*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦
ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”
ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.
ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”
ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.
ಇತ್ತೀಚಿನ ಪ್ರಜಾ ಉವಾಚ