ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
……………………………………………………
ವಾರೆ ಕೋರೆ
ವಾರೆ ಕೋರೆ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಮೊದಲ ಸಂಚಿಕೆಗೆ ಇಪ್ಪತ್ತು ಸಾವಿರ ಓದುಗರನ್ನೂ, ಸರಾಸರಿಯಾಗಿ ನವತ್ತು ಸಾವಿರ ಕಣ್ಣುಗಳನ್ನು ಹೊಂದಿದೆ. ಈ ವಿಕ್ರಮವನ್ನು ಸಾಧಿಸಿದ ಪ್ರಕಾಶ್ ಶೆಟ್ಟಿಯವರು ಅದೇ ಹುಮ್ಮಸ್ಸಿನಿಂದ ಜೊತೆಗೊಂದಿಷ್ಟು ಪೋಲಿ ಬುದ್ಧಿಯಿಂದ ಎರಡನೆಯ ಸಂಚಿಕೆಯನ್ನು ರೂಪಿಸಿದ್ದಾರೆ.
ಮೊದಲ ಸಂಚಿಕೆಯ ಮುಖಪುಟದಲ್ಲಿ ತಲೆ ತುಂಬ ಹೊಳೆಯುವ ಕೂದಲು ಹೊಂದಿದ ದೇವೆಗೌಡರ ಚಿತ್ರವನ್ನು ಛಾಪಿಸಿ ನಾಡಿನಾದ್ಯಂತ ನಗೆ ಬಾಂಬ್ ಸಿಡಿಸಿದ್ದ ವಾರೆ ಕೋರೆ, ಈ ಸಂಚಿಕೆಯಲ್ಲಿ ಮಲ್ಲಿಕಾ ಶೆರಾವತ್‌ಳನ್ನು ತೋರಿಸಿ ಹಾರ್ಟ್ ಅಟ್ಯಾಕ್ ಉಂಟು ಮಾಡಿದೆ. ‘ಲೂಸ್ ಹುಡುಗಿಯರೊಂದಿಗಿನ ರಸ ನಿಮಿಷಗಳ’ ವರದಿಯನ್ನು ಹೊತ್ತು ಬಂದಿದೆ ಎರಡನೆಯ ಸಂಚಿಕೆ.
ಬೊಗಳೆ ರಗಳೆ
ಬೊಗಳೂರ ಬ್ಯೂರೋ ತುಂಬ ಬ್ರೇಕಿಂಗ್ ಸುದ್ದಿಯದೇ ಸದ್ದು, ಬ್ರೇಕಿಂಗ್ ಸದ್ದಿನದೇ ಸುದ್ದಿ. ಬೊಗಳೆ ಮಾತಿಗೆ ಬ್ರೇಕಿಲ್ಲದ ಬ್ಯೂರೋದಲ್ಲಿ ಮಜಾಕೀಯ ಅರಾಜಕಾರಣಿಗಳ ಪಕ್ಷಾಂತರ, ಮತಾಂತರ, ಅವಾಂತರಗಳ ಕುರಿತ ಬ್ರೇಕಿಂಗ್ ನ್ಯೂಸುಗಳು ಪ್ರಕಟವಾಗಿವೆ. “ಬೊಗಳೂರು ಬ್ಯುರೋ ಕೂಡ ಆಗಾಗ್ಗೆ Breaking news ಹಾಗೂ Barking news ನೀಡುತ್ತಿರುವುದೇ ಕಾರಣ ಎಂಬ ಎದುರಾಳಿಗಳ ಸಂಶೋಧನೆಯೊಂದು ಏಕದಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಹಗಹಿಸಿ ಅಳುವುದಕ್ಕೆ ಮತ್ತು ಬಿಕ್ಕಿ ಬಿಕ್ಕಿ ನಗುವುದಕ್ಕೆ ಕಾರಣವಾಗಿದೆ.” ಎನ್ನುವ ಮೂಲಕ ನಮ್ಮ ಸಂಶೋಧನೆಗೆ ಕ್ರೆಡಿಟ್ ನೀಡಿರುವ ಬೊಗಳೆ ಬ್ಯೂರೋವನ್ನು ಕಂಡು ಕುಚೇಲ ಕಿಸಕ್ಕನೆ ಕಣ್ಣೀರು ಸುರಿಸುತ್ತಿದ್ದಾನೆ.
ಪುಗಸಟ್ಟೆ
ದೇಶಕ್ಕೆ ದೇಶವೇ ಮುತಾಲಿಕನ ಪ್ರೇಮ ವಿರೋಧಿ ಹೋರಾಟ ಹಾಗೂ ಅದಕ್ಕೆ ವಿರುದ್ಧವಾದ ಪಿಂಕು ಚೆಡ್ಡಿ ಹೋರಾಟದ ಸಾಧಕ, ಬಾಧಕ ನಿಷ್ಕರ್ಷೆಯಲ್ಲಿ ನಿರತವಾಗಿ ಅನ್ನಾಹಾರಗಳನ್ನು ತೊರೆದು, ನೀರು-ಮದಿರೆಗಳನ್ನು ಬಿಟ್ಟು, ಪಬ್ಬು-ಕ್ಲಬ್ಬುಗಳ ಮುಚ್ಚಿ, ಸಿಗರೇಟು-ಗಾಂಜಾಗೆ ಟಾಟಾ ಹೇಳಿ ಕೂತಿರುವಾಗ ಪುಗಸಟ್ಟೆ ವೀರನೊಬ್ಬ “ಚಡ್ಡಿ ಇವ್ರಿಗೆ ಕೊಟ್ಟು ಅವ್ರೇನು ಹಾಕ್ಕೊತ್ತಾರ?’’ ಅಂತ ಕಿತಾಪತಿ ತೆಗೆದಿದ್ದಾನೆ.
ಮೋಟುಗೋಡೆಯಾಚೆ ಇಣುಕಿ
ನನ್ನ ಕಣ್ಣುಗಳು ಮೇಲಿವೆ ಎನ್ನುತ್ತಾಳೆ ಈ ಟೀಶರ್ಟು ತೊಟ್ಟ ಬಾಲೆ. ಆದರೆ ಆಕೆಯಂದದ್ದು ಏನು ಎಂದು ಓದುವುದಕ್ಕಾದರೂ ನಮ್ಮ ಬಾಲಕರು ಕಣ್ಣು ಕೆಳಗೆ ಹರಿಸುತ್ತಾರೆ! ಈ ಕಣ್ಣು ಕಣ್ಣಾಟದ ಹೋಳಿ ಕಂಡಿದ್ದು ಮೋಟುಗೋಡೆಯಾಚೆ ಇಣುಕಿ ನೋಡಿದಾಗ.
ಇತ್ತೀಚಿನ ಪ್ರಜಾ ಉವಾಚ