Tag Archives: ಭಾರತ

ಪಾಕ್ ಶಾಂತಿಪ್ರಿಯ ದೇಶ ಎನ್ನುವುದಕ್ಕೆ ಪುರಾವೆ ಏನಿದೆ: ಪಾಕ್ ವಿದೇಶಾಂಗ ಕಾರ್ಯದರ್ಶಿ

26 ಫೆಬ್ರ

ಅಭ್ಯಾಸ ಬಲದಿಂದ ಅಪಸವ್ಯದ ಹೇಳಿಕೆ

ನವದೆಹಲಿ: ಮುಂಬೈ ದಾಳಿಯ ನಂತರ ಹದಗೆಟ್ಟಿದ್ದ ಭಾರತ ಪಾಕಿಸ್ತಾನ ನಡುವಿನ ಶಾಂತಿ  ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಪೈಲ್ವಾನ್ ಬಶೀರ್ ವಿವಾದಾತ್ಮಕವಾದ ಹೇಳಿಕೆ ನೀಡಿ ತನ್ನ ದೇಶಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ನಲವತ್ತೈದು ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ದೇಶಗಳ ಕಾರ್ಯದರ್ಶಿಗಳು ಪರಸ್ಪರ ದೋಷಾರೋಪಣೆಯಲ್ಲಿಯೇ ಸಮಯ ಕಳೆದರು. ಭಾರತದ ನಿದೇಶಾಂಗ ಕಾರ್ಯದರ್ಶಿ ನೆಲಸಮ ರಾವ್ ಪಾಕಿಸ್ತಾನದ ಮೇಲೆ ನಂಬಿಕೆ ಬರುವಂತೆ ಅದು ನಡೆದುಕೊಳ್ಳಬೇಕು. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯ ಗಳು ನಡೆಯದಂತೆ  ಕ್ರಮ ಕೈಗೊಳ್ಳಬೇಕು ಎಂದರು. ಪಾಕಿಸ್ತಾನದಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿಯೇ ಶಾರುಖ್ ಖಾನ್ ಏನೆಲ್ಲ ಪಡಿಪಾಟಲು ಪಡಬೇಕಾಯಿತು. ಹೀಗಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಮ್ಮ ಸರಕಾರ ಮುಂದಾಗಿರುವುದೇ ನಮ್ಮ ಔದಾರ್ಯವನ್ನು ತೋರುತ್ತದೆ ಎಂದರು.

ಇದರಿಂದ ಕೆರಳಿದ ಪೈಲ್ವಾನ್ ಬಶೀರ್ ನಾವೇನು ಮೇಲೆ ಬಿದ್ದು ಮಾತುಕತೆಗೆ ಬಂದಿಲ್ಲ. ನಮಗೆ ಮಾತುಕತೆಯಲ್ಲಿ ಎಂದಿಗೂ ನಂಬಿಕೆಯಿಲ್ಲ. ದೇಶದ ಪ್ರಧಾನಿಯನ್ನು ಕೆಳಗಿಳಿಸುವಾಗೂ ಸಹ ನಾವು ಮಾತುಕತೆಯಾಡುವುದಿಲ್ಲ. ನಮ್ಮದೇನಿದ್ದರೂ ನೇರವಾದ ಕೆಲಸ. ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಗೋಳುಗರೆಯುತ್ತದೆ. ಪಾಕಿಸ್ತಾನದತ್ತ ಬೆರಳು ಮಾಡುತ್ತದೆ. ಇದು ಎಷ್ಟೋ ಕಾಲದಿಂದ ನಡೆದುಬಂದಿರುವ  ವಿದ್ಯಮಾನ. ಪಾಕಿಸ್ತಾನ ಹೇಗಿರಬೇಕು ಏನು ಮಾಡಬೇಕು ಎನ್ನುವ ಪ್ರವಚನ ಕೊಡುವುದನ್ನು ನವದೆಹಲಿ ನಿಲ್ಲಿಸಬೇಕು. ನಾವೂ ಭಯೋತ್ಪಾದನೆಯ ಬಿಸಿ ಎದುರಿಸುತ್ತಿದ್ದೇವೆ.  ಭಯೋತ್ಪಾದಕರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎನ್ನುವುದಕ್ಕೆ ಭಾರತ ಯಾವ ಪುರಾವೆಯನ್ನೂ ಒದಗಿಸಿಲ್ಲ. ಅದು ಕಂತೆಗಟ್ಟಲೆ ಕಳಿಸಿರುವ `ಸಾಹಿತ್ಯ’ ವನ್ನು ಪುರಾವೆ ಎನ್ನಲಾಗುವುದಿಲ್ಲ.

ತಮ್ಮನ್ನು ಜಂಟಲ್ ಮ್ಯಾನ್ ಎಂದದ್ದಕ್ಕೂ ಅಭ್ಯಾಸ ಬಲದಿಂದ ಪುರಾವೆ ನೀಡಿ ಎಂದು ಹೇಳಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.

ನೆಲಸಮ ರಾವ್ ಖಾರವಾಗಿ ಉತ್ತರಿಸುತ್ತ, “ಭಾರತ ಕಳಿಸಿಕೊಟ್ಟಿರುವ ಪುರಾವೆಗಳನ್ನು ಓದುವುದಕ್ಕೆ ಪಾಕಿಸ್ತಾನದಲ್ಲಿ ಓದು ಬಲ್ಲ ಜನರಿದ್ದಾರೆಯೇ ಎಂದು ಮೊದಲು ಪರೀಕ್ಷಿಸಿ. ಇವನ್ನು ಪುರಾವೆಯಲ್ಲ ಕಟ್ಟು ಕತೆ ಎನ್ನುವ ಮೊದಲು ಒಮ್ಮೆ ಓದಿ ನೋಡಿ. ಪಾಕಿಸ್ತಾನ ತನ್ನದೇ ಸೃಷ್ಟಿಯ ಬಲಿಪಶುವಾಗಿರಬಹುದು, ಆದರೆ ಭಾರತ ಪಾಕಿಸ್ತಾನದ ಸೃಷ್ಟಿಯ ಭಯೋತ್ಪಾದನೆಗೆ ಬಲಿಪಶುವಾಗಿದೆ. ನಾನು ಪ್ರಜಾಪ್ರಭುತ್ವವಿರುವ ಸರಕಾರಕ್ಕೆ ಉತ್ತರದಾಯಿ ನಿಮ್ಮಂತೆ ಮಿಲಿಟರಿ ನಾಯಕನ ಆಜ್ಞಾಧಾರಿಯಲ್ಲ.” ಎಂದಾಗ ಬಶೀರ್ ಭಾರತ ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರು.

ಶಾಂತಿ ಮಾತುಕತೆ ಒಂದು ಹಂತಕ್ಕೆ ಬಂದಾಗ ನೆಲಸಮ ರಾವ್ ಸ್ನೇಹಪೂರ್ವಕವಾಗಿ ಬಶೀರರ ಕೈ ಕುಲುಕಿ, “ಪಾಕಿಸ್ತಾನವೂ ಸಹ ಶಾಂತಿ ಪ್ರಿಯ ರಾಷ್ಟ್ರ. ಅದು ಭಯೋತ್ಪಾದಕರು ಬೆಳೆಯುವುದಕ್ಕೆ ನೆರವು ನೀಡುವುದಿಲ್ಲ. ನೀವು ಒಳ್ಳೆಯ ಜಂಟಲ್ ಮೆನ್…” ಎಂದರು.

ರಾವ್ ರವರ ಮಾತನ್ನು ಅರ್ಧಕ್ಕೇ ತುಂಡರಿಸಿದ ಪೈಲ್ವಾನ್ ಬಶೀರ್, “ಸುಳ್ಳು, ಕಟ್ಟುಕತೆ. ನೀವು ಮಾಡಿದ ಆರೋಪಗಳಿಗೆ ಪುರಾವೆ ಏನು?” ಎಂದು ಅಬ್ಬರಿಸಿದರು.

ಕೂಡಲೇ ಬಶೀರರ ಆಪ್ತಕಾರ್ಯದರ್ಶಿ ಸಂದರ್ಭವನ್ನು ಕಿವಿಯಲ್ಲಿ  ಪಿಸುಗುಟ್ಟಿದ ಮೇಲೆ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ನಕ್ಕರು ಎಂದು ವರದಿಯಾಗಿದೆ.

ತ್ರಿ-ವಾರಿಯೂ ಆಚಾರ್ಯ ರೇಣುಕರೂ…

4 ಜನ

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.

ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.

ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.

ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.

ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!

ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

4 ಡಿಸೆ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ಉಗ್ರವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ಸಂಯಮಿಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!


ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು. ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ, ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!


ಅವರೆಲ್ಲಾ ಮೂರ್ಖರು. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ. ಭಾರತವೆಂಬ ಪುಣ್ಯ ಭೂಮಿಯಿಂದ ಅವರು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ತಮ್ಮ ದೇಶದ ಬಹುದೊಡ್ಡ ಕಟ್ಟಡಕ್ಕೆ ವಿಮಾನವನ್ನು ನುಗ್ಗಿಸಿ, ಸಾವಿರಾರು ಮಂದಿಯನ್ನು ಒಸಾಮ ಕೊಂದಾಗಆಧುನಿಕ ನಾಗರೀಕತೆಯ ಗಗನ ಚುಂಬಿಗಳ ಎದೆಯೊಳಗೆ ಬಂಡಾಯದ ವಿಮಾನ ನುಗ್ಗಿಸಿ ಆತ ಹರಿಸಿದ ರಕ್ತದಲ್ಲಿ, ಹೊಸ ಮುಂಜಾವಿನ ಬೆಳ್ಳಿ ರೇಖೆಗಳು ಪ್ರತಿಫಲಿಸುತ್ತಿದ್ದವುಎಂದು ಸುಮಧುರವಾದ ಕಾವ್ಯವನ್ನು ರಚಿಸಿ ಅಮರರಾಗುವುದನ್ನು ಬಿಟ್ಟು ಆತನ ಯಕಃಶ್ಚಿತ್ ತಪ್ಪಿಗೆ ಒಸಾಮನ ತಲೆ ತೆಗೆಯ ಹೊರಟು ಬಿಡುತ್ತಾರೆ ಹೆಡ್ಡರು. ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕುರುಡಾಗುತ್ತದೆಯಲ್ಲವೇ? ನಮ್ಮ ಕಣ್ಣು ಹೋದರೂ ಚಿಂತೆಯಿಲ್ಲ ಜಗತ್ತು ಕುರುಡಾಗಬಾರದು. ನಮಗೆ ಕಣ್ಣುಗಳಿದ್ದರೇ ತಾನೆ ಕುರುಡಾಗಲು ಸಾಧ್ಯ? ನಮ್ಮ ಕಣ್ಣುಗಳನ್ನೇ ನಾವು ಕಿತ್ತು ಬಿಟ್ಟರೆ? ಎಂದು ಆಲೋಚಿಸುವ ಮುತ್ಸದ್ಧಿತನ ಆ ಯಹೂದಿ ದೇಶದವರಿಗೆ ಯಾವಾಗ ಬಂದೀತು? ನಮ್ಮಲ್ಲಿ ಸಿರಿ ಸಂಪತ್ತು ಇದ್ದರಲ್ಲವೇ ಕಳ್ಳ ಕಾಕರ ಕಾಟ, ಅದಕ್ಕೆ ಪೊಲೀಸು, ಕಾನೂನಿನ ರಕ್ಷಣೆಯ ಹುಡುಕಾಟ, ಊಟಕ್ಕೆ ಗತಿಯಿಲ್ಲದೆ, ಹಸಿವೆಯಿಂದ ನರಳಿ ನರಳು ಸಾಯುವ ಸ್ಥಿತಿಗೆ ನಾವು ಬಂದುಬಿಟ್ಟರೆ? ಅವ್ಯಾವ ಚಿಂತೆಯೂ ಇರದು. ನಾವು ಶಿಕ್ಷಿತರಾಗಿ ಎಲ್ಲವನ್ನೂ ತಿಳಿಯ ಹೊರಟರೆ ಅಲ್ಲವೇ ಭಿನ್ನಾಭಿಪ್ರಾಯಗಳು ಬರುವುದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಅನ್ನಿಸುವುದುಒಂದಕ್ಷರ ಕಲಿಯದಿರುವ ನಿರ್ಧಾರ ಮಾಡಿ ಗಟ್ಟಿ ಮನಸ್ಸು ಮಾಡಿದರೆ ಇವೆಲ್ಲ ಸಮಸ್ಯೆಗಳೇ ಇರುವುದಿಲ್ಲ. ಇಂತಹ ಸರಳ ಸತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ದೇವರ ನಿಜವಾದ ಪ್ರಜೆಗಳು ನಾವೇ. ಬದುಕು ಇರುವುದು ಈ ಭೂಮಿಯ ಮೇಲೆ ಅಲ್ಲ ಎಂಬುದು ನಮಗಷ್ಟೇ ಗೊತ್ತು ಹೀಗಾಗಿ ನಾವು ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ನಾವೇ ಶಾಶ್ವತವಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳು ಶಾಶ್ವತವೇ?


ಅಮೇರಿಕಾ, ಇಸ್ರೇಲುಗಳು ನಮ್ಮಿಂದ ಕಲಿಯುವಂಥದ್ದು ತುಂಬಾ ಇದೆ. ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದು ಹೊರಡುವುದಾಗಲೀ, ಭಯೋತ್ಪಾದಕರಿಗೆ ಅನ್ನ ನೀರು ಕೊಟ್ಟು ಆಶ್ರಯ ನೀಡುತ್ತಿರುವವರನ್ನು ನಾಶ ಮಾಡುತ್ತೇವೆ ಎಂದಾಗಲೀ ಹೊರಡುವುದು ಮೂರ್ಖತನವಾಗುತ್ತದೆ. ಪಾಪ ಭಯೋತ್ಪಾದಕರೂ ಮನುಷ್ಯರೇ ಅಲ್ಲವೇ? ಪರಿಸ್ಥಿತಿಯಿಂದಾಗಿ ಆತ ಆ ಮಾರ್ಗ ಹಿಡಿದಿದ್ದಾನೆ. ಒಂದು ವೇಳೇ ನಾವೇ ಆ ಸ್ಥಾನದಲ್ಲಿದ್ದರೂ ಹಾಗೇ ಮಾಡುತ್ತಿರಲಿಲ್ಲವೇ? ಭಯೋತ್ಪಾದನೆ ಅಸಲಿಗೆ ಸಮಸ್ಯೆಯೇ ಅಲ್ಲ. ಭಯೋತ್ಪಾದಕ ನಮ್ಮನ್ನು ಕೊಂದರೆ ಏನು ಮಾಡಿದ ಹಾಗಾಯಿತು? ನಮ್ಮ ದೇಹ ನಾಶವಾಯಿತು ಅಷ್ಟೇ! ಅದಕ್ಕಿಂತ ಹೆಚ್ಚಿನದನ್ನೇನೂ ಆತ ಮಾಡಲಾರ. ನಮ್ಮ ಶಾಶ್ವತವಾದ, ಚಿರನೂತನವಾದ ಆತ್ಮವನ್ನು ಆತ ಮುಟ್ಟಲೂ ಸಾಧ್ಯವಾಗದು. ಅಂತಹವರನ್ನು ನಿಗ್ರಹಿಸಬೇಕು, ನಿವಾರಿಸಬೇಕು ಎಂದೆಲ್ಲಾ ಮಾತಾಡುವುದು ಬಾಲಿಶವಲ್ಲವೇ?


ಅದಕ್ಕಾಗಿ ಘಂಟಾಘೋಷವಾಗಿ ಹೇಳೋಣ: ನಾವು ಭಾರತೀಯರು, ನಾವಿನ್ನೂ ಬದುಕಿದ್ದೇವೆ. ಜಗತ್ತು ನಮ್ಮನ್ನು ನೋಡಿ ಬುದ್ಧಿ ಕಲಿಯಲಿ. ದೇವರ ಅಪೂರ್ವ ಸೃಷ್ಟಿಯಾದ ನಾವು ಇಲ್ಲಿಂದ ಖಾಲಿಯಾಗುವುದರೊಳಗೆ ಜಗತ್ತು ನಮ್ಮನ್ನು ಅರಿತುಕೊಳ್ಳಲಿ, ನಮ್ಮನ್ನು ಅನುಕರಿಸಲಿ.

ವಾರದ ವಿವೇಕ 11

6 ಜೂನ್

…………………………………………………..

ಭಾರತದಂತಹ ದೇಶದಲ್ಲಿ

ಗೌರವ ಸಂಪಾದಿಸಲು

ಅತ್ಯಂತ ಸುಲಭವಾದ

ದಾರಿಯೆಂದರೆ,

ವಯಸ್ಸಾಗುವುದು!

…………………………………………………..