(ನಗೆನಗಾರಿ ಅರಾಜಕೀಯ ಬ್ಯೂರೊ)
ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.
ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.
ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.
ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.
ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!
ಇತ್ತೀಚಿನ ಪ್ರಜಾ ಉವಾಚ