುವಂತೆ ಹಾಕಿ ತಾವು ಕಣ್ತುಂಬ ನೋಡಿಕೊಂಡು, ನನ್ನ ಹೆಸರು ಹೇಳಿ ಹಣ ಎತ್ತುತ್ತಾರಲ್ಲ, ನೈವೇದ್ಯ ಅಂತ ಪಂಚ ಭಕ್ಷ್ಯಗಳನ್ನು ನನ್ನೆದುರಿಗಿಟ್ಟು ‘ಇವೆಲ್ಲಾ ನಿಂಗೇ ಅನ್ಕೋ… ನಿಂಗೇ ಅನ್ಕೋ…’ ಅಂತ ಮೂರು ಸಾರಿ ಅಂದು ತಾವು ಗುಳುಂ ಮಾಡಿ ದೇವರು ಸ್ವೀಕರಿಸಿದ ಅಂತ ಹೇಳಿದರೂ ಕೇಳಿಕೊಂಡು ಸುಮ್ಮನಿರುತ್ತೇನಲ್ಲಾ, ನನಗಿಂತ ಮೂರ್ಖ ಇದ್ದಾನಾ, ಈ ಭೂಮಿಯ ಮೇಲೆ?’ ಎಂದ. ದೇವರು ಮೂರ್ಖನೇ ಆದರೂ ಆತನಿಗೆ ಉಪಾಧಿ ಸ್ವೀಕರಿಸುವಷ್ಟು ಅರ್ಹತೆಯಿಲ್ಲವೆಂದು ತೀರ್ಮಾನಿಸಿ ನಗೆ ಸಾಮ್ರಾಟರು ಆತನನ್ನು ಕಳುಹಿಸಿಕೊಟ್ಟರು.

ಇಷ್ಟೇ ಅಲ್ಲದೆ ಲಕ್ಷಾಂತರ ಅಭ್ಯರ್ಥಿಗಳನ್ನು ಸಂದರ್ಶಿಸಿ ಅವರ ಅರ್ಹತೆ, ಪ್ರತಿಭೆ, ಸಾಧನೆಗಳನ್ನು ಗಮನಿಸಿ ಅವರೆಲ್ಲರ ನಡುವಿಂದ ನಗೆ ನಗಾರಿಯ ಏಪ್ರಿಲ್ ಒಂದರ ವ್ಯಕ್ತಿಯನ್ನು ಆಯ್ಕೆ ಮಾಡಿದರು ನಗೆ ಸಾಮ್ರಾಟರು. ಆತ ಈ ನಾಡಿನ ಮತದಾರ! ದರಿದ್ರ ರಾಜಕಾರಣಿಗಳು… ಇವ್ರನ್ನೆಲ್ಲಾ ಲೈನಾಗಿ ನಿಲ್ಲಿಸಿ ಶೂಟ್ ಮಾಡಬೇಕು… ಇಂಥವರಿಂದಲೇ ನಮ್ಮ ನಾಡು ಕುಲಗೆಟ್ಟು ಹೋಗಿರುವುದು.. ಎಂದೆಲ್ಲಾ ವೀರಾವೇಷದ ಮಾತುಗಳನ್ನಾಡುತ್ತಾ ತಮ್ಮ ಹೊಟ್ಟೆ ಕೆಟ್ಟು ಬೇಸ್ ಮೆಂಟಿನಿಂದ ಅಪಾನವಾಯು ಹೊರಹೋದರೂ ಅದಕ್ಕೆ ರಾಜಕಾರಣಿಗಳೇ ಕಾರಣ ಎನ್ನುವ ನಾಡಿನ ಪ್ರಜ್ಞಾವಂತ ಮತದಾರರಷ್ಟು ಮೂರ್ಖರು ಬೇರಾರೂ ಇಲ್ಲ ಎನ್ನುವುದು ನಗೆ ಸಾಮ್ರಾಟರ ತೀರ್ಪು. ಐದು ವರ್ಷಕ್ಕೊಮ್ಮೆ ಮನೆಯ ಬಾಗಿಲಿಗೆ ಬಂದು ನಿಲ್ಲುವ ಪ್ರಜಾಪ್ರತಿನಿಧಿಗಳನ್ನು ಜಾಡಿಸಿ, ಜನ್ಮ ಜಾಲಾಡಿ ನಾಡಿಗೆ ಯೋಗ್ಯನಾದವನನ್ನು ಆರಿಸಿಕಳುಹಿಸುವ ಬದಲು, ‘ಓಟು ಕೋಡಿ’ ಅಂತ ಬೋರ್ಡು ಹಾಕಿಕೊಂಡು ಬರುವವರಿಗೆ ರತ್ನಗಂಬಳಿ ಹಾಸಿ, ಆರತಿ ಎತ್ತಿ ಕಾಲಿಗೆ ಬಿದ್ದು ಆತನನ್ನು ಆರಿಸಿಕಳುಹಿಸಿ ಆತ ಕುರ್ಚಿಯಲ್ಲಿ ಕುಳಿತ ನಂತರ ಬಯ್ಯುತ್ತಾ ಕೂರುವಂಥ ಮೂರ್ಖರು ಬೇರೆಲ್ಲೂ ಇಲ್ಲ. ರಾಜಕಾರಣಿಗಳ ಆಶ್ವಾಸನೆಗಳೆಲ್ಲವೂ ಸುಳ್ಳು ಎಂದು ತಿಳಿದಿದ್ದರೂ ಅವರ ಭಾಷಣದಲ್ಲಿನ ಪ್ರತಿ ಹೊಸ ಆಶ್ವಾಸನೆಗಳಿಗೂ ಕಿವಿಗಡಕ್ಕಿಚ್ಚುವಂತೆ ಚಪ್ಪಾಳೆ ತಟ್ಟುತ್ತಾರಲ್ಲ, ಇವರಿಗಿಂತ ಅರ್ಹ ಮೂರ್ಖರು ಯಾರಿದ್ದಾರೆ ಎನ್ನುತ್ತಾರೆ ಸಾಮ್ರಾಟ್. ಲಂಚಾವತಾರದ ಸಹಸ್ರ ನಾಮಾರ್ಚನೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುವಾಗ ಮೆಲ್ಲಗೆ ಲಂಚ ಕೊಟ್ಟು ನಿರುಮ್ಮಳರಾಗುತ್ತಾರಲ್ಲಾ, ಏಪ್ರಿಲ್ ಒಂದರ ವ್ಯಕ್ತಿಯಾಗಲು ಇವರಿಗಿಂತಾ ಹೆಚ್ಚಿನ ಹಕ್ಕು ಯಾರಿಗಿದೆ?

ಈ ವರ್ಷದ ಏಪ್ರಿಲ್ ಒಂದರ ವ್ಯಕ್ತಿಯಾಗಿರುವ ‘ಮತದಾರ’ನಿಗೆ ನಗೆ ನಗಾರಿಯ ಪರವಾಗಿ ಹ್ಯಾಪಿ ಫೂಲ್ಸ್ ಡೇ!

ಹೊಸ ವರ್ಷಾಚರಣೆ!

1 ಏಪ್ರಿಲ್

ಪ್ರಪಂಚ ಏನೇ ಅನ್ನಲಿ… ನಗೆ ಸಾಮ್ರಾಟರಿಗೆ ಏಪ್ರಿಲ್ ಒಂದರಿಂದಲೇ ಹೊಸ ವರ್ಷಾಚರಣೆ. ಅವರನ್ನು ‘ಮೂರ್ಖ’ ಎಂದು ಯಾರಾದರೂ ಕರೆದರೆ ಅವರಿಗೆ ಸಾಮ್ರಾಟರು ಕೊಡುವ ಉತ್ತರ ಇದು: ಬಂಧ, ಮಿತಿ, ಗಡಿ ಇಲ್ಲದ ಕಾಲವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ಗೀಕರಿಸಿಕೊಂಡು ಮುನ್ನೂರ ಅರವತ್ತೈದು ದಿನಗಳಿಗೆ ಒಂದು ವರ್ಷ, ನಾಲ್ಕು ವರ್ಷಕ್ಕೊಮ್ಮೆ ಅಧಿಕ ವರ್ಷ ಎಂದೆಲ್ಲಾ ಸೃಷ್ಠಿ ಮಾಡಿಕೊಂಡು, ವರ್ಷವೊಂದಕ್ಕೆ ಹನ್ನೆರಡು ಬೇರೆ ಬೇರೆ ಹೆಸರಿನ ತಿಂಗಳುಗಳನ್ನು ಹುಟ್ಟಿಸಿಕೊಂಡು, ಒಂದರಲ್ಲಿ ಮುವ್ವತ್ತು, ಒಂದರಲ್ಲಿ ಮುವ್ವತ್ತೊಂದು ದಿನಗಳನ್ನು ಗುಂಪು ಮಾಡಿ ಒಂದು ಕ್ಯಾಲಂಡರನ್ನು ಮಾಡಿಕೊಂಡರು ಈ ಹುಲು ಮಾನವರು. ತಾವೇ ಮಾಡಿಕೊಂಡ ಕ್ಯಾಲೆಂಡರಿನಲ್ಲಿ ಯಾವುದೋ ಒಂದು ದಿನವನ್ನು ಜನವರಿ ಒಂದು ಅಂತ ಕರೆದುಕೊಂಡು ಆ ದಿನವನ್ನು ಹೊಸ ವರ್ಷದ ಮೊದಲ ದಿನ ಅಂತ ಕರೆದ್ರು. ಹಂಗೆ ಯಾರೋ ಕರೆದದ್ದನ್ನೇ ವೇದವಾಕ್ಯ ಎಂದುಕೊಂಡು ಇಡೀ ಜಗತ್ತೆ ಹುಚ್ಚೆದ್ದು ಕುಣಿಯುವುದು ಮೂರ್ಖತನವಾಗದಿದ್ದ ಮೇಲೆ ನಾನು ಏಪ್ರಿಲ್ ಒಂದನ್ನು ಹೊಸ ವರ್ಷಾಚರಣೆಯ ದಿನ ಎಂದು ಭಾವಿಸಿ ಸಂತೋಷ ಪಟ್ಟರೆ ತಪ್ಪೇನು?

ಹೊಸ ವರ್ಷ ಎಂದ ಮೇಲೆ ಹಳೆಯ ಕೆಲಸಗಳಿಗೆ, ಹಳೆಯ ಸಾಂಪ್ರದಾಯಕ್ಕೆ ಹೊಸ ಸ್ಪರ್ಶ ಇರಬೇಡವೇ? ವರ್ಶವಿಡೀ ಖಾಲಿಯಾಗದೆ ಮೂಲೆಯಲ್ಲಿ ಕೊಳೆಯುತ್ತಾ ಕುಳಿತ ಸೀರೆಯ ಸರಕನ್ನು ಅಂಗಡಿಯವ ಹೊಸ ವರ್ಷದ ಭರ್ಜರಿ ಸೇಲ್, ಭಯಾನಕ ಡಿಸ್ಕೌಂಟ್ ಎಂದು ಹುಯಿಲೆಬ್ಬಿಸಿ ಮಾರಿ ಕೈತೊಳೆದುಕೊಳ್ಳುವುದಿಲ್ಲವೇ? ಡಿಸೆಂಬರ್ ಮುವತ್ತೊಂದರ ರಾತ್ರಿ ಊರಿನ ಬಾರುಗಳಲ್ಲಿಂದ ಹುಡುಕಿತಂದ ಕವಿಗಳಿಂದ ಒಂದು ಅಂಕಣ ಬರಹ ಬರೆಸಿ ದಿನಪತ್ರಿಕೆಯ ಸೊಂಪು-ಕರುಗಳು ಹೊಸ ವರ್ಷಕ್ಕೆ ಓದುಗರಿಗೆ ಜಾಕ್ ಹಾಕುವುದಿಲ್ಲವೇ? ತಮ್ಮನ್ನು ತಾವು ಬುದ್ಧಿವಂತರು ಎಂದು ಭಾವಿಸಿ, ಭ್ರಮಿಸಿಕೊಂಡಿರುವ ಹುಲುಮಾನವರೇ ಈ ರೀತಿಯಾಗಿ ತಮ್ಮ ಹೊಸ ವರ್ಷಾಚರಣೆಯನ್ನು ಮಾಡುತ್ತಿರುವಾಗ ಜಗತ್ತಿನ ಅತಿ ಮೂರ್ಖ ತಾನು ಎಂದು ಎದೆ ತಟ್ಟಿ ಹೇಳುವ ನಗೆಸಾಮ್ರಾಟರು ಏಪ್ರಿಲ್ ಒಂದರ ಹೊಸ ವರ್ಷಾಚರಣೆಯನ್ನು ಸಪ್ಪೆಯಾಗಿ ಆಚರಿಸಲಾದೀತೇ?

ಖಂಡಿತಾ ಇಲ್ಲ. ಹೊಸ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ನಗೆ ನಗಾರಿ’ಯಲ್ಲಿ ಹೊಸತನದ ಬೆಳಕು ಹರಿಯಲಿದೆ. ಹಿಂದೆಂದೂ ಯಾರೂ ಯೋಚಿಸಿರದ, ಮುಂದೆಂದೂ ಯಾರೂ ಯೋಚಿಸಲಾಗದಂತಹ ಯೋಜನೆಯನ್ನು ಸಾಮ್ರಾಟರು ಹಾಕಿಕೊಂಡಿದ್ದಾರೆ. ಒಂದು ಕಾಲಕ್ಕೆ ಇಡೀ ಕನ್ನಡ ನಾಡನ್ನು ನಗೆಯ ಕಡಲಲ್ಲಿ ತೇಲಿಸಿ ಮುಳುಗಿಸಿ, ನಾಡಿನ ಸಮಸ್ತರು ಬಚ್ಚಿಟ್ಟು ಜೋಪಾನ ಮಾಡಿಕೊಂಡ ತಮ್ಮ ತಮ್ಮ ವೈಯಕ್ತಿಕ ಮೂರ್ಖತನಗಳ ಪ್ರತಿನಿಧಿಯಾಗಿದ್ದ ಮಹಾನ್ ಪಾತ್ರವೊಂದು ಮತ್ತೆ ಜೀವ ಪಡೆದುಕೊಳ್ಳಲಿದೆ.

ಸಾಕಲ್ಲವಾ ಇಷ್ಟು ಜಾಕ್ ಹಾಕಿದ್ದು? ಇನ್ನು ಅದು ಏನು, ಎನ್ನುವ ಕುತೂಹಲದ ಕ್ರಿಮಿ ನಿಮ್ಮ ಕೂದಲಿರುವ, ಇಲ್ಲದಿರುವ, ಮೆದುಳಿರುವ, ಇಲ್ಲದಿರುವ ತಲೆಯನ್ನು ತಿನ್ನಲಾರಂಭಿಸುತ್ತದೆ. ಆ ಕ್ರಿಮಿಯಿಂದ ಮುಕ್ತಿ ಪಡೆಯಬೇಕಾದರೆ ನೀವು ಮುಂದಿನ ವಾರದ ವರೆಗೆ ಕಾಯದೆ ವಿಧಿಯಿಲ್ಲ!

ಮನುಷ್ಯ ಹುಟ್ಟುತ್ತಲೇ ಹಾಸ್ಯಗಾರನಾಗುತ್ತಾನೆ

1 ಏಪ್ರಿಲ್

ಹಾಸ್ಯ ಬ್ರಹ್ಮ ಎಂದೇ ಖ್ಯಾತರಾಗಿದ್ದ ಬೀಚಿಯವರು ತಮ್ಮ ಹಾಸ್ಯ ಬರವಣಿಗೆಯ ಬೆಳವಣಿಗೆಯ ಬಗ್ಗೆ, ಅದರ ಹಿನ್ನೆಲೆ, ಸ್ಪೂರ್ತಿಯ ಬಗ್ಗೆ ಬರೆಯುತ್ತಾ ಒಂದು ಕಡೆ ಹೇಳಿದ್ದಾರೆ: ಮನುಷ್ಯ ಹುಟ್ಟುತ್ತಲೇ ಹಾಸ್ಯಗಾರನಾಗುತ್ತಾನೆ. ಅವನು ಬರವಣಿಗೆಯನ್ನು ರೂಢಿಸಿಕೊಂಡು ಲೇಖಕನಾದರೆ ಹಾಸ್ಯ ಲೇಖಕನಾಗುತ್ತಾನೆ.

ಅವರ ಈ ಮಾತನ್ನೇ ಕೊಂಚ ವಿಸ್ತರಿಸುವುದಾದರೆ, ಮನುಷ್ಯನಲ್ಲಿ ಹಾಸ್ಯ ಪ್ರಜ್ಞೆಯೆಂಬುದು ಹುಟ್ಟಿನಿಂದಲೇ ಬರಬೇಕು. ಹುಟ್ಟಿನಿಂದ ಅಂದರೆ, ಜನ್ಮದತ್ತವಾದದ್ದು ಎಂದೇನಲ್ಲ, ಅದು ಸಹಜವಾಗಿ ಆತನೊಂದಿಗೆ ಬೆಳೆದುಬರಬೇಕು. ಆತನಿಗೆ ಬರವಣಿಗೆ ಕೈ ಹಿಡಿದರೆ ಆ ಬರವಣಿಗೆಯಲ್ಲಿ ಆತ ತನ್ನೊಳಗಿನ ಹಾಸ್ಯ ಪ್ರಜ್ಞೆಯನ್ನು ಹರಿದುಬಿಟ್ಟರೆ ಹಾಸ್ಯ ಲೇಖಕನಾಗುತ್ತಾನೆ. ಇಲ್ಲವಾದಲ್ಲಿ ಆತ ಹಾಸ್ಯಗಾರನಾಗಿಯೇ ಉಳಿಯುತ್ತಾನೆ.

ಹಾಗಾದರೆ ಹಾಸ್ಯಪ್ರಜ್ಞೆಯೆಂಬುದು ನಮ್ಮ ವ್ಯಕ್ತಿತ್ವದ ಸಹಜವದ ಅಂಶವೇ? ಅಥವಾ ಕಠಿಣ ಪರಿಶ್ರಮದಿಂದ ಒಲಿಸಿಕೊಳ್ಳುವ ವಿದ್ಯೆಯೇ? ನಮ್ಮನ್ನು ಮುದಗೊಳಿಸಿ, ನಮಗ್ಯಾವ ಶ್ರಮವನ್ನೂ ಕೊಡದೆ ಸೃಷ್ಟಿಯಾದ ಹಾಸ್ಯ ಪ್ರೇಕ್ಷಕನನ್ನೂ ಮುದಗೊಳಿಸಿ ಆತನ ಕಡೆಯಿಂದ ಯಾವ ಶ್ರಮವನ್ನೂ ಬಯಸದೆ ಆತನನ್ನು ತಲುಪಿಕೊಳ್ಳುತ್ತದೆ ಎಂಬುದು ನಿಜವೇ? ಅಥವಾ ಬೇರೆಲ್ಲಾ ಸಾಹಿತ್ಯ ಪ್ರಕಾರಗಳಲ್ಲಿದ್ದ ಹಾಗೆಯೇ ಹಾಸ್ಯ ಪ್ರಕಾರವೂ ಸಹ ಅಪಾರವಾದ ವಿದ್ವತ್ತನ್ನು, ವಿಮರ್ಶಕರ ಉಳಿ ಪೆಟ್ಟನ್ನು, ಅಗಾಧವಾದ ಪರಿಶ್ರಮವನ್ನು ಬಯಸುತ್ತದೆಯೇ?

ನಿಮಗೇನನ್ನಿಸುತ್ತದೆ?

(ಕಳೆದ ವಾರದ ಚರ್ಚೆ)