Archive | ಸೆಪ್ಟೆಂಬರ್, 2008

ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

18 ಸೆಪ್ಟೆಂ

ಇದೀಗ ಬಂದ ವರದಿಯ ಪ್ರಕಾರ ಮುಂಜಾನೆ ೯ ಗಂಟೆಯ ವೇಳೆಗೆ ನಮ್ಮೆಲ್ಲರ ನೆಚ್ಚಿನ ನಗೆ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಜಿನ ಮೇಲೆ ಈ ಟಿಪ್ಪಣಿ ಸಿಕ್ಕಿದೆ:

“ಇದ್ಯಾವುದೂ ಇಲ್ಲದೆ ಬದುಕಬಲ್ಲೆನಾ ಅನ್ನಿಸುತ್ತಿದೆ. ಯಾಕೋ ಬ್ಲಾಗು, ಅಂತರ್ಜಾಲ, ಬರವಣಿಗೆ ಮುಂತಾದುವನ್ನು ವಿಪರೀತ ಹಚ್ಚಿಕೊಂಡ ಭಯವಾಗುತ್ತಿದೆ. ಹೊಸತನ್ನು ಕಲಿಯುವುದಕ್ಕೆ, ಹೊಸ ಅನುಭವವನ್ನು ಪಡೆಯುವುದಕ್ಕೆ, ಹೊಸ ಪುಸ್ತಕ ಓದುವುದಕ್ಕೆ, ಹೊಸ ಹಾಡು ಕೇಳುವುದಕ್ಕೆ, ಹೊಸ ವ್ಯಕ್ತಿಯೊಂದಿಗೆ ಮಾತಾಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ ಅನ್ನಿಸುತ್ತಿದೆ.
ಮಾಹಿತಿಯ ರಭಸದಲ್ಲಿ ಸಿಕ್ಕು ಎಲ್ಲೆಲ್ಲಿಗೂ ಕೊಚ್ಚಿ ಹೋಗಿ, ಅದನ್ನೇ ಸಾಧನೆ ಅಂದುಕೊಂಡು ಒಳಗೆ ಇಣುಕಿ ನೋಡಿಕೊಂಡರೆ ಒಂದು ಹನಿಯೂ ಇಳಿದಿಲ್ಲ ಎಂಬುದು ತಿಳಿಯಿತು. ಇನ್ನು ಸಾಕು, ಈ ರೇಸು ಎಂದು ತೀರ್ಮಾನಿಸಿದ್ದೇನೆ. ಇದನ್ನು ಬರ್ನ್ ಔಟ್ ಅನ್ನಬಹುದಾ, ಸ್ಯಾಚುರೇಶನ್ ಅನ್ನಬಹುದಾ ಗೊತ್ತಿಲ್ಲ. ಊಹುಂ, ಇನ್ನು ಮುಂದೆ ಇದು ನನ್ನ ಕೈಲಿ ಸಾಧ್ಯವಾಗುವುದಿಲ್ಲ. ಅಂಗಡಿ ಇಲ್ಲಿಗೆ ಮುಚ್ಚುತ್ತಿದ್ದೇನೆ. ”

ನಮ್ಮೊಡನೆ ಯಾವಾಗಲೂ ನಗು ನಗುತ್ತಾ ಇದ್ದ ಸಾಮ್ರಾಟರು ನಮ್ಮನ್ನಗಲಿರುವ ದುಃಖ ತೀವ್ರವಾಗಿ ಬಾಧಿಸುತ್ತಿದೆ. ಇನ್ನು ಮುಂದೆ ನಗಾರಿ ಸದ್ದು ಮಾಡುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.

ಗೆರೆಗಳಲ್ಲಿ ನಗುವಿನ ಸೆರೆ

17 ಸೆಪ್ಟೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

ಧ್ಯಾನವೂ ಅಲ್ಲ, ಸೀರಿಯಸ್ಸೂ ಅಲ್ಲ, ಬೆಳಗ್ಗೆಯಿಂದ ಮೋಷನ್ ಆಗಿಲ್ಲ!

ಬ್ಲಾಗ್ ಬೀಟ್ 15

17 ಸೆಪ್ಟೆಂ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ನಗೆ ಸಾಮ್ರಾಟರಿಗೆ ಬೀಟಿಗೆ ಹೊರಡುವುದು ಯಾಕೋ ತುಂಬಾ ಯಾಂತ್ರಿಕವೆನಿಸಲು ಶುರುವಾಗಿದೆ. ನಕ್ಕು ನಕ್ಕೂ ಮಂದಿ ದಣಿದಿರುವಂತೆ ಬ್ಲಾಗುಗಳಲ್ಲಿ ನಗೆಯ ಬರವಣಿಗೆಗೆ ಸ್ವಲ್ಪ ದಣಿವು ಕಾಣಿಸಿಕೊಂಡಂತೆ ಕಾಣುತ್ತದೆ. ಆದರೂ ಸಾಮ್ರಾಟರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಈ ಸಂಚಿಕೆ ಬ್ಲಾಗ್ ಬೀಟ್ ನಿಮ್ಮೆದುರಿನಲ್ಲಿದೆ:

ಕೆಂಡ ಸಂಪಿಗೆಯ ಸುದ್ದಿ ಕ್ಯಾತ

ಹವ್ಯಾಸಕ್ಕಾಗಿ ಮದುವೆಯಾಗಿ, ಕ್ರಮೇಣ ಮದುವೆಯಾಗುವುದನ್ನೇ ಹವ್ಯಾಸವಾಗಿಸಿಕೊಂಡು ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ನೂರಾ ಎಪ್ಪತ್ತು ಮಕ್ಕಳ ತಂದೆಯಾಗಿರುವ ನೈಜೀರಿಯಾದ ಮಹಮ್ಮದ್ ಬೆಲ್ಲಾ ಅಬೂಬೆಕರ್ ನ ಸಾಧನೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸುದ್ದಿ ಕ್ಯಾತ ವರದಿ ಮಾಡಿದ್ದಾನೆ.

ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ಎಂಭತ್ನಾಲ್ಕು ವರ್ಷ ಬದುಕಿರುವ ಅಬೂಬೆಕರ್‌ನಿಂದ ‘ಯಶಸ್ವೀ ಗಂಡನಿಗೆ ಹತ್ತೇ ಸೂತ್ರಗಳು’ ಪುಸ್ತಕ ಬರೆಸಲು ಸಂಪರ್ಕಿಸಲಾಗುತ್ತಿದೆ. ಅದಕ್ಕೆ ಬುಕರ್ ಸಿಕ್ಕರೂ ಸಿಗಬಹುದು!

ಪ್ರಕಾಶ್ ಶೆಟ್ಟಿ ಪಂಚ್

ಹ್ಯಾಂಗಿಸಿ ಕೊಂಡ ಪ್ರಕಾಶ್ ಶೆಟ್ಟಿ ತಮ್ಮ ಕಾರ್ಟೂನುಗಳ ಪ್ರದರ್ಶನದ ವರದಿಯನ್ನು ಬ್ಲಾಗಿನಲ್ಲಿ ಅಲ್ಲಲ್ಲಿ ಚೆಲ್ಲಿದ್ದಾರೆ.
ಎಂದಿನಂತೆ ಅವರ ಹರಿತವಾದ ಗೆರೆಗಳ ಬರೆಗೆ ನರೇಂದ್ರ ಮೋದಿ, ಯಡ್ಡಿ, ಲಾಲು, ಪೊಲೀಸು ಬಲಿಯಾಗಿದ್ದಾರೆ.

ಬೊಗಳೂರು ವಾರ್ತೆ

ಜಗತ್ತಿನಲ್ಲಿ ಹೆಚ್ಚುತ್ತಿರುವ ಹಾಟ್ ಕಲ್ಚರಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಬೊಗಳೂರು ಬ್ಯೂರೋ, ಸ್ಯಾಂಪಲ್ಲಿಗೆ ಬಟ್ಟೆಹಾಕುವ ನಟೀ ಮಣಿಯರನ್ನೂ, ಬಟ್ಟೆಯನ್ನು ಸ್ಯಾಂಪಲ್ಲಿಗಾಗಿ ಹಾಕುವವರನ್ನೂ ತರಾಟೆಗೆ ತೆಗೆದುಕೊಂಡಿದೆ.
ಡಿವೋರ್ಸು, ತಾಳಿ ಎಂದೆಲ್ಲಾ ಮ್ಯಾರೀಡ್ ಲೈಫಿನ ವರೀಡ್ ಸಂಗತಿಗಳನ್ನು ವರದ್ದಿ ಮಾಡಿರುವುದರಿಂದ ಬ್ಯಾಚುಲರ್ ಆದ ನಗೆ ಸಾಮ್ರಾಟರು ಅಲ್ಲಿಂದ ಕಾಲ್ಕೀಳುವ ಮುನ್ನ ಈ ನೋಟೀಸನ್ನು ಗಮನಿಸಿದ್ದಾರೆ:
“ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.”
ತಲೆ ಮರೆಸಿಕೊಂಡಿರುವ ಬೊಗಳೂರು ಮಂದಿಯನ್ನು ಪತ್ತೆ ಹಚ್ಚಲು ಸೂಪರ್ ಕಾಪ್ ಚೇಲ ಕುಚೇಲನಿಗೆ ಬಹಳಷ್ಟು ಅರ್ಜಿಗಳು ಬಂದಿದ್ದು ಆತ ಸಾಮ್ರಾಟರ ಅಪ್ಪಣೆಗಾಗಿ ಕಾಯುತ್ತಾ ತುದಿಗಾಲಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ!

ಮಜಾವಾಣಿ

ತಮ್ಮ ಪತ್ರಿಕೆಗಾಗಿ ಪ್ರತ್ಯೇಕ ತಾಣವನ್ನು ತೆರೆದಿರುವ ಮಜಾವಾಣಿ ತನ್ನ ಅತ್ಯಂತ ನಿಕಟ ಪ್ರತಿಸ್ಪರ್ಧಿ ಪತ್ರಿಕೆಯ ವೇಗಕ್ಕೆ ತಕ್ಕಂತೆ ಓಡಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ಸಾಮ್ರಾಟರ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿ ಹೊಸ ವರದಿಗಳ್ಯಾವುವೂ ಪತ್ತೆಯಾಗಿಲ್ಲ.
ಸಾಮ್ರಾಟರು ಬೀಟು ಹಾಕುವಾಗ ‘ಹಗ್ಗಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆಯ’ ವರದಿ ಪತ್ತೆಯಾಯಿತು.

ವಾರದ ವಿವೇಕ 17

16 ಸೆಪ್ಟೆಂ

…………………………………………………………..

ನಿಮ್ಮ ಮಕ್ಕಳೊಂದಿಗೆ
ಸ್ನೇಹದಿಂದ ನಡೆದುಕೊಳ್ಳಿ.
ಏಕೆಂದರೆ ಅವರೇ ನಿಮ್ಮ
ನರ್ಸಿಂಗ್ ಹೋಮನ್ನು ಆಯ್ಕೆ ಮಾಡುವವರು!

…………………………………………………………..

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗೆ

15 ಸೆಪ್ಟೆಂ


ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ತಮ್ಮ ಚೇಲ ಕುಚೇಲನನ್ನೂ ತಮ್ಮ ಆಲ್ಟರ್ ಈಗೋವನ್ನೂ ವಿನಾಯಕನ ಸಂದರ್ಶನಕ್ಕೆ ಅಟ್ಟಿದರು. ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಕೊಟ್ಟ. ಸಂದರ್ಶನದ ಪೂರ್ಣ ಪಾಠ ಇಲ್ಲದೆ.

ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.

ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!

ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?

ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು ಅರ್ಥವಾಗಿಲ್ಲ. ಅದಕ್ಕೇ ಭೂಲೋಕದಲ್ಲಿ ಈ ಸ್ಥಿತಿ ಇರುವುದು.

ನ.ಸಾ: ಹಾಗಂದ್ರೆ, ಅರ್ಥ ಆಗಲಿಲ್ಲ…

ವಿ: ಅರ್ಥ ಆಗದ್ದನ್ನು ಕೇಳಿ ತಿಳ್ಕೋಬೇಕು. ನೋಡ್ರಿ, ನಿಮ್ಮ ಮಹಾತ್ಮಾ ಗಾಂಧಿ ಹೇಳಿಲ್ಲವಾ, ಪ್ರಾರ್ಥನೆ ಅನ್ನೋದು ದೇವರು ಹಾಗೂ ಮಾನವನ ನಡುವಿನ ಸೇತುವೆ ಅಂತ. ಮನುಷ್ಯರಿಗೆ ದೇವರೊಂದಿಗೆ ಮಾತನಾಡಬೇಕು ಎಂಬ ಹಂಬಲವಿದೆಯೋ ಇಲ್ಲವೋ ಕಾಣೆ. ಆದರೆ ದೇವರಿಗೆ ಮಾತ್ರ ಮನುಷ್ಯನೊಂದಿಗೆ ಮಾತಾಡಬೇಕು ಎನ್ನುವ ಆಸೆ ಇದೆ. ಅದರಲ್ಲೂ ಈ ಹಿಂದೂ ದೇವರುಗಳಿದ್ದಾರಲ್ಲ, ಅವರ ಸಂಖ್ಯೆ ಮುಕ್ಕೋಟಿಗಿಂತ ಹೆಚ್ಚು. ಎಲ್ಲರಿಗೂ ಮನುಷ್ಯರೊಂದಿಗೆ ಮಾತನಾಡಬೇಕು ಎನ್ನುವ ಆಸೆ. ಏನು ಮಾಡುವುದು, ಈ ಮನುಷ್ಯರು ಅದಕ್ಕೆ ಟೈಮೇ ಕೊಡೋದಿಲ್ಲ. ಯಾವಾಗಲೂ ತಮ್ಮ ಮನೆ, ಮಕ್ಕಳು, ಬ್ಯಾಂಕ್ ಬ್ಯಾಲನ್ಸು, ತಮ್ಮ ಕ್ರಿಕೆಟ್ ಟೀಮು, ಕನಸಿನಲ್ಲೆಂಬಂತೆ ಬಂದ ಒಲಿಂಪಿಕ್ಸ್ ಚಿನ್ನದ ಪದಕ, ನ್ಯೂಕ್ಲಿಯಾರ್ ಡೀಲು ಅಂತಲೇ ತಮ್ಮ ಸಮಯವನ್ನೆಲ್ಲಾ ಕಳೆದುಬಿಡುತ್ತಾರೆ. ದೇವರೊಂದಿಗೆ ಮಾತನಾಡಲಿಕ್ಕೆ ಸಮಯವೇ ಅವರಿಗೆ ಇರುವುದಿಲ್ಲ. ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಒಂದರ್ಧ ಗಂಟೆಯಾದರೂ ನಮ್ಮೊಂದಿಗೆ ಕಳೆಯಲು ಅವರಿಗೆ ಬಿಡುವು ಇರೋದಿಲ್ಲ. ಈಗ ಮಾತನಾಡಿಸ ಬಹುದು ಆಗ ಮಾತನಾಡಿಸ ಬಹುದು ಎಂದು ನಮ್ಮ ದೇವಲೋಕದಲ್ಲಿ ದೇವರು ದೇವತೆಗಳು ಕಾಯುತ್ತಾ ಕೂತಿರುತ್ತಾರೆ.

ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…

ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ…’ ಎಂದು ಪ್ರಾರ್ಥಿಸ ತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರ್ವಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ…’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನಂಗೆ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.

ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.

ನ.ಸಾ: ತುಂಬಾ ಬೇಸರದ ಸಂಗತಿ ಇದು. ಹೌದು, ಎಲ್ಲಾ ಸರಿ ಆದರೆ ನೀವೇನೋ ಹೊಸ ಸಂಗತಿ ಕಂಡುಕೊಂಡಿದ್ದೀರಿ ಅಂದ್ರಿ…

ವಿ: ಹ್ಹಾ! ಅದನ್ನೇ ಹೇಳಬೇಕಿತ್ತು. ಹೀಗೆ ದೇವರೊಂದಿಗೆ ಮಾತನಾಡಲು ಮನುಷ್ಯನಿಗೆ ಸಮಯವೇ ಸಿಕ್ಕದಂತೆ ಆಗಿರುವಾಗ ಎಂದೋ ಒಮ್ಮೆಮ್ಮೊ ಅಪರೂಪಕ್ಕೆ ಮಾತನಾಡುವ ಅವಕಾಶ ಸಿಕ್ಕಾಗಲೂ ನಮ್ಮ ದೇವರುಗಳು ಅದನ್ನು ಹಾಳು ಮಾಡಿಕೊಂಡುಬಿಡುತ್ತಾರೆ. ಹೇಗೆ, ಅಂತೀರಾ? ಇಂದಿನ ಜನರು ಮಾತಾಡುವ ಶೈಲಿಯಲ್ಲಿ, ಬಳಸುವ ಭಾಷೆಯಲ್ಲಿ ಮಾತಾಡಿದರೆ ಮಾತ್ರವಲ್ಲವೇ ಅವರಿಗೆ ಅರ್ಥವಾಗುವುದು. ಅದು ಬಿಟ್ಟು ಹಳೇ ಕಾಲದವರ ಹಾಗೆಯೇ, ‘ವತ್ಸಾ… ನಿನಗೇನು ಬೇಕು ಕೇಳುವಂತವನಾಗು..’ ಅಂತ ಮಾತಾಡಿದರೆ ಯಾರು ಕೇಳುತ್ತಾರೆ? ಅದಕ್ಕೇ ನಾನು ನನ್ನ ಲಿಂಗೋ ಬದಲಾಯಿಸಿಕೊಂಡಿದ್ದೇನೆ. ಬೆಂಗಳೂರಿನ ಯುವಕರೊಂದಿಗೆ ಮಾತಾಡುವ ರೀತಿಗೂ, ಸಾಗರದ ಹೌಸ್ ವೈಫ್ ಜೊತೆಗೆ ಮಾತಾಡುವ ರೀತಿಗೂ ವ್ಯತ್ಯಾಸವಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.

ನ.ಸಾ: ಹೌದೌದು. ದೇವರೂ ಸಹ ಅಪ್ ಡೇಟ್ ಆಗುತ್ತ ಇರಬೇಕಲ್ಲವೇ? ಅಂದ ಹಾಗೆ ಈ ಸಲದ ಭೂಲೋಕದ ಟೂರ್ ಹೇಗಿತ್ತು?

ವಿ: ಪ್ರತೀ ವರ್ಷದ ಹಾಗೆಯೇ ಇದೆ ಮೈ ಸನ್! ಭಾರತ ಅಮೇರಿಕಾ ಆಗುವುದು ಯಾವಾಗ , ಬೆಂಗಳೂರು ಸಿಂಗಾಪುರವಾಗುವುದು ಯಾವಾಗ ಎಂದು ಸರಕಾರಗಳು ಕನಸುತ್ತಿದ್ದರೆ, ನಮ್ಮ ಹುಡುಗ ಅಮೇರಿಕಾಗೆ ಹೋಗುವುದು ಯಾವಾಗ, ತಾನು ಸಿಂಗಾಪುರದ ಪ್ರಜೆಯಾಗುವುದು ಯಾವಾಗ ಅಂತ ಜನರು ಕನಸುತ್ತಿದ್ದಾರೆ. ಇದರಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅದೇ ಬೆಲೆ ಏರಿಕೆ, ಬಡವರು ಬಡತನದಲ್ಲಿ ಪ್ರಗತಿ ಸಾಧಿಸುವುದು ಧನಿಕರು ಸಿರಿತನದಲ್ಲಿ ಪ್ರಗತಿಸಾಧಿಸುವುದು, ಇದನ್ನೇ ಶೇ ೮ರ ರಾಷ್ಟ್ರೀಯ ಪ್ರಗತಿ ಎಂದು ಸಂಭ್ರಮಿಸುವುದು – ಏನೂ ವ್ಯತ್ಯಾಸ ಕಂಡಿಲ್ಲ. ಆದರೆ ಒಂದು ಬಹುಮುಖ್ಯವಾದ ಬದಲಾವಣೆ ನಡೆದಿದೆ. ಇದರಿಂದ ನನ್ನ ಅಸ್ತಿತ್ವಕ್ಕೇ ಪೆಟ್ಟು ಬೀಳುತ್ತಿರುವುದರಿಂದ ನನಗೆ ಆತಂಕವಾಗಿದೆ.

ನ.ಸಾ: ಅದ್ಯಾವ ಸಂಗತಿ ಮೈಲಾರ್ಡ್!

ವಿ: ನಿಮ್ಮ ನಾಡಿನಲ್ಲಿ ಮಣ್ಣಿಗೆ ಹೊನ್ನಿನ ಬೆಲೆ ಬರುತ್ತಿದೆ ಅಲ್ಲವಾ? ಮಣ್ಣಿನಿಂದ ಕಬ್ಬಿಣ ಸಿಕ್ಕುತ್ತದೆ ಅಂದಕೂಡಲೇ ಮಣ್ಣು ಚಿನ್ನದ ಬೆಲೆಯನ್ನು ಪಡೆದುಕೊಂಡು ಬಿಟ್ಟಿದೆ. ರಿಯಲ್ ಎಸ್ಟೇಟು ದಾಂಢಿಗರು ಮಣ್ಣಿಗೆ ಉಕ್ಕಿನ ಬೇಲಿಯನ್ನು ಹಾಕಿ, ಹರಿತವಾದ ಚಾಕುವಿನಿಂದ ಕೇಕ್ ಕಟ್ ಮಾಡಿದ ಹಾಗೆ ತುಂಡು ತುಂಡು ಮಾಡಿ ಚಿನ್ನದ ಬೆಲೆಗೆ ಮಾರುತ್ತಿದ್ದಾರೆ. ಸರಕಾರಗಳು ಮಣ್ಣಿರುವುದು ಸಿರಿವಂತರು ತಮ್ಮ ಕಾರ್ಖಾನೆ ಸ್ಥಾಪಿಸುವುದಕ್ಕೇ ಹೊರತು ರೈತರು ಉಳುಮೆ ಮಾಡುವುದಕ್ಕಲ್ಲ ಎಂದು ವರ್ತಿಸುತ್ತಾ ಬಡವರ ಬಾಯಿಗೆ ಮಣ್ಣು ಹಾಕುತ್ತಿವೆ. ಇಷ್ಟೆಲ್ಲಾ ಸಂಗತಿ ಮಣ್ಣಿನ ವಿಚಾರವಾಗಿಯೇ ನಡೆಯುತ್ತಿರುವುದು.

ನ.ಸಾ: ಅದೇನೋ ಸರ್ ಲಾರ್ಡ್ ಆದರೆ ಇದರಿಂದ ನಿಮಗೇನು ತೊಂದರೆ?

ನ.ಸಾ: ತೊಂದರೆ ಇದೆ. ನೋಡಿ, ನಾನು ಹುಟ್ಟಿದ್ದು ಮಣ್ಣಿನಿಂದ. ನಮ್ಮ ತಾಯಿ ಪಾರ್ವತಿ ಪರ್ವತ ರಾಜನ ಮಗಳು. ಆಕೆಯ ಮೈಯಿಂದ ತೆಗೆದ ಮಣ್ಣಿನಿಂದಲೇ ನಾನು ಹುಟ್ಟಿದ್ದು. ನನ್ನ ದೇಹದ ಪ್ರತಿಯೊಂದು ಕಣಕಣವೂ ಮಣ್ಣೇ. ಹೀಗಾಗಿ ನಾನು ಮಣ್ಣಿನ ಮಗ! ಮಣ್ಣಿನಿಂದಾಗಿ ಇಷ್ಟೆಲ್ಲಾ ಅನ್ಯಾಯ, ಅನಾಹುತ, ಅತ್ಯಾಚಾರ, ಶೋಷಣೆ ನಡೆಯುತ್ತಿರುವುದು ನನಗೆ ಅಪಮಾನ ಮಾಡಿದ ಹಾಗೇ ಅಲ್ಲವೇ? ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆಯೆಂದರೆ ಚೌತಿಯ ದಿನ ನನ್ನ ಮೂರ್ತಿಯನ್ನು ಮಾಡಲೂ ಜನರಿಗೆ ಮಣ್ಣು ಸಿಕ್ಕುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಕಲೆಸಿ ನಿರ್ಜೀವವಾದ ಮೌಲ್ಡಿಗೆ ಸುರಿದು ನನ್ನನ್ನು ಮಾಡುತ್ತಿದ್ದಾರೆ. ಹೀಗಾದರೆ ನಾನು ಮಣ್ಣಿನ ಮಗ ಹೇಗಾದೇನು? ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮಗನಾಗಬಹುದು ಅಷ್ಟೇ! (ಇದೇ ಸುಸಂಧಿಯನ್ನು ಬಳಸಿಕೊಂಡು ‘ಮಣ್ಣಿನ ಮಗ’ ಟೈಟಲನ್ನು ಯಾರ್ಯಾರೋ ಹೈಜಾಕ್ ಮಾಡುತ್ತಿದ್ದಾರೆ)

ನ.ಸಾ: ಹೌದು ಲಾರ್ಡ್ ಇದು ನಿಜಕ್ಕೂ ದುಃಖದ ಸಂಗತಿ. ಆದರೆ ನಮ್ಮಗಳ ಕೈಗಳೂ ಕಟ್ಟಿಹೋಗಿವೆ. ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಗಳನ್ನೆಲ್ಲಾ ಸರಕಾರಗಳ ಕೈಗೆ ಕೊಟ್ಟು ಸುಮ್ಮನಾಗಿದ್ದೇವಲ್ಲ?

ವಿ: ನೀವೆಂಥಾ ಮಡ್ಡಿಗಳು! ನಿಮ್ಮನ್ನು ನೀವು ಪ್ರಾಮಾಣಿಕರು, ಅಸಹಯಾಕರು, ಶೋಷಿತರು ಎಂದು ಅದೆಷ್ಟು ಕಾಲ ನಂಬಿಕೊಂಡು ಕಾಲ ಕಳೆಯುತ್ತೀರಿ? ನಡೆಯುತ್ತಿರುವ ಎಲ್ಲಾ ಅಕ್ರಮ, ಅನ್ಯಾಯಗಳಲ್ಲಿ ನೀವೂ ಪಾಲುದಾರರು ಎಂಬುದನ್ನು ನೆನೆಪಿಟ್ಟುಕೊಳ್ಳಿ. ಸರಕಾರವೇನು ದೇವರು ಮಾಡಿದ ವ್ಯವಸ್ಥೆಯಲ್ಲ. ನೀವೇ ಕಟ್ಟಿಕೊಂಡದ್ದು. ಅದರ ಮಂತ್ರಿಗಳೇನೂ ದೇವರ ಆಯ್ಕೆಯಲ್ಲ. ನೀವೇ ಐದು ವರ್ಷಕ್ಕೊಮ್ಮೆ ಆರಿಸಿ ಕಳುಹಿಸಿದ್ದು. ಅವರು ಲೂಟಿ ಮಾಡಿದ ರಖಮಿನಲ್ಲಿ ಸಾಧ್ಯವಾದಷ್ಟನ್ನು ಚುನಾವಣೆಯ ಸಮಯದಲ್ಲಿ ಗೆಬರಿಕೊಂಡು ಓಟು ಹಾಕುತ್ತೀರಿ. ಮತ್ತದೇ ಸರಕಾರವನ್ನು ತಂದುಕೊಳ್ಳುತ್ತೀರಿ. ಪಾಪ, ನಾಡಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ನಿಮಗೆ! ಹೆಚ್ಚು ಬೈಯ್ಯುವುದಕ್ಕೆ ಹೋಗುವುದಿಲ್ಲ, ಈ ಬಾರಿ ಬೆಲೆಯೇರಿಕೆಯ ಸಂಕಷ್ಟದಲ್ಲೂ ಸಹ ನನಗೆ ಹೊಟ್ಟೆ ತುಂಬಾ ಭಕ್ತಿಯ, ಶ್ರದ್ಧೆಯ ಕಾಯಿ ಕಡುಬು, ಮೋದಕಗಳನ್ನು ಪ್ರೀತಿಯಿಂದ ತಿನ್ನಿಸಿದ್ದೀರಿ. ನಿಮಗೆ ನಾನು ವಿದ್ಯಾ, ಬುದ್ಧಿಯನ್ನು ಕರುಣಿಸುತ್ತೇನೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ.

ನ.ಸಾ: ಧನ್ಯವಾದಗಳು ಲಾರ್ಡ್ ವಿಘ್ನೇಶ್ವರ, ನಗೆ ನಗಾರಿಯೊಂದಿಗಿನ ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು.

ವಿ: ಹ್ಹ! ಹಾಗೆ ಈ ಸಂದರ್ಶನದ ಬಗ್ಗೆ ಏನಾದರೂ ಡಿಬೇಟ್ ಮಾಡುವುದಿದ್ದರೆ ನನ್ನ ಮೇಲ್ ಐಡಿ(vnk_gaja@gmail.com) ಗೆ ಒಂದು ಮೇಲ್ ಒಗಾಯಿಸಿ.

ಕಂಡವರ ಭಯಾಗ್ರಫಿ

12 ಸೆಪ್ಟೆಂ

ಅವರು ನಮಗಿಂಥ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ನಾನು ಉಪವಾಸ ಮಾಡಲ್ಲ!


ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’

‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.

‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.

‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’

ನಗುವುದಕ್ಕೆ ಕಾರಣ ಬೇಕಿತ್ತಾ?

11 ಸೆಪ್ಟೆಂ

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು ಎಂಬುದು ಅರ್ಥವೇ ಆಗದ ಸಂಗತಿ.

ಇವರಿಗೆ ಹೇಳಬೇಕಾದ್ದು ಇಷ್ಟೇ, ‘ಮಹಾ ಸ್ವಾಮಿ ನೀವು ಬಹು ದೊಡ್ಡವರಾಗಿದ್ದೀರಿ. ದೊಡ್ಡ ದೊಡ್ಡದನ್ನು ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮಿಡೀ ಬದುಕನ್ನು ಸವೆಸಿದ್ದೀರಿ. ಅತ್ಯುತೃಷ್ಟವಾದ ಸಿದ್ಧಾಂತಗಳು, ತತ್ವಗಳು, ಬೃಹದ್ಗ್ರಂಥಗಳನ್ನು ಅಧ್ಯಯನ ಮಾಡುವಲ್ಲಿ ನೀವು ಪೂರ್ಣ ಶಕ್ತಿಯನ್ನು ತೊಡಗಿಸಿದ್ದೀರಿ. ಬಹುಶಃ ಈ ಹಂತದಲ್ಲಿ ನೀವು ತುಂಬಾ ಹಿಂದಿನ ಅಂದರೆ ನಿಮ್ಮ ಬಾಲ್ಯದ ಗುಣಗಳನ್ನು ಕೊಂಚ ಮರೆತಿದ್ದೀರಿ. ನೆನಪಿದೆಯೇ ಆಗ ನೀವು ಬಸ್ಸಿನ ಮುಂದಿನ ಸೀಟಿನಲ್ಲಿ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದಿರಿ. ನಿಮ್ಮ ಹಿಂದಿನ ಸೀಟಿನಲ್ಲಿ ಕುಳಿತ ಅಂಕಲ್ಲೊ, ಆಂಟಿಯೋ ನಿಮ್ಮನ್ನು ನೋಡಿ ‘ಐ ಕಳ್ಳಾ…’ ಎಂದು ಕಣ್ಣು ಮಿಟುಕಿಸಿದರೆ ಸಾಕು ನೀವು ಕಿಲಕಿಲನೇ ನಗುತ್ತಿದ್ದಿರಿ. ಪುನಃ ಅವರು ಕಣ್ಣು ಮಿಟುಕಿಸಿದಾಗ ಮತ್ತೆ ಅಷ್ಟೇ ಲವಲವಿಕೆಯಿಂದ ನಗುತ್ತಿದ್ದಿರಿ. ಪುನಃ ಪುನಃ ಎಷ್ಟು ಬಾರಿ ನಕ್ಕರೂ ನಿಮಗೆ ಆಯಾಸವಾಗುತ್ತಿರಲಿಲ್ಲ. ಬೇಸರವಾಗುತ್ತಿರಲಿಲ್ಲ.

‘ಯೋಚಿಸಿ, ನಿಮಗೆ ಎದುರಿನ ಅಂಕಲ್ಲೋ ಆಂಟಿಯೋ ಯಾವ ಜೋಕನ್ನೂ ಹೇಳುತ್ತಿರಲಿಲ್ಲ. ಅಸಲಿಗೆ ಅವರ ಪರಿಚಯವೂ ನಿಮಗಿರುತ್ತಿರಲಿಲ್ಲ. ಅವರು ಎಂಥವರು, ಅವರ ಸಂಸ್ಕೃತಿ ಎಂಥದ್ದು, ಜಾತಿ ಯಾವುದು, ಆಸಕ್ತಿಗಳ್ಯಾವುವು ಎಂಬುದೊಂದೂ ಗೊತ್ತಿರಲಿಲ್ಲ. ಆದರೆ ಎದುರಿಗಿದ್ದವರ ಮುಖದಲ್ಲಿನ ನಿಷ್ಕಲ್ಮಶ ನಗೆಯನ್ನು ನೀವು ಗುರುತಿಸಿದ್ರಿ, ನೀವೂ ಅಷ್ಟೇ ನಿಷ್ಕಲ್ಮಶವಾಗಿ ನಗುತ್ತಿದ್ದಿರಿ. ನಿಮ್ಮ ನಗುವನ್ನು ಕಂಡು ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಭಯವಾಗುತ್ತಿರಲಿಲ್ಲ. ನಿಮ್ಮ ನಗುವಿನಲ್ಲಿನ ವಿಶ್ವಾಸದಿಂದಾಗಿ ನೋಡಿದವರೆಲ್ಲರೂ ನಿಮ್ಮನ್ನು ನಗಿಸುತ್ತಿದ್ದರು. ನೀವು ನಗುತ್ತಲೇ ಇದ್ದಿರಿ. ನಿಮಗೆ ಕಾರಣಗಳು ಬೇಕಿರಲಿಲ್ಲ ಆಗ ನಗಲು… ನಗು ನಿಮ್ಮೊಳಗಿತ್ತು, ಹೊರಹಾಕಲು ನೆಪಗಳನ್ನು ಮಾತ್ರ ಅಪೇಕ್ಷಿಸುತ್ತಿದ್ದಿರಿ. ಈಗ ಒಳಗಿನ ನಗುವನ್ನು ಬತ್ತಿಸಿಕೊಂಡಿದ್ದೀರಿ, ಕಾರಣಗಳನ್ನು ಹುಡುಕುತ್ತಿದ್ದೀರಿ. ಹೇಳಿ, ನಾವು ನಿಮ್ಮಷ್ಟು ಬುದ್ಧಿವಂತರಲ್ಲ. ಆದರೆ ನಿಮಗೆ ಇದು ವಿವೇಕ ಅನ್ನಿಸುತ್ತದೆಯೇ?’

ಏನಂತೀರಿ, ನಮ್ಮ ನಗು ಕಳುದು ಹೋದದ್ದು ಎಲ್ಲಿ ಎಂಬುದೇನಾದರೂ ನಿಮಗೆ ತಿಳಿಯಿತೇ?

ವಿನಾಯಕನ ಸಂದರ್ಶನ- ಶೀಘ್ರದಲ್ಲಿ!

10 ಸೆಪ್ಟೆಂ

ಗಜಾನನ, ಗಣಪತಿ, ವಿನಾಯಕನಿಂದ ನಗೆ ನಗಾರಿಯ ಕಛೇರಿಗೆ ಬಂದಿದ್ದ ಇಮೇಲಿನ ಬಗ್ಗೆ ಬಂದ ವರದಿಯನ್ನು ಓದಿದ್ದೀರಿ. ಆ ಇ-ಮೇಲನ್ನು ಓದಿ ನಗೆ ಸಾಮ್ರಾಟರು ವಿನಾಯಕನೊಂದಿಗೆ ಸಂದರ್ಶನವನ್ನು ಏರ್ಪಡಿಸಲು ಹೆಣಗುತ್ತಿದ್ದಾರೆ ಎಂದು ಹೇಳಿದ್ದೆವು. ಸಾಮ್ರಾಟರು ತಮ್ಮೆಲ್ಲಾ ಪ್ರಭಾವ ಹಾಗೂ ಯಾರಿಗೂ ತಿಳಿಯದ ಪ್ರಸಿದ್ಧಿ ಜೊತೆಗೆ ತೃಣ ಮಾತ್ರವಾದ ಆಸ್ತಿಕತೆಯ ಬಲದಿಂದ ಕೆಲಸವನ್ನು ಸಾಧಿಸಿಕೊಂಡು ಬಂದಿದ್ದಾರೆ.

ಹೌದು, ಲಾರ್ಡ್ ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೋಸಿವ್ ಆಗಿ ಸಂದರ್ಶನ ನೀಡಿದ್ದಾನೆ. ಶೀಘ್ರದಲ್ಲಿಯೇ ಗಣೇಶನೊಂದಿಗಿನ ಸಂದರ್ಶನ ನಗೆ ನಗಾರಿ ಡಾಟ್ ಕಾಮ್ ನಲ್ಲಿ ಪ್ರಕಟವಾಗಲಿದೆ. ನಿಮ್ಮ ಕಂಪ್ಯೂಟರನ್ನು ಸನ್ನದ್ಧವಾಗಿಟ್ಟುಕೊಳ್ಳಿ!

some (ಸಂ)

ಇದು ಪ್ರತಿ ಕ್ಷಣದ ಅಚ್ಚರಿ!

10 ಸೆಪ್ಟೆಂ

(ನಗೆ ನಗಾರಿ ವೈಯಕ್ತಿಕ ಬ್ಯೂರೋ)

ನಾಡಿನ ಹೆಸರಾಂತ ಸಂಪಾದಕರು ನಡೆಸುವ ನೂರಾರು ಸಂಗತಿಗಳಲ್ಲಿ ಒಂದಾದ ಅದ್ಭುತ, ಅಮೋಘ ಟ್ಯಾಬ್ಲಾಯ್ಡ್‌‍ವೊಂದರ ಸಂದರ್ಶನಕ್ಕೆ ನಗೆ ಸಾಮ್ರಾಟರ ಛೇಲ ಕುಚೇಲ ಹಾಜರಾಗಿದ್ದ ಆಘಾತಕಾರಿ ಸಂಗತಿ ಇದೀಗ ತಾನೆ ಬಯಲಾಗಿದೆ. ನಗೆ ನಗಾರಿಯಲ್ಲಿನ ಸಂ-ಚೋದನೆಯಿಂದ ಬೋರು ಹೊಡೆದು ವಾರದ ಅಚ್ಚರಿಯಲ್ಲಿ ಪಾಲ್ಗೊಳ್ಳಲು ಆತ ಆತ ಸಂದರ್ಶನಕ್ಕೆ ಓಡಿದ್ದ ಎಂದು ತಿಳಿದುಬಂದಿದೆ.

ಸಂದರ್ಶನಕ್ಕೆ ಹಾಜರಾದ ನೂರು ಪ್ಲಸ್ ಅಭ್ಯರ್ಥಿಗಳಲ್ಲಿ ಕುಚೇಲನನ್ನು ಹೊರತು ಪಡಿಸಿದರೆ ಮತ್ತೆಲ್ಲರೂ ಶಿಫಾರಸ್ಸು ಪತ್ರಗಳನ್ನು ಕಿಸೆಯಲ್ಲಿ ಸಿಕ್ಕಿಸಿಕೊಂಡು ಬಂದಿದ್ದರು. ಕುಚೇಲ ಒಂದೊಂದೇ ಪತ್ರವನ್ನು ಇಣುಕಿಣುಕಿ ನೋಡಿದ, ಅಲ್ಲಿ ರಾಜಕಾರಣಿಗಳ ಹೆಸರು ಕಂಡದ್ದು ಕಡಿಮೆ. ಹೆಚ್ಚು ಹೆಸರುಗಳು ಕನ್ನಡ ನಾಡು ಮೆಚ್ಚಿ ಹಾಡಿ ಹೊಗಳಿದ ಚಲನ ಚಿತ್ರ ನಿರ್ದೇಶಕರು, ಖ್ಯಾತ ಅಂಕಣಕಾರರು ಹಾಗೂ ಪ್ರಖ್ಯಾತ ವಕೀಲರುಗಳ ಹೆಸರುಗಳೇ ಇದ್ದವು. ಸಂದರ್ಶನಕ್ಕೆ ಕದ್ದು ಹಾಜರಾಗುವ ಗಡಿಬಿಡಿಯಲ್ಲಿ ಕುಚೇಲ ಯಾವ ಶಿಫಾರಸ್ಸು ಪತ್ರಗಳನ್ನೂ ಒಯ್ಯಲು ಸಾಧ್ಯವಾಗಲಿಲ್ಲ. ನಗೆ ಸಾಮ್ರಾಟರು ಒಂದು ಪತ್ರ ಗೀಚಿಕೊಟ್ಟಿದ್ದರೆ ಎಷ್ಟು ಸುಲಭವಾಗುತ್ತಿತ್ತು ಕೆಲಸ ಎಂದು ಆತನಿಗೆ ಕ್ಷಣ ಮಾತ್ರಕ್ಕಾದರೂ ಅನ್ನಿಸಲಿಲ್ಲ ಎಂಬುದು ವರದಿಯಾಗಿದೆ.

ಸಂದರ್ಶನದ ದಿನ ಕುಚೇಲ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡು ಟ್ಯಾಬ್ಲಾಯ್ಡಿನ ಕಛೇರಿಗೆ ಹೋಗಿದ್ದ. ಹಾಗೆ ಹೋಗುವ ಮುನ್ನ ಸಂದರ್ಶನಕ್ಕೆ ತಯಾರಿ ಮಾಡುವವನಂತೆ ಎರಡು ದಿನ ಹಾಗೂ ಒಂದು ರಾತ್ರಿ ಕುಳಿತು ಬಹುವಾಗಿ ಓದಿಕೊಂಡಿದ್ದ. ಪತ್ರಿಕೆಯ ಪ್ರಾರಂಭ, ಹಿನ್ನೆಲೆ, ನಿಲುವು, ವಸ್ತುನಿಷ್ಠತೆ, ಬದ್ಧತೆಯ ಬಗೆಗೆ ಆತ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಾಗಿ ಸಂಪಾದಕರು ಯಾವುದೋ ದೂರದ ಊರಿನಿಂದ ಬೆಂಗಳೂರಿಗೆ ಹಾರಿ ಬಂದಾಗ ಅವರ ಕಿಸೆಯಲ್ಲಿದ್ದದ್ದು ಏನು? ಸಂಪಾದಕರು ಎಷ್ಟೆಲ್ಲಾ ಕಷ್ಟ ಪಟ್ಟು ಪತ್ರಿಕೆಯನ್ನು ಪ್ರಾರಂಭಿಸಿದರು? ಸಂಪಾದಕರು ದಿನಕ್ಕೆ ಸರಾಸರಿಯಾಗಿ ಎಷ್ಟು ಸಿಗರೇಟುಗಳನ್ನು ಸುಟ್ಟು, ಎಷ್ಟು ತಾಸುಗಳ ಕಾಲ ಓದಿ, ಎಷ್ಟು ಪುಟಗಳವರೆಗೆ ಕೈಬರಹ ಕೆಡದ ಹಾಗೆ ಬರೆಯುತ್ತಿದ್ದರು? ಸಂಪಾದಕರ ಹಳೆಯ ಗೆಳೆಯರುಗಳು ಯಾರು, ಗೆಳತಿಯರು ಯಾರು? ಯಾರ್ಯಾರ ಮನೆಯಲ್ಲಿ ಊಟ ಮಾಡಿ ಎಲ್ಲೆಲ್ಲಿ ಮಲಗಿ ಎದ್ದರು? ಸಂಪಾದಕರ ಮೆಚ್ಚಿನ ಲೇಖಕರು ಯಾರು, ನೆಚ್ಚಿನ ಪುಸ್ತಕ ಯಾವುದು? ಸಂಪಾದಕರಿಗೆ ಯಾವ ರೀತಿಯ ಬಟ್ಟೆ ಎಂದರೆ ಇಷ್ಟ? – ಎಂಬೆಲ್ಲಾ ವಿಷಯಗಳ ಬಗ್ಗೆ ಸವಿವರವಾಗಿ ಅಧ್ಯಯನ ಕೈಗೊಂಡು ತಯಾರಿ ನಡೆಸಿದ್ದ.

ತನ್ನ ಬಯೋ ಡೇಟಾದಲ್ಲಿನ ಹವ್ಯಾಸಗಳು, ಇಲ್ಲಿಯವರೆಗಿನ ಸಾಧನೆಗಳು ಮುಂತಾದ ಸಂಗತಿಗಳು ಸಂದರ್ಶಕರಿಗೆ ಅದೆಷ್ಟು ಗೌಣ ಎಂಬುದು ಕುಚೇಲ ಹೇಗೋ ಪತ್ತೆ ಮಾಡಿಬಿಟ್ಟಿದ್ದ. ಆತನ ಬಯೋಡೇಟಾದಲ್ಲಿ ಹವ್ಯಾಸಗಳು, ಕುಟುಂಬ, ಮಾತನಾಡುವ ಭಾಷೆಗಳು ಮುಂತಾದ ಕಾಲಮ್ಮುಗಳನ್ನು ಆತ ಸಂಪಾದಕರ ಹವ್ಯಾಸ, ಅವರ ಇಷ್ಟ, ಅವರ ಚಟಗಳು, ಅವರ ಸಾಧನೆಗಳಿಂದಲೇ ತುಂಬಿಸಿದ್ದ. ಕಡೆಗೆ ಒಂದು ಹೆಚ್ಚುವರಿ ಪುಟದಲ್ಲಿ ಸಂಪಾದಕರ ಮನೆಯವರ ಹಾಗೂ ಮನೆಯಲ್ಲಿರುವವರ ವಿವರಗಳು ಹಾಗೂ ಅವರ ಇಷ್ಟ ಕಷ್ಟ, ಸಾಧನೆಗಳ ಬಗೆಗೂ ಬರೆದಿದ್ದ.

ಸರಿ, ಸಂದರ್ಶನ ಪ್ರಾರಂಭವಾಯಿತು. ಪ್ರಶ್ನೆಗಳನ್ನು ಕೇಳಲಾಯಿತು. ಕುಚೇಲ ಮೊದಲೇ ಆದ್ಯಂತವಾಗಿ ತಯಾರಿ ನಡೆಸಿದ್ದರಿಂದ ಯಾವ ವಶೀಲಿಯೂ ಇಲ್ಲದೆ ಕೆಲಸಕ್ಕೆ ನೇಮಕಗೊಂಡ. ತಾಸೆರಡು ತಾಸು ಮೇಕಪ್ ಮಾಡಿಕೊಂಡು ಸಂಪಾದಕರೊಂದಿಗೆ ಫೋಟೊ ತೆಗೆಸಿಕೊಂಡು ಅದು ಪ್ರಕಟವಾಗುವ ಮುಂದಿನ ಸಂಚಿಕೆಗಾಗಿ ಕಾಯುತ್ತಾ ಕುಳಿತ.

ಇಷ್ಟೆಲ್ಲಾ ಆಗಿಯಾದ ಮೇಲೆ ಕುಚೇಲ ಇಂದು ನಮ್ಮ ಕಛೇರಿಗೆ ವಾಪಸ್ಸು ಓಡಿ ಬಂದಿರುವುದು ನಿಮಗಷ್ಟೇ ಅಲ್ಲದೇ ನಮ್ಮಲ್ಲೂ ವಿಸ್ಮಯ ಹಾಗೂ ಆಶ್ಚರ್ಯವನ್ನು ಹುಟ್ಟಿಸಿದೆ. ಇದಕ್ಕೆ ಕಾರಣವೇನೆಂದು ಕೇಳಲಾಗಿ, ಕುಚೇಲ ತನ್ನ ಕಷ್ಟವನ್ನು ತೋಡಿಕೊಂಡದ್ದು ಹೀಗೆ, “ಸಂದರ್ಶನಕ್ಕೆ ನಾನು ನಡೆಸಿದ ತಯಾರಿಯನ್ನು ಕಂಡು ನಿಜಕ್ಕೂ ಸಂದರ್ಶಕಿ ದಂಗು ಬಡಿದುಹೋಗಿದ್ದಳು. ಆಕೆಯ ಮಾತುಗಳಿಂದ ನನಗೆ ಕೆಲಸ ಗ್ಯಾರಂಟಿ ಎಂದು ಸಂದರ್ಶನ ಮುಗಿಯುತ್ತಿದ್ದ ಹಾಗೆಯೇ ತಿಳಿದು ಹೋಗಿತ್ತು. ನಾನು ಆ ದಿನದಿಂದಲೇ ಕೆಲಸ ಶುರು ಮಾಡಿಕೊಳ್ಳಲು ಬೇಕಾದ ತಯಾರಿ ಮಾಡಿಕೊಳ್ಳತೊಡಗಿದೆ. ವರದಿಗಾರಿಕೆಗೆ ಏನೇನೆಲ್ಲಾ ತಿಳಿದುಕೊಳ್ಳಬೇಕು ಎಂಬ ಬಗ್ಗೆ ಯೋಚಿಸತೊಡಗಿದೆ. ಯಾವ ಯಾವ ಸುದ್ದಿ ಮೂಲಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಇನ್ ಫಾರ್ಮರುಗಳನ್ನು ಪರಿಚಯಿಸಿಕೊಳ್ಳಬೇಕು, ಯಾವ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ನನ್ನ ಪರಿಚಯ ಕೊಡಬೇಕು ಎಂದೆಲ್ಲಾ ಪಟ್ಟಿ ಮಾಡಿದೆ. ನಮ್ಮ ಸಂಪಾದಕರು ಹೇಳುವ ಹಾಗೆಯೇ ನಾನು ಪೂರ್ಣ ತಯಾರಿಯೊಂದಿಗೆ ಫೀಲ್ಡಿಗೆ ಇಳಿಯುವ ಹುಮ್ಮಸ್ಸಿನಲ್ಲಿದ್ದೆ.

“ಅಷ್ಟರಲ್ಲಿ ಪತ್ರಿಕೆಯ ಮೇಲ್ವಿಛಾರಕಿ ಬಂದು ನನಗೆ ಒಂದು ನೂರು ಪುಟಗಳ ಪುಸ್ತಕ ಕೊಟ್ಟಳು. ‘ಇದನ್ನು ಸ್ಟಡಿ ಮಾಡಿ ನೆನಪಿಟ್ಟುಕೊಂಡು ಆ ಮೇಲೆ ವರದಿಗಾರಿಕೆಗೆ ತೊಡಗಿಕೊಳ್ಳುವುದು’ ಎಂಬ ನೋಟ್ ಇತ್ತು. ಆ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಬವಳಿ ಬಂದು ನಾನು ಅಲ್ಲಿಂದ ಓಟಕಿತ್ತಿದ್ದೆ…”

ಸ್ವಲ್ಪ ಕಾಲ ಸುಧಾರಿಸಿಕೊಳ್ಳಲು ಮಾತು ನಿಲ್ಲಿಸಿದ ಕುಚೇಲ ನಗಾರಿ ಕಛೇರಿಯವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ. ಮಾತು ಮುಂದುವರೆಸಿ, “ಆ ಪುಸ್ತಕದಲ್ಲೇನಿತ್ತು ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ನನ್ನದೂ ಅದೇ ಪ್ರಶ್ನೆಯಾಗಿತ್ತು. ಪುಟ ತಿರುವಿ ನೋಡಿದೆ ಅದರಲ್ಲಿ ನೂರಾರು ಮಂದಿ ಪ್ರಮುಖರ, ಹೆಸರಾಂತ ಕಲಾವಿದರ, ಸಂಗೀತಗಾರರ, ವೈದ್ಯರ, ವಕೀಲರುಗಳ, ಪೊಲೀಸು ಆಫೀಸರುಗಳ, ಕೆಲವು ಪತ್ರಕರ್ತರ , ಮಠಾಧಿಪತಿಗಳ, ರಾಜಕಾರಣಿಗಳ ಹೆಸರುಗಳಿದ್ದವು. ಅವುಗಳ ಪಕ್ಕದ ಕಾಲಮ್ಮಿನಲ್ಲಿ ಇವರು ನಮ್ಮ ಸಂಪಾದಕರಿಗೆ ಹೇಗೆ ಪರಿಚಿತರು ಎಂಬುದರ ಬಗ್ಗೆ ಟಿಪ್ಪಣಿ ಇತ್ತು. ಕೆಲವರು ಸಂಪಾದಕರ ‘ಭಿಕಾರಿ’ ದಿನಗಳ ಒಡನಾಡಿಗಳು. ಕೆಲವರು ಸಂಪಾದಕರು ಪತ್ರಿಕೆಯನ್ನು ಕಟ್ಟಲು ಮೆಟ್ಟಿಲಾಗಿ, ಇಟ್ಟಿಗೆಯಾಗಿ ಬಳಸಿಕೊಂಡವರು, ಕೆಲವರು ಸಂಪಾದಕರ ಸೋದರಳಿಯನ ಸಂಬಂಧಿಕರ ಗೆಳೆಯರು, ಕೆಲವರು ಸಂಪಾದಕರ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಂಗೀತ ಮಾಡುವವರು, ಹಾಡು ಬರೆಯುವವರು, ಕೆಲವರು ಸಂಪಾದಕರ ಕಾಲೇಜಿಗೆ ಗ್ರ್ಯಾಂಟ್ ಕೊಡುವವರು- ಹೀಗೆ ಡಿಟೇಲ್ಸ್ ಇದ್ದವು. ‘ಇದನ್ನೆಲ್ಲಾ ಅಧ್ಯಯನ ಮಾಡಿಕೊಂಡು ಯಾರು ಯಾರು ಸಂಪಾದಕರಿಗೆ ತುರ್ತು ಸಹಾಯಕ್ಕೆ ಆವಶ್ಯಕವೋ, ಯಾರು ಯಾರಿಂದ ಸಂಪಾದಕರಿಗೆ ಹತ್ತಿರದ ಭವಿಷ್ಯದಲ್ಲಿ ಲಾಭವಿದೆಯೋ ಅವರನ್ನು ಲೋಕದ ಇಂದ್ರ ಚಂದ್ರ ಎಂದು ಬರೆಯಬೇಕೆಂದೂ, ಕೆಲವು ರೆಡ್ ಮಾರ್ಕಿನ ಹೆಸರುಗಳ ವ್ಯಕ್ತಿಗಳ ಬಗೆಗೆ- ಅವರು ಕೆಮ್ಮಿದರೂ, ಅಪಾನವಾಯುವನ್ನು ಹೊರಬಿಟ್ಟರೂ ಅದು ಅವರ ನೈತಿಕ ಅಧಃಪಥನ ಎಂಬಂತೆ ಬರೆಯಬೇಕೆಂದು ಸೂಚನೆ ಇತ್ತು.

“ಈ ಮಾರ್ಗದರ್ಶಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ವರದಿ ಮಾಡಬೇಕು. ಈ ಕೈಪಿಡಿಯ ಆಧಾರದ ಮೇಲೆಯೇ ಯಾರು ನಿಸ್ಪೃಹ ಅಧಿಕಾರಿ, ರಾಜಕಾರಣಿ, ಯಾರು ಕಚ್ಚೆ ಹರುಕ, ಯಾರು ಹೆಂಡತಿಗೆ ಹೊಡೆಯುತ್ತಾನೆ, ಯಾರಿಗೆ ಮಗಳಂಥ ಹೆಂಡತಿಯಂಥ ಗೆಳತಿಯಿದ್ದಾಳೆ ಎಂಬುದಾಗಿ ಬರೆಯಬೇಕು. ಈ ನಿಯಮಾನುಸಾರವೇ ಯಾವ ಸಿನೆಮಾ ಸೂಪರ್ ಹಿಟ್ಟು, ಮೆಗಾ ಹಿಟ್ಟು, ಯಾವುದು ಫ್ಲಾಪು, ಚಾಪ್ಟರ್ ಕ್ಲೋಸು ಎಂದು ಬರೆಯಬೇಕು. ಹಾಗೆಯೇ ಯಾವ ನಟ ರೈಸಿಂಗ್ ಸ್ಟಾರು, ಯಾವ ಯಾವ ಸ್ಟಾರು ಎಲ್ಲೆಲ್ಲಿ ಹುಟ್ಟಿತು, ಯಾವ ನಟಿ ಹೇಗೆ ಎಂಬುದನ್ನು ವರದಿ ಮಾಡಬೇಕು.’ ಎಂದು ನೂರು ಪುಟಗಳ ಕೈಪಿಡಿಯಲ್ಲಿತ್ತು… ಅದನ್ನು ಓದಿ ಬವಳಿ ಬಂದು ಬಸವಳಿದು ಒಂದೇ ಏಟಿಗೆ ಅಲ್ಲಿಂದ ಓಟಕ್ಕಿತ್ತಿ ಇಲ್ಲಿ ಸಾಮ್ರಾಟರ ನಗೆ ನಗಾರಿಗೆ ಹಿಂದಿರುಗಿರುವೆ” ಎಂದ.

ಈತನ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲು ಸಾಮ್ರಾಟರು ನಗೆ ನಗಾರಿಯ ಏಕ ಸದಸ್ಯ ಕಮಿಟಿಯ ಸಮಸ್ತರನ್ನೂ ಮೀಟಿಂಗಿಗಿ ಕರೆದಿದ್ದಾರೆ.

ಬುದ್ಧಿಜೀವಿಗಳಿದ್ದಾರೆ ಎಚ್ಚರ!

8 ಸೆಪ್ಟೆಂ

(ನಗೆ ನಗಾರಿ ಅಲರ್ಟ್)

ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರು, ಸಮಾಜ ಘಾತುಕರು, ಕಳ್ಳರು, ಖದೀಮರು, ಭ್ರಷ್ಟರು ಹಾಗೂ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯನ್ನು, ಮುನ್ನೆಚ್ಚರಿಕೆಯನ್ನೂ ತಮ್ಮ ಅನಿಯಮಿತವಾದ ಜಾಹೀರಾತುಗಳ ಮಧ್ಯದಲ್ಲಿ ಪ್ರಸಾರ ಮಾಡಿ ಮಾಡಿ ದಣಿಯುತ್ತಿವೆ ಮಾಧ್ಯಮಗಳು. ಈ ಮೂಲಕ ದೇಶದ ಜನರ ಬಗೆಗೆ, ಅವರ ಒಳಿತಿನ, ಕ್ಷೇಮದ ಬಗೆಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತಿವೆ. ಕೆಲವು ಮಾಧ್ಯಮಗಳು ಜನರ ಕ್ಷೇಮದ ಜೊತೆಗೆ ತಮ್ಮ ಟಿಆರ್‌ಪಿಯ ಕ್ಷೇಮವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಆದರೆ ಜನತೆಯ ಬಗ್ಗೆ, ದೇಶದ ಜನ ಸಾಮಾನ್ಯರ ಬಗ್ಗೆ ನೈಜ ಕಾಳಜಿಯುಳ್ಳ ಮಾಧ್ಯಮ ಮಾಡಬೇಕಾದ ಕೆಲಸವೊಂದನ್ನು ಮಾಡದೆ ಮೌನಕ್ಕೆ ಶರಣಾಗಿರುವುದನ್ನು ನಮ್ಮ ಸಂಪಾದಕರು ಪತ್ತೆ ಹಚ್ಚಿದ್ದಾರೆ. ಸಮಾಜದ ಬಗೆಗಿನ ಕಾಳಜಿಯನ್ನು ಕ್ಷಣ ಕ್ಷಣಕ್ಕೂ ಜನತೆಯೆದುರು ಬಿಚ್ಚಿಟ್ಟು ಆಮೂಲಕ ಜನತೆಯ ಮನದಾಳದಲ್ಲಿ ವಿಶ್ವಾಸವನ್ನು ಸಂಪಾದಿಸಿಕೊಂಡಿರುವ ನಮ್ಮ ಸಂಪಾದಕರು ಜನತೆ ಸದಾ ಎಚ್ಚರದಿಂದ ಇರಬೇಕಾದ ಸಂಗತಿಯ ಬಗ್ಗೆ ಯಾರೂ ಗಮನ ಹರಿಸದಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಾ ಅದಕ್ಕಿಂತ ಹೆಚ್ಚಿನ ಗಾಂಭೀರ್ಯದಲ್ಲಿ ಈ ಎಚ್ಚರಿಕೆಯನ್ನು ನೀಡುತ್ತಿದೆ.

ನಮ್ಮ ದೇಶದಲ್ಲಿ ಒಂದು ಬಗೆಯ ಆತಂಕವಾದಿ ಮನುಷ್ಯರು ಹುಟ್ಟುತ್ತಿದ್ದಾರೆ. ಇವರನ್ನು ‘ಬುದ್ಧಿ ಜೀವಿ’ ಎನ್ನಲಾಗುತ್ತದೆ.ತಮ್ಮ ಬುದ್ಧಿವಂತಿಯಲ್ಲೇ ತಮ್ಮ ಜೀವವಿದೆ ಎಂಬಂತೆ ವರ್ತಿಸುವುದು ಇವರ ಪ್ರಾಥಮಿಕ ಲಕ್ಷಣ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ (ಕೆಲವು ಹುಣ್ಣಿಮೆ, ಅಮವಾಸ್ಯೆಯ ಸಮಯದಲ್ಲಿ) ತಮ್ಮ ಬುದ್ಧಿಯಲ್ಲೇ ಇಡೀ ಸಮಾಜದ ಜನಸಾಮಾನ್ಯರ ಜೀವ ಇದೆ ಎಂದು ವರ್ತಿಸಲು ಶುರುಮಾಡುತ್ತಾರೆ. ಇವರು ದೇಶದ ಯಾವ ಮೂಲೆಯಲ್ಲಾದರೂ ಇರಬಹುದು. ಹುದುಗಿಕೊಳ್ಳುವುದು, ಅಡಗಿಕೊಳ್ಳುವುದು, ಬಚ್ಚಿಟ್ಟುಕೊಳ್ಳುವುದು ಇವೆಲ್ಲಾ ಇವರಿಗೆ ಆಗಬರದ ಸಂಗತಿಗಳು. ಇವರು ಸದಾ ಎಲ್ಲರ ಕಣ್ಣೆದುರೇ ಓಡಾಡಿಕೊಂಡಿರಲು ಬಯಸುತ್ತಾರೆ. ಜನರ ಕಣ್ಣೆದುರು ಅಲ್ಲದಿದ್ದರೂ ಕೆಮಾರದ ಕಣ್ಣೆದುರು ಓಡಾಡಲು ಪ್ರಾಶಸ್ತ್ಯ ನೀಡುತ್ತಾರೆ. ಇವರು ತತ್ವ, ಸಿದ್ಧಾಂತ, ಮೂಲಭೂತ ನಂಬಿಕೆಗಳು, ಇವರ ಕಾರ್ಯಕ್ಷೇತ್ರ, ಕಾರ್ಯಾಚರಣೆಯ ವೈಖರಿ, ಇವರಿಂದ ಜನಸಾಮಾನ್ಯರಿಗೆ ಉಂಟಾಗುವ ಅಪಾಯಗಳು, ಇವರನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮುಂತಾದವುಗಳ ಬಗ್ಗೆ ನಮ್ಮ ಅಧಿಕೃತ ಹಾಗೂ ಅನಧಿಕೃತ ಸುದ್ದಿಮೂಲಗಳು ಮಾಹಿತಿ ಕಲೆಹಾಕುತ್ತಿವೆ. ಆದರೆ ತತ್ ಕ್ಷಣದಲ್ಲಿ ಈ ‘ಜೀವಿ’ಗಳ ಮುಖಚರ್ಯೆ ಹಾಗೂ ತೋರುವಿಕೆಯ ಬಗ್ಗೆ ಎಲ್ಲರೂ ತಿಳಿದಿರಲೇ ಬೇಕಾದ ಅಗತ್ಯವಿದೆ.

ಇಸ್ತ್ರಿ ಕಾಣದ ಕಾಟನ್ ಇಲ್ಲವೇ ಖಾದಿಯ ಮಂಡಿ ಮುಚ್ಚುವಷ್ಟು ಉದ್ದನೆಯ ಜುಬ್ಬ, ಜೀನ್ಸ್ ಪ್ಯಾಂಟು, ಹೆಗಲ ಮೇಲೊಂದು ಜೋಳಿಗೆಯಂಥ ಬ್ಯಾಗು ಇವು ಈ ಜೀವಿಗಳ ವೇಷ ಭೂಷಣ. ಇದನ್ನು ನೆನಪಿಟ್ಟುಕೊಂಡರೆ ನೀವು ಒಂದು ಮೈಲು ದೂರದಿಂದಲೇ ಇವರನ್ನು ಗುರುತು ಹಿಡಿದು ರಸ್ತೆ ಬದಲಾಯಿಸಿ ತಪ್ಪಿಸಿಕೊಳ್ಳಬಹುದು.ಆದರೆ ಈಗ ತಪ್ಪಿಸಿಕೊಳ್ಳುವ ಅಗತ್ಯವಿಲ್ಲ, ಸ್ವಲ್ಪ ಸಮೀಪ ಹೋಗಿ.

ಇನ್ನು ಸ್ವಲ್ಪ ಹತ್ತಿರಕ್ಕೆ ಬನ್ನಿ, ಹ್ಹ! ಮುಖ ಕಾಣುವಷ್ಟು ಹತ್ತಿರವಾದರೆ ಸಾಕು. ಈಗಲೇ ತುಂಬಾ ಹತ್ತಿರ ಹೋಗಿಬಿಡಬೇಡಿ. ಕೆದರಿದ ಕೂದಲು, ಕೆಲವೊಮ್ಮೆ ಕತ್ತಿನ ಹಿಂಭಾಗವನ್ನು ತುಂಬಿಸುತ್ತಾ ಬೆನ್ನ ಮೇಲೆ ಹರಿಯುವಷ್ಟು ಉದ್ದನೆಯ ಕೂದಲು, ತುಂಬಾ ಸೀನಿಯರ್ ‘ಜೀವಿ’ಯಾದರೆ ಆ ಅಲ್ಲಿ ಕೂದಲಿನ್ನು ಹುಡುಕಲು ಹೋಗಬೇಡಿ, ಆ ಬಯಲು ಪ್ರದೇಶದ ಮೇಲಿಂದ ಕಣ್ಣನ್ನು ಜಾರಿಸಿ ಮುಖಕ್ಕೆ ತನ್ನಿ! ಕುರುಚಲು, ಕುರುಚಲಾಗಿ ಪೊದೆಯಂತಹ ಗಡ್ಡ ಇದೇ ಅಲ್ಲವಾ, ಇದನ್ನು ಮೊದಲು ಕನ್ ಫರ್ಮ್ ಮಾಡಿಕೊಳ್ಳಿ. ಇದು ಬಹುಮುಖ್ಯವಾದ ಚರ್ಯೆ. ಕೆಲವು ಇನ್ ಸೈಡರ್ ಇನ್‌ಫಾರ್ಮೇಶನ್ ಪ್ರಕಾರ ಈ ‘ಜೀವಿ’ಗಳ ಗುಂಪಿನಲ್ಲಿ ಹೆಚ್ಚು ಹುಲುಸಾದ ಗಡ್ಡವಿರುವವರಿಗೆ ಪ್ರಾಮುಖ್ಯತೆ ಹೆಚ್ಚು ಎಂಬ ಅಲಿಖಿತ ನಿಯಮವಿದೆಯಂತೆ. ಈ ಬಗ್ಗೆ ಎಚ್ಚರವಹಿಸಿ. ಹ್ಹ! ಸರಿಯಾಗಿ ಊಹಿಸಿದಿರಿ, ಮೂಗಿನ ಮೇಲೆ ಆಗಲೋ ಈಗಲೋ ಜಾರಿ ಬೀಳುವಂತೆ ಒಂದು ಕನ್ನಡಕ ಕುಳಿತಿದೆಯಲ್ಲವೇ? ನಿಮ್ದೂ ಒಳ್ಳೇ ಅಬ್ಸರ್ವೇಶನ್ನು ಬಿಡಿ 🙂

ಹಾಗೆ ಸ್ವಲ್ಪ ಹತ್ತಿರಕ್ಕೆ ಬನ್ನಿ, ಆಗಲೇ ಕೆಮ್ಮಲು ಶುರು ಮಾಡಿಬಿಟ್ರಾ? ಹೌದು ಕಣ್ರೀ, ಈ ಬುದ್ಧಿ ಜೀವಿಗಳು ಸದಾ ಎಷ್ಟು equipped ಆಗಿರುತ್ತಾರೆ ಅಂತೀರಿ, ಅವರ ಕೈಲಿ ಸದಾ ಹರಿತವಾದ ಮೊನೆಯ ಲೇಖನಿ ಇದ್ದೇ ಇರುತ್ತದೆ. ಕೆಲವರು ಆಗಾಗ ತಮ್ಮ ಬಾಯೊಳಗಿನ ಹರಿತವಾದ ಉಪಕರಣದಿಂದ ಲೇಖನಿಯ ಹಿಂಭಾಗವನ್ನೂ ಸಹ ಹರಿತಗೊಳಿಸುತ್ತಿರುವುದು ಕಂಡು ಬರುತ್ತದೆ. ಗಾಬರಿಯಾಗಬೇಡಿ. ಕೈಯಲ್ಲಿ ಲೇಖನಿ ಇಲ್ಲದ ಸಂದರ್ಭದಲ್ಲಿ ಮತ್ತಷ್ಟು ಅಪಾಯಕಾರಿಯಾದ ಆಯುಧವಿರುತ್ತದೆ. ಅದರ ತುದಿ ನಿಗಿ ನಿಗಿ ಕೆಂಡದ ಹಾಗೆ ಕಂಗೊಳಿಸುತ್ತಿರುತ್ತದೆ. ಮತ್ತೊಂದು ತುದಿ ನೇರವಾಗಿ ಬುದ್ಧಿಜೀವಿಯ ಬಾಯೊಳಕ್ಕೆ ಚಾಚಿಕೊಂಡಿರುತ್ತದೆ. ಅಯ್ಯೋ, ಅರ್ಥವಾಗಿ ಹೋಯ್ತಾ? ಹೌದು ಕಣ್ರೀ ಅದು ಸಿಗರೇಟು! ಇದನ್ನು ಅಪಾಯಕಾರಿ ಅಂದದ್ದು ಅದು ನೀವು ಮಾರುದ್ದ ದೂರವಿದ್ದರೂ ನಿಮ್ಮನ್ನು ತನ್ನ ‘ಕಂಪಿ’ನಿಂದ ಕಂಗೆಡಿಸಿ ಒದ್ದಾಡಿಸುವುದರಿಂದ. ಆದರೆ ಮೊದಲನೆಯ ಉಪಕರಣದ ಪ್ರಭಾವ ಹಾಗೂ ಪರಿಣಾಮವನ್ನು ಗಮನಿಸಿದರೆ ಎರಡನೆಯದು ಅಷ್ಟೇನು ಅಪಾಯಕಾರಿ ಅಲ್ಲ ಎಂದೇ ಹೇಳಬಹುದು.

ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಮ್ಮ ಓದುಗರನ್ನು ಹಾಗೂ ಹಿತೈಷಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ. ಮುಂದೆ ಎಂದಾದರೂ ಈ ಮುಖಚರ್ಯೆಯ ವ್ಯಕ್ತಿಗಳು ಕಂಡುಬಂದರೆ ಎಚ್ಚರದಿಂದಿರಿ. ಇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವ ನಗೆಸಾಮ್ರಾಟರು ಉಪಯುಕ್ತ ಮಾಹಿತಿ ಸಿಕ್ಕೊಡನೆ ನಗೆ ನಗಾರಿಯಲ್ಲಿ ಪ್ರಕಟಿಸುತ್ತಾರೆ. ಅಷ್ಟರಲ್ಲಿ ನಿಮಗೇನಾದರೂ ಹೆಚ್ಚಿನ ಮಾಹಿತಿ ಸಿಕ್ಕಲ್ಲಿ ದಯವಿಟ್ಟು ನಗೆ ನಗಾರಿಗೆ ತಿಳಿಸಿ..