Archive | ಆಗಷ್ಟ್, 2010

ಕೋಮಲ್ ಕಾಲಂ: ಗೌಡಪ್ಪ ವೀಕ್ ಆಗವ್ನೆ

31 ಆಗಸ್ಟ್

ಕೆರೆ ತಾವದಿಂದ ಬತ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ್ದೆ ಸಾನೇ ದಪ್ಪಾ ಇದೆಯಾ ಸುಗರ್ 400ಪಾಯಿಂಟ್ ಆಯ್ತದೆ. ತೆಳ್ಳಗೆ ಆಗು ಅಂದ್ಯಾರೆ ಅದಕ್ಕೆ ಬಾಡಿ ಇಳಿಸ್ತಾ ಇದೀನಿ ಕಲಾ. ಅಂಗೇ ಇನ್ಸುಲೇಸನ್ ಸ್ಟಾಪ್ ಮಾಡೀವ್ನಿ. ನೋಡಲಾ ಮೈನಾಗೆ ಇರೋ ತೂತೆಲ್ಲಾ ಮುಚ್ಚೈತೆ ಅಂದ. ಸರಿ ಕೈನಾಗೆ ಚೊಂಬು ಯಾಕೆ ಅಂದೆ. ನೋಡಲಾ ಎಲ್ಲಿ ಕೂರಬೇಕು ಅನ್ನಿಸ್ತದೋ ಅಲ್ಲೇ ಕೂರ್ತೀನಿ ಅದಕ್ಕೆ ಕಲಾ ಅಂದ ಗೌಡಪ್ಪ. ಮತ್ತೆ ವಾಸನೆ ಹೋಗೋದಿಕ್ಕೆ ಯಾವುದು ಔಷಧಿ ಹೇಳಿಲ್ವಾ ಅಂದೆ. ಹೋಗಲಾ ತಲೆ ತಿನ್ನಬೇಡ ಅಂದ. ಮಗಂದು ಬೆವರು ವಾಸನೆ ಅಂಗೇ ಗಮ್ ಅಂತಾ ಮೂಗಿಗೇ ಹೊಡೆಯೋದು. ಸರಿ ಬುಡಿ,  ನಂಗೆ ಸಾನೇ ಅರ್ಜೆಂಟ್ ಆಗೈತೆ ಆಮ್ಯಾಕೆ ಸಿಕ್ತೀನಿ ಅಂದು ಹೊಂಟು ಸ್ವಲ್ಪ ಹೊತ್ತಿಗೇನೆ ಧಪ್ ಅಂತಾ ಸವಂಡ್ ಬಂತು. ಏನು ಅಂತಾ ನೋಡಿದ್ರೆ ಗೌಡಪ್ಪ ಸಗಣಿ ಮ್ಯಾಕೆ ಕಾಲಿಟ್ಟು ಕಿಸ್ಕಂಡಿದ್ದ. ಎಬ್ಬಿಸಿ ಮತ್ತೆ ಜಾಗಿಂಗ್ ಪ್ರೋಸೆಸ್ ಸುರು ಮಾಡಿಸ್ದೆ.

ಬೆಳಗ್ಗೆ ಗೌಡಪ್ಪನ ಮನೆಗೆ ಹೋದ್ರೆ, ನಮ್ಮ ಹಳಸೋದ ಫಲಾವು ವಾಸನೆಯ ಗೌಡಪ್ಪ ಪೇಪರ್ ಓದ್ತಾ ಇದ್ದ. ಗೌಡ್ರೆ ಅಂತೂ ನೀವು ಪೇಪರ್ ಓದೋ ಹಂಗೆ ಆದ್ರಲಾ ಅದೇ ಖುಸಿ. ಕರವೇಯಕ್ಕೆ ಹೇಳ್ಬೇಕು ಅಂದೆ. ಮಗಂದು ಯಾವುದೋ ಸಾಮಾನು ಕಟ್ಟಿಸ್ಕಂಡ್ ಬಂದ್ ಪೇಪರ್ ಓದ್ತಾ ಇದ್ದ. ಅದೂ ದೇವೆಗೌಡರು ಪ್ರಧಾನ ಮಂತ್ರಿಯಾಗಿದ್ದು ಕಾಲ. ಏ ಥೂ. ಮನೇಲ್ಲಿ ತಕ್ಕಡಿ ಇತ್ತು. ಇದೇನು ಗೌಡಪ್ಪ ಏನಾದರೂ ಸೊಪ್ಪು ವ್ಯಾಪಾರ ಸುರುಹಚ್ಕಂಡನಾ ಅಂತಾ ಅನ್ಕೊಂತ್ತಿದ್ದಾಗೆನೇ, ಗೌಡಪ್ಪನ ಹೆಂಡರು 100ಗ್ರಾಂ ಕಲ್ಲು ಇಟ್ಟು ಹಿಂದಿನ ದಿನದ ಅನ್ನ ತೂಕ ಮಾಡಿದ್ಲು. ಹಂಗೇ 50ಗ್ರಾಂ ಕಲ್ಲು ಇಟ್ಟು ಸಾರು ತೂಕ ಮಾಡಿದ್ಲು. 25ಗ್ರಾಂ ಇಟ್ಟು ಮುದ್ದೆ ತೂಕ ಮಾಡಿದ್ಲು. ನೋಡವ್ವ ಸರಿಯಾಗೈತಾ ತೂಕ ಅಂದಾ ಗೌಡಪ್ಪ. ಹೂಂ ಸರಿ ಐತೆ ರೀ ಅಂತು. ಒಂದು ಗ್ರಾಂ ಜಾಸ್ತಿ ಆಗಬಾರದು ಅಂದ ಗೌಡಪ್ಪ. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ಡಾಕಟರು ಹೇಳವ್ರೆ ಎಲ್ಲಾನೂ ತೂಕದ ಲೆಕ್ಕದಾಗೆ ತಿನ್ನು ಹಂಗಾದ್ರೆ ಮಾತ್ರ ಸರಿ ಆಯ್ತೀಯಾ ಅಂದವ್ರೆ ಅದಕ್ಕೆ ಕಲಾ ತಕ್ಕಡಿ ತಂದೀವ್ನಿ ಅಂದ. ಮಗಾ ಅದಕ್ಕೆ 50ರೂಪಾಯಿ ಕೊಟ್ಟು ಸರ್ಕಾರದ ಸೀಲ್ ಬೇರೆ ಹಾಕ್ಸಿದ್ದ ಬಡ್ಡೀ ಮಗ. ಅದ್ರಾಗೆ 20ಗ್ರಾಂ ಬಟ್ಟು ಕಳೆದು ಹೋಗಿತ್ತು ಅಂತಾ ಗೌಡನ ಹೆಂಡರು ಮಂಚದ ಕೆಳಗೆ  ಗೌಡಪ್ಪನ ಪಂಚೆ ಎತ್ತಿ ಹುಡುಕ್ತಾ ಇದ್ಲು. ಏ ಥೂ.

ಸರಿ ಗೌಡಪ್ಪನ ಹೆಂಡರು ಮಟನ್ ತಂದು 10ಗ್ರಾಂ ಬಟ್ಟು ಇಟ್ಟು ತೂಕ ಮಾಡಿದ್ಲು. 5ಗ್ರಾಂ ಜಾಸ್ತಿ ಬಂತು ಅದನ್ನ ಚಾಕೂನಾಗೆ ಕಟ್ ಮಾಡಿ ನಾಯಿಗೆ ಹಾಕಿದರೆ, ಮುಂಡೇದು ತಿನ್ಲಿಲ್ಲಾ ಹಂಗೇ ಹೋತು. ಗೌಡರೆ ನಾಳೆ ಮಟನ್ ಊಟ ಆಹಾ ಅಂದೆ. ಒಂದು ಹಲ್ಲಿಗೂ ಸಾಕಾಗಕಿಲ್ಲಾ, ಆದ್ರೂ ಏನ್ಲಾ ಮಾಡೋದು. ಮೂರು ಹೆಂಡರನ್ನ ಸಾಕುಬೇಕು ಕನ್ಲಾ ಅಂದ. ಮೂರನೇ ಹೆಂಡರು ಯಾರ್ರೀ ಗೌಡ್ರೆ ಅಂದೆ. ಅದೇ ಕಲಾ ನಮ್ಮ ಪೂಜಾರಪ್ಪನ ತಂಗಿ ಕಲಾ.ಅಯ್ಯೋ ನಿನ್ ಮುಖಕ್ಕೆ ನಿಂಗನ ಅಂಗಡಿ ಚಾ ಚಲ್ಟಾ ಹುಯ್ಯಾ ಅವಳನ್ನೂ ಬಿಡಲಿಲ್ವಾ ಅಂದೆ. ಅವನ ಹತ್ರ ಹೋಗ್ರೀ ಮಗಾ ಮಾಟ ಮಾಡಿಸಿ ನಿಮ್ಮ ಕಣ್ಣು ತೆಗಿಸ್ತಾವ್ನೆ ಅಂದೆ. ಹಂಗಾರೆ ಬೇಡ ಬುಡ್ಲಾ ಅಂದ. ಮಗಾ ಯಾವಾಗಲೂ ತಲೆ ಬುರುಡೆ ಹಿಡ್ಕಂಡು ರಾತ್ರಿ ಮಸಾನ ತಾವ ಹೋಯ್ತಾ ಇದ್ದಾಗೆ ಡೌಟ್ ಇತ್ತು . ಮಗಾ ಅಘೋರಿ ಇದ್ದಂಗೆ ಅವನೆ ಕಲಾ ಅಂದ. ಅವನ ತಂಗಿ ಲೇಡಿ ಅಘೋರಿ ಇರಬೇಕು ಅಂದ. ನಿಮ್ಮನ್ನೂ ಮಸಾಣ ಕಾಯಕ್ಕೆ ವೀರಬಾಹು ತರಾ ಕಂಬಳ್ಯಾಗೆ ಅಂಗೇ ಒಂದು ಹೋಂ ಗಾರ್ಡ್ ಕೋಲು ಕೊಟ್ಟು ಬಿಡ್ತಾನೆ ಅಂದೆ.

ಸರಿ ನಮ್ಮ ಎಂದಿನ ಅಡ್ಡೆ ನಿಂಗನ ಚಾ ಅಂಗಡಿ ಅಡ್ಡೇ ತಾವ ಸೇರಿದ್ವಿ. ಗೌಡಪ್ಪ ಅರ್ಧ ಚಾ ಕುಡಿದು. ಸಲ್ಟು ತೆಗೆದು ಚೆಡ್ಯಾಗೆ ಪೋಸು ಕೊಟ್ಟ. ಅವನ ಕೈನಾಗೆ ಇರೋ ಬೈಸೆಪ್ಸ್ ನೋಡಿ ದೊನ್ನೆ ಸೀನ ಅಬ್ಬಬ್ಬಾ ಅಂದ. ಅಂಗೇ ಗೌಡಪ್ಪ 50ಡಿಪ್ಸ್ ಹೊಡೆದು ಆ ಕಡೆ ಹೋಗಿ ವಾಂತಿ ಮಾಡಿ ಬಂದ. ಯಾಕ್ರೀ ಗೌಡ್ರೆ, ನೀರು ಕೊಡಲಾ ನಿಂಗ ಅಂದ. ಈಗ ತಾನೆ ಊಟ ಮಾಡಿದ್ದೆ ಕಲಾ ಅದಕ್ಕೆ ಆಮ್ಲೇಟ್ ಹಾಕ್ದೆ. ಏ ಥೂ. ಸರೀ ಗೌಡಪ್ಪನ ಬಾಡಿ ಒಂದು ತರಾ ಮೂಲಂಗಿ ಆದಂಗೆ ಆಗಿತ್ತು, ಹೊಟ್ಟೆ ದಪ್ಪ. ಕೈ ಕಾಲು ಸಣ್ಣ. ಮಗಾ ಹಿರಣ್ಣಯ್ಯ ಕಟ್ಟಿದಂಗೆ ಚೆಡ್ಡಿ ಕಟ್ಟೋನು.

ಅದೇ ಸಮಯಕ್ಕೆ ನಮ್ಮೂರ್ನಾಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆ ಇತ್ತು. ನೋಡಿದ್ರೆ ಗೌಡಪ್ಪನೂ ಹೆಸರೂ ಕೊಟ್ಟವ್ನೆ. ಸರೀ ಸುರವಾತು. ನಮ್ಮ ತಂಬೂರಿ ಬಂದೋನೆ ಒಂದು 50ಕೆಜಿ ಅಕ್ಕಿ ಎತ್ತಿದ. ತಂತಿ ಪಕಡು ಸೀತು ಬಂದು ಒಂದು 100ಕೆಜಿ ಎತ್ತಿದ್ದ. ಸತ್ಯನಾರಾಯಣ ಪೂಜೆ ಪ್ರಸಾದ ಪ್ರಭಾವ. ಇದೀಗ ನಮ್ಮೂರ ಫೇಮಸ್ ಹಳಸೋದು ಫಲಾವು ವಾಸನೆಯ ಗೌಡಪ್ಪನವರು 150ಕೆಜಿ ಅಕ್ಕಿ ಎತ್ತುತ್ತಿದ್ದಾರೆ ಚಪ್ಪಾಳೆ. ಗೌಡ ಬಂದೋನೆ ಒಂದು ನಾಕು ಸಾಮು ಹೊಡೆದು ಎತ್ತಿ ಇಟ್ಟ. ಕಡೆಗೆ ಗೌಡಪ್ಪಂಗೆ ಪ್ರೈಸ್ ಕೊಟ್ವಿ. ಅದೂ ಪ್ರಾಥಮಿಕ ಸಾಲೇಯಲ್ಲಿ ಮಕ್ಕಳು ಗೆದ್ದಿರೋ ತುಕ್ಕು ಹಿಡಿದ ಕಬಡ್ಡಿ ಸೀಲ್ಡು.

ಬೆಳಗ್ಗೆ ಹೋದ್ರೆ ಗೌಡಪ್ಪನ ಬಲಗೈಗೆ ಬ್ಯಾಂಡೇಜ್ ಇತ್ತು. ಯಾಕ್ರೀ ಗೌಡ್ರೆ. ಬಲಗೈ ಡಿಸ್ ಲೊಕೇಟ್ ಆಗೈತೆ ಅಂದಾ. ಯಾಕ್ರೀ, ಮಗಂದು ಈರುಳ್ಳಿ ಚೀಲ ಜಾರತು ಕಲಾ ಅಂದ. ಅಂಗೇ ಭಟ್ಟಿ ಜಾರೈತೆ ಅಂತಾ ಒಂದು ಹತ್ತು ಕಿತಾ ಕೆರೆತಾವ ಹೋಗಿದ್ನಂತೆ. ದೊಡ್ಡ ಕರುಳು ಸಣ್ಣ ಕರುಳು ಹೋಗೈತೆ ಅಂದ. ಬೆಳಗ್ಗೆಯಿಂದ ತುಂಬಿಸಿದ್ದ ನೀರಿನ ಡ್ರಮ್ ಖಾಲಿಯಾಗಿತ್ತು. ನಿನ್ನ ಬಾಡಿಗೆ ಒಂದಿಷ್ಟು ಬೆಂಕಿ ಹಾಕ. ನೀರು ನೀನೇ ತೆಗೆದುಕೊಂಡು ಬಾ ಅಂತಾ ಗೌಡಪ್ಪನ ಹೆಂಡರು ಬಯ್ತಾ ಇದ್ಲು. ಗೌಡ್ರೆ ಏನ್ರೀ ನಿಮ್ಗೂ 6ಪ್ಯಾಕ್ ಬಂದೈತೆ ಅಂದೆ. ಲೇ ಅದು 6ಪ್ಯಾಕ್ ಅಲ್ಲ ಕಲಾ ಬೆನ್ನಿನ ಮೂಳೆ ಮುಂದೆ ಬಂದಿದೆ ಕಲಾ ಅಂದ. ಸರಿ ಅದೇ ಸಮಯಕ್ಕೆ ಕಟ್ಟಿಗೆ ಒಡೆಯೋ ಕಿಸ್ನ ಬಂದು ಗೌಡಪ್ಪನ ಪಕ್ಕ ಕೂತ. ಲೇ ಕಿಸ್ನ ನಿಮ್ಮಣ್ಣ ಯಾವಾಗ ಬಂದ್ ನಲಾ ಅಂದಾ ಸುಬ್ಬ. ಲೇ ನಮ್ಮ ಅಣ್ಣ ಅಲ್ಲ ಕಲಾ ಗೌಡಪ್ಪ ಕನ್ಲಾ ಅಂದ ಕಿಸ್ನ. ಗೌಡಪ್ಪ ಒಂದು ತರಾ ಕಟ್ಟಿಗೆ ಒಡೆಯೋರು ತರಾನೇ ಆಗಿದ್ದ. ಈಗ ಡಾಕಟರು ಹೇಳವ್ರಂತೆ ಇನ್ನೂ ವೀಕ್ ಆದ್ರೆ ನಿಮಗೆ ಡ್ರಿಪ್ಸ್ ಹಾಕಬೇಕು ಅಂತಾ. ಮಗಾ ಗೌಡಪ್ಪ ನಾಯಿ ಹೊಡಿಯೋ ಕೋಲು ಆದಂಗೆ ಆಗವ್ನೆ. ಹೆಂಡರು ಪಕ್ಕ ಹೋದರೆ ಮಗ ಕಂಡಂಗೆ ಕಾಣ್ತವ್ನೆ. ತಕ್ಕಡಿನಾ ಸಗಣಿ ತೂಗಕ್ಕೆ ಕೊಟ್ಟಿಗ್ಯಾಗೆ  ಹಾಕವ್ನೆ. ಜಾಗಿಂಗ್ ಅಂದ್ರೆ ಬೇಡ ಕಲಾ ದಪ್ಪ ಆಗಬೇಕು ಅಂತಾನೆ. ದಿನಾ ಒಂದು ಕೆಜಿ ಮಟನ್ ಅಂಗೇ ಒಂದು 5ಲೀ ಹಾಲು. ಗ್ಯಾಸ್ ಬೇರೆ. ಕೊಬ್ಬಿದ ಕುರಿ ಆದಂಗೆ ಆಗ್ತೀನಿ ನೋಡ್ರಲಾ ಅಂತಾನೆ ಬಡ್ಡೇ ಹತ್ತದ್ದು.

ಚಟಕ್ಕೆ ಹೊಸ ಚಟ – ಬಿಡುಗಡೆಗೆ ಒಂದು ದಾರಿ

23 ಆಗಸ್ಟ್

ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ ಹಾಕಕ್ಕೆ ಸುರು ಮಾಡ್ರಿ. ಅದು ನಿಮಗೆ ಆಗಕ್ಕಿಲ್ಲಾ ಆಮ್ಯಾಕೆ ಆಟೋ ಮ್ಯಾಟಿಕ್ ಆಗಿ ಬಿಡ್ತೀರಾ. ಸರಿ ಕನ್ಲಾ ನಾಳೆಯಿಂದ ಹಂಗೇ ಮಾತ್ತೀನಿ ಕಲಾ ಅಂದ ಗೌಡಪ್ಪ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ.

ಸರಿ ಮಾರನೆ ದಿನಾ ಗೌಡಪ್ಪ ಅಗಿತಾ ಉಕ್ಕಂತ ಬರ್ತಾ ಇದ್ದ. ನೋಡ್ಲಾ ಸುಬ್ಬ, ಹೆಂಗೆ ನಾವು. ಬಿಡಬೇಕು ಅಂದ್ರೆ ಆಟೆಯಾ ಬಿಟ್ಟೇ ಬಿಡ್ತೀವಿ ಅಂದಾ. ಜೋಬ್ನಾಗೆ ನೋಡಿದ್ರೆ ಒಂದು 20 ಪ್ಯಾಕೆಟ್ ಮಣಿಕ್ ಚಂದ್ ಗುಟ್ಕಾ ಇತ್ತು. ಸಲ್ಟು ಮೇಲೆ ಎಲ್ಲಾ ಉಕ್ಕಂಡಿದ್ದ. ಬಾಯಿ ಪಕ್ಕದಾಗೆ ಜೊಲ್ಲು. ಅದನ್ನ ಟವಲ್ ನಾಗೆ ಒರೆಸಿಕೊಳ್ಳೋನು. ಒಂತರಾ ಹುಚ್ಚ ಪಿಚ್ಚರ್ ಸುದೀಪ್ ಆದಂಗೆ ಆಗಿದ್ದ. ಅವರ ಮನೆ ಮುದುಕಿ ಊಟ ಆದ್ ಮ್ಯಾಕೆ ಅಡಿಕೆ ಸಿಗಲಿಲ್ಲಾ ಅಂತಾ ಎಲೆ ಜೊತೆ ಗುಟ್ಕಾ ಹಾಕ್ಕೊಂಡು ವಾಂತಿ ಮಾಡ್ಕಂಡು ವರಂಡಾದಾಗೆ ಬಿದ್ದಿತ್ತಂತೆ. ಅದಕ್ಕೆ ಈಗ ಗೌಡ ಹಂಚಿನ ಸಂದಿ ಗುಟ್ಕಾ ಪ್ಯಾಕೆಟ್ ಮಡಗ್ತಾನೆ. ರಾಮಾಯಣದಾಗೆ ರಾಮ ದಾರಿಗೋಸ್ಕರ ಕಲ್ಲು ಎಸಿದ್ದನ್ನು ಹೇಗೆ ಮಂಗಗಳು ಫಾಲೋ ಮಾಡಿದ್ವೋ ಅಂಗೇ ರಸ್ತೇಲಿ ಕೆಂಪಗೆ ಇನ್ನೂ ಹಸಿ ಐತೆ ಅಂದ್ರೆ ಗೌಡಪ್ಪ ಇಲ್ಲೇ ಎಲ್ಲೋ ಅವನೆ ಅಂತಾ ಮಾತು. ಗಟ್ಟಿ ಪದಾರ್ಥ ಏನೂ ತಿನ್ನಲ್ಲ ಗೌಡಪ್ಪ. ಯಾಕೇಂದ್ರ ದವಡೆ ಸವದೈತೆ ಅಂತಾನೆ. ಸರಿ ನಿಂಗನ ಅಂಗಡಿಗೆ ಬಂದ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ. ಏನ್ರೀ ಗೌಡ್ರೆ ಮತ್ತೆ ಸಿಗರೇಟು. ಚಾ ಕುಡಿಯೋ ಬೇಕಾದ್ರೆ ಮಾತ್ರ ಕಲಾ ಅಂದ. ಲೇ ಸುಬ್ಬ ಗುಟ್ಕಾನು ಸಾನೇ ಜಾಸ್ತಿ ಆಗ್ಬಿಟೈತೆ ಬಿಡಕ್ಕೆ ಏನ್ಲಾ ಮಾಡಬೇಕು. ಗೌಡ್ರೆ ಒಂದು ಕೆಲಸ ಮಾಡ್ರಿ ನಸ್ಯ ಹಾಕಿರಿ ಎಲ್ಲಾ ಬಿಟ್ಟು ಹೋಯ್ತದೆ ಅಂದಾ.

ಗೌಡಪ್ಪ ತಕ್ಷಣನೇ ಒಂದು ನಸ್ಯದ ಡಬ್ಬಿ ತಗೊಂಡು ಅದೂ ಸುರು ಹಚ್ಕಂಡ. ಕಂಡ ಕಂಡೆ ಹಾಕೋನು ಹಂಗೇ ಎದುರೆಗಡೆ ಇದ್ದ ಮುಖದ ಮ್ಯಾಕೆ ಆಕ್ಷಿ ಅನ್ನೋನು. ಮಗಂದು ಬಾಯ್ನಾಗೆ ಇರೋದೆಲ್ಲಾ ಎದುರುಗಿದ್ದೋರು ಮುಖದ ಮ್ಯಾಕೆ. ಇವನು ” ಆ ” ಅಂತಾ ಬಾಯ್ತಗಿದರೆ ಸಾಕು ಎಲ್ಲಾವೂ ಅಡಕಂತಾವೆ. ಓಡ್ರಲಾ. ಮಗಂದು ಟವಲ್ ಪಂಚೆ ಎಲ್ಲಾ ನಸ್ಯ ವಾಸನೆ. ಭೂಪತಿ ನಸ್ಯ ಅಂತೆ ಇವನ ಪಿಂಡ, ಇವನಿಗೆ ಇದನ್ನ ಹೇಳುಕೊಟ್ಟೋರು ಸಿಗಲಿ ಮಾರಿ ಹಬ್ಬ ಮಾತ್ತೀನಿ ಅಂತಿದ್ಲು ಗೌಡಪ್ಪನ ಹೆಂಡರು. ಮಗಾ ಸುಬ್ಬ ಅವರ ಮನೆಗೆ ಹೋಗೋದನ್ನೇ ಬಿಟ್ಟಿದಾನೆ. ಗೌಡಪ್ಪ ವರಾಂಡಾದಾಗೆ ಮಕ್ಕೊತಾನೆ. ಹೆಂಡರು ಗಬ್ಬು ವಾಸನೆ ಅಂತಾ ಹೊರಗೆ ಹಾಕವ್ಳಂತೆ.

ಸರಿ ಗೌಡಪ್ಪಂಗೆ ಮೂರು ಚಟನೂ ಹತ್ಕೊಂತು. ಸಿಗರೇಟು ಸೇದಿ ಸ್ವಲ್ಪ ಹೊತ್ತಿಗೇನೇ ನಸ್ಯ ಹಾಕೋನು ಅದಾಕಿ ಸ್ವಲ್ಪ ಹೊತ್ತಿಗೆ ಗುಟ್ಕಾ ಹಾಕೋನು. ಒಂದು ಸಾರಿ ವಸೂಲಿಗೇ ಅಂತಾ ಕರೆದುಕೊಂಡು ಹೋಗಿದ್ವಿ. ಬಾಯಿ ತುಂಬಾ ಗುಟ್ಕಾ. ನಸ್ಯ ಹಾಕ್ದ ನೋಡಿ. ಆಕ್ಷಿ ಅಂತಿದ್ದಾಗೆನೇ ಎದುರುಗಡೆ ಇದ್ದ ಬಿಳೀ ಪಂಚೆ ಬನೀನಲ್ಲಿ ಇದ್ದೋರು ರಾವು ಬಡದಂಗೆ ಕೆಂಪಗೆ ಆಗಿದ್ದರು. ನಿಮಗೆ ಕಾಸು ಕೊಡಕ್ಕಿಲ್ಲ ಅಂತಾ ಹೊರ ಹಾಕಿದ್ರು. ಟಾಕೀಸ್ನಾಗೆ ಕೂತ್ರೆ ಬಗ್ಗಿ ಉಗಿಯೋನು. ಪಿಚ್ಚರ್ ಬಿಟ್ ಮ್ಯಾಕೆ ತಂಬೂರಿ ತಮ್ಮಯ್ಯ ಚಪ್ಪಲಿ ಯಾಕೋ ಜಾರ್ತಾ ಐತೆ ಅಂದ. ನೋಡಿದ್ರೆ ಗೌಡಪ್ಪ ಸಾನೇ ಚಪ್ಪಲಿಗೆ ಉಗದವ್ನೆ. ಒಂದು ಸಾರಿ ಇಸ್ಮಾಯಿಲ್ ಬಸ್ನಾಗೆ ಹೋಗೋ ಬೇಕಾ್ದರೆ ಹಿಂಗೆ ಉಗಿದಿದಾನೆ. ಹಿಂದಕಡೆ ಇದ್ದ ಮುಖ ಎಲ್ಲಾ ಒಂದು ತರಾ ಸಣ್ಣ ಕುಂಕುಮ ಇಟ್ಟಂಗೆ ಆಗಿತ್ತು. ಮಗುವಿಗೆ ಸಿಡಿದೈತೆ. ಅಲರ್ಜಿ ಆಗುತ್ತೆ ಅಂತಾ ದಂಡ ಬೇರೆ ಇಸ್ಕಂಡಿದ್ರಂತೆ.

ಗೌಡಪ್ಪನ ಮನೆ ಮುಂದೆ ಒಂದು ಸಣ್ಣ ಬೀಡಾ ಅಂಗಡಿ ಆದಂಗೆ ಆಗಿತ್ತು. ಒಂದು ಕಡೆ ಗುಟ್ಕಾ ಪ್ಯಾಕೇಟ್ , ಮತ್ತೊಂದು ಕಡೆ ಸಿಗರೇಟು ತುಂಡು. ಗೌಡಪ್ಪನ ಮನೆ ಎಮ್ಮೆ ಗುಟ್ಕಾ ಪ್ಯಾಕೇಟ್ ತಿಂದು ಸಾಯೋ ಅಂಗೆ ಆಗಿತ್ತಂತೆ. ಇನ್ನೊಂದು ದಪಾ ಗುಟ್ಕಾ ಪ್ಯಾಕೇಟ್ ಕಂಡರೆ ನಾಯಿ ಹೊಡದಂಗೆ ಹೊಡಿತೀನಿ ಅಂತಾ ಹೆಂಡರು ಹೇಳಿದ ಮ್ಯಾಕೆ ಗೌಡಪ್ಪ ಪ್ಯಾಕೆಟ್ ನ್ನ ಜೋಬ್ನಾಗೆ ಮಡಿಕ್ಕಂಡು ಕೆರೆತಾವ ಹೋದಾಗ ಎಸಿತಾನೆ. ಈಗ ದಿನಕ್ಕೆ ಒಂದು ಹತ್ತು ಪ್ಯಾಕೆಟ್ ಸಿಗರೇಟು, 50 ಗುಟ್ಕಾ ಅಂಗೇ 20 ಗ್ರಾಂ ನಸ್ಯ. ಗೌಡಪ್ಪನ ಚಟ ಆಗೈತೆ.

ಚಟಕ್ಕೆ ಅಂತಾ ತಿಂಗಳಿಗೆ 2ಸಾವಿರ ರೂಪಾಯಿ ಬೇಕಂತೆ. ನಿಂಗನ ಚಾ ಅಂಗಡೀಲಿ ಎಲ್ಲಾ ಕೂತಿದ್ವಿ. ಗೌಡ್ರೆ ಇವೆಲ್ಲವನ್ನೂ ಬಿಡಬೇಕಂದ್ರೆ ಅಂತಿದ್ದಾಗೆನೇ ಗೌಡಪ್ಪ ಸುಬ್ಬಂಗೆ ಕೆರ ತಗೊಂಡು ಜ್ವರಾ ಬರೋ ತರಾ ಹೊಡೆದ. ಯಾಕ್ರೀ ಲೇ ಇವನು ಹೇಳ್ದಾ ಅಂತ ಚಟ ಜಾಸ್ತಿ ಮಾಡಿದ್ದಕ್ಕೆ ಮುಂಚೆ ಬರೀ ದಮ್ಮು, ಸುಗರ್ ಇತ್ತು. ಈಗ ಗ್ಯಾಸ್, ತಲೆ ಸುತ್ತು ಎಲ್ಲಾ ಬಂದೈತೆ ಅಂದಾ. ಒಂದು ತಿಂಗಳು ಆಸ್ಪತ್ರಾಗೆ ಇದ್ದೆ ಕಲಾ. ಇಂಜೆಕ್ಷನ್ ಚುಚ್ಚಿ ಚುಚ್ಚಿ ನನ್ನ ಮೈ ಒಂದು ತರಾ ಟಿಂಕರಿಂಗ್ ಮಾಡಿರೋ ಕಾರ್ ತರಾ ಆಗೈತೆ. ನೋಡ್ಲಾ ಗರುಡ ಇದ್ದಂಗೆ ಇದ್ದೆ. ಖಸಾಯಿ ಕಾನೆ ಹಸು ಆದಂಗೆ ಆಗೀನಿ ನೋಡ್ಲಾ ಅಂದಾ.  ಮೊನ್ನೆ ತಾನೆ ಆಸ್ಪತ್ರೆಯಿಂದ ಬಂದವ್ನೆ.ಈಗ ಗೌಡಪ್ಪ ಹೊರಗೆ ಜಾಸ್ತಿ ಬರಕ್ಕೇ ಇಲ್ಲಾ. ಎಲ್ಲಿ ಹೊಸಾ ಚಟ ಸುರುವಾಯ್ತದೋ ಅಂತಾ.

…………………………………..

ನಗಾರಿಯಲ್ಲಿ ಹೊಸ ಅಂಕಣವೊಂದು ಪ್ರಾರಂಭವಾಗಿದೆ. ಅಂಕಣಕಾರ  ಕೋಮಲ್ ರಿಗೆ ನಗಾರಿಗೆ ಸ್ವಾಗತ

ಮಂತ್ರಿ ಬರ್ತವ್ರೆ ದಾರಿ ಬಿಡಿ…

21 ಆಗಸ್ಟ್

– ಭಾಷಪ್ರಿಯ

ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.

” ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ ‘ಡ್ರಿಂಕ್ಸ್’ ಬೇಕು ಅಂತ ಹೇಳು’ , ಅಂದ ಮಂತ್ರಿ.

“ಸರ್ ದುಡ್ಡು !!” ಅಂದ Gunman. “ಲೇ ಬೋ ….ಮಗನೆ , ನಿಂಗೆ gun ಕೊಟ್ಟಿರದು ಸರ್ಕಾರ ಯಾಕೆ ?, ಅದನ್ನೇ ತೋರ್ಸಿ ಡ್ರಿಂಕ್ಸ್ ಎತ್ಕೊಂಡು ಬಾ” ಅಂದ ಮಂತ್ರಿ.

Gunman, gun ತೋರ್ಸಿ, “ಲೇ ಅ rack ನಲ್ಲಿ ಇರೋ arrack ಕೊಡೊ , ಮಂತ್ರಿ ಬಂದವರೆ ಅವರ್ಗೆ ಡ್ರಿಂಕ್ಸ್ ಬೇಕಂತೆ”.

ಅದಕ್ಕೆ ಮಾಲೀಕ “ಸರ್ ಅವರಿಗೆ ಒಳ್ಳೆ ಫಾರ್ಇನ್ ವ್ಹಿಸ್ಕೆಯ್ ಕೊಡ್ತೀನಿ” ಅಂದ.

Gunman “ಲೇ ಹೇಳದಷ್ಟು ಮಾಡೋ , ಅವರು ಕುಡಿಯೋದೆ arrack ಬೇರೆದು ಕೊಡಿದ್ರೆ ಕಿಕ್ಕ್ ಬರೋಲ್ಲಂತೆ, ಫಾರ್ಇನ್ ವ್ಹಿಸ್ಕೆಯ್ ಅಂದ್ಯಲ್ಲ ಅದನ್ನ ನಂಗು ,ಡ್ರೈವರ್ ಗೆ ಕೊಡು ನಾವು ಕುಡಿಯೋದೆ ಅದು” ಅಂದ.

ಮಂತ್ರಿಗಳು ಕುಡಿದು  ಅಲ್ಲಿಂದ ಮುಂದೆ ಪ್ರಯಾಣ ಮಾಡಿದ್ರು ,ಮಾರ್ಗ ಮಧ್ಯದಲ್ಲಿ ” ಲೇ ಇವನೇ ನನ್ಗೆ ಸೂಸು ಬರ್ತಿದೆ ಗಾಡಿ ಇಲ್ಲೇ ನಿಲ್ಸು”.

ಡ್ರೈವರ್ ” ಸರ್ ಇದು highway ಸರ್ ಇಲ್ಲಿ ನಿಲ್ಸಿದ್ರೆ ತಪ್ಪಾಗೊತ್ತೆ “. ಮಂತ್ರಿ ” ಲೇ ನಾನು ಈ ರಾಜ್ಯದ ಮಂತ್ರಿ , ನಾನು ಎಲ್ಲಿ ಬೇಕಾದ್ರೂ ನಿಂತ್ಗೊತೀನಿ , ಹೆಂಗ್ಬೇಕಾದ್ರು ನಿಂತ್ಗೊತೀನಿ, ನೀನು ಗಾಡಿ ನಿಲ್ಸು” ಅಂದ.

ಮಧ್ಯ ರಸ್ತೇಲಿ ಕಾರ್ ನಿಂತಿತು. ಡ್ರೈವರ್ “ಸರ್ ಇಲ್ ಬೇಡ ಅ ಸೈಡ್ಗೆ ಹೋಗಿ”,ಅಂದ.

ಕುಡಿದ ಅಮಲ್ನಲ್ಲಿ ಮಂತ್ರಿ “ಲೇ ಇವನೇ ನಾನು ಸೂಸು ಮಾಡೋತಂಕ ಯಾವ ಗಾಡಿ ಪಾಸ್ ಆಗದಂತೆ ನೀನು gun ಹಿಡ್ಕೊಂಡು ನಿಂತ್ಕೋ “.

Gunman ಸರ್ಕಾರ ಕೊಟ್ಟ ತುಕ್ಕುಹಿಡಿದ ,ಕೇವಲ ಆಯುಧ ಪೂಜೆಗೆ ಬಳೆಸುವ gun ನನ್ನು ಹಿಡಿದು ನಿಂತ.

ಕತ್ತಲಲ್ಲಿ ಬೆಳಕು ಕಂಡಿತು! ಒಂದು ದೊಡ್ಡ truck ಬರುತ್ತಿತು, Gunmanನನ್ನು  ನೋಡಿದ ಕೂಡಲೇ ಸರ್ರ್ರ್ರ್ರ್ರ್ರ್ರ್ರ್ರ್ರ್………. ಅನ್ತ truck ಡ್ರೈವರ್ ಬ್ರೇಕ್ ಹೊಡೆದ. Gunman ಒಂದು truck ನಿಲ್ಲಿಸಿಬಿಟ್ಟೆ ಅಂತ ಹಿಗ್ಗಿದ.

Truck ನಿಂದ ಒಬ್ಬೊಬ್ಬರಾಗಿ ಸಮವಸ್ತ್ರಧಾರಿಗಳು ಇಳಿಯತೊಡಗಿದರು. Gunman ಬೆವರಿದ, ಅದು Army truck ಆಗಿತ್ತು.

Gunman ಹೆದರಿ,  ಒಬ್ಬ ಸೈನಿಕನಿಗೆ ನಡೆದ ಸಂಗತಿ ತಿಳಿಸಿದ.

ಸೈನಿಕ ಮುಖ್ಯಸ್ತ  ಅ  ಸೈನಿಕನನ್ನು ಕರೆದು , ಅಲ್ಲಿ ಸೂಸು ಮಾಡುತ್ತಿರುವವನು ಯಾರಂತೆ ? ಅಂತ ಕೇಳಿದ.

ಅದಕ್ಕೆ ಅ ಸೈನಿಕ ” ಸರ್ ಜಿ , ಓ ಮಿನಿಸ್ಟರ್ ಹೇಯ್ ” ಅಂದ.  ಮುಖ್ಯಸ್ತ ” ಕ್ಯಾ ನಾಮ್ ಹೇ  ಪೂಚ್ಹೋ” .

ಸೈನಿಕ “ಸರ್ ಜಿ  ಓ ಗೌಡ ಕಾ ಬಚ್ಚಾ ” ಅಂದ.

(ಈ ಬರಹ ಮೊದಲು ಪ್ರಕಟವಾದದ್ದು ‘ಸಂಪದ’ದಲ್ಲಿ)

ನಗೆಚಿತ್ರಗಳು

20 ಆಗಸ್ಟ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್

ಕಡೆಗೂ ಮೆಕ್ ಡೊನಾಲ್ಡ್ಸ್ ಆಫ್ರಿಕಾ ತಲುಪಿತು!

ವಾರದ ವಿವೇಕ 43

20 ಆಗಸ್ಟ್

……………………………………….

ದೇಹದ ಎರಡೂ ತುದಿಯಲ್ಲಿ ಬೆಳವಣಿಗೆ ನಿಲ್ಲಿಸಿ

ಮಧ್ಯದಲ್ಲಷ್ಟೇ ಮುಂದುವರಿಸಿದವನು

ಮಧ್ಯವಯಸ್ಕ!

……………………………………….

ಸಂತಾಪಕೀಯ: ಸಾಮ್ರಾಟರಿಗೆ ಹೇಳಿ ಬಹುಪರಾಖ್!

19 ಆಗಸ್ಟ್

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ… ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್  ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ ಲಂಚ ಹೊಡೆದ ಆರೋಪ ತಲೆಯ ಮೇಲೆ ಕೂತಿದ್ದರೂ, ಲಜ್ಜೆಯಿಲ್ಲದ ಕುಕರ್ಮ ಮಾಡಿ ಸಿಕ್ಕುಬಿದ್ದರೂ ಜನರು ಧೈರ್ಯವಾಗಿ ಎದುಗುಂದದೆ ಬಾಳುವುದಕ್ಕೆ ಈ ಮೇಲಿನ ಬುದ್ಧಿವಂತಿಕೆಯ ಮಾತೇ ಆಧಾರ. ಜನರ ಈ ‘ಗಜನಿ’ ಮಾದರಿಯ ಅತ್ಯದ್ಭುತ ನೆನಪಿನ ಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅನೇಕ ಟಾನಿಕ್ಕುಗಳು ಹಗಲಿರುಳು ಕೆಲಸ ಮಾಡುತ್ತಿದ್ದರೂ ಒಟ್ಟಾರೆಯಾಗಿ ಸಮಾಜಕ್ಕೆ ಮರೆವಿನ ಶಕ್ತಿಯು ಬಲವಾಗಿ ವೃದ್ಧಿಯಾಗುತ್ತಿದೆ.

ಈ ಮರೆವಿನ ಶಕ್ತಿಯ ವಿರುದ್ಧ ಸೆಣೆಸುವುದಕ್ಕಾಗಿಯೇ ರಾಖಿ ಸಾವಂತಳು ಕ್ಯಾಮರಾದೆದುರು ಯಾರಿಂದಲೋ ಕಿಸ್ಸು ಪಡೆಯುತ್ತಾಳೆ, ರಾಹುಲ್ ಮಹಾಜನ್ ಯಾರಿಗೋ ಕೆನ್ನೆಗೆ ಬಿಗಿಯುತ್ತಾನೆ… ನಮ್ಮ ನೇತಾಗಳು ಕಂಡ ಕಂಡ ಮರದ ಕೊಂಬೆ ಹಿಡಿದು ನೇತಾಡುತ್ತಾರೆ. ಮೂರು ಬಿಟ್ಟು ಮಾರಲು ಕೂತ ವ್ಯಾಪಾರಿಗಳು ಕಂಡಲ್ಲಿ ಜಾಹೀರಾತಿನ ಗುಂಡು ಹಾರಿಸುತ್ತಾರೆ. ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಮಗ್ಗಿಯನ್ನು ಉರುಹೊಡೆಸಿ ನೆನಪಿರಿಸಿಕೊಳ್ಳುವಂತೆ ಮಾಡುವ ಶಿಕ್ಷರ ಹಾಗೆ ಎಲ್ಲರೂ ತಮ್ಮ ನೆನಪು ಎಲ್ಲರ ಮೆದುಳುಗಳಲ್ಲಿ ಹಚ್ಚ ಹಸಿರಾಗಿರಬೇಕೆಂದು ಪ್ರಯಾಸ ಪಡುತ್ತಾರೆ.

ಶ್ರೀ ಕೃಷ್ಣನು ಸಹ ತನ್ನನ್ನು ಮರೆತು ಬಿಡಬಾರದೆಂದು ಅಧರ್ಮ ತಲೆಯೆತ್ತಿದಾಗಲೆಲ್ಲಾ ತಾನು ಬಂದೇ ಬರುವೆನ್ ಎನ್ನುವ ಆಶ್ವಾಸನೆಯನ್ನು ನೀಡಿದ್ದಾನೆ. ಆತ ಹೇಗೂ ಬರ್ತೀನಿ ಅಂದಿರುವನಲ್ಲ, ಬಂದಾಗ ನೋಡಿಕೊಳ್ಳೋಣವೆಂದು ಸದ್ಭಕ್ತರು ಆತನ ಆಗಮನಕ್ಕೆ ಪೂರಕವಾದ ‘ಅಧರ್ಮ’ ಸೃಷ್ಟಿಯಲ್ಲಿ ಕಾಯಾ ವಾಚಾ ಮನಸಾ ತೊಡಗಿಸಿಕೊಂಡಿದ್ದಾರೆ.

ನೆನಪು ಹಾಗೂ ಮರೆವಿನ ಬಗ್ಗೆ ಮರೆಯದೆ ಇಷ್ಟು ಗಾಢವಾಗಿ ಯೋಚಿಸುವುದಕ್ಕೆ ಕಾರಣವಿದೆ. ಸತತ ಎರಡು ವರ್ಷಗಳ ಕಾಲ ನಗೆ ಸಾಮ್ರಾಜ್ಯದ ಸಾಮ್ರಾಟರಾಗಿ ಆಳಿದ ನಾವು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ, ನಮಗೇ ಎಣಿಸಲು ಮರೆತು ಹೋದಷ್ಟು ದಿನಗಳ ಕಾಲ ಸದ್ದೇ ಇಲ್ಲದಂತೆ ಕೂತಿದ್ದರೂ ಒಬ್ಬೇ ಒಬ್ಬ ಪ್ರಜೆಯೂ ನಮ್ಮನ್ನು ನೆನಪಿಸಿಕೊಳ್ಳಲಿಲ್ಲ. “ಅಯ್ಯೋ, ನಮ್ಮ ಸಾಮ್ರಾಟರು ಎಲ್ಲಿ? ಅವರಿಗೆ ಏನಾಯಿತು? ಅವರ ಆರೋಗ್ಯ ಹೇಗಿದೆಯೋ?” ಎಂದು ಮಾನಿನಿಯರು ಪರಿತಪಿಸಲಿಲ್ಲ. ಸಿಇಟಿ ಕೌನ್ಸೆಲಿಂಗಿಗೆ ಹೊರಟ ಹುಡುಗ ಹುಡುಗಿಯರು ಸಾಮ್ರಾಟರೇ ಕಣ್ಮರೆಯಾದರೆ ಇನ್ನು ನಮಗ್ಯಾರು ದಿಕ್ಕು ಎಂದು ಗೋಳಿಡಲಿಲ್ಲ. ಅಭಿಮಾನಿಗಳ ಸಂಘದಿಂದ ಒಂದಾದರೂ ಆತ್ಮಹತ್ಯಾ ಯತ್ನ ಪ್ರಹಸನಗಳು ನಡೆಯಲಿಲ್ಲ. ಶನಿವಾರ, ಭಾನುವಾರಗಳಂದು ಕೆಲಸವಿಲ್ಲದೆ ಕಂಡ ಕಂಡಲ್ಲಿ ಅಡ್ವೆಂಚರ್ ಬೆನ್ನಟ್ಟಿ ಅಲೆಯುವ ಟೆಕ್ಕಿಗಳು ನಮ್ಮನ್ನು ಪತ್ತೆ ಹಚ್ಚುವ ಹುಮ್ಮಸ್ಸು ತೋರಲಿಲ್ಲ. ಅಸ್ತಿತ್ವದಲ್ಲೇ ಇಲ್ಲದ ನದಿಗೆ ಕಟ್ಟಿದ ಸೇತುವೆಯ ಫುಟ್ ಪಾತಿನಲ್ಲಿ ಬಿದ್ದ ಲಿಪ್ ಸ್ಟಿಕ್ಕಿನ ಒಡತಿಯ ಗಂಡನ ಗುಪ್ತ ಸಂಬಂಧವನ್ನು ಪತ್ತೆ ಹಚ್ಚುವ ಚಾಣಾಕ್ಷ ಪತ್ರಕರ್ತರು ಸಾಮ್ರಾಟರ ಸ್ಟೇಟಸ್ಸು ಅಲೈವ್ ಅಥವಾ ಒನ್ಸ್ ಅಪಾನ್ ಎ ಟೈಮ್ ಆಗಿದೆಯೋ ಎನ್ನುವುದನ್ನು ಹುಡುಕುವ ಆಸಕ್ತಿ ತೋರಲಿಲ್ಲ.

ಇದನ್ನೆಲ್ಲಾ ಕಂಡಾಗ ನಮಗೆ ನಖಶಿಖಾಂತ ಕೋಪ ಉಕ್ಕಿ ಬರಬೇಕಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣಗಳು ಎರಡು. ಒಂದು, ತಂದೆ ತಾಯಿ ಕಲಿಸಿದಂತ ಶಿಸ್ತಿನಿಂದಾಗಿ ನಖವು ಹಾಗೂ ಗೆಳೆಯರು ಕಲಿಸಿದಂತಹ ಅಶಿಸ್ತಿನಿಂದಾಗಿ ನಮ್ಮ ಶಿಖೆಯು ಎಂದಿಗೂ ಕೋಪ ಉಕ್ಕಿಸುವ ಮಟ್ಟಕ್ಕೆ ಬೆಳೆಯಲೇ ಇಲ್ಲ. ನಮಗೆ ಸಿಟ್ಟು ಹುಟ್ಟದಿರುವುದಕ್ಕೆ ಮತ್ತೊಂದು ಕಾರಣ, ನಮ್ಮ ಸಾಮ್ರಾಜ್ಯದ ಜನಸ್ತೋಮದ ಮಾನಸಿಕತೆಯ ಬಗ್ಗೆ ಅಪಾರವಾದ ಅರಿವನ್ನು ನಾವು ಗಳಿಸಿಕೊಂಡಿರುವುದು.

ತನ್ನ ಪ್ರೀತಿಯ ಮಡದಿಯ ಹೆಸರನ್ನು ಜನರು ಮರೆಯದಿರುವಂತೆ ಮಾಡಲು ಷಾಹ್ ಜಹಾನ್ ಅಷ್ಟು ಅದ್ಭುತವಾದ ಮಹಲನ್ನೇ ಕಟ್ಟಿಸಬೇಕಾಯ್ತು. ತನ್ನ ಹೆಸರನ್ನು ಜಗತ್ತು ಎಂದಿಗೂ ನೆನಪಿನಿಂದ ಅಳಿಸಲೇಬಾರದೆಂದು ಅಡಾಲ್ಪ್ ಹಿಟ್ಲರ್ ಲಕ್ಷಾಂತರ ಮಂದಿ ಯಹೂದಿಗಳನ್ನು ಕೊಲ್ಲಿಸಬೇಕಾಯ್ತು. ಅಂಬೇಡ್ಕರ್ ಹೆಸರನ್ನು ಜನತೆ ಮರೆತುಬಿಡಬಾರದೆಂದು ಸರಕಾರವು ಒಂದೇ ತರಗತಿಯ ಮೂರು ಭಾಷೆಯ ಪಠ್ಯಗಳಲ್ಲಿ ಪಾಠವನ್ನು ಇಡಬೇಕಾಯಿತು. ಹೀಗಿರುವಾಗ ನಮ್ಮ ನೆನಪು ಪ್ರಜೆಗಳಲ್ಲಿ ಹಸಿರಾಗಿರಬೇಕೆಂದು ಬಯಸುವುದು ಪ್ರವಾಹದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರ ನಿಧಿಯ ಸೂಕ್ತ ವಿನಿಯೋಗವನ್ನು ಬಯಸಿದ ಹಾಗಲ್ಲವೇ? ಹೀಗಾಗಿ ನಾವು ಪ್ರಜೆಗಳು ನಮ್ಮನ್ನು ಮರೆತುಹೋದದ್ದಕ್ಕೆ ವ್ಯಥೆ ಪಡುವುದಿಲ್ಲ.

ಚಲಾವಣೆಯಲ್ಲಿಲ್ಲದ ಕಾರಣದಿಂದಾಗಿ ಮನುಕುಲವು ಬಾಲ, ಮೈಮೇಲಿನ ರೋಮಗಳನ್ನೆಲ್ಲ ಕಳೆದುಕೊಂಡಿದೆ ಎನ್ನುತ್ತದೆ ವಿಕಾಸ ವಾದ. ಹೀಗಿರುವಾಗ ಚಲಾವಣೆಯಿಂದ ತಪ್ಪಿಸಿಕೊಂಡರೆ ನಮ್ಮ ಸಾಮ್ರಾಟ ಪಟ್ಟವೂ ಕಣ್ಮರೆಯಾಗಿಬಿಡುವ ಅಪಾಯವನ್ನು ಮನಗಂಡು ನಾವು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ನೌಕರಿಗೆ ಹಾಜರಾಗಿದ್ದೇವೆ. ಹೇಳಿ ಸಾಮ್ರಾಟರಿಗೆ ಬಹುಪರಾಖ್!