Archive | ಫೆಬ್ರವರಿ, 2010

ಹಳೆ ಕಂತೆ: ಪರಮೇಶಿ ನಿದ್ದೆ ಪ್ರಸಂಗ

27 ಫೆಬ್ರ

ಫೆಬ್ರವರಿ ಹದಿನಾಲ್ಕು ೨೦೦೮ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಲೇಖನ `ಪರಮೇಶಿ ನಿದ್ದೆ ಪ್ರಸಂಗ’ದ ತುಣುಕು ಇಲ್ಲಿದೆ:

ನಮ್ಮ ಕ್ಲಾಸಿನಲ್ಲಿ ಪರಮೇಶಿ ಅಂದರೆ ಎಲ್ಲರಿಗೂ ಭಯಮಿಶ್ರಿತ ಗೌರವ. ಏನೋ ಅಭಿಮಾನ. ನಮ್ಮೆಲ್ಲರಿಗೂ ಆತ ದೊಡ್ಡ ಕ್ರಾಂತಿಕಾರಿಯಂತೆ, ಮಹಾ ಧೈರ್ಯವಂತನಂತೆ ಕಾಣುತ್ತಿದ್ದ. ತರಗತಿಯ ಶಿಕ್ಷಕರಿಗಂತೂ ಅವನೆಂದರೆ ದುಸ್ವಪ್ನ. ಅದು ಯಾವ ಉಪಾಧ್ಯಾಯರ ಕ್ಲಾಸೇ ಇರಲಿ, ಅವರು ಅದೆಷ್ಟೇ ಕಟ್ಟುನಿಟ್ಟಿನವರಾಗಿರಲಿ, ಅವರು ಕೈಲಿ ಬೆತ್ತವನ್ನೇ ಏನು ಚಾಟಿಯನ್ನೇ ಹಿಡಿದುಕೊಂಡುಬರಲಿ, ಅವರು ಮಾಡುವ ಪಾಠ ಅವನಿಗೆ ಹಿಡಿಸಲಿಲ್ಲ, ಅವನ ತಲೆಗೆ ಹತ್ತಲಿಲ್ಲ ಅಂದರೆ ಸಾಕು ತನ್ನೆದುರಿನ ಡೆಸ್ಕ್‌ಗೆ ತನ್ನೆರೆಡು ಕೈಗಳನ್ನು ಮೊಣಕೈವರೆಗೂ ಊರಿ ಆಸನ ಸಿದ್ಧಪಡಿಸಿಕೊಂಡು ತನ್ನ ತಲೆಯನ್ನು ಅದರ ಮೇಲೆ ಪ್ರತಿಷ್ಠಾಪಿಸಿ ಸೊಂಪಾಗಿ ನಿದ್ದೆ ಮಾಡಲಾರಂಭಿಸುತ್ತಾನೆ. ಉಪಾಧ್ಯಾಯರು ನೋಡಿ ಸನ್ನೆ ಮಾಡಿದಾಗ ಪಕ್ಕದವರು ಅವನ ಬೆನ್ನಿಗೆ ತಿವಿದರೂ ಅವನಿಗೆ ತಿಳಿಯುವುದಿಲ್ಲ. ಉಪಾಧ್ಯಾಯರೇ ಬೆತ್ತದಿಂದ ಅವನ ಬೊಜ್ಜು ಹೊಟ್ಟೆಗೆ ತಿವಿದರೂ ಕೆಲವೊಮ್ಮೆ ಅವನನ್ನು ‘ಸಮಾಧಿ ಸ್ಥಿತಿ’ಯಿಂದ ಹೊರಗೆಳೆಯಲು ಸಾಧ್ಯವಾಗುವುದಿಲ್ಲ.

ಪರಮೇಶಿಗೆ ಜಗತ್ತಿನಲ್ಲಿ ಮಾಡಲಿಕ್ಕಿರುವುದು ಎರಡೇ ಕೆಲಸ. ಒಂದು ಹೊಟ್ಟೆ ತುಂಬಾ ತಿನ್ನುವುದು ಮತ್ತೊಂದು ಕಣ್ಣುತುಂಬಾ ನಿದ್ದೆ ಮಾಡುವುದು. ದೇವರು ಒಬ್ಬೊಬ್ಬರನ್ನು ಒಂದೊಂದು ಕೆಲಸ ಮಾಡುವುದಕ್ಕಾಗಿ ಭೂಮಿಗೆ ಕಳುಹಿಸಿರುತ್ತಾನೆ ಎಂದು ಬಲವಾಗಿ ನಂಬಿರುವ ಈತ ತನ್ನನ್ನು ದೇವರು ಈ ಎರಡು ಮಹತ್ಕಾರ್ಯ ಮಾಡಲಿಕ್ಕಾಗಿಯೇ ಕಳುಹಿಸಿಕೊಟ್ಟಿದ್ದಾನೆ ಎಂದು ಅವರಪ್ಪನ ಮೇಲೆ ಆಣೆ ಹಾಕಿ ಹೇಳುತ್ತಾನೆ. ಊಟಕ್ಕೆ ಕುಳಿತರೆ ಅವನೇ ಭೀಮಸೇನ, ಅವನೇ ಘಟೋತ್ಗಜ. ಮೂರು ಮೂರು ಮಂದಿಯ ಊಟವನ್ನೇ ಒಬ್ಬನೇ ಅನಾಯಾಸವಾಗಿ ಉಂಡು ‘ಈಗೀಗ ನಾನು ಊಟ ಕಡಿಮೆ ಮಾಡಿಬಿಟ್ಟಿದ್ದೇನೆ. ಈ ಹಾಳಾದ್ದು ಬೊಜ್ಜು ಬೆಳೆದುಬಿಟ್ಟಿದೆ. ಕರಗಿಸಬೇಕು.’ ಎಂದು ಶುದ್ಧ ಸಂತನಂತೆ ಮಾತನಾಡುತ್ತಾನೆ. ಅವನ ಭರಪೂರವಾದ ಊಟ, ಸೊಂಪಾದ ನಿದ್ದೆಯನ್ನು ಕಂಡು ಕರುಬಿದವರು ಎಷ್ಟು ಜನ? ಖ್ಯಾತ ಬರಹಗಾರರೊಬ್ಬರು `ಜಗತ್ತಿಗೇ ಹೊಟ್ಟೆ ಕಿಚ್ಚಾಗುವಂತೆ ಬದುಕ್ರೋ’ ಎಂದದ್ದನ್ನು ನಮ್ಮ ಪರಮೇಶಿ ಕಾಯಾ-ವಾಚಾ-ಮನಸಾ ಪಾಲಿಸುತ್ತಿದ್ದಾನೆ.

ಪೂರ್ಣ ಲೇಖನಕ್ಕಾಗಿ ಇಲ್ಲಿ ತಾಕಿ :‌ಪರಮೇಶಿ ನಿದ್ದೆ ಪ್ರಸಂಗ!

ನನ್ನ ಸಾಧನೆಗೆ ಹಾಸ್ಟೆಲ್ ತಿಗಣೆಗಳೇ ಕಾರಣ!

27 ಫೆಬ್ರ

ಚಿನ್ನದ ಪದಕ ಪಡೆದ  ವಿದ್ಯಾರ್ಥಿಗೆ ತಿಗಣೆಯೇ ಗುರು

ಬೆಳಗಾವಿ: ೨೦೦೯-೨೦೧೦ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ತಂತ್ರೇಶ್ ಗೌಡ ತನ್ನ ಸಾಧನೆಗೆ ತನ್ನ ಹಾಸಿಗೆಯಲ್ಲಿ ವಾಸವಾಗಿರುವ ತಿಗಣೆಗಳೇ ಕಾರಣ ಎಂದು ತಿಳಿಸಿದ್ದಾರೆ.

ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯಪಾಲ ಭಾರದಧ್ವಜರಿಂದ ಚಿನ್ನದ ಪದಕವನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ತಂತ್ರೇಶ್ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದು ಹೀಗೆ.

“ನಾನು ಅಂತಹ ಪ್ರತಿಭಾವಂತ ವಿದ್ಯಾರ್ಥಿಯಲ್ಲ. ಪಿಯುಸಿಯವರೆಗೆ ನಾನು ಅತಿ ಸಾಧಾರಣ ಮಟ್ಟದ ಫಲಿತಾಂಶವನ್ನೇ ಪಡೆಯುತ್ತಿದ್ದೆ. ನಾನು ವಿಪರೀತ ಸೋಮಾರಿ ಎಂದು ಎಲ್ಲರೂ ಹೇಳುತ್ತಿದ್ದರು. ಕುಂಭ ಕರ್ಣನ ಹಾಗೆ ನಿದ್ದೆ ಮಾಡುತ್ತಿದ್ದೆ. ಸಂಜೆ ಏಳಕ್ಕೆ ಊಟ ಮಾಡಿ ಮಲಗಿದರೆ ಬೆಳಿಗ್ಗೆ ಒಂಭತ್ತು ಗಂಟೆಗೆ ಕಡಿಮೆ ಏಳುತ್ತಲೇ ಇರಲಿಲ್ಲ. ಅಷ್ಟು ಸಾಲದೆಂಬಂತೆ ತರಗತಿಯಲ್ಲಿ ಪ್ರತಿ ಲೆಕ್ಚರ್ ಬಂದಾಗಲೂ ನಿದ್ದೆ ಮಾಡುತ್ತಿದ್ದೆ ಹೀಗಾಗಿ ನನಗೆ ಓದಲು ಸಮಯವೇ ಸಿಕ್ಕುತ್ತಿರಲಿಲ್ಲ. ಪರೀಕ್ಷೆ ಬರೆಯುವಾಗಲೂ ವೇಗವಾಗಿ ಒಂದೇ ತಾಸಿನಲ್ಲಿ ಗೊತ್ತಿರುವುದನ್ನೆಲ್ಲ ಬರೆದು ಉಳಿದ ಎರಡು ತಾಸು ಹಾಯಾಗಿ ನಿದ್ದೆ ಮಾಡುತ್ತಿದ್ದೆ. ರಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ಬುನ್ಸೆನ್ ಬರ್ನರಿನಲ್ಲಿ ಆಸಿಡ್ ಮಿಶ್ರಣವನ್ನು ಕಾಯಲು ಇಟ್ಟು ನಿದ್ದೆ ಮಾಡಿದ್ದೆನಂತೆ. ಎದ್ದು ನೋಡುವಷ್ಟರಲ್ಲಿ ನನ್ನ ಉತ್ತರ ಪತ್ರಿಕೆಯು ಆವಿಯಾಗಿ ಹೋಗಿತ್ತು.

ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ.

“ಹೀಗಿದ್ದ ನಾನು ಇಂಜಿನಿಯರಿಂಗ್ ಸೇರಿದೊಡನೆ ತುಂಬಾ ಬದಲಾಗಿ ಹೋದೆ. ಬಳ್ಳಾರಿಯಲ್ಲಿ ನಾವು ವಾಸವಾಗಿರುವುದು. ಅಲ್ಲಿನ ಕಾಲೇಜು ಸಿಕ್ಕಲಿಲ್ಲ ಎಂದು ಹಾಸನದ ಕಾಲೇಜು ಸೇರಿದೆ. ಅಲ್ಲಿನ ಹಾಸ್ಟೆಲಿನಲ್ಲಿ ವಾಸ ಶುರು ಮಾಡಿದಾಗಿನಿಂದ ನನ್ನ ಜೀವನ ಶೈಲಿಯೇ ಬದಲಾಗಿ ಹೋಯ್ತು.

“ಹಾಸಿಗೆಯ ತುಂಬ ಚೆಲ್ಲಿದ ಮಲ್ಲಿಗೆಯ ಹಾಗೆ ತುಂಬಿಕೊಂಡ ತಿಗಣೆಗಳು ನನಗೆ ಗುರುಗಳಾದವು. ಎಂತೆಂಥ ಗುರುಗಳೂ ಕಲಿಸಲಾಗದ ಶಿಸ್ತನ್ನು ರೂಢಿಸಿದವು. ಒಂದು ಕಾಲದಲ್ಲಿ ಎಲ್ಲರಿಂದ ಕುಂಭಕರ್ಣ ಎಂದು ಬಿರುದನ್ನು ಪಡೆದಿದ್ದ ನಾನು ರಾತ್ರಿ ಎರಡು ಮೂರಕ್ಕಿಂತ ಹೆಚ್ಚು ತಾಸು ಮಲಗಿರಲು ಸಾಧ್ಯವೇ ಆಗಲಿಲ್ಲ. ಅತ್ಯಾಚಾರಿಯ ಆತ್ಮಸಾಕ್ಷಿಯು ಕ್ಷಣಕ್ಷಣವೂ ಆತನನ್ನು ಕುಟುಕುವ ಹಾಗೆ ರಾತ್ರಿ ಮಲಗಿ ನಿದ್ದೆ ಹತ್ತುತ್ತಿರುವಂತೆಯೇ ತಿಗಣೆಗಳ ತಂಡವು ಮೈಯೆಲ್ಲಾ  ಆವರಿಸಿ ಕಂಡಕಂಡಲ್ಲೆಲ್ಲ ಕಡಿಯುತ್ತಿದ್ದವು. ಕತ್ತಿನ ಹಿಂಭಾಗ, ತೋಳು ತೊಡೆ ಎನ್ನದೆ ಎಲ್ಲಿ ಬೇಕೆಂದರಲ್ಲಿ ಕಡಿಯುತ್ತ ನಿದ್ದೆಯಿಂದ ಎಚ್ಛೆತ್ತುಕೊಳ್ಳುವಂತೆ ಮಾಡುತ್ತಿದ್ದವು. ಒಮ್ಮೆ ನಿದ್ದೆಯಿಂದೆದ್ದು ಲೈಟ್ ಹಾಕಿ ಹುಡುಕಿದರೆ ಒಬ್ಬರೂ ಇಲ್ಲ! ಅದೃಶ್ಯ ದೇವತೆಗಳಂತೆ ಅವು ನನ್ನನ್ನು ಸದಾ ಪ್ರಜ್ಞೆಯಿಂದಿರುವಂತೆ ಕಾಯುತ್ತಿದ್ದವು. ಅವರು ದಾಳಿ ಮಾಡಿದ ಜಾಗಗಳಲ್ಲಿ ಎದ್ದ ಗುಳ್ಳೆಗಳು ಮತ್ತೆ ತೂಕಡಿಸದಂತೆ ನೋಡಿಕೊಳ್ಳುತ್ತಿದ್ದವು.

“ನಾನು ಹಗಲು ರಾತ್ರಿಯೆನ್ನದೆ ಓದಲು ಶುರುಮಾಡಿದ್ದು ಆಗಲೇ. ರೂಮಿನಲ್ಲಿ ದೀಪ ಹಾಕಿದರೆ ಗೆಳೆಯರು ಓಡಿಸಿಕೊಂಡು ಬರುತ್ತಾರೆಂದು ಹೆದರಿ ಬೀದಿ ದೀಪದಡಿಯಲ್ಲಿ ಓದಲು ಶುರು ಮಾಡಿದೆ. ಮೊದ ಮೊದಲಿಗೆ ಸಿಕ್ಕ ಕತೆ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದೆ. ಇಡೀ ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಈಗ ನಾನು ಈ ಹಂತವನ್ನು ತಲುಪಿದ್ದೇನೆ ಎಂದರೆ ಅದಕ್ಕೆ ನಮ್ಮ ಹಾಸ್ಟೆಲಿನ ತಿಗಣೆಗಳೇ ಕಾರಣ.”

ಹಾಸ್ಟೆಲಿನ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಈ ರೀತಿ ನೆರವಾಗುವ ತಿಗಣೆಗಳನ್ನು ವಿದ್ಯಾರ್ಥಿ ಮಿತ್ರ  ಎಂದು ಕರೆಯಬೇಕು ಎಂದ ತಂತ್ರೇಶ್ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಿಗಣೆಗಳ ಬಗ್ಗೆ ತೋರುತ್ತಿರುವ ವೈಷಮ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ನನ್ನ ಜೂನಿಯರ್ ಗಳು ವಿದೇಶಿ ತಂತ್ರಜ್ಞಾನದ ಕೊಡುಗೆಯಾದ ತಿಗಣೆ ನಿರೋಧಕ ಹಾಸಿಗೆಗಳನ್ನು  ಬಳಸುತ್ತಿದ್ದಾರೆ. ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ನಿಸರ್ಗದತ್ತವಾದ `ವಿದ್ಯಾರ್ಥಿ ಮಿತ್ರ’ರನ್ನು ಕೊಲ್ಲುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ.”

ತಂತ್ರೇಶರ ಅಭಿಪ್ರಾಯವನ್ನು ಕಟುವಾಗಿ ವಿರೋಧಿಸಿದ ಅವರ ಜೂನಿಯರ್ ಹಾಗೂ ರೂಮ್ ಮೇಟ್ ಯಂತ್ರೇಶ್ ಜಾದವ್, “ಹಾಸ್ಟೆಲಿನ ಊಟ ತಿಂಡಿಯಿಂದಾಗಿ ನಮ್ಮ ದೇಹಗಳು ಮೆಡಿಕಲ್ ಕಾಲೇಜಿನಲ್ಲಿ ನೇತು ಹಾಕುವ ಅಸ್ಥಿಪಂಜರಗಳಾಗಿರುತ್ತವೆ. ಹೀಗಿರುವಾಗ ಪಠ್ಯೇತರ ಚಟುವಟಿಕೆಯಿಂದ ಸಂಪಾದಿಸಿಕೊಂಡ ಅಲ್ಪ ಸ್ವಲ್ಪ ರಕ್ತವನ್ನೂ ಈ ತಿಗಣೆಗಳು ಹೀರಿದರೆ ನಾವು ಬದುಕುವುದು ಹೇಗೆ? ಹಾಸ್ಟೆಲಿನಲ್ಲಿ ಒಂದೋ ನಾವಿರಬೇಕು ಇಲ್ಲವೇ ತಿಗಣೆಗಳಿರಬೇಕು.” ಎಂದು ನಮ್ಮ ವರದಿಗಾರನಲ್ಲಿ ತಮ್ಮ ಆಕ್ರೋಶ ತೋಡಿಕೊಂಡರು.

ಈ ಕುರಿತು ಅಭಿಪ್ರಾಯ ತಿಳಿಯಲು ತಿಗಣೆಗಳ ಪ್ರತಿನಿಧಿಯನ್ನು ಆಹ್ವಾನಿಸಲಾಗಿತ್ತಾದರೂ ಸಂಜೆಯಾದರೂ ಯಾರ ಪತ್ತೆಯೂ ಇಲ್ಲ. ತಿಗಣೆ ಪ್ರತಿನಿಧಿಯು ರಾಜ್ಯಪಾಲರ ಕತ್ತಿನ ಹಿಂದೆ ರಕ್ತಹೀರುವುದರಲ್ಲಿ ಮಗ್ನವಾಗಿದ್ದರೆಂದು   ಅನಂತರ ತಿಳಿದುಬಂದಿತು.

ಪಾಕ್ ಶಾಂತಿಪ್ರಿಯ ದೇಶ ಎನ್ನುವುದಕ್ಕೆ ಪುರಾವೆ ಏನಿದೆ: ಪಾಕ್ ವಿದೇಶಾಂಗ ಕಾರ್ಯದರ್ಶಿ

26 ಫೆಬ್ರ

ಅಭ್ಯಾಸ ಬಲದಿಂದ ಅಪಸವ್ಯದ ಹೇಳಿಕೆ

ನವದೆಹಲಿ: ಮುಂಬೈ ದಾಳಿಯ ನಂತರ ಹದಗೆಟ್ಟಿದ್ದ ಭಾರತ ಪಾಕಿಸ್ತಾನ ನಡುವಿನ ಶಾಂತಿ  ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಪೈಲ್ವಾನ್ ಬಶೀರ್ ವಿವಾದಾತ್ಮಕವಾದ ಹೇಳಿಕೆ ನೀಡಿ ತನ್ನ ದೇಶಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ನಲವತ್ತೈದು ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ದೇಶಗಳ ಕಾರ್ಯದರ್ಶಿಗಳು ಪರಸ್ಪರ ದೋಷಾರೋಪಣೆಯಲ್ಲಿಯೇ ಸಮಯ ಕಳೆದರು. ಭಾರತದ ನಿದೇಶಾಂಗ ಕಾರ್ಯದರ್ಶಿ ನೆಲಸಮ ರಾವ್ ಪಾಕಿಸ್ತಾನದ ಮೇಲೆ ನಂಬಿಕೆ ಬರುವಂತೆ ಅದು ನಡೆದುಕೊಳ್ಳಬೇಕು. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯ ಗಳು ನಡೆಯದಂತೆ  ಕ್ರಮ ಕೈಗೊಳ್ಳಬೇಕು ಎಂದರು. ಪಾಕಿಸ್ತಾನದಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿಯೇ ಶಾರುಖ್ ಖಾನ್ ಏನೆಲ್ಲ ಪಡಿಪಾಟಲು ಪಡಬೇಕಾಯಿತು. ಹೀಗಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಮ್ಮ ಸರಕಾರ ಮುಂದಾಗಿರುವುದೇ ನಮ್ಮ ಔದಾರ್ಯವನ್ನು ತೋರುತ್ತದೆ ಎಂದರು.

ಇದರಿಂದ ಕೆರಳಿದ ಪೈಲ್ವಾನ್ ಬಶೀರ್ ನಾವೇನು ಮೇಲೆ ಬಿದ್ದು ಮಾತುಕತೆಗೆ ಬಂದಿಲ್ಲ. ನಮಗೆ ಮಾತುಕತೆಯಲ್ಲಿ ಎಂದಿಗೂ ನಂಬಿಕೆಯಿಲ್ಲ. ದೇಶದ ಪ್ರಧಾನಿಯನ್ನು ಕೆಳಗಿಳಿಸುವಾಗೂ ಸಹ ನಾವು ಮಾತುಕತೆಯಾಡುವುದಿಲ್ಲ. ನಮ್ಮದೇನಿದ್ದರೂ ನೇರವಾದ ಕೆಲಸ. ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಗೋಳುಗರೆಯುತ್ತದೆ. ಪಾಕಿಸ್ತಾನದತ್ತ ಬೆರಳು ಮಾಡುತ್ತದೆ. ಇದು ಎಷ್ಟೋ ಕಾಲದಿಂದ ನಡೆದುಬಂದಿರುವ  ವಿದ್ಯಮಾನ. ಪಾಕಿಸ್ತಾನ ಹೇಗಿರಬೇಕು ಏನು ಮಾಡಬೇಕು ಎನ್ನುವ ಪ್ರವಚನ ಕೊಡುವುದನ್ನು ನವದೆಹಲಿ ನಿಲ್ಲಿಸಬೇಕು. ನಾವೂ ಭಯೋತ್ಪಾದನೆಯ ಬಿಸಿ ಎದುರಿಸುತ್ತಿದ್ದೇವೆ.  ಭಯೋತ್ಪಾದಕರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎನ್ನುವುದಕ್ಕೆ ಭಾರತ ಯಾವ ಪುರಾವೆಯನ್ನೂ ಒದಗಿಸಿಲ್ಲ. ಅದು ಕಂತೆಗಟ್ಟಲೆ ಕಳಿಸಿರುವ `ಸಾಹಿತ್ಯ’ ವನ್ನು ಪುರಾವೆ ಎನ್ನಲಾಗುವುದಿಲ್ಲ.

ತಮ್ಮನ್ನು ಜಂಟಲ್ ಮ್ಯಾನ್ ಎಂದದ್ದಕ್ಕೂ ಅಭ್ಯಾಸ ಬಲದಿಂದ ಪುರಾವೆ ನೀಡಿ ಎಂದು ಹೇಳಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.

ನೆಲಸಮ ರಾವ್ ಖಾರವಾಗಿ ಉತ್ತರಿಸುತ್ತ, “ಭಾರತ ಕಳಿಸಿಕೊಟ್ಟಿರುವ ಪುರಾವೆಗಳನ್ನು ಓದುವುದಕ್ಕೆ ಪಾಕಿಸ್ತಾನದಲ್ಲಿ ಓದು ಬಲ್ಲ ಜನರಿದ್ದಾರೆಯೇ ಎಂದು ಮೊದಲು ಪರೀಕ್ಷಿಸಿ. ಇವನ್ನು ಪುರಾವೆಯಲ್ಲ ಕಟ್ಟು ಕತೆ ಎನ್ನುವ ಮೊದಲು ಒಮ್ಮೆ ಓದಿ ನೋಡಿ. ಪಾಕಿಸ್ತಾನ ತನ್ನದೇ ಸೃಷ್ಟಿಯ ಬಲಿಪಶುವಾಗಿರಬಹುದು, ಆದರೆ ಭಾರತ ಪಾಕಿಸ್ತಾನದ ಸೃಷ್ಟಿಯ ಭಯೋತ್ಪಾದನೆಗೆ ಬಲಿಪಶುವಾಗಿದೆ. ನಾನು ಪ್ರಜಾಪ್ರಭುತ್ವವಿರುವ ಸರಕಾರಕ್ಕೆ ಉತ್ತರದಾಯಿ ನಿಮ್ಮಂತೆ ಮಿಲಿಟರಿ ನಾಯಕನ ಆಜ್ಞಾಧಾರಿಯಲ್ಲ.” ಎಂದಾಗ ಬಶೀರ್ ಭಾರತ ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರು.

ಶಾಂತಿ ಮಾತುಕತೆ ಒಂದು ಹಂತಕ್ಕೆ ಬಂದಾಗ ನೆಲಸಮ ರಾವ್ ಸ್ನೇಹಪೂರ್ವಕವಾಗಿ ಬಶೀರರ ಕೈ ಕುಲುಕಿ, “ಪಾಕಿಸ್ತಾನವೂ ಸಹ ಶಾಂತಿ ಪ್ರಿಯ ರಾಷ್ಟ್ರ. ಅದು ಭಯೋತ್ಪಾದಕರು ಬೆಳೆಯುವುದಕ್ಕೆ ನೆರವು ನೀಡುವುದಿಲ್ಲ. ನೀವು ಒಳ್ಳೆಯ ಜಂಟಲ್ ಮೆನ್…” ಎಂದರು.

ರಾವ್ ರವರ ಮಾತನ್ನು ಅರ್ಧಕ್ಕೇ ತುಂಡರಿಸಿದ ಪೈಲ್ವಾನ್ ಬಶೀರ್, “ಸುಳ್ಳು, ಕಟ್ಟುಕತೆ. ನೀವು ಮಾಡಿದ ಆರೋಪಗಳಿಗೆ ಪುರಾವೆ ಏನು?” ಎಂದು ಅಬ್ಬರಿಸಿದರು.

ಕೂಡಲೇ ಬಶೀರರ ಆಪ್ತಕಾರ್ಯದರ್ಶಿ ಸಂದರ್ಭವನ್ನು ಕಿವಿಯಲ್ಲಿ  ಪಿಸುಗುಟ್ಟಿದ ಮೇಲೆ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ನಕ್ಕರು ಎಂದು ವರದಿಯಾಗಿದೆ.

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

25 ಫೆಬ್ರ

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.

ಬೆಂಗಳೂರಿನ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ನ ಕ್ಯಾಂಟೀನಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಂಶೋಧಕರು ತಮ್ಮ ಅಧ್ಯಯನದ ವರದಿಯನ್ನು ಹಂಚಿಕೊಂಡರು. ತೂಕಡಿಸುತ್ತಿದ್ದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಂಡ್ಯದ ವಿಜ್ಞಾನಿ ಗೊರಕೆರಾಮ್ ನುಸ್ಲುವಾಡಿಯಾ “ಮನುಷ್ಯನಿಗೆ ನಿದ್ದೆ ಏಕೆ ಬೇಕು? ನಿದ್ದೆಯ ಸಮಯದಲ್ಲಿ ಮನುಷ್ಯನ ದೇಹ ಹಾಗೂ ಮೆದುಳಿನಲ್ಲಾಗುವ ಕ್ರಿಯೆಗಳು ಎಂಥವು ಎಂಬ ಬಗ್ಗೆ ವೈಜ್ಞಾನಿಕ ಜಗತ್ತಿಗೆ ಹೆಚ್ಚಿನ ಜ್ಞಾನವಿಲ್ಲ. ಮನುಷ್ಯನಿಗೆ ಸರಾಸರಿಯಾಗಿ ಎಷ್ಟು ತಾಸುಗಳ ನಿದ್ರೆಯ ಆವಶ್ಯಕತೆ ಇದೆ ಎಂಬ ಬಗ್ಗೆ ಒಮ್ಮತಕ್ಕೆ ಬರಲಾಗಿಲ್ಲ. ನಿದ್ದೆಯ ಸಮಯದಲ್ಲಿ ಬೀಳುವ ಕನಸುಗಳ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ನಾಲ್ಕು ಮಂದಿ ಕುರುಡರು ಆನೆಯನ್ನು  ಮುಟ್ಟಿ ತಿಳಿದಂತೆ ನಿದ್ದೆಯ ನಾನಾ ಮಜಲುಗಳನ್ನು ತಡಕಾಡುತ್ತಿದ್ದಾರೆ.” ಎಂದರು.

ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

“ಈ ಜಾಗತಿಕ ಸಂಶೋಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳು ಹಿಂದೆ ಬಿದ್ದಿಲ್ಲ. ಮನುಷ್ಯನು ನಿದ್ದೆ ಮಾಡುವಾಗ ಮೆದುಳಿನಲ್ಲಿ ಚಟುವಟಿಕೆ ಕ್ಷೀಣಗೊಳ್ಳುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಧ್ಯಾನದ ಉಚ್ಛ್ರಾಯ ಸ್ಥಿತಿಯಲ್ಲಿರುವ ಯೋಗಿಯ ಮೆದುಳಿನ ಅಲೆಗಳಿಗೂ ತರಗತಿಯಲ್ಲಿ ನಿದ್ದೆಯಲ್ಲಿ ತಲ್ಲೀನನಾದ ವಿದ್ಯಾರ್ಥಿಯ ಮೆದುಳಿನ ಅಲೆಗಳಿಗೂ ಅನೇಕ ಸಾಮ್ಯತೆಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದವು. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವಾಗ, ರೋಚಕ ಕಾದಂಬರಿಯಲ್ಲಿ ಮೈಮರೆತಿರುವಾಗ, ಪಾರ್ಕಿನಲ್ಲಿ ಪ್ರಿಯತಮೆಯ ಅಂಗೈ ಹಿಡಿದು ಕೂತಿರುವಾಗ, ಶೌಚಾಲಯದಲ್ಲಿ ಸಲೀಸಾಗಿ ಮಲ ವಿಸರ್ಜನೆಯಾಗುವಾಗ ಮನುಷ್ಯನ ಮೆದುಳಿನಲ್ಲಾಗುವ ಬದಲಾವಣೆಗಳನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದೆವು. ಆಶ್ಚರ್ಯಕರವಾದ ಸಂಗತಿಯೆಂದರೆ  ಆಲೋಚನೆಗಳು, ಸಪ್ಪಳಗಳು ಕ್ಷೀಣವಾಗಿರುವ ಈ ಎಲ್ಲಾ ಕ್ರಿಯೆಗಳಲ್ಲಿ ಮೆದುಳು ತೋರುವ ಪ್ರತಿಕ್ರಿಯೆಗೂ ತರಗತಿಯಲ್ಲಿ ವಿದ್ಯಾರ್ಥಿಯು ತೂಕಡಿಸುವಾಗ ಆತನ ಮೆದುಳು ತೋರುವ ಪ್ರತಿಕ್ರಿಯೆಗೂ ಯಾವ ವ್ಯತ್ಯಾಸವೂ ಇಲ್ಲ. ಒಟ್ಟಿನಲ್ಲಿ ನಮ್ಮ ಸಂಶೋಧನೆಯ ಫಲಿತಾಂಶವೆಂದರೆ: ನಿದ್ದೆ ಮಾಡುವಾಗ ಮನುಷ್ಯನ ಮೆದುಳಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಹೆಚ್ಚು” ಎಂದು ಗೊರಕೆರಾಮ್ ಹೇಳಿದುದಾಗಿ ನಮ್ಮ ತೂಕಡಿಸುತ್ತಿದ್ದ ವರದಿಗಾರನ ಟೇಪ್ ರೆಕಾರ್ಡ್ ವರದಿ ಮಾಡಿದೆ.

ಈ ಸಂಶೋಧನೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದು ಭವಿಷ್ಯ ನುಡಿದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ತೂಗುತಲೆ ವೆಂಕಟೇಶ್ “ತರಗತಿಯಲ್ಲಿ ತಮ್ಮ ಪಾಡಿಗೆ ತಾವು ತೂಕಡಿಸುತ್ತ ಕೂರುವ ವಿದ್ಯಾರ್ಥಿಗಳನ್ನು ಹಿಂಸಿಸುವ, ಅಪಮಾನಿಸುವ ಅಧ್ಯಾಪಕರುಗಳಿಗೆ ಈ ಸಂಶೋಧನೆಯ ಫಲಿತಾಂಶ ಚಾಟಿ ಏಟು ನೀಡುವಂತಿದೆ. ಅತಿ ಬುದ್ಧಿವಂತರು, ದೇಶಕ್ಕಾಗಿ ಅವಿರತ ದುಡಿಯುವವರು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವವರು ಎಲ್ಲರೂ ನಿದ್ದೆಯ ಮಹತ್ವ ವಿವರಿಸುವ ಜೀವಂತ ಸಾಕ್ಷಿಗಳಾಗಿದ್ದಾರೆ.  ಇನ್ನು ಮುಂದಾದರೂ ತಮ್ಮ ಪಾಠಗಳನ್ನು ಯಾರು ಹೆಚ್ಚು ಏಕಾಗ್ರತೆಯಿಂದ ಕೇಳುತ್ತಿದ್ದಾರೆ ಎಂದು ಅವರಿಗೆ ತಿಳಿದೀತೆಂದು ಆಶಿಸಬಹುದು.” ಎಂದರು.

ವೈಜ್ಞಾನಿಕವಾದ ಈ ಅಧ್ಯಯನದಿಂದ ತಮ್ಮ ಪಾಠ ಪ್ರವಚನದ ವಿಧಾನದಲ್ಲಿ ಏನೂ ಬದಲಾವಣೆಯಾಗದು ಎಂದಿರುವ   ಅಧ್ಯಾಪಕ ಕೊರೆತದೇವ್  ತಮಗೆ ಈ ವೈಜ್ಞಾನಿಕ ಸತ್ಯವು ಅನುಭವಜನ್ಯವಾಗಿ ತಿಳಿದುಬಂದಿತ್ತು ಎಂದರು. “ನಮ್ಮ ಪಾಠದ ವಿಧಾನ, ಧ್ವನಿಯ ಏರಿಳಿತ ಹಾಗೂ  ಅನಾಕರ್ಷಕ ಪಠ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ವಿದ್ಯಾರ್ಥಿಗಳು ಏಕೆ  ಅಪಾಯಕಾರಿ ಹಾಗೂ ಕಷ್ಟಕರವಾದ ಭಂಗಿಗಳಲ್ಲೂ ನಿದ್ದೆ ಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಗಲಭೆಯಿಬ್ಬಿಸದೆ ಏಕಾಗ್ರವಾಗಿ ಪಾಠ ಕೇಳಲೆಂದೇ ನಾವು ಈ ಶೈಲಿಯನ್ನು ಅನುಸರಿಸುವುದು.”

ನಿದ್ದೆಯ ಬಗ್ಗೆ ಖ್ಯಾತ ಪ್ರವಚನಕಾರರು ತಮ್ಮ ಅಭಿಪ್ರಾಯ ತಿಳಿಸುವಾಗ ನಮ್ಮ ವರದಿಗಾರನೂ, ಆತನ ರೆಕಾರ್ಡರೂ ನಿದ್ದೆ ಮಾಡುತ್ತಿದ್ದುವಾದ್ದರಿಂದ ವರದಿ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ತೂಕಡಿಸುತ್ತಿರುವ ನಮ್ಮ ಓದುಗರಲ್ಲಿ ನಾವು ವಿಷಾದಿಸುತ್ತೇವೆ.


ನೂರು ಟನ್ ಉಕ್ಕಿನ ಗುಂಡನ್ನು ಉರುಳಿಸಲಿರುವ ಮೋನಿಯಾ!

23 ಫೆಬ್ರ

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ: ನೋಇಲಿ

ಬೆಂಗಳೂರು, ಫೆ 23: ಹೈಕಮಾಂಡ್ ಶಕ್ತಿಯೇನೆಂದು ತೋರಿಸುವುದಕ್ಕಾಗಿ ಅಧಿನಾಯಕಿ ಮೋನಿಯಾ ಗಾಂಧಿಯವರು ತಮ್ಮ ಮನಸ್ಸಿನ ಶಕ್ತಿಯಿಂದಲೇ ನೂರು ಟನ್ ತೂಕದ ಉಕ್ಕಿನ ಗುಂಡನ್ನು ಉರುಳಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕ್ಷಣಮಾತ್ರದಲ್ಲಿ ಕರ್ನಾಟಕದ ಸರಕಾರವನ್ನು ಉರುಳಿಸಬಹುದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ವೀರಪ್ಪ ನೋಇಲಿಯವರು ಈ ಸುದ್ದಿಯನ್ನು ದೃಢಪಡಿಸಿ ದ್ದಾರೆ.   ವಿಧಾನಸೌಧದ ಎದುರು ಮೆಟ್ರೋ ಕಾಮಗಾರಿಗಾಗಿ ಹಾಕಿದ್ದ ಟೆಂಟಿನ ಬಳಿ ಕೂತು  ಸುದ್ದಿಗಾರರೊಂದಿಗೆ ಮಾತನಾಡಿದ ನೋಇಲಿ ದೇಶದ ಜನತೆಯೆ ಹೈಕಮಾಂಡ್ ಪರಮಾಧಿಕಾರ ಎಂಥದ್ದು ಎಂದು ಸಾಬೀತು ಪಡಿಸುವ ಸಲುವಾಗಿ ಈ ಪವಾಡ ನಡೆಯಲಿದೆ. ನಮ್ಮದು ದುರ್ಗೆ ಆಳಿದ್ದ ಪಕ್ಷ. ಹೈಕಮಾಂಡ್ ಎಂದರೆ ಸಾಮಾನ್ಯವಲ್ಲ. ಚಿಟಕಿಹೊಡೆಯುವುದರಲ್ಲಿ ಸರಕಾರಗಳನ್ನು ಉರುಳಿಸಬಲ್ಲದು, ಕಣ್ಣು ಮಿಟುಕಿಸುವುದರಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಬಲ್ಲದು. ಮನಸ್ಸು ಮಾಡಿದರೆ ಹಿಮಾಲಯವನ್ನೇ ಇಟಲಿಗೆ ರವಾನಿಸಿಬಿಡಬಲ್ಲದು.

ತಮ್ಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ ವಿರೋಧ ಪಕ್ಷದವರಿಗೆ ಮೋನಿಯಾರ ಈ ಪವಾಡ ಕಣ್ಣು ತೆರೆಸಲಿದೆ ಎಂದರು. “ ನಮ್ಮ ಪಕ್ಷದಲ್ಲಿ ನೇತಾರರೆಲ್ಲ ಅಧಿನಾಯಕಿಯ ಸುತ್ತ ಸುತ್ತುವ ಗ್ರಹಗಳು ಎಂದು ಹಲವರು ಕಟಕಿಯಾಡುತ್ತಾರೆ. ಅವರಿಗೆ ತಿಳಿದಿರಲಿ, ಈ ಇಡಿಯ ಭೂಮಿಯಷ್ಟೇ ಅಲ್ಲ ಸೂರ್ಯ, ಚಂದ್ರ, ಶನಿ, ಗುರು ಗ್ರಹಗಳೂ ಸಹ ಮೇಡಂ ಸುತ್ತಲೇ ಸುತ್ತುವುದು. ನಾಸಾ ಬಿಡುಗಡೆ ಮಾಡಿದ ಯು ಟ್ಯೂಬ್ ವಿಡಿಯೋದಲ್ಲಿ ಈ ಅಂಶ ಸ್ಪಷ್ಟವಾಗಿದೆ. ಲಿಂಕು ಬೇಕಿದ್ದರೆ ತರೂರರ ಟ್ವಿಟರ್ ಪೇಜಿಗೆ ಭೇಟಿ ನೀಡಿ. ಇಂತಹ ಮಹಾಮಹಿಮ ಹೈಕಮಾಂಡ್ ಪಡೆದಿರುವ ನಮ್ಮ ದೇಶವೇ ಧನ್ಯ.ಮೇಡಂ  ಆಣತಿಯಿಲ್ಲದಿದ್ದರೆ ಯಾವ ಚರ್ಚಿನಲ್ಲೂ ಬೆಲ್ಲು ಮೊಳಗುವುದಿಲ್ಲ, ಕ್ಯಾಂಡಲ್ ಹೊತ್ತುವುದಿಲ್ಲ. ಸರಕಾರ ಇದುವರೆಗೆ ಜೀವಂತವಾಗಿದೆ ಎಂದರೆ ಅದಕ್ಕೆ ಮೇಡಂ ಕೃಪೆಯೇ ಕಾರಣ.”

“ಸ್ವಾಮಿ, ಆ ಮಹಾತಾಯಿಗೆ ಅಟೋಂದು ಶಕ್ತಿ ಅದೆ ಅಂತ ನಂಗೂ ಗೊತ್ತು. ಆಯಮ್ಮ ತನ್ನ ಶಕ್ತಿಯನ್ನೆಲ್ಲ ಗುಂಡುಕಲ್ಲು ಉರುಳಿಸಕೆ ಯಾಕೆ ಯೇಸ್ಟ್ ಮಾಡಬೇಕು. ಆವಮ್ಮ ಮನಸ್ಸು ಮಾಡಿದರೆ ಬಗೆಹರೀದ ತೊಂದ್ರೆ ಇಲ್ಲ. ಇಂಗೆ ಬೀಡಿ ಹೊಗೆಯಂಗೆ ಮೇಲ್ಕೇರ್ತಿರೋ ಉಣ್ಣೋ ಸಾಮಗ್ರಿ ರೇಟನ್ನ ಉರುಳ್ಸೋಕೆ ಮೇಡಂಗೆ ಆಗಾಕಿಲ್ವಾ?”   ನೊಯಿಲಿಯವರ ಮಾತನ್ನು ಆಲಿಸುತ್ತಿದ್ದ ಮೆಟ್ರೋ ಕಾಮಗಾರಿಯ ನೌಕರ ಸಾಮಾನ್ಯಪ್ಪ ಕೇಳಿದ  ಪ್ರಶ್ನೆಗೆ  ಉತ್ತರ ತಿಳಿಯದೆ ಸಚಿವರು ಮೌನವಾಗಿದ್ದರು.

ಕೆಲಸಮಯದ ನಂತರ ಸಚಿವರು ಸಾಮಾನ್ಯಪ್ಪನನ್ನು ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲಾ ಸಮಸ್ಯೆಗೂ ಪರಿಹಾರವಿದೆಯೆಂದು ಭರವಸೆ ನೀಡಿದರು. “ಮೇಡಂ ಕೈಲಿ ಸಾಧ್ಯವಾಗದ್ದು ಏನೂ ಇಲ್ಲ. ನೀನು ಅದೇನೋ ಜುಜುಬಿ ಕೆಲಸ ಮಾಡಲಿ ಮೇಡಂ ಅಂದೆಯಲ್ಲ ಅದನ್ನ ನೂರನಲವತ್ತು ಅಕ್ಷರದೊಳಗೆ ಟೈಪ್ ಮಾಡಿ ಟ್ವಿಟರಿನಲ್ಲಿ ಪೋಸ್ಟ್ ಮಾಡು. ನಮ್ ತರೂರ ಗಮನಕ್ಕೆ ತಾ. ಆಮೇಲೆ ಅದನ್ನು ಅವರು ಮೇಡಂ ಮುಂದಿಡುವರು.”

ಸಚಿವರ ಉತ್ತರದಿಂದ ಸಂತೃಪ್ತನಾದ ಸಾಮಾನ್ಯಪ್ಪ ಬೀಡಿಗೆ ಕಾಸು ಪಡೆದು ಟೆಂಟಿನ ಮರೆಗೆ ಸರಿದನು.

ನಿರೀಕ್ಷಿಸಿ ಪ್ರತಂಪು ಸಿಂಹರ ಲೇಖನ!

22 ಫೆಬ್ರ

ನಗೆ ನಗಾರಿಗೆ ಮೊದಲ ವರ್ಷ ತುಂಬಿದಾಗ ಕನ್ನಡದ ಖ್ಯಾತ ಪತ್ರಕರ್ತ ಗವಿ ಬಿಳಿಗೆರೆ ವಿಶೇಷ ಲೇಖನವೊಂದನ್ನು ಬರೆದುಕೊಟ್ಟಿದ್ದರು. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ಹಾಗೂ ನಮ್ಮ ಬಗ್ಗೆ ಏನಾದರೂ ನಾಲ್ಕು ಮಾತು ಬರೆಯುತ್ತಾರೆ ಎಂದು ನಿರೀಕ್ಷಿಸಿದ್ದ ನಮಗೆ ಗವಿಯವರ ಚಿಕ್ಕ ಆಟೋ`ಭಯಾಗ್ರಫಿ’ ಓದಲು ಸಿಕ್ಕಿತು. ಅದು ನಗಾರಿ ವಿಶೇಷ ಲೇಖನವಾಗುವ ಬದಲು ಗವಿ ಬಿಳಿಗೆರೆ ಸಾಮಾನ್ಯ ಲೇಖನವಾಗಿ ಹೋಗಿತ್ತು.

ಹೀಗಾಗಿ ಎರಡನೆಯ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಯಾರ ಕೈಲಿ ವಿಶೇಷ ಲೇಖನ ಬರೆಸುವುದು ಎಂದು ಚಿಂತೆಗಿಟ್ಟುಕೊಂಡಿತು. ನಾಡಿನ ಹೆಸರಾಂತ ಬರಹಗಾರರಿಗೆಲ್ಲ ತಮ್ಮ ಬಗ್ಗೆಯೇ ಹೇಳಿಕೊಳ್ಳುವುದಕ್ಕೆ ವೇದಿಕೆಗಳು ಸಾಕಾಗುತ್ತಿಲ್ಲ ಹೀಗಿರುವಾಗ ಎರಡು ವರ್ಷ ತುಂಬಿದ ನಗೆ ನಗಾರಿಯ ಬಗ್ಗೆ ಮಾತನಾಡುವವರನ್ನೇ ಆರಿಸಬೇಕು ಎಂಬುದು ನಮ್ಮ ಏಕ ಸದಸ್ಯ ಸಾಮ್ರಾಜ್ಯದ ಒಕ್ಕೊರಲಿನ ತೀರ್ಮಾನವಾಯ್ತು.

ವಸ್ತುನಿಷ್ಠತೆಗೆ ಹೆಸರುವಾಸಿಯಾದ, ಯುವ ಅಂಕಣಕಾರ ನಮ್ಮ ಕಣ್ಣಿಗೆ ಬಿದ್ದರು. ಕಳೆದ ಹಲವು ವರ್ಷಗಳಿಂದ ತಮ್ಮ `ಯುವ ಅಂಕಣಕಾರ’ ಟೈಟಲನ್ನು ಉಳಿಸಿಕೊಂಡು ಬಂದಿರುವ ಶ್ರೀಯುತ ಪ್ರತಂಪು ಸಿಂಹರಿಗೆ ನಮ್ಮ ಸಾಮ್ರಾಜ್ಯದ ಬಗ್ಗೆ ವಿಸ್ತೃತವಾದ ಲೇಖನ ಬರೆಯಲು ಕೇಳಿಕೊಂಡೆವು. ಅದಕ್ಕೆ ಪ್ರತಂಪು ಸಿಂಹರು ಕೂಡಲೇ ಒಪ್ಪಿಕೊಂಡರು. ನಿಮ್ಮ ಹೆಸರಿನಲ್ಲೇ ಲೇಖನ ಬರೆಯಬೇಕು ಎಂದಾಗ ತುಸು ವಿಚಲಿತರಾದರು. ತೊಣಚಪ್ಪ ಎರಡು ನಿಮಿಷ ವಿವರಿಸಿದ ನಂತರ ತಮ್ಮ ಹೆಸರಿನಲ್ಲಿಯೇ ಲೇಖನ ಬರೆಯಲು ಒಪ್ಪಿಕೊಂಡರು.

ಪ್ರತಂಪು ಸಿಂಹರ ವಿಶೇಷ ಲೇಖನವು ಎರಡು ವರ್ಷ ತುಂಬಿದ ಸಂಭ್ರಮದಲ್ಲಿರುವ ನಗಾರಿ ಓದುಗರ ಖುಷಿ ಇಮ್ಮಡಿಸೀತು ಎಂಬುದು ನಮ್ಮ ಆಶಯ!

– ನಗೆ ಸಾಮ್ರಾಟ್

ನಗಾರಿ ರೆಕಮಂಡೇಶನ್ 27 : ಹುಸಿ ಸುದ್ದಿ

21 ಫೆಬ್ರ

ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪ್ರಕಟವಾಗುವ ನೈಜಸುದ್ದಿಗಳನ್ನು ಬಳಸಿ ಅವನ್ನು ವಕ್ರವಾಗಿ ತಿರುಗಿಸಿ ವಿಡಂಬನೆಯನ್ನು ಸತ್ಯ ಸುದ್ದಿಯ ಹಾಗೆಯೇ ವರದಿ ಮಾಡುವುದನ್ನು ಹುಸಿ ಸುದ್ದಿ (fake news) ಎನ್ನುತ್ತಾರೆ.

ಈ ಮಾಧ್ಯಮವನ್ನು ಬಳಸಿ ಸುದ್ದಿಯಲ್ಲಿರುವ ಅಸಂಬದ್ಧತೆ, ವಿವಾದಗಳ, ದೇಶ ವಿದೇಶದ ವಿದ್ಯಮಾನಗಳಲ್ಲಿ ಅಡಗಿರುವ ವಕ್ರ ಕೋನವನ್ನು ಹೊರಗೆಳೆದು ಲಂಬಿಸಿ ಹಿಗ್ಗಿಸಿ ತೋರುವ ಉದ್ದೇಶ ಈ ಹುಸಿ ಸುದ್ದಿಗಳನ್ನು ಸೃಷ್ಟಿಸುವ ಪತ್ರಕರ್ತನ ಕೆಲಸ.

ಭಾರತಕ್ಕೆ ಸಂಬಂಧಿಸಿದಂತೆ ಇಂತಹ ಹುಸಿ ಸುದ್ದಿಗಳನ್ನು ಹುಟ್ಟು ಹಾಕುವ ವೆಬ್ ಸೈಟ್ Faking News. ಪಾಗಲ್ ಪತ್ರಕಾರ್ (ಹುಚ್ಚ ಪತ್ರಕರ್ತ) ಎಂಬ ಹುಸಿ ನಾಮಾಂಕಿತ ಬ್ಲಾಗಿಗ ನಡೆಸುವ ಈ ತಾಣದಲ್ಲಿ ದಿನಕ್ಕೊಂದರಂತೆ ಹುಸಿ ಸುದ್ದಿಗಳು ಪ್ರಕಟವಾಗುತ್ತವೆ.

೨೦೦೮ರಲ್ಲಿ ಶುರುವಾದ ಈ ತಾಣದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ರಾಜಕೀಯ ಸುದ್ದಿಗಳಿಂದ ಹಿಡಿದು ತಂತ್ರಜ್ಞಾನ ಸಂಬಂಧಿಸಿದ ವಿಷಯಗಳ ಬಗೆಗೂ ಹುಸಿ ಸುದ್ದಿಗಳಿವೆ. ಹುಸಿ ಸುದ್ದಿಯನ್ನು ಹೊಸೆಯುವುದರಲ್ಲಿ ಪಾಗಲ್ ಪತ್ರಕರ್ತ ಅದೆಷ್ಟು ನಾಜೂಕೆಂದರೆ ಹಲವು ಸುದ್ದಿಗಳನ್ನು ಜನರು ಸತ್ಯವೆಂದೇ ಭಾವಿಸಿಬಿಟ್ಟಿದ್ದರು. ಉದಾಹರಣೆಗೆ:‌ axe ಡಿಯೋಡರೆಂಟ್ ಬಳಸಿದರೆ ಹುಡುಗಿಯರು ಮುಗಿ ಬೀಳುತ್ತಾರೆ ಎಂಬ ಜಾಹೀರಾತು ನೋಡಿ ಮೈಗೆಲ್ಲ ಡಿಯೋಡರೆಂಟ್ ಬಳಿದುಕೊಂಡು ಎಷ್ಟೇ ಪ್ರಯತ್ನಿಸಿದರೂ ಒಬ್ಬ ಹುಡಿಗಿಯೂ ತಿರುಗಿ ನೋಡದಿದ್ದಾಗ, ಮನೆಗೆಲಸದವಳೂ  ಮೂಗು ಮುರಿದಾಗ ಹತಾಶನಾಗಿ axe ಕಂಪೆನಿಯ ವಿರುದ್ಧವೇ ಕೇಸು ಹಾಕಿದ ಹುಸಿ ಸುದ್ದಿಯನ್ನು ಪ್ರಮುಖ ಅಂತರ್ಜಾಲ ಸುದ್ದಿತಾಣಗಳು ಯಥಾವತ್ತಾಗಿ ಪ್ರಕಟಿಸಿಬಿಟ್ಟಿದ್ದವು!

ಈ ತಾಣದಲ್ಲಿ ಹುಸಿ ಸುದ್ದಿಯ ಜೊತೆ  ಆಗ ಗಂಭೀರ ಬರಹಗಳೂ ಇರುತ್ತವೆ. ಹಿಂದಿ ಹಾಗೂ ಇಂಗ್ಲೀಷ್ ಸುದ್ದಿ ವಾಹಿನಿಗಳ ಕಾರ್ಯ ಕ್ಷಮತೆ ಹಾಗೂ ನೈತಿಕತೆಯ ಬಗ್ಗೆ ಪ್ರಬುದ್ಧವಾದ ಬರಹಗಳೂ ಪ್ರಕಟವಾಗುತ್ತವೆ.

ಮುಖ್ಯವಾಹಿನಿಯ ಮಾಧ್ಯಮಗಳು ಹುಸಿ ಸುದ್ದಿಯ ತಾಣಕ್ಕೆ ಪೈಪೋಟಿ ಒಡ್ಡುವ ಹಾಗೆ ವರದಿಗಳನ್ನು ಬಿತ್ತರಿಸುತ್ತಿರುವಾಗ `ಹುಸಿ ಸುದ್ದಿ’ಗಳು ಸತ್ಯವಾಗಿ ಕಂಡರೆ ನಾವು ಜವಾಬ್ದಾರರಲ್ಲ!

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಸಂಪೂರ್ಣ ಉಡುಗೆ ತೊಟ್ಟು ಪ್ರತಿಭಟನೆ

19 ಫೆಬ್ರ

ಪರೀಕ್ಷಾ ಮಂಡಳಿಯ ಹೊಸ ನೀತಿಯ ವಿರುದ್ಧ ಪ್ರತಿಭಟನೆಯ ಬೆದರಿಕೆ


ಚೆನ್ನೈ, ಫೆ.೧೯:
ತಮಿಳು ನಾಡಿನ ರಾಜ್ಯ ಪರೀಕ್ಷಾ ಮಂಡಳಿ ನಕಲು ತಡೆಗಟ್ಟುವುದಕ್ಕಾಗಿ ಘೋಷಿಸಿರುವ ನಿಯಂತ್ರಣ ಕ್ರಮಗಳನ್ನು ಹಿಂತೆಗೆದುಕೊಳ್ಳದಿದ್ದರೆ  ರಾಜ್ಯದ ವಿದ್ಯಾರ್ಥಿಗಳೆಲ್ಲ ಸಂಪೂರ್ಣ ಉಡುಗೆ ತೊಟ್ಟು ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಕಲೇಶ್ ತಿಳಿಸಿದ್ದಾರೆ.

ಕಾಲೇಜಿನ ಸನಿಹದ ಝೆರಾಕ್ಸ್ ಅಂಗಡಿಯಲ್ಲಿ ಮೈಕ್ರೋ ಕಾಪಿ ತೆಗೆಸುವಲ್ಲಿ ಮಗ್ನರಾಗಿದ್ದ ನಕಲೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು. “ಶೂ,ಸಾಕ್ಸು, ಬೆಲ್ಟುಗಳನ್ನು ಪರೀಕ್ಷಾ ಕೇಂದ್ರದೊಳಗೆ ಧರಿಸಿರಲು ಅನುಮತಿಸುವುದಿಲ್ಲ ಎಂದಿರುವುದು ವಿದ್ಯಾರ್ಥಿಗಳ ಸ್ವಾತಂತ್ರ್ಯ ಹರಣದ ಕೃತ್ಯವಾಗಿದೆ. ಶೂ ಸಾಕ್ಸು ಬಿಚ್ಚಿ ಕೊಠಡಿಯೊಳಗೆ ಬನ್ನಿ ಎಂದವರು ನಾಳೆ ಶರ್ಟು ಪ್ಯಾಂಟು ಕಳಚಿ ಬನ್ನಿ ಎಂದು ಫರ್ಮಾನು ಹೊರಡಿಸುವುದಕ್ಕೆ ಹೇಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?” ಎಂದು ಪ್ರಶ್ನಿಸಿದರು.

ಈ ಕ್ರಮಗಳನ್ನು ಕೂಡಲೇ ಹಿಂತೆಗೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. “ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಸಂಪೂರ್ಣ ಫಾರ್ಮಲ್ ದಿರಿಸು ತೊಟ್ಟು, ವಿದ್ಯಾರ್ಥಿನಿಯರು ತೋಳು, ಮಂಡಿಗಳನ್ನೂ ಮುಚ್ಚುವ ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಪ್ರತಿಭಟಿಸುವರು.”

ವಿದ್ಯಾರ್ಥಿಗಳ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ  ಕಾಲೇಜು ಬದಿಯ ಅಂಗಡಿಗಳ ವ್ಯಾಪಾರಿ ಸಂಘ ತಾವು ಎಂದಿಗೂ ವಿದ್ಯಾರ್ಥಿಗಳ ಪರ ಎಂದು ಹೇಳಿಕೆ ನೀಡಿದೆ. “ವಿದ್ಯಾರ್ಥಿಗಳ ಹಿತಾಸಕ್ತಿಯೊಂದೇ ನಮಗೆ ಮುಖ್ಯ. ಹತ್ತಾರು ವರ್ಷಗಳಿಂದ ನಾವು ವಿದ್ಯಾರ್ಥಿಗಳಿಗಾಗಿ ನಮ್ಮ ಜೀವನವನ್ನು ಸವೆಸುತ್ತಾ ಬಂದಿದ್ದೇವೆ. ಇಡೀ ಪಠ್ಯಪುಸ್ತಕವನ್ನು ಅಂಗೈಯಲ್ಲಿ ಅಡಗಿಸಿಕೊಳ್ಳುವಷ್ಟು ಚೊಕ್ಕಟವಾಗಿ ನಾವು ಕಾಪಿ ಮಾಡಿಕೊಡದಿದ್ದರೆ ಪಾಪ ಈ ಎಳೆಯ ಮಕ್ಕಳು ರಾತ್ರಿ ದೀಪವನ್ನು ಉರಿಸಿ ಎಸ್.ಟಿ.ಡಿ ಬಿಲ್ಲಿಂಗ್ ಹಾಳೆಯ ಮೇಲೆ ಎಲ್ಲವನ್ನೂ ಬರೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯ ಮೊದಲೇ ಸೋರಿದ ಪ್ರಶ್ನೆ ಪತ್ರಿಕೆಯನ್ನು   ಹೆಕ್ಕಿ ತಂದು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಧ್ಯರಾತ್ರಿಯೆಲ್ಲ ಮುದ್ರಿಸಿ ವಿದ್ಯಾರ್ಥಿಗಳನ್ನು ವಯಕ್ತಿಕವಾಗಿ ಸಂಪರ್ಕಿಸಿ ತಲುಪಿಸುವುದು ಕಡಿಮೆ ತ್ರಾಸದ ಕೆಲಸವೇ?”

ಹೊಸ ತಂತ್ರಜ್ಞಾನದಿಂದಾಗಿ ತಮ್ಮ ವೃತ್ತಿ ಯು ಅವನತಿಯ ಅಂಚಿಗೆ ಸರಿಯುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಮೊಬೈಲು, ಪೆನ್ ಡ್ರೈವು ಮೊದಲಾದ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ವಿದ್ಯಾರ್ಥಿಗಳು ಸ್ವತಂತ್ರವಾಗಿ, ನಮ್ಮ ಹಂಗಿಲ್ಲದೆ ಪರೀಕ್ಷೆ ಎದುರಿಸುವ ಕೆಟ್ಟ ಸಂಸ್ಕೃತಿ ಶುರುವಾಗಿದೆ. ಜಾಗತೀಕರಣದ  ಹುಚ್ಚು ಹೊಳೆಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಇಂತಹ ಸಾಂಪ್ರದಾಯಿಕ  ವೃತ್ತಿಯನ್ನು ಎಲ್ಲರೂ ಸೇರಿ ಉಳಿಸಬೇಕು.”

ಐಪಿಎಲ್ ಫೇಸ್ ಬುಕ್‌ಗೆ ಸ್ಥಳಾಂತರ : ಮೋಡಿ

18 ಫೆಬ್ರ

ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ

 

Untitled pictureನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ ಮೋಡಿ ತಿಳಿಸಿದ್ದಾರೆ.

ಇಲ್ಲಿಯ ಸ್ಥಳೀಯ ಸೈಬರ್ ಕೆಫೆಯಲ್ಲಿ ನೆರೆದ ಸುದ್ದಿಗಾರರೊಂದಿಗೆ ಮಾತನಾಡಿದ ಮೋಡಿ ಭಯೋತ್ಪಾದಕ ಸಂಘಟನೆ ಹುಜಿಯ ಮುಖಂಡನ ಬೆದರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಹರ್ಕತುಲ್ ಜಿಹಾದಿ ಇಸ್ಲಾಮಿ(ಹುಜಿ)ಯ ಕಮ್ಯಾಂಡರ್ ಇಲಿಯಾಸ್ ಕಶ್ಮಿರಿ ಭಾರತದಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿ, ಐಪಿಎಲ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದೇಶಿ ಆಟಗಾರರು ತಮ್ಮ ಜೀವಕ್ಕೆ ತಾವೇ ಜವಾಬ್ದಾರರು, ಪಾಕಿಸ್ತಾನದ ಆಟಗಾರರ ಜೀವಗಳಿಗೆ ಮಾತ್ರ ತಾವು ಜವಾಬ್ದಾರರು ಎಂದು ಬೆದರಿಕೆಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಪಟುಗಳ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತವಾಯಿತು.

ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಿ ರಾಜಸ್ಥಾನದ ತಂಡದ ಸೋಲಿಗೆ ಕಾರಣವಾಗಿದ್ದ ಮೋಡಿ ಈ ಬಾರಿ ಯಾರಿಗೂ ಅನ್ಯಾಯವಾಗದ ಹಾಗೆ ಸರ್ವ ಸಮ್ಮತವಾದ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. “ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮೆಲ್ಲ ಶೇರುದಾರರ ಹಿತರಕ್ಷಣೆ ಮುಖ್ಯ. ಹಾಗಂತ ನಾವು ಆಟಗಾರರ ಜೀವವನ್ನು ಲೆಕ್ಕಿಸುವುದಿಲ್ಲ ಎಂದೇನಿಲ್ಲ.” ಎಂದಿದ್ದ ಮೋಡಿ ಕಡೆಗೆ ಐಪಿಎಲ್ ಪಂದ್ಯಾವಳಿಗಳನ್ನು ಫೇಸ್ ಬುಕ್ಕಿನಲ್ಲಿ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ.

“ಫೇಸ್ ಬುಕ್ ವಿಶ್ವದಾದ್ಯಂತ ಸುರಕ್ಷಿತವಾದ ಕ್ರೀಡಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ರೈತರು ಕ್ರೀಡಾಮನೋಭಾವದಿಂದ ಬೆಳೆ ತೆಗೆಯುವುದಕ್ಕೆ ನೆರವಾಗಿದೆ. ಒಂಚೂರು ರಕ್ತಪಾತವಿಲ್ಲದೆ ಮಾಫಿಯಾಗಳು ಯುದ್ಧ ನಡೆಸಿಕೊಳ್ಳಲು ಸಹಾಯ ಮಾಡಿದೆ. ಹಿಂಸಾಚಾರವಿಲ್ಲದೆ ವ್ಯಾಂಪೈರುಗಳು ಸಹಜೀವನ ನಡೆಸುವುದಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಐಪಿಎಲ್ ಆಯೋಜಿಸಲು ಹರ್ಷವಾಗುತ್ತದೆ.”

ಮೋಡಿಯವರ ಈ ನಿರ್ಧಾರವನ್ನು ಸ್ವಾಗತಿಸಿರುವ ಫೇಸ್ ಬುಕ್ ನಿರ್ದೇಶಕ ಮಖೇಡಿ ಮ್ಯಾಥ್ಯುಸ್. “ಇದೊಂದು ಸ್ವಾಗತಾರ್ಹ ತೀರ್ಮಾನ. ಐಪಿಎಲ್ ಮೂರನೆಯ ಆವೃತ್ತಿಯನ್ನು ಫೇನ್ ಬುಕ್ಕಿನಲ್ಲಿ ಆಯೋಜಿಸಲು ನಮಗೂ ಹರ್ಷವಾಗುತ್ತದೆ. ಆಟಗಾರರು ತಮ್ಮ ತಮ್ಮ ದೇಶಗಳಲ್ಲೇ, ತಮ್ಮ ಮನೆಯ ಸೋಫಾಗಳಲ್ಲೇ ಕೂತು ಭಾಗವಹಿಸಬಹುದು. ವೀಕ್ಷಕರು ಕೂಡ ಆಫೀಸುಗಳಲ್ಲಿ, ಮನೆಗಳಲ್ಲಿ ಕೂತೇ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕಪಿಸೇನೆಗಳ ಬೆದರಿಕೆ, ಭಯೋತ್ಪಾದಕರ ಬೆದರಿಕೆಗಳಿಗೂ ಅಂಜದೆ ವಿಶ್ವದಾದ್ಯಂತ ಎಲ್ಲರೂ ಪಾಲ್ಗೊಳ್ಳಬಹುದು.”

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಪ್ರಭಾವವನ್ನು ಅವಗಣಿಸಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿಲ್ಲ ಎಂದಿರುವ ತಂತ್ರಜ್ಞ ತಂತ್ರೇಶ್ ಜಾದವ್ “ಬೆರಳು ಮುರಿತ, ತೊಡೆ ಸಂದು, ಭುಜದ ನೋವುಗಳಿಲ್ಲದೆ ಆಟಗಾರರು ಆರಾಮವಾಗಿ ಆಡಬಹುದಾದ ಅಂತರ್ಜಾಲದ ಐಪಿಎಲ್ ಆವೃತ್ತಿ ಕ್ರಾಂತಿಕಾರಿಯಾದ ಬೆಳವಣಿಗೆ. ಇದರಿಂದ ಆಟಗಾರರು ತಮ್ಮ ಆಟಕ್ಕೆ ಯಾವ ರೀತಿಯಿಂದಲೂ ಸಂಬಂಧಿಸದ ದೈಹಿಕ ಫಿಟ್‌ನೆಸ್ಗಾಗಿ ಶ್ರಮ ಪಡಬೇಕಿಲ್ಲ. ಅಲ್ಲದೆ ಕೂತಲ್ಲೇ ದೇಹವನ್ನು ಬಿಟ್ಟು ಸಂಚಾರ ಹೋಗಿ ಬರುತ್ತಿದ್ದ ಪೌರಾಣಿಕ ಕತೆಗಳನ್ನು ನಿಜ ಮಾಡಿ ತೋರಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಜೈ ಐಟಿ!”

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಟಕಾ ನಿಲುಗಡೆಗೆ ನಿರಾಕರಣೆ

17 ಫೆಬ್ರ

“ವಿಮಾನ ನಿಲ್ದಾಣದ ಗುಣಮಟ್ಟ ಸಮರ್ಪಕವಾಗಿಲ್ಲ”

 

swamiಬೆಂಗಳೂರು,ಫೆ.೧೬: ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ. 

ವಿಮಾನ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. “ಬೆಂಗಳೂರು ವಿಮಾನ ನಿಲ್ದಾಣದ ಗುಣಪಟ್ಟ ತೀರಾ ಕಳಪೆಯಾಗಿದೆ. ಇದು ಜಟಕಾ ಗಾಡಿ ನಿಲ್ದಾಣದ ಹಾಗಿದೆ. ಕಟ್ಟಡಗಳು ಬೆಂಕಿಪೊಟ್ಟಣದ ಹಾಗಿವೆ ಎಂದು ಉಚ್ಛ ನ್ಯಾಯಾಲಯವೇ ಮಂಗಳಾರತಿ ಎತ್ತಿದೆ. ಭಾರತದ ಎಲ್ಲಾ ಟಾಂಗಾ ಗಾಡಿ ಚಾಲಕರ ಪರವಾಗಿ ನಾವು ಉಚ್ಛ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಈ ವಿಮಾನ ನಿಲ್ದಾಣ ಜಟಕಾ ನಿಲ್ದಾಣವಾಗುವುದಕ್ಕೂ ತಕ್ಕ ಗುಣ ಮಟ್ಟವನ್ನು ಹೊಂದಿಲ್ಲ. ಹೀಗಾಗಿ ಮಾನ್ಯ ನ್ಯಾಯಾಧೀಶರು ಜಟಕಾ ಬಂಡಿ ನಿಲ್ದಾಣದ ಹೋಲಿಕೆಯನ್ನು ಕೈಬಿಡಬೇಕು.”

ಹೈಕೋರ್ಟಿನ ನ್ಯಾಯಾಧೀಶರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯದರ್ಶಿ ಅನುಮಾನ್ ಸಿಂಗ್ ವಿಮಾನ ನಿಲ್ದಾಣವನ್ನು ಜಟಕಾ ಬಂಡಿ ನಿಲ್ದಾಣವಾಗಿಯೂ ಬಳಸಬಹುದು ಎಂಬುದು ಇದರ ವೈವಿಧ್ಯಮಯ ಉಪಯುಕ್ತತೆಯನ್ನು ಸಾರುತ್ತದೆ. ನಮ್ಮ ವಿಮಾನ ನಿಲ್ದಾಣವನ್ನು ದೇಶ, ವಿದೇಶಗಳ ವಿಮಾನಗಳ ಓಡಾಟವನ್ನು ಹೊರತು ಪಡಿಸಿ ಅನೇಕ ಕೆಲಸಗಳಿಗೆ ಬಳಸಬಹುದು. ಹೈಟಿಯಲ್ಲಿ ಆದಂತೆ ಭೂಕಂಪವಾದರೆ ರಾಜ್ಯದ ಮುಖ್ಯಮಂತ್ರಿ ರನ್ ವೇ ಮೇಲೆ ಟೆಂಟ್ ಹಾಕಿಕೊಂಡು ಜೀವ ಉಳಿಸಿಕೊಳ್ಳಬಹುದು. ಬಿಲ್ಡರುಗಳ ಹಾವಳಿಯಿಂದ ಆಟದ ಮೈದಾನ ಕಳೆದುಕೊಂಡ ಶಾಲಾ ಮಕ್ಕಳು ಬೇಕಾದ ಆಟವನ್ನು ಆಡಬಹುದು. ಸಾರ್ವಜನಿಕ ಮೂತ್ರಿಗಳ ವೆಚ್ಚ ಭರಿಸಲಾಗದ ಶ್ರೀಸಾಮಾನ್ಯರು ಬಯಲನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ ಫೇಣಿಗಳು ನೈಸಾದ ರಸ್ತೆಯನ್ನು ಹಾಕಬಹುದು. ಅದರ ಮೇಲೆ ವೇದೇಗೌಡರು ಧರಣಿಯನ್ನು ಹಮ್ಮಿಕೊಳ್ಳಬಹುದು. ಮಾಧ್ಯಮದ ಮಂದಿ ಇಲ್ಲೇ ಕುಳಿತು ಅಂತರರಾಷ್ಟ್ರೀಯ ಸುದ್ದಿಗಳನ್ನು ಸೃಷ್ಟಿಸಬಹುದು. ಗಾಂಧಿನಗರದಲ್ಲಿ ಕತೆ ಖಾಲಿಯಾದ ನಿರ್ದೇಶಕರು, ಪರೀಕ್ಷೆಯಲ್ಲಿ ತಲೆ ಖಾಲಿಯಾದ ವಿದ್ಯಾರ್ಥಿಗಳು ಇಲ್ಲಿನ ನಿರ್ಜನ ಬಯಲುಗಳಲ್ಲಿ ಸ್ಪೂರ್ತಿ ಗಳಿಸಿಕೊಳ್ಳಬಹುದು. ಇಂತಹ ಬಹುಪಯೋಗಿ ವಿಮಾನ ನಿಲ್ದಾಣವನ್ನು ಕಟ್ಟಿರುವ ನಮ್ಮ ಸಾಧನೆಯನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ವಿಮಾನ ಓಡಾಟಕ್ಕೆ ತಕ್ಕ ಗುಣಮಟ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಟೀಕಿಸುವುದು ಸರಿಯಲ್ಲ.

ವಿಮಾನ ನಿಲ್ದಾಣದ ಸುತ್ತ ಹರಡಿಕೊಂಡ ವಿವಾದಗಳು, ಎದ್ದಿರುವ ಅಡ್ಡಿ ಆತಂಕಗಳಿಗೆ ಕಾರಣ ವಾಸ್ತು ದೋಷ ಎಂದು ಗುರುತಿಸಿದ್ದಾರೆ ಖ್ಯಾತ ವಾಸ್ತು ತಜ್ಞ ದೋಷಾನಂದ ಸ್ವಾಮಿಯವರು. “ನೂರಾರು ದಿಕ್ಕುಗಳಿಂದ ಗಾಳಿಯನ್ನು ಒದ್ದುಕೊಂಡು ಚಲಿಸುವ, ಸಾವಿರಾರು ವಿಮಾನಗಳು ಹತ್ತಿ ಇಳಿಯುವ ಜಾಗಕ್ಕೆ ಮೇಲ್ಛಾವಣೆಯನ್ನೇ ಹಾಕಲು ಮರೆತಿದ್ದಾರೆ. ಈ ಲೋಪದಿಂದ ವಿಮಾನ ನಿಲ್ದಾಣದ ಪ್ರಭೆಯು ಬಿಸಿಲಿಗೆ ಆವಿಯಾಗಿ ಆಕಾಶಕ್ಕೆ ಹಾರುತ್ತಿದೆ. ವಿಮಾನಗಳು ಸಮುದ್ರೋಲ್ಲಂಘನ ನಡೆಸುವ ಉಕ್ಕಿನ ಹಕ್ಕಿಗಳಾಗಿರುವುದರಿಂದ ನಿಲ್ದಾಣದ ಗ್ರಹಚಾರ ಯಾವಾಗಲೂ ಕೆಟ್ಟದಾಗೇ ಇರುತ್ತದೆ ಎಂದು ಸಮಯಸಂಹಾರ ಶಾಸ್ತ್ರವು ತಿಳಿಸುತ್ತದೆ. ಈ ದೋಷ ಪರಿಹಾರಕ್ಕಾಗಿ ವಿಮಾನ ನಿಲ್ದಾಣದಲ್ಲಿಯೇ ಸರ್ವಧ್ವಂಸ ಯಾಗವನ್ನು ಮಾಡಿ ವರ್ಷಕ್ಕೊಂದು ವಿಮಾನವನ್ನು ಆಹುತಿಯಾಗಿ ಅರ್ಪಿಸಬೇಕು.” ಎಂದಿದ್ದಾರೆ.