ಸಂಕಟದ ನೆನಪೂ ನಮ್ಮಲ್ಲಿ ನಗೆಯುಕ್ಕಿಸುವುದು ಎಂಥಾ ಸೋಜಿಗವಲ್ಲವೇ?
ಚಿಕ್ಕವರಾಗಿದ್ದಾಗ ಅಪ್ಪನ ಜೇಬಿನಿಂದ ಹತ್ತು ರುಪಾಯಿ ಎಗರಿಸಿ, ಮನೆಯ ಹಿಂದಿನ ಬೀದಿಯ ಅಪರಿಚಿತ ಅಂಗಡಿಗೆ ಹೋಗಿ ಎರಡು ರುಪಾಯಿಗೆ ಬಟಾಣಿ ತಗೆದುಕೊಂಡು ಉಳಿದ ಎಂಟು ರೂಪಾಯಿಯನ್ನು ವಾರದ ಇತರ ದಿನಗಳಿಗೆ ಎಂದು ಉಳಿಸಿಟ್ಟುಕೊಂಡು, ಬಟಾಣಿ ಮೆಲ್ಲುತ್ತಾ ಊರೆಲ್ಲಾ ತಿರುಗಿ ಮನೆಗೆ ಬಂದು ಚಡ್ಡಿ ಬಿಚ್ಚಿ ಒಗೆಯಲು ಎಸೆವಾಗ ಅಪ್ಪನ ಎದುರೇ ಚಿಲ್ಲರೆ ಠಣ್ ಠಣ್ ಎಂದು ಬಿದ್ದದ್ದು, ಹೋಂವರ್ಕ್ ಮಾಡದಿದ್ದರೂ ತಾನು ಮಾಡಿರುವುದಾಗಿಯೂ, ಹೋಂ ವರ್ಕ್ ಪುಸ್ತಕ ಮನೆಯಲ್ಲಿ ಬಿಟ್ಟುಬಂದಿರುವುದಾಗಿಯೂ, ಮರುದಿನ ತಪ್ಪದೇ ತೋರಿಸುವುದಾಗಿಯೂ ಹೇಳಿ ತಪ್ಪಿಸಿಕೊಂಡು ಮನೆಗೆ ಓಡಿ ಊಟ ತಿಂಡಿ ಬಿಟ್ಟು ಹೋಂವರ್ಕ್ ಮುಗಿಸಿ ಮಾನ ಉಳಿಸಿಕೊಂಡದ್ದು ದೊಡ್ಡವರಾದ ಮೇಲೆ ನೆನಪಾದಾಗ ನಮ್ಮಲ್ಲಿ ನಗೆಯುಕ್ಕಿಸುತ್ತದೆ.
ತರಗತಿ ಶುರುವಾಗುತ್ತಿದ್ದ ಹಾಗೆಯೇ ಹೊಟ್ಟೆ ಕುರ್ರ್ ಕುರ್ರ್‌ರ್ ಎನ್ನುತ್ತಾ ಚಿತ್ರ ವಿಚಿತ್ರ ಸದ್ದು ಮಾಡತೊಡಗಿ ಜೀರ್ಣಾಂಗದ ವ್ಯವಸ್ಥೆಯ ಕಟ್ಟ ಕಡೆಯ ದಿಡ್ಡಿ ಬಾಗಿಲು ನಿಯಂತ್ರಣ ತಪ್ಪುವ ಮುನ್ಸೂಚನೆಯನ್ನು ನೀಡಿ ಎಚ್ಚರಿಸಿ, ನಮ್ಮೆಲ್ಲಾ ಪರಿಶ್ರಮವನ್ನು, ನಿಯಂತ್ರಣವನ್ನು, ಆತ್ಮವಿಶ್ವಾಸವನ್ನೂ ಮಣಿಸಿ ಸ್ಪೋಟಿಸಿ ಆ ಅಪಘಾತದ ಸುಳಿವು ಅಕ್ಕ ಪಕ್ಕದ ಹಿತ ಶತ್ರುಗಳಿಗೆ ಸಿಕ್ಕುಹೋಗಿ ಪಟ್ಟ ಪಡಿಪಾಟಲನ್ನು ಎಷ್ಟೋ ವರ್ಷಗಳ ನಂತರ ನೆನಪಿಸಿಕೊಂಡರೆ ಮುಜುಗರಕ್ಕಿಂತ ಹೆಚ್ಚಾಗಿ ಮನಸ್ಸು ತುಂಬಿ ನಗುತ್ತೇವೆ.
ಮುಂಬೈ ಮೇರಿ ಜಾನ್ ಸಿನೆಮಾದ ಒಂದು ದೃಶ್ಯದಲ್ಲಿ ಆಗಂತುಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಒಂದು ಸ್ಕೂಟರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಆಟೋ ಹತ್ತಿ ಹೋಗುತ್ತಾನೆ. ಅದರಲ್ಲಿ ಬಾಂಬ್ ಇರಬಹುದೆಂದು ಜನರು ಗಾಬರಿಯಾಗಿ ಪೋಲೀಸಿನವರಿಗೆ ವಾರ್ತೆ ತಿಳಿಸುತ್ತಾರೆ. ಬಾಂಬ್ ನಿಷ್ಕ್ರಿಯ ದಳದವರು ಸನದ್ಧರಾಗಿ ಬಂದು ಸ್ಕೂಟರಿನ ನಟ್ಟು ಬೋಲ್ಟುಗಳನ್ನೆಲ್ಲಾ ಬಿಚ್ಚಿ ಬೆತ್ತಲಾಗಿಸುವಷ್ಟರಲ್ಲಿ ಆ ಆಗಂತುಕ ವ್ಯಕ್ತಿ ತನ್ನ ಸ್ಕೂಟರ್ ತೆಗೆದುಕೊಂಡು ಹೋಗಲು ಬರುತ್ತಾನೆ. ತನ್ನ ಸ್ಕೂಟರಿಗಾದ ದುಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾನೆ. ಅಲ್ಲಿಯವರೆಗೆ ಆತಂಕದಲ್ಲಿ, ಜೀವವನ್ನು ಅಂಗೈಯಲ್ಲಿ ಹಿಡಿದು ನಿಂತಿದ್ದ ಜನರು ಗೊಳ್ಳೆಂದು ನಗುತ್ತಾರೆ. ಸಂಕಟ ಕಳೆದ ನಂತರ ಮನಸ್ಸು ನಗುವಿನ ಅಲೆಯನ್ನು ಎಬ್ಬಿಸಿಕೊಂಡು ನಷ್ಟ ಪರಿಹಾರ ಮಾಡಿಕೊಳ್ಳುವ ಪರಿ ಸೊಬಗಿನದಲ್ಲವೇ?
ಇತ್ತೀಚಿನ ಪ್ರಜಾ ಉವಾಚ