Tag Archives: ವೈ.ಎನ್.ಕೆ

ಚರ್ಚೆ: ನಗದ ಜೀವಿ= ಬುದ್ಧಿ ಜೀವಿ?!

18 ಜುಲೈ

ಸಂಪಾದಕರು ಎಂದೊಡನೆಯೇ ಒಂದು ಚಿತ್ರಣ ನಮ್ಮೆದುರು ಬರುತ್ತದೆ. ಜೋಲು ಮುಖ ಹಾಕಿಕೊಂಡು ಕಣ್ಣುಗಳಲ್ಲಿ ಗಾಢ ಆಲೋಚನೆಯನ್ನು ನಟಿಸುತ್ತಾ ಸಿಗರೇಟನ್ನು ಸುಡುತ್ತಾ ಗಡ್ಡ ನೀವಿಕೊಳ್ಳುವ ವ್ಯಕ್ತಿ ಕಾಣುತ್ತಾನೆ. ಆತನಿಗೆ ಹಾಸ್ಯ, ನಗು ನಿಷಿದ್ಧ ಎಂಬುದು ಅಲಿಖಿತ ಶಾಸನವಾಗಿರುತ್ತದೆ. ಸಂಪಾದಕರುಗಳು, ಅದರಲ್ಲೂ ಬಹುದೊಡ್ಡ ದಿನಪತ್ರಿಕೆಯ ಸಂಪಾದಕರು ಕೇವಲ ‘ಬುದ್ಧಿ’ ಇಲ್ಲವೆ ‘ಸುದ್ದಿ’ ಜೀವಿಯಾಗಿರಬೇಕು ಎಂಬ ಅಭಿಪ್ರಾಯ ಜನಮಾನಸದಲ್ಲಿ ನೆಲೆ ನಿಂತಿದೆ. ಆತ ಹಾಸ್ಯ ಜೀವಿಯೂ, ರಸಿಕ ಜೀವಿಯೂ ಆಗಿರಬಹುದು ಎಂಬ ಸಾಧ್ಯತೆಯೇ ನಮ್ಮಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಗಂಭೀರವಲ್ಲದ ವ್ಯಕ್ತಿ ಕೊಡುವ ಮಾಹಿತಿಗೆ ವಿಶ್ವಾಸಾರ್ಹತೆ ಇರುತ್ತದೆಯೋ ಎಂದು ನಾವು ಯೋಚಿಸುತ್ತೇವೆ. ಬಹುತೇಕ ದಿನ ಪತ್ರಿಕೆಗಳ ಸಂಪಾದಕರು ಸಹ ಹೀಗೇ ಇರುತ್ತಾರೆ. ಜನರೂ ಸಹ ಅವರನ್ನು ಹಾಗೇ ಕಾಣಲು ಇಷ್ಟ ಪಡುತ್ತಾರೆ.

ಆದರೆ ಅಲ್ಲಲ್ಲಿ ಕೆಲವು ಅಪವಾದಗಳು ಬೆಟ್ಟದ ಹಾಗೆ ಬೆಳೆದು ನಿಂತು ಅಚ್ಚರಿಯನ್ನು ಉಂಟು ಮಾಡುತ್ತವೆ. ಕನ್ನಡ ಪ್ರಭಾದ ಸಂಪಾದಕರಾಗಿದ್ದ ವೈ.ಎನ್.ಕೆ ‘ಘಾ’ ಎಂದು ಹೂಂಕರಿಸುತ್ತಿದ್ದುದನ್ನು ನೆನೆಸಿಕೊಂಡರೆ ಸಂಪಾದಕ ಹೀಗೂ ಇರಬಹುದಾ ಎಂದು ಆಶ್ಚರ್ಯವಾಗುತ್ತದೆ. ನಮ್ಮ ನಡುವೆ ಇರುವ ಮತ್ತೊಬ್ಬ ಸಂಪಾದಕ ಸಹ ಇಂಥದ್ದೇ ಅಚ್ಚರಿಯನ್ನು ನಮ್ಮಲ್ಲಿ ಹುಟ್ಟಿಸುತ್ತಾರೆ. ಅವರು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ರು. ಸಂಪಾದಕರ ಅಂಕಣದ ತುಂಬಾ ಜೋಕುಗಳು ತುಂಬಿರಬಹುದು ಎಂದು ಕನಸಿನಲ್ಲೂ ನಾವು ಯೋಚಿಸಲು ಸಾಧ್ಯವಾಗದು. ಅಂಥ ಶಾಕ್ ಕೊಟ್ಟವರು ಭಟ್ಟರು. ಭಾನುವಾರದ ಕಾಲಮ್ಮಿನಲ್ಲೂ ಓದುಗರು ಕಳುಹಿಸಿದ ಜೋಕುಗಳನ್ನು ಹಾಕಿಕೊಂಡು ಕುಶ್ವಂತ್ ಸಿಂಗ್ ಸಂಪ್ರದಾಯ ಪಾಲಿಸುತ್ತಿರುವ ಭಟ್ಟರ ಹಾಗೂ ಅವರ ಪತ್ರಿಕೆಯ ವಿಶ್ವಾಸಾರ್ಹತೆಯ ಮೇಲೆ ಯಾರಿಗೂ ಸಂಶಯವಿಲ್ಲ.

ಹಾಗಾದರೆ ಬುದ್ಧಿ ಜೀವಿಯಾಗುವುದಕ್ಕೂ, ನಗದಿರುವುದಕ್ಕೂ (‘ನಗದು’ ಇಲ್ಲದಿರುವುದು ಎಂದು ಅರ್ಥೈಸಿಕೊಂಡರೆ ನಾವು ಜವಾಬ್ದಾರರಲ್ಲ) ಸಂಬಂಧವಿದೆಯೇ? ಜ್ಞಾನದ ಭಾರ ತಲೆಯಲ್ಲಿ ಹೆಚ್ಚಾದಷ್ಟೂ ನಗು ಮುಖದಲ್ಲಿ ಹೂತು ಹೋಗುತ್ತದೆಯೇ?

ಅವರಿವರ ಭಯಾಗ್ರಫಿ!

3 ಜುಲೈ

ಅವರು ನಮಗಿಂಥ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಶ್ರೀಮಾನ್ ಘಾ


ವಂಡರ್ ವೈಎನ್‌ಕೆ ಪನ್ನಿಗೆ ಹೆಸರಾದವರು. ಲಘು ಬರಹದ ಧಾಟಿ ಅವರ ಮಾಧ್ಯಮವಾಗಿತ್ತು. ಅದರಲ್ಲೇ ಅವರು ವಿಮರ್ಶೆ ಮಾಡುತ್ತಿದ್ದರು. ವರದಿ ಕೊಡುತ್ತಿದ್ದರು. ವ್ಯಕ್ತಿ ಪರಿಚಯವೂ ಮಾಡಿಕೊಡುತ್ತಿದ್ದರು.


ಒಮ್ಮೆ ಅವರ ಅಭಿಮಾನಿಯೊಬ್ಬರು ತಮ್ಮ ನಾಟಕ ಪ್ರದರ್ಶನಕ್ಕೆ ವೈ.ಎನ್.ಕೆಯವರನ್ನು ಆಹ್ವಾನಿಸಿದ್ದರು. ತಮ್ಮ ವಾರದ ಅಂಕಣದಲ್ಲಿ ಅವರು ಆ ನಾಟಕದ ಬಗ್ಗೆ ವಿಮರ್ಶೆ ಬರೆದಿದ್ದರು. ಆ ನಾಟಕದ ಹೆಸರು ‘ಭ್ರಮೆ’. ವೈ.ಎನ್.ಕೆ ಬರೆದದ್ದು ಇಷ್ಟು ‘ಕಳೆದ ವಾರ ‘ಭ್ರಮೆ’ ಹೆಸರಿನ ಒಂದು ನಾಟಕ ನೋಡಿದೆ. ಅದನ್ನು ಒಂದು ನಾಟಕ ಎಂದು ತಿಳಿದಿದ್ದಾರಲ್ಲ ಅದು ನಾಟಕಕಾರನ ಭ್ರಮೆ. ಹಾಗೆಯೇ, ಅದು ಚೆನ್ನಾಗಿರಬಹುದೇನೋ ಎಂದು ನಿರೀಕ್ಷಿಸ್ತಾರಲ್ಲ, ಅದು ಪ್ರೇಕ್ಷಕರ ಇನ್ನೊಂದು ಭ್ರಮೆ.’