Archive | ಆಗಷ್ಟ್, 2008

ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವಿ

29 ಆಗಸ್ಟ್

(ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ)

ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ ತಮ್ಮ ಸ್ವಂತ ಮೆದುಳಿನಿಂದಲೇ ದೇಶವನ್ನು ಮುಂದಕ್ಕೆ ಓಡಿಸುತ್ತಿದ್ದಾರೆ ಎಂಬ ಸಮಾಧಾನ ಸಿಕ್ಕಲು ನಾಲ್ಕು ವರ್ಷ ಬೇಕಾಯಿತು. ಹೀಗಿರುವಾಗ ನಮ್ಮ ನಿಧಾನಿಯವರ ‘ಖಾಸಗಿ ಆರೋಗ್ಯ’ ನೋಡಿಕೊಳ್ಳುವ ವೈದ್ಯರು ನಗೆ ಸಾಮ್ರಾಟರೊಂದಿಗೆ ಮಾತನಾಡಲು ಸಮಯ ಮಾಡಿಕೊಂಡರು.

‘ಯಾವುದೇ ಮನುಷ್ಯನಿಗೆ ದಿನನಿತ್ಯದ ಚಟುವಟಿಕೆಯ ಜೊತೆಗೆ ದೇಹಾರೋಗ್ಯವನ್ನು ಜಬರ್ದಸ್ತಾಗಿ ಇಟ್ಟುಕೊಳ್ಳಲು ಆಗಾಗ ಉಪವಾಸ ಮಾಡುವುದು ಅಗತ್ಯ. ವಯಸ್ಸು ಹೆಚ್ಚಾದಂತೆ ಇದು ಇನ್ನೂ ಅಗತ್ಯ. ಹಾಗೆಯೇ ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ ಮಾಡುವುದರಿಂದ ಇಂದ್ರಿಯಗಳು ಪುನಃಶ್ಚೇತನ ಪಡೆದುಕೊಳ್ಳುತ್ತವೆ. ನಮ್ಮ ನಿಧಾನಿಯವರಿಗೂ ಇದೂ ಕಾಲಕಾಲಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಿಂದೊಬ್ಬರು ನಿಧಾನಿಯಿದ್ದರು ಅವರಿಗೆ ಈ ಆರೋಗ್ಯದ ರಹಸ್ಯವನ್ನು ಕಲಿಸಲು ಹೋಗಿ ನಾನೇ ಪೆಟ್ಟು ತಿಂದಿದ್ದೆ. ಅವರು ಹೊಟ್ಟೆ ತುಂಬಾ ಮುದ್ದೆ ನುಂಗಿ ಕಾರ್ಯಕ್ರಮಗಳ ಮಧ್ಯೆಯೇ ಆರಾಮಾಗಿ ನಿದ್ದೆ ಮಾಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರು. ಅದು ಅವರ ವೈಯಕ್ತಿಕ ಹಿರಿಮೆಯಷ್ಟೇ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನಮ್ಮ ಮೋಹನ ಮನ ಸಿಂಗರು ದೇಶದ ಬಗ್ಗೆ ಅತ್ಯಂತ ಕಾಳಜಿಯಿಂದ ಆಲೋಚಿಸಲು ಈ ಉಪವಾಸ ಹಾಗೂ ಜಾಗರಣೆಗಳು ಅತಿ ಆವಶ್ಯಕ.

‘ನಮ್ಮ ಮೋಹನ ಮನ ಸಿಂಗರ ಸುಕೃತವೋ, ಈ ದೇಶದ ಜನರ ಪುಣ್ಯವೋ ಇಲ್ಲವೇ ಮಹಾ ಮಾತೆಯ ಕೃಪೆಯೋ ನಮ್ಮ ನಿಧಾನಿಯವರಿಗೆ ನಿದ್ದೆಗೆಡುವ, ಊಟ ಬಿಡುವ ಅವಕಾಶಗಳು ಆಗಾಗ ಸಿಕ್ಕುತ್ತಲೇ ಇರುತ್ತವೆ. ಇಂಥ ಅವಕಾಶಗಳಿಂದ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಇಲ್ಲದೆ ಹೋದರೆ ಹಿಂದಿನ ನಿಧಾನಿಯ ಹಾಗೆ ದೇಹದ ಪ್ರತಿಯೊಂದು ಸ್ಪೇರ್ ಪಾರ್ಟುಗಳನ್ನೂ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು. ನೂರು ಕೋಟಿ ಮಂದಿಯ ಬಂಡಿಯನ್ನು ಹೊರುವುದು ಎಂದರೆ ಸುಮ್ಮನೆ ಮಾತೇ?

‘ನಿಧಾನಿಯವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ದೇಶದಲ್ಲಿ ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದ ಅಕ್ಕ ಪಕ್ಕದ ತಂಟೆಕೋರ ಮನೆಗಳಿಂದ ಉಗ್ರರ್, ವ್ಯಗ್ರರು ಬಂದು ಮಾರ್ಕೆಟ್ಟುಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ, ಶಾಲೆಗಳಲ್ಲಿ ಕಡೆಗೆ ಆಸ್ಪತ್ರೆಗಳನ್ನೂ ಬಿಡದೆ ಉಡಾಯಿಸಿದರು, ಮರದ ಮೇಲೆ, ಚರಂಡಿಯ ಅಡಿಗೆ, ಕಸದ ಬುಟ್ಟಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಭಾರತೀಯರು ಮೂತ್ರ ಮಾಡಿದ ಹಾಗೆ ಬಾಂಬುಗಳನ್ನು ಇಟ್ಟು ‘ಹೆಸರಾಂತ’ ಪತ್ರಿಕೆ, ಟಿವಿಗಳಿಗೆ ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ…’ ಎಂದು ಸವಾಲೊಡ್ಡಿದರು. ಬಾಂಬಿನ ಆಟಾಟೋಪದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡರು. ಆದರೆ ಇದರಿಂದ ನಿಧಾನಿಯವರಿಗೆ ಉಪವಾಸವೂ ಸಿಕ್ಕಲಿಲ್ಲ, ಜಾಗರಣೆಯೂ ಮಾಡಲಾಗಲಿಲ್ಲ. ಹೊಟ್ಟೆ ತುಂಬಾ ಊಟ ಮಾಡುತ್ತಾ, ಕಣ್ತುಂಬಾ ನಿದ್ದೆ ಮಾಡುತ್ತಾ ಇದ್ದು ಬಿಟ್ಟರು.

‘ಅತ್ತ ಭಾರತದ ಶಿರವಾದ ಕ್ಯಾಶ್ಮೀರದಲ್ಲಿ ನೆರೆಮನೆಯರು ಎರಡೂ ಕಾಲುಗಳನ್ನು ಎರಡೂ ಕೈಗಳ ತಲಾ ಐದು ಉಗುರುಗಳಿಂದ ಪರಪರಪರನೆ ಕೆರೆದುಕೊಂಡು ಬಂದು ಜಗಳ ಮಾಡಿದಾಗಲೂ, ನಮ್ಮ ನಾಡಿನ ರಕ್ಷಣೆಗೆ ನಿಂತ ಯೋಧರ ಪ್ರಾಣ ಹೋದರೂ ನಮ್ಮ ನಿಧಾನಿಯವರ ಆರೋಗ್ಯ ಕಾಪಾಡುವ ಯಾವ ಪರಿಣಾಮವೂ ಆಗಲಿಲ್ಲ.

‘ಇಡೀ ಜಗತ್ತೇ ಪ್ರಧಾನಿಯವರಿಗೆ ಉತ್ತಮ ಆರೋಗ್ಯವನ್ನು ಕೊಡಬೇಕು ಎಂದು ಸಂಚು ಮಾಡಿ ಭಾರತದ ಹಣದುಬ್ಬರದಡಿಗೆ ರಾಕೆಟ್ ಇಟ್ಟು ಉಡಾಯಿಸಿಬಿಟ್ಟಿತು. ಆಮ್ ಆದ್ಮೀ ನೇರವಾಗಿ ಸ್ವರ್ಗದಲ್ಲೇ ಚೀಪ್ ಆಗಿ ಬದುಕು ಸಾಗಿಸಬಹುದು ಎಂದು ತೀರ್ಮಾನಿಸುವ ಪರಿಸ್ಥಿತಿ ಬಂದಿತು ಆದರೆ ಪಿತ್ತ ಮಂತ್ರಿಯೂ ಆಗಿದ್ದ ನಿಧಾನಿಯವರಿಗೆ ಇದರಿಂದ ಯಾವ ರೀತಿಯಲ್ಲೂ ನೆರವಾಗಲಿಲ್ಲ. ನಿದ್ದೆ, ಊಟ ಯಥೇಚ್ಚವಾಗಿ ಮುಂದುವರೆದಿತ್ತು.

‘ಹೀಗಿರುವಾಗ ನಮ್ಮ ನಿಧಾನಿಯವರ ಆರೋಗ್ಯದ ಗತಿ ಏನಾಗಬೇಡ? ಅವರಿಗೆ ಆಗಾಗ ಉಪವಾಸ ಹಾಗೂ ನಿದ್ದೆ ಬರದ ರಾತ್ರಿಗಳನ್ನು ಕರುಣಿಸುವುದು ಹೇಗೆ ಅನ್ನುವಾಗಲೇ ನಮ್ಮ ಕಣ್ಣೆದುರು ಪವಾಡವೊಂದು ನಡೆಯಿತು. ಅನ್ಯದೇಶದಲ್ಲಿ ಬಾಂಬು ಉಡಾಯಿಸಿದವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಭಾರತದ ಕುವರ ದೇಶಕ್ಕೆ ಮರಳಿ ಬಂದಾಗ, ಅನ್ಯದೇಶದಲ್ಲಿ ತನಗಾದ ಅವಮಾನ, ತನ್ನ ಮೇಲೆ ನಡೆದ ‘ಶೋಷಣೆ’ಯನ್ನು ಪರಿ ಪರಿಯಾಗಿ ವಿವರಿಸಿ ಟಿವಿ ಕೆಮಾರಗಳ ಮುಂದೆ ಒಂದೇ ಕಣ್ಣಿನಲ್ಲಿ ಗೊಳೋ ಎಂದು ಅತ್ತಾಗ ಪವಾಡ ಸಂಭವಿಸಿಯೇ ಬಿಟ್ಟಿತು. ನಮ್ಮ ನಿಧಾನಿ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಟಿವಿ ಚಾನೆಲ್ಲು ನೋಡುತ್ತಾ ಕುಳಿತರು. ಆ ಕನ್ನಡದ ಕುವರನ ತಾಯಿ ರೋಧಿಸುವುದನ್ನು ನಮ್ಮ ಟಿವಿ ಚಾನೆಲ್ಲುಗಳು ೨೪*೭ ತೋರಿಸುವುದನ್ನು ಕಂಡು ನಿಧಾನಿಯವರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದರು. ಇದರಿಂದ ಅವರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿದೆ.

‘ ಅನಂತರ ಇಲ್ಲಿ ಎಲ್ಲೋ ಪೂರ್ವದ ರಾಜ್ಯದಲ್ಲಿ ಕೋಮುವಾದಿ ಕೋಮಿನ ಕೋಮುವಾದಿ ಮುಖಂಡನನ್ನು ‘ದೇಶ ಭಕ್ತರು’ (ಅವರು ಯಾವ ದೇಶಕ್ಕೆ ಭಕ್ತರು ಎಂದು ಕೇಳಿದ್ದಕ್ಕೆ ಆಫ್ ದಿ ರೆಕಾರ್ಡ್ ಉತ್ತರ ಕೊಟ್ಟಿದ್ದನ್ನು ನಾವಿಲ್ಲಿ ಎಡಿಟ್ ಮಾಡಿದ್ದೇವೆ – ಸಂ) ತೆಗೆದರು. ಇದರಿಂದ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ‘ಮಾರಣ ಹೋಮ’ ನಡೆಸಿದರು. ಇದನ್ನು ಕೆಲವು ತಲೆ ಕೆಟ್ಟ ಮಂದಿ ಹಿಂದೆ ಇಂದಿರಮ್ಮ ಸತ್ತಾಗ ಸಿಖ್ಖರ ಮೇಲೆ ನಡೆಸಿದ ‘ಹೋರಾಟ’ಕ್ಕೆ ಹೋಲಿಸುತ್ತಾರೆ. ಅದೇ ಬೇರೆ ಇದೇ ಬೇರೆ ಅಂತ ಇವರಿಗೆ ಗೊತ್ತಿಲ್ಲ. ಹೀಗೆ ಅಲ್ಪ ಸಂಖ್ಯಾತರ ಮೇಲೆ ಕೋಮುವಾದಿಗಳ ಅಟ್ಟಹಾಸದಿಂದ ನಮ್ಮ ನಿಧಾನಿಗೆ ಹೊಟ್ಟೆಗೆ ಸರಿಯಾಗಿ ಊಟ ಸೇರಲಿಲ್ಲ, ನಿದ್ದೆಯಂತೂ ಮಾರು ದೂರದಲ್ಲಿ ನಿಂತಿತು. ಇಡೀ ದೇಶ ಇದಕ್ಕಾಗಿ ಅವಮಾನ ಪಡಬೇಕು ಎಂದರು.

‘ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ’.

ನಿಧಾನಿಯವರ ಆರೋಗ್ಯ ಎಂದರೆ ಕೈ ಪಕ್ಷದ ಓಟ್ ಬ್ಯಾಂಕೇ ಎಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಂಪರ್ಕ ಕಡಿದುಹೋಗಿತ್ತು.

ಛೇ! ಇಷ್ಟೋಂದು ಸಿಲ್ಲಿಯಾದ್ರೆ ಹೇಗೆ?

22 ಆಗಸ್ಟ್

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

ಭಾರತೀಯರೊಬ್ಬರು ಅಮೇರಿಕನ್ ಮಹಿಳೆಯೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು. ಅವರಿಗೆ ಅಲ್ಲಿ ಒಂದಕ್ಕೆ ಹೋಗಬೇಕಾಯಿತು. ಅವರು ಮನೆಯೊಡತಿಯನ್ನು ಕುರಿತು, “ಇಲ್ಲಿ ಬಾತ್‍ರೂಮ್ ಎಲ್ಲಿದೆ, ನಾನು ಒಂದಕ್ಕೆ ಹೋಗಬೇಕು” ಎಂದು ಕೇಳಿದರು.
ಆಕೆಗೆ ಈ ಮಾತು ಕೇಳಿ ಶಾಕ್ ಆಯಿತು. ಆಕೆ ಹೇಳಿದರು, “ನೋಡಿ, ಈ ದೇಶದಲ್ಲಿ ಹಾಗೆ ಹೋಗಬೇಕಾದಾಗ ‘ನಾನು ಕೈ ತೊಳೆಯಬೇಕು’ ಎಂದು ಹೇಳಿ” ಎಂದು ಹೇಳಿಕೊಟ್ಟರು.
ಈತ ಸರಿ ಎಂದರು.
ಒಮ್ಮೆ ಈತ ಭಾರತೀಯ ಮಿತ್ರರೊಬ್ಬರ ಮನೆಗೆ ಊಟಕ್ಕೆ ಹೋದರು. ಅವರು ಬಹಳ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದವರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಾಗ ಅವರು ಈ ಮಿತ್ರರನ್ನು, “ಊಟಕ್ಕೇಳಿ, ಕೈ ತೊಳೆಯುತ್ತೀರಾ?” ಎಂದು ಕೇಳಿದರು. ಈತ ಹೇಳಿದರು, “ಇಲ್ಲ, ನಿಮ್ಮ ಮನೆಯೊಳಕ್ಕೆ ಬರುವುದಕ್ಕೆ ಮುಂಚೆಯೇ ಆಚೆ ಲೈಟ್ ಕಂಬದ ಹತ್ತಿರ ಕೈ ತೊಳೆದುಕೊಂಡೆ.”

ನಗು ಸಹಜವೋ, ಗಾಂಭೀರ್ಯ ಸಹಜವೋ?

21 ಆಗಸ್ಟ್

ನಗು ಸಹಜವೋ, ಗಾಂಭೀರ್ಯ ಸಹಜವೋ?

ಇದೊಂದು ಸರಳವಾದ ಪ್ರಶ್ನೆ. ಸಣ್ಣಸಣ್ಣದಕ್ಕೂ ನಗುತ್ತಾ, ಮುಸಿಮುಸಿ ಎಂದು ಹಲ್ಕಿರಿಯುತ್ತಾ, ವಿನಾಕಾರಣ ನಗುವ ಮಕ್ಕಳು ಕೊಂಚ ಬೆಳೆಯುತ್ತಿದ್ದಂತೆಯೇ ಅವರಿಗೆ ದೊಡ್ಡವರು ‘ಸ್ವಲ್ಪ ಗಂಭೀರವಾಗಿರುವುದನ್ನು ಕಲಿತುಕೋ’ ಎಂದು ಉಪದೇಶಿಸತೊಡಗುತ್ತಾರೆ. ಸಣ್ಣ ವಯಸ್ಸಿನಲ್ಲೇ ಮುಖದ ಮೇಲಿನ ತುಂಟಾಟಗಳಿಗೆಲ್ಲಾ ಟಾಟಾ ಹೇಳಿ ಅಲ್ಲಿ ದೊಡ್ಡವರ ಗಾಂಭೀರ್ಯಕ್ಕೆ ವಾಸ್ತವ್ಯ ಕಲ್ಪಿಸಿದ ಹುಡುಗ ಇಡೀ ‘ಹುಡುಗು ಕುಲ’ದ ಆದರ್ಶವಾಗುತ್ತಾನೆ.

ಮೂಗಿನ ಕೆಳಗೆ ಮೀಸೆ ಮೂಡಿ, ಅದರ ಗಡಿಯಾಚೆಗೆ ಹುಲುಸಾಗಿ ಗಡ್ಡ ಹರವಿಕೊಂಡು ಬೆಳೆದು ನೆತ್ತಿ ವಿಶಾಲವಾಗುತ್ತಾ, ಕಪ್ಪು ಕೂದಲ ರಾಶಿಯ ಮಧ್ಯೆ ಬೆಳ್ಳಿಯ ಗೆರೆಗಳು ಕಾಣಿಸಿಕೊಳ್ಳುತ್ತಿದ್ದ ಹಾಗೆ ವೈದ್ಯನೆಂಬ ನಾರಾಯಣ ನೆನಪಾಗುತ್ತಾನೆ. ವೈದ್ಯ ತನ್ನ ಫೀಸನ್ನು ವಸೂಲು ಮಾಡಿಕೊಂಡು, ‘ತೀರಾ ಇಷ್ಟು ಗಂಭೀರವಾಗಿರಬೇಡಿ. ಸ್ವಲ್ಪ ನಗುನಗುತ್ತಾ ಇರಿ. ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ ಎನ್ನುತ್ತಾನೆ’ ನಗುವುದಕ್ಕೆ ಪ್ರಯತ್ನ ಶುರುವಾಗುತ್ತದೆ.

ಗಾಂಭೀರ್ಯ ಸಹಜವಾದದ್ದಾ ಇಲ್ಲವೇ ನಗು ಸಹಜವಾದದ್ದಾ? ಗಾಂಭೀರ್ಯ ಸಹಜವಾದದ್ದೇ ಆದರೆ ಮಕ್ಕಳು ನಮ್ಮ ನಗೆಯನ್ನು ಹೂತುಹಾಕಿ ಅದರ ಮೇಲೇಕೆ ಗಾಂಭೀರ್ಯದ ಮಹಲನ್ನು ಕಟ್ಟಬೇಕು? ನಗು ಸಹಜವೆನ್ನುವುದೇ ಆದಲ್ಲಿ ನಗಲು ಪ್ರಯತ್ನಿಸುವುದು ಏತಕ್ಕೆ?

ನಮ್ಮ ದೇಹವನ್ನೇ ಗಮನಿಸಿ. ಅಲರ್ಟ್ ಆಗಿರುವುದು ಅವುಗಳ ಸಹಜವಾದ ಲಕ್ಷಣವಲ್ಲ. ಮುಷ್ಠಿ ಬಿಗಿ ಹಿಡಿದು ಎಷ್ಟು ಕಾಲ ಕೂರಲಾದೀತು? ಅವುಗಳ ಸಹಜ ಸ್ಥಿತಿ ಸಡಿಲವಾಗಿರುವುದು. ಆದರೆ ಆ ಸಡಿಲತೆ ಆಲಸ್ಯವಾಗಿ ತಿರುಗಬಹುದು. ಸಡಿಲತೆಯಲ್ಲಿ ಆಲಸ್ಯದ ಹೊಗೆ ಕಾಣುತ್ತಿದ್ದ ಹಾಗೆ ಬಿಗಿತ ತಂದು ಕೊಳ್ಳುತ್ತಾ, ಬಿಗಿತ ಅತಿಯಾಯಿತು ಎನ್ನುತ್ತಿದ್ದ ಹಾಗೆ ಸಡಿಲತೆಗೆ ಬಿಟ್ಟರೆ ಸ್ನಾಯುಗಳು ಬಲಿಷ್ಠವಾಗುತ್ತವೆ. ಹೀಗೆ ಏಕೆ ಇರಬಾರದು ನಮ್ಮ ಬದುಕು?

ನಗಾರಿ ರೆಕಮಂಡೇಶನ್ಸ್ 12

20 ಆಗಸ್ಟ್

ನಗಾರಿ ರೆಕಮಂಡೇಶನ್! ಹೌದು, ಅಂತರ್ಜಾಲವೆಂಬ ಸಾಗರದಲ್ಲಿ ನಗೆ ಬುಗ್ಗೆಗಳನ್ನು ಅರಸುತ್ತಾ ಸಾಮ್ರಾಟರು ಅಲೆಯುತ್ತಲೇ ಇರುತ್ತಾರೆ. ಕೆಲವು ಬುಗ್ಗೆಗಳು ಕಂಡ ಕೂಡಲೇ ನಗಾರಿಗೆ ಬಂದು ಇಲ್ಲಿ ಅವನ್ನು ಪರಿಚಯಿಸುತ್ತಾರೆ. ಈ ಸಂಚಿಕೆಯಲ್ಲಿ ನಗೆ ಸಾಮ್ರಾಟರು ನಮಗೆ ಎಲ್ಲಿಗೆ ಕರೆದುಕೊಂದು ಹೋಗಲಿದ್ದಾರೆ ನೋಡೋಣ.

ನಮಸ್ತೇ,
ಹಾಸ್ಯ ಪುಸ್ತಕಗಳಲ್ಲಿಲ್ಲ ಅನ್ನುತ್ತಾರೆ. ಅದು ನಿಜವೇ. ಹಾಸ್ಯ ಇರುವುದು ನಮ್ಮ ಮನೋಭಾವದಲ್ಲಿ, ನಮ್ಮ ಬದುಕಿನ ಶೈಲಿಯಲ್ಲಿ. ಒಟ್ಟಾರೆಯಾಗಿ ನಮ್ಮ ವ್ಯಕ್ತಿತ್ವದಲ್ಲಿ. ಹೀಗಾಗಿ ಯಾವ ಕ್ಷೇತ್ರದಲ್ಲೇ ಆಗಲಿ ಹಾಸ್ಯವನ್ನು ಕಾಣಬಹುದು.

ಕನ್ನಡದಲ್ಲಿ ಬ್ಲಾಗು ಪ್ರಪಂಚ ಇನ್ನಷ್ಟು ವಿಸ್ತಾರವಾದ ಹಾಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವವರು ತಮ್ಮ ಕ್ಷೇತ್ರಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಹಾಸ್ಯದ ಬಗ್ಗೆ ಬರೆಯುತ್ತಾರೆ ಎಂದು ನಿರೀಕ್ಷಿಸಬಹುದು (ಯಾಕೆಂದರೆ ಈಗ ಎಲ್ಲರೂ ಸುಲಭವಾಗಿ ತಮ್ಮ ಮೇಲ್ ಬಾಕ್ಸಿಗೆ ಬಂದ ಜೋಕನ್ನು ಕನ್ನಡೀಕರಿಸಿ ಬ್ಲಾಗಿಗೆ ಹಾಕಿಕೊಂಡು ಬಿಡುತ್ತಾರೆ!). ಆದರೆ ಇಂಗ್ಲೀಷಿನಲ್ಲಿ ಈ ಬಗೆಯ ವಿಡಂಬನೆ, ಹಾಸ್ಯಕ್ಕೆ ಯಾವ ಕೊರತೆಯೂ ಇಲ್ಲ.

ಕಾರ್ಪೋರೇಟ್ ಕ್ಷೇತ್ರ ಅಂದ ಕೂಡಲೇ ನಮಗೆ ತೀರಾ ಸ್ವಚ್ಛವಾದ, ಗರಿಮುರಿಯದ ಸೂಟು ಹಾಕಿಕೊಂಡ ಪ್ಲಾಸ್ಟಿಕ್ ನಗೆಯ ಮುಖಗಳು ಕಾಣುತ್ತವಲ್ಲವೇ? ಯಾವಾಗಲೂ ಪರ್ಸನಾಲಿಟಿ ಡೆವಲಪ್ ಮೆಂಟ್ ಎನ್ನುತ್ತಲೇ ತಿರುಗುವ ಜನರು ಕಾಣುತ್ತಾರೆ. ಇವರ ನಡುವೆ ಅದೆಂಥಾ ಹಾಸ್ಯ ಇರಲಿಕ್ಕೆ ಸಾಧ್ಯ ಅಂತಲೂ ಅನ್ನಿಸುತ್ತದೆ. ಆದರೆ ಒಮ್ಮೆ ಈ ಬ್ಲಾಗನ್ನು ಹೊಕ್ಕು ನೋಡಿ, ಬ್ಲಾಕ್ ಝೆಡ್ಡಿ (ಕಪ್ಪು ಚೆಡ್ಡಿ?!) ಎಂಬುವವನ ಬೇಸಿಕ್ ಲಿಟರೇಚರ್ ಎಂಬ ಬ್ಲಾಗಿದು. ಇಲ್ಲಿ ಇವತ್ತಿನ ಕಾರ್ಪೋರೇಟ್ ಜಗತ್ತಿನ ವಿಡಂಬನೆಯಿದೆ.

ಇತ್ತೀಚಿನ ಲೇಖನವೊಂದರಲ್ಲಿ ನೀವು ಕೆಲಸಕ್ಕೆ ಸೇರಿದ ಮೊದಲನೆಯ ದಿನ ಏನು ಮಾಡಬೇಕು ಎಂದು ಹದಿನೈದು ಟಿಪ್‌ಗಳನ್ನು ಕೊಡಲಾಗಿದೆ. ಅವುಗಳಲ್ಲಿನ ಕೆಲವು ಸ್ಯಾಂಪಲ್‌ಗಳನ್ನು ನೋಡಿ…

೧. ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ (ಸಮಯಕ್ಕೆ ಮುಂಚೆ ಅಲ್ಲ!)
ನಿಮ್ಮ ಸಹೋದ್ಯೋಗಿಗಳಿಗೆ ವಿವರಿಸಿ ಹೇಳಿ: “ಸರಿಯಾದ ಸಮಯಕ್ಕೆ ಬರುವ ಜನರು ಶಿಸ್ತು, ಸಮಯ ಪಾಲನೆಯ ಬಗ್ಗೆ ತಿಳಿದಿರುತ್ತಾರೆ”. ಅದು ಎಂಥಾ ಪ್ರಭಾವ ಬೀರುತ್ತೆ ಎಂಬುದನ್ನು ನೋಡಿ.

೨. ಮನೆಯಿಂದಲೇ ಕೆಲವು ಕಡತಗಳನ್ನು ಒಯ್ದಿರಿ

ಓದಲು ಮ್ಯಾಗಝೀನುಗಳನ್ನೋ, ಪೇಪರನ್ನೋ ತೆಗೆದುಕೊಂಡು ಹೋಗಿ. ಮೊದಲನೆಯ ದಿನ ನಿಮಗೆ ಯಾವ ಕೆಲಸ ವಹಿಸಬೇಕು ಎಂದು ತೀರ್ಮಾನವಾಗುವುದರಲ್ಲೇ ಕಳೆದು ಹೋಗುತ್ತದೆ. ಆ ಸಮಯದಲ್ಲಿ ಸುಮ್ಮನೆ ಕಂಪನಿಯ ಮ್ಯಾನುಯಲ್ಲನ್ನು ಓದುತ್ತಾ ಕಿರಿಕಿರಿಗೊಳ್ಳಬೇಡಿ.

ಇನ್ನಷ್ಟು ಟಿಪ್‌ಗಳು ಬೇಕೆ? ಬೇಸಿಕ್ ಲಿಟರೇಚರ್‌ಗೆ ಭೇಟಿ ಕೊಡಿ ಮತ್ತೆ!

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಬ್ಲಾಗ್ ಬೀಟ್ 13

19 ಆಗಸ್ಟ್

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

[ಬೀಟು ಹಾಕಲು ಹೋದ ಸಾಮ್ರಾಟರಿಗೆ ಈ ಬಾರಿ ಜನರು ತುಂಬಾ ಗಂಭೀರವಾಗಿದ್ದಾರೆ ಎಂದು ಗಾಬರಿಯಾಯ್ತು. ಬಹುಮಂದಿ ಮಾಧ್ಯಮವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ, ಕೆಲವರು ಬಾಂಬುಗಳ ಬಗ್ಗೆ ಬರೆಯುತ್ತಿದ್ದಾರೆ, ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಗಂಭೀರವಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ನಗಾರಿಯ ಬೀಟಿಗೆ ಸಿಕ್ಕಿದ್ದು ಇಷ್ಟೇ]

ಮಜಾವಾಣಿ

ಕರ್ನಾಟಕದಲ್ಲಿ ರೈತನೋರ್ವ ತನ್ನ ತೊಂಭತ್ತೆಂಟನೆಯ ವಯಸ್ಸಿನಲ್ಲಿ ನೈಸರ್ಗಿಕ ಸಾವಿನಿಂದ ಸತ್ತಿದ್ದು ರಾಜ್ಯದಲ್ಲಿ ತೀವ್ರವಾದ ಸಂಚಲನವನ್ನು ಹುಟ್ಟು ಹಾಕಿದೆ. ಮುಖ್ಯ ಮಂತ್ರಿಗಳು ನಮ್ಮ ರಾಜ್ಯದಲ್ಲಿ ನೈಸರ್ಗಿಕ ಸಾವು ಬಂದು ಸಾಯುವ ರೈತರೂ ಇದ್ದಾರೆ ಎಂದು ಖುಶಿಯಾಗಿದ್ದಾರಂತೆ ಎಂದು ವರದಿ ಮಾಡಿದೆ ‘ಮಜಾವಾಣಿ’ ಪತ್ರಿಕೆ.

ಬೊಗಳೆ ರಗಳೆ

ಸ್ವಾತಂತ್ರ್ಯ ದಿನಾಚರಣೆಯ ದಿನ ಅನೇಕಾನೇಕರು ಸ್ವತಂತ್ರವಾಗಿ ಕನಸು ಕಾಣುತ್ತಾರೆ. ಹಾಗೆಯೇ ನಮ್ಮ ಬೊಗಳೆ ಸೊಂಪಾದಕರು ದೇಶದ ಪ್ರಧಾನಿಯಾದಂತೆ ಕನಸು ಕಂಡಿದ್ದಾರೆ. ಆದರೆ ಇದು ನಮ್ಮ ನಿಮ್ಮಂತೆ ಕೇವಲ ಅಸ್ಪಷ್ಟ ಕನಸಲ್ಲ. ಪ್ರಧಾನಿಯಾದ ಯಶೋಗಾಥೆಯೇ ಕನಸಿನಲ್ಲಿ ಮೂಡಿಬಂದಿದೆ.
ಈ ದೇಶವನ್ನು ಕಾಪಾಡಲು ಆ ದೇವರಿಂದಲೇ ಸಾಧ್ಯವಿಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದನ್ನು ವರದಿ ಮಾಡಿರುವ ಬೊಗಳೆ ಆ ಹೇಳಿಕೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದೆ.

ಕೆಂಡಸಂಪಿಗೆಯ ಸುದ್ದಿ ಕ್ಯಾತ

‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಅನ್ನೋ ಮಾತಿದೆ. ಕೇವಲ ಮಾತಾಡುವುದು ಮಾತ್ರ ಅಲ್ಲ ಅರ್ಥವಾಗದ ಹಾಗೇ ಮಾತನಾಡಿದರೆ ಎಂತೆಂಥ ಅನಾಹುತ ಆದೀತು, ದಂಡ ತೆರಬೇಕಾದೀತು ಅನ್ನುತ್ತಾನೆ ಸುದ್ದಿ ಕ್ಯಾತ ಯಾಕೆ ಅಂತ ತಿಳೀಬೇಕಾ? ಈ ಕ್ಯಾತೆ ಓದಿ.

ನಗು ಚಿತ್ತಾರ

18 ಆಗಸ್ಟ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಮಲಗಪ್ಪಾ ಮಲಗು, ಅಮ್ಮ ಇನ್ನೂ ನೆಟ್‌ನಿಂದ ಜೋಗುಳದ ಆಡಿಯೋ ಡೌನ್ ಲೋಡ್ ಮಾಡಿ ಮುಗಿಸಿಲ್ಲ!

ವಾರದ ವಿವೇಕ 15

17 ಆಗಸ್ಟ್

……………………………………………………….

ಗಾಳಿಯಲ್ಲಿ ಮಹಲು ಕಟ್ಟಿ.

ಅದರಲ್ಲಿ ತಪ್ಪೇನಿಲ್ಲ.

ಆದರೆ ನೆಲದ ಮೇಲೆ ಅದಕ್ಕೆ

ಫೌಂಡೇಶನ್ ಹಾಕುವುದನ್ನು ಮರೆಯಬೇಡಿ!

– ಮದನ ಮೋಹನ ಮಾಳವೀಯ

……………………………………………………….

ಯುವ ಬ್ಲಾಗಿಗನ ಸಂದರ್ಶನ(2)

13 ಆಗಸ್ಟ್

(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)

ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ? ದಯವಿಟ್ಟು ತಿಳಿಸಬೇಕು.

ಯುವ ಬ್ಲಾಗಿಗ: ಇಂಟರ್ನೆಟ್ ಎಂಬ ಅಲ್ಲಾವುದ್ದೀನನ ಅದ್ಭುತದ ದೀಪದಿಂದ ಹೊರ ಬರುತ್ತಿರುವ ಅಸಂಖ್ಯಾತ ಜೀನಿಗಳಲ್ಲಿ ಈ ಬ್ಲಾಗಿನ ತಂತ್ರಜ್ಞಾನವೂ ಒಂದು ಕಣ್ರೀ. ಇದು ಜನರಿಗೆ ಹಿಂದೆಂದೂ ಇರದಿದ್ದ, ಜನರು ಊಹಿಸಲು ಸಾಧ್ಯವೇ ಇರದಿದ್ದ ಅವಕಾಶವನ್ನು ತೆರೆದುಕೊಟ್ಟಿದೆ. ಇಂಥ ಸವಲತ್ತು ಯಾವ ಕಾಲದಲ್ಲಿತ್ತು, ಯಾವ ನಾಗರೀಕತೆಗಳಲ್ಲಿತ್ತು? ಹಿಂದಿನಿಂದಲೂ ತುಂಬಾ ಹಿಂದಿನಿಂದಲೂ ದೊಡ್ಡವರು ಹೇಳುತ್ತಾ ಬಂದದ್ದು ಒಂದೇ ಮಾತು ‘ಬಾಯ್ಮುಚ್ಚು… ತಲೆ ಹರಟೆ!’ ಮನುಷ್ಯನ ಸಹಜ ಸ್ವಭಾವವೇ ಬಾಯ್ತೆರೆಯುವುದು. ಮಗು ಕಣ್ಬಿಟ್ಟ ಕೂಡಲೇ ಬಾಯಿ ಅಗಲಿಸಿ ಕಿಟ್ಟನೆ ಚೀರುತ್ತದೆ. ಹಾಗೆ ಚೀರದ ಮಗು ಆರೋಗ್ಯ ಹೊಂದಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಮನುಷ್ಯ ಬಿದ್ದಾಗಲೂ, ಎಡವಿದಾಗಲೂ ಬಾಯಿ ತೆರೆಯುತ್ತಾನೆ. ಕೊನೆಗೆ ಸತ್ತ ಮೇಲೂ ಬಾಯ್ತೆರೆದೇ ಇರುತ್ತಾನೆ. ಮನುಷ್ಯನ ಈ ಸಹಜ ಸ್ವಭಾವವನ್ನು ದಮನಿಸುವ ವ್ಯವಸ್ಥಿತ ಸಂಚು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನುಚ್ಚು ನೂರು ಮಾಡಿದ್ದು ಬ್ಲಾಗುಗಳು. ಇದಕ್ಕೂ ಮುನ್ನ ಇದೇ ಕ್ರಾಂತಿಯನ್ನು ಮೊಬೈಲ್ ಫೋನುಗಳು ಮಾಡಲು ಪ್ರಯತ್ನ ಪಟ್ಟವು. ‘ಮಾತಾಡು ಇಂಡಿಯಾ ಮಾತಾಡು’ ಎಂದು ಹುರಿದುಂಬಿಸಿದವು. ಆದರೆ ಅವುಗಳಿಗೆ ಯಶಸ್ಸು ಸಿಕ್ಕಲಿಲ್ಲ.

ನ.ಸಾ: ಮೊಬೈಲುಗಳು ಯಶಸ್ವಿಯಾಗಲಿಲ್ಲವಾ? ಹೇಗೆ ಸರ್?

ಯು.ಬ್ಲಾ: ‘ಮಾತಾಡು ಭಾರತವೇ ಮನಬಿಚ್ಚಿ ಮಾತಾಡು’ ಎಂದೇನೋ ಮೊಬೈಲ್ ಕಂಪೆನಿಗಳು ಜನರನ್ನು ಹುರಿದುಂಬಿಸಿದವು. ಜನರೂ ಸಹ ಹೆಚ್ಚು ಹೆಚ್ಚು ಮಾತಾಡಿದಷ್ಟೂ ಫೋನ್ ಬಿಲ್ಲು ಹೆಚ್ಚು ಹೆಚ್ಚು ಬರುವುದನ್ನು ಕಂಡು ತಮ್ಮ ಮಾತಿಗೆ ಇಷ್ಟೋಂದು ಬೆಲೆಯಿದೆಯಾ ಎಂದು ಅನುಮಾನಗೊಂಡು, ಆಶ್ಚರ್ಯಗೊಂಡು, ಆಘಾತಗೊಂಡು ಸುಧಾರಿಸಿಕೊಂಡರು. ಆದರೆ ಬರು ಬರುತ್ತಾ ಅವರಿಗೆ ಅರಿವಾಯಿತು. ಮೊಬೈಲುಗಳು ಕ್ರಾಂತಿಯನ್ನು ಮಾಡುವಲ್ಲಿ ಸೋತವು ಎಂದು. ಮೊಬೈಲಿನಲ್ಲಿ ನೀವೆಷ್ಟೇ ಮಾತನಾಡಿದರೂ ನಿಮ್ಮನ್ನು ಕೇಳಲಿಕ್ಕೆ ಒಬ್ಬನಾದರೂ ಅತ್ತ ಕಡೆ ಇರಬೇಕಲ್ಲವಾ? ನಿಮ್ಮ ಕಥೆಗೆ, ನಿಮ್ಮ ಸಾಧನೆಯ ಯಶೋಗಾಥೆಗೆ ಹೂಂಗುಟ್ಟಲು ಒಂದು ಜೊತೆ ಕಿವಿ-ಬಾಯಿಯಾದರೂ ಆವಶ್ಯಕವಲ್ಲವಾ? ಜನರಿಗೆ ಮಾತನಾಡುವ, ಬಾಯ್ಬಿಡುವ ತೆವಲು ಹತ್ತಿದಾಗ ಸುಮ್ಮನೆ ಕಂಡಕಂಡವರಿಗೆ ಫೋನಾಯಿಸಲು ಸಾಧ್ಯವಾಗುತ್ತದಾ? ಹಾಗೇನಾದರೂ ಮಾಡಿದರೆ ‘ಕೊರೆತ ಕ್ರಿಮಿ’ ಎಂಬ ಬಿರುದು ಪಡೆಯಬೇಕಾಗುತ್ತದೆ. ನಿಮಗೆ ಸಾಹಿತ್ಯದಲ್ಲಿ ನೊಬೆಲ್ ಕೊಟ್ಟ ಸಂಗತಿಯನ್ನು ಹೇಳಲು ಫೋನಾಯಿಸಿದರೂ ಅತ್ತ ಬದಿಯವರು ಫೋನಿನ ಕೊನೆಯ ರಿಂಗಿನ ಕಂಪನ ಸಾಯುವವರೆಗೂ ಅದನ್ನು ಕೈಲೇ ಇಟ್ಟುಕೊಂಡು ಸತಾಯಿಸತೊಡಗುತ್ತಾರೆ. ಇಲ್ಲವೇ ಸಿಮ್ ಬದಲಿಸಿ ಅದರ ಬಗ್ಗೆ ಸುಳಿವೂ ಸಿಕ್ಕದ ಹಾಗೆ ಎಚ್ಚರ ವಹಿಸುತ್ತಾರೆ. ಇದರಿಂದಾಗಿ ಮೊಬೈಲುಗಳು ‘ಬಾಯ್ತೆರೆಸುವ’ ಕ್ರಾಂತಿಯನ್ನು ಮಾಡುವಲ್ಲಿ ವಿಫಲವಾದವು.

ನ.ಸಾ: ಅದೇನೋ ಸರಿ ಸರ್, ಆದರೆ ಬ್ಲಾಗುಗಳು ಹೇಗೆ ಈ ಕ್ರಾಂತಿಯನ್ನು ಮಾಡಲು ಸಾಧ್ಯವಾಯಿತು?

ಯು.ಬ್ಲಾ: ಹೇಳುತ್ತೇನೆ ಕೇಳಿ, ಈ ಬ್ಲಾಗುಗಳು ಕಂಪ್ಯೂಟರು, ಅದಕ್ಕೊಂದು ಅಂತರ್ಜಾಲದ ನೆಟ್‌ವರ್ಕು ಇರುವ ಯಾರಾದರೂ ಒಂದು ತಾಣವನ್ನು ತೆರೆದುಕೊಂಡು ಮನಸ್ಸಿಗೆ ತೋಚಿದ್ದನ್ನು ಗೀಚಿ ಬಿಸಾಕುವ ಸ್ವಾತಂತ್ರ್ಯವನ್ನೂ ಕೊಟ್ಟವು. ಜನರು ಚೆಂದದ ಹೆಸರಿನ ಬ್ಲಾಗುಗಳನ್ನು ತೆರೆದುಕೊಂಡು ಅದರಲ್ಲಿ ತಮ್ಮ ಫೋಟೊ ಹಾಕಿಕೊಂಡು, ತಮ್ಮ ಪ್ರವರವನ್ನು ಹರಿಬಿಟ್ಟು ಹುರುಪಿನಿಂದ ಮಾತು ಹಚ್ಚಿಕೊಂಡರು. ಮೈಮೇಲೆ ಹುತ್ತಗಟ್ಟಲು ಬಿಟ್ಟು ರಾಮಾಯಣ ರಚಿಸುವಲ್ಲಿ ಮಗ್ನರಾದವರ ಹಾಗೆ ಕೀಲಿಮಣೆಯನ್ನು ಕುಟ್ಟುತ್ತಾ ಕೂರುತ್ತಾರೆ ಜನರು. ತಾವು ಬರೆಯುವುದನ್ನೇ ಜಗತ್ತು ಕಾಯುತ್ತಾ ಕುಳಿತಿದೆಯೆಂದು ಭ್ರಮಿಸಿಕೊಂಡು ಕಲ್ಪನಾ ಲೋಕದಲ್ಲಿ ತೇಲಾಡುತ್ತಾರೆ. ತಮ್ಮ ಮಾತನ್ನು, ತಮ್ಮ ಬರಹವನ್ನು ತಮ್ಮ ಚಿಂತನೆಯ ಹೆಸರಿನಲ್ಲಿರುವ ಹರಟೆಯನ್ನು ಜಗತ್ತಿನ ಯಾವ ಮನುಷ್ಯ ಬೇಕಾದರೂ ಓದಬಹುದು ಎಂದು ನೆನೆದು ಪುಳಕಗೊಳ್ಳುತ್ತಾರೆ. ದಿನಕ್ಕೆ ನೂರು ಬಾರಿ ಕ್ಲಿಕ್ಕಿಗರ ಸಂಖ್ಯೆಯನ್ನು ನೋಡುತ್ತಾ, ಬ್ಲಾಗ್ ಅಂಕಿ ಅಂಶಗಳ ಗ್ರಾಫನ್ನೇ ಧೇನಿಸುತ್ತಾ ಕೂರುತ್ತಾರೆ. ದಿನ ದಿನವೂ ಪ್ರಪಂಚದ ಯಾವ ಮೂಲೆಯಿಂದಲಾದರೂ ತಮಗೆ ಪ್ರತಿಕ್ರಿಯೆ ಬಂದಿದೆಯಾ ಎಂದು ಮೇಲ್ ಬುಟ್ಟಿಯನ್ನು ತಡಕುತ್ತಾರೆ. ಇಷ್ಟೆಲ್ಲಾ ಹುಸಿ ಸಂಭ್ರಮ ಪಡುತ್ತಾ ಕಳೆಯುವ ಸಮಯದಲ್ಲಿ ಮಹತ್ವವಾದದ್ದೇನನ್ನೋ ಓದುವ, ಬರೆಯುವ, ಹೊಸದನ್ನು ಕಲಿಯುವಂತಹ ಕೆಲಸಗಳನ್ನು ಮಾಡಬಹುದು ಎಂಬುದನ್ನು ಯಶಸ್ವಿಯಾಗಿ ಮರೆಯುತ್ತಾರೆ. ಮಾತನಾಡುತ್ತಲೇ ಹೋಗುತ್ತಾರೆ…

ನ.ಸಾ: ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ಬ್ಲಾಗುಗಳಲ್ಲಿ ಹೆಚ್ಚು ಹೆಚ್ಚು ಜನರು ಬರೆಯಲು ಶುರು ಮಾಡಿದಾಗಿನಿಂದ ಒಟ್ಟಾರೆಯಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ? ಜನರ ಮನಸ್ಥಿತಿಯಲ್ಲಿ ಏನೆಲ್ಲಾ ಪರಿವರ್ತನೆಗಳಾಗಿವೆ?

ಯು.ಬ್ಲಾ: ಒಳ್ಳೆಯ ಪ್ರಶ್ನೆ. ನಮ್ಮ ಜನರಲ್ಲಿ, ಅದರಲ್ಲೂ ನನ್ನಂಥ ಯುವಕರಲ್ಲಿ ಬಹಳ ಬದಲಾವಣೆಗಳಾಗುತ್ತಿವೆ. ಹಿಂದೆಲ್ಲಾ ಸಮಾಜದ ಬಗ್ಗೆ, ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಇವರು ಕುದ್ದು ಹೋಗುತ್ತಿದ್ದರು. ಅನ್ಯಾಯ ಮೇರೆ ಮೀರಿದಾಗ ಬೀದಿಗಿಳಿಯುತ್ತಿದ್ದರು. ಕೆಲವೊಮ್ಮೆ ಉಗ್ರ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಜೀವವನ್ನು ಬಲಿದಾನ ಮಾಡಲೂ ಹಿಂಜರಿಯುತ್ತಿರಲಿಲ್ಲ, ಸುಧಾರಣೆಯನ್ನು ತರುತ್ತಿದ್ದರು. ಬದಲಾವಣೆಗೆ ಕಾರಣರಾಗುತ್ತಿದ್ದರು. ಈಗ ಹಾಗಿಲ್ಲ. ತಮಗೆ ಏನೇ ಅನ್ಯಾಯ ಕಂಡರೂ, ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದರೂ ಪಬ್ಲಿಕ್ ಟಾಯ್ಲೆಟ್ ಒಳಹೊಕ್ಕು ಉಮ್ಮಳವನ್ನು ಕಳೆದುಕೊಂಡು ಬಂದಷ್ಟೇ ಸಲೀಸಾಗಿ ಅದನ್ನೆಲ್ಲಾ ಬ್ಲಾಗಿನ ಅಂಗಳದಲ್ಲಿ ಕಾರಿಕೊಂಡು ಜವಾಬ್ದಾರಿಯಿಂದ ಜಾರಿಕೊಂಡು ಬಿಡುತ್ತಾರೆ. ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೆ ಅದರ ಬಗ್ಗೆ ಬ್ಲಾಗಿನಲ್ಲಿ ಏನೆಂದು ಬರೆಯುವುದು, ಏನು ಟೈಟಲ್ ಕೊಡುವುದು, ಎಂಥಾ ಪ್ರತಿಕ್ರಿಯೆ ಬರಬಹುದು ಎಂದೆಲ್ಲಾ ಕನಸುತ್ತಾ ಅನ್ಯಾಯವನ್ನು ಪ್ರತಿಭಟಿಸುವುದನ್ನೇ ಮರೆಯಲು ಸಹಾಯ ಮಾಡುತ್ತಲಿದೆ ಈ ಬ್ಲಾಗು. ಟ್ರಾಫಿಕ್ಕಿನ ಬಗ್ಗೆ, ಹೆಚ್ಚುತ್ತಿರುವ ಮನಸ್ಸಿನ ಮಾಲಿನ್ಯದ ಬಗ್ಗೆ, ಭಾವನೆಗಳು ನಶಿಸುತ್ತಿರುವುದರ ಬಗ್ಗೆ, ಮನುಷ್ಯ ಮನುಷ್ಯನ ಜೊತೆ ಮಾತನಾಡಲು ಸಂಯಮ ಕಳೆದುಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ… ಹೀಗೆ ಎಲ್ಲದರ ಬಗ್ಗೆ ಗೊಣಗುತ್ತಾ ಗೊಣಗುತ್ತಾ ತಮ್ಮ ಗೊಣಗಾಟ ಈ ಜಡವಾದ ವ್ಯವಸ್ಥೆಯಲ್ಲಿ ಭಯಾನಕ ಬಿರುಗಾಳಿಯನ್ನೇಳಿಸುತ್ತದೆ ಎಂದು ಕನಸು ಕಾಣುತ್ತಾ ಬದುಕುತ್ತಿದ್ದಾರೆ.

ನ.ಸಾ: ಹೀಗೆಲ್ಲಾ ನಡೆಯುತ್ತಿದೆಯೇ ಸರ್? ಮತ್ತೇನೇನು ನಿಮ್ಮ ಗಮನಕ್ಕೆ ಬಂದಿದೆ?

ಯು.ಬ್ಲಾ: ಹೇಳಲಿಕ್ಕೆ ಇನ್ನೂ ಇದೆ. ಜನರಿಗೆ ಪತ್ರಿಕೆಗಳು ಏಕೈಕ ಸುದ್ದಿ ಮೂಲವಾಗಿದ್ದವು. ಪತ್ರಿಕೆಯಲ್ಲಿ ಪ್ರಕಟವಾದದ್ದೆಲ್ಲಾ ಸತ್ಯ ಎಂದು ಜನ ನಂಬುತ್ತಿದ್ದರೂ ಈಗಲೂ ಬಹುಪಾಲು ಮಂದಿ ಅದನ್ನೇ ನಂಬಿಕೊಂಡಿದ್ದಾರೆ. ಈ ಬ್ಲಾಗುಗಳು ಬಂದ ಮೇಲೆ ಜನರು ಪತ್ರಿಕೆಗಳ ‘ಪಾತಿವ್ರತ್ಯ’ವನ್ನೇ ಶಂಕಿಸಲು ಶುರು ಮಾಡಿದ್ದಾರೆ. ಮುಂಚೆಯಾದರೆ ಅದು ಆರುಶಿ ತಲ್ವಾರ್ ಕೊಲೆ ಕೇಸಿರಲಿ, ಪದ್ಮ ಪ್ರಿಯಾ ಪ್ರಕರಣವಿರಲಿ, ವೋಟಿಗಾಗಿ ಹಣದ ಕ್ಯಾತೆಯಿರಲಿ ಪತ್ರಿಕೆಗಳು ಹೇಳಿದ್ದನ್ನೇ ಮಹಾಪ್ರಸಾದವೆಂಬಂತೆ ನಾವು ನಂಬುತ್ತಿದ್ದೆವು. ಸಂಪಾದಕರು ದಪ್ಪಕ್ಷರಗಳಲ್ಲಿ ಮುದ್ರಿಸಿದ್ದನ್ನೇ ಮಹಾ ಪ್ರಸಾದವೆಂಬಂತೆ ನಾವು ಭಯ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಅದನ್ನು ಹರಟೆ ಕಟ್ಟೆಯ ‘ಸಂವಾದ’ದಲ್ಲಿ ಎತ್ತಿಕೊಂಡು ನಮ್ಮ ನಮ್ಮ ಸಂಸ್ಕಾರಗಳಿಗೆ ತಕ್ಕ ಹಾಗೆ ಅದನ್ನು ಸಂಸ್ಕರಿಸಿ, ಸಾಧ್ಯವಾದಷ್ಟು ಮಂದಿಗೆ ವಿತರಿಸಿ ಮನೆಯ ಬಾಗಿಲು ಹಾಕಿಕೊಂಡು ನೆಮ್ಮದಿಯಿಂದ ಮಲಗುತ್ತಿದ್ವಿ. ಆದರೆ ಈ ಬ್ಲಾಗುಗಳು ಪತ್ರಿಕೆಗಳ ನಾನಾ ಬಣ್ಣದ ವೇಷಗಳನ್ನು ಬಿಚ್ಚಿ ಹಾಕಿ ಅವನ್ನು ಬೆತ್ತಲಾಗಿಸುತ್ತಾ ಹೋದಂತೆಲ್ಲಾ ನಮಗೆ ಆಘಾತವಾಗುತ್ತಿದೆ. ಈಗ ಜನರಿಗೆ ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವಲ್ಲ ಆದರೆ ಬ್ಲಾಗುಗಳಲ್ಲಿ ಬಂದದ್ದೆಲ್ಲಾ ಸತ್ಯ ಎಂದು ಅರಿವಾಗುತ್ತಿದೆ. ಹೀಗಾಗಿ ಗಲ್ಲಿಗೊಂದರಂತೆ ‘ಅಭಿಪ್ರಾಯ’ ವಿತರಿಸುವ ಬ್ಲಾಗುಗಳು ಹುಟ್ಟಿಕೊಂಡಿವೆ. ಸೂರ್ಯನ ಕೆಳಗಿನ ಪ್ರತಿಯೊಂದು ಸಂಗತಿಯ ಬಗ್ಗೆ ನಿರರ್ಗಳವಾಗಿ ಕೊರೆಯಬಲ್ಲ ಪಂಡಿತರು ಸೃಷ್ಟಿಯಾಗಿದ್ದಾರೆ. ಜಗತ್ತಿನ ಯಾವ ಘಟನೆಯ ಬಗೆಗೇ ಆಗಲಿ ಮಾತನಾಡುವ ಹಕ್ಕು ಎಲ್ಲರಿಗೂ ಸಿಕ್ಕಿದೆ. ಯಾವ ಕೋರ್ಟು, ವಿಚಾರಣೆಯೂ ಇಲ್ಲದೆ ಅಪರಾಧಿ ಯಾರೆಂದು ತೀರ್ಪು ಕೊಡುವ ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಕ್ರಾಂತಿ ಸಾಧ್ಯವೇ?

ನ.ಸಾ: ತುಂಬಾ ಉಪಯುಕ್ತವಾದ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಯುವ ಬ್ಲಾಗಿಗರೇ.

ಯು.ಬ್ಲಾ: ಹ್ಹಾ! ನಿಮ್ಮ ಸೋಂಪಾದಕರ ಇಲ್ಲವೇ ಸಹ ಬ್ಲಾಗಿಗರ ಒತ್ತಾಯಕ್ಕೆ ಮಣಿದು ನನ್ನ ಸಂದರ್ಶನವನ್ನೇನಾದರೂ ಎಡಿಟ್ ಮಾಡಿದರೆ ಜೋಕೆ!

ನ.ಸಾ: ಇಲ್ಲ, ಸರ್ ನಮ್ಮ ಬ್ಲಾಗಿನಲ್ಲಿ ಯಾವ ಸಂಗತಿಯೂ ಸೆನ್ಸಾರ್ ಆಗುವುದಿಲ್ಲ. ನಮ್ಮ ನಾಡಿನ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿ ಯಾರದೋ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ, ತಮ್ಮ ಪುಸ್ತಕ ಬಿಡುಗಡೆ ಮಾಡಿ ಬೇರಾರನ್ನೋ ಬೈದು ಭಾಷಣ ಮಾಡುವಾಗ ಹೇಳಿದ ಹಾಗೆ ನೀವು ‘ಕಾಂಡೋಮ್’ ಇಲ್ಲದೆ ಮಾತನಾಡಬಹುದು ನಗೆ ನಗಾರಿಯಲ್ಲಿ ಮಾತ್ರ! (ಮಾತನಾಡುವುದಕ್ಕೆ ಕಾಂಡೋಮ್ ಯಾಕೆ ಅಂತ ಹಾಯ್ ಬೆಂಗಳೂರ್ ಸಾರಥಿಯ ಹಾಗೆ ಕೇಳಬೇಡ್ರಿ ಮತ್ತೆ!)

ಯುವ ಬ್ಲಾಗಿಗನ ಸಂದರ್ಶನ

8 ಆಗಸ್ಟ್

ನಗೆ ಸಾಮ್ರಾಟರ alter ego ಕಳೆದ ಬಾರಿಯ ಸಂದರ್ಶನದಿಂದ ಉತ್ಸಾಹಗೊಂಡು ಈ ಸಂಚಿಕೆಯ ನಗೆ ನಗಾರಿಗಾಗಿ ಒಬ್ಬ ಯುವ ಹಾಗೂ ಯಶಸ್ವೀ ಬ್ಲಾಗಿಗನನ್ನು ಸಂದರ್ಶಿಸಿದೆ. ಈ ಸಾಮ್ರಾಟರ ಮಾನಸ ಪುತ್ರ ಸಾಮ್ರಾಟರ ಬೆನ್ತಟ್ಟುವಿಕೆಗಾಗಿ ಕಾಯುತ್ತಾ ನಿಂತಿದ್ದಾನೆ.

ಸಂದರ್ಶನ ನಿಮ್ಮ ಮುಂದಿದೆ:

ನಗೆ ಸಾಮ್ರಾಟ್: ನಮಸ್ಕಾರ್ ಸರ್. ಹೇಗಿದ್ದೀರಾ?

ಯುವ ಬ್ಲಾಗಿಗ: Fine dude. How are you?

ನ.ಸಾ: ಚೆನ್ನಾಗಿದ್ದೀನಿ ಸರ್. ಇದು ಕನ್ನಡದ ಪತ್ರಿಕೆಗಾಗಿನ ಸಂದರ್ಶನ. ಕನ್ನಡದಲ್ಲಿ ಮಾತನಾಡಿದರೆ ಚೆಂದ ಇತ್ತು.

ಯು.ಬ್ಲಾ: ನೋ ಪ್ರಾಬ್ಲಮ್ ಡೂಡ್. ಐ ಆಮ್ ಕಂಫರ್ಟಬಲ್ ವಿಥ್ ಕನ್ನಡ ಆಲ್ಸೋ!

ನ.ಸಾ: (ತಲೆ ಚಚ್ಚಿಕೊಳ್ಳುತ್ತಾ…) ಹಂಗಲ್ಲ ಸಾರ್. ಕನ್ನಡದಲ್ಲಿ ಮಾತಾಡಿ ಅಂದರೆ ಕನ್ನಡ ಫಾಂಟ್ಸ್ ಬಳಸಿಕೊಂಡು ಇಂಗ್ಲೀಷ್ ಮಾತಾಡಿ ಅಂತಲ್ಲ. ಕನ್ನಡದಲ್ಲಿ ಮಾತಾಡಿ, ಕನ್ನಡಿಗರು ಮಾತನಾಡುವ ಕನ್ನಡದಲ್ಲಿ.

ಯು.ಬ್ಲಾ: ಯು ಆರ್ ಇರಿಟೇಟಿಂಗ್ ಮಿ. ನಾನು ಬೆಂಗಳೂರು ಕನ್ನಡಿಗಾಸ್ ಮಾತಾಡೋ ಟೈಪೇ ಮಾತಾಡ್ತಿರೋದಲ್ವಾ?

ನ.ಸಾ: ಕ್ಷಮಿಸಿ ಸಾರ್. ಬೆಂಗಳೂರು ಕನ್ನಡಿಗರಲ್ಲ, ಉಳಿದ ಕನ್ನಡಿಗರು ಮಾತಾಡೋ ಕನ್ನಡದಲ್ಲಿ ಮಾತಾಡಿ.

ಯು.ಬ್ಲಾ: ಸರಿ. ಈಗ ಸರಿಯಾಗಿ ಕೇಳಿದಿರಿ ನೀವು. ಹೂಂ, ಸಂದರ್ಶನ ಮುಂದುವರೆಸಿ.

ನ.ಸಾ: ಸರ್, ಈ ಬ್ಲಾಗುಗಳು ನಮ್ಮ ಸಮೂಹ ಪ್ರಜ್ಞೆಗೆ ಹೊಸ ಆಯಾಮವನ್ನು ದಕ್ಕಿಸಿಕೊಟ್ಟು ಆಮೂಲಕ ಹೊಸ ಸಾಂಸ್ಕೃತಿಕ ಅನುಸಂಧಾನಗಳಿಗೆ ಅವಕಾಶ ಮಾಡಿಕೊಟ್ಟು ಜಾಗತೀಕರಣದ ಈ ಯುಗದಲ್ಲಿ ಸಮಾಜದಲ್ಲಿ ಜವಾಬ್ದಾರಿಯುತ ಸಮೂಹವನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯು.ಬ್ಲಾ: ಹ್ಞಾ..? ಯಾವ ಭಾಷೆರೀ ಅದು? ಸ್ವಲ್ಪ ಅರ್ಥ ಹಾಗೋ ಹಂಗೇ ಕೇಳೋಕಾಗಲ್ಲವೇನ್ರಿ? ಬ್ಲಾಗ್ ಅಂದ್ರೆ ಏನು ಅಂತ ಸರಳವಾಗಿ ಕೇಳಿದ್ರೆ ನಿಮ್ಮ ಗಂಟೇನು ಹೋಗುತ್ತೆ? ನೀವು ಬುದ್ಧಿಜೀವಿಯಾ?

ನ.ಸಾ: (ಪ್ಯಾದೆ ನಗು ನಗುತ್ತಾ) ಓದುಗರು ಹಾಗನ್ನುತ್ತಾರೆ ಸರ್.

ಯು.ಬ್ಲಾ: ಹಿಂಗೇ ಕಣ್ರೀ ಜನ ನಿಮ್ಮನ್ನು ರೈಲು ಹತ್ತಿಸುವುದು. ನಿಮ್ಮಂಥವರ ಕಷ್ಟ ತಡಿಯೋಕಾಗದೆ ನಿಮ್ಮನ್ನು ಬುದ್ಧಿಜೀವಿ ಅಂತ ಕರೆದು ದೂರ ಕೂರಿಸಿಬಿಡ್ತಾರೆ. ರಾಜಕೀಯದ ನಿರಾಶ್ರಿತರನ್ನು ರಾಜಭವನದಲ್ಲಿ ಕೂರಿಸಿದ ಹಾಗೆ.

ನ.ಸಾ: ಕ್ಷಮಿಸಿ ಸರ್. ಸರಳವಾಗೆ ಕೇಳ್ತೀನಿ. ಈ ಬ್ಲಾಗುಗಳು ಯಾವ ರೀತಿಯಲ್ಲಿ ಸಮಾಜದ ಮೇಲೆ ಪರಿಣಾಮ ಬೀರ್ತಾ ಇವೆ ಸರ್?

ಯು.ಬ್ಲಾ: ಹಾಂ! ಹಂಗೆ ಕೇಳಿ. ನೋಡಿ ಈ ಬ್ಲಾಗುಗಳು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟನ್ನು ಉದ್ದೀಪನ ಗೊಳಿಸುವಲ್ಲಿ ಸಹಾಯ ಮಾಡ್ತಾ ಇವೆ. ಮನುಷ್ಯನಿಗೆ ತನಗೆ ತಿಳಿದ ಸಂಗತಿಯನ್ನು ಇನ್ನೊಬ್ಬನಿಗೆ,ಮತ್ತೊಬ್ಬನಿಗೆ,ಮಗದೊಬ್ಬನಿಗೆ ದಾಟಿಸುವ ತೆವಲು ಇರುತ್ತದೆ. ಆ ಮಾಹಿತಿ ಸುದ್ದಿಯೋ, ವದಂತಿಯೋ, ಆರೋಪವೋ, ಸಂಶಯವೋ, ಸಂಶೋಧನೆಯೋ, ಕವನವೋ, ಕವಿತೆಯೂ ಅಥವಾ ಇವುಗಳ ಹೆಸರಿನಲ್ಲಿ ಗೀಚಿದ ರಬ್ಬಿಶೋ ಏನೇ ಆಗಬಹುದು. ಎಲ್ಲವನ್ನೂ ಎರಡನೆಯವನಿಗೆ, ಮೂರನೆಯವನಿಗೆ ದಾಟಿಸಿಬಿಡುವ ಆಸೆಯಿರುತ್ತದೆ. ಹಿಂದೆ ಇದೇ ಕಾರಣಕ್ಕೆ ಮನುಷ್ಯನಿಗೆ ಸಂಜ್ಞೆಗಳ ಭಾಷೆ ಬೇಕಾಯಿತು. ಅನಂತರ ಆತ ಶಬ್ಧಗಳನ್ನು ಕೇಳಿ ತಿಳಿದು ನಾಲಿಗೆಯನ್ನು ನಾನಾ ರೀತಿಯಲ್ಲಿ ತಿರುವಿ ಮಾತನಾಡಲು ಕಲಿತು ಭಾಷೆಗಳನ್ನು ಮಾಡಿದ. ಅನಂತರ ತಾನು ಹೇಳಿದ್ದನ್ನು ಪದೇ ಪದೇ ಹೇಳಲು ಬೇಜಾರಾಗಿಯೋ ಅಥವಾ ತಾನು ಸತ್ತ ಮೇಲೆ ತನ್ನ ‘ವಿಚಾರ’ಗಳನ್ನು ಮುಂದಿನ ತಲೆಮಾರಿಗೆ ಹೇಗೆ ತಲುಪಿಸುವುದು(ಅವರಿಗೆ ಬೇಕೋ ಬೇಡವೋ ಎನ್ನುವುದನ್ನು ಯೋಚಿಸದೆ) ಎನ್ನುವ ಚಿಂತೆಯಲ್ಲಿ ಲಿಪಿಯನ್ನು ಕಂಡುಕೊಂಡ. ಈಗ ಈ ಬ್ಲಾಗುಗಳು ಬಂದಿವೆ.

ನ.ಸಾ: ಒಳ್ಳೆಯ ವಿಶ್ಲೇಷಣೆ, ಇವುಗಳಿಂದ ಸಮಾಜದಲ್ಲಿ ಏನು ಬದಲಾವಣೆಯಾಗುತ್ತದೆ?

ಯು.ಬ್ಲಾ: ಸಮಾಜದಲ್ಲಿ ಬದಲಾವಣೆಗಳು? ತುಂಬಾ ಆಗ್ತವೆ. ಪಟ್ಟಿ ಮಾಡಿಕೊಳ್ಳಿ. ಜನರು ತಮ್ಮ ಕೆಲಸ ಗಿಲಸ ಬಿಟ್ಟು ಕಂಪ್ಯೂಟರಿನ ಕೀಲಿಮಣೆಯ ಮುಂದೆ ಕುಳಿತುಕೊಳ್ಳುತ್ತಾರೆ. ಕೀಲಿಮಣೆಯ ಮೇಲೆ ಧೂಳು ಕೂರಲು ಬಿಡುವು ಕೊಡದ ಹಾಗೆ ಕುಟ್ಟುತ್ತಲೇ ಇರುತ್ತಾರೆ. ಚಿಕ್ಕ ಮಕ್ಕಳು ಮೈದಾನದಲ್ಲಿ ಆಡುವುದು ವಿರಳವಾಗುತ್ತಿದೆ. ಯುವಕರು ಸೈಬರ್ ಕೆಫೆಗಳಲ್ಲಿ ಜಾಂಡಾ ಹೂಡಲು ಶುರು ಮಾಡಿದ್ದಾರೆ. ಆಫೀಸುಗಳಲ್ಲಿ ನೌಕರರು ಕದ್ದು ಮುಚ್ಚಿ ಐನ್‌ಸ್ಟೀನ್ ಪೇಟೆಂಟ್ ಆಫೀಸಿನಲ್ಲಿ ಕುಳಿತು ಥಿಯರಿ ಆಫ್ ರಿಲೇಟಿವಿಟಿ ಬರೆದ ಹಾಗೆ ಬ್ಲಾಗುಗಳನ್ನು ಕುಟ್ಟುತ್ತಿರುತ್ತಾರೆ. ಬಾಸುಗಳಿಗೆ ತಲೆ ನೋವು ತರುತ್ತಿರುತ್ತಾರೆ. ತಲೆ ನೋವು ಹೆಚ್ಚಾಗುವುದರಿಂದ ಅನಾಸಿನ್ ಮಾತ್ರೆಯ ವ್ಯಾಪಾರ ವಿಪರೀತವಾಗುತ್ತದೆ. ಇಂಟರ್ನೆಟ್ ಬಿಲ್ಲು ರೇಶನ್ ಬಿಲ್ಲಿನಲ್ಲಿ ಸೇರಿಹೋಗಿದೆ…

ನ.ಸಾ: (ತಲೆ ಕೆರೆದುಕೊಳ್ಳುತ್ತಾ) ಅದೆಲ್ಲಾ ಸರಿ ಸರ್, ಆದರೆ ಸಮಾಜಿಕವಾದ ಪರಿಣಾಮಗಳು ಏನು?

ಯು.ಬ್ಲಾ: ಇವೆಲ್ಲಾ ಸಾಮಾಜಿಕ ಬದಲಾವಣೆಗಳು ಎಲ್ಲವೇನ್ರಿ? ಓಹೋ, ನೀವು ಬುದ್ಧಿಜೀವಿಗಳು ಅಲ್ಲವಾ? ನಿಮಗೆ ಘನ ಗಂಭೀರವಾದ ಸಂಗತಿಗಳನ್ನು ಹೇಳಬೇಕು ಅಲ್ಲವೇ?

(ನಾಳೆ ಮುಂದುವರೆಯುವುದು)

ಚಿತ್ರಗಳು ನಗಿಸುತ್ತವೆ

8 ಆಗಸ್ಟ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಮನಮೋಹನ್ ಸಿಂಗರದೂ ಈಗ ಇದೇ ಪಾಡಾಗಿದೆಯಂತೆ ಹೌದಾ?