Tag Archives: ವಿವಾದ

ವಿವಾದ ಸೃಷ್ಟಿಸದಿದ್ದರೆ ತೀವ್ರ ಪ್ರತಿಭಟನೆ :ಬೆದರಿಕೆ

3 ಮಾರ್ಚ್

ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ

ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ  ಅಬ್ಬೇಪಾರಿಗಳ ಪರಿಷತ್ (ABAP) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರಸ್ತೆಯ ಮಧ್ಯದಲ್ಲಿ ಲಾರಿ ಟೈರಿಗೆ ಬೆಂಕಿ ಹಾಕುವುದರ ಮೂಲಕ ಸುದ್ದಿಗೋಷ್ಟಿ ಉದ್ಘಾಟಿಸಿದ ಮುಸ್ತಫಾ ಮಾಧ್ಯಮಗಳಿಗೆ ಜನರ ಭಾವನೆಗಳ ಬಗ್ಗೆ ಕಾಳಜಿಯಿಲ್ಲ ಎಂದು

ಪತ್ರಿಕೆಗಳು ಹೀಗೆ ಮೌನವಾದರೆ ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು?

ಆರೋಪಿಸಿದರು. “ಸುಮಾರು ಎರಡು ವರ್ಷಗಳಿಂದ ಸಹನೆಯಿಂದ ಕಾದಿದ್ದೇವೆ. ನಮ್ಮ ಧಾರ್ಮಿಕ, ರಾಷ್ಟ್ರೀಯ, ಭಾಷಿಕ ಭಾವನೆಯನ್ನು ಕೆರಳಿಸುವ ಘಟನೆ ನಡೆಯುವುದೆಂದು ನಿರೀಕ್ಷಿಸಿ ನಿರಾಶರಾಗಿದ್ದೇವೆ. ಇಷ್ಟು ದೀರ್ಘಾವಧಿಯಲ್ಲಿ  ಒಬ್ಬ ಕಲಾವಿದನಿಗೂ ನಮ್ಮ ಧಾರ್ಮಿಕ ಭಾವನೆಗಳನ್ನು ಕೆಣಕುವಂತಹ ಕಲಾಕೃತಿಯನ್ನು  ರಚಿಸಲು ಸಾಧ್ಯವಾಗಿಲ್ಲವೇ? ಜಗತ್ತಿನಲ್ಲೇ ವಾರ್ಷಿಕ ಅತ್ಯಧಿಕ ಸಿನೆಮಾಗಳನ್ನು ತಯಾರಿಸುವ ಬಾಲಿವುಡ್ಡಿಗೆ ಕೋಮು ಸಾಮರಸ್ಯ ಕದಡುವ ಒಂದೇ ಒಂದು ಕಥಾವಸ್ತು ನೆನಪಾಗಿಲ್ಲವೇ? ಇಷ್ಟು ಮಂದಿ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು, ಕಲಾವಿದರು, ಬುದ್ಧಿಜೀವಿಗಳು ಒಂದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ಟಿವಿ ಸಂದರ್ಶನದಲ್ಲಿ ಕೊಟ್ಟಿಲ್ಲ, ತಮ್ಮ ಟ್ವಿಟರ್ ಪುಟಗಳಲ್ಲೂ ಎಲ್ಲೂ ಆ ಪ್ರಯತ್ನ ಮಾಡಿಲ್ಲ ಎಂದರೆ ಯಾರಿಗಾದರೂ ಸಂಶಯ ಬರುತ್ತದೆ ತಾನೆ? ದೇಶಕ್ಕೆ ಬೆಂಕಿ ಹಾಕುವಂತಹ ಕೃತಿಗಳನ್ನು ರಚಿಸುತ್ತಿದ್ದ ಲೇಖಕರ ಕುಲ ಎಲ್ಲಿ ಕಾಣೆಯಾಯಿತು? ದೇವರನ್ನು ನಗ್ನವಾಗಿ ಚಿತ್ರಿಸುವ, ದೇವಮಾನವರಿಗೆ ಬಟ್ಟೆ ತೊಡಿಸುವ, ದೈವ ಸಮಾನರ ಹುಟ್ಟು ಪ್ರಶ್ನಿಸುವ, ಪ್ರವಾದಿಗಳ ಚಿತ್ರ ಬಿಡಿಸುವ, ಸ್ತ್ರೀಯರ ಬುರ್ಕಾಗಳಿಗೆ ಬೆಂಕಿ ಹಾಕಿ ಎನ್ನುವವರೆಲ್ಲ ಎಲ್ಲಿ ಹೋದರು? ಈ ವಿದ್ಯಮಾನಗಳ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಕ್ರೂರವಾದ ರಾಜಕಾರಣವಿದೆ.

“ವಿವಾದಗಳು, ಮಾಧ್ಯಮಗಳು ಆಗಾಗ ಧಾರ್ಮಿಕ ಭಾವನೆ ಕೆರಳಿಸುತ್ತಿದ್ದರೆ ಅಲ್ಲವೇ, ತಮ್ಮಲ್ಲೂ ಧಾರ್ಮಿಕ ಭಾವನೆ ಇದೆ ಎಂದು ಜನರಿಗೆ ಮನವರಿಕೆಯಾಗುವುದು? ರೋಗ ಬಂದಾಗಲೇ ಅಲ್ಲವೇ ತನ್ನಲ್ಲಿ ಆರೋಗ್ಯವಿತ್ತು ಎಂದು ನೆನೆಪಾಗುವುದು? ಹೆಂಡತಿ ಬಂದ ಮೇಲೆ ತಾನೆ ತನ್ನ ಜೇಬಲ್ಲೂ ದುಡ್ಡು ಉಳಿಯುತ್ತಿತ್ತು ಎಂಬ  ಅರಿವಾಗುವುದು? ಇತಿಹಾಸಕಾರರು ಹೊಸ ಹೊಸ ವ್ಯಾಖ್ಯಾನ ಕೊಟ್ಟು ಜನರನ್ನು ರೊಚ್ಚಿಗೆಬ್ಬಿಸದಿದ್ದರೆ ನಮ್ಮ ಪರಿಷತ್ತಿನ ಸದಸ್ಯರಿಗೆ ನೌಕರಿ ಯಾರು ಕೊಡುವವರು? ರಸ್ತೆಯಲ್ಲಿ ದಾಂಧಲೆಯೆಬ್ಬಿಸಿ, ಸರ್ಕಾರಿ ಬಸ್ಸುಗಳಿಗೆ ಕಲ್ಲು ಎಸೆದು, ಅಂಗಡಿಗಳ ಗಾಜು ಒಡೆದು, ಲೈಟು ಕಂಬಗಳ ಬಲ್ಬು ಒಡೆದು ,ಕೈಗೆ ಸಿಕ್ಕಿದ್ದನ್ನು ದೋಚಿ ಆರ್ಥಿಕತೆಯ ಗಾಲಿಗಳು ತಿರುಗುವಂತೆ ಮಾಡುವವರು ಯಾರು? ಪತ್ರಿಕೆಗಳು ಹೀಗೆ ಮೌನವಾದರೆ  ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು? ನಮ್ಮ ಹೊಟ್ಟೆ ಮೇಲೆ ಹೊಡೆಯುವ ಈ ಕೆಟ್ಟ ಸಂಪ್ರದಾಯಕ್ಕೆ ಹೊಣೆ ಯಾರು?

“ಸರಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ವಿವಾದಾತ್ಮಕ ಪುಸ್ತಕಗಳಿಗೆ ವಿಶೇಷ ಪ್ರಶಸ್ತಿ ಘೋಷಿಸಬೇಕು. ಅನಾರೋಗ್ಯ ಸಚಿವರು ತಮ್ಮ ಎರಡು ದಿನದ ಶೇವಿಂಗ್ ಖರ್ಚನ್ನು ಕೊಟ್ಟರೂ ಸಾಕು ಅರ್ಧ ಡಜನ್ ಮರಿ ಸಾಹಿತಿಗಳನ್ನು ಸಾಕಬಹುದು. ರೊಚ್ಚಿಗೆಬ್ಬಿಸುವ ಕಾದಂಬರಿ ಬರೆದವರಿಗೆ ಪ್ರೋತ್ಸಾಹ ನೀಡಬೇಕು. ನಾಲ್ಕು ನೂರು ಪುಟಗಳ ಕಾದಂಬರಿಯನ್ನು ಓದಿ ಅದರಲ್ಲಿ ರೊಚ್ಚಿಗೇಳುವ ಅಂಶವೇನಿದೆ ಎಂದು ವಿಮರ್ಶಕರು, ವಿರೋಧಿ ಪಾಳೆಯದ ಬುದ್ಧಿಜೀವಿಗಳು ಎರಡು ಸಾಲಿನಲ್ಲಿ ತಿಳಿಸುವ  ಕಷ್ಟ ತೆಗೆದುಕೊಳ್ಳದಿದ್ದರೆ ನಮಗೆ ಅದು ತಿಳಿಯುವುದಾದರೂ ಹೇಗೆ? ಈ ವಿಮರ್ಶಕರನ್ನೂ ಸರಿಯಾಗಿ ನೋಡಿಕೊಳ್ಳಬೇಕು. ಆರ್ಟ್ ಗ್ಯಾಲರಿಗಳಲ್ಲಿ ನಗ್ನ ಕಲಾಕೃತಿಗಳಿಗೆ ಶಿಷ್ಯವೇತನ ನೀಡಬೇಕು. ಕೋಮು ಭಾವನೆ ಕೆರಳಿಸುವ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿಯನ್ನೂ, ವಿಶೇಷ ಸಬ್ಸಿಡಿಯನ್ನೂ ಸರಕಾರ ನೀಡಬೇಕು.ಇಲ್ಲದಿದ್ದರೆ ರಾಷ್ಟ್ರಾದ್ಯಂತ ಉಗ್ರ  ರೂಪದ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಆಗುವ ಪ್ರಾಣ ಹಾನಿ, ಆಸ್ತಿನಾಶಕ್ಕೆ ಸರಕಾರ, ಮಾಧ್ಯಮಗಳೇ ಹೊಣೆ” ಎಂದು ಬೆದರಿಕೆ ಒಡ್ಡಿದ್ದಾರೆ

ಇಂಗ್ಲೀಷ್ ಸುದ್ದಿ ಮಾಧ್ಯಮಗಳ ಗಮನವನ್ನು  ನಿ.ಮ್ಮ ಪ್ರತಿಭಟನೆಯ ಕಡೆಗೆ ಸೆಳೆಯಲು ಏನು ಮಾಡುತ್ತೀರಿ ಎಂದು  ವರದಿಗಾರ್ತಿ ಕೇಳಿದ ಪ್ರಶ್ನೆಗೆ ಠಾಕರೋಲಿಯವರು ಪತ್ರಿಕಾ ಗೋಷ್ಟಿಗೆ ಆಗಮಿಸಿದ್ದ ಕ್ಯಾಮರಾಮೆನ್ ಗಳನ್ನು ಹಿಡಿದು ಜಗ್ಗಾಡಿದರು. ಎರಡು ಕೆಮಾರಗಳನ್ನು ಕುಟ್ಟಿ ಪುಡಿ ಮಾಡಿದರು. ವರದಿಗಾರ್ತಿಯ ಕೂದಲು ಹಿಡಿದು ಜಗ್ಗಿದರು. ಈ ಸಂದರ್ಭದಲ್ಲೆ ಆಕೆಯ ವಿಗ್ಗು ಕೈಗೆ ಬಂದದ್ದಕ್ಕೆ ನಗಾರಿ ವರದಿಗಾರ ಸಾಕ್ಷಿಯಾದ. ಅನಂತರ ಮುಖಕ್ಕೆ ಮಸಿ ಬಳಿಯಲು ಮುಂದಾದರು. ದಪ್ಪನೆಯ ಮೇಕಪ್ ಮೇಲೆ ಮಸಿಯು ಅಂಟದೆ ವರದಿಗಾರ್ತಿ ತಪ್ಪಿಸಿಕೊಂಡಳು ಎಂದು ಮೂಲಗಳು ತಿಳಿಸಿವೆ.

ನಗಾರಿ ರೆಕಮಂಡೇಶನ್ 20

2 ಜೂನ್

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್!

ಹ್ಹ! ನಿಲ್ಲಿ ನಾವು ಆತನ ಹೆಸರು, ಆತನ ಪೋಷಾಕು, ಆತನ ವಿಗ್ರಹ ಬಳಸಿ ಯಾವುದೇ ವಿವಾದ ಪಡೆಯುವ ಹುನ್ನಾರ ನಡೆಸುತ್ತಿಲ್ಲ. ಆ ರೀತಿಯ ವಿವಾದ ಸೃಷ್ಟಿಸಿ ಈಗಾಗಲೇ ನಿರ್ವಹಿಸಲಾಗದಷ್ಟು ಬೆಳೆದು ನಿಂತಿರುವ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನೂ ಹೊಂದಿಲ್ಲ.

ಕರ್ನಾಟಕದಲ್ಲಿ ಹುಟ್ಟಿ ರಾಜ್ ಕುಮಾರ್ ಹೆಸರು ಕೇಳಿಲ್ಲ, ಭಾರತದಲ್ಲಿ ಹುಟ್ಟಿ ಗಾಂಧಿ ತಾತ ಗೊತ್ತಿಲ್ಲ ಎನ್ನುವವರನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಜಾಗತಿಕ ‘ನಗೆ ಸಾಮ್ರಾಟ’ಚಾಪ್ಲಿನ್‌ನ ಬಗ್ಗೆ ಕೇಳದವರು ನಮಗೆ ಸಿಕ್ಕುವುದಿಲ್ಲ.

ಚಾಪ್ಲಿನ್ ಮನುಷ್ಯ ಈ ಭೂಮಿಯ ಮೇಲೆ ಮಾಡಬಹುದಾದ ಅತಿ ದೊಡ್ಡ ಸಾಧನೆಯೆಂದರೆ ನಗು ನಗುತ್ತಾ ಬಾಳುವುದು ಎಂಬುದನ್ನು ತೋರಿಸಿಕೊಟ್ಟವನು. ಎಲ್ಲಾ ಸಮಸ್ಯೆಗಳಿಗೂ ನಗುವಿನ ಪರಿಹಾರವನ್ನು ಕಾಣಿಸಿದವನು. ನಗು ಅರಳುವುದು ಕ್ರೌರ್ಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಎಂಬುದು ಆತನ ಭಿಕಾರಿ ಪಾತ್ರದ ಪ್ರತಿ ಚಲನವಲನಗಳಲ್ಲೂ ಎದ್ದು ತೋರುತ್ತದೆ.

ಈ ಸಂಚಿಕೆಯಲ್ಲಿ ನಗೆಗಾರರ ಸಾಮ್ರಾಟನಾದ ಚಾರ್ಲಿ ಚಾಪ್ಲಿನ್ನನ ಸಿನೆಮಾದ ಒಂದು ತುಣುಕು.

ಹೊಟೇಲಿನಲ್ಲಿ ಹಾಡಿ ಕುಣಿಯಬೇಕಾಗಿರುತ್ತದೆ. ನಾಯಕಿ ಬರೆದುಕೊಟ್ಟ ಹಾಡಿನ ಚೀಟಿ ಕಳೆದು ಹೋಗುತ್ತೆ. ಪದಗಳು, ಅರ್ಥಗಳು, ವಾಕ್ಯಗಳು, ಸಾಹಿತ್ಯದ ಹಂಗಿಲ್ಲದೆ ನಾನು ನಗಿಸಬಲ್ಲೆ, ಕಲೆಗೆ ಅವೆಲ್ಲ ಪೂರಕವೇ ಹೊರತು ಅವೇ ಕಲೆಯಲ್ಲ ಎಂದು ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ವಿಷದ ಪಡಿಸುವ ಚಾಪ್ಲಿನ್ ನಮ್ಮನ್ನು ರಂಜಿಸುವುದರಲ್ಲಿ ಸೋಲುವುದಿಲ್ಲ.

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ವಿಶೇಷ ಸಂದರ್ಶನ: ಸುದ್ದಿ ಮಾಧ್ಯಮ ಪ್ರತಿನಿಧಿಯೊಂದಿಗೆ

4 ಜುಲೈ

ಬಹು ಹಿಂದೆ ಸಾಮ್ರಾಟರ alter ego ವೈಕುಂಟದ ಶ್ರೀ ಕೃಷ್ಣನನ್ನೂ, ಮಹಾರಾಷ್ಟ್ರದಿಂದ ಕನ್ನಡ ನಾಡಿಗೆ ಅವತರಿಸಿದ ಎಸ್.ಎಂ.ಕೃಷ್ಣರನ್ನೂ ಒಟ್ಟಿಗೇ ಕೂರಿಸಿಕೊಂಡು ಸಂದರ್ಶನ ಮಾಡಿಬರುತ್ತೇನೆ ಎಂದು ಹೋಗಿದ್ದು ನಿನ್ನೆ ರಾತ್ರಿ ಬರಿಗೈಯಲ್ಲಿ ನಗೆ ನಗಾರಿ ಕಛೇರಿಗೆ ವಾಪಸ್ಸಾಯಿತು. ವೈಕುಂಟಕ್ಕೆ ಸಾಗುವ ದಾರಿ ಮಧ್ಯದಲ್ಲಿ ಭಾರಿ ಅಪಘಾತವುಂಟಾಗಿ ನಗೆ ಸಾಮ್ರಾಟರ ‘ತದ್ರೂಪು’ ಮದ್ಯದ ದೊರೆ ಮಲ್ಯನ ಕಿಂಗ್ ಫಿಶರಿನ ರೆಕ್ಕೆಯ ಮೇಲೆ ಹಾರಿ ಒಳಕ್ಕೆ ತೂರಿಕೊಂಡು ಬಿಟ್ಟಿತು. ಅಲ್ಲಿನ ಗಗನ ಸಖಿಯರ ಸ್ಕರ್ಟಿನ ಜೊತೆಗೆ ಡಾ|| ವಿಜಯ ಮಲ್ಯರ ಟಾನಿಕ್ಕಿನ ಕಿಕ್ಕು ಸೇರಿ ತಾನು ಹೊರಟಿದ್ದ ಕೆಲಸವೇ ಮರೆತುಹೋಗಿತ್ತು. ಆ ಕಿಕ್ಕು ಇಳಿದ ನಂತರ ನೇರವಾಗಿ ನಿನ್ನೆ ರಾತ್ರಿ ನಮ್ಮ ಕಛೇರಿಗೆ ಮರಳಿದ ತದ್ರೂಪಿಗೆ ನಗೆ ಸಾಮ್ರಾಟರಿಂದ ಸಮನಾದ ‘ಸ್ವಾಗತ’ ಸಿಕ್ಕಿತು.

ನಗೆ ಸಾಮ್ರಾಟರು ತನ್ನನ್ನು ಅವಮಾನಿಸಿದ್ದರಿಂದ ಕಿಡಿಕಿಡಿಯಾದ ಅವರ ತದ್ರೂಪು ಬಹುದೊಡ್ಡದೊಂದು ಸಂದರ್ಶನವನ್ನು ಮಾಡಿಕೊಂಡು ಬಂದು ಬಿಟ್ಟಿತು. ಉತ್ತಮ ಸಮಾಜವನ್ನು ಕಟ್ಟಲೇ ಬೇಕೆಂದು ತಮ್ಮ ತನು-ಮನ-ಧನವನ್ನು ಒತ್ತೆ ಇಟ್ಟು ಕೈಲಾದಷ್ಟು ಪರಿಶ್ರಮಪಡುತ್ತಿರುವ ಸುದ್ದಿ ಮಾಧ್ಯಮದ ಜಗತ್ತಿನ ಪ್ರತಿನಿಧಿಯೊಬ್ಬನನ್ನು ಹೆಕ್ಕಿಕೊಂಡು ಸಂದರ್ಶನ ಮಾಡಿಕೊಂಡು ಬಂದಿದ್ದಾರೆ. ಆ ಸಂದರ್ಶನ ನಿಮ್ಮ ಮುಂದಿದೆ:ನಗೆ ಸಾಮ್ರಾಟ್:
ನಮಸ್ಕಾರ ಸರ್, ಬಹುಶಃ ನಿಮಗೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಬಹುದು. ಯಾವಾಗಲೂ ನೀವು ಕಂಡಕಂಡವರನ್ನು ಅಲ್ಲಿ ಕೂರಿಸಿಕೊಂಡು ನೀವು ಇತ್ತಲಿಂದ ಸವಾಲು ಎಸೆಯುತ್ತಿದ್ರಿ ಈಗ ನೀವೇ ಪ್ರಶ್ನೆಗಳನ್ನು ಎದುರಿಸಬೇಕಿದೆ. ಏನನ್ನಿಸುತ್ತೆ ನಿಮಗೆ?

ಮಾಧ್ಯಮ ಪ್ರತಿನಿಧಿ: ಏನಿಲ್ಲ ಬಿಡ್ರಿ. ಅಂಥಾ ದೊಡ್ಡ ವ್ಯತ್ಯಾಸವೇನಾಗೊಲ್ಲ.

ನ.ಸಾ: ಏನೂ ವ್ಯತ್ಯಾಸವಾಗಲ್ಲ ಅಂತೀರಾ? ಹೇಗೆ ಸಾರ್?

ಮಾ.ಪ್ರ: ನೋಡ್ರಿ, ಒಬ್ಬರನ್ನ ಸಂದರ್ಶನ ಮಾಡುವಾಗ ಪ್ರಶ್ನೆಗಳು ಮಾತ್ರ ನಮ್ಮವಾಗಿರ್ತವೆ ಅಂತ ನೀವು ತಪ್ಪು ತಿಳಿದುಕೊಂಡಿದ್ದೀರಿ.

ನ.ಸಾ: ಮತ್ತೆ, ಇನ್ನೇನು ಸಾರ್?

ಮಾ.ಪ್ರ: ಅತಿಥಿಗೆ ನಾವು ಕೇಳುವ ಪ್ರಶ್ನೆಗಳು ಮಾತ್ರ ನಮ್ಮವಲ್ಲ. ಆತನಿಂದ ಹೊರ ತೆಗೆಯುವ ಉತ್ತರವೂ ನಮ್ಮದೇ. ಈ ರಹಸ್ಯ ಜನಸಾಮಾನ್ಯರಿಗೆ ತಿಳಿದಿಲ್ಲ.

ನ.ಸಾ: ಏನೋ ಅರ್ಥವಾಗಲಿಲ್ಲ.

ಮಾ.ಪ್ರ: ಅಂದರೆ ನಾವು ಸಂದರ್ಶನಕ್ಕೆ ಕರೆಸಿದ ಅತಿಥಿ ತನಗೆ ಬೇಕಾದ್ದನ್ನು ಹೇಳುವ ಹಾಗಿಲ್ಲ. ವಿವಾದವನ್ನೆಬ್ಬಿಸದ, ಇನ್ನೊಬ್ಬನನ್ನು ಕೆಣಕದ, ಕನಿಷ್ಠ ಪಕ್ಷ ನಾಲ್ಕು ಜನ ಬೆಚ್ಚುವಂತೆ ಹೇಳದ ಹೊರತು ಅವರ ಮಾತನ್ನು ನಾವು ಪ್ರಸಾರ ಮಾಡುವುದಿಲ್ಲ. ಉದಾಹರಣೆಗೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುತ್ತವೆ.ಮಕ್ಕಳು ರಸ್ತೆಯ ಮೇಲೆ ಆಡುವುದು ಅಪಾಯಕಾರಿ. ಹಾಗಾಗಿ ಮಕ್ಕಳು ರಸ್ತೆಯ ಮೇಲೆ ಆಟವಾಡಬಾರದು ಎಂದು ಅತಿಥಿ ಹೇಳಬೇಕೆಂದಿರುತ್ತಾನೆ. ಆದರೆ ನಾವು ನಮಗೆ ಬೇಕಾದ ಹಾಗೆ ಅವರಿಂದ ಆ ಉತ್ತರವನ್ನು ಪಡೆದುಕೊಳ್ಳುತ್ತೇವೆ.

ನ.ಸಾ: ಅದು ಹೇಗೆ?

ಮಾ.ಪ್ರ: ನಾವು ಆ ಅತಿಥಿ ಹೇಳಿದ ಎಲ್ಲಾ ಅನವಶ್ಯಕವಾದ ಮಾತನ್ನು ಕತ್ತರಿಸಿ ಒಗೆದು ‘ಮಕ್ಕಳು ಆಟವಾಡಬಾರದು’ ಎಂದು ಚಿಕ್ಕದಾಗಿ ಚೊಕ್ಕದಾಗಿ ಸುದ್ದಿಯನ್ನು ಕೊಡುತ್ತೇವೆ. ಏಕೆಂದರೆ ವೀಕ್ಷಕರ ಸಮಯ ತುಂಬಾ ಅಮೂಲ್ಯ ಎಂಬ ನಂಬಿಕೆ ನಮ್ಮದು.

ನ.ಸಾ: ತುಂಬಾ ರಸವತ್ತಾಗಿದೆ. ಇರಲಿ… ನಿಮ್ಮ ಬಗ್ಗೆ ಒಂದು ಆರೋಪ ಇದೆಯಲ್ಲಾ, ನೀವು ಕೇವಲ ವಿವಾದಗಳನ್ನೇ ಸುದ್ದಿ ಮಾಡುತ್ತೀರಿ ಇಲ್ಲವಾದರೆ ಸುದ್ದಿಯನ್ನೇ ವಿವಾದಾಸ್ಪದವಾಗಿಸುತ್ತೀರಿ. ಇದಕ್ಕೆ ಏನೆಂದು ಸಮರ್ಥನೆ ಕೊಡುತ್ತೀರಿ?

ಮಾ.ಪ್ರ: ನೋಡಿ ಹಾಗೆ ಆರೋಪ ಮಾಡುವವರು ಪತ್ರಿಕೋದ್ಯಮದ ‘ಓ’ ನಾಮ ಗೊತ್ತಿಲ್ಲದವರು. ನೀವು ಅಂಥವರ ಮಾತುಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಸುದ್ದಿ ಯಾವುದು ಎನ್ನುವುದುಕ್ಕೆ ನೂರರಲ್ಲಿ ತೊಂಭತ್ತು ವರೆ ಮಂದು ಪತ್ರಕರ್ತರು ಏನೆಂದು ಹೇಳುತ್ತಾರೆ ಗೊತ್ತೆ:  ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ. ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ. ಅಲ್ಲವೇ?

ನ.ಸಾ: ಹೌದು ಸಾರ್. ಅದಕ್ಕೂ ವಿವಾದಕ್ಕೂ ಏನು ಸಂಬಂಧ?

ಮಾ.ಪ್ರ: ಹೇಳುತ್ತೇನೆ ಕೇಳಿ. ನಾಯಿ ಮನುಷ್ಯನನ್ನು ಕಚ್ಚಲಿ ಬಿಡಲಿ ಅದು ಸುದ್ದಿಯಾಗುವುದಿಲ್ಲ ಅಲ್ಲವೇ? ಹೀಗೆ ಸುದ್ದಿಗಳೇ ಇಲ್ಲದೆ ಇದ್ದರೆ ಇಪ್ಪತ್ತು ನಾಲ್ಕು ಘಂಟೆಗಳ ನ್ಯೂಸ್ ಚಾನೆಲ್ ತೆರೆದುಕೊಂಡು ನಾವು ಏನು ಮಾಡುವುದು? ಅದಕ್ಕೇ ನಾವು ಸುದ್ದಿಯಾಗದ- ನಾಯಿ ಮನುಷ್ಯನಿಗೆ ಕಚ್ಚಿದ- ಸಂಗತಿಯನ್ನು ಸುದ್ದಿಯಾಗಲು ಅರ್ಹತೆ ಪಡೆಯುವಂತೆ ಮಾಡುತ್ತೇವೆ. ನಾಯಿಯಿಂದ ಕಚ್ಚಿಸಿಕೊಂಡ ಮನುಷ್ಯನಿಗೆ ಅಗತ್ಯವಾದ ಪ್ರೇರಣೆ, ಪ್ರಚೋದನೆಯನ್ನು ಕೊಟ್ಟು ಆತನೂ ನಾಯಿಯನ್ನು ಕಚ್ಚುವಂತೆ ಮಾಡುತ್ತೇವೆ ಆಗ ಅದು ಸುದ್ದಿಯಾಗುತ್ತದೆ.  ಕೆಲವೊಮ್ಮೆ ಇದೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಯಾವ ನಾಯಿಯೂ ಯಾರನ್ನೂ ಕಚ್ಚದಿದ್ದಾಗ ಏನು ಮಾಡಬೇಕು? ಆಗ ನಾವೇ ನಾಯಿಯನ್ನು ಹುಡುಕಿಕೊಂಡು ಹೋಗಿ ಅದು ಮನುಷ್ಯನನ್ನು ಕಚ್ಚುವಂತೆ ಅದಕ್ಕೆ ಸ್ಪೂರ್ತಿ ಕೊಡುತ್ತೇವೆ. ಸುದ್ದಿ ನಮ್ಮನ್ನು ಹುಡುಕಿಕೊಂದು ಬರುವುದಿಲ್ಲ; ಸುದ್ದಿಯನ್ನು ನಾವು ಹುಡುಕಿಕೊಂಡು ಹೋಗಬೇಕು. ಒಂದು ವೇಳೆ ಸಿಕ್ಕದಿದ್ದರೆ ಹಿಡಿದದ್ದನ್ನೇ ಸುದ್ದಿ ಎಂದು ನಂಬಿಸಬೇಕು.

ನ.ಸಾ: ಅರ್ಥವಾಯಿತು ಸಾರ್. ಅದಕ್ಕಾಗಿಯೇ ನಿಮಗೆ ರೈತರು ರಸಗೊಬ್ಬರ ಸಿಗದಿದ್ದಾಗ ಏನು ಮಾಡಬೇಕು ಎಂಬ ಪ್ರಶ್ನೆಗಿಂತ ಶಾಸಕರು ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕಿತ್ತು ಎಂಬ ಪ್ರಶ್ನೆ ಬಹುಮುಖ್ಯವಾಗಿ ಕಾಣುತ್ತದೆ. ಅಲ್ಲವೇ?

ಮಾ.ಪ್ರ: ಹೌದ್ರೀ ಅದರಲ್ಲಿ ತಪ್ಪೇನು? ರೈತರೇನು ನಮ್ಮ ಟಿವಿ ಚಾನೆಲ್ ನೋಡಿ ವ್ಯವಸಾಯ ಮಾಡುತ್ತಾರಾ? ಅವರಿಗೆ ರಸಗೊಬ್ಬರ, ಬೀಜ ಕೊಳ್ಳೋದಕ್ಕೇ ಕಾಸಿರೋದಿಲ್ಲ ಇನ್ನು ಟಿವಿ ತಗೊಂಡು ತಿಂಗಳಿಗೆ ನೂರು ನೂರೈವತ್ತು ಕೊಟ್ಟು ಡಿಶ್ ಹಾಕಿಸಿಕೊಂಡು ನಮ್ಮ ಚಾನಲ್ಲು ನೋಡುತ್ತಾ ಕೂರುತ್ತಾರಾ? ಹಾಗೆ ನೋಡುತ್ತಾ ಕೂರುವವರು ಮಾಡಲು ಕೆಲಸವಿಲ್ಲದವರು. ಅಂಥವರಿಗಾಗಿ ನಾವು ಸುದ್ದಿಯನ್ನು ಕೊಡಬೇಕಾಗುತ್ತದೆ. ಅವರಿಗೋ ಸುಳ್ಳು ಸುಳ್ಳು ಕಥೆಗಳಿರುವ ಧಾರಾವಾಹಿಗಳನ್ನು ನೋಡಿ ತಲೆ ಚಿಟ್ಟು ಹಿಡಿದಿರುತ್ತದೆ ಅದಕ್ಕೇ ನಾವು ಸತ್ಯ ಕಥೆಯನ್ನು ಬಳಸಿಕೊಂಡು ಅದಕ್ಕೆ ನಮ್ಮೆಲ್ಲಾ ಕ್ರಿಯೇಟಿವಿಟಿಯನ್ನು, ರಿಸರ್ಚನ್ನು ಸೇರಿಸಿ ವರದಿ ಮಾಡುತ್ತೇವೆ. ಕೆಲವೊಮ್ಮೆ ಕೇಸುಗಳಲ್ಲಿ ಟ್ವಿಸ್ಟೇ ಇರೋದಿಲ್ಲ ಆಗ ಜನರಿಗೆ ಅಗತ್ಯವಾದ ಮನರಂಜನೆ ದೊರೆಯುವುದಿಲ್ಲ. ಅದಕ್ಕಾಗಿ ನಾವೇ ಕೆಲವೊಂದು ಟ್ವಿಸ್ಟುಗಳನ್ನು ಸೇರಿಸುತ್ತೇವೆ.

ನ.ಸಾ: ಸತ್ಯವನ್ನು ಬಳಸಿಕೊಂಡು… ಅಲ್ಲಾ ಸಾರ್ ನೀವು ವರದಿ ಮಾಡೋದು ಸತ್ಯ ಕಥೆಯನ್ನು ಮಾತ್ರ ಅಲ್ಲವೇ?

ಮಾ.ಪ್ರ: ಏನ್ರೀ ಸತ್ಯ? ಯಾವುದು ಸತ್ಯ? ಸತ್ಯ ಕೊನೆಗೆ ಗೆಲ್ಲುತ್ತದೆ ಅನ್ನೋದು ಸತ್ಯವಾದ ಮಾತ್ರ. ಆದರ ನಮಗೆ ಕೊನೆಗೆ ಗೆಲ್ಲುವುದು ಬೇಕಾಗಿಲ್ಲ. ನಾವು ಪ್ರತಿಕ್ಷಣವೂ ಗೆಲ್ಲುತ್ತಲೇ ಇರಬೇಕು. ಹೀಗಾಗಿ ಕೊಲೆಯಾದ ತಕ್ಷಣವೇ ನಾವು ಜನರಿಗೆ ಕೊಲೆಯಾದದ್ದು ಹೆಣ್ಣೋ ಗಂಡೋ ಎಂದು ತಿಳಿಸಿಬಿಡುತ್ತೇವೆ. ಹೆಣ್ಣಾಗಿದ್ದರೆ ಆಕೆಗೊಂದು ಕ್ಯಾರಕ್ಟರ್ ಸರ್ಟಿಫಿಕೇಟು ಕೊಡುತ್ತೇವೆ. ಗಂಡಾಗಿದ್ದರೆ ಆತನಿಗೆ ಇನ್ನೊಂದು. ಕೊಲೆಗಾರ ಯಾರು ಅನ್ನೋ ತೀರ್ಪನ್ನೂ ಕೊಟ್ಟುಬಿಡುತ್ತೇವೆ. ಜನರೂ ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ, ನಂಬುತ್ತಾರೆ. ಅಷ್ಟಕ್ಕೂ ಜನರಿಗೆ ಸತ್ಯವೇ ಬೇಕು ಅನ್ನೋದಾದರೆ ಅದಕ್ಕೆ ಕೋರ್ಟಿದೆ, ಕಾನೂನಿದೆ, ಪೊಲೀಸರಿದ್ದಾರೆ, ತನಿಖೆಯ ಪ್ರಕ್ರಿಯೆಯಿದೆ. ಅದಕ್ಕೆ ನಾವೇ ಬೇಕು ಅಂತೇನಿಲ್ಲ. ತಿಳಿಯಿತಾ?


ನ.ಸಾ: (ಸಾವರಿಸಿಕೊಳ್ಳುತ್ತಾ) ನೀವು ಜನರ ಖಾಸಗಿ ವಿವರಗಳಿಗೆ ಕೈ ಹಾಕುತ್ತೀರಿ ಎಂಬ ಆರೋಪವಿದೆ. ವರದಿ ಮಾಡುವಾಗ ಬೇರೊಬ್ಬರ ಖಾಸಗಿ ಬದುಕಿನ ರಹಸ್ಯಗಳನ್ನು ಬಯಲು ಮಾಡುವುದಕ್ಕೆ ನಿಮಗೆ ಅಧಿಕಾರ ಇಲ್ಲ ಎನ್ನುತ್ತಾರೆ ಜನರು. ಇದರ ಬಗ್ಗೆ ಏನನ್ನುತ್ತೀರಿ.

ಮಾ.ಪ್ರ: ಪರವಾಗಿಲ್ಲ ಕಣ್ರೀ ಚೆನ್ನಾಗಿ ಪ್ರಶ್ನೆ ಕೇಳೋದನ್ನ ಕಲಿತುಕೊಂಡಿದ್ದೀರಿ. ನಿಮ್ಮ ಪ್ರಶ್ನೆಯನ್ನೇ ಜನರ ಪ್ರಶ್ನೆ ಅನ್ನುತ್ತೀರಿ. ನೀವು ಮಾಡುವ ಆರೋಪವನ್ನು ಜನರು ಮಾಡುತ್ತಿದ್ದಾರೆ ಅನ್ನುತ್ತೀರಿ. ಇದನ್ನೇ ನಾವು ಟಿವಿ ಚಾನಲ್‌ಗಳಲ್ಲಿ ಮಾಡುವುದು. ತುಂಬಾ ಬೇಗ ಅದನ್ನ ಕಲಿತುಕೊಳ್ಳುತ್ತಿದ್ದೀರಿ ನಗೆ ಸಾಮ್ರಾಟ್, ಗುಡ್. ವೆರಿ ಗುಡ್.

ನ.ಸಾ: (ಕಕ್ಕಾ ಬಿಕ್ಕಿಯಾಗಿ)   ಇಲ್ಲ ಸರ್, ಥ್ಯಾಂಕ್ಯೂ ಸರ್. ಇರಲಿ ಬಿಡಿ ಸರ್… ಅಯ್ಯೋ, ನನ್ನ ಪ್ರಶ್ನೆಗೆ ಉತ್ತರಾನೇ ಕೊಡಲಿಲ್ಲವಲ್ಲ ಸಾರ್!

ಮಾ.ಪ್ರ: ಜನರ ಖಾಸಗಿ ಸಂಗತಿಗಳನ್ನು ಬಹಿರಂಗ ಪಡಿಸುವ ಹಕ್ಕು ನಮಗಿಲ್ಲ ಎಂದು ಹೇಳುತ್ತಿದ್ದೀರಿ. ಒಪ್ಪಿಕೊಳ್ಳೋಣ, ಆದರೆ ಬೇರೊಬ್ಬರ ಖಾಸಗಿ ಸಂಗತಿಯನ್ನು ತಿಳಿದುಕೊಳ್ಳುವ ಹಕ್ಕು ಜನಸಾಮಾನ್ಯರಿಗಿಲ್ಲ ಅಂತ ಘಂಟಾಘೋಷವಾಗಿ ಹೇಳಿ ನೋಡೋಣ. ಜನರಿಗೆ ಸಾರ್ವಜನಿಕವಾದ ಸುದ್ದಿಗಳು ಬೇಕಿಲ್ಲ ಕಣ್ರೀ, ಖಾಸಗಿ ಸುದ್ದಿಗಳೇ ಬೇಕು.  ಅದು ಜನರ ರೋಗ. ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು ಟಿವಿ ಚಾನಲ್ ತೆರೆಯುವುದು ಜನರಿಗೆ ನೈತಿಕ ಶಿಕ್ಷಣವನ್ನು ಬೋಧಿಸುವುದಕ್ಕೆ ಅಲ್ಲ ಅನ್ನೋದು ತಿಳಿದಿರಲಿ.

ಇನ್ನು ನಾವು ವರದಿಯನ್ನೇನು ಆಕಾಶದಿಂದ ತಂದು ಮಾಡುವುದಿಲ್ಲ. ಒಂದು ಮನೆಯ ಹೆಣ್ಣು ಮಗಳು ಓಡಿ ಹೋಗಿರುತ್ತಾಳೆ ಅಂದುಕೊಳ್ಳಿ. ಆಗ ನಾವು ಅವರ ಅಕ್ಕಪಕ್ಕದ ಮನೆಯವರನ್ನು ಮಾತನಾಡಿಸುತ್ತೇವೆ. ಆಕೆಯ ಕ್ಯಾರಕ್ಟರ್ ಹೇಗಿತ್ತು ಎನ್ನುತ್ತೇವೆ. ಅವರು ತಮ್ಮ ಪಾಂಡಿತ್ಯಕ್ಕೆ ತಕ್ಕ ಹಾಗೆ ಮಾಹಿತಿಯನ್ನು ಕೊಡುತ್ತಾರೆ. ಆಕೆ ಯಾರ್‍ಯಾರ ಜೊತೆಗೆಲ್ಲಾ ಒಡಾಡಿದ್ದಳು, ಆಕೆ ಮನೆಗೆ ಎಷ್ಟೊತ್ತಿಗೆ ಬರುತ್ತಿದ್ದಳು, ಆಕೆಯ ಮನೆಗೆ ಯಾರ್ಯಾರು ಬಂದು ಹೋಗುತ್ತಿದ್ದರು ಎಂಬ ಬಗ್ಗೆ ಜನರು ಮಾಹಿತಿ ಕೊಡುತ್ತಾರೆ. ಬೇರೊಬ್ಬರ ಖಾಸಗಿ ಬದುಕಿನ ಸಂಗತಿಗಳ ಬಗ್ಗೆ ತಿಳಿಯುವ, ಅದನ್ನು ಬಹಿರಂಗ ಪಡಿಸುವ ಅಧಿಕಾರ ತಮಗಿಲ್ಲ ಎಂದು ಗೊತ್ತಿದ್ದರೂ ಜನರು ನಮ್ಮ ಕ್ಯಾಮರಾ ಕಂಡ ಕೂಡಲೇ ಕ್ರಾಪು ತೀಡಿಕೊಂಡು ರೆಡಿಯಾಗುತ್ತಾರಲ್ಲ ಇದಕ್ಕೇನನ್ನುತ್ತೀರಿ? ಜನರ ಧ್ವನಿಗೆ ನಾವು ವೇದಿಕೆ ಒದಗಿಸಿ ಕೊಡುತ್ತೇವೆ ಅಷ್ಟೇ. ಅದೇ ಪ್ರಜ್ಞಾವಂತ ಮಾಧ್ಯಮದ ಜವಾಬ್ದಾರಿ ಕೂಡ.

ಈಗ ನೋಡಿ ನಿಮ್ಮ ಬಗ್ಗೆಯೇ ನಾವು ನಾಲ್ಕು ಮಂದಿಯಲ್ಲಿ ವಿಚಾರಿಸಿದೆವು. ಬೊಗಳೆ ರಗಳೆ, ಮಜಾವಾಣಿ, ಪಂಚ್ ಲೈನ್ ಗಣೇಶ್ ಬಳಿಗೆ ಹೋಗಿದ್ದೆವು. ಅವರು ಹೇಳಿದ್ದೇನೆಂದರೆ…

ನ.ಸಾ: (ದಡಬಡಿಸುತ್ತಾ)  ಧನ್ಯವಾದಗಳು ಸರ್. ಸಮಯಾವಕಾಶ ಕೊರತೆಯಿಂದ ನಮ್ಮ ಮಾತುಕತೆ ಇಲ್ಲಿಗೇ ನಿಲ್ಲಿಸಬೇಕಿದೆ.  ಥ್ಯಾಂಕ್ಯೂ

ಎಂದು ಪರಾರಿ ಗೈದ ನಗೆ ಸಾಮ್ರಾಟ್‌ರ ತದ್ರೂಪು ನಗೆ ನಗಾರಿ ಡಾಟ್ ಕಾಮ್‌ನ ಕಛೇರಿ ತಲುಪಿದರು.