Archive | ಮಾರ್ಚ್, 2008

ನಗೆ ಸಾಮ್ರಾಟರಿಗೆ ಹೊಸ ಉಪಾದಿ

28 ಮಾರ್ಚ್

ಇದೊಂದು ಸಂತೋಷದ ವೈಯಕ್ತಿಕ ಸಂಗತಿಯನ್ನು ನಗಾರಿಯ ಮುಖಾಂತರ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಲೋಕದ ತುಂಬೆಲ್ಲಾ ಇರುವುದು ಬಹುಸಂಖ್ಯಾತ ಮೂರ್ಖರು, ಅವರಲ್ಲಿ ಹೆಚ್ಚಿನವರು ತಮ್ಮನ್ನು ತಾವು ಬುದ್ಧಿವಂತರು ಎಂದುಕೊಂಡಿರುವವರು ಎಂಬುದನ್ನು ಕಾಯಾ-ವಾಚಾ-ಮನಸಾ ನಂಬಿಕೊಂಡಿರುವ ನಮಗೆ ಹಾಗೆಯೇ ಬದುಕಿದ ರಜನೀಶ್ ಎಂದರೆ ಅಚ್ಚುಮೆಚ್ಚು. ತನ್ನನ್ನು ತಾನು ಸಾಮಾನ್ಯನಿಗಿಂತ ಹೆಚ್ಚಾಗಿ ಬೇರೆನಲ್ಲಾ ಎನ್ನುತ್ತಲೇ ಜಗತ್ತಿನ ಎಲ್ಲರ ಮೂರ್ಖತಕ್ಕೆ ತನ್ನ ಬುದ್ಧಿವಂತಿಕೆಯ ಮುಖಾಂತರ ಉತ್ತರ ನೀಡಿದವನು ರಜನೀಶ್.

ಜನರು ಅವನ ವಿಚಾರಗಳಿಗೆ ಪ್ರಬಲವಾದ ವೈಚಾರಿಕ ವಿರೋಧವನ್ನು ಒಡ್ಡಿದರು. ಅದು ಆತನ ಪ್ರಚಂಡ ವೈಚಾರಿಕತೆಯ ಎದುರು ಯಾವಾಗ ನಿಲ್ಲಲಿಲ್ಲವೋ ಆಗ ಅವರು ಆತನನ್ನು ಬೆದರಿಸಿದರು. ಆತನ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವಂತಹ ಮೂರ್ಖ ಪ್ರಯತ್ನಕ್ಕೆ ಕೈಯನ್ನು ಹಾಕಿದರು. ಆತ ಅದ್ಯಾವುದಕ್ಕೂ ಬಗ್ಗಲಿಲ್ಲ. ಕೊನೆಯ ಅಸ್ತ್ರವೆಂಬಂತೆ ಜನರು ಆತನನ್ನು ‘ಡೆಮೊನೈಸ್’ ಮಾಡಲಾರಂಭಿಸಿದರು. ಸೆಕ್ಸ್ ಗುರು ಎಂದು ಆತನನ್ನು ಬ್ರ್ಯಾಂಡ್ ಮಾಡತೊಡಗಿದರು. ಆತನ ವಿಚಾರಗಳು ಜೀವ ವಿರೋಧಿ ಎಂದು ಹುಯಿಲನ್ನು ಹಬ್ಬಿಸಿದರು. ಆತನ ಐಶಾರಾಮವನ್ನು ಮುಂದಿಟ್ಟುಕೊಂಡು ಆತನನ್ನು ಲೋಭಿ ಎಂದು ಜರೆದರು. ಓಶೋ ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ, ನಿರಂತರವಾಗಿ ತಾನು ಕಂಡುಕೊಂಡ ಸತ್ಯವನ್ನು ಜಗತ್ತಿಗೆ ದಾಟಿಸುವ ಕೆಲಸದಲ್ಲಿ ಮಗ್ನನಾದ.

ಈ ಮನುಷ್ಯನನ್ನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಮಾತ್ರ ಕಾಣಬೇಕು. ಆತನನ್ನು ಪವಾಡಪುರುಷನೆಂದಾಗಲಿ, ಯಾವುದೋ ಋಷಿಯ ಅವತಾರವೆಂದಾಗಲಿ ಕರೆದೋ ಅಥವಾ ಎಂಥದ್ದೋ ಕಲ್ಟ್‌ನ ಸ್ಥಾಪಕ ಎಂತಲೋ ಕಾಣುವುದು ನಮ್ಮ ಗ್ರಹಿಕೆಗೆ ನಿಜವಾದ ಆತಂಕ ಎಂದು ಹೇಳುತ್ತಾ ಆ ಆಶಯವನ್ನು ಇಟ್ಟುಕೊಂಡು ಸುಪ್ರೀತ್.ಕೆ.ಎಸ್ ‘ಓಶೋ ಎಂಬ ಹಕ್ಕಿ’ ಎಂಬ ಬ್ಲಾಗೊಂದನ್ನು ತೆರೆದಿದ್ದಾರೆ. ಅದಕ್ಕೆ ಓಶೋ ಬಗ್ಗೆ ಆಸಕ್ತಿಯಿರುವ ಅನೇಕರನ್ನು ಒಂದು ಆತ್ಮೀಯ ಸಂವಾದಕ್ಕೆ ಆಹ್ವಾನಿಸಿದ್ದಾರೆ. ಅಲ್ಲಿ ಓಶೋನನ್ನು ಪ್ರೀತಿಸಲಾಗುತ್ತದೆ, ದ್ವೇಷಿಸಲಾಗುತ್ತದೆ. ಆತನೊಂದಿಗಿನ ರೊಮಾನ್ಸ್, ಜಗಳ, ವಿರಸ ಎಲ್ಲಕ್ಕೂ ಆ ವೇದಿಕೆ ತೆರೆದುಕೊಂಡಿದೆ. ಆ ಬ್ಲಾಗಿಗೆ ನಮ್ಮನ್ನು ಸಹ ಒಬ್ಬ ಸಹ-ಬರಹಗಾರನಾಗಿ ಸುಪ್ರೀತ್ ಸೇರಿಸಿಕೊಂಡಿದ್ದಾರೆ.

ಓಶೋ ಬಗ್ಗೆ ಹೆಚ್ಚು ತಿಳಿದವರು, ಆಸಕ್ತಿ (ಯಾವ ರೀತಿಯದ್ದೇ ಆಗಿರಲಿ) ಇದ್ದವರು ಇಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಂತೆ. ಬ್ಲಾಗಿಗೆ ಬರೆಯುವ ಆಸಕ್ತಿಯಿದ್ದರೆ ಸುಪ್ರೀತ್‌ರನ್ನು ಸಂಪರ್ಕಿಸಬಹುದು.

ಇನ್ನು ಮುಂದೆ ನಗೆ ಸಾಮ್ರಾಟರು ನಗಾರಿ ಬಾರಿಸುವುದರ ಜೊತೆಗೆ ಓಶೋ ಎಂಬ ಹಕ್ಕಿಗೆ ಕಾಳನ್ನೂ ಹಾಕಬೇಕು!

**********************************

ಬರೀ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದ ಓಶೋ ನಗೆ ಸಾಮ್ರಾಟರಿಗೆ ಹೇಗೆ ಪ್ರಿಯವಾದವನು ಎಂಬುದು ಹಲವರ ಕುತೂಹಲಕ್ಕೆ ಕಾರಣವಾಗಿರಬಹುದು. ಓಶೋ ಎಂಥವನು ಎಂಬುದರ ಬಗ್ಗೆ ಯಾವ ಪೂರ್ವಾಗ್ರಹವೂ ಇಲ್ಲದವರಿಗೆ, ಪೂರ್ವ ಮಾಹಿತೂ ಇಲ್ಲದವರಿಗಾಗಿ ಈ ಒಂದು ಕ್ಲಿಪಿಂಗ್… ಇದನ್ನು ನೋಡಿದ ನಂತರ ನಿಮಗೆ ಓಶೋನ ನಗೆ ಸಾಮ್ರಾಟರು ಯಾಕಷ್ಟು ಹಚ್ಚಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ.

ನಗಾರಿ ವಿಧಿಸಿದ ಎಚ್ಚರಿಕೆ: ಇದು ಸ್ವಚ್ಛ ಮನಸ್ಸು, ಹಾಸ್ಯ ಪ್ರವೃತ್ತಿಯಿರುವವರಿಗಾಗಿ ಮಾತ್ರ.

ಖುಸಿ ಸಿಗದಿದ್ದರೆ ಕಾಸು ವಾಪಸ್!

28 ಮಾರ್ಚ್

(ನಗಾರಿ ಸಿನಿ-ಸಿನಿ ಬ್ಯೂರೋ)

ಅವ್ರನ್ನ ಉದಯ್ ಅಂದರೆ ಯಾರು ಉದಯ್ ಕುಮಾರಾ ಅಂತ ಕೆಲವರು ಕೇಳಬಹುದು. ಆದರೆ ಉದಯ್ ಜಾದೂಗಾರ್ ಅಂದರೆ ಯಾರಿಗೂ ಕನ್ ಫೂಸ್ ಆಗೋದಿಲ್ಲ. ಜಾದೂಗಾರ್ ಮ್ಯಾಜಿಕ್ ಮಾಡಿದ್ರು, ಜನ ಚಪ್ಪಾಳೆ ತಟ್ಟಿದ್ರು. ಮ್ಯಾಜಿಕ್ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮಾಡಿದರೆ ಜನ ಹಣ ಸುರಿದು ಮೋಡಿ ಕಲಿತರು. ಅವರು ಸುಡೋಕು ಹಿಡಿದರು, ಅದನ್ನ ಬಿಡಿಸಲಿಕ್ಕೆ ಅಂತಲೇ ಒಂದು ಡಬ್ಬಿ ಮಾಡಿದರು ಜನ ಭಲೇ ಮೆಚ್ಚಿಕೊಂಡರು. ಈಗವರು ಎಲ್ಲಾ ಬಿಟ್ಟು ದರೋಡೆ ಮಾಡೋಕೆ ನಿಂತಿದ್ದಾರೆ, ಬಹುಪಾಲು ಅದು ಮುಗಿದೂ ಆಗಿದೆಯಂತೆ!

ಜಾದೂಗಾರ ದರೋಡೆ ಮಾಡೋಕೆ ನಿಂತರೆ ಸಾಮಾನ್ಯರ ಪಾಡೆನು ಅಂತ ಬುದ್ಧಿಜೀವಿಯ ಫೋಸಿನಲ್ಲಿ ನಾಲ್ಕೈದು ಉದ್ಗಾರ, ಕೊನೆಗೊಂದು ನಿಟ್ಟುಸಿರು ಬಿಟ್ಟು ಎದ್ದುನಿಲ್ಲಲು ರೆಡಿಯಾಗಬೇಕಿಲ್ಲ. ಉದಯ್ ‘ದರೋಡೆ’ ಹೆಸರಿನ ಸಿನೆಮಾವೊಂದನ್ನು ಮಾಡಿ ಪ್ರೇಕ್ಷಕರ ಜಾದೂಗಾಗಿ ಕಾಯುತ್ತಾ ಕುಳಿತಿದ್ದಾರೆ.

ನಮ್ಮ ರೆಗ್ಯುಲರ್ ದಿನಪತ್ರಿಕೆಗಳಿಂದ ಹಿಡಿದು, ಇರ್ರೆಗ್ಯುಲರ್ ಟ್ಯಾಬ್ಲಾಯ್ಡ್‌ಗಳ ವರೆಗೂ ಯಾರೂ ಜಾದೂಗಾರರನ್ನು ಸೀರಿಯಸ್ಸಾಗಿ ನೋಡುತ್ತಲೇ ಇಲ್ಲ. ‘ಪಾಪ ಅವರು ಸಿನೆಮಾ ಮಾಡಿದ್ದಾರಂತೆ, ತುಂಬಾ ಚೆನ್ನಾಗಿದೆ- ಗೆದ್ದೇ ಗೆಲ್ಲುತ್ತೆ ಅಂತ ಅವರೇ ಹೇಳ್ತಿದ್ದಾರೆ. ಪಾಪ ಅವರಿಗ್ಯಾಕೆ ಬೇಜಾರು ಮಾಡ್ತೀರಿ, ಗೆಲ್ಲಿಸಿಬಿಡಿ..’ ಎಂದು ಮಣಗಟ್ಟಲೆ ಸಿಂಪಥಿ ಬೆರೆಸಿ ಗೀಚುತ್ತಿದ್ದಾರೆ. ಯಾರೂ ಜಾದೂಗಾರ್ ಎಂಬ ಹೊಸ ಆಶಾ-ಕೋಶಾ ಕಿರಣ ‘ಉದಯ’ವಾಗ್ತಿದೆ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ.

ಈ ಮಧ್ಯೆ ಜಾದೂಗಾರರು ನಮ್ಮ ನಗೆ ಸಾಮ್ರಾಟರನ್ನು ಯಕ್ಷಿಣಿಯ ಮೂಲಕ ತಮ್ಮ ಸ್ವಸ್ಥಾನದಿಂದ ಎತ್ತಿ ಹಾಕಿಕೊಂಡು ತಮ್ಮಲ್ಲಿಗೆ ಕರೆಸಿಕೊಂಡು ಮೂರು ತಾಸಿನ ಸಿನೆಮಾ ಬಗ್ಗೆ ಕೇವಲ ನಾಲ್ಕು ತಾಸು ಕೊರೆದು ಏನಾದರೂ ಪ್ರಶ್ನೆಗಳಿದ್ದರೆ ಕೇಳುವಂಥವರಾಗಿ ಎಂದರು. ನಾಲ್ಕು ತಾಸು ಭರ್ಜರಿ ನಿದ್ದೆಯಿಂದ ಎದ್ದ ಸಾಮ್ರಾಟರು, ನಾಸ್ತಿಕರು ಸತ್ಯ ಸಾಯಿ ಬಾಬಾಗೆ ಚಾಲೆಂಜ್ ಮಾಡಿದ ಹಾಗೆ, ‘ತಾಕತ್ತಿದ್ದರೆ, ನಿಮ್ಮ ಜಾದೂ ಮೂಲಕ ನನ್ನ ಪ್ರಶ್ನೆ ಏನೆಂದು ನೀವೇ ತಿಳಿದುಕೊಂಡು ಉತ್ತರಿಸಿ’ ಎನ್ನಬೇಕಂದುಕೊಂಡಿದ್ದರಾದರೂ, ಹಾಗಂದರೆ ಇರುವ ಒಂದು ಪ್ರಶ್ನೆಯ ಜಾಗಕ್ಕೆ ನೂರು ಪ್ರಶ್ನೆಗಳನ್ನು ಊಹಿಸಿಕೊಂಡು ಮತ್ತೆ ಕೊರೆಯಲು ಶುರುಮಾಡಿದರೆ ಎಂಬ ಭಯದಿಂದ ‘ಸಿನೆಮಾ ಗೆಲ್ಲುತ್ತಾ?’ ಎಂಬ ಮರ್ಮಾಘಾತದ ಪ್ರಶ್ನೆಯನ್ನೇ ಕೇಳಿಬಿಟ್ಟರು. ಆ ಡೆವಿಲ್ಲು ಲಾಯರ್ ಕರ್ರನೆ ಥಾಪರ್‍ಥರ ಎದುರಿಗೆ ಕುಂಡ್ರಿಸಿಕೊಂಡವರು ಮಾತಾಡೋದಕ್ಕಿಂತ ತಾನೇ ಹೆಚ್ಚು ಮಾತಾಡುವ ವಿಧಾನ ನಗೆ ಸಾಮ್ರಾಟರಿಗೆ ಅಷ್ಟಾಗಿ ಮೆಚ್ಚಿಗೆಯಾಗದು.

ಜಾದೂಗಾರ್ ಉತ್ತರಿಸುತ್ತಾ, ‘ಗ್ಯಾರಂಟಿ ನನ್ನ ಸಿನೆಮಾ ಗೆದ್ದೇ ಗೆಲ್ಲುತ್ತೆ. ಸಿನೆಮಾ ನೋಡಿದ ಮಂದಿಗೆ ಖುಸಿಯಾಗದಿದ್ದರೆ ಥೇಟರ್ ಹೊರಗೆ ನಿಂತು ಅವರ ಕಾಸು ವಾಪಸ್ ಮಡಗ್ತೀನಿ’ ಅಂದ್ರು ಖಡಾಖಂಡಿತವಾಗಿ.

ಮೊದಲೇ ನ್ಯೂಸ್ ಪೇಪರು, ಕಚಡಾ ಸುಟ್ಟು ನೋಟು ತೆಗೆಯುವ ಜಾದೂಗಾರರು ಇವರು, ಥಿಯೇಟರ್ ಮುಂದೆ ನಿಂತು ಇಂಥದ್ದೇ ಜಾದೂ ಮಾಡಲು ಶುರುಮಾಡಿದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಕ್ಕಪಕ್ಕದಿಂದ ಕಥೆ ಕದ್ದು ಕಾದಂಬರಿ ಬರೆಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನೆಮಾ ಸುತ್ತಿದವರು ಕಲಾಸಿಪಾಳ್ಯದ ಫುಟ್ ಪಾತ್ ಮೇಲೆ ದಬಾಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ‘ನಗೆ ಸಾಮ್ರಾಟ’ರು ಗಾಂಧೀ ನಗರಕ್ಕೆ ಫೀ-ಮೇಲು, ಅಲ್ಲಲ್ಲ ಇ-ಮೇಲು ಮೂಲಕ ರವಾನಿಸಿದ್ದಾರೆ.

ಏಪ್ರಿಲ್ ಒಂದರ ವ್ಯಕ್ತಿ ಯಾರು?

28 ಮಾರ್ಚ್

ಏಪ್ರಿಲ್ ಒಂದು ಮೂರ್ಖರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ ಸಂತೋಷ ಪಡುತ್ತಾ ಅವರ ಸಾಧನೆಯನ್ನು ಕೊಂಡಾಡುವ ದಿನ.

ವರ್ಷದ ವ್ಯಕ್ತಿ, ತಿಂಗಳ ವ್ಯಕ್ತಿ, ವಾರದ ವ್ಯಕ್ತಿ, ದಿನದ ವ್ಯಕ್ತಿ ಎಂದೆಲ್ಲಾ ಬೇಕಾ ಬಿಟ್ಟಿಯಾಗಿ ಪ್ರಶಸ್ತಿಗಳನ್ನು ಕೊಡುವ, ಬೀದಿ ಬದಿಯ ಸುಂದರಿಯನ್ನು ಕರೆದುಕೊಂಡು ಬಂದು ಆಕೆಯನ್ನು ಇಡೀ ಕೇರಿಯ ‘ವಿಶ್ವ ಸುಂದರಿ’ಯನ್ನಾಗಿ ಘೋಷಿಸುವ ಸಂಘಗಳು ನಮ್ಮ ನಡುವೆ ಇವೆ. ಆದರೆ ಏಪ್ರಿಲ್ ಒಂದರ ವ್ಯಕ್ತಿ ಎಂದು ಒಂದು ನೈಜ ಪ್ರತಿಭೆಯನ್ನು, ಒಬ್ಬ ಸಾಧಕ/ಸಾಧಕಿಯನ್ನು ಗುರುತಿಸಿ, ಗೌರವಿಸುವ ಸಾಹಸಕ್ಕೆ ಯಾರೂ ಕೈಯನ್ನು ಮಾತ್ರ ಹಾಕದಿರುವುದು ವಿಷಾದದ ಸಂಗತಿ. ಈ ಕೊರಗನ್ನು ನೀಗಿಸುವತ್ತ ನಗೆ ನಗಾರಿ ದಾಪುಗಾಲು ಹಾಕುತ್ತಿದೆ. ಯಾರೂ ಮಾಡದ ಘನ ಕಾರ್ಯವನ್ನು ನಗಾರಿಯ ಸಾರಥಿ ನಗೆ ಸಾಮ್ರಾಟರು ಮಾಡಲು ಮನಸ್ಸು ಮಾಡುವ ಮೂಲಕ ಹೊಸ ಕ್ರಾಂತಿಯನ್ನು ಮಾಡುತ್ತಿದ್ದಾರೆ.

ಏಪ್ರಿಲ್ ಒಂದರ ವ್ಯಕ್ತಿಯಾಗಲು ಯಾವ ವಶೀಲಿಯೂ ನಡೆಯುವುದಿಲ್ಲ ಎಂಬುದನ್ನು ಈ ಮೊದಲೇ ಸ್ಪಷ್ಟ ಪಡಿಸಲು ಬಯಸುತ್ತೇವೆ. ಕರ್ನಾಟಕದಲ್ಲಿ ಮಂತ್ರಿ-ಕಂತ್ರಿ- ತಂತ್ರಿಗಳ ಸರಕಾರವೇ ಇಲ್ಲದೆ ವಿಧಾನ ಸೌಧ ‘ನಿಧನ’ ಸೌಧವಾಗಿರುವುದರಿಂದ ಯಾವ ಮಾಜಿ ಎಮ್ಮೆ-ಎಲ್ಲೆಗಳ, ಅವರ ಪರ್ಸಿನ ಸೆಕ್ರೆಟರಿಗಳ ರೆಕಮಂಡೆಶನ್ನುಗಳನ್ನು ಸೀದಾ ತುಂಬಿ ತುಳುಕಿ ವಾಸನೆ ಹೊಡೆಯುತ್ತಿರುವ ಬೆಂಗಳೂರಿನ ಕಸದ ತೊಟ್ಟಿಗೆ ಎಸೆಯಲಾಗುವುದು. ರಾಜ್ಯದಲ್ಲಿ ಬೇಳೆ ಬೇಯಿಸಿಕೊಳ್ಳಲು ಒಲೆಯಿಲ್ಲವೆಂದು ದಿಲ್ಲಿಗೆ ಹಾರಿ ಎಡ ಗೈಯಿಂದಲೋ ಇಲ್ಲವೇ ಇಟಲಿ ‘ಕೈ’ಯಿಂದಲೋ ಹೆಬ್ಬಟು ಒತ್ತಿಸಿಕೊಂಡು ಬಂದು ಅರ್ಜಿ ಗುಜರಾಯಿಸಿದವರನ್ನು ನೇರವಾಗಿ ಗುಜುರಿಗೆ ರವಾನಿಸಲಾಗುವುದು. ಈ ಕಾಂಜಿ ಪಿಂಜಿ ಮರ್ತ್ಯರ ಸಹವಾಸವೇ ಬೇಡ ಎಂದು ಕಾವಿಯ ಹಿಂದೆ ಕಾಸು, ಕಾಮ, ಕಪಟತನವನ್ನು ಅಡಗಿಸಿಕೊಂಡು ಕುಳಿತಿರುವ ಪವಾಡ ಪುರುಷರಾದಿಯಾಗಿ ಮಠ ಮಾನ್ಯಗಳ ಸಿಇಓಗಳಿಂದ ಶಿಫಾರಸ್ಸು ಮಾಡಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಮನುಷ್ಯರ ಪಾಡೇ ಬೇಡವೆಂದು ಸಾಕ್ಷಾತ್ ದೇವರನ್ನೇ ಕಿರುಬೆರಳು ಹಿಡಿದುಕೊಂಡು ಎದುರು ತಂದು ನಿಲ್ಲಿಸಿದರೂ ನಾವು ಅಪ್ಪಟ ನಾಸ್ತಿಕರಂತೆ I like God only when it is spelt backwards ಎಂದು ಬರುವ ಹರಕು ಇಂಗ್ಲೀಷಿನಲ್ಲಿ ಡೈಲಾಗು ಹೊಡೆದು ನಿಮ್ಮ ದೇವರನ್ನು ತಬ್ಬಿಬ್ಬುಗೊಳಿಸುವುದು ಖಚಿತ.

ಇನ್ನು ನಮ್ಮ ಆಯ್ಕೆಯ ಜಾಲಕ್ಕೆ ಹೆದರಿ ತತ್ತರಿಸಿ ಸಂದಿ ಮೂಲೆಗಳನ್ನು ಹುಡುಕಿ ಅವಿತು ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ಭಾವಿ-ಫಲಾನುಭವಿಗಳಿಗೆ ನಮ್ಮ ವತಿಯಿಂದ ಕನಿಷ್ಟವಾದ ರಿಯಾಯಿತಿಯೂ ದೊರೆಯುವುದಿಲ್ಲ ಎಂದು ತಿಳಿಯಪಡಿಸುತ್ತಿದ್ದೇವೆ. ನಮ್ಮ ಬಲೆಯಿಂದ ಪಾರಾಗಲು ಭೂಗತ, ಸ್ವಾಗತ, ಗತ ಲೋಕದ ನೆರವು ಪಡೆಯುವುದಾಗಿ ಹಾಕುವ ಧಮಕಿಗಳಿಗೆ ನಾವು ಉಪ್ಪು, ಖಾರವಿಲ್ಲದ ಹಸಿ ಸೊಪ್ಪನ್ನೂ ಸಹ ಹಾಕುವುದಿಲ್ಲ ಎಂದು ಹೇಳಲಿಚ್ಚಿಸುತ್ತೇವೆ.

ಈ ಆಯ್ಕೆಯ ಪ್ರಕ್ರಿಯೆಯು ತೀರಾ ನಿಗೂಢವಾಗಿಯೂ, ಅತೀ ಅವ್ಯವಸ್ಥಿತವಾಗಿಯೂ ನಡೆಯುತ್ತಾದ್ದರಿಂದ ಇದರಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ. ಈ ತೀರ್ಮಾನಕ್ಕೆ ಯಾರೂ ತಕರಾರು ತೆಗೆಯುವ ಹಾಗಿಲ್ಲ ಎಂದು ಮೊದಲೇ ಘೋಷಿಸುತ್ತಿದ್ದೇವೆ. ಹೀಗಿದ್ದಾಗೂ ಯಾರಾದರೂ ತಮ್ಮ ಪ್ರತಿಭೆಗೆ ನಿಜವಾಗಿಯೂ ಈ ನಮ್ಮ ಪುರಸ್ಕಾರ ಸಿಕ್ಕಲೇ ಬೇಕು ಎಂಬ ಅನಿಸಿಕೆಯವರಾಗಿದ್ದರೆ ನಮ್ಮನ್ನು ಸಂಪರ್ಕಿಸಬಹುದು.

ಆಯ್ಕೆಯ ಪ್ರಕ್ರಿಯೆ, ಬಳಸಿದ ‘ಮಾನ’ ದಂಡಗಳು ಹಾಗೂ ಏಪ್ರಿಲ್ ಒಂದರ ವ್ಯಕ್ತಿಯ ಹೆಸರನ್ನು ಏಪ್ರಿಲ್ ಒಂದರಂದೇ ಜಗಜ್ಜಾಹೀರು ಗೊಳಿಸಲಾಗುವುದು. ಅಲ್ಲಿಯವರೆಗೆ ಅಳುಕದೆ, ಅಂಜದೆ, ನಡುಗದೆ ಬೆಚ್ಚಗೆ ಹೊದ್ದಿಕೊಂಡು ಮಲಗಿ…

ಏಪ್ರಿಲ್ ಒಂದು- ಎಲ್ಲರ ದಿನ!

28 ಮಾರ್ಚ್

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ ‘ವ್ಯಾವಹಾರಿಕ’ವಾಗಿ ನಿಷಿದ್ಧ!), ‘ವುಮನ್ಸ್ ಡೇ’ ಇವೆಲ್ಲಾ ಇರಲಿ, ಅಂಥಾ ಮಹಾಮಾರಿ ಏಡ್ಸ್‌ಗೂ ಸಹ ಒಂದು ‘ಏಡ್ಸ್ ಡೇ’ ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ, ಗಂಡಂದಿರಿಗೂ ಇದೆ!

ಹೀಗೆ ಜಗತ್ತಿನ ಸಣ್ಣ ಸಣ್ಣ ಗುಂಪುಗಳಿಗಾಗಿ ಎಂದೇ ಒಂದೊಂದು ದಿನವಿರುವಾಗ ಜಗತ್ತಿನ ಬಹುಸಂಖ್ಯಾತರ, majority ಜನರ ಹೆಸರಿನಲ್ಲಿ ವರ್ಷಕ್ಕೆ ಒಂದೇ ಒಂದು ದಿನವಾದರೂ ಬೇಡವೇ? ಜಗತ್ತಿನಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠವಾದ ಪ್ರಭುತ್ವ ಎಂದು ನಮ್ಮನ್ನು ಮುನ್ನೂರು ಚಿಲ್ಲರೆ ವರ್ಷ ಆಳಿದ ಬ್ರಿಟೀಷರು ಹೇಳಿಕೊಟ್ಟದ್ದನ್ನು ಅವರಿಗಿಂತ ಚೆನ್ನಾಗಿ ನಂಬಿರುವ ಹಾಗೂ ಅದರ ಫಲವಾಗಿ ಪ್ರಸ್ತುತ ರಾಜಕಾರಣಿಗಳನ್ನು ಆರಿಸಿ ನಮ್ಮದು ಪ್ರಜಾಪ್ರಭುತ್ವ, ಪ್ರಭುತ್ವದಲ್ಲಿರುವವರ ಹಾಗೆಯೇ ನಮ್ಮ ದೇಶದ ಪ್ರಜೆಗಳೂ ಇರುವುದು ಎಂಬುದನ್ನು ಸಾರುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರಿಗೇ ಮೊದಲ ಮಣೆ. ನೂರು ಮಂದಿಯಲ್ಲಿ ತೊಂಭತ್ತು ಮಂದಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ ಅದೇ ಸತ್ಯ. ಹೀಗಿರುವಾಗ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮೂರ್ಖರಿಗಾಗಿ ಮುನ್ನೂರ ಅರವತ್ತೈದು ಕಾಲು ದಿನಗಳಲ್ಲಿ ಅಟ್‌ಲೀಸ್ಟ್ ಒಂದು ದಿನವಾದರೂ ಬೇಡವೇ?

ಏಪ್ರಿಲ್ ಒಂದು ನಿಜಕ್ಕೂ ಮಹತ್ವದ ದಿನ. ಜಗತ್ತಿನಲ್ಲಿರುವ ಬಹುತೇಕರ ಪ್ರತಿಭೆಯನ್ನು ಗುರುತಿಸುವ ದಿನ. ತನ್ನ ಮೈಯಲ್ಲೇ ಕಸ್ತೂರಿಯಿದ್ದರೂ ಅದರ ಪರಿಮಳವನ್ನು ಹುಡುಕಿಕೊಂಡು ಕಸ್ತೂರಿ ಮೃಗ ಕಾಡೆಲ್ಲಾ ಸುತ್ತಿ ಕಂಗಾಲಾಗುತ್ತ, ಈ ಪರಿಮಳ ಅಗೋಚರವಾದದ್ದು ಸರ್ವವ್ಯಾಪಿಯಾದದ್ದು ಎಂಬ ನಿರ್ಧಾರಕ್ಕೆ ಬಂದಂತೆ ಜಗತ್ತಿನ ಜನರು ತಮ್ಮ ಕಿವಿಗಳೆರಡರ ಮಧ್ಯದೊಳಗೇ ಅಡಗಿರುವ ಮೂರ್ಖತನವನ್ನು ಕಾಣಲಾರದೆ ಹೊರಜಗತ್ತಿನಲ್ಲಿ ಮೂರ್ಖತನದ ಕೆಲಸಗಳನ್ನು ಗುರುತಿಸುತ್ತಾ, ಮೂರ್ಖರು ಯಾರು, ಮೂರ್ಖತನ ಎಲ್ಲಿದೆ ಅಂತ ಹುಡುಕುತ್ತಾ ಜಗತ್ತಿನೆಲ್ಲೆಡೆ ಅಲೆಯುತ್ತಿದ್ದಾನೆ. ತನ್ನೊಳಗಂತೂ ಇಲ್ಲ ಎಂದು ನೆಮ್ಮದಿಯಾಗಿರುತ್ತಾನೆ. ಕೆಲವೊಮ್ಮೆ ಅಪರೂಪಕ್ಕೆ ಜ್ಞಾನೋದಯವಾಗಿ ನನ್ನೊಳಗೇ ಅದು ಇದ್ದಿರಬಹುದಲ್ಲವಾ ಎಂಬ ಸಂಶಯ ನುಸುಳಿದರೂ ಕೂಡಲೇ ಆತನ ‘ಅಹಂ’ ಎಂಬ ಕಾವಲುಗಾರ ಅದನ್ನು ಹೊರಗಟ್ಟಿಬಿಡುತ್ತಾನೆ. ”ಮಗು ನೀನು ಮೂರ್ಖನಲ್ಲ. ನೀನು ಇಡೀ ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ. ಇಡೀ ಜಗತ್ತು ಹಗಲು ರಾತ್ರಿಯೆನ್ನದೆ ಕಾಯುತ್ತಿರುವ ಶ್ರೇಷ್ಠ ವ್ಯಕ್ತಿ ನೀನು. ನೀನು ಮೂರ್ಖನಾಗಲಿಕ್ಕೆ ಹೇಗೆ ಸಾಧ್ಯ? ಅದೋ ನೋಡು ಅಲ್ಲಿ ಕಾಣಿಸ್ತಾ ಇದ್ದಾನಲ್ಲ ಅವನು ಮೂರ್ಖ.” ಎನ್ನುತ್ತಾ ನೆತ್ತಿ ಸವರುತ್ತಾನೆ.

ಈ ನಮ್ಮ ನೆಮ್ಮೆಲ್ಲರ ಹೆಮ್ಮೆಯ ‘ಮೂರ್ಖರ ದಿನ’ ಆಗಮಿಸುತ್ತಿರುವ ಶುಭ ಮುಹೂರ್ತದಲ್ಲಿ ಜಗತ್ತಿನಲ್ಲಿ ನಮ್ಮ ನಿಮ್ಮೆಲ್ಲರ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ. ಇಡೀ ಭೂಮಿಯ ಏಳುನೂರು ಕೋಟಿ ಜನ ಸಂಖ್ಯೆಯಲ್ಲಿ ಮೂರ್ಖರು ಎಷ್ಟು ಮಂದಿ ಎಂಬುದನ್ನು ಮೊದಲು ಪತ್ತೆ ಹಚ್ಚೋಣ. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ ಹಾಗಾಗಿ ನಮ್ಮ ಪತ್ತೇದಾರಿಕೆಯನ್ನು ಮನೆಯಿಂದಲೇ ಪ್ರಾರಂಭಿಸೋಣ. ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಮಗನನ್ನು “ಕತ್ತೆ ಮಗನೇ” ಎನ್ನುತ್ತಾನೆ. ಮನುಷ್ಯ ಎಸಗುತ್ತಿರುವ ಕ್ಷಮೆ ಇಲ್ಲದ ಅಪರಾಧಗಳಲ್ಲಿ ಇದೂ ಒಂದು. ತನ್ನಲ್ಲಿರುವ ಮೂರ್ಖತನವನ್ನು ಮರೆ ಮಾಚಲಿಕ್ಕೆ ಪ್ರಕೃತಿ ವಹಿಸಿದ ಪಾತ್ರವನ್ನು ಅನೂಚಾನವಾಗಿ ನಿರ್ವಹಿಸುತ್ತಿರುವ ಗಾರ್ಧಭ ಮಹಾಶಯನನ್ನು ಮೂರ್ಖ ಎಂದು ಬಿಂಬಿಸುತ್ತಿರುವುದು ಹಾಗೂ ಅಪರೂಪಕ್ಕೆ ಒಮ್ಮೆ ತನ್ನಂಥವನೇ ಆದ ಮಾನವನಲ್ಲಿ ಗೋಚರಿಸುವ ಮೂರ್ಖತನವನ್ನು ಹೆಸರಿಸಲಿಕ್ಕೆ ಗಾರ್ಧಭ ಮಹಾಶಯನ ಹೆಸರನ್ನೇ ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಇರಲಿ, ಅಪ್ಪ ತನ್ನ ಮಗನನ್ನು “ಕತ್ತೆ ಮಗನೇ” ಎಂದು ಸಂಬೋಧಿಸುತ್ತಾನೆ. ಅಂದರೆ ಆತನ ಮಗ ಮೂರ್ಖನ ಮಗ ಎಂದಾಯಿತು. ಆ ಮಗನಿಗೆ ತಾನೇ ನಿಜವಾದ ಅಪ್ಪ ಎಂಬ ನಂಬಿಕೆ ಇದ್ದರೆ, ಅಪ್ಪ ತನ್ನನ್ನೇ ಕತ್ತೆ ಎಂದು ಕರೆದುಕೊಂಡಂತಾಯಿತು. ಆ ಮೂಲಕ ತನ್ನ ಹೆಂಡತಿಯೂ ಕತ್ತೆ ಎಂದು ಸಾಬೀತು ಪಡಿಸಿದಂತಾಯಿತು. ಈ ‘ಕತ್ತೆಗಳಿಬ್ಬರ’ ಮಗ ಅಥವಾ ಮಗಳು ಮುಂದೆ ತಂದೆ ಅಥವಾ ತಾಯಿಯ ಪಾತ್ರವನ್ನು ಅಲಂಕರಿಸಿದಾಗ ಇದೇ ರೀತಿಯಾಗಿ ತಮ್ಮ ಮಕ್ಕಳನ್ನು ಸಂಬೋಧಿಸುವುದರಿಂದ ಅವರೂ ಮೂರ್ಖ ಮಹಾಸಭೆಯ ಸದಸ್ಯರಾಗುತ್ತಾರೆ.

ಇನ್ನು ಮನೆಯೆಂಬ ಮೊದಲ ಪಾಠ ಶಾಲೆಯಿಂದ ನಂತರದ ಪಾಠಶಾಲೆಯೆಂಬ ಮನೆಗೆ ಬರೋಣ. ತಿಂಗಳ ಮುವ್ವತ್ತು ದಿನಗಳಲ್ಲಿ ನಾಲ್ಕು ಭಾನುವಾರಗಳು, ನಾಲ್ಕು ಹಾಫ್ ಡೇ ಶನಿವಾರಗಳನ್ನು ಬಿಟ್ಟರೆ ಸಿಕ್ಕುವ ೨೨ ದಿನಗಳಲ್ಲಿ ಎರಡು ಸರಕಾರಿ ರಜೆಗಳು, ಒಂದು ರೀಜನಲ್ ರಜಾ ಸೇರಿಸಿ ಉಳಿದ ೧೯ ದಿನಗಳಲ್ಲಿ ಮೂರು ದಿನ ಟೆಸ್ಟು, ನಾಲ್ಕೈದು ದಿನ ಸ್ವಯಂ ಘೋಷಿತ ರಜೆಗಳನ್ನು ಕಳೆದರೆ ಮಿಕ್ಕುವ ಹನ್ನೊಂದು ದಿನಗಳಲ್ಲಿ ಒಂದು ತಾಸಿನ ಪಿರಿಯಡ್ ನಲ್ಲಿ ಕಾಲುಘಂಟೆ ಹಾಜರಾತಿಗಾಗಿ, ಇನ್ನರ್ಧ ಘಂಟೆ ಶಿಸ್ತಿನ ಬಗೆಗಿನ, ಸಮಯ ಪಾಲನೆ ಬಗೆಗಿನ ಭಾಷಣಕ್ಕಾಗಿ ವ್ಯಯವಾಗಿ ಇನ್ನುಳಿದ ಕಾಲುಘಂಟೆಯಲ್ಲಿ ಮಾಡಿದ ಪಾಠವನ್ನು ಮಕ್ಕಳು ತಪ್ಪಾಗಿ ಒಪ್ಪಿಸಿದರೆ ಶಿಕ್ಷಕರು ಮಕ್ಕಳನ್ನು ಬೈಯುತ್ತಾರೆ, “ಯಾವ ಕತ್ತೆ ನಿನಗೆ ಹೇಳಿ ಕೊಟ್ಟನೋ”. ಈ ಸ್ವಯಂ ಸಂಬೋಧನೆಯಿಂದಾಗಿ ಶಿಕ್ಷಕರು ಹಾಗೂ ಅವರ ಶಿಷ್ಯ ಶಿರೋಮಣಿಗಳಿಗೆ ಮೂರ್ಖ ಸಂಘದ ಸದಸ್ಯತ್ವ ನೀಡಲು ಅಡ್ಡಿಯಿಲ್ಲ.

ಹೀಗೇ ಸಾಗುತ್ತಾ, ಆಫೀಸಿಗೆ ಬನ್ನಿ… “ನಿನ್ನಂಥ ಮೂರ್ಖನನ್ನ ಕೆಲಸಕ್ಕೆ ಇಟ್ಟುಕೊಂಡಿದ್ದೀನಲ್ಲಾ, ನನಗೆ ಬುದ್ಧಿಯಿಲ್ಲ” ಎಂದು ಬಾಸೂ, “ನಿನ್ನ ಹತ್ರ ಕೆಲ್ಸ ಮಾಡ್ತಿದ್ದೀನಲ್ಲಾ, ನನ್ನಂಥ ಮೂರ್ಖ ಬೇರೊಬ್ಬನಿಲ್ಲ” ಅಂತ ಕೆಲಸಗಾರರೂ ಹೇಳುವುದರಿಂದ ಅವರೂ ಗಾಂಪರ ಗುಂಪಿನ ಹೆಮ್ಮೆಯ ಪ್ರಜೆಗಳಾಗುತ್ತಾರೆ. “ಈ ನಾಡಿನಲ್ಲಿ ಹುಟ್ಟಿದೆನಲ್ಲಾ, ನನಗೆ ಬುದ್ಧಿಯಿಲ್ಲ” ಎನ್ನುವ ಜನನಾಯಕರು, “ನಿಮ್ಮ ಮುಂದೆ ಅರಚುತ್ತಿದ್ದೇನಲ್ಲಾ, ಕತ್ತೆ ಮುಂದೆ ಕಿಂದರಿ ಬಾರಿಸಿದ ಹಾಗೆ” ಎನ್ನುವ ಸ್ವಯಂ ಘೋಷಿತ ಸಂಗೀತಗಾರ, “ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ” ಎನ್ನುವ ಕವಿಗಳು ಸಂಬೋಧಿಸುವ ಜನಸಮೂಹವೆಲ್ಲಾ ಮೂರ್ಖರ ಗಣತಿಯ ಲೆಕ್ಕದಲ್ಲಿ ಸೇರುತ್ತಾರೆ.

ಇನ್ನು, “ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ… ಪ್ರೀತಿಸುವವರನ್ನು ಹೀಗಳೆಯುವ ಜಗತ್ತು ಮೂರ್ಖ” ಎನ್ನುವ ಅಮರ ಪ್ರೇಮಿಯ ಪ್ರಕಾರ ತಮ್ಮ ಜೋಡಿಯನ್ನು ಬಿಟ್ಟು ಉಳಿದ ಜಗತ್ತೆಲ್ಲಾ ‘ಮೂರ್ಖ’ ಲೇಬಲ್ಲಿಗೆ ಅರ್ಹ. “ಪ್ರೀತಿಗೆ ಕಣ್ಣು ಮಾತ್ರವಲ್ಲ ಅದಕ್ಕೆ ಮೂಗೂ ಇಲ್ಲ, ಕಿವಿಯೂ ಇಲ್ಲ, ಮೆದುಳಂತೂ ಮೊದಲೇ ಇಲ್ಲ, ಅದಕ್ಕಿರುವುದು ಬರೀ ಬಾಯಿ, ಹೊಟ್ಟೆ ಹಾಗೂ ಅವೆರಡರೊಳಗಿರುವ ಅಗಾಧ ಹಸಿವು ಮಾತ್ರ. ಈ ಪ್ರೇಮಿಗಳು ಭ್ರಾಂತುಗಳು” ಎನ್ನುವವರ ಪ್ರಕಾರ ಪ್ರೇಮದಲ್ಲಿ ಬಿದ್ದಿರುವವರು, ಎದ್ದಿರುವವರು ಎಲ್ಲರೂ ಮೂರ್ಖರು.

ಅವರನ್ನು ಮೊದಲಿಗೆ ಇಡೀ ಜಗತ್ತೇ ಹುಚ್ಚರು ಅಂತ ಕರೆದಿತ್ತು. ಲಿಯನಾರ್ಡೋ ಡವಿಂಚಿ, ಗೆಲಿಲಿಯೋ, ಐನ್ ಸ್ಟೈನ್ ಮುಂತಾದ ಕನಸುಗಾರ ಜೀನಿಯಸ್ಸುಗಳನ್ನು ಜಗತ್ತು ಮೂರ್ಖರು ಎಂದಿತ್ತು. ಗೆಲಿಲಿಯೋನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿತು ಚರ್ಚು. ಜಗತ್ತೇ ಅಂತಹ ಜೀನಿಯಸ್ಸುಗಳನ್ನು ಹುಚ್ಚರು ಅಂತ ಕರೆದಿತು. ಅನಂತರ ಇಡೀ ಜಗತ್ತಿನ ಕಣ್ಣು ತೆರೆದ ಮೇಲೆ ಅವರನ್ನು ಮಹಾನ್ ಬುದ್ಧಿವಂತರು ಎಂದು ಕರೆದು ಪ್ರಾಯಶ್ಚಿತ ಮಾಡಿಕೊಂಡಿತು. ಆ ಮೂಲಕ ಹುಚ್ಚರು ಅವರಲ್ಲ, ಜಗತ್ತು ಎಂದು ಒಪ್ಪಿಕೊಂಡಿತು. ತಾವು ಮೂರ್ಖರು ಅವರು ಜೀನಿಯಸ್ಸುಗಳು ಎಂದು ಜಗತ್ತೇ ಹೆಮ್ಮೆಯಿಂದ ಹೇಳಿಕೊಂಡಿತು.

ಇನ್ನು ನಿಮ್ಹಾನ್ಸ್ ನಿವಾಸಿಗಳನ್ನು ಹುಚ್ಚರು, ಮೂರ್ಖರು ಅನ್ನುತ್ತದೆ ಜಗತ್ತು. ಅಲ್ಲಿರುವ ಯಾರಿಗೂ ಬುದ್ಧಿ ಸರಿಯಿಲ್ಲ ಎನ್ನುತ್ತದೆ ಹೊರಗಿರುವ ಜನ ಸಮೂಹ. ಹೊರಗೆ ನಿಂತು ನೋಡುವವರಿಗೆ ಹುಚ್ಚಾಸ್ಪತ್ರೆಯ ಒಳಗಿರುವವರೆಲ್ಲರೂ ಮೂರ್ಖರಾಗಿ ಕಾಣುತ್ತಾರೆ, ಅದೃಷ್ಟವಶಾತ್ ಡಾಕ್ಟರ್, ನರ್ಸುಗಳನ್ನು ಹೊರತು ಪಡಿಸಿ. ಆದರೆ ಆಸ್ಪತ್ರೆಯ ಒಳಗಿರುವ so called ಮೂರ್ಖರು ಹೇಳುವ ಪ್ರಕಾರ ತಾವು ಸಾಚಾಗಳು, ತಮ್ಮನ್ನು ಇಲ್ಲಿ ಕೂಡಿ ಹಾಕಿರುವ ಜಗತ್ತೇ ಹುಚ್ಚು. ಈ ಆಸ್ಪತ್ರೆಯ ಹೊರಗಿರುವವರೆಲ್ಲರೂ ಹುಚ್ಚರು. ಐನ್ ಸ್ಟೀನ್‍ನ ರಿಲೇಟಿವಿಟಿ ಸಿದ್ಧಾಂತದ ಪ್ರಕಾರ ಬೇರೆ ಬೇರೆ ನೆಲೆಗಳಲ್ಲಿ ನೋಡುವಾಗ ಸತ್ಯ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತದೆ. ಹಾಗಾದರೆ ಎಲ್ಲವೂ ಸತ್ಯವೇ!

ಈ ಎಲ್ಲಾ ವಿಶೇಷ ಸಂಶ್ಲೇಷಣೆ-ವಿಶ್ಲೇಷಣೆಗಳನ್ನು ಪರಿಶೀಲಿಸಿದಾಗ ಏಪ್ರಿಲ್ ಒಂದು ಎಷ್ಟು ಮಹತ್ವದ ದಿನ ಎಂಬುದರ ಅರಿವಾಗದಿರದು. ಇದು ಎಲ್ಲರ ದಿನ ಆದರೂ ಯಾರ ದಿನವೂ ಅಲ್ಲ. ಎಲ್ಲರಿಗೂ ಏಪ್ರಿಲ್ ಒಂದು ಅಂದರೆ ಒಳಗೊಳಗೇ ಖುಶಿ ಆದರೆ ಯಾರೂ ತಮ್ಮನ್ನು ತಾವು ವಿಶ್ ಮಾಡಿಕೊಳ್ಳಲಾರರು. ಆದರೆ ನಗೆ ಸಾಮ್ರಾಟರಿಗೆ ಆ ಚಿಂತೆ ಇಲ್ಲ, ಅವರು ಸಂತೋಷವಾಗಿ, ಹೆಮ್ಮೆಯಿಂದೊಡಗೂಡಿ ವಿಶ್ ಮಾಡಿಕೊಳ್ಳುತ್ತಿದ್ದಾರೆ, ‘happy April First’!

-ನಗೆ ಸಾಮ್ರಾಟ್

ಬ್ಲಾಗ್ ಬೀಟ್ 6

26 ಮಾರ್ಚ್

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ,
ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ
ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು
ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ
ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

 

…………………………………………………..

ಸುದ್ದಿ ಕ್ಯಾತನ ಎಂಟ್ರಿ

ಮೈಸೂರಿನಲ್ಲಿ ಅರಳುವ ಸುಡು ಸುಡು ಕೆಂಡಸಂಪಿಗೆಗೆ ಸುದ್ದಿ ಕ್ಯಾತ ಎಂಟ್ರಿಕೊಟ್ಟಿದ್ದಾನೆ. ವಾರಂಪ್ರತಿ ಬ್ಲಾಗ್ ಬೀಟಿಗೆ ಹೊರಡುವ ನಗೆಸಾಮ್ರಾಟರ ಹಿಂದೇ ಆತ ದಿನಂಪ್ರತಿ ಸುದ್ದಿಯ ಡೇಲಿ ಬೀಟ್ ಹೊಡೆಯುತ್ತಿರುವುದು ಗಮನಕ್ಕೆ ಬಂದಿದೆ.

ಬೊಗಳೆ

ಬಸವನಗುಡಿಯಲ್ಲಿ ಅಂತರ್ಜಾಲದಿಂದ ಉದುರಿದ ನಕ್ಷತ್ರಗಳನ್ನು ಆಯ್ಕೊಂಡು ಬರುವ ವ್ಯರ್ಥ ಪ್ರಯತ್ನದಲ್ಲಿ ಮಗ್ನರಾಗಿ ಎರಡು ದಿನ ಅಂತರಿಕ್ಷದಲ್ಲಿ ನಕ್ಷತ್ರವಾಗಿ ಮತ್ತೆ ‘ತಾರೆ ಜಮೀನ್ ಪರ್’ ಅಂತ ಹಾರುತ್ತಾ ಕೆಳಗಿಳಿದು ಬರುವ ಮುಂಚೆ ನಿಧಾನ ಮಂತ್ರಿಯವರ ಬಳಿ ಅಪರೂಪದ ಸಂದರ್ಶನವನ್ನೂ, ಬೆಲೆ ಏರಿಕೆಗೆ ನೈಜವಾದ, ವೈಜ್ಞಾನಿಕವಾದ ಕಾರಣವನ್ನೂ ಪಡೆದು ಬಂದ ಅನ್ವೇಷಿಗಳು ‘ಈ ಸುದ್ದಿ ನಮ್ಮಲ್ಲಿ ಮಾತ್ರ’ ಎಂದು ಕುಣಿದಾಡುತ್ತಿದ್ದದ್ದು ಬೀಟ್‌ಗೆ ಹೊರಟ ನಗೆ ಸಾಮ್ರಾಟರ ಕಣ್ಣಿಗೆ ಬಿತ್ತು.


ಮದ್ಯಸಾರದ ಕಮೆಂಟ್

ರಘು ಅಪಾರರ ಮದ್ಯಸಾರದ ವ್ಯವಹಾರ ಹುಲುಸಾಗಿಯೇ ಸಾಗಿದೆ.
ಸ್ವಲುಪ ಹೆಚ್ಚಾಗಿ ಒಳಗೆ
ಆತ ಬಿದ್ದಿರುವ ಕೆಳಗೆ
ಎನ್ನುತ್ತದೆ ಮದ್ಯಸಾರದ ಗಮ್ಮತ್ತು.

ಕಮೆಂಟು ಕಮೆಂಟು ರೀ ಎನ್ನುತ್ತಾ ಕಂಡಕಂಡದ್ದರ ಬಗ್ಗೆ ಮಸ್ತಾಗಿ ಕಮೆಂಟು ಬರ್ದಿದ್ದಾರೆ ಕಮೆಂಟೇಶ್ವರ.


ಪೋಲಿ ಮನೆ

ವಿಪರೀತ ಕುತೂಹಲದಿಂದ ಸಂಶಯ-ಚೋದನೆ ಮಾಡುತ್ತಿದ್ದ ಅಜ್ಞಾನಿಗಳಿಗೆ ಕೊನೆಗೂ ಸಿಕ್ಕ ಜಿ ಸ್ಪಾಟಿನ ಬಗ್ಗೆ ಪೋಲಿಮನೆಯಲ್ಲಿ ವರದಿಯಾಗಿದೆ. ಜೊತೆಗೇ ಹಾಸಿಗೆ ಸುಖ ಹೆಚ್ಚಬೇಕಾದರೆ ಗಂಡಸರು ಅಡುಗೆಯನ್ನು ಮಾಡಬೇಕು ಎಂಬ ಹೊಸ ಸಂ-ಶೋಧನೆಯನ್ನು ಬಯಲು ಗೊಳಿಸಿ ಗಂಡಸರ ಹಾಹಾಕಾರಕ್ಕೆ ಕಾರಣವಾಗಿದ್ದಾರೆ ಪೋಲಿ ಮನೆ ನಿವಾಸಿಗಳು.


(ಕಳೆದ ವಾರದ ಬ್ಲಾಗ್ ಬೀಟ್)

ನಗಾರಿ ರೆಕಮಂಡೆಶನ್ 5

26 ಮಾರ್ಚ್

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

………………………………..

ಗೆರೆಗಳ ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ. ಮೊನಚಾದ ಗೆರೆ ಎಳೆಯುವ ಕೈಗಳಿಗೆ ಎಲ್ಲರೂ ಶರಣಾಗಬೇಕು. ಹತ್ತು ಸಾಲಿನ ಗದ್ಯದಲ್ಲಿ ಹೇಳುವುದನ್ನು ನಾಲ್ಕು ಸಾಲಿನ ಪದ್ಯ ಹೇಳುತ್ತದೆಯಂತೆ, ಆ ನಾಲ್ಕು ಸಾಲುಗಳ ಪದ್ಯ ಹೇಳುವುದನ್ನು ಒಂದು ಓರೆಯಾದ ಗೆರೆ ಹೇಳಲು ಪ್ರಾರಂಭಿಸಿದರೇನೆ ಅದನ್ನು ನಾವು ಕಾರ್ಟೂನ್ ಎನ್ನುತ್ತೇವೆ.

ಜನಾರ್ಧನ ಸ್ವಾಮಿ ಎಂಬುವವರು ಚಿತ್ರಿಸಿರುವ ಇಂಥ ಕಾರ್ಟೂನುಗಳ ತಾಣ ಈ ಬಾರಿಯ ನಗಾರಿ ರೆಕಮಂಡೇಶನ್.

ವಿಷಯ ವೈವಿಧ್ಯತೆಯಿಂದ ನಳನಳಿಸುವ ಅವರ ಕಾರ್ಟೂನುಗಳಲ್ಲಿ ಸ್ಯಾಂಪಲ್ಲನ್ನು ಕದ್ದು ತರೋಣವೆಂದು ತಲೆ ಮರೆಸಿಕೊಂಡು ಹೋಗಿದ್ದ ನಗೆ ಸಾಮ್ರಾಟರಿಗೆ ಆ ‘ಗೆರ’ದಾರರು ದೊಡ್ಡ ದೊಡ್ಡದಾಗಿ ಕಾಪಿ ರೈಟು ಡಿಸ್ ಕ್ಲೇಮರುಗಳನ್ನು ಹಾಕಿದ್ದು ಕಂದು ಗಾಬರಿಯಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ!

ವಾರದ ವಿವೇಕ 6

24 ಮಾರ್ಚ್

……………………………………………………

ಕೊನೆಯಲ್ಲಿ ನಗುವವನು

ತುಂಬಾ ನಿಧಾನವಾಗಿ

ಆಲೋಚಿಸುತ್ತಾನೆ.

……………………………………………………

(ಕಳೆದ ವಾರದ ವಾರದ ವಿವೇಕ’)

ಕಾಮಿಡಿ ಕಿಲಾಡಿಗಳು

14 ಮಾರ್ಚ್

ಹಾಸ್ಯಗಾರರು, ಹನಿಗವಿಗಳು, ಹಾಸ್ಯ ಲೇಖಕರು, ಹಾಸ್ಯ ಭಾಷಣಕಾರರು, ಹಾಸ್ಯಾಸ್ಪದ ಮಾತು’ಕೋರರ’ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ನಗಿಸೋದೆ ನಮ್ ಬುಸಿನೆಸ್ಸು ಅಂತ ‘ನಗದ’ ಜನರನ್ನು ನಗ್ಸೋ ಹರಸಾಹಸ ಮಾಡುತ್ತಿರುವವರು ಹಲವರು. ನಗೆಯ ಹಬ್ಬ, ಜಾಗರಣೆ ಮಾಡಿದರು, ಹಾಸ್ಯಕ್ಕೆ ಲಾಸ್ಯವನ್ನು ಬೆರೆಸಿದರು, ಹಾಸ್ಯ ಲೋಕವನ್ನು ತೆರೆದರು.

ಜೀ ಕನ್ನಡ ಚಾನೆಲ್ಲಿನವರು ಹಿಂದಿಯಲ್ಲಿ ಜನಪ್ರಿಯವಾದ laughter challengeನ ತದ್ರೂಪಾಗಿ ಕನ್ನಡದಲ್ಲಿ “ಕಾಮಿಡಿ ಕಿಲಾಡಿಗಳು” ಎಂಬ ಕಾರ್ಯಕ್ರಮ ಆಯೋಜಿಸಿಕೊಂಡಿದೆ. ಎಂಜಲು ಸ್ವೀಕರಿಸಿ ಅಭ್ಯಾಸವಿರುವ ಕನ್ನಡಿಗರಿಗೆ ಸಂತೋಷದ ಸಂಗತಿಯೆಂದರೆ ಈ ಸ್ಪರ್ಧೆಯಲ್ಲಿ ವಿಜೇತರಾದ ‘ಜೋಕ್’ರ್‍ಗೆ ಸಿಗುತ್ತಿರುವುದು ಬರೋಬರಿ ಐದು ಲಕ್ಷ ರೂ ಬಹುಮಾನ.

ಆದರೆ ಈ ಸುದ್ದಿಯನ್ನು ವರದಿ ಮಾಡುವಾಗ ‘ಅದುವೇ ಕನ್ನಡ’ ಪೋರ್ಟಲ್ಲಿನ ಕಿಲಾಡಿ ವರದಿಗಾರ ಹಿಗ್ಗಾಮುಗ್ಗಾ ಜೀ ಟಿವಿಯನ್ನು ಹೊಗಳಿ ಹಾಸ್ಯಾಸ್ಪದವಾಗಿದ್ದಾನೆ.

ವರದಿಯ ಪೂರ್ಣ ಪಾಠ:

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗುವ ವಿನೂತನ ಕಾರ್ಯಕ್ರಮ “ಕಾಮಿಡಿ ಕಿಲಾಡಿಗಳು” ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಹಾಸ್ಯ ಕಾರ್ಯಕ್ರಮವಾಗಿದೆ. ಈ ಸ್ಪರ್ಧೆಗೆ ಕರ್ನಾಟಕದಾದ್ಯಂತದಿಂದ ಸುಮಾರು ನಲವತ್ತಕ್ಕೂ ಹೆಚ್ಚು ಹಾಸ್ಯ ಕಲಾವಿದರನ್ನು ಹಾಸನ, ಮೈಸೂರು, ಗುಲ್ಬರ್ಗ, ಮಂಗಳೂರು, ದಾವಣಗೆರೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದ ಪ್ರಥಮ ಹಂತವಾಗಿ ಈಗ ಕರ್ನಾಟಕದ ಖ್ಯಾತ ಕಲಾವಿದರ ಹಾಸ್ಯ ವಿನೋದಾವಳಿ ಪ್ರಸಾರ ಕಾಣುತ್ತಿದೆ. ಮಾರ್ಚ್15ರಿಂದ ಕರ್ನಾಟಕದಾದ್ಯಂತದಿಂದ ಆಯ್ಕೆಯಾದ ಕಲಾವಿದರ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜಯಶಾಲಿಯಾಗುವ ಕಲಾವಿದರಿಗೆ ಸುಮಾರು ಐದು ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುವುದು.

‘ಸುತ್ತಲಿರುವ ಪ್ರಪಂಚವನ್ನು ನೋಡು ಮತ್ತು ನಗು” ಎಂಬ ಉದ್ದೇಶವುಳ್ಳ ಜೀ ಕನ್ನಡದ “ಕಾಮಿಡಿ ಕಿಲಾಡಿಗಳು” ಕರ್ನಾಟಕದ ವೀಕ್ಷಕರಿಗೆ ಮನರಂಜನೆಯನ್ನು ಒದಗಿಸುವುದಲ್ಲದೇ ವಿನೂತನ ಕಾರ್ಯಕ್ರಮಕ್ಕೆ ವೇದಿಕೆಯೊಂದನ್ನು ಕಲ್ಪಿಸಲಿದೆ. ಕನ್ನಡದ ವಾಹಿನಿಗಳು ಧಾರಾವಾಹಿ, ಸುದ್ದಿ, ಸಿನಿಮಾ ಮತ್ತು ಸರಿಗಮಪ ರೀತಿಯ ಸಂಗೀತಮಯ ಕಾರ್ಯಕ್ರಮಗಳಿಗೆ ಮಾತ್ರವೇ ಫೇಮಸ್ಸು ಎಂಬ ಮಾತನ್ನು ಜೀ ಕನ್ನಡ ವಾಹಿನಿಯು ಈಗಾಗಲೇ ತನ್ನ ಕುಣಿಯೋಣು ಬಾರಾ, ಎಸ್ಸೆಲ್ ಶ್ರೇಷ್ಠ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ ಮುಂತಾದ ಕಾರ್ಯಕ್ರಮಗಳ ಮೂಲಕ ಅಲ್ಲಗಳೆದಿದ್ದು, ಈಗ “ಕಾಮಿಡಿ ಕಿಲಾಡಿಗಳು” ಎಂಬ ವಿನೂತನ ಹಾಸ್ಯಮಯ ಪ್ರದರ್ಶನದಿಂದ ಕನ್ನಡದ ಕಿರುತೆರೆ ಏನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಲಿದೆ.

ಸದಾ ಹೊಸತನವನ್ನು ಹುಡುಕುವ ಜೀ ಕನ್ನಡ ಈ ಬಾರಿ ಹಾಸ್ಯವನ್ನೇ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿದ್ದು ‘ಕಾಮೆಡಿ ಕಿಲಾಡಿಗಳು” ಎಂಬ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲಿದೆ, ಕರ್ನಾಟಕದ ವಿವಿದೆಡೆ ಅಡಗಿರುವ ಹಾಸ್ಯ ಕಲಾವಿದರನ್ನು ಬೆಳಕಿಗೆ ತರಲು “ಕಾಮಿಡಿ ಕಿಲಾಡಿಗಳು” ಸಹಕಾರಿಯಾಗಲಿದೆಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

– ನಗೆ ಸಾಮ್ರಾಟ್

ಜಾರು ಬುಸ್ ಹೇಳಿಕೆಯಲ್ಲಿ ವ್ಯಾಕರಣ ದೋಷ

14 ಮಾರ್ಚ್

(ನಗಾರಿ ಅಂತರಾಷ್ಟ್ರೀಯ ಬ್ಯೂರೋ)

“ಭಾರತ ಸರ್ಕಾರ ಸಾಮಾನ್ಯವಾಗಿ ತನ್ನ ಪ್ರಜೆಗಳ ಹಕ್ಕುಗಳಿಗೆ ಗೌರವ ನೀಡುತ್ತಿದ್ದರೂ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ನಡೆಯುತ್ತಿದೆ” ಎಂಬ ಜಾರು ಬುಸ್ ಹೇಳಿಕೆ ತೀವ್ರವಾದ ವಿವಾದಕ್ಕೆ ಕಾರಣವಾಗಿದೆ.

ಕೊರಿಯಾ, ಕ್ಯೂಬಾ, ಇರಾಕ್, ವಿಯೆಟ್ನಾಂ, ಅಫಘಾನಿಸ್ಥಾನದ ಮೇಲೆ ಯುದ್ಧ ಸಾರಿದ ಹಾಗೂ ಕೋಟ್ಯಂತರ ಮಂದಿಯ ಪ್ರಾಣವನ್ನೇ ಕಸಿದುಕೊಂಡ ಅಮೇರಿಕಾ ಸಂಪ್ರದಾಯಕ್ಕಾದರೂ ಒಂದು ಬಾರಿಯೂ ಯಾರೊಬ್ಬರ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋಗದ ಭಾರತಕ್ಕೆ ರಾಜನೀತಿಯ ಪಾಠವನ್ನು ಹೇಳಿಕೊಡಲು ಮುಂದಾಗಿರುವ ಸಂಗತಿ ಅನೇಕ ಪಾರ್ಟ್ ಟೈಂ ಚಿಂತಕರಲ್ಲಿ ತೀವ್ರವಾದ ಆಕ್ರೋಶ ಮೂಡಿಸಿದೆ.

ಈ ಬಗ್ಗೆ ಸ್ಪಷ್ಟನೆಯನ್ನು ಬಯಸಿ ಅಮೇರಿಕಾ ವ್ಯಾಮೋಹಿ, ಮಾನವ ಹಕ್ಕು ಸಂರಕ್ಷಕ ಎನ್.ಜಿ.ಓ ಅಧಕ್ಷರೊಬ್ಬರನ್ನು ಸಂಪರ್ಕಿಸಿದಾಗ, “ಅಮೇರಿಕಾ ಹೇಳೋದು ಸರಿ. ಭಾರತದಲ್ಲಿ ಎಷ್ಟು ಭೀಕರವಾದ ಮಾನವ ಹಕ್ಕುಗಳ ಉಲ್ಲಂಘನೆಯು ನಡೆಯುತ್ತಿದೆ, ನೂರಾರು ಮಂದಿ ಪೋಲೀಸ್ ಸಿಬ್ಬಂದಿಯ ಪ್ರಾಣ ತೆಗೆದುಕೊಂಡು ಅವರನ್ನೇ ಅವಲಂಬಿಸಿದವರನ್ನು ಅನಾಥರನ್ನಾಗಿ ಮಾಡಿದ, ನಾಡಿನ ವರನಟನನ್ನು ಹಣಕ್ಕಾಗಿ ಅಪಹರಣ ಮಾಡಿದ, ನಾಡಿನ ಜನಪ್ರತಿನಿಧಿಯನ್ನು ಹೊತ್ತೊಯ್ದು ಕೊಂದು ಸಾಧನೆ ಗೈದ ಶ್ರೀಯುತ ವೀರಪ್ಪನ್ ಪೋಲೀಸರ ಅಮಾನವೀಯ ಗುಂಡಿಗೆ ಬಲಿಯಾಗಲು ಮಾಡಿದ್ದ ತಪ್ಪಾದರೂ ಏನು? ದೇಶದ ಪಾರ್ಲಿಮೆಂಟಿನ ಮೇಲೆ ದಾಳಿ ಮಾಡಲು ನೆರವಾದ ಮಹಾತ್ಮಾ ಅಫ್ಜಲ್ ಗುರುವಿಗೆ ಮರಣದಂಡನೆಯನ್ನು ವಿಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ? ಎಲ್ಲಾ ಸಂಗತಿಗಳಲ್ಲೂ ಹಿರಿಯಣ್ಣನೆನಿಸಿಕೊಂಡಿರುವ ಅಮೇರಿಕಾ ಎಂದೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಉದಾಹರಣೆಗಳಿಲ್ಲ. ಜಪಾನಿನ ಮೇಲೆ ಅಣು ಬಾಂಬ್ ದಾಳಿಯನ್ನು ಮಾಡಿ ಲಕ್ಷಾಂತರ ಮಂದಿಯ ಪ್ರಾಣವನ್ನು ಆಹುತಿ ತೆಗೆದುಕೊಂಡದ್ದಾಗಲೀ, ಇರಾಕಿನಲ್ಲಿ ಮುಗ್ಧರ ಪ್ರಾಣಹರಣ ಮಾಡಿದ್ದಾಗಲೀ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ. ಕಾರಣ, ಅಮೇರಿಕಾವನ್ನು ಬೆಂಬಲಿಸದ, ಅಮೇರಿಕಾದ ಜಪ ಮಾಡದವರು ಯಾರೂ ಮಾನವರೇ ಅಲ್ಲ. ಹೀಗಿರುವಾಗ ಅವರನ್ನು ಕೊಂದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಾದರೂ ಹೇಗೆ?” ಎಂದು ಕೇಳಿ ನಮ್ಮ ವದರಿಗಾರನನ್ನೇ ಕಕ್ಕಾವಿಕ್ಕಿಯಾಗಿಸಿದರು.

‘ವಿ’ ಬ್ರಾಂಡ್ ಪತ್ರಿಕೆಯ ಫೈರ್ ಬ್ರಾಂಡ್ ಪತ್ರಕರ್ತ ಎಂದು ಹೆಸರು ವಾಸಿಯಾಗಿರುವ ಉಗ್ರ, ವ್ಯಗ್ರ ಉರಿತಾಪ ಸಿಂಹರನ್ನು ಈ ಬಗ್ಗೆ ಸಂದರ್ಶಿಸಿದಾಗ,“ಇದರಲ್ಲಿ ಅಮೇರಿಕಾದ್ದು ಯಾವ ತಪ್ಪೂ ಇಲ್ಲ. ಆ ಬುಸ್ ಮಾಡಿದ್ದೆಲ್ಲವೂ ಸರಿ. ನಮ್ಮ ನರೇಂದ್ರ ಮೋದಿ ಮಾಡಿದ್ದನ್ನೇ ಆತನೂ ಮಾಡಿದ್ದಾನೆ. ‘ಅಭಿವೃದ್ಧಿ’ಯನ್ನು ಸಹಿಸಲಾರದ ಈ ಎಡಬಾಧೆಯ ಮಂದಿಗೆ ಅಮೇರಿಕಾವನ್ನು ಟೀಕಿಸದಿದ್ದರೆ ಉಂಡದ್ದು ಅರಗುವುದೇ ಇಲ್ಲ. ಆದರೂ ಜಾರು ಬುಸ್ಯಾ ಹೇಳಿಕೆಯನ್ನು ಭಾರತದ ಸಾವಿರಾರು ವರ್ಗದ ‘ಅಖಂಡ’ ಹಿಂದೂ ಸಮಾಜ ಉಗ್ರವಾಗಿ, ವ್ಯಗ್ರವಾಗಿ ವಿರೋಧಿಸಬೇಕು. ಮತಾಂತರ ವಿರೋಧಿಸಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿರುವುದರ ಹಿಂದೆ ಕ್ರೈಸ್ತ ಮಶೀನುಗಳ ‘ಕೈ’ವಾಡವಿದೆ.” ಎಂದು ಹೇಳಿದರು.

ಹೇಳಿಕೆ, ಪ್ರತಿ ಹೇಳಿಕೆ ಒಗ್ಗೂಡಿಸಿಕೊಂಡು ನಗಾರಿಯ ಕಛೇರಿಗೆ ಬಂದ ವದರಿಗಾರ ಅದನ್ನು ನಗೆ ಸಾಮ್ರಾಟರಿಗೆ ಓದಲು ಕೊಟ್ಟ. ನಗೆ ಸಾಮ್ರಾಟರು,” ಅಯ್ಯೋ, ಆ ಜಾರು ಬುಸ್ಯಾ ಸ್ಪೆಲ್ಲಿಂಗಿನಲ್ಲಿ ಸ್ವಲ್ಪ ವೀಕು. ಮಾವನ ಹಕ್ಕುಗಳ ಉಲ್ಲಂಘನೆ ಎನ್ನುವುದರ ಬದಲು ‘ಮಾನವ ಹಕ್ಕು’ ಅಂತ ಮಿಸ್ಟೇಕು ಮಾಡಿದ್ದಾನೆ ಅಷ್ಟೇ” ಎಂದರು ಸಂತನ ಸಮಾಧಾನದಿಂದ.

ಜೋಕುಮಾರಸ್ವಾಮಿ ಅಸ್ಥಿ: ತನಿಖೆಗೆ ಬಿದ್ದೆರಾಮಯ್ಯ ಸವಾಲು

14 ಮಾರ್ಚ್

”ಮಾಜಿ ಮುಖ್ಯಮಂತ್ರಿ ಜೋಕುಮಾರ ಸ್ವಾಮಿಯವರು ಶಾಸಕರಾಗುವ ಮೊದಲು ಅವರ ಮೈಯಲ್ಲಿ ಎಷ್ಟು ಅಸ್ಥಿ ಇತ್ತು ಈಗ ಎಷ್ಟಿದೆ ಎಂದು ತನಿಖೆಯಾಗಲಿ” ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಅಹಿಂದ ತಂತ್ರಿ ಬಿದ್ದೆ ರಾಮಯ್ಯನವರು ತೀವ್ರವಾಗಿ ಆಗ್ರಹಿಸಿದ್ದಾರೆ.

ಈ ವರದಿಯ ಬೆನ್ನು ಹತ್ತಿ ಬಿದ್ದೆ ರಾಮಯ್ಯನವರನ್ನು ಬೆನ್ನತ್ತಿದ ನಮ್ಮ ಒದರಿಗಾರನಿಗೆ ಅವರು ಹೀಗೆ ಹೇಳಿಕೆ ನೀಡಿದ್ದಾರೆ: “ಸ್ವಯಂ ಘೋಷಿತ ಮಣ್ಣಿನ ಮಗನ ಸುಪುತ್ರನಾಗಿ ಹುಟ್ಟಿರುವ ಜೋಕುಮಾರರು ಮು.ಮ ಆಗುವ ಮೊದಲು ಎಷ್ಟು ಅಸ್ಥಿಯನ್ನು ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಮನುಷ್ಯನ ದೇಹದಲ್ಲಿ ನೈಸರ್ಗಿಕವಾಗಿ ೨೦೬ ಅಸ್ಥಿಗಳಿರುತ್ತವೆ. ಅವರಲ್ಲಿ ಒಂದೆರಡು ಹೆಚ್ಚು ಕಮ್ಮಿ ಇದ್ದಿರಬಹುದು. ಆದರೆ ಮು.ಮ ಆದ ನಂತರ ಅವುಗಳು ಎಷ್ಟಿವೆ ಎಂಬುದನ್ನು ಬಿಸಿ-ಬಿಸಿ ಹೈನವರೇ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತೇನೆ”

ಮು.ಮ ಆದ ನಂತರ ಜೋಕುಮಾರ ಸ್ವಾಮಿಯವರ ಅಸ್ಥಿಯಲ್ಲಿ ಏನು ಬದಲಾವಣೆಯಾಗಿದೆ ಎಂಬ ನಮ್ಮ ವದರಿಗಾರನ ಪ್ರಶ್ನೆಗೆ ಬಿದ್ದೆರಾಮಯ್ಯನವರು, ” ಜೋಕುಮಾರ ಮುಖ್ಯ ಮಂತ್ರಿಯಾಗುವ ಮೊದಲು ನಾನು ಉಪ ಮುಖ್ಯ ಮಂತ್ರಿಯಾಗಿದ್ದೆ. ನನ್ನ ಶಕ್ತಿಯ ಬಗ್ಗೆ ಹಲವರಿಗೆ ತಿಳಿದಿಲ್ಲ. ನಾನ್ಯಾರು ಅಂತ ನನಗೇ ತಿಳಿದಿಲ್ಲ. ಅವತ್ತು ಯಾವುದೋ ಕಟ್ಟಡ ಶಂಕುಸ್ಥಾಪನೆಗೋ ಯಾವುದಕ್ಕೋ ಹೋಗಿದ್ದಾಗ ನಾನೇ ಜೆ.ಸಿ.ಬಿ ಮಶೀನು ಓಡಿಸಿ ಒಬ್ಬನ ಕಾಲ ಮೇಲೆ ಹರಿಸಿ ಅವನ ಕಾಲಿನ ಅಸ್ಥಿಯನ್ನೆಲ್ಲಾ ಪುಡಿ ಮಾಡಿದ್ದನ್ನು ಮರೆತುಬಿಟ್ಟಿರಾ? ನನ್ನನ್ನು ಹೇಳದೆ ಕೇಳದೆ ಕೆಳಕ್ಕಿಳಿಸಿ ಗೇಟ್ ಪಾಸ್ ಕೊಟ್ಟು ಮಗನನ್ನು ಮುಖ್ಯ ಮಂತ್ರಿ ಮಾಡಿದ ಮಣ್ಣಿನ ಮಗನ ನೆಮ್ಮದಿ ಹಾಳು ಮಾಡಲು ನಾನು ಪಟ್ಟ ಪ್ರಯತ್ನ ಎಷ್ಟು? ನಾನು ಎಷ್ಟು ಗಟ್ಟಿ ಆಸಾಮಿ ಅಂತ ನಿಮಗೆ ಗೊತ್ತಿಲ್ಲದಿದ್ದರೆ ಆ ಫೈರ್ ಮಹಾದೇವುಗೆ ಕೇಳಿ, ನನ್ನ ಪಂಚ್ ಹೆಂಗಿತ್ತು ಅಂತ. ಜೋಕುಮಾರ ಮುಖ್ಯ ಮಂತ್ರಿಯಾಗಿದ್ದಾಗ ನಾನು ಅದೇಷ್ಟೋ ಇಂತಹ ಪಂಚುಗಳನ್ನು ಮಾಡಿದ್ದೀನಿ. ಕೊನೆಗೆ ಇಪ್ಪತ್ತು ತಿಂಗಳು ಆದ ನಂತರ ಮುಖ್ಯ ಮಂತ್ರಿ ಸೀಟು ಮುರಿದು ಬೀಳೋಹಂಗೆ ಏರ್ಪಾಡು ಮಾಡಿದ್ದೆ. ಮೇಲಿಂದ ಬಿದ್ದಾಗ ಅಸ್ಥಿ ಮುರಿದಿರಲು ಸಾಧ್ಯವಿಲ್ಲವೇ? ಇಷ್ಟೆಲ್ಲಾ ಆಗಿರುವುದರಿಂದ ಜೋಕುಮಾರ ಸ್ವಾಮಿಯ ಅಸ್ಥಿಯ ವಿಚಾರಣೆಯನ್ನು ಬಿಸಿ-ಬಿಸಿ ಹೈನವರಿಗೇ ವಹಿಸಬೇಕು” ಎಂದರು.

ಈ ಮಧ್ಯೆ ನಮ್ಮ ವದರಿಗಾರ ಜೋಕುಮಾರ ಸ್ವಾಮಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಂಡನ್ನಿನಿಂದ ಆಗಮಿಸಿದ ‘ಮಣ್ಣಿನ ಮೊಮ್ಮಗು’ವನ್ನು ಆಟವಾಡಿಸುವುದರಲ್ಲಿ ಮಗ್ನರಾಗಿದ್ದಾರೆಂದು ತಿಳಿದು ಬಂದಿತು.