(ನಗೆ ನಗಾರಿ ರಾಜಕೀಯ ಬ್ಯೂರೋ)
Patriotism is the last refuge of a scoundral ಉದ್ಘರಿಸಿದ ಸ್ಯಾಮುಯಲ್ ಜಾನ್ಸನ್ನನ ಹೇಳಿಕೆಯನ್ನು ಸಾರ್ವತ್ರಿಕ ಗೊಳಿಸಿ Politics is the last refuge of a scoundral ಎಂಬುದಾಗಿ ತಿರುಚಿ ಅದನ್ನು ಸಾಬೀತು ಪಡಿಸಲು ಶ್ರೀಯುತ raw-ಹುಳ ಮಹಾಜನ್ ಕಂಕಣ ಬದ್ಧರಾಗಿದ್ದಾರೆ ಎಂದು ನಮ್ಮ ಮೂಲಗಳು ಅರಚಿಕೊಂಡಿವೆ.
ನಮ್ಮ ಭವ್ಯ ದೇಶದಲ್ಲಿ ತಂದೆಯಿಂದ ಮಗನಿಗೆ ಕೇವಲ ಅರ್ಧ ಪಾಲು ಕ್ರೋಮೋಜೋನುಗಳಷ್ಟೇ ಅಲ್ಲದೆ ಸಂಪೂರ್ಣ ಆಸ್ತಿ, ಭವಿಷ್ಯ, ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಬದುಕು ಬರುವುದು ಅಸಹಜವೇನಲ್ಲ. ತಂದೆ ಒಂದು ಜಾತಿಯವನಾದರೆ ಆತನ ಎಲ್ಲಾ ಮಕ್ಕಳೂ ಅದೇ ಜಾತಿಯವರಾಗುತ್ತಾರೆ ಎಂದು ಬಹು ಹಿಂದೆಯೇ ನಮ್ಮ ಸಮಾಜವನ್ನು ಕಟ್ಟಿದ ಮನು ಮಹಾನುಭಾವರು ಹೇಳಿದ್ದಾರೆ. ಆತನ ತತ್ವವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ನಮ್ಮ ನಾಡಿನ ಅತ್ಯಂತ ವಿಧೇಯರಾದ ಜನತೆ ನಿಜಕ್ಕೂ ಆತನ ಕೃಪೆಗೆ ಅರ್ಹರು. ನಮ್ಮ ದೇಶದಲ್ಲಿ ಅಪ್ಪ ಶ್ರೀಮಂತನಾದರೆ ಆತನ ಪ್ರತಿಯೊಬ್ಬ ಮಗನೂ ಶ್ರೀಮಂತನಾಗುತ್ತಾನೆ. ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುತ್ತಾನೆ. ಅಪ್ಪ ಸರಕಾರಿ ನೌಕರನಾದರೆ ಮಗನೂ ಸರಕಾರಕ್ಕೆ ಬಾದ್ಯಸ್ಥನಾಗುತ್ತಾನೆ. ಅಪ್ಪ ಮಠಾಧಿಪತಿಯಾದರೆ ಅನಧಿಕೃತ ಮಗ ಮಠದ ಅಧಿಪತಿಯಾಗದಿದ್ದರೂ ಆಡಳಿತವನ್ನು ಕೈಗೆತ್ತಿಕೊಳ್ಳುತ್ತಾನೆ. ಹೀಗಿರುವಾಗ raw-ಹುಳರು ರಾಜಕೀಯವನ್ನು ಪ್ರವೇಶಿಸುವ ಮನಸ್ಸು ಮಾಡಿರುವುದು ಭಾರತದ ಸನಾತನ ಪರಂಪರೆಯನ್ನು ಮುಂದುವರೆಸುವ ದಿಟ್ಟವಾದ ಹೆಜ್ಜೆ ಎಂದು ಚಿಂತಕರ ವಲಯದಲ್ಲಿ ಸದ್ದು ಹೊರಡುತ್ತಿದೆ.
ನಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಗಳೂ ಬೇಕಿಲ್ಲ ಎಂದು ನಾಲಿಗೆಯಲ್ಲಿ ಎಲುಬಿಲ್ಲದ ಮಹಾನುಭಾವರು ಆಗಾಗ ಮೈಕುಗಳ ಮುಂದೆ ಅರಚುತ್ತಲೇ ಇರುತ್ತಾರೆ. ಇತರ ದೇಶಗಳಲ್ಲಿ ರಾಜಕಾರಣಿಯಾಗಬೇಕಾದವನು ಕನಿಷ್ಠ ಶಿಕ್ಷಣ ಅರ್ಹತೆ ಹೊಂದಿರಬೇಕು, ಆಡಳಿತದಲ್ಲಿ ಅನುಭವವನ್ನು ಸಂಪಾದಿಸಿರಬೇಕು ಎಂದೆಲ್ಲಾ ಜನರು ಬಯಸುತ್ತಾರೆ. ತಮ್ಮನ್ನು ಪ್ರತಿನಿಧಿಸುವ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಜನರು ಅನೇಕ ಅರ್ಹತೆಗಳ ಮಾನದಂಡವನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ. ಬೇರಾವ ಕೆಲಸಕ್ಕೂ ಸಲ್ಲದವ, ಬೇರಾವ ಮರ್ಯಾದಸ್ಥ ಉದ್ಯೋಗ ಮಾಡಲು ಬೇಕಾದ ಅರ್ಹತೆ ಇಲ್ಲದವ ಸಲೀಸಾಗಿ ಎರಡನೆಯ ಆಲೋಚನೆ ಇಲ್ಲದೆ ರಾಜಕಾರಣಕ್ಕೆ ಧುಮುಕಬಹುದು ಎಂದು ಲೇವಡಿ ಮಾಡುವವರು ಹಲವರಿದ್ದಾರೆ. ಅವರು ತಿಳಿಯಬೇಕಾದ ಸಂಗತಿಯೊಂದಿದೆ. ಜಗತ್ತಿನ ಬೇರಾವ ದೇಶಕ್ಕೆ ಹೋಲಿಸಿದರೂ ನಮ್ಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಬೇಕಾದ ಅರ್ಹತೆ ಅತ್ಯಂತ ಕಠಿಣವಾದದ್ದು ಹಾಗೂ ಅಸಾಧ್ಯ ಎಂಬುದಕ್ಕೆ ತೀರಾ ಸನಿಹವಾದದ್ದು ಎನ್ನುತ್ತಾರೆ ಸಮಾಜ ವಿಜ್ಞಾನಿ ನಗೆ ಸಾಮ್ರಾಟ್.
ರಾಜಕಾರಣಿಯಾಗುವ ಮಹಾತ್ವಾಕಾಂಕ್ಷೆಯಿದ್ದವರು ಹೇಗೆ ಮೊದಲು ತಾವು ಬೇರಾವ ಕೆಲಸಕ್ಕೂ ಬಾರದವರು ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ ಎಂಬುದನ್ನು ಹಿಂದಿನ ವರದಿಯೊಂದರಲ್ಲಿ ವಿವರವಾಗಿ ಬಿಚ್ಚಿಡಲಾಗಿದೆ. ಆ ಎಲ್ಲಾ ಅರ್ಹತೆಗಳನ್ನೂ ಶ್ರೀಯುತ raw-ಹುಳ ಮಹಾಜನ್‌ರು ಹೊಂದಿರುವುದು ಸಂತೋಷದ ಸಂಗತಿ. ತಂದೆ ಚಿಕ್ಕಪ್ಪನ ಗುಂಡಿಗೆ ಬಲಿಯಾಗಿ ಒಂಭತ್ತು ಹತ್ತು ದಿನ ಆಸ್ಪತ್ರೆಯಲ್ಲಿ ಹೋರಾಡಿ ಸತ್ತು ಇನ್ನೂ ಚಿತೆಯ ಭಸ್ಮ ಆರಿರದಿದ್ದಾಗಲೇ ಮನೆಯಲ್ಲಿ ಮಾದಕ ದ್ರವ್ಯ ತರಿಸಿಕೊಂಡು ತೆಲೆಗೆ ಮತ್ತು ಏರಿಸಿಕೊಂಡು ಒಬ್ಬನನ್ನು ಅದೇ ಮತ್ತು ಬಲಿ ತೆಗೆದುಕೊಂಡದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಸೇರಿಹೋಗಿದೆ. ಮುಂದೆ ಅನೇಕ ಸಮಾಜ ಕಲ್ಯಾಣ ಕೆಲಸಗಳನ್ನು ಮಾಡಿದ್ದರೂ ತಾವು ರಾಜಕೀಯಕ್ಕೆ ಬರುವುದಕ್ಕೆ ಸರ್ವ ರೀತಿಯಲ್ಲೂ ಅರ್ಹರು ಎಂಬುದನ್ನು ಜನತೆ ಎದುರು ತೋರ್ಪಡಿಸಲು ಬಿಗ್ ಬಾಸ್ ಎಂಬ ಕಾಲ್ಪನಿಕ ರಿಲಾಲಿಟಿ ಶೋನಲ್ಲಿ ಭಾಗವಹಿಸಿದರು. ಆ ಕಾರ್ಯಕ್ರಮದಲ್ಲಿ ಜನರು ಅವರ ಅಶಿಸ್ತು, ದುರ್ವರ್ತನೆಗಳನ್ನೆಲ್ಲಾ ಗಮನಿಸಿ ಈತನಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದರು. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದಂತೆ ಇವರು ಬಿಗ್ ಬಾಸ್ ಕಾರ್ಯಕ್ರಮದ ನಿಯಮಗಳನ್ನು ಮುರಿದು ಕಾಂಪೌಂಡ್ ಹಾರಲು ಹೋಗಿ ಸಿಕ್ಕು ಬಿದ್ದು ಬಿಗ್ ಬಾಸ್‌ನಿಂದ ಹೊರಗಟ್ಟಲ್ಪಟ್ಟಿದ್ದಾರೆ. ತಮ್ಮ ಅಶಿಸ್ತಿಗೆ ಮಾಧ್ಯಮದವರಿಂದ ಸನ್ಮಾನವನ್ನು ಪಡೆದಿದ್ದಾರೆ. ಹೀಗಾಗಿ ಅವರು ರಾಜಕಾರಣಿಯಾಗುವುದಕ್ಕೆ ಸರ್ವ ವಿಧದಲ್ಲೂ ಸೂಕ್ತರು ಎಂದು ಜನರು ತೀರ್ಮಾನ ಕೈಗೊಂಡಿದ್ದಾರೆ.
ಇತ್ತೀಚಿನ ಪ್ರಜಾ ಉವಾಚ