Tag Archives: politics

ಜೋಕುಮಾರಸ್ವಾಮಿ ಅಸ್ಥಿ: ತನಿಖೆಗೆ ಬಿದ್ದೆರಾಮಯ್ಯ ಸವಾಲು

14 ಮಾರ್ಚ್

”ಮಾಜಿ ಮುಖ್ಯಮಂತ್ರಿ ಜೋಕುಮಾರ ಸ್ವಾಮಿಯವರು ಶಾಸಕರಾಗುವ ಮೊದಲು ಅವರ ಮೈಯಲ್ಲಿ ಎಷ್ಟು ಅಸ್ಥಿ ಇತ್ತು ಈಗ ಎಷ್ಟಿದೆ ಎಂದು ತನಿಖೆಯಾಗಲಿ” ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಅಹಿಂದ ತಂತ್ರಿ ಬಿದ್ದೆ ರಾಮಯ್ಯನವರು ತೀವ್ರವಾಗಿ ಆಗ್ರಹಿಸಿದ್ದಾರೆ.

ಈ ವರದಿಯ ಬೆನ್ನು ಹತ್ತಿ ಬಿದ್ದೆ ರಾಮಯ್ಯನವರನ್ನು ಬೆನ್ನತ್ತಿದ ನಮ್ಮ ಒದರಿಗಾರನಿಗೆ ಅವರು ಹೀಗೆ ಹೇಳಿಕೆ ನೀಡಿದ್ದಾರೆ: “ಸ್ವಯಂ ಘೋಷಿತ ಮಣ್ಣಿನ ಮಗನ ಸುಪುತ್ರನಾಗಿ ಹುಟ್ಟಿರುವ ಜೋಕುಮಾರರು ಮು.ಮ ಆಗುವ ಮೊದಲು ಎಷ್ಟು ಅಸ್ಥಿಯನ್ನು ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಮನುಷ್ಯನ ದೇಹದಲ್ಲಿ ನೈಸರ್ಗಿಕವಾಗಿ ೨೦೬ ಅಸ್ಥಿಗಳಿರುತ್ತವೆ. ಅವರಲ್ಲಿ ಒಂದೆರಡು ಹೆಚ್ಚು ಕಮ್ಮಿ ಇದ್ದಿರಬಹುದು. ಆದರೆ ಮು.ಮ ಆದ ನಂತರ ಅವುಗಳು ಎಷ್ಟಿವೆ ಎಂಬುದನ್ನು ಬಿಸಿ-ಬಿಸಿ ಹೈನವರೇ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತೇನೆ”

ಮು.ಮ ಆದ ನಂತರ ಜೋಕುಮಾರ ಸ್ವಾಮಿಯವರ ಅಸ್ಥಿಯಲ್ಲಿ ಏನು ಬದಲಾವಣೆಯಾಗಿದೆ ಎಂಬ ನಮ್ಮ ವದರಿಗಾರನ ಪ್ರಶ್ನೆಗೆ ಬಿದ್ದೆರಾಮಯ್ಯನವರು, ” ಜೋಕುಮಾರ ಮುಖ್ಯ ಮಂತ್ರಿಯಾಗುವ ಮೊದಲು ನಾನು ಉಪ ಮುಖ್ಯ ಮಂತ್ರಿಯಾಗಿದ್ದೆ. ನನ್ನ ಶಕ್ತಿಯ ಬಗ್ಗೆ ಹಲವರಿಗೆ ತಿಳಿದಿಲ್ಲ. ನಾನ್ಯಾರು ಅಂತ ನನಗೇ ತಿಳಿದಿಲ್ಲ. ಅವತ್ತು ಯಾವುದೋ ಕಟ್ಟಡ ಶಂಕುಸ್ಥಾಪನೆಗೋ ಯಾವುದಕ್ಕೋ ಹೋಗಿದ್ದಾಗ ನಾನೇ ಜೆ.ಸಿ.ಬಿ ಮಶೀನು ಓಡಿಸಿ ಒಬ್ಬನ ಕಾಲ ಮೇಲೆ ಹರಿಸಿ ಅವನ ಕಾಲಿನ ಅಸ್ಥಿಯನ್ನೆಲ್ಲಾ ಪುಡಿ ಮಾಡಿದ್ದನ್ನು ಮರೆತುಬಿಟ್ಟಿರಾ? ನನ್ನನ್ನು ಹೇಳದೆ ಕೇಳದೆ ಕೆಳಕ್ಕಿಳಿಸಿ ಗೇಟ್ ಪಾಸ್ ಕೊಟ್ಟು ಮಗನನ್ನು ಮುಖ್ಯ ಮಂತ್ರಿ ಮಾಡಿದ ಮಣ್ಣಿನ ಮಗನ ನೆಮ್ಮದಿ ಹಾಳು ಮಾಡಲು ನಾನು ಪಟ್ಟ ಪ್ರಯತ್ನ ಎಷ್ಟು? ನಾನು ಎಷ್ಟು ಗಟ್ಟಿ ಆಸಾಮಿ ಅಂತ ನಿಮಗೆ ಗೊತ್ತಿಲ್ಲದಿದ್ದರೆ ಆ ಫೈರ್ ಮಹಾದೇವುಗೆ ಕೇಳಿ, ನನ್ನ ಪಂಚ್ ಹೆಂಗಿತ್ತು ಅಂತ. ಜೋಕುಮಾರ ಮುಖ್ಯ ಮಂತ್ರಿಯಾಗಿದ್ದಾಗ ನಾನು ಅದೇಷ್ಟೋ ಇಂತಹ ಪಂಚುಗಳನ್ನು ಮಾಡಿದ್ದೀನಿ. ಕೊನೆಗೆ ಇಪ್ಪತ್ತು ತಿಂಗಳು ಆದ ನಂತರ ಮುಖ್ಯ ಮಂತ್ರಿ ಸೀಟು ಮುರಿದು ಬೀಳೋಹಂಗೆ ಏರ್ಪಾಡು ಮಾಡಿದ್ದೆ. ಮೇಲಿಂದ ಬಿದ್ದಾಗ ಅಸ್ಥಿ ಮುರಿದಿರಲು ಸಾಧ್ಯವಿಲ್ಲವೇ? ಇಷ್ಟೆಲ್ಲಾ ಆಗಿರುವುದರಿಂದ ಜೋಕುಮಾರ ಸ್ವಾಮಿಯ ಅಸ್ಥಿಯ ವಿಚಾರಣೆಯನ್ನು ಬಿಸಿ-ಬಿಸಿ ಹೈನವರಿಗೇ ವಹಿಸಬೇಕು” ಎಂದರು.

ಈ ಮಧ್ಯೆ ನಮ್ಮ ವದರಿಗಾರ ಜೋಕುಮಾರ ಸ್ವಾಮಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಂಡನ್ನಿನಿಂದ ಆಗಮಿಸಿದ ‘ಮಣ್ಣಿನ ಮೊಮ್ಮಗು’ವನ್ನು ಆಟವಾಡಿಸುವುದರಲ್ಲಿ ಮಗ್ನರಾಗಿದ್ದಾರೆಂದು ತಿಳಿದು ಬಂದಿತು.