Archive | ಜುಲೈ, 2008

ಬುದ್ಧಿವಂತರಿಗೆ ಕಾಲವಲ್ಲ, ಈ ದೇಶದಲ್ಲಿ!

29 ಜುಲೈ

(ನಗೆ ನಗಾರಿ ಸಂಶಯ-ಚೋದನಾ ಬ್ಯೂರೋ)

‘ನಮ್ಮ ಸಮಾಜದಲ್ಲಿ ಬುದ್ಧಿವಂತರು ಎಲ್ಲರಿಗಿಂತ ಶೋಷಿತರಾದ ವರ್ಗದವರು. ಶೋಷಿತರಲ್ಲೇ ಆತ್ಯಂತ ಶೋಷಿತರೂ, ಅಸಂಘಟಿತರೂ ಆಗಿರುವಂಥವರು ಇವರು. ಮೇಲಾಗಿ ಇವರು ಅಲ್ಪಸಂಖ್ಯಾತರು. ಇದಕ್ಕೆ ನಮ್ಮ ಸರಕಾರವನ್ನು ಅಭಿನಂದಿಸಬೇಕೆಂಬ ಅಂಶ ನನ್ನ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ’ ಎಂದು ಖ್ಯಾತ ಚಿಂತಕ, ದಾರ್ಶನಿಕ ಶ್ರೀಯುತ ಹಂಗ್ಯಾಕ ಹಾರುತಿಯವರು ನಮ್ಮ ವರದಿಗಾರನಿಗೆ ತಿಳಿಸಿದ್ದಾರೆ.

‘ಭಾರತದಂಥ ದೇಶ ಬುದ್ಧಿವಂತರಿಗೆ ನರಕದಂಥದ್ದು. ಇಲ್ಲಿ ಬುದ್ಧಿವಂತರು ಹುಟ್ಟಲೇಬಾರದು. ಆದರೂ ಇತಿಹಾಸದ ವಿಪರ್ಯಾಸ ನೋಡಿ, ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಇಲ್ಲೇ ಹೆಚ್ಚು ಮಂದಿ ಬುದ್ಧಿವಂತರು ಹುಟ್ಟುತ್ತಾರೆ. ಅವರ ಜನ ಸಂಖ್ಯೆ ಸ್ಫೋಟ ನಡೆಯುತ್ತಿದೆ. ಒಂದು ವೇಳೆ ಸರಕಾರವೇನಾದರೂ ಕಠಿಣವಾದ ಕಾನೂನು ರೂಪಿಸಿ ಬುದ್ಧಿವಂತರು ಇಲ್ಲಿ ಹುಟ್ಟಬಾರದು ಎಂದೇನಾದರೂ ಅಪ್ಪಣೆ ಹೊರಡಿಸಿದರೆ ದೇಶದಲ್ಲಿನ ಜನನ ಪ್ರಮಾಣ ಸೊನ್ನೆಗೆ ಕುಸಿದು ಬಿಡುತ್ತದೆ. ಭಾರತದ ನೆಲದಲ್ಲಿ ಇಷ್ಟು ಮಂದಿ ಬುದ್ಧಿವಂತರು ಕ್ಷಣ ಕ್ಷಣಕ್ಕೂ ಕಣ್ಣು ಬಿಡುತ್ತಾರೆ ಎಂದರೆ ನಂಬಲು ಸಾಧ್ಯವಾಗುತ್ತದೆಯೇ?

‘ಹೀಗೆ ಭಾರತದ ನೆಲದ ಮೇಲೆ ಹುಟ್ಟಿದ ಎಲ್ಲಾ ಬುದ್ಧಿವಂತರನ್ನು ಸರಿಯಾಗಿ ಪಾಲಿಸಿ ಪೋಷಿಸಿ ಸರಿಯಾದ ಆರೈಕೆ ಮಾಡಿಬಿಟ್ಟರೆ ಮುಂದೆ ದೇಶ ತುಂಬೆಲ್ಲಾ ಅವರೇ ತುಂಬಿಕೊಂಡು ತಮ್ಮ ಅಸ್ತಿತ್ವಕ್ಕೇ ಸಂಚಕಾರವಾಗಿಬಿಡುತ್ತಾರೆ ಎಂದು ಆಲೋಚಿಸಿದ ನಮ್ಮ ಕ್ರೂರ ಸರಕಾರಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಈ ಬುದ್ಧಿವಂತ ಜನಾಂಗವನ್ನೇ ನಾಶ ಮಾಡುವ ಕೈಂಕರ್ಯ ನಾಗರೀಕತೆಯ ಉಗಮದಲ್ಲೇ ತೊಟ್ಟಿದ್ದು ಕಂಡು ಬರುತ್ತದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರದದ್ದು. ಸರ್ಕಾರಿ ಡಾಕ್ಟರುಗಳೆಂಬ ‘ಸೇನಾಧಿಪತಿ’ಗಳನ್ನು ಕಳುಹಿಸಿದ್ದು. ಅವರು ಸರಕಾರದ ಕೆಲಸವನ್ನು ಬಹಳ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಭೂಮಿಗೆ ಬಂದ ಬಹುತೇಕ ಬುದ್ಧಿವಂತರಲ್ಲಿ ತಮ್ಮ ಕೈಲಾದಷ್ಟು ಮಂದಿಯನ್ನು ವಾಪಸ್ಸು ಬಂದ ಜಾಗಕ್ಕೇ ಕಳುಹಿಸುವ ಮೂಲಕ ನಮ್ಮ ದೇಶದ ಶಿಶುಪಾಲನಾ ವ್ಯವಸ್ಥೆ ತನ್ನ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.

‘ಇನ್ನು ನಮ್ಮ ಸಮೂಹ ಪ್ರಜ್ಞೆಯಲ್ಲಿ ಧರ್ಮ, ಧರ್ಮ ಗುರುಗಳು ಹಾಗೂ ಚಿಂತಕರು ಬಿತ್ತಿದ ಕೆಲವು ಬೀಜಗಳು ಮೊಳೆತು ಬಲಿತ ಹಣ್ಣುಗಳನ್ನು ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ‘ಗಂಡು ಮಗು ಹೆತ್ತವನಿಗೆ ಮಾತ್ರ ಮುಕ್ತಿ’ ‘ಮನೆಯ ಮಗಳು ಎಂದಿಗೂ ಗಂಡನ ಮನೆ ಸೇರುವವಳು’ ‘ವರದಕ್ಷಿಣೆ’ ಎಂಬಂಥ ಕಟ್ಟುಮಸ್ತಾದ ಬೀಜಗಳನ್ನು ಬಿತ್ತಿದ ಇವರು ಇನ್ನಷ್ಟು ಮಂದಿ ಬುದ್ಧಿವಂತರು ಈ ಭೂಮಿಯ ಮೇಲೆ ನಡೆದಾಡುವುದನ್ನು ತಪ್ಪಿಸಿದ್ದಾರೆ.

‘ಮೊಳಕೆಯಲ್ಲೇ ಇಷ್ಟೆಲ್ಲಾ ಸಂಕಷ್ಟಗಳನ್ನು, ಬಾಲ ಪೀಡೆಯನ್ನೂ ದಾಟಿ ಬರುವ ಬುದ್ಧಿವಂತರನ್ನು ವ್ಯವಸ್ಥಿತವಾಗಿ ‘ಮತಾಂತರ’ಗೊಳಿಸುವುದಕ್ಕಾಗಿಯೇ ಆಡಳಿತಗಾರರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದರು. ‘ಬುದ್ಧಿವಂತರನ್ನು ಕೊಲ್ಲಲಾಗದಿದ್ದರೆ ಅವರಲ್ಲಿನ ಬುದ್ಧಿವಂತಿಕೆಯನ್ನು ಉಸಿರುಗಟ್ಟಿಸಿ ಸಾಯಿಸಿಬಿಡು’ ಎಂಬ ಒಂದಂಶದ ಕಾರ್ಯಕ್ರಮವನ್ನು ಇಟ್ಟುಕೊಂಡ ಶಿಕ್ಷಣ ಸಂಸ್ಥೆಗಳು. ವರ್ಷಂಪ್ರತಿ ಆ ಕೆಲಸದಲ್ಲಿ ತಮ್ಮ ಸಮಸ್ತ ಪ್ರಯತ್ನವನ್ನೂ ವಿನಿಯೋಗಿಸಿ ‘ಬುದ್ಧಿವಂತಿಕೆ’ ಸತ್ತ ದೇಹಗಳನ್ನು ಸಮಾಜಕ್ಕೆ ದಾಸ್ತಾನು ಮಾಡುತ್ತಿವೆ.

‘ಎಷ್ಟೇ ದಕ್ಷ ಎಂದರೂ ಸಹ ನಮ್ಮ ಸರಕಾರಗಳ ಯೋಜನೆ, ವ್ಯವಸ್ಥೆಗಳಿಂದ ಕೆಲವು ಬುದ್ದಿವಂತರು ತಪ್ಪಿಸಿಕೊಂಡು ಬಿಡುತ್ತಾರೆ. ಅವರು ತಮ್ಮ ಮೇಲಾಗುವ ಎಲ್ಲಾ ಆಕ್ರಮಣಗಳಿಂದ ತಮ್ಮ ಬುದ್ಧಿವಂತಿಕೆಯನ್ನು ರಕ್ಷಿಸಿಕೊಂಡು ಬದುಕುಳಿಯುತ್ತಾರೆ. ಅಂಥವರನ್ನು ನೋಡಿಕೊಳ್ಳುವುದಕ್ಕಾಗಿಯೇ ನಮ್ಮ ದೇಶ ಅದ್ಭುತವಾದ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ: ಬುದ್ಧಿವಂತಿಕೆಯನ್ನು ಸಾರಾಸಗಟಾಗಿ ಅವಮಾನಿಸುವುದು. ಬುದ್ಧಿವಂತಿಕೆಗೆ ತಕ್ಕ ಸ್ಥಾನವನ್ನು ಕೊಡದೆ ಇರುವುದು. ಬುದ್ಧಿವಂತಿಕೆ ಅಭಿವ್ಯಕ್ತಿಗೊಳ್ಳಲು ಇರುವ ಅವಕಾಶಗಳ ಬಾಗಿಲುಗಳೆಲ್ಲವನ್ನೂ ಮುಚ್ಚಿಬಿಡುವುದು. ಜಾತಿಯ ಹೆಸರಿನಲ್ಲಿ ಮಣ್ಣನೆ, ಧರ್ಮದ ಹೆಸರಿನಲ್ಲಿ ಮೀಸಲಾತಿ, ಬಡತನದ ಹೆಸರಿನಲ್ಲಿ ಗೌರವ, ತಂದೆಯ ಹೆಸರಿನ ಶಕ್ತಿಯ ಮೇಲೆ ಸ್ಥಾನಮಾನ, ಮಂತ್ರಿಯ ಕೃಪಾಕಟಾಕ್ಷದ ಮಹಿಮೆಯ ಮೇಲೆ ಅವಕಾಶ ಇವಷ್ಟೇ ಅಲ್ಲದೆ ಇನ್ನೂ ಕೆಲವು ‘ರಾಸಾಯನಿಕ’ಗಳ ಸಹಾಯದಿಂದ ಬುದ್ಧಿವಂತಿಕೆಯನ್ನು ಕೊಳೆಸಲು ಶುರುಮಾಡುತ್ತದೆ.

‘ಇವೆಲ್ಲವನ್ನೂ ತಡೆದುಕೊಂಡು, ಪ್ರತಿರೋಧ ಒಡ್ಡಿಕೊಂಡು ಉಳಿದುಕೊಳ್ಳುವ ಬುದ್ಧಿವಂತರನ್ನೂ ಸಹ ಸರಕಾರ ಸಹಿಸಿಕೊಳ್ಳುವುದಿಲ್ಲ. ಅವರನ್ನು ರ್ಯಾಕೆಟ್ಟಿನಿಂದ ಚಿಮ್ಮುವ ಟೆನ್ನಿಸ್ ಬಾಲುಗಳ ಹಾಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಗುವಂತೆ ಮಾಡಿಬಿಡುತ್ತದೆ. ಬುದ್ಧಿವಂತಿಕೆ ಎಂಬುದು ದೇಶದಿಂದಲೇ ಪಲಾಯನ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಹೀಗೆ ಅತ್ಯಂತ ವ್ಯವಸ್ಥಿತಿವಾಗಿ, ಆತ್ಯಂತಿಕವಾಗಿ ಪ್ರಯತ್ನ ಪಡುವ ಸರಕಾರಗಳಿಂದಾಗಿ ನಮ್ಮ ದೇಶ ಯಾವಾಗಲೂ ‘ಬುದ್ಧಿವಂತಿಕೆ ರಹಿತ’ ದೇಶವಾಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಂಶ ನನ್ನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ’ ಎಂದಿದ್ದಾರೆ.

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

28 ಜುಲೈ

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)

ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು ನಗೆ ಸಾಮ್ರಾಟರಾಗಿಯಾಗಿ ನಾಡಿನ ಬಹುತೇಕ ‘ನಗೆ’ಜೀವಿಗಳ ನಾಳಿನ ಬದುಕಿನ ಆಶಾಕಿರಣವಾಗಿತ್ತು. ಮನುಷ್ಯ ಕುಲದ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವ ಏಕೈಕ ನೆಪವಾಗಿತ್ತು. ಆದರೆ ಈಗ ಆ ಒಂದು ಆಸರೆಯೂ ಕೈತಪ್ಪಿ ಹೋಗಿ ವಿಶ್ವಾಸಮತದ ಸಂದರ್ಭದಲ್ಲಿ ಕೈಕೊಟ್ಟ ಸಂಸದರಿಂದಾಗಿ ಡೋಲಾಯಮಾನ ಸ್ಥಿತಿಗೆ ತಲುಪುವ ಸರಕಾರದ ಹಾಗೆ ನಗೆ ಸಾಮ್ರಾಟರು ಕನಲಿಹೋಗಿದ್ದಾರೆ.

ಕರ್ನಾಟಕವೆಂಬ ದಕ್ಷಿಣ ಭಾರತದ ಕೋಟೆಯ ಬಾಗಿಲನ್ನು ಗುದ್ದಿ ತೆರೆದುಕೊಂಡು ಒಳಕ್ಕೆ ನುಗ್ಗಿದ ಮಾನ್ಯ ಮುಖ್ಯ ಮಂತ್ರಿ ಎಡಿಯೂರಿಯಪ್ಪನವರ ಹಿಂದೆ ಮುಂದೆ ಅಕ್ಕ ಪಕ್ಕದಲ್ಲಿದ್ದ ಕಾಂತಿಗೆ ಕಾರಣ ನಮ್ಮ ಸದಾ ಆನಂದ ಗೌಡರ ನೀಟಾಗಿ ಉಜ್ಜಿದ ಬಿಳುಪಾದ ಹಲ್ಲುಗಳು. ಕಮಲದ ಪಕ್ಷ ಬಳ್ಳಾರಿಯ ಧಣಿಗಳು ಎಬ್ಬಿಸಿದ ಧೂಳಿನ ನಡುವೆಯೂ ಪ್ರಕಾಶಮಾನವಾಗುವುದಕ್ಕೆ ಗೌಡ್ರ ಕೊಲ್ಗೇಟ್ ನಗುವೇ ಕಾರಣ. ಆದರೆ ಚುನಾವಣೆ ನಡೆದು ಬಿಜೆಪಿ ಅದ್ಯಾವ ಮಾಯದಲ್ಲೋ ಗೆದ್ದು ಬಿಟ್ಟು ಯಡಿಯೂರಿಯಪ್ಪನವರಿಗೆ ತಾವು ಕಾಣುತ್ತಿರುವುದು ಕನಸೋ, ನನಸೋ ತಿಳಿಯದೆ ತಾವು ಮುಖ್ಯಮಂತ್ರಿಯೋ, ವಿರೋಧ ಪಕ್ಷದ ನಾಯಕನೋ ಎಂದು ಗೊಂದಲವಾಗಿ ಮಾತಾಡಲು ಶುರು ಮಾಡಿದ್ದಾರೆ. ಮೊನಾಲಿಸಾ ನಗೆಯ ಹಿಂದಿನ ರಹಸ್ಯಗಳನ್ನು, ನಿಗೂಢತೆಯನ್ನು ಕಂಡು ಬೆಚ್ಚಿದ ಜನರು ಆಕೆಯ ನಗೆಯನ್ನೇ ನಾಶ ಮಾಡಲು ಹೊರಟಂತೆ ಒಂದು ಕಡೆಯಿಂದ ಬಳ್ಳಾರಿಯ ಟಿಪ್ಪರ್‌ಗಳು, ಪದ್ಮನಾಭನಗರದ ಶೋಕ ಗೀತೆಯೂ, ಅನಂತ ಅವಾಂತರಗಳೂ, ಪಕ್ಷ-ಏತಕ್ಕೆ ಎನ್ನುವ ಪಕ್ಷೇತರರು ಅವರ ‘ಮುಗ್ಧ’ ನಗೆಯ ಮೇಲೆ ದಾಳಿ ಮಾಡಿದ್ದಾರೆ. ಅವರ ಮುಖದ ಮೇಲಿನ ನಗೆಯನ್ನು ಹಾಡಹಗಲೇ ಕೊಲೆ ಮಾಡಿದ್ದಾರೆ.

ನಿದ್ದೆಯಲ್ಲಿ ದೇಶದ ಬಗ್ಗೆ ಆಲೋಚಿಸುವ ‘ಕನಸು’ ಕಾಣುವ , ಮಾತಾಡುವಾಗ ಸದ್ದು ಎಲ್ಲೆಂಲ್ಲಿಂದ ಹೊರಡುತ್ತಿದೆ ಎಂದು ವಿಸ್ಮಯ ಚಕಿತರಾಗಿ ಕುಳಿತುಕೊಳ್ಳುವ ‘ನಗದ’ ನಾಯಕರುಗಳ ಕೈಯಲ್ಲಿ ಸಿಕ್ಕು ಕರ್ನಾಟಕದ ನಗೆಯೇ ಕಾಣೆಯಾದಂತಾಗುವ ಸಂದರ್ಭ ಬಂದಾಗ ನಾಡಿನ ಜನರು ಆನಂದ ಗೌಡರ ಮುಖವನ್ನು ಕಂಡು ತಮ್ಮ ಒಂದೆರೆಡಾದರೂ ಹಲ್ಲು ಬಿಡುತ್ತಿದ್ದರು. ಟಿವಿಯಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಜೋಲು ಮುಖಗಳ ನಡುವೆ ಹಸನ್ಮುಖಿಯನ್ನು ಕಂಡು ಜನರು ಹಗುರಾಗುತ್ತಿದ್ದರು. ಆದರೆ ನಾಡಿನ ದ್ರೋಹಿಗಳ ವ್ಯವಸ್ಥಿತ ಪಿತೂರಿಯಿಂದಾಗಿ ಮೊಗದಿಂದ ನಗುವು ಕಾಣೆಯಾಗಿದೆ. ಈ ಬಗ್ಗೆ ನಮ್ಮ ಮುಖ್ಯ ಮಂತ್ರಿಗಳು ಬಹು ಶೀಘ್ರವಾಗಿ ಗಮನ ಹರಿಸಬೇಕು. ಇಲ್ಲವಾದಲ್ಲಿ ಕರೆಂಟಿಲ್ಲದೆ ಕತ್ತಲೆಯಲ್ಲಿ ಹೊರಳಾಡುತ್ತಿರುವ ನಾಡು ನಗುವಿನ ಬೆಳಕಿಲ್ಲದೆ ನರಳಾಡಬೇಕಾದೀತು. ಈ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಕ ಗೊಳಿಸಿ ಆನಂದ ಗೌಡರ ನಗೆಯನ್ನು ಅಪಹರಿಸಿದ ಪಾತಕಿಗಳನ್ನು ಹುಡುಕಿ ತಂದು ಕಂಪ್ಯೂಟರಿನ ಮುಂದೆ ಕೂರಿಸಿ ನಗೆ ನಗಾರಿ ಡಾಟ್ ಕಾಮ್ ತೋರಿಸಿ ನಗುವ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಆನಂದ ಗೌಡರ ಸಾವಿರ ಕ್ಯಾಂಡಲ್ ನಗೆಯನ್ನು ಅವರ ಮುಖದ ಮೇಲೆ ಪುನರ್ ಪ್ರತಿಷ್ಠಾಪಿಸಬೇಕು ಎಂದು ನಗೆ ಸಾಮ್ರಾಟರು ಏಕ ಕಂಠದಲ್ಲಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಜಯವರ್ಧನೆಗೆ ಒಂದು ಪತ್ರ!

26 ಜುಲೈ

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:

ಪ್ರಿಯ ಜಯವರ್ಧನೆ,
ಶ್ರೀಲಂಕವೆಂಬ ಪುಟ್ಟ ದ್ವೀಪದಲ್ಲಿ ಅಜಂತ ಮೆಂಡಿಸ್ ಎಂಬ ಮತ್ತೊಬ್ಬ ಮಾಂತ್ರಿಕನ್ನು ಹುಡುಕಿಕೊಂಡು ಬರುವುದರಲ್ಲಿ ಯಶಸ್ವಿಯಾದದ್ದಕ್ಕೆ ಅಭಿನಂದನೆಗಳು. ನಮ್ಮ ದೇಶದಲ್ಲೂ ಅಂಥಾ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ನಮ್ಮ ದೇಶ ದೊಡ್ಡದು ನೋಡು ಅದಕ್ಕೇ ಹುಡುಕುವುದು ಸ್ವಲ್ಪ ಕಷ್ಟ. ಅಂದ ಹಾಗೆ ಮುರುಳಿಗೆ ಒಳ್ಳೆ ಜೂನಿಯರ್ ಸಿಕ್ಕಹಾಗಾಯ್ತು ಬಿಡು.

ಮೊದಲ ಟೆಸ್ಟ್ ಮ್ಯಾಚನ್ನು ನೀರು ಕುಡಿದವರಂತೆ ಗೆದ್ದು ಬಿಟ್ಟಿರಿ. ನಿಮ್ಮ ದೇಶದ ಯಾವುದೋ ಹೈಸ್ಕೂಲು ತಂಡದ ಹಾಗೆ ಕಂಡಿರಬೇಕಲ್ಲವಾ ನಮ್ಮ ತಂಡ? ಆ ಸಚಿನ್ನು, ಗಂಗೂಲಿ, ದ್ರಾವಿಡ್ಡು, ಸೆಹವಾಗು ಮುಂತಾದ ಅತಿರಥ ಮಹಾರಥರೆಲ್ಲಾ ಮುರುಳಿ ಹಾಗೂ ಮೆಂಡಿಸ್‌ರಿಗೆ ಗಲ್ಲಿ ಕ್ರಿಕೆಟರ್‌ಗಳ ಕಂಡಿದ್ದಾರೆ ಅನ್ನಿಸುತ್ತದೆ. ಹಾಗಂತ ತೀರಾ ಸಡಿಲಾಗಬೇಡಿ. ನಮ್ಮ ಜಂಬೋ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವನಲ್ಲ. ಏನೋ ನಮ್ಮ ಹಿರಿಯ ಆಟಗಾರರಿಗೆ ಕೈತಪ್ಪಿಹೋದ ಏಕದಿನದ ಸ್ಥಾನದ ಕನವರಿಕೆ, ಯುವ ಆಟಗಾರರಿಗೆ ದಕ್ಕಿದ ಜಾಹೀರಾತುಗಳ ನೇವರಿಕೆ- ಈ ಬೆರಕೆಯಲ್ಲೇ ಅವರು ಮೈಮರೆತಿದ್ದಾರೆ ಅಷ್ಟೇ. ಯಾವಾಗ ಬೇಕಾದರೂ ಅವರು ಗರ್ಜಿಸಬಹುದು, ಗೊತ್ತಲ್ಲ ಅವರೆಂಥಾ ಪೇಪರ್ ಹುಲಿಗಳೆಂದು!

ಈ ಸಂದರ್ಭದಲ್ಲಿ ನಿಮ್ಮ ತಂಡದಲ್ಲೊಂದು ಬದಲಾವಣೆಯನ್ನು ಮಾಡಿಕೊಂಡರೆ ಇನ್ನುಳಿದ ಪಂದ್ಯಗಳನ್ನೂ ಸರಾಗವಾಗಿ ಗೆಲ್ಲಬಹುದು ಎಂದು ನನಗನ್ನಿಸುತ್ತದೆ. ಅಜಂತಾ ಮೆಂಡಿಸ್ ಹಾಗೂ ಮುತ್ತಯ್ಯ ಮುರಳೀಧರನ್ ಇಬ್ಬರೇ ಬೌಲರ್‌ಗಳನ್ನು ಇಟ್ಟುಕೊಂಡು ಉಳಿದವರಿಗೆಲ್ಲಾ ವಿಶ್ರಾಂತಿ ಕೊಟ್ಟುಬಿಡು. ಉಳಿದ ಒಂಭತ್ತು ಮಂದಿಯೂ ಬ್ಯಾಟ್ಸ್ ‌ಮನ್‌ಗಳೇ ಆಗಿರಲಿ. ನಮ್ಮ ತಂಡದವರು ಇವರಿಬ್ಬರಿಗೂ ಹೇಗೆ ಆಡಬೇಕು ಎಂದು ಕಲಿಯುವಷ್ಟರಲ್ಲಿ ಶ್ರೀಲಂಕಾ ಪ್ರವಾಸವೇ ಮುಗಿರುತ್ತದೆ. ನೀವು ಸರಣಿಯನ್ನು ಸುಲಭವಾಗಿ ಗೆಲ್ಲಬಹುದು. ಏನಂತೀಯ?

ಇಂತಿ,
ನಿನ್ನ ಹಿತ ಆಕಾಂಕ್ಷಿ
ನಗೆ ಸಾಮ್ರಾಟ್

ಈ ಇ-ಮೇಲು ಜಯವರ್ಧನೆಯ ದೇಶಕ್ಕೆ ಹಾರುವ ಮೊದಲೇ ಸೇತು ಸಮುದ್ರದ ಬಳಿ ಹಾಯುತ್ತಿರುವಾಗ ಲೀಕ್ ಆಗಿ ಬಿಸಿಸಿಐಗೆ ಲಭ್ಯವಾಗಿ ಬಿಟ್ಟಿದೆಯಂತೆ. ಅವರು ನಗೆ ಸಾಮ್ರಾಟರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತ ತಂಡದ ಎಲ್ಲಾ ಬೌಲರ್‌ಗಳನ್ನು ಕೂರಿಸಿಬಿಡಲು ತೀರ್ಮಾನಿಸಿದ್ದಾರೆ. ಲಂಕಾದ ಬ್ಯಾಟ್ಸ್ ಮನ್‌ಗಳಿಗೆ ಬೌಲರ್‌ಗಳೇ ಬೇಕಿಲ್ಲ ಒಂದು ಬೌಲಿಂಗ್ ಮಶೀನು ಇಟ್ಟುಬಿಟ್ಟರೆ ಸಾಕು ಎಂದು ಅವರಿಗೆ ಅನ್ನಿಸಿದೆಯಂತೆ!

ವಿಶ್ವಾಸಮತ: ಆನೆಗೆ ಅನ್ಯಾಯ!

24 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೋ)

ಕೇಂದ್ರದಲ್ಲಿ ಅಣುಮಾನ, ಅಣುನಯನ, ಅಣುರಾಗಗಳಿಂದಾಗಿ ಯು.ಪಿ.ಎ ಸರ್ಕಾರದ ಬುಡ ಅಲ್ಲಾಡಿ ಹೋಗಿ ಜಂಗಲ್ ರಾಜ್‌ನಲ್ಲಿನ ಕುರ್ಚಿಯಿಂದ ಸಿಂಗರ್ರು ಕೆಳಕ್ಕೆ ಜಿಗಿಯಬೇಕಾದ ಸಂದರ್ಭ ಬಂದದ್ದೂ, ಅನಂತರ ಅಂಬಾನಿಗಳ ಅಂಬಾರಿಯೂ, ಅಮರ ಸಿಂಗನ ಸಂಗವೂ ಮಾಡಿದ ಮ್ಯಾಜಿಕ್ಕಿನಿಂದ ಕಾಂಗ್ರೆಸ್ ಪಕ್ಷ ಕಾಸು, ಮಂತ್ರಿ ಸ್ಥಾನಗಳು, ಮಾನ – ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ಕಡೆಯ ಪಕ್ಷ ಅಧಿಕಾರವೊಂದನ್ನು ಉಳಿಸಿಕೊಂಡು ಬೀಗುತ್ತಿದ್ದು ಸಾಮ್ರಾಟರು ಅಭಿನಂದಿಸಲು ತೆರಳಿದ್ದಾಗ ಸ್ಯಾಂಪಲ್ಲಿಗೆ ಸ್ವೀಟು ಕೊಡಲು ಕಾಂಗ್ರೆಸ್ಸಿನ ಪಾರ್ಟಿಯಲ್ಲಿ ಫಂಡಿನ ಕೊರತೆ ಉದ್ಭವಿಸಿದ್ದು ಸಾಮ್ರಾಟರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿತು. ಸರಕಾರದ ಡೋಲಾಯಮಾನ ಸ್ಥಿತಿ, ಬೀಳುವುದರಿಂದ ತಪ್ಪಿಸಿಕೊಳ್ಳುವಲ್ಲಿ ಅದು ಮಾಡಿದ ಮಹಾಪಲಾಯನದ ವೃತ್ತಾಂತವನ್ನು ಸಮಸ್ತ ಜನರು ಇತರ ಮಾಧ್ಯಮಗಳಲ್ಲಿ ತಲೆ ಕೊರೆಯುವವರೆಗೂ ಪಡೆದುಕೊಂಡಿರುವುದರಿಂದ ಸಾಮ್ರಾಟರು ಯಾರಿಗೂ ಸಿಕ್ಕದ, ದಕ್ಕದ ಸ್ಕೂಪ್ ಹೊತ್ತು ಬಂದಿದ್ದಾರೆ.

ಭಾರತದ ಕಂಠಭಾಗದ ನವ ದೆಹಲಿಯಲ್ಲಿ ಮನಮೋಹನ ಸಿಂಗರ್‌ನ ಕುರ್ಚಿ ಭದ್ರವಾಗುತ್ತಿದ್ದ ಹಾಗೆಯೇ ಇತ್ತ ಭಾರತದ ಸೊಂಟದ ಭಾಗದಲ್ಲಿ ಕೋಲಾಹಲ ಉಂಟಾದದ್ದು ಯಾರ ಗಮನಕ್ಕೂ ಬರಲಿಲ್ಲ. ಮಾಯಾ ಜಾಲ ಪ್ರವೀಣೆ, ಕೆಳ ವರ್ಗದ ಮೇಲ್ಮಟ್ಟದ ಮಹಿಳೆ ಪ್ರಧಾನಿಯಾಗುವ ಕನಸನ್ನು ಕಂಡು, ಕನಸು ಕಂಡ ಮೇಲೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಲಗುವುದನ್ನು ಬಿಟ್ಟು ಕಣ್ಣು ತೆರೆದು ದೊಡ್ಡ ತಪ್ಪನ್ನು ಮಾಡಿದ್ದಾರೆ. ಕಣ್ಣು ತೆರೆದ ನಂತರ ತಮ್ಮದು ತಿರುಕನ ಕನಸು ಎಂಬುದು ಅರಿವಾಗಿ ವಿಪರೀತ ಮನೋವ್ಯಾಕುಲತೆ ಆವರಿಸಿಕೊಂಡಿದೆ. ಅವರನ್ನು ಭೇಟಿ ಮಾಡಿದ ನಗೆ ಸಾಮ್ರಾಟರಿಗೆ ದೇಶದ ಬೇರಾವ ಪತ್ರಕರ್ತನಿಗೂ ಸಿಗದ ಸುಳುಹುಗಳು ಸಿಕ್ಕಿದವು, ಸರಕಾರ ಉಳಿದುಕೊಂಡ ಸಂಗತಿಯ ಬಗ್ಗೆ.

ಸರಕಾರದ ವಿಶ್ವಾಸಮತದ ವಿಷಯದಲ್ಲಿ ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು. ಹಾಗಂತ ಅದನ್ನು ಹೇಳಿದ ಜೋತಿಷಿಯನ್ನು ಹುಡುಕಿಕೊಂಡು ಹೋಗಿಬಿಟ್ಟೀರಿ, ಈ ಭವಿಷ್ಯವನ್ನು ಸೂಚಿಸಿದ್ದು ಜೋತಿಷಿಗಳಲ್ಲ. ಪ್ರಕೃತಿ! ಹೌದು, ಗಾಬರಿಯಾಗಬೇಡಿ. ನಮ್ಮ ಕಾಡು-ಮೇಡಿನ ಪ್ರಕೃತಿಯೇ ಈ ಫಲಿತಾಂಶವನ್ನು ಸೂಚಿಸಿತ್ತು ಎಂದು ಸಾಮ್ರಾಟರು ಪತ್ತೆ ಹಚ್ಚಿದ್ದಾರೆ.

ಒಂದೂರಲ್ಲಿ ಒಂದು ಕಾಡಿತ್ತು. ಇಡೀ ಕಾಡಿನಲ್ಲಿ ಯಾವ ಪ್ರಾಣಿಯಾದರೂ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಬಹುದು. ಸ್ವಲ್ಪ ‘ಕೌಶಲ್ಯ’ ಇರುವಂಥವು ಹಾರಾಡಬಹುದು, ಮರದಿಂದ ಮರಕ್ಕೆ. ಆದರೆ ಯಾವುದಕ್ಕೂ ವೀಸಾ, ಪಾಸ್ ಪೋರ್ಟ್ ಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ. ಗಾಡಿ ಇನ್‌ಶೂರೆನ್ಸ್ ಬೇಕಿಲ್ಲ. ಆರ್.ಸಿ ಬುಕ್ಕಿನ ಆವಶ್ಯಕತೆಯಿಲ್ಲ. ಇಷ್ಟೆಲ್ಲಾ ಇಲ್ಲದಿರುವಾಗ ಟ್ರಾಫಿಕ್ ಪೋಲೀಸಿನವರ ಉಪಸ್ಥಿತಿಯು ಬೇಕಿಲ್ಲ. ಅವರಿಲ್ಲ ಎಂದ ಮೇಲೆ ರಸ್ತೆಯ ಮೇಲೆ ‘ಎ.ಟಿ.ಎಂ’ಗಳ ಅನಿವಾರ್ಯತೆ ಹುಟ್ಟುವುದಿಲ್ಲ! ಇನ್ನು ರೋಡ್ ಟ್ಯಾಕ್ಸೂ ಇಲ್ಲ. ಇನ್ ಕಮ್ ಟ್ಯಾಕ್ಸೂ ಇಲ್ಲ, ಹೀಗಾಗಿ ಐ.ಟಿ ಡಿಪಾರ್ಟ್ ಮೆಂಟೂ ಬೇಕಿಲ್ಲ. ಆದರೂ ಕಾಡಿಗೆ ಒಬ್ಬ ಪ್ರಧಾನಿ ಅಥವಾ ರಾಜ ಬೇಕೇ ಬೇಕು. ಜವಾಬ್ದಾರಿಯಿಲ್ಲದ ಅಧಿಕಾರವದು ಎನ್ನುವುದು ಅದನ್ನು ಅಲಂಕರಿಸಲು ಸಾಧ್ಯವಾಗದವರ ಕುಹಕದ ನುಡಿ.

ಸರಿ, ಜಂಗಲಿನ ಪ್ರಧಾನಿಯಾಗಲು ಭಾರಿ ಪೈಪೋಟಿ ಇತ್ತು. ಎಲ್ಲಾ ಕಡೆಯೂ ಚುನಾವಣೆ ನಡೆಯಿತು. ಯಥಾಶಕ್ತಿ ಅಕ್ರಮಗಳು ಯಾವ ಅಡತಡೆಯೂ ಇಲ್ಲದೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಕೆಲವು ಕಡೆ ಮಾರಣಹೋಮಗಳು ನಡೆದದ್ದು ಬಿಟ್ಟರೆ ಉಳಿದಂತೆ ಚುನಾವಣೆ ಶಾಂತಿಯುತವಾಗಿಯೇ ಇತ್ತು. ಎಲ್ಲಾ ಹಂತದ ಚುನಾವಣೆ ಮುಗಿದು ಕಡೆಯ ಹಂತಕ್ಕೆ ‘ಬಂಗಾಳ’ದ ಹುಲಿ, ‘ಕೇಸರಿ’ಯನ್ನು ಹೊತ್ತ ಸಿಂಹ ಹಾಗೂ ‘ಮದಿಸಿದ’ ಆನೆ ತಲುಪಿದವು. ಆನೆಗೆ ಹುಲಿ ಹಾಗೂ ಸಿಂಹದ ನೆರವು ಪಡೆದು ಪ್ರಧಾನಿಯಾಗುವ ಆಸೆ. ಬಂಗಾಳ ಹಾಗೂ ಕೇಸರಿ ಸೇರಿಕೊಂಡು ಮಾತಾಡಿ ಆನೆಯನ್ನು ಮುಂದಕ್ಕೆ ಕಳುಹಿಸಿದವು. ಆನೆ ತಾನು ನಡೆದದ್ದೇ ದಾರಿ ಎಂದು ಕೊಂಡು ಮುಂದಕ್ಕೆ ನುಗ್ಗಿತು. ಕಡೆಗೆ ಖೆಡ್ಡಾದಲ್ಲಿ ಬಿತ್ತು. ಈಗ ಸದ್ಯಕ್ಕೆ ಘೀಳಿಡುತ್ತಿದೆ.

ಮಾಂಸಾಹಾರಿಗಳಾದ ಕೇಸರಿ ಸಿಂಹ ಹಾಗೂ ಬಂಗಾಳ ಹುಲಿಗಳಿಗೆ ಅಪ್ಪಟ ಸಸ್ಯಾಹಾರಿ ಹಾಗೂ ಡಯಟ್‌ಗೆ ಯಾವ ಗೌರವವನ್ನು ಕೊಡದ ಆನೆಯನ್ನು ಪ್ರಧಾನಿಯ ಪಟ್ಟಕ್ಕೆ ಕೂರಿಸುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಪ್ರಧಾನಿ ಪಟ್ಟದ ಆಸೆಗೆ ಬಂಗಾಳದ ಹುಲಿ ಹಾಗೂ ಕೇಸರಿ ಸಿಂಹ ಭಾರಿ ಕಾಳಗದಲ್ಲಿ ತೊಡಗಿದವು. ವೀರಾವೇಷದಿಂದ ಹೋರಾಡಿ ದಣಿದು, ಗಾಯಗೊಂಡು, ಬಸವಳಿದು ಮೂಲೆಯಲ್ಲಿ ಕೂತವು. ಪ್ರಧಾನಿ ಯಾರಾಗುವುದು ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವಾಗ ನೂರಾರು ಕುದುರೆಗಳ ಸೈನ್ಯವನ್ನು ಮುನ್ನಡೆಸಿಕೊಂಡು ಬಂದ ‘ಸಿಂಗ್’ಳೀಕ ಪ್ರಧಾನಿಯ ಪಟ್ಟದ ಮೇಲೆ ಸರ ಸರನೇ ಏರಿತು. ಕುದುರೆಗಳು ಹಿಂಡಿ ಮೇಯುತ್ತಾ ಪಟ್ಟದ ಪಕ್ಕ ಪವಡಿಸಿದವು.

ಈ ಈಸೋಪನ ಕಥೆಯನ್ನು ಈಸೋಪನೇ ಮರೆತು ಹೋಗಿದ್ದ ಎನ್ನಲಾಗಿದೆ. ಅದನ್ನು ಸಾಮ್ರಾಟರು ಪುನಃ ನೆನಪಿಸಿ ಅಷ್ಟು ಹಿಂದೇ ವಿಶ್ವಾಸಮತದ ಫಲಿತಾಂಶವನ್ನು ಬಹಳ ನಿಖರವಾಗಿ ವಿವರಿಸಲಾಗಿತ್ತು ಎಂದು ಸಂಶೋಧನೆ ಮಾಡಿದ್ದಾರೆ. ನಾಸ್ಟ್ರಡಮಸ್‌ಗಿಂತ ಈ ‘ಸೋಪ್’ನೇ ಶ್ರೇಷ್ಠ ಜೋತಿಷಿ ಎಂದು ಷರಾ ಬರೆದು ವರದಿ ಮುಗಿಸಿದ್ದಾರೆ.

ನೂರು ವರ್ಷ ಕವನಗಳನ್ನು ಬ್ಯಾನ್ ಮಾಡಿ

23 ಜುಲೈ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಕ್ರಾಂತಿಕಾರಕ ಶಿಫಾರಸ್ಸನ್ನು ಮಾಡಿದ್ದಾರೆ. ಪುಸ್ತಕ, ಪತ್ರಿಕೆ, ಸಿನೆಮಾ, ಸಿನೆಮಾ ಹಾಡು, ಸಿನೆಮಾ ಹಾಡಿನ ಸಾಹಿತ್ಯದಲ್ಲಿ ಸಾಲು ಹೀಗೆ ಯಾವುದಾದರೊಂದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸುತ್ತಾ ಓಡಾಡುತ್ತಿದ್ದ ಪುಡಿ ಸಂಘಟನೆಗಳೆಲ್ಲವೂ ಪಾಪಣ್ಣನವರ ಮಾತನ್ನು ಕೇಳಿ ಬೆಚ್ಚಿ ಬಿದ್ದು ಎದ್ದು ಕುಳಿತಿವೆ.

ತಮ್ಮ ಕ್ರಾಂತಿಕಾರಕ ನಿಲುವಿಗೆ ಕಾರಣವೇನು? ಹಿಂದೆ ನೀವೂ ಅನೇಕಾನೇಕ ಕವನಗಳನ್ನು ಬರೆದಿರುವಿರಿ. ಉತ್ತಮ ಸಾಹಿತಿ ಎಂದು ಹೆಸರು ಪಡೆದಿದ್ದೀರಿ. ನೀವು ಹೀಗೆ ಬಂಡಾಯವೆದ್ದಿರುವುದರ ಹಿಂದಿನ ಚಿಂತನೆ ಯಾವುದು ಎಂದು ನಮ್ಮ ವರದಿಗಾರ ಪ್ರಶ್ನಿಸಿಲಾಗಿ ಪಾಪಣ್ಣನವರು ತಮ್ಮ ಬಿಳಿಯ ಗಡ್ಡದ ನಡುವೆ ಬೆರಳು ಹರಿದಾಡಿಸಿ ಮಾತಿಗೆ ಶುರು ಮಾಡಿದರು, ‘ನೋಡಿ, ನಾನು ನನ್ನ ಕೈ ನಡೆಯುತ್ತಿದ್ದ ಕಾಲದಲ್ಲಿ ಒಂದಷ್ಟು ಕವಿತೆಗಳನ್ನು ಬರೆದಿದ್ದೇನೆ. ಕೆಲವೊಂದನ್ನು ಬರೆಸಿದ್ದೇನೆ -ಅಂದರೆ ನಾನೇ ಹೇಳಿ ಬರೆಸಿದ್ದೇನೆ ಅಂತ ಕಣ್ರೀ- ನನ್ನ ಕವನ ಸಂಕಲನಕ್ಕೆ ಸಹೃದಯರಿಂದ ಭಾರೀ ಗೌರವವೇ ಸಿಕ್ಕಿದೆ. ಕುಳಿತುಕೊಳ್ಳಲು ಪೀಠವೂ ಸಿಕ್ಕಿದೆ. ನನ್ನ ಕವನಗಳನ್ನು ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಓದುತ್ತಿದ್ದಾರೆ. ಅರ್ಥವಾಗದೆ ಉರು ಹೊಡೆಯುತ್ತಿದ್ದಾರೆ. ಶಿಕ್ಷಕರು ಮೊದಲು ಪಾಠಗಳನ್ನು ಓದಿ ಎಂದು ಸಲಹೆ ಕೊಡುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಲ್ಲಿ ನನ್ನ ಕವನಗಳ ಪೋಸ್ಟ್ ಮಾರ್ಟಮ್ ನಡೆಸಿದವರಿಗೆ ಡಾಕ್ಟರ್ ಎಂದು ಕರೆಯುತ್ತಿವೆ. ಇದೆಲ್ಲದರ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ಅಸಲಿಗೆ ನನ್ನನ್ನು ಕಾರ್ಯಕ್ರಮಗಳಿಗೆ ಕರೆದಾಗ ಕವಿ ಎಂದು ಕರೆದರೆ ಮುದಗೊಳ್ಳುತ್ತೇನೆ. ಕೆಲವರು ನನ್ನನ್ನು ಆಗಾಗ ಮಾಜಿ ಕವಿಗಳು ಎಂದು ಕರೆದಾಗ ಹಾಲಿ ಕೊಲೆಗಾರನಾಗಲಾ ಎಂದು ಹಗಲೂ ರಾತ್ರಿ ಚಿಂತಿಸಿದ್ದೇನೆ.

‘ಅದೆಲ್ಲಾ ಬಿಡಿ. ಈಗ ನನ್ನ ಆಗ್ರಹದ ವಿಷಯಕ್ಕೆ ಬರೋಣ. ಇನ್ನು ನೂರು ವರ್ಷಗಳ ಕಾಲ ಯಾರೂ ಕವನಗಳನ್ನು ಬರೆಯ ಬಾರದು. ಈಗ ಕವನ ಬರೆಯಲು ಶುರು ಮಾಡಿರುವವರು ಕಾವ್ಯ ರಚನೆಗೆ ತಿಲಾಂಜಲಿಯನ್ನಿಡಬೇಕು. ಈಗ ಪ್ರಕಟವಾಗುತ್ತಿರುವ ಕವನ ಸಂಕಲನಗಳನ್ನೆಲ್ಲಾ ಉರುವಲಿಗೆ ಹಾಕಿ ದಿನವೂ ಜನರು ಬಿಸಿನೀರಿನಲ್ಲಿ ಸ್ನಾನ ಮಾಡಬೇಕು. ಹೊಸ ಸಂಕಲನಗಳ್ಯಾವೂ ಪ್ರಕಟವಾಗದ ಹಾಗೆ ಸರಕಾರ ಕಟ್ಟುನಿಟ್ಟು ಮಾಡಬೇಕು. ಕವಿಯು ಸಮಾಜ ವಿದ್ರೋಹಿ ಎಂಬುದನ್ನು ಸಂವಿಧಾನದಲ್ಲಿ ಸೇರಿಸಿ ತಿದ್ದು ಪಡಿ ಮಾಡಬೇಕು. ತಮ್ಮನ್ನು ತಾವು ಕವಿ ಎಂದು ಕರೆದುಕೊಳ್ಳುವವರನ್ನು ಕಂಬಿಗಳ ಹಿಂದೆ ನಿಲ್ಲಿಸಬೇಕು. ಕವಿತೆ ಬರೆಯೋದು, ಓದುವುದು ನನಗಿಷ್ಟ ಎನ್ನುವವರನ್ನು ಹುಚ್ಚು ಬಿಡಿಸುವ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು. ಧರ್ಮಗ್ರಂಥಗಳಲ್ಲಿ ಕವಿತೆ ವಾಚನ ಧರ್ಮ ಬಾಹಿರ ಎಂದು ನಮೂದಾಗುವ ಹಾಗೆ ಧಾರ್ಮಿಕ ಮುಖಂಡರು ಗಮನ ಹರಿಸಬೇಕು. ಇವೆಲ್ಲವುಗಳಿಗೆ ಒತ್ತಾಸೆಯಾಗಿ ಸರಕಾರ ನೂರು ವರ್ಷಗಳವರೆಗೆ ಪೊಯೆಟ್ರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.’

‘ಅದೆಲ್ಲಾ ಸರಿ. ಸಾರ್ ಆದರೆ ಯಾಕೆ ಬ್ಯಾನ್ ಮಾಡಬೇಕು ಎಂದು ನೀವು ಹೇಳಲೇ ಇಲ್ಲವಲ್ಲ?’ ಪ್ರಶ್ನಿಸಿದ ವರದಿಗಾರ.

‘ ಹೀಗೆ ನೂರು ವರ್ಷ ಪೊಯೆಟ್ರಿಯನ್ನು ಬ್ಯಾನ್ ಮಾಡಿದರೆ ಕವಿಗಳ ಶನಿ ಸಂತಾನ ನಾಶವಾಗುತ್ತದೆ. ಕವಿತೆಯ ಹೆಸರಿನಲ್ಲಿ ಜಂಡು ಬಾಮ್, ಅನಾಸಿನ್ ಮಾರಾಟ ಮಾಡುತ್ತಾ ಮೆಡಿಕಲ್ ಸ್ಟೋರ್‍‌ಗಳಿಗೆ ಲಾಭ ಮಾಡುವ ದಂಧೆಯವರ ಜನಾಂಗಕ್ಕೆ ಅಂತ್ಯ ಬರುತ್ತದೆ. ನೂರು ವರ್ಷ ಕಳೆದು ಬರುವ ಹೊಸ ಜನರೇಶನ್ನಿನಲ್ಲಿ ಕವಿಗಳ ಕೆಟ್ಟ ಸಂಸ್ಕೃತಿ ಇರುವುದಿಲ್ಲ. ಪತ್ರಿಕೆಗಳು ಸ್ಪೇಸ್ ಫಿಲ್ಲರ್‌ಗಳಿಗೆ ಕೊಂಚ ಕಾಲ ಒದ್ದಾಡ ಬಹುದು. ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಂಡವರು ನಾಲ್ಕೈದು ಉದ್ಘಾರಗಳನ್ನು ಹೊರಡಿಸಿ ತಮ್ಮನ್ನು ತಾವು ಕವಿ ಎಂದು ಕರೆದು ಸಂಭ್ರಮಿಸಿಕೊಳ್ಳುವುದಕ್ಕೆ ಕೊಂಚ ತೊಂದರೆಯಾಗಬಹುದು. ಉದ್ಯೋಗವಿಲ್ಲದವರು ಶಬ್ಧ ಕೋಶದ ರಸಾಯನ ಮಾಡಿ ತಮ್ಮ ರೆಸ್ಯೂಮಿನಲ್ಲಿ ‘ಖ್ಯಾತ
ಕವಿ’ ಎಂದು ನಮೂದಿಸಿಕೊಳ್ಳುವುದಕ್ಕೆ ಉತ್ಸಾಹಕ್ಕೆ ಹಾನಿಯಾಗಬಹುದು. ಆದರೆ ಲಕ್ಷಾಂತರ ಮರಗಳ ಜೀವ ಉಳಿಯುತ್ತದೆ, ಕವನ ಸಂಕಲನಗಳ ಪ್ರಕಟಣೆ ನಿಲ್ಲುವುದರಿಂದ.’

‘ಒಳ್ಳೆಯ ವಿಚಾರಗಳು ಸಾರ್. ಆದರೆ ಪೊಯೆಟ್ರಿಯನ್ನ ಬರೇ ನೂರು ವರ್ಷ ಬ್ಯಾನ್ ಮಾಡಬೇಕು ಅಂದಿರಿ. ಅಲ್ಲದೆ ಕೇವಲ ಈಗ ನಿಮ್ಮ ನಂತರ ಬರೆದವರ ಕವನ ಸಂಕಲನಗಳನ್ನು ಸುಡಬೇಕು ಎಂದು ಅಪ್ಪಣೆ ಕೊಡಿಸಿದಿರಿ. ಆದರೆ ಹಿಂದಿನದರ ಬಗ್ಗೆ ಮಾತಾಡಿಲ್ಲ. ಏನಿದರ ಮರ್ಮ?’ ಗೊಂದಲ ತಡೆಯಲಾರದೆ ಕೇಳಿದ ವರದಿಗಾರ.

‘ಇದು ನನ್ನ ಆಶಯದ ಬಹು ಮುಖ್ಯ ಅಂಶ. ನೂರು ವರ್ಷ ಕವನಗಳನ್ನು ಬ್ಯಾನ್ ಮಾಡುವುದರಿಂದ ಜನರಿಗೆ ಕವನ ಬರೆಯುವುದು, ಕಾವ್ಯ ಓದುವುದರಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಕವಿಗಳ ಕುಲವೇ ಅಸುನೀಗುತ್ತದೆ. ಜನರಿಗೆ ಹೆಚ್ಚು ಹೆಚ್ಚು ಸಮಯದ ಉಳಿತಾಯವಾಗುತ್ತದೆ. ಆಗ ಜನರು ಹೆಚ್ಚು ಹೆಚ್ಚು ದುಡಿಯಲು ಶುರು ಮಾಡುತ್ತಾರೆ. ಹೆಚ್ಚು ಸಂಪಾದಿಸುತ್ತಾರೆ. ದುಡ್ಡು ಕೂಡಿಡುತ್ತಾರೆ. ಮನೆಯನ್ನು ಟಿವಿ, ಫ್ರಿಡ್ಜು, ವಾಶಿಂಗ್ ಮಶೀನು, ಕಂಪ್ಯೂಟರು, ಕಾರು, ಬೈಕು, ಏರೋಪ್ಲೇನುಗಳಿಂದ ತುಂಬಿಸುತ್ತಾರೆ. ಕೊನೆಗೆ ಇದೆಲ್ಲಾ ಇಷ್ಟೆನಾ ಅನ್ನಿಸಲು ಶುರುವಾಗುತ್ತದೆ. ಬದುಕು ಇಷ್ಟು ನಿಸ್ಸಾರವಾ ಎಂದು ಕೇಳಿಕೊಳ್ಳತೊಡಗುತ್ತಾರೆ. ಆಗ ಕವಿತೆಯ ಜೀವಸಾರದ ಗುಟುಕಿಗಾಗಿ ಬಾಯಾರಿ ತತ್ತರಿಸುತ್ತಾರೆ. ಆದರೆ ಆಗ ಯಾವ ಕವನಗಳೂ ಇರುವುದಿಲ್ಲ. ಕವಿಗಳೂ ದಿವಂಗತರಾಗಿರುತ್ತಾರೆ. ಜನರಿಗೆ ಕವಿತೆಗಳೇ ಬದುಕು ಅನ್ನಿಸಲು ಶುರುವಾಗುತ್ತದೆ.’

‘ಇದರಿಂದೇನು ಲಾಭವಾಗುತ್ತೆ ಸಾರ್?’

‘ಆಗ ಉಳಿದವರ್ಯಾರ ಕವನಗಳೂ ಇರೋದಿಲ್ಲ. ನನ್ನವು ಮಾತ್ರ ಇರುತ್ತವೆ. ನಾನು ಬರೆದಿಟ್ಟು ಹೋದ ಕವನಗಳೇ ಸಂಜೀವಿನಿಗಳಾಗುತ್ತವೆ. ನನ್ನ ಖರ್ಚಾಗದ ಕವನ ಸಂಕಲನಗಳು ಹಾಟ್ ಗಾಸಿಪ್ಪಿನ ಹಾಗೆ ಬಿಕರಿಯಾಗುತ್ತವೆ. ನಾನು ಹೇಗೂ ನನ್ನ ಮೊಮ್ಮಕ್ಕಳಿಗೆ ಕಾಸು ಕೂಡಿಟ್ಟಿಲ್ಲ. ಅವರಿಗೆ ಒಂದು ದಾರಿಯಾಗುತ್ತದೆ. ಅದಕ್ಕೇ ನಾನು ಸರ್ಕಾರಕ್ಕೆ ಈ ಕೂಡಲೇ ಕವನಗಳನ್ನು, ಕವಿಗಳನ್ನೂ ನೂರು ವರ್ಷಗಳವರೆಗೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತೇನೆ.

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

22 ಜುಲೈ

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.

ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.

‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು…’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.

‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ…’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.

‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ… ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.

ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!

ಬಾಬಾ ತೆರೆದದ್ದು ಒಂದೇ ಕಣ್ಣೇ?!

19 ಜುಲೈ

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಬೆಂಗಳೂರಿನ ಬಸವನಗುಡಿಯ ಸಮೀಪದ ಗವಿಗಂಗಾಧರೇಶ್ವರ ನಗರದ ಮನೆಯೊಂದರಲ್ಲಿ ವಿಸ್ಮಯ ನಡೆದಿರುವುದು ವರದಿಯಾಗಿದೆ. ಶಿರಡಿ ಸಾಯಿ ಬಾಬಾರ ಮಣ್ಣಿನ ಮೂರ್ತಿಯೊಂದು ಸರಿಯಾಗಿ ಗುರುವಾರದ ಗುರು ಪೌರ್ಣಮಿಯಂದು ಎಡಗಳನ್ನು ತೆರೆದಿದೆ! ಅದನ್ನು ಸಾಯಿಬಾಬಾ ಕೃಪಾಕಟಾಕ್ಷ ಎಂದುಕೊಂಡು ಭಕ್ತರು ದಾಂಗುಡಿ ಇಡುತ್ತಿದ್ದಾರೆ, ನಾಸ್ತಿಕರು ಉಡಾಫೆಯಿಂದಲಾದರೂ ಒಮ್ಮೆ ನೋಡಿಕೊಂಡು ಬರಲು ಸಾಲು ನಿಂತಿದ್ದಾರೆ. ಟಿವಿ ಚಾನಲ್‌ಗಳು ಸಿಕ್ಕಿತೆಮಗಿಂದು ರಸಗವಳ ಎಂದುಕೊಂಡು ನಾಲ್ಕು-ಐದು ತಾಸು ತಮ್ಮನ್ನು ಹರಾಜು ಹಾಕಿಕೊಂಡಿವೆ. ಪತ್ರಿಕೆಗಳು ಜನಮರುಳೋ, ಜಾತ್ರೆ ಮರುಳೋ ಸಂಪಾದಕರಿಗೆ ಮರುಳೋ ತಿಳಿಯದೆ ಕಂಗಾಲಾಗಿವೆ. ಈ ಮಧ್ಯೆ ಸುದ್ದಿಯ ಆಜುಬಾಜುಗಳನ್ನು ತಡಕಿ ವರದಿ ಮಾಡುವ ನಗೆ ಸಾಮ್ರಾಟರು ಸಾಯಿ ಬಾಬಾ ತೆರೆದದ್ದು ಒಂದೇ ಕಣ್ಣನ್ನೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಯಿಬಾಬಾ ಒಂದೇ ಕಣ್ಣು ತೆರೆದದ್ದು ಏಕೆ ಎಂದು ತಮ್ಮೆರಡು ಕಣ್ಣುಗಳ ಮೇಲೆ ಚಾಳೀಸು ಏರಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ತನಿಖೆಗೆ ಹೊರಟಿದ್ದ ನಗೆ ಸಾಮ್ರಾಟರು ತಮ್ಮ ಎಂದಿನ ಚಾಕಚಕ್ಯತೆಯಿಂದ ತನಿಖೆಗೆ ತಯಾರಿ ಮಾಡಿಕೊಂಡರು. ಉದ್ಗ್ರಂಥಗಳನ್ನು ಓದಿ, ದೊಡ್ಡವರನ್ನು ಮಾತನಾಡಿಸಿ ವಿಷಯ ಸಂಗ್ರಹಿಸುವುದು ಅವರ ವಾಡಿಕೆ. ಹಿಂದೊಮ್ಮೆ ಯಾರೋ ಬುದ್ಧಿವಂತರು ಲಂಕೇಶರ ಬಗ್ಗೆ ಹೇಳಿದ್ದು ಗಮನಕ್ಕೆ ಬಿತ್ತು. ಅಡಿಗರ ಕಾವ್ಯವನ್ನು ಮೆಚ್ಚಿ ಲಂಕೇಶರು ಅಡಿಗರು ನನ್ನ ಕಣ್ಣ ತೆರೆಸಿದರು ಎಂದು ಹೇಳಿಕೊಂಡಿದ್ದರು. ಅದಕ್ಕೆ ಟಾಂಗು ಕೊಟ್ಟ ಮಹಾಶಯರಾರೋ ಅಡಿಗರು ತೆರೆಸಿದ್ದು ಲಂಕೇಶರ ಒಂದೇ ಕಣ್ಣನ್ನೇ ಎಂದು ಗೇಲಿ ಮಾಡಿದ್ದರು, ಡಯಾಬಿಟಿಸ್ ಅವರಿಗೆ ಕರುಣಿಸಿದ ಒಂಟಿ ಕಣ್ಣನ್ನು ಹೀಯಾಳಿಸಿ. ಬಹುಶಃ ಈ ಸಂಗತಿ ತನಿಖೆಯಲ್ಲಿ ಸಹಾಯವಾಗಬಹುದು ಎಂದು ಸಾಮ್ರಾಟರು ನೋಟ್ ಮಾಡಿಟ್ಟುಕೊಂಡರು.

ಸಾಮ್ರಾಟರು ಬ್ಲ್ಯಾಕ್ ಟಿಕೆಟ್ಟು ತೆಗೆದುಕೊಂಡು ಪೊಲೀಸರಿಗೆ ಬೆಚ್ಚಗೆ ಮಾಡಿ ಸಾಲಿನಲ್ಲಿ ಮುಂದಕ್ಕೆ ಹಾರಿ ಬಸವನಗುಡಿಯ ಆ ಮನೆಗೆ ಹೋಗಿ ಶಿರಡಿ ಬಾಬಾರ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತರು. ಒಮ್ಮೆಗೆ ಸಾಯಿ ಬಾಬಾ ಕಣ್ಣು ಮಿಟುಕಿಸಿದಂತೆ ಭಾಸವಾಗಿ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಂತಾಯ್ತು. ಸಾವರಿಸಿಕೊಂಡು ವಿಗ್ರಹದ ಆಜುಬಾಜು ಪರೀಕ್ಷಿಸಲು ಮುಂದಾದರು. ಏನೂ ಕಾಣಲಿಲ್ಲ. ಇನ್ನೂ ಹೆಚ್ಚು ಪ್ರಯತ್ನ ಪಟ್ಟರೆ ಅಲ್ಲಿನ ಭಕ್ತರು-ಆದಿಗಳು ತಮ್ಮನ್ನು ಚಚ್ಚಿ ಬದನೇಕಾಯಿ ಮಾಡುತ್ತಾರೆಂಬ ಎಚ್ಚರದಿಂದ ತಣ್ಣಗೆ ಕುಳಿತು ಯೋಚಿಸಲು ಶುರು ಮಾಡಿದರು. ಥಟ್ಟನೆ ಸಾಮ್ರಾಟರಿಗೆ ಒಕ್ಕಣ್ಣು ಶುಕ್ಲಾಚಾರ್ಯರ ನೆನಪಾಯಿತು. ಕೃಷ್ಣನ ಕೈಲಿ ದರ್ಭೆಯಿಂದ ಚುಚ್ಚಿಸಿಕೊಂಡು ಒಂದು ಕಣ್ಣು ಕುರುಡಾಗಿಸಿಕೊಂಡ ಆ ಆಚಾರ್ಯರನ್ನು ಒಕ್ಕಣ್ಣು ಶುಕ್ಲಾಚಾರ್ಯರು ಎಂದು ಕರೆಯಲು ಶುರುವಾಯಿತು. ಬಹುಶಃ ಈ ಬಾಬಾರಿಗೂ ಎರಡು ಕಣ್ಣುಗಳಿದ್ದು ಒಂದು ಕಣ್ಣನ್ನು ಭಕ್ತರ ಭಕ್ತಿ ಏನಾದರೂ ಮುಚ್ಚಿಸಿಬಿಟ್ಟಿದೆಯಾ ಎಂದು ಸಾಮ್ರಾಟರಿಗೆ ಸಂಶಯ ಬಂತು. ಹತ್ತಿರದಲ್ಲಿ ಅಂಥ ಭಕ್ತರು ಯಾರಾದರೂ ಇದ್ದಾರೆಯಾ ಎಂದು ಹುಡುಕಿಸಿದರು. ಪ್ರಯೋಜನವಾಗಲಿಲ್ಲ. ಆ ಆಯಾಮವನ್ನು ಕೊಂಚ ಬದಿಗಿಟ್ಟು ಯೋಚಿಸಲು ಶುರು ಮಾಡಿದರು.

ಹಿಂದೊಮ್ಮೆ ಗಣೇಶ ಹಾಲು ಕುಡಿದ ಪವಾಡ ಕಾಳ್ಗಿಚ್ಚಿನಂತೆ ವ್ಯಾಪಿಸಿದ್ದಾಗ ನಗೆ ಸಾಮ್ರಾಟರು ತನಿಖೆ ಕೈಗೊಂಡು ಸತ್ಯಾಂಶವನ್ನು ಬಯಲು ಮಾಡಿದ್ದರು. ಗಣೇಶ ಬರೀ ಹಾಲು ಕುಡಿಯುತ್ತಾನೆ ಎಂಬುದು ಭಕ್ತ ಜನರು ಹಬ್ಬಿಸಿರುವ ವದಂತಿ. ಆತ ನೀರನ್ನೂ ಕುಡಿಯುತ್ತಾನೆ, ಪೆಪ್ಸಿ ಕೋಲಗಳನ್ನೂ ಕುಡಿಯುತ್ತಾನೆ, ಒಟ್ಟಿನಲ್ಲಿ ದ್ರವವಾದ ಏನನ್ನಾದರೂ ಕುಡಿಯುತ್ತಾನೆ ಎಂದು ಸಾಮ್ರಾಟರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದರು.(ಆದರೆ ಆ ವರದಿಯ ಲಿಂಕನ್ನು ಕೊಡೋಣವೆಂದರೆ ಭಕ್ತಾದಿಗಳನ್ನು ಅದನ್ನು ಎಗರಿಸಿ ಬಿಟ್ಟಿದ್ದಾರೆ!) ಈಗ ಬಾಬಾ ಪವಾಡದ ಹಿಂದಿನೆ ರಹಸ್ಯವನ್ನು ಬೇಧಿಸಲು ತಿಣುಕಿ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಕರೆಸಿಕೊಂಡರು.

ಕುಚೇಲ ಸಹ ‘ನವಗ್ರಹ’ ಟಿವಿಗಳ ಕಾಟದಿಂದ ಮೂರ್ತಿಯನ್ನು ತಪ್ಪಿಸಿ ಮೂಲೆಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದ. ಅನಂತರ ಏನೋ ಗೂಢವಾದದ್ದನ್ನು ಕಂಡು ಹಿಡಿದವನ ಹಾಗೆ ಮುಖವನ್ನು ಕೆಳಗೆ ಹಾಕಿಕೊಂಡ. ಏನೆಂದು ಕೇಳಿದರು ಸಾಮ್ರಾಟ್. ‘ಬಾಬಾ ಅಳುತ್ತಿದ್ದಾರೆ, ಅದೂ ಒಂದೇ ಕಣ್ಣಲ್ಲಿ’ ಎಂದ ಚೇಲ. ‘ಯಾಕಂತೆ ಕೇಳು’ ಪುಸಲಾಯಿಸಿದರು ಸಾಮ್ರಾಟ್. ‘ತಾನು ಭಕ್ತರ ಪ್ರೀತಿಗೆ ಮೆಚ್ಚಿ ಕೃಪಾಕಟಾಕ್ಷ ಬೀರೋಣ ಅಂದುಕೊಂಡು ಎರಡೂ ಕಣ್ಣು ತೆರೆಯುವವನಿದ್ದೆ. ಒಂದು ಕಣ್ಣು ತೆರೆಯುತ್ತಿದ್ದ ಹಾಗೆಯೇ ಭಕ್ತರು ನನಗೆ ನಮಿಸುವುದನ್ನು ಮರೆತು ಟಿವಿಯವರಿಗೆ ಫೋನ್ ಮಾಡಲು ನುಗ್ಗಿದರು. ನನಗೆ ಗಾಬರಿಯಾಗಿ ಇನ್ನೊಂದು ಕಣ್ಣು ತೆರೆಯದೆ ಹಾಗೇ ಇಟ್ಟುಕೊಂಡಿರುವೆ. ಮೇಲಾಗಿ ಬೆಂಗಳೂರಿನ ಈ ಮಾಲಿನ್ಯಗೊಂಡ ಹವೆಯಲ್ಲಿ ಎರಡೂ ಕಣ್ಣು ತೆರೆದಿಡುವುದು ರಿಸ್ಕು ಅಲ್ಲವಾ?’ ಎಂದರಂತೆ ಬಾಬಾ. ಸಾಮ್ರಾಟರು ಕುತೂಹಲದಿಂದ ಕೇಳಿದ್ದನ್ನೆಲ್ಲಾ ನೋಟ್ ಮಾಡಿಟ್ಟುಕೊಂಡರು.

ಈ ಮಧ್ಯೆ ಬಾಬಾ ಒಂಟಿ ಕಣ್ಣನ್ನು ತೆರೆದಿರುವುದು ಸಂತೋಷಕ್ಕೋ ದುಃಖಕ್ಕೋ ಎಂದು ಭಕ್ತಾದಿಗಳು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೆಲವು ಲೌಕಿಕರು ಬಾಬಾ ಮೂರ್ತಿ ನೋಡುವುದಕ್ಕೆ ಫೀಸು ಜಾಸ್ತಿಯಾಯ್ತಲ್ಲವಾ ಎಂದು ಗೊಣಗುತ್ತಿದ್ದರು. ಇನ್ನೂ ಕೆಲವು ಉಗ್ರ ವ್ಯಗ್ರ ಭಕ್ತಾದಿಗಳು ಪತ್ರಕರ್ತರು, ಬುದ್ಧಿ ಜೀವಿಗಳು, ನಾಸ್ತಿಕರು, ವಿಚಾರವಾದಿಗಳು ಹಾಗೂ ವಿಜ್ಞಾನಿಗಳಿಗೆ ಪ್ರವೇಶವಿಲ್ಲ ಎಂದು ಒಂದು ಬೋರ್ಡನ್ನು ಬರೆಸುತ್ತಿದ್ದರು. ಕೆಲವೆಡೆ ಮುಗ್ಧ ಭಕ್ತರು ತಮ್ಮ ಮನೆಯ ಮೂರ್ತಿಗಳ ಮುಂದೆ ಕುಳಿತುಕೊಂಡು ‘ಒಂದು ಕಣ್ಣಾದರೂ ತೆರೆದು ಸೇವೆಯನು ಕೊಡು ಪ್ರಭುವೆ…’ ಎಂದು ಭಕ್ತಿರಸವನ್ನು ಹರಿಸಿ ಹಾಡುತ್ತಿದ್ದದ್ದು ಕಂಡು ಬಂದಿತು. ಕೆಲವು ತತ್ವಜ್ಞಾನಿಗಳು ಬಾಬಾ ಒಂದು ಕಣ್ಣು ತೆರೆದರೋ ಅಥವಾ ತೆರೆದಿದ್ದ ಎರಡು ಕಣ್ಣುಗಳಲ್ಲಿ ಒಂದನ್ನು ಮುಚ್ಚಿದರೋ ಎಂದು ಗಾಢವಾಗಿ ಸಮಾಲೋಚಿಸುತ್ತಿದ್ದರು. ಕೆಲವು ತುಂಟ ಪಡ್ಡೆಗಳು ಬಾಬಾ ಯಾರಿಗೆ ಕಣ್ಣು ಹೊಡೆಯುತ್ತಿದ್ದಾರೆ ಅಂತ ತನಿಖೆಗೆ ಇಳಿದುಬಿಟ್ಟಿದ್ದವು. ಇನ್ನೂ ಕೆಲವು ತರ್ಕ ಬುದ್ಧಿಗಳು ‘ಬಾಬಾ ಎರಡು ಕಣ್ಣು ತೆರೆದಿಲ್ಲ. ಇಲ್ಲೇ ಇರೋದು ಲಾಜಿಕ್! ಎರಡೂ ಕಣ್ಣು ತೆರೆದಿರುವ ವಿಗ್ರಹಗಳು ಸಾವಿರಾರು ಸಿಕ್ಕುತ್ತವೆ. ಜನರ್ಯಾರೂ ಅವುಗಳ ಹಿಂದೆ ಬೀಳುವುದಿಲ್ಲ. ಆದರೆ ಒಂದೇ ಕಣ್ಣು ತೆರೆದರೆ ಅಲ್ಲವೇ ಜನರನ್ನು ಸೆಳೆಯುವುದಕ್ಕೆ ಆಗುವುದು?’ ಎಂದು ಮೆಲ್ಲಗೆ ಪಕ್ಕದವನಲ್ಲಿ ಪಿಸುಗುಟ್ಟುತ್ತಿದ್ದ. ದೂರದಲ್ಲಿ ಕುಳಿತಿದ್ದ ವೇದಾಂತಿ, ‘ಪ್ರತಿ ಬೆಳಗು, ಪ್ರತಿ ಇರುಳು, ಸುಯ್ವ ತಂಗಾಳಿ ಎಲ್ಲವೂ ದೇವರ ಪವಾಡ ಅದನ್ನು ನೋಡಿ ಪರವಶವಾಗುವ ಬದಲು ಜನ ಇಲ್ಲಿ ಸಾಲುಗಟ್ಟಿ ತೂಕಡಿಸುತ್ತಿದ್ದಾರೆ’ ಎಂದು ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದ.

ಸಾಮ್ರಾಟರು ತಿಣುಕಿ, ಚಡಪಡಿಸಿ ಕೊನೆಗೂ ರಹಸ್ಯವನ್ನು ಬಯಲು ಮಾಡಿದರು. ಅದನ್ನು ಜಗಜ್ಜಾಹೀರುಗೊಳಿಸಲು ತೀರ್ಮಾನಿಸಿದ್ದಾರೆ. ಭಗವಂತನ ಸಂದೇಶವನ್ನು ಮಾನವ ಕುಲಕ್ಕೆ ತಿಳಿಸಲು ಬಯಸಿದ್ದಾರೆ. ಅವರ ವರದಿ ಹೀಗಿದೆ: ‘ವಿಜ್ಞಾನ ಹಾಗೂ ಆಧ್ಯಾತ್ಮ ಇವೆರಡು ನಿಸರ್ಗದ ಎರಡು ಕಣ್ಣುಗಳು. ಒಂದು ಕಣ್ಣು ಹೊರಗಿನದನ್ನು ನೋಡಲು. ವಿಜ್ಞಾನ ನಮಗೆ ಹೊರಗಿನ ಜಗತ್ತಿನ ಸಂಗತಿಗಳನ್ನು, ವಿಸ್ಮಯಗಳನ್ನು ನೋಡಲು ಸಹಾಯ ಮಾಡುತ್ತದೆ. ಇದರಿಂದ ಲೌಕಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇನ್ನೊಂದು ಕಣ್ಣು ಒಳಗಣ್ಣು. ಇದು ಆಧ್ಯಾತ್ಮದ ಕಣ್ಣು. ಇದು ನಮ್ಮೊಳಗನ್ನು ನಮಗೆ ದರ್ಶಿಸುವ ಕಣ್ಣು. ಇದರಿಂದ ಮನುಷ್ಯ ಮನೋಲೋಕದ ವಿಸ್ಮಯಗಳನ್ನು, ಮನಸ್ಸಿನ ಆಳ ಅಗಲಗಳನ್ನು, ತನ್ನ ಪ್ರಜ್ಞೆಯ ಮಹತ್ತನ್ನು ಕಾಣಬಹುದು. ಬಾಬಾ ಈ ಸಂದೇಶವನ್ನು ಸಾರುವುದಕ್ಕಾಗಿಯೇ ಒಂದು ಕಣ್ಣನ್ನು ತೆರೆದು ಮತ್ತೊಂದು ಕಣ್ಣನ್ನು ಮುಚ್ಚಿಕೊಂಡು ಕುಳಿತಿದ್ದಾರೆ.’

ಚರ್ಚೆ: ನಗದ ಜೀವಿ= ಬುದ್ಧಿ ಜೀವಿ?!

18 ಜುಲೈ

ಸಂಪಾದಕರು ಎಂದೊಡನೆಯೇ ಒಂದು ಚಿತ್ರಣ ನಮ್ಮೆದುರು ಬರುತ್ತದೆ. ಜೋಲು ಮುಖ ಹಾಕಿಕೊಂಡು ಕಣ್ಣುಗಳಲ್ಲಿ ಗಾಢ ಆಲೋಚನೆಯನ್ನು ನಟಿಸುತ್ತಾ ಸಿಗರೇಟನ್ನು ಸುಡುತ್ತಾ ಗಡ್ಡ ನೀವಿಕೊಳ್ಳುವ ವ್ಯಕ್ತಿ ಕಾಣುತ್ತಾನೆ. ಆತನಿಗೆ ಹಾಸ್ಯ, ನಗು ನಿಷಿದ್ಧ ಎಂಬುದು ಅಲಿಖಿತ ಶಾಸನವಾಗಿರುತ್ತದೆ. ಸಂಪಾದಕರುಗಳು, ಅದರಲ್ಲೂ ಬಹುದೊಡ್ಡ ದಿನಪತ್ರಿಕೆಯ ಸಂಪಾದಕರು ಕೇವಲ ‘ಬುದ್ಧಿ’ ಇಲ್ಲವೆ ‘ಸುದ್ದಿ’ ಜೀವಿಯಾಗಿರಬೇಕು ಎಂಬ ಅಭಿಪ್ರಾಯ ಜನಮಾನಸದಲ್ಲಿ ನೆಲೆ ನಿಂತಿದೆ. ಆತ ಹಾಸ್ಯ ಜೀವಿಯೂ, ರಸಿಕ ಜೀವಿಯೂ ಆಗಿರಬಹುದು ಎಂಬ ಸಾಧ್ಯತೆಯೇ ನಮ್ಮಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಗಂಭೀರವಲ್ಲದ ವ್ಯಕ್ತಿ ಕೊಡುವ ಮಾಹಿತಿಗೆ ವಿಶ್ವಾಸಾರ್ಹತೆ ಇರುತ್ತದೆಯೋ ಎಂದು ನಾವು ಯೋಚಿಸುತ್ತೇವೆ. ಬಹುತೇಕ ದಿನ ಪತ್ರಿಕೆಗಳ ಸಂಪಾದಕರು ಸಹ ಹೀಗೇ ಇರುತ್ತಾರೆ. ಜನರೂ ಸಹ ಅವರನ್ನು ಹಾಗೇ ಕಾಣಲು ಇಷ್ಟ ಪಡುತ್ತಾರೆ.

ಆದರೆ ಅಲ್ಲಲ್ಲಿ ಕೆಲವು ಅಪವಾದಗಳು ಬೆಟ್ಟದ ಹಾಗೆ ಬೆಳೆದು ನಿಂತು ಅಚ್ಚರಿಯನ್ನು ಉಂಟು ಮಾಡುತ್ತವೆ. ಕನ್ನಡ ಪ್ರಭಾದ ಸಂಪಾದಕರಾಗಿದ್ದ ವೈ.ಎನ್.ಕೆ ‘ಘಾ’ ಎಂದು ಹೂಂಕರಿಸುತ್ತಿದ್ದುದನ್ನು ನೆನೆಸಿಕೊಂಡರೆ ಸಂಪಾದಕ ಹೀಗೂ ಇರಬಹುದಾ ಎಂದು ಆಶ್ಚರ್ಯವಾಗುತ್ತದೆ. ನಮ್ಮ ನಡುವೆ ಇರುವ ಮತ್ತೊಬ್ಬ ಸಂಪಾದಕ ಸಹ ಇಂಥದ್ದೇ ಅಚ್ಚರಿಯನ್ನು ನಮ್ಮಲ್ಲಿ ಹುಟ್ಟಿಸುತ್ತಾರೆ. ಅವರು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ರು. ಸಂಪಾದಕರ ಅಂಕಣದ ತುಂಬಾ ಜೋಕುಗಳು ತುಂಬಿರಬಹುದು ಎಂದು ಕನಸಿನಲ್ಲೂ ನಾವು ಯೋಚಿಸಲು ಸಾಧ್ಯವಾಗದು. ಅಂಥ ಶಾಕ್ ಕೊಟ್ಟವರು ಭಟ್ಟರು. ಭಾನುವಾರದ ಕಾಲಮ್ಮಿನಲ್ಲೂ ಓದುಗರು ಕಳುಹಿಸಿದ ಜೋಕುಗಳನ್ನು ಹಾಕಿಕೊಂಡು ಕುಶ್ವಂತ್ ಸಿಂಗ್ ಸಂಪ್ರದಾಯ ಪಾಲಿಸುತ್ತಿರುವ ಭಟ್ಟರ ಹಾಗೂ ಅವರ ಪತ್ರಿಕೆಯ ವಿಶ್ವಾಸಾರ್ಹತೆಯ ಮೇಲೆ ಯಾರಿಗೂ ಸಂಶಯವಿಲ್ಲ.

ಹಾಗಾದರೆ ಬುದ್ಧಿ ಜೀವಿಯಾಗುವುದಕ್ಕೂ, ನಗದಿರುವುದಕ್ಕೂ (‘ನಗದು’ ಇಲ್ಲದಿರುವುದು ಎಂದು ಅರ್ಥೈಸಿಕೊಂಡರೆ ನಾವು ಜವಾಬ್ದಾರರಲ್ಲ) ಸಂಬಂಧವಿದೆಯೇ? ಜ್ಞಾನದ ಭಾರ ತಲೆಯಲ್ಲಿ ಹೆಚ್ಚಾದಷ್ಟೂ ನಗು ಮುಖದಲ್ಲಿ ಹೂತು ಹೋಗುತ್ತದೆಯೇ?

ನಗಾರಿ ರೆಕಮಂಡೇಶನ್ 10

17 ಜುಲೈ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

………………………………………………………………

ಇವರನ್ನು ನೂರು ದನಿಯ ಮನುಷ್ಯ ಎಂದೇ ಕರೆಯಬಹುದು. ಧ್ವನಿಯಲ್ಲೇ ನೂರಾರು ವ್ಯಕ್ತಿತ್ವಗಳನ್ನು ಆವಾಹಿಸಿಕೊಳ್ಳುವ ಇವರನ್ನು ಸಿಂಪಲ್ಲಾಗಿ ಹೇಳಬೇಕೆಂದರೆ ಮಿಮಿಕ್ರಿ ಕಲಾವಿದ ಎನ್ನ ಬಹುದು. ಹೌದು, ಕನ್ನಡದಲ್ಲಿ ಮಿಮಿಕ್ರಿ ಎಂಬ ಪದಕ್ಕೆ ಪರ್ಯಾಯವಾಗಿರುವವರು ಮಿಮಿಕ್ರಿ ದಯಾನಂದ್.

ಮಿಮಿಕ್ರಿ ಕಲಾವಿದರೆಂಬುವವರು ಹೆಸರಾಂತ ನಾಯಕರ ಅಗ್ಗದ ಅನುಕರಣೆಯಲ್ಲೇ ತೊಡಗಿಕೊಂಡು ಮನರಂಜನೆಯ ಹೆಸರಿನಲ್ಲಿ ಮನೋವೇದನೆಯನ್ನು ಕೊಡುತ್ತಾ, ಮಿನಿ-ಕ್ರಿಮಿಗಳಾಗಿರುವುದು ಟಿವಿಗಳಲ್ಲಿ, ಸ್ಟೇಜ್ ಶೋಗಳಲ್ಲಿ ದಿನೇ ದಿನೇ ಸಾಬೀತಾಗುತ್ತಿದೆ. ಮಿಮಿಕ್ರಿ ಎಂಬುದು ಕೇವಲ ಅನುಕರಣೆಯಲ್ಲ ಅದೂ ಸಹ ಒಂದು ಕಲೆ ಎಂಬುದನ್ನು ದಯಾನಂದ್ ತುಂಬಾ ಬೇಗ ಮನದಟ್ಟು ಮಾಡಿಕೊಂಡಿದ್ದಾರೆ. ಅನುಕರಣೆ ಮಾಡುತ್ತಲೇ ಮಾಡುತ್ತಲೇ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುವ ಅನೇಕ ಕಲಾವಿದರು ಗಮನಿಸಬೇಕಾದ ಅಂಶವಿದು.

ಹಾಸ್ಯಕ್ಕೆ ಮಿಮಿಕ್ರಿ ಬಹುದೊಡ್ಡ ಸಲಕರಣೆಯಾಗಿ ಬಳಕೆಯಾಗಬಲ್ಲದು ಎಂಬುದಕ್ಕೆ ದಯಾನಂದ್ ನಡೆಸಿಕೊಟ್ಟಿರುವ ಇದುವರೆಗಿನ ೬೮೦ ಟಿವಿ ಶೋಗಳು, ೨೭೦ ಲೈವ್ ಪ್ರದರ್ಶನಗಳೇ ಸಾಕ್ಷಿ. ಇಂಥ ವ್ಯಕ್ತಿಯೊಬ್ಬರ ಪರಿಚಯ ಹಾಗೂ ಪ್ರೊಫೈಲ್ ಅಂತರ್ಜಾಲದಲ್ಲಿ ಲಭ್ಯವಿದೆ. ಅವರದೇ ಆದ ಬ್ಲಾಗ್ ಇದೆ, ಆದರೆ ಅದು ಅಪಡೇಟ್ ಆಗಿಲ್ಲವಷ್ಟೇ. ಮಾಸ್ಟರ್ ಹಿರಣ್ಣಯ್ಯನವರ ಪ್ರೊಫೈಲ್‌ನ್ನು ಹಿಂದೆ ಪರಿಚಯಿಸಿದ್ದೆವು. ಈ ಬಾರಿ ದಯಾನಂದ್‌ಗೆ ದಾರಿಬಿಡಿ!

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗಲಿಕ್ಕೊಂದು ಚಿತ್ರ

16 ಜುಲೈ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಹೂಂ… ಅಣು ಒಪ್ಪಂದದ ಬಗ್ಗೆ ಏನಂತ ತೀರ್ಮಾನಕ್ಕೆ ಬರೋದು!