Tag Archives: ಹಾಸ್ಯ

ಕೋಮಲ್ ಕಾಲಂ: ವಾಸನೆ ಗೌಡಪ್ಪನ ಗೋರಕ್ಷಣೆ

20 ಸೆಪ್ಟೆಂ

ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ  ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ kolam ಮ್ಯಾಕೆ, ಗೌಡ್ರೆ ನೀವಾ ಅಂದಾ ಡ್ರೇವರ್. ನೋಡಲಾ ಗೌಡನ ದರಿದ್ರ ಬುದ್ದಿಯಾ. ಮಗಾ ಕಾಸು ಉಳಿಸಕ್ಕೆ ತಾನೇ ಹಸ ಮೇಯಿಸ್ತಾವ್ನೆ ಅಂದಾ ಕ್ಲೀನರ್. ಸರಿ ನಿಂಗನ ಅಂಗಡೀಲಿ ನಾನು, ಸುಬ್ಬ, ಸೀತು ಎಲ್ಲಾ ಚಾ ಕುಡಿತಾ ಪ್ರಪಂಚದ ಆಗು ಹೋಗುಗಳ ಬಗ್ಗೆ  ಮಾತಾಡ್ತಾ ಇದ್ವಿ. ಪರದಾನಿ ಮನಮೋಹನ್ ಸಿಂಗಿಂದ ಒಬಾಮಾ ತಂಕ ಹತ್ತು ನಿಮಿಟ್ನಾಗೆ ನಮ್ಮ ಬಾಯ್ನಾಗೆ ಬಂದು ಹೋಗಿದ್ರು. ಮಗಂದು ಮನೇಲೆ ನೋಡಿದ್ರೆ ತಿನ್ನಕ್ಕೆ ಅಕ್ಕಿ ಇಲ್ಲಾ. ಪ್ರಪಂಚದ್ದೆಲ್ಲಾ ಮಾತಾಡ್ತಾವೆ ಅಂತಿದ್ದಾ ಚಾ ಅಂಗಡಿ ನಿಂಗ. ಏ ಥೂ,. ಎದ್ದು ಹೋಗ್ರಲಾ. ಅಟ್ಟೊತ್ತಿಗೆ ಗೌಡಪ್ಪನ ನೋಡಿದ ಸುಬ್ಬ. ಯಾಕ್ರೀ ಗೌಡ್ರೆ ಇವತ್ತು ಹಸ ನೀವು ಹೊಡಕಂಡು ಹೊಂಟೀರಿ ಅಂದಾ. ನೋಡಲಾ ನಮ್ಮ ಮನೆ ದನಕಾಯೋನು ಮೊನ್ನೆ ಕುಡಿಯಕ್ಕೆ ಕಾಸಿಲ್ಲಾ ಅಂತಾ ಎರಡು ಎಮ್ಮೆನಾ ಬರೀ 100ರೂಪಾಯಿಗೆ ಕಸಾಯಿ ಖಾನೆಗೆ ಕಳಸವ್ನೆ ಅಂದ. ಸರಿ ಕೋಣದ ತರಾ ಇರೋ ನಿಮ್ಮನ್ನ ಕಳಿಸಿಲ್ವಲ್ಲಾ ಅದಕ್ಕೆ ಖುಸಿ ಪಡಿ ಅಂದಾ ಸುಬ್ಬ, ಲೇ ಇವನನ್ನ ಕಡಿದರೆ ಕಸಾಯಿ ಖಾನೆನೇ ಗಬ್ಬಾಯ್ತದೆ ಅಂದಾ ದೊನ್ನೆ ಸೀನ.

ಅಟ್ಟೊತ್ತಿಗೆ ನಿಂಗಾ ಬರ್ರೀ ಗೌಡರೆ ಒಂದು ಅರ್ಧ ಚಾ ಕುಡಿದು ಹೋಗಿರಿ ಅಂದ. ನಿನ್ನ ದರಿದ್ರ ಚಲ್ಟದ ಚಾ ಕುಡಿದರೆ ಒಂದು ಹತ್ತು ಕಿತಾ ಕೆರೆತಾವ ಹೋಗಬೇಕು ಅಂದ ಗೌಡಪ್ಪ. ಮಗಂದು ಕಾಲೆಲ್ಲಾ ಸಗಣಿ ಆಗಿತ್ತು. ಇವನು ಹಸ ಹೊಡಕಂಡು ಮುಂದೆ ಹೋಯ್ತಾ ಇದ್ರೆ. ನಮ್ಮೂರು ಹೆಣ್ಣು ಐಕ್ಳು ಹಿಂದಿಂದ ಸಗಣಿ ಎತ್ಕಂಡು ಮರದಾಗೆ ಹಾಕ್ಕೊಂಡು ಹೋಗೋವು. ಬೆರಣಿ ತಟ್ಟಕ್ಕೆ ಆಯ್ತದೆ ಅಂತಾ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರ. ನಮ್ಮ ಸಗಣಿ ಅಂತಾ ಗೌಡ ಜಗಳ ಆಡೋನು. ಏ ಥೂ. ಅದರಾಗೆ ಒಂದು ದನಕ್ಕೆ ಅಜೀರ್ಣ ಅಂತೆ ಗೌಡಪ್ಪ ಹತ್ತಿರ ಬಂದರೆ ಕೊಟ್ಟಿಗೆ ವಾಸನೇ ಬರೋದು.ಹಳಸಿದ ಫಲಾವು ಮತ್ತು ಕೊಟ್ಟಿಗೆ ವಾಸನೆ ಎಲ್ಡು ಮಿಕ್ಸ್ ಆಗಿ ಒಂದು ತರಾ OX (ಎತ್ತು) ಬಾಡಿ ಡಿಯೋಡ್ರೆಂಟ್ ಸ್ಮೆಲ್ ಬರೋದು.

ಕೆರೆತಾವ ಹೋದ್ರೆ ಗೌಡಪ್ಪ ಕಾಯಿ ಜುಂಗು ಹಿಡಕಂಡು ಹೋ ಹೋ ಹೋಪ್ಪಾ ಹೋಪ್ಪಾ ಅಂತಾ ಲೈಫ್ ಬಾಯ್ ಸೋಪ್ನಾಗೆ ಹಸ ಮೈ ತೊಳೀತಾ ಇದ್ದ. ಹೆಂಡರು ಸ್ನಾನಕ್ಕೆ ಇಟ್ಕಂಡಿದ್ದ ಸೋಪ್ನಾಗೆ ಎತ್ತಿನ ಮೈ ತೊಳೆಯೋನು. ಅಲ್ಲಿ ನೋಡಿದ್ರೆ ಹೆಂಡರು ಗೌಡಂಗೆ ಒಂದಿಷ್ಟು ಬೆಂಕಿ ಹಾಕ ಅಂತಿದ್ವು. ಎಲ್ಲಿಗವಾ. ಎಲ್ಲಿಗಾದ್ರೂ. ಅಲ್ಲಿ ಬಟ್ಟೆ ಒಗೆಯೋ ಹೆಂಗಸರು ಲೇ ಆ ಕಡೆ ಹೋಗಲೇ ಅಂತಿದ್ವು. ಮಗಾ ರಾಜಮ್ಮಂಗೆ ರೇಗಸ್ತಾ ಇದ್ದ. ಯಾಕೆ ನನ್ನ ಗಂಡಂಗೆ ಹೇಳ್ ಬೇಕಾ ಅಂತಿದ್ದಾಗೆನೇ ಆ ದಡದಾಗೆ ನಿಂತಿದ್ದ. ಗೌಡಪ್ಪ ಸಣ್ಣ ಐಕ್ಳು ತರಾ ಎತ್ತಿನ ಮೈ ಮ್ಯಾಕೆ ಕೂತು ಕೆರೇಲ್ಲಿ ಓಡಾಡೋನು. ಮಗಂಗೆ ಈಜು ಬರಲ್ಲಾ ಕರೀರಲಾ. ಹೊಗೆ ಹಾಕಸ್ಕಂಡ್ ಬಿಟ್ಟಾನು ಅಂದಾ ಸುಬ್ಬ. ಒಂದು ಎತ್ತು ತೊಡೆಗೆ ತಿವಿದು ಸಾನೇ ಗಾಯ ಮಾಡಿತ್ತು. ತೊಡೆಗೆ ಒಂದು ಕಾಲ್ ಕೆಜಿ ಅರಿಸಿನ ಹಚ್ಚಿದ್ವಿ. ಮಗಾ ಹುಳಕಡ್ಡಿ ಆದೋರು ತರಾ ಚಡ್ಡಿ ಎತ್ಕಂಡು ಬರೋನು. ಎರಡು ಹಸ ಕಳೆದೈತೆ ಅಂತಾ ಎಲ್ಲಾರ ಕೊಟ್ಟಿಗೇನೂ ಸಂಜೆ ಹುಡಕ್ತಾ ಇದ್ದ. ಏ ಥೂ.

ಸರಿ ಸಂಜೆ ಗೌಡಪ್ಪ ಎಲ್ಲಾ ಹಸನ್ನ ಕೊಟ್ಟಿಗೆ ಕಟ್ಟಿ ಎಂದಿನಂತೆ ಸಿದ್ದೇಸನ ಗುಡಿತಾವ ಬಂದ. ನೋಡ್ರಲಾ ಗೋ ಹತ್ಯೆ ನಿಷೇಧ ಅಂತಾ ಸರ್ಕಾರದವರು ಮಾಡವ್ರೆ. ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಅಂದ. ಸರಿ ಗೌಡರೆ ನೀವೆ ನಮ್ಮ ನಾಯಕರು. ಒಂದು ತರಾ ನೀವು ನಮಗೆ ಭಗತ್ ಸಿಂಗ್ ಇದ್ದಂಗೆ ಅಂದಾ ಸುಬ್ಬ. ಯಾಕೆ ಮಗನೇ ನೇಣು ಹಾಕಿಸಕ್ಕಾ ಅಂದ ಗೌಡಪ್ಪ. ಸರಿ ಬೆಳಗ್ಗೆನೇ ಹಳ್ಳಿಯ ಗಡಿಭಾಗದಲ್ಲಿ ನಿಂತ್ವಿ. ಒಂದು ಆಟೋದಾಗೆ ಒಂದು ಎರಡ ಹಸ ಬರ್ತಾ ಇತ್ತು, ಆಟೋ ನಿಲ್ಲಿಸಿ ಮುಖ ಮೂತಿ ನೋಡದೆ ಸರಿಯಾಗಿ ಚಚ್ಚಿದ್ವಿ. ನೋಡಿದ್ರೆ ಅವನು ಸಂತ್ಯಾಗೆ ಹಸ ಖರೀದಿ ಮಾಡ್ಕಂಡು ಅವನ ಹಳ್ಳೀಗೆ ಹೊಂಟಿದ್ದ. ಕಡೆಗೆ ಅರಿಸಿನ ಹಚ್ಚಿ ಕಳಿಸಿಸ್ವಿ. ಮಗಾ ಯಲ್ಲಮ್ಮನ ಜಾತ್ರೇಲಿ ಎಮ್ಮೆ ಕಡಿಯೋರು ತರಾ ಆಗಿದ್ದ. ಮುಂದೆ ಪೋಲೀಸ್ನೋರು ನೀನು ಎಮ್ಮೆ ಕಡಿಯೋನು ಅಂತಾ ಕೇಸು ಹಾಕಿದ್ರಂತೆ,. ಈಗ ನಮ್ಮನ್ನ ನೋಡಿದ್ರೆ ಓಡದೇ ಮಾಡ್ತಾನೆ, ಮತ್ತೆ ಇನ್ನೊಂದು ಆಟೋದಾಗೆ ಇನ್ನೊಂದು ಹಸಾ ಇಟ್ಕಂಡು ಬತ್ತಾ ಇದ್ದ, ಅವನಿಗೂ ನಿಲ್ಲಿಸಿ ದಬು ದುಬು ದಬು ದುಬು ಅಂತಾ ಸಾನೇ ಚಚ್ಚಿದ್ವಿ. ನೋಡಿದ್ರೆ ಅದು ಗಬ್ಬ ಇತ್ತಂತೆ ಅದಕ್ಕೆ ಡೆಲಿವರಿ ಮಾಡ್ಸಕ್ಕೆ ಅಂತಾ ಆಸ್ಪತ್ರಗೆ ಹೋಗಿದ್ದೆ ಅಂದಾ. ಲೇ ನೀವು ಏನ್ರಲಾ ಬಂದೋರುಗೆಲ್ಲಾ ಹಿಂಗೆ ಹೊಡಿತಾ ಇದಿರಾ ಕೇಸು ಆಯ್ತದೆ ಕಲಾ ಅಂದ ಗೌಡಪ್ಪ. ನೀವು ಇರೋಬೇಕಾದ್ರೆ ಯಾಕೆ ಅಂದು ಮತ್ತೆ ನಿಂತ್ವಿ. 1

ಒಂದೇ ಲಾರಿಯಲ್ಲಿ ಒಂದು ಹತ್ತು ಹಸ ಇಟ್ಕಂಡು ಪಕ್ಕದ ಹಳ್ಳಿ ರಾಜ, ಜೊತೆಗೆ ಇಸ್ಮಾಯಿಲ್ ಇದ್ದ. ಅದನ್ನು ನಿಲ್ಲಿಸಿ ಸಾನೇ ಹೊಡೆದ್ವಿ. ಮೂಗು ಬಾಯ್ನಾಗೆ ರಕ್ತ. ಲೇ ಹಸಕ್ಕೆ ಹುಸಾರಿಲ್ಲಾ ಅಂತಾ ಪಕ್ಕದ ಹಳ್ಳಿಗೆ ನಾಟಿ ಔಷಧಿ ಕೊಡಿಸಕ್ಕೆ ಅಂತಾ ಹೋದರೆ ಹಿಂಗೆ ಹೊಡಿತಿರಾ ತಡೀರಿ ನಮ್ಮ ಕಡೆಯವರನ್ನು ಕರೆಸಿ ನಿಮಗೆ ಹೊಡೆಸ್ತೀನಿ ಅಂದಾ. ಮಗಾ ಕಿಸ್ನ ಅವರಿಗೆ ಅರಿಸಿನ ಹಚ್ಚಿದ್ದ. ಲೇ ನಡೀರಲಾ ಮನೆಗೆ. ನಿಮ್ಮನ್ನ ಕರೆದುಕೊಂಡು ಬಂದರೆ ನನಗೆ ನಿಜವಾಗಲೂ ಭಗತ್ ಸಿಂಗ್ ಮಾತ್ತೀರಾ ಅಂದ.

ಸರಿ ಮಾರನೆ ದಿನದಿಂದ ನಮ್ಮ ಕೆಲಸ ಗೋ ಹತ್ಯೆ ತಡೆಯೋದೆಯಾ ಅಂದಾ ಗೌಡಪ್ಪ. ಎಲ್ಲಿ ಹೊರಗೆ ಹಸ ಕಾಣಂಗಿಲ್ಲ. ಅಂಗೇ ತಂದು ಪಂಚಾಯ್ತಿ ದೊಡ್ಡಿಗೆ ಬಿಡ್ತಾ ಇದ್ವಿ. ದೊಡ್ಡಿ ತುಂಬಿ. ಪಂಚಾಯ್ತಿ ಆಫೀಸ್ನಾಗೂ ಎರಡು ಎಮ್ಮೆ ಕಟ್ಟಿದ್ವಿ. ಮಗಾ ಬಿಲ್ ಕಲೆಕ್ಟರ್ ಮೂಗು ಮುಚ್ಕಂಡು ಲೆಕ್ಕ ಬರೀತಾ ಇದ್ದ. ದೊಡ್ಯಾಗೆ ಗೌಡಂದು ಎರಡು ಹಸಾ ಇತ್ತು. ಏನ್ರಲಾ ನನ್ನ ಹಸನ್ನ ಇಲ್ಲೇ ತಂದು ಹಾಕಿದಿರಲಾ ಅಂದ. ಬೀದ್ಯಾಗೆ ಇತ್ತು ಅದಕ್ಕೆ ಅಂದಾ ನಿಂಗ. ಗೌಡಪ್ಪನ ಹೆಂಡರು ಬೆಳಗ್ಗೆ ಒಂದು ಬಕ್ಕಿಟ್ಟು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂತು. ನೋಡಿದ್ರೆ ಒಂದು ಲೋಟದಷ್ಟು ಬಂದಿರಲಿಲ್ಲ. ಏನ್ಲಾ ಹಸನ್ನ ಮೇಯಿಸಿಲ್ಲೇನ್ಲಾ ಅಂತು ಗೌಡಪ್ಪನ ಹೆಂಡರು. ಲೇ ಗಂಡಂಗೆ ಮರ್ವಾದೆ ಕೊಟ್ಟು ಮಾತಾಡೇ. ಯಾರಾದರೂ ಕೇಳಿಸ್ಕಂಡ್ರೆ ದನಕಾಯೋ ಶಂಭು ಅಂದ್ಕತಾರೆ ಅಂದಾ ಗೌಡಪ್ಪ. ಸರಿ.ಸರಿ. ನಾನು ಮೇಯಿಸಿದ್ದೆ ಕಣಮ್ಮಿ, ಅದು ಹಾಲು ಕೊಡೋ ಬದಲು ಒಂದು ಬಕ್ಕಿಟ್ಟು ಸಗಣಿ ಕೊಟ್ಟೈತೆ ಅಂದಾ ಗೌಡಪ್ಪ. ಅದ್ರಾಗೆ ಇವತ್ತು ನಿಂಗೆ ಮುದ್ದೆ ಅಂದು ಹೋತು. ಗಂಜಲ ನೆಂಚಳಕ್ಕೆ ಆಯ್ತದೆ ಅಂದ ಸುಬ್ಬ.

ಪೊಲೀಸ್ ಸ್ಟೇಷನ್ನಾಗೆ ನಾವು ಹೋಗಿ ಹೋಗಿ ಕಂಪ್ಲೇಟ್ ಕೊಡ್ತಾ ಇದ್ವಿ. ಹಸಕ್ಕೆ ಅಂತಾನೇ ಒಂದು ಬ್ರಾಂಚ್ ತೆಗೆದಿದ್ರು. ಕೌ ಸ್ಕ್ವಾಡ್ ಅಂತಾ. ಅದಕ್ಕೆ ಒಬ್ಬ ಇನ್ಸ್ ಪೆಕ್ಟರ್. ಬರೇ ಒಂದು ಗೌಡಪ್ಪ ಮಿಸ್ ಕಾಲ್ ಕಟ್ಟರೆ ಸಾಕು. ಜೀಪ್ನಾಗೆ ಬಂದು ಏನೂ ಸಿಗಲಿಲ್ಲ ಅಂದ್ರೆ ಬುಟ್ಯಾಗೆ ಸಗಣಿ ತುಂಬ್ಕಂಡು ಹೋಗೋನು. ಹೆಂಡರು ಬೆರಣಿ ತಟ್ಟಲಿ. ನೀರು ಕಾಯಿಸಕ್ಕೆ ಆಯ್ತದೆ ಅಂತಾ. ಇವನ ಕಾಟಾ ತಡಿಲಾರದೆ ಪ್ರಾಣಿ ದಯಾ ಸಂಘದೋರು ಒಂದು ಹತ್ತು ಕಂಪ್ಲೇಟ್ ಕೊಟ್ರು.  ಇವಾಗ ಕೇಸಿಗೆ ಅಂತಾ ದಿನಾ ಮಂಡ್ಯಕ್ಕೆ ಓಡಾಡ್ತಾನೆ. ಬೆಳಗ್ಗೆ ಹೋದ್ರೆ ಸಂಜೆತಾವ ಹಳ್ಳಿಗೆ ಬತ್ತಾನೆ.  ಆದ್ರೆ ಇನ್ಸೆಪೆಕ್ಟರ್ ಮಾತ್ರ ಸಗಣಿ ಎತ್ತೋ ಬುಟ್ಟಿ ಮಾತ್ರ ಅಂಗೇ ಜೀಪ್ನಾಗೆ ಮಡಗವನೆ. ನಿಜ ನೋಡಿದ್ರೆ ನಮ್ಮ ಹಳ್ಯಾಗೆ ಕಸಾಯಿ ಖಾನಗೆ ಹಸನ್ನ ಕಳಿಸ್ತಿದ್ದಿದ್ದು ಗೌಡಪ್ಪ ಅಂತಾ ಗೊತ್ತಾದ ಮ್ಯಾಕೆ ಬಂದಾ ನೋಡ್ರಲಾ ಹಸ ಬ್ರೋಕರ್ ಅಂತವ್ರೆ. ಗೌಡಪ್ಪ ಮುಖ ಮುಚ್ಕಂಡು ಓಯ್ತಾನೆ.

ಕುಚೇಲ ವಾಣಿ: ಸಾಮ್ರಾಟರೇ, ಸೈಡು ಬಿಡಿ

15 ಸೆಪ್ಟೆಂ

ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. kuchela

ಉನ್ನತವಾದ ಕಾಲೇಜಿನ ಕಲಾ ವಿಭಾಗದಲ್ಲಿ ಓದಿ ಚಿನ್ನದ ಪದಕವನ್ನು ಎರಡು ಅಂಕಗಳಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿ ನಾನು. ಎರಡು ಅಂಕ ಕಡಿಮೆ ಗಳಿಸಿದ ತಪ್ಪಿಗಾಗಿ ಏನೋ ಎಂಬಂತೆ ಸಾಮ್ರಾಟರ ಬಳಿ ಇಂಟರ್ನ್ ಆಗಿ ಸೇರಿಕೊಂಡೆ. ತೆಹೆಲ್ಕಾ ಡಾಟ್ ಕಾಮ್ ಪ್ರಸಿದ್ಧಿಯಲ್ಲಿದ್ದ ದಿನದಿಂದ ನಗೆ ನಗಾರಿ ಡಾಟ್ ಕಾಮ್ ನಂತಹ ಬಹುದೊಡ್ಡ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದರೆ ನನ್ನ ಭವಿಷ್ಯವು ಉಜ್ವಲವಾಗಿರುವುದು. ನಾನು ಮುಖ ತೋರಿದೆಡೆಯೆಲ್ಲಾ ಕೆಲಸಕ್ಕೆ ಆಹ್ವಾನಗಳು ತೂರಿ ಬರುವವು. ನೀಳ ಜಡೆಯ ಹುಡುಗಿಯರು ನನ್ನ ಶರ್ಟಿನ ಚುಂಗು ಎಳೆಯುತ್ತ ಒಂದು ಜೋಕು ಹೇಳು ಎಂದು ಪೀಡಿಸುವರು. ಆ ಮುದ್ದಾದ ಚಿತ್ರಗಳಿಗೆ ಚುರುಕಾದ ಅಡಿ ಬರಹಗಳನ್ನು ಕೊಡುತ್ತಿದ್ದವನು ನೀನೇನಾ ಎಂದು ಕಂಡವರೆಲ್ಲಾ ಹುಬ್ಬೇರಿಸುವರು ಎಂದೆಲ್ಲಾ ಕನಸು ಕಾಣುತ್ತ ದಿನ ತಳ್ಳುತ್ತಿದ್ದವನಿಗೆ ಸಾಮ್ರಾಟರಿಂದ ಮುಕ್ತಿಯೇ ಇಲ್ಲದಾಗಿ ಹೋಯಿತು.

ನನ್ನ ಬಗ್ಗೆ ಮಾತೆತ್ತಿದರೆ ‘ನಮ್ಮ ಅತ್ಯಾಪ್ತ ಚೇಲ ಕುಚೇಲ’ ಎಂದು ಸಕ್ಕರೆಯ ಮಾತನಾಡುವ ಸಾಮ್ರಾಟರು ಇಷ್ಟು ದಿನಗಳಲ್ಲಿ ನನಗೆ ನೀಡಿದ ಹಿಂಸೆಯನ್ನು ಪಟ್ಟಿ ಮಾಡಲು ಇದು ಯೋಗ್ಯವಾದ ಸ್ಥಳವಲ್ಲ. ಅವರು ಹೇಳಿದ್ದನ್ನೆಲ್ಲ ಮಾಡಿಕೊಂಡು, ಅವರು ಅಟ್ಟಿದಲ್ಲೆಲ್ಲಾ ಓಡಿ ಅಲೆದಾಡಿಕೊಂಡು ಇದ್ದೆ. ನಾನು ಬರೆದ ವರದಿಗಳಿಗೆಲ್ಲಾ ತಮ್ಮ ಹೆಸರೇ ಹಾಕಿಕೊಂಡು ಸಾಮ್ರಾಟರು ಮೆರೆಯುವಾಗ ನನಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಒಂದಲ್ಲ ಒಂದು ದಿನ ನನಗೂ ಕಾಲ ಕೂಡಿ ಬರುತ್ತದೆ. ಆಗ ಜಗತ್ತೇ ನನ್ನ ಬೆರಳ ಸನ್ನೆಯಿಂದ ಕುಣಿಯುತ್ತದೆ ಎಂದುಕೊಂಡಿದ್ದೆ. ಸಾಮ್ರಾಟರ ಮಹಿಮೆಯಿಂದ ಆ ದಿನ ಎಂದಿಗೂ ಬರುವುದಿಲ್ಲ ಎಂದು ಮೆಲ್ಲಗೆ ಅರಿವಾಗುತ್ತಿದೆ. ಸಾಮ್ರಾಟರೊಡನೆ ಕೆಲಸ ಮಾಡಿದೆ ಎಂದು ಹೇಳಿಕೊಂಡದ್ದಕ್ಕೆ ನಾಲ್ಕು ಕಛೇರಿಗಳಲ್ಲಿ ಕೈಲಿ ಹಿಡಿದಿದ್ದ ಫೈಲು ಕಸಿದುಕೊಂಡು ಹೊರದಬ್ಬಿದರು. ಒಬ್ಬ ಯಜಮಾನರಂತೂ ಜೇಬಲ್ಲಿದ್ದ ಐವತ್ತು ರುಪಾಯಿ, ಬಿಎಂಟಿಸಿ ದಿನದ ಪಾಸನ್ನು ಕಿತ್ತುಕೊಂಡು ಹೊರಗಟ್ಟಿದರು. ಸಾಮ್ರಾಟರ ಹೆಸರು ಹೇಳುತ್ತಿದ್ದಂತೆಯೇ ‘ನೋ ವೇಕೆನ್ಸಿ’ ಎಂದವರು ಅನೇಕರು. ಹೀಗೆ ನಾನು ಎಲ್ಲೆಲ್ಲಿ ಹೋದರೂ ಸಾಮ್ರಾಟರ ಹೆಸರಿನ ಕರಾಳ ನೆರಳು ಅದಾಗಲೇ ಅಲ್ಲಿ ಉಪಸ್ಥಿತವಿರುತ್ತಿತ್ತು.

ಹಳೆ ಗಂಡನ ಪಾದವೇ ಗತಿಯೆಂಬ ಗರತಿಯ ಅನುಭವ ವಾಕ್ಯವನ್ನು ರಕ್ತಗತವಾಗಿಸಿಕೊಂಡು ನಾನು ವಾಪಸ್ಸು ಸಾಮ್ರಾಟರ ಬಳಿ ಬಂದಿರುವೆ. ಆದರೆ ಈ ಬಾರಿ ಸಾಮ್ರಾಟರ ಚೇಲನಾಗಿಯಷ್ಟೇ ಉಳಿಯಲು ಬಂದಿಲ್ಲ. ಸಾಮ್ರಾಟರ ಸಾಮ್ರಾಜ್ಯಕ್ಕೆ ಅನಭಿಷಿಕ್ತ ಯುವರಾಜನಾಗುವ ಹುಮ್ಮಸ್ಸಿನಿಂದ ಬಂದಿದ್ದೇನೆ.

ಇಷ್ಟು ದಿನ ನಗಾರಿಯು ಬಾಲ್ಯಾವಸ್ಥೆಯಲ್ಲಿತ್ತು ಎನ್ನಬಹುದು. ಬಾಲಿಶವಾದ ಹಾಸ್ಯವೇ ಇದರ ಜೀವಾಳವಾಗಿತ್ತು. ಆಗಾಗ ಸಾಮ್ರಾಟರು ತಮ್ಮತನವನ್ನೂ ಮೀರಿದ ಅದ್ಭುತ ಹಾಸ್ಯವನ್ನು ಹುಟ್ಟಿಸುತ್ತಿದ್ದರು ಎನ್ನುವುದನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲವೂ infantile ಆದ ನಗೆ ಬರಹಗಳೇ ಆಗಿರುತ್ತಿದ್ದವು. ಇನ್ನು ನನ್ನ ಸುಪರ್ದಿಗೆ ಬಂದಿರುವ ನಗಾರಿಗೆ ಯೌವನದ ಹೊಳಪನ್ನು ನೀಡಲು ನಾನು ಯತ್ನಿಸುವೆ. ಬಾಲಿಶತನವನ್ನೂ ಹೊಂದಿದ್ದು ಅದನ್ನು ಮೀರಲು ಯತ್ನಿಸುವ ಯುವಕನ ಹುಮ್ಮಸ್ಸನ್ನು ನಗಾರಿಯ ಬರಹಗಳಲ್ಲಿ ತುಂಬುವತ್ತ ಪ್ರಾಮಾಣಿಕ ಪರಿಶ್ರಮ ವಿನಿಯೋಗಿಸುವೆ. ಸಾಮ್ರಾಟರು ನಗಾರಿಯ ದೊರೆಗಳಾಗಿ ಮುಂದುವರೆಯುತ್ತಾರಾದರೂ ನಗಾರಿಯ ಆಗು ಹೋಗುಗಳಲ್ಲಿ ನಾನೇ ಸಕ್ರಿಯವಾಗಿ ಪಾಲ್ಗೊಳ್ಳುವೆ. ಇನ್ನು ಮೇಲೆ ಸಾಮ್ರಾಟರು ನನ್ನನ್ನು ಎಲ್ಲಿಯೂ ಅಟ್ಟುವುದಿಲ್ಲ ಎನ್ನುವ ವಿಶ್ವಾಸ ನನ್ನದು.

ಕಾಲವು ಬಹು ವೇಗವಾಗಿ ಬದಲಾಯಿಸುತ್ತಿದೆ. ವ್ಯಂಗ್ಯ ಎಂದು ನಾವು ಪರಿಗಣಿಸಿದ್ದು ವಾಸ್ತವವೇ ಆಗಿ ಸ್ಥಾಪಿತವಾಗುತ್ತಿದೆ. ವಾಸ್ತವವೇ ದೊಡ್ಡ ವ್ಯಂಗ್ಯವಾಗಿ ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಕೈಲಿ ಲಟ್ಟಣಿಗೆ ಹಿಡಿದು, ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಎದೆ ಸೆಟೆಸಿ ನಿಂತ ಹೆಂಡತಿ, ಹಣೆಯ ಮೇಲೆ ಬುಗುಟು ಎದ್ದು, ಸತ್ತೆನೋ ಕೆಟ್ಟೆನೋ ಎಂದು ಓಡುವ ಪತಿ- ಎನ್ನುವುದು ವ್ಯಂಗ್ಯವಾಗಿ ಉಳಿದೇ ಇಲ್ಲ ಎನ್ನುವುದನ್ನು ಭೈರಪ್ಪರಂತಹ ಹೆಸರಾಂತ ಕಾದಂಬರಿಕಾರರು ನಿರೂಪಿಸುವ ವಾಸ್ತವವಾಗಿ ಹೋಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರದ ಆರೋಪ ಮಾಡಿ, ತಮ್ಮ ಬಳಿ ಇರುವ ಸಾಕ್ಷ್ಯಗಳ ಸತ್ಯಾಸತ್ಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ, ಕುಮಾರಸ್ವಾಮಿಗಳು ಕರ್ನಾಟಕದ ರಾಜಕೀಯದ ವಾಸ್ತವವನ್ನೇ ದೊಡ್ಡ ವ್ಯಂಗ್ಯವಾಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆಯಲ್ಲಿ ಸೇರಿಕೊಂಡ ತಿಗಣೆಯ ಬಗ್ಗೆಯೇ ವಿನೋದ ಮಾಡುತ್ತ ಕೂರುವ ಸಾಮ್ರಾಟರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ.

ಸಾಮ್ರಾಟರ ವಿನೋದದಲ್ಲಿ ವಿವೇಕವೇ ಹೆಚ್ಚು ಇರುತ್ತದೆ. ಅವರ ವಿನೋದಕ್ಕೆ ನನ್ನ ತಕರಾರುಗಳು ಎರಡು ರೀತಿಯವು. ಓದುಗರು ತಮ್ಮಿಂದ ವಿವೇಕ ಹೇಳಿಸಿಕೊಳ್ಳುವಂಥವರು ಎಂದು ಭಾವಿಸುವುದು ಸಾಮ್ರಾಟರ ಅಹಂಕಾರವನ್ನು ತೋರುತ್ತದೆ ಎನ್ನುವುದು ಮೊದಲ ತಕರಾರು. ಎರಡನೆಯದು, ವಿವೇಕವನ್ನು ವಿನೋದವಾಗಿ ಹೇಳಲು ಹೊರಟರೆ ಓದಿದವರೂ ಸಹ ವಿನೋದದಿಂದಲೇ ಅದನ್ನು ಮರೆತು ಮುಂದೆ ಹೋಗುತ್ತಾರೆ.

ನಗೆ ನಗಾರಿಯ ವಿನೋದವು ಹರಿತವಾಗಿಲ್ಲ. ವಿನೋದಕ್ಕೆ ಈಡು ಮಾಡಿದ ವ್ಯಕ್ತಿಯ ನಿಜ ನಾಮಧೇಯವನ್ನು ಬಳಸದಿರುವುದು ಸಾಮ್ರಾಟರ ಪುಕ್ಕಲುತನವನ್ನು ತೋರುತ್ತದೆ. ನಿಜ ಸನ್ನಿವೇಶಗಳು, ನಿಜ ವ್ಯಕ್ತಿಗಳು, ನಿಜವಾದ ಘಟನೆಗಳೇ ವಿನೋದಕ್ಕೆ, ವ್ಯಂಗ್ಯಕ್ಕೆ ಈಡಾಗಬೇಕು. ಆಗಲೇ ವ್ಯಂಗ್ಯದ ನಿಜವಾದ ಸತ್ವ ಹೊರತರಲಿಕ್ಕೆ ಸಾಧ್ಯ. ದೇಜಗೌ ತಮ್ಮನ್ನು ತಾವು ದಶರಥ, ಮೋತಿಲಾಲ ಎಂದು ಕರೆದುಕೊಳ್ಳುವುದು, ರಾಮುಲು ತಾನು ಯಾವುದೇ ರೀತಿಯಿಂದಲೂ ಚೆಂದ ಕಾಣಿಸಬಾರದೆಂದು ತಲೆ ಬೋಳಿಸಿಕೊಳ್ಳುವುದು, ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಹಲುಬುವುದು, ರವಿ ಬೆಳಗೆರೆ ತನ್ನ ಕೈಲಿನ್ನು ಆಗಲ್ಲ ಎಂದು ಬರೆದುಕೊಳ್ಳುವುದು ಎಲ್ಲವೂ ನಗಾರಿಯ ಮೊನಚಾದ ಹಾಸ್ಯಕ್ಕೆ ಈಡಾಗಬೇಕು. ಇದು ನನ್ನ ವಿಶನ್.

ಸಾಮ್ರಾಟರಷ್ಟು ನಿರರ್ಗಳವಾಗಿ ನನಗೆ ಬರೆಯಲು ಸಾಧ್ಯವಾಗದಿರಬಹುದು. ಅವರಷ್ಟು ಬುದ್ಧಿವಂತಿಕೆಯಿಂದ ಪ್ರತಿಕ್ರಿಯೆ ನೀಡಲು ನನಗೆ ಬಾರದಿರಬಹುದು. ಆದರೆ ಬೆಳೆಯುವ ಆಕಾಂಕ್ಷೆಯಿರುವ ನಾನು ನಗಾರಿಯಲ್ಲಿ ಅತ್ಯುತ್ತಮವಾದದ್ದೇ ಪ್ರಕಟವಾಗುವಂತೆ ನೋಡಿಕೊಳ್ಳುವೆನು.

ಸಾಮ್ರಾಟರೆ, ಸೈಡು ಬಿಡಿ!

ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರೆ ಹೆಂಗ್ರಿ?

8 ಮಾರ್ಚ್

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

ನಾಸ್ತಿಕ ಬಾಯ್ ಫ್ರೆಂಡ್

ತನ್ನ ಬಾಯ್ ಫ್ರೆಂಡ್ನನ್ನು ಕಾಣಲು ಹೋಗಿದ್ದ ಯುವತಿ ಸಪ್ಪೆ ಮುಖ ಹೊತ್ತು ಮನೆಗೆ ಹಿಂದಿರುಗಿದ್ದಳು.
ಅವರಮ್ಮನಿಗೆ ಹೇಳಿದಳು, “ರಂಜಿತ್ ನನಗೆ ಪ್ರೊಪೋಸ್ ಮಾಡಿದ.”
“ಅದಕ್ಕ್ಯಾಕೆ ನೀನು ಬೇಜಾರಾಗಿದ್ದೀಯಾ?”
“ಯಾಕಂದ್ರೆ ಅವನು ನಾಸ್ತಿಕನಂತೆ. ನರಕ ಇದೆ ಎನ್ನುವುದಕ್ಕೆ ಅವನಿಗೆ ನಂಬಿಕೆಯಿಲ್ಲವಂತೆ.”
ತಾಯಿ ಹೇಳಿದಳು, “ಯೋಚಿಸಬೇಡ ಬೇಬಿ, ಅವನನ್ನ ಮದುವೆಯಾಗು ಆಮೇಲೆ ತನ್ನ ನಂಬಿಕೆ ಸುಳ್ಳು ಎಂದು ಅವನಿಗೇ ಅರಿವಾಗುತ್ತೆ.”


ವಾರದ ವಿವೇಕ 35

1 ಜನ

………………………………………….

ಒಬ್ಬರು ನೆಟ್ಟಗೆ ಮಾಡಬಹುದಾದ

ಕೆಲಸವನ್ನು ನಾಲ್ಕೈದು

ಮಂದಿ ಸೇರಿ ಹಾಳು

ಮಾಡುವ ಪ್ರಕ್ರಿಯೆಗೆ

ಟೀಮ್ ವರ್ಕ್ ಎನ್ನುತ್ತಾರೆ.

………………………………………….

ನಗೆ ಚಿತ್ರ

1 ಜೂನ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

 

ಈ ಸಂಚಿಕೆಯ ಒಂದು ಸ್ಯಾಂಪಲ್:

b4

 ಸೈಜ್ ಝೀರೋನಾ? ಹಾಗಂದ್ರೆ?

ಚರ್ಚೆ: ನಗುವಿನ ಬಗೆ

12 ಫೆಬ್ರ

ನಗುವಿನಲ್ಲಿರುವ ಬಗೆಗಳೆಷ್ಟು!

ಮುದ್ದು ಕಂದ ತುಟಿ ಅರಳಿಸಿ ನಕ್ಕ ನಗು, ಪುಂಡ ಪೋರನೊಬ್ಬ ತಪ್ಪು ಮಾಡಿ ಕ್ಷಮೆ ಕೋರುವಂತೆ ನಿಂತು ನಕ್ಕ ನಗು, ಬೊಚ್ಚ ಬಾಯಿಯ ಮುದುಕ ಅಪಾನವಾಯುವಿಗೆ ಮುಕ್ತಿ ನೀಡಿ ಮುಖದಲ್ಲಿ ಅರಳಿಸಿದ ನಗು, ಧ್ಯಾನದಲ್ಲಿ ಕುಳಿತವನ ಮುಖದಲ್ಲಿನ ಮಂದಸ್ಮಿತದ ನಗು, ಜೋಕು ಕೇಳಿ ತಡೆಯಲಾಗದು ಪಕ್ಕೆಲುಬು ಹಿಡಿದುಕೊಂಡು ಉರುಳಾಡಿ ನಕ್ಕ ನಗು, ಸಮಸ್ಯೆಗಳೆಲ್ಲಾ ಪರಿಹಾರವಾದಾಗ ನಿಟ್ಟುಸಿರಿನ ಸಂಗಡ ಹೊರಬಂದ ನಗು, ಸವಾಲನ್ನು ಕಂಡು ಸಿನಿಕತೆಯಿಂದ ಹುಟ್ಟಿದ ನಗು, ದೊಡ್ಡ ವರ ಮೂರ್ಖತನವನ್ನು ಕಂಡು ಹುಟ್ಟಿದ ನಗು, ಚಿಕ್ಕವರ ದೊಡ್ಡತನ ಕಂಡು ಹುಟ್ಟಿದ ನಗು, ಇತರರನ್ನು ಲೇವಡಿ ಮಾಡಿ ನಕ್ಕ ನಗು, ಕುಂಟ, ಕುರುಡನ ಅಸಹಾಯಕತೆ ಕಂಡು ನಕ್ಕ ನಗು, ಬಾಳೆ ಹಣ್ಣಿನ ಸಿಪ್ಪೆ ಹುಟ್ಟಿಸಿದ ನಗು, ಅಟ್ಟ ಹಾಸದ ನಗು, ಅಹಂಕಾರದ ಕೇಕೆಯ ನಗು, ವಿಕಾರವಾದ ನಗು!laugh

ಮನುಷ್ಯನಿಗೆ ನಗುವುದಕ್ಕೆ ಅದೆಷ್ಟು ಕಾರಣ ಸಿಕ್ಕುತ್ತವೆ! ಯಾರನ್ನೋ ಲೇವಡಿ ಮಾಡಿ, ಯಾರದೋ ಅಸಹಾಯಕತೆಯನ್ನು ಆಡಿಕೊಂಡು ನಮ್ಮನ್ನು ನಾವು ಸಂಕುಚಿತಗೊಳಿಸಿಕೊಂಡು ನಗುವ ಅಪಹಾಸ್ಯದ ನಗುವಿಗೂ, ನಮ್ಮೊಳಗನ್ನು ವ್ಯಾಪಿಸಿಕೊಂಡು ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸಿ, ಭಾವನೆಗಳನ್ನು ತಣಿಸುವ ವಿಶಾಲವಾದ ನಗುವಿಗೂ ಅದೆಷ್ಟು ವ್ಯತ್ಯಾಸವಿದೆಯಲ್ಲವೇ?

ನಮ್ಮ ಪ್ರೇಮ, ನಮ್ಮ ಗೆಳೆತನ, ನಮ್ಮ ಮಾತೃ ಭಕ್ತಿ, ನಮ್ಮ ಶಿಸ್ತು, ನಮ್ಮ ಸ್ವಚ್ಛತೆ, ನಮ್ಮ ದೇಶ ಪ್ರೇಮಗಳ ಹಾಗೆಯೇ ಹಾಸ್ಯ ಕೂಡ ವಿಶಿಷ್ಟವಾದದ್ದು. ನಾವು ನಮ್ಮ ಪ್ರೇಮಕ್ಕೆ ಮೌಲ್ಯ ಸೇರಿಸುತ್ತಾ ಹೋದ ಹಾಗೆ, ನಮ್ಮ ಪ್ರೇಮ ನಮ್ಮನ್ನು ಬೆಳೆಸುತ್ತಾ ಹೋದ ಹಾಗೆ ನಮ್ಮ ಹಾಸ್ಯವೂ, ಹಾಸ್ಯ ಪ್ರವೃತ್ತಿಯೂ ಸಹ. ನಾವದನ್ನು ಬೆಳೆಸುತ್ತೇವೆ, ಅದು ನಮ್ಮನ್ನು ಬೆಳೆಸುತ್ತದೆ.

ಏನಂತೀರಿ?

ಚರ್ಚೆ: ಹಾಸ್ಯ v/s ಗಾಂಭೀರ್ಯ

23 ಜನ

ಬರವಣಿಗೆಯಲ್ಲಿ ಹಾಸ್ಯಮಯವಾದ ಶೈಲಿ, ಸಿನೆಮಾಗಳಲ್ಲಿ ವಿಡಂಬನೆಯ ನಿರೂಪಣೆ ಹೇಳಬೇಕಾದ ವಿಷಯದ ಗಾಂಭೀರ್ಯವನ್ನು ಕೆಡಿಸುತ್ತವೆ ಆ ಮೂಲಕ ಅವುಗಳು ಬೀರಬೇಕಾದ ಪರಿಣಾಮ ಬೀರುವಲ್ಲಿ ವಿಫಲವಾಗುತ್ತವೆ ಎಂಬುದು ಹಲವರ ಆರೋಪ. ಗಂಭೀರವಾದ ವಿಚಾರವನ್ನು ಅಷ್ಟೇ ಒಣಗಾಂಭೀರ್ಯದಲ್ಲಿ ಮಂಡಿಸಿದಾಗಲೇ ಅದು ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಹಾಸ್ಯ ಓದುಗರ ಇಲ್ಲವೇ ನೋಡುಗರ ಗಮನವನ್ನು ವಿಷಯದಿಂದ ಪಲ್ಲಟಗೊಳ್ಳುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ಆದರೆ ತಮ್ಮ ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅವರಿಗೇ ವಿಶಿಷ್ಟವಾದ ಹಾಸ್ಯಾತ್ಮಕವಾದ ಶೈಲಿಯನ್ನು ಬೆಳೆಸಿ ಹೆಸರಾದ ಮಲಯಾಳಿ ಲೇಖಕ ವೈಕಂ ಮಹಮದ್ ಬಶೀರ್ ಅಭಿಪ್ರಾಯ ಬೇರೆ ತೆರನಾದದ್ದು:

‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿ ಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿ ಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳ ಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’ ಎಂದರು.

ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ಎಂದೆ. ‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.

‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಂಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’

ನಿಮಗೇನನ್ನಿಸುತ್ತೆ? ವಿಷಯದ ನಿರೂಪಣೆಯಲ್ಲಿ ಹದವಾದ ಹಾಸ್ಯ ಬೆರೆತರೆ, ಸಹಜವಾದ ವಿಡಂಬನೆ ಕಲೆತರೆ ಅದು ಬೀರುವ ಪರಿಣಾಮ ಗಾಢವಾಗುತ್ತದೆಯೇ? ಯಾವುದಾದಾರೂ ಪುಸ್ತಕವನ್ನು ಓದುವಾಗ, ಸಿನೆಮಾ ನೋಡುವಾಗ ನಿಮಗೆ ಈ ಅನುಭವವಾಗಿದೆಯೇ?

ಚಿತ್ರದ ಚೌಕಟ್ಟು ದಾಟುವ ನಗೆ

17 ನವೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

t4

ನಂಗೊಂದು ಗಂಡು ನೋಡ್ತೀರಾ

ತಮಾಶೆ ಜಾಸ್ತಿಯಾಯ್ತು!

10 ನವೆಂ

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

ಮಗು ಯಾರದು?


ಗಾಂಪರೆಲ್ಲ ಸಭೆ ಸೇರಿದರು. ಎಲ್ಲರೂ ತಮ್ಮನ್ನು ಗಾಂಪರು ಎಂದು ಕರೆಯುವುದನ್ನು ಕೇಳಿ ಅವರ ಮನಸ್ಸು ನೊಂದಿತ್ತು. ಆದ್ದರಿಂದ ತಮ್ಮಲ್ಲೇ ಒಬ್ಬನನ್ನು ಆರಿಸಿ ಈ ವಿಷಯವಾಗಿ ಸಂಶೋಧನೆ ಮಾಡಿಸಬೇಕು ಎಂದುಕೊಂಡರು. ಆ ಠರಾವಿನ ಪ್ರಕಾರ ಒಬ್ಬ ಗಾಂಪ ಹೋಗಿ ಅಮೇರಿಕಾದಲ್ಲಿ ಒಬ್ಬ ಪ್ರಾಧ್ಯಾಪಕರ ಮನೆಯಲ್ಲಿ ತಳವೂರಿದ. ಪ್ರಾಧ್ಯಾಪಕರು ಇವನ ಮೇಲೆ ಸಂಶೋಧನೆ ಪ್ರಾರಂಭಿಸಿದರು. ಸರಳವಾದ ಪ್ರಶ್ನೆಗಳನ್ನು ಹಾಕುತ್ತಾ ಅವರು ಕೇಳಿದರು.
ಪ್ರಾ: ನೋಡಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಜನ. ನಾನು, ನನ್ನ ಹೆಂಡತಿ, ಒಂದು ಮಗು. ಈ ಮಗು ಯಾರದ್ದೆಂದು ಹೇಳುತ್ತೀರಾ?
ಗಾಂಪ ತಲೆ ಕೆರೆದುಕೊಂಡ. ಹುಲುಸಾಗಿ ಬೆಳೆದಿದ್ದ ಗಡ್ಡ ಕೆರೆದುಕೊಂಡ. ಏನು ಮಾಡಿದರೂ ಉತ್ತರ ಹೊಳೆಯಲಿಲ್ಲ. “ಸೋತೆ ಸ್ವಾಮಿ, ಉತ್ತರ ಗೊತ್ತಾಗಲಿಲ್ಲ” ಎಂದ.
ಪ್ರಾ: ಅದರಲ್ಲೇನಿದೆ ಕಷ್ಟ? ಮಗು ನನ್ನದು.
ಗಾಂಪನಿಗೆ ತುಂಬಾ ಸಂತೋಷವಾಯಿತು. ಮಾರನೆಯ ದಿನವೇ ತನ್ನ ದೇಶಕ್ಕೆ ಹಿಂದಿರುಗಿ ಬಂದ.  ತಕ್ಷಣವೇ ಗಾಂಪರ ಸಭೆ ಸೇರಿಸಿದ. ಹೇಳಿದ, “ಮಿತ್ರರೇ, ಜನ ನಮ್ಮನ್ನು ಏಕೆ ಗಾಂಪರು ಎನ್ನುತ್ತಾರೆ ಎಂಬುದನ್ನು ತಿಳಿದುಕೊಂಡು ಬಿಟ್ಟಿದ್ದೇನೆ. ಈಗ ನಾನೊಂದು ಸರಳವಾದ ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳುತ್ತೀರಾ?”
“ಆಗಲಿ..” ಎಂದರು ಸಭಿಕರು.
“ಸರಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಮಂದಿ. ನಾನು,ನನ್ನ ಹೆಂಡತಿ, ಒಂದು ಮಗು. ಎಲ್ಲೀ ಹೇಳಿ ನೋಡೋಣ, ಮಗು ಯಾರದ್ದು?”
ಗಾಂಪರೆಲ್ಲ ತಲೆ ಕೆರೆದುಕೊಂಡರು. ಕೆಲವರು ಗಡ್ಡವನ್ನೂ ಕೆರೆದುಕೊಂಡರು. ಹಲ್ಲು ಕಚ್ಚಿದರು. ಏನೇನು ಮಾಡಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಉತ್ತರ ಹೊಳೆಯಲಿಲ್ಲ. ತಲೆಯಾಡಿಸಿದರು.
ಅಮೇರಿಕಾದಿಂದ ಹಿಂದಿರುಗಿದ್ದ ಗಾಂಪ ಮಂದ ಹಾಸ ಬೀರುತ್ತಾ ಹೇಳಿದ: “ಅದಕ್ಕೇ ನಿಮ್ಮನ್ನು ಜನ ಗಾಂಪರು ಎನ್ನುವುದು.ಇಷ್ಟೂ ಗೊತ್ತಾಗಲಿಲ್ಲವೇ? ಅಮೇರಿಕಾದಲ್ಲಿದ್ದಾರಲ್ಲಾ ಪ್ರೊಫೆಸರು, ಅವರದು ಮಗು.”

ಚರ್ಚೆ: ನಗುವುದು ಅಷ್ಟು ಕಷ್ಟವೇ!

3 ನವೆಂ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?

ನಮ್ಮ ಬದುಕಿನ ಗತಿಯನ್ನ ಹೇಗೆ ಮಾರ್ಪಾಟುಗೊಳಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಿದರೆ ನಮಗೆ ನಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಅರಿವಾಗುತ್ತದೆ. ಮೂರು ನಾಲ್ಕು ಮಂದಿ ಕಲೆಯಬೇಕು, ಒಬ್ಬರ ಕಾಲನ್ನೊಬ್ಬರು ಎಳೆಯುವ ಕೆಲಸದಲ್ಲಿ ತೊಡಗಿಕೊಳ್ಳಬೇಕು, ಆಗ ಯಾವ ಪ್ರಯಾಸವೂ ಇಲ್ಲದೆಯೇ ಹಾಸ್ಯವು ಹುಟ್ಟಿಕೊಳ್ಳುತ್ತದೆ. ನಕ್ಕು ಹಗುರಾಗುತ್ತೇವೆ. ಸರಿ, ಆದರೆ ನಾಲ್ಕು ಮಂದಿ ಕಲೆಯುವುದೇ ನಮಗೆ ಬಹುದೊಡ್ಡ ಸಾಧನೆಯಾಗಿ ಕಾಣುತ್ತಿದೆಯಲ್ಲ!

ಅದನ್ನು ಪಕ್ಕಕ್ಕಿಡಿ, ನಗುವುದು ನಿಜಕ್ಕೂ ಎಷ್ಟು ಕಷ್ಟ ಎಂಬುದಕ್ಕೆ ಒಂದು ಪ್ರಸಂಗವನ್ನು ಗಮನಿಸಿ. ನೀವು ಟೀಚರ್ ಎಂದುಕೊಳ್ಳಿ ತರಗತಿಯನ್ನು ಪ್ರವೇಶಿಸಿದಾಕ್ಷಣ ಕಪ್ಪು ಹಲಗೆಯ ಮೇಲೆ ಅಕರಾಳ ರೂಪದ ಕಾರ್ಟೂನ್ ಬರೆದು ಅದರ ಕೆಳಗೆ ಯಾರೋ ಕಿಡಿಗೇಡಿ ಹುಡುಗರು ನಿಮ್ಮ ಹೆಸರು ಬರೆದಿರುತ್ತಾರೆ, ಬೈಕಿನಲ್ಲಿ ರಭಸವಾಗಿ ನುಗ್ಗುತ್ತಿರುತ್ತೀರಿ ಸ್ವಲ್ಪ ಮಂದ ಬುದ್ಧಿಯವ ಹುಡುಗ ನಿಮ್ಮ ಬೈಕಿಗೆ ಅಡ್ಡ ಬಂದು ಬಿಡುತ್ತಾನೆ- ಹೇಳಿ ಈಗ ನಿಮ್ಮ ಕೈಲಿ ನಕ್ಕು ಬಿಡಲು ಸಾಧ್ಯವೇ? ಕ್ರಿಕೆಟಿನಲ್ಲಿ ಭಾರತ ಫೈನಲ್ ಓವರಿನಲ್ಲಿ ಎರಡು ವಿಕೆಟ್ ಕಳೆದುಕೊಂಡು  ಸೋತುಬಿಡುತ್ತದೆ, ಮಗ ಪಿಯುಸಿಯಲ್ಲಿ ಫೇಲಾಗಿ ಮನೆಗೆ ಬರುತ್ತಾನೆ, ಪಕ್ಕದ ಮನೆಯಾತ ವಿನಾಕಾರಣದ ಕ್ಯಾತೆ ತೆಗೆದು ನಿಂತಿರುತ್ತಾನೆ- ಪ್ರಮಾಣ ಮಾಡಿ ಹೇಳಿ ನಿಮಗೆ ಈ ಸಂದರ್ಭಗಳಲ್ಲಿ ನಕ್ಕು ಹಗುರಾಗುವುದಕ್ಕೆ ಸಾಧ್ಯವಾ?ಅದಕ್ಕೇ ಮೊದಲಲ್ಲೇ ಕೇಳಿದ್ದು, ನಗುವುದು ಅಷ್ಟು ಸುಲಭವೇ ಎಂದು!

ಘನವಾದ ವ್ಯಕ್ತಿತ್ವವಿರುವವರಿಗೆ ಮಾತ್ರ ಎಂಥಾ ಸಂದರ್ಭದಲ್ಲಾದರೂ ನಗುವಿನ ಅಲೆಯನ್ನು ಮೈಮೇಲೆಳೆದುಕೊಂಡು ಅದರ ಮೇಲೆ ಅನಾಯಾಸವಾಗಿ ತೇಲಿ ಮುಂದೆ ಸಾಗಲು ಸಾಧ್ಯ. ಹಾಸ್ಯ ಹುಟ್ಟುವುದು ಅಂಥ ಘನವಾದ ವ್ಯಕ್ತಿತ್ವದ ಸಂಗದಲ್ಲಿ ಮಾತ್ರ. ವಿರಾಮದಲ್ಲಿನ ಪೋಲಿ ಹಾಸ್ಯ, ಅಪಹಾಸ್ಯಗಳೂ ಇವೆ. ಆದರೆ ಹಾಸ್ಯ ಮನೋವೃತ್ತಿಯ ನಿಜವಾದ ಸತ್ವ ಪರೀಕ್ಷೆ ನಡೆಯುವುದು ಸಂಕಟದ, ಆಘಾತದ ಸಂದರ್ಭಗಳಲ್ಲೇ. ಅಂಥ ಪ್ರಸಂಗಗಳಿಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಯಾವ ಕೊರತೆಯೂ ಇರುವುದಿಲ್ಲ!