ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ
ನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾ ಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಇದು ಈ ಅಂಕಣಕಾರರ ಐದನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.
ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಗಳಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ ಒಳಗಿನ ಅಂಡರ್ ವೇರಿನ ಪದರಗಳಲ್ಲಿಟ್ಟುಕೊಂಡು ಇದಕ್ಕಿಂತ ಸೇಫ್ ಜಾಗವನ್ನು ಕೊಡುವ ಗ್ಯಾರಂಟಿಯನ್ನು ಆ ಸ್ವಿಸ್ ಬ್ಯಾಂಕಿನವರೂ ಕೊಡಲಾರರು ಎಂದುಕೊಳ್ಳುತ್ತಿದ್ದೆವು!
ಹೆಸರಿಗೆ ನಮ್ಮ ದು ಒಂದೇ ಸೂರು. ಆದರೆ ಅದರಡಿ ಬದುಕುವ ನಮ್ಮಲ್ಲಿ ಚೂರೇ ಚೂರು ರುಚಿ ನೋಡಲಾದರೂ ಸಾಕೆನ್ನುವಷ್ಟೂ ಸಹ ಸಾಮ್ಯತೆಗಳಿರಲಿಲ್ಲ. ಒಬ್ಬೊಬ್ಬನದು ಒಂದೊಂದು ದಿಕ್ಕು. ಒಬ್ಬೊಬ್ಬನದು ಒಂದೊಂದು ಜಗತ್ತು, ಇತರರಿಗೆ ಅದು ಆಪತ್ತಾದರೂ ಅವನಿಗೆ ಅದೇ ಮಹತ್ತು. ಇಂತಹ ಜೀವನ ಶೈಲಿಯನ್ನು ಅಖಂಡ ಐದು ವರ್ಷಗಳ ಕಾಲ ಜೀವಿಸಿರುವ ನನಗೆ ಇದನ್ನು ಕಾಣದ ಜಗತ್ತಿನ ಜನರು ಮಾಡಿರುವ ಅನೇಕ ನುಡಿಗಟ್ಟುಗಳು ಗಮ್ಮತ್ತಿನವಾಗಿ ಕಾಣಿಸುತ್ತವೆ. ‘ಎರಡು ದೇಹ ಒಂದೇ ಜೀವ’ ಅಂತ ಪ್ರೇಮಿಗಳನ್ನು ಕರೆಯುತ್ತಾರೆ. ಈ ನುಡಿಗಟ್ಟನ್ನೇ ಸ್ವಲ್ಪ ತಿರುಚಿ, ಅಲ್ಲಿ ಇಲ್ಲಿ ಕೆರೆದು, ಕೊಂಚ ಹರಿದು ನಮ್ಮ ಆ ದಿನಗಳ ಬದುಕಿಗೆ ಅನ್ವಯಿಸುವುದಾದರೆ, ‘ ಒಂದೇ ದೇಹ, ನಾಲ್ಕು ಜೀವ, ನಾಲ್ಕು ದಿಕ್ಕು’ ಎನ್ನಬಹುದು. ಒಬ್ಬ ದಢೂತಿ ಮಾರ್ವಾಡಿಯನ್ನು ಮಣ್ಣು ಮಾಡಲು ಬೇಕಾದಷ್ಟು ಜಾಗದಲ್ಲಿ ಎಬ್ಬಿಸಿದ ಒಂದು ಬಾಗಿಲಿನ, ಅರ್ಧ ಕಿಟಕಿಯ ರೂಮಿನಲ್ಲಿ ನಾವು ನಾಲ್ಕು ಮಂದಿ ಇರುತ್ತಿದ್ದೆವು. ರಾತ್ರಿ ಎಲ್ಲರೂ ಮಲಗಿದಾಗ ನಮ್ಮನ್ನು ಯಾರಾದರೂ ದೂರದಿಂದ ನೋಡಿದರೇ ಅಲ್ಲಿರುವುದು ಒಂದೇ ದೇಹವೆನ್ನಬೇಕು ಹಾಗೆ ಇಬ್ಬರನ್ನೊಬ್ಬರು ಒತ್ತಿಕೊಂಡು, ಒಬ್ಬನ ಕಾಲೊಳಗೆ ಮತ್ತೊಬ್ಬ ಹೊಸೆದುಕೊಂಡು ಬಿದ್ದುಕೊಂಡಿರುತ್ತಿದ್ದೆವು. ರಾತ್ರಿಗಳಲ್ಲಿ ಹೀಗೆ ನಾಲ್ಕು ದೇಹಗಳು ಒಂದೇ ಎನ್ನುವಂತೆ ಬೆಸೆದು, ಹೊಸೆದು, ಮಸೆದುಕೊಳ್ಳುತ್ತಿದ್ದರೂ ಒಮ್ಮೆ ಬೆಳಗಿನ ಅಲಾರಾಂ ಕೂಗಿ (ಈ ನಗರಿಯಲ್ಲಿ ಕೂಗಲಿಕ್ಕೆ ಕೋಳಿಗಳಾದರೂ ಎಲ್ಲಿವೆ?)ದರೆ ಸಾಕು ಒಂದೊಂದು ಜೀವ ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿರುವುದು, ಒಬ್ಬೊಬ್ಬರೂ ಒಂದೊಂದು ಧೃವಗಳಾಗಿರುವುದು ಗೋಚರವಾಗುತ್ತದೆ.
ಇದೊಂದು ಕೆಟ್ಟ ಅಭ್ಯಾಸ ಬೆಳೆದು ಬಿಟ್ಟಿದೆ ನೋಡಿ, ಹೇಳಬೇಕಾದ ಸಂಗತಿಗೆ ಸವಿಸ್ತಾರವಾದ ಪೀಠಿಕೆ ಹಾಕುತ್ತಾ ವಿಷಯವನ್ನೇ ಮರೆತುಬಿಡುವ ಚಾಳಿ. ನಾನು ಹೇಳ ಹೊರಟದ್ದು ಐದು ವರ್ಷದ ನಮ್ಮ ನಾಲ್ವರ ಗುಂಪಿನಲ್ಲಿದ್ದ ನಮ್ಮ ತಾರಾನಾಥನ ಬಗ್ಗೆ, ಆದರೆ ಪೀಠೆಕೆಯೇ ಇಲ್ಲಿಯವರೆಗೆ ಕಾಲು ಚಾಚಿಕೊಂಡು ಬಿಟ್ಟಿತು. ಸರಿ, ಇನ್ನು ತಾರಾನಾಥನ ವಿಷಯಕ್ಕೆ ಬರೋಣ.
ತಾರಾನಾಥ ಅತ್ತ ಎತ್ತರದ ತೆಂಗಿನ ಮರವೂ ಅಲ್ಲ ಇತ್ತ ಗಿಡ್ಡಗಿನ ತುಂಬೇ ಗಿಡವೂ ಅಲ್ಲ. ಆತ ಬಣ್ಣ ಅತ್ತಕಡೆ ಗೋಡೆ ಮೇಲಿನ ಸುಣ್ಣವೂ ಅಲ್ಲ, ಇತ್ತ ಬಚ್ಚಲು ಮನೆಯ ಇದ್ದಿಲೂ ಅಲ್ಲ. ಆತನ ಮುಖ ಲಕ್ಷಣ ಅತ್ತ ಗಂಡಸಿನ ಹಾಗೂ ಇರಲಿಲ್ಲ, ಇತ್ತ ಹೆಣ್ಣಿಗನ ಹಾಗೂ ಇರಲಿಲ್ಲ. ಆತನ ಕೂದಲು ಅತ್ತ ನೀಳವಾಗಿಯೂ ಇರಲಿಲ್ಲ, ಇತ್ತ ವಿರಳವಾಗಿಯೂ ಇರಲಿಲ್ಲ. ಅವನ ಮೂಗು… ಇದೇನಿದು ಅತ್ತ ಹಾಗೂ ಇರಲಿಲ್ಲ, ಇತ್ತ ಹೀಗೂ ಇರಲಿಲ್ಲ ಅಂತ ಬರೀ ‘ಇಲ್ಲ’ಗಳನ್ನೇ ಪಟ್ಟಿ ಮಾಡುತ್ತಿರುವಿರಲ್ಲಾ ಎನ್ನುವಿರಾ? ಏನು ಮಾಡುವುದು ದೇವರನ್ನು ವಿವರಿಸುವಾಗ ನನ್ನಪ್ಪ ಅತನು ಅದೂ ಅಲ್ಲ, ಇದೂ ಅಲ್ಲ ಅಂತ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ನನಗೆ ಈ ಅಭ್ಯಾಸ ಹತ್ತಿಕೊಂಡಿ ಬಿಟ್ಟಿದೆ. ಇರಲಿ, ತಾರಾನಾಥ ಎಂಬ ಸಾಕಷ್ಟು ಉದ್ದವಾದ ಹೆಸರಿಗೆ ನಾವು ನಾಲ್ಕು ಅಕ್ಷರ ಹೆಚ್ಚಾಗಿ ಸೇರಿಸಿದ್ದೆವು. ಅವನನ್ನು ನಾವು ಟಾಕು ಟೀಕು ತಾರಾನಾಥ ಎಂದು ಕರೆಯುತ್ತಿದ್ದೆವು. ಅದಕ್ಕೆ ಕಾರಣ ಆತನ ಒಪ್ಪ ಓರಣ, ನಮಗೆ ಸುಸ್ತು ಹೊಡೆಸುತ್ತಿದ್ದ ಆತನ ಶಿಸ್ತು.
ಮನೆಯೆಂಬ ಸೇನಾ ಶಿಬಿರದಲ್ಲಿ ಸೇನಾಧಿಪತಿಯಂತಹ ಅಪ್ಪಂದಿರು ಇದ್ದಾಗಲೇ ನಾನು ಹಾಗೂ ನಮ್ಮ ನಾಲ್ವರ ಗುಂಪಿನ ಮತ್ತಿಬ್ಬರು ‘ರೂಂ ಪಾಠಿ’ಗಳು (ಸಹಪಾಠಿಗಳು ಇದ್ದಂತೆ) ಶಿಸ್ತು ಕಲಿಯದವರು ನಾವು. ಹಾಕಿಕೊಳ್ಳುವ ಬಟ್ಟೆ, ನಮ್ಮ ಊಟ, ತಿಂಡಿ, ಚಹಾ, ಕೆಲಸ, ಓದು, ಪುಸ್ತಕ-ಬ್ಯಾಗು ಯಾವುದನ್ನೂ ಒಪ್ಪವಾಗಿಟ್ಟುಕೊಳ್ಳದ ನಾವು ಹುಟ್ಟುತ್ತಲೇ ಬಂಡಾಯ ಎದ್ದವರು. ವ್ಯವಸ್ಥಿತವಾಗಿದ್ದ ಯಾವುದನ್ನು ಕಂಡರೂ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತಿತ್ತು. ಓರಣವಾಗಿ ಜೋಡಿಸಿಟ್ಟ ಸಾಮಾನುಗಳನ್ನೆಲ್ಲಾ ಕೆದರಿ, ಮನೆಯ ತುಂಬೆಲ್ಲಾ ಹರಡಿ ಅಮ್ಮ ಗಾಬರಿಯಾಗುವಂತೆ ಮಾಡಿದಾಗಲೇ ನಮ್ಮ ಮನಸ್ಸಿಗೆ ತೃಪ್ತಿ, ಏನನ್ನೋ ಸಾಧಿಸಿದ ಸಾರ್ಥಕತೆ. ನಮ್ಮ ಪೂರ್ವಾಶ್ರಮದ ಗುಣಲಕ್ಷಣಗಳು ಹೀಗಿರುವಾಗ ನಮಗೆ ಟಾಕು-ಟೀಕು ತಾರಾನಾಥನಂತಹ ಜೀವಿಯನ್ನು ನೋಡಿ ನಮ್ಮ ಕಣ್ಣುಗಳ ಮೇಲೇ ಸಂಶಯ ಬಂದಿತ್ತು.
ಆಗಿನ್ನೂ ನಮ್ಮ ಹತ್ತೂ ಬೈ ಹತ್ತರ ರೂಮಿನಲ್ಲಿ ಮೂರು ಮಂದಿ ಇದ್ದೆವು. ಎಂದಾದರೊಮ್ಮೆ ಪರಮ ಅವ್ಯವಸ್ಥೆಯ ಗೂಡಾದ ಊರ ಮೀನು ಮಾರುಕಟ್ಟೆಯ ಮೇಲೆ ಆ ದಯಾಮಯಿಯಾದ ದೇವರಿಗೆ ಸಡನ್ನಾದ ಪ್ರೀತಿ ಬಂದು ಅದಕ್ಕೆ ಓಡಾಡುವ ಚೈತನ್ಯ ಕೊಟ್ಟು, ನೋಡಲು ಎರಡು ಕಣ್ಣು ಕೊಟ್ಟು ನಮ್ಮ ರೂಮು ನೋಡಲು ಕಳುಹಿಸಿದರೆ ಅದು ನಮ್ಮ ರೂಮಿನ ಅವವ್ಯವಸ್ಥೆ, ಗಲೀಜು ನೋಡಿ ನಾಚಿ ಓಡಿಬಿಡುತ್ತಿತ್ತೇನೊ! ಹೀಗಿರುವಾಗ ನಮ್ಮ ಈ ಗೂಡಿಗೆ ಸೇರ್ಪಡೆಯಾದವನು ತಾರಾನಾಥ. ನಮ್ಮ ರೂಮಿನೊಳಕ್ಕೆ ಕಾಲಿಟ್ಟ ಕ್ಷಣವೇ ಆತ ಕಣ್ಣು ಕತ್ತಲೆಬಂದು ಬಿದ್ದುಬಿಟ್ಟ. ಸ್ವಲ್ಪ ಸಮಯ ಕಳೆದು ಸುಧಾರಿಸಿಕೊಂಡು ಕಣ್ಣುಬಿಟ್ಟು ನೋಡಿದವನಿಗೆ ನಮ್ಮ ರೂಮಿನ ವಿರಾಟ್ ರೂಪ ದರ್ಶನವಾಗಿ ಕಣ್ಣಲ್ಲಿ ರಕ್ತ ಬಂದಂತಾಯಿತು. ಆದರೂ ಅವನ ಶಕ್ತಿಯನ್ನು ಮೆಚ್ಚಲೇ ಬೇಕು, ಆ ನಯನ ಕಠೋರವಾದ ವಿರಾಟ್ ರೂಪದ ದರ್ಶನವನ್ನು ಸಹಿಸಿಕೊಂಡು ಯಾವ ಮುನ್ಸೂಚನೆಯೂ ಇಲ್ಲದೆ ನಾವು ಮೂರು ಜನರನ್ನೂ ರೂಮಿನಿಂದ ಹೊರಕ್ಕೆ ಅಟ್ಟಿ ರೂಮಿನ ಬಾಗಿಲನ್ನು ಒಳಗಿನಿಂದ ಜಡಿದುಕೊಂಡ.
ಒಂದು ತಾಸಾದರೂ ಮಹಾನುಭಾವ ಬಾಗಿಲು ತೆರೆಯಲೇ ಇಲ್ಲ. ನಮಗೆಲ್ಲಾ ಈತ ಒಳಗೇನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಆದರೆ ಏನನ್ನೂ ಮಾಡಲಾಗದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಾಗಿರಲಿಲ್ಲ. ಸರಿಯಾಗಿ ಎರಡು ತಾಸು ಕಳೇದ ನಂತರ ಬಾಗಿಲು ತೆರೆದ. ಗಾಬರಿಯಿಂದ ರೂಮಿನೊಳಕ್ಕೆ ನಾವು ನುಗ್ಗಿದೆವು. ಈಗ ರೂಮನ್ನು ನೋಡಿ ಮೂರ್ಛೆ ಬೀಳಬೇಕಾದ ಸರದಿ ನಮ್ಮದಾಗಿತ್ತು. ಅಥವಾ ಈಗಾಗಲೇ ನಾವು ಹೃದಯಾಘಾತವಾಗಿ ಸತ್ತು ನೇರವಾಗಿ ಬಂದು ಸ್ವರ್ಗವನ್ನು ನೋಡುತ್ತಿದ್ದೇವೇನೊ ಎನ್ನುವ ಭ್ರಮೆಯಾಯಿತು. ಕೇವಲ ಎರಡು ತಾಸಿನ ಕೆಳಗೆ ಅಪ್ಪಟ ಕೊಳಗೇರಿಯಂತಿದ್ದ ನಮ್ಮ ರೂಮು ಸಾಕ್ಷಾತ್ ಇಂದ್ರದೇವನ ಅಮರಾವತಿಯಂತಾಗಿಬಿಟ್ಟಿತ್ತು! ನಮ್ಮ ಈ ಹೊಸ ‘ಅಮರಾವತಿಯ’ ಇಂದ್ರ ತಾರಾನಾಥ ಬೆಳ್ಳಿ ಬಣ್ಣದ ಬನಿಯನ್ನು, ಅದಕ್ಕೆ ಬಿಳುಪಿನಲ್ಲಿ ಸ್ಪರ್ಧೆ ಒಡ್ಡುವ ಪಂಚೆ ಸುತ್ತಿಕೊಂಡು ನಮ್ಮೆದುರು ನಿಂತಿದ್ದ.
ಆಮೇಲಿನ ಒಂದು ವಾರ ನಾವು ಈ ‘ಅನ್ಯಗ್ರಹ ಜೀವಿ’ಯ ಚರ್ಯೆಗಳನ್ನು ಕುತೂಹಲದಿಂದ ಗಮನಿಸುವುದರಲ್ಲೇ ಕಳೆದುಬಿಟ್ಟೆವು. ಬೆಳಿಗ್ಗೆ ಎಂದೂ ಸೂರ್ಯನಿಗಿಂತ ಮುಂಚೆ ಏಳುವ ಅಪರಾಧ ಮಾಡದ ನಮಗೆ ಬೆಳಿಗ್ಗೆ ಮೂರು ಘಂಟೆಗೇ ಈತ ಇಟ್ಟ ಅಲರಾಮಿನ ಬಡಿತ ಮರಣ ಮೃದಂಗವಾಗಿ ಕೇಳುತ್ತಿತ್ತು. ಮೂರು ಗಂಟೆಗೆ ಒಂದು ಸೆಕೆಂಡು ಆಚೆ, ಒಂದು ಸೆಕೆಂಡು ಈಚೆ ಇಲ್ಲ ಎನ್ನುವಂತೆ ಏಳುತ್ತಿದ್ದ ತಾರಾನಾಥ ನೇರವಾಗಿ ನಮ್ಮ ರೂಮಿನ ಸ್ನಾನದ ಸೆಕ್ಷನ್‌ಗೆ ನಡೆಯುತ್ತಿದ್ದ. ಅಲ್ಲಿ ಹಿಂದಿನ ರಾತ್ರಿಯೇ ಭರ್ತಿ ಬಕೆಟ್ ನೀರು ತುಂಬಿಸಿಟ್ಟಿರುತ್ತಿದ್ದ, ಗರಿಗರಿಯಾದ ಟವೆಲ್ಲು, ಸ್ನಾನವಾದ ನಂತರ ಹಾಕಿಕೊಳ್ಳಬೇಕಾದ ಬನಿಯನ್ನು ಲುಂಗಿ, ಅಂಡರ್ವೇರುಗಳನ್ನು ಹಿಂದಿನ ರಾತ್ರಿಯೇ ಜೋಡಿಸಿಟ್ಟಿರುತ್ತಿದ್ದ. ಎಚ್ಚರವಾದ ಕೂಡಲೇ ರೋಬೊಟ್‌ನ ಹಾಗೆ ಸ್ನಾನದ ಸೆಕ್ಷನ್‌ಗೆ ಹೋಗಿ ಸ್ನಾನ ಆರಂಭಿಸಿಬಿಡುತ್ತಿದ್ದ. ನಿಖರವಾಗಿ ಎರಡು ವರೆ ಚೊಂಬು ನೀರು ಮೈ ಮೇಲೆ ಬಿದ್ದ ಕೂಡಲೆ ಸ್ವಲ್ಪ ಕಾಲ ಮೌನ. ಆಗ ಆತನ ಮೈಗೆ ಸೋಪು ತಿಕ್ಕಿಕೊಳ್ಳುತ್ತಿದ್ದ. ಸರಿಯಾಗಿ ಎರಡು ನಿಮಿಷದ ನಂತರ ಮತ್ತೆ ನಾಲ್ಕು ಚೊಂಬು ನೀರು ಮೈ ಮೇಲೆ ಸುರಿದ ಸದ್ದು. ಮತ್ತೆ ಮೌನ. ಆಗ ಮತ್ತೊಮ್ಮೆ ಆತ ಮೈಗೆ ಸೋಪು ಹಚ್ಚುತ್ತಿದ್ದಾನೆ ಎಂದು ತಿಳಿಯಬೇಕು. ಇದಾದ ನಂತರ ಆರು ಚೊಂಬು ನೀರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ನಿಮಿಷವಾಗುತ್ತಿತ್ತು. ಆತ ಹಿಂದಿನ ದಿನ ತೊಟ್ಟುಕೊಂಡಿದ್ದ ಬನೀನು, ಪಂಚೆಯನ್ನು ಅದೇ ಬಕೆಟ್ಟಿನಲ್ಲಿ ನೆನೆ ಹಾಕಿ ಮೊದಲೇ ಜೋಡಿಸಿಟ್ಟುಕೊಂಡಿದ್ದ ಬನೀನು, ಪಂಚೆ ತೊಟ್ಟುಕೊಂಡು ಹೊರಬರುತ್ತಿದ್ದ.
ಸ್ನಾನ ಮುಗಿಸಿದ ನಂತರ ಹಿಂದಿನ ರಾತ್ರಿಯೇ ತುಂಬಿಟ್ಟುಕೊಂಡ ಬಿಸ್ಲೇರಿ ಬಾಟಲಿಯಲ್ಲಿ ಕಾಲು ಭಾಗದಷ್ಟು ನೀರನ್ನು ಕುಡಿದು ರೂಮಿನ ಒಂದು ಮೂಲೆಯಲ್ಲಿದ್ದ ದೇವರ ಫೋಟೊ ಮುಂದೆ ಕುಳಿತುಕೊಳ್ಳುತ್ತಿದ್ದ. ಆಮೇಲಿ ಒಂದು ತಾಸು ಅಖಂಡವಾದ ಪೂಜೆ. ಅವನ ಭಕ್ತಿ, ಭಾವಕ್ಕಿಂತಲೂ ದೇವರ ಮೂಲೆಯನ್ನು ಒಪ್ಪವಾಗಿಸುತ್ತಿದ್ದ ರೀತಿ, ಊದಿನಬತ್ತಿ ಹಚ್ಚಿಡುವ ಶೈಲಿ, ಒಂದು ಹನಿ ಎಣ್ಣೆ ನೆಲಕ್ಕೆ ಬೀಳದ ಹಾಗೆ ಹಚ್ಚಿಡುತ್ತಿದ್ದ ದೀಪ, ಹಿಂದಿನ ರಾತ್ರಿ ಮಲಗುವ ಮುನ್ನವೇ ಪಕ್ಕದ ಮನೆಯ ಗಿಡದಿಂದ ಕಿತ್ತು ತಂಡಿಟ್ಟುಕೊಂಡ ದಾಸವಾಳದ ಅರೆಬಿರಿದ ಮೊಗ್ಗು – ಇವನ್ನೆಲ್ಲಾ ನೋಡಿಯೇ ದೇವರು ಪ್ರತ್ಯಕ್ಷವಾಗಿಬಿಡಬೇಕು! ಒಂದು ತಾಸಿನ ಪೂಜೆಯೆಂದರೆ ಕರೆಕ್ಟಾಗಿ ಒಂದೇ ತಾಸು. ಅನಂತರ ಇನ್ನೊಂದು ಐದು ನಿಮಿಷ ಇರಯ್ಯಾ ಅಂತ ಸಾಕ್ಷಾತ್ ಆ ಆಂಜನೇಯನೇ ಹೇಳಿದರೂ ಈತ ನಿಲ್ಲುವುದಿಲ್ಲ. ನೇರವಾಗಿ ಬಚ್ಚಲಿಗೆ ಹೋಗಿ ನೆನೆಸಿಟ್ಟಿದ್ದ ಬಟ್ಟೆ ಒಗೆದು ರೂಮಿನ ಹೊರಗೆ ಒಣಗಲು ಹರವಿ ಚಪ್ಪಲಿ ಮೆಟ್ಟಿ ಹೊರಗೆ ವಾಕಿಂಗ್ ಹೊರಟು ಬಿಡುತ್ತಿದ್ದ. ರೂಮಿನ ಬಾಗಿಲ ಬಳಿ ಆತ ಚಪ್ಪಲಿಬಿಡುವ ಸದ್ದು ಕೇಳಿತೆಂದರೆ ಸಮಯ ಐದು ಗಂಟೆಯಾಯಿತೆಂದೇ ಅರ್ಥ!
ವಾಕಿನಿಂದ ಹಿಂದಿರುಗಿ ಬರುವಾಗ ಪಕ್ಕದ ಮನೆಯ ಎದುರು ಬಿದ್ದಿರುತ್ತಿದ್ದ ದಿನಪತ್ರಿಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಿದ್ದ. ಸರಿಯಾಗಿ ನಲವತ್ತೈದು ನಿಮಿಷ ಪೇಪರ್ ಓದಿ ಅದನ್ನು ಮತ್ತೆ ಅದರ ಸ್ವಸ್ಥಾನದಲ್ಲಿಯೇ ಎಸೆದು ಬಂದು ಈತ ಕೂರುವುದಕ್ಕೆ ಸರಿಯಾಗಿ ಪಕ್ಕದ ಮನೆಯವರು ಬಾಗಿಲು ತೆರೆಯುತ್ತಿದ್ದರು.
ಇದದ್ದು ಒಂದೇ ಕೋಣೆಯಾದರೂ ಅದರಲ್ಲಿ ನಾಲ್ಕು ಕಂಪಾರ್ಟ್ ಮೆಂಟುಗಳನ್ನಾಗಿ ಮಾಡಿಕೊಂಡು ನಾವು ನಾಲ್ಕು ಮಂದಿ ನಮ್ಮ ಸಾಮಾನು ಸರಂಜಾಮುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆವು. ನಮ್ಮ ಶಿಸ್ತೋ, ಆ ದೇವರಿಗೇ ಪ್ರೀತಿ. ಲಾಠಿಚಾರ್ಜ್ ಆದಾಗ ಚದುರಿದ ಜನರ ಗುಂಪಿನಂತೆ ನಮ್ಮ ಚೀಲಗಳು, ಅಂಗಿ, ಬನಿಯನ್ನು, ಪ್ಯಾಂಟು, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಆದರೆ ಆ ಒಂದು ಮೂಲೆ ಮಾತ್ರ ನಿಗಿನಿಗಿ ಹೊಳೆಯುವಷ್ಟು ಚೊಕ್ಕಟವಾಗಿರುತ್ತಿತ್ತು. ಅದು ತಾರಾನಾಥನದು ಅಂತ ಪ್ರತ್ಯೇಕವಾಗಿ ಹೇಳಬೇಕೆ? ಆರುಗಂಟೆಗೆ ತನ್ನ ಸ್ಥಳವನ್ನು ಸ್ವಚ್ಛ ಮಾಡಲು ಕೂರುತ್ತಿದ್ದ ತಾರಾನಾಥ ಏಕಾಗ್ರ ಚಿತ್ತನಾಗಿ, ತಪಸ್ಸು ಮಾಡುವ ಯೋಗಿಯ ಹಾಗೆ ಸುಮಾರು ಒಂದು ತಾಸು ಅದರಲ್ಲೇ ತಲ್ಲೀನನಾಗುತ್ತಿದ್ದ. ಹಿಂದಿನ ದಿನವಷ್ಟೇ ಜೋಡಿಸಿಟ್ಟ ಬಟ್ಟೆ, ಪುಸ್ತಕ, ಸೂಟಕೇಸುಗಳನ್ನು ಮತ್ತೆ ಜರುಗಿಸಿ ಧೂಳು ಒರೆಸಿ, ನೀಟಾಗಿ ಜೋಡಿಸಿಡುತ್ತಿದ್ದ. ಆತ ಆ ದೈನಂದಿನ ಕ್ರಿಯೆ ಮುಗಿಸಿ ಮುಖ ಕೈಕಾಲು ತೊಳೆದು ನಮ್ಮನ್ನು ನಿದ್ರಾಲೋಕದಲ್ಲಿ ಮುಳುಗಿ ತೇಲಿ ಓಲಾಡುತ್ತಿದ್ದ ನಾವು ಮೂರು ಮಂದಿಯನ್ನು ಎಬ್ಬಿಸಲು ಆರಂಭಿಸುತ್ತಿದ್ದ. ಆತ ನಮ್ಮನ್ನು ಏಳಿಸಲು ಬಳಸುತ್ತಿದ್ದ ವಿಧಾನವೂ ಬಲೇ ಮಜವೆನಿಸುವಂಥದ್ದು. ಮೂರ್ನಾಲ್ಕು ಸಲ ‘ಎದ್ದೇಳ್ರೋ ಬೆಳಕಾಯ್ತು…’ ಅನ್ನುತ್ತಿದ್ದ ಸಮಯ ಇನ್ನೂ ಏಳೇ ಗಂಟೆ ಆಗಿದ್ದರೂ ‘ಎಂಟುಗಂಟೆಯಾಯ್ತು, ಒಂಭತ್ತು ಗಂಟೆಯಾಯ್ತು’ ಅಂತ ಹೆದರಿಸುತ್ತಿದ್ದ ಮೊದ ಮೊದಲು ಆತನ ಈ ತಂತ್ರಕ್ಕೆ ಬಲಿಬಿದ್ದು ನಾವು ಎದ್ದು ಬಿದ್ದು ಹೊರಡಲು ಸಿದ್ಧರಾಗುತ್ತಿದ್ದೆವು. ನಂತರದ ದಿನಗಳಲ್ಲಿ ಆತನ ಉಪಾಯ ತಿಳಿದು ಯಾವ ಭಯವೂ ಇಲ್ಲದೆ ಮಲಗಿರುತ್ತಿದ್ದೆವು. ಆಗ ಆತ ದಬದಬನೆ ಸದ್ದು ಮಾಡುತ್ತಾ ನಮ್ಮ ಕಿವಿಗಳಿಗೆ ಮರಣ ಮೃದಂಗದ ದನಿ ಕೇಳಿಸುವಂತೆ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ಧಡಾರನೆ ಬಾಗಿಲು ಕಿಟಕಿ ಘರ್ಷಿಸಿ ‘ಕುಂಭಕರ್ಣ’ರನ್ನು ಏಳಿಸಲು ಪ್ರಯತ್ನಿಸುತ್ತಿದ್ದ. ಇದೆಲ್ಲಾ ಫಲ ಕೊಡದಿದ್ದರೆ ಕಟ್ಟ ಕಡೆಯ ಅಸ್ತ್ರವೆಂಬಂತೆ ತನ್ನ ‘ಕೋಕಿಲ’ ಕಂಠದಿಂದ ಹಾಡು ಗುನುಗಲು ಶುರುಮಾಡಿಬಿಡುತ್ತಿದ್ದ! ಆತ ಸಂಗೀತ ಕಛೇರಿಯ ಅಬ್ಬರ, ಬರ್ಬರತೆಗೆ ಮಣಿದು ನಾವು ಏಳದಿದ್ದರೆ ನಮ್ಮ ಕಿವಿಗಳಿಂದ ರಕ್ತ ಹರಿಯುತ್ತಿದ್ದದ್ದು ಗ್ಯಾರಂಟಿ.
ನಾವು ಮೂರೂ ಮಂದಿ ಒಟ್ಟಿಗೇ ಎದ್ದು ಹಲ್ಲುಜ್ಜಲು, ನಿತ್ಯ ಕರ್ಮ ತೀರಿಸಲು ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡುತ್ತ ಭೀಕರ ಕಾಳಗದಲ್ಲಿ ಮುಳುಗಿರುವಾಗ ತಾರಾನಾಥ ತನ್ನ ಸೂಟ್ ಕೇಸಿನಲ್ಲಿ ಗರಿ ಮುರಿಯದ ಹಾಗೆ ಮಡಚಿಟ್ಟ ಬಟ್ಟೆಯನ್ನು ಕೇರ್ ಫುಲ್ಲಾಗಿ ಹೊರತೆಗೆದು ಡ್ರೆಸ್ಸಿಂಗ್ ಶುರುಮಾಡಿಕೊಳ್ಳುತ್ತಿದ್ದ. ಆಹಾ… ಅವನ ಡ್ರೆಸ್ಸಿಂಗ್ ಸಂಪ್ರದಾಯವನ್ನು ನೋಡಲು ಎರಡು ಕಣ್ಣುಗಳೂ ಸಾಲದಾಗಿದ್ದವು. ಮಾರ್ನಿಂಗ್ ಶೋ ಸಿನೆಮಾಗೆಂದು ಮೇಕಪ್ ಶುರುಮಾಡುವ ಹೆಣ್ಣು ಮಕ್ಕಳು ಸೆಕೆಂಡ್ ಶೋ ಹೊತ್ತಿಗೆ ರೆಡಿಯಾಗುವಷ್ಟಲ್ಲದಿದ್ದರೂ ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ಆತ ರೆಡಿಯಾಗುತ್ತಿದ್ದ. ಸ್ನಾನ ಮಾಡಿ ಇನ್ನೂ ಮೈಯ ಮೇಲಿನ ತೇವ ಆರಿರದಿದ್ದರೂ ತಾರಾನಾಥ ಡ್ರೆಸ್ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಸೋಪ್ ಹಾಕಿ ಮುಖ ತೊಳೆಯುತ್ತಿದ್ದ. ನಾವೆಲ್ಲ ಗುಬ್ಬಿಯ ಹಿಕ್ಕೆ ಅಂತ ಛೇಡಿಸುತ್ತಿದ್ದ ‘ಫೇರ್ ಅಂಡ್ ಲವ್ಲಿ’ಯನ್ನು ಒಂದು ಕೋಟ್ ಬಳಿದುಕೊಳ್ಳುತ್ತಿದ್ದ. ಅದರ ಮೇಲೆ ಪೌಡರ್. ಬಗಲುಗಳಿಗೆ ಸೂಟ್ ಕೇಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದ ವಿದೇಶಿ ಪರ್ ಫ್ಯೂಮ್. ಇದೆಷ್ಟು ನಡೆಯುವಷ್ಟರಲ್ಲಿ ನಮ್ಮ ನಿತ್ಯ ಕರ್ಮಗಳೆಲ್ಲಾ ಮುಗಿದು ಆಫೀಸಿಗೆ ಹೊರಡಲು ತಯಾರಾಗಿರುತ್ತಿದ್ದೆವು!
ಬಟ್ಟೆ-ಬರೆ, ತಿನ್ನುವ ಪದಾರ್ಥ, ಜೀವನ ಪದ್ಧತಿಗಳಲ್ಲಿ ತಾರಾನಾಥ ಪಾಲಿಸುತ್ತಿದ್ದ ಟಾಕು ಟೀಕನ್ನು ಲೇವಡಿ ಮಾಡುತ್ತಿದ್ದ ನಾವು ದುಡ್ಡಿನ ವಿಚಾರದಲ್ಲಿನ ಆತನ ಲೆಕ್ಕ ತಪ್ಪದ ವಿವೇಕ, ಮಾತುಗಾರಿಕೆಯಲ್ಲಿನ ತೂಕ ಹಾಗೂ ಸಮಯ ಪಾಲನೆಯನ್ನು ಮಾತ್ರ ಪರೋಕ್ಷವಾಗಿ ಗೌರವಿಸುತ್ತಿದ್ದೆವು. ಶೀತವಾದಾಗ ಕಟ್ಟಿಕೊಂಡ ಮೂಗಿನಿಂದ ಸಿಂಬಳವನ್ನು ಸೀಟಿ ತೆಗೆದು ರೊಪ್ಪನೆ ನೆಲಕ್ಕೆ ಒಗೆಯುವಂತೆ ಹಣವನ್ನು ಖರ್ಚು ಮಾಡುತ್ತಿದ್ದ ನನಗೂ, ಮಾತಿಗೆ ಕುಳಿತರೆ ಎದುರಿಗಿರುವವನ ತೆಲೆ ಹೋಳಾಗಿ ಮೆದುಳು ಈಚೆ ಬಂದರೂ ಮಾತು ನಿಲ್ಲಿಸದ ರಂಗನಿಗೂ, ಸಮಯ ಪಾಲನೆಯಲ್ಲಿ ನಮ್ಮ ರೈಲುಗಳಿಗೇ ಪಾಠ ಹೇಳಿಕೊಡುವಷ್ಟು ಪಂಡಿತನಾದ, ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನೂ ಮಾಡದ, ಹುಟ್ಟುವಾಗಲೇ ಒಂದು ತಿಂಗಳು ಲೇಟಾಗಿ ಹುಟ್ಟಿದ್ದ ಪ್ರಕಾಶನಿಗೂ ತಾರಾನಾಥ ಅನೇಕ ವಿಷಯಗಳಲ್ಲಿ ಆದರ್ಶನಾಗಿದ್ದ. ನಾವೆಲ್ಲರೂ ಹೊರಗೆ ಆತನನ್ನು ರೇಗಿಸಿ ಆಡಿಕೊಳ್ಳುತ್ತಿದ್ದರೂ ಅಂತರಂಗದಲ್ಲಿ ಆತನ ಟೀಕು-ಟಾಕಿನ ಆರಾಧಕರಾಗಿದ್ದೆವು. ಆತನಂತಾಗಬೇಕು ಎಂತ ದಿನಕ್ಕೆ ಹತ್ತಾರು ಬಾರಿಯಾದರೂ ಅಂದುಕೊಳ್ಳುತ್ತಿದ್ದೆವು, ಅದರ ಜೊತೆಗೇ ಆತನ ವಿಪರೀತಗಳನ್ನು ನೆನೆಸಿಕೊಂಡು ದಿನಕ್ಕೆ ಕನಿಷ್ಠ ಪಕ್ಷ ಇಪ್ಪತ್ತು ಬಾರಿಯಾದರೂ ಅಪಹಾಸ್ಯ ಮಾಡುತ್ತಿದ್ದೆವು.
ತಾರಾನಾಥನನ್ನು ಕಂಡು ಅದಾಗಲೇ ಹತ್ತು ವರ್ಷಗಳಾಗಿದ್ದವು. ಅಂದು ಹೆಂಡತಿಯ ಒತ್ತಾಯಕ್ಕೆ ಹದಿನೈದು ದಿನಗಳ ಗಡ್ಡಕ್ಕೆ ಮೋಕ್ಷ ಕಾಣಿಸಲು ಸಲೂನ್‌ಗೆ ಹೋಗಿ ಹಿಂದಿರುಗುತ್ತಿದ್ದೆ. ಅಂದು ಅಮಾವಾಸ್ಯೆ ಇದ್ದದ್ದರಿಂದ ಬೆಳಗಾಗಿಯೇ ಮಗ ಸ್ಕೂಟರನ್ನು ತೊಳೆದು ಲಕ-ಲಕ ಹೊಳೆಯುವಂತೆ ಮಾಡಿದ್ದ. ನನ್ನಾಕೆಯ ಕೈಗಳ ಕೈಶಲ್ಯಕ್ಕೆ ಸಾಕ್ಷಿಯೆಂಬಂತೆ ನನ್ನ ಬಟ್ಟೆಗಳು ಶುಭ್ರವಾಗಿದ್ದವು. ಸಲೂನಿನಿಂದ ಟಿಪ್ ಟಾಪ್ ಆಗಿ ಹೊರಬರುವಾಗ ಸಿಗ್ನಲ್ ಬಳಿ ಮಣ್ಣು ಮೆತ್ತಿಕೊಂಡು ಗುರುತು ಸಿಗದ ಹಾಗೆ ಬಣ್ಣಗೆಟ್ಟಿದ್ದ ಸ್ಕೂಟರಿನಲ್ಲಿ ತನ್ನ ಮಗನ ಮೂಗಿನಿಂದ ಇಳಿಯುತ್ತಿದ್ದ ಸಿಂಬಳವನ್ನು ತನ್ನ ಶರ್ಟಿನ ಅಂಚಿನಿಂದ ಒರೆಸುತ್ತಿದ್ದ ವ್ಯಕ್ತಿ ಕಾಣಿಸಿದ. ಆತನನ್ನು ಎಲ್ಲೋ ಕಂಡಂತೆ ನನಗೆ ಭಾಸವಾಗುತ್ತಿತ್ತು. ಆದರೆ ಆತನ ಕೆದರಿದ ಕೂದಲು, ಮಾಸಲು ಬಣ್ಣದ ಬಟ್ಟೆ, ಸುಮಾರು ತಿಂಗಳ ವಯಸ್ಸಿನ ಗಡ್ಡದಿಂದಾಗಿ ಆತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಕೊಂಚ ಹತ್ತಿರ ಹೋಗಿ ದಿಟ್ಟಿಸಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ! ಆತ ನಮ್ಮ ತಾರಾನಾಥ! ಬದುಕೆಂಬ ಶಿಕ್ಷಕ ತೋರಿಸುವ ದಾರಿಗಳನ್ನು ಕ್ರಮಿಸದೆ ಇರುವ ಧೈರ್ಯ ಯಾರು ತೋರಿಯಾರು?
(ಮೂಲ ಲೇಖನ ಸಡಗರ -ಮುಂಚಿನ ಹೆಸರು ‘ಕಲರವ’- ಪತ್ರಿಕೆಯಲ್ಲಿ ಪ್ರಕಟವಾಗಿತ್ತು)
ಟ್ಯಾಗ್ ಗಳು:ಶಿಸ್ತು, ಸಡಗರ, ಹಾಸ್ಯ ಲೇಖನ, descipline
ಇತ್ತೀಚಿನ ಪ್ರಜಾ ಉವಾಚ