Tag Archives: ಹುಡುಗಿಯರು

ಅವರಿವರ ಭಯಾಗ್ರಫಿ

16 ಜೂನ್

ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಹುಡುಗೀರು ಏನು ಮಾಡ್ತಿದ್ರು?

32832.player

ಖ್ಯಾತ ಕ್ರಿಕೆಟ್ ಪಟು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಡಗ್ಲಾಸ್ ಜಾರ್ಡಿನ್ ವಿಜಯ್ ಮಾಧವ್ ಜೀ ಮರ್ಚೆಂಟ್‌ರನ್ನು ಭಾರತ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೊಗಳಿರಬಹುದು, ಆದರೆ ಅವರ ಆಟವನ್ನು ನೋಡುವುದು ಬೋರು ಹೊಡೆಸುತ್ತಿತ್ತು.

೧೯೬೦ರ ಬಾಂಬೆ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಅಬ್ಬಾಸ್ ಅಲಿ ಬೇಗ್ ಎಂಬ ಆಟಗಾರನಿಗೆ ಪ್ರೇಕ್ಷಕರ ಸಾಲಿನಲ್ಲಿ ಹುಡುಗಿಯೊಬ್ಬಳು ಚುಂಬಿಸಿದಳು.

“ನಾನು ಬ್ಯಾಟ್ ಮಾಡುವಾಗ ಈ ಹುಡುಗಿಯರೆಲ್ಲಾ ಏನು ಮಾಡುತ್ತಿದ್ದರು?” ಕೇಳಿದರು ಮರ್ಚೆಂಟ್. ಅದಕ್ಕೆ ಎ.ಎಫ್.ಎಸ್.ತಲ್ಯಾರ್‌ಖಾನ್ ಉತ್ತರಿಸಿದರು, “ನಿದ್ದೆ ಮಾಡುತ್ತಿದ್ದರು!”

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

22 ಜುಲೈ

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.

ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.

‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು…’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.

‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ…’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.

‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ… ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.

ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!

ಹುಡುಗರ ಸಾಧನೆಗೆ ಹುಡುಗಿಯರು ಕಾರಣ!

26 ಏಪ್ರಿಲ್

(ನಗಾರಿ ಸಂ-ಚೋದನಾ ಬ್ಯೂರೋ)

ಹುಡುಗರು ಹುಡುಗಿಯರು ಒಟ್ಟಾಗಿ ಕಲಿಯುವಂತಹ ಶಾಲೆಗಳಲ್ಲಿ ಹುಡುಗರ ವರ್ತನೆ ಹೆಚ್ಚು ಸಭ್ಯವಾಗಿರುತ್ತದೆ ಹಾಗೂ ಹುಡುಗರು ಚೆನ್ನಾಗಿ ಓದುತ್ತಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು.

ಹುಡುಗಿಯರೆದುರು ಹುಡುಗರು ಸಭ್ಯವಾಗಿ ವರ್ತಿಸುತ್ತಾರೆ. ಹುಡುಗಿಯರ ಮೆಚ್ಚುಗಾಗಿ ಅವರು ಚೆನ್ನಾಗಿ ಓದುತ್ತಾರೆ. ಹುಡುಗಿಯರು ಹುಡುಗರನ್ನು ‘ತಣ್ಣಗೆ’ ಮಾಡುತ್ತಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹುಡುಗ ಹುಡುಗಿಯರು ಒಟ್ಟಾಗಿ ಕಲಿಯುವುದರಿಂದ ಅವರ ನಡುವೆ ಹೆಚ್ಚಿನ ಹೊಂದಾಣಿಕೆ ಸಾಧ್ಯವಾಗುತ್ತದೆ ಹೆಚ್ಚು ಪ್ರಬುದ್ಧತೆ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ತರಗತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದಷ್ಟೂ ಹುಡುಗರು ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಂಕಗಳಿಸುತ್ತಾರೆ ಎಂದು ಹೇಳಿದ್ದಾರೆ.

ಈ ಸಂಶೋಧನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದ ನಾಡಿನ ಸಮಸ್ತ ಹುಡುಗರು ಈ ಸಂಶೋಧನೆಯನ್ನು ಸಾದ್ಯಂತವಾಗಿ ಪರಿಶೀಲಿಸಿ ಶೀಘ್ರವೇ ಅದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಈ ಸಂಶೋಧನೆ ನಡೆದಿರುವುದು ಲಂಡನ್ನಿನಲ್ಲಾದರೂ ಅದನ್ನು ನಮ್ಮ ನಾಡಿನ ಹುಡುಗರು ಒಕ್ಕೊರಲಿನಿಂದ ಸ್ವಾಗತಿಸುವುದರ ಹಿಂದಿನ ಮರ್ಮ ಹಾಗೂ ಇದರಿಂದ ಹೇಗೆ ಹುಡುಗರ ಅಂಕ ಹೆಚ್ಚಬಹುದು ಎಂಬುದನ್ನು ಸಂ-ಚೋದಿಸಲು ನಗೆ ಸಾಮ್ರಾಟರು ಹೊರಟರು.

ಕಾಲೇಜುಗಳಲ್ಲಿ ಹುಡುಗರಲ್ಲಿ ಹೆಚ್ಚು ಮಂದಿ ಪರೀಕ್ಷೆಯ ಮುಖವನ್ನೇ ನೋಡಲು ಸಾಧ್ಯವಾಗದಿರುವುದಕ್ಕೆ ಅವರ ಅಟೆಂಡೆನ್ಸ್ ಕೊರತೆಯೇ ಬಹು ಮುಖ್ಯ ಕಾರಣವಾಗಿರುತ್ತದೆ. ಹುಡುಗರು ತರಗತಿಯ ಕ್ಲಾಸು ರೂಮು ಹೇಗಿರುತ್ತದೆ ಎಂಬುದನ್ನೇ ನೋಡಿರದಿದ್ದರೆ ಪರೀಕ್ಷೆಯಲ್ಲಿ ಉತ್ತರ ಹೇಗೆ ಬರೆಯಲು ಸಾಧ್ಯ ಎನ್ನುತ್ತಾರೆ ಉಪನ್ಯಾಸಕರು. ಕನಿಷ್ಠ ಪಕ್ಷ ಹುಡುಗರು ತರಗತಿಗಳಿಗೆ ಬಂದು ಕುಳಿತರೆ ತಾವು ಒದರುವ ಅಸಂಖ್ಯ ಪದಗಳಲ್ಲಿ ಒಂದೆರಡಾದರೂ ಸ್ವಪ್ರಯತ್ನದಿಂದ ಹುಡುಗರ ಕಿವಿಗಳನ್ನು ಹೊಕ್ಕು ಅವರ ಮೆದುಳಿನಲ್ಲಿ ದಾಖಲಾಗಬಹುದು ಎಂಬ ದೂರದ ಆಸೆ ಉಪನ್ಯಾಸಕರದು.

ಆದರೆ ಹುಡುಗರೇಕೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂಬುದನ್ನು ಪತ್ತೆ ಹಚ್ಚಲು ಹೊರಟ ಸಾಮ್ರಾಟರಿಗೆ ಅನೇಕ ಕಾರಣಗಳು ಸಿಕ್ಕವು. ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಸಿನೆಮಾ ಥಿಯೇಟರುಗಳು, ಕಾಫಿ ಡೇಗಳು, ಕಾಲೇಜು ಕ್ಯಾಂಟೀನುಗಳು, ಬೇರೆಯ ತರಗತಿಯ ಕ್ಲಾಸ್ ರೂಮುಗಳ ಬಳಿ ಬೀಟ್ ಹಾಕುವುದಕ್ಕೆ ಬಲವಾದ ಕಾರಣವಿದೆ. ತಮ್ಮ ತರಗತಿಯಲ್ಲಿ ಇಲ್ಲದ ಹುಡುಗಿಯರಿಗಾಗಿ ಇವರು ಕ್ಲಾಸ್ ರೂಮ್‌ನಿಂದ ತಪ್ಪಿಸಿಕೊಂಡು ಹೊರಗೆ ಅಲೆಯುವ ಕಷ್ಟವನ್ನು ಪಡಬೇಕಾಗುತ್ತದೆ.

ಆದ್ದರಿಂದ ತರಗತಿಯಲ್ಲಿ ಹುಡುಗಿಯರ ಸಂಖ್ಯೆಯನ್ನು ಹೆಚ್ಚು ಮಾಡುವುದರಿಂದ ಹುಡುಗರು ಅವರಿಗಾಗಿ ಹೊರಗೆ ಅಲೆಯುವ ತಾಪತ್ರಯ ತಪ್ಪುತ್ತದೆ. ಅಲ್ಲದೆ ಹುಡುಗರ ಸಂಖ್ಯೆಗಿಂತ ಹೆಚ್ಚು ಹುಡುಗರು ತರಗತಿಯಲ್ಲಿದ್ದರೆ ಎಲ್ಲರಿಗೂ ಆಯ್ಕೆಯ ಸ್ವಾತಂತ್ರವೂ ಸಿಕ್ಕುತ್ತದೆ. ಇದರಿಂದ ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಹೊರಗೆ ಬೀಟ್ ಹಾಕುವುದು ತಪ್ಪುತ್ತದೆ. ಆಗ ಅವರು ದಿನ ನಿತ್ಯ ತಪ್ಪದೆ, ಸಮಯಕ್ಕೆ ಸರಿಯಾಗಿ ತರಗತಿಗೆ ಬರುತ್ತಾರೆ. ಇದರಿಂದ ಅವರ ಹಾಜರಾತಿಯೂ ಉತ್ತಮವಾಗುತ್ತದೆ. ಅಪರೂಪಕ್ಕೆ ಅವರ ಕಿವಿಯ ರಕ್ಷಣಾ ಕೋಟೆಯನ್ನು ಬೇಧಿಸಿ ಕೆಲವು ಪಾಠಗಳು ಮೆದುಳನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂಬ ಸಂ-ಚೋಧನೆಯನ್ನು ಮಾಡಿ ವರದಿ ತಯಾರಿಸಿದ್ದಾ ಸಾಮ್ರಾಟರು.

ಈ ನಡುನೆ ಲೇಡಿ ಲೆಕ್ಚರರ್ ತೆಗೆದುಕೊಳ್ಳುವ ಸಬ್ಜೆಕ್ಟಿನಲ್ಲಿ ಹುಡುಗರ ಹಾಜರಾತಿ ಅತ್ಯಧಿಕವಾಗಿರುವ ಸತ್ಯಸಂಗತಿಯನ್ನು ಪತ್ತೆ ಹಚ್ಚಿರುವ ಸಾಮ್ರಾಟರ ಚೇಲ ಕುಚೇಲನು ಈ ಸಂಗತಿಯನ್ನೂ ವರದಿಯಲ್ಲಿ ಸೇರಿಸಲು ಸಾಮ್ರಾಟರ ಬೆನ್ನು ಬಿದ್ದಿದ್ದಾನೆ.