(ಖ್ಯಾತ ನಟಿ ಬಂದ್ರೆ ತಾರೇ ಸಂದರ್ಶನಕ್ಕೆ ಹೋಗಿದ್ದ ಸಾಮ್ರಾಟರ ಆಲ್ಟರ್ ಈಗೋ ಕಳೆದ ಕೆಲವು ದಿನಗಳು ನಾಪತ್ತೆಯಾಗಿದ್ದು ನಮ್ಮ ಅನೇಕ ನಿಷ್ಠಾವಂತ ಓದುಗರಲ್ಲಿ ಆತಂಕವನ್ನೂ, ಸಂಶಯವನ್ನೂ ಮೂಡಿಸಿತ್ತು. ಸಾಮ್ರಾಟರ ಆಲ್ಟರ್ ಈಗೋದ ಆರೋಗ್ಯದ ಕಾಳಜಿ ಹೊಂದಿರುವವರಿಗೆ ಆತಂಕ ಉಂಟಾಗಿದ್ದರೆ, ಆ ಈಗೋದ ‘ಚಾರಿತ್ರ್ಯ’ದ ಮೇಲೆ ಕಾಳಜಿ ಇದ್ದವರಿಗೆ ಸಂಶಯ ಮೂಡಿತ್ತು. ಕಡೆಗೆ ಸಾಮ್ರಾಟರು ಈ ಆತಂಕ, ಸಂಶಯಗಳ ಮುಸುಕನ್ನು ಸರಿಸಲು ನಿರ್ಧರಿಸಿ ತಮ್ಮ ಚೇಲ ಕುಚೇಲನನ್ನು ಅಟ್ಟಿದರು. ಕುಚೇಲ ನಗೆ ಸಾಮ್ರಾಟರ ಆಲ್ಟರ್ ಈಗೋವನ್ನೂ, ಅದರ ಸಂದರ್ಶನವನ್ನೂ ಹಿಡಿದು ತಂದಿದ್ದಾನೆ. ಆದರೆ ಭದ್ರತೆಯ ಕಾರಣಗಳಿಂದ ಸಾಮ್ರಾಟರ ಆಲ್ಟರ್ ಈಗೋ ಇಷ್ಟು ದಿನ ಮಾಡುತ್ತಿದ್ದದ್ದೇನು ಎಂಬ ಸಂಗತಿಯನ್ನು ಬಯಲು ಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.)
ಸಂಜೆ ನಾಲ್ಕಕ್ಕೆ ಸಂದರ್ಶನದ ಸಮಯ ನಿಗದಿಯಾಗಿತ್ತು. ನಮ್ಮ ಆಲ್ಟರ್ ಈಗೋ ಮೂರು ಗಂಟೆ ಐವತ್ತೊಂಭತ್ತು ನಿಮಿಷದಿಂದಲೇ ಕಾದು ಕಾದು ಸುಸ್ತಾಗಿದ್ದ. ಬಂದ್ರೆ ತಾರೇಯವರು ಈ ಸಂದರ್ಶನಕ್ಕೆ ಮುಂಜಾನೆ ಆರರಿಂದಲೇ ಸಿದ್ಧರಾಗುತ್ತಿದ್ದರು ಎಂದು ತಿಳಿದು ಅಭಿಮಾನದಿಂದ ಈಗೋದ ಮನಸ್ಸು ಉಬ್ಬಿಹೋಯ್ತು. ಎಷ್ಟು ಅಧ್ಯಯನ ಶೀಲತೆ, ಎಂತಹ ಶಿಸ್ತು, ಏನು ಹೋಂ ವರ್ಕು ಎಂದು ಮೆಚ್ಚಿಕೊಂಡು ಲೊಚಗುಟ್ಟುತ್ತಿರುವಾಗ ತಾರೇಯವರು ಮುಂಜಾನೆಯಿಂದ ಮೇಕಪ್ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿಯಿತು. ಅಖಂಡವಾಗಿ ಹದಿನೇಳು ಬಾರಿ ಮೇಕಪ್ ಬದಲಾಯಿಸಿ ಸಂದರ್ಶನಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದುದು ತಿಳಿದು ಆಲ್ಟರ್ ಈಗೋಗೆ ತಲೆ ಸುತ್ತು ಬಂದಂತಾಯ್ತು. ಕಡೆಗೆ ತಮ್ಮ ಸಂದರ್ಶನ ಟಿವಿಯಲ್ಲಿ ಪ್ರಕಟವಾಗುವುದಿಲ್ಲವೆಂದೂ, ಕನಿಷ್ಠ ಪಕ್ಷ ಫೋಟೊ ತೆಗೆಯುವುದಕ್ಕೂ ತಮ್ಮ ಬಳಿ ಕ್ಯಾಮರಾ ಇಲ್ಲವೆಂದು ಸ್ಪಷ್ಟ ಪಡಿಸಿದ ನಂತರ ಎರಡೇ ತಾಸುಗಳಲ್ಲಿ ತಯಾರಿ ಮುಗಿಸಿ ಸಂದರ್ಶನಕ್ಕೆ ಹಾಜರಾದರೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಬಂದ್ರೆ ತಾ ರೇ.
ನ.ಸಾ: ಗುಡ್ ಈವನಿಂಗ್ ಮೇಡಂ. (ಹ್ಯಾಂಡ್ ಶೇಕ್ ಮಾಡಲು ಕೈ ಮುಂದೆ ಚಾಚುತ್ತಾ…)
ಬ.ತಾ: (ಸರ್ಕಾರಿ ಗುಮಾಸ್ತೆ ತನ್ನ ಟೇಬಲ್ ಮೇಲೆ ಬಂದ ಫೈಲನ್ನು ನಿರ್ಲಕ್ಷ್ಯದಿಂದ ಕಾಣುವಂತೆ ಮುಂದೆ ಬಂದ ಕೈಯನ್ನು ಕಂಡು) ಹ್ಹಾ!
ನ.ಸಾ: (ಕೈ ಕುಲುಕುವ ಭಾಗ್ಯದಿಂದ ವಂಚಿತನಾದ ನಿರಾಸೆಯನ್ನು ತೋರ್ಪಡಿಸಿಕೊಳ್ಳದೆ) ಮೇಡಂ, ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಇವತ್ತು.
ಬ.ತಾ: (ಮನಸೊಳಗೆ ಆಟಂ ಬಾಂಬ್ ಸಿಡಿದ ಹಾಗೆ ಸಂತೋಷದ ಊಟೆ ಒಡೆದರೂ ತೋರ್ಪಡಿಸಿಕೊಳ್ಳದೆ) ಥ್ಯಾಂಕ್ಯು… ಸಂದರ್ಶನ ಶುರು ಮಾಡೋಣವೇ?
ನ.ಸಾ: ಖಂಡಿತಾ ಮೇಡಂ. ಮೊದಲಿಗೆ ಕನ್ನಡದ ಹುಡುಗಿಯಾಗಿ, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಯೂ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ನಿಮ್ಮನ್ನು ಅಭಿನಂದಿಸಬೇಕು.
ಬ.ತಾ: ನೋಡಿ, ನಾನು ಕನ್ನಡದಲ್ಲಿ ಮಾತಾಡುತ್ತಿರುವುದು ನಿಮ್ಮ ಪತ್ರಿಕೆಯನ್ನು ಮೂರುವರೆ ಓದುಗರು ಬಿಟ್ಟು ಬೇರ್ಯಾರೂ ಓದುವುದಿಲ್ಲ ಎಂಬ ಗ್ಯಾರಂಟಿ ಇರೋದರಿಂದ ಮಾತ್ರ. ನಾವು ನಟಿಯರು ಕನ್ನಡದಲ್ಲೇ ಮಾತಾಡಿದರೆ ನಮ್ಮ ಅವಕಾಶಗಳ ಮೇಲೆ ನಾವೇ ಕಲ್ಲು ಚಪ್ಪಡಿ ಎಳೆದುಕೊಂಡಂತೆ. ನಾವು ಕನ್ನಡದಲ್ಲೇ ಮಾತನಾಡುತ್ತಿದ್ದರೆ ಬೇರೆ ಭಾಷೆಗಳ ನಿರ್ದೇಶಕ, ನಿರ್ಮಾಪಕರ ಗಮನ ಸೆಳೆಯುವುದು ಹೇಗೆ? ಬಾಲಿವುಡ್ಡಿಗೆ ಹಾರುವ ಅವಕಾಶ ಸಿಕ್ಕುವುದಾದರೂ ಹೇಗೆ? ಕನ್ನಡದಲ್ಲೇ ಮಾತಾಡುತ್ತಿದ್ದರೆ ರಾಷ್ಟ್ರೀಯ ಮಾಧ್ಯಮಗಳಾಗಲಿ, ನಮ್ಮ ಟೈಮ್ಸಾಫಿಂಡಿಯಾದಂತಹ ದೊಡ್ ಪತ್ರಿಕೆಗಳು ನಮ್ ಕಡೆ ತಿರುಗಿಯೂ ನೋಡಲ್ಲ. ನಿಮ್ ಪತ್ರಿಕೆ ಯಾರ ಕಣ್ಗೂ ಬೀಳಲ್ಲ ಅನ್ನೋ ಗ್ಯಾರಂಟಿ ಇರೋದ್ರಿಂದ ನಾನು ಕನ್ನಡದಲ್ಲಿ ಮಾತಾಡ್ತಿದೀನಿ.
ನ.ಸಾ: ಇದು ತಪ್ಪಲ್ಲವಾ ಮೇಡಂ? ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಕನ್ನಡದ ಜನರ ಪ್ರೀತಿಗೆ ಪಾತ್ರರಾಗಿ ಕನ್ನಡದ ಬಗ್ಗೆ ಹೀಗೆ ಕೇವಲವಾಗಿ ಮಾತನಾಡೋದು ತಪ್ಪಲ್ಲವಾ? ನೋಡಿ ಆ ಗಾಂಧಿಯವರು ಬೇರೆ ರಾಜ್ಯದವರಾದರೂ ಕನ್ನಡ ಮಾತನಾಡೋದಕ್ಕೆ ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ಬ.ತಾ: ಯಾವುದು ತಪ್ಪು? ಹುಟ್ಟುತ್ತಿದ್ದಂತೆಯೇ ಮಗುವಿಗೆ ಇಂಗ್ಲೀಷಿನಲ್ಲಿ ಅಳುವುದನ್ನು ಕಲಿಸುತ್ತಿರುವುದಾ? ತಮ್ಮೆಲ್ಲಾ ಪರಿಶ್ರಮವನ್ನು ಹಾಕಿ ಕನ್ನಡದ ಶಾಲೆಗಳಿಗೆ ಯಾವ ಪೋಷಕರು ತಮ್ಮ ಮಕ್ಕಳನ್ನು ಕಳಿಸಲು ಹೆದರುವಂತೆ ಮಾಡುವುದರಲ್ಲಿ ಯಶಸ್ವಿಯಾದ ರಾಜಕಾರಣಿಗಳು ಮಾಡುತ್ತಿರುವುದಾ? ಅಥವಾ ಹೊಟ್ಟೆ ಪಾಡಿಗಾಗಿ ನಮ್ಮಂಥವರು ಇಂಗ್ಲೀಷಿನ ಹಿಂದೆ ಬಿದ್ದದ್ದಾ?
ಆ ಗಾಂಧಿಗೆ ಕನ್ನಡ ಚಿತ್ರರಂಗವೇ ಕಡೆಯ ರೆಫ್ಯೂಜು. ಅದಕ್ಕೇ ಮೂರು ವರ್ಷಗಳಿಂದ ಹರಕು ಮುರಕು ಕನ್ನಡ ಮಾತಾಡ್ತಾ ಇರೋದು. ನನ್ನಂತಹ ನಟಿಗೆ ದೇಶದಾದ್ಯಂತ ಬೇಡಿಕೆ ಇದೆ, ನನಗೆ ಆ ಗಿಮಿಕ್ಕುಗಳ ಆವಶ್ಯಕತೆ ಇಲ್ಲ.
ನ.ಸಾ: ಹೋಗಲಿ ಬಿಡಿ, ನೀವು ಚಿತ್ರರಂಗಕ್ಕೆ ಬಂದದ್ದು ಹೇಗೆ ತಿಳಿಸಿ. ನೀವಿನ್ನೂ ಪದವಿ ವಿದ್ಯಾರ್ಥಿ, ಸಿನೆಮಾ ರಂಗ ನಿಮ್ಮನ್ನು ಸೆಳೆದದ್ದು ಏತಕ್ಕೆ?
ಬ.ತಾ: ನಾನು ಸಿನೆಮಾ ನಟಿಯಾಗಬೇಕು ಎಂದು ಕನಸೂ ಕಂಡಿರಲಿಲ್ಲ. ಒಂದು ಒಳ್ಳೆಯ ಕೆಲಸ ಪಡೆದು ಒಳ್ಳೆ ಹಣ ಸಂಪಾದನೆ ಮಾಡಬೇಕು, ಜನಪ್ರಿಯಳಾಗಬೇಕು ಎಂಬುದು ನನ್ನ ಕನಸಾಗಿತ್ತು.
ಆಕಸ್ಮಿಕವಾಗಿ ನನಗೆ ಸಿನೆಮಾ ರಂಗಕ್ಕೆ ಬರುವ ಅವಕಾಶ ಸಿಕ್ಕಿತು. ನನ್ನ ಕನಸು ಇಲ್ಲೇ ಇಷ್ಟು ಸುಲಭವಾಗಿ ಈಡೇರುವಾಗ ಓದುವ ಕಷ್ಟ ಯಾತಕ್ಕೆ ತೆಗೆದುಕೊಳ್ಳಬೇಕು ಅನ್ನಿಸಿತು ಅದಕ್ಕೇ ಸಿನೆಮಾ ರಂಗಕ್ಕೆ ಬಂದು ಬಿಟ್ಟೆ.
ನ.ಸಾ: ಕನಸು ಈಡೇರುವುದು ಎಂದರೇನು ಮೇಡಂ? ನಾಲ್ಕೈದು ಚಿತ್ರಗಳಲ್ಲಿ ಪಡ್ಡೆಗಳ ನಿದ್ದೆಗೆಡಿಸಿ ಜನಪ್ರಿಯರಾಗಿ, ಹಣ ಮಾಡಿಕೊಂಡು ದೊಡ್ಡ ಉದ್ಯಮಿಯನ್ನೋ, ಪ್ರೊಡ್ಯೂಸರನ್ನೋ ಮದುವೆಯಾಗಿ ಸೆಟಲ್ ಆಗುವುದಾ?
ಬ.ತಾ: ಒಂದು ರೀತಿಯಲ್ಲಿ ಹಾಗೆಯೇ.
ನ.ಸಾ: ಮೇಡಂ ನಿಮ್ಮ ಮೊದಲ ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯಾಗಿ ಕಂಡ ನೀವು ಎರಡನೆಯ ಸಿನೆಮಾದಲ್ಲಿ ಗ್ಲಾಮರ್ ಬಾಂಬ್ ಆಗಿದ್ದು ಏಕೆ? ಇಷ್ಟು ಮೈಚಳಿ ಬಿಟ್ಟು ನಟಿಸಿದ್ದು ಏಕೆಂದು ತಿಳಿಯಬಹುದೇ?
(ಇನ್ನೂ ಇದೆ)
ಇತ್ತೀಚಿನ ಪ್ರಜಾ ಉವಾಚ