…………………………………….
ಯಾರನ್ನಾದರೂ ಟೀಕಿಸುವ
ಮನಸ್ಸಾದರೆ ನೀವು ಅವರ
ಬೂಟುಗಳಲ್ಲಿ ಕಾಲಿಟ್ಟು ಒಂದು ಮೈಲಿ ನಡೆಯಿರಿ.
ಇದರ ಲಾಭವೆಂದರೆ ನೀವು ಆತನಿಂದ
ಮೈಲು ದೂರ ಇರುತ್ತೀರಿ, ಜತೆಗೆ
ಒಂದು ಜೊತೆ ಬೂಟು ಹೊಂದಿರುತ್ತೀರಿ.
…………………………………….
…………………………………….
ಯಾರನ್ನಾದರೂ ಟೀಕಿಸುವ
ಮನಸ್ಸಾದರೆ ನೀವು ಅವರ
ಬೂಟುಗಳಲ್ಲಿ ಕಾಲಿಟ್ಟು ಒಂದು ಮೈಲಿ ನಡೆಯಿರಿ.
ಇದರ ಲಾಭವೆಂದರೆ ನೀವು ಆತನಿಂದ
ಮೈಲು ದೂರ ಇರುತ್ತೀರಿ, ಜತೆಗೆ
ಒಂದು ಜೊತೆ ಬೂಟು ಹೊಂದಿರುತ್ತೀರಿ.
…………………………………….
ಅಪಘಾತಗಳು ಸಂಭವಿಸಿದಾಗ್ಲೆಲ್ಲಾ ಬಸ್ಸಿಗೆ, ಲಾರಿಗೆ, ಕಾರಿಗೆ, ಬೈಕಿಗೆ ಬೆಂಕಿ ಹಚ್ಚೋದು ವಾಡಿಕೆಯಾಗ್ಬಿಟ್ಟಿದೆ. ಇದ್ನೆಲ್ಲಾ ಗಮ್ನಿಸೊವಾಗ ಅಪಘಾತ ಮಾಡಿದ್ದು ನಿಜ್ಕೂ ಆ ವಾಹ್ನವಾ ಅಥ್ವಾ ಅದ್ನ ಓಡಿಸೋವ್ನಾ ಅಂತ ಡೌಟು ಬರತ್ತೆ. ಬೇಜವಾಬ್ದಾರಿಯಿಂದ ವಾಹನ ಓಡಿಸಿ ಅಪಘಾತ ಮಾಡ್ದವ್ನ ಹಿಡಿದು ಚಚ್ಚುವುದನ್ನ ಒಪ್ಕೊಬೌದು. ಆದ್ರೆ ಪಾಪದ್ದು ವಾಹನ ಬೆಂಕಿ ತಿನ್ನಾಂಥದ್ದು ಏನು ಮಾಡಿರತ್ತೆ? ಎಡವಿದ್ದ ಕಲ್ಲಿಗೆ ಒದೆಯುವ ಅಭ್ಯಾಸ ಬೆಳೆಸಿಕೊಂಡಿರೋ ಜನ್ರಿಗೆ ಎಡವಿದ್ದು ಕಲ್ಲಲ್ಲ, ತಮ್ಮ ಕಾಲು ಅನ್ನೋದು ತಿಳಿಯೋದೇ ಇಲ್ಲ!
ಆಟಗಾರರಿಗೆ ಭದ್ರತೆ ಏಕೆ ಬೇಕು?
ದೇಶವನ್ನು ಹಂತ ಹಂತವಾಗಿ ನಾಶ ಮಾಡುವ ರಾಜಕಾರಣಿಗಳಿಗೆ, ಸರ್ಕಾರಿ ಗೋಡೌನಿನ ಹೆಗ್ಣಗಳಾದ ಅಧಿಕಾರಿಗಳ್ಗೆ, ಜನರ ನೈತಿಕತೆಯನ್ನ ಮೆಲ್ಲಗೆ ನಾಶ ಮಾಡುವ ಸಿನ್ಮಾ ತಾರೆಯರಿಗೆ ಭದ್ರತೆ ಬೇಕು ಅನ್ನೋದು ಒಪ್ಪುವ ಮಾತು. ಖುಶಿಗಾಗಿ, ಟೈಂ ಪಾಸ್ ಮಾಡುವುದಕ್ಕಾಗಿ ಜನರು ಆಡುವ ಆಟವಾದ ಕ್ರಿಕೆಟನ್ನು ದುಡ್ಡು ಗಳಿಸೋದಕ್ಕೆ, ಜಾಹಿರಾತಿನ ರೂಪದರ್ಶಿಯಾಗುವ ಅವಕಾಶ ಗಳ್ಸೋದಕ್ಕೆ ಬಳ್ಸೋ ಆಟಗಾರರಿಗ್ಯಾಕೆ ಬೇಕು ಭದ್ರತೆ?
ಇಲ್ಲಿ ನೋಡಿ! ಆಟಗಾರರ ಪ್ರಾಣಕ್ಕಷ್ಟೇ ಅಪಾಯವಿರುವುದಿಲ್ಲ, ಅವ್ರ ಮಾನಕ್ಕೂ ಸದಾ ಅಪಾಯ ಕಟ್ಟಿಟ್ಟ ಬುತ್ತಿಯೇ, ಹೀಗಾಗಿ ಅವರಿಗೇ ಅತಿ ಹೆಚ್ಚಿನ ಭದ್ರತೆ ಬೇಕೆಂಬುದು ಸಾಮ್ರಾಟರ ಮಾಜಿ ಭದ್ರತಾ ಸಿಬ್ಬಂದಿಯಾಗಿದ್ದ ನಮ್ ಅಭಿಪ್ರಾಯ! ಪಠಾಣ ತಪ್ಪಿಸಿಕೊಂಡ ಮುತ್ತಿನ ಆಕ್ರಮಣವನ್ನಾಧರಿಸಿ ಹೊಸ ರಿಯಾಲಿಟಿ ಶೋ ನಡ್ಸೋಕೆ ಸಾಮ್ರಾಟ್ರು ಯೋಚ್ಸಿದಾರಂತೆ, ‘ಯಾರು ನಂಗೆ ಮುತ್ ಕೊಡೋರು?’, ‘ಮುತ್ ಕಾ ಸಾಮ್ನಾ’ ಹೀಗೆ ಹೆಸ್ರುಗಳ್ನ ಯೋಚಿಸ್ತಿದಾರೆ.
ನಕ್ಸಲರು ಹಾಗೂ ಗರ್ಭ ನಿರೋಧಕ!
ವ್ಯವಸ್ಥೆಯ ಅನ್ಯಾಯದ ವಿರುದ್ಧ, ಧನಿಕ ಶೋಷಕರ ಶೋಷಣೆಯ ವಿರುದ್ಧ ಹೋರಾಡುವ, ಬೂರ್ಶ್ವಾ ಚಿಂತನೆಯನ್ನು ಮಟ್ಟ ಹಾಕಲು ಪ್ರಾಣವನ್ನೊತ್ತೆಯಿಟ್ಟ ಜನ್ರನ್ನ ಅನೇಕ್ರು ನಕ್ಸಲರು ಅಂತಾರೆ. ಆದ್ರೆ ಬಹಳಷ್ಟು ಜನ್ಕೆ ಅವ್ರು ಕ್ರಿಮಿನಲ್ಗಳು ಅಷ್ಟೇ. ಇವ್ರು ದೇಶಕ್ಕಾಗಿ ಜೀವನವನ್ನ ತ್ಯಾಗ ಮಾಡಿರ್ತಾರಂತೆ. ಅಪ್ಪ ಅಮ್ಮ, ಗೆಳೆಯರ್ನ ಬಿಟ್ಟು ಕಾಡಲ್ಲಿ ಇರ್ತಾರಂತೆ. ಇವ್ರು ಮದುವೆಯಾಗಲ್ವಂತೆ, ಏಕೆಂದರೆ ಮದುವೆ, ಮಕ್ಳು, ಸಂಸಾರ ಅಂತ ಕಟ್ಟಿಕೊಳ್ತಾ ಕೂತ್ರೆ ವ್ಯವಸ್ಥೆನ ಕೆಡವೋಕೆ ಆಗಲ್ವಂತೆ. ಜೊತ್ಗೆ ಗುರಿ ಸಾಧನೆ ಅವ್ರಿಗೆ ಮುಖ್ಯವಂತೆ, ಮದ್ವೆ ಅಲ್ವಂತೆ. ಹೀಗಿರ್ವಾಗ ಅವ್ರ ಬಳಿ ಇದ್ವು ಎನ್ನಲಾದ ಗರ್ಭನಿರೋಧಕಗಳು ಏನ್ ಹೇಳ್ತವೆ? ಗುಂಡು ನಿರೋಧಕಗಳು ಸಿಕ್ಕಿದ್ರೆ ಅರ್ಥ ಮಾಡ್ಕೋಬೋದಿತ್ತು!
ನಗೆ ನಗಾರಿ ಡಾಟ್ ಕಾಮ್ ವಾರ್ಷಿಕೋತ್ಸವ ವಿಶೇಷಾಂಕಕ್ಕಾಗಿ ಖ್ಯಾತ ಪತ್ರಕರ್ತ, ಪತ್ರಿಕೋದ್ಯಮಿ, ರೇಡಿಯೋ ಜಾಕಿ, ಟಿವಿ ಆಂಕರ್, ನಟ, ನಿರ್ದೇಶಕ, ನಿರ್ಮಾಪಕ, ತಮ್ಮ ಸಿನೆಮಾದ ಏಕೈಕ ವೀಕ್ಷಕರಾದ ಗವಿ ಬಿಳಿಗೆರೆ ಬರೆದ ಲೇಖನವಿದು.
ನಾನು ಬೆಂಗಳೂರನ್ನು ಬಿಟ್ಟು ಹೋಗುವುದು ಬಂಗಾರಪ್ಪ ಒಂದು ಪಕ್ಷ ಬಿಟ್ಟು ಹೋಗುವಷ್ಟೇ ಸಾಮಾನ್ಯ. ಪತ್ರಿಕೆಯ ಕೆಲಸವನ್ನೆಲ್ಲಾ ಮಾಡಿ ಮುಗಿಸಿ ದಣಿದ ಬೆರಳುಗಳನ್ನು ಲೈಟ್ ಆಗಿ ಮಸಾಜ್ ಮಾಡುವುದಕ್ಕೆ ರವೀಶನಿಗೆ ಬಿಟ್ಟುಬಿಡುತ್ತೇನೆ.
ರವೀಶ ನನಗೆ ಬೆನ್ನಲ್ಲಿ ಹುಟ್ಟಿದ ತಮ್ಮನಂಥ ಹುಡುಗ. ವರದಿಯೊಂದಕ್ಕೆ ಸಂಬಂಧಿಸಿದ ಇನ್ಪರ್ಮೇಶನ್ ಪಡೆಯುವುದಕ್ಕಾಗಿ ಇಡೀ ಬೆಂಗಳೂರಿನಲ್ಲಿ ಕುಖ್ಯಾತವಾದ ಕಲಾಸಿ ಪಾಳ್ಯದ ರಸ್ತೆಗಳಲ್ಲಿ ತಿರುಗುತ್ತಿದ್ದೆ. ಆ ಮಬ್ಬುಗತ್ತಲೆಯಲ್ಲಿ ನನ್ನ ಯಾರೂ ಗುರುತು ಹಿಡಿಯುವಂತಿರಲಿಲ್ಲ. ಮುಖ ಯಾವುದು ತಲೆ ಯಾವುದು ಎಂದು ತಿಳಿಯದಷ್ಟು ಹುಲುಸಾಗಿ ಬೆಳೆದ ಗಡ್ಡವಿತ್ತು ಜೊತೆಗೆ ವಿಲಕ್ಷಣವಾದ ಹ್ಯಾಟ್ ಇತ್ತು. ನನ್ನ ಮುಖ ಪರಿಚಯ ಯಾರಿಗಾದರೂ ಸಿಕ್ಕುವ ಛಾನ್ಸೇ ಇರಲಿಲ್ಲ. ವರದಿಗೆ ಬೇಕಾದ ಇನ್ಫರ್ಮೇಶನ್ ಹುಡುಕುವುದು ಸಾಮಾನ್ಯ ಕೆಲಸವಲ್ಲ. ಈ ಕೆಲಸ ಮಾಡುವ ಕ್ರೈಂ ರಿಪೋರ್ಟರ್ ಒಬ್ಬನಿಗೆ ಪಾತಕ ಲೋಕದ ಗಲ್ಲಿಗಲ್ಲಿಯ ಪರಿಚಯವಿರಬೇಕು. ರೌಡಿಯೊಬ್ಬ ಕನಸಿನಲ್ಲಿ ಹಾಕುವ ಹೊಂಚಿನ ವಾಸನೆ ರಿಪೋರ್ಟರ್ ಆದವನಿಗೆ ಹಿಂದಿನ ರಾತ್ರಿ ಗುಂಡು ಹಾಕುವಾಗಲೇ ಮೂಗಿಗೆ ಬಡಿದಿರಬೇಕು. ನಾನು ಆ ಅಮವಾಸ್ಯೆ ಕಳೆದ ರಾತ್ರಿಯಲ್ಲಿ ಕಲಾಸಿ ಪಾಳ್ಯದ ಬಸ್ ಸ್ಟ್ಯಾಂಡಿನ ಕಲ್ಲು ಬೆಂಚಿನ ಮೇಲೆ ಕುಳಿತು ಸಿಗರೇಟು ಹಚ್ಚಿದೆ. ಇನ್ಫರ್ಮೆಂಟ್ ಬರುವುದು ತಡವಾಗುವ ಸೂಚನೆ ಸಿಕ್ಕಿತು. ನಾನು ತುಸುವೂ ಯೋಚನೆಯಿಲ್ಲದೆ ಯಾರ ಮಾನವನ್ನಾದರೂ ಕಳೆದುಬಿಡಬಲ್ಲೆ ಆದರೆ ಸಮಯವನ್ನು ವ್ಯರ್ಥವಾಗಿ ಕಳೆಯಲಾರೆ. ಕಿಸೆಯಿಂದ ಪುಟ್ಟ ನೋಟ್ ಬುಕ್ ತೆರೆದು ಬಸ್ ಸ್ಟ್ಯಾಂಡಿನ ಸೋಡಿಯಂ ದೀಪದ ಮಬ್ಬು ಬೆಳಕಿನಲ್ಲಿ ಬರೆಯ ತೊಡಗಿದೆ. ಹಾಗೆ ಬರೆಯಲು ಕೂತವನಿಗೆ ಸಮಯ ಕಳೆದದ್ದೇ ತಿಳಿವಿಗೆ ಬರಲಿಲ್ಲ, ಅಂಗೈ ಅಗಲದ ನೋಟ್ ಬುಕ್ಕಿನ ಹಾಳೆಗಳೆಲ್ಲಾ ತುಂಬಿ ಹೋದದ್ದು ತಿಳಿದ ಮೇಲೆ ತಲೆ ಮೇಲಕ್ಕೆ ಎತ್ತಿದ್ದೆ. ಮಬ್ಬು ಬೆಳಕಿನಲ್ಲಿ ಬರೆದದ್ದಕ್ಕೋ ಏನೋ ಕಣ್ಣುಗಳು ವಿಪರೀತ ಉರಿಯುತ್ತಿದ್ದವು. ಬೆರಳುಗಳಲ್ಲಿ ಸಣ್ಣಗೆ ನೋವು ಕಾಣತೊಡಗಿತ್ತು. ಬೆರಳುಗಳನ್ನು ಹಿಚುಕಿಕೊಳ್ಳುತ್ತಾ ಅತ್ತಿತ್ತ ಓಡಾಡತೊಡಗಿದೆ.
“ಅಣ್ಣಾ, ಬೆರಳು ಒತ್ತಲಾ?” ಹಿಂದಿನಿಂದ ಪುಟ್ಟ ಆಕೃತಿಯೊಂದು ಚಲಿಸಿತು. ನಾನು ಕೂಡಲೇ ಅಲರ್ಟ್ ಆದೆ. ಕಿಸೆಯಲ್ಲಿದ್ದ ರಿವಾಲ್ವರ್ ತಡಕಿದೆ. ಹಿಂತಿರುಗಿ ನೋಡಿದೆ. ಆತ ಯಾವುದೋ ಕಥೆಯಿಂದ ಇಳಿದು ಬಂದ ಪಾತ್ರದಂತಿದ್ದ. ಮಾಸಲು ಬಟ್ಟೆ, ಬರ್ಮುಡ ಥರದ್ದೊಂದು ಹಳಸಲು ಚಡ್ಡಿ ಹಾಕಿದ್ದ. ಕೂದಲು ಕರೆಗಟ್ಟಿತ್ತು. ಮತ್ತೊಮ್ಮೆ ಗೊರಲು ಧ್ವನಿಯಲ್ಲಿ, “ಅಣ್ಣಾ ಬೆರಳು ನೋಯ್ತಿದ್ರೆ, ನಾನು ಮಸಾಜ್ ಮಾಡ್ತೀನಿ” ಅಂದ.
ನಾನು respond ಮಾಡುವ ಮೊದಲೇ ನನ್ನ ಕೈ ಸೆಳೆದುಕೊಂಡು ಬೆರಳುಗಳನ್ನು ನೀವಲು ಶುರು ಮಾಡಿದ. ನನಗೆ ಹಾಯೆನಿಸಿತು. ಅಲ್ಲಿಗೆ ನಾನು ಬಂದಿದ್ದ ಕೆಲಸವೇ ಮರೆತುಹೋಗುವಷ್ಟರ ಮಟ್ಟಿಗೆ relax ಆಗಿದ್ದೆ. ಆಗಿನಿಂದ ಬೆನ್ನಿಗೆ ಬಿದ್ದವನು ಈ ರವೀಶ.
ಆತ ನನ್ನ ಬೆರಳುಗಳಿಗೆ ಅದೆಂಥದ್ದೋ ಎಣ್ಣೆಯನ್ನು ತಿಕ್ಕಿ ಮಸಾಜ್ ಮಾಡುವಾಗ ನಾನು ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುತ್ತೇನೆ. ಮಳೆ ಕರೆಯದೆ ಮುಂದೆ ಹೋಗುತ್ತಿರುವ ಮೋಡಗಳು ಕಾಣುತ್ತವೆ. ಇದೇ ಕಪ್ಪು ಆಕಾಶವನ್ನು ಎಂತೆಂಥ ನೆಲದ ಮೇಲೆ ನಿಂತು ನೋಡಿಲ್ಲ? ಎನ್ನಿಸತೊಡಗುತ್ತೆ.
ಅದು ೨೦೦೧ರ ಆಸುಪಾಸು. ಪತ್ರಿಕೆಯ ಕೆಲಸ ಮುಗಿಸಿ ಹುಡುಗರಿಗೆ instructions ಕೊಟ್ಟು ನಾನು ವಿಮಾನ ನಿಲ್ದಾಣಕ್ಕೆ ಹೊರಟೆ. ದಕ್ಷಿಣ ಆಫ್ರಿಕಾಕ್ಕೆ ನೆಗೆಯಲು ವಿಮಾನ ಕಾದು ನಿಂತಿತ್ತು. ಉಳಿದೆಲ್ಲರೂ ಸಾಲ ಸೋಲ ಮಾಡಿಯೋ, ಸರ್ಕಾರದ sponsorship ನಿಂದಲೋ ವಿದೇಶ ಸುತ್ತುವುದಕ್ಕೆ ಹೋಗುವಾಗ ಅಮೇರಿಕಾ, ಫ್ರಾನ್ಸು, ಸ್ವಿಟ್ಜರ್ ಲ್ಯಾಂಡುಗಳಂಥ ದೇಶಗಳಿಗೆ ಹೋಗುತ್ತಾರೆ. ನನಗೆ ಅದೇನು ತೆವಲೋ, ಇದುವರೆಗೂ ಯಾರೂ ಕಾಲಿಡದಿದ್ದ ದೇಶಗಳಿಗೆ ಅಲೆದಿದ್ದಾನೆ, ಅಜ್ಞಾತವಾದ ದೇಶಗಳ ದುರ್ಗಮವಾದ ಕಾಡುಗಗಳಲ್ಲಿ ಬರಿಗಾಲ ಫಕೀರನಂತೆ ನಡೆದಿದ್ದೇನೆ. ಹಾಗೆ ಅಲೆಯುವಾಗ ನೆರಿಗೆ ಲಂಗದ ಹುಡುಗಿ ನೆನೆಪಾಗುತ್ತಾಳೆ, ತುಮಕೂರಿನ ರಸ್ತೆಗಳು ನೆನಪಾಗುತ್ತವೆ. ಅವಳ ಮೋಸದಿಂದಲೇ ಅಲ್ಲವೇ ನಾನಿವತ್ತು ಅವಡುಗಚ್ಚಿ ಈ ಕಾಡಿನಲ್ಲಿ ಹೆಜ್ಜೆ ಹಾಕುತ್ತಿರುವುದು ಅನ್ನಿಸುತ್ತದೆ.
ನಿಜ ಹೇಳಬೇಕೆಂದರೆ, ಈ ಬಾರಿ ನಾನು ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದು ಅಲ್ಲಿ ತಲೆ ಮರೆಸಿಕೊಂಡಿರುವ ಮುಂಬೈ ಭೂಗತ ಜಗತ್ತಿನ ಡಾನ್‌ನನ್ನು ಭೇಟಿಯಾಗಲು. ಜೊಹಾನ್ಸ್ ಬರ್ಗಿನ ಗ್ರ್ಯಾಂಡ್ ಸೆಂಟ್ರಲ್ ಏರ್‌ಪೋರ್ಟಿನಲ್ಲಿ ಇಳಿದು ವಿಮಾನ ನಿಲ್ದಾಣದ ಹೊರಗಿನ ಅಂಗಡಿಯೊಂದರಲ್ಲಿ ಸಿಗರೇಟು ಖರೀದಿಸಿ ಬೆಂಕಿ ಹೊತ್ತಿಸಲು ತುಸು ಧಾವಂತದಲ್ಲಿ ಪಕ್ಕಕ್ಕೆ ತಿರುಗಿದೆ.
“Easy Gentleman!” ಕಂಚಿನ ಕಂಠದ ಧ್ವನಿಯೊಂದು ಮೊಳಗಿತು. ಕತ್ತೆತ್ತಿ ನೋಡಿದೆ. ಆಜಾನುಬಾಹು ವ್ಯಕ್ತಿಯೊಬ್ಬ ನಗುತ್ತ ನಿಂತಿದ್ದ. ನನಗಿಂತ ಸುಮಾರು ಎರಡು ಅಡಿ ಎತ್ತರವಿದ್ದ ಆತನನ್ನು ನಾನು ಕತ್ತೆತ್ತಿ ನೋಡಬೇಕಾಯಿತು. ಆತನ ಬಿಗಿ ದೇಹ ಒಮ್ಮೆಗೇ ನನ್ನನ್ನು attract ಮಾಡಿತು. ಕೂಡಲೇ ಈತ ರೆಗ್ಯುಲರ್ ಆಗಿ exercise ಮಾಡುವಾತ ಎಂದು ತಿಳಿಯಿತು. ಆತನ ಮುಖವನ್ನು ಗಮನಿಸಿದೆ. ಎಲ್ಲೋ ನೋಡಿದ ನೆನಪಾಯಿತು.
ನೆಲ್ಸನ್ ಮಂಡೇಲ!
ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು exploit ಮಾಡುವ ವರ್ಣ ಪದ್ಧತಿಯ ವಿರುದ್ಧ ಹೋರಾಡಿ, ಅಪಾದನೆಗೊಳಗಾಗಿ ಇಪ್ಪತ್ತೇಳು ವರ್ಷ ರೊಬೆನ್ ದ್ವೀಪದಲ್ಲಿ ಸೆರೆವಾಸ ಅನುಭವಿಸಿದವ ಮಂಡೇಲ. ವರ್ಣ ವ್ಯವಸ್ಥೆಯನ್ನು ಕಿತ್ತೊಗೆದು ನಂತರ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದ.
ಬೆಂಕಿ ಕೊಡಬೇಕಿದ್ದ ಸಿಗರೇಟನ್ನು ಕೈಲಿ ಹಿಡಿದುಕೊಂಡು ನಾನು ಕಣ್ಣು ಬಾಯಿ ಬಿಟ್ಟು ನೋಡನೋಡುತ್ತಿದ್ದಂತೆಯೇ ಆತ ಸರಸರನೆ ನಡೆದು ಏರ್ ಪೋರ್ಟಿನೊಳಕ್ಕೆ ಹೊರಟುಹೋದ. ನಾನು ಸಿಗರೇಟ್ light ಮಾಡಿ ಹೊರಗೆ ಕಾರಿಡಾರಿನಲ್ಲಿ ನಾಲ್ಕು ಹೆಜ್ಜೆ ಹಾಕತೊಡಗಿದೆ. ಇದು ಈ ದಿನದ ಕಡೆಯ ಸಿಗರೇಟು ಎಂದು ನೆನಪಾಯಿತು. ಹದಿನೈದು ವರ್ಷಗಳಿಂದ ಸಿಗರೇಟು ಸಂಪೂರ್ಣವಾಗಿ ಬಿಟ್ಟು ಬಿಡುವ ಪ್ರಯತ್ನ ಮಾಡುತ್ತಲೇ ಇರುವೆ. ಹತ್ತನೆಯ ಸಂಚಿಕೆಯ ಪತ್ರಿಕೆಯಲ್ಲಿ ಸಿಗರೇಟಿನ ಬಗ್ಗೆ ಬರೆಯುವಾಗ ದಿನಕ್ಕೆ ಇಪ್ಪತ್ತಕ್ಕಿಂತ ಹೆಚ್ಚು ಸಿಗರೇಟು ಸೇದುತ್ತಿದ್ದೆ. “ಹೀಗೆ ಹೊಗೆ ಚಿಮಣಿಯ ಹಾಗೆ ಸೇದುತ್ತಿದ್ದರೆ lungs ಸುಟ್ಟುಹೋಗುತ್ತವೆ. ಸತ್ತು ಹೋದರೆ ಬರೆಯೋಕೆ ಹೇಗೆ ಸಾಧ್ಯ? ನೀನು ಬರೆಯದೆ ಪತ್ರಿಕೆ ಹೊರಬರಲು ಹೇಗೆ ಸಾಧ್ಯ? ಅಸಂಖ್ಯಾತ ಓದುಗ ದೊರೆಗಳಿಗೆ ನೀನು ದ್ರೋಹ ಮಾಡಿದಂತಾಗುವುದಿಲ್ಲವಾ ರವೀ” ಎಂದು ಹಿರಿಯಣ್ಣನಂತಹ ಡಾಕ್ಟರ್ ಹೊಗೆಬತ್ತಿಯವರು ಗದರಿದಾಗಿನಿಂದ ಸಿಗರೇಟಿಗೆ ಕಡಿವಾಣ ಹಾಕ ತೊಡಗಿದೆ. ಈಗ ದಿನಕ್ಕೆ ಇಪ್ಪತ್ತು ಸಿಗರೇಟು ಸೇದುವುದಿಲ್ಲ. ಎರಡು ದಿನಕ್ಕೆ ನಲವತ್ತು ಮಾತ್ರ ಸೇದುವುದು.
ರಾತ್ರಿ ಹೊಟೇಲ್‌ನಲ್ಲಿ ಅನುವಾದಿಸಿ ಮುಗಿಸಬೇಕಾದ ಸಿಡ್ನಿ ಶೆಲ್ಡನ್ನನ ಕಾದಂಬರಿಯ ಬಗ್ಗೆ ಚಿಂತಿಸುತ್ತಾ ಹೆಜ್ಜೆ ಹಾಕುತ್ತಿರುವಾಗ ಮೊಬೈಲ್ ರಿಂಗ್ ಆಯಿತು. ಫೋನ್ ಮಾಡಿದ್ದು ನಗೆ ಸಾಮ್ರಾಟರು , ಅದೀಗ ತಾನೆ ನಗೆನಗಾರಿಗೆ ಬರೆದು ಮುಗಿಸಿ ಆಫೀಸಿನ ಬಾಗಿಲು ಹಾಕಿ ನನಗೆ ಫೋನ್ ಮಾಡಿದ್ದರು. ಅಲ್ಲಿ ನಾನಿದ್ದ ದೇಶದಲ್ಲಿ ಆಗ ಮಧ್ಯಾನ ಎರಡೂವರೆ ಗಂಟೆ, ಇಲ್ಲಿ ಬೆಂಗಳೂರಲ್ಲಿ ಸಂಜೆ ಆರರ ಸಮಯ. ವಿಷಯ ಏನೆಂದು ಕೇಳಿದೆ.
“ರವೀ, ನಮ್ಮ ನಗೆನಗಾರಿ ಡಾಟ್ ಕಾಮ್‌ಗೆ ಒಂದು ವರ್ಷ ತುಂಬುತ್ತೆ ವಿಶೇಷಾಂಕ ತರ್ತಾ ಇದೀನಿ. ನೀನು ಏನಾದರೂ ಬರೀಬೇಕಲ್ಲ” ಅಂದಿತು ಅತ್ತಲಿನ ಧ್ವನಿ.
ನಗೆಸಾಮ್ರಾಟ ನನಗೆ ಅಣ್ಣನಂಥ ಗೆಳೆಯ. ನಾನು ಅದೆಷ್ಟೇ ತಮಾಶೆ ಮಾತಾಡಿದರೂ, ಟಿವಿ, ರೇಡಿಯೋದಲ್ಲಿ ಹಾಸ್ಯ ಮಾಡಿದರೂ, ಪತ್ರಿಕೆಯಲ್ಲಿ ಪೋಲಿ ಪ್ರಶ್ನೆಗಳಿಗೆ ಪೋಲಿಯಾಗಿ ಉತ್ತರ ಕೊಟ್ರೂ ಇದುವರೆಗೂ ಪಟ್ಟಾಗಿ ಕೂತು ಒಂದು ಹಾಸ್ಯ ಬರಹ ಅಂತ ಬರೆಯೋಕಾಗಿಲ್ಲ.
ನಂಗೆ ಈ ಮನುಷ್ಯನ ಬಗ್ಗೆ ಆಶ್ಚರ್ಯ ಆಗುತ್ತೆ. ಒಂದು ಚಿಕ್ಕಾಸೂ ಹುಟ್ಟದ ನಗೆನಗಾರಿ ಡಾಟ್ ಕಾಮ್ ನಂತಹ ಅದ್ಭುತ ಬ್ಲಾಗ್ ನಡೆಸುತ್ತಿದ್ದಾನೆ. ಒಬ್ಬನೇ ಕೂತು ಸಾಕಷ್ಟು ಬರೀತಾನೆ. ನನ್ನಷ್ಟು ವರ್ಕೋಹಾಲಿಕ್ ಅಲ್ಲದಿದ್ರೂ ಚೆನ್ನಾಗಿ ಕೆಲಸ ಮಾಡ್ತಾನೆ. ಅದ್ಭುತವಾದದ್ದೊಂದು ಟೀಮ್ ಕಟ್ಟಿಕೊಂಡಿದ್ದಾನೆ. ಅವರಿವರ ಅನುಕರಣೆಗೆ ಬಿದ್ದು ಹಾಳಾಗದೆ ಬರೆದರೆ ಒಳ್ಳೆಯ ನಗೆ ಬರಹಗಾರನಾಗುವ future ಇದೆ.
ನಗೆ ನಗಾರಿ ಡಾಟ್ ಕಾಮ್‌ನ ಫರ್ಸ್ಟ್ ಹ್ಯಾಪಿ ಬರ್ತಡೇ ಗೆ ಚಿಯರ್ಸ್!
ನಿಮ್ಮವನು
ಗವಿ ಬಿಳಿಗೆರೆ
ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!
ಈ ಸಂಚಿಕೆಯ ಸ್ಯಾಂಪಲ್:
ಅದೇನು ಜನವೋ, ತೊಂಭತ್ತು ಮಂದಿಗೆ ಹಂದಿಜ್ವರ ತಗುಲಿತು ಅಂದರೆ ಇಡೀ ಜಗತ್ತೇ ಮಾಸ್ಕ್ ತೊಡಲು ಸಿದ್ಧವಾಗುತ್ತೆ.
ಇಪ್ಪತ್ತು ಮಿಲಿಯನ್ ಮಂದಿಗೆ ಏಡ್ಸ್ ತಗುಲಿದ್ದರೂ ಎಲ್ಲರೂ ಕಾಂಡೋಮ್ ಧರಿಸಲೊಲ್ಲರು!
(ಚಿತ್ರಮೂಲ: http://www.funnyandjokes.com/swine-flu-jokes.html )
ಪ್ರತಿ ವರ್ಷದಂತೆ ಭೂಲೋಕ ಯಾತ್ರೆಗೆ ಬಂದಿದ್ದ ಲಾರ್ಡ್ ವಿನಾಯಕ ಕಳೆದ ವರ್ಷ ನಗೆನಗಾರಿಗಾಗಿ ವಿಶೇಷ ಸಂದರ್ಶನವೊಂದನ್ನು ನೀಡಿದ್ದ. ದೇವಲೋಕದ, ಮಾನವಲೋಕದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನ ಹಳೆಯ ಕಂತೆಯಿಂದ ಹೆಕ್ಕಿ ತಂದಿರುವವನು ನಮ್ಮ ಆಪ್ತ ಚೇಲ ಕುಚೇಲ.
ಆ ಸಂದರ್ಶನದ ತುಣುಕು ನಿಮ್ಮ ನಾಲಿಗೆ ಚಪ್ಪರಿಕೆಗೆ:
ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…
ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ…’ ಎಂದು ಪ್ರಾರ್ಥಿಸ ತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರ್ವಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ…’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನಂಗೆ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.
ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ
ಈ ಸಂಚಿಕೆ ಸ್ಯಾಂಪಲ್:
ಸೋಂಕು ರಹಿತ ಪ್ರೀತಿ!
ನಮ್ಮ ಕತೆ, ಕಾದಂಬರಿ, ಧಾರಾವಾಹಿಗಳು, ಸಿನೆಮಾಗಳಲ್ಲಿನ ಡೈಲಾಗುಗಳು ನಾನಾ ತೆರನಾಗಿರುತ್ತವೆ. ಒಂದು ಪಾತ್ರ ಇನ್ನೊಂದು ಪಾತ್ರದೊಂದಿಗೆ ನಡೆಸುವ ಮಾತುಕತೆಯೋ, ಒಂದು ಪಾತ್ರ ತನ್ನೊಂದಿಗೇ ಆಡಿಕೊಳ್ಳುವ ಮಾತುಗಳೋ, ಪಾತ್ರವೊಂದರ ಮನಸ್ಸಿನ ಹೊಯ್ದಾಟವೋ – ಹೀಗೆ ಒಟ್ಟಿನಲ್ಲಿ ಮಾತುಗಳು ಭಾರಿ ಪ್ರಮುಖವಾದ ಪಾತ್ರವನ್ನೇ ವಹಿಸುತ್ತವೆ. ಇಂತಹ ಡೈಲಾಗುಗಳು ಕೆಲವೊಮ್ಮೆ ಅದೆಷ್ಟು ಕೃತಕ ಅನ್ನಿಸುತ್ತವೆಯೆಂದರೆ, ಪ್ಲಾಸ್ಟಿಕ್ ಹೂವಿಗಾದರೂ ಇರುವ ಪ್ಲಾಸ್ಟಿಕಿನ ಸಹಜತೆಯೂ ಸಹ ಇವುಗಳಲ್ಲಿ ಕಾಣಸಿಗುವುದಿಲ್ಲ!
ಲೇಖನಗಳ, ಸಾಹಿತ್ಯೇತರ ಬರವಣಿಗೆಗಳ ಉದ್ದೇಶ ಒಂದು ವಿಷಯವನ್ನು, ಅನುಭವವನ್ನು ಆದಷ್ಟು ಸರಳವಾಗಿ ಓದಿಗರಿಗೆ ತಿಳಿಸುವುದು. ಅವರ ಅಭಿಪ್ರಾಯಗಳನ್ನು ಲೇಖನದ ಆಶಯಕ್ಕೆ ತಕ್ಕಂತೆ ತಿದ್ದುವುದು, ಅವರಿಗೆ ಲೇಖನದ ವಿಚಾರ ಸರಣಿಯನ್ನು ಒಪ್ಪಿಸುವುದು. ಒಂದರ್ಥದಲ್ಲಿ ಲೇಖನದಲ್ಲಿರುವ ವಿಷಯ ವಸ್ತುವನ್ನು ಓದುಗನೆಂಬ ಗ್ರಾಹಕನಿಗೆ ಮಾರುವುದು. ಈ ಕೆಲಸಕ್ಕೆ ಒಬ್ಬ ಉತ್ತಮ ಸೇಲ್ಸ್ ಮನ್‌ಗಿರಬೇಕಾದ ಚಾಣಾಕ್ಷತೆ, ಕುಟಿಲತೆಗಳೆಲ್ಲವೂ ಇರಬೇಕಾಗುತ್ತದೆ. ತನ್ನ ಪ್ರಾಡಕ್ಟ್ ಬಗೆಗಿನ ಅತಿಯಾದ ವಿಶ್ವಾಸ, ಎದುರಾಳಿಯ ಪ್ರಾಡಕ್ಟನ್ನು ಯಾವ ಕಾರಣಕ್ಕೂ ಶ್ರೇಷ್ಠವೆಂದು ಒಪ್ಪಿಕೊಳ್ಳದ ಎಚ್ಚರ ಇವೆಲ್ಲಾ ಅತ್ಯಗತ್ಯ.
ಆದರೆ ಓದುಗನಿಗೆ ಮಾರಾಟವಾಗುವ ತುರ್ತಿಲ್ಲದ ಸಾಹಿತ್ಯಿಕ ಬರವಣಿಗೆಯ ಕಥೆಯೇನು? ಅವುಗಳಲ್ಲಿನ ಸಂಭಾಷಣೆಗಳಾದರೂ ಹೇಗಿರುತ್ತವೆ? ನಮ್ಮ ದಿನ ನಿತ್ಯದ ಬದುಕನ್ನೇ ಗಮನಿಸೋಣ. ನಾವು ಸಾವಿರಾರು ಮಂದಿಯನ್ನುದ್ದೇಶಿಸಿ ವೇದಿಕೆಯ ಮೇಲೆ ಮಾಡುವ ಭಾಷಣದಲ್ಲಿರುವಷ್ಟು ತಾರ್ಕಿಕವಾದ, ಸ್ಪಷ್ಟ ಅರ್ಥ ಪೂರ್ಣವಾದ, ವ್ಯಾಕರಣ ಬದ್ಧವಾದ ವಾಕ್ಯಗಳು ಗೆಳೆಯರೊಂದಿಗೆ ಹರಟುವಾಗ ಇರುವುದಿಲ್ಲ. ಗೆಳೆಯ, ಓರಗೆಯವರ ಜೊತೆ ಮಾತನಾಡಲು ಬಳಸುವ ಶೈಲಿ ನಮ್ಮೊಂದಿಗಿನ ನಮ್ಮ ಮಾತುಕತೆಯಲ್ಲಿ ಕಂಡುಬರುವುದಿಲ್ಲ. ಪ್ರಜ್ಞಾ ಪೂರ್ವಕವಾದ ನಮ್ಮ ಮಾತುಕತೆಗಳಲ್ಲಿ ಕಂಡು ಬರುವ ಬಂಧ, ಬಿಗಿ ಅಪ್ರಜ್ಞಾ ಪೂರ್ವಕವಾದ ನಮ್ಮ ಆಲೋಚನೆಗಳಲ್ಲಿ ಇರುವುದಿಲ್ಲ.
ಅಪ್ರಜ್ಞಾಪೂರ್ವಕವಾದ ನಮ್ಮೆಲ್ಲಾ ಆಲೋಚನೆಗಳು, ಭಾವನೆಗಳು ತೀರಾ ಸಿಲ್ಲಿಯಾಗಿರುತ್ತವೆ. ಅವುಗಳಲ್ಲಿ ಸುಳಿದು ಹೋಗುವ ಆತಂಕ, ಅನುಮಾನ, ಅಶ್ಲೀಲತೆ, ಗೊಂದಲದ ನೆರಳುಗಳು ಕುತೂಹಲಕರವಾಗಿರುತ್ತವೆ. ಇಂತಹ ಸಿಲ್ಲಿ ಭಾವಗಳೇ ಶುದ್ಧೀಕರಿಸಿಸಲ್ಪಟ್ಟು ನಮ್ಮ ಅಭಿವ್ಯಕ್ತಿಯನ್ನು ರೂಪಿಸುತ್ತವೆ. ನಮ್ಮ ಸಾಹಿತ್ಯದಲ್ಲಿ ಪಾತ್ರಗಳ ಅಭಿವ್ಯಕ್ತಿಗಿರುವಷ್ಟು ಪ್ರಾಮುಖ್ಯತೆ ಆತನ ಈ ಅಂತರಂಗದ ಸಿಲ್ಲಿ, ಬಾಲಿಶ ಆಲೋಚನೆಗಳಿಗೆ ಇರುವುದಿಲ್ಲ. ಇದು ಹೀಗೇಕೆ? ಒಂದು ಪಾತ್ರವೊಂದರ ನೋವು, ನಲಿವುಗಳನ್ನೆಲ್ಲಾ ಅನುಭವಿಸುವಷ್ಟು ಸಾಮರ್ಥ್ಯವಿರುವ ಲೇಖಕನ ಪ್ರತಿಭೆಯನ್ನು ಈ ಅಪ್ರಜ್ಞಾಪೂರ್ವಕವಾದ ಆಲೋಚನೆಗಳು ಮೀರಿರುವವೇ? ಪಾತ್ರವೊಂದಕ್ಕೆ ಪ್ರಜ್ಞಾ ಪೂರ್ವಕವಾದ ವ್ಯಕ್ತಿತ್ವವೊಂದನ್ನು ಆರೋಪಿಸುವಾಗಲೂ ಸಹ ಲೇಖಕ ತನ್ನೊಳಗಿನ ಸಿಲ್ಲಿತನವನ್ನು ಶುದ್ಧೀಕರಿಸಿಯೇ ತೊಡಗಿಕೊಳ್ಳುತ್ತಾನೆಯೇ?
ಅವನದೆಂತಹ ಶ್ರೇಷ್ಠ ವಿಜ್ಞಾನಿಯೇ ಆಗಲಿ, ಆತನಿಂದ ಕಾಲ್ಪನಿಕ ವ್ಯಕ್ತಿಯನ್ನು, ವಸ್ತುವನ್ನು ಇಲ್ಲ ಎಂದು ಸಾಬೀತು ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುತ್ತದೆ ತರ್ಕ.
ಇದನ್ನು ವಿವರಿಸಲು ಖ್ಯಾತ ದಾರ್ಶನಿಕ ಬರ್ಟ್ರಂಡ್ ರಸೆಲ್ ಭೂಮಿಯ ಸುತ್ತಲಿನ ಕಕ್ಷೆಯಲ್ಲಿ ಟೀ ಪಾಟ್ ಒಂದು ಸುತ್ತುತ್ತಿದೆ ಎಂದ. ಅದನ್ನು ಅಲ್ಲಗಳೆಯಲು ಸಾಧವೇ ಇರಲಿಲ್ಲ. ಆದರೆ ಮನುಷ್ಯ ಅಂತರಿಕ್ಷಕ್ಕೆ ಜಿಗಿಯುವಲ್ಲಿ ಸಫಲನಾಗಿ, ಭೂಕಕ್ಷೆಯಲ್ಲಿ ಟೀ ಪಾಟ್ ಅಷ್ಟೇ ಏಕೆ ದೊಡ್ಡ ಉಪಗ್ರಹವನ್ನೇ ಇಡಬಲ್ಲವನಾದಾಗ ರಸೆಲ್ ಮಾತನ್ನು ಸುಳ್ಳು ಎಂದು ಸಾಬೀತು ಮಾಡಲು ಅವಕಾಶವಾಯಿತು.
ಆದರೆ ರಸೆಲ್ ಈಗ ಬದುಕಿದ್ದರೆ ತನ್ನ ಪ್ರಶ್ನೆಯಲ್ಲಿ ಸಣ್ಣ ಮಾರ್ಪಾಡು ಮಾಡಿ ಭೂಕಕ್ಷೆಯಲ್ಲಿ ಕಣ್ಣಿಗೆ ಕಾಣದ, ವಾಸನೆಯಿಲ್ಲದ, ಸದ್ದು ಹೊರಡಿಸದ, ರೆಡಾರ್ ಗಮನಕ್ಕೆ ಬಾರದ, ವಿಕಿರಣ ಹೊರಸೂಸದ ಟೀ ಪಾಟ್ ಸುತ್ತುತ್ತಿದೆ ಎನ್ನುತ್ತಿದ್ದನೇನೋ!
ಇರಲಿ, ಇವೆಲ್ಲ ಪೀಠಿಕೆ ಪ್ರಸ್ತಾವನೆಯ ಅಗತ್ಯವೇನೆಂದರೆ, ನಮ್ಮ ಈ ಸಂಚಿಕೆಯ ರೆಕಮಂಡೇಶನ್ ಜಗತ್ತಿನಲ್ಲೇ ಅತಿ ವಿವಾದಾಸ್ಪದ ವ್ಯಕ್ತಿಗೆ ಸಂಬಂಧಿಸಿದ್ದು. ವಿವಾದ ಹುಟ್ಟಿಕೊಳ್ಳುವುದಕ್ಕೆ ಖುದ್ದು ಆ ವ್ಯಕ್ತಿಯು ಏನನ್ನೂ ಮಾಡಿಲ್ಲವಾದರೂ ಆತನ ಸುತ್ತಲಿರುವ ವಿವಾದದ ಶಾಖ ಅತಿ ಪ್ರಬಲವಾದದ್ದು. ಈ ವಿವಾದ ನಮ್ಮ ಟಿವಿ ‘ಸಚ್ಕಾ ಸಾಮ್ನಾ’ ಆಗುವುದಕ್ಕೆ ಮುಂಚಿನಿಂದಲೂ ಜೀವಂತವಾಗಿದೆ ಎಂದರೆ ಅದೆಷ್ಟು ಪ್ರಾಚೀನವಾದದ್ದು ಹಾಗೂ ಜನಪ್ರಿಯವಾದದ್ದು ಎನ್ನುವುದು ಅರಿವಾಗುತ್ತದೆ.
ಹೌದು! ನಿಮ್ಮ ಊಹೆ ಸರಿಯೇ. ಆತ ಆ ದೇವರು.
ದೇವರು ಹೇಗಿದ್ದಾನೆ, ಆತನ ರೂಪ ಯಾವುದು, ಆತನ ಲಿಂಗ ಯಾವುದು, ಆತ ಯಾರನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ, ಯಾರನ್ನು ನರಕಕ್ಕೆ ಅಟ್ಟುತ್ತಾನೆ ಎಂಬಿತ್ಯಾದಿ ಪ್ರಶ್ನೆಗಳು ಸರಕಾರಿ ಕಛೇರಿಯ ಗುಮಾಸ್ತರಿದ್ದ ಹಾಗೆ ಎಷ್ಟು ತುರುಕಿದರೂ ತೃಪ್ತವಾಗುವುದಿಲ್ಲ. ಈ ಪ್ರಶ್ನೆಗಳ ಗುಮಾಸ್ತರ ಹೊಟ್ಟೆ ತಣಿಸುವ ಹೊಸ ಪ್ರಯತ್ನ ಸಂಪದ ಸಮುದಾಯ ತಾಣದಲ್ಲಿ ಸುಪ್ರೀತ್.ಕೆ.ಎಸ್ ಎಂಬುವವರು ನಡೆಸುತ್ತಿದ್ದಾರೆ.
ಒಂದು ಎಚ್ಚರ: ಈ ರೆಕಮಂಡೇಶನ್ ಬುದ್ಧಿವಂತರಿಗೆ ಮಾತ್ರ. ಇದನ್ನು ಓದುವುದರಿಂದುಂಟಾಗುವ ಮಾನಸಿಕ ಕ್ಲೇಷಾದಿಗಳಿಗೆ ನಾವು ಜವಾಬ್ದಾರರಲ್ಲ.
ಸ್ವಘಟ್ಟಿ ತತ್ವಚಿಂತನೆಯ ಸ್ಯಾಂಪಲ್ ನಗಾರಿ ಸಾಮ್ರಾಜ್ಯದ ಪ್ರಜೆಗಳಿಗಾಗಿ:
ಈ ಜಗತ್ತಿನಲ್ಲಿ ಸ್ವಘಟ್ಟಿ ಎಂಬ ಮೂರು ಕೈಗಳ, ನಾಲ್ಕು ನಾಲಿಗೆಗಳ, ಎರಡು ತಲೆಗಳ, ಹದಿನಾರು ಕಿಡ್ನಿಗಳ ಮನುಷ್ಯ ಇಲ್ಲವೇ ಇಲ್ಲ ಎನ್ನುವುದು ಅನಾಗರೀಕರಾದ, ಕಾಮನ್ ಸೆನ್ಸ್ ಇಲ್ಲದ, ವಿತಂಡ ವಾದಿಗಳಾದ, ನರಕವನ್ನೇ ಭವಿಷ್ಯವನ್ನಾಗಿ ಹೊಂದಿರುವ ನಾಸ್ತಿಕರ ವಾದ. ಇವರು ನಮ್ಮೆಲ್ಲರನ್ನು ಕಾಯುವ, ತನ್ನ ಹದಿನಾಲ್ಕು ಕಿಡ್ನಿಗಳಿಂದ ನಮ್ಮ ಪಾಪಗಳನ್ನು ಶುದ್ಧೀಕರಿಸಿ ಜಗತ್ತನ್ನು ಉದ್ಧಾರ ಮಾಡುವ ಸ್ಬಘಟ್ಟಿಯ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಉದ್ದುದ್ದ ಭಾಷಣ ಚಚ್ಚುತ್ತಾರೆ.
ಇವರಿಗೆ ಸ್ವಘಟ್ಟಿಯ ಮಹಿಮೆಯ ಬಗ್ಗೆ ಆತನ ಮೂರು ಕೈಯ ವೈಶಿಷ್ಟ್ಯದ ಬಗ್ಗೆ ಹೇಳಲು ಹೋದರೆ, ಸ್ವಘಟ್ಟಿಯನ್ನು ಆರಾಧಿಸಿ ಎನ್ನಲು ಹೋದರೆ ಸ್ವಘಟ್ಟಿ ಇರುವುದಕ್ಕೆ ಸಾಧ್ಯವೇ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ಸಾಕ್ಷಿ ಕೊಡು ಎನ್ನುತ್ತಾರೆ. ಮನುಷ್ಯನಿಗೆ ಎರಡು ಕೈ ಒಂದು ತಲೆ, ಒಂದು ನಾಲಿಗೆ ಇರುತ್ತೆ(ಕೆಲವರು ಅದನ್ನು ಎರಡಾಗಿ ಬಳಸುತ್ತಾರೆ) , ಎರಡು ಕಿಡ್ನಿಗಳಿರುತ್ತೆ(ಕೆಲವರ ಒಂದು ಕಿಡ್ನಿ ಮಾರಾಟವಾಗಿರುತ್ತೆ) – ಸ್ವಘಟ್ಟಿಯಂಥ ಮನುಷ್ಯ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ನೀವೇನಾದರೂ ಅವನನ್ನು ನೋಡಿದ್ದೀರಾ ಎಂದು ಉದ್ಧಟತನದ ಮಾತನಾಡುತ್ತಾರೆ.
ಸ್ವಘಟ್ಟಿಯನ್ನು ನಮ್ಮ ಮನದಾಳದಲ್ಲಿ ಸ್ಥಾಪಿಸಿಕೊಂಡು ಪ್ರತಿದಿನ ಆತನ ಮೂರು ನಾಲಿಗೆಗಳಲ್ಲಿ ಮೆದುಳನ್ನು ನೆಕ್ಕಿಸಿಕೊಳುವ ನಾವೇನು ಆತನನ್ನು ನೋಡಿಲ್ಲ. ಆತನನ್ನು ನಮ್ಮ ಮುತ್ತಾತನ ಮುತ್ತಾತನ ಮುತ್ತಾತ ಕಂಡಿದ್ದನಂತೆ.
ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
…………………………………..
ನೀವು ಬದುಕಿರುವಿರೋ
ಸತ್ತಿರುವಿರೋ ಎಂದು ಯಾರೂ
ಕೇರ್ ಮಾಡುತ್ತಿಲ್ಲ ಅನ್ನಿಸಿದಾಗ
ಕರೆಂಟ್ ಬಿಲ್
ಕಟ್ಟುವುದನ್ನು ಮರೆತು ನೋಡಿ.
…………………………………..
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಇಂದಿಗೆ ನಾವು ಸ್ವತಂತ್ರರಾಗಿ ಸರಿಯಾಗಿ ಅರವತ್ತೆರಡು ವರ್ಷಗಳು ಕಳೆದವು. ನಾವು ಹುಟ್ಟಿಯೇ ಅಷ್ಟು ವರ್ಷಗಳಾಗಿಲ್ಲ ಎಂದು ಗಾಬರಿಯಾಗುವ ಅಗತ್ಯವಿಲ್ಲ. ನಾವು ಎಂದರೆ ಭಾರತೀಯರು, ಭಾರತ ದೇಶ. ಅದು ಸ್ವತಂತ್ರವಾಗಿ ಅರವತ್ತೆರಡು ವರ್ಷಗಳಾದವು.
‘ನಾವು ಅವರನ್ನು ಸ್ವತಂತ್ರವಾಗಿ ಬಿಟ್ಟು ಕಾಲ್ತೆಗೆಯಬಾರದು. ನಾವು ಹಾಗೆ ಬಿಟ್ಟರೆ ಅವರು ಕಿತ್ತಾಡಿಕೊಂಡು ಸರ್ವನಾಶವಾಗಿ ಹೋಗುತ್ತಾರೆ’ ಎಂದು ಅಮೇರಿಕನ್ನರು ಇರಾಕಿನ ಬಗ್ಗೆ ಹೇಳುತ್ತಿರುವಂತೆಯೇ ಅಂದು ಭಾರತದ ಬಗ್ಗೆ ಮಾತಾಡಿದ್ದ ಚರ್ಚಿಲ್ ಬಹುಶಃ ನಮ್ಮ ಅರವತ್ತೆರಡನೆಯ ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆಯ ಮೇಲಿನ ಧ್ವಜಾರೋಹಣದ ಸಮಯಕ್ಕೆ ಸರಿಯಾಗಿ ಗೋರಿಯಲ್ಲಿ ಅರವತ್ತೆರಡನೆಯ ಬಾರಿಗೆ ಹೊರಳಿರಬೇಕು!
‘ಎಲ್ಲಿದೆ ಸ್ವಾತಂತ್ರ್ಯ, ಹನ್ನೊಂದು ಘಂಟೆಗೆಲ್ಲಾ ಬಾರುಗಳು ಮುಚ್ಚಿ ಬಿಡುತ್ತವೆ. ಎಲ್ಲೆಂದರಲ್ಲಿ ನಮಗಿಷ್ಟವಾದ ಬಟ್ಟೆ ಹಾಕಿಕೊಂಡು (ಹಾಕಿಕೊಳ್ಳದೆಯೂ!), ಇಷ್ಟ ಬಂದವರ ಜೊತೆ ತಿರುಗಾಡುತ್ತಾ, ಇಷ್ಟ ಬಂದದ್ದನ್ನು ಮಾಡುವುದಕ್ಕೆ ಇಲ್ಲದ ಸ್ವಾತಂತ್ರ್ಯ ನಿಜಕ್ಕೂ ಸ್ವಾತಂತ್ರ್ಯವಾ? ನಮ್ಮ ದೇಶ ಬ್ರಿಟೀಷರ ಕೈಲೇ ಇದ್ದಿದ್ದರೆ ಚೆನ್ನಾಗಿತ್ತು. ಈಗ ನಾವೂ ಅಮೇರಿಕಾದ ಥರ ಆಗಬಹುದಿತ್ತು. ಈ ಇಂಡಿಯಾದ ಡರ್ಟಿ ಪಾಲಿಟಿಕ್ಸ್ ಸಕ್ಸ್’ ಎಂದುಲಿಯುವ ತರುಣರ ಮೇಲೆ ದೇಶ ಭಕ್ತರಾದ, ಸ್ವಾತಂತ್ರ್ಯದ ಮಹತ್ವವನ್ನು ಬಲ್ಲ ನೀವು ಹರಿಹಾಯುವ ಅಗತ್ಯವಿಲ್ಲ. ಟಿವಿ ಕ್ಯಾಮರಾಗಳೆದುರು ಅವರನ್ನು ಎಳೆದು ಕೆಡವಿ ಬಡಿಯುವ ಶೌರ್ಯ ಪ್ರದರ್ಶನ ಮಾಡಬೇಕಿಲ್ಲ.
ಅವರ ವಾದದಲ್ಲೂ ಹುರುಳಿದೆ. ಅದನ್ನು ಅರ್ಥ ಮಾಡಿಕೊಳ್ಳಿ. ‘ಬ್ರಿಟೀಷರಿದ್ದಾಗಲೇ ನಮಗೆ ಅತ್ಯುನ್ನತವಾದ ಆಡಳಿತ ಇದ್ದದ್ದು. ಅವರ ಆಳ್ವಿಕೆಯಲ್ಲಿಯೇ ನಾವು ಗರಿಷ್ಟ ಮಟ್ಟದ ಸ್ವಾತಂತ್ರ್ಯವನ್ನು ಹೊಂದಿದ್ದೆವು. ಉದಾಹರಣೆಗೆ ೧೯೪೩ರ ಬಂಗಾಳದ ಕ್ಷಾಮವನ್ನೇ ತೆಗೆದುಕೊಳ್ಳಿ. ಈಗ ನಮ್ಮ ಸ್ವತಂತ್ರ, ಸಾವ್ರಭೌಮ ದೇಶದಲ್ಲಿ ಜನತೆಗೆ ಸ್ವಾತಂತ್ರ್ಯವೇ ಇಲ್ಲ. ನೇಣು ಹಾಕಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿಲ್ಲ, ವಿಷ ಕುಡಿಯುವುದಕ್ಕೆ ಸ್ವಾತಂತ್ರ್ಯವಿಲ್ಲ. ಉಪವಾಸ ಬಿದ್ದು ಸಾಯುವುದಕ್ಕೆ ಮುಕ್ತತೆಯಿಲ್ಲ. ಸಾಂಕ್ರಾಮಿಕ ರೋಗ ಬಡಿಸಿಕೊಂಡು ಊರಿಗೆ ಊರೇ ಗುಡಿಸಿಕೊಂಡು ಹೋಗುವುದಕ್ಕೆ ಸ್ವಾತಂತ್ರ್ಯ ಇಲ್ಲ. ಇಂದಾಗಿದ್ದರೆ ಆ ಕ್ಷಾಮದ ಸಂದರ್ಭದಲ್ಲಿ ಜನರಿಗೆ ಹೊಟ್ಟೆ ಹಸಿವಿನಿಂದ, ಅಪೌಷ್ಟಿಕತೆಯಿಂದ ಸಾಯಲೂ ಸಹ ಅವಕಾಶವಿರುತ್ತಿರಲಿಲ್ಲ. ಸರಕಾರ ಏನೇನೂ ಸಂಚನ್ನು ಹೂಡಿ ಪರಿಹಾರಗಳೆಂಬ ಅಸ್ತ್ರಗಳನ್ನು ಬಳಸಿ ಸ್ವಾತಂತ್ರ್ಯ ಮುರಿಯುತ್ತಿತ್ತು.
‘ಆದರೆ ಬ್ರಿಟೀಷರಿದ್ದಾಗ ಈ ದಾಸ್ಯವೇ ಇರಲಿಲ್ಲ. ಅವರ ಆಳ್ವಿಕೆಯಲ್ಲಿ ಸ್ವಾತಂತ್ರ್ಯದ ಮಟ್ಟ ಅದೆಷ್ಟು ಉನ್ನತವಾಗಿತ್ತೆಂದರೆ ಒಂದೇ ಒಂದು ಕ್ಷಾಮದಿಂದಾಗಿ ಮೂವತ್ತು ಲಕ್ಷ ಜನರು ಆರಾಮವಾಗಿ ದೇಹದಿಂದ ಮುಕ್ತಿ ಪಡೆದರು. ಹೆಂಗಸರು, ಮಕ್ಕಳು, ಮುದುಕರು ಎಂಬ ಬೇಧವಿಲ್ಲ, ಜಾತಿ, ಧರ್ಮದ ಅಂತರವಿಲ್ಲ ಯಾರು ಬೇಕಾದರೂ ಆ ಸ್ವಾತಂತ್ರ್ಯವನ್ನು ಅನುಭವಿಸಬಹುದಾಗಿತ್ತು.’
ಈಗ ಹೇಳಿ, ನಿಮಗೆ ನಿಮಗೇನನ್ನಿಸುತ್ತೆ? ಅಂದಿಗಿಂತ ನಾವು ಹೆಚ್ಚು ಸ್ವತಂತ್ರರೇ?
ಇತ್ತೀಚಿನ ಪ್ರಜಾ ಉವಾಚ