Tag Archives: nagaari recommandation

ನಗಾರಿ ರೆಕಮಂಡೇಶನ್ 29:‌ಟಾಮ್ ಮತ್ತು ಜೆರ್ರಿ

18 ಮಾರ್ಚ್

ಜನರನ್ನು ನಗಿಸುವುದು ಸುಲಭದ ಕೆಲಸವಲ್ಲ. ಕೂದಲಿಂದ ಬೆರಳ ತುದಿಯವರೆಗೆ ಚಿತ್ರ ವಿಚಿತ್ರವಾದ ವೇಷ ತೊಟ್ಟು ಬಫೂನಿನಂತೆ ಕುಣಿಯಬೇಕು. ಪದಗಳ ಮೋಡಿಯಲ್ಲಿ ಕೆಡವಿ ಪಂಚುಗಳ ಮೇಲೆ ಪಂಚುಗಳನ್ನು ಕೊಡಬೇಕು. ನೇರವಾದ ಸತ್ಯವನ್ನು ವಕ್ರಗೆರೆಗಳ ದಾಳಿಗೆ ಈಡು ಮಾಡಬೇಕು. ಪ್ರಸಿದ್ಧ ನಟನ, ಪ್ರಸಿದ್ಧ ರಾಜಕಾರಣಿಯ ಕಾಲೆಳೆಯಬೇಕು. ಇಷ್ಟೆಲ್ಲ ಮಾಡಿದರೂ `ನಗದು’ ಎನ್ನುವಂತಹ ಸ್ಪೀಶಿಗಳಿರುತ್ತವೆ. ಹೀಗಿರುವಾಗ ಆ ಎರಡು ಪಾತ್ರಗಳು ಮಾತಿಲ್ಲದೆ, ವಿಡಂಬನೆಯಿಲ್ಲದೆ, ವ್ಯಂಗ್ಯಾರ್ಥ, ದ್ವಂದ್ವಾರ್ಥದ ಹಂಗಿಲ್ಲದೆ, ಅಣಕವಾಡುವ ಆವಶ್ಯಕತೆಯಿಲ್ಲದೆ ಕೇವಲ ತಮ್ಮ ಚಿನ್ನಾಟ, ತುಂಟಾಟಗಳಿಂದಲೇ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೆ, ಮುಗ್ಧ ಬಾಲಕರಿಂದ ಹಿಡಿದು ಪಿಎಚ್ಡಿ ಬುದ್ಧಿವಂತರವರೆಗೆ, ಥೇಮ್ಸ್ ಪುತ್ರರಿಂದ ಹಿಡಿದು ಕೆಂಗೇರಿ ಏರಿಯಾದ ಮನೆಯ ಹುಡಗನವರೆಗೆ ಎಲ್ಲರನ್ನೂ ಬಿದ್ದು ಉರುಳಾಡಿ ನಗುವಂತೆ ಮಾಡಿದವು.

ಹೌದು ಅವು ಟಾಮ್ ಮತ್ತು ಜೆರ್ರಿ!

ವಿಲಿಯಂ ಹನ್ನಾ ಹಾಗೂ ಜೋಸೆಫ್ ಬಾರ್ಬರಾ ಎಂಬಿಬ್ಬರು ಪ್ರತಿಭಾವಂತರು ಸೇರಿ ಸೃಷ್ಟಿಸಿದ ಪಾತ್ರಗಳು-  ಟಾಮ್  ಎಂಬ ಹೆಸರಿನ ಮನೆ ಬೆಕ್ಕು, ಜೆರ್ರಿ ಎಂಬ ಹೆಸರಿನ ತುಂಟ ಇಲಿ.  ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣ ಸಂಕಟವೆಂಬ ಗಾದೆ ಮಾತನ್ನು ಈ ಟಾಮ್ ಹಾಗೂ ಜೆರ್ರಿಗಳು ತಲೆಕೆಳಗು ಮಾಡಿದವು. ಅಂಗೈ ಗಾತ್ರದ ಪುಟ್ಟ ಇಲಿ ಟಾಮ್ನನ್ನು ಕೆಣಕುವುದು, ಟಾಮ್ ನಾನಾ ತಂತ್ರಗಳನ್ನು ಹೂಡಿ ಜೆರ್ರಿಯನ್ನು ಹಿಡಿಯಲು ಹೊಂಚುವುದು. ಜೆರ್ರಿ ತಪ್ಪಿಸಿಕೊಂಡು ಓಡುತ್ತಲೇ ಟಾಮ್ಗೆ ತಿರುಗಿ ಟಾಂಗು ಕೊಡುವುದು – ಇಷ್ಟನ್ನೇ ವೈವಿಧ್ಯಮಯವಾಗಿ ನೂರಕ್ಕೂ ಹೆಚ್ಚು ಸ್ಕೆಚ್ಚುಗಳಲ್ಲಿ ತೋರಿದ ಹನ್ನಾ ಬಾರ್ಬರಾ ಜೋಡಿ ಮನರಂಜನೆಯಲ್ಲಿ ಹೊಸತೊಂದು ಪರಂಪರೆಯನ್ನೇ ಹುಟ್ಟುಹಾಕಿದರು.

ವಯಸ್ಸಾಗದ, ಮುಖ ಸುಕ್ಕು ಗಟ್ಟದ, ಖಾಯಿಲೆ ಬೀಳದ, ಸ್ಕ್ಯಾಂಡಲುಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಳ್ಳದ, ಜನಪ್ರಿಯತೆಗಾಗಿ ಗಿಮಿಕ್ಕು ಮಾಡದ ಅನಿಮೇಶನ್ ತಂತ್ರಜ್ಞಾನದಲ್ಲಿ ರೂಪುಗೊಂಡ ಈ ಪಾತ್ರಗಳು ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಟಾಮ್ ಹಾಗೂ ಜೆರ್ರಿಗಳ ಚಿನ್ನಾಟವನ್ನು ನೋಡದೆ ಈಗಿನ ಮಕ್ಕಳು ನಗುವುದನ್ನು ಕಲಿಯುವುದಿಲ್ಲ. ತಾವು ಎಳೆಯರಾಗಿದ್ದಾಗ ಕಂಡು ಖುಶಿಪಟ್ಟಿದ್ದ ಟಾಮ್ ಹಾಗೂ ಜೆರ್ರಿ ಕಾರ್ಟೂನುಗಳನ್ನು ತಮ್ಮ ಮಕ್ಕಳೊಂದಿಗೂ ಕೂತು ಎಂಜಾಯ್ ಮಾಡಬಹುದಾದ ವಿಶಿಷ್ಟತೆ ಇವುಗಳದು.

೧೯೪೦ರ ಫೆಬ್ರವರಿ ೧೦ರಂದು ಬಿಡುಗಡೆಯಾದ `ಪುಸ್ ಗೆಟ್ಸ್ ದ ಬೂಟ್’ ಸಿನೆಮಾದಲ್ಲಿ ಕಣ್ತೆರೆದ ಈ ಟಾಮ್ ಅಂಡ್ ಜೆರ್ರಿಗೆ ಎಪ್ಪತ್ತು ವರ್ಷಗಳು ಕಳೆದಿವೆ. ಇಂದಿಗೂ ಮಕ್ಕಳ, ವಯಸ್ಕರ ಕಣ್ಣುಗಳಲ್ಲಿ ಅದೇ ಲವಲವಿಕೆಯಿಂದ ಕುಣಿಯುತ್ತಿವೆ!

ಈ ಕೊಂಡಿಯಲ್ಲಿರುವ ತಾಣಕ್ಕೆ ಪ್ರವೇಶಿಸಿದರೆ ಬಹುತೇಕ ಎಲ್ಲಾ ಟಾಮ್ ಜೆರ್ರಿ ತುಂಟಾಟಗಳನ್ನು ಕಂಡು ಆನಂದಿಸಬಹುದು.

ಒಂದು ಸ್ಯಾಂಪಲ್ ಇಲ್ಲಿದೆ:



ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗಾರಿ ರೆಕಮಂಡೇಶನ್ 28: ‌ಸಂತಾ ಬಂತಾ ಡಾಟ್ ಕಾಮ್

3 ಮಾರ್ಚ್

ಒಂದು ಜನಾಂಗವನ್ನು ಗುರಿಯಾಗಿರಿಸಿಕೊಂಡ ಹಾಸ್ಯ  ಅದೇ ಜನಾಂಗದಲ್ಲಿ ಹುಟ್ಟಿ ಪ್ರಸಿದ್ಧಿಗೆ ಬಂದರೆ ಅದು ಆ ಜನಾಂಗದ ಹಾಸ್ಯ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ. ಯಹೂದಿಗಳನ್ನು ಕುರಿತಾದ ಜೋಕುಗಳನ್ನು ಆ ಜನಾಂಗದ ಸದಸ್ಯರೇ ಜನಪ್ರಿಯಗೊಳಿಸಿದ್ದಾರೆ. ಖುದ್ದು ಸರ್ದಾರ್ ಆದ ಖುಶ್ವಂತ್ ಸಿಂಗ್ ಸರ್ದಾರ್ಜಿ ಜೋಕುಗಳನ್ನು ಜನಪ್ರಿಯಗೊಳಿಸಿದ್ದು ಭಾರತದ ಸಂದರ್ಭದಲ್ಲಿ ಮನನೀಯ ಉದಾಹರಣೆ.

ಸರ್ದಾರ್ಜಿ ಪಾತ್ರ ಪಂಜಾಬಿನ ಸಿಖ್ ಜನಾಂಗದ ಸದಸ್ಯರನ್ನು ಹೋಲುವುದಾದರೂ ಅದು ಸಾರ್ವತ್ರಿಕವಾಗಿ ಗುರುತಿಸಿಕೊಂಡಿರುವುದು ಎಲ್ಲಾ ಜನಾಂಗಗಳಲ್ಲೂ, ಎಲ್ಲರಲ್ಲೂ ಇರಬಹುದಾದ ಮೂರ್ಖತನ, ಎಡಬಿಡಂಗಿತನದ ಅಭಿವ್ಯಕ್ತಿಯಾಗಿ.

ಇಂತಹ ಸರ್ದಾರ್ ಜೋಕುಗಳ ದೊಡ್ಡ ಸಂಗ್ರಹವೇ ಇದೆ. ಹೊಸ ಜೋಕು ಹೊಸೆಯುವುದಕ್ಕೆ ಪಾತ್ರವೊಂದರ ಆವಶ್ಯಕತೆ ಕಂಡೊಡನೆ ಸರ್ದಾರ್ ಪ್ರತ್ಯಕ್ಷನಾಗುತ್ತಾನೆ.

ಸಂತಾ ಬಂತಾ ಡಾಟ್ ಕಾಮ್ ಸರ್ದಾರ್ ಜೋಕುಗಳಿಗೆ ದೇಶದಾದ್ಯಂತ ಪ್ರಸಿದ್ಧವಾದ ತಾಣ. ಪ್ರಚಲಿತ ವಿದ್ಯಮಾನಗಳನ್ನು ಕುರಿತ ಹರಿತವಾದ ವ್ಯಂಗ್ಯಚಿತ್ರಗಳು, ಅಗಾಧವಾದ ಜೋಕುಗಳು, ಸ್ಕ್ರೀನ್ ಸೇವರುಗಳು ಅಲ್ಲದೆ ಅನೇಕ ಸಲಕರಣೆಗಳನ್ನು ಹೊಂದಿರುವ ಸಂತಾ ಬಂತಾ ಡಾಟ್ ಕಾಮ್ ನ ವ್ಯಂಗ್ಯಚಿತ್ರದ ಸ್ಯಾಂಪಲ್ ಇಲ್ಲಿದೆ:

courtesy: santabanta.com

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗಾರಿ ರೆಕಮಂಡೇಶನ್ 26 : ಸಿಲ್ಲಿ ಲಲ್ಲಿ

3 ಜನ

 

ಕನ್ನಡದ ಟಿವಿ ಚಾನಲುಗಳಲ್ಲು ಹಾಸ್ಯ ಧಾರಾವಾಹಿಯ ಜಮಾನ ಶುರುವಾಗಿದ್ದು ಯಾವ ಎಂದು ನೆನೆದರೆ ನೆನಪಾಗುವುದು ಪೀಚಲುsillilalli ದೇಹದ ಗಂಡನನ್ನು ಬಾಲ್ಕನಿಯಿಂದ ಎಸೆಯುವ ದಢೂತಿ, ಘಟವಾಣಿ ಮಡದಿಯ ಕತೆಯ ‘ಪಾ.ಪ.ಪಾಂಡು’. ಕೌಟುಂಬಿಕ ಹಾಸ್ಯಕ್ಕೆ ಹೇಳಿ ಮಾಡಿಸಿದ ವಸ್ತುವಾದ ದಾಂಪತ್ಯವನ್ನು ಆಧಾರವಾಗಿಟ್ಟುಕೊಂಡು ಮೂಡಿಬಂದ ಈ ಧಾರಾವಾಹಿ ಬಹುಬೇಗ ಯಶಸ್ಸಿನ ಮೆಟ್ಟಿಲೇರಿತು. ಹಿರಿತೆರೆಯ ಹಾಸ್ಯದ ಪಾತ್ರಗಳಲ್ಲಿ ಪಳಗಿದ್ದ ಸಿಹಿ ಕಹಿ ಚಂದ್ರು ದಂಪತಿಗಳ ಫೈನಲ್ ಕಟ್ ಪ್ರೊಡಕ್ಷನ್‌ ನಿರ್ಮಾಣದ ಈ ಧಾರಾವಾಹಿಗೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆಯುತ್ತಿದ್ದವರು ಎಂ.ಎಸ್.ನರಸಿಂಹಮೂರ್ತಿ .

ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ಧಾರಾವಾಹಿಗೆ ಪ್ರತಿದಿನ ಚಿತ್ರಕತೆ, ಸಂಭಾಷಣೆ ಬರೆಯುವುದು ಸುಲಭದ ಮಾತಲ್ಲ. ಸುಸಜ್ಜಿತವಾದ ಬರಹಗಾರರ ತಂಡವನ್ನೇ ಇಟ್ಟುಕೊಂಡು ಇಂಗ್ಲೀಷಿನ ‘ಸೈನ್‌ಫೆಲ್ಡ್’ನಂತಹ ಸಿಟ್‌ಕಾಮ್‌ಗಳು ವಾರಕ್ಕೊಂದು ಎಪಿಸೋಡ್ ನಿರ್ಮಿಸುತ್ತವೆ. ಪಾ.ಪ.ಪಾಂಡು ಯಶಸ್ಸಿನ ಶಿಖರವನ್ನೇರಿದ್ದ ಸಮಯದಲ್ಲೇ ಮುಖ್ಯಪಾತ್ರಧಾರಿ ಬದಲಾಗಿ ನಾನಾ ರೀತಿಯ ತೊಂದರೆಗಳಾದವು.

ಮೊದಲ ಯಶಸ್ಸು ಅತಿ ಅಪಾಯಕಾರಿಯಾದದ್ದು. ಅದರ ನೆರಳು ಮುಂದಿನ ಎಲ್ಲಾ ಪ್ರಯತ್ನಗಳ ಮೇಲೆ ಗಾಢವಾಗಿರುತ್ತದೆ. ಪಾ.ಪ ಪಾಂಡು ಯಶಸ್ಸಿನ ನಂತರ ಅದಕ್ಕಿಂತಲೂ ಹೆಚ್ಚಿನ ಮಟ್ಟದ ಜನಪ್ರಿಯತೆಯನ್ನು ಪಡೆದದ್ದು ಈ ಟಿವಿಯಲ್ಲಿಯೇ ಪ್ರಸಾರವಾದ, ಫೈನಲ್ ಕಟ್ ಪ್ರೊಡಕ್ಷನ್ನಿನದೇ ಕೊಡುಗೆಯಾದ ‘ಸಿಲ್ಲಿ ಲಲ್ಲಿ’. ಲವಲವಿಕೆಯ ಸಂಭಾಷಣೆ, ಐಕಾನಿಕ್ ಪಾತ್ರಗಳು, ಜಾಣ್ಮೆಯ ಚಿತ್ರಕತೆ ಇವುಗಳಿಂದ ವಿಠ್ಠಲ್‌ರಾವ್ ಸರ್ಜರಿ ಹಾಗೂ ಭರ್ಜರಿಯಲ್ಲಿ ಫೇಮಸ್ಸಾದಷ್ಟೇ ಸೀರಿಯಲ್ ಕೂಡ ಫೇಮಸ್ಸಾಯಿತು.

ಸಿಲ್ಲಿ ಲಲ್ಲಿ ಧಾರಾವಾಹಿಯ ಕೆಲವು ಎಪಿಸೋಡುಗಳನ್ನು ಆನ್ ಲೈನ್ ವೀಕ್ಷಿಸಲು ಇಲ್ಲಿ ಭೇಟಿ ನೀಡಬಹುದು. ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗಾರಿ ರೆಕಮಂಡೇಶನ್ 25

2 ಆಕ್ಟೋ

ಒಂದು ಕಾಲದ ಅಮೇರಿಕಾದ ಅತಿ ಶ್ರೀಮಂತ ಸ್ಟ್ಯಾಂಡ್ ಅಪ್ ಕಮಿಡಿಯನ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಜೆರ್ರಿ ಸೈನ್ ಫೆಲ್ಡ್‌ನದ್ದು200px-Jerry_Seinfeld_(1997) ದಿನನಿತ್ಯದ ಘಟನೆಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ಹುಡುಕಿ ಅವುಗಳಲ್ಲಿ ಅಡಗಿರುವ ಅಸಂಬದ್ಧತೆ, ವಕ್ರತೆ, ವ್ಯಂಗ್ಯವನ್ನು ಹೊರತೆಗೆದು ನಗಿಸುವ ವಿಶಿಷ್ಟ ಹಾಸ್ಯ.

ಅಮೇರಿಕನ್ನರ ದೈನಂದಿನ ಬದುಕಿನಲ್ಲಿ ಅತಿ ಯಾಂತ್ರಿಕ ಭಾಗವಾದ ವಾಶಿಂಗ್ ಮಶೀನಿನೊಂದಿಗೆ ಕಳೆಯುವ ಸಮಯವನ್ನು ಕೂಡ ಹಾಸ್ಯದ ವಸ್ತುವನ್ನಾಗಿಸಿಕೊಳ್ಳಬಲ್ಲ. “ವಾಶಿಂಗ್ ಮಶೀನು ಬಟ್ಟೆಗಳ ಪಾಲಿಗೆ ನೈಟ್ ಪಾರ್ಟಿ ಇದ್ದ ಹಾಗೆ. ಬಟ್ಟೆಗಳಲ್ಲೆ ಒಟ್ಟಿಗೆ ಸೇರುವುದು ಅಲ್ಲಿ ಮಾತ್ರ. ಮಶೀನಿನ ಸ್ವಿಚ್ಚು ಅದುಮುತ್ತಿದ್ದ ಹಾಗೆ ಲೋಕವೇ ತಿರುಗಲು ಶುರುವಾಗುತ್ತೆ. ಶರ್ಟು ಸ್ಕರ್ಟಿನ ಜೊತೆ ಡ್ಯಾನ್ಸ್ ಮಾಡಲು ಶುರು ಮಾಡುತ್ತದೆ, ಪ್ಯಾಂಟು ಕೋಟಿನೊಂದಿಗೆ ಬೆಸೆದುಕೊಳ್ಳುತ್ತದೆ. ಈ ಮಳ್ಳನಂತಹ ಸಾಕ್ಸು ಮಾತ್ರ ತಾನು ತಪ್ಪಿಸಿಕೊಳ್ಳಲು ಇದೇ ಸುವರ್ಣಾವಕಾಶ ಎಂಬಂತೆ ಹಾರಿ ಹಾರಿ ಕಾಣದ ಜಾಗವನ್ನು ತಲುಪಿಕೊಳ್ಳುತ್ತೆ” ಎಂಬ ರೀತಿಯ ಹಾಸ್ಯವನ್ನು ಆತನಷ್ಟೇ ಮಾಡಬಲ್ಲ.

ಸ್ಟ್ಯಾಂಡ್ ಕಾಮಿಡಿಯಲ್ಲಿ ಹೆಸರುವಾಸಿಯಾದ ಸೈನ್‌ಫೆಲ್ಡ್ ಮುಂದೆ ಲ್ಯಾರಿ ಡೇವಿಡ್‌ನೊಡಗೂಡಿ ತನ್ನ ಹೆಸರಿನಲ್ಲೇ ಒಂದು ಕಾಮಿಡಿ ಶೋ ನಿರ್ಮಿಸಿದ. ತಾನೇ ನಿರ್ಮಾಪಕನಾಗಿ, ನಿರ್ದೇಶಕನಾಗಿ ನಿರ್ಮಿಸಿದ ‘ಸೈನ್ ಫೆಲ್ಡ್’ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ತಾನೇ ಮುಖ್ಯ ಪಾತ್ರವನ್ನೂ ನಿರ್ಮಿಸಿದ. ತನ್ನ ಪಾತ್ರದಲ್ಲಿನ ಅಭಿನಯಕ್ಕಾಗಿ ಬಹುಮಾನ,ಮನ್ನಣೆಗಳನ್ನೂ ಗಳಿಸಿಕೊಂಡ. ಸೈನ್ ಫೆಲ್ಡ್ ಟಿವಿ ಕಾರ್ಯಕ್ರಮವು ಜನಪ್ರಿಯವಾಗಿ ಒಂಬತ್ತು ಸೀಸನ್‌ಗಳಷ್ಟು ಪ್ರಸಾರವಾಗಿದೆ.

ಸೈನ್ ಫೆಲ್ಡ್ ಸ್ಟ್ಯಾಂಡ್ ಅಪ್ ಕಾಮಿಡಿಯ ಒಂದು ತುಣುಕು ಈ ಸಂಚಿಕೆಯ ನಮ್ಮ ರೆಕಮಂಡೇಶನ್!