Tag Archives: ವಿಡಂಬನೆ

ವಿಡಂಬನೆ: ಭಾಗ್ಯದೊಡನೆ ಭೇಟಿ ಅಂತಿಮ ಭಾಗ

20 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಕಡೆಯ ಕಂತು.

– ನಗೆ ಸಾಮ್ರಾಟ್

ಮೊದಲ ಕಂತು ಇಲ್ಲಿ ಓದಿ
ಎರಡನೆಯ ಕಂತು ಇಲ್ಲಿ ಓದಿ  

ಅಂದು, ಮುಗಿಲು ಮುಚ್ಚುವ ಮಹೋನ್ನತ ಮಹಲುಗಳು; ನಾಗಾಲೋಟವನ್ನೋಡುವ ನಾಗಾಲಿಗಳು (ಚತುಶ್ಚಕ್ರಿ, ಯಂತ್ರಾಶ್ವ ಅಥವಾ ‘ಕಾರ್’); ವಾಕ್-&-ಟಾಕ್ ಸ್ವಾತಂತ್ರ್ಯವನ್ನು ಒಮ್ಮೆಲೇ ಚಿಮ್ಮಿಸುವ, ಬೈಲುಬೈಲುಗಳಲ್ಲಿ ರಿಂಗಣಗುಣಿಸುವ ಮೋಬೈಲ್‍ಗಳು; ಯುವತೆಯನ್ನು ಪಾಡಿತೂಗುವ ಐ-ಪಾಡ್‍ಗಳು ಮತ್ತು ಯಂತ್ರಮುಗ್ಧರನ್ನಾಗಿಟ್ಟುಕೊಂಡಿರುವ ತೊಡೆಪಿಡಿಗಳು (ಲ್ಯಾಪ್‍ಟಾಪ್); ಮನೆಮನೆಗಳಲ್ಲಿ ಬಗೆಬಗೆಯ ವಾಹಿನಿಗಳ ಮೂಲಕ ‘ದಿನಕ್ಕಿಪ್ಪತ್ತೈದು’ ಗಂಟೆಕಾಲ ಕಣ್ಣಿಗೆ ಚ್ಯೂಯಿಂಗ್ ಗಮ್ ಜಗಿಸಿ ಜಗಮಗಿಸುವ ಜಂಬೋ ಟಿ.ವಿ.ಗಳು; ಹೆಜ್ಜೆಗೊಂದು ಹಾದುಬರುವ ಯಾಂತ್ರಿಕ-ತಾಂತ್ರಿಕ ಸಕಲವಿದ್ಯಾಲಯಗಳು; ಅತಿತಾಂತ್ರಿಕ ರೋಗೋಪಚಾರ ರಾಜಗೃಹಗಳು; ಇಂದ್ರಲೋಕದ ಇಂದ್ರಿಯಸುಖೋಪಭೋಗವನ್ನೂ ಮಂಕಾಗಿಸುವ ಚಂದ್ರಚುಂಬಿತ, ಬಹುತಾರಾ ಹೋಟೆಲ್‍ಗಳು-ರಿಸಾರ್ಟ್‍ಗಳು; ಅತ್ಯಾಧುನಿಕಾಧ್ಯಾತ್ಮಿಕ ಆಶ್ರಮಾಂತ:ಪುರಗಳು; ಬಹುಕೀರ್ತಿತ ಬಹುರಾಷ್ಟ್ರಕ ಬೃಹದೋದ್ಯಮಗಳು; ಮಾಲೆಮಾಲೆಗಳಲ್ಲಿ ಮಾಲುಗಳನ್ನೆಸೆದು ‘ಕಮಾಲ್’ ಮಾಡುವ ಮಾಲ್‍ಗಳು; ಒಂದು ಮಹಾಪದ್ಮ (ಟ್ರಿಲಿಯನ್) ಡಾಲರ್ ಸಮಗಟ್ಟುವ ಅರ್ಥವ್ಯವಸ್ಥೆ … ಈ ‘ಮೆಗಾ’ಬೆಳವಣಿಗೆಯ ಮಹಾಮೆರವಣಿಗೆಯು ಅಂದಿನ್ನೂ ಗಾಳಿಗೋಪುರಗಳ ಗರ್ಭದಲ್ಲಿತ್ತಷ್ಟೆ.

ಇಂದು, ಸುಮಾರು ಏಳು ದಶಕಗಳ ಈ ಏಳಿಗೆಯಿಂದ ಏಮಾರಿಸಲ್ಪಡುತ್ತಿರುವವರಿಗೆ, ಮಾಳಿಗೆಯನ್ನೇರಿ ಹೋಳಿಗೆ ಮೆಲ್ಲುತ್ತಿರುವ ಪೀಳಿಗೆಯು ಕಣ್ಗೊಳಿಸುತ್ತಿದೆಯೇ ಹೊರತು, ಉಳಿದ ಜನಕೋಟಿಗಳು ಕೂಳಿಗೆ-ಕಾಳಿಗೆ-ಕೂಲಿಗೆ ಹೆಣಗಿ ಹೆಣವಾಗುತ್ತಿರುವುದು; ಉಳ್ಳವರು ಊದುತ್ತಿದ್ದಂತೆಯೇ ಊಳಿಗದವರು ಉರುಳುತ್ತಿರುವುದು, ಕಣ್ಣೆವೆಗೂ ತಾಕಿಲ್ಲ. ಆಯ್ದ ಕೆಲವು “ಮುದ್ದಿನ ಮಕ್ಕಳಿಗೆ,” ಲಕ್ಷಗಳಿಗೆ ಲಕ್ಷ್ಯವೇ ಇಲ್ಲವೆಂಬಂತೆ ಸಂಬಳ-ಸಾರಿಗೆ-ಸವಲತ್ತುಗಳನ್ನು ಎರಚಾಡಿ ಅತುಲೈಷಾರಾಮಕ್ಕೆಡೆಗೊಟ್ಟಿರುವ; ಅದೇ ಸಮಯ, ಸುಸ್ಥಾಪಿತ “ಸುಶೋಷಿತ”ರನ್ನು ನಿಗೂಢವಾಗಿ ನಿರ್ಧನರನ್ನಾಗಿಸಿ, ನಿಧನರನ್ನಾಗಿಸುತ್ತಿರುವ, ಸಾಮಾನ್ಯರನ್ನು ಅಮಾನ್ಯರನ್ನಾಗಿಸುತ್ತಿರುವ, ಕೃತ್ರಿಮ ಆರ್ಥಿಕ ಭಯೋತ್ಪಾದಕತೆಯು ಇಂದು ಯಾರಲ್ಲೂ ಆತಂಕವನ್ನುಂಟುಮಾಡುತ್ತಿಲ್ಲ; ಯಾರ ‘ಅಜೆಂಡಾ’ವನ್ನೂ ಅಲಂಕರಿಸಿಲ್ಲ. ಕೋಟಿಕೋಟಿ ರೂಪಾಯಿ ವ್ಯವಹಾರಗಳ ನಡುವೆ, ಕೋಟ್ಯಂತರ ಚಿಣ್ಣರು ರಾತ್ರಿಯೂಟದಿಂದ ವಂಚಿತರಾಗಿ ಹಸಿವಿನಲ್ಲೇ ಹಾಸಿಗೆಗೊರಗುತ್ತಿರುವುದು, ಉಗ್ರ.ಉದಾರವಾದಿ, ಉದರಸುಖಿ ಉದ್ಧಾರಕರನ್ನು ಉದ್ವೇಗಗೊಳಿಸುತ್ತಿಲ್ಲ.  ಕೊಳೆಯುತ್ತಿರುವ ಕೋಟ್ಯಂತರ ಟನ್ ಧಾನ್ಯರಾಶಿಗಳ ಮುಂದೆ ಧ್ಯಾನಲೀನರಾಗಿರುವ ಅಧಿಕಾರಿಗಳಲ್ಲಿ, ಎದುರಿನಲ್ಲೇ ಹಸುಳೆಗಳು ಹಸಿವಿನಿಂದ ಅಸು ನೀಗುತ್ತಿರುವುದು ತುಸು ಮರುಕವನ್ನೂ ಉತ್ಪಾದಿಸಿಲ್ಲ. ರೈತರ ಸರಣಿ-ಆತ್ಮಹತ್ಯೆಯಿಂದ (ಸಾಯುವ ಸ್ವಾತಂತ್ರ್ಯ?) ವಿದರ್ಭದ ಹತ್ತಿಯ ನೆಲವು ಹತ್ತಿಕೊಂಡು ಸುಡುಗಾಡಾಗುತ್ತಿರುವುದು; 13 ಕೋಟಿ ಬಾಲಕೂಲಿಗಳು ಇಂದಿಗೂ ಅಮಾನವೀಯ ಆವರಣಗಳಲ್ಲಿ ಜೀವ ತೇಯುತ್ತಿರುವುದು, ಮತ್ತು 14 ಕೋಟಿ ಬಾಲಭಾರತರು ಶಾಲೆಯಿಂದ ಉದುರಿಹೋಗಿರುವುದು; ಪಂಜಾಬ್‍ನಂಥ ಪುರೋಗಾಮಿ ಪ್ರಾಂತ್ಯದಲ್ಲಿ, ಕೀಟನಾಶಕದ ನಂಜಿನಿಂದಾಗಿ ಕ್ಯಾನ್ಸರ್‍ಗ್ರಸ್ತರಾದ ಬಡರೋಗಿಜಂಗುಳಿಗಳು ತಮ್ಮದೇ ರಾಜ್ಯದಲ್ಲಿ ಸೌಲಭ್ಯವಂಚಿತರಾಗಿ, ಪ್ರತಿರಾತ್ರಿ ನೂರಾರು ಸಂಖ್ಯೆಯಲ್ಲಿ “ಕ್ಯಾನ್ಸರ್ ರೈಲು” ಹತ್ತಿ ದೂರದ ಬಿಕನೇರ್‍ನ ಕ್ಯಾನ್ಸರ್ ಆಸ್ಪತ್ರೆಗೆ ದೌಡಾಯಿಸುವಂತಾಗಿರುವುದು …

ಇವೆಲ್ಲವೂ ಯಾರ ಅಂತ:ಕರಣಕ್ಕೂ ಆಘಾತಕಾರಿಯಾಗಿಲ್ಲ. ಪ್ರತಿಶತ 75 ಪ್ರಜೆಗಳಿಗೆ “ಎಲ್ಲಿ ಪ್ರಕೃತಿ ಕರೆವುದೋ ಅಲ್ಲೇ ಶೌಚಾಲಯ” ಎಂಬ ಅವಸ್ಥೆಯುಂಟಾಗಿರುವುದು;  ಕೊಳೆಯುತ್ತಿರುವ ಧಾನ್ಯಗಳನ್ನು ಸಂರಕ್ಷಿಸಲು ಸಿಗದ ವಿದ್ಯುತ್ತು, ಮಾಲ್‍ಗಳಲ್ಲಿ ಪಾದುಕೆಗಳ ಹವಾನಿಯಂತ್ರಿತ ಪಾಲನೆಗೆ ಎಣೆಯಿಲ್ಲದೆ ಸಿಗುತ್ತಿರುವುದು; ಬೆಳೆ ತೆಗೆಯಲು ಇಲ್ಲವಾದ ಭೂಮಿ, ನೀರು, ಮತ್ತಿತರ ಸಂಪನ್ಮೂಲಗಳು, ಐಟಿ-ಬಿಟಿ ಕಂಪನಿಗಳಿಗೆ ಕೇಳಿದ ಮಾತ್ರಕ್ಕೆ ಸುಲಭವಾಗಿ ಲಭಿಸುತ್ತಿರುವುದು; ವಿದ್ಯೆಯ “ಸಾದ್ಯಂತ ಸಾಫ್ಟ್‌ವೇರೀಕರಣ,” ವ್ಯಾಪಾರದ ವ್ಯಾಪಕ ಬಹುರಾಷ್ಟ್ರೀಕರಣ, ಮತ್ತು ಜನಾವಶ್ಯಕ ಜಾಗಗಳಲ್ಲೆಲ್ಲ  ಜಾಗೃತೀಕರಣವಿಲ್ಲದೆ ಜಾಗತೀಕರಣವಾಗುತ್ತಿರುವುದು; ವಿದ್ಯುನ್ಮಾನ ಮಾಧ್ಯಮವು ಅತ್ಯುನ್ಮಾದಕ ಟಿ.ವಿ. ಸೀರಿಯಲ್ಲುಗಳ ಮೂಲಕ ಸಂಸಾರಗಳನ್ನು ಸೀಳುವ, ಸಜ್ಜನರನ್ನು ಸಮಾಪ್ತಿಮಾಡುವ ನವನವೀನ ಕಪಟೋಪಾಯಗಳನ್ನೂ, ಗಾಢಮೂಢಾಚರಣೆಗಳನ್ನೂ ದಿನವಿಡೀ ಜನಮನದೊಳಗೆ ನಾಟಿಸಿ, ಕ್ಷುಲ್ಲಕ ಸುದ್ದಿ-ಕ್ಷಣಿಕ ಜಾಹೀರಾತುಗಳಿಂದ ಕ್ಷೋಭೆಯನ್ನುಂಟುಮಾಡಿ, ಪ್ರತಿ ಮನೆಯನ್ನು ಅಶಾಂತಿನಿಕೇತನವನ್ನಾಗಿಸುತ್ತಿರುವುದು; ಕ್ರಿಕೆಟ್ ವಾಹಿನಿಗಳು ಕಲಾತ್ಮಕ ಪಂದ್ಯವೊಂದನ್ನು ವರ್ಷಾವಧಿ ಕಾಳದಂಧೆಯನ್ನಾಗಿಸಿ, ಯುವಶಕ್ತಿಯನ್ನು ಪೋಲುಮಾಡಿ, ಐ.ಪಿ.ಎಲ್. ಎಂಬ ಒಂದು ಪಾಪಕೂಪವನ್ನೇ ಹುಟ್ಟುಹಾಕಿರುವುದು; ನರವ್ಯಾಘ್ರಗಳಾಗಿದ್ದ ಪಂಜಾಬಿ ಯುವಕರು ನಶೀಲಿ ಪದಾರ್ಥಗಳಿಂದಾಗಿ ನರಪ್ರೇತಗಳಾಗಿ,  ವ್ಯಗ್ರವಾದಿ ಉಗ್ರವ್ಯಸನಿಗಳಾಗಿ, ಬೇಸಾಯ-ಸೈನ್ಯ ಎರಡನ್ನೂ ಕೈಬಿಟ್ಟು ಓಟ ಕೀಳುತ್ತಿರುವುದು; ರಕ್ತದಾಹಿ ರಿಯಲ್ ಎಸ್ಟೇಟ್‍ಗಳು ಗ್ರಾಮಗ್ರಾಮಗಳನ್ನು, ಕೃಷಿಭೂಮಿ-ಕೃಷಿಕಾರ್ಮಿಕರನ್ನು ನುಂಗಿನೊಣೆದು, ವ್ಯವಸಾಯವನ್ನು ವ್ಯವಕಲನದ ವ್ಯವಹಾರವನ್ನಾಗಿಸಿರುವುದು; ಮೆಟ್ರೋಗಳು ಗಗನಮುಖಿಯಾಗುತ್ತಿದ್ದಂತೆಯೇ, ಅವುಗಳ ಭೂಗತ ಜಗತ್ತು ಮತ್ತಷ್ಟು ಪಾತಾಳಮುಖಿಯಾಗುತ್ತಿರುವುದು, ಮತ್ತು ಅಲ್ಲಿನ ಕೊಳಚೆ ಪ್ರದೇಶಗಳು ‘ನರಲೋಕದ ನರಕ’ಗಳೆಂಬ ಯಶಸ್ಸಿಗಾಗಿ ಪರಸ್ಪರ ಪೈಪೋಟಿಯಲ್ಲಿ ಬಿದ್ದಿರುವುದು; ಹಬ್ಬುತ್ತಿರುವ ಪಬ್ಬು-ಕ್ಲಬ್ಬುಗಳಲ್ಲಿ, ಮದಿರೆಯ ಮಂದಿರಗಳಲ್ಲಿ, ಬೀರ್‍ಬಲ್ಲ, ರಮ್ಮೇಶ, ವಿಸ್ಕ್ಯಂಠ, ತೈಲಪ, ಅಮಲೇಂದ್ರೇತ್ಯಾದಿ ‘ಮದ್ಯ’ರಾತ್ರಿ ಮಕ್ಕಳು, “ಒಂದೇ  ಬಾಟ್ಲ್ ರಮ್// ಸುಜಲಾಂ, ಸುತರಾಂ, ಮರೆಯದ ಪಾನಕಾಂ//” ಎಂದು ಮದ್ಯದೇಶ್ ರಾಗದಲ್ಲಿ ಒಮ್ಮದದಿಂದ ಮೊರೆಯುತ್ತಿರುವುದು, ಮತ್ತು ಅಮೆರಿಖಾದ್ಯ ಅಡ್ಡೆಗಳಲ್ಲಿ ನವಪೀಳಿಗೆಯ ವೈನ್‍ತೇಯ-ವೃಕೋದರ ಸಹೋದರ-ಸಹೋದರಿಯರು ಸ್ವ-ಉದರವನ್ನು ಸಲಹುತ್ತಾ, ತಮ್ಮದೇ ಆದ ಒಂದು “ಬಾರ್-ರತ” ವರ್ಷವನ್ನು,  ಜಡಭರತಖಂಡವನ್ನು ಕಟ್ಟಿಕೊಂಡು ಅದರೊಳಗೆ ಬೆಚ್ಚಗೆ ಬಚ್ಚಿಟ್ಟುಕೊಳ್ಳುತ್ತಿರುವುದು, ಮತ್ತು ಈ ಕಾರಣ, ದೇಶದಲ್ಲಿ ಪುಸುಕಲು-ಪುಕ್ಕಲು ಯುವಪ್ರಜೋತ್ಪತ್ತಿಯಾಗುತ್ತಿರುವುದು; ಮಹಿಳೆಯರ ಮತ್ತು ಮಕ್ಕಳ ಮೇಲೆ ದಿನವಹಿ ದಬ್ಬಾಳಿಕೆ-ದುಂಡಾವರ್ತಿಗಳಾಗುತ್ತಿರುವುದು; ಇವಿಷ್ಟೇ ಸಾಲದೋ ಎಂಬಂತೆ, ಅಂದು ಪಂಜಾಬ-ಸಿಂಧು-ವಂಗಗಳಲ್ಲಿ ಭಾರತದೇಹದ ಶಿರಚ್ಛೇದನ-ಬಾಹುಚ್ಛೇದನದಿಂದುಂಟಾದ ಜನಸಾಗರದ ದಾರುಣ ವಲಸೆ-ಮಾರಣ ಹೋಮಗಳ ಘೋರ ನೆನಪನ್ನು ಕೆರಳಿಸುವಂತೆ, ಇಂದು ಅಸ್ಸಾಮಿನಲ್ಲಿ ಜನಾಂಗೀಯ ದ್ವೇಷಾಗ್ನಿಯು ಭುಗಿಲೆದ್ದಿರುವುದು … ಒಂದೇ, ಎರಡೇ, ಅಥವಾ ಎರಡು ಸಾವಿರದ ಹನ್ನೆರಡೇ?! ದಿಟವಾಗಿ, ಸನಾತನ ಯುಗದಿಂದಲೂ, ನರನಾಡಿನಾಳಗಳ ಆಳಗಲಗಳಲ್ಲಿ “ದೇವ ಕಣ”ವನ್ನು (ಗಾಡ್ ಪಾರ್ಟಿಕಲ್) ಒಯ್ದಿರುವ, ಪರಮಾಣುವಿನಲ್ಲಿಯೂ ಪರಮಾತ್ಮನನ್ನೇ ಕಾಣುವ, ಭಾರತೋದ್ಭವರ ಸ್ಥಿತಿ ಇಷ್ಟು ಬೇಗ ಇಷ್ಟು ಕ್ಷಯಿಸಿತೆಂದರೆ ನಂಬುವುದಾದರೂ ಹೇಗೆ? ಅದು ಹೇಗಾದರಿರಲಿ, ನಿಜ ದುರಂತವೆಂದರೆ, ಈ ಯಾವ ಸುಡುಸತ್ಯಗಳೂ, ಸ್ವಹಿತಾರ್ಥವನ್ನು ಅರಸುತ್ತಿರುವ ಅರಸರನ್ನು, ಲಂಡ-ಲಂಪಟ-ಲಂಚಲೋಲುಪ ಅಧಿಕಾರಸ್ಥರನ್ನು, ನಿತ್ಯಸನ್ಮಾನಿತ ಬುದ್ಧಿಪುರುಷರನ್ನು, ಧರ್ಮಾಗ್ರಹ-ನ್ಯಾಯಾಗ್ರಹ ವರೇಣ್ಯರನ್ನು, ಸ್ವ.ಸಂತೃಪ್ತ ಸು.ಸಂಸುಪ್ತ ಸಾಮಾನ್ಯರನ್ನು ಇನ್ನೂ ಮುಟ್ಟಿಯೇ ಇಲ್ಲವೆಂಬುದು.

“ಭಾಗ್ಯದೊಡನೆ ಭೇಟಿ” ಎಂದಿಗೆ?

“ಬಿಡುಗಡೆ”ಯ ಆ ಕಾರಿರುಳು ಕಡೆಗೆ ಹಡೆದುಕೊಟ್ಟಿದ್ದು ಇಷ್ಟೆ: ವಸಾಹತಿನ ಅಧಿಕಾರ ಹಸ್ತಾಂತರ; ದೇಶೀ ಅಧಿನಾಯಕರಿಗೆ ಅದೇ “ನೆಲಸಿಗ ಅಧೀನ”ರ ಮೇಲೆ ಸ್ವಾಮ್ಯವನ್ನೀವ, ಅರೆರಾತ್ರಿಯಲ್ಲಿ ಅವರಿಗೆ ಹಿರಿಕೊಡೆಹಿಡಿದು ಅವರನ್ನೇ ಭಾರತಭಾಗ್ಯವಿಧಾತರೆಂದು ಉದ್ಘೋಷಿಸುವ, ಒಂದು ಘನ ಸಂ-ಭ್ರಮ; ಜೊತೆಗೆ, ಪ್ರಭುಗಳು ತಮ್ಮ ಸೇವಕರಿಂದ ತಾವೇ ಆಳಿಸಿಕೊಳ್ಳಲು ಆಯ್ಕೆ ಮಾಡಬೇಕಾದಂಥ ವಿಕಟ, ವಿಲೋಮ ವ್ಯವಸ್ಥೆಯ ಬೀಜಾವಾಪ. ಇದರಿಂದ ದೊರೆತದ್ದು ಸತ್ಪ್ರಜೆಗಳಿಗೆ ಸ್ವಾತಂತ್ರ್ಯವಲ್ಲ; ಹೊಸ ‘ಸ್ವಾಹಾರ್ಥಿ’ ಸ್ವಾಮಿಗಳ ಸ್ವಚ್ಛಂದತೆಗೆ ಸ್ಪಷ್ಟ ಸನ್ನದಷ್ಟೆ. ಮತ್ತು ಇದು ನೆಲೆಗೊಟ್ಟಿದ್ದು ಬರಿಯ ಆರ್ಥಿಕ, ರಾಜಕೀಯ ಭ್ರಷ್ಟತೆಗಲ್ಲ; ಒಂದು ಭವ್ಯ ಸಮಾಜದ-ಸಂಸ್ಕೃತಿಯ-ಸಭ್ಯತೆಯ ಮೌಲ್ಯಹತ್ಯೆಗೆ. ಇಂದಿನ ಕಾಳವರಾಹಕಲ್ಪದ ಭಾರತವು, ಈ ಪರಿಯ ಟೊಳ್ಳು ಬುಡಬೇರುಗಳ ಮೇಲೆ, ಮತ್ತೊಂದು ಹುಟ್ಟಿನ ಹೊಸಿಲಿನಲ್ಲಿ, ಅದಿರುತ್ತ ನಿಂತಿದೆ. ಈ ಭಾವ್ಯಭಾರತವಾದರೂ ನಮಗೆ ಆ ದೀರ್ಘನಿರೀಕ್ಷಿತ “ಭಾಗ್ಯದೊಡನೆ ಭೇಟಿ”ಯನ್ನು ತಂದೀತೇ ಎಂಬುದು, ಪ್ರತಿ ಪ್ರಜೆಯೂ ಧ್ವನಿಯೆತ್ತಿ, ಪ್ರತಿ ಪ್ರತಿನಿಧಿಯಿಂದ ಪ್ರತಿಧ್ವನಿಯನ್ನು  ಪ್ರಚೋದಿಸುವುದರ ಮೇಲೆ ನಿಶ್ಚಿತವಾಗಿ ನಿಂತಿದೆ.  ಪ್ರಜೆಗಳು ಮಂತ್ರಿಮುಗ್ಧ ಹಿಂದಾಳುಗಳಾಗಿ ಕೈಕಟ್ಟಿ ನಿಲ್ಲದೆ, ಸತ್ವದೊಡನೆ ರಾಜಸ-ತ್ವವನ್ನೂ ಕೂಡಿಸಿಕೊಂಡು ಕೈಬೀಸಿ ಮುನ್ನಡೆದರೆ ಮಾತ್ರ, ಸತ್ವವಿರುವ ರಾಜರನ್ನು ಕಾಣಬಹುದು; ಇಲ್ಲದಿದ್ದಲ್ಲಿ ಪ್ರಜಾಸತ್ತೆಯು ಸತ್ತವರ ಸಂತೆಯಾಗುವುದೆಂಬುದರಲ್ಲಿ ಸಂಶಯವೇ ಸುಳಿಯದು.

ವಿಡಂಬನೆ :‌ ಭಾಗ್ಯದೊಡನೆ ಭೇಟಿ ಭಾಗ ೨

19 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಎರಡನೆಯ ಕಂತು.

– ನಗೆ ಸಾಮ್ರಾಟ್

ಮೊದಲ ಕಂತು ಇಲ್ಲಿ ಓದಿ

4. ಅಂದು “ಸ್ವ” ಎಂದೊಡನೆ ಸ್ವತಂತ್ರ, ಸ್ವರಾಜ್ಯ, ಸ್ವದೇಶಿ, ಸ್ವಯತ್ನ, ಸ್ವಶಕ್ತಿ, ಸ್ವಚ್ಛತೆ, ಸ್ವಾಭಿಮಾನ, ಸ್ವಾವಲಂಬನೆ, ಇತ್ಯಾದಿ ನೆನಪಿಗೆ ಬರುತ್ತಿದ್ದವು. ಅದೇ “ಸ್ವ” ಎಂದೊಡನೆ ಇಂದು ನಮಗೆ ಹೊಳೆಯುವುದು “ಸ್ವಾಹಾ!” ಸ್ವತ್ತು, ಸ್ವಕುಟುಂಬ, ಸ್ವಜಾತಿ, ಸ್ವಾರ್ಥ, ಇತ್ಯಾದಿ ಶಬ್ದಗಳು; “ಸ್ವತಂತ್ರ” ಎಂದರೆ ತಮ್ಮದೇ ಅಕ್ರಮಕಾರ್ಯಕ್ರಮಗಳಿಗಾಗಿ ಮಾಡಿಕೊಂಡಿರುವ “ಸ್ವ” ತಂತ್ರ; ಹಾಗೂ “ಜನತಂತ್ರ” ಎಂದರೆ ಜಾಣತಂತ್ರ ಎಂಬಂಥ ಅಸಹಜ ಅರ್ಥಾಂತರಗಳು.

5. ಅಂದು ಆಳಿದ ಪ್ರಭುಗಳು ಅಲ್ಲಲ್ಲಿಗೆ ಒಬ್ಬೊಬ್ಬರಿದ್ದರಷ್ಟೆ. ಆದರಿಂದು, ಚುರಾಯಿತ ಜನಮತಮುದ್ರೆಯನ್ನು ತೋರಿ ಚುನಾಯಿತರೆನಿಸಿಕೊಂಡವರೆಲ್ಲರೂ ನಮ್ಮ ಧಣಿಗಳೇ. ನಮ್ಮನ್ನು ಆಳುವ, ಆಳುಕಾಳುಗಳಂತೆ ಕಾಣುವ, ಇಂಥ ದು:ಶಾಸಕ, ಧೃತರಾಷ್ಟ್ರಕೂಟರು ಇಂದು ಹಳ್ಳಿಗೆ ಹತ್ತಿಪ್ಪತ್ತು. ಜಾತಿ, ಭಾಷೆ, ಇತ್ಯಾದಿಗಳನ್ನು “ಪಾಳೆಯ”ಗಳನ್ನಾಗಿಸಿಕೊಂಡಿರುವ ಪಾಳೆಯಗಾರರು; ದೇಶ ತುಂಡಿರಿಸಿ ಆಳುವ ತುಂಡರಸ-ಪುಂಡರಸರು; ಒಡೆದು-ಹೊಡೆದು ಆಳುವ ಒಡೆಯರು … ಇಂಥವರ ರಾಜಗಣಗಳೇ ಇಂದು ಈ ‘ಭರ್ತ್ಯ’ಭೂಮಿಯಲ್ಲಿ ಭರತನಾಟ್ಯವನ್ನಾಡುತ್ತಿರುವುವು; ತಮ್ಮ ರಾಜ್ಯಲೀಲೆಯಿಂದ ರಾರಾಜಿಸುತ್ತಿರುವುವು. ಆಳುಗಳೇ ಮಾಲೀಕರನ್ನು ಆಯ್ಕೆ ಮಾಡಿ, ಉಚ್ಚ ಪಟ್ಟಗಳಿಗೆ ತುಚ್ಛರನ್ನು ಹರಸಿ ಕಳಿಸಬೇಕಾಗಿರುವಂಥ ಹುಚ್ಚುತನವೇ ನಮ್ಮ ಈ “ಪ್ರಜಾ- ಪ್ರತಿನಿಧಿ ಪ್ರಭುತ್ವದ” ಹೆಚ್ಚುಗಾರಿಕೆಗಳಲ್ಲೊಂದಾಗಿದೆ.

6. ಅಂದೂ ಸಹ, ಅನೇಕ ಭಾರತಸ್ಥರಲ್ಲಿ ವಿದೇಶ ವ್ಯಾಮೋಹ, ವಿಶೇಷವಾಗಿ ಆಂಗ್ಲಾಕರ್ಷಣೆ, ಗಾಢವಾಗಿದ್ದುದು ನಿಜವಲ್ಲವೇ? ಹೌದು, ಇದೇನೋ ಒಪ್ಪತಕ್ಕದ್ದೇ. ವಾಸ್ತವವಾಗಿ, ಅಂದು ಅಂಧಸಮುದ್ರದ (ಅಟ್ಲ್ಯಾಂಟಿಕ್) ಈಚೆಗಿದ್ದ, ಅದರಲ್ಲೂ ಅಲ್ಲಿನ ತಮಸಾ (ಥೇಮ್ಸ್) ನದಿಯ ಬದಿಗಿದ್ದ ಅಯಸ್ಕಾಂತವು, ಇಂದು ಅದರಾಚೆಗಿರುವ ‘ಅಮರ’ ಅಮೆರಿಕಾಗೆ ಸರಿದಿದೆ, ಅಷ್ಟೆ. ತತ್ಫಲವಾಗಿ, ಅಮೆರಿಕಾವೇಶ ಅಮರಿಕೊಂಡಿರುವ ತಾಯ್ತಂದೆಯರು, ಭಾರತದ ಭಾರವನ್ನು ಎಂದು ತೊರೆದೇವೋ ಎಂದು ಹಾತೊರೆಯುತ್ತಾ, ಒಂದೇ ಹಠದಿಂದ ತಮ್ಮ ಬುದ್ಧಿಶಾಲಿ ಬಾಲರಿಗೆ ಬಾಲ್ಯದಿಂದಲೇ ಅಮೆರಿಕದ ಅಮಲೇರಿಸಿ, “ಅಮೆರಿಕ! ಅಮೆರಿಕ!!” ಎಂಬ ಜನ್ಮಸಾಫಲ್ಯ ಮಂತ್ರದ ದೀಕ್ಷೆಯನ್ನು ಅವರಿಗೆ ಸಕಾಲಕ್ಕೆ ಕೊಡಿಸಿ, ಅವರು ಮತ್ತೆಂದೂ ಭಾರತಕ್ಕೆ ಬಾರದಂತೆ ಆಚೆಗಟ್ಟಿ, ಒಂದು ನವಶೈಲಿಯ “ಕ್ವಿಟ್ ಇಂಡಿಯಾ” ಕಿಚ್ಚನ್ನೇ ಹಚ್ಚಿಕ್ಕಿದ್ದಾರೆ. ಅಂದು ಈಸ್ಟ್ ಇಂಡಿಯಾ ಕಂಪನಿಗೆ ಕಚ್ಚಾವಸ್ತುಗಳನ್ನೂ, ಕಾರಕೂನರನ್ನೂ ಒಲವಿನಿಂದ ಒದಗಿಸುತ್ತಿದ್ದ ಭಾರತವು, ಇಂದು ತನ್ನ ಸಮಸ್ತ ಸಮರ್ಥ ಯುವಶಕ್ತಿಯನ್ನು ಹೆಮ್ಮೆ-ಹುಮ್ಮಸ್ಸುಗಳಿಂದ, ಅಮೆರಿಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿಗಳಿಗೆ ಕಚ್ಚಾಮಾಲುಗಳನ್ನಾಗಿ ಪರಿವರ್ತಿಸಿ, ಎಡೆಬಿಡದೆ ರಫ್ತು ಮಾಡುತ್ತಿದೆ. ತನ್ನ ಇಡೀ ಶಿಕ್ಷಣಕ್ರಮವನ್ನು ‘ಪರ’ತಂತ್ರಜ್ಞಾನಕ್ಕೆ “ಪ್ರೋಗ್ರ್ಯಾಮ್” ಮಾಡಿಕೊಂಡು ಧನ್ಯತೆಯಿಂದ ಬೀಗುತ್ತಿದೆ. ಹೀಗೆ, ಬುದ್ಧಿರಾಶಿಯು ಅಮೆರಿಕಾತುರವಾಗಿಯೂ, ‘ನುಂಗಂಬಾಕಂ’ ಆದ ಧನರಾಶಿಯು ಸ್ವಿಸ್‍ಬ್ಯಾಂಕಾಭಿಮುಖವಾಗಿಗೂ ದಿಕ್ಕೆಟ್ಟು, “ಭಂಡ”ವಾಳವಷ್ಟೇ ಭಾರತದ ಅಭಿವೃದ್ಧಿಯಲ್ಲಿ ತೊಡಗಿಸಲು ಮಿಕ್ಕುಳಿಯುತ್ತಿದೆ.

7. ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ಢಂಬಾಚಾರ, ಇವೆಲ್ಲ ಅಂದೂ, ಎಂದೆಂದೂ ಇದ್ದವೇ ತಾನೇ? ಖಂಡಿತ. ಆದರೆ ಅಂದು ಭ್ರಷ್ಟಾಚಾರವು ಒಂದು ಅತಿವಿಶಿಷ್ಟ ಶಿಷ್ಟಾಚಾರವಾಗಿ, ರಾಜಕಾರಣಕ್ಕೆ ಅವಶ್ಯ ಅರ್ಹತೆಯಾಗಿ, ಹುದ್ದೇದಾರರ ಸಿದ್ಧಾಂತವಾಗಿ, ಮಾನ್ಯತೆ ಪಡೆದಿರಲಿಲ್ಲ. ಜನಮಾನಸದೊಳಗೆ “ಡಿ.ಎನ್.ಎ.-ಗತ”ವಾಗಿ, ಚರಾಚರಗಳೆಲ್ಲವನ್ನೂ ನಡೆಸುವ ವಿಶ್ವಚೇತನವಾಗಿ ಹೊರಹೊಮ್ಮಿರಲಿಲ್ಲ. ಲಂಚವೆಂಬ ಮೂಲವ್ಯಾಧಿಯು ಅತ್ಯುಗ್ರ ಆಮೂಲಾಗ್ರ ಅರ್ಬುದವಾಗಿ ಮೆಟ್ಟಿಕೊಂಡಿರಲಿಲ್ಲ; ಅಧಿಕೃತವಾಗಿ (ಮಂತ್ರಿಶಕ್ತಿ, ತಮೋಬಲಗಳಿಂದ) ಅಪಹರಿಸುವ ಸಂಸ್ಕೃತಿ ಆಗಿನ್ನೂ ಮೊಳಕೆಯೊಡೆದಿರಲಿಲ್ಲ. “ಝಣಝಣಹಣ ಅಧಿನಾಯಕ ಜಯಹೇ” ಎಂಬುದು ನಮಗೊಂದು ಅನಧಿಕೃತ ರಾಷ್ಟ್ರಗೀತೆಯಾಗಿರಲಿಲ್ಲ. “ಜಾತಿಯೇ ಜ್ಯೋತಿ,” “ಪರಧನವೇ ಪರಮಾತ್ಮ,” “ತದುಕಲು ಕಲಿಯಿರಿ,” “ನೀವಿರುವುದೆ ನಮಗಾಗಿ,” ಮುಂತಾದ ಪದಪುಂಜಗಳು ಆಗಿನ್ನೂ ಆಳರಸರ ಸ್ಫೂರ್ತಿಸೂಕ್ತಿಗಳಾಗಿ ಮೂಡಿಬಂದಿರಲಿಲ್ಲ. ಶ್ರೇಷ್ಠ ನ್ಯಾಯಮೂರ್ತಿಗಳು, ಜ್ಯೇಷ್ಠ ಐ.ಎ.ಎಸ್.-ಐ.ಪಿ.ಎಸ್. ಅಧಿಕಾರಿಗಳು, ವರಿಷ್ಠ ದಂಡನಾಯಕರು,  ಗಣ್ಯ ಮಾಧ್ಯಮೋದ್ಯೋಗಿಗಳು, ಸುಸಂಪೂಜಿತ ಧರ್ಮಗುರುಗಳು, ಬಿರುದಾಂಕಿತ ಸಮಾಜಸೇವಕರು, ಬಹುಮಾನ್ಯ ಬುದ್ಧಿಜೀವರು … ಮೊದಲಾದ ಸಮಾಜಾಧಾರ ಸ್ತಂಭಗಳೇ ಆಗ ಹೀಗೆ ಹಗರಣರಂಗದಲ್ಲಿ ಮಾನಾಭಿಮಾನ-ವಿಕಲರಾಗಿ ಮುರಿದು ಬಿದ್ದಿರಲಿಲ್ಲ. ಮಹಾಬಿಲೇಶ್ವರರೂ-ವರಾಹಾಂಶ ಸಂಭೂತರೂ ಕೊರೆದ ಬಿಲಿಯನ್ ಬಿಲಗಳ ಬೀಡಾಗಿ, ಸುರಂಗಜೇಬರ ರಾಜಮಾರ್ಗವಾಗಿ, ಕೊಳ್ಳೆಗಳ ಕೊಳಚೆಯ ಕೊಳ್ಳವಾಗಿ, ಭಾರತದ ಪ್ರಭುತ್ವವು ಆಗ ಇನ್ನೂ ಅಷ್ಟು ‘ಪ್ರಬುದ್ಧವಾಗಿರಲಿಲ್ಲ; ಈ ಪ್ರಮಾಣಕ್ಕೆ ‘ಪ್ರಭುಕ್ತ’ವಾಗುವುದು (ತಿಂದುಹಾಕಲ್ಪಡುವುದು) ಎಂದು ಯಾವ ಭಾರತಜ್ಞರೂ ಊಹಿಸಿಯೂ ಇರಲಿಲ್ಲ. ಆಗ ದಿನಕ್ಕೊಂದು ವಿಚಾರಣಾ ಆಯೋಗ ನೇಮಿಸಲ್ಪಡಬೇಕಾಗಿ ಬಂದಿರಲಿಲ್ಲ. ಲೋಕಾಯುಕ್ತ ಸಂಸ್ಥೆಯು ಇನ್ನೂ ಲೋಕಕ್ಕೆ ಅಯುಕ್ತವೆನಿಸಿರಲಿಲ್ಲ. ಕಾನನದ ಕಾನೂನೆಂಬುದು ಸೋಂಕಿತ್ತಾದರೂ ಈಗಿನಂತೆ ಸೊಕ್ಕಿರಲಿಲ್ಲ. ಸಿಂಧುದೇಶವು ಪ್ರಜಾಂತಕ ಪರಿಪಾಲಕರಿಗೆ ಅಷ್ಟು ಅನುಕೂಲಸಿಂಧುವಾಗಿ ತಿರುಗಿರಲಿಲ್ಲ.

ಮೇಲಾಗಿ, ವಿದೇಶಿ ಧಾಳಿಕೋರರು ಇತಿಹಾಸದಾದ್ಯಂತ ಸೂರೆಗೈಯದಿದ್ದಷ್ಟು ಸಂಪತ್ತನ್ನು ಕೆಲವೇ ದಶಕಗಳಲ್ಲಿ ದೇಶಾಂತರಿಸಿ, ತಾಯ್ನಾಡಿನ ಜೀವದ್ರವ್ಯವನ್ನೇ ಇಂಗಿಸುವ ಸ್ವದೇಶಿ ರಾಷ್ಟ್ರಹೀರರು, ಕಳಿಂಗ “ಹಿಂಡಿಯಣ್ಣರು,” ಆಗಿನ್ನೂ ಅವತಾರವೆತ್ತಿರಲಿಲ್ಲ!

ವಿಡಂಬನೆ: ಭಾಗ್ಯದೊಡನೆ ಭೇಟಿ

18 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ.

– ನಗೆ ಸಾಮ್ರಾಟ್

ಆಂಗ್ಲರಾಹುವಿನಿಂದ ಭರತಭೂಮಿಯು ಮುಕ್ತವಾದ ಶ್ರಾವಣ ಅಮಾವಾಸ್ಯೆಯ ಅಂಚಿನ ಆ ಕಟ್ಟಿರುಳಿನ ಅಮೃತಘಳಿಗೆಯಲ್ಲಿ,  ಇಂದು “ಸೆಂಟ್ರಲ್ ಹಾಲ್ ಆಫ್ ಪಾರ್ಲಿಮೆಂಟ್” ಎನ್ನುವ ಮಹಿಮಾನ್ವಿತ ವೇದಿಕೆಯಲ್ಲಿ, ಪ್ರಧಾನಿ ನೆಹ್ರೂ ಅವರು ಭಾರತದ ರಾಜ್ಯಾಂಗ ಸಭೆಯನ್ನುದ್ದೇಶಿಸಿ, ಅಸಾಮಾನ್ಯ ಅಸಮಾನತೆ, ಅನಾರೋಗ್ಯ, ಅಜ್ಞಾನ ಇನ್ನಿತರ ಅನಿಷ್ಟಗಳನ್ನು ಅಳಿಸುವ ಬಗ್ಗೆಯೂ; ಸುಖ, ಶಾಂತಿ, ಸಮೃದ್ಧಿ, ನ್ಯಾಯ, ಸ್ವಾತಂತ್ರ್ಯ, ಲೋಕತಂತ್ರ, ಸಾಮಾನ್ಯರ ಸಾಮ್ರಾಜ್ಯ, ಇನ್ನಿತರ ಮೌಲ್ಯಾದರ್ಶಗಳನ್ನು ಸಿದ್ಧಿಸಿಕೊಳ್ಳುವುದರ ಬಗ್ಗೆಯೂ; ಕರ್ತವ್ಯ, ಜವಾಬ್ದಾರಿ, ಶ್ರಮ, ಸೇವೆ, ಮತ್ತಿತರ ನಾಯಕತ್ವ ಗುಣಗಳ ಬಗ್ಗೆಯೂ ಮಾಡಿದ “ಭಾಗ್ಯದೊಡನೆ ಭೇಟಿ” ಎಂಬ ಭಾಷಣವು ಲೋಕಾನುಶ್ರುತವಾಗಿದೆ. ಆ ವಿದ್ಯುಜ್ಜನಕ ವಾಗ್ಧಾರೆಯಲ್ಲಿ ನೆಹ್ರೂ ಮಹೋದಯರು ಬಯಸಿದ, ಬಣ್ಣಿಸಿದ, ಬಣ್ಣದ ಭೂಮಿಯತ್ತ, ತಮಸ್ಸಿನಿಂದ ಜ್ಯೋತಿಯತ್ತ, ಭಾರತರಥವು ನಿಜಕ್ಕೂ ಸಾಗುತ್ತಿದೆಯೇ ಎಂದು ಕೊಂಚ ಹೊರಳಿ ನೋಡುವುದು ಇಂದಿನ ನವಭಾರತೋದಯ ದಿನೋತ್ಸವದ ಸಂದರ್ಭದಲ್ಲಿ ಬಹು ಪ್ರಸ್ತುತ. ಆದರೆ, 1.27 ಸಹಸ್ರಸಹಸ್ರದಷ್ಟು ಚದರಮೈಲಿಯಿರುವ, 1.24 ಶತಕೋಟಿಯಷ್ಟು ಪ್ರಜಾಪ್ರಭೂತ, 65 ವರ್ಷಗಳಷ್ಟು ವೃದ್ಧ ಭಾರತದ ಮಹಾಭಾರದ ಗಾಥೆಯು ಅನೇಕ ಮಹಾಭಾರತಗಳಿಗೆ ಸಮನಾಗುವುದರಿಂದ, ಸದ್ಯಕ್ಕೆ ಕೆಲವೇ ಬಿಂದುಗಳ ಸಂದಿನಿಂದ ಸಿಂಧುವನ್ನು ಸಂದರ್ಶಿಸುವ ಪ್ರಯತ್ನವನ್ನು ಮಾಡಬಹುದು.

1947 ಮತ್ತು 2012: ಒಂದು ವ್ಯತಿರಿಕ್ತ ಪ್ರತಿಬಿಂಬ

1. ಅಂದಿನ ಸ್ವಾತಂತ್ರ್ಯಾರ್ಥಿಗಳು ದೇಶವು ದೇಹಕ್ಕಿಂತ ಮಿಗಿಲೆಂದೂ, ದೇಶವೇ ದೇವಾಲಯವೆಂದೂ ಭಾವಿಸಿ ಒಂದು ವಿಶಿಷ್ಟ ಅದ್ವೈತಸತ್ವವನ್ನು ಮೆರೆದಿದ್ದ ದೇಶಭಕ್ತೋತ್ತಮರು. ಆದರೆ, ಇಂದು ನಮ್ಮನ್ನಾಳುವವರು, ಸರ್ವಭೂಮಿಯೂ ತಮ್ಮದೆನ್ನುವ (ಇಡೀ ಭಾರತವೇ ಒಂದು ರಿಯಲ್ ಎಸ್ಟೇಟ್) ಸರ್ವಾಹಂಕಾರಭೂಷಿತ ಸಾರ್ವಭೌಮರು.  ತಮ್ಮ ವೈಭವಕ್ಕಾಗಿ ದೇಶದಾನ ಮಾಡುತ್ತಿರುವ ಭಾರತೇಶರು. ಪ್ರಜಾಹಿತಕ್ಕೆ ಪ್ರತಿಯಾಗಿ ಪ್ರವರ್ತಿಸುತ್ತ, ಪ್ರತಿಯೊಂದು ನಿಧಿಯನ್ನೂ ಬಾಚಿಕೊಳ್ಳಲು ತಮ್ಮ ಜನ್ಮವನ್ನೇ ಸಮರ್ಪಿಸಿಕೊಂಡಿರುವ “ಪ್ರತಿ-ನಿಧಿ” ಪ್ರಜಾಪತಿಗಳು. ಅಂದಿನ ಭಾರತದ ಸಾರಥಿಗಳಾಗಿದ್ದವರು ಅತಿರಥ, ಮಹಾರಥ, ಭಗೀರಥರಾಗಿದ್ದರೆ, ಇಂದಿನ ಪ್ರತಿನಿಧಿ ಪ್ರಭುಗಳು ಅತಿರತಿ, ಮಹಾರತಿಯನ್ನು ಭಾರತಮಾತೆಯಲ್ಲಿ ಕಾಣುವ ರಣ ರಾಷ್ಟ್ರಕಾಮರು.

2. ಅಂದು ಜನಮನವೆಲ್ಲ ಒಂದೇ ಗಣವಾಗಿ, ಭಾರತಾಂಬೆಯನ್ನು ಒಂದೇ ದನಿಯಿಂದ “ವಂದೇ ಮಾತರಂ” ಎಂದು ಭಾವಭಕ್ತಿಭರಿತವಾಗಿ ಕೀರ್ತಿಸಿತ್ತು. ಆದರೆ ಇಂದು, ಓಟು-ಜಾತಿ ಎಂಬ ಉಭಯ ಮತಗಳನ್ನೂ-ಮಠಗಳನ್ನೂ ಗಂಟು ಮಾಡಿರುವ ಅತಿ-ಅತಿ-ಜಾತೀಯತೆಯ “ಮತಾಚಾರ್ಯರು,” ದುರ್ಧರ್ಮಾನಂದರು, ಭಾಷಾಪಾತಕರು, ಮುಂತಾದ ನಿಸ್ಸೀಮ ಮಾನಸಭಂಜಕರ, ದ್ವೇಷಸ್ಥರ, ವೇಷಧಾರಿಗಳ ಸತತ ಪರಿಶ್ರಮದಿಂದಾಗಿ, ಅನೇಕ ಅಬ್ಬರದ ಆರ್ತನಾದಗಳ ಏಕಕಾಲಿಕ ಕಾಕಸಂಗೀತವು ಎಲ್ಲೆಡೆಯಿಂದ ಸಿಡಿದುಬರುತ್ತಿದೆ. ಭಾರತವು “ಒಂದೇ ದೇಶ” ವಾಗುವ ಬದಲು, “ಒಂದೊಂದೇ ಮಾತರಂ” ಎನ್ನುವ ಅಸಂಖ್ಯ ‘ಕಟ್ಟಭಿಮಾನಿಗಳ’ ಇಕ್ಕಟ್ಟು-ಬಿಕ್ಕಟ್ಟುಗಳ ತಿಕ್ಕಾಟದ ಒಕ್ಕೂಟವಾಗಿದೆ. 125 ಕೋಟಿ ಛಿನ್ನವಿಚ್ಛಿನ್ನ ಮನಸ್ಸುಗಳು 125 ಕೋಟಿ ಹೆಡೆಯ ಹೆನ್ನಾಗರದಂತೆ ಇಂದು ನಮ್ಮ ಹೆನ್ನಾಗರಿಕತೆಯ ಕತೆಯನ್ನು ಹಿಂದೋಡಿಸುತ್ತಿವೆ.

3. ಅಂದು ನಾವು ನೋಡುತ್ತಿದ್ದುದು, ನಮಿಸುತ್ತಿದ್ದುದು, ತ್ಯಾಗ-ಸ್ವಚ್ಛತೆ-ಸಮೃದ್ಧಿ-ಧರ್ಮಗಳನ್ನು ಸಂಕೇತಿಸುವ ಒಂದು ಭವ್ಯ ಬಾವುಟ. ಅಂದು ಇದ್ದದ್ದು ಅದೊಂದೇ ಬಾವುಟ, ಒಂದೇ ಸೇನೆ. ಆದರೆ, ಅದರ ತ್ರಿರಂಗುಗಳಲ್ಲಿ ಇಂದು ನಮಗೆ ಕಾಣಸಿಗುತ್ತಿರುವುದು ಎರಡು ಬೇರೆಯೇ ರಂಗುಗಳು: ಕಾಳಹಣ-ಕರಾಳಗುಣದ ಕಡುಕಪ್ಪು, ಮತ್ತು ಅಧಿಕಾರಷಾಹಿ ಟೇಪುಗಳ, ರಕ್ತಬಸಿದು ಏಗುತ್ತಿರುವವರ ಕಟುಗೆಂಪು. ಧರ್ಮಚಕ್ರದ್ದಂತೂ ಕತೆಯೇ ಬೇರೆ. ಪ್ರಜಾ’ಸ್ವಾಮಿ’ಗಳ ಬಹುಬಿಲಿಯನ್ ಕೊಳ್ಳೆಮೊತ್ತಗಳಲ್ಲಿನ ಕೊಳೆಸೊನ್ನೆಗಳನ್ನೂ, “ಸ್ವಾಮ್ಯವಿಲ್ಲದವರು ಸೊನ್ನೆಯಲ್ಲಿಯೇ ಸಾಮ್ಯವನ್ನೈದಿರುವ” ವಿಕೃತ ಸಮೀಕರಣವನ್ನೂ, ಮತ್ತು ಎಲ್ಲೆಡೆ ಮುಸುಕುತ್ತಿರುವ ಮೌಲ್ಯಶೂನ್ಯತೆಯನ್ನೂ ಬಿಂಬಿಸುತ್ತ ಬಂದು, ಕಡೆಗೆ ಈ ಧರ್ಮಚಕ್ರವು ಒಂದು ಗಾಢ-ಗೂಢ ಸೊನ್ನೆಯಾಗಿ, ಅಧರ್ಮಚಕ್ರಾಧಿಪತ್ಯದ ರಾಜ್ಯೋಪಕರಣವಾಗಿ, ಬರಲಿರುವ ಕೂಪಕಂದರದ (Black-hole) ದುಶ್ಶಕುನವಾಗಿ ಹಿಂದುರುಳಲಾರಂಭಿಸಿ ದಶಕಗಳೇ ಕಳೆದವು. ತ್ರಿರಂಗವು ಹೀಗೆ ಗತಿಸಿರುವಂತೆಯೇ, ಇಂದು ಒಂದೊಂದು ರಾಜ್ಯಕ್ಕೂ, ಪಕ್ಷವಿಪಕ್ಷಗಳಿಗೂ, ಬಣೋಪಬಣಗಳಿಗೂ, ಚಳುವಳಿ-ಸಂಘಟನೆಗಳಿಗೂ, ಒಂದೊಂದು ಬಾವುಟ, ಒಂದೊಂದು ಸೇನೆ ಎಲ್ಲಂದರಲ್ಲಿ ತಲೆಯೆತ್ತಿಕೊಂಡಿವೆ. (ದೇಶಾದ್ಯಂತ ಒಬ್ಬೊಬ್ಬ ಸನ್ಮಂತ್ರಿಯ ‘ಸತ್ಕರ್ಮ’ಕಾಂಡಕ್ಕೂ ನಿರೋಧ (ಅಥವಾ ‘ಶತ್ರು’) ಪಕ್ಷಗಳು ಸಿ.ಬಿ.ಐ. ತನಿಖೆಯನ್ನೇ ಒತ್ತಾಯಿಸುತ್ತಿರುವುದರಿಂದಾಗಿ, “ಸಿ.ಬಿ.ಐ. ಮಹಾಸೇನೆ” ಎಂಬುದೊಂದು ಈಗ ಬಾಕಿಯುಳಿದಿದೆಯಷ್ಟೆ.)

ಕೋಮಲ್ ಕಾಲಂ: ವಾಸನೆ ಗೌಡಪ್ಪನ ಗೋರಕ್ಷಣೆ

20 ಸೆಪ್ಟೆಂ

ನಮ್ಮ ವಾಸನೆ ಗೌಡಪ್ಪ ಬೆಳಗ್ಗೆನೇ ಒಂದು 20ಹಸ ಇಟ್ಕಂಡು ಚೆಡ್ಡಿ ಬನೀನಾಗೆ ಹೊಂಟಿದ್ದ. ಹಿಂದಗಡೆ ಬಂದ ಬಸ್ ಡ್ರೇವರ್ ಲೇ ಹಸುನಾ ಸೈಡಿಗೆ ಹೊಡಿಯಲೇ  ಅಂದ. ಮಗನೇ ಹೆಂಗೈತೆ ಮೈಗೆ ಅಂದ ಗೌಡಪ್ಪ ಅಂದ್ kolam ಮ್ಯಾಕೆ, ಗೌಡ್ರೆ ನೀವಾ ಅಂದಾ ಡ್ರೇವರ್. ನೋಡಲಾ ಗೌಡನ ದರಿದ್ರ ಬುದ್ದಿಯಾ. ಮಗಾ ಕಾಸು ಉಳಿಸಕ್ಕೆ ತಾನೇ ಹಸ ಮೇಯಿಸ್ತಾವ್ನೆ ಅಂದಾ ಕ್ಲೀನರ್. ಸರಿ ನಿಂಗನ ಅಂಗಡೀಲಿ ನಾನು, ಸುಬ್ಬ, ಸೀತು ಎಲ್ಲಾ ಚಾ ಕುಡಿತಾ ಪ್ರಪಂಚದ ಆಗು ಹೋಗುಗಳ ಬಗ್ಗೆ  ಮಾತಾಡ್ತಾ ಇದ್ವಿ. ಪರದಾನಿ ಮನಮೋಹನ್ ಸಿಂಗಿಂದ ಒಬಾಮಾ ತಂಕ ಹತ್ತು ನಿಮಿಟ್ನಾಗೆ ನಮ್ಮ ಬಾಯ್ನಾಗೆ ಬಂದು ಹೋಗಿದ್ರು. ಮಗಂದು ಮನೇಲೆ ನೋಡಿದ್ರೆ ತಿನ್ನಕ್ಕೆ ಅಕ್ಕಿ ಇಲ್ಲಾ. ಪ್ರಪಂಚದ್ದೆಲ್ಲಾ ಮಾತಾಡ್ತಾವೆ ಅಂತಿದ್ದಾ ಚಾ ಅಂಗಡಿ ನಿಂಗ. ಏ ಥೂ,. ಎದ್ದು ಹೋಗ್ರಲಾ. ಅಟ್ಟೊತ್ತಿಗೆ ಗೌಡಪ್ಪನ ನೋಡಿದ ಸುಬ್ಬ. ಯಾಕ್ರೀ ಗೌಡ್ರೆ ಇವತ್ತು ಹಸ ನೀವು ಹೊಡಕಂಡು ಹೊಂಟೀರಿ ಅಂದಾ. ನೋಡಲಾ ನಮ್ಮ ಮನೆ ದನಕಾಯೋನು ಮೊನ್ನೆ ಕುಡಿಯಕ್ಕೆ ಕಾಸಿಲ್ಲಾ ಅಂತಾ ಎರಡು ಎಮ್ಮೆನಾ ಬರೀ 100ರೂಪಾಯಿಗೆ ಕಸಾಯಿ ಖಾನೆಗೆ ಕಳಸವ್ನೆ ಅಂದ. ಸರಿ ಕೋಣದ ತರಾ ಇರೋ ನಿಮ್ಮನ್ನ ಕಳಿಸಿಲ್ವಲ್ಲಾ ಅದಕ್ಕೆ ಖುಸಿ ಪಡಿ ಅಂದಾ ಸುಬ್ಬ, ಲೇ ಇವನನ್ನ ಕಡಿದರೆ ಕಸಾಯಿ ಖಾನೆನೇ ಗಬ್ಬಾಯ್ತದೆ ಅಂದಾ ದೊನ್ನೆ ಸೀನ.

ಅಟ್ಟೊತ್ತಿಗೆ ನಿಂಗಾ ಬರ್ರೀ ಗೌಡರೆ ಒಂದು ಅರ್ಧ ಚಾ ಕುಡಿದು ಹೋಗಿರಿ ಅಂದ. ನಿನ್ನ ದರಿದ್ರ ಚಲ್ಟದ ಚಾ ಕುಡಿದರೆ ಒಂದು ಹತ್ತು ಕಿತಾ ಕೆರೆತಾವ ಹೋಗಬೇಕು ಅಂದ ಗೌಡಪ್ಪ. ಮಗಂದು ಕಾಲೆಲ್ಲಾ ಸಗಣಿ ಆಗಿತ್ತು. ಇವನು ಹಸ ಹೊಡಕಂಡು ಮುಂದೆ ಹೋಯ್ತಾ ಇದ್ರೆ. ನಮ್ಮೂರು ಹೆಣ್ಣು ಐಕ್ಳು ಹಿಂದಿಂದ ಸಗಣಿ ಎತ್ಕಂಡು ಮರದಾಗೆ ಹಾಕ್ಕೊಂಡು ಹೋಗೋವು. ಬೆರಣಿ ತಟ್ಟಕ್ಕೆ ಆಯ್ತದೆ ಅಂತಾ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರ. ನಮ್ಮ ಸಗಣಿ ಅಂತಾ ಗೌಡ ಜಗಳ ಆಡೋನು. ಏ ಥೂ. ಅದರಾಗೆ ಒಂದು ದನಕ್ಕೆ ಅಜೀರ್ಣ ಅಂತೆ ಗೌಡಪ್ಪ ಹತ್ತಿರ ಬಂದರೆ ಕೊಟ್ಟಿಗೆ ವಾಸನೇ ಬರೋದು.ಹಳಸಿದ ಫಲಾವು ಮತ್ತು ಕೊಟ್ಟಿಗೆ ವಾಸನೆ ಎಲ್ಡು ಮಿಕ್ಸ್ ಆಗಿ ಒಂದು ತರಾ OX (ಎತ್ತು) ಬಾಡಿ ಡಿಯೋಡ್ರೆಂಟ್ ಸ್ಮೆಲ್ ಬರೋದು.

ಕೆರೆತಾವ ಹೋದ್ರೆ ಗೌಡಪ್ಪ ಕಾಯಿ ಜುಂಗು ಹಿಡಕಂಡು ಹೋ ಹೋ ಹೋಪ್ಪಾ ಹೋಪ್ಪಾ ಅಂತಾ ಲೈಫ್ ಬಾಯ್ ಸೋಪ್ನಾಗೆ ಹಸ ಮೈ ತೊಳೀತಾ ಇದ್ದ. ಹೆಂಡರು ಸ್ನಾನಕ್ಕೆ ಇಟ್ಕಂಡಿದ್ದ ಸೋಪ್ನಾಗೆ ಎತ್ತಿನ ಮೈ ತೊಳೆಯೋನು. ಅಲ್ಲಿ ನೋಡಿದ್ರೆ ಹೆಂಡರು ಗೌಡಂಗೆ ಒಂದಿಷ್ಟು ಬೆಂಕಿ ಹಾಕ ಅಂತಿದ್ವು. ಎಲ್ಲಿಗವಾ. ಎಲ್ಲಿಗಾದ್ರೂ. ಅಲ್ಲಿ ಬಟ್ಟೆ ಒಗೆಯೋ ಹೆಂಗಸರು ಲೇ ಆ ಕಡೆ ಹೋಗಲೇ ಅಂತಿದ್ವು. ಮಗಾ ರಾಜಮ್ಮಂಗೆ ರೇಗಸ್ತಾ ಇದ್ದ. ಯಾಕೆ ನನ್ನ ಗಂಡಂಗೆ ಹೇಳ್ ಬೇಕಾ ಅಂತಿದ್ದಾಗೆನೇ ಆ ದಡದಾಗೆ ನಿಂತಿದ್ದ. ಗೌಡಪ್ಪ ಸಣ್ಣ ಐಕ್ಳು ತರಾ ಎತ್ತಿನ ಮೈ ಮ್ಯಾಕೆ ಕೂತು ಕೆರೇಲ್ಲಿ ಓಡಾಡೋನು. ಮಗಂಗೆ ಈಜು ಬರಲ್ಲಾ ಕರೀರಲಾ. ಹೊಗೆ ಹಾಕಸ್ಕಂಡ್ ಬಿಟ್ಟಾನು ಅಂದಾ ಸುಬ್ಬ. ಒಂದು ಎತ್ತು ತೊಡೆಗೆ ತಿವಿದು ಸಾನೇ ಗಾಯ ಮಾಡಿತ್ತು. ತೊಡೆಗೆ ಒಂದು ಕಾಲ್ ಕೆಜಿ ಅರಿಸಿನ ಹಚ್ಚಿದ್ವಿ. ಮಗಾ ಹುಳಕಡ್ಡಿ ಆದೋರು ತರಾ ಚಡ್ಡಿ ಎತ್ಕಂಡು ಬರೋನು. ಎರಡು ಹಸ ಕಳೆದೈತೆ ಅಂತಾ ಎಲ್ಲಾರ ಕೊಟ್ಟಿಗೇನೂ ಸಂಜೆ ಹುಡಕ್ತಾ ಇದ್ದ. ಏ ಥೂ.

ಸರಿ ಸಂಜೆ ಗೌಡಪ್ಪ ಎಲ್ಲಾ ಹಸನ್ನ ಕೊಟ್ಟಿಗೆ ಕಟ್ಟಿ ಎಂದಿನಂತೆ ಸಿದ್ದೇಸನ ಗುಡಿತಾವ ಬಂದ. ನೋಡ್ರಲಾ ಗೋ ಹತ್ಯೆ ನಿಷೇಧ ಅಂತಾ ಸರ್ಕಾರದವರು ಮಾಡವ್ರೆ. ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಅಂದ. ಸರಿ ಗೌಡರೆ ನೀವೆ ನಮ್ಮ ನಾಯಕರು. ಒಂದು ತರಾ ನೀವು ನಮಗೆ ಭಗತ್ ಸಿಂಗ್ ಇದ್ದಂಗೆ ಅಂದಾ ಸುಬ್ಬ. ಯಾಕೆ ಮಗನೇ ನೇಣು ಹಾಕಿಸಕ್ಕಾ ಅಂದ ಗೌಡಪ್ಪ. ಸರಿ ಬೆಳಗ್ಗೆನೇ ಹಳ್ಳಿಯ ಗಡಿಭಾಗದಲ್ಲಿ ನಿಂತ್ವಿ. ಒಂದು ಆಟೋದಾಗೆ ಒಂದು ಎರಡ ಹಸ ಬರ್ತಾ ಇತ್ತು, ಆಟೋ ನಿಲ್ಲಿಸಿ ಮುಖ ಮೂತಿ ನೋಡದೆ ಸರಿಯಾಗಿ ಚಚ್ಚಿದ್ವಿ. ನೋಡಿದ್ರೆ ಅವನು ಸಂತ್ಯಾಗೆ ಹಸ ಖರೀದಿ ಮಾಡ್ಕಂಡು ಅವನ ಹಳ್ಳೀಗೆ ಹೊಂಟಿದ್ದ. ಕಡೆಗೆ ಅರಿಸಿನ ಹಚ್ಚಿ ಕಳಿಸಿಸ್ವಿ. ಮಗಾ ಯಲ್ಲಮ್ಮನ ಜಾತ್ರೇಲಿ ಎಮ್ಮೆ ಕಡಿಯೋರು ತರಾ ಆಗಿದ್ದ. ಮುಂದೆ ಪೋಲೀಸ್ನೋರು ನೀನು ಎಮ್ಮೆ ಕಡಿಯೋನು ಅಂತಾ ಕೇಸು ಹಾಕಿದ್ರಂತೆ,. ಈಗ ನಮ್ಮನ್ನ ನೋಡಿದ್ರೆ ಓಡದೇ ಮಾಡ್ತಾನೆ, ಮತ್ತೆ ಇನ್ನೊಂದು ಆಟೋದಾಗೆ ಇನ್ನೊಂದು ಹಸಾ ಇಟ್ಕಂಡು ಬತ್ತಾ ಇದ್ದ, ಅವನಿಗೂ ನಿಲ್ಲಿಸಿ ದಬು ದುಬು ದಬು ದುಬು ಅಂತಾ ಸಾನೇ ಚಚ್ಚಿದ್ವಿ. ನೋಡಿದ್ರೆ ಅದು ಗಬ್ಬ ಇತ್ತಂತೆ ಅದಕ್ಕೆ ಡೆಲಿವರಿ ಮಾಡ್ಸಕ್ಕೆ ಅಂತಾ ಆಸ್ಪತ್ರಗೆ ಹೋಗಿದ್ದೆ ಅಂದಾ. ಲೇ ನೀವು ಏನ್ರಲಾ ಬಂದೋರುಗೆಲ್ಲಾ ಹಿಂಗೆ ಹೊಡಿತಾ ಇದಿರಾ ಕೇಸು ಆಯ್ತದೆ ಕಲಾ ಅಂದ ಗೌಡಪ್ಪ. ನೀವು ಇರೋಬೇಕಾದ್ರೆ ಯಾಕೆ ಅಂದು ಮತ್ತೆ ನಿಂತ್ವಿ. 1

ಒಂದೇ ಲಾರಿಯಲ್ಲಿ ಒಂದು ಹತ್ತು ಹಸ ಇಟ್ಕಂಡು ಪಕ್ಕದ ಹಳ್ಳಿ ರಾಜ, ಜೊತೆಗೆ ಇಸ್ಮಾಯಿಲ್ ಇದ್ದ. ಅದನ್ನು ನಿಲ್ಲಿಸಿ ಸಾನೇ ಹೊಡೆದ್ವಿ. ಮೂಗು ಬಾಯ್ನಾಗೆ ರಕ್ತ. ಲೇ ಹಸಕ್ಕೆ ಹುಸಾರಿಲ್ಲಾ ಅಂತಾ ಪಕ್ಕದ ಹಳ್ಳಿಗೆ ನಾಟಿ ಔಷಧಿ ಕೊಡಿಸಕ್ಕೆ ಅಂತಾ ಹೋದರೆ ಹಿಂಗೆ ಹೊಡಿತಿರಾ ತಡೀರಿ ನಮ್ಮ ಕಡೆಯವರನ್ನು ಕರೆಸಿ ನಿಮಗೆ ಹೊಡೆಸ್ತೀನಿ ಅಂದಾ. ಮಗಾ ಕಿಸ್ನ ಅವರಿಗೆ ಅರಿಸಿನ ಹಚ್ಚಿದ್ದ. ಲೇ ನಡೀರಲಾ ಮನೆಗೆ. ನಿಮ್ಮನ್ನ ಕರೆದುಕೊಂಡು ಬಂದರೆ ನನಗೆ ನಿಜವಾಗಲೂ ಭಗತ್ ಸಿಂಗ್ ಮಾತ್ತೀರಾ ಅಂದ.

ಸರಿ ಮಾರನೆ ದಿನದಿಂದ ನಮ್ಮ ಕೆಲಸ ಗೋ ಹತ್ಯೆ ತಡೆಯೋದೆಯಾ ಅಂದಾ ಗೌಡಪ್ಪ. ಎಲ್ಲಿ ಹೊರಗೆ ಹಸ ಕಾಣಂಗಿಲ್ಲ. ಅಂಗೇ ತಂದು ಪಂಚಾಯ್ತಿ ದೊಡ್ಡಿಗೆ ಬಿಡ್ತಾ ಇದ್ವಿ. ದೊಡ್ಡಿ ತುಂಬಿ. ಪಂಚಾಯ್ತಿ ಆಫೀಸ್ನಾಗೂ ಎರಡು ಎಮ್ಮೆ ಕಟ್ಟಿದ್ವಿ. ಮಗಾ ಬಿಲ್ ಕಲೆಕ್ಟರ್ ಮೂಗು ಮುಚ್ಕಂಡು ಲೆಕ್ಕ ಬರೀತಾ ಇದ್ದ. ದೊಡ್ಯಾಗೆ ಗೌಡಂದು ಎರಡು ಹಸಾ ಇತ್ತು. ಏನ್ರಲಾ ನನ್ನ ಹಸನ್ನ ಇಲ್ಲೇ ತಂದು ಹಾಕಿದಿರಲಾ ಅಂದ. ಬೀದ್ಯಾಗೆ ಇತ್ತು ಅದಕ್ಕೆ ಅಂದಾ ನಿಂಗ. ಗೌಡಪ್ಪನ ಹೆಂಡರು ಬೆಳಗ್ಗೆ ಒಂದು ಬಕ್ಕಿಟ್ಟು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂತು. ನೋಡಿದ್ರೆ ಒಂದು ಲೋಟದಷ್ಟು ಬಂದಿರಲಿಲ್ಲ. ಏನ್ಲಾ ಹಸನ್ನ ಮೇಯಿಸಿಲ್ಲೇನ್ಲಾ ಅಂತು ಗೌಡಪ್ಪನ ಹೆಂಡರು. ಲೇ ಗಂಡಂಗೆ ಮರ್ವಾದೆ ಕೊಟ್ಟು ಮಾತಾಡೇ. ಯಾರಾದರೂ ಕೇಳಿಸ್ಕಂಡ್ರೆ ದನಕಾಯೋ ಶಂಭು ಅಂದ್ಕತಾರೆ ಅಂದಾ ಗೌಡಪ್ಪ. ಸರಿ.ಸರಿ. ನಾನು ಮೇಯಿಸಿದ್ದೆ ಕಣಮ್ಮಿ, ಅದು ಹಾಲು ಕೊಡೋ ಬದಲು ಒಂದು ಬಕ್ಕಿಟ್ಟು ಸಗಣಿ ಕೊಟ್ಟೈತೆ ಅಂದಾ ಗೌಡಪ್ಪ. ಅದ್ರಾಗೆ ಇವತ್ತು ನಿಂಗೆ ಮುದ್ದೆ ಅಂದು ಹೋತು. ಗಂಜಲ ನೆಂಚಳಕ್ಕೆ ಆಯ್ತದೆ ಅಂದ ಸುಬ್ಬ.

ಪೊಲೀಸ್ ಸ್ಟೇಷನ್ನಾಗೆ ನಾವು ಹೋಗಿ ಹೋಗಿ ಕಂಪ್ಲೇಟ್ ಕೊಡ್ತಾ ಇದ್ವಿ. ಹಸಕ್ಕೆ ಅಂತಾನೇ ಒಂದು ಬ್ರಾಂಚ್ ತೆಗೆದಿದ್ರು. ಕೌ ಸ್ಕ್ವಾಡ್ ಅಂತಾ. ಅದಕ್ಕೆ ಒಬ್ಬ ಇನ್ಸ್ ಪೆಕ್ಟರ್. ಬರೇ ಒಂದು ಗೌಡಪ್ಪ ಮಿಸ್ ಕಾಲ್ ಕಟ್ಟರೆ ಸಾಕು. ಜೀಪ್ನಾಗೆ ಬಂದು ಏನೂ ಸಿಗಲಿಲ್ಲ ಅಂದ್ರೆ ಬುಟ್ಯಾಗೆ ಸಗಣಿ ತುಂಬ್ಕಂಡು ಹೋಗೋನು. ಹೆಂಡರು ಬೆರಣಿ ತಟ್ಟಲಿ. ನೀರು ಕಾಯಿಸಕ್ಕೆ ಆಯ್ತದೆ ಅಂತಾ. ಇವನ ಕಾಟಾ ತಡಿಲಾರದೆ ಪ್ರಾಣಿ ದಯಾ ಸಂಘದೋರು ಒಂದು ಹತ್ತು ಕಂಪ್ಲೇಟ್ ಕೊಟ್ರು.  ಇವಾಗ ಕೇಸಿಗೆ ಅಂತಾ ದಿನಾ ಮಂಡ್ಯಕ್ಕೆ ಓಡಾಡ್ತಾನೆ. ಬೆಳಗ್ಗೆ ಹೋದ್ರೆ ಸಂಜೆತಾವ ಹಳ್ಳಿಗೆ ಬತ್ತಾನೆ.  ಆದ್ರೆ ಇನ್ಸೆಪೆಕ್ಟರ್ ಮಾತ್ರ ಸಗಣಿ ಎತ್ತೋ ಬುಟ್ಟಿ ಮಾತ್ರ ಅಂಗೇ ಜೀಪ್ನಾಗೆ ಮಡಗವನೆ. ನಿಜ ನೋಡಿದ್ರೆ ನಮ್ಮ ಹಳ್ಯಾಗೆ ಕಸಾಯಿ ಖಾನಗೆ ಹಸನ್ನ ಕಳಿಸ್ತಿದ್ದಿದ್ದು ಗೌಡಪ್ಪ ಅಂತಾ ಗೊತ್ತಾದ ಮ್ಯಾಕೆ ಬಂದಾ ನೋಡ್ರಲಾ ಹಸ ಬ್ರೋಕರ್ ಅಂತವ್ರೆ. ಗೌಡಪ್ಪ ಮುಖ ಮುಚ್ಕಂಡು ಓಯ್ತಾನೆ.

ನಗಾರಿ ರೆಕಮಂಡೇಶನ್ಸ್ 12

20 ಆಗಸ್ಟ್

ನಗಾರಿ ರೆಕಮಂಡೇಶನ್! ಹೌದು, ಅಂತರ್ಜಾಲವೆಂಬ ಸಾಗರದಲ್ಲಿ ನಗೆ ಬುಗ್ಗೆಗಳನ್ನು ಅರಸುತ್ತಾ ಸಾಮ್ರಾಟರು ಅಲೆಯುತ್ತಲೇ ಇರುತ್ತಾರೆ. ಕೆಲವು ಬುಗ್ಗೆಗಳು ಕಂಡ ಕೂಡಲೇ ನಗಾರಿಗೆ ಬಂದು ಇಲ್ಲಿ ಅವನ್ನು ಪರಿಚಯಿಸುತ್ತಾರೆ. ಈ ಸಂಚಿಕೆಯಲ್ಲಿ ನಗೆ ಸಾಮ್ರಾಟರು ನಮಗೆ ಎಲ್ಲಿಗೆ ಕರೆದುಕೊಂದು ಹೋಗಲಿದ್ದಾರೆ ನೋಡೋಣ.

ನಮಸ್ತೇ,
ಹಾಸ್ಯ ಪುಸ್ತಕಗಳಲ್ಲಿಲ್ಲ ಅನ್ನುತ್ತಾರೆ. ಅದು ನಿಜವೇ. ಹಾಸ್ಯ ಇರುವುದು ನಮ್ಮ ಮನೋಭಾವದಲ್ಲಿ, ನಮ್ಮ ಬದುಕಿನ ಶೈಲಿಯಲ್ಲಿ. ಒಟ್ಟಾರೆಯಾಗಿ ನಮ್ಮ ವ್ಯಕ್ತಿತ್ವದಲ್ಲಿ. ಹೀಗಾಗಿ ಯಾವ ಕ್ಷೇತ್ರದಲ್ಲೇ ಆಗಲಿ ಹಾಸ್ಯವನ್ನು ಕಾಣಬಹುದು.

ಕನ್ನಡದಲ್ಲಿ ಬ್ಲಾಗು ಪ್ರಪಂಚ ಇನ್ನಷ್ಟು ವಿಸ್ತಾರವಾದ ಹಾಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವವರು ತಮ್ಮ ಕ್ಷೇತ್ರಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಹಾಸ್ಯದ ಬಗ್ಗೆ ಬರೆಯುತ್ತಾರೆ ಎಂದು ನಿರೀಕ್ಷಿಸಬಹುದು (ಯಾಕೆಂದರೆ ಈಗ ಎಲ್ಲರೂ ಸುಲಭವಾಗಿ ತಮ್ಮ ಮೇಲ್ ಬಾಕ್ಸಿಗೆ ಬಂದ ಜೋಕನ್ನು ಕನ್ನಡೀಕರಿಸಿ ಬ್ಲಾಗಿಗೆ ಹಾಕಿಕೊಂಡು ಬಿಡುತ್ತಾರೆ!). ಆದರೆ ಇಂಗ್ಲೀಷಿನಲ್ಲಿ ಈ ಬಗೆಯ ವಿಡಂಬನೆ, ಹಾಸ್ಯಕ್ಕೆ ಯಾವ ಕೊರತೆಯೂ ಇಲ್ಲ.

ಕಾರ್ಪೋರೇಟ್ ಕ್ಷೇತ್ರ ಅಂದ ಕೂಡಲೇ ನಮಗೆ ತೀರಾ ಸ್ವಚ್ಛವಾದ, ಗರಿಮುರಿಯದ ಸೂಟು ಹಾಕಿಕೊಂಡ ಪ್ಲಾಸ್ಟಿಕ್ ನಗೆಯ ಮುಖಗಳು ಕಾಣುತ್ತವಲ್ಲವೇ? ಯಾವಾಗಲೂ ಪರ್ಸನಾಲಿಟಿ ಡೆವಲಪ್ ಮೆಂಟ್ ಎನ್ನುತ್ತಲೇ ತಿರುಗುವ ಜನರು ಕಾಣುತ್ತಾರೆ. ಇವರ ನಡುವೆ ಅದೆಂಥಾ ಹಾಸ್ಯ ಇರಲಿಕ್ಕೆ ಸಾಧ್ಯ ಅಂತಲೂ ಅನ್ನಿಸುತ್ತದೆ. ಆದರೆ ಒಮ್ಮೆ ಈ ಬ್ಲಾಗನ್ನು ಹೊಕ್ಕು ನೋಡಿ, ಬ್ಲಾಕ್ ಝೆಡ್ಡಿ (ಕಪ್ಪು ಚೆಡ್ಡಿ?!) ಎಂಬುವವನ ಬೇಸಿಕ್ ಲಿಟರೇಚರ್ ಎಂಬ ಬ್ಲಾಗಿದು. ಇಲ್ಲಿ ಇವತ್ತಿನ ಕಾರ್ಪೋರೇಟ್ ಜಗತ್ತಿನ ವಿಡಂಬನೆಯಿದೆ.

ಇತ್ತೀಚಿನ ಲೇಖನವೊಂದರಲ್ಲಿ ನೀವು ಕೆಲಸಕ್ಕೆ ಸೇರಿದ ಮೊದಲನೆಯ ದಿನ ಏನು ಮಾಡಬೇಕು ಎಂದು ಹದಿನೈದು ಟಿಪ್‌ಗಳನ್ನು ಕೊಡಲಾಗಿದೆ. ಅವುಗಳಲ್ಲಿನ ಕೆಲವು ಸ್ಯಾಂಪಲ್‌ಗಳನ್ನು ನೋಡಿ…

೧. ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ (ಸಮಯಕ್ಕೆ ಮುಂಚೆ ಅಲ್ಲ!)
ನಿಮ್ಮ ಸಹೋದ್ಯೋಗಿಗಳಿಗೆ ವಿವರಿಸಿ ಹೇಳಿ: “ಸರಿಯಾದ ಸಮಯಕ್ಕೆ ಬರುವ ಜನರು ಶಿಸ್ತು, ಸಮಯ ಪಾಲನೆಯ ಬಗ್ಗೆ ತಿಳಿದಿರುತ್ತಾರೆ”. ಅದು ಎಂಥಾ ಪ್ರಭಾವ ಬೀರುತ್ತೆ ಎಂಬುದನ್ನು ನೋಡಿ.

೨. ಮನೆಯಿಂದಲೇ ಕೆಲವು ಕಡತಗಳನ್ನು ಒಯ್ದಿರಿ

ಓದಲು ಮ್ಯಾಗಝೀನುಗಳನ್ನೋ, ಪೇಪರನ್ನೋ ತೆಗೆದುಕೊಂಡು ಹೋಗಿ. ಮೊದಲನೆಯ ದಿನ ನಿಮಗೆ ಯಾವ ಕೆಲಸ ವಹಿಸಬೇಕು ಎಂದು ತೀರ್ಮಾನವಾಗುವುದರಲ್ಲೇ ಕಳೆದು ಹೋಗುತ್ತದೆ. ಆ ಸಮಯದಲ್ಲಿ ಸುಮ್ಮನೆ ಕಂಪನಿಯ ಮ್ಯಾನುಯಲ್ಲನ್ನು ಓದುತ್ತಾ ಕಿರಿಕಿರಿಗೊಳ್ಳಬೇಡಿ.

ಇನ್ನಷ್ಟು ಟಿಪ್‌ಗಳು ಬೇಕೆ? ಬೇಸಿಕ್ ಲಿಟರೇಚರ್‌ಗೆ ಭೇಟಿ ಕೊಡಿ ಮತ್ತೆ!

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಸೋಲಿನ ಪತ್ತೆಗಾಗಿ ಸಂಶೋಧನೆ

6 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೊ)

ಚುನಾವಣೆಯೆಂಬ ಗೂಳಿ ನಾಡಿನ ರಾಜಬೀದಿಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ನುಗ್ಗಿ ಧೂಳೆಬ್ಬಿಸಿ ಓಡಿಹೋಗಿದೆ. ಆ ಗೂಳಿಯ ಬೆನ್ನನ್ನೇರಿದ ಅದೃಷ್ಟವಂತರು ಸವಾರಿ ಮಾಡುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಗೂಳಿಗೆ ಕಾಲಿಗೆ ಸಿಕ್ಕು ಗೊರಸಿನಿಂದ ಪಕ್ಕೆಗೆ ಒದೆಸಿಕೊಂಡವರು ಕುಯ್ಯೋ ಮರ್ರೋ ಎನ್ನುತ್ತಾ ಮೂಲೆ ಸೇರಿಕೊಂಡು ಗಾಯಗಳಿಗೆ ಇಲಾಜು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಾಯಗಳಿಗೆ ತಕ್ಕ ಮಟ್ಟಿಗೆ ಇಲಾಜು ಮಾಡಿಕೊಂಡು ರೆಡಿಯಾದ ಪಂಟರುಗಳು ಹೊಸತೊಂದು ಸಂಶೋಶನೆ ಕೈ ಹಾಕಿರುವ ಸುದ್ದಿ ತಡವಾಗಿ ನಗೆ ನಗಾರಿಯನ್ನು ತಲುಪಿದೆ. ಈ ಸುದ್ದಿಯನ್ನು ಬೆನ್ನಟ್ಟಿ ನಗೆ ಸಾಮ್ರಾಟರು ಅನೇಕ ನಿಗೂಢ ಹಾಗೂ ರೋಮಾಂಚನಕಾರಿ ಸಂಗತಿಗಳನ್ನು ಅನ್ವೇಷಿಸಲು ತೊಡಗಿದ್ದಾರೆ.

ಅಖಿಲ ಕರ್ನಾಟಕದಲ್ಲಿ ಭೂಗತವಾಗಿ ಅಲೆಯುತ್ತಾ ವಿವಾದಗಳು ಎದ್ದಾಗ ತಲೆ ತೋರಿಸಿ ಮತ್ತೆ ಮರೆಯಾಗುವ ಅನೇಕ ಸಂಘಟನೆಗಳು, ‘ರಾಜಕೀಯ’ ಪಕ್ಷಗಳು ಚುನಾವಣೆಯ ಸಮಯಕ್ಕೆ ಸರಿಯಾಗಿ ಮೇಲೆದ್ದು ನಿಂತು ಕೈ ಕಾಲು, ತಲೆ, ಹೊಟ್ಟೆಗಳನ್ನು, ಅವೆಲ್ಲವುಗಳಿಗಿಂತಲೂ ಮುಖ್ಯವಾಗಿ ಜೇಬನ್ನು ಎಲ್ಲೆಂಲ್ಲಿಂದಲೂ ಸಂಪಾದಿಸಿಕೊಂಡು ವಿಜೃಂಭಿಸುವುದು ಜಗತ್ತಿನ ಅಚ್ಚರಿಗಳಲ್ಲಿ ಒಂದಾಗಿದೆ. ಚುನಾವಣೆಯ ಮುಂಚಿನ ನಾಲ್ಕೈದು ವರ್ಷಗಳಲ್ಲಿ ಜನರು ಕಂಡೇ ಇರದ ಪಕ್ಷಗಳು, ಮುಖವಿಲ್ಲದ ನಾಯಕರ ಹೆಸರುಗಳು ಪತ್ರಿಕೆಗಳಲ್ಲಿ ರಾರಾಜಿಸುವುದನ್ನು ಗಮನಿಸಿರುವ ನಗೆ ಸಾಮ್ರಾಟರು ಈ ವಿಚಿತ್ರ ಆಸಕ್ತಿಕರ ಸಂಗತಿಯ ಬಗ್ಗೆ ಮಾಡಲು ಕೆಲಸವಿಲ್ಲದವರು ಸಂಶೋಧನೆ ನಡೆಸಿ ಪಿ.ಎಚ್.ಡಿ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ವಿಶ್ವದಲ್ಲೇ ಅತ್ಯಂತ ಗಣ್ಯವಾದ ಸ್ಥಾನವನ್ನು ಪಡೆಸಿರುವ ನೊಬೆಲ್ ಪಾರಿತೋಷಕಕ್ಕೆ ಪ್ರತಿಯಾಗಿ ಬುದ್ಧಿವಂತರು, ವಿವೇಕಿಗಳು ಹಾಗೂ ವಾಸ್ತವವಾದಿಗಳು ಸ್ಥಾಪಿಸಿರುವ ಇಗ್ನೊಬೆಲ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಚುನಾವಣೆಯ ವಾಸನೆ ಗಾಳಿಯಲ್ಲಿ ತೇಲುವ ಮೊದಲು ಭೂಮಿಯ ಮೇಲೆ ಯಾವ ಭಾಗದಲ್ಲಿ ಜೀವಿಸಿದ್ದರು ಎಂದು ತಿಳಿಯದ ಮಂದಿ ಸರಿಯಾಗಿ ಎಲಕ್ಷನ್ನಿನ ಸೀಝನ್ನಿನಲ್ಲಿ ಹೋರಾಟಗಳಿಗೆ ಹಾಗೂ ಓರಾಟಗಳಿಗೆ ಧುಮ್ಮಿಕ್ಕುವುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರ ಸಾಧನೆಗೆ ಇಗ್ನೊಬೆಲ್ ಕೊಡಲು ಶಿಫಾರಸ್ಸು ಮಾಡಬಹುದು.

ಚುನಾವಣೆಯ ಚದುರಂಗದಲ್ಲಿ ಸೋತ ಕಿಲಾಡಿಗಳು ತಮ್ಮ ಸೋಲನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳುವ ಬದಲು ‘ಜನರ ತೀರ್ಪನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇವೆ’ ಎಂಬ ಸವಕಲು ಕನ್‌ಫೆಶನ್‌ ಮೂಲಕ ಜನರು ಮೋಸ ಮಾಡಿದರು ಎಂದು ಹಾರಾಡುತ್ತಿರುವುದು ನಗೆ ಸಾಮ್ರಾಟರಲ್ಲಿ ಕುತೂಹಲ ಕೆರಳಿಸಿದೆ. ಈ ಮಧ್ಯೆ ಮರದಿಂದ ಮರಕ್ಕೆ ಹಾರುವ ವಾನರನ ಹಾಗೆ ಪಕ್ಷದಿಂದ ಪಕ್ಷಕ್ಕೆ ಕಾಲ್ಕಿತ್ತು ಆ ಪಕ್ಷಗಳಿಂದ ಏನೇನನ್ನೋ ಕಿತ್ತುಕೊಂಡು ಸುಸ್ತಾಗಿ ನೆಲಕ್ಕಿಳಿದು ಸೈಕಲ್ಲು ತುಳಿಯತೊಡಗಿದ ಸೊರಬದ ಮುತ್ಸದ್ಧಿ ‘ಗೋಲ್ಡ’ಪ್ಪ ಸೈಕಲ್ಲು ಬ್ಯಾಲೆನ್ಸ್ ಮಾಡಲಾಗದೆ ಚರಂಡಿಗೆ ಬಿದ್ದರು. ತಮ್ಮ ಸೋಲಿಗೆ ಕಾರಣ ಹುಡುಕಿಕೊಂಡು ಸಂಶೋಧನೆ ನಡೆಸಿದ ಅವರು ನನ್ನ ಎದುರಾಳಿಗಳು ( ‘ಗಳು’ ಏನು ಬೇಕಿಲ್ಲ ಬಿಡಿ. ಇದ್ದವರೆಲ್ಲಾ ಎರಡು ಪಕ್ಷದವರು ನನ್ನ ಕುತ್ತಿಗೆಗೇ ಚೆಂಡು ಹೂವಿನ ಮಾಲೆಯನ್ನು ಹಾಕಿ ಕಳಿಸಿದ್ದರು) ಕ್ಷೇತ್ರದಲ್ಲಿ ಹಣವನ್ನು ಹೊಳೆಯಾಗಿ ಹರಿಸಿದ್ದಾರೆ. ಅದಕ್ಕಾಗಿ ಗೆದ್ದು ಬಂದಿದ್ದಾರೆ. ತಾವು ಹರಿಸಿದ್ದು ಬರೀ ಚರಂಡಿಯಾಗಿದ್ದುದರಿಂದ ಹೊಳೆಯ ಎದುರು ತಾವು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಸೂಚಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಟೋಪಿ ಹಾಗೂ ಕಪ್ಪು ಗಾಜಿನ ಪಕ್ಷದ ಏಕೈಕ ಅಭ್ಯರ್ಥಿ ಹಾಗೂ ಅಧ್ಯಕ್ಷರು ವಿಧಾನ ಸಭೆಯ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ದಬ್ಬಾಳಿಕೆಯಿಂದ ವಾಸ ಮಾಡಿಕೊಂಡಿದ್ದ ಮನೆಯನ್ನು ತೊರೆದು ವಿಧಾನ ಪರಿಷತ್ತಿನಲ್ಲೂ ಜೇಬು ಸುಟ್ಟುಕೊಂಡು ಕಂಗಾಲಾಗಿ ಕುಳಿತಿರುವ ದೃಶ್ಯವನ್ನು ನೋಡಿರುವ ಬೆಂಗಳೂರಿನ ಗಾರ್ಧಭ ಪ್ರಮುಖರು, ಎಮ್ಮೆ ಮುಖಂಡರು ಸಂಭ್ರಮದಿಂದ  ಕುಣಿದಾಡಿರುವುದಾಗಿ ವರದಿಯಾಗಿದೆ. ಪೆಟ್ರೋಲಿನ ಬೆಲೆ ಹರ್ ಭಜನ್ ಸಿಂಗಿನ ಸಿಟ್ಟಿನ ಹಾಗೆ ಏರುತ್ತಿರುವ ಹೊತ್ತಿನಲ್ಲಿ ಆ ಯಪ್ಪ ತಮ್ಮ ಮೇಲೆ ಸವಾರಿ ಮಾಡಿ ಪ್ರತಿಭಟನೆ ಮಾಡುವ, ಆ ಮೂಲಕ ತಮ್ಮನ್ನು ಹಿಂಸಿಸುವ ಪರಿಸ್ಥಿತಿ ಇಲ್ಲವಾಗಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.