Archive | ನವೆಂಬರ್, 2009

ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ!

11 ನವೆಂ

ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಣೆಯಾಗಿದೆ. ಸಾಮ್ರಾಜ್ಯದಲ್ಲಿ ಬಹಳಾ ಕಾಲದಿಂದ ಸುಪ್ತವಾಗಿ ನಡೆಯುತ್ತಿದ್ದ ಆಂತರಿಕ ಕಲಹ ಕಳೆದ ಕೆಲವು ದಿನಗಳಲ್ಲಿ ತಾರಕಕ್ಕೇರಿದೆ. ಇಡೀ ಸಾಮ್ರಾಜ್ಯವೇ ಎರಡು ಗುಂಪಾಗಿ ಒಡೆದು ಹೋಳಾಗಿ ಪರಸ್ಪರ ಭೀಕರವಾಗಿ ಹೋರಾಡುತ್ತಿವೆ. ಇದರಿಂದ ಸಾಮ್ರಾಟರ ನೆಮ್ಮದಿ ಭಗ್ನವಾಗಿದೆ. ಸಾಮ್ರಾಜ್ಯದೆಲ್ಲೆಡೆ ಅರಾಜಕತೆ ಸ್ಥಾಪಿತವಾಗಿದೆ.

ಸಾಮ್ರಾಟರ ಭಾಗವೇ ಆಗಿರುವ ಸಾಮ್ರಾಜ್ಯದಲ್ಲಿ ಆಂತರಿಕ ಕಲಹ ಸ್ಪೋಟಗೊಂಡು ಸಾಮ್ರಾಟರು ಕಳವಳಗೊಂಡಿದ್ದರು. ಎರಡೂ ಪಾಳಯದವರು ಹೆಚ್ಚು ಹೆಚ್ಚು ಹೋರಾಡಿದಷ್ಟೂ ಸಾಮ್ರಾಟರು ದುರ್ಬಲರಾಗಲು ತೊಡಗಿದ್ದಾರೆ. ಸಮಯವೆಷ್ಟು ಉರುಳಿದರೂ ಯಾವೊಂದು ಪಾಳಯವೂ ಸೋಲುವ ಸಂಭವ ಕಾಣುತ್ತಿಲ್ಲ. ಎರಡೂ ಪಾಳಯಗಳಲ್ಲಿ ಶಕ್ತಿ ಸಂವರ್ಧನೆಯಾಗುತ್ತ ಹೋಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ತಮ್ಮ ಆಪ್ತ ಸಲಹೆಗಾರರ ನಿರ್ದೇಶನದ ಮೇರೆಗೆ ಸಾಮ್ರಾಟರು ನಗೆ ಸಾಮ್ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ತಮ್ಮ ಸಾಮ್ರಾಜ್ಯದ ಪ್ರತಿ ಸದಸ್ಯನ ಸ್ವಾತಂತ್ರ್ಯವನ್ನೂ ಕಸಿದುಕೊಂಡು ಸರ್ವಾಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾರೆ. ತಮ್ಮ ಅಂತರಂಗದ ಭಾಗವೇ ಆಗಿರುವಂತಹ ಪ್ರಜೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು, ಅವರ ಅಭಿವ್ಯಕ್ತಿಯ, ಪ್ರತಿಭಟನೆಯ ಶಕ್ತಿಯನ್ನೇ ದಮನಿಸುವುದು ಸಾಮ್ರಾಟರಿಗೆ ಅತ್ಯಂತ ದುಃಖ ಕೊಡುವ ಕೆಲಸ. ಆದರೂ ಸಾಮ್ರಾಜ್ಯದ ನೆಮ್ಮದಿಯ ರಕ್ಷಣೆಯ ದ್ರುಷ್ಟಿ ಯಿಂದ ಈ ಕ್ರಮ ಅನಿವಾರ್ಯವಾಗಿದೆ.

ಸಾಮ್ರಾಜ್ಯದಲ್ಲಿ ತಾಂಡವವಾಡುತ್ತಿರುವ ಆಂತರಿಕ ಕಲಹ, ಅರಾಜಕತೆ ತಣ್ಣಗಾಗುವವರೆಗೆ ನಗೆ ನಗಾರಿ ಸದ್ದನ್ನು ಸಹ ನಿರ್ಬಂಧಿಸಲಾಗಿದೆ!

ಇಗೋ ಇಲ್ಲಿದೆ ನಿಮ್ಮ ಭವಿಷ್ಯ!

5 ನವೆಂ

(ನಗೆ ನಗಾರಿ ಭವಿಷ್ಯ ವಿತರಣಾ ಬ್ಯೂರೋ)

ಕನ್ನಡ ಪತ್ರಿಕೋದ್ಯಮ ಹಿಂದೆಂದೂ ಕಂಡರಿಯದ ಪ್ರಮಾಣದ ಬದ್ಧತೆಯನ್ನು ತೋರಿ ‘ರದ್ದಿಮನೆ’ಯ ಹಿರಿತಲೆಗಳ ಹಳೆಯ ಹೃದಯದ ಸ್ತಂಭನಕ್ಕೆ ನಗೆ ನಗಾರಿ ಡಾಟ್ ಕಾಮ್ ಕಾರಣವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಸರ್ವವೇದ್ಯವಾದ ಸಾಧನೆಯನ್ನು ಪುನರುಚ್ಛರಿಸುವುದಕ್ಕೆ ಕಾರಣವಿದೆ.

ಮನುಷ್ಯ ಬಹುವಾಗಿ ಹೆದರುವ ಮೂರು ಸಂಗತಿಗಳಲ್ಲಿ ಮೂರನೆಯದು ಕಾಲ. ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಹೆಂಡತಿ ಹಾಗೂ ಜಿರಲೆ ದಕ್ಕಿಸಿಕೊಂಡಿವೆ. ಕಾಲಗಳಲ್ಲಿ ಅತಿ ಸರಳವಾದ ಹಾಗೂ ತಿಳಿದುಕೊಳ್ಳಲು ಅತ್ಯಂತ ಸುಲಭ ಎಂದು ಭಾಸವಾಗುವ ಗತಕಾಲದ ಬಗ್ಗೆಯೇ ಮನುಷ್ಯ ಗರಿಷ್ಠ ಪ್ರಮಾಣದಲ್ಲಿ ಹೆದರುತ್ತಾನೆ. ಅದಕ್ಕೆ ಆ ಕಾಲವನ್ನು ‘ಭೂತ’ಕಾಲ ಎಂದು ಕರೆದಿದ್ದಾನೆ. ವರ್ತಮಾನವಂತೂ ಆತನ ಕೈಗೇ ಸಿಕ್ಕುವುದಿಲ್ಲ. ಅದಕ್ಕೆ ಅದು ‘ಭೂತ’ಕ್ಕಿಂತ ಹೆಚ್ಚಿನ ಭಯ ಹುಟ್ಟಿಸುತ್ತದೆ. ಈ ಭಯವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಹುನ್ನಾರದಿಂದಾಗಿಯೇ ದಿನಪತ್ರಿಕೆಗಳು ತಮ್ಮನ್ನು ಆಗಾಗ ವರ್ತಮಾನ ಪತ್ರಿಕೆಗಳೆಂದು ಕರೆದುಕೊಳ್ಳುವುದು. ಈ ಎರಡರಕ್ಕಿಂತ ಭೀಕರವಾದ ಭಯಕ್ಕೆ ಕಾರಣವಾಗುವುದು ಭವಿಷ್ಯ. ಆರು ಅಡಿಯ ಮನುಷ್ಯ ಆರು ಅಡಿಯ ಭಯಪೀಡಿತ ಮನುಷ್ಯನಾಗಿ ಪರಿವರ್ತಿತನಾಗುವುದಕ್ಕೆ ಭವಿಷ್ಯವೆಂಬ ಪದವೇ ಸಾಕು.

ಈ ಭಯವನ್ನು ಮಟ್ಟ ಹಾಕುವುದಕ್ಕಾಗಿ ಹಾಗೂ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವುದಕ್ಕಾಗಿ ಸಹಜವಾಗಿ ಸಮಾಜ ಸುಧಾರಕರು ಹುಟ್ಟಿಕೊಂಡರು. ಕಂಡವರ ಭವಿಷ್ಯವನ್ನು ಹೇಳುತ್ತ ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವ ಜೋತಿಷಿಗಳು ತಾವು ಕಂಡವರಿಗೆ ಸಾವಿನ ಭಯವನ್ನು ಹುಟ್ಟಿಸಿ ತಮ್ಮ ಬದುಕಿಗೆ ‘ಮೌಲ್ಯ’ ಸೇರಿಸುವ ಪಾಲಿಸಿಗಳನ್ನು ಪಡೆಯುವ ವಿಮೆ ಏಜಂಟರಿಗಿಂತ ಶ್ರೇಷ್ಠರು ಎಂದು ವಾದಿಸುತ್ತಾರೆ. ಪ್ರಸ್ತುತ ಈ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿದೆ. ಇದಕ್ಕೂ ಮೊದಲು ಸರದಿಯಲ್ಲಿರುವ ವ್ಯಾಜ್ಯಗಳ ಸಂಖ್ಯೆಯನ್ನು ಎಣಿಸಲು ತೆರಳಿದ ಬಾಲಕನ ಮೊಮ್ಮಗ ಈಗ ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಓದುತ್ತಿದ್ದಾನೆ.

ಭವಿಷ್ಯವನ್ನು ವರ್ತಮಾನದಲ್ಲಿ ನಿಖರವಾಗಿ ಊಹಿಸಿ ಭವಿಷ್ಯವನ್ನು ಭೂತವಾಗಿಸಿದ ಖೋಡಿ ಮಠದ ಸ್ವಾಮೀಜಿಯ ಬಗ್ಗೆ ಹಿಂದೆ ನಾವು ವರದಿ ಮಾಡಿದ್ದೆವು. ಸ್ವಾಮೀಜಿಯವರ ಭವಿಷ್ಯವಾಣಿಯನ್ನು ಬಿತ್ತರಿಸುವುದರಲ್ಲಿ ಮಾಧ್ಯಮದ ಮಂದಿ ತೋರಿದ ಅದ್ಭುತ ಹುಮ್ಮಸ್ಸು ಆ ಭವಿಷ್ಯವಾಣಿ ನಿಜವಾದ ಸಂದರ್ಭದಲ್ಲಿ ತೋರದಿದ್ದುದಕ್ಕೆ ಕಾರಣವೇನಿರಬಹುದೆಂದು ನಾವು ಎರಡು ವರ್ಷದ ಹಿಂದಿನ ಸ್ವಾಮೀಜಿಯವರ ಡೈರಿಯಲ್ಲಿ ಹುಡುಕುತ್ತಿರುವೆವು.

ಸ್ವಾಮೀಜಿ ಭವಿಷ್ಯವಾಣಿಯ ಫಾಲೋ ಅಪ್ ವರದಿಗೆ ಸ್ಪಂದಿಸಿರುವ ಮಹಾಜನತೆಯು ಸ್ವಾಮೀಜಿಯವರಲ್ಲಿ ತಮ್ಮ ಭವಿಷ್ಯವನ್ನು ಕೇಳುವುದಕ್ಕೆ ಉತ್ಸುಕರಾಗಿ ಕಮೆಂಟುಗಳನ್ನು ಹಾಕಿರುವರು. ಒಬ್ಬೊಬ್ಬರ ಕಮೆಂಟಿಗೂ ಉತ್ತರಿಸಲು ಶುರು ಮಾಡಿದರೆ ಎಷ್ಟು ಸಮಯ ತಗುಲಬಹುದು ಎಂಬುದರ ಅಂದಾಜು ಮಾಡಲು ತಾವು ಶಕ್ಯರಲ್ಲ ಎಂದು ಭಾವಿಸಿದ ಸ್ವಾಮೀಜಿಯವರು ಕಮೆಂಟಿಸಿದ ಎಲ್ಲರಿಗೂ ಹಾಗೂ ತಮ್ಮ, ತಮ್ಮ ಮಕ್ಕಳ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ತಮ್ಮ ಮನೆಯ ನಾಯಿ, ಬೆಕ್ಕು, ಕುರಿ, ಕೋಳಿ, ಹೆಗ್ಗಣಗಳ ಭವಿಷ್ಯವನ್ನು ತಿಳಿಯುವ ಕುತೂಹಲವಿರುವ ಸಮಸ್ತರಿಗೂ ಅತಿ ಶೀಘ್ರದಲ್ಲಿ ಹೋಲ್ ಸೇಲ್ ಆಗಿ ಭವಿಷ್ಯವನ್ನು ಅರುಹಲಿದ್ದಾರೆ.

ಸಾಮಾನ್ಯೀಕರಿಸಿದ ಭವಿಷ್ಯವಾಣಿಗಳಲ್ಲಿ ನಂಬಿಕೆಯಿಲ್ಲದ ವಿಚಾರವಾದಿ ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನ, ಆ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಾಹೀರಾತಿನ ಹೆಸರಿನ ಜೊತೆಗೆ ಮನೆಯ ಸುತ್ತ ಎರಡು ಅಡಿ ಜಾಗದಲ್ಲಿ ಎಲ್ಲಾದರೂ ಬೆಳೆದಿರುವ ವಾಸನೆಯಿಲ್ಲದ ಹೂ ಬಿಡುವ ಗಿಡದಲ್ಲಿನ ಹಳದಿ ಎಲೆಗಳ ಸಂಖ್ಯೆಯನ್ನು ಕಳಿಸಿಕೊಟ್ಟರೆ ಪ್ರತ್ಯೇಕವಾಗಿ ಅವರ ನಿಖರ ಭವಿಷ್ಯವನ್ನು ಸ್ವಾಮೀಜಿಯವರು ತಿಳಿಸುವರು.

ಜೊತೆಗೆ ಉತ್ತಮ, ಮಧ್ಯಮ, ಅಧಮ – ಈ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಭಾರಿ ಕೋಲಾಹಲವನ್ನು ಉಂಟು ಮಾಡಿರುವ ಮಾಯನ್ನರ ಕ್ಯಾಲಂಡರಿನ ಬಗ್ಗೆ ಹಾಗೂ ೨೦೧೨ರಲ್ಲಿ ಜರುಗಲಿದೆ ಎನ್ನಲಾಗಿರುವ ಭೀಕರ ಪ್ರಳಯದ ಬಗ್ಗೆ ಸ್ವಾಮೀಜಿಯವರು ವೈಜ್ಞಾನಿಕವಾದ, ತಂತ್ರಜ್ಞಾನಯುತವಾದ, ತಾರ್ಕಿಕವಾದ ಭವಿಷ್ಯವನ್ನು ನುಡಿಯಲಿದ್ದಾರೆ. ಪ್ರಳಯ ನಡೆಯುವುದೋ ಇಲ್ಲವೋ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಲಿದ್ದಾರೆ. ಆ ಕಡ್ಡಿಯು ಎಷ್ಟು ತುಂಡಾಗಬಹುದು ಎಂಬ ವಿಚಾರವಾಗಿ ಸಾಮ್ರಾಟರು ಹಾಗೂ ತೊಣಚಪ್ಪನವರ ನಡುವೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದ ಅಂತ್ಯವಾಗಲು ತೆಗೆದುಕೊಳ್ಳುವ ಸಮಯ ಎಷ್ಟಾಗಬಹುದು ಎಂದು ಕುಚೇಲ ಅಂದಾಜಿಸುವಲ್ಲಿ ಮಗ್ನನಾಗಿರುವನು. ಕುಚೇಲನ ಅಂದಾಜು ನಿಖರವಾಗಿರುತ್ತದೆಯೋ ಇಲ್ಲವೋ ಎಂಬುದರ ಮೇಲೆ ಬೆಟ್ ಕಟ್ಟಿದ ಎದುರು ಮನೆಯ ಲಕ್ಕಿ ವಿಕ್ಕಿ ವಾಗ್ವಾದಕ್ಕೆ ಇಳಿದಿರುವರು.

ವಿ.ಸೂ: ತಮಗೆ ಮಕ್ಕಳಾಗುತ್ತವೆಯೇ ಎಂಬ ಪ್ರಶ್ನೆ ಕೇಳುವವರು ಮೊದಲಿಗೆ ಗಂಡಿಗೆ ಇಪ್ಪತ್ತೊಂದು, ಹೆಣ್ಣಿಗೆ ಹದಿನೆಂಟು ದಾಟಿದೆಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಂಡು ತಮಗೆ ಮದುವೆಯಾಗಿದೆಯೇ ಇಲ್ಲವೇ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು.

ನಗೆ ಸಾಮ್ರಾಜ್ಯದಲ್ಲಿ ಕಾಡುತ್ತಿರುವ ಸಾಮ್ರಾಜ್ಞಿಯ ಕೊರತೆ!

4 ನವೆಂ

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು ವರದಿಯ ಸಂವಾದ ಮುಂದುವರೆದಿದೆ. ಸನ್ಮಾನ್ಯ ದರಿದ್ರ ನಾರಾಯಣ ಬಟಾಬತ್ತಲ್ ನಮ್ಮ ಅತ್ಯಾಪ್ತ ಚೇಲ ಕುಚೇಲನ ಮೇಲೆ ಗುರುತರವಾದ ಆರೋಪವನ್ನು ಮಾಡುವುದರ ಜೊತೆಗೆ ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯ ಅಗತ್ಯವಿದೆಯೆಂದು ಗಟ್ಟಿ ದನಿಯಲ್ಲಿ ಘೋಷಿಸಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ. ಸಂವಾದಕ್ಕೆ ಹೊಸದಾಗಿ ಮುಖ ತೋರಿದವರು ಇಲ್ಲಿ ಹೋಗಿ ಬಂದರೆ ಇದರ ಹಿನ್ನೆಲೆ ತಿಳಿದೀತೆಂಬ ಧೈರ್ಯವನ್ನು ಹೊಂದಬಹುದು.

ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು ಪ್ರಕಟಿಸುತ್ತಿಲ್ಲ. ಹಾಗೂ ಸಂವಾದದ ಈ ಹಂತದವರೆಗೂ ಎರಡೂ ಪಕ್ಷದವರ ದೈಹಿಕ ಸಂಪನ್ಮೂಲಗಳಿಗೆ ಯಾವ ಹಾನಿಯೂ ಸಂಭವಿಸಿಲ್ಲ. ಒಂದು ಪಾರ್ಟಿಯು ಮುಂಚಿನ ಹಾಗೆ ದಿಗಂಬರವಾಗಿಯೂ, ಮತ್ತೊಂದು ಪಾರ್ಟಿಯು ವಸ್ತ್ರಭೂಷಿತವಾಗಿಯೂ ಇರುವುದೆಂದು ತಿಳಿಸಲು ಇಚ್ಛಿಸುತ್ತೇವೆ.

 

ದರಿದ್ರ ನಾರಾಯಣ ಬಟಾಬತ್ತಲ್:

ನಗೆಸಾಮ್ರಾಜ್ಯದ ಅಧಿಪತಿ, ತ್ರಿಲೋಕಗಳಲ್ಲೂ ನಗುವಿನ ಅಟ್ಟಹಾಸ ಅಪ್ಪಳಿಸುವ ನಗುವೀರ, ಮುಗ್ಧನಗೆಯಲ್ಲೂ ಸ್ವಲ್ಪವಾದರೂ ಸೀರಿಯಸ್ನೆಸ್ ಎಂಬ ಗಾಂಭೀರ್ಯವಿರಬೇಕು ಎಂದು ಬಯಸುವ ನಗೆಸಾಮ್ರಾಟರಿಗೆ ಜಯವಾಗಲಿ!

ತಮ್ಮ ನಗೆಸಾಮ್ರಾಜ್ಯದಲ್ಲಿನ ಸಾಮಾನ್ಯರಲ್ಲಿ ಅತಿಸಾಮಾನ್ಯನಾದಂಥ, ಆರ್ಥಿಕ, ಬೌದ್ಧಿಕ, ಮಾತ್ರವಲ್ಲ ನಗಲೂ ದಾರಿದ್ರ್ಯವಿರುವ ಒಬ್ಬ ಯಃ ಕಶ್ಚಿತ್ ಪ್ರಜೆಯಾದ ಈ ದರಿದ್ರನಾರಾಯಣನು ಮಾಡುವ ಅಹವಾಲು : ಪ್ರಭೋ, ತಮ್ಮ ಅವಗಾಹನೆಗೆ ತರಲೇಬೇಕಾದಂತಹ ವಿಷಯ ಹೀಗಿದೆ: ತಮ್ಮ ಎಡಗೈ ಬಂಟ ಕು-ಚೇಲರ ಕು-ಚೇಷ್ಟೆ ಕುರಿತದ್ದು!

ಸುದ್ದಿ ಮಾಧ್ಯಮಗಳ ಅತಿರಂಜಿತ ವರದಿಗಳ ಬಗ್ಗೆ, ಕಡ್ಡಿಯನ್ನೇ ತಿರುಚಿ ಗುಡ್ಡ ಮಾಡುವ ಬಗ್ಗೆ, ಪತ್ರಿಕೆ ಎರವಲು ಪಡೆದು ಸುದ್ದಿ ತಿಳಿಯುವ ಬಡ ಓದುಗರಾದ ನಾವು ಬಹಳಷ್ಟು ಕೇಳಿದ್ದೇವೆ, ಕಂಡಿದ್ದೇವೆ. ರಾಜ್ಯಭಾರದಂತಹ ಅತಿಮಹತ್ವದ ಹೊಣೆಗಾರಿಕೆ ಹೊತ್ತಂತಹ ಸಾಮ್ರಾಟರ ಗಮನಕ್ಕೆ ಇಂತಹ ಚಿಲ್ಲರೆ (?) ಸಂಗತಿಗಳು ಬಾರವು ಎಂಬುದಕ್ಕಾಗಿ ಈ ಅವ ಹಾಲು, ಕ್ಷಮಿಸಿ, ಅಹವಾಲು.

ತಮ್ಮ ರಾಜ್ಯದ ಅನ್ ಅಧಿಕೃತ ಏಕೈಕ ವಾರ್ತಾಪತ್ರ ನಗೆನಗಾರಿಯಲ್ಲಿ ದೊಡ್ಡ ಅಕ್ಷರದ ತಲೆಬರಹದಲ್ಲಿ “ದರಿದ್ರನಾರಾಯಣರ ಲಂಗಮೋಹ” ಎಂದು ಘೋಷಿಸಿರುವದು ನಿಮ್ಮ ಪತ್ರಕರ್ತ, ಕು-ಚೇಲರ ಅತಿ ಬುದ್ಧಿವಂತಿಕೆಯೇ? ಅಥವಾ ಸರಿಯಾಗಿ ಕೀಲಿಮಣೆ ಕುಟ್ಟಲಾರದ ಸೋಮಾರಿತನವೇ? ಅಲ್ಲವಾದರೆ ತನ್ನ ವಿಕ್ಷಿಪ್ತ, ವಿಕೃತ ಹಾಸ್ಯದ ಒಂದು ಮಾದರಿಯೇ??

ನಮ್ಮ ದಿಗಂಬರ ಪಂಥಕ್ಕೆ ಮಾಡಿದ ಘೋರ ಅಪಚಾರವಲ್ಲವೇ ಇದು? ಲಂಗ-ಓಟಿಯನ್ನೇ ಕಿತ್ತೊಗೆದ ದಿಗಂಬರ ಪಂಥೀಯರಿಗೆ ಎಲ್ಲಾದರೂ ಲಂಗದ ಮೋಹವಿರಲು ಸಾಧ್ಯವೇ? ದರಿದ್ರನಾರಾಯಣರ ಲಿಂಗಮೋಹ ವೆಂದಾಗಬೇಕಿತ್ತಲ್ಲವೇ? ಚೋಲೀ ಕೇ ಪೀಚೆ ಕ್ಯಾ ಹೈ ಎಂಬ ಅತೀ ಅನ್ ಅರ್ಥಪೂರ್ಣ ಹಾಡು ಹುಟ್ಟಿದ ನಿಮ್ಮ ಈ ನಗೆಗೀಡು ಸಾಮ್ರಾಜ್ಯದಲ್ಲಿ ಕ್ಷುಲ್ಲಕ ಲಂಗದ ಮೇಲೆ ಮೋಹವಿರಲು ನಮಗೆ ಸಾಧ್ಯವೇ?

ತಮ್ಮ ರಾಜ್ಯದಲ್ಲಿ ನ್ಯಾಯ ನೀತಿಗಳು ರಾರಾಜಿಸಬೇಕು ಎಂದಾದರೆ ಈ ತಪ್ಪನ್ನು ತಕ್ಷಣ ಸರಿಪಡಿಸುವಂತೆ ನಿಮ್ಮ ಚೇಲಗಣಕ್ಕೆ ಆಜ್ಞಾಪಿಸಿ ದಿಗಂಬರ ಪಂಥದ ಮೇಲಾಗಿರುವ ಅತ್ಯಾಚಾರಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿ ನಮ್ಮ ಕಳ ಕಳಿಯ ಬೇಡಿಕೆ.

ತಲೆಬರಹವೇ ಹೀಗಿರಬೇಕಾದರೆ, ಇನ್ನು ಲೇಖನದಲ್ಲಿ ಇನ್ನೆಷ್ಟು ದೋಷ, ವಿಕೃತಿಗಳು ಇರಬಹುದು ಎಂಬ ಹೆದರಿಕೆಯಿಂದ ಮುಂದೆ ಓದಲಾರದಾದೆವು. ಕು-ಚೇಲನು ತನ್ನ ತಪ್ಪನ್ನು ಒಪ್ಪಿ ಒಪ್ಪ ಮಾಡಿದ ಮೇಲೆ ಮುಂದುವರೆಯುವ ಧೈರ್ಯವಾಗಬಹುದೇನೋ.

 

ನಗೆ ಸಾಮ್ರಾಟ್:

ತಲೆಬರಹವನ್ನು ಬರೆಯುವುದಕ್ಕೆ ತಲೆಯಿಲ್ಲದವರನ್ನು ಇಟ್ಟರೆ ಆಗುವ ಅನಾಹುತಕ್ಕೆ ಹಸಿ ಸಾಕ್ಷಿ ಇದು. ತಲೆ ಬರಹದಲ್ಲಿ ಆಗಿರುವ ಮಹಾ ಪ್ರಮಾದಕ್ಕೆ ನಾವು ನಮ್ಮ ಅತ್ಯಾಪ್ತ ಚೇಲ ಕುಚೇಲನಿಂದ ಕ್ಷಮಾಪಣೆ ಕಕ್ಕಿಸುತ್ತಿದ್ದೇವೆ. ದಯವಿಟ್ಟು ಸ್ವೀಕರಿಸಿ, ನಿಮ್ಮ ಲಿಂಗ ಮೋಹದ ಬಗ್ಗೆ ಆತನಿಗೆ ಅಪಾರ ಗೌರವವಿರುವುದು. ಇದಕ್ಕೆ ನಾವೇ ಶ್ಯೂರಿಟಿ.

ನಿಮ್ಮ ದಾರಿದ್ರ್ಯಗಳಲ್ಲಿ ಕಡೆಯದು ಹಾಗೂ ಬಹು ಮುಖ್ಯವಾದುದನ್ನು ಪರಿಹರಿಸುವಲ್ಲಿ ನಾವು ವಿಫಲರಾಗಿದ್ದೇವೆಂದರೆ ನಗೆ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನಾವು ಅನರ್ಹರು. ಈ ಕೂಡಲೆ ನಾವು ನಮ್ಮ ರಾಜಿನಾಮೆ ಪತ್ರವನ್ನು ನಮ್ಮ ಸ್ವವಿಳಾಸಕ್ಕೆ ಕಳುಹಿಸಿ ಕೊಡುತ್ತೇವೆ.

ತಲೆಬರಹದಿಂದ ಇಷ್ಟು ಹೆದರಿದಿರಿ ಎಂಬುದು ಜಗಜ್ಜಾಹೀರಾದರೆ ಅಲ್-ಇಲ್-ಎಲ್-ಖೈದಾ ಮಾರ್ಕೆಟಿನಲ್ಲಿ ನಮ್ಮ ಕುಚೇಲನ ರೇಟು ಯಡಿಯೂರಪ್ಪನವರ ಪಿತ್ಥದ ಹಾಗೆ, ಭಾರತದ ಇನ್‌ಫ್ಲೇಷನ್ನಿನ ಹಾಗೆ ಏರುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಈ ಗುಟ್ಟನ್ನು ನಿಮ್ಮ ಹೊಟ್ಟೆಯಲ್ಲೇ ಇಟ್ಟುಕೊಂಡಿರಿ.

 

ದರಿದ್ರ ನಾರಾಯಣ ಬಟಾಬತ್ತಲ್:

“ನಗೆ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನಾವು ಅನರ್ಹರು ” ಎಂಬುದಾಗಿ ದಯವಿಟ್ಟು ಕೊರಗಿ ಕರಗದಿರಿ, ಹೇ ಪ್ರಭೋ!

ಅಗಸನೊಬ್ಬನ ಮಾತಿಗೆ ಮರ್ಯಾದೆ ಕೊಟ್ಟು ಗರ್ಭಿಣಿ ಸೀತಾಮಾತೆಯನ್ನು ಮಾತೆಯಾಗುವ ಮೊದಲೇ ಕಾಡಿಗಟ್ಟಿದ ಮರ್ಯಾದಾಪುರುಷೋತ್ತಮನ ಹಾಗೆ ನೀವೂ ನಿಮ್ಮನ್ನೇ ನಗೆಸಾಮ್ರಾಜ್ಯ ದಿಂದ ಗಡೀಪಾರು ಮಾಡಿದರೆ ಈ ಕಲಿಯುಗ ಮತ್ತೆ ಲಕ್ಷಾಂತರ ವರ್ಷ ಹಿನ್ನಡೆಯಾಗಿ ಅ – ಸತ್ಯಯುಗಕ್ಕೆ ಮರಳುವುದು.

ಹೇಗೆ ನಮ್ಮ “ನೆರೆ” ದೇಶ ಬಾ ರಥ ದಲ್ಲಿ ಸರಕಾರಗಳು ಕೋಟ್ಯಾಂತರ ರೂಪಾಯಿಗಳ ಸಹಾಯಧನ, ಮೀಸೆಲಾಠಿ ಇತ್ಯಾದಿಗಳನ್ನು ಕೊಟ್ಟು ಗರೀಬೀ ಹಟಾಯಿಸುತ್ತಿದ್ದಾರೋ ಹಾಗೆಯೇ ಈ ದರಿದ್ರನಾರಾಯಣನ ನಗುದಾರಿದ್ರ್ಯ ಕಳೆದು “ನಗೆಯು ಬರುತಿದೆ ಎನಗೆ ನಗೆಯು ಬರುತಿದೆ” ಎಂದು ಹಾಡುವನ್ತಾಗಲು ಸುಲಭ ಉಪಾಯವೆಂದರೆ ನಗೆನಗಾರಿಯ ಸಂಪಾದಕ ಮಂಡಳಿಯನ್ನು ವಿಸ್ತರಣೆಗೊಳಿಸಿ ಈ- ಪತ್ರಿಕೆಯಲ್ಲಿ ವೈವಿಧ್ಯವನ್ನು ತರುವುದು.
ನಗೆಸಾಮ್ರಾಜ್ಯಕ್ಕೆ ಸಾಮ್ರಾಜ್ನಿಯೊಬ್ಬರನ್ನು ತರುವುದು ಕೂಡ ಇನ್ನೂ ಉತ್ತಮ. ಸಾಮ್ರಾಟರ ರಾಜವಂಶವೂ ಬೆಳೆಯುವುದು. ಸಾಮ್ರಾಟರಿಗೂ ಪುರು ಸೊತ್ತು ಸಿಕ್ಕಿ ತಮ್ಮ ಸಾಮ್ರಾಜ್ಯವಿಸ್ತರಣೆಗೂ ಸಹಾಯವಾಗುವುದು.

ಹುಡುಕಾಟದಲ್ಲಿ ತೊಡಗಲೇ?

ಕೊಸರು: ಹುಡುಕಾಟದಲ್ಲಿ ತೊಡಗಲೇ? ಅಥವಾ ತಾವು ತಮ್ಮ ಹುದುಗಾಟದಲ್ಲೇ ನಗ್ನ, ಕ್ಷಮಿಸಿ ಮಗ್ನವಾಗುವಿರೇ?

 

ನಗೆ ಸಾಮ್ರಾಟ್

ಕಲಿಯುಗಕ್ಕೆ ಭಾರಿ ಹಿನ್ನಡೆಯುನ್ನುಂಟು ಮಾಡಿ ಇದನ್ನು ಸತ್ಯಯುಗಕ್ಕೆ ದಾಟಿಸಿ ಆ ಮೂಲಕ ಪ್ರಗತಿ ವಿರೋಧಿ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳುವುದು, ಕಲಿಯುಗದ ಕಡೆಯ ಪರದೆಯನ್ನು ಎಳೆಯುವುದಕ್ಕಾಗಿ ಅವತರಿಸಿ ಬರಲಿರುವ ಕಲ್ಕಿಗೆ ಕನ್‌ಫ್ಯೂಶನ್ ಉಂಟು ಮಾಡಿ ದೈವನಿಂದನೆಯ ಅಪರಾಧಗೈಯುವುದರಿಂದ ನಮ್ಮನ್ನು ಪಾರು ಮಾಡಿದ ನಿಮಗೆ ನಾವು ಋಣಿ.

ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯನ್ನು ತರುವುದರಿಂದ ‘ಬಟಾಬತ್ತಲ್’ ದರಿದ್ರನಾರಾಯಣರಿಗೆ ಸಂತೋಷ ಉಂಟಾಗಿ, ಲಿಂಗಮೋಹಿ ಆದರ್ಶ ಪ್ರಜೆಯ ನಗೆದಾರಿದ್ರ್ಯ ಕಳೆದುಹೋಗುವುದು ಎನ್ನುವುದು ಕುತೂಹಲಕರವಾದ ಸಂಗತಿ. ಈಗಾಗಲೇ ಕುಚೇಲ, ತೊಣಚಪ್ಪ ಹಾಗೂ ನಮ್ಮ ತಂಡವನ್ನು ಕಂಡು ಹಲವು ಮಹಿಳಾ ಮಣಿಗಳು ಮರೆಯಲಿ ಮುಸಿಮುಸಿ ನಗುತ್ತಿರುವ ವರದಿ ನಮ್ಮನ್ನು ತಲುಪಿದೆ.

ಪ್ರಜೆಗಳ ಒಳಿತಿಗಾಗಿ ಸಾಮ್ರಾಜ್ಞಿಯನ್ನು ತರುವುದು, ರಾಜಕುವರರಿಗಾಗಿ ನರ್ಸರಿಯಲ್ಲಿ ಸೀಟು ರಿಸರ್ವ್ ಮಾಡುವುದು ಹೀಗೆ ಎಲ್ಲಾ ಬಗೆಯ ಸಂಕಷ್ಟಗಳನ್ನು ಭರಿಸಲು ನಾವು ಸಿದ್ಧ.

ಹುಡುಗಾಟವನ್ನು ಬದಿಗಿಟ್ಟು ಶೀಘ್ರವೇ ಹುಡುಕಾಟದಲ್ಲಿ ತೊಡಗಿ. ಆದರೆ ದಯವಿಟ್ಟು ಸಾಮ್ರಾಜ್ಞಿಯ ಪಟ್ಟಕ್ಕೆ ನಿಮ್ಮ ದಿಗಂಬರ ಪಂಥದ ಸದಸ್ಯೆಯನ್ನು ಸೂಚಿಸಬೇಡಿ. ಹೊರ ನೋಟಕ್ಕೆ ನಾವು ಎಷ್ಟೇ ಕಠಿಣವಾಗಿ ಕಂಡರೂ ನಮ್ಮ ಹೃದಯ ಬಹು ಮೃದು, ಅದು ಒಡೆದು ಹೋಗದಂತೆ ಎಚ್ಚರ ವಹಿಸಿ!