(ನಗಾರಿ ಕ್ರೀಡಾ ಬ್ಯೂರೋ)
ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…
ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು ಹುಟ್ಟಿರುವುದು ಮನುಷ್ಯರಾಗಿ ಎಂಬುದರ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಬದುಕುತ್ತಿರುವಾಗ ಒಬ್ಬೊಬ್ಬನಿಗೆ ಕೋಟಿ ಕೋಟಿ ಹಣವನ್ನು ಸುರಿಯುವುದು ಕಂಡು ನಮ್ಮ ವ್ಯವಸ್ಥೆ ಇದ್ದರೆ ಹೀಗಿರ
ಬೇಕು, ಪ್ರತಿಭೆ ಇದ್ದವನ ಕಾಲ ಕೆಳಗೆ ಜಗತ್ತನ್ನೇ ಹೆಡೆ ಮುರಿ ಕಟ್ಟಿ ತಂದು ಮಲಗಿಸಬೇಕು. ಪ್ರತಿಭೆ ಇಲ್ಲದ ಬ್ರೂಟುಗಳನ್ನು ಬದುಕುವುದಕ್ಕೂ ಬಿಡಬಾರದು. ಹೆಂಡವನ್ನೋ, ಕಳ್ಳಮಾಲನ್ನೋ, ಪಾನೀಯದ ಹೆಸರಿನಲ್ಲಿ ಕಾರ್ಕೋಟಕವನ್ನೋ ಇವ್ಯಾವುದೂ ಇಲ್ಲವಾದರೆ ಕನಿಷ್ಠ ಪಕ್ಷ ಮಾನ – ಮರ್ಯಾದೆಯನ್ನಾದರೂ ಮಾರಿಕೊಂಡು ಕಾಸು ಕೂಡಿಡಲಾಗದ ತಂದೆಗೆ ಮಕ್ಕಳನ್ನು ಪಡೆಯುವ ಹಕ್ಕು ಹೇಗೆ ಬರುತ್ತದೆ. ಓದಲು ಕಾಸಿಲ್ಲದೆ ಶಾಲೆಗೆ ಸೇರಲು ಆಗಲಿಲ್ಲ, ಸರ್ಕಾರಿ ಶಾಲೆಗೆ ಸೇರಿದರೂ ಶಿಕ್ಷಕರನ್ನೇ ಏನು, ಶಾಲೆಯ ಕಟ್ಟಡವನ್ನೇ ನೋಡಲಿಲ್ಲ, ಇವೆಲ್ಲಾ ಇದ್ದರೂ ಒಳ್ಳೆಯ ಕೋಚಿಂಗ್ ಪಡೆದು ಮಾರ್ಕು ಗಿಟ್ಟಿಸಿ ತೋರಿಸಲು ಸಾಧ್ಯವಾಗಲಿಲ್ಲ ಎಂಬ ಮಾತ್ರಕ್ಕೆ ಬಡವರ, ದರಿದ್ರರ ಮಕ್ಕಳು ಪ್ರತಿಭಾವಂತರಾಗುತ್ತಾರೆಯೇ? ಇಲ್ಲ. ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಬಿಡಬೇಕು ಎಂದರು ನಗೆಸಾಮ್ರಾಟ್. ‘ಬುದ್ಧಿ, ನಿಮ್ಗೆ ಬುದ್ಧಿ ಇಲ್ಲ. ನಮ್ಮ ಸರ್ಕಾರದವ್ರು ಇದ್ನೆಲ್ಲಾ ಯಾವಾಗೋ ಯೋಚ್ಸಿದಾರೆ ಗೊತ್ತುಂಟಾ? ಅವ್ರೂ ನಿಮ್ಮಂಗೇ ತೀರ್ಮಾನಕ್ಕೆ ಬಂದ್ರು. ಆದ್ರೆ ಅದಕ್ಕೆಲ್ಲಾ ಒಂದು ಗುಂಡನ್ನ ಯೇಸ್ಟ್ ಮಾಡುವಷ್ಟು ಮಡ್ಡಿ ಅಲ್ಲ ನಮ್ಮ ಸರ್ಕಾರ. ಅದ್ಯಾರೋ ಇಟ್ಲರ್ರು ಯಹೂದಿಗಳ್ನೆಲ್ಲಾ ಗುಂಡಿಯಾಗೆ ಆಕಿ ಗ್ಯಾಸು ಬಿಟ್ಟು ಸಾಯ್ಸಿ ಲಕ್ಷಾಂತರ ರೂಪಾಯಿ ಲುಕ್ಸಾನು ಮಾಡಿಕೊಳ್ಳಾಕೆ ನಮ್ಮ ಸರ್ಕಾರ ಏನು ಮಣ್ಣು ತಿಂತತಾ? ಆ ದರಿದ್ರದವಕ್ಕೆ ಒಟ್ಟೆಗೆ ಹಿಟ್ಟೇ ಇಲ್ಲದ ಹಂಗೆ ಮಾಡಿದ್ರೆ, ಚಳಿಯಾಗೆ ನಡುಗೋವ್ರಿಗೆ ಕಂಬಳಿ ಸಿಗದಂಗೆ ಮಾಡಿದ್ರೆ ಅವ್ರಾಗೆ ಜಂತು ಸತ್ತಂತೆ ಸಾಯ್ತಾರಲುವ್ರಾ? ಅಷ್ಟಕ್ಕೂ ಯಾವ್ನಾದ್ರೂ ಗಟ್ಟಿ ಹೈದ ಬದುಕುಳುದ್ರೆ ಇದ್ದೇ ಐತಲ್ಲಾ, ಕಳ್ಳ ಭಟ್ಟಿ…’ ಎಂದ ಚೇಲ.
‘ಹನ್ನೊಂದು ಮಂದಿ ಮೂರ್ಖರು ಆಡುವ ಆಟವನ್ನು ಹನ್ನೊಂದು ಸಾವಿರ ಮಂಡಿ ಮೂರ್ಖರು ನೋಡುತ್ತಾ ಕೂರುವುದೇ ಕ್ರಿಕೆಟ್’ ಅಂತ ಅದ್ಯಾವುದೋ ಭೂಪ ಹೇಳಿದ್ದನ್ನೇ ಗಾಸ್ಪೆಲ್ ಟ್ರುಥ್ ಅಂತ ನಂಬ್ಕೋಬೇಕಾ (ಈಗ ಬಿಡಿ, ಗಾಸ್ಪೆಲ್ಲು ಹೇಳಿರುವುದರಲ್ಲೇ ಟ್ರುತ್ಥು ಇಲ್ಲ ಅಂತ ಸಂಶೋಧನೆ ಮಾಡ್ತಿದ್ದಾರೆ!)? ಅಂತ ತಲೆ
ಕೆರೆದುಕೊಳ್ತಾ ಸಾಮ್ರಾಟರು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅಲ್ಲಿ ನೆರೆದಿದ್ದ ಯುವ, ಹದಿ-ವೃದ್ಧಾಪ್ಯದ, ಮಧ್ಯವಯಸ್ಕರನ್ನು ಸಂದರ್ಶಿಸಲು ಸಿದ್ಧರಾದರು.
ದೂರದ ದಿಗಂತದ ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟಿಕೊಂಡು ನಿಂತ ಸಾಮ್ರಾಟರನ್ನು ಕೂಗಿ ಕರೆದ ಚೇಲ ಕುಚೇಲ ಅತ್ತ ಕಡೆ ನೋಡಿ ಎಂದ. ಅಲ್ಲಿ ಕ್ರೀಡಾಂಗಣದ ಗೇಟಿನ ಹೊರಗೆ ನೂರಾರು ಮಂದಿ ಕೈಲಿ ಕ್ರಿಕೆಟ್ ಬ್ಯಾಟು ಬದಲಿಗೆ ಹಾಕಿ ಕೋಲು, ತಿರುಪತಿ ತಿಮ್ಮಪ್ಪನ ಹಳೆಯ ಮೇಲಿರುವ ಸಿಂಬಲ್ಲಿನ ಆಕಾರದ ಝಳಪಿಸುವ ಆಯುಧಗಳನ್ನು ಹಿಡಿದುಕೊಂಡು ಗಲಾಟೆ ಹಾಕುತ್ತಿದ್ದರು. ಕೂಡಲೆ ಸಾಮ್ರಾಟರು ಚೇಲನೊಂದಿಗೆ ಅಲ್ಲಿಗೆ ಧಾವಿಸಿದರು. ಆ ಗುಂಪಿನ ಮುಂಚೂಣಿಯಲ್ಲಿ ಮಿಂಚುತ್ತಿದ್ದ ಹುರಿಯಾಳನ್ನು ಪಕ್ಕಕ್ಕೆ ಕರೆದು, ‘ಏನಯ್ಯಾ ಸಮಾಚಾರ’ ಎಂದರು. ಆ ಹುಡುಗ ವೀರಾ‘ವೇಷ’ದಿಂದ ‘ಅಲ್ರೀ, ನಮ್ಮ ದೇಶ ಎಂಥದ್ದು? ನಮ್ಮ ಸನಾತನ ಸಂಸ್ಕೃತಿ ಎಂಥದ್ದು? ನಾವು ಇಡೀ ಜಗತ್ತಿನ ಆಧ್ಯಾತ್ಮಿಕತೆಯನ್ನು ಕಲಿಸಿಕೊಟ್ಟವರು. ಇಡೀ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳಿಕೊಟ್ಟವರು ಭಾರತೀಯರು… ನಾವು… ನಾವು…’ ಎನ್ನುವಷ್ಟರಲ್ಲಿ ಗಂಟಲು ರೇಗಿತು. ‘ಒಂದು ಸಿಗರೇಟಿದೆಯಾ ಸರ್ರು…’ ಅಂದು, ಸಾಮ್ರಾಟರಿಂದ ಪಡೆದು ಅದರ ತುದಿಗೆ ಬೆಂಕಿಕೊಟ್ಟು ಮಾತು ಮುಂದುವರೆಸಿದ, ‘ಹೆಣ್ಣಿಗೆ ದೇವಿಯ ಸ್ಥಾನವನ್ನು ಕೊಟ್ಟವರು ನಮ್ಮ ಪೂರ್ವಜರು. ಅದಕ್ಕಾಗಿಯೇ ನಾವು ಇಂದು ಆಕೆಯನ್ನು ಅಡುಗೆಮನೆ, ದೇವರ ಮನೆಗೆ ಸೀಮಿತಗೊಳಿಸಿ ಹಿರಿಯರ ಆದರ್ಶ ಪಾಲಿಸುತ್ತಿರುವುದು. ಹೆಣ್ಣಿಗೆ ಮಾತೆಯಂತ ಕರೆದವರು ನಮ್ಮ ಹಿಂದಿನವರು. ಅದಕ್ಕಾಗಿಯೇ ಆಕೆಗೆ ‘ಮಾತೆ’ಯಾಗುವ ಕೆಲಸ ಬಿಟ್ಟು ಬೇರಾವುದಕ್ಕೂ ಅವಕಾಶ ಸಿಗದ ಹಾಗೆ ನೋಡಿಕೊಂಡಿದ್ದೇವೆ. ನಾವು ಹೆಣ್ಣಿಗೆ ಇಂಥಾ ಮರ್ಯಾದೆಯನ್ನು ಮಾಡುತ್ತಿರುವಾಗ ಇವರು ಕ್ರಿಕೆಟ್ ಆಡುವ ಇಪ್ಪತ್ತೆರಡು ಮಂದಿ ಗಂಡಸರು ಹಾಗೂ ಅದನ್ನು ನೋಡುವುದಕ್ಕೆ ಬರುವ ಗಂಡಸರ ಮುಂದೆ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದಕ್ಕಾಗಿ ‘ಚೀರ್ ಲೀಡರ್ಸ್’ನ್ನ ಕರೆಸಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ. ಅದಕ್ಕೇ ನಮ್ಮ ‘ಶಾಂತಿಯುತ’ ಪ್ರತಿಭಟನೆ’ ಎನ್ನುತ್ತಾ ಪಕ್ಕದಲ್ಲಿ ಬಿಟ್ಟಿದ್ದ ದೊಣ್ಣೆಯನ್ನೆತ್ತಿಕೊಂಡು ಹೊರಟ.
ಈ ಗುಂಪಿನ ಪಕ್ಕದಲ್ಲೇ ಮತ್ತೊಂದು ಗುಂಪು ನೆರೆಯಲು ಶುರುವಾಗಿತ್ತು. ಅವರದೂ ಅದೇ ಫ್ಯಾನ್ಸಿ ಡ್ರೆಸ್ಸು. ಇವರ ಗೋಳೇನು ಕೇಳಿಕೊಂಬೋಗು ಎಂದು ಸಾಮ್ರಾಟರು ಕುಚೇಲನನ್ನು ಅಟ್ಟಿದರು. ‘ಅಯ್ಯೋ ಸಾರ್. ಇಲ್ಲಿ ಇವ್ರು ಸಂಸ್ಕಾರ, ಸಂಸ್ಕೃತಿ ಅಂತ ಗಲಾಟೆ ಮಾಡಾಕೆ ಜನರನ್ನ ಬಾಡಿಗೆ ತಂದದ್ದು ಗೊತ್ತಾಗಿ ಅದ್ಯಾರೋ ರೀಜನಲ್ ಓರಾಟಗಾರರು ಓಡಿ ಬಂದ್ರಂತೆ. ಈ ಸ್ಟೇಡಿಯಮ್ಮಿನವ್ರು ಇದೇಸದಿಂದ ಹುಡುಗೀರ್ನ ಕುಣಿಯೋಕೆ ಕರೆಸಿರೋದ್ನ ಕಂಡು ಅವರ ಮುಖಂಡ… ಪ್ರಾದೇಶಿಕ ಪ್ರತಿಭೆಗಳಿಗೆ ಅವಮಾನವಾಗಿದೆ. ನಿಮಗೆ ನಮ್ಮ ಸ್ಟೇಡಿಯಮ್ಮು ಬೇಕು, ನಮ್ಮ ಜನರು ಟಿಕೆಟು ಖರೀದಿಸ್ಬೇಕು, ನಮ್ಮ ಜನರ ದುಡ್ಡು ಬೇಕು ಆದರೆ ನಮ್ಮವರು ಬೇಡ. ಎಲ್ಲದರಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಬೇಕು. ಅಂತ ಓರಾಟ ಶುರು ಅಚ್ಚಿಕೊಂಡವ್ರಂತೆ’ ವರದಿ ಒಪ್ಪಿಸಿದ ಕುಚೇಲ.
ನಮ್ಮ ಯುವಕರಿಗೆ ಪ್ರತಿಭಟನೆಗೆ ಎಂತೆಂಥಾ ವಿಷಯಗಳು ಸಿಕ್ಕುತ್ತವೆ. ಪೂರ್ ಫೆಲೋ ಗಾಂಧಿ ಕೇವಲ ಚಿಟಿಗೆ ಉಪ್ಪಿಗಾಗಿ ಸತ್ಯಾಗ್ರಹ ಮಾಡಿದ. ಇವರ ಬಳಿ
ಇದ್ದಿದ್ದರೆ ಇನ್ನೂ ಎಷ್ಟೆಷ್ಟೋ ಮಹತ್ವದ ವಿಷಯಗಳು ಸಿಕ್ಕುತ್ತಿದ್ದವು ಪ್ರತಿಭಟನೆಗೆ ಎಂದು ಕೊಂಡು ಸಾಮ್ರಾಟರು ಕುಚೇಲನ ಸಮೇತ ಕ್ರೀಡಾಂಗಣದ ಒಳಕ್ಕೆ ಬಂದರು. ಎದುರಿಗೇ ನಾಲ್ಕೈದು ಮಂದಿ ಯುವಕರು, ಸ್ಫುರದ್ರೂಪಿಗಳು ಮುಖ ಗಂಟಿಕ್ಕಿಕೊಂಡು ಕುಳಿತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಗೆಸಾಮ್ರಾಟರು ಇಲ್ಲೊಂದು ಸ್ಟೋರಿ ಸಿಕ್ಕೀತು ಅಂತ ಅಂದುಕೊಂಡು ಅವರ ಬಳಿಗೆ ದೌಡಾಯಿಸಿದರು. ಸಾಮ್ರಾಟರು ಪತ್ರಿಕೆಯವರು ಎಂಬುದನ್ನು ಅರಿತ ಕೂಡಲೇ ಆ ಗುಂಪಿನವರೋ ಗೊಳೋ ಎಂದು ಅಳುತ್ತಾ ಫೋಟೊ ಫೋಸಿಗೆ ಸಿದ್ಧರಾದರು. ಸಾಮ್ರಾಟರು ಏನು ನಿಮ್ಮ ಚರಿತ್ರೆ ಎಂದು ಕೇಳುವ ಮೊದಲೇ ಒಬ್ಬ ಯುವಕ ‘ಅಂಕಲ್, ನೀವೇ ನೋಡಿ… ನಮ್ಮ ದೇಶದಲ್ಲಿ ಎಷ್ಟೆಲ್ಲಾ ಅಸಮಾನತೆ, ಶೋಷಣೆ ನಡೆಯುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಆಶ್ವಾಸನೆ ಕೊಟ್ಟಿದ್ದರೂ ಎಲ್ಲೆಲ್ಲೂ ಬರೀ ಅಸಮಾನತೆ, ಶೋಷಣೆ ನಡೆಯುತ್ತಿದೆ. ಎಲ್ಲಾ ಕಡೆ ಬರೀ ಪಾರ್ಶಿಯಾಲಿಟಿ.’ ಎಂದು ಮಾತಿಗೆ ತೊಡಗಿದ. ಸಾಮ್ರಾಟರಿಗೆ ಈ ಹುಡಗನ ಪ್ರಾಮಾಣಿಕ ಕಳಕಳಿಯನ್ನು ಕಂಡು ಮಮತೆ ಉಕ್ಕಿತು. ‘ಅಲ್ಲಾ ಅಂಕಲ್, ಕ್ರಿಕೆಟ್ ಆಡುವುದು ಹುಡುಗರು, ನೋಡುವ ಬಹುಪಾಲು ಮಂದಿ ಹುಡುಗರು ಹೀಗಿರುವಾಗ ಅಲ್ಲಿ ಮೈದಾನದಲ್ಲಿ ಕುಣಿಯುವುದಕ್ಕೆ ಮಾತ್ರ ಹುಡುಗಿಯರು ಬೇಕಾ? ಚೀರ್ ಗರ್ಲ್ಸ್ ಮಾತ್ರ ಬೇಕಾ? ಚೀರ್ ಬಾಯ್ಸ್ ಯಾಕೆ ಇರಬಾರದು. ಇದು ಹುಡುಗರಿಗೆ ತೋರುತ್ತಿರುವ ಅಸಡ್ಡೆ. ಇದು ಹುಡುಗರ ಮೇಲೆ ನಡೆಯುತ್ತಿರುವ ಶೋಷಣೆ. ಮಹಿಳಾ ಪ್ರಧಾನವಾದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಂಡಸರ ಶೋಷಣೆ’ ಎಂದು ಏರಿದ ದನಿಯಲ್ಲಿ ಭಾಷಣ ಚಚ್ಚುತ್ತಿರುವಂತೆಯೇ ನಗೆ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಬೇತಾಳದಂತೆ ಅಲೆದಾಡುತ್ತಿದ್ದ ‘ಭಾರತದ ಗಡಿಯಾರಗಳು’ ಎಂಬ ಅಚ್ಚ ಇಂಗ್ಲೀಷ್ ಪತ್ರಿಕೆಯ ವರದಿಗಾರ ನಮ್ಮ ಪತ್ರಿಕೆಯ ಮುಖಪುಟಕ್ಕೆ ಒಳ್ಳೆ ಕವರೇಜ್ ಸಿಕ್ಕಿತು ಅಂತ ಅಲ್ಲಿಗೆ ದೌಡಾಯಿಸಿದ. ಸಾಮ್ರಾಟರು ತಣ್ಣಗೆ ಅಲ್ಲಿಂದ ಜಾರಿಕೊಂಡರು.
ಸ್ಟೇಡಿಯಮ್ಮಿನಿಂದ ಹೊರಬಂದು ದಣಿವಾರಿಸಿಕೊಳ್ಳಲು ಸನಿಹದ ಅಂಗಡಿಯಲ್ಲಿ ನೀರು ಕೇಳಿದರೆ ಆತ ‘ನೀರಾದರೆ ಒಂದು ಬಾಟಲಿಗೆ ನೂರು ರೂಪಾಯಿ, ಬೀರಾದರೆ ಐವತ್ತು’ ಅಂದದ್ದು ಕೇಳಿ ದಿಗಿಲಾಗಿ ಓಡಲು ಶುರುಮಾಡಿದವರು ನಗಾರಿಯ ಕಛೇರಿ ತಲುಪಿದಾಗಲೇ ನಿಂತದ್ದು.
ಟ್ಯಾಗ್ ಗಳು:ಐಪಿಎಲ್, ಕ್ರಿಕೆಟ್, ಚೀರ್ ಲೀಡರ್ಸ್, ನಗೆ ಸಾಮ್ರಾಟ್, ಪ್ರತಿಭೆ, ಹಣ, ಹೆಂಡ, IPL
ಇತ್ತೀಚಿನ ಪ್ರಜಾ ಉವಾಚ