Tag Archives: ರಾಜಕಾರಣಿ

ವಾರದ ವಿವೇಕ 41

15 ಏಪ್ರಿಲ್

……………………………………

ಶ್ರೀಮಂತರಿಂದ ಹಣ ಪಡೆದು

ಬಡವರಿಂದ ಓಟು ಪಡೆದು

ಒಬ್ಬರಿಂದ ಇನ್ನೊಬ್ಬರನ್ನು ಕಾಪಾಡುವ

ಕೆಲಸ ಮಾಡುವವನಿಗೆ ರಾಜಕಾರಣಿ ಎನ್ನಬಹುದು!
…………………………………….

ಬೂಶ್ ಮಹಾಶಯನ ಆದರ್ಶ ಅನುಕರಣೀಯ

17 ಡಿಸೆ

(ನಗೆ ನಗಾರಿ ಉದ್ಯಮ ವಾರ್ತೆ)


ಜಗತ್ತಿನ ಶ್ರೀಮಂತ ರಾಷ್ಟ್ರಗಳೆಲ್ಲಾ ಆರ್ಥಿಕ ಕುಸಿತದ ಭೂತದಿಂದ ನರಳುತ್ತಿರುವಾಗ, ಎಲ್ಲಾ ಕಂಪೆನಿಗಳು ತಮಗಾಗುತ್ತಿರುವ ನಷ್ಟವನ್ನು ತಪ್ಪಿಸುವುದಕ್ಕಾಗಿ ಒಬ್ಬ ಉದ್ಯೋಗಿ ಒಬ್ಬ ಮನುಷ್ಯನ ಆಹಾರವನ್ನು ಮಾತ್ರ ತಿನ್ನಬೇಕು, ಒಬ್ಬಳು ಕೇವಲ ನಾಲ್ಕು ಪೂರ್ತಿ ಊಟಗಳಿಗಾಗುವಷ್ಟು ಖರ್ಚನ್ನು ತನ್ನ ಮೇಕಪ್‌ಗಳಿಗಾಗಿ ವಿನಿಯೋಗಿಸಬೇಕು, ವಾರಕ್ಕೆ ಒಂದೇ ಬಾರಿ ದುಬಾರಿ ಹೊಟೇಲಿನಲ್ಲಿ ಊಟ ಮಾಡಬೇಕು, ವಾರಕ್ಕೆ ಎರಡೇ ಬಾರಿ ಗುಂಡು ಪಾರ್ಟಿ ಇಟ್ಟುಕೊಳ್ಳಬೇಕು, ಹೆಚ್ಚೆಂದರೆ ವಾರಕ್ಕೆ ಮೂರು ಸಿನೆಮಾಗಳನ್ನು ಮಲ್ಟಿಪ್ಲೆಕ್ಸುಗಳಲ್ಲಿ ನೋಡಬೇಕು, ಮನೆಕೆಲಸಕ್ಕೆ ಗರಿಷ್ಠ ಇಬ್ಬರನ್ನು ನೇಮಿಸಿಕೊಳ್ಳಬಹುದು, ಒಂದಿಡೀ ಮಧ್ಯಮವರ್ಗದ ಒಂದು ತಿಂಗಳ ಬಜೆಟ್ಟನ್ನು ಫರ್ ಫೂಮಿಗಳಿಗಾಗಿ ಖರ್ಚು ಮಾಡುವುದನ್ನು ಹತ್ತಿಕ್ಕಬೇಕು  ಎಂದು ಕಟ್ಟಳೆಯನ್ನು ವಿಧಿಸುತ್ತಿದೆ. ಯುದ್ಧಕಾಲದಲ್ಲಿ ಭೀಕರ ಆಹಾರ ಕೊರತೆ ಸಮಸ್ಯೆ ಉದ್ಭವಿಸಿದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಜನರಿಗೆ ಒಂದು ಹೊತ್ತಿನ ಊಟವನ್ನು ಬಿಡುವಂತೆ ಮನವಿ ಮಾಡಿದಾಗ ದೇಶದ ಜನತೆ ಸ್ಪಂದಿಸಿದ ಹಾಗೆಯೇ ಈ ಮೊದಲು ಉಲ್ಲೇಖಿಸಿರುವ ನಿಬಂಧನೆಗಳಿಗೆ  ಕಂಪೆನಿಗಳ ಉದ್ಯೋಗಿಗಳು ಸ್ಪಂದಿಸುತ್ತಿದ್ದಾರೆ.

ತಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ ಎಂದು ನಂಬಿಕೊಂಡಿದ್ದ ಉದ್ಯಮಪತಿಗಳು, ಬಿಸಿನೆಸ್ ಟೈಕೂನುಗಳು ಕಂಡಕಂಡದ್ದನ್ನೆಲ್ಲಾ ಮುಟ್ಟಿ ಮುಟ್ಟಿ ತಡಕಾಡಿ ಕೈ ನೋವು ಮಾಡಿಕೊಂಡರೂ ಕಿಲುಬು ಕಾಸು ಹುಟ್ಟುತ್ತಿಲ್ಲ. ಇದಕ್ಕೆಲ್ಲಾ ಭಾರತದಂತಹ ಆಸೆಬುರುಕ ದೇಶಗಳ ಜನರು ಹೆಚ್ಚೆಚ್ಚು ಹೊಟ್ಟೆ ಬಾಕರಾಗಿದ್ದೇ ಕಾರಣ ಎಂದು ಅಮೇರಿಕಾದ ಅಧ್ಯಕ್ಷರು ಖಾಸಗಿಯಾಗಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಗಾಗಿ ಬೆಂಗಳೂರು ವಿವಿಗೆ ಅರ್ಜಿಗುಜರಾಯಿಸಿದ್ದು ಹಳೆಯ ಸುದ್ದಿ.

bush-booted

ಈ ಬಗೆಯ ಭೀಕರ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆಗಳು ನಷ್ಟವನ್ನೇ ಬೋನಸ್ಸಾಗಿ ಪಡೆಯುತ್ತಿರುವಾಗ ಉದ್ಯಮಪತಿಗಳು, ಕಂಟ್ರ್ಯಾಕ್ಟರುಗಳುಗಳಿಂದ ಪ್ರಸಾದವನ್ನು ಪಡೆದು ತಮ್ಮ ಉದರ ಪೋಷಣೆ ಮಾಡುವ ರಾಜಕಾರಣಿಗಳು ತಮ್ಮ ಸ್ವಂತ ವೇತನದಲ್ಲಿಯೇ ಉಂಡು ಉಪವಾಸ ಮಲಗಬೇಕಾದ ಸ್ಥಿತಿ ಬಂದಿದೆ. ತಮ್ಮ ಆರ್ಥಿಕ ಸುಭದ್ರತೆಗಾಗಿ ತಾವು ಕೈಗಾರಿಕೋದ್ಯಮಿಗಳನ್ನು, ಲಾಬಿಕೋರರನ್ನು, ರಿಯಲ್ ಎಸ್ಟೇಟ್ ದಂಧೆಯವರನ್ನು, ಗಣಿ ಧಣಿಗಳನ್ನು, ಚಿಟ್ ಫಂಡ್ಸ್ ಶೂರರನ್ನು, ಲಾಟರಿ ವೀರರನ್ನು, ಲಿಕ್ಕರ್ ದೊರೆಗಳನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು ಎಂದು ರಾಜಕಾರಣಿಗಳಿಗೆ ಮನವರಿಕೆಯಾಗತೊಡಗಿದೆ. ಹೀಗಾಗಿ ದೇಶದ ಎಲ್ಲಾ ರಾಜಕಾರಣಿಗಳು ಭಯೋತ್ಪಾದಕ ದಾಳಿ ನಡೆದಾಗಲೂ ತೋರಿಸಲು ಹಿಂದು ಮುಂದು ನೋಡಿದ ಒಗ್ಗಟ್ಟನ್ನು ತೋರಿ ಪಕ್ಷಭೇದ ಮರೆತು ಸಭೆ ಸೇರಿದರು. ಆ ಸಭೆಯಲ್ಲಿ ತಮ್ಮ ಸ್ವಾವಲಂಬನೆಗೆ ರಾಜಕಾರಣಿಗಳು ಏನು ಮಾಡಬೇಕು, ಯಾವ ವ್ಯಾಪಾರವನ್ನು ಶುರು ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಲಾಭದಾಯಕ ಎಂದು ಸಮಾಲೋಚನೆ ನಡೆಸಿದರು.


ನಕಲಿ ಗುರುತು ಚೀಟಿ ಬಳಸಿ ಸಮಾವೇಶದ ಪ್ರವೇಶ ಗಿಟ್ಟಿಸಿಕೊಂಡಿದ್ದ ನಗೆ ಸಾಮ್ರಾಟರು ಸಭೆಯಲ್ಲಿ ಯಾರೊಬ್ಬರೂ ಒಂದೂ ಐಡಿಯಾ ಕೊಡದೆ ತೆಪ್ಪಗೆ ಕುಳಿತಿದ್ದನ್ನು ಕಂಡು ಬೇಸರ ಗೊಂಡರು. ಇದ್ದುದರಲ್ಲಿ ಒಬ್ಬ ಪ್ರಾಮಾಣಿಕಮಂತ್ರಿಯೊಬ್ಬರು ಮಾತನಾಡಿ, ‘ತಲೆ ಉಪಯೋಗಿಸುವ ಕೆಲಸವನ್ನು ನಾವು ಬಿಟ್ಟು ತುಂಬಾ ವರ್ಷಗಳಾಗಿವೆ. ಮೆದುಳಿನ ಕೆಲಸವನ್ನೆಲ್ಲಾ ನಮ್ಮ ಸೆಕ್ರಟರಿಗಳಿಗೆ ವರ್ಗಾಯಿಸಿರುವುದರಿಂದ ನಮ್ಮ ಮೆದುಳುಗಳು ಕೆಲಸ ಮಾಡುವುದಕ್ಕೆ ಸ್ವಲ್ಪ ಕಷ್ಟ ಪಡುತ್ತಿವೆಎಂದು ಆತ್ಮನಿವೇದನೆ ಮಾಡಿಕೊಂಡರು. ಮತ್ತೊಂದು ಅರ್ಧ ಗಂಟೆ ಕಳೆದರೂ ಎರಡು ಗ್ಯಾಲನ್ ಕಾಫಿ, ಒಂದು ಟನ್ನು ಬಿಸ್ಕೇಟುಗಳು ಕರಗಿದವೇ ವಿನಃ ನಮ್ಮ ಶಾಸಕರ ಮೆದುಳುಗಳು ಸ್ಟಾರ್ಟ್ ಆಗಲಿಲ್ಲ.


ಇದೇ ಸಂದರ್ಭವನ್ನು ಬಳಸಿಕೊಂಡು ನಗೆ ಸಾಮ್ರಾಟರು ತಮ್ಮ ಆಲೋಚನೆಯನ್ನು ಸಭೆಯಲ್ಲಿ ಮಂಡಿಸಿದರು. ‘ನಾನು ಈ ಕ್ಷೇತ್ರಕ್ಕೆ ಹೊಸಬ ಹೀಗಾಗಿ ನನ್ನ ಪರಿಚಯ ನಿಮಗೆ ಇರಲಾರದು. ನಾನಿನ್ನೂ ಈ ಫೀಲ್ಡಿಗೆ ಹೊಸಬನಾದ್ದರಿಂದ ನನ್ನ ಮೆದುಳು ಇನ್ನೂ ಕೆಲಸ ಮಾಡುತ್ತಿದೆ. ನಾನು ನಿಮ್ಮೆಲ್ಲರ ಆದರ್ಶ, ಮಾರ್ಗದರ್ಶನದಿಂದ ಅತಿ ಶೀಘ್ರದಲ್ಲಿ ಅದು ಕೆಲಸ ನಿಲ್ಲಿಸುವಂತೆ ಮಾಡಲು ಪ್ರಯತ್ನಿಸುವೆ. ಸದ್ಯಕ್ಕೆ ಈ ಸಮಸ್ಯೆಗೆ ಒಂದು ಪರಿಹಾರ ನನ್ನ ಬಳಿ ಇದೆ.

ಮೊದಲೇ ಹೇಳಿದ ಹಾಗೆ ನಾನಿನ್ನೂ ಅಮೆಚೂರ್ ಆದ್ದರಿಂದ ದಿನ ಪತ್ರಿಕೆಯನ್ನು ಓದುವ ಕೆಟ್ಟ ಅಭ್ಯಾಸವನ್ನಿನ್ನೂ ಇರಿಸಿಕೊಂಡಿದ್ದೇನೆ. ಇರಾಕಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವುದಕ್ಕೆ, ಸಮೂಹ ನಾಶ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವುದಕ್ಕೆ ಸೈನ್ಯವನ್ನು ನುಗ್ಗಿಸಿ ಅವರೆಡನ್ನೂ ಮಾಡುವುದರಲ್ಲಿ ಯಶಸ್ವಿಯಾಗಿ ವಿಫಲರಾಗಿರುವ, ನಿವೃತ್ತಿಯ ಅಂಚಿನಲ್ಲಿರುವ ಅಮೇರಿಕಾದ  ಅಧ್ಯಕ್ಷ ಜಾರ್ಜ್ ಬೂಶ್ ತಮ್ಮ ಅಧಿಕಾರವಧಿ ಮುಗಿಯುವ ಮೊದಲು ತಾವು ಉದ್ಧಾರ ಮಾಡಿದ ದೇಶವನ್ನೊಮ್ಮೆ ನೋಡಿಕೊಂಡು ಹೋಗಲು ಇರಾಕಿಗೆ ಭೇಟಿ ನೀಡಿದ್ದರು. ತಾವು ಮಹದುಪಕಾರ ಮಾಡಿದ ದೇಶದ ಮಧ್ಯಮದ ಎದುರು ಬಡಾಯಿ ಕೊಚ್ಚಿಕೊಳ್ಳುತ್ತಾ ನಿಮ್ಮನ್ನು ಕ್ರೂರ ಸರ್ವಾಧಿಕಾರಿಯಿಂದ ರಕ್ಷಿಸಿದ ನನಗೆ ಏನೆಂದು ಬಿರುದು ಕೊಡುವಿರಿ, ನನಗೆ ಏನು ಬಹುಮಾನ ಕೊಡುವಿರಿ ಎಂದು ಕೇಳಿದಾಗ ಇರಾಕಿ ಪತ್ರಕರ್ತನೊಬ್ಬ ಅತ್ಯಂತ ಕಳಕಳಿಯಿಂದ ಎದ್ದು ನಿಂತು ಬೂಶ್ ಮಹಾಶಯನಿಗೆ ನಾಯಿಎಂಬ ಬಿರುದನ್ನು ನೀಡಿ, ತನ್ನ ಕಾಲುಗಳ ಬೂಟುಗಳನ್ನು ಬಿಚ್ಚಿ ಬಹುಮಾನವಾಗಿ ಅಧ್ಯಕ್ಷರೆಡೆಗೆ ಎಸೆದ. ಚಪ್ಪಲಿ ಹಾರ ಅವಮಾನದ ಸಂಕೇತವಲ್ಲ, ಅದು ಶ್ರಮಿಕನ ಬೆವರಿನ ಸಂಕೇತ ಎಂದು ನಮ್ಮ ನಾಡಿನ ಮಠಾಧೀಶರು ನೀಡಿದ ಹೇಳಿಕೆಯನ್ನು ಕದ್ದು ಕೇಳಿಸಿಕೊಂಡಿದ್ದ ಬೂಶ್ ಬೂಟು ಎಸೆಯುವುದರಿಂದ ನನಗೆ ಅವಮಾನವಾಗಲಿಲ್ಲ. ಅಂದಹಾಗೆ ಬೂಟಿನ ನಂಬರು ಹತ್ತು ಎಂದು ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ವರದಿಯಾಗದ ಅಂಶವೆಂದರೆ ಆ ಬೂಟನ್ನು ಅವರು ಹರಾಜಿಗೆ ಇಟ್ಟು ಹರಾಜಿನಲ್ಲಿ ಬಂದ ಹಣದಿಂದ ಅಮೇರಿಕಾದ ಮತ್ತೊಂದು ಆಟೋ ಮೊಬೈಲ್ ಕಂಪೆನಿಯನ್ನು ಬೇಲ್ ಔಟ್ ಮಾಡಲಿದ್ದಾರೆ. ಇದು ನಮ್ಮ ನಾಡಿನ ಹೆಮ್ಮೆಯ ಪತ್ರಿಕೆ ನಗೆ ನಗಾರಿ ಡಾಟ್ ಕಾಮ್ ಪತ್ತೆ ಹಚ್ಚಿದೆ. (ಇದೀಗ ತಾನೆ ಬಂದ ಸುದ್ದಿಯ ಪ್ರಕಾರ ಸೌದಿಯ ಧನಿಕನೊಬ್ಬ ಆ ಬೂಟಿಗೆ ಹತ್ತು ಮಿಲಿಯನ್ ಡಾಲರ್ ಬಿಡ್ ಮಾಡಿದ್ದಾನೆ)


ಎಲ್ಲದರಲ್ಲೂ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅಮೇರಿಕಾ ನಮಗೆ ಈ ವಿಚಾರದಲ್ಲೂ ಮಾದರಿಯಾಗಬೇಕು. ನಾವು ರಾಜಕಾರಣಿಗಳು ಸ್ವಾವಲಂಬಿಗಳಾಗಲು ಬೂಟ್ಸ್, ಚಪ್ಪಲಿಗಳ ವ್ಯಾಪಾರವನ್ನು ಶುರು ಮಾಡಬೇಕು. ಇದು ಅತ್ಯಂತ ಲಾಭದಾಯಕ ಹಾಗೂ ಸುಲಭ ಉದ್ಯಮವಾಗುವ ಎಲ್ಲಾ ಅಂಶಗಳನ್ನೂ ಹೊಂದಿದೆ. ಇದಕ್ಕೆ ಬೇರೆ ಉದ್ಯಮಗಳಿಗೆ ಬೇಕಾದಂತೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಕಾರ್ಖಾನೆ ಸ್ಥಾಪಿಸುವುದಕ್ಕಾಗಿ ಜಾಗ ಕೊಡಿ ಎಂದು ಯಾರ ಮುಂದೂ ಕೈಚಾಚಬೇಕಿಲ್ಲ. ನಾವೆಲ್ಲಾ ರಾಜಕಾರಣಿಗಳು ನಮ್ಮ ನಮ್ಮ ಮತ ಕ್ಷೇತ್ರಕ್ಕೆ ಹೋಗಿ ನಮ್ಮ ಬೂಶ್ ಮಹಾಶಯರು ಹೇಳಿದಂತೆ ನಾವು ನಿಮಗೆ ಮಾಡಿರುವ ಸೇವೆಗೆ ನಮಗೆ ಏನೆಂದು ಬಿರುದು ಕೊಡುವಿರಿ? ಏನು ಬಹುಮಾನ ಕೊಡುವಿರಿ?’ ಎಂದು ಕೇಳಬೇಕು. ಆಗ ಜನರು ಪೂರ್ಣ ಮನಸ್ಸಿನಿಂದ ಕೊಡುವ ಬೂಟು, ಚಪ್ಪಲಿಗಳ ಬಹುಮಾನವನ್ನು ನಾವು ಬಂಡವಾಳವಾಗಿಟ್ಟುಕೊಂಡು ಉದ್ಯಮವನ್ನು ನಡೆಸಬಹುದು. ಏನಂತೀರಿ?’ ಎಂದರು.

ಒಂದು ಕ್ಷಣ ಕಿಕ್ಕಿರಿದ ಸಭಾಂಗಣವನ್ನು ದಿಟ್ಟಿಸಿದ ಸಾಮ್ರಾಟರು ಎದೆಯುಬ್ಬಿಸಿ, ‘ಈ ಸಲಹೆಯನ್ನು ನೀಡಿದ್ದಕ್ಕೆ ನನಗೆ ಯಾವ ಬಹುಮಾನ ಕೊಡುವಿರಿ…’ ಎಂದು ಕೇಳಿದರು ಅಷ್ಟೇ!


ಈಗ ಸಾಮ್ರಾಟರು ಮಾಗಡಿ ರಸ್ತೆಯ ಬದಿಯಲ್ಲಿ ಬಹುದೊಡ್ಡ ಶೂ, ಚಪ್ಪಲಿ ಶೋರೂಂ ಇಟ್ಟುಕೊಂಡಿದ್ದಾರೆ.

ಒಬಾಮ ಯುವಕರಿಗೆ ಆದರ್ಶವಾಗಬಾರದು!

13 ನವೆಂ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ, ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್ ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ. ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ. ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು (head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ ಮಲಗಬಾರದು.

ಬುದ್ಧಿ ಜೀವಿಯಾಗುವುದು ಹೇಗೆ?

6 ನವೆಂ

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)


ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ  ಕರುಣಾಜನಕ ವಿಧಿಯವರು ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ  ನಡೆಸಿಕೊಟ್ಟಿದ್ದಾರೆ. ಈ ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು ಎಂಬುದನ್ನು ಬೋಧಿಸಿದ್ದಾರೆ.


img1081105066_1_1

ಬುದ್ಧಿಜೀವಿಯಾಗಲು ಕೆಲವೇ ಮೆಟ್ಟಿಲು ಎಂದು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಕರುಣಾಜನಕ ವಿಧಿಯವರು ಮೊದಲ ಮೆಟ್ಟಿಲಿನ ಬಗ್ಗೆ ಹೇಳಿದ್ದು ಹೀಗೆ: ತಣ್ಣಗಿರುವ ಕೊಳದ ಪಕ್ಕದಲ್ಲಿ ನೀವು ಸಾವಿರ ವರ್ಷ ತಪಸ್ಸು ಮಾಡುತ್ತಾ ಕುಳಿತರೂ ಪ್ರಪಂಚದ ಗಮನವನ್ನು ಸೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಪ್ರಶಾಂತವಾದ ಕೊಳಕ್ಕೆ ಒಂದೇ ಒಂದು ಕಲ್ಲು ಬೀರಿ ನೋಡಿಅಲೆಗಳ ಮೇಲೆ ಅಲೆಗಳು ಎದ್ದು ಪ್ರಪಂಚದ ಗಮನವೆಲ್ಲಾ ನಿಮ್ಮೆಡೆಗೆ ತಿರುಗುತ್ತದೆ. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಗಮನಿಸಬೇಕಾದ್ದು ಆವಶ್ಯಕ. ಹೀಗೆ ಶಾಂತ ಸರೋವರಕ್ಕೆ ಇಲ್ಲವೇ ತೃಪ್ತ ಹೆಜ್ಜೇನಿನ ಗೂಡಿಗೆ ಕಲ್ಲು ಬೀರುವಾಗ ನೀವು ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಕಚ್ಚಲಾಗದ, ಬೊಗಳಲಾಗದ ನಾಯಿಯನ್ನು ನಿಮ್ಮ ಪರಾಕ್ರಮ ತೋರಲು ಆಯ್ದುಕೊಳ್ಳುವ ಚಾಕಚಕ್ಯತೆಯನ್ನು ಅನುಭವದಿಂದ ಮಾತ್ರ ಸಿದ್ಧಿಸಿಕೊಳ್ಳಲು ಸಾಧ್ಯ.’

ಮೊದಲ ಸೂತ್ರವನ್ನು ಮತ್ತಷ್ಟು ವಿವರವಾಗಿ ಅರ್ಥೈಸುತ್ತಾ, ತಾವು ಬರೆದ ಇತ್ತೀಚಿನ ಕವನವೊಂದನ್ನು ಉದಾಹರಿಸಿದರು.ನನ್ನ ಇತ್ತೀಚಿನ ಕವನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿಹಿಂದೂಗಳು ತಿಲಕ, ವಿಭೂತಿಯನ್ನು ಹಣೆಯಲ್ಲಿ ಧರಿಸುವುದು ತಪ್ಪು ಎಂದು ಉಗ್ರವಾಗಿ ವಾದಿಸಿದ್ದೇನೆ. ಸಮಾನತೆಯ ಆಶಯದಲ್ಲಿ ಹುಟ್ಟಿಕೊಂಡಿರುವ ದೇಶದಲ್ಲಿ ಹೀಗೆ ತಿಲಕ ಹಚ್ಚಿಕೊಂಡು ತಿರುಗುವುದು ಅಸಮಾನತೆಯನ್ನು ಉಂಟು ಮಾಡುತ್ತದೆ ಎಂದು ಕಾವ್ಯಾತ್ಮಕವಾಗಿ ಪ್ರಚುರಪಡಿಸಿದ್ದೇನೆ. ಬ್ರಾಹ್ಮಣರು ಜನಿವಾರವನ್ನು ಹಾಕಿಕೊಳ್ಳುವುದು ಏತಕ್ಕೆ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ವಿದ್ವತ್ ಪೂರ್ಣವಾಗಿ ಪ್ರಶ್ನೆ ಹಾಕಿರುವೆ. ಹೀಗೆ ಸುಮ್ಮನಿದ್ದ ಕೊಳಕ್ಕೆ ಕಲ್ಲನ್ನು ಎಸೆಯಬೇಕು. ಹಿಂದೂಗಳೆಂಬುವವರೆಲ್ಲಾ ಕಣ್ಣು ಕೆಂಪಗೆ ಮಾಡಿಕೊಂಡು ನಿಮ್ಮತ್ತ ನೋಡುತ್ತಾರೆ. ಮಾಧ್ಯಮಗಳು ಉಳಿದೆಲ್ಲಾ ಮುಖ್ಯ ಕೆಲಸ ಬಿಟ್ಟು ಈಗ ನನ್ನ ಮುಂದೆ ಹಲ್ಕಿರಿದು ಕ್ಯಾಮರಾ ತೆಗೆದು ನಿಂತಿಲ್ಲವೇ ಹಾಗೆ ನಿಮ್ಮೆದುರು ಬರುತ್ತಾರೆ.


ಅದರ ಜೊತೆಗೇ ನಾನು ಪಾಲಿಸಿರುವ ಎಚ್ಚರಿಕೆಯನ್ನೂ ಸಹ ನೀವು ಪಾಲಿಸಬೇಕು. ಕಚ್ಚದ, ಬೊಗಳದ ನಾಯಿಗೆ ಕಲ್ಲೆಸುವ ಎಚ್ಚರಿಕೆಯನ್ನು ಮರೆಯಬಾರದು. ಉದಾಹರಣೆಗೆ, ನಾನು ಮುಸ್ಲೀಮರು ತಲೆಗೆ ಟೊಪ್ಪಿ ಧರಿಸುವುದು, ಹೆಂಗಸರು ಬುರ್ಕಾ ಧರಿಸುವುದು ಯಾಕೆ ಎಂದೋ, ಸಮಾನತೆಯಿರುವ ನಾಡಿನಲ್ಲಿ ಕ್ರಿಸ್ತರು ಶಿಲುಬೆಯ ಚೈನನ್ನು ಕೊರಳಿಗೆ ಹಾಕಿಕೊಳ್ಳುವುದು ಏಕೆ, ಬಿಳಿಯ ಬಟ್ಟೆಯನ್ನೇ ಹೆಚ್ಚಾಗಿ ಧರಿಸುವುದು ಏಕೆ ಎಂದೇನಾದರೂ ಪ್ರಶ್ನಿಸಿ ಕವನ ಬರೆದಿದ್ದರೆ ಟಿವಿ ಚಾನಲ್ಲುಗಳಿಗೆ, ಪತ್ರಿಕೆಗಳಿಗೆ ನನ್ನ ಸಂದರ್ಶನ ಮಾಡುವುದಕ್ಕೆ ಅವಕಾಶವಾಗುತ್ತಿರಲಿಲ್ಲ. ಬದಲಾಗಿ ನನ್ನ ಅಂತ್ಯಸಂಸ್ಕಾರದ ಲೈವ್ ಕವರೇಜ್ ಮಾಡುವ ಅವಕಾಶ ಸಿಕ್ಕುತ್ತಿತ್ತು ಅಷ್ಟೇ. ಆ ಅಪಾಯವನ್ನು ಮನಗಂಡೇ ನಾನು ಹಿಂದೂಗಳ ಬಗ್ಗೆ ಕವನ ಬರೆದದ್ದು.


ಹಿಂದೆಯೂ ನಾನು ಶ್ರೀರಾಮನ ಬಗ್ಗೆ ಕ್ರಾಂತಿಕಾರಿಯಾದ ಸಂಗತಿಗಳನ್ನು ಬಯಲಿಗೆಳೆದು ಪ್ರಸಿದ್ಧನಾದದ್ದರ ಬಗ್ಗೆ ನಿಮಗೆ ತಿಳಿದಿರಬಹುದು. ಈಗ ನೋಡಿ ನಮ್ಮ ದೇಶವೊಂದರಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿನ ಮಾಧ್ಯಮ ಮಿತ್ರರು ನನ್ನನ್ನು ಬುದ್ಧಿಜೀವಿ ರಾಜಕಾರಣಿ ಎಂದೇ ಪರಿಗಣಿಸುತ್ತಾರೆ. ಈ ಸೂತ್ರವನ್ನು ಪರಿಣಾಮಕಾರಿಯಾಗಿ ಬಳಸಿದರೆ ಒಂದೇ ದಿನದಲ್ಲಿ ನೀವೂ ಜಗದ್ವಿಖ್ಯಾತರಾಗಬಹುದು.’


ಬಹು ಯಶಸ್ವಿಯಾಗಿ ಜರುಗಿದ ಕಾರ್ಯಾಗಾರದಲ್ಲಿ ಕರುಣಾ ಜನಕ ವಿಧಿಯವರು ಇನ್ನೂ ಅನೇಕ ಶಕ್ತಿಶಾಲಿ ಯಶಸ್ವಿ ಸೂತ್ರಗಳನ್ನು ಹೇಳಿಕೊಟ್ಟರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮೂರು ಮುಕ್ಕಾಲು ಮಂದಿ ತಮ್ಮ ಭವಿಷ್ಯ ಭದ್ರವಾಯಿತೆಂಬ ನೆಮ್ಮದಿಯಿಂದ ಮನೆಗೆ ತೆರಳಿದರು.