(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)
ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು.
ಹುಡುಕುವುದರ ಕಷ್ಟ ಅದನ್ನು ಕಳೆದುಕೊಂಡವನಿಗಿಂತ ಚೆನ್ನಾಗಿ ಅದಾರು ಬಲ್ಲರು? ತಿಪ್ಪೆಯ ಒಂದೊಂದು ಕೊಳೆತ ಹಣ್ಣಿನ ಸಿಪ್ಪೆಯನ್ನು ಸರಿಸುತ್ತಲೂ ಕಳೆದು ಹೋದ ವಸ್ತುವನ್ನು ಕಲ್ಪಿಸಿಕೊಳ್ಳುತ್ತಾ ಪ್ರಯಾಸಪಡುವ ಆಸಾಮಿಯನ್ನು ನೀವು ನೋಡಿರುತ್ತೀರಿ. ಆತ ರಸ್ತೆಯಲ್ಲಿ, ಚರಂಡಿಯ ಬಳಿ, ಶಾಲೆಯ ಮೈದಾನದಲ್ಲಿ, ತಿಪ್ಪೆ ಗುಂಡಿಯ ಸನಿಹ, ತಾನು ನಿದ್ರೆಯಲ್ಲಿ ಓಡಾಡಿರಬಹುದಾದ ಜಾಗವನ್ನೂ ಸಹ ಬಿಡದೆ ಆತ ತಲಾಶಿಸುತ್ತಿರುವಾಗ ದಾರಿಹೋಕರು ಮಾಡುವುದೇನು? ಚಡ್ಡಿಯೋ, ಪ್ಯಾಂಟೋ ಯಾವುದೋ ಎರಡು ಜೇಬಿರುವ ತೊಡುಗೆಯಾದರೆ ಅವೆರಡೂ ಜೇಬಿನೊಳಕ್ಕೆ ಕೈಗಳನ್ನು ಇಳಿಯ ಬಿಟ್ಟು, “ಏನು?” ಅನ್ನುವಂತೆ ನೋಟದಲ್ಲೇ ಪ್ರಶ್ನೋತ್ತರ ಮಾಲಿಕೆ ಆರಂಭಿಸುತ್ತಾರೆ. ನೀವು ಕೈ ಬಾಯಿ, ಮುಖ ಯಾವುದಕ್ಕೂ ಬಿಡುವಿಲ್ಲದ ಹಾಗೆ ಹುಡುಕಾಟದಲ್ಲಿ ತೊಡಗಿರುವಾಗ ಆ ನಿಮ್ಮ ಹಿತಚಿಂತಕ ದಾರಿಹೋಕ ತನ್ನ ಅನುಭವ ಸಾರವನ್ನೆಲ್ಲ ಹೀರಿ ಸಲಹೆಗಳನ್ನು, “ಹುಶಾರಾಗಿ ಇಟ್ಟುಕೊಳ್ಳಬಾರದಾ…” ಎನ್ನುವಂತಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಬುದ್ಧಿಮಾತುಗಳನ್ನು ಅರ್ಪಿಸುತ್ತಾನೆ. ಭಕ್ತ ಕೊಟ್ಟಿದ್ದನ್ನೆಲ್ಲ ಸ್ವೀಕರಿಸುವ ತಿಮ್ಮಪ್ಪನ ಔದಾರ್ಯ ನಿಮ್ಮಲ್ಲಿದ್ದರೆ ಆ ದಾರಿಹೋಕನ ಬೆನ್ನು ನಿಮ್ಮ ಬೈಗುಳದ ಆಲಿಂಗನವಿಲ್ಲದೆ ಬ್ರಹ್ಮಚರ್ಯ ಪಾಲಿಸುತ್ತದೆ.
ಜನ ಏನೇನನ್ನೆಲ್ಲಾ ಕಳೆದುಕೊಳ್ಳುತ್ತಾರೆ? ಕಳೆದುಕೊಳ್ಳುವುದಕ್ಕೆ ಆ ವಸ್ತುವು ಮೊದಲು ತಮ್ಮ ಬಳಿ ಇರಬೇಕು ಎನ್ನುವ ಸಾಮಾನ್ಯ ತಿಳುವಳಿಕೆಯೂ ಅನೇಕರಿಗಿರುವುದಿಲ್ಲ. ಓಣಿಯ ಒಂದು ಮನೆಯಲ್ಲಿ ಒಂದು ಹಿತ್ತಾಳೆಯ ಚಂಬು ಕದ್ದ ಕಳ್ಳ ಸಿಕ್ಕಿ ಬಿದ್ದರೆ ಉಳಿದ ಮನೆಗಳಲ್ಲಿ ಎಂದೂ ಇದ್ದೇ ಇರದ ಚಿನ್ನದ ಆಭರಣಗಳು ಕಾಣೆಯಾಗಿರುತ್ತವೆ! ಮಾನ, ಮರ್ಯಾದೆ, ಬುದ್ಧಿವಂತಿಕೆ, ಸೌಂದರ್ಯ, ಶೀಲ, ವ್ಯಕ್ತಿತ್ವ, ಪ್ರಾಮಾಣಿಕತೆ, ಆದರ್ಶಗಳು ಕಳೆದು ಹೋದವು ಎಂದು ಯಾರಾದರೂ ಗೋಳಾಡಿದರೆ ಅವು ಮೊದಲು ಎದ್ದವೇ ಎನ್ನುವ ಸಂಶಯ ಸಹಜ.
ಕಳೆದು ಹೋದ ವಿಷಯಗಳ ಪ್ರಸ್ತಾಪವನ್ನು ಈಗ ಮಾಡುವುದಕ್ಕೆ ಉದ್ದೇಶವಿದೆ. ನಮ್ಮ ದೇಶದ ಕನಸುಗಳನ್ನು ನನಸಾಗಿಸಲು ಜನ್ಮವೆತ್ತಿ ಬಂದ, ತನ್ನ ಆಗಮನದಿಂದ ಬರಗೆಟ್ಟ ದೇಶಕ್ಕೆ ವಿಜಯಮಾಲೆಯನ್ನು ತೊಡಿಸಿ ಮೆರೆಸಿದ, ದೇಶಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತ, ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಎಂಬ ಯುವಕ ನಮ್ಮೀ ಕತೆಯ ದುರಂತ ನಾಯಕ. ಈತ ದೇಶದ ಹೆಸರನ್ನು ಬೆಳಗುವುದಕ್ಕಾಗಿ ದಿನದ ಪಂದ್ಯಗಳು, ದಿನ ರಾತ್ರಿಯ ಪಂದ್ಯಗಳನ್ನು ಆಡುತ್ತಾ, ಮೈದಾನದಲ್ಲಿ ಬೆವರು ಸುರಿಸುತ್ತಾ ತಂಡವನ್ನು ಮುನ್ನಡೆಸುತ್ತಾ ಕಷ್ಟ ಪಡುತ್ತಾನೆ. ಸಾಲದೆಂಬಂತೆ ಸಂಬಳವೆಂದು ಕ್ರಿಕೆಟ್ ಮಂಡಳಿಯಿಂದ ಕೈಯಲ್ಲಿ ಎಣಿಸಲಾಗದಷ್ಟು ಹಣ! ಇವೆಲ್ಲವನ್ನೂ ಬಹುಶಃ ಈತ ಹೇಗೋ ನಿಭಾಯಿಸುತ್ತಿದ್ದನೇನೋ, ಆದರೆ ಎದುರಾಳಿ ತಂಡದ ಬೌನ್ಸರ್‌ಗಳ ಜೊತೆಗೆ ಬಾಲಿವುಡ್ ಲಲನೆಯರ ‘ಅಂಡರ್ ಆರ್ಮ್’ ಡೆಲಿವರಿಗಳನ್ನು ಎದುರಿಸುವ ಕಷ್ಟ. ಇಷ್ಟು ಸಾಲದೆಂಬಂತೆ ಲೆಕ್ಕ ಹಾಕುವುದಕ್ಕೆ ತನ್ನ ಕಾಲೇಜು ವಿದ್ಯಾಭ್ಯಾಸವೇ ಸಾಲದಷ್ಟು ಮೊತ್ತದ ಜಾಹೀರಾತುಗಳ ಕಾಂಟ್ರ್ಯಾಕ್ಟು. ಇಷ್ಟೆಲ್ಲ ನರಕಯಾತನೆಯನ್ನು ಕೇವಲ ದೇಶದ ಮೇಲಿನ ಅಭಿಮಾನಕ್ಕಾಗಿ, ಕ್ರಿಕೆಟ್ ಮೇಲಿನ ಪ್ರೀತಿಗಾಗಿ, ಅಭಿಮಾನಿಗಳ ಮೇಲಿನ ಗೌರವಕ್ಕಾಗಿ ಪೂರ್ಣ ಮನಸ್ಸಿನಿಂದ ಒಪ್ಪಿ ಅನುಭವಿಸುತ್ತಿದ್ದ ಧೋನಿಯ ಸಹನೆಯ ಕಟ್ಟೆ ಒಡೆದಿದೆ. ಇಷ್ಟು ಕಾಲ ಆತನ ಬೆನ್ನುಲುಬಾಗಿದ್ದ ಶಕ್ತಿಯು ಕಳೆದುಹೋಗಿ ಆತ ಶಾಪಗ್ರಸ್ತ ಗಂಧರ್ವನಾಗಿದ್ದಾನೆ. ರಾಜಕುಮಾರಿಯ ಲಿಪ್‌ಸ್ಟಿಕ್ ಇಲ್ಲದ ತುಟಿಯ ಚುಂಬನಕ್ಕಾಗಿ ಕಾದು ಕುಳಿತ ಕಪ್ಪೆಯಾಗಿದ್ದಾನೆ. ಆತನ ಅಪೂರ್ವ ಆಸ್ತಿಯಾಗಿದ್ದ ಅದು ಕಳೆದು ಹೋಗಿದೆ. ಹೌದು, ಧೋನಿಯ ಪ್ರಭಾವಳಿ ಕಳೆದು ಹೋಗಿದೆ!
ಆತ ನಿಜಕ್ಕೂ ಬುದ್ಧಿವಂತನಾಗಿದ್ದರೆ ತಾನು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎಂದು ತಿಳಿದಾಗ ಮಿದಾಸ ನೇರವಾಗಿ ತನ್ನ ಹೊಟ್ಟೆಯನ್ನು ಬಗೆದು ಜೀರ್ಣಾಂಗ ವ್ಯೂಹವನ್ನೇ ಮುಟ್ಟಿ ಬಿಡುತ್ತಿದ್ದ. ಹಸಿವೆಯೆಂಬ ರಕ್ಕಸನ ಬಂಗಾರದ ಪ್ರತಿಮೆಯನ್ನು ಮಾಡಿ ಶೋಕೇಸಿನಲ್ಲಿಟ್ಟು ಬಿಟ್ಟಿದ್ದರೆ ಅವನನ್ನು ಹಿಡಿಯುವವರು ಇದ್ದರೆ? ಯಾರಿಗೆ ಗೊತ್ತು, ಮುಟ್ಟಿದ್ದನ್ನು ಬಂಗಾರವಾಗಿಸುವ ಶಕ್ತಿ ಕೈಗಳಿಗೆ ಬಂದಾಗ, ತಲೆಯಲ್ಲಿ ಅದುವರೆಗೂ ಇದ್ದ ಮೆದುಳಿಗೇ ತುಕ್ಕು ಹಿಡಿಯಬಹುದು. ಈ ಕಾಲದ ಮಿದಾಸನ ಕತೆಯೇನು ಭಿನ್ನವಾಗಿಲ್ಲ. ಈತ ಕೆಮ್ಮಿದ ದಿಕ್ಕಿನಲ್ಲಿ ಗಾಳಿಯು ಹೆಚ್ಚಾಗಿ ಎದುರಾಳಿ ಆಟಗಾರ ಚಡಪಡಿಸಿ ಹೋಗುವ ಅದೃಷ್ಟ ಈತನದು. ತಾನೊಮ್ಮೆ ವಿಕೆಟುಗಳ ಹಿಂದಿನ ಜಾಗದಿಂದ ಕದಲಿ ಬೌಲರ್‌ಗೆ ಸಣ್ಣ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಭಾಷಣ ಕೊಟ್ಟರೆ ಸಾಕು ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಒಪ್ಪಿಸಿ ನಡೆದು ಬಿಡುತ್ತಿದ್ದ. ತಾನು ಕಣ್ಣು ಮುಚ್ಚಿಕೊಂಡು ಎಡಗೈಯಲ್ಲಿ ತೋರಿದ ಆಟಗಾರ ತಂಡದಲ್ಲಿ ಬಂದೊಡನೆ ಅಜ್ಞಾತವಾಸ ಕಳಚಿ ಬಂದ ಅರ್ಜುನನಾಗುತ್ತಿದ್ದ. ಆಗೆಲ್ಲಾ ಧೋನಿಯೆಂಬ ರಾಂಚಿಯ ಹುಡುಗನ ಸುತ್ತಲಿದ್ದ ಪ್ರಭಾವಳಿಯನ್ನು ಕಂಡು ಜನತೆ ಉಘೇ ಉಘೇ ಅನ್ನತೊಡಗಿದರು.
ಈಗ ತಾವೇ ಆತನ ಸುತ್ತ ಕಂಡಿದ್ದ ಪ್ರಭಾವಳಿಯು ಕಾಣೆಯಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರ ಮಾತು ಕೇಳಿ ಆತನೂ ತಾನು ಕಂಡಿರದ ವಸ್ತುವನ್ನು ಹುಡುಕಲು ಹೊರಟಿದ್ದಾನೆ. ತನ್ನ ದೇಶದ ಅಭಿಮಾನಿಗಳಿಗೆ ಇಂದಿನ ಆಟದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನ ಗೆಲ್ಲುವಂತೆ ಬೇಡಿಕೊಳ್ಳಿ, ಪಾಕಿಸ್ತಾನವನ್ನೇ ಬೆಂಬಲಿಸಿ ಎಂದು ಬೇಡಿಕೊಂಡಿದ್ದಾನೆ.
ಈ ನಡುವೆ ಧೋನಿ ಕಳೆದುಕೊಂಡಿದ್ದಾನೆ ಎಂದು ಹೇಳಲಾದ ಪ್ರಭಾವಳಿಯನ್ನು ಹುಡುಕಿ ಪತ್ತೆ ಹಚ್ಚಿ ಹಿಂದಿರುಗಿಸುವುದಕ್ಕಾಗಿ ದೇಶದ ನಾನಾ ಭಾಗಗಳಿಂದ ಚಾಣಾಕ್ಷ ಪತ್ತೆದಾರರನ್ನು ದಕ್ಷಿಣ ಆಫ್ರಿಕಾಗೆ ಕರೆಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕಾಣೆಯಾಗಿರುವ ಜನರ ಮಾನವೀಯತೆಯನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ನಮ್ಮ ಅತ್ಯಾಪ್ತ ಚೇಲ ಕುಚೇಲನಿಗೆ ಸಹ ಕರೆ ಬಂದಿದೆ. ಈತ ಹಿಂದಿನ ಕೇಸ್ ಒಂದರಲ್ಲಿ ತೋರಿದ್ದ ಅಪ್ರತಿಮ ಬುದ್ಧಿಮತ್ತೆಯನ್ನು ಪ್ರಶಂಸಿಸಿ ಈತನ ಸೇವೆಯನ್ನು ಈ ಕೇಸಿನಲ್ಲಿ ಬಯಸಿದ್ದಾರೆ. ಈ ದಿನದ ಪಂದ್ಯದ ಪ್ರಾರಂಭದ ಒಳಗೆ ತನಿಖೆ ಪೂರ್ಣಗೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರೆ, ಗೆಲುವಿನ ಓಟದಲ್ಲಿರುವಾಗ ನಾನಾ ದೋಷ ಪರಿಹಾರಗಳನ್ನು ಮಾಡಿಸಲು ದೇಶದ ಉದ್ದಗಲಕ್ಕೂ ಅಂಡೆಲೆಸಿದ ಮಾಂತ್ರಿಕರು ತಮ್ಮ ಮೆದುಳನ್ನು ಹುಡುಕಲು ಅಂಜನ ಹಾಕುವಲ್ಲಿ ಮಗ್ನರಾಗಿದ್ದಾರೆಯೇ ಎಂದು ಸಾಮ್ರಾಟರು ಗೊಣಗುತ್ತಿದ್ದಾರೆ!
ಇತ್ತೀಚಿನ ಪ್ರಜಾ ಉವಾಚ