(ವಿಶೇಷ ಅತಿಥಿಯೊಂದಿಗಿನ ಈ ವಿಶಿಷ್ಟ ಸಂದರ್ಶನಕ್ಕಾಗಿ ನಗೆ ಸಾಮ್ರಾಟರಾದ ನಾವು ಖುದ್ದು ವಹಿಸಿದ ಕಾಳಜಿಯನ್ನು, ಅನುಭವಿಸಿದ ಕಷ್ಟಗಳನ್ನು ಈಗಾಗಲೇ ನಮ್ಮ ನಾಡಿನ ಪ್ರಜೆಗಳ ಗಮನಕ್ಕೆ ತಂದಿದ್ದೇವೆ. ಈ ಅಪರೂಪದ ಅತಿಥಿ: ಅನಾಮಿಕ ಬ್ಲಾಗ್/ ಕಮೆಂಟ್ ಜೀವಿಯ ಸಂದರ್ಶನ ಇದೋ ನಿಮಗಾಗಿ!)
ನಗೆ ಸಾಮ್ರಾಟ್: ನಮಸ್ಕಾರ.
ಅನಾಮಿಕ: ಹು, ಹೇಳಿ ಏನಾಗ್ಬೇಕು?
ನ.ಸಾ: ನೀವು ಯಾವಾಗಲೂ ಹೀಗೇ ಇರುತ್ತೀರಾ?
ಅನಾಮಿಕ: ಹೇಗೆ?
ನ.ಸಾ: ಹೀಗೆ ಈ ಡಬ್ಬಿಯೊಳಗೆ ಕೂತು, ಬರೀ ನಿಮ್ಮ ಎರಡು ಕೈಗಳು ಹೊರಗೆ ಒಳಗೆ ಆಡುವಷ್ಟು ಸ್ಥಳಾವಕಾಶ ಮಾಡಿಕೊಂಡು ಹೀಗೇ ಕೂರುವಿರಾ? ನಿಮ್ಮ ಜೊತೆ ಮಾತಾಡುವವರಿಗೆ, ನೀವು ಮಾತಾಡಿಸುವವರಿಗೆ ನಿಮ್ಮ ಬಗ್ಗೆ ಏನೂ ತಿಳಿಯದ ಹಾಗೆ…
(ಸಾಮ್ರಾಟರು ತಮ್ಮ ಟೀಪಾಯ್ ಮೇಲಿನ ಇರಡು ಗಾಜಿನ ಕಪ್‌ಗಳಲ್ಲಿ ಒಂದನ್ನು ಡಬ್ಬಿಯತ್ತ ತಳ್ಳುವರು! ಅನಾಮಿಕ ಅತಿಥಿ ಮೆಲ್ಲಗೆ ಅದನ್ನು ಒಳಕ್ಕೆ ಎಳೆದುಕೊಳ್ಳುವುದು)
ಅನಾಮಿಕ: ಹು, ಹೌದು. ನಾನು ಯಾವಾಗಲೂ ಹೀಗೇ ಇರುವೆ. ಆದ್ರೆ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗುವಾಗ ಮಾತ್ರ ಡಬ್ಬಿಯಿಂದ ಹೊರಗೆ ಬರುವೆ. ಇದರಿಂದ ನಿಮಗೇನು ಪ್ರಾಬ್ಲಂ?
ನ.ಸಾ: ಏನಿಲ್ಲ, ನಾವು ಯಾರನ್ನು ಮಾತನಾಡಿಸುತ್ತಿರುವುದು ಎಂತಲೇ ನಮಗೆ ತಿಳಿಯದಿದ್ದರೆ ತುಸು ಗೊಂದಲವಾಗುತ್ತೆ. ಕನಿಷ್ಠ ಪಕ್ಷ ನಾವು ಮಾತನಾಡಿಸುತ್ತಿರುವುದು ಗಂಡನ್ನೋ, ಹೆಣ್ಣನ್ನೋ ಎಂಬುದರ ಸುಳಿವಾದರೂ ಸಿಕ್ಕಿದ್ದರೆ ನಮ್ಮ ಪದಪುಂಜಗಳ ಆಯ್ಕೆಯಲ್ಲಿ ತುಸು ಎಚ್ಚರವಹಿಸಬಹುದು.
ಅನಾಮಿಕ : ಬೇಕಿದ್ರೆ ಮಾತಾಡಿ, ಇಲ್ಲಾಂದ್ರೆ ಎದ್ದೋಗಿ. ನಾನೇನು ನನ್ ಸಂದರ್ಶನ ಮಾಡ್ರಿ ಅಂತ ನಿಮ್ಮುನ್ನ ಕಾಲು ಹಿಡ್ಕಂಡು ಕೇಳಿಕೊಂಡ್ನಾ? ಆ ನಿಮ್ಮ ಆಲ್ಟರ್ ಈಗೋನ, ನಿಮ್ಮ ಚೇಲನ್ನ ಉಗಿದು ಓಡಿಸಿದ್ದೆ ನಾನು. ನೀವು ಬಂದು ಬೇಡಿಕೊಂಡಿದ್ದಕ್ಕೆ ಒಪ್ಪಿಕೊಂಡಿದ್ದು. ಇಷ್ಟಕ್ಕೂ ನೀವೇನು ಸಾಚಾನ? ನಗೆ ಸಾಮ್ರಾಟ್ ನಿಜವಾದ ಮನುಷ್ಯನಾ ಅಥ್ವಾ ಯಾವನೋ ಅಡ್ಡ ಕಸುಬಿಯ ಪೆನ್ ನೇಮೋ ಅಂತ ಯಾರಿಗ್ಗೊತ್ತು? ನಿಮ್ ಫೋಟೊ, ಜಾತಕ, ಜನಿವಾರನ್ನ ಎಲ್ಲಾದ್ರೂ ಹಾಕಿದ್ದೀರಾ?
ನ.ಸಾ: ಹೋಗ್ಲಿ ಬಿಡಿ, ನಾವು ಸುಮ್ನೆ ತಮಾಶೆ ಮಾಡಿದ್ರೆ ನಮ್ ಬುಡಕ್ಕೆ ಕೈ ಹಾಕಿದ್ರಲ್ಲ!
ಅನಾಮಿಕ: ನಾನು ಹಿಂಗೇ ಡೇರ್ ಡೆವಿಲ್!
ನ.ಸಾ: (ಗೊಣಗಿಕೊಳ್ಳುತ್ತಾ) ನೋಡಿದ್ರೇನೇ ಗೊತ್ತಾಗುತ್ತೆ ಬಿಡಿ, ನಾಲ್ಕು ದಿಕ್ಕಿನಲ್ಲಿರುವ ರಟ್ಟಿನ ‘ಡೇರ್ ಡೆವಿಲ್’ ಮುಖ ನೋಡಿದ್ರೆ… (ಗಟ್ಟಿಯಾಗಿ) ಹೌದು, ಅದೇನು ಧೈರ್ಯ ನಿಮ್ಮದು, ಯಾರ್ಯಾರನ್ನೆಲ್ಲ ಉಗಿದು ಉಪ್ಪಿನಕಾಯಿ ಹಾಕಿ ಜಾಡಿ ತುಂಬಿಸಿದ್ದೀರಿ.
ಅದೆಲ್ಲ ಇರಲಿ, ನಮಗೊಂದು ಸಂಶಯ. ಮತ್ತೆ ಡಬ್ಬಿಯ ವಿಷಯಕ್ಕೆ ಬರ್ತೀನಿ ಅಂತ ಕೋಪ ಮಾಡ್ಕೋಬೇಡಿ, ನೀವು ಡಬ್ಬಿಯ ಹೊರಗೆ ಇದ್ದಾಗ ಹೇಗಿರುವಿರೋ ಡಬ್ಬಿಯ ಒಳಗೂ ಹಾಗೇ ಇರ್ತೀರಾ? ಡಬ್ಬಿ ನಿಮ್ಮ ಮಾತಿನ ಮೇಲೆ, ವರ್ತನೆಯ ಮೇಲೆ, ನಿರ್ಧಾರಗಳ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲವಾ?
ಅನಾಮಿಕ : ಅದೆಲ್ಲಿಂದ ಹುಟ್ಟುತ್ರೀ ನಿಮಗಿಂತಾ ಪ್ರಶ್ನೆಗಳು? ನಾನು ಈ ‘ಡಬ್ಬಿ’ ಬದುಕಿನ ಬಗ್ಗೆ ಒಂದು ಪುಸ್ತಕವನ್ನೇ ಬರೆದಿಟ್ಟಿದ್ದೀನಿ ಕಣ್ರೀ. ಆದ್ರೆ ಅದನ್ನ ಪ್ರಿಂಟು ಹಾಕಿಸೋಕೆ ಡಬ್ಬಿಯಿಂದ ಹೊರಗೆ ಬರ್ಬೇಕು. ಮೇಲಾಗಿ ನಾನು ಬರೆದಿದ್ದೆಲ್ಲಾ ಡಬ್ಬಿಯಲ್ಲಿ ಕುಳಿತೇ, ಡಬ್ಬಿಯಿಂದ ಹೊರಗೆ ಬಂದು ಪುಸ್ತಕ ಯಾರಿಗಾದ್ರೂ ಕೊಟ್ರೆ, ಡಬ್ಬಿಯಲ್ಲಿದ್ದದ್ದು ನಾನೇ ಅನ್ನಲಿಕ್ಕೆ ಸಾಕ್ಷಿ ಏನು ಎಂದು ಕೇಳ್ತಾರೆ. ಯಾರು ಬೇಕಾದರೂ ಡಬ್ಬಿಯೊಳಗೆ ಕೂತಿದ್ದಿರಬಹುದಲ್ಲವಾ ಅಂತ ಲಾ ಪಾಯಿಂಟ್ ಹಾಕ್ತಾರೆ ಕಣ್ರೀ.
ಈ ಡಬ್ಬಿ ಸಾಮಾನ್ಯವಾದದ್ದಲ್ಲ ಕಣ್ರೀ. ಹೊರಗಿದ್ದಾಗ ನಾನು ಸಭ್ಯ, ಮರ್ಯಾದಸ್ಥ, ಪ್ರಪಂಚ ಸರಿಯಾಗಿಯೇ ಇದೆ, ಬದಲಾಗಬೇಕಾಗಿರುವುದು ನಾನು ಎಂಬ ಧೋರಣೆಯುಳ್ಳ ಮನುಷ್ಯ. ತಪ್ಪು ಪಾಠ ಮಾಡಿದ ಲೆಕ್ಚರನ್ನು, ಲಂಚ ಕೇಳಿದ ಸಬ್ ಇನ್ಸ್‌ಪೆಕ್ಟರನ್ನು, ಐದು ವರ್ಷ ಗೋಳು ಹೋಯ್ದುಕೊಂಡು ಓಟು ಕೇಳೋಕೆ ಬಂದ ಫುಡಾರಿಯನ್ನು, ಯಾರನ್ನೂ ನಾನು ಬಯ್ಯುವುದಿಲ್ಲ. ‘ನಡೀತದೆ ಬಿಡು…’ ಅಂದುಕೊಂಡು ಆರಾಮಾಗಿದ್ದು ಬಿಡ್ತೀನಿ.
ನ.ಸಾ: ಇಂಟರೆಸ್ಟಿಂಗ್, ನಿಮ್ಮ ನಿಜ ವ್ಯಕ್ತಿತ್ವ ಹೀಗಿರುವಾಗ ನಿಮ್ಮ ಬರಹ, ಕಮೆಂಟುಗಳೇಕೆ ಹಾಗಿರುತ್ತವೆ?
ಅನಾಮಿಕ: ಹೇಳ್ತೀನಿ ಇರಿ. ಈ ಡಬ್ಬಿಯೊಳಗೆ ಕೂತಾಗ ಏನಾಗುತ್ತೋ ಗೊತ್ತಿಲ್ಲ. ಕೈಗಳು ಚಕಚಕನೆ ಓಡಾಡತೊಡಗುತ್ತವೆ, ಬಲಗೈ ಬೆರಳು ಎಡಗೈ ಹಸ್ತವನ್ನು ಪರಪರನೆ ಕೆರೆಯಲಾರಂಭಿಸುತ್ತವೆ. ಹೃದಯ ಬಡಿತ ಏರತೊಡಗುತ್ತದೆ. ಪಾಪಿ ಜಗತ್ತು ಜಗದ್ಧೋದ್ಧಾರಕನ ಆಗಮನಕ್ಕಾಗಿ ಕಾಯುತ್ತಾ ಕುಳಿತಿದೆ ಎಂದು ಭಾಸವಾಗುತ್ತದೆ. ಡಬ್ಬಿಯ ನಾಲ್ಕೂ ದಿಕ್ಕಿನಿಂದ ಪಾಂಚಜನ್ಯಗಳು ಮೊಳಗಲು ಶುರು ಮಾಡುತ್ತವೆ. ಜಗತ್ತು ಕಾಯುತ್ತ ಕುಳಿತ ಪ್ರವಾದಿ ನಾನೇ ಎಂದು ಎದೆಯುಬ್ಬುತ್ತದೆ. ಅಧರ್ಮದ ನಾಶಕ್ಕಾಗಿ ನಾನು ಕಟಿಬದ್ಧನಾಗುತ್ತೇನೆ.
ಅನಂತರ ಹಾಲಿನಲ್ಲೂ ಹಾಲಾಹಲ ಕಾಣಲು ಶುರುವಾಗುತ್ತದೆ, ಬಿಳಿಯ ಕಾಗದಲ್ಲಿಯೂ ಕಪ್ಪು ಕಲೆಗಳು ಕಾಣಲಾರಂಭಿಸುತ್ತವೆ. ಡಬ್ಬಿಯೊಳಗಿನ ಅಗೋಚರವಾದ ಕೈಗಳು ಕಣ್ಣ ಎದುರು ಬೂತಗನ್ನಡಿಯನ್ನು ಹಿಡಿದದ್ದು ಗೊತ್ತೇ ಆಗುವುದಿಲ್ಲ. ಇರುವೆಯು ಆನೆಯಾಗಿ ಬಿಟ್ಟಿರುತ್ತದೆ. ಅಡಿಕೆಯು ಬೆಟ್ಟವಾಗಿಬಿಟ್ಟಿರುತ್ತದೆ. ನಾನು ಹಿಂದೆಂದೂ ಕೇಳಿರದ ಬಯ್ಗುಳಗಳು ಸರಾಗವಾಗಿ ಹರಿದು ಬರಲಾರಂಭಿಸುತ್ತವೆ. ಎಂದೂ ನಾನು ಬಳಸಿರದ ಕೆಟ್ಟ ಪದಗಳು ಅದು ಹೇಗೋ ಕೀಲಿಸಲ್ಪಡುತ್ತವೆ. ಡಬ್ಬಿಯ ಒಳಗೆ ಸೃಷ್ಟಿಯಾದ ಈ ಬ್ಲಾಗ್ ಬರಹ, ಕಮೆಂಟನ್ನು ಡಬ್ಬಿಯಿಂದಲೇ ಗುರಿಯಿಟ್ಟು ಹೊರಗಿರುವವರಿಗೆ ಎಸೆಯುತ್ತೇನೆ. ತಗುಲಿದವರು ಉಜ್ಜಿಕೊಳ್ಳುತ್ತಾ ಹಿಂದೆ ನೋಡಿದಾಗ? ಏನಿದೆ, ಬರಿ ಡಬ್ಬಿ! ಡಬ್ಬಿಯೊಳಗೆ ನಾನು ಕೇಕೆ ಹಾಕಿ ನಗುತ್ತಿರುತ್ತೇನೆ!
ನ.ಸಾ: ಕುತೂಹಲಕರವಾಗಿದೆ ನಿಮ್ಮ ಡಬ್ಬಿಯ ಮಹಿಮೆ. ಆದರೆ ಹೀಗೆ ವಿಕೃತ ಆನಂದವನ್ನು ಪಡೆಯುವುದು ತಪ್ಪು ಅನ್ನಿಸುವುದಿಲ್ಲವೇ?
ಅನಾಮಿಕ: ಯಾವುದು ತಪ್ಪು? ತಮ್ಮ ಆರೋಗ್ಯ ಚೆನ್ನಾಗಿರಲಿ ಎಂಬ ಸ್ವಾರ್ಥಕ್ಕಾಗಿ ದಿನಪೂರ್ತಿ ಮುಖ ಗಂಟು ಹಾಕಿಕೊಂಡು ಎಲ್ಲರ ನಗುವನ್ನೂ ಕೊಲ್ಲುವ ಕಿಲ್ಲರ್‌ಗಳು ಪಾರ್ಕುಗಳಲ್ಲಿ ಹೊಕ್ಕಳು ಬಾಯಿಗೆ ಬರುವಂತೆ ಹಲ್ಕಿರಿದು ನಗುವುದು ತಪ್ಪಲ್ಲವಾ?
ನ.ಸಾ: ಇದು ಸರಿ ಉತ್ತರ ಅಲ್ಲ ಇವ್ರೇ, ಯಾರೋ ಮಾಡಿದ್ದು ತಪ್ಪು ಅಂತ ಸಾಬೀತು ಪಡಿಸಿದರೆ ನೀವು ಮಾಡಿದ ತಪ್ಪಿಗೆ ಮಾಫಿ ಸಿಕ್ಕುವುದಿಲ್ಲ. ಮೊರಾರ್ಜಿ ದೇಸಾಯಿ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಿದ್ದರು ಎಂದು ಸಾಬೀತು ಪಡಿಸಿದರೆ ನಿಮ್ಮ ಬಾಸಿನ ಕಾಫಿ ಲೋಟದಲ್ಲಿ ನಿಮ್ಮ ಮೂತ್ರ ತುಂಬಿದ ಆರೋಪದಿಂದ ನಿಮ್ಮನ್ನು ಖುಲಾಸೆಗೊಳಿಸಲು ಸಾಧ್ಯವೇ?
ಅನಾಮಿಕ: ಮುಚ್ರೀ ಬಾಯಿ, ಏನೋ ಯಾರೂ ಓದದ ಪತ್ರಿಕೆ ಅಂತ ನಿಮಗೆ ಸಂದರ್ಶನ ಕೊಡೋಕೆ ಒಪ್ಪಿಕೊಂಡ್ರೆ ನನ್ನೆದುರೇ ತಲೆಯೆಲ್ಲಾ ಮಾತಾಡ್ತೀರಾ? ನನ್ನ ಹಾಗೆ ಮುಖವಾಡ ಹಾಕಿಕೊಂಡು ಬರೆಯುವವರು ಮಾತ್ರವೇ ವಿಕೃತ ಆನಂದ ಪಡೀತಾರಾ? ಪ್ರತಿಯೊಬ್ಬರ ಬೆನ್ನ ಹಿಂದೆ ಸೃಷ್ಟಿಯಾಗುವ ಒಬ್ಬೊಬ್ಬ ವಿಮರ್ಶಕ/ ವಿಮರ್ಶಕಿಯೂ ವಿಕೃತ ಆನಂದ ಪಡೆಯುವಂಥವರೇ. ಮುಖಕ್ಕೆ ಮುಖ ಕೊಟ್ಟು ಹೇಳಲಾಗದ್ದನ್ನು ಬೆನ್ನ ಹಿಂದೆ ಆಡಿ ತೋರಿಸುವವರು ಹೇಡಿಗಳು ಆಗಲ್ಲವೇ? ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವಾಗ ಹಲ್ಕಿರಿಯುತ್ತಾ, ನಡುಬಗ್ಗಿಸಿ ಎಂಎಲ್‌ಎ ರೆಕಮಂಡೇಶನ್ ಲೆಟರ್ ಪಡೆದು ಟಿವಿಯಲ್ಲಿ ಆ ಪಕ್ಷದ ರಾಷ್ಟ್ರಾಧ್ಯಕ್ಷೆಯನ್ನು ಕಂಡಾಗಲೆಲ್ಲಾ ದೇಶ ಮಾರೋದಕ್ಕೆ ಹುಟ್ಟಿಬಂದ ಹಡಬೆ ಎಂದು ಬಯ್ಯುವ ಧೀರರಿಲ್ಲವೇ? ಇಂಟರ್ನಲ್ ಮಾರ್ಕಿಗಾಗಿ ವಿನಯವಂತಿಕೆಯ ಸೋಗು ಹಾಕಿಕೊಂಡು ನಟಿಸಿ ಮೇಷ್ಟ್ರು ಮರೆಯಾದಾಗ ‘ಮಗಾ, ಈ ಟಕಲನ ತಲೆ ನೋಡಿದ್ಯಾ ಕ್ಲಾಸಲ್ಲಿ? ಕೇತಾನ್ ಫ್ಯಾನ್ ಕಾಣಿಸ್ತಿತ್ತು, ನಾನು ಅದನ್ನ ನೋಡ್ಕಂಡೇ ಕ್ರಾಪು ಸರಿ ಮಾಡ್ಕಂಡೆ’ ಎಂದು ಡೈಲಾಗ್ ಬಾರಿಸುವ ಕೂಲ್ ಹುಡುಗರಿಲ್ಲವೇ? ಎದುರಲ್ಲಿ ಸಿಕ್ಕಾಗ ‘ಈ ಕಾಲದಲ್ಲಿ ಹೆಣ್ಣು ಸ್ವಂತ ಕಾಲ ಮೇಲೆ ನಿಲ್ಲಬೇಕಮ್ಮ, ಸ್ವಂತ ನೌಕರಿ ಇದ್ದರೇನೆ ಅವಳು ಇಂಡಿಪೆಂಡೆಂಟ್ ಇದ್ದಂಗೆ’ ಎಂದು ಬೆನ್ತಟ್ಟಿ ಆಕೆ ಮರೆಯಾದ ನಂತರ ‘ಗಂಡ ಸರಿ ಇದ್ದಿದ್ರೆ ಇವಳ್ಯಾಕೆ ಹಿಂಗೆ ದನದ ಚಾಕರಿ ಮಾಡ್ತಿದ್ಲು?’ ಎಂದು ಮೂಗುಮುರಿಯುವ ಆಫೀಸ್ ಹಸ್ಬೆಂಡುಗಳ ಹೌಸ್ ವೈಫ್‌ಗಳು ಸಾಚಾನ?
ನೋಡ್ರಿ ನಾನ್ ಹೇಳೋದು ಇಷ್ಟೇ, ನನ್ನಂಥವರು ನಾಯಿ ಇದ್ದ ಹಾಗೆ!
ನ.ಸಾ: ದಾಸರು ಗಲ್ಲಿಗೊಂದು ಹಂದಿಯಿರಬೇಕು ಎಂದು ಹೇಳಿದ್ದರು, ಇದೇನು ನಿಮ್ಮನ್ನು ನೀವು ನಾಯಿ ಎಂದು ಕರೆದುಕೊಳ್ಳುವಿರಿ?
ಅನಾಮಿಕ: ಹೌದು, ನನ್ನಂತಹ ಹೆಸರಿಲ್ಲದ ವಿಮರ್ಶಕರು, ಕ್ರಿಟಿಕ್ಕುಗಳು ನಾಯಿಗಳೇ. ಯಾವ ಮಾಧ್ಯಮ ತಗಂಡ್ರೂ ಮನುಷ್ಯ ಬದಲಾಗಲ್ಲ. ನಾಯಿಯನ್ನ ಪಿಜ್ಜಾ ಹಟ್ಟಿನಲ್ಲಿ ಕೂರಿಸಿದರೂ ಅದು ಅಲ್ಲಿನ ರೆಸ್ಟ್ ರೂಮಿಗೇ ನೆಗೆಯುತ್ತೆ! ಟೀ ಶಾಪಿನ ಚರ್ಚೆಯೇ ಇರ್ಲಿ, ದಿನಪತ್ರಿಕೆಯ ಓದುಗರ ಅಂಕಣವೇ ಇರ್ಲಿ, ಮೊಬೈಲ್ ಬರ್ಲಿ, ಎಸ್.ಎಂ.ಎಸ್ ಬರ್ಲಿ, ಬ್ಲಾಗ್ ಬರ್ಲಿ, ಇಂಟರ್ನೆಟ್ ಡಿಬೇಟ್ ಫಾರಮ್ ಬರ್ಲಿ ಎಲ್ಲಾ ಕಡೆಯೂ ನಾಯಿಗಳು ಇದ್ದೇ ಇರುತ್ತವೆ. ನನ್ನಂತಹ ನಾಯಿಗಳು. ನಮಗೆ ಆನೆಯಂತಹ ಗತ್ತು, ಗಾಂಭೀರ್ಯವಿಲ್ಲ, ಕುದುರೆಯಂತಹ ವಯ್ಯಾರ, ಸೌಂದರ್ಯವಿಲ್ಲ, ಹಸು, ಎಮ್ಮೆಗಳಂತೆ ನಾವು ಉಪಯುಕ್ತರಲ್ಲ ಆದರೆ ಬೀದಿಯಲ್ಲಿ ಇವು ಓಡಾಡಿದರೆ ನಾವು ಮೂರು ಲೋಕ ಒಂದಾಗುವಂತೆ ಬೊಗಳುತ್ತೇವೆ. ಜನರಿಗೆ ರಸ್ತೆಯಲ್ಲಿ ಆನೆ, ಹಸು, ಕುದುರೆ ಇದೆ ಎಂದು ತಿಳಿಯುವುದಕ್ಕೆ ಮುನ್ನ ನಾವು ಬೊಗಳುವುದು ತಲುಪುತ್ತೆ. ಕೆಲವರು ಕಲ್ಲು ಬೀರುತ್ತಾರೆ, ಕೆಲವರು ನಮ್ಮ ಬೊಗಳುವಿಕೆಯಿಂದ ಕಳ್ಳರು ಓಡಿ ಹೋದರು ಎಂದು ಭಾವಿಸುತ್ತಾರೆ.
ನಿಜಕ್ಕೂ ಹೇಳುತ್ತೇವೆ, ನಾವು ಬೀದಿ ನಾಯಿಗಳಿದ್ದ ಹಾಗೆಯೇ. ಕಾರು, ಸ್ಕೂಟರು, ಬಸ್ಸು ಯಾವುದೇ ಚಲಿಸಲು ಬೊಗಳುತ್ತಾ, ರೊಚ್ಚಿನಿಂದ ಅದನ್ನು ಅಟ್ಟಿಸಿಕೊಂಡು ಹೋಗುತ್ತೇವೆ, ಚಲಿಸುತ್ತಿರುವ ವಾಹನ ವೇಗ ಹೆಚ್ಚಿಸಿಕೊಂಡಷ್ಟು ನಮ್ಮ ಹುಮ್ಮಸ್ಸು ಹೆಚ್ಚುತ್ತೆ. ನಾವು ನೆಗೆದು, ಜಿಗಿದು ಅಟ್ಟಿಸಿಕೊಂಡು ಹೋಗುವುದು ಅನೇಕರಿಗೆ ಹೀರೋಯಿಕ್ ಆಗಿ ಕಾಣುತ್ತೆ. ನಮಗೂ ನಾವು ಯಾವುದೋ ಸಿನೆಮಾ ಹೀರೋ ಇರಬೇಕು ಅನ್ನಿಸುತ್ತೆ. ಸಡನ್ನಾಗಿ ಚಲಿಸುತ್ತಿದ್ದ ವಾಹನ ನಿಂತು ಬಿಡುತ್ತೆ ಅಂದುಕೊಳ್ಳಿ. ವೇಗವಾಗಿ ಓಡುತ್ತಿದ್ದ ಬೈಕು ನಿಂತು ಬೈಕಿನ ಚಾಲಕ ಎದುರು ನಿಂತ ಎಂದುಕೊಳ್ಳಿ, ನಾವು ಆಗಸದಿಂದ ಬಿದ್ದ ಉಲ್ಕೆಯಾಗಿಹೋಗುತ್ತೇವೆ. ಏನು ಮಾಡಬೇಕೆಂದು ತೋಚದೆ ಬಾಲವನ್ನು ಬೆನ್ನಟ್ಟಿ ಎರಡು ಸುತ್ತು ತಿರುಗಿ ಹಿಂದಿರುಗಿ ಬಿಡುತ್ತೇವೆ.
ನ.ಸಾ: ಡಬ್ಬಿಯ ಒಳಗೇ ಕೂತು ಇಷ್ಟು ಪ್ರಾಮಾಣಿಕವಾಗಿ ನಿಮ್ಮ ಬಗ್ಗೆ ನೀವೇ ಮಾತಾಡುವುದು ನಿಜಕ್ಕೂ ಆಶ್ಚರ್ಯವಾಗುತ್ತೆ.
ಅನಾಮಿಕ: ನಂಗೂ ತಿಳೀತಿಲ್ಲ, ಅದೇನೋ ಅವಾಗ ಗಾಜಿನ ಲೋಟದಲ್ಲಿ ತಳ್ಳಿದ್ರಲ್ಲ ಅದನ್ನ ಕುಡಿದ ಮೇಲೆ ಹಿಂಗೆಲ್ಲ ಮಾತಾಡೋಕೆ ಶುರು ಮಾಡಿದ್ದು.
ನ.ಸಾ: ಸಂತೋಷ ಸಂತೋಷ, ಅದರಲ್ಲೇನೂ ಇರ್ಲಿಲ್ಲ, ಯೇಸು ಮುಟ್ಟಿದ ಶುದ್ಧವಾದ ನೀರು ಅಷ್ಟೇ. ಸಂದರ್ಶನಕ್ಕೆ ಧನ್ಯವಾದ.
ಇತ್ತೀಚಿನ ಪ್ರಜಾ ಉವಾಚ