Tag Archives: ಸಂತಾಪಕೀಯ

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಸಂತಾಪಕೀಯ: ಸಾಮ್ರಾಟರಿಗೆ ಹೇಳಿ ಬಹುಪರಾಖ್!

19 ಆಗಸ್ಟ್

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ… ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್  ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ ಲಂಚ ಹೊಡೆದ ಆರೋಪ ತಲೆಯ ಮೇಲೆ ಕೂತಿದ್ದರೂ, ಲಜ್ಜೆಯಿಲ್ಲದ ಕುಕರ್ಮ ಮಾಡಿ ಸಿಕ್ಕುಬಿದ್ದರೂ ಜನರು ಧೈರ್ಯವಾಗಿ ಎದುಗುಂದದೆ ಬಾಳುವುದಕ್ಕೆ ಈ ಮೇಲಿನ ಬುದ್ಧಿವಂತಿಕೆಯ ಮಾತೇ ಆಧಾರ. ಜನರ ಈ ‘ಗಜನಿ’ ಮಾದರಿಯ ಅತ್ಯದ್ಭುತ ನೆನಪಿನ ಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅನೇಕ ಟಾನಿಕ್ಕುಗಳು ಹಗಲಿರುಳು ಕೆಲಸ ಮಾಡುತ್ತಿದ್ದರೂ ಒಟ್ಟಾರೆಯಾಗಿ ಸಮಾಜಕ್ಕೆ ಮರೆವಿನ ಶಕ್ತಿಯು ಬಲವಾಗಿ ವೃದ್ಧಿಯಾಗುತ್ತಿದೆ.

ಈ ಮರೆವಿನ ಶಕ್ತಿಯ ವಿರುದ್ಧ ಸೆಣೆಸುವುದಕ್ಕಾಗಿಯೇ ರಾಖಿ ಸಾವಂತಳು ಕ್ಯಾಮರಾದೆದುರು ಯಾರಿಂದಲೋ ಕಿಸ್ಸು ಪಡೆಯುತ್ತಾಳೆ, ರಾಹುಲ್ ಮಹಾಜನ್ ಯಾರಿಗೋ ಕೆನ್ನೆಗೆ ಬಿಗಿಯುತ್ತಾನೆ… ನಮ್ಮ ನೇತಾಗಳು ಕಂಡ ಕಂಡ ಮರದ ಕೊಂಬೆ ಹಿಡಿದು ನೇತಾಡುತ್ತಾರೆ. ಮೂರು ಬಿಟ್ಟು ಮಾರಲು ಕೂತ ವ್ಯಾಪಾರಿಗಳು ಕಂಡಲ್ಲಿ ಜಾಹೀರಾತಿನ ಗುಂಡು ಹಾರಿಸುತ್ತಾರೆ. ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಮಗ್ಗಿಯನ್ನು ಉರುಹೊಡೆಸಿ ನೆನಪಿರಿಸಿಕೊಳ್ಳುವಂತೆ ಮಾಡುವ ಶಿಕ್ಷರ ಹಾಗೆ ಎಲ್ಲರೂ ತಮ್ಮ ನೆನಪು ಎಲ್ಲರ ಮೆದುಳುಗಳಲ್ಲಿ ಹಚ್ಚ ಹಸಿರಾಗಿರಬೇಕೆಂದು ಪ್ರಯಾಸ ಪಡುತ್ತಾರೆ.

ಶ್ರೀ ಕೃಷ್ಣನು ಸಹ ತನ್ನನ್ನು ಮರೆತು ಬಿಡಬಾರದೆಂದು ಅಧರ್ಮ ತಲೆಯೆತ್ತಿದಾಗಲೆಲ್ಲಾ ತಾನು ಬಂದೇ ಬರುವೆನ್ ಎನ್ನುವ ಆಶ್ವಾಸನೆಯನ್ನು ನೀಡಿದ್ದಾನೆ. ಆತ ಹೇಗೂ ಬರ್ತೀನಿ ಅಂದಿರುವನಲ್ಲ, ಬಂದಾಗ ನೋಡಿಕೊಳ್ಳೋಣವೆಂದು ಸದ್ಭಕ್ತರು ಆತನ ಆಗಮನಕ್ಕೆ ಪೂರಕವಾದ ‘ಅಧರ್ಮ’ ಸೃಷ್ಟಿಯಲ್ಲಿ ಕಾಯಾ ವಾಚಾ ಮನಸಾ ತೊಡಗಿಸಿಕೊಂಡಿದ್ದಾರೆ.

ನೆನಪು ಹಾಗೂ ಮರೆವಿನ ಬಗ್ಗೆ ಮರೆಯದೆ ಇಷ್ಟು ಗಾಢವಾಗಿ ಯೋಚಿಸುವುದಕ್ಕೆ ಕಾರಣವಿದೆ. ಸತತ ಎರಡು ವರ್ಷಗಳ ಕಾಲ ನಗೆ ಸಾಮ್ರಾಜ್ಯದ ಸಾಮ್ರಾಟರಾಗಿ ಆಳಿದ ನಾವು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ, ನಮಗೇ ಎಣಿಸಲು ಮರೆತು ಹೋದಷ್ಟು ದಿನಗಳ ಕಾಲ ಸದ್ದೇ ಇಲ್ಲದಂತೆ ಕೂತಿದ್ದರೂ ಒಬ್ಬೇ ಒಬ್ಬ ಪ್ರಜೆಯೂ ನಮ್ಮನ್ನು ನೆನಪಿಸಿಕೊಳ್ಳಲಿಲ್ಲ. “ಅಯ್ಯೋ, ನಮ್ಮ ಸಾಮ್ರಾಟರು ಎಲ್ಲಿ? ಅವರಿಗೆ ಏನಾಯಿತು? ಅವರ ಆರೋಗ್ಯ ಹೇಗಿದೆಯೋ?” ಎಂದು ಮಾನಿನಿಯರು ಪರಿತಪಿಸಲಿಲ್ಲ. ಸಿಇಟಿ ಕೌನ್ಸೆಲಿಂಗಿಗೆ ಹೊರಟ ಹುಡುಗ ಹುಡುಗಿಯರು ಸಾಮ್ರಾಟರೇ ಕಣ್ಮರೆಯಾದರೆ ಇನ್ನು ನಮಗ್ಯಾರು ದಿಕ್ಕು ಎಂದು ಗೋಳಿಡಲಿಲ್ಲ. ಅಭಿಮಾನಿಗಳ ಸಂಘದಿಂದ ಒಂದಾದರೂ ಆತ್ಮಹತ್ಯಾ ಯತ್ನ ಪ್ರಹಸನಗಳು ನಡೆಯಲಿಲ್ಲ. ಶನಿವಾರ, ಭಾನುವಾರಗಳಂದು ಕೆಲಸವಿಲ್ಲದೆ ಕಂಡ ಕಂಡಲ್ಲಿ ಅಡ್ವೆಂಚರ್ ಬೆನ್ನಟ್ಟಿ ಅಲೆಯುವ ಟೆಕ್ಕಿಗಳು ನಮ್ಮನ್ನು ಪತ್ತೆ ಹಚ್ಚುವ ಹುಮ್ಮಸ್ಸು ತೋರಲಿಲ್ಲ. ಅಸ್ತಿತ್ವದಲ್ಲೇ ಇಲ್ಲದ ನದಿಗೆ ಕಟ್ಟಿದ ಸೇತುವೆಯ ಫುಟ್ ಪಾತಿನಲ್ಲಿ ಬಿದ್ದ ಲಿಪ್ ಸ್ಟಿಕ್ಕಿನ ಒಡತಿಯ ಗಂಡನ ಗುಪ್ತ ಸಂಬಂಧವನ್ನು ಪತ್ತೆ ಹಚ್ಚುವ ಚಾಣಾಕ್ಷ ಪತ್ರಕರ್ತರು ಸಾಮ್ರಾಟರ ಸ್ಟೇಟಸ್ಸು ಅಲೈವ್ ಅಥವಾ ಒನ್ಸ್ ಅಪಾನ್ ಎ ಟೈಮ್ ಆಗಿದೆಯೋ ಎನ್ನುವುದನ್ನು ಹುಡುಕುವ ಆಸಕ್ತಿ ತೋರಲಿಲ್ಲ.

ಇದನ್ನೆಲ್ಲಾ ಕಂಡಾಗ ನಮಗೆ ನಖಶಿಖಾಂತ ಕೋಪ ಉಕ್ಕಿ ಬರಬೇಕಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣಗಳು ಎರಡು. ಒಂದು, ತಂದೆ ತಾಯಿ ಕಲಿಸಿದಂತ ಶಿಸ್ತಿನಿಂದಾಗಿ ನಖವು ಹಾಗೂ ಗೆಳೆಯರು ಕಲಿಸಿದಂತಹ ಅಶಿಸ್ತಿನಿಂದಾಗಿ ನಮ್ಮ ಶಿಖೆಯು ಎಂದಿಗೂ ಕೋಪ ಉಕ್ಕಿಸುವ ಮಟ್ಟಕ್ಕೆ ಬೆಳೆಯಲೇ ಇಲ್ಲ. ನಮಗೆ ಸಿಟ್ಟು ಹುಟ್ಟದಿರುವುದಕ್ಕೆ ಮತ್ತೊಂದು ಕಾರಣ, ನಮ್ಮ ಸಾಮ್ರಾಜ್ಯದ ಜನಸ್ತೋಮದ ಮಾನಸಿಕತೆಯ ಬಗ್ಗೆ ಅಪಾರವಾದ ಅರಿವನ್ನು ನಾವು ಗಳಿಸಿಕೊಂಡಿರುವುದು.

ತನ್ನ ಪ್ರೀತಿಯ ಮಡದಿಯ ಹೆಸರನ್ನು ಜನರು ಮರೆಯದಿರುವಂತೆ ಮಾಡಲು ಷಾಹ್ ಜಹಾನ್ ಅಷ್ಟು ಅದ್ಭುತವಾದ ಮಹಲನ್ನೇ ಕಟ್ಟಿಸಬೇಕಾಯ್ತು. ತನ್ನ ಹೆಸರನ್ನು ಜಗತ್ತು ಎಂದಿಗೂ ನೆನಪಿನಿಂದ ಅಳಿಸಲೇಬಾರದೆಂದು ಅಡಾಲ್ಪ್ ಹಿಟ್ಲರ್ ಲಕ್ಷಾಂತರ ಮಂದಿ ಯಹೂದಿಗಳನ್ನು ಕೊಲ್ಲಿಸಬೇಕಾಯ್ತು. ಅಂಬೇಡ್ಕರ್ ಹೆಸರನ್ನು ಜನತೆ ಮರೆತುಬಿಡಬಾರದೆಂದು ಸರಕಾರವು ಒಂದೇ ತರಗತಿಯ ಮೂರು ಭಾಷೆಯ ಪಠ್ಯಗಳಲ್ಲಿ ಪಾಠವನ್ನು ಇಡಬೇಕಾಯಿತು. ಹೀಗಿರುವಾಗ ನಮ್ಮ ನೆನಪು ಪ್ರಜೆಗಳಲ್ಲಿ ಹಸಿರಾಗಿರಬೇಕೆಂದು ಬಯಸುವುದು ಪ್ರವಾಹದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರ ನಿಧಿಯ ಸೂಕ್ತ ವಿನಿಯೋಗವನ್ನು ಬಯಸಿದ ಹಾಗಲ್ಲವೇ? ಹೀಗಾಗಿ ನಾವು ಪ್ರಜೆಗಳು ನಮ್ಮನ್ನು ಮರೆತುಹೋದದ್ದಕ್ಕೆ ವ್ಯಥೆ ಪಡುವುದಿಲ್ಲ.

ಚಲಾವಣೆಯಲ್ಲಿಲ್ಲದ ಕಾರಣದಿಂದಾಗಿ ಮನುಕುಲವು ಬಾಲ, ಮೈಮೇಲಿನ ರೋಮಗಳನ್ನೆಲ್ಲ ಕಳೆದುಕೊಂಡಿದೆ ಎನ್ನುತ್ತದೆ ವಿಕಾಸ ವಾದ. ಹೀಗಿರುವಾಗ ಚಲಾವಣೆಯಿಂದ ತಪ್ಪಿಸಿಕೊಂಡರೆ ನಮ್ಮ ಸಾಮ್ರಾಟ ಪಟ್ಟವೂ ಕಣ್ಮರೆಯಾಗಿಬಿಡುವ ಅಪಾಯವನ್ನು ಮನಗಂಡು ನಾವು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ನೌಕರಿಗೆ ಹಾಜರಾಗಿದ್ದೇವೆ. ಹೇಳಿ ಸಾಮ್ರಾಟರಿಗೆ ಬಹುಪರಾಖ್!

ಸಂತಾಪಕೀಯ: ಐವತ್ತು ಸಾವಿರ ಒದೆ ತಿಂದ ನಗಾರಿಯ ವರ್ಚಸ್ಸು ಎಂಥದ್ದು ನೀವೇ ಹೇಳಿ…

19 ಏಪ್ರಿಲ್

ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು ದೊಡ್ಡ ಹೊಟ್ಟೆಯ ನರ್ಸು ನಮ್ಮ ಪಾದಗಳನ್ನು ಹಿಡಿದಿರುವಾಗ ನಾವು ಮಹಾಮಹಿಮರೇ ಇರಬೇಕು.

ಇಂತಹ ಅಸಾಮಾನ್ಯ ಜನ್ಮವನ್ನು ಪಡೆದ ನಾವು ಸಾಮಾನ್ಯ ಬಾಲಕರ ಹಾಗೆ ಶಾಲೆಗೆ ಹೋಗುವ ಅಪಮಾನವನ್ನು ಅನೇಕ ವರ್ಷಗಳ ಕಾಲ ಸಹಿಸಿಕೊಂಡಿದ್ದೆವು. ಹೀಗೆ ಸಹಿಸಿಕೊಳ್ಳುವುದಕ್ಕೆ ನಮ್ಮ ವಿಶಾಲ ಹೃದಯವಾಗಲಿ, ಅನುಪಮವಾದ ಸಂಯಮವಾಗಲಿ ಕಾರಣವಾಗಿರಲಿಲ್ಲ. ತಾಯ್ತಂದೆಯರ ಕುರಿತ ಭಯ, ಭಕ್ತಿ, ಗುರು ಹಿರಿಯರ ಮೇಲಿನ ಮಮಕಾರಾದಿಯಾಗಿ ಯಾವ ಭಾವನೆಯೂ ಕಾರಣವಲ್ಲ. ಲೋಕದ ದೃಷ್ಟಿಯಲ್ಲಿ ಈ ಕಾರಣಗಳನ್ನು ನಾವು ಒಪ್ಪಿಕೊಂಡಂತೆ ಕಂಡಿರಬಹುದು. ಆದರೆ ನಿಜವಾದ ಕಾರಣ ಬೇರೆಯೇ ಇತ್ತು. ಮುಂದೊಂದು ದಿನ ಗ್ರಹಣ ಬಿಟ್ಟ ಸೂರ್ಯನ ಹಾಗೆ ಪ್ರಜ್ವಲಿಸುತ್ತಾ ಸಾಮ್ರಾಟರಾಗಿ ಬೆಳಗಬೇಕಾದ ನಾವು ಅಂದಿನಿಂದಲೇ ಅದಕ್ಕೆ ಸಿದ್ದತೆ ಪ್ರಾರಂಭಿಸಿದ್ದೆವು. ಸಾಮ್ರಾಟರಾದ ನಮ್ಮ ಆಸ್ಥಾನವನ್ನು ಶೋಭಾಯಮಾನಗೊಳಿಸುವುದಕ್ಕೆ ನಯನ ತಣಿಸುವ ಸುಂದರಿಯರು ಅವಶ್ಯಕವಲ್ಲವೇ? ಬೆಳೆಯುವ ಸಿರಿಯನ್ನು ಸರಿಯಾಗಿ ಅರಿಯುವುದಕ್ಕೆ ಮೊಳಕೆಯಲ್ಲೇ ಕಾಳಜಿ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಹೀಗಾಗಿ ನಾವು ಆ ಸುಂದರಿಯರ ಅನ್ವೇಷಣೆ, ಪಾಲನೆ, ಪೋಷಣೆಗೆ ನಮ್ಮ ಸಮಯ ಮೀಸಲಿರಿಸಿದ್ದೆವು.

ನಾವಿದ್ದ ತರಗತಿಯಲ್ಲಿ ಸಕಲೆಂಟು ವಿದ್ಯೆಗಳನ್ನು ಕಲಿಸುವುದಕ್ಕೆ ಇದ್ದದ್ದು ಒಬ್ಬನೇ ಶಿಕ್ಷಕ. ಆತ ಕನ್ನಡ, ಇಂಗ್ಲೀಷ್, ಹಿಂದಿ ಎಂಬ ಮೂರು ಭಾಷೆಗಳನ್ನೂ, ವಿಜ್ಞಾನ, ಗಣಿತ, ಸಮಾಜ ಎಂಬ ಮೂರು ಮನುಕುಲದ ಕಂಟಕಪ್ರಾಯ ವಿಷಯಗಳನ್ನೂ ಏಕಪ್ರಕಾರವಾಗಿ ಕಲಿಸುತ್ತಿದ್ದ. ಆತನಿಗೆ ತರಬೇತಿ ನೀಡಿದ ಬೃಹಸ್ಪತಿ ಯಾರೋ, ಈ ಆರು ವಿಷಯಗಳಷ್ಟೇ ಅಲ್ಲ, ಜಗತ್ತಿನ ಸಮಸ್ಯ ಜ್ಞಾನ ರಾಶಿಯನ್ನು ಕಲಿಸಲು ತೊಡಗಿದರೂ ಆತನ ಬೋಧನಾ ಪದ್ಧತಿಯಲ್ಲಿ ಇನಿತೂ ವ್ಯತ್ಯಾಸವಾಗುತ್ತಿರಲಿಲ್ಲ. ಆತನ ಕಲಿಕೆಯ ಪದ್ಧತಿ ತೀರಾ ಸರಳವಾಗಿತ್ತು. ತಾನು ನಮಗೆ ಕಲಿಸಬೇಕು ಎನ್ನುವ ವಿಷಯವನ್ನು ಚೊಕ್ಕಟವಾದ ನೋಟ್ ಬುಕ್ಕಿನಲ್ಲಿ ಬರೆದುಕೊಂಡು ಬರುತ್ತಿದ್ದ. ಅದನ್ನು ಅಷ್ಟೇ ಮುತುವರ್ಜಿಯಿಂದ, ಒಂದಕ್ಷರ ಅತ್ತ ಇತ್ತ ಆಗದ ಹಾಗೆ ಕಪ್ಪು ಹಲಗೆಯ ಬೋರ್ಡಿನ ಮೇಲೆ ಇಳಿಸುತ್ತಿದ್ದ. ತನ್ನ ಅಪಾರ ಪ್ರತಿಭೆಯನ್ನು ಬಳಸಿ ಬೋರ್ಡ್ ಮೇಲೆ ಬರೆದಿರುವುದನ್ನು ತಪ್ಪಿಲ್ಲದೆ ಓದುತ್ತಿದ್ದ. ಈ ಸಮಸ್ತ ಪ್ರಕ್ರಿಯೆ ಜರುಗುವಷ್ಟರಲ್ಲಿ ವಿದ್ಯಾರ್ಥಿಗಳು ಆತ ಬೋಧಿಸಿದ ವಿಷಯವನ್ನು ಅರಗಿಸಿಕೊಂಡು ಬಿಡಬೇಕಿತ್ತು.

ಮರುದಿನ ತರಗತಿಗೆ ಕಾಲಿಟ್ಟೊಡನೆ ಆತ ತನ್ನ ಟೇಬಲಿನಿಂದ ಬಾರು ಕೋಲನ್ನು ಹೊರ ತೆಗೆಯುತ್ತಿದ್ದ. ಕಡೇ ಬೆಂಚಿನಿಂದ ಶುರು ಮಾಡಿಕೊಂಡು ತಾನು ಹಿಂದಿನ ದಿನ ‘ಬೋಧಿಸಿದ’ ವಿಷಯವನ್ನು ಒಪ್ಪಿಸುವಂತೆ ಗದರುತ್ತಿದ್ದ. ಎದ್ದು ನಿಂತ ಹುಡುಗ ಏನಾದರೊಂದು ಒದರಿದ್ದರೂ ನಡೆದು ಹೋಗುತ್ತಿತ್ತು. ಏಕೆಂದರೆ ಆ ಶಿಕ್ಷಕನಿಗೆ ತಾನು ಬೋಧಿಸಿದ ವಿಷಯವೇನು ಎನ್ನುವುದೇ ನೆನಪಿರುತ್ತಿರಲಿಲ್ಲ. ಉತ್ತರ ಪರೀಕ್ಷಿಸುವುದಕ್ಕೆಂದು ಎಲ್ಲರೆದುರು ನೋಟ್ ಬುಕ್ ತೆರೆಯುವುದು ಅಪಮಾನ ಎಂದೆಣಿಸಿ, ಉತ್ತರ ಹೇಳುತ್ತಿರುವವನ ಧ್ವನಿಯ ಏರಿಳಿತ, ಹಣೆಯ ಮೇಲಿನ ಬೆವರ ಸಾಲು, ಒಂದೇ ಸಾಲನ್ನು ಪುನರುಚ್ಚಿಸುವಾಗಿನ ಮುಖಭಾವ, ನಿಂತುಕೊಂಡ ಭಂಗಿ ಹೀಗೆ ನಾನಾ ಮೂಲದ ಮಾಹಿತಿ ಸಂಗ್ರಹಿಸಿ ಟಿವಿಯ ಕ್ವಿಜ್ ಕಾರ್ಯಕ್ರಮದಲ್ಲಿ ವಿಚಿತ್ರ ಮುಖ ಮಾಡಿಕೊಂಡು ಉತ್ತರ ಊಹಿಸುವವರ ಹಾಗೆ ಆತ ಊಹೆ ಮಾಡುತ್ತಿದ್ದ. ವಿಭಕ್ತಿ ಪ್ರತ್ಯಯದಿಂದ ಉತ್ತರ ಶುರು ಮಾಡಿ ಪ್ಲಾಸಿ ಕದನದ ವಿವರಣೆಯೊಂದಿಗೆ ಮುಗಿಸಿದರೂ ಆತನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಹೆದರದೆ, ತೊದಲದೆ, ನಿರಂತರವಾಗಿ ಟಿವಿ ನಿರೂಪಕಿಯ ಹಾಗೆ ಉಲಿಯುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ ಎಂಬುದು ಆತನ ಸಿದ್ಧಾಂತವಿದ್ದಂತಿತ್ತು. ಹೀಗಾಗಿ ಸುಂದರ ಮುಖದ, ಟಿವಿ ನಿರೂಪಕಿಯರೋ, ಗಗನ ಸಖಿಯರೋ ಆಗುವ ಉಜ್ವಲ ಭವಿಷ್ಯವಿದ್ದ ವಿದ್ಯಾರ್ಥಿನಿಯರಿಗೆ ಆತನ ಬಾರು ಕೋಲಿನ ಸ್ಪರ್ಶದ ಅನುಭವ ಸಿಕ್ಕುತ್ತಲೇ ಇರಲಿಲ್ಲ!

ಚಿಕ್ಕಂದಿನಲ್ಲಿಯೇ ನಮ್ಮ ಅವತಾರದ ಉದ್ದೇಶ ಅರಿತಿದ್ದ ನಾವು, ಮಾತು ಮಿತವಾದಷ್ಟೂ ವ್ಯಕ್ತಿತ್ವಕ್ಕೆ ಹಿತ ಎಂದು ನಂಬಿದ್ದೆವು. ಸಾಮ್ರಾಟರಾದ ನಮ್ಮನ್ನು ಪ್ರಶ್ನಿಸುವ ಹಕ್ಕು ಯಾವ ಹುಲು ಮಾನವನಿಗೂ ಇಲ್ಲ ಎನ್ನುವುದೇ ನಮ್ಮ ನಂಬುಗೆಯಾಗಿತ್ತು. ಹೀಗಾಗಿ ನಮಗೂ ಆ ಶಿಕ್ಷಕನ ಬಾರು ಕೋಲಿಗೂ ಗಳಸ್ಯ-ಕಂಠಸ್ಯ ನಂಟು ಬೆಳೆದಿತ್ತು. ಪ್ರತಿಬಾರಿ ನಮ್ಮ ರಾಜಠೀವಿಯ ಅಂಗೈಗಳ ಮೇಲೆ ಬಾರು ಕೋಲಿನ ಮುದ್ರೆ ಮೂಡಿಸುವಾಗಲೂ ಆ ಶಿಕ್ಷಕ ಒಂದು ಕತೆ ಹೇಳುತ್ತಿದ್ದ.

ಒಂದಾನೊಂದು ಊರಿನಲ್ಲಿ ಎರಡು ಕಲ್ಲು ಬಂಡೆಗಳಿದ್ದವು. ಶಿಲ್ಪಿಯು ಅವರೆಡನ್ನೂ ತಂದು ಉಳಿಯ ಏಟು ಕೊಡಲಾರಂಭಿಸಿದ. ಅಸಂಖ್ಯಾತ ಏಟುಗಳನ್ನು ತಾಳ್ಮೆಯಿಂದ ಸಹಿಸಿಕೊಂಡ ಕಲ್ಲು ದೇವಾಲಯದಲ್ಲಿ ದೇವರ ಮೂರ್ತಿಯಾಗಿ ಪೂಜೆ ಪಡೆಯಿತು, ಏಟು ತಿನ್ನಲು ನಿರಾಕರಿಸಿ ಒಡೆದ ಕಲ್ಲು ಚಪ್ಪಡಿಯು ಮೆಟ್ಟಿಲಿನ ಹಾಸಾಗಿ ಬಂದು ಹೋದುವವರಿಂದ ತುಳಿಸಿಕೊಂಡು ಒದೆಸಿಕೊಂಡು ಕಾಲ ಕಳೆಯುತ್ತಿತ್ತು ಎಂದು.

ಜೀವನದಲ್ಲಿ ಪ್ರತಿಬಾರಿ ಏಟು, ಒದೆತ ತಿನ್ನುವಾಗಲೂ ನಮಗೆ ಈ ಕತೆ ನೆನಪಾಗುತ್ತಿತ್ತು. ಈಗ ಬಿದ್ದ ಏಟು ಮುಂದೆ ನಾವು ಸಮಸ್ತ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನೆರವಾಗುವಂಥದ್ದು ಎಂದೇ ಭಾವಿಸುತ್ತಿದ್ದೆವು. ಅದಕ್ಕೇ ಒಂದು ಏಟು ಬೀಳುವ ಸಂದರ್ಭದಲ್ಲಿ ಕಿತಾಪತಿ ಮಾಡಿ ಎರಡು, ಮೂರು ಏಟು ತಿನ್ನುತ್ತಿದ್ದೆವು. ಬದುಕಿನಲ್ಲಿ ಅಷ್ಟು ಏಟು ತಿಂದಿರುವುದಕ್ಕೇ ನಾವಿಂದು ಹೀಗಿರುವುದು.

ವಾರಪತ್ರಿಯೊಂದರ ಸಾರಥಿ ಸಂಪಾದಕನ ಹಾಗೆ ನಮ್ಮ ಬಗ್ಗೆಯೇ ಇಷ್ಟು ಕೊರೆದುಕೊಳ್ಳುವುದಕ್ಕೆ ಕಾರಣವಿದೆ. ನಗೆ ನಗಾರಿ ಡಾಟ್ ಕಾಮ್ ಎಂಬುದು ನಮ್ಮ ಅಸ್ತಿತ್ವದ ಪ್ರತಿಬಿಂಬವಿದ್ದಂತೆ. ಇಂದಿಗೆ ಈ ಬ್ಲಾಗಿಗೆ ಓದುಗರ ‘ಒದೆ’ಗಳು ಐವತ್ತು ಸಾವಿರದ ಎಣಿಕೆಯನ್ನು ದಾಟಿವೆ. ಕೇವಲ ನೂರಿನ್ನೂರು ಒದೆಗಳ ಪ್ರಭಾವದಿಂದಲೇ ನಾವು ಇಷ್ಟರ ಮಟ್ಟಿಗೆ ಗೌರವಕ್ಕೆ ಭಾಜನರಾಗಿದ್ದೇವೆ, ನಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವ ಹಂತ ತಲುಪಿದ್ದೇವೆ. ಹೀಗಿರುವಾಗ ಐವತ್ತು ಸಾವಿರ ಮಂದಿಯ ಒದೆ ತಿಂದಿರುವ ನಗಾರಿಯ ವರ್ಚಸ್ಸು ಎಂಥದ್ದು , ನೀವೇ ಹೇಳಬೇಕು!

ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು…

2 ಜನ

ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ sataapakeeya ಅನುಭವದ ಬುತ್ತಿ ನೆರವಿಗೆ ಬರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ನಗೆ ನಗಾರಿ ಹುಟ್ಟಿ ಎರಡು ವರ್ಷಗಳು ಪೂರೈಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ನಮ್ಮ ಆಪ್ತ ಚೇಲ ಕುಚೇಲ ನಮ್ಮ ಬಳಿ ತಂದಾಗ ನಾವು ಬಹಿರ್ದೆಶೆಯ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಕುಚೇಲ ತಂದ ಸುದ್ದಿ ಸರ್ಕಾರಿ ಹೂಡಿಕೆ ಹಿಂತೆಗೆತದಂತಹ ಪರಿಣಾಮವನ್ನು ನಮ್ಮ ಪುಣ್ಯದ ಕಾರ್ಯದ ಮೇಲೆ ಉಂಟುಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದುಕೊಂಡು ನಾವು ಫ್ಲಶ್ ಮಾಡಿ ಹೊರಬಂದೆವು.

ಎರಡು ವರ್ಷಗಳ ಅವಧಿ ಸಾಮಾನ್ಯವಾದದ್ದಲ್ಲ. ಹತ್ತು ಹದಿನೈದು ನಿಮಿಷಕ್ಕೊಂದು ಶಿಶುವು ಸಾವನ್ನಪ್ಪುವ ಈ ಜಗತ್ತಿನಲ್ಲಿ ಇಷ್ಟು ಅವಧಿಯವರೆಗೆ ಬದುಕಿ ಉಳಿದಿರುವುದೇ ಅಸಾಮಾನ್ಯ ಸಾಧನೆ. ಹೀಗಿರುವಾಗ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ಗತಕಾಲದ ಇತಿಹಾಸವನ್ನು ಕೆದಕುತ್ತ ಕೂರದಿರಲು ಸಾಧ್ಯವೇ?

ನಮ್ಮ ಏಕಮೇಜು, ಏಕ ಕುರ್ಚಿ ಕೋಣೆಯಲ್ಲಿ ಕುಚೇಲ, ನಮ್ಮ ಆಲ್ಟರ್ ಈಗೋ, ತೊಣಚಪ್ಪ, ಸ್ವಾಮಿ ಅಧ್ಯಾತ್ಮಾನಂದರನ್ನು ಕಲೆ ಹಾಕಿ ನಾವು ಚರ್ಚೆಯನ್ನು ಪ್ರಾರಂಭಿಸಿದೆವು. “ನಾವು ಇದುವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಪರಿಶೀಲಿಸಿ ಮುಂದೆ ನಡೆಯುವ ಸಮಯವಿದು. ಹೀಗೆ ಪರಿಶೀಲಿಸುವುದರಿಂದ ಮುಂದಿನ ಹಾದಿಯು ಸುಗಮವಾಗುವುದೆಂಬ ವಿಶ್ವಾಸವಿಲ್ಲವಾದರೂ ಹಾದಿಯಲ್ಲಿ ಸಿಕ್ಕಬಹುದಾದ ಶಾರ್ಟ್ ಕಟ್ಟುಗಳ ಬಗ್ಗೆ ಎಚ್ಚರವಹಿಸಬಹುದು.”

ನಮ್ಮ ಕಛೇರಿಯ ಹೈರಾರ್ಖಿಯನ್ನು ಮುರಿದು ಸ್ವಾಮಿ ಅಧ್ಯಾತ್ಮಾನಂದರು ಮಾತಾಡತೊಡಗಿದರು. “ನಗೆ ನಗಾರಿ ಹತ್ತಿರತ್ತಿರ ಎರಡು ವರ್ಷಗಳ ಕಾಲ ಬಡಿದುಕೊಳ್ಳುತ್ತಿದ್ದರೂ ಜನರಿಗೆ ಬೇಕಿರುವುದೇನು ಎಂಬುದು ನಮ್ಮ ಸಾಮ್ರಾಟರಿಗೆ ಅರಿವಾಗಲಿಲ್ಲ. ದಿನದ ರೊಟ್ಟಿಯನ್ನು, ರುಚಿಕಟ್ಟಾದ ಚಟ್ನಿ ಪುಡಿಯನ್ನು ಜೊತೆಗೆ ಕೆನೆ ಮೊಸರನ್ನು, ಊಟದ ಕಷ್ಟ ನಿವಾರಿಸುವುದಕ್ಕಾಗಿ ಹೊಚ್ಚಹೊಸ ಹಿಂದಿ ಸಿನೆಮಾದ ಪೈರೇಟೆಡ್ ಸಿಡಿಯನ್ನು ಸಂಪಾದಿಸುವುದರಲ್ಲೇ ಹೈರಾಣಾಗಿ ಹೋಗುವ ಪ್ರಜೆಗಳ ಅಪೇಕ್ಷೆಯೇನು ಅದು ಅರಿಯದೆಯೇ ಅವರ ಗಂಟಲೊಳಗೆ ಹಾಸ್ಯರಸವನ್ನು ತುರುಕುತ್ತಿದ್ದಾರೆ ಸಾಮ್ರಾಟರು ಎಂಬುದು ನಮ್ಮ ಅಭಿಪ್ರಾಯ.”

ಹೈರಾರ್ಖಿ ಮುರಿದ ಸಿಟ್ಟಿನ ಭರದಲ್ಲಿ ತೊಣಚಪ್ಪ ಅಬ್ಬರಿಸಿದರು, “ಸ್ವಾಮ್ಗಳು ಪ್ರವಚ್ನ ಬುಟ್ಟು ವಿಸ್ಯ ಏನಂತ ಒದರಬೇಕು.”

ಹೆಸರಿನಲ್ಲಿದ್ದ ಆಧ್ಯಾತ್ಮವನ್ನು ನೆನೆಸಿಕೊಂಡು ಕೋಪ ಹತ್ತಿಕ್ಕಿಕೊಂಡ ಅಧ್ಯಾತ್ಮಾನಂದರು ಮುಂದುವರೆದರು, “ ನಗಾರಿ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಜನಪ್ರಿಯವಾದ ವರದಿ ಯಾವುದು ಎಂದು ಅವಲೋಕಿಸಿದರೆ ನಾವು ಹೇಳಲು ಹೊರಟಿದ್ದೇನು ಎಂಬುದು ವೇದ್ಯವಾಗುತ್ತೆ.”

ಸ್ವಾಮಿಗಳ ವಾಕ್ಯ ಪೂರ್ಣಗೊಂಡು ಫುಲ್ ಸ್ಟಾಪ್ ಬೀಳುವ ಮೊದಲೇ ಕುಚೇಲ ವರದಿಯನ್ನು ತಂದಿರಿಸಿದ. ನಾವು ಅತಳ-ಸುತಳ-ಪಾತಾಳಗಳನ್ನು ಬೇಧಿಸಿ, ಗವಿ ಗುಡಾರಗಳನ್ನು ಸ್ಪೋಟಿಸಿ ಮಾಡಿದ ಯಾವ ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ ಬಂದಿತು.

ಆ ವರದಿಗೆ ಬಂದ ಪ್ರಜೆಗಳ ಪ್ರತಿಕ್ರಿಯೆಗಳ ಮಹಾಪೂರ ಕೋಣೆಯೊಳಗಿದ್ದ ಎಲ್ಲರನ್ನೂ ದಿಗ್ಮೂಢರನ್ನಾಗಿಸಿತು- ಅಧ್ಯಾತ್ಮಾನಂದರ ಹೊರತು. “ಜನರು ತಮ್ಮ ಭವಿಷ್ಯತ್ತಿನ ಬಗ್ಗೆ, ಮುಂದಾಗಲಿರುವ ಘಟನೆಗಳ ಬಗ್ಗೆ ಈ ಮಟ್ಟಿಗೆ ವ್ಯಾಕುಲರಾಗಿರುವಾಗ ಸಾಮ್ರಾಟರು ಹೀಗೆ ಇತಿಹಾಸವನ್ನು, ವರ್ತಮಾನ ಪತ್ರಿಕೆಗಳನ್ನು ಅರೆದು ನಗೆ ಗುಳಿಗೆ ತಯಾರಿಸುವುದರಲ್ಲಿ ಮಗ್ನರಾಗುವುದು ಸಮಂಜಸವಲ್ಲ.”

ಮರದಿಂದ ಉದುರಿದ ಸೇಬು ನ್ಯೂಟನ್ನಿನನಿಗೆ ಗುರುತ್ವಾಕರ್ಷಣೆಯನ್ನು ಕಾಣಿಸಿದ ಹಾಗೆ ಸ್ವಾಮಿಗಳ ಪ್ರವಚನ ಕೇಳಿ ತೂಕಡಿಸುತ್ತಿದ್ದ ನಮ್ಮ ಆಲ್ಟರ್ ಈಗೋನ ಎಂಜಲು ನಮ್ಮ ನಿದ್ದೆಯನ್ನು ಕೆಡಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ನಾವು ಸೀದಾ ಖೋಡಿ ಹಳ್ಳಿ ಸ್ವಾಮೀಜಿಯ ಪಾದಕ್ಕೆರಗಿದೆವು. ಸ್ವಾಮಿಗಳು ಕೈಲಿದ್ದ ಬ್ಲ್ಯಾಕ್ ಬೆರ್ರಿಯನ್ನು ಬದಿಗಿಟ್ಟು ನೆತ್ತಿ ಮುಟ್ಟಿದೊಡನೆಯೇ ಮಿದುಳಲ್ಲಿ ಮಿಂಚಿನ ಸಂಚಾರವಾಯಿತು. ಪ್ರಳಯಕಾಲದ ಸಿಡಿಲು ಸ್ಪೋಟಿಸಿ ಅದರ ಸದ್ದು ಖಾಲಿ ಬುರುಡೆಯೊಳಗೆ ಮಾರ್ದನಿಸಿತು. ಇನ್ನು ದೇಹದಲ್ಲಿರುವ ಪ್ರತಿ ಕೋಶವನ್ನೂ, ಭಗವಂತ ನೀಡಿರುವ ಪ್ರತಿ ಕ್ಷಣವನ್ನೂ ಜನಸಾಗರದ ಭವಿಷ್ಯವನ್ನು ಸುಭದ್ರಗೊಳಿಸುವ ಕಾಯಕಕ್ಕೆ ವಿನಿಯೋಗಿಸಬೇಕು ಎಂದು ತೀರ್ಮಾನಿಸಿದೆವು. ಕೂಡಲೇ ಎಲ್.ಐ.ಸಿ ಕಛೇರಿ ಹೊಕ್ಕು ಅಲ್ಲಿಂದ ಹೊರದಬ್ಬಿಸಿಕೊಂಡೆವು.

ಹುಚ್ಚುಖೋಡಿ ಮಠದ ಪರಮಯೋಗ್ಯ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಜನರ ಭವಿಷ್ಯವನ್ನು ಕಾಣುವ ಸಿದ್ಧಿಯನ್ನು ಪಡೆದುಕೊಂಡೆವು. ಈ ದಿವ್ಯಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ ಹೇರಳವಾಗಿ ಧನ ದ್ರವ್ಯಾದಿಗಳನ್ನು ಅರ್ಪಿಸುವ ಟಿವಿ ಚಾನಲು, ಸಿನೆಮಾ ತಾರೆಯರು, ರಾಜಕಾರಣಿಗಳ ಸೇವೆಗೆ ಬಳಸು ಎಂಬ ದಿವ್ಯೋಪದೇಶದೊಂದಿಗೆ ಹಿಂದಿರುಗಿದೆವು.

ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

26 ಸೆಪ್ಟೆಂ

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ sataapakeeya ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ ಟೈಮ್ ಧರ್ಮ ಜಿಜ್ಞಾಸುಗಳು, ಫುಲ್ ಟೈಮ್ ಟಿವಿ ವಾಹಿನಿ ಜೋತಿಷಿಗಳು ತಮ್ಮ ಹೆಸರಿಲ್ಲದ ಶಾಂತಿ ಹೋಮಗಳಿಗೆ ಬ್ಲಾಗ್ ಲೋಕದ ಅತಿ ಕ್ಷುದ್ರ ಜೀವಿಯೇ ತಣ್ಣಗಾಗಿ ಹೋಯಿತು ಎಂದು ಬಯೋಡೇಟಾ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಕೊಚ್ಚೆಯಲ್ಲಿ ನೆತ್ತಿಯ ಮಟ್ಟಕ್ಕೆ ಮುಳುಗಿ ಅಲ್ಲಿದಂಲೇ ಕೆಸರೆರುಚುತ್ತಾ ಅವರಿವರ ಬಟ್ಟೆಯನ್ನು ಕೊಳೆಯಾಗಿಸಿ, ಮಡಿ ಕೆಡಿಸಿ ಮಡಿವಂತರು ಸ್ನಾನ ಗೃಹಕ್ಕೆ ಪದೇ ಪದೇ ತೆರಳುವಂತೆ ಮಾಡಿದ ಖುಶಿಯಲ್ಲಿ ಇನ್ನೆರಡು ಅಡಿ ಆಳಕ್ಕೆ ಕೊಚ್ಚೆಯಲ್ಲಿ ಮುಳುಗುತ್ತಿರುವ ಅನಾಮಿಕ ಬ್ಲಾಗಿಗರು ಹಾಗೂ ಬೇವಾರ್ಸಿ ಕಮೆಂಟುಗಳ ಸೃಷ್ಟಿಕರ್ತರು ತಮ್ಮ ೨೪/೭ ಕಠಿಣ ಶ್ರಮದಿಂದ ಸಾಮ್ರಾಟರು ಬ್ಲಾಗ್ ಮಂಡಲದಿಂದ ಓಡಿಹೋದರು ಎಂದು ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮನಸ್ಸಿನ ಮಂಡಿಗೆಯಲ್ಲಿ ಸಿಕ್ಕ ಒಂಟಿ ಹರಳಿನ ಹಾಗೆ ನಾವು ಮತ್ತೆ ಹಾಜರಾಗಿದ್ದೇವೆ.

ಪ್ರತಿ ಬಾರಿಯ ಹಾಗೆ ಇಷ್ಟು ದಿನಗಳ ನಮ್ಮ ಗೈರು ಹಾಜರಿಗೆ ಕಾರಣವನ್ನು ನಿವೇದಿಸಿಕೊಳ್ಳಲೇಬೇಕು. ಓದುಗ ಪ್ರಜೆಗಳಾದ ನೀವು ಎಂದಿಗಾದರೂ ನಮ್ಮನ್ನು ಕಾರಣ ಕೇಳಿದ್ದುಂಟೇ? ಆದರೂ ನಮ್ಮ ಪ್ರಜಾ ಸಮೂಹಕ್ಕೆ ಉತ್ತಮ ಉದಾಹರಣೆಯನ್ನು ಹಾಕಿಕೊಡುವ ಮಹೋದ್ದೇಶದಿಂದ ನಾವು ಈ ಅಭ್ಯಾಸವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇವೆ. ನಾವು ಗೈರು ಹಾಜರಾದ ದಿನಗಳಲ್ಲಿ ಎರಡು ಮುಕ್ಕಾಲು ದಿನಗಳನ್ನು ನಾವು ಗೈರು ಹಾಜರಿಯ ಕಾರಣವನ್ನು ಅನ್ವೇಷಿಸುವುದರಲ್ಲಿಯೇ ಕಳೆಯುತ್ತೇವೆ ಎಂದರೆ ನಮ್ಮ ಬದ್ಧತೆ ಎಷ್ಟು ಗಂಭೀರವಾದದ್ದು ಎಂಬುದರ ಕಲ್ಪನೆ ನಿಮಗಾದೀತು.

ಈ ಬಾರಿಯ ನಮ್ಮ ಗೈರು ಹಾಜರಿಗೆ ಗಟ್ಟಿಯಾದ ಕಾರಣವಿಲ್ಲದಿಲ್ಲ. ಹಿಂದಿನ ಸಂಚಿಕೆಯಲ್ಲಿ ನಾವು ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋವನ್ನು ಉಂಟು ಮಾಡಿದ, ಕಾಫಿ ಲೋಟದಲ್ಲಿ (ಕೆಲವರ ವ್ಹಿಸ್ಕಿ ಗಾಜಿನಲ್ಲಿ) ಬಿರುಗಾಳಿ ಎಬ್ಬಿಸಿದ ಬ್ಲಾಗ್ ಪ್ರಜೆಯ ವಿಶೇಷ ಸಂದರ್ಶನವನ್ನು ಪ್ರಕಟಿಸುವುದಾಗಿ ಘೋಷಿಸಿದ್ದೆವು. ಕೆಲಸ ಮುಗಿಯುವವರೆಗೆ ಅದನ್ನು ಯಾರ ಬಳಿಯೂ ಬಾಯಿ ಬಿಡಬೇಡ ಎಂಬ ಹಿರಿಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನೂ ನೀಡದ ನಾವು ಕೆಲಸವನ್ನು ಘೋಷಿಸಿದ ನಂತರವೇ ಅದನ್ನು ಮಾಡಲು ತೊಡಗುವುದು. ಈ ಬಾರಿ ನಾನು ಸೊನ್ನೆ ರನ್ನುಗಳಿಗೇ ಔಟಾಗುವುದು ಎಂದು ಘೋಷಿಸಿ ಮೈದಾನದಲ್ಲಿ ಆ ಘೋಷಣೆಯನ್ನು ಸಾಕಾರಗೊಳಿಸಿದ ನೆಪವನ್ನಿಟ್ಟುಕೊಂಡು ನಮ್ಮನ್ನು ಕಾಲೇಜು ಕ್ರಿಕೆಟ್ ಟೀಮಿನಿಂದ ಹೊರ ಹಾಕಿದ ಪ್ರಕರಣವನ್ನು ನಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆಯಲಿದ್ದೇವೆ.

ಬ್ಲಾಗ್ ಅಂಗಳದ ಆ ಸೆಲೆಬ್ರಿಟಿಯ ಸಂದರ್ಶನಕ್ಕಾಗಿ ನಮ್ಮ ಆಲ್ಟರ್ ಈಗೋವನ್ನು ಅಟ್ಟಿದ್ದೆವು. ಬ್ಲಾಗ್ಲೋಕ ವಿಖ್ಯಾತ ಬ್ಲಾಗಿನ ಅನಾಮಿಕ ಯಜಮಾನರನ್ನು ಹುಡುಕಿಕೊಂಡು ಹೊರಟ ನಮ್ಮ ಆಲ್ಟರ್ ಈಗೋ ಎಷ್ಟು ದಿನಗಳಾದರೂ ಹಿಂದಿರುಗಲಿಲ್ಲ. ಸರಿಯಾದ ವಿಳಾಸ, ಲ್ಯಾಂಡ್ ಮಾರ್ಕು, ಗುರುತಿನ ಚರ್ಯೆ, ಮೊಬೈಲ್ ನಂಬರು  ಇದ್ದರೇನೇ ಈ ನಗರಗಳಲ್ಲಿ ವ್ಯಕ್ತಿಯನ್ನು ಹುಡುಕುವುದು ಕಷ್ಟ ಹೀಗಿರುವಾಗ ಹೆಸರಿಲ್ಲದ ಬ್ಲಾಗ್ ವ್ಯಾಸನನ್ನು ಹುಡುಕಿ ಹೊರಟ ನಮ್ಮ ಆಲ್ಟರ್ ಈಗೋ ಅಂತರಜಾಲದ ಯಾವುದೋ ಎಳೆಯಲ್ಲಿ ಕಾಲು ಸಿಕ್ಕಿಸಿಕೊಂಡು ಖೈದಾಗಿ ಹೋಯಿತು. ಅದನ್ನು ಹುಡುಕಲೆಂದು ಕಳುಹಿಸಿದ ಲೋಕ ವಿಖ್ಯಾತ ಡಿಟೆಕ್ಟೀವ್ ಶೆರ್ಲಾಕ್ ಹೋಮ್ಸನ ಗುರು, ನಮ್ಮ ಅತ್ಯಾಪ್ತ ಚೇಲ ಕುಚೇಲ ಸಹ ಕಣ್ಮರೆಯಾಗಿ ಹೋದ. ಆ ಬ್ಲಾಗಿಗರ ಬಗ್ಗೆ ಈಗಾಗಲೇ ಬ್ಲಾಗ್ಲೋಕದಲ್ಲಿ ಅನೇಕ ವದಂತಿಗಳು, ನಿಗೂಢ ದಂತಕತೆಗಳು ಹರಡಿಕೊಂಡಿದ್ದರಿಂದ ಅಲ್ಲೆಲ್ಲಾದರೂ ಚಾಚಿಕೊಂಡಿರಬಹುದಾದ ಬರ್ಮುಡ ರೆಕ್ಟಾಂಗಲ್, ಸರ್ಕಲ್‌ಗಳ ರಹಸ್ಯ ಬೇಧಿಸಲು ಖುದ್ದಾಗಿ ನಾವೇ ತೆರಳಿದೆವು.

ಕಾಲನೇ ಕೈ ಹಿಡಿದನೆಂದರೆ ಆಗದ ಕೆಲಸ ಯಾವುದಾದರೂ ಉಂಟೇ? ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡಿದರೆಂದರೆ ಸಿಕ್ಕದ ನೌಕರಿ ಯಾವುದಾದರೂ ಉಂಟೆ? ನಾವು ಅನಾಮಿಕ ಬ್ಲಾಗಿಗರ ಬೆನ್ನಟಿ ಹೊರಟ ಕೆಲವೇ ದಿನಗಳಲ್ಲಿ ಆ ಬ್ಲಾಗಿಗರೇ ನಮ್ಮ ಕಾಲಿಗೆ ಕಚ್ಚಿಕೊಂಡರು. ಆದರೆ ಕಾಲಿಗೆ ತೊಡರಿಕೊಂಡ ಆ ವಸ್ತುವಿಗೆ ಮುಖವಾಗಲಿ, ಉಳಿದ ಅವಯವಗಳಾಗಲಿ ಇದ್ದಂತೆ ತೋರಲಿಲ್ಲ. ಉದ್ದನೆಯ ಕೂದಲಿದ್ದ ಮಾತ್ರಕ್ಕೆ ಹೆಣ್ಣೆಂದು ಗುರುತಿಸುವುದು, ಜೇಬಲ್ಲಿ ಪೆನ್ನು ಇಟ್ಟುಕೊಂಡ ಮಾತ್ರಕ್ಕೆ ವಿದ್ಯಾವಂತ ಎಂದು ಭಾವಿಸಿದಷ್ಟೇ ಪ್ರಮಾದಕಾರಿ ಎಂದು ಅನುಭವದಿಂದ ಕಂಡುಕೊಂಡಿದ್ದ ನಾವು ಇನ್ನಿತರ ದೇಹದ ಭಾಗಗಳಿಗಾಗಿ ಹುಡುಕಾಡಿದೆವು. ಗಂಡು, ಹೆಣ್ಣೆಂದು ಪ್ರತ್ಯೇಕಿಸುವುದಕ್ಕೆ ಆ ದೇವರು ಅದೆಷ್ಟು ಸ್ಪಷ್ಟವಾದ ಭಿನ್ನತೆಯನ್ನು ಕೊಟ್ಟಿದ್ದಾಗ್ಯೂ ನಮಗೆ ನಮ್ಮ ಕಾಲಿಗೆ ತೊಡರಿದ ವಸ್ತು ಯಾವ ಲಿಂಗದ್ದು ಎಂದು ನಿರ್ಧರಿಸಲಾಗಲಿಲ್ಲ. ಆದರೂ ಆ ವಸ್ತುವೇ ವಿಖ್ಯಾತ ಬ್ಲಾಗಿನ ವಾರಸುದಾರ ಎಂದು ನಾವು ನಮ್ಮ ಆರನೆಯ ಇಂದ್ರಿಯ ಹಾಗೂ ಏಳನೆಯ ಇಂದ್ರಿಯಗಳ ಸಹಯೋಗದಿಂದ ನಡೆಸಿದ ಕಾರ್ಯಾಚರಣೆಯಿಂದ ಕಂಡುಕೊಂಡೆವು.

ಸಂದರ್ಶನ ಶುರು ಮಾಡುವ ಮುನ್ನ, ಅತಿಥಿಯನ್ನು ಹೊಗಳಿ ಅಟ್ಟಕ್ಕೇರಿಸುವುದು ನಮ್ಮ ಎಂದಿನ ಪದ್ಧತಿ. ನಾವು ಈಗಾಗಲೇ ಅಟ್ಟದಲ್ಲಿ ಈಸಿ ಚೇರು ಹಾಕಿಕೊಂಡು ಕೂತಿರುತ್ತೇವಾದ್ದರಿಂದ ಅತಿಥಿಯನ್ನು ಅಲ್ಲಿಗೇ ಕರೆಸಿಕೊಳ್ಳುವುದು ನಮಗೆ ಅನುಕೂಲಕರವಾದ ಸಂಗತಿ. ಈ ವಸ್ತುವನ್ನು ಹೀಗೆ ಅಟ್ಟಕ್ಕೆ ಏರಿಸುವುದಕ್ಕೆ ನಮಗೆ ಬಹು ಪ್ರಯಾಸವಾಯಿತು. ಮುಖವೇ ಇಲ್ಲದ ವಸ್ತುವಿಗೆ ಮುಖ ಸ್ತುತಿ ಮಾಡುವುದಾದರೂ ಹೇಗೆ? ನಿಮ್ಮ ಕಣ್ಣುಗಳು ನೀಳವಾದ ಮೀನಿನ ಕಣ್ಣುಗಳ ಹಾಗಿವೆ, ಮೂಗಿ ಸಂಪಿಗೆಯ ಹಾಗಿದೆ, ಮೀಸೆ  ಬೋರ್ಡು ಒರೆಸುವ ಡಸ್ಟರ್ ಇದ್ದ ಹಾಗಿದೆ, ಮುಂಗುರುಳು ನಮ್ಮ ಕಾರಿನ ವೈಪರ್ ಇದ್ದ ಹಾಗಿದೆ ಎನ್ನಲಿಕ್ಕೆ ಆಯಾ ಅವಯವಗಳ ಜಾಗದಲ್ಲಿ ಏನಾದರೊಂದು ಇರಲೇ ಬೇಕಲ್ಲವೇ? ಮುಖವೇ ಇಲ್ಲದ ಈ ವಸ್ತುವನ್ನಿಟ್ಟುಕೊಂಡು ಅದೆಂತಹ ಕಲ್ಪನಾ ಶಕ್ತಿಯಿರುವ ಕವಿಯಾದರೂ ಒಂದೇ ಒಂದು ಸಾಲು ಬರೆಯಲಾರ!

ಹೇಗೋ ನಮ್ಮ ತಪಃಶಕ್ತಿಯನ್ನೆಲ್ಲ ಖರ್ಚು ಮಾಡಿ ಆ ವಸ್ತುವನ್ನು ಅಟ್ಟಕ್ಕೆ ಏರಿಸಿ ನಾವು ಸಂದರ್ಶವನ್ನು ನಡೆಸಿದೆವು. ಆ ಸಂದರ್ಶನದ ಕತೆಯೋ, ಅದು ಮತ್ತೊಂದು ಉದಯ ಟಿವಿ ಧಾರಾವಾಹಿಯ ಸರಕಾಗುವಷ್ಟಿದೆ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಹೇಳುವೆ. ಸರಿ ಸಂದರ್ಶನ ಮುಗಿಸಿಕೊಂಡು, ಬರ್ಮುಡ ಪೆಂಟಗನ್ನಿನಲ್ಲಿ ಲೀನವಾಗಿದ್ದ ನಮ್ಮ ಆಲ್ಟರ್ ಈಗೋ ಹಾಗೂ ಕುಚೇಲನನ್ನು ಪತ್ತೇ ಹಚ್ಚಿ ಎಳೆದುಕೊಂಡು ನಮ್ಮ ಕಛೇರಿಗೆ ಹಿಂದಿರುಗುವಷ್ಟರಲ್ಲಿ ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು.

ನಗೆ ಸಾಮ್ರಾಜ್ಯದ ಸಾಮ್ರಾಟರಾದ ನಮ್ಮನ್ನು ಇಷ್ಟು ಬೆವರಿಳಿಸುವಂತೆ ಮಾಡಿದ ಆ ಸಂದರ್ಶನವನ್ನು ಶೀಘ್ರದಲ್ಲಿಯೇ ನಗೆ ನಗಾರಿಯಲ್ಲಿ ಬೆಳಕು ಕಾಣಿಸುತ್ತೇವೆ. ಇನ್ನು ಮುಂದೆ ತಪ್ಪದೆ ನಗಾರಿಯ ಸದ್ದು ಎಂದಿನ ಕರ್ಕಶ ಶೃತಿಯಲ್ಲಿ ನಿಮ್ಮ ಕಿವಿಗಳನ್ನಪ್ಪಳಿಸಿ ಕಿವಿಯ ಮೇಣವನ್ನು ಕೆಡವಿ ಸ್ವಚ್ಛಗೊಳಿಸುವುದು ಎಂದು ಭರವಸೆ ಕೊಡುತ್ತೇವೆ.

 

ಇಂತಿ ನಿಮ್ಮ
ನಗೆ ಸಾಮ್ರಾಟ್