Archive | ಜನವರಿ, 2009

‘ಅವಧಿ’ಯಲ್ಲಿ ಪ್ರತಿಧ್ವನಿಸಿದ ನಗಾರಿ ಸದ್ದು!

31 ಜನ

 

ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು ಯಾರಾದರೂ ಗುರುತಿಸಿ ಬೆನ್ನು ತಟ್ಟಿದರೆ ಇಲ್ಲವೇ ಬೆನ್ನಿಗೆ ಗುದ್ದು ಹಾಕಿದರೆ ಇನ್ನಷ್ಟು ಮುಂದೆ ತೆವಳುವುದಕ್ಕೆ ಸಹಾಯವಾಗುತ್ತದೆ.

ನಗೆ ನಗಾರಿಯ ವಾರ್ಷಿಕೋತ್ಸವ ಸಾಂಗವಾಗಿ ಜರುಗಿದ ಬಗ್ಗೆ ಸಂತಸ ವ್ಯಕ್ತ ಪಡಿಸಿ ನಮ್ಮನ್ನು ಅಭಿನಂದಿಸಿ ಅವಧಿಯಲ್ಲಿ ಒಂದು ಬರಹ ಪ್ರಕಟವಾಗಿದೆ. ಒಮ್ಮೆ ಇಣುಕಿ ನೋಡಿ ಬನ್ನಿ…

avadhi

ಅಮ್ಮ ಫೋನೂ- ಬೋಂಡಾ ಜಾಮೂನೂ!

31 ಜನ

“ಬೆಂಗಳೂರು ಹುಡುಗೀರಂದ್ರೆ, ತಮ್ಮ ತೂಕ, ತಮ್ಮ ಮೇಕಪ್, ಫ್ಯಾಶನ್ ಮ್ಯಾಗಸೀನ್, ಫಿಲ್ಮಿ ಗಾಸಿಪ್ಸ್ ಗಳಲ್ಲೇ ಕಳೆದು ಹೋಗಿರುವ, ಕನ್ನಡದ ಗಂಧವೇ ಗೊತ್ತಿಲ್ಲದವರಂತೆ ಇಂಗ್ಲಿಷನ್ನೇ ತಮ್ಮ ಮಾತೃ ಭಾಷೆಯನ್ನಾಗಿಸಿಕೊಂಡಿರುವವರು ಎಂಬ ಕಲ್ಪನೆ ದಟ್ಟವಾಗಿರುವಾಗ ಬರೆಯುವ ಸಾಹಸಕ್ಕೆ ಕೈ ಹಾಕಲು ತುಸು ಹಿಂಜರಿಕೆ ಆಗುತ್ತಿದೆ. ಆದರೂ ಇನ್ನು ಬರೆಯದೇ ಇರುವುದಕ್ಕಾಗುವುದಿಲ್ಲವೆನಿಸಿ ಬ್ಲಾಗಿಂಗ್ ಶುರುವಿಟ್ಟುಕೊಂಡಿದ್ದೇನೆ!” ಎಂದೆನ್ನುತ್ತಾ ಹೇಮಾಂತರಂಗ ಬ್ಲಾಗು ತೆರೆದಿರುವ ಮಿಸ್ ಹೇಮಾ ಪವಾರ್ “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ. ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ ಒಡಲಲಿ ತುಂಬುತ್ತಿರುವೆ. ನನ್ನಂತರಂಗಕ್ಕೆ ನಿಮೆಗೆಲ್ಲರಿಗೂ ಸ್ವಾಗತ.” ಎಂದು ಗಾಬರಿ ಪಡಿಸುತ್ತಾರೆ.

ಅವರ ಇತ್ತೀಚಿನ ಬರಹವನ್ನು ಸಾಮ್ರಾಟರು ಇಲ್ಲಿ ಪ್ರಕಟಿಸಲು ಸಂತೋಷ ಪಡುತ್ತಾರೆ.

ಆಫೀಸಿಗೆ ಹೊರಡುತ್ತಿದ್ದವಳು, ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ, ಇತ್ತು ಅವತ್ತು ವಿಶೇಷವಿತ್ತು, ‘ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ, ಆಫೀಸಿಗೋಗ್ತಾಳೆ! ಕಾಲೇಜಿಗೆ ಹೋಗ್ತಾಳೇ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು!’ ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು. ಆಹಾ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು, ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ! (ಅದು ತಿಂಗಳಲ್ಲಿ ಒಂದು ಸಲ)? ಯೋಚಿಸುತ್ತಿದ್ದ ನನಗೆ, ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು.

‘ಹುಡುಗ ಸಾಫ್ಟ್ ವೇರ್ ಎಂಜಿನಿಯರ್ ಅಂತೆ ಕಣ್ರೀ, ಈ ಕಾಲದಲ್ಲಿ ಸ್ವಂತ ಮನೆ ಇಲ್ಲದೋರನ್ನ ಯಾರು ಒಪ್ಕೋತಾರೆ ಹೇಳಿ, ಆದ್ರೂ ಈ ಹುಡ್ಗ ವರದಕ್ಷಿಣೆಯೆಲ್ಲಾ ಬೇಡ ಚೆನ್ನಾಗಿ ಮದ್ವೆ ಮಾಡ್ಕೊಟ್ರೆ ಸಾಕು ಅಂತಾನಂತೆ’ ಅಮ್ಮ ಅಪ್ಪನ ಹತ್ರ ತುಂಬಾ ಖುಷಿಯಿಂದ ಹೇಳುತ್ತಿದ್ದರು.

‘ಇವಾಗ ಕಂಪನಿಗಳೆಲ್ಲ ಕೆಲಸದೋರನ್ನ ಮುಗಿದು ಹೋದ ಬಿಯರ್ ಬಾಟಲ್ ಗಳ ತರಹ ಹೊರಗೆ ಎಸೀತಿವೆ, ಸಾಫ್ಟ್ ವೇರ್ ಎಂಜಿನಿಯರ್ಸ್ ಎಲ್ಲ ಕೆಲಸ ಇಲ್ದೆ ಖಾಲಿ ಕೂತಿದಾರೆ, ಸುಮ್ನೆ ಸಂಬಳ ಜಾಸ್ತಿ ಅಂತ ಮದ್ವೆ ಮಾಡ್ಬಿಟ್ಟು ಆಮೇಲೆ ನಿನ್ನ ಮಗಳಿಗೂ ಅಳಿಯನಿಗೂ ನೀನೆ ಕೂರಿಸಿ ಊಟ ಹಾಕ್ಬೇಕು ಅಷ್ಟೇ!’ ಎಂದು ಅಕ್ಕ ನನ್ನ ಸಪೋರ್ಟಿಗೆ ನಿಂತಳು.
‘ಹೇ ಅದೆಲ್ಲ ನಂಗೂ ಗೊತ್ತು ಕಣೇ, ಬರೀ ಎಂಜಿನಿಯರ್ ಅಂತ ನಾನೂ ಮೊದಲು ಬೇಡ ಅಂದೆ, ಆದ್ರೆ ಕಮಲಮ್ಮ ಹೇಳಿದ್ರು (ಫೋನಲ್ಲಿ!!) ಹುಡುಗನ ಅಪ್ಪ ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದಾರಂತೆ ಅವ್ರು ಇರೋ ಮನೇನ ಬಿಟ್ಟು. (ಅವ್ರಿರೋದು ಕೊಟ್ಬಿಟ್ಟು ಅವ್ರೇನು ಫುಟ್ ಪಾತ್ ಮೇಲೆ ಇರ್ಬೇಕಿತ್ತ?). ನಾನೆಲ್ಲ ವಿಚಾರಿಸಿದೀನಿ, ನೀವ್ಯಾರು ಮಾತಾಡ್ಬೇಡಿ ಅವ್ರು ಭಾನುವಾರ ಬರ್ತೀದಾರೆ ಅಷ್ಟೇ!!’ ಅಮ್ಮ ತಮ್ಮದೇ ಕಡೆಯ ಮಾತೆಂಬಂತೆ ಹೇಳಿದರು.

ನೀರಲ್ಲಿ ಮುಳುಗುತ್ತಿರುವವನು ಹುಲ್ಲುಕಡ್ಡಿಯನ್ನೂ ಆಸರೆಗೆ ಹಿಡಿದಂತೆ, ದೀನ ಮುಖ ಮಾಡಿ ಅಪ್ಪನ ಕಡೆ ನೋಡಿದೆ, ಅಪ್ಪ ಅರ್ಥ ಮಾಡಿಕೊಂಡವರಂತೆ, ‘ಚಿಕ್ಕುಡುಗಿ ಈಗ್ಲೆ ಯಾಕೆ ಅವ್ಳಿಗೆ ಇದೆಲ್ಲ!’ ಅಂತ ಇನ್ನು ಶುರು ಮಾಡಿದ್ರು, "ನಿಮಗೆ ಇನ್ನು ಹತ್ತು ವರ್ಷ ಹೋದ್ರು ನಿಮ್ಮ ಮಗಳು ಚಿಕ್ಕೋಳೆ, ಮೂರು ಕತ್ತೆಗಾದಷ್ಟು ವಯಸ್ಸಾಗಿದೆ (ಛೆ ಕತ್ತೆಗಳ ಲೆಕ್ಕದಲ್ಲಿ ಅಳೆಯೋದೆ ನನ್ನ ವಯಸ್ಸನ್ನ! ಅವಮಾನ) ಒಂದು ಕೆಲಸ ಬರೋಲ್ಲ, ಕಾರ್ಯ ಬರೋಲ್ಲ, ಮೊನ್ನೆ ಹಾಲು ಕಾಯ್ಸೆ ಅಂದ್ರೆ, ಪಕ್ಕದಲ್ಲಿರೋ ಮೊಸರಿನ ತಪ್ಲೆ ಒಲೆ ಮೇಲಿಟ್ಟಿದಾಳೆ (ಎರಡೂ ಬೆಳ್ಳಗೇ ಇತ್ತು ಕಣ್ರೀ Sad ). ನೀವಿಷ್ಟು ಮುದ್ದು ಮಾಡದೇ ಇದ್ದಿದ್ರೆ ನಾನು ಅವ್ಳಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ (ಬೆಳಿಗ್ಗೆ ಹೊಗಳಿದ್ದು ಅಡ್ವರ್ಟೈಸ್ ಮೆಂಟು ಮಾತ್ರ ಅಂತ ನನಗೆ ಆಗ ತಿಳೀತು!!). ಈ ಹುಡುಗ ಗೊತ್ತಾಗ್ಲಿ ಎರಡು ಕೊಟ್ಟು ಎಲ್ಲ ಕಲಿಸ್ತೀನಿ, ಇಲ್ಲ ಅಂದ್ರೆ ಹೋದೋರ ಮನೇಲಿ ನಮ್ಮ ಮಾನ ಕಳೀತಾಳೇ. ಈಗ ಯಾರೂ ಮಾತಾಡ್ಬೇಡಿ ನಾನು ಅವ್ರೀಗೆ ಬರೋಕೆ ಹೇಳಿಯಾಗಿದೆ……!" (ಅಮ್ಮ ಇನ್ನು ಏನೇನೋ ನಾಮಾರ್ಚನೆ ಮಾಡುತ್ಲೇ ಇದ್ದರು ನಿಮಗೆ ಬೋರ್ ಆಗ್ಬಾರ್ದು ಅಥವಾ ನನ್ನ ಮರ್ಯಾದೆ ಉಳಿಸಿಕೊಳ್ಳಲು Eye-wink ಅದನ್ನ ಇಲ್ಲಿಗೆ ಎಡಿಟ್ ಮಾಡಿದೀನಿ).

ನಾನೇನು ಮಾಡಲಾರೆ ಮಗಳೇ ಎಂದು ಅಪ್ಪ ಕೈ ಚೆಲ್ಲಿದಂತೆ ನನ್ನ ನೋಡಿದರು. ಇವ್ರನ್ನೆಲ್ಲಾ ನಂಬಿದ್ರೆ ನನ್ನ ಕುತ್ತಿಗೆಗೆ ತರ್ತಾರೆ ಅಂತ ಅಮ್ಮನ ಜೊತೆ ನಾನೇ ಯುದ್ದಕ್ಕೆ ನಿಂತೆ. ‘ನೋಡಮ್ಮ ನಾನು ನಿಂಗಷ್ಟು ಭಾರ ಆದ್ರೆ (ಎಷ್ಟು ಅಂತ ಕೇಳ್ಲಿಲ್ಲ ಸಧ್ಯ), ಬೇರೆ ಊರಿಗೆ ಹೋಗಿ ಪಿ.ಜಿ.ಹೌಸ್ನಲ್ಲಿ ಇದ್ಕೋತೀನಿ, ನೀನು ಇಷ್ಟು ಬೇಗ ಮದ್ವೆ ಗಿದ್ವೆ ಅಂದ್ರೆ ನಾನು ಸುಮ್ನೆ ಇರೋಲ್ಲ ಅಷ್ಟೇ. ನಾನಿನ್ನು ಓದ್ಬೇಕು, ಸೆಟಲ್ ಆಗ್ಬೇಕು…..!’ ಹೀಗೆ ಒಂದು ಫಿಲ್ಮ್ ಡೈಲಾಗ್ ಒಗಾಯಿಸಿದೆ. ನಮ್ ಕನ್ನಡಾ ಫಿಲ್ಮ್ ಡೈಲಾಗ್ ಗಳು ಥೇಟರ್ನಲ್ಲೇ ಓಡೋಲ್ಲ ಇನ್ನ ಮನೇಲಿ ಓಡುತ್ವೆ? ಇಲ್ಲೂ ಫ್ಲಾಪ್ ಆಯ್ತು. ಅಮ್ಮ ಉಪವಾಸದ ಬೆದರಿಕೆ ಒಡ್ಡಿ ಹಾಗೂ ಹೀಗೂ ನನ್ನನ್ನ ಗಂಡು ನೋಡೋಕೆ ಒಪ್ಪಿಸಿಯೇ ಬಿಟ್ರು.

ಬಂದವರಿಗೆ ಫಿಲ್ಮ್ ನಲ್ಲಿ ಮಾಡ್ತಾರಲ್ಲ ಹಾಗೆ ಕಾಫೀಲಿ ಭೇಧಿ ಮಾತ್ರೆಗಳು ಹಾಕಿ ಕೊಟ್ಬಿಡ್ಲೇ ಅಂನ್ಕೊಂಡೆ, ಛೆ ಈ ಫಿಲ್ಮಿ ಐಡಿಯಾಗಳೂ ಉಪಯೋಗ ಆಗೋಕಿಂತ ಕೈ ಕೊಡೋದೆ ಜಾಸ್ತಿ ಅಂತ ಸುಮ್ಮನಾದೆ. ಇಷ್ಟೆಲ್ಲಾ ಹೇಳ್ತಿದೀನಿ ನಿಮಗೊಂದು ಸತ್ಯ ಹೇಳ್ದೆ ಇದ್ರೆ ಮೋಸವಾಗುತ್ತೆ ಕಣ್ರೀ, ಒಳೊಗೊಳೊಗೆ ನನಗೂ ಬರೋ ಗಂಡನ್ನ ಒಂದು ಸಾರಿ ನೋಡಬೇಕು ಅನ್ನಿಸ್ತಿತ್ತು. ಮದ್ವೆ ಆಗದಿದ್ರೂ ನೋಡೋದ್ರಲ್ಲಿ ಏನು ತಪ್ಪು ಹೇಳಿ, ಅದು ಮೊದಲ ಸಲ ಹೀಗೆ ನನ್ನನ್ನೂ (!?) ನೋಡೋಕೆ ಯಾರಾದ್ರೂ ಬರ್ತಿರೋದು (ಅಲ್ಲ ನಾನೇನು ಎಕ್ಸಿಭಿಶನ್ನಾ ಹಾಗೆ ಎಲ್ಲಾರು ಬಂದು ಬಂದು ನೋಡೋಕೆ) ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ, ಅದು ಹೇಗಿರ್ತಾನೋ ಒಂದು ಸಾರಿ ನೋಡಿಯೇ ತೀರೋಣ ಅಂತ ತೀರ್ಮಾನಿಸಿದೆ. ಫೋಟೋದಲ್ಲಂತು ಸುಮಾರಾಗಿದ್ದ, ತೆಗೆದು ಹಾಕೋಹಾಗೇನೂ ಇರ್ಲಿಲ್ಲ (ಎಲ್ಲಿಂದ ಅಂತ ಕೇಳ್ಬೇಡಿ ಮತ್ತೆ).

ಸರಿ ಆ ಹಾಳು ಭಾನುವಾರ ಬಂದೇ ಬಂತು, ಭಾನುವಾರವೆಂದ್ರೆ ಅಷ್ಟು ಖುಷಿಪಡ್ತಿದ್ದೋಳು ಈ ಸಲ ಇಷ್ಟು ಬೇಗ ಬಂತಲ್ಲ ಅಂತ ತಲೆ ಚಚ್ಕೋಳ್ತಿದ್ದೆ. ನನ್ನ ಸುಂದರ ಭಾನುವಾರದ ಖುಷಿಯನ್ನೆಲ್ಲ ಕೆಡೆಸಿದ ಆ ‘ಗಂಡಿಗೆ’ ಹಾಸಿಗೆಯಲ್ಲೇ ಹಿಡಿ ಶಾಪ ಹಾಕಿ ಎದ್ದು ತಯಾರಾದೆ. ಅಮ್ಮ ಆಗ್ಲೇ ಬೋಂಡಾ ಮತ್ತು ಜಾಮೂನ್ ರೆಡಿ ಮಾಡ್ತಿದ್ರು, ಆಹಾ ಅದರ ಸುವಾಸನೆ!! ಬಿಡಿ ಎಷ್ಟುದ್ದ ಬರೆದ್ರೂ ಸುಖವಿಲ್ಲ, ಅದನ್ನ ಅನುಭವಿಸಿಯೇ ತೀರಬೇಕು!! ಅವ್ರು ಬರ್ತಿರೋದಕ್ಕೆ ಆಗ್ತಿರೋ ಲಾಭ ಇದೊಂದೇ, ಎಂದುಕೊಂಡು ಬೋಂಡಾದ ತಟ್ಟೆಗೆ ಕೈ ಹಾಕಿದೆ. ಫಟ್ ಅಂತ ಕೈ ಮೇಲೆ ಒಂದು ಬಿಟ್ಟ ಅಮ್ಮ , ಅವ್ರು ಬಂದು ಹೋಗೋವರ್ಗೂ ಅದನ್ನ ಬಾಯಿಗಿಟ್ಟೆ ಕೈ ಮುರೀತೀನಿ ಅಂತ ಬೆದರಿಸಿದ್ರು. ‘ಅಮ್ಮೌ ಬರೋರಿಗೇನು ಮಡಿ ಬಟ್ಟೆ ಉಟ್ಟು ನೇವೇದ್ಯ ಮಾಡ್ತೀಯ? ಮೊದಲು ನನಗೆ ಕೊಡು, ಆಮೇಲೆ ಉಪ್ಪು ಖಾರ ಹೆಚ್ಚುಕಡಿಮೆ ಇದ್ರೆ ನಿನ್ನ ತಪ್ಪಿಂದ ನನ್ನ ಒಪ್ಪದೆ ಹೋದಾರು’ ಅಂತ ಅಮ್ಮನ್ನ ರೈಲತ್ತಿಸಿ, ಹಾಗೂ ಹೀಗೂ ಬೋಂಡಾ ಜಾಮೂನಿನ ರುಚಿ ನೋಡಿ ಸೇಡು ತೀರಿಸಿಕೊಂಡೆ.

ಬಂದ್ರೂ ಬಂದ್ರೂ ಕಡೇಗೂ 12 ಗಂಟೆ ಅಂತ ಹೇಳಿ 2 ಗಂಟೆಗೆ ಗಂಡು, ಗಂಡಿನ ಚೇಲಾಗಳೆಲ್ಲ ಬಂದ್ರು. ಕಾಯ್ಸಿದಷ್ಟೂ ಹೊತ್ತು ಒಂದು ನಿಮಿಷವೂ ತಪ್ಪಿಸದೇ ಅವ್ರನ್ನೆಲ್ಲ ಬೈದುಕೊಳ್ಳತ್ತಲೇ ಇದ್ದೆ! ಆಹಾ, ಆ ಗಂಡು ನೋಡೋಕೆ ಎರಡು ಕಣ್ಣು ಸಾಲದು! ಇವನ ಫೋಟೋ ಹಿಡಿದ ಆ ಫೋಟೋಗ್ರಾಫರ್ ನಿಜಕ್ಕೂ ಕಲಾವಿದ ಕಣ್ರೀ, ಇವನ ಅಸಲು ರೂಪ ಚೂರು ರಿಫ್ಲೆಕ್ಟ್ ಆಗದಂಗೆ ಎಷ್ಟು ಚೆನ್ನಾಗಿ ಹಿಡ್ದಿದ್ದಾನೆ (ಫೋಟೋನ) ಅನ್ಕೊಂಡೆ. ಅವನ ಕಣ್ಣು ಮೂಗಂತೂ ಬಿಡಿ ಹೋಲಿಕೆಗೆ ಸಿಗದಂತವು. ನಾನಿಲ್ಲಿ ಅಮೀರ್ ಖಾನ್, ಶಾರೂಕ್ ಖಾನರ ಸಿಕ್ಸ್ ಪ್ಯಾಕುಗಳ ಕನಸು ಕಾಣ್ತಿದ್ರೆ, ಈ ‘ಗಂಡು’ ಗುಂಡಗಿರೋ ಸ್ಟೀಲ್ ಬಿಂದಿಗೆಗೆ ಗಿಫ್ಟ್ ಪ್ಯಾಕ್ ಮಾಡಿದಂಗೆ ಇಷ್ಟು ದಪ್ಪದ ಹೊಟ್ಟೆ ಮೇಲೆ ಕಲರ್ ಕಲರ್ ಶರ್ಟು ಹಾಕ್ಕೊಂಡು, ಕನ್ನಡ ಫಿಲ್ಮ್ ಕಾಮೇಡಿಯನ್ ಗಳ ಜೊತೆ ಕಾಂಪೀಟ್ ಮಾಡೋ ಹಾಗಿದ್ದ. ಅಮ್ಮನ್ನ ಒಂದು ಸಲ ಗುರಾಯಿಸಿಕೊಂಡು ನೋಡಿದೆ. ತಮಗೇನು ಗೊತ್ತಿಲ್ಲದ ಹಾಗೆ ಓಡಾಡುತ್ತಿದ್ದರು. ಆ ‘ಗಂಡನ್ನ’ ನೋಡಿಯೂ ಅಮ್ಮನ ಉತ್ಸಾಹ ಕಡಿಮೆಯಾದಂತಿರಲಿಲ್ಲ. ಉಪಚಾರ ಮಾಡುತ್ತಲೇ ಹೋದರು. ಮೊದಲೇ ಕೋಪಗೊಂಡಿದ್ದ ನನಗೆ, ಅವರಿಗೆಲ್ಲ ಹೋಟೇಲ್ ಸರ್ವೆಂಟ್ ನಂತೆ ಅಮ್ಮ ಜಾಮೂನು ಬೋಂಡಾ ಕೊಡಲು ಹೇಳಿದಾಗ ನಿಜಕ್ಕೂ ರೇಗಿತು. ಮನೆಗೆ ಬಂದವರಿಗೆ ಅವಮಾನ ಮಾಡಬಾರದು, ನೀನು ಈ ಹುಡುಗನ್ನ ಮದ್ವೆಯಾಗೋದೇನು ಬೇಡ, ದಯವಿಟ್ಟು ಮರ್ಯಾದೆ ಕಳೀಬೇಡ ಕೊಡಮ್ಮ ಮಗಳೇ ಅಂತ ಅಮ್ಮ ಗೋಗರೆದ ಮೇಲೆ ಕೊಡಲು ಒಪ್ಪಿದ್ದು (ಇಲ್ಲ ಅಂದ್ರೆ ಅವರಿಗೆ ತಲುಪುವಷ್ಟರಲ್ಲಿ ನಾನೇ ಮುಗಿಸಿರುತ್ತಿದ್ದೆ).

‘ಸುಖವಾಗಿ ಬೆಳೆದು ಈಗ ಮದ್ವೆ ಮಾಡ್ಕೊಂಡು ಕಷ್ಟ ಪಡಬೇಕಿದೆ ಪಾಪ!’ ಅಕ್ಕ ಅಡಿಗೆಮನೆಯಲ್ಲಿ ಅಮ್ಮನ ಕಿವಿಯಲ್ಲಿ ಮೆಲ್ಲನಂದಳು, ‘ನೋಡೇ ಅಕ್ಕಾ! ನನ್ನ ನೋಡಿದ್ರೆ ಯಾರಿಗೂ ಅಯ್ಯೋ ಅನ್ಸೋದೆ ಇಲ್ಲ ಇಲ್ಲಿ!’ ಅಳುಮುಖ ಮಾಡಿ ನಾನು ದನಿಗೂಡಿಸಿದೆ, ‘ಅಯ್ಯೋ ನಿನಗಲ್ವೇ, ನಾನು ಹೇಳಿದ್ದು ಆ ಗಂಡಿಗೆ, ನೋಡು ಅಮ್ಮ ಮಾಡಿ ಹಾಕ್ತಾರೆ, ತಿಂದು, ಸುಖವಾಗಿ ಗುಂಡು ಗುಂಡಕ್ಕೆ ಹೇಗೆ ಬೆಳೆದಿದ್ದಾನೆ, ನಿನ್ನ ಮದ್ವೆ ಮಾಡ್ಕೊಳೋಕೆ ಪಾಪ ಅದ್ಯಾವ ಜನುಮದಲ್ಲಿ ಕರ್ಮ ಮಾಡಿದಾನೋ!’ ಎಂದು ಮುಸಿ ಮುಸಿ ನಕ್ಕಳು. ‘ಹ್ಞೂಂ, ಎಲ್ಲಾರು ಉದ್ದಕ್ಕೆ ಬೆಳೆದ್ರೆ ಇವನು ಅಡ್ಡಡ್ಡಕ್ಕೆ ಬೆಳೆದಿದ್ದಾನೆ, ಹೋಗೇ ನಿನಗೆ ತಮಾಶೆ ನನ್ನ ಜೀವ ಹೋಗ್ತಿದ್ರೆ ಇಲ್ಲಿ’ ಅಂತ ಗೊಣಗಿ ಸುಮ್ಮನಾದೆ.

ಅಂತೂ ‘ಗಂಡು’ ಮತ್ತವನ ಚೇಲಾಗಳ ನಿರ್ಗಮನವಾಯಿತು. ಬೋಂಡಾ ಜಾಮೂನು ಖರ್ಚಾಗಿದ್ದು ಬಿಟ್ರೆ ಇನ್ನೇನು ಪ್ರಯೋಜನವಾಗಲಿಲ್ಲ. ನನಗೆ ಒಂದೂ ಉಳಿಯದೆ ಎಲ್ಲಾ ಖಾಲಿಯಾಗಿತ್ತು ಅನ್ನೋದೊಂದು ನಿರಾಶೆ ಬಿಟ್ಟರೆ ಮತ್ತೇನು ಹೆಚ್ಚು ಬೇಜಾರಾಗಲಿಲ್ಲ. ಖುಷಿಯಿಂದ ಪುಟಿಯುತ್ತಿದ್ದ ಅಮ್ಮನಿಗೂ ’ಗಂಡಿನ’ ದರ್ಶನದಿಂದ ಬೇಜಾರಾಗಿತ್ತು.
‘ಅಯ್ಯೋ ಕೆಲಸ ಮಾಡೋಕೆ ನನ್ ಮಗಳು ಮನೇಲಿದ್ರೆ ತಾನೇ! ಇಷ್ಟು ವಯಸ್ಸಾದ್ರೂ ನಾನೇ ಎಲ್ಲ ಮಾಡ್ಬೇಕು, ಮಕ್ಕಳ ಕೈಲಿ ಸೇವೆ ಮಾಡಿಸ್ಕೊಳ್ಳೋಕು ಪುಣ್ಯ ಮಾಡಿರ್ಬೇಕು ಬಿಡಿ…………!’ ಮಾರನೇ ದಿನ ಅಮ್ಮ ಫೋನಿನಲ್ಲಿ ಮಾತಾಡುತ್ತಲೆ ಇದ್ದರು, ನಾನು ನಗುತ್ತಾ ಆಫೀಸಿನ ದಾರಿ ಹಿಡಿದೆ.

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

29 ಜನ

 

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಗರವನ್ನು ಕಂಡು ಸಾಮ್ರಾಟರು ಹರ್ಷೋದ್ಘಾರದಿಂದ ಕಂಬನಿ ಮಿಡಿದರು. ವೇದಿಕೆಯ ಮೇಲಿನ ಗಣ್ಯರೇ ಹೀಗೆ ಕಂಬನಿ ಮಿಡಿದದ್ದನ್ನು ಕಂಡು ಗೊಂದಲಕ್ಕೊಳಗಾದ ಮಹಾಜನತೆಯು ತಾವೂ ಎರಡು ಸೆಕಂಡು ಮೌನವನ್ನಾಚರಿಸಿ, ತಲೆ ತಗ್ಗಿಸಿ, ಕಷ್ಟ ಪಟ್ಟು ಎರಡು ಹನಿ ಕಣ್ಣೀರು ಹರಿಸಿದರು. ಸಾಮ್ರಾಟರು ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೋ, ಶ್ರೀಮಂತರ ಕಾರುಗಳಿಗೆ ರಕ್ತ ತರ್ಪಣ ಅರ್ಪಿಸಿದವರಿಗೋ, ದರೋಡೆಕೋರರಿಂದ ಬದುಕುವ ಹಕ್ಕನ್ನು ಕಳೆದುಕೊಂಡವರಿಗೋ ಗೌರವ ಸೂಚಿಸುವುದಕ್ಕಾಗಿ ಕಂಬನಿ ಮಿಡಿದಿದ್ದಾರೆ ಎಂದು ತಿಳಿದಿತ್ತು ಜನತೆ. ಆದರೆ ಸಾಮ್ರಾಟರನ್ನು ಪಕ್ಕಕ್ಕೆಳೆದ ಕುಚೇಲ ಅವರ ಕಣ್ಣಲ್ಲಿ ಬಿದ್ದಿದ್ದ ಧೂಳನ್ನು ಊದಿ ತೆಗೆದು ಅವರ ಹರ್ಷೋದ್ಘಾರದ ಕಣ್ಣೀರ ಧಾರೆಯನ್ನು ಬಂದ್ ಮಾಡಿದ. ಆದರೆ ಮಹಾ ಜನತೆ ಮಾತ್ರ ತಮ್ಮ ಮಾನಸ ಮಂದಿರದಲ್ಲಿ ಪ್ರತಿಷ್ಠಾಪಿಸಿದ ನಗೆ ಸಾಮ್ರಾಟರ ಕಣ್ಣೀರಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ಧಟತನಕ್ಕೆ ಕೈ ಹಾಕಲಿಲ್ಲ. enews_party_hat

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

– ನಗೆ ಸಾಮ್ರಾಟ್

ಆಂಡ್ ದಿ ವಿನ್ನರ್ ಈಸ್…

28 ಜನ

 

ನಗೆ ನಗಾರಿ ಡಾಟ್ ಕಾಮ್‌ನ ಮೊದಲನೇ ವರ್ಷದ ಹುಟ್ಟುಹಬ್ಬ ಭಾರಿ ಸಂಭ್ರಮ, ಸಡಗರದಿಂದ ನಡೆಯಿತು. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಎಲ್ಲರೂ ಸಾಮ್ರಾಟರ ಪ್ರತಿಭೆಯನ್ನು ಹಾಡಿ ಹೊಗಳಿ ಅವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದ ನಂತರ ಆಯೋಜಿಸಲಾಗಿದ್ದ ಭೂರಿ ಭೋಜನವನ್ನು ಸಾಂಗವಾಗಿ ಪೂರೈಸಿದ ಗಣ್ಯರು ಅಡುಗೆ ಭಟ್ಟನಾಗಿದ್ದ ಕುಚೇಲನನ್ನೂ ಹೊಗಳಿದ್ದು ಸಾಮ್ರಾಟರನ್ನು ಕೆರಳಿಸಿತು. ಕಾರ್ಯಕ್ರಮದ ಬಗ್ಗೆ ನಮ್ಮ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪನವರು ಸವಿವರವಾದ ವರದಿಯನ್ನು ನೀಡಲಿದ್ದಾರೆ. ನಾವು ಈಗ ನಮ್ಮ ಸ್ಪರ್ಧೆಗಳ ವಿಜೇತರನ್ನು ಘೋಷಿಸಲಿದ್ದೇವೆ…

ಮೊದಲ ಬಹುಮಾನ

    ಸುಮಂತ ಶ್ಯಾನುಭಾಗ್ ವಿ a8b16d3e86eadc69a51d78a122c66dd4

ಜವಾಹರ್ ಲಾಲ್ ಮೋಜುಗಾರ ಯೋಜನೆ

ಸುಟ್ಟಾ ಬಾಯೊಳಗಿರಲು ಪಟ್ಟದಲಿ ಕೂತಿರಲು
ಮೌಂಟ ಬ್ಯಾಟನನ ಪತ್ನಿ ಬದಿಗಿರಲು
ಸಿಗರೇಟಿಗೆ ಕಿಚ್ಚು ಹಚ್ಚೆಂದ –ಜವಾಹರ

ಎರಡನೆಯ ಬಹುಮಾನ

    ಹೇಮಾ ಪವಾರ್96e77817e277fabb383026ac478b4448

ಮೋಡಗಳು ತೇಲುತಿವೆ ಆಕಾಶದಲ್ಲಿ,
ಕನಸಿನಲ್ಲಿ ಮುಳುಗಿದೆ ಲೊಕವಿಡೀ,
ದೇಶಕ್ಕೋ ಸ್ವಾತಂತ್ರ್ಯದ ಹುಚ್ಚು,
ಗಾಂಧೀಜಿಗೆ ಉಪವಾಸ ಅಚ್ಚುಮೆಚ್ಚು,
ನೀ ತಲೆಕೆಡಿಸಿಕೊಳ್ಳಬೇಡ, ಸಿಮೋನ್ ಳ ಸಿಗರೇಟಿಗೆ ಬೆಂಕಿ ಹಚ್ಚು!!!

ಮೂರನೆಯ ಬಹುಮಾನ

      ಕೆ.ಎ.ಭಟ್ 4e696b4158f090a9705f17ba61ba649d

ಸಿಗರೇಟ್ ಸೇದಲು ಆಸೆಯೆ ನಿನಗೆ
ಕಲಿಸುವೆ ನಾನು ಬಾ ಬಳಿಗೆ.

ಕಲಿಸುವ Coach ನಾನಿರಲು ಸಂಕೋಚವ ಬಿಡು ನೀನು
ಹ್ಹಾ ಸೇದು, ಏನಾಗದು ನೋಡು ಜೊತೆ ಇರುವೆನು ನಾನು.

 

ಸಮಾಧಾನಕರ ಬಹುಮಾನಗಳು:

ಸುಂದರನಾಡು    93e42269f5d464b0748141ef88011861

”ಹಚ್ಚಿಕೊಳ್ಳಮ್ಮಬೇಗ ಗಾಂಧೀಜಿ ಬಂದ್ರೆ ನಮ್ಮನ್ನ ಸುಟ್ಟಾಕ್ತಾರೆ. ಆ ಸ್ವಾಮಿ ಸಿಗರೇಟ್ ಕಂಡ್ರೆ ಉರಿತಾರೆ.”

ಪ್ರಸಾದ್aeb8ee73e9dffd8a9cb2aa01a1d98a44

“ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ನಾವು ನಿರ್ಧಾರ ಮಾಡಬೇಕಿದೆ. ಒಂದು ಕೈ ನೋಡಿಬಿಡೋಣ, ಅಲ್ವೇ ????”

 

ತಮ್ಮ ಪ್ರತಿಕ್ರಿಯೆಗಳ ಜೊತೆಗೆ ಇ-ಮೇಲ್ ವಿಳಾಸವನ್ನು ನೀಡಿದವರಿಗೆ ಮಾತ್ರ ಬಹುಮಾನಗಳನ್ನು ಕಳುಹಿಸಿಕೊಡಲಾಗುವುದು. ಇ-ಮೇಲ್ ವಿಳಾಸ ನೀಡದಿದ್ದವರು ತಪ್ಪೊಪ್ಪಿಗೆ ಪತ್ರದ ಜೊತೆಗೆ ಸಾಮ್ರಾಟರಿಗೆ ಒಂದು ಪತ್ರ ಬರೆಯ ತಕ್ಕದ್ದು!!

 

(‘ಜೋಕು’ಮಾರ ಸ್ಪರ್ಧೆಯಲ್ಲಿ ಯಾವ ವೀರರೂ ಭಾಗವಹಿಸದ ಕಾರಣ ಆ ಬಹುಮಾನಗಳೆಲ್ಲವನ್ನೂ ಸಾಮ್ರಾಟರು ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಹಾಗೂ ಪ್ರಪಂಚಕ್ಕೊಬ್ಬನೇ ‘ಜೋಕು’ಮಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ)

** (ಬಹುಮಾನಗಳ ಬಗ್ಗೆ ತಕರಾರು ಇರುವವರು ಮೈರ್ಲೇಸರಪುರ ಕೋರ್ಟಿನ ವ್ಯಾಪ್ತಿಯಲ್ಲಿ ಮಾತ್ರ ಮೊಕದ್ದಮೆ ಹೂಡತಕ್ಕದ್ದು. ಬೇರೆಡೆ ಕೇಸು ಹಾಕಿಕೊಂಡು ಕೂತರೆ ಅದಕ್ಕೆ ನಾವು ಜವಾಬ್ದಾರರಲ್ಲ!)

ನಗೆ ಉಕ್ಕಿಸುತ್ತವೆ ಚಿತ್ರಗಳು

25 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಈ ಕೆಲಸದ ಮುಂದೆ ನಿಮ್ಮದ್ಯಾವ ಲೆಕ್ಕ ಬಿಡ್ರಿ…

ಮೂರು ದಿನ ರಜೆ!

24 ಜನ

ನಗೆ ನಗಾರಿಯ ಏಕ ಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಕಳೆದ ವರ್ಷ ಜನವರಿ ಇಪ್ಪತ್ನಾಲ್ಕರಿಂದ  ಮುನ್ನೂರ ಅರವತ್ತೈದು ದಿನವೂ ಅವಿರತವಾಗಿ ದುಡಿದಿದ್ದಾರೆ. ತಮ್ಮ ಸುಖ, ದುಃಖಗಳನ್ನು, ಸಂಕಟಗಳನ್ನು ಮರೆತು ನಗೆ ನಗಾರಿಯೆಂಬ ಯಾಗದಲ್ಲಿ ತಮ್ಮ ಸಮಯವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ನಗದವರನ್ನು ನಗಿಸುವ ಯತ್ನದಲ್ಲಿ ದುಡಿದು ದಣಿದಿದ್ದಾರೆ. ಬರುವ ಇಪ್ಪತ್ತೇಳಕ್ಕೆ ನಗೆ ನಗಾರಿ ಡಾಟ್ ಕಾಮಿನ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಲಿದೆ. ಕಾರ್ಯಕ್ರಮ ನಡೆಯುವ ಜಾಗ, ಸಮಯ, ಅದಕ್ಕೆ ಆಹ್ವಾನಿತರಾದವರ ವಿವರ, ಕಾರ್ಯಕ್ರಮದ ರೂಪು ರೇಷೆಗಳೆಲ್ಲ ಗುಪ್ತವಾಗಿಡಲು ಮೇಲಿನವರ ಆದೇಶವಾಗಿದೆ. ಹೀಗಾಗಿ ವಾರ್ಷಿಕೋತ್ಸವದ ಕಾರ್ಯಕ್ರಮ ಮುಗಿಯುವವರೆಗೆ ನಮ್ಮ ಸಿಬ್ಬಂದಿಯನ್ನು ಗೃಹ ಬಂಧನದಲ್ಲಿರಿಸಲಾಗುವುದು. ಇನ್ನು ಮೂರು ದಿನ ನಗೆ ನಗಾರಿಯು ಸದ್ದು ಮಾಡುವುದಿಲ್ಲ. ಇನ್ನು ನಮ್ಮ ನಿಮ್ಮ ಭೇಟಿ ಜನವರಿ ೨೮ರಂದು!

ನಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸಿದವರನ್ನೆಲ್ಲಾ ಅಭಿನಂದಿಸುತ್ತಾ ಜನವರಿ ಇಪ್ಪತ್ತೆಂಟರಂದು ಸ್ಪರ್ಧಗಳ ಫಲಿತಾಂಶಗಳನ್ನು ಜಗಜ್ಜಾಹೀರು ಮಾಡುವುದಾಗಿ ತಿಳಿಸಲು ಇಚ್ಚಿಸುತ್ತೇವೆ. ಅಂದಹಾಗೆ ನಮ್ಮ ವಾರ್ಷಿಕೋತ್ಸವದ ರಹಸ್ಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಸರ್ವರಿಗೂ ಸುಸ್ವಾಗತ!

– ನಗೆ ನಗಾರಿ

ನಮ್ಮ ಸಂಗೀತವಿರುವುದು ಪ್ರಜೆಗಳಿಗಾಗಿ!

24 ಜನ

 

(ನಗೆ ನಗಾರಿ ಪಾಪ್ ಸಂಗೀತ ಬ್ಯೂರೋ)

 

ಸಂಗೀತದ ನಾನಾ ಉಪಯೋಗಗಳ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದರೆ, ಇನ್ನು ಮುಂದೆ ನಮ್ಮ ಹೈಸ್ಕೂಲು, ಪ್ರೈಮರಿ ಸ್ಕೂಲುಗಳ ಮಕ್ಕಳು ತಾವು ಉರು ಹೊಡೆದ ಹತ್ತಾರು ಉಪಯೋಗಗಳ ಜೊತೆಗೆ ಇದನ್ನೂ ಸೇರಿಸಬಹುದು. ಸಂಗೀತದ ಸಾಮಾಜಿಕ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ತಮ್ಮ ಹೆಸರನ್ನು ಒಂದಕ್ಷರ ಉದ್ದ ಮಾಡಿಕೊಳ್ಳಲಿಚ್ಚಿಸುವವರಿಗೆ(‘ಡಾ’ ಸೇರಿಸಿಕೊಂಡು!) ಬಿಸಿ ಬಿಸಿ ವಿಷಯವಾಗಿಯೂ ಇದು ಬಳಕೆಯಾಗಬಲ್ಲದು. ಹಾಗೆ ನೋಡಿದರೆ ಪಾಪ್, ಹಿಪ್ ಹಾಪ್ ಹಾಗೂ ರಾಕ್ ಸಂಗೀತಗಳಿಂದ ಹಾಗೂ ಕೆಲವು ಸ್ವದೇಶಿ ಪ್ರತಿಭೆಗಳ ಶಾಸ್ತ್ರೀಯ ಸಂಗೀತದಿಂದ ಇಷ್ಟು ದಿನ ಲಭ್ಯವಾದ ಅಸಂಖ್ಯಾತ ಲಾಭಗಳನ್ನು, rock-band 4 ಸಮಾಜಕ್ಕೆ ವರವಾಗಿ ಕಂಡ ಬಹುಸಂಖ್ಯಾತ ಸಂದರ್ಭಗಳನ್ನು ಗಮನಿಸಿದರೆ ಪ್ರಸ್ತುತ ಉಪಯೋಗ ಅವೆಲ್ಲವುಗಳಿಗಿಂತ ಅದೆಷ್ಟು ವಿಭಿನ್ನ ಹಾಗೂ ವಿಶಿಷ್ಟ ಎಂಬುದು ತಿಳಿಯುತ್ತದೆ. ಸಂಗೀತವು ಹಿಂದೆಂದೂ ಇಷ್ಟು ಸ್ಪಷ್ಟವಾಗಿ, ಇಷ್ಟು ಪರಿಣಾಮಕಾರಿಯಾಗಿ ಸಮಾಜಕ್ಕೆ ಉಪಯುಕ್ತವಾಗಿರಲಿಲ್ಲ ಎಂದು ನಮ್ಮ ಬ್ಯೂರೋದ ಸಂಶೋಧನಾ ಪಂಡಿತರು ಫತ್ವಾ ಹೊರಡಿಸಿದ್ದಾರೆ.

ಇಪ್ಪತ್ತೊಂದನೆಯ ಶತಮಾನದ ಸ್ಮರಣೀಯ ವೈಜ್ಞಾನಿಕ ಸಾಧನೆಗಳಲ್ಲಿ ಮೊದಲ ಸ್ಥಾನ ಪಡೆಯದಿದ್ದರೂ, ಕನಿಷ್ಠ ಪಕ್ಷ ನೂರರಲ್ಲಿ ಒಂದು ಸ್ಥಾನವನ್ನಾದರೂ ಪಡೆಯುವ ಅರ್ಹತೆಯಿರುವ ಈ ಸಂಗೀತದ ಬಳಕೆಯ ತಂತ್ರಜ್ಞಾನದ ಬಗ್ಗೆ ತಿಳಿಯುವ ಮೊದಲು ಸಂಗೀತ ಹಿಂದೆಲ್ಲಾ ನಮ್ಮ ಸಮಾಜಕ್ಕೆ ಹೇಗೆ ನೆರವಾಗಿದೆ ಎಂಬುದರ ಬಗ್ಗೆ ಒಂದು ನೇರಳೆ ಕಿರಣ ಬೀರುವ ಪ್ರಯತ್ನ ಇಲ್ಲಿದೆ.

‘ಸಂಗೀತದಿಂದ ಆಗುವ ಪ್ರಯೋಜನಗಳೇನು?’ ಎಂದು ಯಾರಾದರೂ ನೇರವಾಗಿ ಪ್ರಾಮಾಣಿಕವಾಗಿ ಪ್ರಶ್ನಿಸಿದರೆ ಅವರಿಗೆ ಅಷ್ಟೇ ಪ್ರಾಮಾಣಿಕತೆಯಿಂದ, ಅಷ್ಟೇ ನೇರವಾಗಿ ಉತ್ತರ ಕೊಡುವುದಕ್ಕೆ ಅಪಾರ ಧೈರ್ಯದ ಅಗತ್ಯವಿರುತ್ತದೆ. ಒಂದು ವೇಳೆ ಧೈರ್ಯದ ದಾಸ್ತಾನು ಕಡಿಮೆಯಿದ್ದರೆ ಹೆಡ್ಡತನದ ಸರಕಾದರೂ ತಕ್ಕಮಟ್ಟಿಗೆ ಇರಬೇಕಾಗುತ್ತದೆ. ನಗೆ ನಗಾರಿಯಲ್ಲಿ ಎರಡನೆಯದಕ್ಕೆ ಯಾವ ಕೊರತೆಯೂ ಇಲ್ಲ. ಹೀಗಾಗಿ ನಾವು ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಉತ್ತರಿಸಬಹುದು.

ಸಂಗೀತದಿಂದ ಇರುವ ಉಪಯೋಗಗಳ ಬಗ್ಗೆ ಇದುವರೆಗೂ ಬೃಹತ್ ಗ್ರಂಥಗಳನ್ನೆಲ್ಲ ರಚಿಸಿರುವ ಮಹಾನುಭಾವರೆಲ್ಲ ಮರೆತ ಸತ್ಯವೊಂದಿದೆ. ಅದೆಂದರೆ: ಸಂಗೀತದಿಂದ ಸಂಗೀತಗಾರರಿಗೆ ಉಪಯೋಗವಿದೆ! ಹೌದು, ಸಂಗೀತ ಕಲಿತವನಿಗೆ ಸಮಾಜದಲ್ಲಿ ಸಿಕ್ಕುವ ಮನ್ನಣೆ, ಹಣಕಾಸು, ಸ್ಥಾನಮಾನ, ಅಕಾಡೆಮಿಗಳ ಪದವಿ, ಗೌರವ ಡಾಕ್ಟರೇಟು ಮುಂತಾದುವೆಲ್ಲಾ ಒಂದು ತೂಕದ್ದಾದರೆ ಸಂಗೀತ ಸದಾಕಾಲ ಸಂಗೀತಗಾರನ ಕೈಲಿ ಅಸ್ತ್ರದ ಹಾಗೆ ಶೋಭಿಸಿ ಆತನನ್ನು ಪೊರೆಯುತ್ತದೆ ಎಂಬುದು ಬಹುಮುಖ್ಯ ಉಪಯೋಗ. ಜಗತ್ತಿನಲ್ಲಿರಬಹುದಾದ ಅತಿ ಭಯಾನಕ ಹಾಗೂ ಅತಿ ಪರಿಣಾಮಕಾರಿಯಾದ ಎರಡು ಬೆದರಿಕೆಗಳೆಂದರೆ, ‘ನನ್ನ ಕವನ ಓದಲೇ?’ ಎಂಬುದು ಹಾಗೂ ‘ನನ್ನ ಸಂಗೀತ ಕೇಳ್ತೀರಾ?’ ಎಂಬುದು. ಕೆಲವರು ಸರಸ್ವತಿಯನ್ನು ಒಲಿಸಿಕೊಂಡು ಸಂಗೀತವನ್ನು ಬಳಸಿಕೊಂಡು ರಸಿಕರ ಮನಸ್ಸನ್ನು ರಂಜಿಸಿದರೆ ಹಲವರು ಸಂಗೀತವನ್ನು ಬಳಸಿ ಮನುಕುಲದ ಕಷ್ಟದ ಪರಂಪರೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಲವರು ಸಂಗೀತದಿಂದ ಸ್ವರ್ಗವನ್ನೇ ಭೂಲೋಕಕ್ಕೆ ಎಳೆದು ತಂದರೆ ಹಲವರು ತಮ್ಮ ಸಂಗೀತ ಪ್ರತಿಭೆಯಿಂದ ಭೂಲೋಕವನ್ನೇ ನರಕಕ್ಕೆ ತಳ್ಳುತ್ತಿದ್ದಾರೆ. ಆದರೆ ಇಬ್ಬರಿಗೂ ತಮ್ಮ ಸಾಧನೆಗೆ ಸಂಗೀತ ಆವಶ್ಯಕ.

ಸಂಗೀತದಿಂದ ಮನೆ ಕೆಡುವುದು ತಪ್ಪುತ್ತಿದೆ. ತೂತು ಒಲೆ ಕೆಡಿಸಿತು, ಮಾತು ಮನೆ ಕೆಡಿಸಿತು ಎಂಬ ಗಾದೆ ಮಾತು ನಮ್ಮ ಕಡೆ ಭಾರಿ ಫೇಮಸ್ಸು. ಈ ಎರಡನೆಯ ಘನ ಕಾರ್ಯಕ್ಕೆ ನಮ್ಮ ಟಿವಿ ಚಾನೆಲ್ಲಿನ ಧಾರಾವಾಹಿಗಳು ಕೈಲಾದಷ್ಟು ನೆರವನ್ನು ನೀಡುತ್ತಿವೆ. ಆದರೆ ಈ ಘನಕಾರ್ಯಕ್ಕೆ ಕಂಟಕವಾಗಿರುವುದು ಸಂಗೀತ! ಹೌದು, ಸಂಗೀತ ಮನೆಗಳನ್ನು ಉಳಿಸುತ್ತಿದೆ. ಹೇಗೆನ್ನುತ್ತೀರಾ? ಒಂದು ಮನೆಯ ವಾರ್ತಯೆನ್ನು ಇನ್ನೊಂದು ಮನೆಗೆ ಹಬ್ಬಿಸಿ ಗಬ್ಬೆಬ್ಬಿಸುವ ಸಾಧನೆಯ ಕ್ರೆಡಿಟ್ಟು ಹೆಂಗಸರಿಗೆ ಸಲ್ಲಬೇಕು ಎಂಬುದನ್ನು ಎಲ್ಲಾ ಚಿಲ್ಲರೆ ಸಂಶೋಧಕರೂ ಒಪ್ಪುತ್ತಾರೆ. ಆದರೆ ಹೆಚ್ಚೆಚ್ಚು ಮಂದಿ ಮಹಿಳೆಯರು ಸಂಗೀತಾಭ್ಯಾಸ ಶುರು ಮಾಡಿದರೆ, ಅವರ ಬಾಯನ್ನು ಸಂಗೀತ ಆಕ್ರಮಿಸಿಕೊಂಡಿರುತ್ತಾದ್ದರಿಂದ ಗಾಸಿಪ್ಪಿಗೆ ಜಾಗ ಸಿಕ್ಕುವುದಿಲ್ಲ. ಇದರಿಂದ ಎಷ್ಟೋ ಮನೆಗಳು ನೆಮ್ಮದಿಯಿಂದಿರುತ್ತವೆ. ಮನೆಗಳು ನೆಮ್ಮದಿಯಿಂದಿದ್ದರೆ ಸಮಾಜವೂ ನೆಮ್ಮದಿಯಿಂದಿರುತ್ತದೆ. ಆದರೆ ಇದರಲ್ಲಿ ಒಂದು ತೊಡಕಿದೆ, ಸಂಗೀತಾಭ್ಯಾಸಿಗಳು ಹೆಚ್ಚಾದಷ್ಟೂ ಶಬ್ಧ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತದೆ!

ಸಂಗೀತ ರೋಗವನ್ನು ಗುಣ ಮಾಡುತ್ತದೆ, ಸಂಗೀತವನ್ನು ಕೇಳಿದ ಗಿಡಗಳು ಹೆಚ್ಚು ಎತ್ತರ ಬೆಳೆಯುತ್ತವೆ, ಸಂಗೀತವನ್ನು ಕೇಳುತ್ತಿದ್ದರೆ ಹಸು ಹೆಚ್ಚು ಹಾಲು ಕೊಡುತ್ತದೆ, ಸಂಗೀತದಿಂದ ಮಳೆ ಬರುತ್ತದೆ, ಸಂಗೀತದಿಂದ ಕಲ್ಲು ಬಂಡೆ ತೇಲುತ್ತದೆ, ಸಂಗೀತದಿಂದ ಕ್ರೂರ ಪ್ರಾಣಿಗಳು ಮೈಮರೆಯುತ್ತವೆ, ಸಂಗೀತಕ್ಕೆ ಹಾವು ತಲೆದೂಗುತ್ತದೆ ಎಂದೆಲ್ಲಾ ಹಲವರು ಭಾಷಣಗಳನ್ನು ಚಚ್ಚುತ್ತಿದ್ದರೂ ಇವಕ್ಕೆ ತಕ್ಕ ಮಟ್ಟಿಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ನಾವು ಹೇಳುತ್ತೇವೆ ಎಂದ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ವ್ಯಾಪಕ ಸಾಕ್ಷಿಗಳು ಲಭ್ಯವಾಗಿವೆ. ಅಮೇರಿಕಾ ತನ್ನ ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಬಂಧಿಸಿದ ಆರೋಪಿಗಳಿಂದ ಸತ್ಯವನ್ನು ಬಾಯ್ಬಿಡಿಸಲು ಅನೇಕಾನೇಕ ಪದ್ಧತಿಗಳನ್ನು ಬಳಸಿಕೊಳ್ಳುತ್ತದೆ. ಆದರೆ ಒಂದು ಪದ್ಧತಿ ಮಾತ್ರ ಅವರ ಅಪಾರ ವಿಶ್ವಾಸವನ್ನು ಗಳಿಸಿಕೊಂಡಿದೆ. ಅದೆಂದರೆ, ಅಮೇರಿಕಾದ ಪಾಪ್, ರಾಕ್, ಹಿಪ್ ಹಾಪ್ ಗಾಯಕರ ಆಲ್ಬಮುಗಳನ್ನು ಆರೋಪಿಗಳಿಗೆ ಕೇಳಿಸುವುದು! ಆ ಸಂಗೀತದ ವೈಭವವನ್ನು ಕೇಳಲಾಗದೆ ಆರೋಪಿಗಳು ಸತ್ಯವನ್ನು ಬಾಯ್ಬಿಡಬೇಕು!

ತಮ್ಮ ಸಂಗೀತ ದೇಶದ ರಕ್ಷಣೆಗೆ ಬಳಕೆಗೆ ಬರುತ್ತಿರುವುದನ್ನು ಕಂಡು ಹೆಮ್ಮೆ ಪಡಬೇಕಾದ ಸಂಗೀತ ವಿಶಾರದರು ಕುಪಿತರಾಗಿದ್ದಾರಂತೆ! ತಮ್ಮ ಸಂಗೀತವನ್ನು ಅಪರಾಧಿಗಳಿಗೆ ಟಾರ್ಚರ್ ನೀಡಲು ಬಳಸಬಾರದು. ಅವುಗಳಿರುವುದು ದೇಶದ ಪ್ರಜೆಗಳಿಗೆ ಮಾತ್ರ ಎಂದಿದ್ದಾರಂತೆ!

ಚರ್ಚೆ: ಹಾಸ್ಯ v/s ಗಾಂಭೀರ್ಯ

23 ಜನ

ಬರವಣಿಗೆಯಲ್ಲಿ ಹಾಸ್ಯಮಯವಾದ ಶೈಲಿ, ಸಿನೆಮಾಗಳಲ್ಲಿ ವಿಡಂಬನೆಯ ನಿರೂಪಣೆ ಹೇಳಬೇಕಾದ ವಿಷಯದ ಗಾಂಭೀರ್ಯವನ್ನು ಕೆಡಿಸುತ್ತವೆ ಆ ಮೂಲಕ ಅವುಗಳು ಬೀರಬೇಕಾದ ಪರಿಣಾಮ ಬೀರುವಲ್ಲಿ ವಿಫಲವಾಗುತ್ತವೆ ಎಂಬುದು ಹಲವರ ಆರೋಪ. ಗಂಭೀರವಾದ ವಿಚಾರವನ್ನು ಅಷ್ಟೇ ಒಣಗಾಂಭೀರ್ಯದಲ್ಲಿ ಮಂಡಿಸಿದಾಗಲೇ ಅದು ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಹಾಸ್ಯ ಓದುಗರ ಇಲ್ಲವೇ ನೋಡುಗರ ಗಮನವನ್ನು ವಿಷಯದಿಂದ ಪಲ್ಲಟಗೊಳ್ಳುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ಆದರೆ ತಮ್ಮ ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅವರಿಗೇ ವಿಶಿಷ್ಟವಾದ ಹಾಸ್ಯಾತ್ಮಕವಾದ ಶೈಲಿಯನ್ನು ಬೆಳೆಸಿ ಹೆಸರಾದ ಮಲಯಾಳಿ ಲೇಖಕ ವೈಕಂ ಮಹಮದ್ ಬಶೀರ್ ಅಭಿಪ್ರಾಯ ಬೇರೆ ತೆರನಾದದ್ದು:

‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿ ಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿ ಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳ ಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’ ಎಂದರು.

ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ಎಂದೆ. ‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.

‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಂಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

ನಿಮಗೇನನ್ನಿಸುತ್ತೆ? ವಿಷಯದ ನಿರೂಪಣೆಯಲ್ಲಿ ಹದವಾದ ಹಾಸ್ಯ ಬೆರೆತರೆ, ಸಹಜವಾದ ವಿಡಂಬನೆ ಕಲೆತರೆ ಅದು ಬೀರುವ ಪರಿಣಾಮ ಗಾಢವಾಗುತ್ತದೆಯೇ? ಯಾವುದಾದಾರೂ ಪುಸ್ತಕವನ್ನು ಓದುವಾಗ, ಸಿನೆಮಾ ನೋಡುವಾಗ ನಿಮಗೆ ಈ ಅನುಭವವಾಗಿದೆಯೇ?

ನಗೆ ನಗಾರಿ ರೆಕಮಂಡೇಶನ್ 16

22 ಜನ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

…………………………………….

ರಾಜಕೀಯ ವಿಡಂಬನೆ ಎನ್ನುವುದು ಮಾಧ್ಯಮ ರಂಗದ ಮೊನಚಾದ ಅಸ್ತ್ರ. ನಾಡನ್ನು ಆಳುವವರನ್ನು ಚುಚ್ಚುವ ಸೂಕ್ತವಾದ ಸೂಜಿ. ತಪ್ಪು ಮಾಡಿದವರನ್ನು ಗೇಲಿ colbertಮಾಡುವುದು, ಅವರ ಅಪರಾಧಕ್ಕಾಗಿ ಬೆಲೆ ತೆರೆವಂತೆ ಮಾಡುವುದು ಸಹ ಅತ್ಯಂತ ಜವಾಬ್ದಾರಿಯುತ ಪತ್ರಿಕೋದ್ಯಮವೇ. ಕನ್ನಡದ ಪತ್ರಿಕೆಗಳಲ್ಲಿ ರಾಜಕೀಯ ವಿಡಂಬನೆಗೆ ಕೊರತೆಯಿಲ್ಲ. ಪ್ರತಿದಿನ ತಪ್ಪದೆ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಆಳುವವರನ್ನು, ಅವರ ನೀತಿಗಳನ್ನು, ವರ್ತನೆಗಳನ್ನು ಲೇವಡಿ ಮಾಡುವುದನ್ನು ನಾವು ಕಾಣುತ್ತೇವೆ. ಟೈಮ್ಸಾಫಿಂಡಿಯಾದ ಟ್ರೇಡ್ ಮಾರ್ಕ್ ಆದ ಆರ್.ಕೆ.ಲಕ್ಷ್ಮಣ್ ಕಾರ್ಟೂನುಗಳಿಂದ ಹಿಡಿದು ಪ್ರಜಾವಾಣಿಯ ಮಹಮ್ಮದ್‌ರ ಕಾರ್ಟೂನುಗಳವರೆಗೆ ನಮ್ಮ ನಾಡಿನ ರಾಜಕೀಯವನ್ನು ಸೀಳಿ ನೋಡುವ, ಹುಳುಕನ್ನು ಬಯಲು ಮಾಡುವ ಹುಮ್ಮಸ್ಸು ಕಾಣುತ್ತದೆ.

colbert-reportಆದರೆ ಟಿವಿ ಮಾಧ್ಯಮದಲ್ಲಿ ಈ ಶೈಲಿಯನ್ನು ಸಮರ್ಪಕವಾಗಿ ಬಳಸಿಕೊಂಡ ಉದಾಹರಣೆಗಳು ನಮಗೆ ಕಾಣುವುದಿಲ್ಲ. ಅಗ್ಗದ ಮಿಮಿಕ್ರಿಯನ್ನೇ ರಾಜಕೀಯ ವಿಡಂಬನೆ ಎಂದು ತಿಳಿದು ಹಾಸ್ಯವನ್ನು ಒದಗಿಸುವವರೇ ಹಾಸ್ಯಾಸ್ಪದರಾಗುತ್ತಿರುವುದು ನಿಜಕ್ಕೂ ಒಳ್ಳೆಯ ಜೋಕು! ಹಾಗಾದರೆ ರಾಜಕೀಯ ವಿಡಂಬನೆಯನ್ನು ಟಿವಿ ಮಾಧ್ಯಮದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವುದು ಎಂದರೆ ಹೇಗೆ ಎಂಬುದಕ್ಕೆ ಒಂದು ಉದಾಹರಣೆ ಕೊಡಬೇಕಲ್ಲವೇ?

ಈತ ಸ್ಟೀಫನ್ ಟೈರನ್ ಕೋಲ್ಬರ್ಟ್ (Stephen Tyrone Colbert ), ತನ್ನ ಹೆಸರನ್ನು ಕೋಲ್ಬರ್ಟ್ ಎನ್ನಬೇಡಿ, ಕೋಲ್‌ಬೇರ್ ಎನ್ನಿ ಎಂದು ಹೇಳುವ ಈತ ‘ದಿ ಕೊಲ್‌ಬೇರ್ ರಿಪೋರ್ಟ್’ ಎಂಬ ಟಿವಿ ಕಾರ್ಯಕ್ರಮವನ್ನು ಕಾಮಿಡಿ ಸೆಂಟ್ರಲ್ ಟಿವಿ ವಾಹಿನಿಗೆ ಕಳೆದ ಮೂರು ವರ್ಷಗಳಿಂದ ನಡೆಸಿ ಕೊಡುತ್ತಿದ್ದಾನೆ. ಈತ ಕಾರ್ಯಕ್ರಮ ಕೇವಲ ಅರ್ಧ ಗಂಟೆಯದಾದರೂ ಅದು ವಿಶಿಷ್ಟವಾಗಿರುತ್ತದೆ, ವೈವಿಧ್ಯಮಯವಾಗಿರುತ್ತದೆ. ಪ್ರತಿ ಕಾರ್ಯಕ್ರಮದಲ್ಲಿ ಒಬ್ಬ ಅತಿಥಿಯನ್ನು ಸಂದರ್ಶಿಸಲಾಗುತ್ತದೆ. ಈತನ ನಿರೂಪಣೆಯಲ್ಲೂ ವಿಶಿಷ್ಟತೆ ಇದೆ. ಅಮೇರಿಕಾದಲ್ಲಿ ತನ್ನ ಪೂರ್ವಾಗ್ರಹ ಪೀಡಿತ ವರದಿಗಾರಿಕೆಗೆ ಕುಖ್ಯಾತಿ ಹೊಂದಿರುವ ಫಾಕ್ಸ್ ನ್ಯೂಸ್ ಚಾನೆಲ್ಲಿನ ಆಂಕರ್ ಬಿಲ್ ಓ ರೆಲಿಯ ಸ್ವಕೇಂದ್ರಿತ, ಆಕ್ರಮಣಕಾರಿ, ಅಹಂಕಾರ ಭರಿತ ಶೈಲಿಯನ್ನು ಗೇಲಿ ಮಾಡುವುದಕ್ಕಾಗಿ ಈತ ಅದೇ ಶೈಲಿಯನ್ನು ವೈಭವೀಕರಿಸಿ ಅಳವಡಿಸಿಕೊಂಡಿದ್ದಾನೆ.

ಈತನ ರಾಜಕೀಯ ವಿಡಂಬನೆಯ ಹರಿತತೆಯನ್ನು ತಿಳಿಯುವುದಕ್ಕೆ ಈತ ೨೦೦೬ರ ಶ್ವೇತ ಭವನದ ಮಾಧ್ಯಮ ಪ್ರತಿನಿಧಿಗಳ ಸಂಘದ ವಾರ್ಷಿಕ ಭೇಟಿಯಲ್ಲಿ ಅಂದಿನ ಅಧ್ಯಕ್ಷ ಜಾರ್ಜ್.ಡಬ್ಲು.ಬುಶ್ ಎದುರಲ್ಲೇ ಆತನ ಸಣ್ಣತನಗಳನ್ನು, ತಪ್ಪು ನಿರ್ಧಾರಗಳನ್ನು, ಆಡಳಿತದ ಹುಳುಕುಗಳನ್ನು ಲೇವಡಿ ಮಾಡಿದ ಈ ಕ್ಲಿಪ್ಪನ್ನು ನೀವು ನೋಡಬೇಕು.


ಈತನ ‘ದಿ ಕೋಲ್‌ಬೇರ್ ರಿಪೋರ್ಟ್’ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗೆ ನಗಾರಿ ಕಛೇರಿಗೆ ಸಿಬಿಐ ದಾಳಿ!

22 ಜನ

ನೂರು ಚಿಲ್ಲರೆ ಕೋಟಿ ಜನಸಂಖ್ಯೆಯ ದೇಶವನ್ನು ಯಾಮಾರಿಸಿದ ಏಕೈಕ ವ್ಯಕ್ತಿ ‘ಸತ್ಯಂ’ ಹರಿಶ್ಚಂದ್ರ ರಾಮಲಿಂಗಾ ರಾಜುರವರನ್ನು ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ತನಿಖೆ ನಡೆಸಿ ಬಲೆ ಬೀಸಿ ಬಂಧಿಸಿರುವ ದೇಶದ ತನಿಖಾ ಸಂಸ್ಥೆಗಳು ಈಗ ಲೈಫ್ ಬಾಯ್ ಸೋಪಿನಲ್ಲಿ ಕೈತೊಳೆದುಕೊಂಡು ವಂಚಕರ ಹಿಂದೆ ಬಿದ್ದಿರುವ ಸುದ್ದಿ ನಗೆ ನಗಾರಿ ಕಛೇರಿಯನ್ನು ತಲುಪುವ ಹೊತ್ತಿಗಾಗಲೇ ಸಿಬಿಐ ಸೇನಾಪಡೆಯ ತುಕಡಿಯೊಂದು ನಗೆ ನಗಾರಿಯ ಏಕಕೊಠಡಿ ಬೃಹತ್ ಮಳಿಗೆಯ ಕಟ್ಟಡದ ಮೇಲೆ ದಾಳಿ ಮಾಡಿ ನಗಾರಿಯ ಏಕಸದಸ್ಯ ಬ್ಯೂರೋದ ಸಮಸ್ತ ನೌಕರರನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ನಗೆ ನಗಾರಿಯ ತಲೆ ಬುರುಡೆ, ಪಕ್ಕೆಲುಬು, ಎದೆಗೂಡುಗಳನ್ನೆಲ್ಲಾ ತಡಕಾಡಿ ಸಂಗ್ರಹಿಸಿದ ದಾಖಲೆಗಳನ್ನು ಹದ್ದಿನ ಕಣ್ಣಿನ ಅಧಿಕಾರಿಗೆ ಕೊಟ್ಟು ಪರೀಕ್ಷಿಸಿದರು. ಸಾಮ್ರಾಟರನ್ನು ಬೋನಿನೊಳಗೆ ಹಾಕಿ ಇಡೀ ಕಛೇರಿಯನ್ನು ಲೂಟಿ ಮಾಡಿದರು. ಕಡೆಗೆ ಸಾಮ್ರಾಟರು ತಮ್ಮಷ್ಟೇ ಶುದ್ಧ ಹಸ್ತರು, ಅವರೂ ಸಹ ಪ್ರತಿ ದಿನ ಆರು ಸಲ ತಮ್ಮ ಹಸ್ತವನ್ನು ಲೈಫ್ ಬಾಯ್ ಸೋಪಲ್ಲಿ ತೊಳೆಯುತ್ತಾರೆ ಎಂದು ತಿಳಿದು ಅವರನ್ನು investigationದೋಷಮುಕ್ತರನ್ನಾಗಿಸಿದರು.

ನಗೆ ನಗಾರಿಯ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲೇ ನಮ್ಮ ಕಛೇರಿಯ ಮೇಲೆ ನಡೆದ ಸಿಬಿಐ ದಾಳಿಯು ರಾಜಕೀಯ ಪ್ರೇರಿತವಾದದ್ದು ಎಂಬ ಪ್ರಾಮಾಣಿಕ ಸಂಶಯ ಸಾಮ್ರಾಟರಿಗೆ ಬಂದಿತು. ಸ್ಕಾಟ್ ಯಾರ್ಡಿನಲ್ಲಿ ಅಟೆಂಡೆನ್ಸ್ ಕೊರತೆಯಿಂದ ಸಸ್ಪೆಂಡ್ ಆದ ಪ್ರಪಂಚದ ಅತ್ಯಂತ ತೀಕ್ಷ್ಣಮತಿಯ ಪತ್ತೇದಾರ ಕುಚೇಲನನ್ನು ಸಾಮ್ರಾಟರು ಈ ಹುನ್ನಾರವನ್ನು ಪತ್ತೆ ಮಾಡಲು ಅಟ್ಟಿದರು.

ಕೆಲವೇ ಸೆಕೆಂಡುಗಳ ಕಾಲ ಕಂಪ್ಯೂಟರಿನ ಮುಂದೆ ಕೂತು ಗೂಗಲಿಸಿ ತನ್ನ ತನಿಖಾ ವರದಿಯನ್ನು ಸಿದ್ಧ ಪಡಿಸಿದ ಕುಚೇಲ, ಇದಕ್ಕೆಲ್ಲಾ ವಿರೋಧಿ ಪಾಳಯದ ಬ್ಲಾಗರುಗಳೇ ಕಾರಣ ಎಂದು ಸಾಬೀತು ಮಾಡಿದ. ನಗೆ ನಗಾರಿ ಶುರುವಾಗಿ ಇನ್ನೂ ಒಂದು ವರ್ಷವಾಗಿಲ್ಲ ಆಗಲೇ ಹದಿನೈದು ಸಾವಿರಕ್ಕಿಂತ ಹೆಚ್ಚು ‘ಒದೆತ’ಗಳನ್ನು ಸಂಪಾದಿಸಿರುವುದು ಅನೇಕರ ಕಣ್ಣನ್ನು ಕೆಂಪು ಮಾಡಿತು. ವರ್ಷಕ್ಕೆ ಹನ್ನೆರಡೇ ತಿಂಗಳು, ತಿಂಗಳೊಂದಕ್ಕೆ ಸರಾಸರಿ ಮುವತ್ತು ದಿನ ಎಂದು ಪುನರುಚ್ಚಿಸುವ ಬುದ್ಧಿವಂತರ ಮಾತನ್ನು ನಂಬುವುದಾದರೆ ನಗೆ ನಗಾರಿ ತಿಂಗಳಿಗೆ ಸಾವಿರಕ್ಕಿಂತ ಹೆಚ್ಚು, ಅಂದರೆ ದಿನಕ್ಕೆ ಮುವತ್ತಕ್ಕಿಂತ ಹೆಚ್ಚು ಹಿಟ್ಟುಗಳನ್ನು ಗಳಿಸಿಕೊಂಡಿದೆ. ಈ ಸಾಧನೆಗೆ ಸಾಮ್ರಾಟರ ಸ್ವಾರ್ಥ ರಹಿತ ಪರಿಶ್ರಮವೇ ಕಾರಣ ಎಂಬುದು ಸೂರ್ಯನ ಅಡಿಯಲ್ಲಿರುವ ಪ್ರತಿ ಜೀವಿಗೂ ತಿಳಿದಿರುವ ಸಂಗತಿಯೇ. ಆದರೆ ಅತೀ ಬುದ್ಧಿವಂತರಾದ ಸಾಮ್ರಾಟರು ಹರಿಶ್ಚಂದ್ರ ರಾಜುವಿನ ಹಾಗೆ ಸಾಧನೆಯನ್ನು ಉಬ್ಬಿಸಿ, ಇಲ್ಲದ ಸಂಪತ್ತನ್ನು ತೋರಿದ್ದಾರೆ ಎಂದು ಸರಕಾರದ ಕಿವಿಯೂದಿದ ನಮ್ಮ ವಿರೋಧಿಗಳು ಸಿಬಿಐಯನ್ನು ನಮ್ಮ ಮೇಲೆ ಛೂ ಬಿಟ್ಟರು.
blogspot
ಅಗ್ನಿ ಪರೀಕ್ಷೆಯಲ್ಲಿ ಸೀತಾ ಮಾತೆ ಡಿಸ್ಟಿಂಕ್ಷನ್ ಪಡೆದು ಪಾಸಾದ ಹಾಗೆಯೇ ಸಾಮ್ರಾಟರು ಸಿಬಿಐ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಬಹುಮಾನವನ್ನು ಗಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮೆಲ್ಲಾ ವಿರೋಧಿಗಳಿಗೆ ನಾವು ಒಂದು ವಿಷಯ ಸ್ಪಷ್ಟ ಪಡಿಸಲು ಇಚ್ಚಿಸುತ್ತೇವೆ: ನಮ್ಮಲ್ಲಿಲ್ಲದ ಅಪ್ರಮಾಣಿಕತೆಯನ್ನು, ವಂಚನೆ ಬುದ್ಧಿಯನ್ನು ಇದೆ ಸಾಬೀತು ಮಾಡುವುದಕ್ಕೆ ಸ್ವತಃ ಆ ರಾಮಲಿಂಗ ರಾಜುವಿಗೂ ಸಾಧ್ಯವಿಲ್ಲ!

ನಮ್ಮ ಈ ಧೈರ್ಯಕ್ಕೆ  ನಿಮ್ಮ ಬೆಂಬಲ ಕಾರಣ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ ಎಂದು ಭಾವಿಸಿದ್ದೇವೆ.

– ನಗೆ ಸಾಮ್ರಾಟ್ ಹಾಗೂ ತೊಣಚಪ್ಪ

(ಚಿತ್ರ ಕದ್ದದ್ದು ಇಲ್ಲಿಂದ: http://www.lawyerbrooks.com/investigation.html)