ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…
ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?
ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.
ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.
ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!
ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.
ನಗಾರಿಯ ಸನ್ ತಾಪ ಕರಿಗೆ,
ನೀವು ಇನ್ನೂ ಜೀವದಿಂದಿರುವುದು ತಿಳಿದು ಸನ್ ತಾಪ ಶಮನವಾಯಿತು.
ಬಾರಿಸಿ, ಕನ್ನಡ ನಗಾರಿಯ !
ಮಾನ್ಯ ಶ್ರೀ ಕಾರ್ ರೇ,
ನಮ್ಮ ಸಿನ್ ಪಾಪ ಕಳೆಯುವವರೆಗೆ ಈ ಸನ್ ತಾಪ ನಿಗೆ ಏನೂ ಆಗುವುದಿಲ್ಲ ಎನ್ನುವುದು ಸಿದ್ಧಿತ.
ಓದುಗರ ಕಿವೀ ಮ್ಯಾಲೆ ನಿಮ್ಮ ಫ್ಲವರ್ ಶೋ ಮುಂದುವರೆಯಲಿ..:-)
ನಾವಿಟ್ಟ ಫ್ಲವರುಗಳಿಗೆ ನಮ್ಮ ಓದುಗರ ತಲೆಗಳಲ್ಲಿ ಫಲವತ್ತಾದ ಗೊಬ್ಬರ ಲಭ್ಯವಿದ್ದರೆ ನಮ್ಮಷ್ಟು ಸಂತುಷ್ಟರು ಬೇರಿಲ್ಲ!