ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು’ ಎಂಬ ಪದವನ್ನು ನಾನು ಬಳಸುವುದಿಲ್ಲ. ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ
ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ.ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು.
ನಾನು ವಸ್ತುನಿಷ್ಟವಾಗಿ ಬರೆಯುವುದಿಲ್ಲ ವ್ಯಕ್ತಿ ನಿಷ್ಠವಾಗಿ ಬರೆಯುತ್ತೇನೆ ಎಂದು ಹಲವರು ಆರೋಪ ಮಾಡುತ್ತಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನನ್ನ ಅಂಕಣಗಳನ್ನು ಮುಕ್ತ ಮನಸ್ಸಿನಿಂದ, ಪೂರ್ವಾಗ್ರಹ ತೊರೆದು ಓದಿ. ನಾನು ಯಾವ ಸಂದರ್ಭದಲ್ಲೂ ವ್ಯಕ್ತಿ ನಿಂದನೆಗೆ ಇಳಿದಿಲ್ಲ. ಅದಂತ ಪೂರ್ತಿಯವರ ಬಗ್ಗೆ ಬರೆಯುವಾಗಲೂ ನಾನವರನ್ನು ವೈಯಕ್ತಿಕವಾಗಿ ಟೀಕಿಸಿಲ್ಲ. `ಜ್ಞಾನಪೀಠಿ ನಂಬರ್ ೬’ ಎಂದು ಸಂಬೋಧಿಸಿದ್ದೇನೆ. ಕೆಂಪಾ ಬಗ್ಗೆ ಬರೆಯುವಾಗ ಅವರನ್ನು `ಜಿರಳೆ ಔಷಧಿ’ ಎಂದು ಕರೆಯುವುದರ ಮೂಲಕ ನಾನು ಇಡೀ ಚರ್ಚೆಯನ್ನು ವ್ಯಕ್ತಿಗಳಿಂದ `ಜ್ಞಾನಪೀಠ, ಜಿರಳೆ ಔಷಧಿ’ ಎನ್ನುವ ವಸ್ತುಗಳ ಬಗೆಗೆ ತಿರುಗಿಸಿ `ವಸ್ತು’ನಿಷ್ಠವಾದ ಚರ್ಚೆ ಮಾಡಿದ್ದೇನೆ.
ನಗೆ ನಗಾರಿ ಡಾಟ್ ಕಾಮ್ ಎರಡು ವರ್ಷಗಳಿಂದ ಅಂತರ್ಜಾಲದಲ್ಲಿ ನಗೆಯ ಹಬ್ಬವನ್ನು ಮಾಡುತ್ತಿದೆ. ನನ್ನ ಗೆಳೆಯರು ಕೇಳಿದ್ರು `ನೀನು ಕನ್ನಡದಲ್ಲಿ ಬರೆಯೋದೇನಿದ್ರೂ ಅಂಕಣದಲ್ಲಿ ಮಾತ್ರ. ಆರ್ಕುಟ್, ವೆಬ್ ಸೈಟಿನಲ್ಲಿ ನೀನು ಇಂಗ್ಲೀಷಿನಲ್ಲಷ್ಟೇ ಕೀಬೋರ್ಡು ಇರುವುದು ಎಂದು ನಂಬಿರುವೆ. ಆದರೆ ನಗಾರಿ ಬ್ಲಾಗಿಗೆ ಕನ್ನಡದಲ್ಲಿ ಯಾಕೆ ಬರೆಯಲು ಒಪ್ಪಿದೆ’ ಎಂದು. ಅದಕ್ಕೆ ನಾನವರಿಗೆ ಹೇಳಿದೆ, `ಇದು ಹಲ್ಲುಳ್ಳ ವೀರರು ಮೆಟ್ಟುವ, ಹಿಟ್ಟು ತಟ್ಟುವ ಬ್ಲಾಗು. ಹಲ್ಲಿದ್ದ ಗಟ್ಟಿಗರಷ್ಟೇ ಹಲ್ಲು ತೋರಿ ನಗಲಿಕ್ಕೆ ಸಾಧ್ಯ. ಅದಕ್ಕೇ ಇಲ್ಲಿ ಕನ್ನಡದಲ್ಲಿ ಬರೆಯೋದು’ ಅಂತ. ಈ ಹಲ್ ಸೆಟ್ಟಿನ ಬ್ಲಾಗಿಗೆ ಬರೆಯಲು ಹಿಂದೆ ಕಾಂಡೋಮ್ ಬಿಚ್ಚಿಟ್ಟ ಪೆನ್ನೂ ಬೇಕಿಲ್ಲ, ಫಿಲ್ಟರ್ ತೆಗೆದಿಟ್ಟ ಗಂಟಲೂ ಬೇಕಿಲ್ಲ. ಕುಟ್ಟಲು ಕೀಬೋರ್ಡ್ ಇದ್ದರೆ ಸಾಕು.
ನಗೆ ಸಾಮ್ರಾಟರು ಯಾರು, ಅವರ ಸಾಧನೆ ಏನು ಎಂದು ಸಾಮ್ರಾಜ್ಯದ ಪ್ರಜೆಗಳಾದ ನಿಮಗೆಲ್ಲಾ ಗೊತ್ತಿದೆ. ಅವರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ನಾವ್ ಫ್ರೆಂಡ್ಸು ಮಾಡೋಕೆ ಕೆಲ್ಸ ಇಲ್ಲದಾಗ ಹೇಳ್ತಿರ್ತೀವಿ, ಸೂರ್ಯಂಗೇ ಟಾರ್ಚಾ, ತಿಮ್ಮಪ್ಪಂಗೇ ಕಟಿಂಗಾ ಅಂತ. ಹಾಗೇ ಹೇಳ್ತೀವಿ, ತಿಪ್ಪೆಗೇ ಕಸನಾ ಅಂತ. ನನ್ ಪಾಲಿಗೆ ಸಾಮ್ರಾಟರು ತಿಪ್ಪೆ, ಅವ್ರಿಗೆ ಕಸ ಎಸೆಯೋ ಕೆಲಸ ನಾನು ಮಾಡಲ್ಲ. ಆದ್ರೆ ಈ ತಿಪ್ಪೆ ಕಡೆ ತಿರುಗಿ ಕಲ್ಲು ಎಸೆದು ಮೈಮೇಲೆಲ್ಲಾ ಕಸ ಎಳೆದುಕೊಂಡ ವ್ಯಕ್ತಿಗಳ ಬಗ್ಗೆ ಬರೀತೀನಿ. ಯಾಕಂದ್ರೆ ಅವ್ರಿಗೂ ಇದಕ್ಕೂ ಸಂಬಂಧ ಇದೆ.
ನಿಮಗೆಲ್ಲ ನೆನಪಿರಬಹುದು ಬೀಚಿಯವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಬಗ್ಗೆ ನಾನು ಒಂದು ಲೇಖನ ಬರೆದಿದ್ದೆ. ಅದರಲ್ಲಿ ನಾನು ಬೀಚಿಯವರು ಅಷ್ಟು ದೊಡ್ಡ ಬುದ್ಧಿಜೀವಿಯಾಗಿದ್ದರೂ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು. ಈಗಿನ ಬುದ್ಧಿಜೀವಿಗಳಿಗೆ ಉಳಿದೆಲ್ಲಾ ಪ್ರಜ್ಞೆಗಳಂತೆ ಹಾಸ್ಯ ಪ್ರಜ್ಞೆಯೂ ಇಲ್ಲ ಎಂದಿದ್ದೆ. ಆಗ ನಮ್ಮಾಫಿಸೀಗೆ ಒಂದು ಫ್ಯಾಕ್ಸ್ ಬಂತು, ಒಬ್ಬ ದೊಡ್ಡ ಲೇಖಕರು `ಇವ್ನು ನಮ್ಮನ್ನು ಆಡಿಕೊಂಡು ನಗ್ತಿದಾನೆ. ಸೋಮಸೂಜಿ, ಕೆಂಪಾ, ಓಎಂದ ರಾವ್ ಮುಂತಾದವರಿಗೆ ನಗಲಿಕ್ಕೆ ಹಲ್ಲೇ ಇಲ್ಲ ಅಂತ ಆರೋಪಿಸಿದ್ದಾನೆ.’ ಅಂತ ಹೇಳಿದ್ರು. ನಮ್ಮ ಸಂಪಾದಕರು ಆ ಲೇಖಕರ ಫೋನ್ ನಂಬರ್ ಕೊಟ್ಟು ಮಾತಾಡು, ಅವರೇನಂದ್ರು ಅಂತ ರೆಕಾರ್ಡ್ ಮಾಡಿಕೋ ನಾಳೆ ನ್ಯೂಸಿಲ್ಲದಿದ್ರೆ `ದಂತ-ಕ್ಯಾತೆ’ ಅಂತ ವರದಿ ಪ್ರಕಟಿಸಿ ಎಸ್.ಎಂ.ಎಸ್ ಪೋಲ್ ಮಾಡಬಹುದು ಅಂದ್ರು. ನಾನು ಅವ್ರಿಗೆ ನೇರವಾಗಿ ಕೇಳ್ದೆ, `I stand by my views. If you people have teeth and gums, not to mention guts, why don`t you smile to camera?’ ಅತ್ತಕಡೆಯಿಂದ ಬ್ಬೆಬ್ಬೆಬ್ಬೆ ಅಂತ ಉತ್ತರ ಬಂತು. `I don`t need to answer to you on phone, because my dentures are missing from yesterday. I`ll lodge my protest infront of gandhi statue tomorrow.’ ಅಂತ ಮತ್ತೆ ಫ್ಯಾಕ್ಸ್ ಕಳಿಸಿದ್ರು. ಹಲ್ ಸೆಟ್ ಇಲ್ಲದಿದ್ರೂ ಗಾಂಧಿ ಅದೆಷ್ಟು ಚೆನ್ನಾಗಿ ನಗ್ತಾ ಇದ್ರು, dentures ಇಟ್ಟುಕೊಂಡೂ ನಗಲಿಕ್ಕೆ ಬಾರದ ಈ ನಗೆ ವಿರೋಧಿ, ಗಾಂಭೀರ್ಯ ಪಕ್ಷಪಾತಿ ವ್ಯಕ್ತಿಯ ಬಗ್ಗೆ ಹೇಳ್ತೀನಿ.
ಅನೈಸರ್ಗಿಕ ದಂತಪಂಕ್ತಿಯಿರುವ ಈ ಅದಂತ ಪೂರ್ತಿ ಎಂಥಾ ಸಾಹಿತಿ ಅಂತ ಎಲ್ಲರಿಗೂ ಗೊತ್ತು. ಅವರೆಂಥಾ ದೊಡ್ಡ ಕಾಪಿ ಕ್ಯಾಟು, ಹಲ್ಕಿರಿಯುವುದರ ವಿರೋಧಿ ಎಂದು ನಾನು ಹೇಳಬೇಕಿಲ್ಲ. ಇವರು ಬರ್ಮಿಂಗ್ ಹ್ಯಾಮಿನಲ್ಲಿ ಡಾಕ್ಟರೇಟ್ ಪಡೆಯೋಕೆ, ನವ್ಯ ಕಾವ್ಯ ಚಳುವಳಿಯ ಹರಿಕಾರರಾಗುವುದಕ್ಕೆ, ಲಂಕೇಶ್, ಪೂರ್ಣ ಚಂದ್ರ ತೇಜಸ್ವಿಯವರ ಸರಿ ಸಮಾನರಾಗುವುದಕ್ಕೆ, ಒಂದಿಡೀ ಹೊಸ ತಲೆಮಾರಿನ ಲೇಖಕರಿಗೆ ಮೇಷ್ಟ್ರು ಆಗಿರುವುದಕ್ಕೆ, ಎಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜದ ವಿದ್ಯಮಾನಗಳ ಬಗ್ಗೆ ದಿಟ್ಟ ನಿಲುವು ತಳೆಯುವುದಕ್ಕೆ ಹಗಲು ರಾತ್ರಿಯೆನ್ನದೆ ಅದೆಷ್ಟು ಕಾಪಿ ಹೊಡೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನ ತಿಳಿಯೋದಕ್ಕೆ ಅವರ ಕತೆಗಳನ್ನ, ಕವಿತೆಗಳನ್ನ, ವಿಮರ್ಶೆಯನ್ನ ಓದಬೇಕಿಲ್ಲ.
ಇಂತಹ ಅದಂತ ಪೂರ್ತಿಗಳು ಇಷ್ಟೆಲ್ಲಾ ಬರೆದ್ರೂ ಒಂದೇ ಒಂದು ಹಾಸ್ಯ ಲೇಖನ ಬರೆದಿಲ್ಲ. ಯಾವುದೋ ದೇಶದ ಕವಿಯನ್ನು ಕನ್ನಡಕ್ಕೆ ಪರಿಚಯ ಮಾಡಿಸಿದರೂ ಕನ್ನಡದ ಹಾಸ್ಯ ಸಾಹಿತ್ಯವನ್ನು ವಿಮರ್ಶಿಸಿಲ್ಲ. ಜನ ಸಾಮಾನ್ಯರ ದಿನ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಾಸ್ಯದ ಕುರಿತು ಒಂದೇ ಒಂದು ಒಳ್ಳೆ ಮಾತಾಡಿದ್ದಾರಾ? ಇದರಿಂದ ಏನು ತಿಳಿಯುತ್ತೆ ಅಂದ್ರೆ, ಅದಂತ ಮೂರ್ತಿಗಳು ನಗೆ ವಿರೋಧಿ ಹಾಗೂ ಜೀವವಿರೋಧಿ.
ಇವರೊಬ್ಬರೇ ಅಲ್ಲ, ಯಾವ ಬುದ್ಧಿಜೀವಿಯನ್ನೇ ತೆಗೆದುಕೊಳ್ಳಿ. ನಗುವುದು ಎಂದರೆ ಅವರಿಗೆ ತಿಳಿದೇ ಇಲ್ಲ. ಇವರು ಮಾತಾಡೋಕೆ ಶುರು ಮಾಡಿದರೆ ಜನರು ತೂಕಡಿಸಲು ತೊಡಗುತ್ತಾರೆ. ಓಶೋ ಒಂದು ಮಾತು ಹೇಳ್ತಾರೆ, `ನಗುವುದಕ್ಕೆ, ನಗಿಸುವುದಕ್ಕೆ, ನಗಲ್ಪಡುವುದಕ್ಕೆ ಅತಿ ಹೆಚ್ಚಿನ ಬೌದ್ಧಿಕ ಪ್ರಾಮಾಣಿಕತೆ ಬೇಕು. ಗುಂಡಿಗೆ ಬೇಕು.’ ಇವರು ಕೊಚ್ಚಿಕೊಳ್ಳುವ ಮಾರ್ಕ್ಸಿಸ್ಟ್ ಸಮಾಜದಲ್ಲಿ ನಗುವುದಕ್ಕೂ ಸರಕಾರದ ಅಪ್ಪಣೆ ಇರಬೇಕು ಎಂದು ಗೊತ್ತಿಲ್ಲವೇ?
ಇದೇ ಸಂದರ್ಭದಲ್ಲಿ ಇನ್ನೊಬ್ಬ ಢೋಂಗಿ ಬುದ್ಧಿಜೀವಿ ಪತ್ರಕರ್ತರ ಬಗ್ಗೆ ಬರೀಬೇಕು. ಇವರ ಬಗ್ಗೆ ನಾನು ನಮ್ಮ ಪತ್ರಿಕೆಯ ವಾಚಕರ ವಾಣಿಯಲ್ಲಿ , ನನ್ನ ವೆಬ್ ಸೈಟಿನಲ್ಲಿ ಬೇರೆಯವರ ಹೆಸರಿನಲ್ಲಿ ಆಗಲೇ ತುಂಬಾ ಬರೆದಿದ್ದೀನಿ. ಆದರೂ ಇಲ್ಲಿ ಈತನ ಲಂಪಟತೆಯನ್ನು ಬಯಲು ಮಾಡಲೇಬೇಕು.ಆತ ಬೇರಾರೂ ಅಲ್ಲ ಸಾಯ್ ಬೆಂಗಳೂರು ಅನ್ನೋ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾದ ಕಪ್ಪು ಪತ್ರಿಕೆಯ ಸ್ವಯಂ ಘೋಷಿತ ಸಾರಥಿ. ಶಿವರಾಮ ಕಾರಂತರು ಇಂತಹ ಪತ್ರಿಕೋದ್ಯಮವನ್ನು ಚರಂಡಿ ಪತ್ರಿಕೋದ್ಯಮ ಎಂದು ಜರೆದಿದ್ದರು. ಇಂತಹ ಚರಂಡಿಯಲ್ಲಿ ತಾನು ಪ್ರಾಮಾಣಿಕ, ಹೃದಯವಂತ, ನಿಷ್ಠುರ ಪತ್ರಕರ್ತ, ಕಷ್ಟದಲ್ಲಿರುವವರಿಗೆಲ್ಲಾ ನೆರವಾಗುವ ಆಪ್ತಬಂಧು ಎಂದು ಫೋಸ್ ಕೊಡುತ್ತಾ ಅಕ್ಷರಗಳ ಊದುಬತ್ತಿ ಹಚ್ಚಿಟ್ಟುಕೊಂಡು ಕೂತಿರುವ ಗವಿ ಬಿಳಿಗೆರೆಗೆ ಹಾಸ್ಯ ಅಂದರೆ ಏನು ಗೊತ್ತು? `ಕೇಳಿ’ ಅನ್ನೋ ದ್ವಂದ್ವಾರ್ಥವಿರುವ ಅಂಕಣದಲ್ಲಿ ತಾನೇ ಬರೆದ ಪ್ರಶ್ನೆಗೆ ಪೋಲಿಯಾಗಿ, ತನ್ನ ಮಕ್ಕಳೂ ಸಹ ಓದಲಾಗದಷ್ಟು ಅಸಹಸ್ಯವಾಗಿ ಉತ್ತರ ಕೊಟ್ಟು ಅದನ್ನೇ ಹಾಸ್ಯ ಪ್ರಜ್ಞೆ ಎಂದು ಕರೆಯುವುದು ಬಿಟ್ಟರೆ ಈತ ಒಂದಾದರೂ ಹಾಸ್ಯ ಲೇಖನ ಬರೆದಿದ್ದಾರಾ? ಆ ಅಂಕಣದಲ್ಲಿ ಶ್ರೀಮತಿ ಶಿಲ್ಪಾ ಶೆಟ್ಟಿ ಕುಂದ್ರಾ, ಶ್ರೀಮತಿ ಐಶ್ವರ್ಯ ಬಚ್ಚನ್, ಸಾನಿಯಾ ಮಿರ್ಜಾರನ್ನು ತನ್ನ ಹಿಂದೆ ಬಿದ್ದಿರುವ ಪ್ರೇಯಸಿಯರು ಅನ್ನುವ ಹಾಗೆ ಕೀಳಾಗಿ ಬರೆಯುವ ಈತ ಹೆಣ್ಣು ಮಕ್ಕಳಿಗೆ ತಂದೆ, ಅಣ್ಣ, ಬಂಧು ಆಗಲು ಸಾಧ್ಯವೇ? ಈತನ ಬಂಧುತ್ವ, ಬಾಂಧವ್ಯ ಎಂಥದ್ದು ಎಂಬುದು ಪತ್ರಿಕೆಗಳಲ್ಲಿ ಬಯಲಾಗುತ್ತಿದೆ. ಮೊಮ್ಮಕ್ಕಳು ಹುಟ್ಟಿದ ಮೇಲೂ ಐ ಲವ್ ರವಿಕೆ ಅನ್ನೋ ಥರ ಪತ್ರ ಪ್ರೇಮ ಬರೆಯೋದು, ಪೋಲಿ ಪುಸ್ತಕಗಳನ್ನು ಅನುವಾದಿಸುವುದು ನೋಡಿದರೇನೇ ತಿಳಿಯುತ್ತೆ ಆತ ಎಂಥಾ ಢೋಂಗಿ ವ್ಯಕ್ತಿ ಎಂದು.
ಭಾರತವನ್ನು ಬೈದು ದೊಡ್ಡವರಾದ ಬರಹಗಾರರು, ಭಾರತದ ಬಡತನವನ್ನು, ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಚಿತ್ರೋದ್ಯಮದವರು, ಮುಸ್ಲೀಮರ ಬಗ್ಗೆ ಒಲವಿನಿಂದ ಮಾತನಾಡುವ ಸಿನೆಮಾ ನಟರು ಯಾರನ್ನೇ ಗಮನಿಸಿ ಇವರೆಲ್ಲರೂ ಹಾಸ್ಯವನ್ನು ಕೀಳಾಗಿ ಕಾಣುವವರು. ನಗೆ ವಿರೋಧಿಗಳು, ನಗುವುದು ಸಹಜ ಧರ್ಮ ಎಂದು ಡಿವಿಜಿ ಹೇಳಿದ್ದಾರೆ. ಹೀಗಾಗಿ ಇವರೆಲ್ಲ ಸಹಜವಾದ ನಿಸರ್ಗ ವಿರೋಧಿಗಳು, ಧರ್ಮ ವಿರೋಧಿಗಳು. ಸದಾ ನಗುವ ಸದಾನಂದ ಗೌಡ, ಶೋಭಾ ಕರಂದ್ಲಾಜೆಯವರನ್ನು ನೋಡಿಯಾದರೂ ನಗುವುದನ್ನು ಬುದ್ಧಿಜೀವಿಗಳು ಕಲೀಬೇಕು. ಇಲ್ಲವಾದರೆ ಮುಂದೊಂದು ದಿನ ಜನರು ಹೇಳುತ್ತಾರೆ, ಅದಂತಪೂರ್ತಿ sucks!
ವಸ್ತುನಿಷ್ಟ ಅಂಕಣಕಾರನಾಗಿ ನಗೆ ನಗಾರಿಯ ವಾರ್ಷಿಕ ವಿಶೇಷಾಂಕಕ್ಕೆ ಈ ಬರಹ ಬರೆದಿದ್ದೇನೆ… ಒಂದೇ ಒಂದು ಸಾಲಿನಲ್ಲಾದರೂ hate mongering, ad hominem, digressing ವಾದ ಕಂಡು ಬಂದಿದೆಯೇ? ಖಂಡಿತಾ ಇಲ್ಲ. ಒಂದು ವೇಳೆ ಇದೆ ಎಂದು ಯಾರಾದರೂ ಹೇಳಿದರೆ ಅವರು ನಗೆ ವಿರೋಧಿಗಳು, ಜೀವವಿರೋಧಿಗಳು, ಧರ್ಮ ವಿರೋಧಿಗಳು… losers!
ಟ್ಯಾಗ್ ಗಳು:ಅದಂತ ಪೂರ್ತಿ, ಗವಿ ಬಿಳಿಗೆರೆ, ಪ್ರತಂಪು ಸಿಂಹ, ಪ್ರತಾಪ್ ಸಿಂಹ, ಬೆತ್ತಲೆ ಜಗತ್ತು, pratap simha
ಇತ್ತೀಚಿನ ಪ್ರಜಾ ಉವಾಚ