Tag Archives: ಯುವಕರು

ಒಬಾಮ ಯುವಕರಿಗೆ ಆದರ್ಶವಾಗಬಾರದು!

13 ನವೆಂ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ, ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್ ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ. ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ. ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು (head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ ಮಲಗಬಾರದು.

ಹಿರಿಯ ನಾಯಕರ ಮೀಸಲಾತಿಗೆ ಆಗ್ರಹ

9 ಜುಲೈ

( ನಗೆ ನಗಾರಿ ಸಿನಿಮಾ ಬ್ಯೂರೋ)

‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ ಮಾಡಲು ಕೆಲಸವಿಲ್ಲದ ‘ಕ್ರಿಯಾಶೀಲ’ರ ಸಂಘಟನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ. ಈ ಪ್ರಕಟಣೆ ಕೇವಲ ನಗೆ ನಗಾರಿಯ ಕಛೇರಿಯನ್ನು ತಲುಪಿರುವುದರ ಹಿಂದಿನ ರಹಸ್ಯದ ಬಗ್ಗೆ ಪ್ರತಿಸ್ಪರ್ಧಿ ಪತ್ರಿಕೆಗಳು ತನಿಖೆ ನಡೆಸಬಹುದು!

‘ಕನ್ನಡದಲ್ಲಿ ಅನಾರೋಗ್ಯಕರವಾದ ಬೆಳವಣಿಗೆಯೊಂದು ನಡೆಯುತ್ತಿದೆ. ಇದರಿಂದ ನಟನೆ ಎಂಬ ಕಲೆಗೇ ಅವಮಾನ ಮಾಡಿದ ಹಾಗಾಗುತ್ತದೆ.’ ಎಂದು ನಗೆ ಸಾಮ್ರಾಟರೊಂದಿಗೆ ಮಾತಿಗಿಳಿದ ನಿರುದ್ಯೋಗಿ ಕ್ರಿಯಾಶೀಲರ ಸಮಿತಿಯ ಕಾರ್ಯದರ್ಶಿ ‘ ಈಗ ನೋಡಿ ಕಲಾವಿದನ ನಿಜವಾದ ಸಾಮರ್ಥ್ಯ ಹಾಗೂ ಪ್ರತಿಭೆಯ ಅನಾವರಣವಾಗುವುದು ಆತ ಪಾತ್ರವೊಂದನ್ನು ಆವಾಹಿಸಿಕೊಂಡು ನಟಿಸಿದಾಗ. ಉದಾಹರಣೆಗೆ ರಾಜನ ಪಾತ್ರವನ್ನು ಮಾಡುವಾಗ ನಾಯಕ ನಟ ಬಡವನಾದರೂ, ಸಿರಿವಂತಿಕೆಯ ಗತ್ತನ್ನು ಒಂದು ದಿನವೂ ಅನುಭವಿಸಿ ಗೊತ್ತಿರದಿದ್ದರೂ ರಾಜನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಬೇಕು. ಪಾತ್ರಕ್ಕೂ, ನಿಜ ವ್ಯಕ್ತಿತ್ವಕ್ಕೂ ನಡುವಿರುವ ಕಂದಕ ಹೆಚ್ಚಿದಷ್ಟೂ ಅದು ಕಲಾವಿದನಿಗೆ ಬಲವಾದ ಸವಾಲನ್ನು ಒಡ್ಡುತ್ತದೆ. ಅದನ್ನು ನಿಭಾಯಿಸುವವನು ಒಳ್ಳೆಯ ನಟ.’ ಎಂದರು.

‘ನಿಮ್ಮ ಫಿಲಾಸಫಿ ಎಲ್ಲಾ ಸರಿ ಸಾರ್. ಅದಕ್ಕೂ ಪ್ರಸ್ತುತ ನೀವು ಮಾಡುತ್ತಿರುವ ಹಕ್ಕೊತ್ತಾಯಕ್ಕೂ ಏನು ಸಂಬಂಧ ಸಾರ್?’ ತಲೆ ಕೆರೆದುಕೊಂಡು ಪ್ರಶ್ನಿಸಿದರು ನಗೆ ಸಾಮ್ರಾಟ್.

‘ಸಂಬಂಧವಿಲ್ಲದೆ ಮಾತನಾಡುವುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಾನಿನ್ನೂ ರಾಜಕೀಯಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಒಂದು ವೇಳೆ ಜನಪ್ರಿಯತೆಯ ಭಾರ ಜಾಸ್ತಿಯಾದರೆ ಅದನ್ನು ಕಳೆದುಕೊಂಡು ಸ್ವಲ್ಪ ನಿರಾಳವಾಗುವುದಕ್ಕೆ ಆ ಯೋಚನೆ ಮಾಡಬಹುದು. ಆಗ ಸಂಬಂಧವಿಲ್ಲದ ಹಾಗೆ ಮಾತನಾಡುವುದಕ್ಕೆ ಪ್ರಯತ್ನ ಪಡುತ್ತೇನೆ.

‘ಈಗ ಪ್ರಸ್ತುತ ಹಕ್ಕೊತ್ತಾಯದ ವಿಷಯಕ್ಕೆ ಬರುತ್ತೇನೆ. ನೋಡಿ ಈಗ ಕಾಲೇಜು ಹುಡುಗ ಪಾತ್ರಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗನನ್ನೇ ಹಾಕಿಕೊಳ್ಳುತ್ತಿದ್ದಾರೆ. ಯುವಕನ ಪಾತ್ರಕ್ಕೆ ಯುವ ನಟನನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪಾತ್ರವನ್ನು ಆವಾಹಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಂತಾಗುವುದಿಲ್ಲ. ಯುವಕರು ಯುವಕರ ಹಾಗೆ ನಟಿಸಲು ಏನು ಮಹಾ ಪ್ರತಿಭೆ ಬೇಕು ಹೇಳಿ? ಪ್ರಾಣಿ ಪ್ರಾಣಿಯಂತಿರುವುದಕ್ಕೆ ಯಾವುದಾದರೂ ಪರಿಶ್ರಮ ಬೇಕೇ? ಪ್ರಾಣಿ ಮನುಷ್ಯನ ಹಾಗೆ ಮಾಡುವುದಕ್ಕೆ ಅಗಾಧವಾದ ಪ್ರತಿಭೆ ಬೇಕು.  ವಯಸ್ಸು ನಲವತ್ತು ದಾಟಿ, ಕ್ರಾಪಿನ ಜಾಗದಲ್ಲಿ ಜಾರುವ ಬುರುಡೆ ಬಂದವರಿಗೆ ಇಪ್ಪತ್ತರ ಹರೆಯದ ನಾಯಕನ ಪಾತ್ರವನ್ನು ಕೊಡಬೇಕು. ಆಗ ನಟನಾ ಸಾಮರ್ಥ್ಯ ಅನಾವರಣ ಗೊಳ್ಳುತ್ತದೆ. ಇಪ್ಪತ್ತರ ತರುಣನಿಗೆ ಹದಿನೆಂಟರ ತರುಣಿಯ ಸೊಂಟ ಬಳಸಿ ಕುಣಿಯುವುದು ಕಷ್ಟವಾಗುವುದಿಲ್ಲ ಅದಕ್ಕೆ ಯಾವ ಸಾಧನೆಯೂ ಬೇಕಿಲ್ಲ. ಆದರೆ ನಲವತ್ತೈದರ ನಟ ತನ್ನ ಮಗಳ ವಯಸ್ಸಿನ ನಟಿಯೊಂದಿಗೆ ಮರ ಸುತ್ತುವುದು ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಅದಕ್ಕಾಗಿಯೇ ನಾವು ಕನ್ನಡದಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಶೇ. ೨೦ರಷ್ಟು ಸಿನೆಮಾಗಳಿಗೆ ನಲವತ್ತು ದಾಟಿದವರನ್ನೇ ಯುವ ನಾಯಕನ ಪಾತ್ರಕ್ಕೆ ಆರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ.’ ಎಂದು ವಿವರಿಸಿದರು.

ಸಂದರ್ಶನ ಮುಗಿಸಿದ ನಗೆ ಸಾಮ್ರಾಟರಿಗೆ, ಹೌದು ಇವರು ಬರೀ ನಾಯಕ ನಟರುಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ನಟೀ ಮಣಿಯರ ವಿಚಾರವೇನು ಎಂದು ಕೇಳುವ ಮನಸ್ಸಾಯಿತು. ಆದರೆ ನಲವತ್ತು ಮೀರಿದ ನಟಿ ಮಣಿಯರು ಹದಿನೆಂಟರ ಹುಡುಗನ ಬೆನ್ನು ತಬ್ಬಿಕೊಂಡು  ಬೈಕಿನಲ್ಲಿ ಕಾಲೇಜಿಗೆ ಬರುವ ದೃಶ್ಯವನ್ನು ಕಲ್ಪಿಸಿಕೊಂಡು ತಮ್ಮ ಪ್ರಶ್ನೆ ಮಹಿಳಾ ಉಟ್ಟು ಓರಾಟಗಾರ್ತಿಯರ್ಯಾರ ಕಿವಿಗೂ ಬೀಳದಂತೆ ಎಚ್ಚರವಹಿಸಿ ಅಲ್ಲಿಂದ ಜಾರಿಕೊಂಡರು!

‘‘ಕೆಂಪಾ’ ಪೊಯೆಟ್ಟಾ ಅಂಕಲ್?”

8 ಜುಲೈ

(ನಗೆ ನಗಾರಿ ಭಾಷೆ – ಸಾಹಿತ್ಯ ಬ್ಯೂರೋ)

ಕನ್ನಡ ಸಾಹಿತ್ಯ ಲೋಕವನ್ನು ಸದಾ ಸುದ್ದಿಯಲ್ಲಿಟ್ಟಿರಬೇಕು ಎಂಬುದನ್ನು ಕೆಲವು ಕವಿಗಳು ಮಾಜಿ ಸಾಹಿತಿಗಳು ತಪ್ಪಾಗಿ ಅರ್ಥೈಸಿಕೊಂಡು ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳ ವಾಚಕರ ವಾಣಿ ಎಂಬ ನಿರಪರಾಧಿ ಅಂಕಣವನ್ನು ರಣಾಂಗಣವಾಗಿಸಿಕೊಂಡು ಮುದಿ ಹೋರಿಗಳಂತೆ ಒಬ್ಬರನ್ನೊಬ್ಬರು ಮೊಂಡಾದ ಕೊಂಬಿನೊಂದಿಗೆ ತಿವಿದುಕೊಳ್ಳುತ್ತಾ, ತಾವೇ ಹಾಕಿದ ಸಗಣಿಯನ್ನು ಕೆದರುತ್ತಾ ಹೊಲಸೆಬ್ಬಿಸುತ್ತಾ ಅದನ್ನು ಕನ್ನಡದ ಕಂಪು ಎಂದು ಭ್ರಮಿಸುತ್ತಿರುವುದನ್ನು ಕಂಡು ನಗೆ ಸಾಮ್ರಾಟರಿಗೆ ಎಲ್ಲಿಲ್ಲದ ಕನಿಕರ.

ಮುರುಘ ಸ್ವಾಮಿಗಳು ಆಶೀರ್ವಚನ ಕೊಡುತ್ತಾ ಚಪ್ಪಲಿ ಕೀಳು ಎನ್ನುವ ಭಾವನೆಯ ಹಿಂದೆ ಕಾಲು ಮೆಟ್ಟುವ ವಸ್ತು ಕೀಳು ಮಟ್ಟದ್ದು. ಕಾಲು ಮನ್ನಣೆಗೆ ತಕ್ಕದಾದುದಲ್ಲ. ಹೀಗಾಗಿ ಜಾತಿ ಪದ್ಧತಿ ಹುಟ್ಟಲು ಕಾರಣವೆನ್ನಲಾದ ಪುರುಷ ಸೂಕ್ತದಲ್ಲಿ ಶೂದ್ರರನ್ನು ವಿಷ್ಣುವಿನ ಕಾಲಿನಿಂದ ಹುಟ್ಟಿಬಂದವರು ಎನ್ನಲಾಗಿದೆ. ತಲೆಯಿಂದ ಹುಟ್ಟಿ ಬಂದವರು ಎಂದುಕೊಂಡಿರುವ ಬ್ರಾಹ್ಮಣರು ತಲೆ ಇಡೀ ದೇಹದಲ್ಲಿ ಶ್ರೇಷ್ಠ ಎಂದು ವಾದಿಸುತ್ತಾ, ನಂಬಿಸುತ್ತಾ ಬಂದಿದ್ದಾರೆ. ಕಾಲುಗಳು ನಿಕೃಷ್ಟ. ಈ ಪದ್ಧತಿ ತೊಲಗ ಬೇಕು. ಚಪ್ಪಲಿಗಳು ಅವಜ್ಞೆಗೆ ಒಳಗಾಗಿರುವುದನ್ನು ಕೊಂಚ ಚಿಕಿತ್ಸಿಕ ಮನೋಭಾವದಿಂದ ಎದುರಿಸಬೇಕು ಎಂದರು. ಚಪ್ಪಲಿ ಹಾರ ಹಾಕಿಕೊಳ್ಳುವಂತಹ ಮನೋಭಾವ ಸೃಷ್ಟಿಯಾಗಬೇಕು ಎಂದು ಆಶಿಸಿದರು.

ಅದನ್ನು ಎಲ್ಲರೂ ಮರುದಿನದ ಪತ್ರಿಕೆಗಳಲ್ಲಿ ಓದಿದರು. ಕಿಡಿಗೇಡಿಯೊಬ್ಬ ಸ್ವಾಮಿಗಳಿಂದಲೇ ಅದು ಮೊದಲಾಗಬೇಕು ಎಂದು ಮಹಾನ್ ಗುರುಭಕ್ತನ ಹಾಗೆ ಪತ್ರ ಬರೆದ. ಮರುದಿನದಿಂದ ಸಾರಸ್ವತ ಲೋಕದ ಮಾಜಿ ಸಾಹಿತಿಗಳ ಪ್ರತಿನಿಧಿಯಂತಿರುವ ಕಣ್ಣು ‘ಕೆಂಪಾ’ರವರು ಸ್ವಾಮಿಜಿಯವರ ಬೆಂಬಲಕ್ಕೆ ನಿಂತು ಕಿಡಿಗೇಡಿಯ ಪತ್ರಕ್ಕೆ ಉತ್ತರ ಬರೆದು ಅದಕ್ಕೆ ಕಡ ತಂದ ಖಾರ ಬೆರೆಸಿ ಒಗಾಯಿಸಿದರು. ತಮ್ಮ ಬ್ಯಾಗಿನಲ್ಲಿದ್ದ ಹಳೆಯ ಡೈಲಾಗುಗಳನ್ನೆಲ್ಲಾ ಹೊರಕ್ಕೆ ತೆಗೆದು ಮೊಂಡಾಗಿದ್ದವುಗಳನ್ನು ಪಾಲಿಶ್ ಮಾಡತೊಡಗಿದರು. ‘ಓ ನನ್ನ ಚೇತನಾ ಆಗು ನೀ ಅನಿಕೇತನ’ ಎಂದು ವಿಶ್ವ ಮಾನವತೆಯನ್ನು ಸಾರಿದ ಸಾಹಿತಿ ವರೇಣ್ಯರ ವಾರಸುದಾರರು ಎಂದು ಹೇಳಿಕೊಳ್ಳುವವರು ಎಗ್ಗಿಲ್ಲದೆ ಜಾತಿಯನ್ನು ಮುಂದೆ ಮಾಡಿಕೊಂಡು ಕಚ್ಚಾಡಲು ಶುರು ಮಾಡಿದರು. ಜನರಿಗೋ ಸಾಹಿತಿಗಳ ಕಚ್ಚಾಟಗಳನ್ನು, ವಿವಾದಗಳನ್ನು ಎಂಜಾಯ್ ಮಾಡಲು ಎಲ್ಲಿಲ್ಲದ ಆಸಕ್ತಿ. ಎರಡು ಗಂಧದ ಕೊರಡು ಪರಸ್ಪರ ತಿಕ್ಕಿಕೊಂಡಾಗ ಹೊಮ್ಮುವುದು ಶ್ರೀಗಂಧದ ಪರಿಮಳ ಎಂದು ಭ್ರಮಿಸಿಕೊಂಡು ಜನರು ಕೊಚ್ಚೆಯಲ್ಲಿ ಕಲ್ಲು ಹಾಕುತ್ತಿದ್ದಾರೆ. ಮೈಮೇಲೆ ಕೊಳಕು ಸಿಡಿದಾಗಲೇ ಅವರಿಗೆ ಮೈಮೇಲೆ ಜ್ಞಾನ ಬರುವುದು.

ಈ ಮಧ್ಯೆ ನಗೆ ಸಾಮ್ರಾಟರು ಸಾಹಿತಿಗಳ ಸರಸ-ವಿರಸದ ಬಗ್ಗೆ ಇಂದಿನ ಯುವ ಜನತೆಯ ಅಭಿಪ್ರಾಯವನ್ನು ತಿಳಿಯಲು ಮುಂದಾದರು. ಒಬ್ಬ ತಡವರಿಸಿಕೊಂಡು ಇಂಗ್ಲೀಷಿನ ಮಧ್ಯೆ ಕನ್ನಡ ಬೆರೆಸುತ್ತಾ, ‘U know uncle, ನಂಗೇನೋ ಬರಾಕ್ ಒಬಾಮಮನೇ best ಅನ್ನಿಸುತ್ತೆ. Even my friends say so. Sorry, You asked me abt caste know.. um, ದೇಶಕ್ಕೆ ಒಳ್ಳೇದು ಅನ್ನೋದಿದ್ರೆ our poets should ಯೂಸ್ ಇಟ್. ಎನಿವೇ ಈ ‘ಕೆಂಪಾ’ uncle poet ಅಂತೆ ಹೌದಾ? How much does it cost to be poet uncle? ಯಾಕಂದ್ರೆ, I think, if it is affordable, i could give a try. ‘ ಎಂದದ್ದನ್ನು ಕೇಳಿ ಕಛೇರಿಗೆ ಎದ್ದು ಬಿದ್ದು ಓಡಿ ಬಂದು ತಣ್ಣಗೆ ಒಂದು ಲೋಟ ನೀರು ಕುಡಿದಿದ್ದಾರೆ ಎಂಬುದು ಔಟ್ ಆಫ್ ರೆಕಾರ್ಡ್!