ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ
ನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಮನುಷ್ಯ ಸಂತೋಷವಾಗಿರುವುದನ್ನು ಕಂಡು ಸಂಕಟಗೊಂಡ ದೇವತೆಗಳು ಕಂಡುಕೊಂಡ ಉಪಾಯದ ಬಗ್ಗೆ ಈ ವಾರ ಬರೆದಿದ್ದಾರೆ.
ಇದು ಈ ಅಂಕಣಕಾರರ ನಾಲ್ಕನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.
ಅಂದು ಯಾಕೋ ದೇವಲೋಕದಲ್ಲಿ ಎಂದಿನ ಪ್ರಶಾಂತತೆ ಇರಲಿಲ್ಲ. ಎಲ್ಲಿ ನೋಡಿದರೂ ಸಂತೃಪ್ತಿ, ಸಂತಸ, ಶಾಂತತೆಯಿಂದ ನಳನಳಿಸುತ್ತಿರುತ್ತಿದ್ದ ಸ್ವರ್ಗ ಯಾಕೋ ಅಂದು ಕದಡಿದ ನೀರಿನ ಕೊಳದಂತಾಗಿತ್ತು. ದೇವತೆಗಳು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಏನನ್ನೋ ಗಾಢವಾಗಿ ಚಿಂತಿಸುತ್ತಿರುವಂತೆ, ಯಾರನ್ನೋ ತೋರಿಸಿ ಆರೋಪಿಸುತ್ತಿರುವಂತೆ, ನಿಂತಲ್ಲೆ ಜಗಳ ಕಾಯುತ್ತಿರುವಂತೆ ಕಾಣುತ್ತಿದ್ದರು.
ಆಗ ತಾನೆ ತಮ್ಮ ಲೋಕಸಂಚಾರ ಮುಗಿಸಿಕೊಂಡು ದೇವಲೋಕಕ್ಕೆ ಬಂದ ನಾರದ ಮಹರ್ಷಿಗಳಿಗೆ ಸ್ವರ್ಗದ ಈ ವಾತಾವರಣ ಕಂಡು ಗಲಿಬಿಲಿಯಾಯಿತು. ‘ಇದೇನು ಇಂದು ಸ್ವರ್ಗ ಹೀಗಾಗಿಬಿಟ್ಟಿದೆ? ದೇವೇಂದ್ರ ಏನು ಮಾಡುತ್ತಿದ್ದಾನೆ? ಯಾರಾದರೂ ರಾಕ್ಷಸ ಸ್ವರ್ಗವನ್ನು ಅತಿಕ್ರಮಿಸಿಕೊಳ್ಳಬೇಕು ಎಂಬ ಸಂಕಲ್ಪದಿಂದ ತಪಸ್ಸಿಗೆ ಕುಳಿತಿದ್ದಾನೆಯೋ ಹೇಗೆ? ಅಥವಾ ಈಗಾಗಲೇ ಯಾರಾದರೂ ರಾಕ್ಷಸ ಪ್ರಭುಗಳು ತೊಡೆತಟ್ಟಿ ಬಂದು ಯುದ್ಧ ಮಾಡಿ ಇಂದ್ರನನ್ನು ಕುರ್ಚಿಯಿಂದ ಕೆಳಕ್ಕುರಿಳಿಸಿದ್ದಾರೆಯೊ ಏನೋ… ಇಷ್ಟಕ್ಕೂ ಈ ನಮ್ಮ ಇಂದ್ರನಿಗೆ ಅದ್ಯಾಕೆ ಅಂತಹ ಕುರ್ಚಿಯ ಮೋಹವೋ ಕಾಣೆ! ಅದನ್ನುಳಿಸಿಕೊಳ್ಳುವ ತಾಕತ್ತಿಲ್ಲದಿದ್ದರೂ ಅದರ ಮೇಲೆ ಕುಳಿತು ದೌಲತ್ತು ನಡೆಸುವುದಕ್ಕೇನೂ ಕಡಿಮೆಯಿಲ್ಲ. ಅತ್ತ ಭೂಲೋಕದ ಯಾವೊಬ್ಬ ಮನುಷ್ಯನೋ ಇಲ್ಲವೇ ಪಾತಾಳದಿಂದ ಒಬ್ಬ ರಕ್ಕಸನೋ ತನ್ನ ಕುರ್ಚಿಯ ಮೇಲೆ ಕಣ್ಣು ಹಾಕಿದ್ದಾನೆ ಎಂಬುದರ ಸುಳಿವು ದೊರೆತುಬಿಟ್ಟರೆ ಸಾಕು ಈ ಇಂದ್ರ ಕಾಲುಹಿಡಿಯದ ದೇವರುಗಳಿಲ್ಲ!
ಪಾಪ ಆ ತ್ರಿಮೂರ್ತಿಗಳ ಪಾಡಂತೂ ಹೇಳತೀರದು. ಲೋಕ ಪರಿಪಾಲನೆಯ ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ ಹಾಕಿಕೊಂಡು ಮೂರೂ ಮಂದಿ ಸರ್ಕಾರ ನಡೆಸುತ್ತಿರುವಾಗ, ಮನುಷ್ಯರೋ, ರಕ್ಕಸರೋ ಗಾಢವಾದ ತಪಸ್ಸು ಮಾಡಿ ತಲೆಗೆ ಬಂದ ವರವನ್ನು ಕೇಳಿದರೆ ಇಲ್ಲ ಎನ್ನಲಾದೀತೇ? ಅದರಲ್ಲೂ ನಮ್ಮ ಮುಕ್ಕಣ್ಣ ಮಹೇಶ್ವರ ರಕ್ಕಸರ ಡಿಮ್ಯಾಂಡುಗಳನ್ನು ಅಪ್ರೂವ್ ಮಾಡುವುದರಲ್ಲಿ ಎತ್ತಿದ ಕೈ. ಹಾಗಂತ ಮಹೇಶ್ವರನಿಗೆ ಏನೂ ಹೇಳಲಾಗದು, ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ನ ಮುಖ ನೋಡಿಕೊಂಡು ಮೂವರೂ ಸುಮ್ಮನಿರಬೇಕು. ಇಲ್ಲದಿದ್ದರೆ ಸರ್ಕಾರವೇ ಉರುಳಿ ಹೋಗುವ ಭಯ (ಅವರಿಗೂ ಕುರ್ಚಿ ಮೇಲಿನ ಮೋಹ?!).
ಈ ರಕ್ಕಸರು ಮಹಾ ಬುದ್ಧಿವಂತರು. ವಿಷ್ಣುವಿಗೆ ನಮ್ಮ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂಬುದನ್ನು ತಿಳಿದು ಅವರು ನೇರವಾಗಿ ಮಹೇಶ್ವರನಿಗೋ ಇಲ್ಲವೇ ಸೃಷ್ಟಿಕರ್ತ ಬ್ರಹ್ಮನಿಗೋ ಗಾಳಹಾಕುತ್ತಾರೆ. ಆದರೆ ದಿನದ ಇಪ್ಪತ್ನಾಕ್ಲು ಗಂಟೆಯೂ ಸೃಷ್ಟಿಯ ಕೆಲಸದಲ್ಲಿ ತೊಡಗಿದ ಬ್ರಹ್ಮನಿಗೆ ನಾಲ್ಕು ತಲೆಗಳಿದ್ದರೂ, ಒಂದೊಂದು ತಲೆಗೆ ಎರಡೆರಡು ಕೈಗಳಂತೆ ಒಟ್ಟು ಎಂಟು ಕೈಗಳಿದ್ದರೂ ಸಾಲದು. ಅಂತಹ ಬ್ಯುಸಿ ಶೆಡ್ಯೂಲ್‍ನಲ್ಲಿಯೂ ಬಿಡುವು ಮಾಡಿಕೊಂಡು ಆಗಾಗ ರಕ್ಕಸರ ಮೊರೆಯನ್ನಾಲಿಸಿ ಅವರಿಗೆ ಬೇಡಿದ ವರವನ್ನು ಕೊಡುವುದುಂಟು. ಆದರೆ ಅದರಲ್ಲೂ ಅವರದ್ದು ಚಾಣಾಕ್ಷ ನಡೆ. ಚಿರಂಜೀವಿಯಾಗು ಅಂತ ವರ ಕೊಡುವುದು ತಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗಿನದ್ದು ಎಂಬುದನ್ನು ತಿಳಿಸಿ ರಕ್ಕಸರ ಮಹತ್ವಾಕಾಂಕ್ಷಿ ವರಗಳ ಬೇಡಿಕೆಗಳಿಂದ ಬಚಾವಾಗಿಬಿಡುತ್ತಾರೆ. ಆದರೆ ಅವರಿಗೆ ನಮ್ಮ ಮಹಾವಿಷ್ಣುವಿನಂತೆ ಡಿಪ್ಲೊಮೆಟಿಕ್ ಆಗಿ ವರ್ತಿಸಲು ಬಾರದು. ಅದರ ಬಗ್ಗೆ ತಿಳಿಸಿ ಹೇಳವಂತೆ ಅವರು ತಮ್ಮ ಪುತ್ರಿ ಹಾಗೂ ಪತ್ನಿ ಸರಸ್ವತಿದೇವಿಯನ್ನು ಕೇಳಿಕೊಂಡಿದ್ದರೂ, ಮಾತೆ ಸರಸ್ವತಿಯವರು ‘ಸರಸ್ವತೀ ಪುತ್ರ’ ಎಂದು ಹೆಸರಿಟ್ಟು ಕೊಂಡ ಭೂಲೋಕದ ಪ್ರಭೃತ್ತಿಗಳಿಗೆ, ತಮ್ಮ ಹೆಸರನ್ನು ಉಳಿಸಿಕೊಳ್ಳುವುದರ ಸಲುವಾಗಿಯಾದರೂ, ಬುದ್ಧಿ ಧಾರೆಯೆರೆಯುವುದರಲ್ಲಿ ಬ್ಯುಸಿಯಾಗಿದ್ದರಿಂದ ಬ್ರಹ್ಮ ದೇವರಿಗೆ ಉಪದೇಶಿಸುವ ಕಾರ್ಯಕ್ರಮ ಪೋಸ್ಟ್ ಪೋನ್ ಆಗಿತ್ತು. ಮಹೇಶ್ವರನಿಗೆ ಹಿಮಾಲಯದ ತಪ್ಪಲಲ್ಲಿ ಕುಳಿತು ಧ್ಯಾನ ಮಾಡುವುದೇ ಬಹುದೊಡ್ಡ ಕೆಲಸ. ಆಗಾಗ ತಮ್ಮ ಮೂರನೆಯ ಕಣ್ಣು ಎಂಬ ‘ವಿಟೋ’ ಬಳಸಿ ಕೆಲವು anti social elementಗಳನ್ನು ನಾಶಮಾಡುವ ಕರ್ತವ್ಯ ಪಾಲಿಸುತ್ತಾರಾದರೂ ಅದು ದಿನನಿತ್ಯವಿರುವುದಿಲ್ಲ. ಮೇಲಾಗಿ ಅವರ ಪುತ್ರದ್ವಯರಾದ ಗಣೇಶ್ ಹಾಗೂ ಸುಬ್ರಹ್ಮಣ್ಯ ಬೆಳೆದು ಪ್ರಬುದ್ಧರಾಗಿ ತಮ್ಮ ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರಾದ್ದರಿಂದ ಅವರ ಜಗಳ, ಕಿತ್ತಾಟ ಬಗೆಹರಿಸುವ ತಲೆನೋವೂ ಇಲ್ಲ. ಹಾಗಾಗಿ ರಕ್ಕಸರು ತಪಸ್ಸಿಗೆ ಥಟ್ ಅಂತ ಓಗೊಡುವುದು ಮಹೇಶ್ವರನೇ. ಅವರು ಏನು ಕೇಳಿದರೂ ತಥಾಸ್ತು ಎನ್ನುವುದು ಮಾತ್ರ ಮಹೇಶ್ವರನ ಕೆಲಸ. ಇದರಿಂದಾಗಿ ಮಹೇಶ್ವರ ಭಕ್ತ ಪರಾಧೀನನಾದರೂ ಉಳಿದ ದೇವತೆಗಳಿಗೆ ಇದರಿಂದ ಅಷ್ಟೇನೂ ಸಂತೋಷವಾದಂತೆ ಕಾಣುವುದಿಲ್ಲ. ಯಾರಾದರೂ ರಾಕ್ಷಸರು ಶಿವನಿಂದ ಪಡೆಯಬಾರದ ವರಗಳನ್ನು ಪಡೆದು ಸ್ವರ್ಗಕ್ಕೆ ಲಗ್ಗೆ ಹಾಕಿಬಿಟ್ಟರೆ ಎಂಬ ಆತಂಕ ದೇವತೆಗಳದ್ದು. ಶಿವನು ಕೊಟ್ಟ ವರವನ್ನು ಶಿವನ ಮೇಲೆಯೇ ಪರೀಕ್ಷಿಸಲು ಮುಂದಾಗುವ ಅನೇಕ ‘ಮುಗ್ಧ’ ರಕ್ಕಸರನ್ನು ಯಾವ ಉಪಾಯ ಬಳಸಿ ಸಂಹರಿಸುವುದು ಎನ್ನುವುದನ್ನು ಪ್ಲಾನ್ ಮಾಡುತ್ತಾ ಕೂರುವ ಕಷ್ಟ ಶ್ರೀಹರಿಯದು.
ಹೀಗಿರುವಾಗ ದೇವತೆಗಳೆಲ್ಲಾ ಆತಂಕಗೊಂಡಿರುವುದಕ್ಕೆ ಮಹೇಶ್ವರನ ಯಾವುದೋ ಹೊಸ ವರವೇ ಕಾರಣವಾಗಿರಬೇಕು. ಯಾವುದಕ್ಕೂ ಇರಲಿ ಒಮ್ಮೆ ವಿಶ್ವಾಮಿತ್ರರನ್ನು ಕೇಳಿಬಿಡೋಣ.’ ಎಂದುಕೊಂಡು ನಾರದ ಮಹರ್ಷಿ ಎದುರಿಗೆ ಬರುತ್ತಿದ್ದ ವಿಶ್ವಾಮಿತ್ರರನ್ನು ಕುರಿತು ಯಾರಾದರೂ ಹೊಸ ರಕ್ಕಸರು ತಪಸ್ಸಿಗೆ ಕುಳಿತಿರುವರೇ ಎಂದು ಪ್ರಶ್ನಿಸಿದರು. ವಿಶ್ವಾಮಿತ್ರರಿಗೆ ಮೊದಲೇ ದೇವತೆಗಳ ಮೇಲೆ ಅಂತಹ ಗುಡ್ ವಿಲ್ ಏನೂ ಇರಲಿಲ್ಲವಲ್ಲ, ಅದೂ ಅಲ್ಲದೆ ಅವರದು ಪ್ರಕಾಂಡ ಕೋಪ, ಸಿಡಿಮಿಡಿಯಿಂದಲೇ ‘ನನಗೆ ತಿಳಿದಂತೆ ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲವಲ್ಲ?’ ಎಂದು ಹೇಳಿ ಸರಸರನೆ ನಡೆದು ಹೋದರು.
ನಾರದರ ಗೊಂದಲ ಇನ್ನಷ್ಟು ಹೆಚ್ಚಿತು. ‘ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲ ಎನ್ನುವುದಾದರೆ ದೇವತೆಗಳಲ್ಲೇಕೆ ಈ ಪರಿಯ ಆತಂಕ, ಗಡಿಬಿಡಿ? ಈ ಇಂದ್ರ ಇನ್ನೇನು ಕಿತಾಪತಿ ಮಾಡಿಕೊಂಡಿರಬಹುದು? ತ್ರಿಲೋಕ ಸಂಚಾರಿಯಾದ ನನಗೇ ತಿಳಿಯದ ಗಾಸಿಪ್ ಯಾವುದಾದರೂ ಟ್ಯಾಬ್ಲಾಯ್ಡ್‍ನಲ್ಲಿ ಪ್ರಕಟವಾಗಿಬಿಟ್ಟಿದೆಯೋ ಹೇಗೆ? ಅದ್ಯಾರು ಈ ಇಂದ್ರನನ್ನು ತಂದು ದೇವತೆಗಳಿಗೆ ಅಧಿಪತಿಯನ್ನಾಗಿ ಮಾಡಿದರೋ ಕಾಣೆ, ಇವನ ಕಿತಾಪತಿ, ದಗಲಬಾಜಿಗಳು ಒಂದೆರೆಡಲ್ಲ. ಎಷ್ಟು ಮಂದಿಯ ಋಷಿ ಮುನಿಗಳ ಹೆಂಡತಿಯರ ಗೌರವವನ್ನು ಹಾಳು ಮಾಡಿಲ್ಲ ಇವನು. ರಾಕ್ಷಸರೂ ಮಾಡಲು ಹಿಂದೆ ಮುಂದೆ ನೋಡುವಂತಹ ಎಷ್ಟು ಕುಟಿಲ ತಂತ್ರಗಳನ್ನು ಇವನು ಮಾಡಿಲ್ಲ. ಎಷ್ಟು ಮಂದಿ ತಪಸ್ವಿಗಳ ಶ್ರದ್ಧೆಯನ್ನು ಕೆಡಿಸಿಲ್ಲ. ಮತ್ತೆ ಇವೆಲ್ಲಕ್ಕೂ ಆತನದ್ದು ಒಂದೇ ಸಮಜಾಯಿಷಿ: ಧರ್ಮ ರಕ್ಷಣೆ! ಯಾರ ಧರ್ಮವನ್ನು ಯಾರು ರಕ್ಷಿಸುತ್ತಾರೋ ಕಾಣೆ. ಈಗ ಮತ್ತೆ ಯಾವುದಾದರೂ ಋಷಿ ಪತ್ನಿಯ ಗೌರವ ಹಾಳು ಮಾಡುವುದಕ್ಕೆ ಈತ ಹೋಗಿದ್ದಾನೆಯೋ ಹೇಗೆ? ಸಿಕ್ಕುಬಿದ್ದು ಋಷಿಗಳಿಂದ ಅದಿನ್ಯಾವ ಶಾಪಗಳನ್ನು ಪಡೆದು ಬರುತ್ತಾನೊ?’ ಎಂದು ಯೋಚಿಸುತ್ತಿರುವಾಗಲೇ ನಾರದರಿಗೆ ವಸಿಷ್ಟರು ಬರುತ್ತಿರುವುದು ಕಂಡಿತು.
ಇಡೀ ದೇವಲೋಕವೇ ಗೊಂದಲದ ಗೂಡಾಗಿದ್ದರೂ ವಸಿಷ್ಟರು ಮಾತ್ರ ತಮ್ಮ ಎಂದಿನ ಸಂಯಮವನ್ನು ಕೆಡಿಸಿಕೊಂಡಿರಲಿಲ್ಲ. ಇವರನ್ನು ಕೇಳಿದರೆ ಅಸಲು ಸಮಾಚಾರ ಏನೆಂದು ತಿಳಿಯಬಹುದು ಎಂದುಕೊಂಡು ಮಹರ್ಷಿ ನಾರದರು ಸೀದಾ ವಸಿಷ್ಟರ ಬಳಿ ಸಾರಿದರು. ‘ವಂದನೆಗಳು, ವಸಿಷ್ಟ ಮಹರ್ಷಿಗಳಿಗೆ… ದೇವಲೋಕ ಯಾಕೋ ಎಂದಿನ ನೆಮ್ಮದಿಯಿಂದ ಕೂಡಿದಂತೆ ಕಾಣುವುದಿಲ್ಲವಲ್ಲ?’ ಎಂದು ನಾರದರು ನೇರವಾಗಿ ವಿಷಯಕ್ಕೇ ಬಂದರು.
ವಸಿಷ್ಟರು ತಮ್ಮ ಸಹಜ ಪ್ರಸನ್ನತೆಯಿಂದಲೇ, ‘ಏನಿಲ್ಲ ನಾರದರೆ, ದೇವೇಂದ್ರನಿಗೆ ಒಂದು ವಿಷಯದ ಬಗೆಗಿನ ಕೊರಗು ಹತ್ತಿಕೊಂಡಿದೆ. ಭೂಲೋಕದಲ್ಲಿ ಮನುಷ್ಯರು ಸಂತೋಷದಿಂದ ಇರುವುದನ್ನು ಕಂಡು ಆತನಿಗೆ ತಲೆಕೆಟ್ಟಿದೆ. ಭೂಲೋಕದಲ್ಲೇ ಮನುಷ್ಯರು ಸಂತೋಷವನ್ನು ಕಂಡುಕೊಂಡರೆ ಅವರಿಗೆ ಸ್ವರ್ಗದ ಬಯಕೆಯೇ ಇಲ್ಲದಂತಾಗಿಬಿಡುತ್ತೆ. ಆಗ ಸ್ವರ್ಗಕ್ಕೆ ಇರುವ ಡಿಮ್ಯಾಂಡ್ ಕಡಿಮೆಯಾಗಿಬಿಡುತ್ತೆ ಎಂಬ ಚಿಂತೆ ಆತನದ್ದು. ಸಂತೋಷವನ್ನು ಮನುಷ್ಯರು ಇಷ್ಟು ಸುಲಭವಾಗಿ ಕಂದುಕೊಂಡರೆ ದೇವತೆಗಳನ್ನಿರಲಿ, ದೇವರುಗಳನ್ನೂ ಮನುಷ್ಯರು ಮರೆತುಬಿಡುತ್ತಾರೆ. ಸ್ವರ್ಗ ನರಕಗಳು, ಯಜ್ಞ-ಯಾಗ, ದೇವರು-ದೇವರ ಹುಂಡಿ, ವ್ರತ- ಸಂಪ್ರದಾಯಗಳ ಮೇಲೆ ಜನರಿಗೆ ನಂಬಿಕೆಯೇ ಹೊರಟುಹೋಗಿಬಿಡುತ್ತೆ. ಆಗ ಸ್ವರ್ಗಕ್ಕೆ ಬೆಲೆಯೆಲ್ಲಿ ಉಳಿದೀತು ಎಂಬ ಹೊಟ್ಟೆಯುರಿ ಇಂದ್ರನಿಗೆ ಹುಟ್ಟಿದೆ. ಅದರ ತಾಪದಿಂದಾಗಿ ದೇವತೆಗಳೆಲ್ಲಾ ಕಂಗಾಲಾಗಿದ್ದಾರೆ. ಅವರ ನೆಮ್ಮದಿ ಹಾರಿಹೋಗಿದೆ. ಸ್ವರ್ಗ ಈಗ ನರಕಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಅದಕ್ಕೆ ನಾನು ಭೂಲೋಕದ ರೆಸಾರ್ಟ್ ಒಂದರಲ್ಲಿ ಸ್ವಲ್ಪ ಕಾಲದವರೆಗೆ ವಿರಮಿಸಿಕೊಂಡು, ದೇವಲೋಕದ ಅಧಿವೇಶನ ಮುಗಿದ ನಂತರ ಇಲ್ಲಿಗೆ ಆಗಮಿಸುತ್ತೇನೆ. ನೀವೂ ಬರುವುದಿದ್ದರೆ ಹೇಳಿ ನಿಮಗೂ ರೆಸಾರ್ಟ್‍ನಲ್ಲಿ ಒಂದು ರೂಮ್ ಬುಕ್ ಮಾಡುವೆ.’ ಎಂದು ನಾರದರನ್ನು ಆಹ್ವಾನಿಸಿದರು.
ನಾರದರು ವಸಿಷ್ಟರಂತಹ ಹಿರಿಯರೇ ಸ್ವರ್ಗ ಬಿಟ್ಟುಹೋಗುತ್ತಿರುವಾಗ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದು ಭಾವಿಸಿ ತಾವು ಸಮಸ್ಯೆಯನ್ನು ಪರಿಹರಿಸಲು ಇಂದ್ರನಿಗೆ ಅಡ್ವೈಸ್ ಮಾಡುವುದಾಗಿ ತಿಳಿಸಿದ್ದರಿಂದ ವಸಿಷ್ಟರು ತಾವೊಬ್ಬರೇ ಭೂಲೋಕದೆಡೆಗೆ ಪಾದ ಬೆಳೆಸಿದರು.
ಸ್ವರ್ಗದ ಅಸ್ವಸ್ಥತೆಗೆ ಕಾರಣವನ್ನು ತಿಳಿದ ನಾರದರಿಗೆ ಅಲ್ಲಿ ಒಂದು ಕ್ಷಣ ನಿಲ್ಲಲಾಗಲಿಲ್ಲ. ಕೂಡಲೆ ಇಂದ್ರನ ಸಭೆಗೆ ಹೋಗಿ ಒಂದು ಅಧಿವೇಶನವನ್ನು ಕರೆಯುವಂತೆ ತಾಕೀತು ಮಾಡಿದರು. ಡ್ಯುಟಿಯಲ್ಲಿದ್ದ, ಡ್ಯುಟಿ ಮುಗಿಸಿಕೊಂಡು ಹೊರಟಿದ್ದ, ಚಿಂತಾಕ್ರಾಂತರಾಗಿ ಸ್ವರ್ಗದ ಬೀದಿಗಳಲ್ಲಿ ನಿಂತು ಹರಟುತ್ತಿದ್ದ ದೇವತೆಗಳೆಲ್ಲ ಅಧಿವೇಶನದಲ್ಲಿ ಸೇರಿದರು. ದೇವತೆಗಳ ಅಧಿಪತಿ ಇಂದ್ರ ಮಾತನ್ನಾರಂಭಿಸಿ ತನನ್ನು ಕಾಡುತ್ತಿದ್ದ ಸಮಸ್ಯೆಯನ್ನು ಸಭೆಗೆ ಗೊತ್ತುಪಡಿಸಿದ. ಆತ ಸಮಸ್ಯೆಯನ್ನು ಹೇಳುವ ಮೊದಲೇ ಅದು ಎಲ್ಲರಿಗೂ ತಿಳಿದಿರುವಂತೆ ಕಂಡಿತು. ದೇವೇಂದ್ರನಿಗೆ ಈ ಟ್ಯಾಬ್ಲಾಯ್ಡ್ ಗಳಿಗೆ ಯಾರದೋ ಮನಸ್ಸಲ್ಲಿರುವ ಹಗರಣಗಳನ್ನು ಜಗತ್ತಿಗೆ ಟಾಂ ಟಾಂ ಮಾಡುವ ವರವನ್ನು ಅದ್ಯಾವ ದೇವರು ಕೊಟ್ಟರೋ ಎಂದುಕೊಂಡು, ತನ್ನ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಸಭೆಯನ್ನು ಬಿನ್ನವಿಸಿಕೊಂಡ.
ತನ್ನ ಡ್ಯೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ಬಂದದ್ದಕ್ಕೆ ಸಿಡಿಮಿಡಿಗೊಂಡಿದ್ದ ಸೂರ್ಯದೇವ ಆಲೋಚಿಸಿ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕುವುದೇ ಸೂಕ್ತ ಎಂದು ಆಲೋಚಿಸಿ, ‘ಮಾನವರ ಸುಖಕ್ಕೂ ಹಾಗೂ ಸ್ವರ್ಗದ ನೆಮ್ಮದಿಯ ಹರಣಕ್ಕೂ ಕಾರಣವಾಗಿರುವ ಸಂತೋಷವನ್ನು ಮನುಷ್ಯರಿಗೆ ಸಿಕ್ಕದಂತೆ ಎಲ್ಲಿಯಾದರೂ ಅಡಗಿಸಿಟ್ಟುಬಿಡಬೇಕು.’ ಎಂಬ ಸಲಹೆಯನ್ನು ನೀಡಿದ.
ಸೂರ್ಯದೇವನ ಸಲಹೆಗೆ ಇಡೀ ಸಭೆಯೇ ತಲೆದೂಗಿತು. ಆದರೆ ಅಷ್ಟರಲ್ಲೇ ಕಿರಿಯನಾದ ಅಗ್ನಿದೇವ ಎದ್ದುನಿಂತು, ‘ಸೂರ್ಯದೇವ suggest ಮಾಡಿರುವ ಉಪಾಯ ಒಪ್ಪತಕ್ಕದ್ದೇ ಆದರೆ ಸಂತೋಷವನ್ನು ಎಲ್ಲಿ ಅಡಗಿಸಿಡುವುದು? ಈ ಮನುಷ್ಯರು ಭಾರಿ ಬುದ್ಧಿವಂತರು ಸಂತೋಷವನ್ನು ಎಲ್ಲಿಟ್ಟರೂ ಅವರು ಹುಡುಕಿಯೇ ಹುಡುಕುತ್ತಾರೆ.’ ಎಂದ.
ಕಿರಿಯನಾದ ಅಗ್ನಿದೇವನ ಮಾತುಗಳನ್ನು ಕೇಳಿ ಹಲವರಿಗೆ ಆಶ್ಚರ್ಯವಾಯಿತು. ಅವನ ಪ್ರಬುದ್ಧತೆಯನ್ನು ಕಂಡು ಹಿರಿಯನಾದ ಸೂರ್ಯ ದೇವನಿಗೂ ಮೆಚ್ಚುಗೆಯಾಯ್ತು. ಪರವಾಗಿಲ್ಲ ಹುಡುಗ ನನ್ನ ಗರಡಿಯಲ್ಲಿ ಚೆನ್ನಾಗಿ ಬೆಳೆದಿದ್ದಾನೆ ಎಂದುಕೊಂಡು, ‘ಅಗ್ನಿದೇವನ ಮಾತು ಚಿಂತನಯೋಗ್ಯ. ಚಿಕ್ಕವರು ಅಂತ ಈಗ ಇವರನ್ನು ಉಪೇಕ್ಷೆ ಮಾಡುವಂತಿಲ್ಲ ನೋಡಿ, ಹುಡುಗರು ಬಹಳ ಬೇಗ ಬುದ್ಧಿವಂತರಾಗಿಬಿಡ್ತಾರೆ… ಅಂದಹಾಗೆ ಈ ಮನುಷ್ಯರಿಂದ ಸಂತೋಷವನ್ನು ಎಲ್ಲಿ ಬಚ್ಚಿಡುವುದು?’ ಎಂದ ಸಭೆಯನ್ನುದ್ದೇಶಿಸಿ.
ಸೂರ್ಯದೇವನ ಮಾತನ್ನು ಕೇಳಿ ವಾಯುದೇವ ತಾನೇ ಮೊದಲಾಗಿ ಉಪಾಯ ಸೂಚಿಸಲು ಮುಂದಾದ, ‘ಸಂತೋಷವನ್ನು ಭೂಮಂಡಲದ ಅತಿ ಎತ್ತರದ ಪರ್ವತದ ಶಿಖರದಲ್ಲಿ ಹುದುಗಿಸಿಡೋಣ.ಆ ಎತ್ತರಕ್ಕೆ ಮನುಷ್ಯರು ಏರಲು ಸಾಧ್ಯವಿಲ್ಲ.’ ಎಂದ.
ಅಷ್ಟರಲ್ಲೇ, ‘ಮನುಷ್ಯರಿಗೆ ಇವತ್ತು ಆ ಪರ್ವತ ಏರಲು ಸಾಧ್ಯವಾಗದಿದ್ದರೂ ಒಂದಲ್ಲಾ ಒಂದು ದಿನ ಅವರದನ್ನು ಏರಿ ಸಂತೋಷವನ್ನು ಪಡೆದುಕೊಂಡೇ ಬಿಡುತ್ತಾರೆ.’ ಎಂಬ ಧ್ವನಿ ಸಭೆಯಿಂದ ಧಾವಿಸಿ ಬಂದಿತು.
ಮುಂಗಾರು ಮಳೆ ಸುರಿ-ಸುರಿಸಿ ಆಯಾಸಗೊಂಡಿದ್ದ ವರುಣ ದೇವ ತನ್ನ ದಣಿವಿನ ಮಧ್ಯದಲ್ಲೇ ಎದ್ದು ನಿಂತು, ‘ಮನುಷ್ಯನ ಕೈಯಿಂದ ಸಂತೋಷವನ್ನು ಬಚ್ಚಿಡಬೇಕೆಂಡರೆ ಸಾಗರದ ತಳವೇ ಸೂಕ್ತವಾದ ಸ್ಥಳ. ಮನುಷ್ಯ ಅಲ್ಲಿಗೆ ಹೋಗುವ ಕನಸನ್ನೂ ಕಾಣಲಾರ’ ಎಂದನು.
ಅಷ್ಟರಲ್ಲೇ ಸಭೆಯಲ್ಲಿನ ಮತ್ತೊಬ್ಬ ಹಿರಿಯ, ‘ಈ ಮನುಷ್ಯರನ್ನು ಅಷ್ಟು ಲಘುವಾಗಿ ಪರಿಗಣಿಸಲಾಗದು. ಅವರು ತಮ್ಮ ಬುದ್ಧಿಶಕ್ತಿಯಿಂದ ಒಂದಲ್ಲ ಒಂದು ದಿನ ಸಾಗರದ ಆಳವನ್ನು ಬಗೆದು ಸಂತೋಷವನ್ನು ಪಡೆದುಕೊಂಡುಬಿಡಬಲ್ಲರು.’ ಎಂದನು. ಸಭೆ ಅವರ ಮಾತಿಗೆ ತಲೆದೂಗಿತು.
ಎಲ್ಲರೂ ಆಳವಾಗಿ ಆಲೋಚಿಸುತ್ತಿರುವಾಗ ಚಂದ್ರದೇವ ಎದ್ದುನಿಂತು, ‘ಮನುಷ್ಯ ಗಿರಿಶಿಖರವನ್ನು ಏರಬಲ್ಲ, ಸಾಗರದ ಆಳವನ್ನು ಮುಟ್ಟಬಲ್ಲ ಆದರೆ ಆತ ನನ್ನ ಏರಿಯಾಗೆ ಕಾಲಿಡುವ ಸಾಧ್ಯತೆಯಿಲ್ಲವೇ ಇಲ್ಲ. ಹೆಣ್ಣಿನ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಕಾಲಕಳೆಯುತ್ತಾನೆಯೇ ಹೊರತು ಆತನೆಂದೂ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ಆದ್ದರಿಂದ ಸಂತೋಷವನ್ನು ನನ್ನ ಲೋಕದಲ್ಲಿ ಬಚ್ಚಿಟ್ಟುಬಿಟ್ಟರೆ ನಮ್ಮೆಲ್ಲರ ಚಿಂತೆ ಕಳೆದಂತೆಯೇ.’ ಎಂದ ಖಚಿತವಾದ ಧ್ವನಿಯಲ್ಲಿ.
ಸಭೆಯು ಮೌನವಾಯಿತು. ಬಹುಪಾಲು ದೇವತೆಗಳಿಗೆ ಚಂದ್ರನ ಮಾತು ಒಪ್ಪಿತವಾಯಿತು. ಆದರೆ ಅಷ್ಟರಲ್ಲಿ ನಾರದ ಮಹರ್ಷಿಗಳು ಮಾತನಾಡಿದರು ‘ಮನುಷ್ಯನ ವಿಚಾರಶಕ್ತಿ, ಆತ್ಮಸ್ಥೈರ್ಯಕ್ಕೆ ಚಂದ್ರಲೋಕವನ್ನು ಮೆಟ್ಟುವುದು ಅಸಾಧ್ಯವೇನಲ್ಲ. ಇಂತಹ ಟೆಂಪೊರರಿ ಉಪಾಯಗಳ ಬದಲಾಗಿ ಯಾವುದಾದರೂ ಪರ್ಮನೆಂಟ್ ಉಪಾಯ ಕಂಡುಕೊಳ್ಳಬೇಕು.ಅವರು ಅದೆಷ್ಟು ತಿಪ್ಪರಲಾಗ ಹಾಕಿದರೂ ಸಂತೋಷವನ್ನು ಕಂಡುಕೊಳ್ಳುವುದು ಎಲ್ಲಿ ಅನ್ನೋದು ಅವರಿಗೆ ತಿಳಿಯಬಾರದು. ಅಂತಹ ಜಾಗವನ್ನು ಹುಡುಕಬೇಕು…’
ನಾರದರ ಮಾತಿನಿಂದ ಸಭೆಯಲ್ಲಿನ ಮೌನ ಮತ್ತಷ್ಟು ಗಾಢವಾಯಿತು. ಎಲ್ಲರೂ ದೀರ್ಘವಾಗಿ ಚಿಂತಿಸುತ್ತಾ ಕುಳಿತಿದ್ದರು. ಸೂಜಿ ಬಿದ್ದರೂ ಬಾಂಬ್ ಬಿದ್ದಷ್ಟು ಸದ್ದಾಗಬಹುದಾದಷ್ಟು ಮೌನ. ಇದುವರೆಗೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಅಶ್ವಿನಿ ದೇವತೆಗಳು ಎದ್ದುನಿಂತರು. ದೇವತೆಗಳಿಗೆ ಈ ಪಿಳ್ಳೆಗಳೇನು ಹೇಳಿಯಾರು ಎಂಬ ಲೇವಡಿ ಮಾಡುವ ತವಕ. ಆದರೆ ತಾವೇ ಏನೂ ಹೊಳೆಯದ ಅಸಹಾಯಕತೆಯಲ್ಲಿರುವಾಗ ಅವರನ್ನು ಛೇಡಿಸುವುದಾದರೂ ಹೇಗೆ ಎಂದುಕೊಂಡು ಸುಮ್ಮನಾದರು. ಅವರು ಏನು ಹೇಳಬಹುದು ಎಂಬ ಕಾತರದಿಂದ ಸಭೆ ತೊಯ್ದು ತೊಟ್ಟಿಕ್ಕುತ್ತಿತ್ತು.
‘ಮನುಷ್ಯನ ಸಂಕಲ್ಪ ಶಕ್ತಿ ಹಾಗೂ ಆತನ ಸಾಹಸದ ಮುಂದೆ ನಾವುಡ್ಡೊವ ಸವಾಲುಗಳ್ಯಾವುವೂ ನಿಲ್ಲುವುದಿಲ್ಲ. ಬ್ರಹ್ಮಾಂಡದ ಯಾವ ಮೂಲೆಯಲ್ಲಿ ಅಡಗಿಸಿಟ್ಟರೂ ಆತ ಒಂದಲ್ಲ ಒಂದು ದಿನ ಸಂತೋಷವನ್ನು ಪಡೆದೇ ತೀರುತ್ತಾನೆ. ಹಾಗಾಗಿ ಸಂತೋಷವನ್ನು ಹೊರಗೆಲ್ಲೋ ಬಚ್ಚಿಡುವ ಉಪಾಯ ಫಲಿಸುವುದಿಲ್ಲ. ಮನುಷ್ಯನಿಂದ ಸಂತೋಷವನ್ನು ಕಿತ್ತುಕೊಂಡ ನಂತರ ಅದನ್ನು ಎಂತಹ ಜಾಗದಲ್ಲಿಡಬೇಕೆಂದರೆ ಅದನ್ನು ಹುಡುಕುತ್ತಾ ಆತ ಇಡೀ ಬ್ರಹ್ಮಾಂಡವನ್ನೇ ಸಂಶೋಧಿಸಿದರೂ ಅದು ಆತನಿಗೆ ದೊರಕಬಾರದು…’ ಎಂದ ಅಶ್ವಿನಿದೇವತೆಗಳಲ್ಲಿ ಒಬ್ಬನು.
ಆ ಜಾಗ ಯಾವುದಿರಬಹುದೆಂಬ ಕುತೂಹಲದಿಂದ ಎಲ್ಲರೂ ತದೇಕಚಿತ್ತದಿಂದ ಅವರ ಮುಂದಿನ ಮಾತಿಗಾಗಿ ಎದುರುನೋಡುತ್ತಿದ್ದರು. ಮಾತು ಮುಂದುವರಿಸಿದ ಅಶ್ವಿನಿ ದೇವತೆ, ‘ಆದ್ದರಿಂದ ಸಂತೋಷವನ್ನು ಹೊರಗೆಲ್ಲೋ ಅಡಗಿಸಿಡುವ ಬದಲು ಅದನ್ನು ಮನುಷ್ಯನ ಮನಸ್ಸಿನಲ್ಲೇ ಬಚ್ಚಿಟ್ಟುಬಿಡೋಣ. ಆತ ಅದರ ಹುಡುಕಾಟದಲ್ಲಿ ಬ್ರಹ್ಮಾಂಡದ ಶೋಧದಲ್ಲಿ ತೊಡಗುತ್ತಾನೆ ವಿನಃ ಅದು ತನ್ನೊಳಗೇ ಇದೆ ಎಂಬುದಾಗಿ ಯೋಚಿಸುವುದೂ ಇಲ್ಲ. ಆತ ಎಂದೆಂದೂ ಹೊರಗಿನ ಜಗತ್ತಿನಲ್ಲಿ ಸಂತೋಷವನ್ನು ಹುಡುಕಾಡುತ್ತಲೇ ಇರುತ್ತಾನೆ. ತನ್ನೊಳಗೆ ತಿರುಗಿಕೊಂಡು ಆತ ಅದನ್ನು ಕಂಡುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ.’ ಎಂದು ಮಾತು ಮುಗಿಸಿದ.
ಆತನ ಉಪಾಯವನ್ನು ಕೇಳಿ ಸಭೆ ಹರ್ಷೋದ್ಗಾರದಿಂದ ತುಂಬಿತು. ಸ್ವರ್ಗದ ಅಧಿಪತಿ ಇಂದ್ರನಿಗಂತೂ ತಡೆಯಲಾಗದಷ್ಟು ಸಂತಸ ಉಕ್ಕಿಬಂತು. ಕೂಡಲೆ ಆತ ಭೂಲೋಕದ ಸಮಸ್ತ ಸಂತೋಷವನ್ನು ಮನುಷ್ಯನ ಮನಸ್ಸಿನಲ್ಲಿ ಹುದುಗಿಸಿಟ್ಟ. ಭೂಲೋಕದ ಮೇಲೆ ಅತೃಪ್ತಿ, ದುಃಖ, ಅಸೂಯೆ, ಅಸೌಖ್ಯ, ಅನ್ಯಾಯಗಳು ಪ್ರಾರಂಭವಾದವು. ಮನುಷ್ಯರು ಸಂತೋಷವನ್ನರಸಿಕೊಂಡು ಅಲೆಯಲಾರಂಭಿಸಿದರು. ಹೊಸ ಹೊಸ ಪ್ರದೇಶಗಳಿಗೆ ಹೋಗಲಾರಂಭಿಸಿದರು. ಹೊಸ ವಸ್ತುಗಳನ್ನು ಕಂಡುಹಿಡಿಯಲಾರಂಭಿಸಿದರು. ಹೊಸ ಸಿದ್ಧಾಂತಗಳನ್ನು ರೂಪಿಸಲಾರಂಭಿಸಿದರು. ಕೊನೆಗೆ ಈ ಭೂಲೋಕದಲ್ಲಿ ಸಂತೋಷವಿಲ್ಲ, ಸತ್ತ ಮೇಲೆ ಸ್ವರ್ಗದಲ್ಲಿ ಅದನ್ನು ಪಡೆಯಬಹುದು ಎಂದು ಕೈಚೆಲ್ಲಿ ಕುಳಿತರು. ಯಾರೊಬ್ಬರೂ ತಮ್ಮೊಳಗೇ ಅಡಗಿರುವ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಸ್ವರ್ಗಕ್ಕೆ ಮತ್ತೆ ಡಿಮಾಂಡ್ ಹೆಚ್ಚಿತು. ಇಂದ್ರ ಸದ್ಯದ ಮಟ್ಟಿಗೆ ನಿರಾಳನಾದ!
Technorati : happiness, heaven, joy
ಇತ್ತೀಚಿನ ಪ್ರಜಾ ಉವಾಚ