(ನಗಾರಿ ರಾಜಕೀಯ ಮನಃಶಾಸ್ತ್ರ ಬ್ಯೂರೋ)
ನಮ್ಮ ದೇಶದ ಮಿನಿಸ್ಟ್ರಿಗಳು ಸಮಸ್ಯೆಗಳನ್ನು ಪರಿಹರಿಸುತ್ತಾರೋ ಬಿಡುತ್ತಾರೋ, ಇಂಥಾ ಸಮೀಕ್ಷೆಗಳನ್ನಂತೂ ಸರಿಯಾಗಿ ನಡೆಸಿ ಅಂಕಿ ಅಂಶಗಳನ್ನಾದ್ರೂ ಕೊಡುತ್ತಾರೆ. ಅದು ನಮ್ಮ ಪುಣ್ಯ. ನಮ್ಮ ದೇಶದಲ್ಲಿ ಕಳೆದ ಕೇವಲ ಮೂರು ವರ್ಷಗಳಲ್ಲಿ ಹದಿನಾರು ಸಾವಿರ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಒಂದು ಅಂಕಿ ಅಂಶ. ಅಂದರೆ ಅಂದಾಜಿನ ಪ್ರಕಾರ ದಿನಕ್ಕೆ ಹದಿನಾರು ಮಂದಿ ತಮ್ಮ ಪ್ರಾಣ ನೀಗಿಕೊಳ್ಳುತ್ತಿದ್ದಾರೆ. ಯೌವನದ ಹುರುಪು, ಜೀವನ್ನೋಲ್ಲಾಸ, ಲವಲವಿಕೆಗಳಿರುವ ವಯಸ್ಸಿನಲ್ಲೇ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆಗಳು ನಡೆಯುತ್ತಿರುವುದು ಯಾರಿಗೂ ಆತಂಕದ ವಿಚಾರವಾಗಿ ಕಾಣುತ್ತಿಲ್ಲ. ಬಹುಶಃ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಯನ್ನು ಹೊರತು ಪಡಿಸಿದರೆ ಇದು ಹೆಚ್ಚು ಕಳವಳ ಪಡಬೇಕಾದ ಸಂಗತಿ.
ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರೀಕ್ಷೆಗಳಲ್ಲಿ ವಿಫಲರಾಗಿ ನಿರಾಶೆಗೊಳ್ಳುವುದನ್ನು ಪ್ರಮುಖವಾದ ಕಾರಣ ಎಂದು ಸಂಶೋಧನೆಗಳು ತಿಳಿಸುತ್ತಿವೆ. ಇದೂ ಅಲ್ಲದೆ ಸೋಲು, ಅದರಿಂದುಂಟಾಗುವ ಖಿನ್ನತೆ ಎಳೆಯರ ಬಲಿ ತೆಗೆದುಕೊಳ್ಳುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಪ್ರೇಮದಲ್ಲಿ ಲಫಡಾ ಮಾಡಿಕೊಂಡವರೂ ಆತ್ಮಹತ್ಯೆಗೆ ಶರಣಾಗಿ ತಮ್ಮ ಹೆಸರಿಗೆ ಅಂಟಬಹುದಾದ ಕಳಂಕವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂಬುದೂ ತಿಳಿಯುತ್ತದೆ. ಇದಕ್ಕೆ ಪರಿಹಾರ ಏನು? ಎಳೆಯರಿಗೆ,ಯುವಕರಿಗೆ ಸ್ಫೂರ್ತಿಯಾಗಬಹುದಾದ, ಎಲ್ಲಕ್ಕಿಂತ ಈ ಭಂಡ ಜೀವನ ದೊಡ್ಡದು ಎಂಬುದನ್ನು ಮನವರಿಕೆ ಮಾಡಿಕೊಡುವುದು ಹೇಗೆ?
ನಗೆ ಸಾಮ್ರಾಟರ ಸಲಹೆ ಇಂತಿದೆ. ‘ನಮ್ಮ ಮಕ್ಕಳು, ಯುವಕರು ಸೋಲಿನಿಂದ, ವೈಫಲ್ಯದಿಂದ, ಅವಮಾನದಿಂದ, ಅಪರಾಧದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಅವರಿಗೆ ನಾವು ಒಳ್ಳೆಯ ರೋಲ್ ಮಾಡೆಲ್ಲುಗಳನ್ನು ಕೊಡಬೇಕು. ಅವರೆದುರು ಈಗ ಇರುವ ರೋಲ್ ಮಾಡೆಲ್ಲುಗಳಾದರೂ ಯಾರು? ಕ್ರಿಕೆಟ್ ಪಟುಗಳು, ಸಿನೆಮಾ ತಾರೆಯರು. ಇವರು ಸೋಲಿಗೆ,ಕೆಟ್ಟ ಹೆಸರಿಗಂಜಿ ಪ್ರಾಣ ತೆಗೆದುಕೊಳ್ಳುವುದನ್ನು ನೋಡಿ ನಮ್ಮ ಮಕ್ಕಳು ದುರ್ಬಲರಾಗುತ್ತಿದ್ದಾರೆ. ಇವರಿಗೆ ನಾನು ಶಿಫಾರಸ್ಸು ಮಾಡಬಯಸುವ ರೋಲ್ ಮಾಡೆಲ್ಲುಗಳೆಂದರೆ ನಮ್ಮ ರಾಜಕಾರಣಿಗಳು. ಇದುವರೆಗೂ ಚುನಾವಣೆಯಲ್ಲಿನ ಸೋಲು, ಭ್ರಷ್ಠಾಚಾರದ ಆರೋಪ, ಲೈಂಗಿಕ ಹಗರಣಗಳು ಹೀಗೆ ಎಂಥೆಂಥ ಸಂಕಷ್ಟಗಳು ಎದುರಾದರೂ ಪ್ರಾಣ ನೀಗಿಕೊಂಡ ರಾಜಕಾರಣಿ ನಮಗೆ ಕಾಣಿಸುತ್ತಾನಾ? ಇಲ್ಲ, ಇವರಿಗಿಂತ ಉತ್ತಮವಾದ ಉದಾಹರಣೆ ನಮ್ಮ ಮಕ್ಕಳಿಗೆ ಎಲ್ಲಿ ಸಿಗಲು ಸಾಧ್ಯ?
‘ಹೀಗಾಗಿ ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿ ನಮ್ಮ ರಾಜಕಾರಣಿಗಳ ಬಗ್ಗೆ ಪಾಠಗಳನ್ನು ಸೇರಿಸಬೇಕು. ಮಂತ್ರಿಯಾಗಲೇ ಬೇಕು ಎಂಬ ಅತ್ಯಾಸೆಯಿಂದ ಚುನಾವಣೆಗೆ ನಿಂತು, ತನ್ನ ಸರ್ವವಸ್ವವನ್ನೂ ಬಂಡವಾಳವನ್ನಾಗಿ ಹಾಕಿ ಕೊಂಡು ಚುನಾವಣೆಗೆ ನಿಂತು, ಸುತ್ತಲೂ ಎದುರಾಳಿಗಳನ್ನು ಹುಟ್ಟಿಹಾಕಿಕೊಂಡು ಸ್ಪರ್ಧಿಸಿ ಠೇವಣಿ ಕಳೆದುಕೊಂಡು ಸೋತರೂ ನಮ್ಮ ರಾಜಕಾರಣಿಗಳು ಧೃತಿಗೆಡುವುದಿಲ್ಲ. ಆತ್ಮಹತ್ಯೆಯ ಆಲೋಚನೆಯನ್ನೂ ಮಾಡುವುದಿಲ್ಲ. ಹೀನಾಯವಾಗಿ ಸೋತರೂ, ಲಕ್ಷಾಂತರ ಮಂದಿಯ ಮುಂದೆ ಮಾನ ಹರಾಜಾದರೂ, ಎಲ್ಲರೂ ಗುಂಡಿಗೆ ಬಿದ್ದವನ ಮೇಲೆ ಆಳಿಗೊಂದರಂತೆ ಕಲ್ಲು ಎಸೆಯಲು ಸನ್ನದ್ಧರಾದರೂ ನಮ್ಮ ರಾಜಕಾರಣಿಗಳು ನೆಮ್ಮದಿ ಕಳೆದುಕೊಳ್ಳುವುದಿಲ್ಲ. ತಣ್ಣಗೆ ಮಾಧ್ಯದ ಕೆಮರಾಗಳ ಮುಂದೆ ಬಂದು ಜನರ ತೀರ್ಪನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಆರಾಮಾಗಿ ಇರುತ್ತಾರೆ. ಹೊಟ್ಟೆಯ ಹಸಿವು, ಕಣ್ಣಿನ ನಿದ್ರೆ ಯಾವುದರಲ್ಲೂ ಏರುಪೇರಾಗುವುದಿಲ್ಲ. ಇಂಥ ಮೇಲ್ಪಂಕ್ತಿಯನ್ನು ನಮ್ಮ ಮಕ್ಕಳಿಗೆ ನಾವು ಹಾಕಿಕೊಡಬೇಕು. ಪರೀಕ್ಷೆಯಲ್ಲಿ ಫೇಲ್ ಆದವ ‘ಇದು ಪರೀಕ್ಷಕ ಕೊಟ್ಟ ತೀರ್ಪು, ಇದನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತೇನೆ’ ಎಂದುಕೊಂಡು ನೆಮ್ಮದಿಯಾಗಿ ಇರುವ ಸ್ಥಿತಪ್ರಜ್ಞತೆಯನ್ನು ಕಲಿತುಕೊಳ್ಳಬೇಕು ನಮ್ಮ ಯುವಕರು’. ಈ ರಾಜಕಾರಣಿಗಳ ಚರಿತ್ರೆಯನ್ನು ನಮ್ಮ ಮಾಧ್ಯಮಗಳು ಹೆಚ್ಚು ಹೆಚ್ಚು ವಿವರವಾಗಿ ನಮ್ಮ ಮಕ್ಕಳು, ಯುವಕರಿಗೆ ಮುಟ್ಟಿಸಬೇಕು.
‘ಇನ್ನು ಪ್ರೇಮದಲ್ಲಿ ವಿಫಲರಾದವರು, ಲಫಡಾ ಮಾಡಿಕೊಂಡು ಹೆಸರಿಗೆ ಕುತ್ತು ತಂದುಕೊಂಡವರು ಸಹ ನಮ್ಮ ರಾಜಕಾರಣಿಗಳನ್ನು ಕಂಡು ಕಲಿಯಬೇಕಾದ ಪಾಠಗಳು ತುಂಬಾ ಇವೆ. ನಮ್ಮ ರಾಜಕಾರಣಿಗಳು ಲಕ್ಷಣವಾಗಿ ಮನೆ ಮಾಡಿಕೊಂಡಿದ್ದರೂ ರೇಸಾರ್ಟ್ ವಾಸ್ತವ್ಯ ಮಾಡುವುದು ಸರ್ವೇ ಸಾಮಾನ್ಯ. ಇದು ಜಗಜ್ಜಾಹೀರಾದ ಗುಟ್ಟು. ಎಷ್ಟೋ ಮಂದಿಯ ಗುಟ್ಟುಗಳು, ಬೆಳ್ಳಿ ಚಡ್ಡಿ, ಆಸ್ಪತ್ರೆ ಚರಿತ್ರೆಗಳು ಜನರ ಬಾಯಲ್ಲಿ ಚ್ಯೂಯಿಂಗ್ ಗಮ್ಮಾದರೂ ಸಹ ಅವಮಾನದಿಂದ ಯಾವ ರಾಜಕಾರಣಿಯೂ ಪ್ರಾಣ ನೀಗಿಕೊಳ್ಳುವುದಿಲ್ಲ. ಅಂಥ ಮನೋಸ್ಥೈರ್ಯವನ್ನು ನಮ್ಮ ಯುವಕರು, ಪ್ರೇಮಿಗಳು ಕಲಿಯಬೇಕು. ಈ ‘ಆರ್ಟ್ ಆಫ್ ಲೀವಿಂಗ್’ ಕಲಿಸಲು ಶಾಲೆಗಳಲ್ಲಿ ಶಿಬಿರಗಳನ್ನು ಮಾಡಿ ನುರಿತ ರಾಜಕಾರಣಿಗಳಿಂದ ಮಾರ್ಗದರ್ಶನ ಕೊಡಿಸಬೇಕು.’
ನಗೆ ಸಾಮ್ರಾಟರ ಈ ಸಲಹೆಯ ಕಡೆಗೆ ನಮ್ಮ ಪೋಷಕರು ಗಮನ ಹರಿಸಿದರೆ ತಮ್ಮ ಮಕ್ಕಳ ಪ್ರಾಣಗಳನ್ನು ಉಳಿಸಬಹುದು ಎಂಬುದು ಸಾಮ್ರಾಟರ ಚೇಲ ಕುಚೇಲನ ಮಾತು.
ಇತ್ತೀಚಿನ ಪ್ರಜಾ ಉವಾಚ