Tag Archives: ಸಂಪಾದಕೀಯ

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!

6 ಮೇ

‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ ಗಂಡಂದಿರ ಪ್ರತಿಜ್ಞೆಯ ಹಾಗೆ, ‘ಇವತ್ತೇ ಲಾಸ್ಟ್ ಇನ್ನು ಸೋಮಾರಿತನ ಮಾಡುವುದಿಲ್ಲ. ನಾಳೆಯಿಂದ ನಿಯತ್ತಾಗಿ ಬೆಳೆಗ್ಗೆ ಐದಕ್ಕೆದ್ದು ಓದಲು ಕೂರುವೆ’ ಎಂದು ಭೀಷ್ಮನನ್ನೇ ನಡುಗಿಸುವ ವಿದ್ಯಾರ್ಥಿಯ ಪ್ರತಿಜ್ಞೆಯ ಸಾಲಿಗೆ ನಮ್ಮನ್ನೂ ಸೇರಿಸಿಬಿಡಲು ನಮ್ಮ ವಿರೋಧಿಗಳು ಹೊಂಚು ಹಾಕಿ ಸಂಚು ರೂಪಿಸುತ್ತಿರುವುದು ನಮ್ಮ ತೀಕ್ಷ್ಣ ಮತಿಗೆ ತಡವಾಗಿ ಅರಿವಿಗೆ ಬಂದಿದೆ.

‘ಒಂದು ದಿನವೂ ತಪ್ಪಿಸದಂತೆ ನಗಾರಿ ಸದ್ದು ಮಾಡುತ್ತಿರುತ್ತದೆ’ ಎಂದು ನಗೆ ಸಾಮ್ರಾಟರಾದ ನಮ್ಮಾಣೆ, ನಮ್ಮ ಚೇಲ ಕುಚೇಲ, ನಮ್ಮ ಗತಕಾಲದ ಅತ್ಯಾಪ್ತ ಗೆಳೆಯ ತೊಣಚಪ್ಪನವರ ಮೇಲೆ ಆಣೆ ಮಾಡಿ ಹೇಳಿದ್ದ ನಾವು ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಪರಂಧಾಮ ತಲುಪಿ ಅಲ್ಲಿಂದ ರೋಚಕವಾಗಿ ಹಿಂದಿರುಗಿದ್ದು ನಮ್ಮ ನಿಯಮಿತ ಓದುಗರ ನೆನಪಿನಲ್ಲಿರುತ್ತದೆ ಎಂದುಕೊಂಡಿದ್ದೇವೆ. ಅದನ್ನು ಹೊರತು ಪಡಿಸಿದರೆ ನಾವು ಇಷ್ಟು ಕಾಲ ಅನುಪಸ್ಥಿತರಾಗಿದ್ದು ಅನೇಕರಲ್ಲಿ ಸಂಶಯವನ್ನು ಮೂಡಿಸಿರುವುದು ಸಹಜ. ಕೆಲವರು ಹಿಂದೆ ವಿಫಲವಾದ ಆತ್ಮಹತ್ಯಾ ಪ್ರಯತ್ನವನ್ನು ನೆನೆದು, ಇನ್ಯಾರೋ ಯಶಸ್ವಿಯಾಗಿ ನಮ್ಮ ಕೊಲೆ ಮಾಡಿರಬೇಕು ಎಂದು ಅಂದಾಜಿಸಿ ಅಧಿಕಾರಕ್ಕೆ ಬರುವ ಸರಕಾರ ಯಾವುದು ಎಂದು ಊಹಿಸಿದ ರಾಜಕೀಯ ಪಂಡಿತರ ಹಾಗೆ ಫೋಸ್ ಕೊಡುತ್ತಿದ್ದರು. ಇನ್ನು ಕೆಲವರು ಚುನಾವಣೆಯ ಸಂದರ್ಭದಲ್ಲಿ ಗದ್ದಲವಾಗಬಾರದು ಎಂಬ ಕಾರಣಕ್ಕೆ ನಗಾರಿ ಗಂಟು ಮೂಟೆ ಕಟ್ಟಿ ಬಿಸಾಡಿಸುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳ ಮೂಲಕ ದಾಳಿ ನಡೆಸಿದ್ದರು. ಆದರೆ ನಾವು ಮಾತ್ರ ಸೂಕ್ತ ಸಮಯಕ್ಕೆ ಕಾಯುತ್ತ ಕೂತಿದ್ದೆವು.

ನಾವು ನಾಪತ್ತೆಯಾಗುವುದಕ್ಕೆ ಈ ಬಾರಿ ಸಣ್ಣ ಪುಟ್ಟ ನೆಪ ಕಾರಣವಾಗಿರಲಿಲ್ಲ. ನಮ್ಮ ನಾಪತ್ತೆಯ ಹಿಂದೆ ಬಹುದೊಡ್ಡ ಸಂಚೇ ನಡೆದಿತ್ತು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ದಿನಾಂಕವನ್ನು ಘೋಷಿಸಿದ ತಕ್ಷಣ ನಾಡಿನಾದ್ಯಂತ ಅನಧಿಕೃತವಾಗಿ ಒಂದು ವದಂತಿ ಹರಿದಾಡಲು ಶುರುವಾಯಿತು. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಸವಾಲಾಗಿರುವ ಈ ಚುನಾವಣೆಯಲ್ಲಿ ಬಹುದೊಡ್ಡ ಸ್ಥಿತ್ಯಂತರವಾಗುವ ಗುಲ್ಲು ಎಲ್ಲೆಡೆ ಕೇಳಿಬಂತು. ಮೊದ ಮೊದಲು ಸಾಮಾನ್ಯ ಜನರು, ರಾಜಕೀಯ ಪಂಡಿತರು, ಮಾಧ್ಯಮದ ಪ್ರಭೃತಿಗಳು ಈ ಗುಲ್ಲನ್ನು ನಿರ್ಲಕ್ಷಿಸಿದ ನಾಟಕವಾಡಿದರು. ಆದರೆ ಯಾವಾಗ ಊರಿಗೊಬ್ಬಳೇ ಪದ್ಮಾವತಿ ಮತ್ತವಳ ತಂಗಿ ರೂಪಲಕ್ಷ್ಮಿ ಎಂಬಂತೆ ದೇಶಕ್ಕೆಲ್ಲ ಎರಡೇ ರಾಜಕೀಯ ಪಕ್ಷಗಳು ಎಂಬ ಪರಿಸ್ಥಿತಿ ಇದ್ದದ್ದು ಬದಲಾಗುವ ಸಾಧ್ಯತೆಗಳು ಕಂಡುಬರಲು ಶುರುವಾಯಿತೋ ಗುಲ್ಲನ್ನು ತಳ್ಳಿ ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಮೂರನೆಯ ರಂಗ, ನಾಲ್ಕನೆಯ ರಂಗ, ಐದನೆಯ ರಂಗ ಎಂದು ಭೈರಪ್ಪನವರ ಆವರಣದ ಮುದ್ರಣದ ಹಾಗೆ ರಾಜಕೀಯ ರಂಗಗಳ ಸಂಖ್ಯೆ ಏರುತ್ತಾ ಹೋದಾಗ ಯಾರು ಬೇಕಾದರೂ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗತೊಡಗಿತು. ರಾಜಕಾರಣಿಗಳಿಗೆ, ಪಂಡಿತರುಗಳಿಗೆ ದಿಗಿಲು ಶುರುವಾದದ್ದೇ ಆಗ! ನಗೆ ಸಾಮ್ರಾಟರಾದ ನಾವು ನಿಶ್ಚಿತವಾಗಿ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳನ್ನು ಕಂಡು ದೇಶಕ್ಕೆ ದೇಶವೇ ನಿಬ್ಬೆರಗಾಯಿತು.

‘ನಗೆ ಸಾಮ್ರಾಟ್ ಪ್ರಧಾನಿಯಾಗುವುದು ಕನಸಿನಲ್ಲೂ ಸಾಧ್ಯವಿಲ್ಲ’ ಎನ್ನುವ ಪ್ರಮುಖ ಪಕ್ಷಗಳ ಉಪೇಕ್ಷೆಯ ಹೇಳಿಕೆಗಳಿಗೆ ಉತ್ತರವಾಗಿ ದಿನೇ ದಿನೇ ಬಲಗೊಳ್ಳಲು ತೊಡಗಿದ ನಮ್ಮ ‘ಇನ್ನೊಂದು ರಂಗ’ ದೇಶದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಹಂತವನ್ನು ತಲುಪಿತ್ತು. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರಿ ಅಂತರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಜಯಿಸಿ ಅಭೂತಪೂರ್ವ ದಾಖಲೆ ಬರೆಯ ಹೊರಟ ನಮ್ಮ ಧೈರ್ಯ, ಸಾಹಸ ಮನೋವೃತ್ತಿಗೆ ಭುವಿಯೇ ಥರ ಥರನೇ ನಡುಗಿತು.

ಆಗ ಶುರುವಾಯಿತು ಸಂಚಿನ ಮೊದಲ ಹಂತ. ಇನ್ನು ನಾವೆಲ್ಲ ಪರಸ್ಪರ ಕಿತ್ತಾಡುತ್ತ ಕೂತರೆ ದೇಶಕ್ಕೆ ದೇಶವೇ ನಗೆ ಸಾಮ್ರಾಟನ ಸಾಮ್ರಾಜ್ಯವಾಗಿ ಬಿಡುತ್ತದೆ. ನಮ್ಮ ಗಲ್ಲಿ ಪಾಂಚಾಜನ್ಯಗಳನ್ನು ವಿಕಾರವಾಗಿ ಅರಚಿಸುತ್ತಾ ನಾವು ಹೊಡಿ, ಬಡಿ, ಕಡಿ ಎಂದು ಕೂಗಾಡುತ್ತಿದ್ದರೆ ಅಖಂಡ ಭಾರತದಲ್ಲಿ ನಗೆ ನಗಾರಿಯ ಸದ್ದು ಮಾರ್ದನಿಸತೊಡಗುತ್ತದೆ ಎಂಬುದನ್ನು ಅರಿತ ಸರ್ವ ಪಕ್ಷಗಳು ಈ ಭುವಿಯ ಇತಿಹಾಸದಲ್ಲಿ ಹಿಂದೆಂದೂ ನಡೆದಿರದ ಭಾರಿ ಸಂಚನ್ನು ಹೆಣೆದವು. ಈ ದುಷ್ಟ ಕೂಟದ ದಾಳಿ ಹೇಗಿತ್ತೆಂದರೆ ಚೂರು ಪಾರು ಮಹಾಭಾರತದ ಅರಿವಿರುವವರಿಗೆಲ್ಲಾ ಅಭಿಮನ್ಯುವನ್ನು ಆಹುತಿ ತೆಗೆದುಕೊಂಡ ಚಕ್ರವ್ಯೂಹವನ್ನು ನೆನಪಿಸುವಷ್ಟು!

ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದ ಹಾಗೆ ನಮ್ಮನ್ನು ಎಂಟು ಮತ್ತೆರಡು ದಿಕ್ಕುಗಳಿಂದ ಹಣಿದು ಹಾಕಲಾಯಿತು. ನಮ್ಮನ್ನು ಉಸಿರಾಡುವ ಶವದಂತೆ ನಿಷ್ಕ್ರಿಯ ಮಾಡಲಾಯಿತು. ಒಂದಿಂಚೂ ಕದಲದ ಹಾಗೆ ದಿಗ್ಭಂದನ ಮಾಡಲಾಯಿತು. ಮರಾ ಮೋಸದಿಂದ ನಮ್ಮ ಶಕ್ತಿಯನ್ನೆಲ್ಲ ಕುಗ್ಗಿಸಲಾಯಿತು. ನಮ್ಮ ರೆಕ್ಕೆ ಪುಕ್ಕಗಳನ್ನೆಲ್ಲಾ ಹದವಾದ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು. ಇಷ್ಟು ಸಾಹಸವನ್ನು ಮೆರೆದ ದುಷ್ಟಕೂಟ ನಾವು ಈ ಮಹಾನ್ ದೇಶದ ಮಹಾನ್ ಪ್ರಧಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು. ಮುಂದಿನ ಐದು ವರ್ಷ ನೆಮ್ಮದಿಯಾಗಿರಬಹುದು ಎಂದು ಭಾವಿಸಿತು.

ಪ್ರಧಾನಿ ಪಟ್ಟ ತಪ್ಪಿದ ನಿರಾಸೆ, ಮಹಾನ್ ಸಾಧನೆ ಮಾಡುವುದಕ್ಕೆ ಉಂಟಾದ ವಿಘ್ನದ ಬಗೆಗಿನ ಅಸಹನೆ, ರೆಕ್ಕೆ ಪುಕ್ಕ ಕತ್ತರಿಸಲ್ಪಟ್ಟ ಹತಾಶೆ, ಮೈ ಮನಸುಗಳಲ್ಲಿ ಅಪಾರವಾದ ದಣಿವು – ಇವೆಲ್ಲವನ್ನೂ ಇಷ್ಟು ದಿನ ಸಹಿಸಿಕೊಂಡು ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಬಾನಂಗಳಕ್ಕೆ ಚಿಮ್ಮಿದ್ದೇವೆ. ಪ್ರಧಾನಿ ಪಟ್ಟ ಕೈ ತಪ್ಪಿದರೂ ನಮ್ಮ ನಗೆ ಸಾಮ್ರಾಜ್ಯದ ಪಟ್ಟವನ್ನಲಂಕರಿಸಿ ನಗೆ ಸಾಮ್ರಾಟರಾಗಿದ್ದೇವೆ. ನಗೆ ನಗಾರಿಯ ಸದ್ದು ನೂರು ದಿಕ್ಕುಗಳಲ್ಲಿ ಮಾರ್ದನಿಗೊಳ್ಳುವುದನ್ನು ಸಂತೋಷದಿಂದ ಆಲಿಸುತ್ತಿದ್ದೇವೆ. 

– ನಗೆ ಸಾಮ್ರಾಟ್

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

29 ಜನ

 

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಗರವನ್ನು ಕಂಡು ಸಾಮ್ರಾಟರು ಹರ್ಷೋದ್ಘಾರದಿಂದ ಕಂಬನಿ ಮಿಡಿದರು. ವೇದಿಕೆಯ ಮೇಲಿನ ಗಣ್ಯರೇ ಹೀಗೆ ಕಂಬನಿ ಮಿಡಿದದ್ದನ್ನು ಕಂಡು ಗೊಂದಲಕ್ಕೊಳಗಾದ ಮಹಾಜನತೆಯು ತಾವೂ ಎರಡು ಸೆಕಂಡು ಮೌನವನ್ನಾಚರಿಸಿ, ತಲೆ ತಗ್ಗಿಸಿ, ಕಷ್ಟ ಪಟ್ಟು ಎರಡು ಹನಿ ಕಣ್ಣೀರು ಹರಿಸಿದರು. ಸಾಮ್ರಾಟರು ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೋ, ಶ್ರೀಮಂತರ ಕಾರುಗಳಿಗೆ ರಕ್ತ ತರ್ಪಣ ಅರ್ಪಿಸಿದವರಿಗೋ, ದರೋಡೆಕೋರರಿಂದ ಬದುಕುವ ಹಕ್ಕನ್ನು ಕಳೆದುಕೊಂಡವರಿಗೋ ಗೌರವ ಸೂಚಿಸುವುದಕ್ಕಾಗಿ ಕಂಬನಿ ಮಿಡಿದಿದ್ದಾರೆ ಎಂದು ತಿಳಿದಿತ್ತು ಜನತೆ. ಆದರೆ ಸಾಮ್ರಾಟರನ್ನು ಪಕ್ಕಕ್ಕೆಳೆದ ಕುಚೇಲ ಅವರ ಕಣ್ಣಲ್ಲಿ ಬಿದ್ದಿದ್ದ ಧೂಳನ್ನು ಊದಿ ತೆಗೆದು ಅವರ ಹರ್ಷೋದ್ಘಾರದ ಕಣ್ಣೀರ ಧಾರೆಯನ್ನು ಬಂದ್ ಮಾಡಿದ. ಆದರೆ ಮಹಾ ಜನತೆ ಮಾತ್ರ ತಮ್ಮ ಮಾನಸ ಮಂದಿರದಲ್ಲಿ ಪ್ರತಿಷ್ಠಾಪಿಸಿದ ನಗೆ ಸಾಮ್ರಾಟರ ಕಣ್ಣೀರಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ಧಟತನಕ್ಕೆ ಕೈ ಹಾಕಲಿಲ್ಲ. enews_party_hat

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

– ನಗೆ ಸಾಮ್ರಾಟ್