Tag Archives: kuchela

ಕುಚೇಲ ವಾಣಿ: ಸಾಮ್ರಾಟರೇ, ಸೈಡು ಬಿಡಿ

15 ಸೆಪ್ಟೆಂ

ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. kuchela

ಉನ್ನತವಾದ ಕಾಲೇಜಿನ ಕಲಾ ವಿಭಾಗದಲ್ಲಿ ಓದಿ ಚಿನ್ನದ ಪದಕವನ್ನು ಎರಡು ಅಂಕಗಳಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿ ನಾನು. ಎರಡು ಅಂಕ ಕಡಿಮೆ ಗಳಿಸಿದ ತಪ್ಪಿಗಾಗಿ ಏನೋ ಎಂಬಂತೆ ಸಾಮ್ರಾಟರ ಬಳಿ ಇಂಟರ್ನ್ ಆಗಿ ಸೇರಿಕೊಂಡೆ. ತೆಹೆಲ್ಕಾ ಡಾಟ್ ಕಾಮ್ ಪ್ರಸಿದ್ಧಿಯಲ್ಲಿದ್ದ ದಿನದಿಂದ ನಗೆ ನಗಾರಿ ಡಾಟ್ ಕಾಮ್ ನಂತಹ ಬಹುದೊಡ್ಡ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದರೆ ನನ್ನ ಭವಿಷ್ಯವು ಉಜ್ವಲವಾಗಿರುವುದು. ನಾನು ಮುಖ ತೋರಿದೆಡೆಯೆಲ್ಲಾ ಕೆಲಸಕ್ಕೆ ಆಹ್ವಾನಗಳು ತೂರಿ ಬರುವವು. ನೀಳ ಜಡೆಯ ಹುಡುಗಿಯರು ನನ್ನ ಶರ್ಟಿನ ಚುಂಗು ಎಳೆಯುತ್ತ ಒಂದು ಜೋಕು ಹೇಳು ಎಂದು ಪೀಡಿಸುವರು. ಆ ಮುದ್ದಾದ ಚಿತ್ರಗಳಿಗೆ ಚುರುಕಾದ ಅಡಿ ಬರಹಗಳನ್ನು ಕೊಡುತ್ತಿದ್ದವನು ನೀನೇನಾ ಎಂದು ಕಂಡವರೆಲ್ಲಾ ಹುಬ್ಬೇರಿಸುವರು ಎಂದೆಲ್ಲಾ ಕನಸು ಕಾಣುತ್ತ ದಿನ ತಳ್ಳುತ್ತಿದ್ದವನಿಗೆ ಸಾಮ್ರಾಟರಿಂದ ಮುಕ್ತಿಯೇ ಇಲ್ಲದಾಗಿ ಹೋಯಿತು.

ನನ್ನ ಬಗ್ಗೆ ಮಾತೆತ್ತಿದರೆ ‘ನಮ್ಮ ಅತ್ಯಾಪ್ತ ಚೇಲ ಕುಚೇಲ’ ಎಂದು ಸಕ್ಕರೆಯ ಮಾತನಾಡುವ ಸಾಮ್ರಾಟರು ಇಷ್ಟು ದಿನಗಳಲ್ಲಿ ನನಗೆ ನೀಡಿದ ಹಿಂಸೆಯನ್ನು ಪಟ್ಟಿ ಮಾಡಲು ಇದು ಯೋಗ್ಯವಾದ ಸ್ಥಳವಲ್ಲ. ಅವರು ಹೇಳಿದ್ದನ್ನೆಲ್ಲ ಮಾಡಿಕೊಂಡು, ಅವರು ಅಟ್ಟಿದಲ್ಲೆಲ್ಲಾ ಓಡಿ ಅಲೆದಾಡಿಕೊಂಡು ಇದ್ದೆ. ನಾನು ಬರೆದ ವರದಿಗಳಿಗೆಲ್ಲಾ ತಮ್ಮ ಹೆಸರೇ ಹಾಕಿಕೊಂಡು ಸಾಮ್ರಾಟರು ಮೆರೆಯುವಾಗ ನನಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಒಂದಲ್ಲ ಒಂದು ದಿನ ನನಗೂ ಕಾಲ ಕೂಡಿ ಬರುತ್ತದೆ. ಆಗ ಜಗತ್ತೇ ನನ್ನ ಬೆರಳ ಸನ್ನೆಯಿಂದ ಕುಣಿಯುತ್ತದೆ ಎಂದುಕೊಂಡಿದ್ದೆ. ಸಾಮ್ರಾಟರ ಮಹಿಮೆಯಿಂದ ಆ ದಿನ ಎಂದಿಗೂ ಬರುವುದಿಲ್ಲ ಎಂದು ಮೆಲ್ಲಗೆ ಅರಿವಾಗುತ್ತಿದೆ. ಸಾಮ್ರಾಟರೊಡನೆ ಕೆಲಸ ಮಾಡಿದೆ ಎಂದು ಹೇಳಿಕೊಂಡದ್ದಕ್ಕೆ ನಾಲ್ಕು ಕಛೇರಿಗಳಲ್ಲಿ ಕೈಲಿ ಹಿಡಿದಿದ್ದ ಫೈಲು ಕಸಿದುಕೊಂಡು ಹೊರದಬ್ಬಿದರು. ಒಬ್ಬ ಯಜಮಾನರಂತೂ ಜೇಬಲ್ಲಿದ್ದ ಐವತ್ತು ರುಪಾಯಿ, ಬಿಎಂಟಿಸಿ ದಿನದ ಪಾಸನ್ನು ಕಿತ್ತುಕೊಂಡು ಹೊರಗಟ್ಟಿದರು. ಸಾಮ್ರಾಟರ ಹೆಸರು ಹೇಳುತ್ತಿದ್ದಂತೆಯೇ ‘ನೋ ವೇಕೆನ್ಸಿ’ ಎಂದವರು ಅನೇಕರು. ಹೀಗೆ ನಾನು ಎಲ್ಲೆಲ್ಲಿ ಹೋದರೂ ಸಾಮ್ರಾಟರ ಹೆಸರಿನ ಕರಾಳ ನೆರಳು ಅದಾಗಲೇ ಅಲ್ಲಿ ಉಪಸ್ಥಿತವಿರುತ್ತಿತ್ತು.

ಹಳೆ ಗಂಡನ ಪಾದವೇ ಗತಿಯೆಂಬ ಗರತಿಯ ಅನುಭವ ವಾಕ್ಯವನ್ನು ರಕ್ತಗತವಾಗಿಸಿಕೊಂಡು ನಾನು ವಾಪಸ್ಸು ಸಾಮ್ರಾಟರ ಬಳಿ ಬಂದಿರುವೆ. ಆದರೆ ಈ ಬಾರಿ ಸಾಮ್ರಾಟರ ಚೇಲನಾಗಿಯಷ್ಟೇ ಉಳಿಯಲು ಬಂದಿಲ್ಲ. ಸಾಮ್ರಾಟರ ಸಾಮ್ರಾಜ್ಯಕ್ಕೆ ಅನಭಿಷಿಕ್ತ ಯುವರಾಜನಾಗುವ ಹುಮ್ಮಸ್ಸಿನಿಂದ ಬಂದಿದ್ದೇನೆ.

ಇಷ್ಟು ದಿನ ನಗಾರಿಯು ಬಾಲ್ಯಾವಸ್ಥೆಯಲ್ಲಿತ್ತು ಎನ್ನಬಹುದು. ಬಾಲಿಶವಾದ ಹಾಸ್ಯವೇ ಇದರ ಜೀವಾಳವಾಗಿತ್ತು. ಆಗಾಗ ಸಾಮ್ರಾಟರು ತಮ್ಮತನವನ್ನೂ ಮೀರಿದ ಅದ್ಭುತ ಹಾಸ್ಯವನ್ನು ಹುಟ್ಟಿಸುತ್ತಿದ್ದರು ಎನ್ನುವುದನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲವೂ infantile ಆದ ನಗೆ ಬರಹಗಳೇ ಆಗಿರುತ್ತಿದ್ದವು. ಇನ್ನು ನನ್ನ ಸುಪರ್ದಿಗೆ ಬಂದಿರುವ ನಗಾರಿಗೆ ಯೌವನದ ಹೊಳಪನ್ನು ನೀಡಲು ನಾನು ಯತ್ನಿಸುವೆ. ಬಾಲಿಶತನವನ್ನೂ ಹೊಂದಿದ್ದು ಅದನ್ನು ಮೀರಲು ಯತ್ನಿಸುವ ಯುವಕನ ಹುಮ್ಮಸ್ಸನ್ನು ನಗಾರಿಯ ಬರಹಗಳಲ್ಲಿ ತುಂಬುವತ್ತ ಪ್ರಾಮಾಣಿಕ ಪರಿಶ್ರಮ ವಿನಿಯೋಗಿಸುವೆ. ಸಾಮ್ರಾಟರು ನಗಾರಿಯ ದೊರೆಗಳಾಗಿ ಮುಂದುವರೆಯುತ್ತಾರಾದರೂ ನಗಾರಿಯ ಆಗು ಹೋಗುಗಳಲ್ಲಿ ನಾನೇ ಸಕ್ರಿಯವಾಗಿ ಪಾಲ್ಗೊಳ್ಳುವೆ. ಇನ್ನು ಮೇಲೆ ಸಾಮ್ರಾಟರು ನನ್ನನ್ನು ಎಲ್ಲಿಯೂ ಅಟ್ಟುವುದಿಲ್ಲ ಎನ್ನುವ ವಿಶ್ವಾಸ ನನ್ನದು.

ಕಾಲವು ಬಹು ವೇಗವಾಗಿ ಬದಲಾಯಿಸುತ್ತಿದೆ. ವ್ಯಂಗ್ಯ ಎಂದು ನಾವು ಪರಿಗಣಿಸಿದ್ದು ವಾಸ್ತವವೇ ಆಗಿ ಸ್ಥಾಪಿತವಾಗುತ್ತಿದೆ. ವಾಸ್ತವವೇ ದೊಡ್ಡ ವ್ಯಂಗ್ಯವಾಗಿ ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಕೈಲಿ ಲಟ್ಟಣಿಗೆ ಹಿಡಿದು, ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಎದೆ ಸೆಟೆಸಿ ನಿಂತ ಹೆಂಡತಿ, ಹಣೆಯ ಮೇಲೆ ಬುಗುಟು ಎದ್ದು, ಸತ್ತೆನೋ ಕೆಟ್ಟೆನೋ ಎಂದು ಓಡುವ ಪತಿ- ಎನ್ನುವುದು ವ್ಯಂಗ್ಯವಾಗಿ ಉಳಿದೇ ಇಲ್ಲ ಎನ್ನುವುದನ್ನು ಭೈರಪ್ಪರಂತಹ ಹೆಸರಾಂತ ಕಾದಂಬರಿಕಾರರು ನಿರೂಪಿಸುವ ವಾಸ್ತವವಾಗಿ ಹೋಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರದ ಆರೋಪ ಮಾಡಿ, ತಮ್ಮ ಬಳಿ ಇರುವ ಸಾಕ್ಷ್ಯಗಳ ಸತ್ಯಾಸತ್ಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ, ಕುಮಾರಸ್ವಾಮಿಗಳು ಕರ್ನಾಟಕದ ರಾಜಕೀಯದ ವಾಸ್ತವವನ್ನೇ ದೊಡ್ಡ ವ್ಯಂಗ್ಯವಾಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆಯಲ್ಲಿ ಸೇರಿಕೊಂಡ ತಿಗಣೆಯ ಬಗ್ಗೆಯೇ ವಿನೋದ ಮಾಡುತ್ತ ಕೂರುವ ಸಾಮ್ರಾಟರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ.

ಸಾಮ್ರಾಟರ ವಿನೋದದಲ್ಲಿ ವಿವೇಕವೇ ಹೆಚ್ಚು ಇರುತ್ತದೆ. ಅವರ ವಿನೋದಕ್ಕೆ ನನ್ನ ತಕರಾರುಗಳು ಎರಡು ರೀತಿಯವು. ಓದುಗರು ತಮ್ಮಿಂದ ವಿವೇಕ ಹೇಳಿಸಿಕೊಳ್ಳುವಂಥವರು ಎಂದು ಭಾವಿಸುವುದು ಸಾಮ್ರಾಟರ ಅಹಂಕಾರವನ್ನು ತೋರುತ್ತದೆ ಎನ್ನುವುದು ಮೊದಲ ತಕರಾರು. ಎರಡನೆಯದು, ವಿವೇಕವನ್ನು ವಿನೋದವಾಗಿ ಹೇಳಲು ಹೊರಟರೆ ಓದಿದವರೂ ಸಹ ವಿನೋದದಿಂದಲೇ ಅದನ್ನು ಮರೆತು ಮುಂದೆ ಹೋಗುತ್ತಾರೆ.

ನಗೆ ನಗಾರಿಯ ವಿನೋದವು ಹರಿತವಾಗಿಲ್ಲ. ವಿನೋದಕ್ಕೆ ಈಡು ಮಾಡಿದ ವ್ಯಕ್ತಿಯ ನಿಜ ನಾಮಧೇಯವನ್ನು ಬಳಸದಿರುವುದು ಸಾಮ್ರಾಟರ ಪುಕ್ಕಲುತನವನ್ನು ತೋರುತ್ತದೆ. ನಿಜ ಸನ್ನಿವೇಶಗಳು, ನಿಜ ವ್ಯಕ್ತಿಗಳು, ನಿಜವಾದ ಘಟನೆಗಳೇ ವಿನೋದಕ್ಕೆ, ವ್ಯಂಗ್ಯಕ್ಕೆ ಈಡಾಗಬೇಕು. ಆಗಲೇ ವ್ಯಂಗ್ಯದ ನಿಜವಾದ ಸತ್ವ ಹೊರತರಲಿಕ್ಕೆ ಸಾಧ್ಯ. ದೇಜಗೌ ತಮ್ಮನ್ನು ತಾವು ದಶರಥ, ಮೋತಿಲಾಲ ಎಂದು ಕರೆದುಕೊಳ್ಳುವುದು, ರಾಮುಲು ತಾನು ಯಾವುದೇ ರೀತಿಯಿಂದಲೂ ಚೆಂದ ಕಾಣಿಸಬಾರದೆಂದು ತಲೆ ಬೋಳಿಸಿಕೊಳ್ಳುವುದು, ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಹಲುಬುವುದು, ರವಿ ಬೆಳಗೆರೆ ತನ್ನ ಕೈಲಿನ್ನು ಆಗಲ್ಲ ಎಂದು ಬರೆದುಕೊಳ್ಳುವುದು ಎಲ್ಲವೂ ನಗಾರಿಯ ಮೊನಚಾದ ಹಾಸ್ಯಕ್ಕೆ ಈಡಾಗಬೇಕು. ಇದು ನನ್ನ ವಿಶನ್.

ಸಾಮ್ರಾಟರಷ್ಟು ನಿರರ್ಗಳವಾಗಿ ನನಗೆ ಬರೆಯಲು ಸಾಧ್ಯವಾಗದಿರಬಹುದು. ಅವರಷ್ಟು ಬುದ್ಧಿವಂತಿಕೆಯಿಂದ ಪ್ರತಿಕ್ರಿಯೆ ನೀಡಲು ನನಗೆ ಬಾರದಿರಬಹುದು. ಆದರೆ ಬೆಳೆಯುವ ಆಕಾಂಕ್ಷೆಯಿರುವ ನಾನು ನಗಾರಿಯಲ್ಲಿ ಅತ್ಯುತ್ತಮವಾದದ್ದೇ ಪ್ರಕಟವಾಗುವಂತೆ ನೋಡಿಕೊಳ್ಳುವೆನು.

ಸಾಮ್ರಾಟರೆ, ಸೈಡು ಬಿಡಿ!

ಇದು ಪ್ರತಿ ಕ್ಷಣದ ಅಚ್ಚರಿ!

10 ಸೆಪ್ಟೆಂ

(ನಗೆ ನಗಾರಿ ವೈಯಕ್ತಿಕ ಬ್ಯೂರೋ)

ನಾಡಿನ ಹೆಸರಾಂತ ಸಂಪಾದಕರು ನಡೆಸುವ ನೂರಾರು ಸಂಗತಿಗಳಲ್ಲಿ ಒಂದಾದ ಅದ್ಭುತ, ಅಮೋಘ ಟ್ಯಾಬ್ಲಾಯ್ಡ್‌‍ವೊಂದರ ಸಂದರ್ಶನಕ್ಕೆ ನಗೆ ಸಾಮ್ರಾಟರ ಛೇಲ ಕುಚೇಲ ಹಾಜರಾಗಿದ್ದ ಆಘಾತಕಾರಿ ಸಂಗತಿ ಇದೀಗ ತಾನೆ ಬಯಲಾಗಿದೆ. ನಗೆ ನಗಾರಿಯಲ್ಲಿನ ಸಂ-ಚೋದನೆಯಿಂದ ಬೋರು ಹೊಡೆದು ವಾರದ ಅಚ್ಚರಿಯಲ್ಲಿ ಪಾಲ್ಗೊಳ್ಳಲು ಆತ ಆತ ಸಂದರ್ಶನಕ್ಕೆ ಓಡಿದ್ದ ಎಂದು ತಿಳಿದುಬಂದಿದೆ.

ಸಂದರ್ಶನಕ್ಕೆ ಹಾಜರಾದ ನೂರು ಪ್ಲಸ್ ಅಭ್ಯರ್ಥಿಗಳಲ್ಲಿ ಕುಚೇಲನನ್ನು ಹೊರತು ಪಡಿಸಿದರೆ ಮತ್ತೆಲ್ಲರೂ ಶಿಫಾರಸ್ಸು ಪತ್ರಗಳನ್ನು ಕಿಸೆಯಲ್ಲಿ ಸಿಕ್ಕಿಸಿಕೊಂಡು ಬಂದಿದ್ದರು. ಕುಚೇಲ ಒಂದೊಂದೇ ಪತ್ರವನ್ನು ಇಣುಕಿಣುಕಿ ನೋಡಿದ, ಅಲ್ಲಿ ರಾಜಕಾರಣಿಗಳ ಹೆಸರು ಕಂಡದ್ದು ಕಡಿಮೆ. ಹೆಚ್ಚು ಹೆಸರುಗಳು ಕನ್ನಡ ನಾಡು ಮೆಚ್ಚಿ ಹಾಡಿ ಹೊಗಳಿದ ಚಲನ ಚಿತ್ರ ನಿರ್ದೇಶಕರು, ಖ್ಯಾತ ಅಂಕಣಕಾರರು ಹಾಗೂ ಪ್ರಖ್ಯಾತ ವಕೀಲರುಗಳ ಹೆಸರುಗಳೇ ಇದ್ದವು. ಸಂದರ್ಶನಕ್ಕೆ ಕದ್ದು ಹಾಜರಾಗುವ ಗಡಿಬಿಡಿಯಲ್ಲಿ ಕುಚೇಲ ಯಾವ ಶಿಫಾರಸ್ಸು ಪತ್ರಗಳನ್ನೂ ಒಯ್ಯಲು ಸಾಧ್ಯವಾಗಲಿಲ್ಲ. ನಗೆ ಸಾಮ್ರಾಟರು ಒಂದು ಪತ್ರ ಗೀಚಿಕೊಟ್ಟಿದ್ದರೆ ಎಷ್ಟು ಸುಲಭವಾಗುತ್ತಿತ್ತು ಕೆಲಸ ಎಂದು ಆತನಿಗೆ ಕ್ಷಣ ಮಾತ್ರಕ್ಕಾದರೂ ಅನ್ನಿಸಲಿಲ್ಲ ಎಂಬುದು ವರದಿಯಾಗಿದೆ.

ಸಂದರ್ಶನದ ದಿನ ಕುಚೇಲ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡು ಟ್ಯಾಬ್ಲಾಯ್ಡಿನ ಕಛೇರಿಗೆ ಹೋಗಿದ್ದ. ಹಾಗೆ ಹೋಗುವ ಮುನ್ನ ಸಂದರ್ಶನಕ್ಕೆ ತಯಾರಿ ಮಾಡುವವನಂತೆ ಎರಡು ದಿನ ಹಾಗೂ ಒಂದು ರಾತ್ರಿ ಕುಳಿತು ಬಹುವಾಗಿ ಓದಿಕೊಂಡಿದ್ದ. ಪತ್ರಿಕೆಯ ಪ್ರಾರಂಭ, ಹಿನ್ನೆಲೆ, ನಿಲುವು, ವಸ್ತುನಿಷ್ಠತೆ, ಬದ್ಧತೆಯ ಬಗೆಗೆ ಆತ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಾಗಿ ಸಂಪಾದಕರು ಯಾವುದೋ ದೂರದ ಊರಿನಿಂದ ಬೆಂಗಳೂರಿಗೆ ಹಾರಿ ಬಂದಾಗ ಅವರ ಕಿಸೆಯಲ್ಲಿದ್ದದ್ದು ಏನು? ಸಂಪಾದಕರು ಎಷ್ಟೆಲ್ಲಾ ಕಷ್ಟ ಪಟ್ಟು ಪತ್ರಿಕೆಯನ್ನು ಪ್ರಾರಂಭಿಸಿದರು? ಸಂಪಾದಕರು ದಿನಕ್ಕೆ ಸರಾಸರಿಯಾಗಿ ಎಷ್ಟು ಸಿಗರೇಟುಗಳನ್ನು ಸುಟ್ಟು, ಎಷ್ಟು ತಾಸುಗಳ ಕಾಲ ಓದಿ, ಎಷ್ಟು ಪುಟಗಳವರೆಗೆ ಕೈಬರಹ ಕೆಡದ ಹಾಗೆ ಬರೆಯುತ್ತಿದ್ದರು? ಸಂಪಾದಕರ ಹಳೆಯ ಗೆಳೆಯರುಗಳು ಯಾರು, ಗೆಳತಿಯರು ಯಾರು? ಯಾರ್ಯಾರ ಮನೆಯಲ್ಲಿ ಊಟ ಮಾಡಿ ಎಲ್ಲೆಲ್ಲಿ ಮಲಗಿ ಎದ್ದರು? ಸಂಪಾದಕರ ಮೆಚ್ಚಿನ ಲೇಖಕರು ಯಾರು, ನೆಚ್ಚಿನ ಪುಸ್ತಕ ಯಾವುದು? ಸಂಪಾದಕರಿಗೆ ಯಾವ ರೀತಿಯ ಬಟ್ಟೆ ಎಂದರೆ ಇಷ್ಟ? – ಎಂಬೆಲ್ಲಾ ವಿಷಯಗಳ ಬಗ್ಗೆ ಸವಿವರವಾಗಿ ಅಧ್ಯಯನ ಕೈಗೊಂಡು ತಯಾರಿ ನಡೆಸಿದ್ದ.

ತನ್ನ ಬಯೋ ಡೇಟಾದಲ್ಲಿನ ಹವ್ಯಾಸಗಳು, ಇಲ್ಲಿಯವರೆಗಿನ ಸಾಧನೆಗಳು ಮುಂತಾದ ಸಂಗತಿಗಳು ಸಂದರ್ಶಕರಿಗೆ ಅದೆಷ್ಟು ಗೌಣ ಎಂಬುದು ಕುಚೇಲ ಹೇಗೋ ಪತ್ತೆ ಮಾಡಿಬಿಟ್ಟಿದ್ದ. ಆತನ ಬಯೋಡೇಟಾದಲ್ಲಿ ಹವ್ಯಾಸಗಳು, ಕುಟುಂಬ, ಮಾತನಾಡುವ ಭಾಷೆಗಳು ಮುಂತಾದ ಕಾಲಮ್ಮುಗಳನ್ನು ಆತ ಸಂಪಾದಕರ ಹವ್ಯಾಸ, ಅವರ ಇಷ್ಟ, ಅವರ ಚಟಗಳು, ಅವರ ಸಾಧನೆಗಳಿಂದಲೇ ತುಂಬಿಸಿದ್ದ. ಕಡೆಗೆ ಒಂದು ಹೆಚ್ಚುವರಿ ಪುಟದಲ್ಲಿ ಸಂಪಾದಕರ ಮನೆಯವರ ಹಾಗೂ ಮನೆಯಲ್ಲಿರುವವರ ವಿವರಗಳು ಹಾಗೂ ಅವರ ಇಷ್ಟ ಕಷ್ಟ, ಸಾಧನೆಗಳ ಬಗೆಗೂ ಬರೆದಿದ್ದ.

ಸರಿ, ಸಂದರ್ಶನ ಪ್ರಾರಂಭವಾಯಿತು. ಪ್ರಶ್ನೆಗಳನ್ನು ಕೇಳಲಾಯಿತು. ಕುಚೇಲ ಮೊದಲೇ ಆದ್ಯಂತವಾಗಿ ತಯಾರಿ ನಡೆಸಿದ್ದರಿಂದ ಯಾವ ವಶೀಲಿಯೂ ಇಲ್ಲದೆ ಕೆಲಸಕ್ಕೆ ನೇಮಕಗೊಂಡ. ತಾಸೆರಡು ತಾಸು ಮೇಕಪ್ ಮಾಡಿಕೊಂಡು ಸಂಪಾದಕರೊಂದಿಗೆ ಫೋಟೊ ತೆಗೆಸಿಕೊಂಡು ಅದು ಪ್ರಕಟವಾಗುವ ಮುಂದಿನ ಸಂಚಿಕೆಗಾಗಿ ಕಾಯುತ್ತಾ ಕುಳಿತ.

ಇಷ್ಟೆಲ್ಲಾ ಆಗಿಯಾದ ಮೇಲೆ ಕುಚೇಲ ಇಂದು ನಮ್ಮ ಕಛೇರಿಗೆ ವಾಪಸ್ಸು ಓಡಿ ಬಂದಿರುವುದು ನಿಮಗಷ್ಟೇ ಅಲ್ಲದೇ ನಮ್ಮಲ್ಲೂ ವಿಸ್ಮಯ ಹಾಗೂ ಆಶ್ಚರ್ಯವನ್ನು ಹುಟ್ಟಿಸಿದೆ. ಇದಕ್ಕೆ ಕಾರಣವೇನೆಂದು ಕೇಳಲಾಗಿ, ಕುಚೇಲ ತನ್ನ ಕಷ್ಟವನ್ನು ತೋಡಿಕೊಂಡದ್ದು ಹೀಗೆ, “ಸಂದರ್ಶನಕ್ಕೆ ನಾನು ನಡೆಸಿದ ತಯಾರಿಯನ್ನು ಕಂಡು ನಿಜಕ್ಕೂ ಸಂದರ್ಶಕಿ ದಂಗು ಬಡಿದುಹೋಗಿದ್ದಳು. ಆಕೆಯ ಮಾತುಗಳಿಂದ ನನಗೆ ಕೆಲಸ ಗ್ಯಾರಂಟಿ ಎಂದು ಸಂದರ್ಶನ ಮುಗಿಯುತ್ತಿದ್ದ ಹಾಗೆಯೇ ತಿಳಿದು ಹೋಗಿತ್ತು. ನಾನು ಆ ದಿನದಿಂದಲೇ ಕೆಲಸ ಶುರು ಮಾಡಿಕೊಳ್ಳಲು ಬೇಕಾದ ತಯಾರಿ ಮಾಡಿಕೊಳ್ಳತೊಡಗಿದೆ. ವರದಿಗಾರಿಕೆಗೆ ಏನೇನೆಲ್ಲಾ ತಿಳಿದುಕೊಳ್ಳಬೇಕು ಎಂಬ ಬಗ್ಗೆ ಯೋಚಿಸತೊಡಗಿದೆ. ಯಾವ ಯಾವ ಸುದ್ದಿ ಮೂಲಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಇನ್ ಫಾರ್ಮರುಗಳನ್ನು ಪರಿಚಯಿಸಿಕೊಳ್ಳಬೇಕು, ಯಾವ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ನನ್ನ ಪರಿಚಯ ಕೊಡಬೇಕು ಎಂದೆಲ್ಲಾ ಪಟ್ಟಿ ಮಾಡಿದೆ. ನಮ್ಮ ಸಂಪಾದಕರು ಹೇಳುವ ಹಾಗೆಯೇ ನಾನು ಪೂರ್ಣ ತಯಾರಿಯೊಂದಿಗೆ ಫೀಲ್ಡಿಗೆ ಇಳಿಯುವ ಹುಮ್ಮಸ್ಸಿನಲ್ಲಿದ್ದೆ.

“ಅಷ್ಟರಲ್ಲಿ ಪತ್ರಿಕೆಯ ಮೇಲ್ವಿಛಾರಕಿ ಬಂದು ನನಗೆ ಒಂದು ನೂರು ಪುಟಗಳ ಪುಸ್ತಕ ಕೊಟ್ಟಳು. ‘ಇದನ್ನು ಸ್ಟಡಿ ಮಾಡಿ ನೆನಪಿಟ್ಟುಕೊಂಡು ಆ ಮೇಲೆ ವರದಿಗಾರಿಕೆಗೆ ತೊಡಗಿಕೊಳ್ಳುವುದು’ ಎಂಬ ನೋಟ್ ಇತ್ತು. ಆ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಬವಳಿ ಬಂದು ನಾನು ಅಲ್ಲಿಂದ ಓಟಕಿತ್ತಿದ್ದೆ…”

ಸ್ವಲ್ಪ ಕಾಲ ಸುಧಾರಿಸಿಕೊಳ್ಳಲು ಮಾತು ನಿಲ್ಲಿಸಿದ ಕುಚೇಲ ನಗಾರಿ ಕಛೇರಿಯವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ. ಮಾತು ಮುಂದುವರೆಸಿ, “ಆ ಪುಸ್ತಕದಲ್ಲೇನಿತ್ತು ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ನನ್ನದೂ ಅದೇ ಪ್ರಶ್ನೆಯಾಗಿತ್ತು. ಪುಟ ತಿರುವಿ ನೋಡಿದೆ ಅದರಲ್ಲಿ ನೂರಾರು ಮಂದಿ ಪ್ರಮುಖರ, ಹೆಸರಾಂತ ಕಲಾವಿದರ, ಸಂಗೀತಗಾರರ, ವೈದ್ಯರ, ವಕೀಲರುಗಳ, ಪೊಲೀಸು ಆಫೀಸರುಗಳ, ಕೆಲವು ಪತ್ರಕರ್ತರ , ಮಠಾಧಿಪತಿಗಳ, ರಾಜಕಾರಣಿಗಳ ಹೆಸರುಗಳಿದ್ದವು. ಅವುಗಳ ಪಕ್ಕದ ಕಾಲಮ್ಮಿನಲ್ಲಿ ಇವರು ನಮ್ಮ ಸಂಪಾದಕರಿಗೆ ಹೇಗೆ ಪರಿಚಿತರು ಎಂಬುದರ ಬಗ್ಗೆ ಟಿಪ್ಪಣಿ ಇತ್ತು. ಕೆಲವರು ಸಂಪಾದಕರ ‘ಭಿಕಾರಿ’ ದಿನಗಳ ಒಡನಾಡಿಗಳು. ಕೆಲವರು ಸಂಪಾದಕರು ಪತ್ರಿಕೆಯನ್ನು ಕಟ್ಟಲು ಮೆಟ್ಟಿಲಾಗಿ, ಇಟ್ಟಿಗೆಯಾಗಿ ಬಳಸಿಕೊಂಡವರು, ಕೆಲವರು ಸಂಪಾದಕರ ಸೋದರಳಿಯನ ಸಂಬಂಧಿಕರ ಗೆಳೆಯರು, ಕೆಲವರು ಸಂಪಾದಕರ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಂಗೀತ ಮಾಡುವವರು, ಹಾಡು ಬರೆಯುವವರು, ಕೆಲವರು ಸಂಪಾದಕರ ಕಾಲೇಜಿಗೆ ಗ್ರ್ಯಾಂಟ್ ಕೊಡುವವರು- ಹೀಗೆ ಡಿಟೇಲ್ಸ್ ಇದ್ದವು. ‘ಇದನ್ನೆಲ್ಲಾ ಅಧ್ಯಯನ ಮಾಡಿಕೊಂಡು ಯಾರು ಯಾರು ಸಂಪಾದಕರಿಗೆ ತುರ್ತು ಸಹಾಯಕ್ಕೆ ಆವಶ್ಯಕವೋ, ಯಾರು ಯಾರಿಂದ ಸಂಪಾದಕರಿಗೆ ಹತ್ತಿರದ ಭವಿಷ್ಯದಲ್ಲಿ ಲಾಭವಿದೆಯೋ ಅವರನ್ನು ಲೋಕದ ಇಂದ್ರ ಚಂದ್ರ ಎಂದು ಬರೆಯಬೇಕೆಂದೂ, ಕೆಲವು ರೆಡ್ ಮಾರ್ಕಿನ ಹೆಸರುಗಳ ವ್ಯಕ್ತಿಗಳ ಬಗೆಗೆ- ಅವರು ಕೆಮ್ಮಿದರೂ, ಅಪಾನವಾಯುವನ್ನು ಹೊರಬಿಟ್ಟರೂ ಅದು ಅವರ ನೈತಿಕ ಅಧಃಪಥನ ಎಂಬಂತೆ ಬರೆಯಬೇಕೆಂದು ಸೂಚನೆ ಇತ್ತು.

“ಈ ಮಾರ್ಗದರ್ಶಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ವರದಿ ಮಾಡಬೇಕು. ಈ ಕೈಪಿಡಿಯ ಆಧಾರದ ಮೇಲೆಯೇ ಯಾರು ನಿಸ್ಪೃಹ ಅಧಿಕಾರಿ, ರಾಜಕಾರಣಿ, ಯಾರು ಕಚ್ಚೆ ಹರುಕ, ಯಾರು ಹೆಂಡತಿಗೆ ಹೊಡೆಯುತ್ತಾನೆ, ಯಾರಿಗೆ ಮಗಳಂಥ ಹೆಂಡತಿಯಂಥ ಗೆಳತಿಯಿದ್ದಾಳೆ ಎಂಬುದಾಗಿ ಬರೆಯಬೇಕು. ಈ ನಿಯಮಾನುಸಾರವೇ ಯಾವ ಸಿನೆಮಾ ಸೂಪರ್ ಹಿಟ್ಟು, ಮೆಗಾ ಹಿಟ್ಟು, ಯಾವುದು ಫ್ಲಾಪು, ಚಾಪ್ಟರ್ ಕ್ಲೋಸು ಎಂದು ಬರೆಯಬೇಕು. ಹಾಗೆಯೇ ಯಾವ ನಟ ರೈಸಿಂಗ್ ಸ್ಟಾರು, ಯಾವ ಯಾವ ಸ್ಟಾರು ಎಲ್ಲೆಲ್ಲಿ ಹುಟ್ಟಿತು, ಯಾವ ನಟಿ ಹೇಗೆ ಎಂಬುದನ್ನು ವರದಿ ಮಾಡಬೇಕು.’ ಎಂದು ನೂರು ಪುಟಗಳ ಕೈಪಿಡಿಯಲ್ಲಿತ್ತು… ಅದನ್ನು ಓದಿ ಬವಳಿ ಬಂದು ಬಸವಳಿದು ಒಂದೇ ಏಟಿಗೆ ಅಲ್ಲಿಂದ ಓಟಕ್ಕಿತ್ತಿ ಇಲ್ಲಿ ಸಾಮ್ರಾಟರ ನಗೆ ನಗಾರಿಗೆ ಹಿಂದಿರುಗಿರುವೆ” ಎಂದ.

ಈತನ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲು ಸಾಮ್ರಾಟರು ನಗೆ ನಗಾರಿಯ ಏಕ ಸದಸ್ಯ ಕಮಿಟಿಯ ಸಮಸ್ತರನ್ನೂ ಮೀಟಿಂಗಿಗಿ ಕರೆದಿದ್ದಾರೆ.