ವಿಡಂಬನೆ: ಭಾಗ್ಯದೊಡನೆ ಭೇಟಿ

18 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ.

– ನಗೆ ಸಾಮ್ರಾಟ್

ಆಂಗ್ಲರಾಹುವಿನಿಂದ ಭರತಭೂಮಿಯು ಮುಕ್ತವಾದ ಶ್ರಾವಣ ಅಮಾವಾಸ್ಯೆಯ ಅಂಚಿನ ಆ ಕಟ್ಟಿರುಳಿನ ಅಮೃತಘಳಿಗೆಯಲ್ಲಿ,  ಇಂದು “ಸೆಂಟ್ರಲ್ ಹಾಲ್ ಆಫ್ ಪಾರ್ಲಿಮೆಂಟ್” ಎನ್ನುವ ಮಹಿಮಾನ್ವಿತ ವೇದಿಕೆಯಲ್ಲಿ, ಪ್ರಧಾನಿ ನೆಹ್ರೂ ಅವರು ಭಾರತದ ರಾಜ್ಯಾಂಗ ಸಭೆಯನ್ನುದ್ದೇಶಿಸಿ, ಅಸಾಮಾನ್ಯ ಅಸಮಾನತೆ, ಅನಾರೋಗ್ಯ, ಅಜ್ಞಾನ ಇನ್ನಿತರ ಅನಿಷ್ಟಗಳನ್ನು ಅಳಿಸುವ ಬಗ್ಗೆಯೂ; ಸುಖ, ಶಾಂತಿ, ಸಮೃದ್ಧಿ, ನ್ಯಾಯ, ಸ್ವಾತಂತ್ರ್ಯ, ಲೋಕತಂತ್ರ, ಸಾಮಾನ್ಯರ ಸಾಮ್ರಾಜ್ಯ, ಇನ್ನಿತರ ಮೌಲ್ಯಾದರ್ಶಗಳನ್ನು ಸಿದ್ಧಿಸಿಕೊಳ್ಳುವುದರ ಬಗ್ಗೆಯೂ; ಕರ್ತವ್ಯ, ಜವಾಬ್ದಾರಿ, ಶ್ರಮ, ಸೇವೆ, ಮತ್ತಿತರ ನಾಯಕತ್ವ ಗುಣಗಳ ಬಗ್ಗೆಯೂ ಮಾಡಿದ “ಭಾಗ್ಯದೊಡನೆ ಭೇಟಿ” ಎಂಬ ಭಾಷಣವು ಲೋಕಾನುಶ್ರುತವಾಗಿದೆ. ಆ ವಿದ್ಯುಜ್ಜನಕ ವಾಗ್ಧಾರೆಯಲ್ಲಿ ನೆಹ್ರೂ ಮಹೋದಯರು ಬಯಸಿದ, ಬಣ್ಣಿಸಿದ, ಬಣ್ಣದ ಭೂಮಿಯತ್ತ, ತಮಸ್ಸಿನಿಂದ ಜ್ಯೋತಿಯತ್ತ, ಭಾರತರಥವು ನಿಜಕ್ಕೂ ಸಾಗುತ್ತಿದೆಯೇ ಎಂದು ಕೊಂಚ ಹೊರಳಿ ನೋಡುವುದು ಇಂದಿನ ನವಭಾರತೋದಯ ದಿನೋತ್ಸವದ ಸಂದರ್ಭದಲ್ಲಿ ಬಹು ಪ್ರಸ್ತುತ. ಆದರೆ, 1.27 ಸಹಸ್ರಸಹಸ್ರದಷ್ಟು ಚದರಮೈಲಿಯಿರುವ, 1.24 ಶತಕೋಟಿಯಷ್ಟು ಪ್ರಜಾಪ್ರಭೂತ, 65 ವರ್ಷಗಳಷ್ಟು ವೃದ್ಧ ಭಾರತದ ಮಹಾಭಾರದ ಗಾಥೆಯು ಅನೇಕ ಮಹಾಭಾರತಗಳಿಗೆ ಸಮನಾಗುವುದರಿಂದ, ಸದ್ಯಕ್ಕೆ ಕೆಲವೇ ಬಿಂದುಗಳ ಸಂದಿನಿಂದ ಸಿಂಧುವನ್ನು ಸಂದರ್ಶಿಸುವ ಪ್ರಯತ್ನವನ್ನು ಮಾಡಬಹುದು.

1947 ಮತ್ತು 2012: ಒಂದು ವ್ಯತಿರಿಕ್ತ ಪ್ರತಿಬಿಂಬ

1. ಅಂದಿನ ಸ್ವಾತಂತ್ರ್ಯಾರ್ಥಿಗಳು ದೇಶವು ದೇಹಕ್ಕಿಂತ ಮಿಗಿಲೆಂದೂ, ದೇಶವೇ ದೇವಾಲಯವೆಂದೂ ಭಾವಿಸಿ ಒಂದು ವಿಶಿಷ್ಟ ಅದ್ವೈತಸತ್ವವನ್ನು ಮೆರೆದಿದ್ದ ದೇಶಭಕ್ತೋತ್ತಮರು. ಆದರೆ, ಇಂದು ನಮ್ಮನ್ನಾಳುವವರು, ಸರ್ವಭೂಮಿಯೂ ತಮ್ಮದೆನ್ನುವ (ಇಡೀ ಭಾರತವೇ ಒಂದು ರಿಯಲ್ ಎಸ್ಟೇಟ್) ಸರ್ವಾಹಂಕಾರಭೂಷಿತ ಸಾರ್ವಭೌಮರು.  ತಮ್ಮ ವೈಭವಕ್ಕಾಗಿ ದೇಶದಾನ ಮಾಡುತ್ತಿರುವ ಭಾರತೇಶರು. ಪ್ರಜಾಹಿತಕ್ಕೆ ಪ್ರತಿಯಾಗಿ ಪ್ರವರ್ತಿಸುತ್ತ, ಪ್ರತಿಯೊಂದು ನಿಧಿಯನ್ನೂ ಬಾಚಿಕೊಳ್ಳಲು ತಮ್ಮ ಜನ್ಮವನ್ನೇ ಸಮರ್ಪಿಸಿಕೊಂಡಿರುವ “ಪ್ರತಿ-ನಿಧಿ” ಪ್ರಜಾಪತಿಗಳು. ಅಂದಿನ ಭಾರತದ ಸಾರಥಿಗಳಾಗಿದ್ದವರು ಅತಿರಥ, ಮಹಾರಥ, ಭಗೀರಥರಾಗಿದ್ದರೆ, ಇಂದಿನ ಪ್ರತಿನಿಧಿ ಪ್ರಭುಗಳು ಅತಿರತಿ, ಮಹಾರತಿಯನ್ನು ಭಾರತಮಾತೆಯಲ್ಲಿ ಕಾಣುವ ರಣ ರಾಷ್ಟ್ರಕಾಮರು.

2. ಅಂದು ಜನಮನವೆಲ್ಲ ಒಂದೇ ಗಣವಾಗಿ, ಭಾರತಾಂಬೆಯನ್ನು ಒಂದೇ ದನಿಯಿಂದ “ವಂದೇ ಮಾತರಂ” ಎಂದು ಭಾವಭಕ್ತಿಭರಿತವಾಗಿ ಕೀರ್ತಿಸಿತ್ತು. ಆದರೆ ಇಂದು, ಓಟು-ಜಾತಿ ಎಂಬ ಉಭಯ ಮತಗಳನ್ನೂ-ಮಠಗಳನ್ನೂ ಗಂಟು ಮಾಡಿರುವ ಅತಿ-ಅತಿ-ಜಾತೀಯತೆಯ “ಮತಾಚಾರ್ಯರು,” ದುರ್ಧರ್ಮಾನಂದರು, ಭಾಷಾಪಾತಕರು, ಮುಂತಾದ ನಿಸ್ಸೀಮ ಮಾನಸಭಂಜಕರ, ದ್ವೇಷಸ್ಥರ, ವೇಷಧಾರಿಗಳ ಸತತ ಪರಿಶ್ರಮದಿಂದಾಗಿ, ಅನೇಕ ಅಬ್ಬರದ ಆರ್ತನಾದಗಳ ಏಕಕಾಲಿಕ ಕಾಕಸಂಗೀತವು ಎಲ್ಲೆಡೆಯಿಂದ ಸಿಡಿದುಬರುತ್ತಿದೆ. ಭಾರತವು “ಒಂದೇ ದೇಶ” ವಾಗುವ ಬದಲು, “ಒಂದೊಂದೇ ಮಾತರಂ” ಎನ್ನುವ ಅಸಂಖ್ಯ ‘ಕಟ್ಟಭಿಮಾನಿಗಳ’ ಇಕ್ಕಟ್ಟು-ಬಿಕ್ಕಟ್ಟುಗಳ ತಿಕ್ಕಾಟದ ಒಕ್ಕೂಟವಾಗಿದೆ. 125 ಕೋಟಿ ಛಿನ್ನವಿಚ್ಛಿನ್ನ ಮನಸ್ಸುಗಳು 125 ಕೋಟಿ ಹೆಡೆಯ ಹೆನ್ನಾಗರದಂತೆ ಇಂದು ನಮ್ಮ ಹೆನ್ನಾಗರಿಕತೆಯ ಕತೆಯನ್ನು ಹಿಂದೋಡಿಸುತ್ತಿವೆ.

3. ಅಂದು ನಾವು ನೋಡುತ್ತಿದ್ದುದು, ನಮಿಸುತ್ತಿದ್ದುದು, ತ್ಯಾಗ-ಸ್ವಚ್ಛತೆ-ಸಮೃದ್ಧಿ-ಧರ್ಮಗಳನ್ನು ಸಂಕೇತಿಸುವ ಒಂದು ಭವ್ಯ ಬಾವುಟ. ಅಂದು ಇದ್ದದ್ದು ಅದೊಂದೇ ಬಾವುಟ, ಒಂದೇ ಸೇನೆ. ಆದರೆ, ಅದರ ತ್ರಿರಂಗುಗಳಲ್ಲಿ ಇಂದು ನಮಗೆ ಕಾಣಸಿಗುತ್ತಿರುವುದು ಎರಡು ಬೇರೆಯೇ ರಂಗುಗಳು: ಕಾಳಹಣ-ಕರಾಳಗುಣದ ಕಡುಕಪ್ಪು, ಮತ್ತು ಅಧಿಕಾರಷಾಹಿ ಟೇಪುಗಳ, ರಕ್ತಬಸಿದು ಏಗುತ್ತಿರುವವರ ಕಟುಗೆಂಪು. ಧರ್ಮಚಕ್ರದ್ದಂತೂ ಕತೆಯೇ ಬೇರೆ. ಪ್ರಜಾ’ಸ್ವಾಮಿ’ಗಳ ಬಹುಬಿಲಿಯನ್ ಕೊಳ್ಳೆಮೊತ್ತಗಳಲ್ಲಿನ ಕೊಳೆಸೊನ್ನೆಗಳನ್ನೂ, “ಸ್ವಾಮ್ಯವಿಲ್ಲದವರು ಸೊನ್ನೆಯಲ್ಲಿಯೇ ಸಾಮ್ಯವನ್ನೈದಿರುವ” ವಿಕೃತ ಸಮೀಕರಣವನ್ನೂ, ಮತ್ತು ಎಲ್ಲೆಡೆ ಮುಸುಕುತ್ತಿರುವ ಮೌಲ್ಯಶೂನ್ಯತೆಯನ್ನೂ ಬಿಂಬಿಸುತ್ತ ಬಂದು, ಕಡೆಗೆ ಈ ಧರ್ಮಚಕ್ರವು ಒಂದು ಗಾಢ-ಗೂಢ ಸೊನ್ನೆಯಾಗಿ, ಅಧರ್ಮಚಕ್ರಾಧಿಪತ್ಯದ ರಾಜ್ಯೋಪಕರಣವಾಗಿ, ಬರಲಿರುವ ಕೂಪಕಂದರದ (Black-hole) ದುಶ್ಶಕುನವಾಗಿ ಹಿಂದುರುಳಲಾರಂಭಿಸಿ ದಶಕಗಳೇ ಕಳೆದವು. ತ್ರಿರಂಗವು ಹೀಗೆ ಗತಿಸಿರುವಂತೆಯೇ, ಇಂದು ಒಂದೊಂದು ರಾಜ್ಯಕ್ಕೂ, ಪಕ್ಷವಿಪಕ್ಷಗಳಿಗೂ, ಬಣೋಪಬಣಗಳಿಗೂ, ಚಳುವಳಿ-ಸಂಘಟನೆಗಳಿಗೂ, ಒಂದೊಂದು ಬಾವುಟ, ಒಂದೊಂದು ಸೇನೆ ಎಲ್ಲಂದರಲ್ಲಿ ತಲೆಯೆತ್ತಿಕೊಂಡಿವೆ. (ದೇಶಾದ್ಯಂತ ಒಬ್ಬೊಬ್ಬ ಸನ್ಮಂತ್ರಿಯ ‘ಸತ್ಕರ್ಮ’ಕಾಂಡಕ್ಕೂ ನಿರೋಧ (ಅಥವಾ ‘ಶತ್ರು’) ಪಕ್ಷಗಳು ಸಿ.ಬಿ.ಐ. ತನಿಖೆಯನ್ನೇ ಒತ್ತಾಯಿಸುತ್ತಿರುವುದರಿಂದಾಗಿ, “ಸಿ.ಬಿ.ಐ. ಮಹಾಸೇನೆ” ಎಂಬುದೊಂದು ಈಗ ಬಾಕಿಯುಳಿದಿದೆಯಷ್ಟೆ.)

4 Responses to “ವಿಡಂಬನೆ: ಭಾಗ್ಯದೊಡನೆ ಭೇಟಿ”

 1. ಶ್ರೀ ಕಾರ್ ಆಗಷ್ಟ್ 18, 2012 at 10:10 ಫೂರ್ವಾಹ್ನ #

  ಈ ಹೀನಾಯ ಪರಿಸ್ತಿತಿಗೆ ಕಾರಣ ಮುಗ್ಧ ನಗು ಜನಮಾನಸದಿಂದ ಮಾಯವಾಗಿರುವುದು.
  ಆಳುವವರ ಅಟ್ಟಹಾಸದ ನಗು ಸಾಮಾನ್ಯ ಪ್ರಜೆಗಳಲ್ಲಿ ಅಳು ಉಂಟುಮಾಡಿದೆ.
  ಏರುತ್ತಿರುವ ಬೆಲೆಗಳು, ಇಳಿಯುತ್ತಿರುವ ಮೌಲ್ಯಗಳು, ದಿನಕ್ಕೆರಡು ಸ್ಕ್ಯಾಮುಗಳು ಜನರನ್ನು ಹತಾಶರನ್ನಾಗಿಸಿವೆ.
  ನಿಜವಾಗಿಯೂ ಆಳಬೇಕಾದಂಥ ನಗೆ ಸಾಮ್ರಾಟರು ತಮ್ಮ ಕರ್ತವ್ಯ ಮರೆತು ನಗೆಸಾಮ್ರಾಜ್ಯದ ಹೊರಗೆ ಪರ್ದೇಸಿಯಾಗಿದ್ದಾರೆ.

  ಆದ್ದರಿಂದ, ನಗೆ ಸಾಮ್ರಾಟರೆ, ಎಚ್ಚರಗೊಳ್ಳಿ, ಎದ್ದೇಳಿ ರಾಜಧರ್ಮ ಪರಿಪಾಲಿಸಿ!

  • Nage samrat ಆಗಷ್ಟ್ 20, 2012 at 2:54 ಫೂರ್ವಾಹ್ನ #

   ಸಾಮ್ರಾಟರು ತಮ್ಮ ಕರ್ತವ್ಯವನ್ನು ಮರೆತು ಸ್ವಾರ್ಥ್ಯ ಸುಖ ಲೋಲುಪರಾಗಿದ್ದಾರೆ ಎನ್ನುವ ಪ್ರಜೆಗಳ ಆರೋಪ ನಮ್ಮನ್ನು ತಲುಪಿದೆ. ಅದಕ್ಕೆಂದೇ ನಾವು ಧೂಳು ಹಿಡಿದ ಮೆದುಳನ್ನು ಕಿವಿಗಳ ಮುಖಾಂತರ ತಲೆಯೊಳಕ್ಕೆ ತೂರಿಸಿಕೊಂಡು ಹಿಂದಿರುಗಿದ್ದೇವೆ!

Trackbacks/Pingbacks

 1. ವಿಡಂಬನೆ :‌ ಭಾಗ್ಯದೊಡನೆ ಭೇಟಿ ಭಾಗ ೨ « ನಗೆ ನಗಾರಿ ಡಾಟ್ ಕಾಮ್ - ಆಗಷ್ಟ್ 19, 2012

  […] ಮೊದಲ ಕಂತು ಇಲ್ಲಿ ಓದಿ […]

 2. ವಿಡಂಬನೆ: ಭಾಗ್ಯದೊಡನೆ ಭೇಟಿ ಅಂತಿಮ ಭಾಗ « ನಗೆ ನಗಾರಿ ಡಾಟ್ ಕಾಮ್ - ಆಗಷ್ಟ್ 20, 2012

  […] ಮೊದಲ ಕಂತು ಇಲ್ಲಿ ಓದಿ ಎರಡನೆಯ ಕಂತು ಇಲ್ಲಿ ಓದಿ   […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: