Tag Archives: ಸಂದರ್ಶನ

ಭಗವಾನ್ ನಿತ್ಯ ಸಾಯಿ ಬಾಬಾ ಸಂದರ್ಶನ!

3 ಡಿಸೆ

ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿ ವಿಶ್ವ ಎಂದರೆ ಭೂಮಿಯನ್ನು ಸೇರಿಸಿಕೊಂಡು ಅಸಂಖ್ಯಾತ ತಾರೆ, ಗ್ರಹಗಳು ಸೇರಿವೆ ಎಂದು ಅರ್ಥೈಸಿಕೊಳ್ಳಬೇಕು.

ಇಂತಹ ಅನಂತ ಸೃಷ್ಟಿಯಲ್ಲಿ ತೀರಾ ಕ್ಷುಲ್ಲಕ ಎಂದು ಪರಿಗಣಿಸಬಹುದಾದ ಸೂರ್ಯ ಎಂಬ ನಕ್ಷತ್ರದ ಸುತ್ತ ಪ್ರದಕ್ಷಿಣೆ ಹಾಕುವ ಗ್ರಹ ಭೂಮಿ. ಈ ಗ್ರಹವು ಸೂರ್ಯನಿಂದ ಅತ್ಯಂತ ಹಿತಕರವಾದ ಅಂತರದಲ್ಲಿ ಇರುವುದರಿಂದ ಇದರ ಮೇಲೆ ವಾಯುಪದರ ರೂಪುಗೊಳ್ಳಲು, ನೀರು ಉಕ್ಕಿ ಹರಿಯಲು, ಜೀವ ಅಂಕುರವಾಗಲು ಸಾಧ್ಯವಾಯಿತು. ಸುತ್ತಲಿನ ಎಲ್ಲಾ ಗ್ರಹಗಳು ಬಂಜೆಯಂತೆ ನರಳುತ್ತಿದ್ದರೆ ಭೂಮಿ ಹಸಿರು ಹಾಗೂ ಉಸಿರಿನಿಂದ ನಳನಳಿಸುತ್ತಿತ್ತು.

ಹೀಗೆ ಉತ್ಪನ್ನವಾದ ಜೀವಿಗಳಲ್ಲಿ ಲಕ್ಷಾಂತರ ಪ್ರಬೇಧ. ಇವುಗಳಲ್ಲಿ ಒಂದು ಬಗೆಯ ಜೀವಿ ಮನುಷ್ಯ. ಈ ಮನುಷ್ಯರಲ್ಲಿ ನಾನಾ ವಿಧ. ಇಂತಹ ವ್ಯತ್ಯಾಸಗಳಲ್ಲಿ ಒಂದು ವರ್ಗ ಹಿಂದೂ. ಇವರಲ್ಲಿ ಹಲವು ಪ್ರಬೇಧಗಳಲ್ಲಿ ಒಂದು: ವಿಷ್ಣು ಆರಾಧಕರು.

ಇವರ ಪ್ರಕಾರ ಜಗತ್ತಿನ ಸೃಷ್ಟಿಕರ್ತನಾದ ದೇವನು ಈ ಭೂಮಿಯೆಂಬ ಗ್ರಹದ ಮೇಲಿನ ಮಾನವನ ವ್ಯವಹಾರಗಳಲ್ಲಿ ವಿಪರೀತ ಆಸಕ್ತನು. ಮನುಷ್ಯನು ದುಷ್ಟ ಮಾರ್ಗಕ್ಕೆ ಇಳಿದಾಗಲೆಲ್ಲಾ ತಾನೇ ಅವತರಿಸಿ ಇಲ್ಲವೇ ತನ್ನ ಅಂಶಗಳನ್ನು ಮನುಷ್ಯರಲ್ಲಿ ತುಂಬಿ ಕಳಿಸಿ ಮಾನವ ವ್ಯವಹಾರಗಳಲ್ಲಿ ಋಜುತ್ವವನ್ನು ಏರ್ಪಾಡು ಮಾಡುತ್ತಾನೆ.

ಇಂತಹ ಅವತಾರಗಳಲ್ಲಿ ಒಬ್ಬರಾದ ಭಗವಾನ್ ನಿತ್ಯ ಸಾಯಿ ಬಾಬಾರವರು ತಮ್ಮ ಅವತಾರದ ಎಂಬತ್ತೈದನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ (ಭಕ್ತರು ಆಚರಿಸಿದ್ದಾರೆ ಎನ್ನುವುದು ಸೂಕ್ತ). ಮಾಧ್ಯಮದೊಂದಿಗೆ ಎಂದೂ ಮಾತನಾಡಲು ಇಚ್ಛಿಸಿದ ಭಗವಾನ್ ನಗೆ ನಗಾರಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಅಭೂತಪೂರ್ವ ಸಂದರ್ಶನ ಅತ್ಯಂತ ಶೀಘ್ರದಲ್ಲಿ ನಗೆ ನಗಾರಿಯಲ್ಲಿ ಪ್ರಕಟವಾಗಲಿದೆ! ನಿರೀಕ್ಷಿಸಿ…

ಸ್ಪೋಟಕ ಸಂದರ್ಶನಕ್ಕೆ ತಯಾರಾಗಿ!

2 ಆಕ್ಟೋ

 

ಕನ್ನಡ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ ಹೆಸರಾಂತ ಬ್ಲಾಗಿಗರೊಬ್ಬರ ಸಂದರ್ಶನ ಶೀಘ್ರವೇ ನಗೆ ನಗಾರಿಯಲ್ಲಿ ಮೂಡಿಬರಲಿದೆ!

ಈ ಅತಿ ಸೂಕ್ಷ್ಮ ಸಂದರ್ಶನವನ್ನು ಖುದ್ದು ಸಾಮ್ರಾಟರೇ ಮಾಡಿಕೊಂಡು ಬಂದಿದ್ದಾರೆ!

ಬ್ಲಾಗ್ ಅಂಗಳದಲ್ಲಿ ಕೋಲಾಹಲ ಹುಟ್ಟಿಸುವಂತಹ ಅಂಶಗಳು ಈ ಸಂದರ್ಶನದಲ್ಲಿ ಅಡಗಿವೆ!

ಸ್ಪೋಟಕ ಸತ್ಯಗಳು ಇದರಲ್ಲಿ ಬಯಲಾಗಿವೆ!

ಈ ಅಪರೂಪದ ಸಂದರ್ಶನಕ್ಕಾಗಿ ನಗೆ ನಗಾರಿಯನ್ನು ತಪ್ಪದೇ ಓದುತ್ತಿರಿ.

(ಒರಿಜಿನಲ್ ಸಂದರ್ಶನ ಪ್ರಕಟವಾಗುವ ಮುನ್ನವೇ ಚೀನಾ ಮಾರ್ಗವಾಗಿ ಚಲಿಸಿ ಪ್ರಕಟವಾಗುವ ಅಗ್ಗದ ನಕಲಿ ಸಂದರ್ಶನವನ್ನು ಓದಿ ಮರುಳಾಗದಿರಿ!)

– ನಗೆ ಸಾಮ್ರಾಟ್

ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’‘ದರ್ಶನ’

31 ಮಾರ್ಚ್

(ಖ್ಯಾತ ನಟಿ ಬಂದ್ರೆ ತಾರೇ  ಸಂದರ್ಶನಕ್ಕೆ ಹೋಗಿದ್ದ ಸಾಮ್ರಾಟರ ಆಲ್ಟರ್ ಈಗೋ ಕಳೆದ ಕೆಲವು ದಿನಗಳು ನಾಪತ್ತೆಯಾಗಿದ್ದು ನಮ್ಮ ಅನೇಕ ನಿಷ್ಠಾವಂತ ಓದುಗರಲ್ಲಿ ಆತಂಕವನ್ನೂ, ಸಂಶಯವನ್ನೂ ಮೂಡಿಸಿತ್ತು. ಸಾಮ್ರಾಟರ ಆಲ್ಟರ್ ಈಗೋದ ಆರೋಗ್ಯದ ಕಾಳಜಿ ಹೊಂದಿರುವವರಿಗೆ ಆತಂಕ ಉಂಟಾಗಿದ್ದರೆ, ಆ ಈಗೋದ ‘ಚಾರಿತ್ರ್ಯ’ದ ಮೇಲೆ ಕಾಳಜಿ ಇದ್ದವರಿಗೆ ಸಂಶಯ ಮೂಡಿತ್ತು. ಕಡೆಗೆ ಸಾಮ್ರಾಟರು ಈ ಆತಂಕ, ಸಂಶಯಗಳ ಮುಸುಕನ್ನು ಸರಿಸಲು ನಿರ್ಧರಿಸಿ ತಮ್ಮ ಚೇಲ ಕುಚೇಲನನ್ನು ಅಟ್ಟಿದರು. ಕುಚೇಲ ನಗೆ ಸಾಮ್ರಾಟರ ಆಲ್ಟರ್ ಈಗೋವನ್ನೂ, ಅದರ ಸಂದರ್ಶನವನ್ನೂ ಹಿಡಿದು ತಂದಿದ್ದಾನೆ. ಆದರೆ ಭದ್ರತೆಯ ಕಾರಣಗಳಿಂದ ಸಾಮ್ರಾಟರ ಆಲ್ಟರ್ ಈಗೋ ಇಷ್ಟು ದಿನ ಮಾಡುತ್ತಿದ್ದದ್ದೇನು ಎಂಬ ಸಂಗತಿಯನ್ನು ಬಯಲು ಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.)

ಸಂಜೆ ನಾಲ್ಕಕ್ಕೆ ಸಂದರ್ಶನದ ಸಮಯ ನಿಗದಿಯಾಗಿತ್ತು. ನಮ್ಮ ಆಲ್ಟರ್ ಈಗೋ ಮೂರು ಗಂಟೆ ಐವತ್ತೊಂಭತ್ತು ನಿಮಿಷದಿಂದಲೇ ಕಾದು ಕಾದು ಸುಸ್ತಾಗಿದ್ದ. ಬಂದ್ರೆ ತಾರೇಯವರು ಈ ಸಂದರ್ಶನಕ್ಕೆ ಮುಂಜಾನೆ ಆರರಿಂದಲೇ ಸಿದ್ಧರಾಗುತ್ತಿದ್ದರು ಎಂದು ತಿಳಿದು ಅಭಿಮಾನದಿಂದ ಈಗೋದ ಮನಸ್ಸು ಉಬ್ಬಿಹೋಯ್ತು. ಎಷ್ಟು ಅಧ್ಯಯನ ಶೀಲತೆ, ಎಂತಹ ಶಿಸ್ತು, ಏನು ಹೋಂ ವರ್ಕು ಎಂದು ಮೆಚ್ಚಿಕೊಂಡು ಲೊಚಗುಟ್ಟುತ್ತಿರುವಾಗ ತಾರೇಯವರು ಮುಂಜಾನೆಯಿಂದ ಮೇಕಪ್ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿಯಿತು. ಅಖಂಡವಾಗಿ ಹದಿನೇಳು ಬಾರಿ ಮೇಕಪ್ ಬದಲಾಯಿಸಿ ಸಂದರ್ಶನಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದುದು ತಿಳಿದು ಆಲ್ಟರ್ ಈಗೋಗೆ ತಲೆ ಸುತ್ತು ಬಂದಂತಾಯ್ತು. ಕಡೆಗೆ ತಮ್ಮ ಸಂದರ್ಶನ ಟಿವಿಯಲ್ಲಿ ಪ್ರಕಟವಾಗುವುದಿಲ್ಲವೆಂದೂ, ಕನಿಷ್ಠ ಪಕ್ಷ ಫೋಟೊ ತೆಗೆಯುವುದಕ್ಕೂ ತಮ್ಮ ಬಳಿ ಕ್ಯಾಮರಾ ಇಲ್ಲವೆಂದು ಸ್ಪಷ್ಟ ಪಡಿಸಿದ ನಂತರ ಎರಡೇ ತಾಸುಗಳಲ್ಲಿ ತಯಾರಿ ಮುಗಿಸಿ ಸಂದರ್ಶನಕ್ಕೆ ಹಾಜರಾದರೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಬಂದ್ರೆ ತಾ ರೇ.

ನ.ಸಾ: ಗುಡ್ ಈವನಿಂಗ್ ಮೇಡಂ. (ಹ್ಯಾಂಡ್ ಶೇಕ್ ಮಾಡಲು ಕೈ ಮುಂದೆ ಚಾಚುತ್ತಾ…)

ಬ.ತಾ: (ಸರ್ಕಾರಿ ಗುಮಾಸ್ತೆ ತನ್ನ ಟೇಬಲ್ ಮೇಲೆ ಬಂದ ಫೈಲನ್ನು ನಿರ್ಲಕ್ಷ್ಯದಿಂದ ಕಾಣುವಂತೆ ಮುಂದೆ ಬಂದ ಕೈಯನ್ನು ಕಂಡು) ಹ್ಹಾ! WWW.MIRCHIGOSSIPS.COM

ನ.ಸಾ: (ಕೈ ಕುಲುಕುವ ಭಾಗ್ಯದಿಂದ ವಂಚಿತನಾದ ನಿರಾಸೆಯನ್ನು ತೋರ್ಪಡಿಸಿಕೊಳ್ಳದೆ)  ಮೇಡಂ, ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಇವತ್ತು.

ಬ.ತಾ: (ಮನಸೊಳಗೆ ಆಟಂ ಬಾಂಬ್ ಸಿಡಿದ ಹಾಗೆ ಸಂತೋಷದ ಊಟೆ ಒಡೆದರೂ ತೋರ್ಪಡಿಸಿಕೊಳ್ಳದೆ) ಥ್ಯಾಂಕ್ಯು… ಸಂದರ್ಶನ ಶುರು ಮಾಡೋಣವೇ?

ನ.ಸಾ: ಖಂಡಿತಾ ಮೇಡಂ. ಮೊದಲಿಗೆ ಕನ್ನಡದ ಹುಡುಗಿಯಾಗಿ, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಯೂ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ನಿಮ್ಮನ್ನು ಅಭಿನಂದಿಸಬೇಕು.

ಬ.ತಾ: ನೋಡಿ, ನಾನು ಕನ್ನಡದಲ್ಲಿ ಮಾತಾಡುತ್ತಿರುವುದು ನಿಮ್ಮ ಪತ್ರಿಕೆಯನ್ನು ಮೂರುವರೆ ಓದುಗರು ಬಿಟ್ಟು ಬೇರ್ಯಾರೂ ಓದುವುದಿಲ್ಲ ಎಂಬ ಗ್ಯಾರಂಟಿ ಇರೋದರಿಂದ ಮಾತ್ರ. ನಾವು ನಟಿಯರು ಕನ್ನಡದಲ್ಲೇ ಮಾತಾಡಿದರೆ ನಮ್ಮ ಅವಕಾಶಗಳ ಮೇಲೆ ನಾವೇ ಕಲ್ಲು ಚಪ್ಪಡಿ ಎಳೆದುಕೊಂಡಂತೆ. ನಾವು ಕನ್ನಡದಲ್ಲೇ ಮಾತನಾಡುತ್ತಿದ್ದರೆ  ಬೇರೆ ಭಾಷೆಗಳ ನಿರ್ದೇಶಕ, ನಿರ್ಮಾಪಕರ ಗಮನ ಸೆಳೆಯುವುದು ಹೇಗೆ? ಬಾಲಿವುಡ್ಡಿಗೆ ಹಾರುವ ಅವಕಾಶ ಸಿಕ್ಕುವುದಾದರೂ ಹೇಗೆ? ಕನ್ನಡದಲ್ಲೇ ಮಾತಾಡುತ್ತಿದ್ದರೆ ರಾಷ್ಟ್ರೀಯ ಮಾಧ್ಯಮಗಳಾಗಲಿ, ನಮ್ಮ ಟೈಮ್ಸಾಫಿಂಡಿಯಾದಂತಹ ದೊಡ್ ಪತ್ರಿಕೆಗಳು ನಮ್ ಕಡೆ ತಿರುಗಿಯೂ ನೋಡಲ್ಲ. ನಿಮ್ ಪತ್ರಿಕೆ ಯಾರ ಕಣ್ಗೂ ಬೀಳಲ್ಲ ಅನ್ನೋ ಗ್ಯಾರಂಟಿ ಇರೋದ್ರಿಂದ ನಾನು ಕನ್ನಡದಲ್ಲಿ ಮಾತಾಡ್ತಿದೀನಿ.

ನ.ಸಾ: ಇದು ತಪ್ಪಲ್ಲವಾ ಮೇಡಂ? ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಕನ್ನಡದ ಜನರ ಪ್ರೀತಿಗೆ ಪಾತ್ರರಾಗಿ ಕನ್ನಡದ ಬಗ್ಗೆ ಹೀಗೆ ಕೇವಲವಾಗಿ ಮಾತನಾಡೋದು ತಪ್ಪಲ್ಲವಾ? ನೋಡಿ ಆ ಗಾಂಧಿಯವರು ಬೇರೆ ರಾಜ್ಯದವರಾದರೂ ಕನ್ನಡ ಮಾತನಾಡೋದಕ್ಕೆ ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.

ಬ.ತಾ: ಯಾವುದು ತಪ್ಪು? ಹುಟ್ಟುತ್ತಿದ್ದಂತೆಯೇ ಮಗುವಿಗೆ ಇಂಗ್ಲೀಷಿನಲ್ಲಿ ಅಳುವುದನ್ನು ಕಲಿಸುತ್ತಿರುವುದಾ? ತಮ್ಮೆಲ್ಲಾ ಪರಿಶ್ರಮವನ್ನು ಹಾಕಿ ಕನ್ನಡದ ಶಾಲೆಗಳಿಗೆ ಯಾವ ಪೋಷಕರು ತಮ್ಮ ಮಕ್ಕಳನ್ನು ಕಳಿಸಲು ಹೆದರುವಂತೆ ಮಾಡುವುದರಲ್ಲಿ ಯಶಸ್ವಿಯಾದ ರಾಜಕಾರಣಿಗಳು ಮಾಡುತ್ತಿರುವುದಾ? ಅಥವಾ ಹೊಟ್ಟೆ ಪಾಡಿಗಾಗಿ ನಮ್ಮಂಥವರು ಇಂಗ್ಲೀಷಿನ ಹಿಂದೆ ಬಿದ್ದದ್ದಾ?

ಆ ಗಾಂಧಿಗೆ ಕನ್ನಡ ಚಿತ್ರರಂಗವೇ ಕಡೆಯ ರೆಫ್ಯೂಜು. ಅದಕ್ಕೇ ಮೂರು ವರ್ಷಗಳಿಂದ ಹರಕು ಮುರಕು ಕನ್ನಡ ಮಾತಾಡ್ತಾ ಇರೋದು. ನನ್ನಂತಹ ನಟಿಗೆ ದೇಶದಾದ್ಯಂತ ಬೇಡಿಕೆ ಇದೆ, ನನಗೆ ಆ ಗಿಮಿಕ್ಕುಗಳ ಆವಶ್ಯಕತೆ ಇಲ್ಲ.

ನ.ಸಾ: ಹೋಗಲಿ ಬಿಡಿ, ನೀವು ಚಿತ್ರರಂಗಕ್ಕೆ ಬಂದದ್ದು ಹೇಗೆ ತಿಳಿಸಿ. ನೀವಿನ್ನೂ ಪದವಿ ವಿದ್ಯಾರ್ಥಿ, ಸಿನೆಮಾ ರಂಗ ನಿಮ್ಮನ್ನು ಸೆಳೆದದ್ದು ಏತಕ್ಕೆ?

ಬ.ತಾ: ನಾನು ಸಿನೆಮಾ ನಟಿಯಾಗಬೇಕು ಎಂದು ಕನಸೂ ಕಂಡಿರಲಿಲ್ಲ. ಒಂದು ಒಳ್ಳೆಯ ಕೆಲಸ ಪಡೆದು ಒಳ್ಳೆ ಹಣ ಸಂಪಾದನೆ ಮಾಡಬೇಕು, ಜನಪ್ರಿಯಳಾಗಬೇಕು ಎಂಬುದು ನನ್ನ ಕನಸಾಗಿತ್ತು.

ಆಕಸ್ಮಿಕವಾಗಿ ನನಗೆ ಸಿನೆಮಾ ರಂಗಕ್ಕೆ ಬರುವ ಅವಕಾಶ ಸಿಕ್ಕಿತು. ನನ್ನ ಕನಸು ಇಲ್ಲೇ ಇಷ್ಟು ಸುಲಭವಾಗಿ ಈಡೇರುವಾಗ ಓದುವ ಕಷ್ಟ ಯಾತಕ್ಕೆ ತೆಗೆದುಕೊಳ್ಳಬೇಕು ಅನ್ನಿಸಿತು ಅದಕ್ಕೇ ಸಿನೆಮಾ ರಂಗಕ್ಕೆ ಬಂದು ಬಿಟ್ಟೆ.

ನ.ಸಾ: ಕನಸು ಈಡೇರುವುದು ಎಂದರೇನು ಮೇಡಂ? ನಾಲ್ಕೈದು ಚಿತ್ರಗಳಲ್ಲಿ ಪಡ್ಡೆಗಳ ನಿದ್ದೆಗೆಡಿಸಿ ಜನಪ್ರಿಯರಾಗಿ, ಹಣ ಮಾಡಿಕೊಂಡು ದೊಡ್ಡ ಉದ್ಯಮಿಯನ್ನೋ, ಪ್ರೊಡ್ಯೂಸರನ್ನೋ ಮದುವೆಯಾಗಿ ಸೆಟಲ್ ಆಗುವುದಾ?

ಬ.ತಾ: ಒಂದು ರೀತಿಯಲ್ಲಿ ಹಾಗೆಯೇ.

ನ.ಸಾ: ಮೇಡಂ ನಿಮ್ಮ ಮೊದಲ ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯಾಗಿ ಕಂಡ ನೀವು ಎರಡನೆಯ ಸಿನೆಮಾದಲ್ಲಿ ಗ್ಲಾಮರ್ ಬಾಂಬ್ ಆಗಿದ್ದು ಏಕೆ? ಇಷ್ಟು ಮೈಚಳಿ ಬಿಟ್ಟು ನಟಿಸಿದ್ದು ಏಕೆಂದು ತಿಳಿಯಬಹುದೇ?

(ಇನ್ನೂ ಇದೆ)

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

24 ಫೆಬ್ರ

(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ ಮಾಡಿದ್ದಾರೆ: ‘ನುಂಗ್ಲಿ’. ವಿಪರೀತ ಮಿತಭಾಷಿ ಹಾಗೂ ಮೌನಿಯಾದ ಚೂರಿಯವರ ವಿಶೇಷ ಸಂದರ್ಶನ ನಗೆ ನಗಾರಿಗಾಗಿ ಮಾಡಿರುವುದು ನಗೆ ಸಾಮ್ರಾಟರ ಆಲ್ಟರ್ ಈಗೋ)

ನಗೆ ಸಾಮ್ರಾಟ್: ಹೆಲೋ ಚೂರಿಯವರೇ ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು.

ಚೂರಿ: ನಾನ್ಯಾರು… ನಾನ್ಯಾರು… ನಾನ್ಯಾರು…

ನಗೆ ಸಾಮ್ರಾಟ್: ಹೌದು, ಹೌದು. ನೀವು ಮೊದಲ ಸಿನೆಮಾ ‘ಮುದಿಯಾ’ ಮಾಡಿದಾಗ ಜನರು ಹೀಗೇ ಕೇಳಿದ್ದರು. ‘ಇವನ್ಯಾರು … ಇವನ್ಯಾರು…’ ಎಂದು. ಅದ್ನ ನೆನಪಿಸಿಕೊಳ್ತಿದೀರಾ?

ಚೂರಿ: ಇಲ್ಲ. ನನ್ನೇ ನಾನು ಆಗಾಗ ಹಿಂಗೆ ಪ್ರಶ್ನೆ ಮಾಡ್ಕೋತಿರ್ತೀನಿ. ಉತ್ತರ ಸಿಗದೆ ಇನ್ನೇನು ನನ್ನ ತಲೆ ಕೆಟ್ಟು ಹೋಗುತ್ತೆ ಅಂದಾಗ ಸಿನೆಮಾ ಮಾಡಿಬಿಡ್ತೀನಿ ಅದೇ ಹುಳ ಬಿಟ್ಟು. ಜನರಿಗೆ ನನ್ನ ತಲೆ ನೋವು ರವಾನಿಸಿಬಿಡ್ತೀನಿ.

ನ.ಸಾ: ನಿಮ್ಮ ಮೊದಲ ಸಿನೆಮಾ ‘ಮುದಿಯಾ’ದಲ್ಲಿ ಸಾವು, ಗೋರಿ ಎಂದೆಲ್ಲಾ ದೊಡ್ಡ ದೊಡ್ಡ ಪದಗಳನ್ನ ಬಳಸಿದ್ರಿ. ಜೊತೆಗೆ ಕ್ರೌರ್ಯವನ್ನು ಫೇರ್ ಅಂಡ್ ಲವ್ಲಿ, ಮೇಕಪ್ಪು ಇಲ್ಲದೆ ಹಸಿಹಸಿಯಾಗಿ ತೋರಿಸಿದ್ರಿ.

ಚೂರಿ: ಹೌದು, ಕ್ರೌರ್ಯ ಅನ್ನೋದು ಪ್ರತಿಯೊಬ್ಬನಲ್ಲೂ ಇದೆ. ಅದಕ್ಕೆ ವೈಭವೀಕರಣ ನೀಡಬಾರದು. ಹಸಿ ಹಸಿಯಾಗಿ ಹಾಗೇ ತೋರಿಸ್ಬೇಕು. ಹಸಿ ತರಕಾರಿ ಹೇಗೆ ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು.

ನ.ಸಾ: ನಿಮ್ಮ ಎರಡನೆಯ ಚಿತ್ರ ‘ಲವ್ ಲೆಟರ್’ ನಲ್ಲಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿದ್ರಿ. ನಿಮ್ಮ ಹಸಿ ಹಸಿತನ ಹಾಗೂ ಹುಸಿತನಗಳೆಲ್ಲದರೆ ಜೊತೆಗೆ ಕುಡಿತವೆಂಬ ದುಶ್ಚಟವನ್ನು ಎದುರಿಸುವ ಧೈರ್ಯ ಮಾಡಿದ್ರಿ. ಆದರೆ ನಿಮ್ಮ ಆ ಸಿನೆಮಾ ಹೀನಾಯವಾಗಿ ಸೋತಿತು. ನೀವು ಕುಡಿತದ ಬಗ್ಗೆ ಸಿನೆಮಾ ಮಾಡಲು ಹೊರಟಿದ್ದೇ ಅದರ ಸೋಲಿಗೆ ಕಾರಣ ಎನ್ನಬಹುದೇ? 

ಚೂರಿ: ಇಲ್ಲ. ಸಿನೆಮಾ ನಿಜವಾಗ್ಲೂ ಚೆನ್ನಾಗೇ ಇತ್ತು ಆದ್ರೆ ಪ್ರೇಕ್ಷಕರು ಸಿನೆಮಾ ನೋಡಲಿಲ್ಲ ಅಷ್ಟೇ. ಪ್ರೇಕ್ಷಕರು ನೋಡಲಿಲ್ಲ ಎಂದ ಮಾತ್ರಕ್ಕೆ ಸಿನೆಮಾ ಸೋಲಲ್ಲ. ಕುಡಿತದ ಬಗ್ಗೆ ಸಿನೆಮಾ ಮಾಡಿದ್ದು ಸೋಲಿಗೆ ಕಾರಣ ಅಂತ ಹ್ಯಾಗೆ ಹೇಳ್ತೀರಿ?

ನ.ಸಾ: ನೋಡ್ರಿ ಸಿನೆಮಾ ನೋಡಲು ಥಿಯೇಟರಿಗೆ ಬರುವ ಮಂದಿಯಲ್ಲಿ ಬಹುಪಾಲು ಗಂಡಸರದು. ಅವರು ಸಿನೆಮಾ ನೋಡಲು ಬರುತ್ತಾರೆ ಇಲ್ಲವೇ ತಮ್ಮ ಅಥವಾ ಇನ್ನೊಬ್ಬರ ಹೆಂಡತಿಯರಿಗೆ, ಮಕ್ಕಳಿಗೆ ಸಿನೆಮಾ ತೋರಿಸಲು ಬರುತ್ತಾರೆ. ಕಾಲೇಜು ಬಂಕ್ ಮಾಡಿ, ಗೆಳೆಯರ ಗುಂಪು ಸಂಪಾದಿಸಿ, ಪಾಕೆಟ್ ಮನಿಯ ನೆರವಿನಿಂದ ಸಿನೆಮಾ ಥಿಯೇಟರಿಗೆ ಲಗ್ಗೆ ಇಡುವ ಪಡ್ಡೆಗಳನ್ನು ಬಿಟ್ಟರೆ ಇವರದೇ ಮೆಜಾರಿಟಿ. ಅಲ್ಲದೇ ಇವರು ಸಂಜೆಯಾಗುತ್ತಿದ್ದ ಹಾಗೆ ‘ತೀರ್ಥ ರೂಪ’ ರಾಗುವಂಥವರು. ಅವರ ‘ಮದುಬನದ’ ಸವಿಯನ್ನು ಕೀಳು ಎಂದು ತೋರಿಸಿದ ಸಿನೆಮಾಗೆ ಅವರು ಯಾಕೆ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ? ರಾಜಕಾರಣಗಳು ತಮ್ಮ ಹೆಂಡತಿ ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯನವರ ನಾಟಕಕ್ಕೆ ಕಳುಹಿಸಿದ ಹಾಗೆ ಇದು!

ಚೂರಿ: ಹಾಗೋ, ಅದಕ್ಕೆ ನಾನು ಈ ಸಿನೆಮಾದಲ್ಲಿ ಹಳೆಯ ಪದ್ಧತಿಯನ್ನೆಲ್ಲಾ ಬಿಟ್ಟು ಹೊಸ ಸಾಹಸಕ್ಕೆ ಕೈ ಹಾಕಿರುವೆ.

ನ.ಸಾ: ಏನದು ಸಾರ್?

ಚೂರಿ: ಕುಡಿತದ ಕಾನ್ಸೆಪ್ಟು ಇಟ್ಟುಕೊಂಡಿದ್ದಕ್ಕೆ ಗಂಡಸರು ಥಿಯೇಟರಿಗೆ ಬರುವ ಮನಸ್ಸು ಮಾಡಲಿಲ್ಲ, ಪಡ್ಡೆಗಳು, ಹೆಣ್ಣುಮಕ್ಕಳಿಗೆ ಧೈರ್ಯ ಸಾಲಲಿಲ್ಲ ಅಂದ್ರಲ್ಲ, ಅದಕ್ಕೆ ಈ ಬಾರಿ ವಿಭಿನ್ನವಾಗಿ ಸಿನೆಮಾ ಮಾಡಿರುವೆ. ಮದರ್ ಸೆಂಟಿಮೆಂಟು ಇಟ್ರೆ ಕಾಲೇಜು ಹುಡುಗೀರು ನಿದ್ದೆ ಮಾಡ್ತಾರೆ, ಅಕ್ಕ ತಂಗಿ ಕಥೆ ಮಾಡಿದ್ರೆ ಹುಡುಗರು ಥಿಯೇಟರ್‌ ಕಡೆಗೆ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಪಡ್ಡೆಗಳಿಗೆ ಮಾಸ್ ಸಿನೆಮಾ ಮಾಡಿದ್ರೆ ಎಲೈಟ್ ಪತ್ರಕರ್ತರು, ಟಿವಿಯವರು ಮೂಸಿಯೂ ನೋಡಲ್ಲ. ಸಾಮಾಜಿಕ ಕಳಕಳಿಯ ಕಥೆ ಇಟ್ಟುಕೊಂಡು ಸಿನೆಮಾ ಮಾಡಿದ್ರೆ ಸಮಾಜವೇ ನೋಡಲ್ಲ. ಅದ್ಕೆ ಈ ಬಾರಿ ಎಲ್ಲಾ ವರ್ಗಕ್ಕೆ ತಲುಪುವ ಸಿನೆಮಾ ಮಾಡಿದ್ದೇನೆ.

ನ.ಸಾ: ಹೌದು, ನಿಮ್ಮ ‘ನುಂಗ್ಲಿ’ ವಿಶಿಷ್ಟವಾಗೇ ಇದೆ. ಆದ್ರೆ ಇದರ ವಿಶಿಷ್ಟತೆ ಏನು?

ಚೂರಿ: ಕಳೆದ ಸಿನೆಮಾದಲ್ಲಿ ಮಾಡಿದ ತಪ್ಪನ್ನು ಇಲ್ಲಿ ತಿದ್ದಿಕೊಂಡಿರುವೆ. ಅಲ್ಲಿ ಸಿನೆಮಾದ ಕಥೆಯೇ ಹಲವರಿಗೆ ಅಪಥ್ಯವಾಯಿತು. ಹೀಗಾಗಿ ಈ ಸಿನೆಮಾದಲ್ಲಿ ಅದರ ಗೋಜಿಗೇ ಹೋಗಿಲ್ಲ. ಅವರಿವರ ಭಾವನೆಗೆ ನೋವುಂಟು ಮಾಡುವ ಹಕ್ಕು ನಮಗೆಲ್ಲಿದೆಯಲ್ವಾ ಸಾರ್? ಹಾಗಾಗಿ ಈ ಸಿನೆಮಾದಲ್ಲಿ ಕಥೆಯನ್ನೇ ಬಳಸಿಲ್ಲ ನಾವು. ಇದು ಇತ್ತೀಚೆಗೆ ಪ್ರಸಿದ್ಧವಾಗುತ್ತಿರುವ ತಂತ್ರ. ನಾವೂ ಇದನ್ನು ಬಳಸಿದ್ದೀವಿ.

ನ.ಸಾ: ಹೌದು, ಹೌದು, ಸೋಪೇ ಇಲ್ಲದ ಸೋಪಿನ ಡಬ್ಬಿ, ಹಾಲೇ ಇಲ್ಲದ ಹಾಲಿನ ಪಾಕೆಟು, ಅಕ್ಕಿಯೇ ಇಲ್ಲದ ಅಕ್ಕಿಯ ಮೂಟೆ, ಮೆದುಳೇ ಇಲ್ಲದ ತಲೆ ಬುರುಡೆಗಳು ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಕಥೆಯಿಲ್ಲದ ಸಿನೆಮಾ ತಂತ್ರ ಯಶಸ್ವಿಯಾಗಬಹುದು. ಅಂದ ಹಾಗೆ ನಿಮ್ಮ ಈ ತಂತ್ರದ ಮುಂದುವರಿದ ಭಾಗ ಏನು? ಪ್ರೇಕ್ಷಕರೇ ಇಲ್ಲದ ನೂರು ದಿನವಾ?

ಚೂರಿ: ಹೌದು, ಆ ತಂತ್ರವನ್ನು ಬಳಸಬೇಕು. ಈಗಾಗಲೇ ಕೆಲವರು ಆಕಾಶದ ವೀರಗನ್ನಡಿಗರು ಆ ತಂತ್ರ ಬಳಸಿ ಯಶಸ್ವಿಯಾಗಿದಾರೆ. ಜನರೇ ಇಲ್ಲದೆಯೂ ಸಿನೆಮಾವನ್ನು ನೂರು ದಿನ ಓಡಿಸುವುದು ಆ ತಂತ್ರ. ಅದನ್ನೂ ಮುಂದಿನ ಸಿನೆಮಾಗಳಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನ.ಸಾ: ‘ಲವ್ ಲೆಟರ್’ ಹಾಗೂ ‘ಮುದಿಯಾ’ದ ಮೂಲಕ ಉತ್ತಮ ಕಳಕಳಿಯನ್ನು ಹೊಂದಿರುವ ನಿರ್ದೇಶಕ ಎಂದು ಹೆಸರು ಮಾಡಿದವರು ನೀವು ಈಗ ಇಂಥ ಸಿನೆಮಾ ಮಾಡಿದ್ದರಿಂದ ನಿಮಗೆ ಏನೂ ಅನ್ನಿಸಲ್ವಾ?

ಚೂರಿ: ನೋಡಿ ನಾನು ನನ್ನ ಪ್ರತಿಭೆಯನ್ನೆಲ್ಲ ಧಾರೆಯೆರೆದು ಲವ್ ಲೆಟರ್ ಸಿನೆಮಾ ಮಾಡಿದೆ. ಜನರು ನೋಡಲಿಲ್ಲ. ತಪ್ಪು ಮಾಡಿದರು. ಅಂಥ ಒಳ್ಳೆಯ ಸಿನೆಮಾವನ್ನು ಅವರು ನೋಡಲಿಲ್ಲ. ಅದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರಿಗೆ ಪನಿಶ್‌ಮೆಂಟ್ ಇರಲೇ ಬೇಕು. ಅದಕ್ಕೆ ಅವ್ರು ಈ ನನ್ನ ‘ನುಂಗ್ಲಿ’ ಸಿನೆಮಾ ನೋಡಬೇಕು. ಜನರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ‘ನುಂಗ್ಲಿ’ ಮಾಡಿರುವೆ.

ನ.ಸಾ: ಅದೇನೋ ಸರಿ ಸಾರ್ ಆದರೆ ನಿಮ್ ಈ ಸಿನೆಮಾದಲ್ಲಿ ಸೊಂಟದ ಕೆಳಗಿನ ಡೈಲಾಗುಗಳೇ ಜಾಸ್ತಿಯಂತೆ.

ಚೂರಿ: ಯಾರ್ರಿ ಹೇಳಿದ್ದು? ಸೊಂಟದ ಕೆಳಗಿನ ಡೈಲಾಗು ಒಂದೂ ಇಲ್ಲ ನಮ್ಮ ಸಿನೆಮಾದಲ್ಲಿ. ಒಂದನ್ನಾದರೂ ತೋರಿಸಿ ಬಿಡಿ ನೋಡೋಣ. ಎಲ್ಲವೂ ಸೊಂಟದ ಮೇಲಿನದ್ದೇ. ಎಲ್ಲರೂ ಬಾಯಲ್ಲಿಯೇ ಡೈಲಾಗು ಹೇಳಿರುವುದು, ಯಾರೂ ಸೊಂಟದ ಕೆಳಗಿಂದ ಡೈಲಾಗು ಹೇಳಿಲ್ಲ. ಸುಮ್ಮನೆ ಆರೋಪ ವಹಿಸಬೇಡಿ, ನೋವಾಗುತ್ತೆ.

ನ.ಸಾ: ಹೋಗ್ಲಿ ಬಿಡಿ ಸರ್. ನಿಮ್ಮ ಮುಂದಿನ ಯೋಜನೆಗಳೇನು ಸರ್? ‘ನುಂಗ್ಲಿ’ಯನ್ನು ಯಾವ ರೀತಿ ಜನರು ರಿಸೀವ್ ಮಾಡಿದ್ದಾರೆ?

ಚೂರಿ: ‘ನುಂಗ್ಲಿ’ಯನ್ನು ಕನರು ಒಪ್ಪಲೇಬೇಕು. ಅವರು ನನ್ನ ‘ಲವ್ ಲೆಟರ್’ ಮಾನ್ಯ ಮಾಡಲಿಲ್ಲವಾದ್ದರಿಂದ ನಾನು ‘ನುಂಗ್ಲಿ’ ಮಾಡಿರುವೆ. ‘ನುಂಗ್ಲಿ’ಯನ್ನು ಜನರು ಒಪ್ಪದಿದ್ದರೆ ಇದಕ್ಕಿಂತಲೂ ಹೆಚ್ಚಿನ ‘ಪ್ರತಿಭೆ’ ವಿನಿಯೋಗಿಸಿ ಜನರಿಗೆ ಶಿಕ್ಷೆ ಕೊಡುವೆ. ಜನರೇ ಆಲೋಚನೆ ಮಾಡಲಿ ಏನು ಮಾಡಬೇಕು ಅಂತ…

ನ.ಸಾ: ಒಟ್ಟಿನಲ್ಲಿ ನಿಮಗೆ ಪ್ರೇಕ್ಷಕರೇ ಪ್ರಭುಗಳು ಅಂದ ಹಾಗಾಯ್ತು. ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು. ಮುಂದಿನ ಸಿನೆಮಾಗೆ ಸೆಕೆಂಡ್ ಹಿರೋ ಪಾರ್ಟ್ ಇದ್ದರೆ ನನಗೆ ಕೊಡಿಸಿ… 

ನಗಾರಿ ರೆಕಮಂಡೇಶನ್ಸ್ 17

3 ಫೆಬ್ರ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

……………………………………

ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ200px-Davidlettermannavy ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು ಇದನ್ನೇ ಉದ್ಯೋಗವಾಗಿ ಪಡೆಯುವಷ್ಟರ ಮಟ್ಟಿಗೆ ಈ ಸಂಪ್ರದಾಯವಿನ್ನೂ ಬೆಳೆದಿಲ್ಲ.

ಐಬಿಎಸ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಗಾಗಿ ಲೇಟ್ ಶೋ ಎಂಬ ಹೆಸರಿನ ತಡರಾತ್ರಿಯ ಕಾರ್ಯಕ್ರಮವನ್ನು ಕಳೆದ ಹದಿನೈದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡೇವಿಡ್ ಮೈಕೇಲ್ ಲೆಟರ್‌ಮನ್ ಅಮೇರಿಕಾದಲ್ಲಿ ಹೆಸರುವಾಸಿ. ಈತನ ಟಾಕ್ ಶೋನಲ್ಲಿ ಕಾಮಿಡಿಯೇ ಪ್ರಧಾನವಾದರೂ ಒಂದು ಸಾಂಪ್ರದಾಯಿಕ ಟಿವಿ ಕಾರ್ಯಕ್ರಮಕ್ಕೆ ಬೇಕಾದ ಅಂಶಗಳನ್ನೆಲ್ಲಾ ಈ ಕಾರ್ಯಕ್ರಮ ಹೊಂದಿರುತ್ತದೆ.

ಲೆಟರ್‌ಮನ್‌ನ ಲೇಟ್ ನೈಟ್ ಶೋಗೆ ಭಾರತದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಆಹ್ವಾನಿತಳಾಗಿದ್ದಳು. ಆ ಸಂದರ್ಶನದಲ್ಲಿ ಲೆಟರ್‌ಮನ್‌ನ ಮೊನಚಾದ, ಕಾಲೆಳೆಯುವ ಪ್ರಶ್ನೆಗಳಿಗೆ ಐಶ್ವರ್ಯ ಸಹ ಪ್ರಖರವಾಗಿಯೇ ಉತ್ತರಿಸಿದಳು.

ಭಾರತದ ಬಗ್ಗೆ ತನ್ನ ಅಜ್ಞಾನವನ್ನು ಪ್ರದರ್ಶಿಸುತ್ತಾ ಲೆಟರ್‌ಮನ್ ಐಶ್ವರ್ಯಳನ್ನು ಹೀಗೆ ಪ್ರಶ್ನಿಸುತ್ತಾನೆ, “ನಿಮ್ಮ ದೇಶದಲ್ಲಿ ಮಕ್ಕಳು ತಂದೆ ತಾಯಿಯ ಜೊತೆಗೇ ಇರುತ್ತಾರಾ?”
ಅದಕ್ಕೆ ಐಶ್ವರ್ಯ ಕೊಡುವ ಮಾರ್ಮಿಕ ಉತ್ತರ, “ಹೌದು, ನಮ್ಮ ದೇಶದಲ್ಲಿ ತಮ್ಮ ಅಪ್ಪ ಅಮ್ಮನೊಂದಿಗೆ ಮಾತಾಡಲು, ಊಟ ಮಾಡಲು ಮಕ್ಕಳು ಅಪಾಯಿಂಟ್ ಮೆಂಟ್ ಪಡೆಯುವ ಆವಶ್ಯಕತೆಯಿಲ್ಲ!”

ಈ ಅಪರೂಪದ ಸಂದರ್ಶನ ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

12 ನವೆಂ

(ಇಲ್ಲಿಂದ ಮುಂದುವರೆದದ್ದು)

ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ ಹೇಗೆ ಬೆಳೆಯಲು ಸಾಧ್ಯ?

ಧರ್ಮಶ್ರೀ: ದೇವರು ಇದ್ದಾನೆ ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ಸಾಕ್ಷಾತ್ ಆ ಪರಮಾತ್ಮನೇ ತಾನು ಈ ಜಗತ್ತನ್ನು ಸೃಷ್ಟಿಸಿದ್ದೇನೆ, ತಾನೇ ಈ ಜಗತ್ತನ್ನು ನಡೆಸುವವನು, ನಾಶ ಮಾಡುವವನು ಎಂದು ಹೇಳಿಲ್ಲವೇ? ಆತನಿಂದ ಬಂದ ಧಾರ್ಮಿಕ ಗ್ರಂಥಗಳಂತಹ ಸಾಕ್ಷಿಗಳು ಸಾಕಾಗುವುದಿಲ್ಲವೇ? ವೈಜ್ಞಾನಿಕ ಮನೋಭಾವ ಎಂಬ ಹೆಸರಿನಲ್ಲಿ ಸೈತಾನ ಆಳ್ವಿಕೆ ನಡೆಸುತ್ತಾನೆ. ಸಂಶಯ, ದ್ವೇಷಗಳು ಬೆಳೆಯುವುದು ಈ ಪ್ರಶ್ನಿಸುವ ಮನೋಭಾವದಿಂದಲೇ. ಹಿಂದೆ ಎಷ್ಟು ಒಟ್ಟು ಕುಟುಂಬಗಳಿದ್ದವು, ಎಷ್ಟು ಶಾಂತಿಯಿತ್ತು ಈಗ ಎಲ್ಲಿ ನೋಡಿದರೂ ಕೌಟುಂಬಿಕ ಕಲಹ, ಅಶಾಂತಿ. ಇದಕ್ಕೆಲ್ಲಾ ಕಾರಣ ಜನರು ಧರ್ಮ ಗ್ರಂಥಗಳಲ್ಲಿ ದೇವರು ಕೊಟ್ಟ ಆಜ್ಞೆಗಳನ್ನು ಧಿಕ್ಕರಿಸಿ ಪ್ರಶ್ನೆ ಮಾಡಲು ಶುರು ಮಾಡಿದ್ದೇ ಕಾರಣ.
ನಮ್ಮ ಜಗತ್ತು ಮಾಯೆಯಿಂದ ಕೂಡಿದ್ದು. ಪ್ರತಿಯೊಂದೂ ಇಂದ್ರಿಯಗಳ ವಿಕೃತಿಯಿಂದ ಜನಿಸಿದ್ದು. ಈ ಭೂಮಿಯ ಮೇಲಿನ ಬದುಕು ನೀರ ಮೇಲಿನ ಗುಳ್ಳೆ ಇದ್ದಂತೆ. ಇದನ್ನು ನೆಚ್ಚಿಕೊಂಡರೆ ಲಾಭವಿಲ್ಲ. ಯಾರೂ ಶಾಶ್ವತವಲ್ಲ ಇಲ್ಲಿ. ಹೀಗಿರುವಾಗ ಇರುವ ನಾಲ್ಕು ದಿನವನ್ನು ದೇವರ ನಾಮ ಸ್ಮರಣೆ ಮಾಡುತ್ತಾ ಆತನ ಉಪಾಸನೆ ಮಾಡುತ್ತಾ ಕಳೆಯುವುದು ಬಿಟ್ಟು ಬೇರೆ ಆಲೋಚನೆಗಳಲ್ಲಿ ಸಮಯ ಕಳೆಯುವುದು ದೈವ ದ್ರೋಹ.

ನ.ಸಾ: ಹಾಗಾದರೆ ಚಂದ್ರಯಾನ ಕಾರ್ಯಕ್ರಮ ದೈವದ್ರೋಹದ್ದು ಎನ್ನುವಿರಿ…

ಧರ್ಮಶ್ರೀ: ಅಷ್ಟೇ ಅಲ್ಲ ಅದು ದೇಶ ದ್ರೋಹ ಸಹ. ನಮ್ಮ ದೇಶದಲ್ಲಿ ಕೋಟಿ ಕೋಟಿ ಜನರಿಗೆ ತಿನ್ನುವುದಕ್ಕೆ ಕೂಳಿಲ್ಲ. ಭೂಮಿಯ ಮೇಲೆ ನಾಲ್ಕಂಗುಲ ಜಾಗ ಸಿಕ್ಕುವುದಿಲ್ಲ. ರೈತರಿಗೆ ವ್ಯವಸಾಯಕ್ಕೆ ಸರಿಯಾಗಿ ನೀರು ಸಿಕ್ಕುವುದಿಲ್ಲ, ಪಂಪ್ ಸೆಟ್‌ಗಳಿಗೆ ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ ಹೀಗಿರುವಾಗ ಚಂದ್ರನ ಮೇಲೆ ಹೋಗಿ ಬಂದ್ವಿ ಅಂತ ಸಂಭ್ರಮ ಪಡೋದು ವಿವೇಕವೇ? ಅದಕ್ಕೆ ನೂರಾರು ಕೋಟಿ ಹಣ ಚೆಲ್ಲುವುದು ಮೂರ್ಖತನವಲ್ಲದೆ ಮತ್ತೇನು? ಅದೇ ಹಣದಲ್ಲಿ ಭಾರತದ ಎಷ್ಟೋ ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದು. ಎಷ್ಟೋ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬಹುದು. ನಿನಗೆ ಹೊಟ್ಟೆ ಚುರುಗುಟ್ಟುವಾಗ ದೂರದ ಚಂದ್ರನನ್ನು ನೋಡಿ ಸಂತೋಷ ಪಡುತ್ತೀಯೋ ಇಲ್ಲ ಹೊಟ್ಟೆಗೆ ಕೂಳು ಹಾಕಿಕೊಳ್ಳುತ್ತೀಯೋ? ಹೊಟ್ಟೆ ಮಾತನ್ನು ಕೇಳುತ್ತೀಯ ಅಲ್ಲವೇ? ಹೀಗಿರುವಾಗ ನಮಗೇಕೆ ಬೇಕು ಚಂದ್ರನ ಉಸಾಬರಿ. ಇಷ್ಟಕ್ಕೂ ಇಡೀ ವಿಶ್ವವೇ ಮಾಯೆಯಾಗಿರುವಾಗ ಚಂದ್ರನೆಂಬ ಮಾಯೆಯ ಬಗ್ಗೆ ತಿಳಿದು ಏನು ಮಾಡುವುದು? ಅದರ ಮೇಲೆ ನೀರಿದ್ದರೆಷ್ಟು, ಜೀವಿಗಳಿದ್ದರೆಷ್ಟು? ಅದರ ಜ್ಞಾನದಿಂದ ನಮ್ಮ ಕರ್ಮ ಫಲದಲ್ಲಿ ಯಾವ ಬದಲಾವಣೆಯೂ ಆಗದು. ಇವೆಲ್ಲಾ ನಮ್ಮನ್ನು ಭಗವಂತನ ನಾಮ ಸ್ಮರಣೆಯಿಂದ ವಿಮುಖವಾಗಿಸುವ ಸಂಗತಿಗಳು ಅಷ್ಟೇ!

ನ.ಸಾ: ಇಸ್ರೋದವರು ಹೇಳುವ ಪ್ರಕಾರ ಅವರು ಮಾಡಿರುವ ಖರ್ಚು ಬೇರೆ ದೇಶಗಳ ಖರ್ಚಿಗಿಂತ ತುಂಬಾ ಕಡಿಮೆ. ಅಲ್ಲದೆ ಪ್ರತಿವರ್ಷ ಸರ್ಕಾರ ಬಿಡುಗಡೆ ಮಾಡುವ ಅನುದಾನದ ಹಣದಲ್ಲೇ ಈ ಯೋಜನೆಯನ್ನು ನಡೆಸುತ್ತಿದೆ. ಇದರಲ್ಲಿ ತಪ್ಪೇನು? ಅಲ್ಲದೆ ಮನುಷ್ಯ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಬದುಕಿಲ್ಲ. ಆತನ ಬದುಕಿಗೆ ಅರ್ಥ ಸಿಕ್ಕುವುದು ಕನಸು ಕಾಣುವುದರಲ್ಲಿ, ಕನಸುಗಳನ್ನು ಬೆನ್ನಟ್ಟಿ ಸತ್ಯ ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ. ಚಂದ್ರನನ್ನು ಮುಟ್ಟುವಷ್ಟು ನಾವು ವೈಜ್ಞಾನಿಕವಾಗಿ ಮುಂದುವರೆದಿದ್ದೇವೆ ಎಂಬುದು ನಮ್ಮ ದೇಶದ ಯುವಕರಿಗೆ ಸ್ಪೂರ್ತಿಯ ವಿಷಯವಾಗುವುದಿಲ್ಲವೇ? ಹೆಚ್ಚೆಚ್ಚು ಮಂದಿ ಮೂಢ ನಂಬಿಕೆಗಳಿಂದ ಮುಕ್ತರಾಗಿ ಸ್ವತಂತ್ರ ಚಿಂತನೆಯನ್ನು ಅಳವಡಿಸಿಕೊಳ್ಳುವಲ್ಲಿ ಸಫಲರಾಗುವುದಿಲ್ಲವೇ? ಸ್ವಾಮೀಜಿಗಳು ಇಂಥ ವೈಜ್ಞಾನಿಕ ಅನ್ವೇಷಣಗಳನ್ನು ವಿರೋಧಿಸುವುದರಲ್ಲಿ ಪಟ್ಟಭದ್ರ ಹಿತಾಸಕ್ತಿ ತೋರುತ್ತಾರೆ. ಅವರಿಗೆ ಜನರು ಜ್ಞಾನಿಗಳಾಗುವುದು ಬೇಡ, ಅವರು ಸ್ವತಂತ್ರ ಚಿಂತನೆಯನ್ನು ಬೆಳೆಸಿಕೊಳ್ಳುವುದು ಬೇಕಿಲ್ಲ, ಪ್ರಶ್ನಿಸುವ ಮನೋಭಾವ ಗಳಿಸುವುದು ನಿಮಗೆ ಬೇಕಿಲ್ಲ. ಇದರಿಂದ ನಿಮ್ಮ ಸಾರ್ವಭೌಮತ್ವಕ್ಕೆ, ಹಿರಿಮೆಗೆ, ಸಂಪತ್ತಿಗೆ, ಅಧಿಕಾರಕ್ಕೆ ಸಂಚಕಾರ ಬರುತ್ತದೆ. ಎಂದು ನಾನು ಹೇಳುತ್ತಿಲ್ಲ, ಪ್ರಗತಿಪರರು, ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಇದಕ್ಕೆ ಏನಂತೀರಿ?

ಧರ್ಮಶ್ರೀ: ನಮ್ಮಂತಹ ತಪಸ್ವಿಗಳನ್ನು, ಮುಮುಕ್ಷುಗಳನ್ನು, ಧರ್ಮ ರಕ್ಷಕರನ್ನು ನಿಂದಿಸುವವರು ರೌರವ ನರಕದಲ್ಲಿ ಬೇಯುತ್ತಾರೆ. ನಮ್ಮ ಶಾಪ ಅವರನ್ನು ನಾಶ ಮಾಡದೆ ಬಿಡುವುದಿಲ್ಲ. ದೇವರಿಂದ ಆಯ್ಕೆಯಾಗಿರುವ ನಮ್ಮ ಸಾರ್ವಭೌಮತ್ವವನ್ನು ಪ್ರಶ್ನಿಸುವುದು ಸ್ವತಃ ಆ ದೇವರನ್ನೇ ಪ್ರಶ್ನಿಸಿದಂತೆ. ಆ ದೇವರನ್ನು ಪ್ರಶ್ನಿಸುವ, ನಿಂದಿಸುವ ಉದ್ಧಟತನವನ್ನು ತೋರುವವರು ಬದುಕುವುದಕ್ಕೆ ಅರ್ಹರಲ್ಲ. ಅವರ ಪಟ್ಟಿಯನ್ನು ಮಾಡಿ ಒಬ್ಬೊಬ್ಬರ ತಲೆಯನ್ನು ಎಗರಿಸಲು ಬಹುಮಾನ ಗೊತ್ತು ಮಾಡಿ ಫತ್ವಾ ಹೊರಡಿಸಲಾಗುವುದು. ಇನ್ನು ಒಂದೇ ಒಂದು ಮಾತು ಅವರ ಬಗ್ಗೆ ಬಂದರೆ ನಿನ್ನ ತಲೆಗೂ ಸಂಚಕಾರ ಒದಗುವುದು! ಎಚ್ಚರ!

ನ.ಸಾ: ಕ್ಷಮಿಸಬೇಕು ಮಹಾಸ್ವಾಮಿ. ತಲೆ ಎಗರಿಸಿಕೊಳ್ಳುವ ಅಪರಾಧವನ್ನು ನಾನೇನು ಮಾಡಿಲ್ಲ. ಇದುವರೆಗೂ ನಾನು ಯಾವ ಮಾನವೀಯ ಮೌಲ್ಯಕ್ಕೂ ಚ್ಯುತಿ ಬರದಂತೆ ನಡೆದುಕೊಂಡಿಲ್ಲ. ಕೈಲಾದ ಮಟ್ಟಿಗೆ ಜನಸೇವೆ ಮಾಡಿಕೊಂಡು ನಿಸ್ವಾರ್ಥ ಬದುಕನ್ನು ಬದುಕಿದ್ದೇನೆ. ನಾನು ನನ್ನ ನಂಬಿಕೆಯ ಪ್ರತಿಪಾದನೆಗೋಸ್ಕರ ಇದುವರೆಗೂ ಒಂದು ಚಿಕ್ಕ ಇರುವೆಯನ್ನೂ ಸಾಯಿಸಿಲ್ಲ. ನನ್ನ ದೇವರನ್ನು ಒಪ್ಪದಿದ್ದಕ್ಕಾಗಿ ನಾನು ಒಂದು ನಾಯಿಗೂ ಕಲ್ಲು ಬೀರಿಲ್ಲ. ನನ್ನನ್ನು ಒಪ್ಪದವನನ್ನು ನಾನೆಂದಿಗೂ ಮನಸ್ಸಿನಲ್ಲೂ ನಿಂದಿಸಿಲ್ಲ. ನನಗೆ ಬಹುಶಃ ಆ ನಿಮ್ಮ ದೇವರೂ ನರಕಕ್ಕೆ ಕಳುಹಿಸಲು ಕಾರಣಗಳಿಲ್ಲ.

ಧರ್ಮಶ್ರೀ: ನೀನೆಷ್ಟೇ ಒಳ್ಳೆಯವನಾಗಿರು, ಎಷ್ಟೇ ಜನಾನುರಾಗಿಯಾಗಿರು, ಎಷ್ಟೇ ಪುಣ್ಯಕೆಲಸಗಳನ್ನು ಮಾಡಿರು ದೈವ ನಿಂದನೆಯನ್ನು, ದೇವರ ಪ್ರತಿನಿಧಿಯಾದ ನಮ್ಮ ನಿಂದನೆ ಮಾಡುವುದರಿಂದ ನರಕವಲ್ಲದೆ ಬೇರೆಲ್ಲೂ ನಿನಗೆ ಜಾಗ ಸಿಕ್ಕದು. ನಿನ್ನನ್ನು ಬದುಕಲು ಬಿಡುವುದು ಆ ದೇವರಿಗೂ ಇಷ್ಟವಾಗದು. ಆ ದೇವರ ಇಚ್ಚೆಯನ್ನಷ್ಟು ನಾವು ಪಾಲಿಸುವವರು.
ಇಷ್ಟಕ್ಕೂ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕೆನ್ನುವ ಹಂಬಲ ಮೂರ್ಖತನದ್ದು ಅಲ್ಲವೇ? ಚಂದ್ರನ ಬಗ್ಗೆ ತಿಳಿದು ಆಗಬೇಕಾದದ್ದು ಏನಿದೆ? ಮನುಷ್ಯನಿಗೆ ತನ್ನ ಬಗ್ಗೆಯೇ ಸರಿಯಾಗಿ ತಿಳಿದಿಲ್ಲ. ತನ್ನನ್ನು ತಾನು ಕಂಡುಕೊಳ್ಳುವಲ್ಲಿ ಮನುಷ್ಯ ಸೋತಿದ್ದಾನೆ. ತಾನು ಮೂಳೆ ಮಾಂಸದ ತಡಿಕೆಯಲ್ಲಿರುವ ಆತ್ಮ ಎಂಬುದನ್ನು ಅರಿಯದೆ ತೊಳಲಾಡುತ್ತಿದ್ದಾನೆ. ಇದನ್ನು ಅರಿತುಕೊಳ್ಳುವುದನ್ನು ಬಿಟ್ಟು ಕೋಟಿ ಕೋಟಿ ಹಣ ಚೆಲ್ಲಿ ಚಿಲ್ಲರೆ ಕೆಲಸಗಳನ್ನು ಮಾಡುವುದು ಭಗವಂತನ ಆಶಯಕ್ಕೆ ವಿರುದ್ಧವಾದದ್ದು. ಮನುಷ್ಯ ಆಕಾಶದಲ್ಲಿ ಹಾರಬಾರದು, ಸಮುದ್ರವನ್ನು ದಾಟಬಾರದು ಎಂತಲೇ ಆತನಿಗೆ ರೆಕ್ಕೆಯನ್ನಾಗಲೀ, ಈಜುರೆಕ್ಕೆಯಲ್ಲಾಗಲೀ ದೇವರು ಕೊಡಲಿಲ್ಲ. ಆದರೆ ಮನುಷ್ಯ ಆತನ ಇಚ್ಛೆಯನ್ನರಿಯದೆ ಹಠಮಾರಿ ಮಗುವಿನಂತೆ ಅದರ ವಿರುದ್ಧ ನಡೆದುಕೊಳ್ಳುತ್ತಿದ್ದಾನೆ. ಮನುಷ್ಯನ ಬದುಕು ಇರುವುದು ಅಂತರಂಗದಲ್ಲಿ, ಹಣ, ಪ್ರಾಪಂಚಿಕ ಸುಖಗಳು ಎಲ್ಲವನ್ನೂ ತ್ಯಜಿಸಬೇಕು.

ನ.ಸಾ: ಸ್ವಾಮಿಗಳೇ ಚಂದ್ರಯಾನ ಜುಟ್ಟಿಗೆ ಮಲ್ಲಿಗೆಯಾಗುವುದು ಎಂಬುದನ್ನು ಹಲವರು ಒಪ್ಪುವುದಿಲ್ಲ. ಜ್ಞಾನ ಸಾಕ್ಷಾತ್ಕಾರವೇ ನಮ್ಮ ದೇಶದ ಪರಮ ಪವಿತ್ರ ಆದರ್ಶವಾಗಿರುವಾಗ ಚಂದ್ರನ ಬಗ್ಗೆ ತಿಳಿಯುವುದು ಆ ಆದರ್ಶದೆಡೆಗಿನ ನಡಿಗೆಯೇ ಆಗುತ್ತದೆ. ಒಂದು ಚಂದ್ರಯಾನ ಸಾವಿರಾರು ಮಂದಿಯಲ್ಲಿ ಹೊಸ ಸ್ಪೂರ್ತಿಯನ್ನು, ಜೀವನೋತ್ಸಾಹವನ್ನು ತುಂಬುವುದಾದರೆ ಅದನ್ನ್ ಹಿಯಾಳಿಸುವುದೇಕೆ ಎಂಬುದು ಅವರ ವಾದ. ನಿಮ್ಮ ದೇವರು, ಧರ್ಮ ಗ್ರಂಥಗಳು ಕೊಡಲಾಗದ ಜೀವನ ಮುಖೀ ಧೋರಣೆಯನ್ನು ವೈಜ್ಞಾನಿಕ ಸಾಹಸಗಳು, ಯಶೋಗಾಥೆಗಳು, ಕ್ರಿಕೆಟ್ ಸರಣಿಗಳು ಕೊಡುವುದಾದರೆ ಅವನ್ನು ವಿರೋಧಿಸುವುದೇಕೆ ಎನ್ನುತ್ತಾರೆ.
ಅಲ್ಲದೆ ಹಣದ ವಿಷಯದ ಬಗ್ಗೆ ಅವರು ನಿಮ್ಮ ಬಗ್ಗೆಯೇ ತಕರಾರು ಎತ್ತುತ್ತಾರೆ. ಸರ್ವವನ್ನೂ ಪರಿತ್ಯಾಗ ಮಾಡಿದ ಸಂನ್ಯಾಸಿಗಳಿಗೆ, ಧರ್ಮ ಗುರುಗಳಿಗೆ ಯಾಕೆ ಅಷ್ಟಷ್ಟು ದೊಡ್ಡ ಸಂಸ್ಥೆಗಳ ಒಡೆತನದ ಬಗ್ಗೆ ಆಸಕ್ತಿ? ಓಡಾಡಲು ದುಬಾರಿ ಕಾರುಗಳೇಕೆ? ವೈಭಯುತವಾದ ದೇವಾಲಯಗಳೇಕೆ? ಅಸಲಿಗೆ ದೇವರೆದುರು ಹುಂಡಿ ಇಡುವುದೇ ತಪ್ಪಲ್ಲವೇ? ಎಲ್ಲಿಯ ದೇವರು ಎಲ್ಲಿಯ ಹಣ? ಎಂದು ಕೇಳುತ್ತಾರೆ. ಅಲ್ಲದೇ ಸ್ವಾಮಿಗಳ ವಿಲಾಸಗಳ ಬಗ್ಗೆಯೂ ಅಲ್ಲಲ್ಲಿ ಗುಸುಗುಸು ದಟ್ಟವಾಗುತ್ತಿದೆ.

ಧರ್ಮಶ್ರೀ: ಖಬರ್‌ದಾರ್! ಇನ್ನೊಂದು ಪದ ಉಸುರಿದರೆ ನಿನ್ನ ಜೀವವನ್ನು ಇಲ್ಲವಾಗಿಸಲು ಭಗವಂತನ ಅಪ್ಪಣೆಯಾಗಿದೆ. ಯಾರಲ್ಲಿ, ಈ ಕ್ಷುದ್ರ ಜಂತುವನ್ನು ಆ ಭಗವಂತ ಭಸ್ಮ ಮಾಡುವ ಮೊದಲು ಇಲ್ಲಿಂದ ಎತ್ತಿ ಹೊರಗೆ ಹಾಕು. ಇನ್ನೆಂದೂ ಈತನನ್ನು ನಮ್ಮ ಸಮೀಪಕ್ಕೆ ಬರಲು ಬಿಡಬೇಡಿ…

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

11 ನವೆಂ

ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಟರನ್ನು ದೇವಲೋಕದಿಂದ ಒದ್ದೋಡಿಸಿದಾಗ ಅವರು ನಗೆ ನಗಾರಿಯ ಡ್ರೈವರ್ ಸೀಟಿಗೆ ಬಂದು ಕುಳಿತು ತಮ್ಮ alter ego ಎಲ್ಲಿ ಎಂದು ಹುಡುಕಿದರು. ಆತ ಎಲ್ಲೂ ಕಾಣಲಿಲ್ಲ. ಕಡೆಗೆ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಅಟ್ಟಿ ಆತನ ಇಹಪರಗಳನ್ನು ಪತ್ತೆ ಹಚ್ಚಲು ಓಡಿಸಿದರು. ಆಗ ತಿಳಿಯಿತು, ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ alter ego ಗಡದ್ದಾಗಿ ನಿದ್ದೆ ಹೊಡೆಯುತ್ತಿದೆ ಎಂದು!
ಸಾಮ್ರಾಟರು ಆತನನ್ನು ಒದ್ದು ಎಬ್ಬಿಸಿ ಕೆಲಸಕ್ಕೆ ಅಟ್ಟಿದರು. ‘ಹೋದೆಯಾ ಪಿಶಾಚಿ ಎಂದರೆ…’ ಎಂದು ಗೊಣಗುತ್ತಾ ಆತ ಸಂದರ್ಶ ಮಾಡಿಕೊಂಡು ಬಂದಿದ್ದಾನೆ.

ನಗೆ ಸಾಮ್ರಾಟ್: ಈ ಸಂಚಿಕೆಯ ವಿಶೇಷ ಸಂದರ್ಶನದಲ್ಲಿ ನಮ್ಮೊಂದಿಗಿರುವವರು ನಮ್ಮ ದೇಶದಲ್ಲಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ, ಬಹುಶಃ ಇಡೀ ಬ್ರಹ್ಮಾಂಡದಲ್ಲಿ ಹೆಸರು ಮಾಡಿರುವ ಪ್ರಖ್ಯಾತ ಧರ್ಮಗುರು ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾ. ಇವರ ಅನುಯಾಯಿಗಳು ಇವರನ್ನು ಪ್ರೀತಿಯಿಂದ ಧರ್ಮಶ್ರೀ ಎಂದು ಕರೆಯುತ್ತಾರೆ. ಇವರು ಯಾವ ಸ್ಥಾಪಿತ ಧರ್ಮವನ್ನೂ ಬೋಧಿಸಿಲ್ಲ. ಇವರ ಬೋಧನೆಯಲ್ಲಿನ ಧರ್ಮ ಹಿಂದೂ, ಇಸ್ಲಾಂ, ಕ್ರೈಸ್ತ ಧರ್ಮಸಾರವನ್ನೆಲ್ಲಾ ಹೊಂದಿದೆ. ಒಟ್ಟಿನಲ್ಲಿ ಹೇಳುವುದಾದರೆ ಧರ್ಮಶ್ರೀಯವರು ಇಡೀ ಜಗತ್ತಿನ ಎಲ್ಲಾ ಧರ್ಮಗಳ ಪ್ರತಿನಿಧಿ. ಇವರೊಂದಿಗೆ ನಾವು ಇಂದು ಚರ್ಚಿಸುತ್ತಿರುವುದು ನಮ್ಮ ದೇಶದ ಅತ್ಯಂತ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನದ ಬಗ್ಗೆ. ಸ್ವಾಮಿಜೀ ನಿಮಗೆ ಸಂದರ್ಶನಕ್ಕೆ ಸ್ವಾಗತ.

ಧರ್ಮಶ್ರೀ: ಸಂತೋಷ. ಆದರೆ ನೀನು ಕಾರ್ಯಕ್ರಮ ಶುರು ಮಾಡುವ ಮೊದಲು ಒಂದು ಸಂಪ್ರದಾಯ ಪೂರೈಸುವುದು ಒಳಿತು… ಮರೆತೆ ಅಂತ ಕಾಣುತ್ತೆ.

(ತಾವು, ಬಹುದೊಡ್ಡ ಪತ್ರಿಕೆಯ ಸಂಪಾದಕರಾದ ನಗೆ ಸಾಮ್ರಾಟರ alter ego ಆದ ತಾವೇ ಯಕಶ್ಚಿತ್ ಸ್ವಾಮೀಜಿಗೆ ಬಹುವಚನ ಆರೋಪಿಸಿ ಗೌರವ ಕೊಟ್ಟರೂ ಈ ಸ್ವಾಮಿಜಿ ಮುಲಾಜಿಲ್ಲದೆ ತಮಗೆ ಏಕವಚನ ಬಳಸಿದ್ದರಿಂದ ಆಘಾತಗೊಂಡ ಸಾಮ್ರಾಟರಿಗೆ ಸ್ವಾಮಿಜಿ ಮಾತಾಡುತ್ತಿರುವುದು ಯಾವುದರ ಬಗ್ಗೆ ಎಂಬುದು ತಿಳಿಯಲೇ ಇಲ್ಲ. ಪಕ್ಕದಲ್ಲೇ ಇದ್ದ ಸ್ವಾಮೀಜಿಯವರ ಕಿರಿಯ ಶಿಷ್ಯ ಮೊಳಕೈಯಲ್ಲಿ ತಿವಿದು ಸ್ವಾಮೀಜಿಗಳ ಕಾಲಿಗೆರಗಬೇಕು ಎಂದು ಸನ್ನೆ ಮಾಡಿದ. ಸಾಮ್ರಾಟರ alter egoಗೆ ಬಹು ಕೋಪ ಬಂದಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ಇರುವ ಅಲ್ಪಸ್ವಲ್ಪ ಭಕ್ತಿಯನ್ನು ಮುಖದ ಮೇಲೆ ಪ್ರದರ್ಶಿಸುತ್ತಾ ಸ್ವಾಮಿಜಿಯ ಕಾಲಿಗೆರಗಿದರು. ಕಾರ್ಯವಾಗಬೇಕಾದರೆ … ಕಾಲು ಬೇಕಾದರೂ ಹಿಡಿ ಎಂದು ಹಿರಿಯ ವಿವೇಕಿಗಳು ಹೇಳಿಲ್ಲವೇ?)

ಧರ್ಮಶ್ರೀ: ಈಗ ಸಂದರ್ಶನ ಮುಂದುವರೆಸುವಂತವನಾಗು…

(ಮತ್ತೆ ತೂರಿ ಬಂದ ಏಕವಚನದಿಂದ ಅವಮಾನಿತರಾದರೂ ಸಾಮ್ರಾಟರು ಸಂದರ್ಶನ ಮುಂದುವರೆಸಿದರು…)

ನ.ಸಾ: ಹ್ಹ! ಸ್ವಾಮೀಜಿ, ಭಾರತದ ವಿಜ್ಞಾನಿಗಳು ನೂರು ಚಿಲ್ಲರೆ ಕೋಟಿ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ. ಇದುವರೆಗೂ ಮನೆಯ ಅಂಗಳದಲ್ಲಿ ಮಲಗಿ ನೋಡುತ್ತಿದ್ದ ಚಂದಿರನನ್ನು ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಚಂದಿರನನ್ನು ಸಮಗ್ರವಾಗಿ, ಒಂದಿಂಚೂ ಬಿಡದೆ ಜಾಲಾಡಿ ಜ್ಞಾನ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೊಂದು ದಿನ ಮನೆಯ ಅಂಗಳದಲ್ಲಿ ಕುಳಿತು ಚಂದ್ರನ ನೋಡುತ್ತಿದ್ದವರನ್ನು ಎತ್ತಿಕೊಂಡು ಹೋಗಿ ಚಂದ್ರನ ಮೇಲೆ ಇಳಿಸಿ ಅಲ್ಲಿಂದ ಭೂಮಿಯನ್ನು ತೋರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಸುಂದರವಾದ ಹೆಸರನ್ನೂ ಕೊಟ್ಟಿದ್ದಾರೆ, ‘ಚಂದ್ರಯಾನ’ ಅಂತ. ಇದರ ಬಗ್ಗೆ ಏನನ್ನುತ್ತೀರಿ?

hand-your-destiny-over-to-the-swami-conversational-robot_48

ಧರ್ಮಶ್ರೀ: ನೋಡಿ, ಈ ಮಾನವ ಜನುಮವೆಂಬುದು ನಶ್ವರ. ಈ ದೇಹ ನಶ್ವರ, ಈ ಮನಸ್ಸು ನಶ್ವರ, ಈ ಬುದ್ಧಿ ನಶ್ವರ. ನಮ್ಮ ಕನಸು, ಆಕಾಂಕ್ಷೆ, ಪ್ರಯತ್ನಗಳೆವೂ ನಶ್ವರ. ಯಾವುದೂ ಶಾಶ್ವತವಲ್ಲ, ಆತ್ಮವೊಂದರ ಹೊರತು. ಇಡೀ ವಿಶ್ವವೇ ಬಹುದೊಡ್ದ ಮಾಯೆ. ಈ ಮಾಯೆಯಲ್ಲಿ ಬಂಧಿತರಾದ ನರಪ್ರಾಣಿಗಳೆಲ್ಲವೂ ಈ ಜಗತ್ತನ್ನು ಸತ್ಯ ಎಂದು ಭಾವಿಸುತ್ತವೆ. ತಾವು ನೋಡುತ್ತಿರುವುದು ಮಾಯೆಯನ್ನು ಎಂಬುದನ್ನು ಅರಿಯದೆ ಅಜ್ಞಾನಕ್ಕೊಳಗಾಗಿ ಸಂಸಾರ ಸಾಗರದಲ್ಲಿ ಮುಳುಗಿ ಹೋಗುತ್ತಾರೆ. ಐಹಿಕ ಸುಖಭೋಗಗಳಲ್ಲಿ ತೇಲುತ್ತಾ ಮುಳುಗುತ್ತಾ ಲೋಲುಪರಾಗಿ ಕಾಲ ಕಳೆಯುತ್ತಾರೆ. ಆತ್ಮವೊಂದೇ ಸತ್ಯ, ಅದೊಂದೇ ನಿತ್ಯ ಎಂಬುದನ್ನು ಅರಿಯದೆ ನರಳುತ್ತಾರೆ. ದೇಹವನ್ನು, ಮನಸ್ಸನ್ನು, ಬುದ್ಧಿಯನ್ನು ಪೋಷಿಸುತ್ತಾ, ಅವುಗಳಿಗೆ ಸುಖವನ್ನು ಧಾರೆಯೆರೆಯುವುದರಲ್ಲೇ ತಲ್ಲೀನರಾಗಿ ತಮ್ಮ ಆತ್ಮವನ್ನು ಪರಮಾತ್ಮನಲ್ಲಿ ಸೇರಿಸಬೇಕೆಂಬ ಹಂಬಲವನ್ನು ತೊರೆದುಬಿಡುತ್ತಾರೆ. ಪ್ರಾಪಂಚಿಕ ಸುಖ, ಭೋಗಗಳಲ್ಲಿ ಮುಳುಗಿ ಹೋಗುತ್ತಾರೆ…

ನ.ಸಾ: (ತಲೆ ಕೆರೆದುಕೊಂಡು, ಪ್ಯಾದೆ ನಗು ನಗುತ್ತಾ…) ಕ್ಷಮಿಸಿ ಸ್ವಾಮೀಜಿ, ನೀವು ನಿಮ್ಮ ಸಾಯಂಕಾಲದ ಉಪನ್ಯಾಸವನ್ನು ಈಗಲೇ ಶುರು ಮಾಡಿದಂತಿದೆ… ನಾನು ಕೇಳಿದ್ದು ಇಸ್ರೋದ ವಿಜ್ಞಾನಿಗಳು ಕೈಗೊಂಡಿರುವ ಚಂದ್ರಯಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು…

ಧರ್ಮಶ್ರೀ: ನಿನ್ನಂತಹ ಅವಿವೇಕಿಗೆ ಮಾತ್ರ ಇಷ್ಟು ಅವಸರ ಇರುವುದಕ್ಕೆ ಸಾಧ್ಯ. ನಾವು ನಿನ್ನ ಪ್ರಶ್ನೆಯನ್ನು ಸರಿಯಾಗಿಯೇ ಕೇಳಿಸಿಕೊಂಡಿದ್ದೇವೆ. ನಮ್ಮನ್ನು ಲೇವಡಿ ಮಾಡುವ ಧಾರ್ಷ್ಟ್ಯವನ್ನು ತೋರಬೇಡ. ನಾವು ಹೇಳುವುದನ್ನು ಸುಮ್ಮನೆ ಕೇಳಬೇಕು. ನಾವು ಮಾತು ಮುಗಿಸಿ ಪ್ರಶ್ನೆ ಕೇಳಲು ಅವಕಾಶ ಕೊಟ್ಟಾಗ ಮಾತ್ರ ಪ್ರಶ್ನಿಸಬೇಕು. ನಾವು ಹೇಳುವುದನ್ನು ಕೇಳಿ ಬರೆಯುವುದಕ್ಕಾಗಿಯೇ ಸಂದರ್ಶನ ನಡೆಸುವುದು. ಕರಣ್ ಥಾಪರ್ ನಂತಹ ಅನನುಭವಿ, ಅವಿವೇಕಿಯಂತೆ ವರ್ತಿಸಬೇಡ. ನೀವು ಕೇಳಿದ್ದಕ್ಕೆಲ್ಲಾ ಉತ್ತರಿಸುವುದು ನಮ್ಮ ಕೆಲಸವಲ್ಲ. ನಾವು ಹೇಳಿದ್ದನ್ನು ಕೇಳುವುದು ಮಾತ್ರ ಸಂದರ್ಶಕನಾದ ನಿನ್ನ ಕೆಲಸ ತಿಳಿಯಿತೋ?

ನ.ಸಾ: (ಜೀವವನ್ನು ಅಂಗೈಯಲ್ಲಿರಿಸಿಕೊಂಡು) ಕ್ಷಮಿಸಬೇಕು ಮಹಾ ಸ್ವಾಮಿ… ಮಹಾ ಪ್ರಮಾದವಾಯ್ತು… (ಮತ್ತೊಮ್ಮೆ ಕಾರ್ಯ ಸಾಧಿಸಲು… ಕಾಲು ಹಿಡಿ ತತ್ವ ಪ್ರತಿಪಾದನೆ)

ಧರ್ಮಶ್ರೀ: ಇರಲಿ ಏಳು ಮಗು… ತಪ್ಪು ಮಾಡುವುದು ಸಹಜ. ನಮ್ಮಂತಹ ಹಿರಿಯರು, ಶಾಸ್ತ್ರ ಸಂಪನ್ನರು, ವಿವೇಕಿಗಳು ತಿದ್ದಿದಾಗ ವಿನಯದಿಂದ ತಲೆಬಾಗಿ ಒಪ್ಪುವುದು ವಿವೇಕ. ನೀನು ಅಂಥ ವಿವೇಕಿಯಾಗು ಇಲ್ಲವಾದರೆ ಅವಿವೇಕಿ ಸಲ್ಮಾನ್ ರಶ್ದಿಯ ಹಾಗೆ ಭೂಗತನಾಗಬೇಕಾಗುತ್ತದೆ.
ಇರಲಿ, ನಿನ್ನ ಪ್ರಶ್ನೆಗೆ ಉತ್ತರಿಸುತ್ತೇವೆ. ನೋಡು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ ಎಲ್ಲವನ್ನೂ ಹೇಳಿಯಾಗಿದೆ. ಕುರಾನ್ ಸಾಕ್ಷಾತ್ ಭಗವಂತನ ವಾಣಿ. ವೇದಗಳು ಅಮಾನುಷೇಯ. ಗೀತೆ ಸಾಕ್ಷಾತ್ ಶ್ರೀಕೃಷ್ಣನ ಬಾಯಿಂದ ಬಂದದ್ದು. ಬೈಬಲು ಆ ಪಿತನ ಸಂದೇಶ. ಇಡೀ ಜಗತ್ತನ್ನೇ ಸೃಷ್ಠಿ ಮಾಡಿದ ಭಗವಂತನೇ ಹೇಳಿದ ಸತ್ಯಗಳು ಇವುಗಳಲ್ಲಿವೆ. ಇಡೀ ವಿಶ್ವದ ರಹಸ್ಯವನ್ನು ಭಗವಂತ ನಮಗೆ ಇವುಗಳ ಮುಖಾಂತರ ಕೊಟ್ಟಿದ್ದಾನೆ. ಸೂರ್ಯ ಹೇಗಿದ್ದಾನೆ, ಚಂದ್ರ ಹೇಗಿದ್ದಾನೆ, ನಕ್ಷತ್ರಗಳು ಹೇಗಿವೆ ಎಂಬುದನ್ನೆಲ್ಲಾ ನಮಗೆ ಭಗವಂತನೇ ಹೇಳಿಯಾಗಿದೆ. ಸೃಷ್ಟಿ ನಡೆದದ್ದು ಹೇಗೆ ಎಂದು ಸಾಕ್ಷಾತ್ ಸೃಷ್ಟಿಕರ್ತನೇ ಹೇಳಿರುವಾಗ ಇನ್ನ್ಯಾರದೋ ಮಾತನ್ನು ಕೇಳುವುದು ಉದ್ಧಟತನವಲ್ಲವೇ? ಜನ್ಮ ನೀಡಿದ ಭಗವಂತನಿಗೆ ಎಸಗುವ ಮೋಸವಲ್ಲವೇ? ಹುಟ್ಟಿಸಿದ ತಂದೆಯನ್ನೇ ಪ್ರಶ್ನಿಸುವ, ಸಂಶಯಿಸುವ ಮಗ ಬದುಕಿದರೆಷ್ಟು, ಸತ್ತರೆಷ್ಟು? ಅಲ್ಲವೇನಯ್ಯ?

ನ.ಸಾ: ಹಾಗಲ್ಲ ಮಹಾಸ್ವಾಮಿ, ಧಾರ್ಮಿಕ ಗ್ರಂಥಗಳು ಭಗವಂತನಿಂದಲೇ ಬಂದದ್ದು ಎಂಬುದಕ್ಕೆ ಸಾಕ್ಷಿಯೇ ಇಲ್ಲ ಎಂದು ಕೆಲವರು ಹೇಳುತ್ತಾರೆ. (‘ನಾನಲ್ಲ’ ಎಂಬ ಭಾವವನ್ನು ನಟಿಸುತ್ತಾ) ಬೈಬಲ್ಲಿನಲ್ಲಿ ಹೇಳಿದ ಹಾಗೆ ಜಗತ್ತನ್ನು ಏಳು ದಿನದಲ್ಲಿ ದೇವರು ಸೃಷ್ಟಿ ಮಾಡಿಲ್ಲ. ಮನುಷ್ಯ ಕೋತಿ,ಚಿಂಪಾಂಜಿಯಂತಹ ಪ್ರಾಣಿಗಳಿಂದ ವಿಕಾಸವಾಗಿದ್ದಾನೆ. ಹಾಗೆಯೇ ಭೂಮಿ ಇಡೀ ವಿಶ್ವದ ಕೇಂದ್ರವಲ್ಲ. ಸೂರ್ಯ, ಚಂದ್ರರು ಭೂಮಿಯ ಸುತ್ತ ಸುತ್ತುವುದಿಲ್ಲ. ವಿಶ್ವದಲ್ಲಿರು ಅಸಂಖ್ಯಾತ ನಕ್ಷತ್ರಗಳಲ್ಲಿ ಸೂರ್ಯ ಕೂಡ ಒಂದು. ಭೂಮಿ ಅಲ್ಲದೆ ಇತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಚಂದ್ರ ಭೂಮಿಗೆ ಪ್ರದಕ್ಷಿಣೆ ಹಾಕುತ್ತದೆ. ನಕ್ಷತ್ರಗಳು ಭೂಮಿಯನ್ನು ಪ್ರದಕ್ಷಿಣೆ ಹಾಕುವುದಿಲ್ಲ. ಹಾಗೆಯೇ ವೇದ, ಕುರಾನ್‌ಗಳಲ್ಲಿ ಹೇಳಿದ್ದೆಲ್ಲವೂ ಸತ್ಯವಲ್ಲ ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ…

ಧರ್ಮಶ್ರೀ: ಧರ್ಮ ದ್ರೋಹಿ! ಅಂಥ ಆರೋಪಗಳನ್ನು ಮಾಡುವವರನ್ನು ಸೈತಾನ ಆವರಿಸಿಕೊಂಡಿರುತ್ತಾನೆ. ಅಂಥವರ ಮಾತುಗಳನ್ನು ನೀವು ನಂಬುತ್ತೀರಿ. ಇದನ್ನೇ ಮಾಯೆ ಎಂದು ಕರೆಯುವುದು. ಮಾಯಾ ಜಿಂಕೆಯನ್ನು ಬೆನ್ನಟ್ಟಿ ಹೋಗುವವರಿಗೆ ಅದು ಅಸತ್ಯ, ಮಾಯೆ ಎಂಬುದನ್ನು ಎಷ್ಟು ವಿವರಿಸಿದರೂ ಅರ್ಥವಾಗುವುದಿಲ್ಲ. ಅವರ ಕಣ್ಣಿಗೆ ಮಾಯಾ ಜಿಂಕೆ ಕಾಣಿಸುತ್ತಿರುತ್ತದೆ. ಅದರ ಆಕಾರ, ರೂಪ ಎಲ್ಲವೂ ಸ್ಪಷ್ಟವಾಗಿರುತ್ತದೆ. ಅದರ ಕೊಂಬುಗಳು, ಗೊರಸು, ಮೈ ಮೇಲಿನ ಮಚ್ಚೆ ಎಲ್ಲವನ್ನೂ ನಿಖರವಾಗಿ ಕಾಣಬಹುದು. ಹಾಗಂತ ಅದನ್ನು ಬೆನ್ನಟ್ಟಿದರೆ ಅದೆಂದೂ ಕೈಗೆ ಸಿಕ್ಕದು. ಇದೇ ಮಾಯೆ.
ದೇವರು ಹೇಳಿದ್ದನ್ನು ಸಂಶಯಿಸುವವರು ರೌರವ ನರಕದಲ್ಲಿ ಬೇಯುತ್ತಾರೆ. ಚಾರ್ಲ್ಸ್ ಡಾರ್ವಿನ್ನನ ಗತಿಯೇನಾಯಿತು ಎಂಬುದು ನಮಗೆ ಗೊತ್ತಿದೆ. ವಿಜ್ಞಾನ ಮನುಷ್ಯನನ್ನು ಭ್ರಷ್ಠನನ್ನಾಗಿಸುತ್ತದೆ. ಅಂತಿಮ ಸತ್ಯವಾದ ಆತ್ಮ ಸಾಕ್ಷಾತ್ಕಾರದಿಂದ ವಿಮುಖನನ್ನಾಗಿಸಿ ಆತನನ್ನು ಇಂದ್ರಿಯ ಲೋಕದಲ್ಲಿ ಬಂಧಿಯಾಗಿಸುತ್ತದೆ. ಭೂಮಿಯನ್ನು ದಾಟಿ ಹೋಗುವ ಸಾಮರ್ಥ್ಯವಿಲ್ಲದ ಮನುಷ್ಯ ಅದು ಹೇಗೆ ಸೂರ್ಯ, ನಕ್ಷತ್ರಗಳು ಭೂಮಿಯ ಸುತ್ತ ಸುತ್ತುವುದಿಲ್ಲ ಎಂದು ವಾದಿಸುತ್ತಾರೆ? ಜೀವ ಎಂದರೇನು ಎಂದು ಅರ್ಥ ಮಾಡಿಕೊಳ್ಳಲಾಗದ ಜೀವ ವಿಜ್ಞಾನಿ, ಒಂದು ಕೀಟಕ್ಕೆ ಜೀವ ಕೊಡುವ ತ್ರಾಣವಿಲ್ಲದ ತಜ್ಞ ಸೃಷ್ಟಿ ನಡೆದದ್ದು ವಿಕಾಸವಾದದಿಂದ ಎಂದು ಹೇಗೆ ಹೇಳಬಲ್ಲ? ಇಡೀ ವಿಶ್ವವನ್ನು ನಿರ್ಮಿಸಿದವ, ಪ್ರತಿಯೊಂದು ಜೀವಿಗೂ ಜೀವವನ್ನು ಕೊಡುವ ಆ ಭಗವಂತ ಹೇಳಿದ್ದಕ್ಕಿಂತ ಈ ಅಶಕ್ತ ಹುಲು ಮಾನವರು ಹೇಳಿದ್ದು ಹೆಚ್ಚಾಗುತ್ತದೆ ನಿಮಗೆ. ಇದೇ ಮಾಯೆ.

ನ.ಸಾ: ಅಲ್ಲ.. ಹಾಗಲ್ಲ! ವಿಜ್ಞಾನಿಗಳು ಪ್ರಯೋಗಳನ್ನ ಮಾಡಿ ಹೇಳಿದ್ದಾರೆ…

ಧರ್ಮಶ್ರೀ: ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ನಿಮ್ಮ ವಿಜ್ಞಾನಿಗಳು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಸತ್ಯಗಳಿವೆ. ಈ ಜಗತ್ತಿನಲ್ಲಿ ಬಿಲಿಯನ್ ಗಟ್ಟಲೆ ನಕ್ಷತ್ರಗಳಿವೆ ಅವುಗಳಿಗೆಲ್ಲ ಭೂಮಿಯಂತಹ ಅದೆಷ್ಟೋ ಗ್ರಹಗಳಿವೆ ಎಂದು ಹೇಳಿದರೆ ಹೇಗೆ ನಂಬುತ್ತೀರಿ? ನೀವು ಖುದ್ದಾಗಿ ಅವನ್ನೆಲ್ಲಾ ನೋಡುವುದಿಲ್ಲ. ಯಾರೋ ಹೇಳಿದ್ದನ್ನು ಕೇಳಿ ಹೌದೆಂದು ಒಪ್ಪಿಕೊಳ್ಳುತ್ತೀರಿ. ಆತ ಹೇಳಿದ ಮಾತನ್ನು ಪರೀಕ್ಷಿಸುವುದಕ್ಕೆ ಆತನೇ ಹೇಳಿದ ಪ್ರಯೋಗಗಳನ್ನು ಮಾಡುತ್ತೀರಿ ಎಂಥಾ ಮೂರ್ಖರು ನೀವು! ಹೆಚ್ಚು ವಾದಿಸಲು ಬಂದರೆ ವಿಜ್ಞಾನದ ಸಿದ್ಧಾಂತವನ್ನು ತಪ್ಪು ಎಂದು ಪ್ರಯೋಗದ ಮೂಲಕ ಸಾಬೀತು ಮಾಡಿ ಎನ್ನುತ್ತೀರಿ.
ನಾವೂ ಅದೇ ಪ್ರಶ್ನೆಯನ್ನು ಕೇಳುತ್ತೇವೆ. ನಮ್ಮ ಧಾರ್ಮಿಕ ಗ್ರಂಥಗಳು ಹೇಳಿರುವುದನ್ನು ಒಪ್ಪಿಕೊಳ್ಳಿ, ಅವುಗಳು ಸತ್ಯ ಎನ್ನುವುದಕ್ಕೆ ನಾವು ಹೇಳಿದ ಪ್ರಯೋಗಗಳನ್ನು ಮಾಡಿ. ನಾವು ಹೇಳಿದಂತೆ ನಡೆದುಕೊಳ್ಳಿ. ಹೆಚ್ಚು ವಾದಿಸುವ ಶಕ್ತಿಯಿದ್ದರೆ ಧಾರ್ಮಿಕ ಗ್ರಂಥಗಳು ಹೇಳಿದ್ದನ್ನು ಅಲ್ಲಗಳೆಯಲು ಪ್ರಯೋಗಳಿಂದ ಪ್ರಯತ್ನಿಸಿ. ಉದಾಹರಣೆಗೆ ನಮ್ಮ ಗ್ರಂಥಗಳ ಪ್ರಕಾರ ದೇವರು ಇದ್ದಾನೆ. ಆತ ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ. ವಿಜ್ಞಾನ ದೇವರು ಇಲ್ಲ ಎನ್ನುತ್ತದೆ. ಸಾಬೀತು ಪಡಿಸಲಿ ನೋಡೋಣ. ವಿಜ್ಞಾನದ ಪ್ರಕಾರ ಒಂದು ಪ್ರಯೋಗ ಯಾರ ಎದುರು ಮಾಡಿದರೂ ಒಂದೇ ಫಲಿತಾಂಶ ಬರಬೇಕು. ನಾವು ಸೂಚಿಸುವ ಜನರಿಗೆ ದೇವರು ಇಲ್ಲ ಎಂದು ಸಾಬೀತು ಪಡಿಸಿ ತೋರಿಸಲಿ ವಿಜ್ಞಾನ.
ನಾವು ಸಾವಿರಾರು ವರ್ಷಗಳಿಂದ ಕೋಟ್ಯಂತರ ಜನರಿಗೆ ದೇವರ ಇರುವಿಕೆಯನ್ನು ಸಾಬೀತು ಮಾಡುತ್ತಾ ಬಂದಿದ್ದೇವೆ. ಜಗತ್ತಿನಲ್ಲಿ ಇಷ್ಟು ಧರ್ಮಗಳಿರುವುದಕ್ಕೆ, ಇಷ್ಟು ಧರ್ಮೀಯರು ಇರುವುದೇ ಇದಕ್ಕೆ ಸಾಕ್ಷಿ… ನೋಡಿ ನೀವು ವಿಜ್ಞಾನಿಗಳು ಎಷ್ಟು ಮಂದಿಗೆ ದೇವರು ಇಲ್ಲ ಎಂದು ಸಾಬೀತು ಮಾಡಿ ತೋರಿಸಿದ್ದೀರಿ? ಜಗತ್ತಿನಲ್ಲಿ ಯಾರು ಮೆಜಾರಿಟಿ ಇರುವವರು? ದೇವರನ್ನು ನಂಬುವವರೋ ಅಥವಾ ನಂಬದವರೋ? ಉತ್ತರಿಸಿ…

ನ.ಸಾ: …. ಉಂ, ಅದೂ… ದೇವರನ್ನು ನಂಬುವವರೇ ಹೆಚ್ಚು ಮಂದಿಯಿದ್ದಾರೆ… ಆದರೆ…

(ಮುಂದುವರೆಯುವುದು…)

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗೆ

15 ಸೆಪ್ಟೆಂ


ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ತಮ್ಮ ಚೇಲ ಕುಚೇಲನನ್ನೂ ತಮ್ಮ ಆಲ್ಟರ್ ಈಗೋವನ್ನೂ ವಿನಾಯಕನ ಸಂದರ್ಶನಕ್ಕೆ ಅಟ್ಟಿದರು. ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಕೊಟ್ಟ. ಸಂದರ್ಶನದ ಪೂರ್ಣ ಪಾಠ ಇಲ್ಲದೆ.

ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.

ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!

ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?

ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು ಅರ್ಥವಾಗಿಲ್ಲ. ಅದಕ್ಕೇ ಭೂಲೋಕದಲ್ಲಿ ಈ ಸ್ಥಿತಿ ಇರುವುದು.

ನ.ಸಾ: ಹಾಗಂದ್ರೆ, ಅರ್ಥ ಆಗಲಿಲ್ಲ…

ವಿ: ಅರ್ಥ ಆಗದ್ದನ್ನು ಕೇಳಿ ತಿಳ್ಕೋಬೇಕು. ನೋಡ್ರಿ, ನಿಮ್ಮ ಮಹಾತ್ಮಾ ಗಾಂಧಿ ಹೇಳಿಲ್ಲವಾ, ಪ್ರಾರ್ಥನೆ ಅನ್ನೋದು ದೇವರು ಹಾಗೂ ಮಾನವನ ನಡುವಿನ ಸೇತುವೆ ಅಂತ. ಮನುಷ್ಯರಿಗೆ ದೇವರೊಂದಿಗೆ ಮಾತನಾಡಬೇಕು ಎಂಬ ಹಂಬಲವಿದೆಯೋ ಇಲ್ಲವೋ ಕಾಣೆ. ಆದರೆ ದೇವರಿಗೆ ಮಾತ್ರ ಮನುಷ್ಯನೊಂದಿಗೆ ಮಾತಾಡಬೇಕು ಎನ್ನುವ ಆಸೆ ಇದೆ. ಅದರಲ್ಲೂ ಈ ಹಿಂದೂ ದೇವರುಗಳಿದ್ದಾರಲ್ಲ, ಅವರ ಸಂಖ್ಯೆ ಮುಕ್ಕೋಟಿಗಿಂತ ಹೆಚ್ಚು. ಎಲ್ಲರಿಗೂ ಮನುಷ್ಯರೊಂದಿಗೆ ಮಾತನಾಡಬೇಕು ಎನ್ನುವ ಆಸೆ. ಏನು ಮಾಡುವುದು, ಈ ಮನುಷ್ಯರು ಅದಕ್ಕೆ ಟೈಮೇ ಕೊಡೋದಿಲ್ಲ. ಯಾವಾಗಲೂ ತಮ್ಮ ಮನೆ, ಮಕ್ಕಳು, ಬ್ಯಾಂಕ್ ಬ್ಯಾಲನ್ಸು, ತಮ್ಮ ಕ್ರಿಕೆಟ್ ಟೀಮು, ಕನಸಿನಲ್ಲೆಂಬಂತೆ ಬಂದ ಒಲಿಂಪಿಕ್ಸ್ ಚಿನ್ನದ ಪದಕ, ನ್ಯೂಕ್ಲಿಯಾರ್ ಡೀಲು ಅಂತಲೇ ತಮ್ಮ ಸಮಯವನ್ನೆಲ್ಲಾ ಕಳೆದುಬಿಡುತ್ತಾರೆ. ದೇವರೊಂದಿಗೆ ಮಾತನಾಡಲಿಕ್ಕೆ ಸಮಯವೇ ಅವರಿಗೆ ಇರುವುದಿಲ್ಲ. ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಒಂದರ್ಧ ಗಂಟೆಯಾದರೂ ನಮ್ಮೊಂದಿಗೆ ಕಳೆಯಲು ಅವರಿಗೆ ಬಿಡುವು ಇರೋದಿಲ್ಲ. ಈಗ ಮಾತನಾಡಿಸ ಬಹುದು ಆಗ ಮಾತನಾಡಿಸ ಬಹುದು ಎಂದು ನಮ್ಮ ದೇವಲೋಕದಲ್ಲಿ ದೇವರು ದೇವತೆಗಳು ಕಾಯುತ್ತಾ ಕೂತಿರುತ್ತಾರೆ.

ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…

ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ…’ ಎಂದು ಪ್ರಾರ್ಥಿಸ ತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರ್ವಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ…’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನಂಗೆ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.

ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.

ನ.ಸಾ: ತುಂಬಾ ಬೇಸರದ ಸಂಗತಿ ಇದು. ಹೌದು, ಎಲ್ಲಾ ಸರಿ ಆದರೆ ನೀವೇನೋ ಹೊಸ ಸಂಗತಿ ಕಂಡುಕೊಂಡಿದ್ದೀರಿ ಅಂದ್ರಿ…

ವಿ: ಹ್ಹಾ! ಅದನ್ನೇ ಹೇಳಬೇಕಿತ್ತು. ಹೀಗೆ ದೇವರೊಂದಿಗೆ ಮಾತನಾಡಲು ಮನುಷ್ಯನಿಗೆ ಸಮಯವೇ ಸಿಕ್ಕದಂತೆ ಆಗಿರುವಾಗ ಎಂದೋ ಒಮ್ಮೆಮ್ಮೊ ಅಪರೂಪಕ್ಕೆ ಮಾತನಾಡುವ ಅವಕಾಶ ಸಿಕ್ಕಾಗಲೂ ನಮ್ಮ ದೇವರುಗಳು ಅದನ್ನು ಹಾಳು ಮಾಡಿಕೊಂಡುಬಿಡುತ್ತಾರೆ. ಹೇಗೆ, ಅಂತೀರಾ? ಇಂದಿನ ಜನರು ಮಾತಾಡುವ ಶೈಲಿಯಲ್ಲಿ, ಬಳಸುವ ಭಾಷೆಯಲ್ಲಿ ಮಾತಾಡಿದರೆ ಮಾತ್ರವಲ್ಲವೇ ಅವರಿಗೆ ಅರ್ಥವಾಗುವುದು. ಅದು ಬಿಟ್ಟು ಹಳೇ ಕಾಲದವರ ಹಾಗೆಯೇ, ‘ವತ್ಸಾ… ನಿನಗೇನು ಬೇಕು ಕೇಳುವಂತವನಾಗು..’ ಅಂತ ಮಾತಾಡಿದರೆ ಯಾರು ಕೇಳುತ್ತಾರೆ? ಅದಕ್ಕೇ ನಾನು ನನ್ನ ಲಿಂಗೋ ಬದಲಾಯಿಸಿಕೊಂಡಿದ್ದೇನೆ. ಬೆಂಗಳೂರಿನ ಯುವಕರೊಂದಿಗೆ ಮಾತಾಡುವ ರೀತಿಗೂ, ಸಾಗರದ ಹೌಸ್ ವೈಫ್ ಜೊತೆಗೆ ಮಾತಾಡುವ ರೀತಿಗೂ ವ್ಯತ್ಯಾಸವಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.

ನ.ಸಾ: ಹೌದೌದು. ದೇವರೂ ಸಹ ಅಪ್ ಡೇಟ್ ಆಗುತ್ತ ಇರಬೇಕಲ್ಲವೇ? ಅಂದ ಹಾಗೆ ಈ ಸಲದ ಭೂಲೋಕದ ಟೂರ್ ಹೇಗಿತ್ತು?

ವಿ: ಪ್ರತೀ ವರ್ಷದ ಹಾಗೆಯೇ ಇದೆ ಮೈ ಸನ್! ಭಾರತ ಅಮೇರಿಕಾ ಆಗುವುದು ಯಾವಾಗ , ಬೆಂಗಳೂರು ಸಿಂಗಾಪುರವಾಗುವುದು ಯಾವಾಗ ಎಂದು ಸರಕಾರಗಳು ಕನಸುತ್ತಿದ್ದರೆ, ನಮ್ಮ ಹುಡುಗ ಅಮೇರಿಕಾಗೆ ಹೋಗುವುದು ಯಾವಾಗ, ತಾನು ಸಿಂಗಾಪುರದ ಪ್ರಜೆಯಾಗುವುದು ಯಾವಾಗ ಅಂತ ಜನರು ಕನಸುತ್ತಿದ್ದಾರೆ. ಇದರಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅದೇ ಬೆಲೆ ಏರಿಕೆ, ಬಡವರು ಬಡತನದಲ್ಲಿ ಪ್ರಗತಿ ಸಾಧಿಸುವುದು ಧನಿಕರು ಸಿರಿತನದಲ್ಲಿ ಪ್ರಗತಿಸಾಧಿಸುವುದು, ಇದನ್ನೇ ಶೇ ೮ರ ರಾಷ್ಟ್ರೀಯ ಪ್ರಗತಿ ಎಂದು ಸಂಭ್ರಮಿಸುವುದು – ಏನೂ ವ್ಯತ್ಯಾಸ ಕಂಡಿಲ್ಲ. ಆದರೆ ಒಂದು ಬಹುಮುಖ್ಯವಾದ ಬದಲಾವಣೆ ನಡೆದಿದೆ. ಇದರಿಂದ ನನ್ನ ಅಸ್ತಿತ್ವಕ್ಕೇ ಪೆಟ್ಟು ಬೀಳುತ್ತಿರುವುದರಿಂದ ನನಗೆ ಆತಂಕವಾಗಿದೆ.

ನ.ಸಾ: ಅದ್ಯಾವ ಸಂಗತಿ ಮೈಲಾರ್ಡ್!

ವಿ: ನಿಮ್ಮ ನಾಡಿನಲ್ಲಿ ಮಣ್ಣಿಗೆ ಹೊನ್ನಿನ ಬೆಲೆ ಬರುತ್ತಿದೆ ಅಲ್ಲವಾ? ಮಣ್ಣಿನಿಂದ ಕಬ್ಬಿಣ ಸಿಕ್ಕುತ್ತದೆ ಅಂದಕೂಡಲೇ ಮಣ್ಣು ಚಿನ್ನದ ಬೆಲೆಯನ್ನು ಪಡೆದುಕೊಂಡು ಬಿಟ್ಟಿದೆ. ರಿಯಲ್ ಎಸ್ಟೇಟು ದಾಂಢಿಗರು ಮಣ್ಣಿಗೆ ಉಕ್ಕಿನ ಬೇಲಿಯನ್ನು ಹಾಕಿ, ಹರಿತವಾದ ಚಾಕುವಿನಿಂದ ಕೇಕ್ ಕಟ್ ಮಾಡಿದ ಹಾಗೆ ತುಂಡು ತುಂಡು ಮಾಡಿ ಚಿನ್ನದ ಬೆಲೆಗೆ ಮಾರುತ್ತಿದ್ದಾರೆ. ಸರಕಾರಗಳು ಮಣ್ಣಿರುವುದು ಸಿರಿವಂತರು ತಮ್ಮ ಕಾರ್ಖಾನೆ ಸ್ಥಾಪಿಸುವುದಕ್ಕೇ ಹೊರತು ರೈತರು ಉಳುಮೆ ಮಾಡುವುದಕ್ಕಲ್ಲ ಎಂದು ವರ್ತಿಸುತ್ತಾ ಬಡವರ ಬಾಯಿಗೆ ಮಣ್ಣು ಹಾಕುತ್ತಿವೆ. ಇಷ್ಟೆಲ್ಲಾ ಸಂಗತಿ ಮಣ್ಣಿನ ವಿಚಾರವಾಗಿಯೇ ನಡೆಯುತ್ತಿರುವುದು.

ನ.ಸಾ: ಅದೇನೋ ಸರ್ ಲಾರ್ಡ್ ಆದರೆ ಇದರಿಂದ ನಿಮಗೇನು ತೊಂದರೆ?

ನ.ಸಾ: ತೊಂದರೆ ಇದೆ. ನೋಡಿ, ನಾನು ಹುಟ್ಟಿದ್ದು ಮಣ್ಣಿನಿಂದ. ನಮ್ಮ ತಾಯಿ ಪಾರ್ವತಿ ಪರ್ವತ ರಾಜನ ಮಗಳು. ಆಕೆಯ ಮೈಯಿಂದ ತೆಗೆದ ಮಣ್ಣಿನಿಂದಲೇ ನಾನು ಹುಟ್ಟಿದ್ದು. ನನ್ನ ದೇಹದ ಪ್ರತಿಯೊಂದು ಕಣಕಣವೂ ಮಣ್ಣೇ. ಹೀಗಾಗಿ ನಾನು ಮಣ್ಣಿನ ಮಗ! ಮಣ್ಣಿನಿಂದಾಗಿ ಇಷ್ಟೆಲ್ಲಾ ಅನ್ಯಾಯ, ಅನಾಹುತ, ಅತ್ಯಾಚಾರ, ಶೋಷಣೆ ನಡೆಯುತ್ತಿರುವುದು ನನಗೆ ಅಪಮಾನ ಮಾಡಿದ ಹಾಗೇ ಅಲ್ಲವೇ? ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆಯೆಂದರೆ ಚೌತಿಯ ದಿನ ನನ್ನ ಮೂರ್ತಿಯನ್ನು ಮಾಡಲೂ ಜನರಿಗೆ ಮಣ್ಣು ಸಿಕ್ಕುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಕಲೆಸಿ ನಿರ್ಜೀವವಾದ ಮೌಲ್ಡಿಗೆ ಸುರಿದು ನನ್ನನ್ನು ಮಾಡುತ್ತಿದ್ದಾರೆ. ಹೀಗಾದರೆ ನಾನು ಮಣ್ಣಿನ ಮಗ ಹೇಗಾದೇನು? ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮಗನಾಗಬಹುದು ಅಷ್ಟೇ! (ಇದೇ ಸುಸಂಧಿಯನ್ನು ಬಳಸಿಕೊಂಡು ‘ಮಣ್ಣಿನ ಮಗ’ ಟೈಟಲನ್ನು ಯಾರ್ಯಾರೋ ಹೈಜಾಕ್ ಮಾಡುತ್ತಿದ್ದಾರೆ)

ನ.ಸಾ: ಹೌದು ಲಾರ್ಡ್ ಇದು ನಿಜಕ್ಕೂ ದುಃಖದ ಸಂಗತಿ. ಆದರೆ ನಮ್ಮಗಳ ಕೈಗಳೂ ಕಟ್ಟಿಹೋಗಿವೆ. ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಗಳನ್ನೆಲ್ಲಾ ಸರಕಾರಗಳ ಕೈಗೆ ಕೊಟ್ಟು ಸುಮ್ಮನಾಗಿದ್ದೇವಲ್ಲ?

ವಿ: ನೀವೆಂಥಾ ಮಡ್ಡಿಗಳು! ನಿಮ್ಮನ್ನು ನೀವು ಪ್ರಾಮಾಣಿಕರು, ಅಸಹಯಾಕರು, ಶೋಷಿತರು ಎಂದು ಅದೆಷ್ಟು ಕಾಲ ನಂಬಿಕೊಂಡು ಕಾಲ ಕಳೆಯುತ್ತೀರಿ? ನಡೆಯುತ್ತಿರುವ ಎಲ್ಲಾ ಅಕ್ರಮ, ಅನ್ಯಾಯಗಳಲ್ಲಿ ನೀವೂ ಪಾಲುದಾರರು ಎಂಬುದನ್ನು ನೆನೆಪಿಟ್ಟುಕೊಳ್ಳಿ. ಸರಕಾರವೇನು ದೇವರು ಮಾಡಿದ ವ್ಯವಸ್ಥೆಯಲ್ಲ. ನೀವೇ ಕಟ್ಟಿಕೊಂಡದ್ದು. ಅದರ ಮಂತ್ರಿಗಳೇನೂ ದೇವರ ಆಯ್ಕೆಯಲ್ಲ. ನೀವೇ ಐದು ವರ್ಷಕ್ಕೊಮ್ಮೆ ಆರಿಸಿ ಕಳುಹಿಸಿದ್ದು. ಅವರು ಲೂಟಿ ಮಾಡಿದ ರಖಮಿನಲ್ಲಿ ಸಾಧ್ಯವಾದಷ್ಟನ್ನು ಚುನಾವಣೆಯ ಸಮಯದಲ್ಲಿ ಗೆಬರಿಕೊಂಡು ಓಟು ಹಾಕುತ್ತೀರಿ. ಮತ್ತದೇ ಸರಕಾರವನ್ನು ತಂದುಕೊಳ್ಳುತ್ತೀರಿ. ಪಾಪ, ನಾಡಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ನಿಮಗೆ! ಹೆಚ್ಚು ಬೈಯ್ಯುವುದಕ್ಕೆ ಹೋಗುವುದಿಲ್ಲ, ಈ ಬಾರಿ ಬೆಲೆಯೇರಿಕೆಯ ಸಂಕಷ್ಟದಲ್ಲೂ ಸಹ ನನಗೆ ಹೊಟ್ಟೆ ತುಂಬಾ ಭಕ್ತಿಯ, ಶ್ರದ್ಧೆಯ ಕಾಯಿ ಕಡುಬು, ಮೋದಕಗಳನ್ನು ಪ್ರೀತಿಯಿಂದ ತಿನ್ನಿಸಿದ್ದೀರಿ. ನಿಮಗೆ ನಾನು ವಿದ್ಯಾ, ಬುದ್ಧಿಯನ್ನು ಕರುಣಿಸುತ್ತೇನೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ.

ನ.ಸಾ: ಧನ್ಯವಾದಗಳು ಲಾರ್ಡ್ ವಿಘ್ನೇಶ್ವರ, ನಗೆ ನಗಾರಿಯೊಂದಿಗಿನ ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು.

ವಿ: ಹ್ಹ! ಹಾಗೆ ಈ ಸಂದರ್ಶನದ ಬಗ್ಗೆ ಏನಾದರೂ ಡಿಬೇಟ್ ಮಾಡುವುದಿದ್ದರೆ ನನ್ನ ಮೇಲ್ ಐಡಿ(vnk_gaja@gmail.com) ಗೆ ಒಂದು ಮೇಲ್ ಒಗಾಯಿಸಿ.

ವಿನಾಯಕನ ಸಂದರ್ಶನ- ಶೀಘ್ರದಲ್ಲಿ!

10 ಸೆಪ್ಟೆಂ

ಗಜಾನನ, ಗಣಪತಿ, ವಿನಾಯಕನಿಂದ ನಗೆ ನಗಾರಿಯ ಕಛೇರಿಗೆ ಬಂದಿದ್ದ ಇಮೇಲಿನ ಬಗ್ಗೆ ಬಂದ ವರದಿಯನ್ನು ಓದಿದ್ದೀರಿ. ಆ ಇ-ಮೇಲನ್ನು ಓದಿ ನಗೆ ಸಾಮ್ರಾಟರು ವಿನಾಯಕನೊಂದಿಗೆ ಸಂದರ್ಶನವನ್ನು ಏರ್ಪಡಿಸಲು ಹೆಣಗುತ್ತಿದ್ದಾರೆ ಎಂದು ಹೇಳಿದ್ದೆವು. ಸಾಮ್ರಾಟರು ತಮ್ಮೆಲ್ಲಾ ಪ್ರಭಾವ ಹಾಗೂ ಯಾರಿಗೂ ತಿಳಿಯದ ಪ್ರಸಿದ್ಧಿ ಜೊತೆಗೆ ತೃಣ ಮಾತ್ರವಾದ ಆಸ್ತಿಕತೆಯ ಬಲದಿಂದ ಕೆಲಸವನ್ನು ಸಾಧಿಸಿಕೊಂಡು ಬಂದಿದ್ದಾರೆ.

ಹೌದು, ಲಾರ್ಡ್ ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೋಸಿವ್ ಆಗಿ ಸಂದರ್ಶನ ನೀಡಿದ್ದಾನೆ. ಶೀಘ್ರದಲ್ಲಿಯೇ ಗಣೇಶನೊಂದಿಗಿನ ಸಂದರ್ಶನ ನಗೆ ನಗಾರಿ ಡಾಟ್ ಕಾಮ್ ನಲ್ಲಿ ಪ್ರಕಟವಾಗಲಿದೆ. ನಿಮ್ಮ ಕಂಪ್ಯೂಟರನ್ನು ಸನ್ನದ್ಧವಾಗಿಟ್ಟುಕೊಳ್ಳಿ!

some (ಸಂ)

ಯುವ ಬ್ಲಾಗಿಗನ ಸಂದರ್ಶನ(2)

13 ಆಗಸ್ಟ್

(ನಗೆ ಸಾಮ್ರಾಟರ ಅಟ್ಟದ ಮೇಲಿನ ಈಗೋ ಭಾಳ ಬುದ್ಧಿವಂತನಾಗಿಬಿಟ್ಟಿದ್ದ. ಸಂದರ್ಶನದ ಉಳಿದ ಭಾಗವನ್ನು ‘ನಾಳೆ’ಗೆ ಮುಂದುವರೆಸುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟ. ಆ ನಾಳೆ ಯಾವತ್ತೂ ಬರುವುದಿಲ್ಲ ಎಂದು ತಿಳಿದು ಆತ ಪರಾರಿ ಕಿತ್ತಿದ್ದ. ಅನಂತರ ನಗೆ ಸಾಮ್ರಾಟರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ಮನೆ ಮನೆಯ ಅಟ್ಟವನ್ನು ಹುಡುಕಾಡಿ ಅವನನ್ನು ಎಳಕೊಂಡು ಬಂದಿದ್ದಾರೆ. ಸಂದರ್ಶನ ಮುಂದಿನ ಭಾಗವನ್ನು ಇಲ್ಲಿ ಕೊಟ್ಟು ಆತ ತನ್ನ ಮರ್ಯಾದೆ ಉಳಿಸಿಕೊಂಡಿದ್ದಾನೆ.)

ನಗೆ ಸಾಮ್ರಾಟ್: ಹೌದು, ಸರ್. ಬ್ಲಾಗಿಂಗ್ ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ? ದಯವಿಟ್ಟು ತಿಳಿಸಬೇಕು.

ಯುವ ಬ್ಲಾಗಿಗ: ಇಂಟರ್ನೆಟ್ ಎಂಬ ಅಲ್ಲಾವುದ್ದೀನನ ಅದ್ಭುತದ ದೀಪದಿಂದ ಹೊರ ಬರುತ್ತಿರುವ ಅಸಂಖ್ಯಾತ ಜೀನಿಗಳಲ್ಲಿ ಈ ಬ್ಲಾಗಿನ ತಂತ್ರಜ್ಞಾನವೂ ಒಂದು ಕಣ್ರೀ. ಇದು ಜನರಿಗೆ ಹಿಂದೆಂದೂ ಇರದಿದ್ದ, ಜನರು ಊಹಿಸಲು ಸಾಧ್ಯವೇ ಇರದಿದ್ದ ಅವಕಾಶವನ್ನು ತೆರೆದುಕೊಟ್ಟಿದೆ. ಇಂಥ ಸವಲತ್ತು ಯಾವ ಕಾಲದಲ್ಲಿತ್ತು, ಯಾವ ನಾಗರೀಕತೆಗಳಲ್ಲಿತ್ತು? ಹಿಂದಿನಿಂದಲೂ ತುಂಬಾ ಹಿಂದಿನಿಂದಲೂ ದೊಡ್ಡವರು ಹೇಳುತ್ತಾ ಬಂದದ್ದು ಒಂದೇ ಮಾತು ‘ಬಾಯ್ಮುಚ್ಚು… ತಲೆ ಹರಟೆ!’ ಮನುಷ್ಯನ ಸಹಜ ಸ್ವಭಾವವೇ ಬಾಯ್ತೆರೆಯುವುದು. ಮಗು ಕಣ್ಬಿಟ್ಟ ಕೂಡಲೇ ಬಾಯಿ ಅಗಲಿಸಿ ಕಿಟ್ಟನೆ ಚೀರುತ್ತದೆ. ಹಾಗೆ ಚೀರದ ಮಗು ಆರೋಗ್ಯ ಹೊಂದಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಮನುಷ್ಯ ಬಿದ್ದಾಗಲೂ, ಎಡವಿದಾಗಲೂ ಬಾಯಿ ತೆರೆಯುತ್ತಾನೆ. ಕೊನೆಗೆ ಸತ್ತ ಮೇಲೂ ಬಾಯ್ತೆರೆದೇ ಇರುತ್ತಾನೆ. ಮನುಷ್ಯನ ಈ ಸಹಜ ಸ್ವಭಾವವನ್ನು ದಮನಿಸುವ ವ್ಯವಸ್ಥಿತ ಸಂಚು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನುಚ್ಚು ನೂರು ಮಾಡಿದ್ದು ಬ್ಲಾಗುಗಳು. ಇದಕ್ಕೂ ಮುನ್ನ ಇದೇ ಕ್ರಾಂತಿಯನ್ನು ಮೊಬೈಲ್ ಫೋನುಗಳು ಮಾಡಲು ಪ್ರಯತ್ನ ಪಟ್ಟವು. ‘ಮಾತಾಡು ಇಂಡಿಯಾ ಮಾತಾಡು’ ಎಂದು ಹುರಿದುಂಬಿಸಿದವು. ಆದರೆ ಅವುಗಳಿಗೆ ಯಶಸ್ಸು ಸಿಕ್ಕಲಿಲ್ಲ.

ನ.ಸಾ: ಮೊಬೈಲುಗಳು ಯಶಸ್ವಿಯಾಗಲಿಲ್ಲವಾ? ಹೇಗೆ ಸರ್?

ಯು.ಬ್ಲಾ: ‘ಮಾತಾಡು ಭಾರತವೇ ಮನಬಿಚ್ಚಿ ಮಾತಾಡು’ ಎಂದೇನೋ ಮೊಬೈಲ್ ಕಂಪೆನಿಗಳು ಜನರನ್ನು ಹುರಿದುಂಬಿಸಿದವು. ಜನರೂ ಸಹ ಹೆಚ್ಚು ಹೆಚ್ಚು ಮಾತಾಡಿದಷ್ಟೂ ಫೋನ್ ಬಿಲ್ಲು ಹೆಚ್ಚು ಹೆಚ್ಚು ಬರುವುದನ್ನು ಕಂಡು ತಮ್ಮ ಮಾತಿಗೆ ಇಷ್ಟೋಂದು ಬೆಲೆಯಿದೆಯಾ ಎಂದು ಅನುಮಾನಗೊಂಡು, ಆಶ್ಚರ್ಯಗೊಂಡು, ಆಘಾತಗೊಂಡು ಸುಧಾರಿಸಿಕೊಂಡರು. ಆದರೆ ಬರು ಬರುತ್ತಾ ಅವರಿಗೆ ಅರಿವಾಯಿತು. ಮೊಬೈಲುಗಳು ಕ್ರಾಂತಿಯನ್ನು ಮಾಡುವಲ್ಲಿ ಸೋತವು ಎಂದು. ಮೊಬೈಲಿನಲ್ಲಿ ನೀವೆಷ್ಟೇ ಮಾತನಾಡಿದರೂ ನಿಮ್ಮನ್ನು ಕೇಳಲಿಕ್ಕೆ ಒಬ್ಬನಾದರೂ ಅತ್ತ ಕಡೆ ಇರಬೇಕಲ್ಲವಾ? ನಿಮ್ಮ ಕಥೆಗೆ, ನಿಮ್ಮ ಸಾಧನೆಯ ಯಶೋಗಾಥೆಗೆ ಹೂಂಗುಟ್ಟಲು ಒಂದು ಜೊತೆ ಕಿವಿ-ಬಾಯಿಯಾದರೂ ಆವಶ್ಯಕವಲ್ಲವಾ? ಜನರಿಗೆ ಮಾತನಾಡುವ, ಬಾಯ್ಬಿಡುವ ತೆವಲು ಹತ್ತಿದಾಗ ಸುಮ್ಮನೆ ಕಂಡಕಂಡವರಿಗೆ ಫೋನಾಯಿಸಲು ಸಾಧ್ಯವಾಗುತ್ತದಾ? ಹಾಗೇನಾದರೂ ಮಾಡಿದರೆ ‘ಕೊರೆತ ಕ್ರಿಮಿ’ ಎಂಬ ಬಿರುದು ಪಡೆಯಬೇಕಾಗುತ್ತದೆ. ನಿಮಗೆ ಸಾಹಿತ್ಯದಲ್ಲಿ ನೊಬೆಲ್ ಕೊಟ್ಟ ಸಂಗತಿಯನ್ನು ಹೇಳಲು ಫೋನಾಯಿಸಿದರೂ ಅತ್ತ ಬದಿಯವರು ಫೋನಿನ ಕೊನೆಯ ರಿಂಗಿನ ಕಂಪನ ಸಾಯುವವರೆಗೂ ಅದನ್ನು ಕೈಲೇ ಇಟ್ಟುಕೊಂಡು ಸತಾಯಿಸತೊಡಗುತ್ತಾರೆ. ಇಲ್ಲವೇ ಸಿಮ್ ಬದಲಿಸಿ ಅದರ ಬಗ್ಗೆ ಸುಳಿವೂ ಸಿಕ್ಕದ ಹಾಗೆ ಎಚ್ಚರ ವಹಿಸುತ್ತಾರೆ. ಇದರಿಂದಾಗಿ ಮೊಬೈಲುಗಳು ‘ಬಾಯ್ತೆರೆಸುವ’ ಕ್ರಾಂತಿಯನ್ನು ಮಾಡುವಲ್ಲಿ ವಿಫಲವಾದವು.

ನ.ಸಾ: ಅದೇನೋ ಸರಿ ಸರ್, ಆದರೆ ಬ್ಲಾಗುಗಳು ಹೇಗೆ ಈ ಕ್ರಾಂತಿಯನ್ನು ಮಾಡಲು ಸಾಧ್ಯವಾಯಿತು?

ಯು.ಬ್ಲಾ: ಹೇಳುತ್ತೇನೆ ಕೇಳಿ, ಈ ಬ್ಲಾಗುಗಳು ಕಂಪ್ಯೂಟರು, ಅದಕ್ಕೊಂದು ಅಂತರ್ಜಾಲದ ನೆಟ್‌ವರ್ಕು ಇರುವ ಯಾರಾದರೂ ಒಂದು ತಾಣವನ್ನು ತೆರೆದುಕೊಂಡು ಮನಸ್ಸಿಗೆ ತೋಚಿದ್ದನ್ನು ಗೀಚಿ ಬಿಸಾಕುವ ಸ್ವಾತಂತ್ರ್ಯವನ್ನೂ ಕೊಟ್ಟವು. ಜನರು ಚೆಂದದ ಹೆಸರಿನ ಬ್ಲಾಗುಗಳನ್ನು ತೆರೆದುಕೊಂಡು ಅದರಲ್ಲಿ ತಮ್ಮ ಫೋಟೊ ಹಾಕಿಕೊಂಡು, ತಮ್ಮ ಪ್ರವರವನ್ನು ಹರಿಬಿಟ್ಟು ಹುರುಪಿನಿಂದ ಮಾತು ಹಚ್ಚಿಕೊಂಡರು. ಮೈಮೇಲೆ ಹುತ್ತಗಟ್ಟಲು ಬಿಟ್ಟು ರಾಮಾಯಣ ರಚಿಸುವಲ್ಲಿ ಮಗ್ನರಾದವರ ಹಾಗೆ ಕೀಲಿಮಣೆಯನ್ನು ಕುಟ್ಟುತ್ತಾ ಕೂರುತ್ತಾರೆ ಜನರು. ತಾವು ಬರೆಯುವುದನ್ನೇ ಜಗತ್ತು ಕಾಯುತ್ತಾ ಕುಳಿತಿದೆಯೆಂದು ಭ್ರಮಿಸಿಕೊಂಡು ಕಲ್ಪನಾ ಲೋಕದಲ್ಲಿ ತೇಲಾಡುತ್ತಾರೆ. ತಮ್ಮ ಮಾತನ್ನು, ತಮ್ಮ ಬರಹವನ್ನು ತಮ್ಮ ಚಿಂತನೆಯ ಹೆಸರಿನಲ್ಲಿರುವ ಹರಟೆಯನ್ನು ಜಗತ್ತಿನ ಯಾವ ಮನುಷ್ಯ ಬೇಕಾದರೂ ಓದಬಹುದು ಎಂದು ನೆನೆದು ಪುಳಕಗೊಳ್ಳುತ್ತಾರೆ. ದಿನಕ್ಕೆ ನೂರು ಬಾರಿ ಕ್ಲಿಕ್ಕಿಗರ ಸಂಖ್ಯೆಯನ್ನು ನೋಡುತ್ತಾ, ಬ್ಲಾಗ್ ಅಂಕಿ ಅಂಶಗಳ ಗ್ರಾಫನ್ನೇ ಧೇನಿಸುತ್ತಾ ಕೂರುತ್ತಾರೆ. ದಿನ ದಿನವೂ ಪ್ರಪಂಚದ ಯಾವ ಮೂಲೆಯಿಂದಲಾದರೂ ತಮಗೆ ಪ್ರತಿಕ್ರಿಯೆ ಬಂದಿದೆಯಾ ಎಂದು ಮೇಲ್ ಬುಟ್ಟಿಯನ್ನು ತಡಕುತ್ತಾರೆ. ಇಷ್ಟೆಲ್ಲಾ ಹುಸಿ ಸಂಭ್ರಮ ಪಡುತ್ತಾ ಕಳೆಯುವ ಸಮಯದಲ್ಲಿ ಮಹತ್ವವಾದದ್ದೇನನ್ನೋ ಓದುವ, ಬರೆಯುವ, ಹೊಸದನ್ನು ಕಲಿಯುವಂತಹ ಕೆಲಸಗಳನ್ನು ಮಾಡಬಹುದು ಎಂಬುದನ್ನು ಯಶಸ್ವಿಯಾಗಿ ಮರೆಯುತ್ತಾರೆ. ಮಾತನಾಡುತ್ತಲೇ ಹೋಗುತ್ತಾರೆ…

ನ.ಸಾ: ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ಬ್ಲಾಗುಗಳಲ್ಲಿ ಹೆಚ್ಚು ಹೆಚ್ಚು ಜನರು ಬರೆಯಲು ಶುರು ಮಾಡಿದಾಗಿನಿಂದ ಒಟ್ಟಾರೆಯಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ? ಜನರ ಮನಸ್ಥಿತಿಯಲ್ಲಿ ಏನೆಲ್ಲಾ ಪರಿವರ್ತನೆಗಳಾಗಿವೆ?

ಯು.ಬ್ಲಾ: ಒಳ್ಳೆಯ ಪ್ರಶ್ನೆ. ನಮ್ಮ ಜನರಲ್ಲಿ, ಅದರಲ್ಲೂ ನನ್ನಂಥ ಯುವಕರಲ್ಲಿ ಬಹಳ ಬದಲಾವಣೆಗಳಾಗುತ್ತಿವೆ. ಹಿಂದೆಲ್ಲಾ ಸಮಾಜದ ಬಗ್ಗೆ, ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಇವರು ಕುದ್ದು ಹೋಗುತ್ತಿದ್ದರು. ಅನ್ಯಾಯ ಮೇರೆ ಮೀರಿದಾಗ ಬೀದಿಗಿಳಿಯುತ್ತಿದ್ದರು. ಕೆಲವೊಮ್ಮೆ ಉಗ್ರ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಜೀವವನ್ನು ಬಲಿದಾನ ಮಾಡಲೂ ಹಿಂಜರಿಯುತ್ತಿರಲಿಲ್ಲ, ಸುಧಾರಣೆಯನ್ನು ತರುತ್ತಿದ್ದರು. ಬದಲಾವಣೆಗೆ ಕಾರಣರಾಗುತ್ತಿದ್ದರು. ಈಗ ಹಾಗಿಲ್ಲ. ತಮಗೆ ಏನೇ ಅನ್ಯಾಯ ಕಂಡರೂ, ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದರೂ ಪಬ್ಲಿಕ್ ಟಾಯ್ಲೆಟ್ ಒಳಹೊಕ್ಕು ಉಮ್ಮಳವನ್ನು ಕಳೆದುಕೊಂಡು ಬಂದಷ್ಟೇ ಸಲೀಸಾಗಿ ಅದನ್ನೆಲ್ಲಾ ಬ್ಲಾಗಿನ ಅಂಗಳದಲ್ಲಿ ಕಾರಿಕೊಂಡು ಜವಾಬ್ದಾರಿಯಿಂದ ಜಾರಿಕೊಂಡು ಬಿಡುತ್ತಾರೆ. ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೆ ಅದರ ಬಗ್ಗೆ ಬ್ಲಾಗಿನಲ್ಲಿ ಏನೆಂದು ಬರೆಯುವುದು, ಏನು ಟೈಟಲ್ ಕೊಡುವುದು, ಎಂಥಾ ಪ್ರತಿಕ್ರಿಯೆ ಬರಬಹುದು ಎಂದೆಲ್ಲಾ ಕನಸುತ್ತಾ ಅನ್ಯಾಯವನ್ನು ಪ್ರತಿಭಟಿಸುವುದನ್ನೇ ಮರೆಯಲು ಸಹಾಯ ಮಾಡುತ್ತಲಿದೆ ಈ ಬ್ಲಾಗು. ಟ್ರಾಫಿಕ್ಕಿನ ಬಗ್ಗೆ, ಹೆಚ್ಚುತ್ತಿರುವ ಮನಸ್ಸಿನ ಮಾಲಿನ್ಯದ ಬಗ್ಗೆ, ಭಾವನೆಗಳು ನಶಿಸುತ್ತಿರುವುದರ ಬಗ್ಗೆ, ಮನುಷ್ಯ ಮನುಷ್ಯನ ಜೊತೆ ಮಾತನಾಡಲು ಸಂಯಮ ಕಳೆದುಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ… ಹೀಗೆ ಎಲ್ಲದರ ಬಗ್ಗೆ ಗೊಣಗುತ್ತಾ ಗೊಣಗುತ್ತಾ ತಮ್ಮ ಗೊಣಗಾಟ ಈ ಜಡವಾದ ವ್ಯವಸ್ಥೆಯಲ್ಲಿ ಭಯಾನಕ ಬಿರುಗಾಳಿಯನ್ನೇಳಿಸುತ್ತದೆ ಎಂದು ಕನಸು ಕಾಣುತ್ತಾ ಬದುಕುತ್ತಿದ್ದಾರೆ.

ನ.ಸಾ: ಹೀಗೆಲ್ಲಾ ನಡೆಯುತ್ತಿದೆಯೇ ಸರ್? ಮತ್ತೇನೇನು ನಿಮ್ಮ ಗಮನಕ್ಕೆ ಬಂದಿದೆ?

ಯು.ಬ್ಲಾ: ಹೇಳಲಿಕ್ಕೆ ಇನ್ನೂ ಇದೆ. ಜನರಿಗೆ ಪತ್ರಿಕೆಗಳು ಏಕೈಕ ಸುದ್ದಿ ಮೂಲವಾಗಿದ್ದವು. ಪತ್ರಿಕೆಯಲ್ಲಿ ಪ್ರಕಟವಾದದ್ದೆಲ್ಲಾ ಸತ್ಯ ಎಂದು ಜನ ನಂಬುತ್ತಿದ್ದರೂ ಈಗಲೂ ಬಹುಪಾಲು ಮಂದಿ ಅದನ್ನೇ ನಂಬಿಕೊಂಡಿದ್ದಾರೆ. ಈ ಬ್ಲಾಗುಗಳು ಬಂದ ಮೇಲೆ ಜನರು ಪತ್ರಿಕೆಗಳ ‘ಪಾತಿವ್ರತ್ಯ’ವನ್ನೇ ಶಂಕಿಸಲು ಶುರು ಮಾಡಿದ್ದಾರೆ. ಮುಂಚೆಯಾದರೆ ಅದು ಆರುಶಿ ತಲ್ವಾರ್ ಕೊಲೆ ಕೇಸಿರಲಿ, ಪದ್ಮ ಪ್ರಿಯಾ ಪ್ರಕರಣವಿರಲಿ, ವೋಟಿಗಾಗಿ ಹಣದ ಕ್ಯಾತೆಯಿರಲಿ ಪತ್ರಿಕೆಗಳು ಹೇಳಿದ್ದನ್ನೇ ಮಹಾಪ್ರಸಾದವೆಂಬಂತೆ ನಾವು ನಂಬುತ್ತಿದ್ದೆವು. ಸಂಪಾದಕರು ದಪ್ಪಕ್ಷರಗಳಲ್ಲಿ ಮುದ್ರಿಸಿದ್ದನ್ನೇ ಮಹಾ ಪ್ರಸಾದವೆಂಬಂತೆ ನಾವು ಭಯ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಅದನ್ನು ಹರಟೆ ಕಟ್ಟೆಯ ‘ಸಂವಾದ’ದಲ್ಲಿ ಎತ್ತಿಕೊಂಡು ನಮ್ಮ ನಮ್ಮ ಸಂಸ್ಕಾರಗಳಿಗೆ ತಕ್ಕ ಹಾಗೆ ಅದನ್ನು ಸಂಸ್ಕರಿಸಿ, ಸಾಧ್ಯವಾದಷ್ಟು ಮಂದಿಗೆ ವಿತರಿಸಿ ಮನೆಯ ಬಾಗಿಲು ಹಾಕಿಕೊಂಡು ನೆಮ್ಮದಿಯಿಂದ ಮಲಗುತ್ತಿದ್ವಿ. ಆದರೆ ಈ ಬ್ಲಾಗುಗಳು ಪತ್ರಿಕೆಗಳ ನಾನಾ ಬಣ್ಣದ ವೇಷಗಳನ್ನು ಬಿಚ್ಚಿ ಹಾಕಿ ಅವನ್ನು ಬೆತ್ತಲಾಗಿಸುತ್ತಾ ಹೋದಂತೆಲ್ಲಾ ನಮಗೆ ಆಘಾತವಾಗುತ್ತಿದೆ. ಈಗ ಜನರಿಗೆ ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವಲ್ಲ ಆದರೆ ಬ್ಲಾಗುಗಳಲ್ಲಿ ಬಂದದ್ದೆಲ್ಲಾ ಸತ್ಯ ಎಂದು ಅರಿವಾಗುತ್ತಿದೆ. ಹೀಗಾಗಿ ಗಲ್ಲಿಗೊಂದರಂತೆ ‘ಅಭಿಪ್ರಾಯ’ ವಿತರಿಸುವ ಬ್ಲಾಗುಗಳು ಹುಟ್ಟಿಕೊಂಡಿವೆ. ಸೂರ್ಯನ ಕೆಳಗಿನ ಪ್ರತಿಯೊಂದು ಸಂಗತಿಯ ಬಗ್ಗೆ ನಿರರ್ಗಳವಾಗಿ ಕೊರೆಯಬಲ್ಲ ಪಂಡಿತರು ಸೃಷ್ಟಿಯಾಗಿದ್ದಾರೆ. ಜಗತ್ತಿನ ಯಾವ ಘಟನೆಯ ಬಗೆಗೇ ಆಗಲಿ ಮಾತನಾಡುವ ಹಕ್ಕು ಎಲ್ಲರಿಗೂ ಸಿಕ್ಕಿದೆ. ಯಾವ ಕೋರ್ಟು, ವಿಚಾರಣೆಯೂ ಇಲ್ಲದೆ ಅಪರಾಧಿ ಯಾರೆಂದು ತೀರ್ಪು ಕೊಡುವ ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಕ್ರಾಂತಿ ಸಾಧ್ಯವೇ?

ನ.ಸಾ: ತುಂಬಾ ಉಪಯುಕ್ತವಾದ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಯುವ ಬ್ಲಾಗಿಗರೇ.

ಯು.ಬ್ಲಾ: ಹ್ಹಾ! ನಿಮ್ಮ ಸೋಂಪಾದಕರ ಇಲ್ಲವೇ ಸಹ ಬ್ಲಾಗಿಗರ ಒತ್ತಾಯಕ್ಕೆ ಮಣಿದು ನನ್ನ ಸಂದರ್ಶನವನ್ನೇನಾದರೂ ಎಡಿಟ್ ಮಾಡಿದರೆ ಜೋಕೆ!

ನ.ಸಾ: ಇಲ್ಲ, ಸರ್ ನಮ್ಮ ಬ್ಲಾಗಿನಲ್ಲಿ ಯಾವ ಸಂಗತಿಯೂ ಸೆನ್ಸಾರ್ ಆಗುವುದಿಲ್ಲ. ನಮ್ಮ ನಾಡಿನ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಿ ಯಾರದೋ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ, ತಮ್ಮ ಪುಸ್ತಕ ಬಿಡುಗಡೆ ಮಾಡಿ ಬೇರಾರನ್ನೋ ಬೈದು ಭಾಷಣ ಮಾಡುವಾಗ ಹೇಳಿದ ಹಾಗೆ ನೀವು ‘ಕಾಂಡೋಮ್’ ಇಲ್ಲದೆ ಮಾತನಾಡಬಹುದು ನಗೆ ನಗಾರಿಯಲ್ಲಿ ಮಾತ್ರ! (ಮಾತನಾಡುವುದಕ್ಕೆ ಕಾಂಡೋಮ್ ಯಾಕೆ ಅಂತ ಹಾಯ್ ಬೆಂಗಳೂರ್ ಸಾರಥಿಯ ಹಾಗೆ ಕೇಳಬೇಡ್ರಿ ಮತ್ತೆ!)