Tag Archives: ಭಯೋತ್ಪಾದನೆ

ಐಪಿಎಲ್ ಫೇಸ್ ಬುಕ್‌ಗೆ ಸ್ಥಳಾಂತರ : ಮೋಡಿ

18 ಫೆಬ್ರ

ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ

 

Untitled pictureನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ ಮೋಡಿ ತಿಳಿಸಿದ್ದಾರೆ.

ಇಲ್ಲಿಯ ಸ್ಥಳೀಯ ಸೈಬರ್ ಕೆಫೆಯಲ್ಲಿ ನೆರೆದ ಸುದ್ದಿಗಾರರೊಂದಿಗೆ ಮಾತನಾಡಿದ ಮೋಡಿ ಭಯೋತ್ಪಾದಕ ಸಂಘಟನೆ ಹುಜಿಯ ಮುಖಂಡನ ಬೆದರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಹರ್ಕತುಲ್ ಜಿಹಾದಿ ಇಸ್ಲಾಮಿ(ಹುಜಿ)ಯ ಕಮ್ಯಾಂಡರ್ ಇಲಿಯಾಸ್ ಕಶ್ಮಿರಿ ಭಾರತದಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿ, ಐಪಿಎಲ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದೇಶಿ ಆಟಗಾರರು ತಮ್ಮ ಜೀವಕ್ಕೆ ತಾವೇ ಜವಾಬ್ದಾರರು, ಪಾಕಿಸ್ತಾನದ ಆಟಗಾರರ ಜೀವಗಳಿಗೆ ಮಾತ್ರ ತಾವು ಜವಾಬ್ದಾರರು ಎಂದು ಬೆದರಿಕೆಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಪಟುಗಳ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತವಾಯಿತು.

ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಿ ರಾಜಸ್ಥಾನದ ತಂಡದ ಸೋಲಿಗೆ ಕಾರಣವಾಗಿದ್ದ ಮೋಡಿ ಈ ಬಾರಿ ಯಾರಿಗೂ ಅನ್ಯಾಯವಾಗದ ಹಾಗೆ ಸರ್ವ ಸಮ್ಮತವಾದ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. “ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮೆಲ್ಲ ಶೇರುದಾರರ ಹಿತರಕ್ಷಣೆ ಮುಖ್ಯ. ಹಾಗಂತ ನಾವು ಆಟಗಾರರ ಜೀವವನ್ನು ಲೆಕ್ಕಿಸುವುದಿಲ್ಲ ಎಂದೇನಿಲ್ಲ.” ಎಂದಿದ್ದ ಮೋಡಿ ಕಡೆಗೆ ಐಪಿಎಲ್ ಪಂದ್ಯಾವಳಿಗಳನ್ನು ಫೇಸ್ ಬುಕ್ಕಿನಲ್ಲಿ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ.

“ಫೇಸ್ ಬುಕ್ ವಿಶ್ವದಾದ್ಯಂತ ಸುರಕ್ಷಿತವಾದ ಕ್ರೀಡಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ರೈತರು ಕ್ರೀಡಾಮನೋಭಾವದಿಂದ ಬೆಳೆ ತೆಗೆಯುವುದಕ್ಕೆ ನೆರವಾಗಿದೆ. ಒಂಚೂರು ರಕ್ತಪಾತವಿಲ್ಲದೆ ಮಾಫಿಯಾಗಳು ಯುದ್ಧ ನಡೆಸಿಕೊಳ್ಳಲು ಸಹಾಯ ಮಾಡಿದೆ. ಹಿಂಸಾಚಾರವಿಲ್ಲದೆ ವ್ಯಾಂಪೈರುಗಳು ಸಹಜೀವನ ನಡೆಸುವುದಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಐಪಿಎಲ್ ಆಯೋಜಿಸಲು ಹರ್ಷವಾಗುತ್ತದೆ.”

ಮೋಡಿಯವರ ಈ ನಿರ್ಧಾರವನ್ನು ಸ್ವಾಗತಿಸಿರುವ ಫೇಸ್ ಬುಕ್ ನಿರ್ದೇಶಕ ಮಖೇಡಿ ಮ್ಯಾಥ್ಯುಸ್. “ಇದೊಂದು ಸ್ವಾಗತಾರ್ಹ ತೀರ್ಮಾನ. ಐಪಿಎಲ್ ಮೂರನೆಯ ಆವೃತ್ತಿಯನ್ನು ಫೇನ್ ಬುಕ್ಕಿನಲ್ಲಿ ಆಯೋಜಿಸಲು ನಮಗೂ ಹರ್ಷವಾಗುತ್ತದೆ. ಆಟಗಾರರು ತಮ್ಮ ತಮ್ಮ ದೇಶಗಳಲ್ಲೇ, ತಮ್ಮ ಮನೆಯ ಸೋಫಾಗಳಲ್ಲೇ ಕೂತು ಭಾಗವಹಿಸಬಹುದು. ವೀಕ್ಷಕರು ಕೂಡ ಆಫೀಸುಗಳಲ್ಲಿ, ಮನೆಗಳಲ್ಲಿ ಕೂತೇ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕಪಿಸೇನೆಗಳ ಬೆದರಿಕೆ, ಭಯೋತ್ಪಾದಕರ ಬೆದರಿಕೆಗಳಿಗೂ ಅಂಜದೆ ವಿಶ್ವದಾದ್ಯಂತ ಎಲ್ಲರೂ ಪಾಲ್ಗೊಳ್ಳಬಹುದು.”

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಪ್ರಭಾವವನ್ನು ಅವಗಣಿಸಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿಲ್ಲ ಎಂದಿರುವ ತಂತ್ರಜ್ಞ ತಂತ್ರೇಶ್ ಜಾದವ್ “ಬೆರಳು ಮುರಿತ, ತೊಡೆ ಸಂದು, ಭುಜದ ನೋವುಗಳಿಲ್ಲದೆ ಆಟಗಾರರು ಆರಾಮವಾಗಿ ಆಡಬಹುದಾದ ಅಂತರ್ಜಾಲದ ಐಪಿಎಲ್ ಆವೃತ್ತಿ ಕ್ರಾಂತಿಕಾರಿಯಾದ ಬೆಳವಣಿಗೆ. ಇದರಿಂದ ಆಟಗಾರರು ತಮ್ಮ ಆಟಕ್ಕೆ ಯಾವ ರೀತಿಯಿಂದಲೂ ಸಂಬಂಧಿಸದ ದೈಹಿಕ ಫಿಟ್‌ನೆಸ್ಗಾಗಿ ಶ್ರಮ ಪಡಬೇಕಿಲ್ಲ. ಅಲ್ಲದೆ ಕೂತಲ್ಲೇ ದೇಹವನ್ನು ಬಿಟ್ಟು ಸಂಚಾರ ಹೋಗಿ ಬರುತ್ತಿದ್ದ ಪೌರಾಣಿಕ ಕತೆಗಳನ್ನು ನಿಜ ಮಾಡಿ ತೋರಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಜೈ ಐಟಿ!”

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

15 ಮಾರ್ಚ್

 

(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)

ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ ಕ್ರಿಕೆಟಿಗರು ಹೇಳಿದ್ದಾರಾದರೂ ಈ ಬೌಂಡರಿಯಿಲ್ಲದ, ಮಿತಿಯಿಲ್ಲದ, ಮತಿಯಿಲ್ಲದ ಭಯೋತ್ಪಾದಕರಿಗೆ ಶ್ರೀಲಂಕಾದ ಕ್ರಿಕೆಟಿಗರೂ ಗುರಿಯಾದದ್ದು ದುರದೃಷ್ಟಕರ. ಅಷ್ಟು ಮಂದಿ ಆಟಗಾರರು ಎದುರು ಸಿಕ್ಕರೂ ಒಂದೂ ಗುರಿಯನ್ನು ಸರಿಯಾಗಿ ಮುಟ್ಟದಂತೆ ಶೂಟ್ ಮಾಡಿದ ಭಯೋತ್ಪಾದಕರಿಗೆ ತರಬೇತಿ ಸಿಕ್ಕಿದ್ದು ಪಾಕಿಸ್ತಾನದಲ್ಲೇ ಎಂದು ಸಾಬೀತು ಮಾಡಲು ಬೇರೆ ಸಾಕ್ಷಿಗಳೇ ಬೇಕಿಲ್ಲ.

ಲಂಕನ್ ಕ್ರಿಕೆಟ್ ತಂಡದೊಂದಿಗೇ ತಾವೂ ಹೊರಡುತ್ತಿದ್ದ ಪಾಕಿಸ್ತಾನದ ತಂಡ ಆ ದಿನ ಮಾತ್ರ ಹಿಂದಕ್ಕೆ ಉಳಿಯಲು ಯಾವ ಕೋಚು ಚಿಟ್ ಕಳುಹಿಸಿರಬೇಕು ಎಂದು ಜಗತ್ತೇ ತಲೆ ಕೆಡಿಸಿಕೊಂಡು ಕೂತಿರುವಾಗ ನಾವು ಸತ್ಯಶೋಧನೆಗಾಗಿ, ಕಾಣದ ಕೈಗಳ ಕೈವಾಡದ ತನಿಖೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟುತ್ತಿದ್ದೇವೆ.

ಪಾಕಿಸ್ತಾನವೆಂಬ ‘ಪಾತಕಿ ಸ್ಥಾನ’ದಲ್ಲಿ ಬಾಳುವೆ ಮಾಡುವುದಕ್ಕಿರಲಿ, ಆಟವಾಡುವುದಕ್ಕೂ ಜಗತ್ತು ಹೆದರುವಂತಾಗಿದೆ. ಜಗತ್ತಿನ ಕ್ರಿಕೆಟ್ ವೀರರೆಲ್ಲಾ ಪಾಕಿಸ್ತಾನಕ್ಕೆ ಕಾಲಿಡಲು ಭಯಭೀತರಾಗಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಭಾರತ ಯಾವ ಕಾಲದಿಂದಲೂ ಜರೆಯುತ್ತಿದ್ದರೂ ಅದನ್ನು ಪ್ರತಿನಿತ್ಯ ಕೇಳುವ ದೂರದ ದೇವಸ್ಥಾನದ ಗಂಟೆಯ ನಾದದ ಹಾಗೆ ಭಾವಿಸಿ ಮೈಮರೆಯುತ್ತಿದ್ದ ಜಗತ್ತು ಈಗ ಎಚ್ಚೆತ್ತುಕೊಂಡಿದ್ದೆ. ಗಂಟೆಯ ಸದ್ದಿಗೆ ತಲೆದೂಗಿಸುತ್ತಿದೆ.

ಆದರೆ ಅದರ ನಡುವೆಯೇ ಅತ್ಯಂತ ಕರ್ಕಶವಾದ ಸದ್ದೊಂದು ಕೇಳಿಬರಲು ತೊಡಗಿದೆ. ಪಾಕಿಸ್ತಾನವೆಂಬ ಹೋಲಿಕೆಗೆ ಸಿಗದ ದೇಶದ ಜೊತೆಗೆ ಭಾರತದ ಹೆಸರನ್ನೂ ತಳುಕು ಹಾಕಲಾಗುತ್ತಿದ್ದ. ಜಗತ್ತಿನಾದ್ಯಂತ ಕ್ರಿಕೆಟ್ ಕಲಿಗಳು  ಪಾಕಿಸ್ತಾನ ಮಾತ್ರವಲ್ಲ ಭಾರತದ ಹೆಸರು ಕೇಳಿದರೂ ನಮ್ಮ ತೊಡೆಗಳು ನಡುಗುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಜೊತೆಗೆ ಭಾರತವೂ ತಮಗೆ ದುಃಸ್ವಪ್ನವನ್ನು ತರಿಸುತ್ತಿವೆ ಎಂದು ವರದಿ ಮಾಡಿದ್ದಾರೆ. ಪಾಕ್ ಜೊತೆಗೆ ಭಾರತವನ್ನೂ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ. ಈ ಆಗ್ರಹದ ಧ್ವನಿಗೆ ಕ್ರಿಕೆಟ್ ಜಗತ್ತಿನದಲ್ಲದೆ ಇತರ ಧ್ವನಿಗಳೂ ಸೇರಿಕೊಂಡಿವೆ.

ಇವರ ಆಗ್ರಹಕ್ಕೆ ಕಾರಣವೇನೆಂದು ನಮ್ಮ ಆತ್ಮೀಯ ಗೆಳೆಯ ತೊಣಚಪ್ಪನವರು ವಿಚಾರಿಸಿದಾಗ ಆಸ್ಟ್ರೇಲಿಯಾ ತಂಡದ ಹೆಸರು ಹೇಳಲಿಚ್ಚಿಸದ ಆಟಗಾರನೊಬ್ಬ ಹೀಗೆಂದ, “ಭಾರತ ಭಯೋತ್ಪಾದಕ ರಾಷ್ಟ್ರವಾಗಿದೆ. ಅದರ ಹೆಸರು ಕೇಳಿದರೆ ನಮ್ಮ ಆಟಗಾರರು ಭಯದಿಂದ ತತ್ತರಿಸಿ ಹೋಗುತ್ತಾರೆ. ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದವು. ಇಡೀ ಭಾರತ ತಂಡವಲ್ಲ, ಅದರ ಒಬ್ಬ ಆಟಗಾರನನ್ನು ಕಂಡು ನಮ್ಮ ತಂಡವೇ ಭಯಭೀತಗೊಂಡಿತ್ತು. ನಮ್ಮ ತಂಡದ ಪ್ರಮುಖ ಸ್ಪಿನ್ ಬೌಲರ್ ಕನಸಿನಲ್ಲಿ ಆ ಆಟಗಾರ ಬಂದು ಭಯವನ್ನು ಹುಟ್ಟಿಸುತ್ತಿದ್ದ. ಹೇಗೋ ಭಾರತದ ಸರಣಿ ಪ್ರವಾಸದ ಸಂದರ್ಭದಲ್ಲಿ ಕಲಿತಿದ್ದ ‘ರಾಮ ರಕ್ಷಾ ಸ್ತೋತ್ರ’ವನ್ನು ಪಠಿಸಿ ಆತನನ್ನು ಸಹಿಸಿಕೊಂಡು ಆಡುತಿದ್ವಿ. ಆದರೆ ಈಗ ಇಡೀ ತಂಡಕ್ಕೆ ತಂಡವೇ ಭಯೋತ್ಪಾದಕ ಯುನಿಟ್ ಆಗಿದೆ. ಅವರ ಮೇಲೆ ಆಡಿದ ಎಲ್ಲಾ ತಂಡಗಳೂ ಸೀರೀಸ್ ಸೋಲುವುದರ ಜೊತೆಗೆ ಆ ತಂಡದ ನಾಯಕ ತಲೆ ದಂಡ ಕೊಡಬೇಕಾಗಿ ಬಂತು. ನೋಡಿ, ಈ ಧೋನಿ ಎಂಬ ಬಂಡು ಕೋರನ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ನಡೆಸಿರುವ ಭಯೋತ್ಪಾದನೆಯನ್ನ, ಇವರು ಸತತವಾಗಿ ಆರು ಸರಣಿಗಳನ್ನು ಗೆದ್ದಿದ್ದಾರೆ. ನಮ್ ತಂಡದ ಮೇಲೆ ಆಡಿ ಮಣಿಸಿದ ನಂತರ ನಮ್ಮದೇ ದೇಶದ ಮಂದಿ ನನ್ನನ್ನು ಶತ್ರುವಾಗಿ ಕಾಣಲು ಶುರುಮಾಡಿದ್ರು, ಗಾಯವಾಗದಿದ್ದರೂ, ಆಯಾಸವಾಗದಿದ್ದರೂ ನನಗೆ ವಿಶ್ರಾಂತಿ ಕೊಟ್ಟು ಕೂರುವಂತೆ ಮಾಡಿದರು. ಅಲ್ಲಿ ಇಂಗ್ಲೆಂಡಿನಲ್ಲಿ ಪೀಟರ್ ಸನ್ನಿಗೆ ಗೂಸಾ ತಿನ್ನಿಸಿದರು. ಶ್ರೀಲಂಕಾದ ನಾಯಕ ಪದವಿ ತ್ಯಾಗ ಮಾಡುವ ಮಾತನಾಡಿದ. ಜೊತೆಗೆ ಈ ಭಯೋತ್ಪಾದಕ ತಂಡಕ್ಕೆ ಸಿಕ್ಕುತ್ತಿರುವ ಆರ್ಥಿಕ ಬೆಂಬಲವೂ ಸಹ ಅಗಾಧ ಮಟ್ಟದ್ದಾಗಿದೆ. ನಮ್ ನೆಲದ ಮೇಲೆ ಬಂದು ನಮ್ಮನ್ನೇ ಎದುರು ಹಾಕಿಕೊಂಡ ಭಜ್ಜಿ ಸಿಂಗರನ್ನು ನಾವು ಏನೂ ಮಾಡಲಾಗಲಿಲ್ಲ. ಅದೇ ಕೊರಗಿನಲ್ಲಿ ನಮ್ ಸೈ-ಮೊಂಡನು ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಇಷ್ಟೆಲ್ಲಾ ಕಷ್ಟ ನಷ್ಟ, ಧ್ವಂಸ-ದಾಳಿಯನ್ನು ಮಾಡಿದ ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ನಾನು ಸಮಸ್ತ ಕ್ರಿಕೆಟ್ ಜಗತ್ತಿನ ಪರವಾಗಿ ಆಗ್ರಹಿಸುತ್ತೇನೆ.”

ಆಸ್ಟ್ರೇಲಿಯಾ ನಾಯಕನ ಈ ಮಾತಿಗೆ ತಮ್ಮ ಧ್ವನಿಯನ್ನು ಸೇರಿಸಿರುವ ಅನೇಕರು, “ಭಾರತಕ್ಕೆ ಹೆದರಿ ನಮ್ಮ ದೇಶದ ಅಧ್ಯಕ್ಷ ಹೊರಗುತ್ತಿಗೆಯನ್ನು ನಿಯಂತ್ರಿಸುವ, ತನ್ನದೇ ದೇಶದ ಕಂಪೆನಿಗಳಿಗೆ ನಷ್ಟವುಂಟು ಮಾಡುವ ನಿರ್ಧಾರ ಮಾಡಬೇಕಿದೆ. ಕ್ರಿಕೆಟ್ಟಿನಲ್ಲಿ ಪುರುಷರ ತಂಡ ಮಾಡಿದ ದಾಳಿ ಸಾಲದು ಎಂಬಂತೆ ಮಹಿಳೆಯರ ತಂಡವೂ ವರ್ತಿಸುತ್ತಿದೆ. ಒಬ್ಬನೇ ಭಾರತೀಯ ಎರಡು ಆಸ್ಕರ್ ಬಾಚಿದ್ದಾನೆ, ಭಾರತದ ಕತೆಯಿರುವ ಎರಡು ಸಿನೆಮಾಗಳು ಪ್ರಶಸ್ತಿಯನ್ನು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಿವೆ. ನಮಗಿಂತ ನಿಖರವಾಗಿ ಚಂದ್ರನನ್ನು ಪರಿಚಯಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗೇ ಮುಂದುವರಿದರೆ ಭಾರತದ ಭಯದಲ್ಲಿ ಜಗತ್ತಿನೆಲ್ಲಾ ರಾಷ್ಟ್ರಗಳು ಅಳುತ್ತಾ ಕೂರುವುದು ನಿಶ್ಚಿತ. ಅದಕ್ಕೇ ಭಾರತವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲೇ ಬೇಕು.” ಎಂದು ನಮ್ಮ ತೊಣಚಪ್ಪನವರಲ್ಲಿ ತಮ್ಮ ದುಃಖ ತೋಡಿಕೊಂಡರು.

ತಮ್ಮ ಸಂದರ್ಶನವನ್ನು ಮುಗಿಸಿಕೊಂಡು ತೊಣಚಪ್ಪನವರು ವಿಮಾನ ನಿಲ್ದಾಣದಲ್ಲಿನ ನೌಕರಿಗೆ, ವಿಮಾನದೊಳಗಿನ ಗಗನ ಸಖಿಯರಿಗೆ ತಮ್ಮ ಭಾರತದ ಪಾಸ್ ಪೋರ್ಟ್ ತೋರಿಸಿ ಭಯ ಹುಟ್ಟಿಸಿದ ಘಟನೆ ತಡವಾಗಿ ವರದಿಯಾಗಿದೆ.

(ಚಿತ್ರ: ಸಾಮ್ರಾಟರ ಕೈಚಳಕ)

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

17 ಡಿಸೆ

ನಗೆ ಸಾಮ್ರಾಟ್


ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!


ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು. ಸಮೂಹ ಸನ್ನಿಗೆ ಬಲಿಯಾಗಿ ನಮ್ಮ ಮಾಧ್ಯಮಗಳೂ ಸಹ ಅವರ ದಿಟ್ಟ ಧ್ವನಿಯನ್ನು, ಸ್ಪಷ್ಟ ನಿಲುವನ್ನು ಪ್ರಕಟಿಸಲು ಹಿಂದೇಟು ಹಾಕಿದವೇನೋ ಎಂದು ಆತಂಕವಾಯ್ತು. ಸಂವಿಧಾನ ಬದ್ಧವಾಗಿ ಬಂದ ವಾಕ್ ಸ್ವಾತಂತ್ರ್ಯಕ್ಕೆ ಈ ಸಾಮೂಹಿಕ ಒಗ್ಗಟ್ಟಿನಿಂದ ಎಲ್ಲಿ ಅಪಾಯವಾಗಿ, ಒಂದು ಮಾತನ್ನು ಸಾರ್ವಜನಿಕವಾಗಿ ಹೇಳುವುದೂ ಅಪರಾಧವಾಗುತ್ತದೆಯೋ ಎಂದು ಕಳವಳಗೊಂಡಿದ್ದೆವು. ಸಾವಿರಾರು ವರ್ಷಗಳಿಂದ ಎಲ್ಲಾ ಬಗೆಯ ವಿರುದ್ಧ ಅಭಿಪ್ರಾಯಗಳನ್ನು, ಎಲ್ಲಾ ವರ್ಗದ ಹಿಪಾಕ್ರಸಿಯನ್ನು ಸಹಿಸಿಕೊಂಡು ಬಂದ ದೇಶ ಈ ಒಂದು ಘಟನೆಯಿಂದ ಎಲ್ಲಿ ಬದಲಾಗಿಬಿಡಬಹುದೋ ಎಂದು ಆತಂಕಗೊಂಡಿದ್ದೆವು. ಎಲ್ಲಕ್ಕಿಂತಲೂ ಹೆಚ್ಚು ಕಾಡಿದ ಭಯವೆಂದರೆ ‘ಈ ಭೂಮಿಯ ಮೇಲಿರುವ ಆ ಕೆಲವೇ ಕೆಲವು ಶ್ರೇಷ್ಠ ಮೇಧಾವಿಗಳೂ ಸಹ ಈ ಸಂದರ್ಭದಲ್ಲಿ ಸಮಾಜದ ಭಾವನೆಯನ್ನು ಒಪ್ಪಿಕೊಂಡು ಬಿಟ್ಟವೇ? ಎನ್ನುವುದಾಗಿತ್ತು.


ಮುಂಬೈ ಎಂಬ ಭಾರತದ ಆರ್ಥಿಕ ರಾಜಧಾನಿಯ ಮೇಲೆ ತನ್ನ ಬೇನಾಮಿ ಸೈನ್ಯದ ಮೂಲಕ ಪಾಕಿಸ್ತಾನವು ಫಿದಾಯೇ ಯುದ್ಧವನ್ನು ಘೋಷಿಸಿರುವ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ ಮತಿಭ್ರಾಂತವಾದಂತೆ ವರ್ತಿಸುತ್ತಿತ್ತು. ದೇಶದ ಜನಸಮೂಹಕ್ಕೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರಲಿಲ್ಲ. ಮುಂಬೈ ನಗರಿಯನ್ನು ಬಂದರುಗಳ ಮೂಲಕ ಪ್ರವೇಶಿಸಿ  ಹಣದ ಉನ್ಮಾದದ ಪ್ರತೀಕದಂತೆ, ವಾಕರಿಕೆ ತರಿಸುವ ಶ್ರೀಮಂತಿಕೆಯ ಅಮಲಿನ ಸಂಕೇತದಂತೆ, ಬಡವರ ರಕವ ಹೀರುವ ಆಕ್ಟೋಪಸ್ಸುಗಳ ನಕಲಿನಂತೆ ಕಾಣುವ ತಾಜ್ , ಒಬೆರಾಯ್ ಹೊಟೇಲುಗಳ ಮೇಲೆ ಫಿದಾಯೆ ವೀರರು ದಾಳಿ ಮಾಡಿದರು. ಹಣದ ಮದದಲ್ಲಿ ಮೆರೆಯುತ್ತಿದ್ದ, ಜಾಗತೀಕರಣದ ಪಾಯಸವನ್ನು ಕೆನಯ ಸಮೇತ ಮೆಲ್ಲುತ್ತಿದ್ದ ಶ್ರೀಮಂತ ವರ್ಗಕ್ಕೆ ಬಿಸಿ ಮುಟ್ಟಿಸಿದರು. ಇಂತಹ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಾರರನ್ನು ನೂರು ಕೋಟಿ ಜನರಿರುವ ಭಾರತ ಕಂಡಿದ್ದಾದರೂ ಹೇಗೆ? ದೇಶದ ಜನರನ್ನು ಬಡಿದೆಬ್ಬಿಸಲು ಪ್ರಾಣದ ಹಂಗನ್ನು ತೊರೆದು ಬಂದ ಆ ಯೋಧರನ್ನು ನಮ್ಮ ದೇಶದ ಜನರು ಭಯೋತ್ಪಾದಕರು ಎಂದರು. ಕೊಲೆಗಡುಕರು ಎಂದು ಅಪಮಾನಿಸಿದರು. ಎಲ್ಲೋ ಸಿಕ್ಕುವ ಸ್ವರ್ಗವನ್ನು ಹಾಗೂ ಅಲ್ಲಿನ ಕನ್ಯೆಯರನ್ನು ಪಡೆಯುವುದಕ್ಕಾಗಿ ತಮ್ಮ ಇಪ್ಪತ್ತು, ಇಪತ್ತೊಂದರ ವಯಸ್ಸಿನಲ್ಲೇ ಸಾವಿನ ಕುಣಿಕೆಗೆ ಕತ್ತು ಒಡ್ಡಲು ತಯಾರಾದ ಯುವಕರನ್ನು ರಾಕ್ಷಸರು ಎಂದು ಕರೆದರು. ದೇಶಕ್ಕೆ ದೇಶವೇ ಹುಚ್ಚು ಹಿಡಿದಂತೆ ವರ್ತಿಸಿತು.


hypocrite

ಇನ್ನು ಹತ್ತು ಮಂದಿ ಅಬೋಧ ಬಾಲಕರು ಇನ್ನೂರು ಮಂದಿಯನ್ನು ಕೊಂದ ಮಾತ್ರಕ್ಕೆ ನಮ್ಮ ಸರಕಾರ ಅಮಾನವೀಯ ಕೆಲಸಕ್ಕಿಳಿಯಿತು. ನರ ಭಕ್ಷಕ ಸೈನ್ಯವನ್ನು ಕರೆಸಿ ಅದರ ರಕ್ತ ಪೀಪಾಸು ಕಮಾಂಡೊಗಳನ್ನು ಛೂ ಬಿಡಲಾಯ್ತು. ಏಳೆಂಟು ಮಂದಿ ಅಮಾಯಕ ಫಿದಾಯೇ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವುದಕ್ಕೆ ನೂರಾರು ಮಂದಿ ಕ್ರೂರ ಕಮ್ಯಾಂಡೊಗಳನ್ನು ಕರೆಸಲಾಯ್ತು. ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿ ಆ ಹತ್ತು ಮಂದಿಯಲ್ಲಿ ಒಂಭತ್ತು ಮಂದಿ ಹೋರಾಟಗಾರರು ಕಮ್ಯಾಂಡೊಗಳ ಜೀವ ಭಕ್ಷಕ ಬುಲೆಟುಗಳಿಗೆ ಆಹಾರವಾಗಿ ಕಣ್ಮುಚ್ಚಿದರು. ಇಷ್ಟಕ್ಕೂ ಆ ಘಟನೆಯಲ್ಲಿ ಸತ್ತವರ ಸಾವಿಗೆ ಈ ಒಂಭತ್ತು ಮಂದಿ ಫಿದಾಯೆಗಳೇ ಕಾರಣ ಎನ್ನುವುದಕ್ಕೆ ಏನಿತ್ತು ಸಾಕ್ಷಿ? ಅವರೇ ಕೊಂದರು ಎನ್ನುವುದಕ್ಕೆ ಇದ್ದ ಪುರಾವೆಗಳು ಯಾವುವು? ಒಂದು ವೇಳೆ ಅವರು ತಪ್ಪನ್ನೇ ಮಾಡಿದ್ದರೂ ಅವರನ್ನು ಶಿಕ್ಷಿಸುವುದಕ್ಕೆ ನಮ್ಮ ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯಿದೆ. ಅವರನ್ನು ಶರಣಾಗುವಂತೆ ಮನವೊಲಿಸಿ ಇಲ್ಲವೇ ಅವರೊಂದಿಗೆ ಮಾತು ಕತೆಗೆ ಕುಳಿತು ಅವರನ್ನು ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕಿತ್ತು. ಅದು ಬಿಟ್ಟು ಅವರನ್ನು ಅಮಾನವೀಯವಾಗಿ ಕೊಂದು ಬಿಸಾಕುವುದರ ಮೂಲಕ ನಮ್ಮ ಸೈನ್ಯ, ಪೊಲೀಸರು ಹಾಗೂ ಸರಕಾರ ತಾನೆಂಥ ರಕ್ತ ಪೀಪಾಸು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.


ಆಗುವ ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎನ್ನುವಂತೆ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಭದ್ರತೆಯ ಲೋಪಕ್ಕೆ ನೆರೆಯ ಪಾಕಿಸ್ತಾನವನ್ನು ದೂರುವ ಚಟ ನಮಗೆ ತುಂಬಾ ಹಿಂದಿನಿಂದಲೇ ಇದೆ. ಪಾಪ ಆ ದೇಶ ತಮ್ಮ ದಿಕ್ಕೆಟ್ಟ ರಾಜಕೀಯ, ಬರಗೆಟ್ಟ ಆರ್ಥಿಕತೆ, ಅನಕ್ಷರತೆ, ನಿರುದ್ಯೋಗದಿಂದ ತನ್ನ ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿದೆ. ಆ ದೇಶದಲ್ಲಿ ಸರಕಾರಕ್ಕೆ ಜನರ ಹಸಿವನ್ನು ತಣಿಸಲು ಸಾಧ್ಯವಾಗಿಲ್ಲ ಇನ್ನು ಅದು ಭಾರತವನ್ನು ಹಾಳು ಮಾಡುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವೇ? ಅಲ್ಲಿನ ಜನರಾದರೂ ತಮ್ಮ ಹಸಿವಿಗಿಂತ ತಮ್ಮ ದ್ವೇಷ ಮುಖ್ಯ ಎಂದು ಎಂದಾದರೂ ಭಾವಿಸಲು ಸಾಧ್ಯವಿದೆಯೇ? ಗೌರವಯುತವಾಗಿ ಈ ದೇಶದಿಂದ ಬೇರೆಯಾದ ನಮ್ಮ ಬಂಧುಗಳು ಅವರು ನಾವು ಅವರನ್ನು ಶತ್ರುಗಳಂತೆ ಕಾಣುವುದು ಅಮಾನವೀಯ. ನಮ್ಮ ಯುದ್ಧ ದಾಹಿ ಸರಕಾರಗಳು, ರಕ್ತಪೀಪಾಸು ಸೈನ್ಯ ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳನ್ನು ದೂರುತ್ತವೆ.


ಇಷ್ಟು ದಿನ ಕೇವಲ ಕೋಮುವಾದಿ ಬಹುಸಾಂಖ್ಯಾತರು ಮಾತಾಡುತ್ತಿದ್ದ ರೀತಿಯಲ್ಲೇ ಇತ್ತೀಚೆಗೆ ಮುಸ್ಲೀಂ ಮುಖಂಡರು, ಎಡಪಂಥೀಯರೂ ಮಾತಾಡಲು ಶುರು ಮಾಡಿದ್ದಾರೆ. ಶಾರುಖ್ ಖಾನ್, ಅಮೀರ್ ಖಾನ್ ರಿಂದ ಹಿಡಿದು ಪ್ರತಿಯೊಬ್ಬ ಮುಸ್ಲಿಂ ಜನಪ್ರಿಯ ವ್ಯಕ್ತಿಗಳು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಿ. ಅವರಿಗೆ ಧರ್ಮವಿಲ್ಲ, ಮಾನವೀಯತೆಯಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಹುಸಂಖ್ಯಾತರ ಕೋಮುವಾದದಿಂದ ರೊಚ್ಚಿಗೆದ್ದ, ವ್ಯವಸ್ಥೆಯ ಬಹುಸಂಖ್ಯಾತರ ಓಲೈಕೆಯಿಂದ ಅಭದ್ರತೆ ಒಳಗಾಗುವ ಅಲ್ಪಸಂಖ್ಯಾತರು ಕೋವಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮ ಸೈನಿಕರ ಹಾಗೆ ಕೊಲ್ಲುವುದಕ್ಕಾಗಿ ಎಂತಲೇ ಗನ್ನು ಕೈಗಿರಿಸಿಕೊಂಡು ತರಬೇತಿ ಪಡೆಯುವಂಥವರಲ್ಲ ಅವರು. ಅವರನ್ನು ಖಂಡಿಸುವ ಮೂಲಕ ಅಲ್ಪಸಂಖ್ಯಾತ ವರ್ಗ ಬಹುಸಂಖ್ಯಾತರ ಬಲೆಗೆ ಬೀಳುತ್ತಿದೆ. ಮುಂಬೈ ಘಟನೆ ನಡೆದ ನಂತರ ದೇಶವಿಡೀ ಕಠಿಣ ಕಾನೂನುಗಳಿಗೆ ಉಗ್ರವಾದ ಕ್ರಮಗಳಿಗಾಗಿ ಸರಕಾರವನ್ನು ಒತ್ತಾಯ ಪಡಿಸುತ್ತಿವೆ. ಪೋಟಾದಂತಹ ಜೀವ ವಿರೋಧಿ, ದುಷ್ಟ ಕಾನೂನನ್ನು ತೆಗೆದು ಹಾಕಿ ಪ್ರಜ್ಞಾವಂತರಲ್ಲಿ ನೆಮ್ಮದಿಯನ್ನು ಮೂಡಿಸಿದ್ದ ಯುಪಿಎ ಸರಕಾರ ಸಹ ಒತ್ತಡಕ್ಕೆ ಮಣಿದು ಪೋಟಾದಂತಹ ಕಾಯ್ದೆಯನ್ನು ತರುವ ಬಗ್ಗೆ ಆಲೋಚನೆ ನಡೆಸುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ. ಸಾಯಲು ತಯಾರಾಗಿ ಬರುವ ಹೋರಾಟಗಾರರು ನಮ್ಮ ಕಾಯ್ದೆಗಳಿಗೆ ಹೆದರುತ್ತಾರೆಯೇ? ಇಂತಹ ಕಾಯ್ದೆಗಳಿಂದ ಏನೂ ಉಪಯೋಗವಾಗುವುದಿಲ್ಲ. ಸುಮ್ಮನೆ ಇವನ್ನು ಬಳಸಿಕೊಂಡು ಅಮಾಯಕರನ್ನು ಹಿಂಸಿಸಲಾಗುತ್ತದೆ. ಈಗ ರಾಜ್ಯ ಸರಕಾರಗಳು ಮಾಡಿರುವ ಕೋಕಾ ಕಾನೂನು ಬಳಸಿಕೊಂಡು ಯೂನಿಯನ್ ಮುಖಂಡರನ್ನು ಹಿಂಸಿಸುತ್ತಿರುವುದು ಕಾಣುವುದಿಲ್ಲವೇ?

ಭಯೋತ್ಪಾದನೆಯ ಬಗ್ಗೆ ಹಿಸ್ಟೀರಿಕ್ ಆಗಿ ದೇಶಕ್ಕೆ ದೇಶವೇ ಆವೇಶದಿಂದ ವರ್ತಿಸುತ್ತಿರುವಾಗ  ಈ ಮೇಲೆ ನಾವು ಕೊಡಮಾಡಿರುವ ವಿವೇಕಯುತವಾದ, ಪ್ರಜ್ಞಾವಂತಿಕೆಯಿಂದ ಕೂಡಿದ ಹೇಳಿಕೆಗಳನ್ನು ನೀಡುವುದಕ್ಕೆ ಯಾರೂ ಮುಂದೆ ಬರದಿದ್ದುದನ್ನು ಕಂಡು ನಾವು ತೀವ್ರವಾಗಿ ಖಿನ್ನರಾಗಿದ್ದೆವು. ಆದರೂ ನಮ್ಮ ದೇಶದ ಗೌರವವನ್ನು, ಮರ್ಯಾದೆಯನ್ನು ಕಾಪಾಡಲು ಒಂಟಿ ಕಾಲಲಿ ನಿಂತು ಶ್ರಮಿಸುತ್ತಿರುವ ಇಂಗ್ಲೀಷ್ ಮಾಧ್ಯಗಳ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕಡೆಗೂ ಕವಿದ ಕಗ್ಗತ್ತಲ ನಡುವೆ ಬೆಳ್ಳಿಎಯ ರೇಖೆ ಮೂಡಿದೆ. ನಮ್ಮಂತಹ ಸಾವಿರಾರು ಮಂದಿ ಜಾತ್ಯಾತೀತವಾದಿಗಳ, ಪ್ರಗತಿಪರರ, ಹಿಂಸೆ ವಿರೋಧಿಗಳ, ಶಾಂತಿ ದೂತರ, ಅಂತರಾಷ್ಟ್ರೀಯ ಮಾನ್ಯತೆ ಗಳಿಸಿದ ವೀರರ ಧೀಮಂತ ಪ್ರತಿನಿಧಿಯಾಗಿ ನಮ್ಮ ಬುದ್ಧಜೀವಿ ಹಾಗೂ ಸುದ್ದಿಜೀವಿ ಅರುಂಧತಿ ರಾಯ್‌ರವರು ಮಾತಾಡಿದ್ದಾರೆ.


ಅವರ ದಿಟ್ಟತನಕ್ಕೆ, ಸತ್ಯ ನಿಷ್ಟುರತೆಗೆ, ಜಾತ್ಯಾತೀತವಾದಕ್ಕೆ ಜಯವಾಗಲಿ. ಅರುಂಧತಿ ಸಂತತಿ ಸಾವಿರವಾಗಲಿ. ಫಿದಾಯೆಗಳು ಅಮರರಾಗಲಿ

(ಚಿತ್ರ ಕದ್ದದ್ದು ಇಲ್ಲಿಂದ:

http://neoconexpress.blogspot.com/2006/02/la-times-gutless-offenders-and-cartoon.html)


ಸ್ಟೇಟ್ ಲೆಸ್ ಉಗ್ರವಾದಿಗಳು ಬರುವುದು ಸ್ವರ್ಗದಿಂದ

15 ಡಿಸೆ

(ನಗೆ ನಗಾರಿ ನೆರೆ ಹೊರೆಬ್ಯೂರೋ)

ದೊಡ್ಡಣ್ಣನೊಂದಿಗೆ ಇದ್ದರೆ ತಾನು ಉದ್ಧಾರವಾಗುವುದಿಲ್ಲ. ಸದಾ ಆತ ತೊಟ್ಟು ಬಿಟ್ಟ ಅಂಗಿಯನ್ನು, ಆತ ಬಳಸಿ ಬಿಟ್ಟ ಪಾಠಿ ಚೀಲವನ್ನು ಸಹಿಸಿಕೊಳ್ಳುತ್ತಾ ಎರಡನೆಯ ದರ್ಜೆಯವನಾಗಿ ಬದುಕಬೇಕು. ನಾನು ಬೇರೆಯಾಗಿ ಹೋಗುತ್ತೇನೆ. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ. ನನ್ನ ಕಾಲುಗಳ ಮೇಲೆ ನಾನು ನಿಲ್ಲುತ್ತೇನೆ, ಯಾರ ಹಂಗೂ ಇಲ್ಲದೆ ಬೆಳೆದು ನಿಂತು ನಾನು ಜಗತ್ತಿಗೆ ಮಾದರಿಯಾಗುತ್ತೇನೆ ಎಂದು ತನ್ನನ್ನು ಭಾರತವೆಂಬ ದೇಶದಿಂದ ಬೇರ್ಪಡಿಸಿಕೊಂಡು ಪಾಕ್(ಪವಿತ್ರ)ಸ್ಥಾನ್(ನೆಲ) ಎಂದು ಕರೆದುಕೊಂಡ ದೇಶದಲ್ಲಿ ಮಣ್ಣಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದು ನಮ್ಮ ನಾಡಿನ ಮಣ್ಣಿನ ಮಕ್ಕಳು, ದತ್ತು ಮಕ್ಕಳು, ಸಾಕು ಮಕ್ಕಳು, ಕಳ್ನನ್ಮಕ್ಕಳ ಗಮನವನ್ನೆಲ್ಲಾ ಸೆಳೆದಿದೆ.


ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರು ಸ್ಟೇಟ್ ಲೆಸ್ ಮನುಷ್ಯರು ಎಂದು ಪಾಕಿಸ್ತಾನದ ಪ್ರಧಾನಿ ಹಾಗೂ ಅದರ ದಿವಂಗತ ಮಾಜಿ ಪ್ರಧಾನಿಯ ವಿಧುರ ರಾಷ್ಟ್ರ್ಯಾಧ್ಯಕ್ಷರು ಗ್ರಾಮಾಫೋನು ಹಚ್ಚಿ ಹಾಡಿದ್ದನ್ನು ತರಾಟೆಗೆ ತೆಗೆದುಕೊಂಡ ನಮ್ಮ ದೇಶದ ವಿದೇಶಾಂಗ ವ್ಯವಹಾರ ಸಚಿವರು ಸ್ಟೇಟ್ ಲೆಸ್ ಮನುಷ್ಯರು ಸ್ವರ್ಗದಿಂದ ಇಳಿದು ಬರುವುದಕ್ಕೆ ಸಾಧ್ಯವೇ?’ ಎಂದು ಕೇಳಿದ ಪ್ರಶ್ನೆಗೆ ಉತ್ತರ ದೊರಕದೆ ಪಾಕಿಸ್ತಾನದ ಸಮಸ್ತ ಗ್ರಾಮಾಫೋನುಗಳು ಬಾಯ್ಮುಚ್ಚಿಕೊಂಡಿದ್ದಾಗ ಸಾಮ್ರಾಟರು ಹೌದು ಅವರು ಸ್ವರ್ಗದಿಂದದಲೇ ಬರುವುದು…’ ಎಂದು ವಾದಿಸಿ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ಭೂಮಿಯ ಮೇಲೆ ಪವಿತ್ರವಾದ ನೆಲ ಎಂದು ತನ್ನ ತಾನೇ ಕರೆದುಕೊಂಡಿರುವ ನಮ್ಮ ನೆರೆಯ ಹೊರೆಯ ರಾಷ್ಟ್ರದ ಮುಷ್ಟಿಯಲ್ಲಿರುವ ಭೂಲೋಕದ ಸ್ವರ್ಗ ಕಾಶ್ಮೀರದ ಮಣ್ಣಿನಿಂದಲೇ ಈ ಸ್ಟೇಟ್ ಲೆಸ್ ಮನುಷ್ಯರು ಭಾರತಕ್ಕೆ ಬರುತ್ತಿರುವುದು ಎಂದು ಅವರು ವಿವರಿಸಿ ಹೇಳಿದ್ದನ್ನು ಗ್ರಾಮಾಫೋನುಗಳು ರೆಕಾರ್ಡು ಮಾಡಿಕೊಂಡಿವೆ.


pakistan_alqaeda_terror



ಪಾಕಿಸ್ತಾನವೆಂಬ ಪವಿತ್ರ ನೆಲ ತನ್ನ ರಾಷ್ಟ್ರದ ಅಧ್ಯಕ್ಷರನ್ನು, ಪ್ರಧಾನಿಯನ್ನು ಪಡೆಯುವುದಕ್ಕೆ ಎಷ್ಟೆಲ್ಲಾ ತ್ಯಾಗಗಳನ್ನು ಮಾಡಬೇಕಾಯಿತು ಎಂಬುದು ಇತಿಹಾಸವನ್ನು ಅರೆದುಕುಡಿದು ಅಜೀರ್ಣದಿಂದ ಬಳಲುತ್ತಿರುವವರಿಗೆಲ್ಲಾ ತಿಳಿದಿರುವ ಸಂಗತಿ. ಎಷ್ಟೋ ವೇಳೆ ಆ ದೇಶ ತನ್ನ ಹಾಲಿ ಅಧ್ಯಕ್ಷ, ಪ್ರಧಾನಿಯನ್ನೇ ಬಲಿದಾನ ಮಾಡಬೇಕಾಯಿತು. ಈ ನೆಲದ ಮಹತ್ವ ಸಾಮಾನ್ಯವಾದದ್ದಲ್ಲ. ಈ ನೆಲ ಸ್ಪೂರ್ತಿಯ ಸೆಲೆ. ಜಗತ್ತಿನ ಮೂಲೆ ಮೂಲೆಯಲ್ಲಿ ಬೆನ್ನ ಹಿಂದಿರುವ ತೊಗಲಿನ ಚೀಲದಲ್ಲಿ ಅಡಗಿಸಿಟ್ಟುಕೊಂಡ ಬಾಂಬನ್ನು ನೇವರಿಸುತ್ತಾ ಕನವರಿಸುವ ಎಲ್ಲಾ ಜೀವಂತ ಬಾಂಬುಗಳಿಗೆ ಏಕೈಕ ಸ್ಪೂರ್ತಿಯ ಸೆಲೆಯಾಗಿ ಪಾಕಿಸ್ತಾನ ಕಾರ್ಯ ನಿರ್ವಹಿಸುತ್ತಿದೆ. ಇಡೀ ಜಗತ್ತಿಗೆ ತೈಲವನ್ನು ಪೂರೈಸುತ್ತೇವೆ ಎಂದು ಹುಮ್ಮಸ್ಸಿನಿಂದ ಹೊರಟು ಅರ್ಧ ದಾರಿಯಲ್ಲಿ ದಣಿದು ಕುಳಿತ ಅರಬ್ ದೇಶಗಳು, ವಿಶ್ವದ ಪ್ರತಿಯೊಂದು ದೇಶಕ್ಕೂ ಕಂಪ್ಯೂಟರನ್ನು ಒದಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿ ಹೊರಟ ಅಮೇರಿಕಾದಂತಹ ದೇಶಗಳು, ಜಗತ್ತಿಗೆ ಶಾಂತಿಯನ್ನು ಬೋಧಿಸುತ್ತೇವೆ ಎಂದು ಹೊರಟು ಕೈಸೋತ ಶಾಂತಿ ಪ್ರಿಯ ಆಲಿಪ್ತ ರಾಷ್ಟ್ರಗಳು ಪಾಕಿಸ್ತಾನವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿವೆ. ಅಂಗೈ ಅಗಲದ ಪುಟ್ಟ ದೇಶ ಇಡೀ ಜಗತ್ತಿಗೆ ಬೇಕಾಗುವಷ್ಟು ಮಾತ್ರವಲ್ಲದೆ ಜಗತ್ತು ಸಾಕು ಸಾಕೆಂದು ಬೇಡಿಕೊಳ್ಳುವಷ್ಟು ಭಯೋತ್ಪಾದಕರನ್ನು, ಜಿಹಾದಿಗಳನ್ನು, ಮೆದುಳು ತೊಳೆಸಿಕೊಂಡ ಪಡ್ಡೆಗಳನ್ನು, ಕಲಾಶ್ನಿಕೋವ್ ವೀರರನ್ನು, ಮಾನವ ಬಾಂಬುಗಳನ್ನು, ಉನ್ಮತ್ತ ಏರೋಪ್ಲೇನುಗಳನ್ನು ಸರಬರಾಜು ಮಾಡುತ್ತಲೇ ಇದೆ. ಅದಕ್ಕೆ ಸುಸ್ತೆಂಬುದು ಇಲ್ಲವೇ ಇಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಭಯೋತ್ಪಾದನೆಯನ್ನು ಇಷ್ಟು ವರ್ಷಗಳ ಕಾಲ ಸಮರ್ಪಕವಾಗಿ ರಫ್ತು ಮಾಡಿರುವ, ಮಾಡುತ್ತಿರುವ ಪಾಕಿಸ್ತಾನದ ಗುಣವಿಶೇಷಗಳನ್ನು ಅಧ್ಯಯನ ಮಾಡಲು ನಮ್ಮ ದೇಶದಲ್ಲಿ ಕೆಲಸ ಸಿಕ್ಕದ ಎಂಬಿಎ ಪದವೀಧರರನ್ನು ಅಟ್ಟಬಹುದು ಎಂದು ಸಾಮ್ರಾಟರು ಶಿಫಾರಸ್ಸು ಮಾಡಿರುವುದು ಅಂತರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿದೆ.


ತನ್ನ ದೇಶದ ಮಣ್ಣಿನಿಂದ ಯಾವೊಬ್ಬ ಭಯೋತ್ಪಾದಕನೂ ಹುಟ್ಟಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷರು ತುಂಬು ಆತ್ಮವಿಶ್ವಾಸದಿಂದ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ಅಪಹಾಸ್ಯವನ್ನಲದೇ ಬೇರೇನನ್ನು ಹುಟ್ಟು ಹಾಕದಿದ್ದರೂ ನಮ್ಮ ನಾಡಿನಲ್ಲಿ ಥರೇವಾರಿ ಪ್ರತಿಕ್ರಿಯೆಗಳನ್ನು ಪಡೆದಿರುವುದು ಅಚ್ಚರಿ ಉಂಟು ಮಾಡಿದೆ. ನಮ್ಮ ನಾಡಿನ ಏಕೈಕ ಮಣ್ಣಿನ ಮಗನಾದ ವೇದನೇ ಗೌಡರು ನಗೆ ನಗಾರಿ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೀಗೆಂದರು: “ಪಾಕಿಸ್ತಾನದ ನೆಲದಿಂದ ಭಯೋತ್ಪಾದಕ ಹುಟ್ಟುತ್ತಾನೋ ಇಲ್ಲವೋ ಎಂಬುದು ನನಗೆ ಸಂಬಂಧಿಸಿದ ಸಂಗತಿಯಲ್ಲ. ಅದರ ಬಗ್ಗೆ ನಮ್ಮ ಪಕ್ಷದ ನಿಲುವನ್ನು ಪ್ರಕಟ ಪಡಿಸುವುದಕ್ಕೆ ಇನ್ನೂ ಲೋಕ ಸಭೆ ಚುನಾವಣೆಯವರೆಗೆ ಕಾಯಬೇಕು. ಆದರೆ ಇಲ್ಲಿ ಮಣ್ಣಿನ ವಿಚಾರ ಬಂದಿರುವುದರಿಂದ ಹೇಳುತ್ತಿದ್ದೇನೆ, ಪಾಕಿಸ್ತಾನದ ಮಣ್ಣಿಗಿಂತ ಕರ್ನಾಟಕದ ಮಣ್ಣು ವಿಶಿಷ್ಟ. ಏಕೆಂದರೆ ಈ ಮಣ್ಣು ನನ್ನಂಥ ಮಗನನ್ನು ಹುಟ್ಟುಹಾಕಿದೆ.”

ಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೂತನ ಡಾಕ್ಟರ್ಬಿಎಸ್‌ವೈರವರು ಮಣ್ಣು ಮಸಿ ಎಲ್ಲಾ ನನ್ನ ಹತ್ತಿರ ತರಬೇಡಿ ಹೊಸ ಸಫಾರಿ ಕೋಟು ಮಲಿನವಾಗುತ್ತದೆ ಎಂದು ಎಚ್ಚರಿಸಿದರು.

(ಚಿತ್ರ ಕೃಪೆ: ಗೂಗಲ್)

ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

4 ಡಿಸೆ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ಉಗ್ರವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ಸಂಯಮಿಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!


ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು. ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ, ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!


ಅವರೆಲ್ಲಾ ಮೂರ್ಖರು. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ. ಭಾರತವೆಂಬ ಪುಣ್ಯ ಭೂಮಿಯಿಂದ ಅವರು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ತಮ್ಮ ದೇಶದ ಬಹುದೊಡ್ಡ ಕಟ್ಟಡಕ್ಕೆ ವಿಮಾನವನ್ನು ನುಗ್ಗಿಸಿ, ಸಾವಿರಾರು ಮಂದಿಯನ್ನು ಒಸಾಮ ಕೊಂದಾಗಆಧುನಿಕ ನಾಗರೀಕತೆಯ ಗಗನ ಚುಂಬಿಗಳ ಎದೆಯೊಳಗೆ ಬಂಡಾಯದ ವಿಮಾನ ನುಗ್ಗಿಸಿ ಆತ ಹರಿಸಿದ ರಕ್ತದಲ್ಲಿ, ಹೊಸ ಮುಂಜಾವಿನ ಬೆಳ್ಳಿ ರೇಖೆಗಳು ಪ್ರತಿಫಲಿಸುತ್ತಿದ್ದವುಎಂದು ಸುಮಧುರವಾದ ಕಾವ್ಯವನ್ನು ರಚಿಸಿ ಅಮರರಾಗುವುದನ್ನು ಬಿಟ್ಟು ಆತನ ಯಕಃಶ್ಚಿತ್ ತಪ್ಪಿಗೆ ಒಸಾಮನ ತಲೆ ತೆಗೆಯ ಹೊರಟು ಬಿಡುತ್ತಾರೆ ಹೆಡ್ಡರು. ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕುರುಡಾಗುತ್ತದೆಯಲ್ಲವೇ? ನಮ್ಮ ಕಣ್ಣು ಹೋದರೂ ಚಿಂತೆಯಿಲ್ಲ ಜಗತ್ತು ಕುರುಡಾಗಬಾರದು. ನಮಗೆ ಕಣ್ಣುಗಳಿದ್ದರೇ ತಾನೆ ಕುರುಡಾಗಲು ಸಾಧ್ಯ? ನಮ್ಮ ಕಣ್ಣುಗಳನ್ನೇ ನಾವು ಕಿತ್ತು ಬಿಟ್ಟರೆ? ಎಂದು ಆಲೋಚಿಸುವ ಮುತ್ಸದ್ಧಿತನ ಆ ಯಹೂದಿ ದೇಶದವರಿಗೆ ಯಾವಾಗ ಬಂದೀತು? ನಮ್ಮಲ್ಲಿ ಸಿರಿ ಸಂಪತ್ತು ಇದ್ದರಲ್ಲವೇ ಕಳ್ಳ ಕಾಕರ ಕಾಟ, ಅದಕ್ಕೆ ಪೊಲೀಸು, ಕಾನೂನಿನ ರಕ್ಷಣೆಯ ಹುಡುಕಾಟ, ಊಟಕ್ಕೆ ಗತಿಯಿಲ್ಲದೆ, ಹಸಿವೆಯಿಂದ ನರಳಿ ನರಳು ಸಾಯುವ ಸ್ಥಿತಿಗೆ ನಾವು ಬಂದುಬಿಟ್ಟರೆ? ಅವ್ಯಾವ ಚಿಂತೆಯೂ ಇರದು. ನಾವು ಶಿಕ್ಷಿತರಾಗಿ ಎಲ್ಲವನ್ನೂ ತಿಳಿಯ ಹೊರಟರೆ ಅಲ್ಲವೇ ಭಿನ್ನಾಭಿಪ್ರಾಯಗಳು ಬರುವುದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಅನ್ನಿಸುವುದುಒಂದಕ್ಷರ ಕಲಿಯದಿರುವ ನಿರ್ಧಾರ ಮಾಡಿ ಗಟ್ಟಿ ಮನಸ್ಸು ಮಾಡಿದರೆ ಇವೆಲ್ಲ ಸಮಸ್ಯೆಗಳೇ ಇರುವುದಿಲ್ಲ. ಇಂತಹ ಸರಳ ಸತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ದೇವರ ನಿಜವಾದ ಪ್ರಜೆಗಳು ನಾವೇ. ಬದುಕು ಇರುವುದು ಈ ಭೂಮಿಯ ಮೇಲೆ ಅಲ್ಲ ಎಂಬುದು ನಮಗಷ್ಟೇ ಗೊತ್ತು ಹೀಗಾಗಿ ನಾವು ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ನಾವೇ ಶಾಶ್ವತವಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳು ಶಾಶ್ವತವೇ?


ಅಮೇರಿಕಾ, ಇಸ್ರೇಲುಗಳು ನಮ್ಮಿಂದ ಕಲಿಯುವಂಥದ್ದು ತುಂಬಾ ಇದೆ. ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದು ಹೊರಡುವುದಾಗಲೀ, ಭಯೋತ್ಪಾದಕರಿಗೆ ಅನ್ನ ನೀರು ಕೊಟ್ಟು ಆಶ್ರಯ ನೀಡುತ್ತಿರುವವರನ್ನು ನಾಶ ಮಾಡುತ್ತೇವೆ ಎಂದಾಗಲೀ ಹೊರಡುವುದು ಮೂರ್ಖತನವಾಗುತ್ತದೆ. ಪಾಪ ಭಯೋತ್ಪಾದಕರೂ ಮನುಷ್ಯರೇ ಅಲ್ಲವೇ? ಪರಿಸ್ಥಿತಿಯಿಂದಾಗಿ ಆತ ಆ ಮಾರ್ಗ ಹಿಡಿದಿದ್ದಾನೆ. ಒಂದು ವೇಳೇ ನಾವೇ ಆ ಸ್ಥಾನದಲ್ಲಿದ್ದರೂ ಹಾಗೇ ಮಾಡುತ್ತಿರಲಿಲ್ಲವೇ? ಭಯೋತ್ಪಾದನೆ ಅಸಲಿಗೆ ಸಮಸ್ಯೆಯೇ ಅಲ್ಲ. ಭಯೋತ್ಪಾದಕ ನಮ್ಮನ್ನು ಕೊಂದರೆ ಏನು ಮಾಡಿದ ಹಾಗಾಯಿತು? ನಮ್ಮ ದೇಹ ನಾಶವಾಯಿತು ಅಷ್ಟೇ! ಅದಕ್ಕಿಂತ ಹೆಚ್ಚಿನದನ್ನೇನೂ ಆತ ಮಾಡಲಾರ. ನಮ್ಮ ಶಾಶ್ವತವಾದ, ಚಿರನೂತನವಾದ ಆತ್ಮವನ್ನು ಆತ ಮುಟ್ಟಲೂ ಸಾಧ್ಯವಾಗದು. ಅಂತಹವರನ್ನು ನಿಗ್ರಹಿಸಬೇಕು, ನಿವಾರಿಸಬೇಕು ಎಂದೆಲ್ಲಾ ಮಾತಾಡುವುದು ಬಾಲಿಶವಲ್ಲವೇ?


ಅದಕ್ಕಾಗಿ ಘಂಟಾಘೋಷವಾಗಿ ಹೇಳೋಣ: ನಾವು ಭಾರತೀಯರು, ನಾವಿನ್ನೂ ಬದುಕಿದ್ದೇವೆ. ಜಗತ್ತು ನಮ್ಮನ್ನು ನೋಡಿ ಬುದ್ಧಿ ಕಲಿಯಲಿ. ದೇವರ ಅಪೂರ್ವ ಸೃಷ್ಟಿಯಾದ ನಾವು ಇಲ್ಲಿಂದ ಖಾಲಿಯಾಗುವುದರೊಳಗೆ ಜಗತ್ತು ನಮ್ಮನ್ನು ಅರಿತುಕೊಳ್ಳಲಿ, ನಮ್ಮನ್ನು ಅನುಕರಿಸಲಿ.

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

14 ನವೆಂ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವಿ

29 ಆಗಸ್ಟ್

(ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ)

ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ ತಮ್ಮ ಸ್ವಂತ ಮೆದುಳಿನಿಂದಲೇ ದೇಶವನ್ನು ಮುಂದಕ್ಕೆ ಓಡಿಸುತ್ತಿದ್ದಾರೆ ಎಂಬ ಸಮಾಧಾನ ಸಿಕ್ಕಲು ನಾಲ್ಕು ವರ್ಷ ಬೇಕಾಯಿತು. ಹೀಗಿರುವಾಗ ನಮ್ಮ ನಿಧಾನಿಯವರ ‘ಖಾಸಗಿ ಆರೋಗ್ಯ’ ನೋಡಿಕೊಳ್ಳುವ ವೈದ್ಯರು ನಗೆ ಸಾಮ್ರಾಟರೊಂದಿಗೆ ಮಾತನಾಡಲು ಸಮಯ ಮಾಡಿಕೊಂಡರು.

‘ಯಾವುದೇ ಮನುಷ್ಯನಿಗೆ ದಿನನಿತ್ಯದ ಚಟುವಟಿಕೆಯ ಜೊತೆಗೆ ದೇಹಾರೋಗ್ಯವನ್ನು ಜಬರ್ದಸ್ತಾಗಿ ಇಟ್ಟುಕೊಳ್ಳಲು ಆಗಾಗ ಉಪವಾಸ ಮಾಡುವುದು ಅಗತ್ಯ. ವಯಸ್ಸು ಹೆಚ್ಚಾದಂತೆ ಇದು ಇನ್ನೂ ಅಗತ್ಯ. ಹಾಗೆಯೇ ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ ಮಾಡುವುದರಿಂದ ಇಂದ್ರಿಯಗಳು ಪುನಃಶ್ಚೇತನ ಪಡೆದುಕೊಳ್ಳುತ್ತವೆ. ನಮ್ಮ ನಿಧಾನಿಯವರಿಗೂ ಇದೂ ಕಾಲಕಾಲಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಿಂದೊಬ್ಬರು ನಿಧಾನಿಯಿದ್ದರು ಅವರಿಗೆ ಈ ಆರೋಗ್ಯದ ರಹಸ್ಯವನ್ನು ಕಲಿಸಲು ಹೋಗಿ ನಾನೇ ಪೆಟ್ಟು ತಿಂದಿದ್ದೆ. ಅವರು ಹೊಟ್ಟೆ ತುಂಬಾ ಮುದ್ದೆ ನುಂಗಿ ಕಾರ್ಯಕ್ರಮಗಳ ಮಧ್ಯೆಯೇ ಆರಾಮಾಗಿ ನಿದ್ದೆ ಮಾಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರು. ಅದು ಅವರ ವೈಯಕ್ತಿಕ ಹಿರಿಮೆಯಷ್ಟೇ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನಮ್ಮ ಮೋಹನ ಮನ ಸಿಂಗರು ದೇಶದ ಬಗ್ಗೆ ಅತ್ಯಂತ ಕಾಳಜಿಯಿಂದ ಆಲೋಚಿಸಲು ಈ ಉಪವಾಸ ಹಾಗೂ ಜಾಗರಣೆಗಳು ಅತಿ ಆವಶ್ಯಕ.

‘ನಮ್ಮ ಮೋಹನ ಮನ ಸಿಂಗರ ಸುಕೃತವೋ, ಈ ದೇಶದ ಜನರ ಪುಣ್ಯವೋ ಇಲ್ಲವೇ ಮಹಾ ಮಾತೆಯ ಕೃಪೆಯೋ ನಮ್ಮ ನಿಧಾನಿಯವರಿಗೆ ನಿದ್ದೆಗೆಡುವ, ಊಟ ಬಿಡುವ ಅವಕಾಶಗಳು ಆಗಾಗ ಸಿಕ್ಕುತ್ತಲೇ ಇರುತ್ತವೆ. ಇಂಥ ಅವಕಾಶಗಳಿಂದ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಇಲ್ಲದೆ ಹೋದರೆ ಹಿಂದಿನ ನಿಧಾನಿಯ ಹಾಗೆ ದೇಹದ ಪ್ರತಿಯೊಂದು ಸ್ಪೇರ್ ಪಾರ್ಟುಗಳನ್ನೂ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು. ನೂರು ಕೋಟಿ ಮಂದಿಯ ಬಂಡಿಯನ್ನು ಹೊರುವುದು ಎಂದರೆ ಸುಮ್ಮನೆ ಮಾತೇ?

‘ನಿಧಾನಿಯವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ದೇಶದಲ್ಲಿ ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದ ಅಕ್ಕ ಪಕ್ಕದ ತಂಟೆಕೋರ ಮನೆಗಳಿಂದ ಉಗ್ರರ್, ವ್ಯಗ್ರರು ಬಂದು ಮಾರ್ಕೆಟ್ಟುಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ, ಶಾಲೆಗಳಲ್ಲಿ ಕಡೆಗೆ ಆಸ್ಪತ್ರೆಗಳನ್ನೂ ಬಿಡದೆ ಉಡಾಯಿಸಿದರು, ಮರದ ಮೇಲೆ, ಚರಂಡಿಯ ಅಡಿಗೆ, ಕಸದ ಬುಟ್ಟಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಭಾರತೀಯರು ಮೂತ್ರ ಮಾಡಿದ ಹಾಗೆ ಬಾಂಬುಗಳನ್ನು ಇಟ್ಟು ‘ಹೆಸರಾಂತ’ ಪತ್ರಿಕೆ, ಟಿವಿಗಳಿಗೆ ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ…’ ಎಂದು ಸವಾಲೊಡ್ಡಿದರು. ಬಾಂಬಿನ ಆಟಾಟೋಪದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡರು. ಆದರೆ ಇದರಿಂದ ನಿಧಾನಿಯವರಿಗೆ ಉಪವಾಸವೂ ಸಿಕ್ಕಲಿಲ್ಲ, ಜಾಗರಣೆಯೂ ಮಾಡಲಾಗಲಿಲ್ಲ. ಹೊಟ್ಟೆ ತುಂಬಾ ಊಟ ಮಾಡುತ್ತಾ, ಕಣ್ತುಂಬಾ ನಿದ್ದೆ ಮಾಡುತ್ತಾ ಇದ್ದು ಬಿಟ್ಟರು.

‘ಅತ್ತ ಭಾರತದ ಶಿರವಾದ ಕ್ಯಾಶ್ಮೀರದಲ್ಲಿ ನೆರೆಮನೆಯರು ಎರಡೂ ಕಾಲುಗಳನ್ನು ಎರಡೂ ಕೈಗಳ ತಲಾ ಐದು ಉಗುರುಗಳಿಂದ ಪರಪರಪರನೆ ಕೆರೆದುಕೊಂಡು ಬಂದು ಜಗಳ ಮಾಡಿದಾಗಲೂ, ನಮ್ಮ ನಾಡಿನ ರಕ್ಷಣೆಗೆ ನಿಂತ ಯೋಧರ ಪ್ರಾಣ ಹೋದರೂ ನಮ್ಮ ನಿಧಾನಿಯವರ ಆರೋಗ್ಯ ಕಾಪಾಡುವ ಯಾವ ಪರಿಣಾಮವೂ ಆಗಲಿಲ್ಲ.

‘ಇಡೀ ಜಗತ್ತೇ ಪ್ರಧಾನಿಯವರಿಗೆ ಉತ್ತಮ ಆರೋಗ್ಯವನ್ನು ಕೊಡಬೇಕು ಎಂದು ಸಂಚು ಮಾಡಿ ಭಾರತದ ಹಣದುಬ್ಬರದಡಿಗೆ ರಾಕೆಟ್ ಇಟ್ಟು ಉಡಾಯಿಸಿಬಿಟ್ಟಿತು. ಆಮ್ ಆದ್ಮೀ ನೇರವಾಗಿ ಸ್ವರ್ಗದಲ್ಲೇ ಚೀಪ್ ಆಗಿ ಬದುಕು ಸಾಗಿಸಬಹುದು ಎಂದು ತೀರ್ಮಾನಿಸುವ ಪರಿಸ್ಥಿತಿ ಬಂದಿತು ಆದರೆ ಪಿತ್ತ ಮಂತ್ರಿಯೂ ಆಗಿದ್ದ ನಿಧಾನಿಯವರಿಗೆ ಇದರಿಂದ ಯಾವ ರೀತಿಯಲ್ಲೂ ನೆರವಾಗಲಿಲ್ಲ. ನಿದ್ದೆ, ಊಟ ಯಥೇಚ್ಚವಾಗಿ ಮುಂದುವರೆದಿತ್ತು.

‘ಹೀಗಿರುವಾಗ ನಮ್ಮ ನಿಧಾನಿಯವರ ಆರೋಗ್ಯದ ಗತಿ ಏನಾಗಬೇಡ? ಅವರಿಗೆ ಆಗಾಗ ಉಪವಾಸ ಹಾಗೂ ನಿದ್ದೆ ಬರದ ರಾತ್ರಿಗಳನ್ನು ಕರುಣಿಸುವುದು ಹೇಗೆ ಅನ್ನುವಾಗಲೇ ನಮ್ಮ ಕಣ್ಣೆದುರು ಪವಾಡವೊಂದು ನಡೆಯಿತು. ಅನ್ಯದೇಶದಲ್ಲಿ ಬಾಂಬು ಉಡಾಯಿಸಿದವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಭಾರತದ ಕುವರ ದೇಶಕ್ಕೆ ಮರಳಿ ಬಂದಾಗ, ಅನ್ಯದೇಶದಲ್ಲಿ ತನಗಾದ ಅವಮಾನ, ತನ್ನ ಮೇಲೆ ನಡೆದ ‘ಶೋಷಣೆ’ಯನ್ನು ಪರಿ ಪರಿಯಾಗಿ ವಿವರಿಸಿ ಟಿವಿ ಕೆಮಾರಗಳ ಮುಂದೆ ಒಂದೇ ಕಣ್ಣಿನಲ್ಲಿ ಗೊಳೋ ಎಂದು ಅತ್ತಾಗ ಪವಾಡ ಸಂಭವಿಸಿಯೇ ಬಿಟ್ಟಿತು. ನಮ್ಮ ನಿಧಾನಿ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಟಿವಿ ಚಾನೆಲ್ಲು ನೋಡುತ್ತಾ ಕುಳಿತರು. ಆ ಕನ್ನಡದ ಕುವರನ ತಾಯಿ ರೋಧಿಸುವುದನ್ನು ನಮ್ಮ ಟಿವಿ ಚಾನೆಲ್ಲುಗಳು ೨೪*೭ ತೋರಿಸುವುದನ್ನು ಕಂಡು ನಿಧಾನಿಯವರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದರು. ಇದರಿಂದ ಅವರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿದೆ.

‘ ಅನಂತರ ಇಲ್ಲಿ ಎಲ್ಲೋ ಪೂರ್ವದ ರಾಜ್ಯದಲ್ಲಿ ಕೋಮುವಾದಿ ಕೋಮಿನ ಕೋಮುವಾದಿ ಮುಖಂಡನನ್ನು ‘ದೇಶ ಭಕ್ತರು’ (ಅವರು ಯಾವ ದೇಶಕ್ಕೆ ಭಕ್ತರು ಎಂದು ಕೇಳಿದ್ದಕ್ಕೆ ಆಫ್ ದಿ ರೆಕಾರ್ಡ್ ಉತ್ತರ ಕೊಟ್ಟಿದ್ದನ್ನು ನಾವಿಲ್ಲಿ ಎಡಿಟ್ ಮಾಡಿದ್ದೇವೆ – ಸಂ) ತೆಗೆದರು. ಇದರಿಂದ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ‘ಮಾರಣ ಹೋಮ’ ನಡೆಸಿದರು. ಇದನ್ನು ಕೆಲವು ತಲೆ ಕೆಟ್ಟ ಮಂದಿ ಹಿಂದೆ ಇಂದಿರಮ್ಮ ಸತ್ತಾಗ ಸಿಖ್ಖರ ಮೇಲೆ ನಡೆಸಿದ ‘ಹೋರಾಟ’ಕ್ಕೆ ಹೋಲಿಸುತ್ತಾರೆ. ಅದೇ ಬೇರೆ ಇದೇ ಬೇರೆ ಅಂತ ಇವರಿಗೆ ಗೊತ್ತಿಲ್ಲ. ಹೀಗೆ ಅಲ್ಪ ಸಂಖ್ಯಾತರ ಮೇಲೆ ಕೋಮುವಾದಿಗಳ ಅಟ್ಟಹಾಸದಿಂದ ನಮ್ಮ ನಿಧಾನಿಗೆ ಹೊಟ್ಟೆಗೆ ಸರಿಯಾಗಿ ಊಟ ಸೇರಲಿಲ್ಲ, ನಿದ್ದೆಯಂತೂ ಮಾರು ದೂರದಲ್ಲಿ ನಿಂತಿತು. ಇಡೀ ದೇಶ ಇದಕ್ಕಾಗಿ ಅವಮಾನ ಪಡಬೇಕು ಎಂದರು.

‘ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ’.

ನಿಧಾನಿಯವರ ಆರೋಗ್ಯ ಎಂದರೆ ಕೈ ಪಕ್ಷದ ಓಟ್ ಬ್ಯಾಂಕೇ ಎಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಂಪರ್ಕ ಕಡಿದುಹೋಗಿತ್ತು.