ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!
ಈ ಸಂಚಿಕೆಯ ಸ್ಯಾಂಪಲ್:

ಮಗು ಯಾರದು?
ಗಾಂಪರೆಲ್ಲ ಸಭೆ ಸೇರಿದರು. ಎಲ್ಲರೂ ತಮ್ಮನ್ನು ಗಾಂಪರು ಎಂದು ಕರೆಯುವುದನ್ನು ಕೇಳಿ ಅವರ ಮನಸ್ಸು ನೊಂದಿತ್ತು. ಆದ್ದರಿಂದ ತಮ್ಮಲ್ಲೇ ಒಬ್ಬನನ್ನು ಆರಿಸಿ ಈ ವಿಷಯವಾಗಿ ಸಂಶೋಧನೆ ಮಾಡಿಸಬೇಕು ಎಂದುಕೊಂಡರು. ಆ ಠರಾವಿನ ಪ್ರಕಾರ ಒಬ್ಬ ಗಾಂಪ ಹೋಗಿ ಅಮೇರಿಕಾದಲ್ಲಿ ಒಬ್ಬ ಪ್ರಾಧ್ಯಾಪಕರ ಮನೆಯಲ್ಲಿ ತಳವೂರಿದ. ಪ್ರಾಧ್ಯಾಪಕರು ಇವನ ಮೇಲೆ ಸಂಶೋಧನೆ ಪ್ರಾರಂಭಿಸಿದರು. ಸರಳವಾದ ಪ್ರಶ್ನೆಗಳನ್ನು ಹಾಕುತ್ತಾ ಅವರು ಕೇಳಿದರು.
ಪ್ರಾ: ನೋಡಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಜನ. ನಾನು, ನನ್ನ ಹೆಂಡತಿ, ಒಂದು ಮಗು. ಈ ಮಗು ಯಾರದ್ದೆಂದು ಹೇಳುತ್ತೀರಾ?
ಗಾಂಪ ತಲೆ ಕೆರೆದುಕೊಂಡ. ಹುಲುಸಾಗಿ ಬೆಳೆದಿದ್ದ ಗಡ್ಡ ಕೆರೆದುಕೊಂಡ. ಏನು ಮಾಡಿದರೂ ಉತ್ತರ ಹೊಳೆಯಲಿಲ್ಲ. “ಸೋತೆ ಸ್ವಾಮಿ, ಉತ್ತರ ಗೊತ್ತಾಗಲಿಲ್ಲ” ಎಂದ.
ಪ್ರಾ: ಅದರಲ್ಲೇನಿದೆ ಕಷ್ಟ? ಮಗು ನನ್ನದು.
ಗಾಂಪನಿಗೆ ತುಂಬಾ ಸಂತೋಷವಾಯಿತು. ಮಾರನೆಯ ದಿನವೇ ತನ್ನ ದೇಶಕ್ಕೆ ಹಿಂದಿರುಗಿ ಬಂದ. ತಕ್ಷಣವೇ ಗಾಂಪರ ಸಭೆ ಸೇರಿಸಿದ. ಹೇಳಿದ, “ಮಿತ್ರರೇ, ಜನ ನಮ್ಮನ್ನು ಏಕೆ ಗಾಂಪರು ಎನ್ನುತ್ತಾರೆ ಎಂಬುದನ್ನು ತಿಳಿದುಕೊಂಡು ಬಿಟ್ಟಿದ್ದೇನೆ. ಈಗ ನಾನೊಂದು ಸರಳವಾದ ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳುತ್ತೀರಾ?”
“ಆಗಲಿ..” ಎಂದರು ಸಭಿಕರು.
“ಸರಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಮಂದಿ. ನಾನು,ನನ್ನ ಹೆಂಡತಿ, ಒಂದು ಮಗು. ಎಲ್ಲೀ ಹೇಳಿ ನೋಡೋಣ, ಮಗು ಯಾರದ್ದು?”
ಗಾಂಪರೆಲ್ಲ ತಲೆ ಕೆರೆದುಕೊಂಡರು. ಕೆಲವರು ಗಡ್ಡವನ್ನೂ ಕೆರೆದುಕೊಂಡರು. ಹಲ್ಲು ಕಚ್ಚಿದರು. ಏನೇನು ಮಾಡಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಉತ್ತರ ಹೊಳೆಯಲಿಲ್ಲ. ತಲೆಯಾಡಿಸಿದರು.
ಅಮೇರಿಕಾದಿಂದ ಹಿಂದಿರುಗಿದ್ದ ಗಾಂಪ ಮಂದ ಹಾಸ ಬೀರುತ್ತಾ ಹೇಳಿದ: “ಅದಕ್ಕೇ ನಿಮ್ಮನ್ನು ಜನ ಗಾಂಪರು ಎನ್ನುವುದು.ಇಷ್ಟೂ ಗೊತ್ತಾಗಲಿಲ್ಲವೇ? ಅಮೇರಿಕಾದಲ್ಲಿದ್ದಾರಲ್ಲಾ ಪ್ರೊಫೆಸರು, ಅವರದು ಮಗು.”
ಟ್ಯಾಗ್ ಗಳು:ಜೋಕ್, ಸ್ವಲ್ಪಾದ್ರೂ ಸೀರಿಯಸ್, ಹಾಸ್ಯ, jokes
ಇತ್ತೀಚಿನ ಪ್ರಜಾ ಉವಾಚ